ಪ್ರಥಮ ಸ್ಥಾನ ಪಡೆದ ಬರಹ
ಕು. ನಿಶ್ಚಿತ ಲೋಕೆಶ ಗೌಡ
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲ್ಕುತ್ರಿ.

ಪರಿಸರ ಸಂರಕ್ಷಣೆ

ನಮ್ಮ ಸುತ್ತಲಿರುವ ವಾತಾವರಣವನ್ನೇ ಪರಿಸರ ಎನ್ನುತ್ತೇವೆ. ಪರಿಸರದಲ್ಲಿ ಗಾಳಿ, ನೀರು, ಪಶು-ಪಕ್ಷಿಗಳು ಹೀಗೆ ಎಲ್ಲಾ ಜೀವ-ಜಂತುಗಳು ಇರುತ್ತವೆ. ಮಾನವನ ಬೆಳವಣಿಗೆಗೆ ಉತ್ತಮ ಪರಿಸರ ಇರುವುದು ಅವಶ್ಯಕ. ಆದರೆ ಇಂದು ಕೈಗಾರಿಕೀಕರಣ ಮತ್ತು ಆಧುನಿಕರಣದಿಂದಾಗಿ ನಮ್ಮ ಸುತ್ತಲಿನ ಪರಿಸರದಲ್ಲಿ ಜಲಮಾಲಿನ್ಯ, ವಾಯುಮಾಲಿನ್ಯದಂತಹ ಅನೇಕ ಮಾಲಿನ್ಯಗಳು ಉಂಟಾಗುತ್ತವೆ. ಪರಿಸರ ಮಾಲಿನ್ಯವಾಗಲು ಇಂದು ಕಾರ್ಖಾನೆಗಳು, ವಾಹನಗಳು ಮುಖ್ಯ ಕಾರಣಗಳಾಗಿವೆ.
ಇಂದು ಎಲ್ಲೆಂದರಲ್ಲಿ ಬೃಹತ್ ಪ್ರಮಾಣದ ಕಾರ್ಖಾನೆಗಳು ರೂಪಿತವಾಗಿದ್ದು, ಅವುಗಳಲ್ಲಿಯ ವಿಷಪೂರಿತ ತ್ಯಾಜ್ಯ ವಸ್ತುಗಳು ನದಿ ನೀರಿಗೆ ಸೇರಿ ಜಲಮಾಲಿನ್ಯ ಉಂಟಾಗುತ್ತಿದೆ. ಜೀವ-ಜಂತುಗಳಿಗೆ ಶುದ್ಧ ನೀರು ಸಿಗದಂತಾಗಿದೆ. ಈ ಬೃಹತ್ ಕಾರ್ಖಾನೆಯಿಂದ ಹೊರಬರುವ ಹೊಗೆಯಿಂದ ವಾಯುಮಾಲಿನ್ಯ ಉಂಟಾಗುತ್ತದೆ. ಈ ರೀತಿಯ ವಾಯು ಮಾಲಿನ್ಯದಿಂದಾಗಿ ಓಝೋನ್ ಪದರ ಶಿಥಿಲಗೊಳ್ಳುತ್ತಿದೆ. ಮುಂದೆ ಇದರ ನಾಶದಿಂದಾಗಿ ಇಡೀ ಮನುಕುಲವೇ ವಿನಾಶದ ಅಂಚಿಗೆ ಸಿಲುಕಬೇಕಾಗುತ್ತದೆ. ಜಲ ಮಾಲಿನ್ಯ ಮತ್ತು ವಾಯು ಮಾಲಿನ್ಯದಿಂದಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ.
ಜನ-ಜೀವಿಗಳು ಅಶುದ್ಧ ವಾತಾವರಣದಿಂದ ವಿಮುಕ್ತರಾಗಿ ಶುದ್ಧ ಹವೆಯಲ್ಲಿ, ಸುಂದರ ಪರಿಸರದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಲು ಇಚ್ಛೆ ಪಡುತ್ತಾರೆ. ಕಾರ್ಖಾನೆಗಳ ಸ್ಥಾಪನೆಯಿಂದಾಗಿ ಅನೇಕ ಅಭಯಾರಣ್ಯಗಳು ನಾಶವಾಗುತ್ತಿದೆ. ಕಾಡು ಬೆಳೆದರೆ ನಾಡು ಉಳಿಯುತ್ತದೆ. ಇದ್ದ ಕಾಡೆಲ್ಲ ನಾಶವಾದರೆ ಮಳೆ ಕಡಿಮೆಯಾಗುತ್ತದೆ. ಮಳೆ ಬರದಿದ್ದರೆ ಬೆಳೆಗಳು ಬರುವುದಿಲ್ಲ. ಇದರಿಂದಾಗಿ ಮನುಕುಲಕ್ಕೆ ಊಟ ಸಿಗದಂತಾಗಬಹುದು. ಒಟ್ಟಾರೆ ನೈಸರ್ಗಿಕವಾದ, ಸುಂದರವಾದ ಪರಿಸರವನ್ನು ಸಂರಕ್ಷಿಸಿಕೊಂಡು ಹೋಗುವುದರ ಬಗ್ಗೆ ಸಮಾಜ ಮತ್ತು ಸರ್ಕಾರಗಳು ಅಲಕ್ಷ ಭಾವನೆ ತಾಳಿದರೆ ಮನವ ಕುಲಕ್ಕೆ ಕೊಡಲಿ ಏಟು ಕೊಟ್ಟಂತಾಗುತ್ತÀದೆ ಎಂಬುದರ ಬಗ್ಗೆ ಯಾವುದೇ ಸಂಶಯವಿಲ್ಲ.


ಪರಿಸರವನ್ನು ಉಳಿಸಬಹುದಾದ ಕ್ರಮಗಳು :-
• ಗಿಡ-ಮರ ಕಡಿಯದೇ, ಅದರ ಬದಲಾಗಿ ಗಿಡಗಳನ್ನು ನೆಟ್ಟು ನೀರು, ಗೊಬ್ಬರವನ್ನು ಹಾಕಿ ಚೆನ್ನಾಗಿ ಬೆಳೆಸಿದರೆ ಸಂರಕ್ಷಿಸಬಹುದು.
• ಕಾರ್ಖಾನೆಗಗಳು ಹೊಗೆ ಕೊಳವೆಯನ್ನು ಎತ್ತರದಲ್ಲಿ ಅಳವಡಿಸುವುದು ಮತ್ತು ವಿಷಪೂರಿತ ನೀರು ಅಥವಾ ತ್ಯಾಜ್ಯವಸ್ತುಗಳನ್ನು ಶುದ್ಧೀಕರಿಸಿ ನದಿ ನೀರಿಗೆ ಬಿಡುವುದು.
• ನಗರಗಳಲ್ಲಿ ವಾಹನ ಸಂಚರಿಸುವುದರಿಂದ ವಾಹನದ ಹೊಗೆಯಿಂದ ವಾಯುಮಾಲಿನ್ಯ ಉಂಟಾಗುತ್ತಿದೆ. ಇದನ್ನು ತಡೆಗಟ್ಟುವುದು.
• ನಗರಗಳಲ್ಲಿ ಗಿಡ-ಮರಗಳು ನಾಶ ಹೊಂದುತ್ತಿವೆ. ಹಾಗಾಗಿ ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಬೇಕು.
• ವಿಮಾನದ ಹಳದಿ ಹೊಗೆಯಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಇವೆಲ್ಲವನ್ನು ತಡೆಗಟ್ಟುವುದರ ಕುರಿತು ನಾಗರಿಕರು ಮತ್ತು ಸರಕಾರ ಪರ್ಯಾಯ ಕ್ರಮಗಳ ಬಗ್ಗೆ ಯೋಚಿಸಬೇಕು.


ಉಪಸಂಹಾರ :
ಪರಿಸರ ಮತ್ತು ಮಾನವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗೆ ಒಂದಕ್ಕೊಂದು ನಿಕಟ ಸಂಬಂಧ ಹದಗೆಡದಂತೆÉ ಪರಿಸರವನ್ನು ಸಂರಕ್ಷಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ.
“ಪರಿಸರ ರಕ್ಷತಿ ರಕ್ಷಿತಃ”

ಪರಿಸರ ಸಂರಕ್ಷಣೆ

ದ್ವಿತೀಯ ಸ್ಥಾನ ಪಡೆದ ಬರಹ
ಕು. ಶ್ರೀನಿಧಿ ಚಂದ್ರಶೇಖರ ಗೌಡ
7ನೇ ತರಗತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲ್ಕುತ್ರಿ.

ನಮ್ಮ ಸುತ್ತಲೂ ಕಂಡುಬರುವ ಅಂಶವೇ ಪರಿಸರ. ಈ ಪರಿಸರದಲ್ಲಿ ಲಕ್ಷಾಂತರ ಜೀವಿಗಳಿವೆ. ಅವುಗಳಲ್ಲಿ ಒಂದು ಜೀವಿ ಮನುಷ್ಯನೂ ಹೌದು. ಈ ಪರಿಸರದಲ್ಲಿ ಪ್ರಾಣಿಗಳು, ಪಕ್ಷಿಗಳು, ಕೀಟಗಳು, ಕಾಡು, ಮರ, ಗಿಡ, ಬಳ್ಳಿ, ಪೊದೆ ಇನ್ನು ಹಲವಾರು ಕಂಡುಬರುತ್ತದೆ, ನಾವು ಕಾಡನ್ನು ರಕ್ಷಣೆ ಮಾಡಬೇಕು. ಏಕೆಂದರೆ ಅವು ಮಳೆಯನ್ನು ತರುತ್ತವೆ. ಮಳೆ ಬರುವುದರಿಂದ ನಾವು ಬೆಳೆÉಗಳನ್ನು ಬೆಳೆಯಬಹುದು. ಮಳೆಯು ನಮಗೆ ಉಪಯೋಗಕಾರಿಯಾಗಿದೆ.
ವಾಹನಗಳ ಹೊಗೆಯಿಂದ ಪರಿಸರಕ್ಕೆ ಹಾನಿಯಾಗಿದೆ. ವಾಹನಗಳ ಶಬ್ದದಿಂದ ಕಾಡಿನ ಜೀವಿಗಳಿಗೆ ತೊಂದರೆಯಾಗುತ್ತಿದೆ. ಮನುಷ್ಯ ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗಿ ತುಂಬಾ ಮುಂದುವರೆದಿದ್ದಾನೆ. ಇದರ ಜೊತೆಗೆ ಅವನು ಜೀವ ಸಂಕುಲಗಳಿಗೂ ನಮ್ಮ ಹಾಗೆ ಬದುಕುವ ಹಕ್ಕು ಇದೆ ಎಂಬುದನ್ನು ಮರೆತಿದ್ದಾನೆ. ಮನುಷ್ಯ ಒಂದು ಬುದ್ಧಿವಂತ ಜೀವಿಯಾಗಿ ಪರಿಸರವನ್ನು ರಕ್ಷಣೆ ಮಾಡುವುದರ ಬದಲು ಅವನೇ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ತನ್ನ ಕಾರ್ಯಗಳಿಗೆ, ಇಷ್ಟ ಬಂದಂತೆ ಪರಿಸರವನ್ನು ಉಪಯೋಗಿಸಿಕೊಳ್ಳುತ್ತಿದ್ದಾನೆ. ಈ ಮೂಲಕ ಪರಿಸರ ನಾಶಕ್ಕೆ ಕಾರಣನಾಗಿದ್ದಾನೆ.
ಈಗೀಗ ಕಾಡಿನಲ್ಲಿರುವ ಹುಲಿ, ಅಳಿಲು, ಮೊಲ, ಗಿಳಿ, ಗುಬ್ಬಿ, ಕೋಗಿಲೆ, ಬಾವಲಿ ಹೀಗೆ ಹಲವಾರು ಜೀವಿಗಳು ಕಡಿಮೆಯಾಗುತ್ತಿವೆ. ನಾವು ಬಳಸಿದ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲೇ ಎಸೆಯುತ್ತಿದ್ದೇವೆ. ಅದನ್ನು ಮೂಕ ಪ್ರಾಣಿಗಳು ತಿಂದು ಅನಾರೋಗ್ಯಕ್ಕೆ ಒಳಗಾಗುತ್ತಿವೆ. ಮಾನವ ಕೆರೆ-ಹಳ್ಳಗಳನ್ನು ಮುಚ್ಚುತ್ತಿದ್ದಾನೆ. ಇದರಿಂದ ಜೀವಿಗಳಿಗೆ ಬಾಯಾರಿಕೆಯಾದಾಗ ನೀರು ಸಿಗುತ್ತಿಲ್ಲ. ನದಿ ನೀರಿಗೆ ಕಸ-ಕಡ್ಡಿಗಳನ್ನು ಎಸೆಯುತ್ತಿರುವುದರಿಂದ ಆ ನೀರು ಯಾವುದೇ ಜೀವಿಗಳ ಬಳಕೆಗೆ ಯೋಗ್ಯವಾಗಿಲ್ಲ. ನಾವು ನೀರಿನ ಮೂಲಗಳಿಗೆ ಕಸ-ಕಡ್ಡಿಗಳನ್ನು ಎಸೆಯದೇ ಅವುಗಳ ಸಂರಕ್ಷಣೆ ಮಾಡಬೇಕು.
ಈಗ ಮನುಷ್ಯ ಕಾಡನ್ನು ನಾಶ ಮಾಡಿ ಅಲ್ಲಿ ಮನೆ, ಬಹುಮಡಿ ಕಟ್ಟಡಗಳು, ರಸ್ತೆಗಳನ್ನು ನಿರ್ಮಿಸುತ್ತಿದ್ದಾನೆ. ಇದರಿಂದ ಕಾಡಿನ ಜೀವಿಗಳಿಗೆ ವಾಸಸ್ಥಾನ ಇಲ್ಲದಂತಾಗಿದೆ. ಕಾರ್ಖಾನೆಯ ಹೊಗೆಯಿಂದ ಪ್ರಾಣಿ-ಪಕ್ಷಿಗಳಿಗಲ್ಲದೇ ಮನುಷ್ಯರಿಗೂ ಅಪಾಯ ಉಂಟಾಗುತ್ತಿದೆ. ಹಾಗೇ ಕಾರ್ಖಾನೆಯ ನೀರನ್ನು ನದಿ-ಕೆರೆಗಳಿಗೆ ಬಿಟ್ಟರೆ ಅಲ್ಲಿರುವ ಜೀವರಾಶಿಗಳೆಲ್ಲ ಮರಣವನ್ನೊಪ್ಪುತ್ತವೆ. ಇದರಿಂದಾಗಿ ಮುಂದೊಂದು ದಿನ ಮನುಷ್ಯ ತನ್ನ ಸಾವಿಗೆ ತಾನೇ ಕಾರಣವಾಗುತ್ತಾನೆ. ಇದನ್ನು ನಾವು ತಡೆದು ಪರಿಸರವನ್ನು ರಕ್ಷಿಸಬೇಕಾಗಿದೆ.
ನೀರು ಒಂದು ಅಮೂಲ್ಯವಾದ ಸಂಪನ್ಮೂಲವಾಗಿದೆ. ನೀರಿನಲ್ಲಿ ಮೀನು, ಆಮೆ, ಕಪ್ಪೆ, ಹಾವು, ಮೊಸಳೆ ಹೀಗೆ ಹಲವಾರು ಜೀವಿಗಳು ಬದುಕುತ್ತಿವೆ. ನಾವು ನೀರಿನ ಮೂಲಗಳಿಗೆ ಕಸ-ಕಡ್ಡಿಗಳನ್ನು, ವಿಷಕಾರಿ ವಸ್ತುಗಳನ್ನು ಹಾಕುವುದರಿಂದ ಅವುಗಳಿಗೆ ಅಪಾಯ ಉಂಟಾಗುತ್ತದೆ.
ನಾವು ಗಿಡ-ಮರಗಳನ್ನು ಕಡಿಯಬಾರದು. ಬದಲಿಗೆ ಗಿಡಗಳನ್ನು ನೆಡಬೇಕು. ಇದರಿಂದ ನಮಗೆÀ ಶುದ್ಧವಾದ ಗಾಳಿ ಸಿಗುತ್ತದೆ. ಅವುಗಳನ್ನು ನೀರು ಹಾಕಿ ಪೋಷಣೆ ಮಾಡಬೇಕು. ಗಿಡ-ಮರಗಳಲ್ಲಿ ಹಲವು ಜಾತಿಯ ಜೀವಿಗಳು ವಾಸಿಸುವುದರೊಂದಿಗೆ ಅವು ನಮಗೆ ಹೂ, ಹಣ್ಣು ಹಾಗೂ ಹಲವಾರು ರೀತಿಯ ಔಷಧಿ ವಸ್ತುಗಳನ್ನು ನೀಡುತ್ತದೆ.


ಉಪಸಂಹಾರ :
ನಮಗೆ ಪರಿಸರದಲ್ಲಿ ಹಲವು ರೀತಿಯ ವಿಸ್ಮಯಗಳು ಕಂಡುಬರುತ್ತದೆ. ವಿವಿಧ ರೀತಿಯ ಮರಗಳು ಇವೆ. ಇವುಗಳಿಂದ ನಮಗೆ ಹಲವು ಉಪಯೋಗವಿದೆ. ಹಾಗಾಗಿ ಗಿಡ-ಮರಗಳನ್ನು ಬೆಳೆಸಬೇಕು ಮತ್ತು ಪ್ರಾಣಿ-ಪಕ್ಷಿಗಳಿಗೆ ತೊಂದರೆ ನೀಡಬಾರದು. ಪರಿಸರ ರಕ್ಷಣೆಗಾಗಿ ಪ್ರತಿಯೊಬ್ಬರು ಶ್ರಮಿಸಬೇಕು.

ಪರಿಸರ ಸಂರಕ್ಷಣೆ

ತೃತೀಯ ಸ್ಥಾನ ಪಡೆದ ಬರಹ
ಕು. ಮೇಘನಾ ಈಶ್ವರ ಗೌಡ
6ನೇ ತರಗತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲ್ಕುತ್ರಿ.

ನಮ್ಮ ಸುತ್ತ-ಮುತ್ತಲಿನ ಪ್ರಪಂಚವೇ ಪರಿಸರ. ಈ ಪರಿಸರದಲ್ಲಿ ಮರ, ಗಿಡ, ಜೀವಿಗಳು ಎಲ್ಲವೂ ಇದೆ. ಈ ಪರಿಸರದಲ್ಲಿರುವ ಮರ-ಗಿಡಗಳಿಂದ ನಾವು ಹಲವಾರು ಉಪಯೋಗಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಪರಿಸರ ಇಲ್ಲದಿದ್ದರೆ ನಾವು ಬದುಕಲು ಸಾಧ್ಯವಿಲ್ಲ. ಆದ್ದರಿಂದ ನಾವು ಪರಿಸರವನ್ನು ರಕ್ಷಿಸಬೇಕು. ಗಿಡ-ಮರಗಳನ್ನು ಬೆಳೆಸಿ ಪರಿಸರವನ್ನು ಉಳಿಸಬೇಕು.
ಪರಿಸರದಲ್ಲಿ ನಾವು ಹಲವು ವಸ್ತುಗಳನ್ನು ಕಾಣಬಹುದು. ಅದರಲ್ಲಿ ನೀರು ಒಂದು. ನೀರು ಒಂದು ಅಮೂಲ್ಯ ಸಂಪತ್ತು. ನೀರನ್ನು ನಾವು ಹಿತ-ಮಿತವಾಗಿ ಉಪಯೋಗಿಸಬೇಕು. ಹೊರ ದೇಶಗಳಿಂದ ಬಂದ ಪರಿಸರಕ್ಕೆ ಮಾರಕವಾಗುವಂತ ವಸ್ತುವಾದ ಪ್ಲಾಸ್ಟಿಕ್‍ನಿಂದ ಪರಿಸರಕ್ಕೆ ತೊಂದರೆಯಾಗುತ್ತಿದೆ. ವಾಹನಗಳ ಸಂಚಾರದಿಂದ ಬರುವ ಹೊಗೆಯಿಂದ ವಾಯು ಮಾಲಿನ್ಯ ಉಂಟಾಗುತ್ತದೆ. ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.
ನಾವು ಪರಿಸರವನ್ನು ರಕ್ಷಿಸಲು ವಾಹನಗಳ ಬಳಕೆ ಕಡಿಮೆ ಮಾಡಬೇಕು. ಕಾರ್ಖಾನೆಯ ಹೊಗೆಯನ್ನು ಎತ್ತರಕ್ಕೆ ಶುದ್ಧೀಕರಿಸಿ ಬಿಡಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ನದಿಗಳಿಗೆ ಕಸ-ಕಡ್ಡಿಗಳನ್ನು ಹಾಕುವುದರಿಂದ ನೀರು ಮಲೀನವಾಗಿ, ರೋಗ-ರುಜಿಗಳು ಬರುತ್ತದೆ. ಮರಗಳನ್ನು ನಾಶ ಮಾಡುವುದರಿಂದ ಮಳೆ ಕಡಿಮೆಯಾಗುವುದರ ಜೊತೆಗೆ ಶುದ್ಧ ಗಾಳಿ ಸಿಗುವುದಿಲ್ಲ. ಇದರಿಂದ ಜೀವ ಸಂಕುಲಗಳಿಗೆ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ನಾವು ಗಿಡ-ಮರಗಳನ್ನು ನೆಡಬೇಕು. ಇದರಿಂದ ನಮಗೆ ಶುದ್ಧವಾದ ಗಾಳಿ ಸಿಗುತ್ತದೆ.
ಪರಿಸರದಲ್ಲಿಯ ಪ್ರಮುಖ ಘಟಕವಾದ ನೀರು ಅಮೂಲ್ಯ ಸಂಪತ್ತು. ನೀರಿನ ಮೂಲಗಳಿಗೆ ಮಲೀನ ವಸ್ತುಗಳನ್ನು ಎಸೆಯಬಾರದು. ಅದೇ ರೀತಿಯಾಗಿ ನೀರನ್ನು ಹಿತ-ಮಿತವಾಗಿ ಬಳಸಬೇಕು.
ಪರಿಸರವಿಲ್ಲದೇ ಜೀವಿಗಳು ಬದುಕಲು ಸಾಧ್ಯವಿಲ್ಲ. ಪರಿಸರಕ್ಕೆ ಮಾರಕವಾದ ವಸ್ತುಗಳನ್ನು ಬಳಸಬಾರದು. ಗಿಡ-ಮರಗಳನ್ನು ಬೆಳೆಸಬೇಕು. ಪ್ರಾಣಿ-ಪಕ್ಷಿಗಳಿಗೆ ಹಾನಿಯುಂಟು ಮಾಡಬಾರದು. ಪರಿಸರವನ್ನು ಉಳಿಸಬೇಕು, ಜೀವಿಗಳನ್ನು ರಕ್ಷಿಸಬೇಕು, ಗಿಡ-ಮರಗಳನ್ನು ನೆಟ್ಟು ಚೆನ್ನಾಗಿ ಬೆಳೆಸಬೇಕು. ‘ಹಸಿರೇ ಉರಸಿರು. ಉಸಿರೇ ಹಸಿರು. ಗಿಡ-ಮರಗಳನ್ನು ಬೆಳೆಸಿ, ಹಸಿರನ್ನು ಉಳಿಸಿ.’