ಪ್ರಾಣಿಗಳು ಮತ್ತು ಸಸ್ಯಗಳಲ್ಲಿ ಸಾಗಾಣಿಕೆ – ಪಾಠ – 11

ಜೀವಿಗಳು ಬದುಕಲು ಆಹಾರ, ನೀರು ಮತ್ತು ಆಕ್ಸಿಜನ್ ಅಗತ್ಯ ಎಂಬುದನ್ನು ನೀವು ಈ ಮೊದಲೇ ಕಲಿತಿರುವಿರಿ. ಇವೆಲ್ಲವುಗಳನ್ನು ದೇಹದ ವಿವಿಧ ಭಾಗಗಳಿಗೆ ತಲುಪಿಸುವ ಅಗತ್ಯ ಜೀವಿಗಳಿಗಿದೆ. ಜೊತೆಗೆ ತ್ಯಾಜ್ಯಗಳನ್ನು ಅವು ಹೊರಹಾಕುವ ಭಾಗಗಳಿಗೆ ತಲುಪಿಸಬೇಕಾದ ಅಗತ್ಯ ಪ್ರಾಣಿಗಳಿಗಿದೆ. ಇವೆಲ್ಲಾ ಹೇಗೆ ಸಾಧ್ಯವಾಗುತ್ತದೆಂದು ನೀವು ಆಶ್ಚರ್ಯಪಡುವಿರ? ಚಿತ್ರ 11.1ನ್ನು ನೋಡಿ. ಹೃದಯ ಮತ್ತು ರಕ್ತನಾಳಗಳನ್ನು ನೀವು ನೋಡುತ್ತಿದ್ದೀರ? ಅವು ಪದಾರ್ಥಗಳ ಸಾಗಾಣಿಕಾ ಕಾರ್ಯವನ್ನು ನಡೆಸುತ್ತವೆ ಮತ್ತು ಜೊತೆಯಾಗಿ ಪರಿಚಲನಾವ್ಯೂಹ (circulatory system) ವನ್ನು ಉಂಟುಮಾಡುತ್ತವೆ. ಪ್ರಾಣಿಗಳು ಮತ್ತು ಸಸ್ಯಗಳಲ್ಲಿ ಪದಾರ್ಥಗಳ ಸಾಗಾಣಿಕೆಯ ಬಗ್ಗೆ ನೀವು ಈ ಅಧ್ಯಾಯದಲ್ಲಿ ಕಲಿಯುವಿರಿ.

Illustration of Male circulatory system

11.1 ಪರಿಚಲನಾವ್ಯೂಹ ರಕ್ತ.

ನಿಮ್ಮ ದೇಹಕ್ಕೆ ಗಾಯವಾದಾಗ ಏನಾಗುತ್ತದೆ? ರಕ್ತವು ಹೊರಗೆ ಹರಿಯುತ್ತದೆ. ರಕ್ತ ಎಂದರೇನು? ರಕ್ತವು ರಕ್ತನಾಳಗಳಲ್ಲಿ ಹರಿಯುವ ದ್ರವ. ಅದು ಜೀರ್ಣವಾದ ಆಹಾರದಂತಹ ಪದಾರ್ಥಗಳನ್ನು ಸಣ್ಣ ಕರುಳಿನಿಂದ ದೇಹದ ಇತರ ಭಾಗಗಳಿಗೆ ಸಾಗಿಸುತ್ತದೆ. ಅದು ಶ್ವಾಸಕೋಶಗಳಿಂದ ಆಕ್ಸಿಜನ್‍ಅನ್ನು ಜೀವಕೋಶಗಳಿಗೆ ಕೊಂಡೊಯ್ಯುತ್ತದೆ. ದೇಹದಿಂದ ನಿರ್ಮೂಲನೆ ಮಾಡಬೇಕಾದ ತ್ಯಾಜ್ಯಗಳನ್ನು ಕೂಡ ಅದು ಸಾಗಿಸುತ್ತದೆ.

ರಕ್ತವು ವಿವಿಧ ಪದಾರ್ಥಗಳನ್ನು ಹೇಗೆ ಸಾಗಿಸುತ್ತದೆ? ರಕ್ತವು ಪ್ಲಾಸ್ಮ (plasma) ಎಂಬ ದ್ರವವನ್ನು ಹೊಂದಿದ್ದು, ವಿವಿಧ ರೀತಿಯ ಜೀವಕೋಶಗಳು ಅದರಲ್ಲಿ ವಿಲಂಬಿತಗೊಂಡಿರುತ್ತವೆ.

ಹಿಮೋಗ್ಲೋಬಿನ್ (haemoglobin) ಎಂಬ ಕೆಂಪು ವರ್ಣಕವನ್ನು ಹೊಂದಿರುವ ಕೆಂಪು ರಕ್ತಕಣಗಳು (Red Blood Cells – RBC) ಒಂದು ರೀತಿಯ ಜೀವಕೋಶಗಳು. ಹಿಮೋಗ್ಲೋಬಿನ್ ಆಕ್ಸಿಜನ್‍ನೊಂದಿಗೆ ಬಂಧಿಸಲ್ಪಟ್ಟು ಅದನ್ನು ದೇಹದ ಎಲ್ಲಾ ಭಾಗಗಳಿಗೆ ಮತ್ತು ಅಂತಿಮವಾಗಿ ಎಲ್ಲಾ ಜೀವಕೋಶಗಳಿಗು ಸಾಗಿಸುತ್ತದೆ. ಹಿಮೋಗ್ಲೋಬಿನ್ ಇಲ್ಲದೇ ದೇಹದ ಎಲ್ಲಾ ಕೋಶಗಳಿಗೆ ಸಮರ್ಥವಾಗಿ ಆಕ್ಸಿಜನ್ ಒದಗಿಸುವುದು ಕಷ್ಟವಾಗುತ್ತದೆ. ಹಿಮೋಗ್ಲೋಬಿನ್‍ನ ಇರುವಿಕೆಯು ರಕ್ತವನ್ನು ಕೆಂಪಾಗಿ ಕಾಣುವಂತೆ ಮಾಡುತ್ತದೆ.

ನಮ್ಮ ದೇಹವನ್ನು ಪ್ರವೇಶಿಸಬಹುದಾದ ಕೀಟಾಣುಗಳ ವಿರುದ್ಧ ಹೋರಾಡುವ ಬಿಳಿ ರಕ್ತಕಣಗಳು (White Blood Cells – WBC) ಕೂಡಾ ರಕ್ತದಲ್ಲಿವೆ.

ಬೂಝೊ ಆಟವಾಡುವಾಗ ಕೆಳಗೆ ಬಿದ್ದು, ಅವನ ಮೊಣಕಾಲಿಗೆ ಗಾಯವಾಯಿತು. ಗಾಯದಿಂದ ರಕ್ತ ಸುರಿಯಲಾರಂಭಿಸಿತು. ಸ್ವಲ್ಪ ಸಮಯದ ನಂತರ ರಕ್ತಸ್ರಾವ ನಿಂತು, ಕಡುಕೆಂಪು ಹೆಪ್ಪು/ಗರಣೆ (clot) ಗಾಯವನ್ನು ಮುಚ್ಚಿರುವುದನ್ನು ಅವನು ಗುರುತಿಸುತ್ತಾನೆ. ಬೂಝೊಗೆ ಇದರ ಬಗ್ಗೆ ಗೊಂದಲ ಉಂಟಾಗಿದೆ.

ಕಿರುತಟ್ಟೆಗಳು (platelets) ಎಂಬ ಇನ್ನೊಂದು ರೀತಿಯ ಕೋಶಗಳು ರಕ್ತದಲ್ಲಿ ಇರುವುದರಿಂದಾಗಿ ರಕ್ತ ಹೆಪ್ಪುಗಟ್ಟಿತು.

ರಕ್ತನಾಳಗಳು

ದೇಹದಲ್ಲಿ ಬೇರೆ ಬೇರೆ ರೀತಿಯ ರಕ್ತನಾಳಗಳಿರುತ್ತವೆ. ಉಚ್ಛ್ವಾಸದ ಸಮಯದಲ್ಲಿ ಆಕ್ಸಿಜನ್‍ನ ಪೂರೈಕೆಯು ಶ್ವಾಸಕೋಶವನ್ನು ತುಂಬಿಕೊಳ್ಳುತ್ತದೆ ಎಂದು ನೀವು ತಿಳಿದಿರುವಿರಿ. ಆಕ್ಸಿಜನ್ ದೇಹದ ಉಳಿದ ಭಾಗಗಳಿಗೆ ಸಾಗಾಣಿಕೆಯಾಗಬೇಕು. ಕಾರ್ಬನ್ ಡೈಆಕ್ಸೈಡ್ ಸೇರಿದಂತೆ ತ್ಯಾಜ್ಯ ಪದಾರ್ಥಗಳನ್ನು ಕೂಡ ರಕ್ತವು ಜೀವಕೋಶಗಳಿಂದ ಸಂಗ್ರಹಿಸುತ್ತದೆ. ನೀವು ಅಧ್ಯಾಯ 10 ರಲ್ಲಿ ಕಲಿತಿರುವಂತೆ ಕಾರ್ಬನ್ ಡೈಆಕ್ಸೈಡ್‍ಅನ್ನು ಶ್ವಾಸಕೋಶಗಳಿಗೆ ಸಾಗಿಸಲು ಈ ರಕ್ತವು ಹೃದಯಕ್ಕೆ ಹಿಂತಿರುಗಬೇಕು. ಹೀಗಾಗಿ ಅಪಧಮನಿ (artery) ಮತ್ತು ಅಭಿಧಮನಿ (vein) ಗಳೆಂಬ ಎರಡು ರೀತಿಯ ರಕ್ತನಾಳಗಳು ದೇಹದಲ್ಲಿರುತ್ತವೆ (ಚಿತ್ರ 11.1).

ಅಪಧಮನಿಗಳು ಆಕ್ಸಿಜನ್‍ಯುಕ್ತ ರಕ್ತವನ್ನು ಹೃದಯದಿಂದ ದೇಹದ ಎಲ್ಲಾ ಭಾಗಗಳಿಗೆ ಕೊಂಡೊಯ್ಯುತ್ತವೆ. ರಕ್ತ ಚಲನೆಯು ತೀವ್ರಗತಿಯಲ್ಲಿ ಮತ್ತು ಹೆಚ್ಚಿನ ಒತ್ತಡದಲ್ಲಿರುವುದರಿಂದ ಅಪಧಮನಿಗಳು ದಪ್ಪನಾದ ಸ್ಥಿತಿಸ್ಥಾಪಕ ಭಿತ್ತಿಯನ್ನು ಹೊಂದಿವೆ.

ಅಪಧಮನಿಗಳ ಮೂಲಕ ರಕ್ತಚಲನೆಯನ್ನು ಅಧ್ಯಯನ ಮಾಡಲು ಒಂದು ಚಟುವಟಿಕೆಯನ್ನು ಮಾಡೋಣ.

ಚಟುವಟಿಕೆ 11.1

ನಿಮ್ಮ ಬಲಗೈನ ಮಧ್ಯದ ಮತ್ತು ತೋರುಬೆರಳನ್ನು ಎಡಮಣಿಕಟ್ಟಿನ ಒಳಭಾಗದ ಮೇಲಿಡಿ (ಚಿತ್ರ 11.2). ಮಿಡಿಯುವ ಅನುಭವವಾಗುತ್ತಿದೆಯೆ? ಈ ಮಿಡಿತವನ್ನು ನಾಡಿ (pulse) ಎನ್ನುವರು. ಅಪಧಮನಿಗಳಲ್ಲಿ ರಕ್ತ ಹರಿಯುವುದರಿಂದ ಮಿಡಿತ ಉಂಟಾಗುತ್ತದೆ. ಒಂದು ನಿಮಿಷದಲ್ಲಾಗುವ ನಾಡಿ ಮಿಡಿತಗಳ ಸಂಖ್ಯೆಯನ್ನು ಲೆಕ್ಕ ಹಾಕಿ.

ಎಷ್ಟು ನಾಡಿ ಮಿಡಿತಗಳನ್ನು ನೀವು ಲೆಕ್ಕಹಾಕಿದಿರಿ? ಒಂದು ನಿಮಿಷದಲ್ಲಾಗುವ ಮಿಡಿತಗಳ ಸಂಖ್ಯೆಯನ್ನು ನಾಡಿ ಮಿಡಿತದ ದರ (pulse rate) ಎನ್ನುವರು. ವಿಶ್ರಾಂತಿಯಲ್ಲಿರುವ ವ್ಯಕ್ತಿಯು ಒಂದು ನಿಮಿಷಕ್ಕೆ 72 ರಿಂದ 80 ರವರೆಗೆ ನಾಡಿ ಮಿಡಿತದ ದರವನ್ನು ಹೊಂದಿರುತ್ತಾನೆ. ನಿಮ್ಮ ದೇಹದಲ್ಲಿ ನೀವು ನಾಡಿ ಮಿಡಿತದ ದರವನ್ನು ಅನುಭವಿಸುವ ಇತರ ಜಾಗಗಳನ್ನು ಪತ್ತೆಹಚ್ಚಿ.

ನಿಮ್ಮ ಮತ್ತು ನಿಮ್ಮ ಸಹಪಾಠಿಗಳ ಪ್ರತಿ ನಿಮಿಷದ ನಾಡಿ ಮಿಡಿತದ ದರವನ್ನು ದಾಖಲಿಸಿಕೊಳ್ಳಿ. ನೀವು ಪಡೆದ ಮಾಹಿತಿಯನ್ನು ಕೋಷ್ಟಕ 11.1 ರಲ್ಲಿ ಸೇರಿಸಿ ಮತ್ತು ಅವುಗಳನ್ನು ಹೋಲಿಸಿ.

ಕಾರ್ಬನ್ ಡೈಆಕ್ಸೈಡ್‍ಯುಕ್ತ ರಕ್ತವನ್ನು ದೇಹದ ಎಲ್ಲಾ ಭಾಗಗಳಿಂದ ಹೃದಯಕ್ಕೆ ಹಿಂತಿರುಗಿಸುವ ನಾಳಗಳು ಅಭಿಧಮನಿಗಳು. ಅಭಿಧಮನಿಗಳು ತೆಳುವಾದ ಭಿತ್ತಿಗಳನ್ನು ಹೊಂದಿವೆ. ರಕ್ತವನ್ನು ಹೃದಯದ ಕಡೆಗೆ ಮಾತ್ರ ಹರಿಯುವಂತೆ ಮಾಡಲು ಅಭಿಧಮನಿಗಳಲ್ಲಿ ಕವಾಟಗಳಿವೆ.

ರಕ್ತದಾನ

ಸಕಾಲದಲ್ಲಿ ರಕ್ತ ದೊರೆಯದೇ ನೂರಾರು ಜನ ಸಾವಿಗೀಡಾಗುತ್ತಿದ್ದಾರೆ. ಸ್ವಯಂ ಪ್ರೇರಿತ ರಕ್ತದಾನವು ಹಾನಿಕಾರಕವಲ್ಲ. ಇದು ನೋವು ರಹಿತವಾಗಿದ್ದು, ಅಮೂಲ್ಯ ಜೀವಗಳನ್ನು ಉಳಿಸುತ್ತದೆ. ಆಸ್ಪತ್ರೆಗಳಲ್ಲಿ ಮತ್ತು ಸರಕಾರ ನಿಗದಿಪಡಿಸಿದ ಅಧಿಕೃತ ಸ್ಥಳಗಳಲ್ಲಿ ರಕ್ತದಾನ ಮಾಡಬಹುದು. ದಾನ ನೀಡಿದ ರಕ್ತವನ್ನು ವಿಶೇಷ ಎಚ್ಚರಿಕೆಯೊಂದಿಗೆ ರಕ್ತಬ್ಯಾಂಕ್‍ಗಳಲ್ಲಿ ಸಂಗ್ರಹಿಸಲಾಗುತ್ತದೆ.

ಚಿತ್ರ 11.3ನ್ನು ನೋಡಿ. ಅಪಧಮನಿಗಳು ಚಿಕ್ಕ ನಾಳಗಳಾಗಿ ವಿಭಜನೆ ಹೊಂದುವುದನ್ನು ನೀವು ಗಮನಿಸಿದಿರ? ಅಂಗಾಂಶಗಳನ್ನು ತಲುಪಿದಾಗ ಅವು ಲೋಮನಾಳ (capillary) ಗಳೆಂಬ ಅತಿಸೂಕ್ಷ್ಮ ನಾಳಗಳಾಗಿ ವಿಭಜನೆ ಹೊಂದುತ್ತವೆ. ಲೋಮನಾಳಗಳು ಸೇರಿ ಅಭಿಧಮನಿಗಳಾಗಿ ಹೃದಯದಲ್ಲಿ ಕೊನೆಗೊಳ್ಳುತ್ತವೆ.

ಹೃದಯ

ಇತರ ಪದಾರ್ಥಗಳನ್ನು ತನ್ನೊಂದಿಗೆ ಕೊಂಡೊಯ್ಯುವ ರಕ್ತದ ಸಾಗಾಣಿಕೆಗೆ ಪಂಪ್‍ನಂತೆ ವರ್ತಿಸುತ್ತ ನಿರಂತರವಾಗಿ ಬಡಿದುಕೊಳ್ಳುವ ಅಂಗ ಹೃದಯ (heart).

ಬಹಳ ವರ್ಷಗಳವರೆಗೆ ನಿರಂತರವಾಗಿ ಕೆಲಸ ಮಾಡುವ ಪಂಪನ್ನು ಕಲ್ಪಿಸಿಕೊಳ್ಳಿ! ಇದು ಖಂಡಿತವಾಗಿಯೂ ಅಸಾಧ್ಯ. ಆದರೂ ನಮ್ಮ ಹೃದಯವು ತಡೆರಹಿತ ಪಂಪಿನಂತೆ ಕೆಲಸ ಮಾಡುತ್ತದೆ. ಈಗ ಹೃದಯದ ಬಗ್ಗೆ ಕಲಿಯೋಣ.

ಎದೆಯ ಕುಹರದಲ್ಲಿ ಕೆಳತುದಿ ಸ್ವಲ್ಪ ಎಡಗಡೆಗೆ ವಾಲಿಕೊಂಡಿರುವಂತೆ ಹೃದಯವಿದೆ (ಚಿತ್ರ 11.1). ನಿಮ್ಮ ಬೆರಳುಗಳನ್ನು ಹಸ್ತದ ಒಳಗಡೆಗೆ ಮಡಚಿ ಹಿಡಿಯಿರಿ. ಅದು ನಿಮ್ಮ ಮುಷ್ಟಿ. ನಿಮ್ಮ ಹೃದಯ ಸುಮಾರಾಗಿ ನಿಮ್ಮ ಮುಷ್ಟಿಯ ಗಾತ್ರದಷ್ಟಿದೆ. ಆಕ್ಸಿಜನ್‍ಯುಕ್ತ ರಕ್ತ ಮತ್ತು ಕಾರ್ಬನ್ ಡೈಆಕ್ಸೈಡ್‍ಯುಕ್ತ ರಕ್ತಗಳು ಪರಸ್ಪರ ಬೆರಕೆಯಾದರೆ ಏನಾಗುತ್ತದೆ? ಹೀಗಾಗದಂತೆ ತಡೆಯಲು ಹೃದಯದಲ್ಲಿ ನಾಲ್ಕು ಕೋಣೆಗಳಿವೆ. ಮೇಲಿನ ಎರಡು ಕೋಣೆಗಳನ್ನು ಹೃತ್ಕರ್ಣಗಳು (atria) ಮತ್ತು ಕೆಳಗಿನ ಎರಡು ಕೋಣೆಗಳನ್ನು ಹೃತ್ಕುಕ್ಷಿಗಳು (ventricles) ಎನ್ನುವರು (ಚಿತ್ರ 11.4). ಕೋಣೆಗಳ ನಡುವಿನ ಅಡ್ಡಗೋಡೆಯು ಆಕ್ಸಿಜನ್‍ಯುಕ್ತ ರಕ್ತದ ಜೊತೆಗೆ ಕಾರ್ಬನ್ ಡೈಆಕ್ಸೈಡ್‍ಯುಕ್ತ ರಕ್ತವು ಮಿಶ್ರಣಗೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ.

ರಕ್ತ ಪರಿಚಲನಾವ್ಯೂಹದ ಕಾರ್ಯವಿಧಾನವನ್ನು ತಿಳಿದುಕೊಳ್ಳಲು ಚಿತ್ರ 11.3 ರಲ್ಲಿ ಹೃದಯದ ಬಲಭಾಗದಿಂದ ಪ್ರಾರಂಭಿಸಿ, ಬಾಣದ ಗುರುತುಗಳನ್ನು ಹಿಂಬಾಲಿಸಿ. ರಕ್ತವು ಹೃದಯದಿಂದ ಶ್ವಾಸಕೋಶಕ್ಕೆ ಹರಿದು ಪುನಃ ಹೃದಯಕ್ಕೆ ಹಿಂತಿರುಗುತ್ತದೆ. ಈ ರಕ್ತವು ಹೃದಯದಿಂದ ದೇಹದ ಉಳಿದ ಭಾಗಗಳಿಗೆ ಪಂಪ್ ಮಾಡಲ್ಪಡುವ ದಿಕ್ಕನ್ನು ಈ ಬಾಣಗಳು ತೋರಿಸುತ್ತವೆ.

ಹೃದಯ ಬಡಿತ

ಹೃದಯದ ಕೋಣೆಗಳ ಭಿತ್ತಿಗಳು ಸ್ನಾಯುಗಳಿಂದ ಮಾಡಲ್ಪಟ್ಟಿವೆ. ಈ ಸ್ನಾಯುಗಳು ಲಯಬದ್ಧವಾಗಿ ಸಂಕುಚನ ಮತ್ತು ವಿಕಸನಗೊಳ್ಳುತ್ತವೆ. ಈ ಲಯಬದ್ದ ಸಂಕುಚನ ಮತ್ತು ವಿಕಸನ ಸೇರಿ ಒಂದು ಹೃದಯ ಬಡಿತ (heart beat) ಆಗುತ್ತದೆ. ನಮ್ಮ ಜೀವನದ ಪ್ರತಿ ಕ್ಷಣದಲ್ಲಿಯೂ ಹೃದಯ ಬಡಿಯುತ್ತಿರುತ್ತದೆ ಎಂಬುದನ್ನು ನೆನಪಿಡಿ. ನಿಮ್ಮ ಎದೆಯ ಎಡಭಾಗದಲ್ಲಿ ನಿಮ್ಮ ಕೈಯನ್ನಿಟ್ಟರೆ ಹೃದಯ ಬಡಿತವನ್ನು ನೀವು ಅನುಭವಿಸಬಲ್ಲಿರಿ. ವೈದ್ಯರು ನಿಮ್ಮ ಹೃದಯ ಬಡಿತಗಳನ್ನು ಸ್ಟೆಥೊಸ್ಕೋಪ್ ಎಂಬ ಉಪಕರಣದ ಮೂಲಕ ಅಳೆಯುತ್ತಾರೆ. ಹೃದಯ ಬಡಿತದ ಶಬ್ದವನ್ನು ಪ್ರವರ್ಧಿಸುವ ಸಾಧನವನ್ನಾಗಿ ವೈದ್ಯರು ಸ್ಟೆಥೊಸ್ಕೋಪ್‍ಅನ್ನು ಉಪಯೋಗಿಸುತ್ತಾರೆ. ಎದೆಯ ಮೇಲಿಡುವ ಒಂದು ಧ್ವನಿಫಲಕ, ಕಿವಿಗಳ ಒಳಗಿಡುವ ಎರಡು ತುದಿಗಳು ಮತ್ತು ಅವುಗಳನ್ನು ಜೋಡಿಸುವ ಕೊಳವೆಯನ್ನು ಸ್ಟೆಥೊಸ್ಕೋಪ್ ಒಳಗೊಂಡಿರುತ್ತದೆ. ಸ್ಟೆಥೊಸ್ಕೋಪ್ ಮೂಲಕ ಆಲಿಸುವುದರೊಂದಿಗೆ ವೈದ್ಯರು ನಿಮ್ಮ ಹೃದಯದ ಸ್ಥಿತಿಯ ಬಗ್ಗೆ ಸೂಚನೆಗಳನ್ನು ಪಡೆದುಕೊಳ್ಳುತ್ತಾರೆ.

ನಮ್ಮ ಸುತ್ತಲೂ ದೊರಕುವ ಸಾಮಗ್ರಿಗಳಿಂದ ಸ್ಟೆಥೊಸ್ಕೋಪ್‍ನ ಮಾದರಿಯೊಂದನ್ನು ತಯಾರಿಸೋಣ.

ಚಟುವಟಿಕೆ 11.2

6-7 cm ವ್ಯಾಸವಿರುವ ಒಂದು ಸಣ್ಣ ಆಲಿಕೆಯನ್ನು ತೆಗೆದುಕೊಳ್ಳಿ. ಆಲಿಕೆಯ ಕೊಳವೆಗೆ ಒಂದು ರಬ್ಬರ್ ಕೊಳವೆಯನ್ನು (50 cm ಉದ್ದವಿರುವ) ಭದ್ರವಾಗಿ ಸಿಕ್ಕಿಸಿ. ಆಲಿಕೆಯ ಬಾಯಿಗೆ ಒಂದು ರಬ್ಬರ್ ಹಾಳೆಯನ್ನು (ಅಥವಾ ಬಲೂನು) ಅಗಲವಾಗಿ ಸಿಕ್ಕಿಸಿ. ರಬ್ಬರ್‍ಬ್ಯಾಂಡ್‍ನಿಂದ ಅದನ್ನು ಭದ್ರವಾಗಿ ಬಿಗಿಯಿರಿ. ಕೊಳವೆಯ ತೆರೆದ ತುದಿಯನ್ನು ನಿಮ್ಮ ಒಂದು ಕಿವಿಯ ಮೇಲಿಡಿ. ಆಲಿಕೆಯ ಬಾಯಿಯನ್ನು ನಿಮ್ಮ ಹೃದಯದ ಹತ್ತಿರದಲ್ಲಿಡಿ. ಈಗ ಎಚ್ಚರಿಕೆಯಿಂದ ಆಲಿಸಲು ಪ್ರಯತ್ನಿಸಿ. ಕ್ರಮಬದ್ಧವಾದ ಬಡಿತದ ಶಬ್ದವನ್ನು ನೀವು ಕೇಳುತ್ತಿದ್ದೀರ? ಅದು ಹೃದಯ ಬಡಿತದ ಶಬ್ದ. ನಿಮ್ಮ ಹೃದಯ ಒಂದು ನಿಮಿಷಕ್ಕೆ ಎಷ್ಟು ಬಾರಿ ಬಡಿದುಕೊಂಡಿದೆ? 4-5 ನಿಮಿಷಗಳವರೆಗೆ ಓಡಿದ ನಂತರ ಪುನಃ ಲೆಕ್ಕ ಹಾಕಿ. ವೀಕ್ಷಣೆಗಳನ್ನು ಹೋಲಿಸಿ ನೋಡಿ.

ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಮತ್ತು ಓಟದ ನಂತರ ನಿಮ್ಮ ಹಾಗು ನಿಮ್ಮ ಸ್ನೇಹಿತರ ನಾಡಿ ಮಿಡಿತದ ದರ ಮತ್ತು ಹೃದಯ ಬಡಿತಗಳನ್ನು ಕೋಷ್ಟಕ 11.2 ರಲ್ಲಿ ದಾಖಲಿಸಿ. ನಿಮ್ಮ ಹೃದಯ ಬಡಿತ ಮತ್ತು ನಾಡಿ ಮಿಡಿತದ ದರದ ನಡುವೆ ಏನಾದರೂ ಸಂಬಂಧವನ್ನು ನೀವು ಗಮನಿಸಿದಿರ? ಪ್ರತಿ ಹೃದಯಬಡಿತವು ಅಪಧಮನಿಗಳಲ್ಲಿ ಒಂದು ನಾಡಿ ಮಿಡಿತವನ್ನು ಉಂಟು ಮಾಡುತ್ತದೆ ಮತ್ತು ಪ್ರತಿ ನಿಮಿಷದ ನಾಡಿ ಮಿಡಿತದ ದರವು ಹೃದಯ ಬಡಿತದ ದರವನ್ನು ಸೂಚಿಸುತ್ತದೆ.

ಹೃದಯದ ವಿವಿಧ ಕೋಣೆಗಳ ಲಯಬದ್ಧ ಬಡಿತವು ರಕ್ತ ಪರಿಚಲನೆಯನ್ನು ಮತ್ತು ದೇಹದ ವಿವಿಧ ಭಾಗಗಳಿಗೆ ಪದಾರ್ಥಗಳ ಸಾಗಾಣಿಕೆಯನ್ನು ನಿರ್ವಹಿಸುತ್ತದೆ.

ಆಂಗ್ಲ ವೈದ್ಯ ವಿಲಿಯಂ ಹಾರ್ವೆ (ಕ್ರಿ.ಶ.1578-1657) ರಕ್ತ ಪರಿಚಲನೆಯನ್ನು ಕಂಡುಹಿಡಿದನು. ದೇಹದ ನಾಳಗಳಲ್ಲಿ ರಕ್ತವು ಆಂದೋಲನಗೊಳ್ಳುತ್ತದೆ ಎಂಬುದು ಆ ದಿನಗಳಲ್ಲಿದ್ದ ಪ್ರಚಲಿತ ಅಭಿಪ್ರಾಯವಾಗಿತ್ತು. ತನ್ನ ಅಭಿಪ್ರಾಯಗಳಿಂದಾಗಿ ಹಾರ್ವೆ ಗೇಲಿಗೊಳಗಾದನು ಮತ್ತು ಪರಿಚಾಲಕ ಎಂದು ಕರೆಯಲ್ಪಟ್ಟನು. ತನ್ನ ಹೆಚ್ಚಿನ ರೋಗಿಗಳನ್ನು ಅವನು ಕಳೆದುಕೊಂಡನು. ಆದಾಗ್ಯೂ ಪರಿಚಲನೆಯ ಬಗ್ಗೆ ಹಾರ್ವೆಯ ಕಲ್ಪನೆಯು ಜೈವಿಕ ಸತ್ಯ ಎಂಬುದು ಅವನ ನಿಧನಕ್ಕೂ ಮೊದಲೇ ಸ್ವೀಕರಿಸಲ್ಪಟ್ಟಿತು.

ಸ್ಪಂಜು ಪ್ರಾಣಿಗಳು ಮತ್ತು ಹೈಡ್ರಾಗಳಲ್ಲಿ ಕೂಡಾ ರಕ್ತ ಇದೆಯೇ ಎಂದು ಬೂಝೊ ಆಶ್ಚರ್ಯಪಡುತ್ತಾನೆ. ಸ್ಪಂಜುಗಳು ಮತ್ತು ಹೈಡ್ರಾದಂತಹ ಪ್ರಾಣಿಗಳಲ್ಲಿ ಯಾವುದೇ ಪರಿಚಲನಾವ್ಯೂಹವಿಲ್ಲ. ಅವುಗಳ ವಾಸಸ್ಥಳದಲ್ಲಿನ ನೀರು ಅವುಗಳ ದೇಹವನ್ನು ಪ್ರವೇಶಿಸಿದಾಗ ಆಹಾರ ಮತ್ತು ಆಕ್ಸಿಜನ್‍ಗಳನ್ನು ಒಳತರುತ್ತದೆ. ನೀರು ಹೊರಹೋಗುವಾಗ ತ್ಯಾಜ್ಯ ಪದಾರ್ಥಗಳು ಮತ್ತು ಕಾರ್ಬನ್ ಡೈಆಕ್ಸೈಡ್‍ಗಳನ್ನು ಕೊಂಡೊಯ್ಯುತ್ತದೆ. ರಕ್ತದಂತಹ ಪರಿಚಲನಾ ದ್ರವ ಈ ಪ್ರಾಣಿಗಳಿಗೆ ಅಗತ್ಯವಿಲ್ಲ.

ಕಾರ್ಬನ್ ಡೈಆಕ್ಸೈಡ್ ಅಲ್ಲದೇ ಇತರ ತ್ಯಾಜ್ಯಗಳ ನಿರ್ಮೂಲನೆಯ ಬಗ್ಗೆ ಈಗ ಕಲಿಯೋಣ.

11.2 ಪ್ರಾಣಿಗಳಲ್ಲಿ ವಿಸರ್ಜನೆ

ನಿಶ್ವಾಸದ ಸಮಯದಲ್ಲಿ ಶ್ವಾಸಕೋಶಗಳ ಮೂಲಕ ಕಾರ್ಬನ್ ಡೈಆಕ್ಸೈಡನ್ನು ತ್ಯಾಜ್ಯದ ರೂಪದಲ್ಲಿ ಹೇಗೆ ಹೊರಹಾಕಲಾಯಿತು ಎಂಬುದನ್ನು ಸ್ಮರಿಸಿಕೊಳ್ಳಿ. ಜೀರ್ಣವಾಗದ ಆಹಾರವನ್ನು ವಿಸರ್ಜನೆಯಲ್ಲಿ ಹೇಗೆ ಹೊರಹಾಕಲಾಗುತ್ತದೆ ಎಂಬುದನ್ನು ಕೂಡಾ ಸ್ಮರಿಸಿಕೊಳ್ಳಿ. ಇತರ ತ್ಯಾಜ್ಯ ಪದಾರ್ಥಗಳು ದೇಹದಿಂದ ಹೇಗೆ ಹೊರಹೋಗುತ್ತದೆ ಎಂಬುದನ್ನು ಈಗ ಕಂಡುಹಿಡಿಯೋಣ. ಈ ಅನಪೇಕ್ಷಿತ ಪದಾರ್ಥಗಳು ಎಲ್ಲಿಂದ ಬರುತ್ತವೆ ಎಂದು ನೀವು ಆಶ್ಚರ್ಯಪಡಬಹುದು.

ನಮ್ಮ ಜೀವಕೋಶಗಳ ಕಾರ್ಯನಿರ್ವಹಣೆಯಲ್ಲಿ ನಿರ್ದಿಷ್ಟವಾದ ಕೆಲವು ತ್ಯಾಜ್ಯ ಉತ್ಪನ್ನಗಳು ಬಿಡುಗಡೆಯಾಗುತ್ತವೆ. ಇವು ವಿಷವಸ್ತುಗಳು. ದೇಹದಿಂದ ಇವುಗಳನ್ನು ಅಗತ್ಯವಾಗಿ ಹೊರ ತೆಗೆಯಬೇಕು. ಜೀವಿಗಳ ಜೀವಕೋಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಹೊರಹಾಕುವ ಕ್ರಿಯೆಗೆ ವಿಸರ್ಜನೆ (excretion) ಎನ್ನುವರು. ವಿಸರ್ಜನಾ ಕ್ರಿಯೆಯಲ್ಲಿ ಒಳಗೊಂಡಿರುವ ಭಾಗಗಳಿಂದ ವಿಸರ್ಜನಾಂಗವ್ಯೂಹ (excretory system) ವು ರಚನೆಯಾಗಿದೆ.

ಮಾನವರಲ್ಲಿ ವಿಸರ್ಜನಾಂಗವ್ಯೂಹ

ಮೂತ್ರಜನಕಾಂಗ ಮೂತ್ರನಾಳ ಮೂತ್ರಕೋಶ ಮೂತ್ರದ್ವಾರ ಯುರಿತ್ರಾ ಚಿತ್ರ 11.6 ಮಾನವನ ವಿಸರ್ಜನಾಂಗವ್ಯೂಹ ರಕ್ತದಲ್ಲಿರುವ ತ್ಯಾಜ್ಯವು ದೇಹದಿಂದ ಹೊರಹೋಗಬೇಕು. ಇದು ಹೇಗೆ ನಡೆಯುತ್ತದೆ? ರಕ್ತವನ್ನು ಶೋಧಿಸುವ ಕಾರ್ಯ ವಿಧಾನವೊಂದು ಅಗತ್ಯವಿದೆ. ಇದು ಮೂತ್ರಜನಕಾಂಗ (kidney) ಗಳಲ್ಲಿರುವ ಲೋಮನಾಳಗಳಿಂದ ನಡೆಯುತ್ತದೆ. ರಕ್ತವು ಎರಡು ಮೂತ್ರಜನಕಾಂಗಗಳನ್ನು ತಲುಪಿದಾಗ ಉಪಯುಕ್ತ ಮತ್ತು ಹಾನಿಕಾರಕ ಪದಾರ್ಥಗಳೆರಡನ್ನೂ ಒಳಗೊಂಡಿರುತ್ತದೆ. ಉಪಯುಕ್ತ ಪದಾರ್ಥಗಳು ರಕ್ತಕ್ಕೆ ಮರು ಹೀರಲ್ಪಡುತ್ತವೆ. ನೀರಿನಲ್ಲಿ ಕರಗಿದ ತ್ಯಾಜ್ಯಗಳು ಮೂತ್ರ (urine) ದ ರೂಪದಲ್ಲಿ ಹೊರ ಹೋಗುತ್ತವೆ. ಕೊಳವೆಯಂತಿರುವ ಮೂತ್ರನಾಳ (ureter) ಗಳ ಮೂಲಕ ಮೂತ್ರವು ಮೂತ್ರಜನಕಾಂಗದಿಂದ ಮೂತ್ರಕೋಶ (urinary bladder) ವನ್ನು ಪ್ರವೇಶಿಸುತ್ತದೆ. ಅದು ಮೂತ್ರಕೋಶದಲ್ಲಿ ಸಂಗ್ರಹವಾಗುತ್ತದೆ. ಯುರಿತ್ರಾ (urethra) ಎನ್ನುವ ಸ್ನಾಯುವಿನ ಕೊಳವೆಯ ತುದಿಯಲ್ಲಿರುವ ಮೂತ್ರದ್ವಾರ (urinary opening) ದ ಮೂಲಕ ಹೊರಗೆ ಸಾಗುತ್ತದೆ (ಚಿತ್ರ 11.6). ಮೂತ್ರಜನಕಾಂಗಗಳು, ಮೂತ್ರನಾಳಗಳು, ಮೂತ್ರಕೋಶ ಮತ್ತು ಯುರಿತ್ರಾ ಸೇರಿ ವಿಸರ್ಜನಾಂಗವ್ಯೂಹ ರಚನೆಯಾಗಿದೆ.

ವಯಸ್ಕ ಮಾನವನು ಸಾಮಾನ್ಯವಾಗಿ 24 ಗಂಟೆಗಳಲ್ಲಿ 1 ರಿಂದ 1.8 L ಮೂತ್ರವನ್ನು ವಿಸರ್ಜಿಸುತ್ತಾನೆ. ಮೂತ್ರದಲ್ಲಿ 95% ನೀರು, 2.5% ಯೂರಿಯಾ ಮತ್ತು 2.5% ರಷ್ಟು ಇತರ ತ್ಯಾಜ್ಯಪದಾರ್ಥಗಳಿರುತ್ತವೆ.

ಕಡುಬೇಸಿಗೆಯ ದಿನಗಳಲ್ಲಿ ಬೆವರುವ ಅನುಭವವನ್ನು ನಾವೆಲ್ಲಾ ಪಡೆದಿದ್ದೇವೆ. ಬೆವರಿನಲ್ಲಿ ನೀರು ಮತ್ತು ಲವಣಗಳಿರುತ್ತವೆ. ಬೇಸಿಗೆಯಲ್ಲಿ ಕೆಲವು ಬಾರಿ ನಮ್ಮ ಬಟ್ಟೆಗಳ ಮೇಲೆ ವಿಶೇಷವಾಗಿ ಕಂಕುಳಿನಂತಹ ಜಾಗಗಳಲ್ಲಿ ಬೆವರಿನ ಬಿಳಿಯ ಕಲೆಗಳನ್ನು ಬೂಝೊ ಗಮನಿಸಿದ್ದಾನೆ. ಈ ಕಲೆಗಳು ಬೆವರಿನಲ್ಲಿರುವ ಲವಣಗಳಿಂದ ಉಂಟಾಗಿರುತ್ತವೆ.

ಬೇರೆ ಯಾವುದಾದರೂ ಕಾರ್ಯವನ್ನು ಬೆವರು ನಿರ್ವಹಿಸುತ್ತದೆಯೆ? ಮಣ್ಣಿನ ಮಡಕೆಯಲ್ಲಿಟ್ಟ ನೀರು ತಂಪಾಗಿರುತ್ತದೆ ಎಂದು ನೀವು ತಿಳಿದಿದ್ದೀರಿ. ಮಡಕೆಯಲ್ಲಿರುವ ರಂಧ್ರಗಳ ಮೂಲಕ ನೀರು ಆವಿಯಾಗುವುದರಿಂದ ಅದು ತಂಪಾಗಿರುತ್ತದೆ. ಅದೇ ರೀತಿ ನಾವು ಬೆವರಿದಾಗ ಅದು ನಮ್ಮ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ.

ಪ್ರಾಣಿಯ ದೇಹದಿಂದ ರಾಸಾಯನಿಕ ತ್ಯಾಜ್ಯಗಳನ್ನು ಹೊರತೆಗೆಯುವ ವಿಧಾನವು ನೀರಿನ ಲಭ್ಯತೆಯನ್ನು ಅವಲಂಬಿಸಿದೆ. ಮೀನುಗಳಂತಹ ಜಲಚರ ಪ್ರಾಣಿಗಳು ನೀರಿನಲ್ಲಿ ನೇರವಾಗಿ ಕರಗುವ ಅಮೋನಿಯಾ ರೂಪದಲ್ಲಿ ಕೋಶೀಯ ತ್ಯಾಜ್ಯಗಳನ್ನು ವಿಸರ್ಜಿಸುತ್ತವೆ. ಪಕ್ಷಿ, ಹಲ್ಲಿ, ಹಾವುಗಳಂತಹ ಭೂಚರ ಜೀವಿಗಳು ಅರೆ ಘನರೂಪದ ಬಿಳಿಯ ಬಣ್ಣದ ಸಂಯುಕ್ತ (ಯೂರಿಕ್ ಆಮ್ಲ) ವನ್ನು ವಿಸರ್ಜಿಸುತ್ತವೆ. ಮಾನವರಲ್ಲಿ ಮುಖ್ಯ ತ್ಯಾಜ್ಯ ಉತ್ಪನ್ನ ಯೂರಿಯಾ.

ಕೆಲವು ಬಾರಿ ಸೋಂಕು ಅಥವಾ ಗಾಯದಿಂದಾಗಿ ವ್ಯಕ್ತಿಯ ಮೂತ್ರಜನಕಾಂಗಗಳು ಕೆಲಸ ನಿಲ್ಲಿಸಬಹುದು. ಮೂತ್ರಜನಕಾಂಗದ ವೈಫಲ್ಯದ ಫಲಿತಾಂಶವಾಗಿ ರಕ್ತದಲ್ಲಿ ತ್ಯಾಜ್ಯ ಉತ್ಪನ್ನಗಳ ಶೇಖರಣೆ ಪ್ರಾರಂಭವಾಗುತ್ತದೆ. ಕೃತಕ ಮೂತ್ರಜನಕಾಂಗದ ಮೂಲಕ ನಿಯತಕಾಲಿಕವಾಗಿ ಅವರ ರಕ್ತವನ್ನು ಶೋಧಿಸದಿದ್ದಲ್ಲಿ ಅಂತಹ ವ್ಯಕ್ತಿಗಳು ಬದುಕಲಾರರು. ಈ ಪ್ರಕ್ರಿಯೆಗೆ ಡಯಾಲಿಸಿಸ್ (dialysis) ಎನ್ನುವರು.

11.3 ಸಸ್ಯಗಳಲ್ಲಿ ಪದಾರ್ಥಗಳ ಸಾಗಾಣಿಕೆ

ನೀರು ಮತ್ತು ಖನಿಜಯುಕ್ತ ಪೋಷಕಗಳನ್ನು ಸಸ್ಯಗಳು ಬೇರಿನ ಮೂಲಕ ಮಣ್ಣಿನಿಂದ ಪಡೆದುಕೊಳ್ಳುತ್ತವೆ ಮತ್ತು ಅವುಗಳನ್ನು ಎಲೆಗಳಿಗೆ ಸಾಗಿಸುತ್ತವೆ ಎಂದು ಅಧ್ಯಾಯ 1ರಲ್ಲಿ ನೀವು ಕಲಿತಿರುವಿರಿ. ಎಲೆಗಳು ದ್ಯುತಿ ಸಂಶ್ಲೇಷಣೆಯಲ್ಲಿ ನೀರು ಮತ್ತು ಕಾರ್ಬನ್ ಡೈಆಕ್ಸೈಡ್‍ಗಳನ್ನು ಉಪಯೋಗಿಸಿಕೊಂಡು ಸಸ್ಯಕ್ಕೋಸ್ಕರ ಆಹಾರವನ್ನು ತಯಾರಿಸುತ್ತವೆ. ಆಹಾರವು ಶಕ್ತಿಯ ಆಕರ ಮತ್ತು ಗ್ಲೂಕೋಸ್‍ನ ವಿಭಜನೆಯಿಂದ ಜೀವಿಯ ಪ್ರತಿ ಜೀವಕೋಶವು ಶಕ್ತಿಯನ್ನು ಪಡೆಯುತ್ತದೆ ಎಂಬುದನ್ನು ಸಹಾ ಅಧ್ಯಾಯ 10 ರಲ್ಲಿ ಕಲಿತಿರುವಿರಿ. ಪ್ರಮುಖ ಜೈವಿಕ ಚಟುವಟಿಕೆಗಳನ್ನು ನಡೆಸಲು ಜೀವಕೋಶಗಳು ಈ ಶಕ್ತಿಯನ್ನು ಬಳಸಿಕೊಳ್ಳುತ್ತವೆ. ಆದ್ದರಿಂದ ಜೀವಿಯ ಪ್ರತಿ ಜೀವಕೋಶಕ್ಕೂ ಆಹಾರ ತಲುಪುವಂತೆ ಮಾಡಲೇಬೇಕು. ಬೇರಿನಿಂದ ಹೀರಲ್ಪಟ್ಟ ನೀರು ಮತ್ತು ಪೋಷಕಗಳು ಎಲೆಗಳಿಗೆ ಹೇಗೆ ಸಾಗಿಸಲ್ಪಡುತ್ತದೆ ಎಂದು ನೀವು ಯಾವಾಗಲಾದರೂ ಆಶ್ಚರ್ಯಪಟ್ಟಿದ್ದೀರ? ಎಲೆಗಳಲ್ಲಿ ತಯಾರಿಸಲ್ಪಟ್ಟ ಆಹಾರವು, ಆಹಾರ ತಯಾರಾಗದ ಭಾಗಗಳಿಗೆ ಹೇಗೆ ಸಾಗಾಣಿಕೆಯಾಗುತ್ತದೆ?

ನೀರು ಮತ್ತು ಖನಿಜಗಳ ಸಾಗಾಣಿಕೆ

ಸಸ್ಯಗಳು ಬೇರಿನ ಮೂಲಕ ನೀರು ಮತ್ತು ಖನಿಜಗಳನ್ನು ಹೀರಿಕೊಳ್ಳುತ್ತವೆ. ಬೇರುಗಳು ಬೇರು ರೋಮಗಳನ್ನು ಒಳಗೊಂಡಿರುತ್ತವೆ. ನೀರು ಮತ್ತು ನೀರಿನಲ್ಲಿ ಕರಗಿರುವ ಖನಿಜಯುಕ್ತ ಪೋಷಕಗಳನ್ನು ಹೀರಿಕೊಳ್ಳಲು ಬೇಕಾದ ಮೇಲ್ಮೈ ವಿಸ್ತೀರ್ಣವನ್ನು ಬೇರುರೋಮಗಳು ಹೆಚ್ಚಿಸುತ್ತವೆ. ಮಣ್ಣಿನ ಕಣಗಳ ನಡುವೆ ಇರುವ ನೀರಿನ ಜೊತೆಗೆ ಬೇರು ರೋಮಗಳು ಸಂಪರ್ಕ ಹೊಂದಿರುತ್ತವೆ [ಚಿತ್ರ 11.7 (ಎ)]. ಬೇರಿನಿಂದ ನೀರು ಎಲೆಗಳಿಗೆ ಹೇಗೆ ಸಾಗಾಣಿಕೆಯಾಗುತ್ತದೆ ಎಂಬುದನ್ನು ಊಹಿಸಬಲ್ಲಿರ? ಸಸ್ಯಗಳಲ್ಲಿ ಯಾವ ರೀತಿಯ ಸಾಗಾಣಿಕ ವ್ಯವಸ್ಥೆ ಇದೆ?

ಹೌದು, ಬೂಝೊನ ಆಲೋಚನೆ ಸರಿಯಾಗಿದೆ. ಮಣ್ಣಿನಿಂದ ನೀರು ಮತ್ತು ಪೋಷಕಗಳನ್ನು ಸಾಗಿಸಲು ಸಸ್ಯಗಳಲ್ಲಿ ಕೊಳವೆಯಂತಿರುವ ವೆಸೆಲ್ (vessel) ಗಳಿವೆ. ವಿಶೇಷ ಕೋಶಗಳಿಂದ ಮಾಡಲ್ಪಟ್ಟಿರುವ ವೆಸೆಲ್‍ಗಳು ವಾಹಕ ಅಂಗಾಂಶ (vascular tissue) ಗಳನ್ನು ಉಂಟು ಮಾಡುತ್ತವೆ. ಜೀವಿಯೊಂದರಲ್ಲಿ ವಿಶಿಷ್ಟ ಕಾರ್ಯಗಳನ್ನು ನಡೆಸುವ ಜೀವಕೋಶಗಳ ಗುಂಪೇ ಅಂಗಾಂಶ (tissue). ಸಸ್ಯಗಳಲ್ಲಿ ನೀರು ಮತ್ತು ಪೋಷಕಗಳ ಸಾಗಾಣಿಕೆ ಮಾಡುವ ವಾಹಕ ಅಂಗಾಂಶವನ್ನು ಕ್ಸೈಲಮ್ (xylem) ಎನ್ನುವರು [ಚಿತ್ರ 11.7 (ಎ)].

ಬೇರುಗಳಿಂದ ಕಾಂಡ ಮತ್ತು ರೆಂಬೆಗಳ ಮೂಲಕ ಎಲೆಗಳನ್ನು ಸಂಪರ್ಕಿಸುವ ನಿರಂತರ ಜಾಲವನ್ನು ಕ್ಸೈಲಮ್ ನಿರ್ಮಿಸುತ್ತದೆ ಮತ್ತು ಇಡೀ ಸಸ್ಯಕ್ಕೆ ನೀರನ್ನು ಸಾಗಿಸುತ್ತದೆ [ಚಿತ್ರ 11.7 (ಬಿ)].

ಎಲೆಗಳು ಆಹಾರವನ್ನು ಸಂಶ್ಲೇಷಿಸುತ್ತವೆ ಎಂದು ನೀವು ತಿಳಿದಿರುವಿರಿ. ಸಸ್ಯದ ಎಲ್ಲಾ ಭಾಗಗಳಿಗೆ ಆಹಾರ ಸಾಗಾಣಿಕೆಯಾಗಬೇಕು. ಇದು ಫ್ಲೋಯಮ್ (phloem) ಎಂಬ ವಾಹಕ ಅಂಗಾಂಶದಿಂದ ನಡೆಯುತ್ತದೆ. ಹೀಗೆ ಕ್ಸೈಲಮ್ ಮತ್ತು ಫ್ಲೋಯಮ್‍ಗಳು ಸಸ್ಯಗಳಲ್ಲಿ ಪದಾರ್ಥಗಳನ್ನು ಸಾಗಿಸುತ್ತವೆ.

ಚಟುವಟಿಕೆ 11.3

ಈ ಚಟುವಟಿಕೆಗೆ ಒಂದು ಗಾಜಿನ ಲೋಟ, ನೀರು, ಕೆಂಪು ಶಾಯಿ, ಒಂದು ಎಳೆಯ ಸಸ್ಯ (ಉದಾಹರಣೆಗೆ, ಕರ್ಣಕುಂಡಲ ಸಸ್ಯ) ಮತ್ತು ಒಂದು ಬ್ಲೇಡ್‍ನ ಅವಶ್ಯಕತೆ ಇದೆ.

ಗಾಜಿನ ಲೋಟಕ್ಕೆ 1 3 ಭಾಗದಷ್ಟು ನೀರನ್ನು ಸುರಿಯಿರಿ. ನೀರಿಗೆ ಕೆಲವು ಹನಿಗಳಷ್ಟು ಕೆಂಪು ಶಾಯಿಯನ್ನು ಸೇರಿಸಿ. ಎಳೆಯ ಸಸ್ಯದ ಕಾಂಡದ ಬುಡವನ್ನು ಕತ್ತರಿಸಿ, ಚಿತ್ರ 11.8 (ಎ) ನಲ್ಲಿ ತೋರಿಸಿರುವಂತೆ ಲೋಟದ ಒಳಗಿಡಿ. ಮರುದಿನ ಸಸ್ಯವನ್ನು ಗಮನಿಸಿ. ಸಸ್ಯದ ಯಾವ ಭಾಗವಾದರೂ ಕೆಂಪಾಗಿ ಕಾಣಿಸುತ್ತದೆಯೆ? ಹೌದು ಎಂದಾದರೆ ಬಣ್ಣ ಅಲ್ಲಿಗೆ ಹೇಗೆ ತಲುಪಿತು ಎಂದು ನೀವು ಯೋಚಿಸುವಿರಿ?

ನೀವು ಕಾಂಡವನ್ನು ಅಡ್ಡಲಾಗಿ ಕತ್ತರಿಸಬಹುದು ಮತ್ತು ಕಾಂಡದ ಒಳಗೆ ಕೆಂಪು ಬಣ್ಣವನ್ನು ನೋಡಬಹುದು 11.8 (ಬಿ) ಮತ್ತು 11.8 (ಸಿ).

ಕಾಂಡದ ಮೂಲಕ ನೀರು ಮೇಲೇರಿದೆ ಎಂಬುದನ್ನು ನಾವು ಈ ಚಟುವಟಿಕೆಯಲ್ಲಿ ನೋಡಿದೆವು. ಬೇರೆ ರೀತಿಯಲ್ಲಿ ಹೇಳುವುದಾದರೆ ಕಾಂಡವು ನೀರನ್ನು ಸಾಗಿಸುತ್ತದೆ. ಕೆಂಪುಶಾಯಿ ಮೇಲೇರುವಂತೆ ನೀರಿನಲ್ಲಿ ಕರಗಿರುವ ಖನಿಜಗಳೂ ನೀರಿನೊಂದಿಗೆ ಕಾಂಡದಲ್ಲಿ ಮೇಲೇರುತ್ತವೆ. ಕಾಂಡದ ಒಳಗಿರುವ ಸೂಕ್ಷ್ಮನಾಳಗಳ (ಕ್ಸೈಲಮ್) ಮೂಲಕ ನೀರು ಮತ್ತು ಖನಿಜಗಳು ಸಸ್ಯದ ಎಲೆಗಳು ಮತ್ತು ಇತರ ಭಾಗಗಳಿಗೆ ತಲುಪುತ್ತವೆ [ಚಿತ್ರ 11.7 (ಬಿ)].

ಬಾಷ್ಪವಿಸರ್ಜನೆ

ಬಾಷ್ಪವಿಸರ್ಜನಾ (transpiration) ಪ್ರಕ್ರಿಯೆಯಿಂದ ಸಸ್ಯಗಳು ಬಹಳಷ್ಟು ನೀರನ್ನು ಬಿಡುಗಡೆ ಮಾಡುತ್ತವೆ ಎಂಬುದನ್ನು ನೀವು 6ನೇ ತರಗತಿಯಲ್ಲಿ ಕಲಿತಿರುವಿರಿ.

ಖನಿಜಯುಕ್ತ ಪೋಷಕಗಳು ಮತ್ತು ನೀರನ್ನು ಸಸ್ಯಗಳು ಮಣ್ಣಿನಿಂದ ಹೀರಿಕೊಳ್ಳುತ್ತವೆ. ಹೀರಿಕೊಂಡ ಎಲ್ಲಾ ನೀರನ್ನು ಸಸ್ಯಗಳು ಉಪಯೋಗಿಸುವುದಿಲ್ಲ. ಎಲೆಗಳ ಮೇಲ್ಮೈನಲ್ಲಿರುವ ಪತ್ರರಂಧ್ರಗಳ ಮೂಲಕ ಬಾಷ್ಪವಿಸರ್ಜನಾ ಪ್ರಕ್ರಿಯೆಯಿಂದ ನೀರು ಆವಿಯಾಗುತ್ತದೆ.

ಎಲೆಗಳಿಂದಾದ ನೀರಿನ ಆವೀಕರಣವು ಮೇಲ್ಮಖ ಸೆಳೆತವನ್ನು (ನೀವು ನೀರನ್ನು ಸ್ಟ್ರಾ ಮೂಲಕ ಎಳೆದಾಗ ಉತ್ಪತ್ತಿಯಾಗುವಂತೆ) ಉತ್ಪತ್ತಿ ಮಾಡುತ್ತದೆ. ಈ ಮೇಲ್ಮುಖ ಸೆಳೆತವು ಎತ್ತರದ ಮರಗಳಲ್ಲಿ ಹೆಚ್ಚು ಎತ್ತರಗಳಿಗೆ ನೀರನ್ನು ಎಳೆಯಬಲ್ಲದು. ಬಾಷ್ಪವಿಸರ್ಜನೆಯು ಸಸ್ಯವನ್ನು ತಂಪಾಗಿ ಕೂಡಾ ಇಡುತ್ತದೆ.

ಪ್ರಮುಖ ಪದಗಳು

ಅಮೋನಿಯಾ

ಹೃದಯ ಬಡಿತ

ಅಂಗಾಂಶ

ಅಪಧಮನಿ

ಮೂತ್ರಜನಕಾಂಗಗಳು

ಯೂರಿಯಾ

ರಕ್ತ

ಫ್ಲೋಯಮ್

ಮೂತ್ರನಾಳ

ರಕ್ತನಾಳಗಳು

ಪ್ಲಾಸ್ಮಾ

ಯುರಿತ್ರಾ

ಲೋಮನಾಳ

ಕಿರುತಟ್ಟೆಗಳು

ಯೂರಿಕ್ ಆಮ್ಲ

ಪರಿಚಲನಾವ್ಯೂಹ

ನಾಡಿ

ಮೂತ್ರಕೋಶ

ಡಯಾಲಿಸಿಸ್

ಕೆಂಪು ರಕ್ತಕಣ

ಅಭಿಧಮನಿ

ವಿಸರ್ಜನೆ

ಬೇರುರೋಮ

ಬಿಳಿ ರಕ್ತಕಣ

ವಿಸರ್ಜನಾಂಗವ್ಯೂಹ

ಸ್ಟೆಥೊಸ್ಕೋಪ್

ಕ್ಸೈಲಮ್

ಹಿಮೋಗ್ಲೋಬಿನ್

ಬೆವರು

ನೀವು ಕಲಿತಿರುವುದು

• ದೇಹದಲ್ಲಿ ಪರಿಚಲನೆಗೊಳ್ಳುತ್ತಿರುವ ರಕ್ತವು ಬಹಳಷ್ಟು ಪ್ರಾಣಿಗಳಲ್ಲಿ ಆಹಾರ ಮತ್ತು ಆಕ್ಸಿಜನ್‍ಅನ್ನು ದೇಹದ ವಿವಿಧ ಜೀವಕೋಶಗಳಿಗೆ ವಿತರಿಸುತ್ತದೆ. ತ್ಯಾಜ್ಯಪದಾರ್ಥಗಳನ್ನು ಕೂಡ ದೇಹದ ವಿವಿಧ ಭಾಗಗಳಿಂದ ವಿಸರ್ಜನೆಗೆ ಅದು ಕೊಂಡೊಯ್ಯುತ್ತದೆ.

• ಪರಿಚಲನಾವ್ಯೂಹವು ಹೃದಯ ಮತ್ತು ರಕ್ತನಾಳಗಳನ್ನು ಒಳಗೊಂಡಿದೆ.

• ಮಾನವರಲ್ಲಿ ರಕ್ತವು ಅಪಧಮನಿ ಮತ್ತು ಅಭಿಧಮನಿಗಳ ಮೂಲಕ ಹರಿಯುತ್ತದೆ ಮತ್ತು ಹೃದಯವು ರಕ್ತವನ್ನು ಪಂಪ್ ಮಾಡುವ ಅಂಗದಂತೆ ಕೆಲಸ ಮಾಡುತ್ತದೆ.

• ರಕ್ತವು ಪ್ಲಾಸ್ಮಾ, ಕೆಂಪು ರಕ್ತಕಣ, ಬಿಳಿ ರಕ್ತಕಣ ಮತ್ತು ಕಿರುತಟ್ಟೆಗಳನ್ನು ಒಳಗೊಂಡಿದೆ. ಹಿಮೋಗ್ಲೋಬಿನ್ ಎಂಬ ಕೆಂಪುವರ್ಣಕ ಇರುವುದರಿಂದ ರಕ್ತವು ಕೆಂಪು ಬಣ್ಣದಲ್ಲಿದೆ.

• ವಯಸ್ಕ ಮಾನವನ ಹೃದಯವು ನಿಮಿಷಕ್ಕೆ 70 ರಿಂದ 80 ಬಾರಿ ಬಡಿದುಕೊಳ್ಳುತ್ತದೆ. ಇದಕ್ಕೆ ಹೃದಯದ ಬಡಿತ ಎನ್ನುವರು.

• ಅಪಧಮನಿಗಳು ರಕ್ತವನ್ನು ಹೃದಯದಿಂದ ದೇಹದ ಎಲ್ಲಾ ಭಾಗಗಳಿಗೆ ಕೊಂಡೊಯ್ಯುತ್ತವೆ.

• ಅಭಿಧಮನಿಗಳು ರಕ್ತವನ್ನು ದೇಹದ ಎಲ್ಲಾ ಭಾಗಗಳಿಂದ ಹೃದಯಕ್ಕೆ ಹಿಂತಿರುಗಿಸುತ್ತವೆ.

• ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ಹೊರ ತೆಗೆಯುವುದಕ್ಕೆ ವಿಸರ್ಜನೆ ಎನ್ನುವರು.

• ಮಾನವನ ವಿಸರ್ಜನಾಂಗವ್ಯೂಹವು ಎರಡು ಮೂತ್ರಜನಕಾಂಗಗಳು, ಎರಡು ಮೂತ್ರನಾಳಗಳು, ಮೂತ್ರಕೋಶ ಮತ್ತು ಯೂರಿತ್ರಾವನ್ನು ಒಳಗೊಂಡಿದೆ.

• ಯೂರಿಯಾ ಮತ್ತು ಲವಣಗಳು ನೀರಿನೊಂದಿಗೆ ಬೆವರಿನ ರೂಪದಲ್ಲಿ ಹೊರ ಹೋಗುತ್ತವೆ.

• ನೀರಿನಲ್ಲಿ ನೇರವಾಗಿ ಕರಗುವ ಅಮೋನಿಯಾದಂತಹ ತ್ಯಾಜ್ಯಪದಾರ್ಥಗಳನ್ನು ಮೀನು ವಿಸರ್ಜಿಸುತ್ತದೆ.

• ಪಕ್ಷಿ, ಕೀಟ ಮತ್ತು ಹಲ್ಲಿಗಳು ಅರ್ಧಘನ ರೂಪದಲ್ಲಿ ಯೂರಿಕ್ ಆಮ್ಲವನ್ನು ವಿಸರ್ಜಿಸುತ್ತವೆ.

• ಮಣ್ಣಿನಲ್ಲಿರುವ ನೀರು ಮತ್ತು ಖನಿಜ ಪೋಷಕಗಳು ಬೇರುಗಳಿಂದ ಹೀರಿಕೊಳ್ಳಲ್ಪಡುತ್ತವೆ.

• ಕ್ಸೈಲಮ್ ಎಂಬ ವಾಹಕ ಅಂಗಾಂಶದ ಮೂಲಕ ನೀರಿನೊಂದಿಗೆ ಪೋಷಕಗಳು ಇಡೀ ಸಸ್ಯಕ್ಕೆ ಸಾಗಿಸಲ್ಪಡುತ್ತವೆ.

• ಸಸ್ಯದ ವಿವಿಧ ಭಾಗಗಳಿಗೆ ಆಹಾರವನ್ನು ಸಾಗಿಸುವ ವಾಹಕ ಅಂಗಾಂಶ ಫ್ಲೋಯಮ್.

• ಬಾಷ್ಪವಿಸರ್ಜನೆಯಲ್ಲಿ ಪತ್ರರಂಧ್ರಗಳ ಮೂಲಕ ಸಸ್ಯಗಳ ಬಹಳಷ್ಟು ನೀರು ಆವಿಯ ರೂಪದಲ್ಲಿ ನಷ್ಟವಾಗುತ್ತದೆ.

• ಬೇರಿನ ಮೂಲಕ ಮಣ್ಣಿನಿಂದ ಹೀರಿಕೆಯಾದ ನೀರು ಸಸ್ಯದ ಕಾಂಡ ಮತ್ತು ಎಲೆಗಳಿಗೆ ತಲುಪುವಂತೆ ಮೇಲಕ್ಕೆ ಎಳೆಯಲು ಬೇಕಾದ ಬಲವನ್ನು ಬಾಷ್ಪವಿಸರ್ಜನೆಯು ಉಂಟುಮಾಡುತ್ತದೆ.

ಸಂವೇದ ವಿಡಿಯೋ ಪಾಠಗಳು

Samveda – 7th – Science – Jeevigalalli Saganike (Part 1 of 3)

Samveda – 7th – Science – Jeevigalalli Saganike (Part 2 of 3)

Samveda – 7th – Science – Jeevigalalli Saganike (Part 3 of 3)

ಅಭ್ಯಾಸಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವಿಸ್ತರಿತ ಕಲಿಕೆ – ಚಟುವಟಿಕೆಗಳು ಮತ್ತು ಯೋಜನೆಗಳು

1. ರಕ್ತದ ಗುಂಪುಗಳು ಮತ್ತು ಅವುಗಳ ಪ್ರಾಮುಖ್ಯತೆಯನ್ನು ಕಂಡುಹಿಡಿಯಿರಿ.

Blood Types, Blood Group Systems and Transfusion Rule, Animation

2. ಎದೆನೋವಿನಿಂದ ಬಳಲುತ್ತಿರುವ ವ್ಯಕ್ತಿಗೆ ವೈದ್ಯರು ಇಸಿಜಿ (ECG) ಮಾಡುತ್ತಾರೆ. ಒಬ್ಬ ವೈದ್ಯರನ್ನು ಭೇಟಿ ಮಾಡಿ, ಇಸಿಜಿ ಬಗ್ಗೆ ಮಾಹಿತಿ ಪಡೆಯಿರಿ. ವಿಶ್ವಕೋಶ (encyclopaedia) ಅಥವಾ ಅಂತರ್ಜಾಲ (internet) ವನ್ನು ಕೂಡಾ ನೀವು ನೋಡಬಹುದು.

Cardiac Conduction System and Understanding ECG, Animation.

ECG Test in Hindi | ईसीजी टेस्ट क्या है और क्यों किया जाता है | Electrocardiogram

ನಿಮಗಿದು ಗೊತ್ತೆ?

ರಕ್ತಕ್ಕೆ ಬದಲಿ ವ್ಯವಸ್ಥೆ ಇಲ್ಲ. ಶಸ್ತ್ರ ಚಿಕಿತ್ಸೆ ಅಥವಾ ಗಾಯಗಳಿಂದ ಜನರಲ್ಲಿ ರಕ್ತವು ನಷ್ಟವಾದರೆ ಅಥವಾ ಅವರ ದೇಹಗಳಲ್ಲಿ ಸಾಕಷ್ಟು ರಕ್ತ ಉತ್ಪತ್ತಿ ಸಾಧ್ಯವಾಗದಿದ್ದರೆ, ಅದನ್ನು ಪಡೆಯಲು ಒಂದೇ ಒಂದು ದಾರಿಯಿದೆ – ಅದು ಸ್ವಯಂ ಪ್ರೇರಿತ ರಕ್ತದಾನಿಗಳಿಂದ ರಕ್ತಪೂರಣ. ರಕ್ತದ ಪೂರೈಕೆ ಸಾಮಾನ್ಯವಾಗಿ ಕಡಿಮೆ ಇದೆ. ರಕ್ತದಾನವು ರಕ್ತದಾನಿಗಳ ಶಕ್ತಿಯನ್ನು ಕಡಿಮೆ ಮಾಡುವುದಿಲ್ಲ.