ಪ್ರಜಾಪ್ರಭುತ್ವ – ಅಧ್ಯಾಯ 7

ಪಾಠದ ಪರಿಚಯ
ಹಿಂದೆ ನಮ್ಮ ದೇಶವನ್ನು ರಾಜರು ಆಳುತ್ತಿದ್ದರು. ಕಾಲಕ್ರಮೇಣ ರಾಜಪ್ರಭುತ್ವ ಅವನತಿಯತ್ತ ಸಾಗಿತು. ಪ್ರಜಾಪ್ರಭುತ್ವ ಆಚರಣೆಗೆ ಬಂತು. ಈ ಬದಲಾವಣೆಗೆ ಕಾರಣಗಳನ್ನು ತಿಳಿಯುತ್ತಾ ಪ್ರಜಾಪ್ರಭುತ್ವದ ಮಹತ್ವ, ಚುನಾವಣೆಗಳ ಪಾತ್ರ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತಾದ ಒಂದು ಪಕ್ಷಿನೋಟ ಈ ಪಾಠದಲ್ಲಿದೆ.

ಪಾಠಪ್ರವೇಶ

1 ಎಡಬದಿಯ ಚಿತ್ರವನ್ನು ನೋಡಿ, ಸಿಂಹಾಸನದಲ್ಲಿ ಕುಳಿತಿರುವುದು ಯಾರು?
2 ಅವನ ಅಕ್ಕಪಕ್ಕದಲ್ಲಿ ಕುಳಿತಿರುವವರು ಯಾರು?
3 ಬಲಗಡೆಯ ಚಿತ್ರದಲ್ಲಿರುವ ವ್ಯಕ್ತಿ ಏನು ಮಾಡುತ್ತಿದ್ದಾನೆ?
4 ನೀವು ಎಂದಾದರೂ ಮತದಾನ ಮಾಡಿದ್ದೀರಾ?

ಒಂದಾನೊಂದು ಕಾಲದಲ್ಲಿ ರತ್ನಪುರವೆಂಬ ಪಟ್ಟಣವನ್ನು ಚಂದ್ರಶಯನನೆಂಬ ರಾಜನು ಆಳುತ್ತಿದ್ದನು. ಅವನ ರಾಣಿಯು ಗಂಡು ಮಗುವಿಗೆ ಜನ್ಮವಿತ್ತು ಮಡಿದಳು. ಸ್ವಲ್ಪ ಕಾಲದ ಬಳಿಕ ರಾಜನು ಆಸ್ಥಾನದ ನರ್ತಕಿಯನ್ನು ಮದುವೆಯಾದನು. ಮುಂದೆ ಅವಳಿಗೂ ಒಂದು ಗಂಡು ಮಗು ಜನಿಸಿತು. ಅಣ್ಣತಮ್ಮಂದಿರು ಗುರುಕುಲದಲ್ಲಿ ವಿದ್ಯೆ ಕಲಿತು ಜಾಣ ರಾದರು. ತನ್ನ ಇಳಿವಯಸ್ಸಿನಲ್ಲಿ ರಾಜನು ಹಿರಿಯ ಮಗನಿಗೆ ಯುವರಾಜ ಪಟ್ಟವನ್ನು ಕಟ್ಟಿದನು. ಇದರಿಂದ ತನ್ನ ಮಗನೇ ಮುಂದೆ ಅರಸನಾಗಬೇಕೆಂಬ ರಾಜನರ್ತಕಿಯ ಬಯಕೆ ಸುಳ್ಳಾಯಿತು. ಅವಳು ಮಗನ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳನ್ನು ಬಿತ್ತಿದಳು. ಅಧಿಕಾರಕ್ಕಾಗಿ ಅಣ್ಣತಮ್ಮಂದಿರ ನಡುವೆ ಜಗಳ ಆರಂಭವಾಯಿತು. ಚಿಂತೆಯಿಂದ ರಾಜ ಅಸುನೀಗಿದನು.

ಅಣ್ಣತಮ್ಮಂದಿರ ಒಳಜಗಳದಿಂದ ರಾಜ್ಯದ ಆಡಳಿತ ಹದಗೆಟ್ಟಿತು. ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಯಿತು. ಕೊಲೆ, ಸುಲಿಗೆಗಳು ಹೆಚ್ಚಾದವು. ಪ್ರಜೆಗಳು ಇದರಿಂದ ಬೇಸರಗೊಂಡರು. ಅವರೆಲ್ಲರು ಒಂದೆಡೆ ಸೇರಿ ತಮ್ಮ ರಾಜ್ಯದ ಆಡಳಿತವನ್ನು ತಾವೇ ನಡೆಸುವ ತೀರ್ಮಾನ ಕೈಗೊಂಡರು. ಇದಕ್ಕಾಗಿ ಅಗತ್ಯವಿರುವ ಕಾನೂನುಗಳನ್ನು ರೂಪಿಸಿದರು. ಅವುಗಳನ್ನು ಪಾಲಿಸಲು ಎಲ್ಲರೂ ಬದ್ಧರಾದರು. ಹೀಗೆ ರತ್ನಪುರದಲ್ಲಿ ರಾಜನ ಆಳ್ವಿಕೆ (ರಾಜಪ್ರಭುತ್ವ) ಅಳಿದು ಜನರ ಆಳ್ವಿಕೆ (ಪ್ರಜಾಪ್ರಭುತ್ವ) ಬಂತು.

1 ರಾಜನು ಪಟ್ಟವನ್ನು ಯಾರಿಗೆ ಕಟ್ಟಿದನು?
2 ಅರಸನೊಬ್ಬನ ಮರಣದ ನಂತರ ಸಿಂಹಾಸನದ ಅಧಿಕಾರವನ್ನು ಸಾಮಾನ್ಯವಾಗಿ ಯಾರು ಪಡೆಯುತ್ತಾರೆ?
3 ರಾಜಪ್ರಭುತ್ವದಲ್ಲಿ ಅಧಿಕಾರಕ್ಕಾಗಿ ಒಳಜಗಳ ನಡೆದರೆ ಆಗುವ ಕೆಟ್ಟ ಪರಿಣಾಮಗಳು ಯಾವುವು?
4 ವಂಶಪಾರಂಪರ್ಯ ಆಡಳಿತವನ್ನು ನೀವು ಇಷ್ಟಪಡುತ್ತೀರಾ?

ರಾಜಪ್ರಭುತ್ವ: ಮೇಲಿನ ಕಥೆಯಲ್ಲಿ ಎರಡು ಬಗೆಯ ಆಡಳಿತ ವ್ಯವಸ್ಥೆಯನ್ನು ನಾವು ಗುರುತಿಸಬಹುದು. ಅದೇ ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವ, ಸರಕಾರದ ಎಲ್ಲಾ ಅಧಿಕಾರಗಳು ಒಬ್ಬ ವ್ಯಕ್ತಿಯ ಕೈಯಲ್ಲೇ ಇದ್ದರೆ ಅದನ್ನು `ರಾಜಪ್ರಭುತ್ವ’ ಎನ್ನುತ್ತಾರೆ. ಇಲ್ಲಿ ಎಲ್ಲವು ರಾಜನ ಇಚ್ಛೆಯಂತೆಯೇ ನಡೆಯುತ್ತದೆ. ಅವನ ಆಳ್ವಿಕೆಗೆ ಅವಧಿಯ ನಿರ್ಬಂಧ ಇರುವುದಿಲ್ಲ. ಚತುರ ಮತ್ತು ಧೈರ್ಯಶಾಲಿ ರಾಜನಿಂದ ರಾಜ್ಯ ಬಲಗೊಳ್ಳುತ್ತದೆ. ಪ್ರಜೆಗಳು ಸುಖವಾಗಿರುತ್ತಾರೆ. ಆದರೆ ಅವಿವೇಕಿ ಮತ್ತು ದುರ್ಬಲ ಅರಸನ ಅಳ್ವಿಕೆಯಿಂದ ರಾಜಪ್ರಭುತ್ವ ಕೊನೆಗೊಳ್ಳುತ್ತದೆ.

ಪ್ರಜಾಪ್ರಭುತ್ವದ ಅರ್ಥ: ಪ್ರಜೆಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆಮಾಡಿ ಅವರಿಂದ ನಡೆಸಲಾಗುವ ರಾಜಕೀಯ ವ್ಯವಸ್ಥೆಯನ್ನು `ಪ್ರಜಾಪ್ರಭುತ್ವ’ ಎಂದು ಕರೆಯಲಾಗುತ್ತದೆ. ಇದು ಪ್ರಜೆಗಳ ಸರ್ಕಾರವಾಗಿದ್ದು ಪ್ರಜೆಗಳ ಹಿತರಕ್ಷಣೆಯೇ ಇದರ ಮುಖ್ಯ ಗುರಿಯಾಗಿದೆ.

ಮಹತ್ವ: ಪ್ರಜಾಪ್ರಭುತ್ವವು ಜನಪ್ರಿಯ ರಾಜಕೀಯ ವ್ಯವಸ್ಥೆಯಾಗಿದೆ. ಇದರಲ್ಲಿ ಕೆಲವು ಉತ್ತಮ ಅಂಶಗಳಿವೆ.
● ಆಡಳಿತವು ಪ್ರಜೆಗಳ ಪ್ರತಿನಿಧಿಗಳದ್ದೇ ಆಗಿರುತ್ತದೆ.
● ಎಲ್ಲರ ಸಮಾನತೆಗೆ ಇಲ್ಲಿ ಅವಕಾಶವಿದೆ.
● ಕ್ರಮಬದ್ಧವಾಗಿ ಚುನಾವಣೆಗಳು ನಡೆದು, ಜನಪ್ರತಿನಿಧಿಗಳು ಅಧಿಕಾರವಹಿಸುತ್ತಾರೆ.
● ವಿಷಯಗಳ ಬಗ್ಗೆ ಚರ್ಚೆ ನಡೆದು, ಜನಪರ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ.
● ಪ್ರಜಾಪ್ರಭುತ್ವದಲ್ಲಿ ಜನರು ವಿವೇಕದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ.

ಪ್ರಜಾಪ್ರಭುತ್ವದ ಸವಾಲುಗಳು:
● ಮತಗಳಿಸಲು ಕೆಲವೊಮ್ಮೆ ಹಣದ ಆಮಿಷ ಮತ್ತು ಬಾಹುಬಲಗಳನ್ನು ಬಳಸಲಾಗುತ್ತದೆ.
● ಚುನಾವಣೆಯಲ್ಲಿ ಜಾತಿ, ಮತ, ಭಾಷೆಗಳೂ ತಮ್ಮ ಪ್ರಭಾವ ಬೀರುತ್ತವೆ.
● ಚುನಾಯಿತ ಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ತೊರೆದು ಇನ್ನೊಂದು ಪಕ್ಷವನ್ನು ಸೇರುವುದಿದೆ. ಇಂಥ ಪಕ್ಷಾಂತರದಿಂದ ಸರ್ಕಾರವು ಅಸ್ಥಿರಗೊಳ್ಳುತ್ತದೆ.
● ಈ ವ್ಯವಸ್ಥೆಯಲ್ಲಿ ಪುಂಡರೂ, ಅಪರಾಧಿಗಳೂ ಆಯ್ಕೆಗೊಳ್ಳುವ ಸಂಭವವಿದೆ.

ಚುನಾವಣೆ

1 ಜನರು ಸಾಲಾಗಿ ಏಕೆ ಸಾಗುತ್ತಿದ್ದಾರೆ?
2 ನೀನು ಎಂದಾದರೂ ಈ ರೀತಿಯ ಸನ್ನಿವೇಶವನ್ನು ನೋಡಿರುವೆಯಾ?
3 ಮತಪತ್ರಗಳ ಅಥವಾ ಮತಯಂತ್ರಗಳ ಮೇಲೆ ಚಿಹ್ನೆಗಳನ್ನು ಏಕೆ ನೀಡುತ್ತಾರೆ?

ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಮತದಾನವು ಚುನಾವಣಾ ಪದ್ಧತಿಯ ಮುಖ್ಯ ಅಂಗವಾಗಿದೆ. ಭಾರತದಲ್ಲಿ ಹದಿನೆಂಟು ವರ್ಷ ಅಥವಾ ಮೇಲ್ಪಟ್ಟವರಿಗೆ ಮತದಾನದ ಹಕ್ಕಿದೆ. ಮತದಾರರು ರಹಸ್ಯ ಮತದಾನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆಮಾಡುತ್ತಾರೆ.

ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಗಳನ್ನು ನೀಡಲಾಗುತ್ತದೆ. ಈ ಚಿಹ್ನೆಗಳನ್ನು ನೋಡಿ ಅನಕ್ಷರಸ್ಥರೂ ಕೂಡ ಮತವನ್ನು ಚಲಾಯಿಸಬಹುದಾಗಿದೆ.

ಮತದಾನದ ಮಹತ್ವ :
● ಪ್ರಜೆಗಳು ತಮ್ಮ ಅಭಿಪ್ರಾಯವನ್ನು ತಿಳಿಸಲು ಮತದಾನವು ಸಹಾಯಕವಾಗುತ್ತದೆ.
● ಇದು ಎಲ್ಲ ವರ್ಗದ ಜನರ ಪ್ರಾತಿನಿಧ್ಯಕ್ಕೆ ಅವಕಾಶ ನೀಡುತ್ತದೆ.

ಚುನಾವಣಾ ಪ್ರಕ್ರಿಯೆಗಳು : ಚುನಾವಣೆಗಳನ್ನು ಒಂದು ವೇಳಾಪಟ್ಟಿಯಂತೆ ನಡೆಸಲಾಗುವುದು.
● ಪ್ರಾರಂಭದಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ.
● ಸರ್ಕಾರಿ ಅಧಿಕಾರಿಗಳಿಂದ ನಾಮಪತ್ರ ಪರಿಶೀಲನೆ.
● ಸ್ಪರ್ಧೆಯಿಂದ ಹಿಂದೆ ಸರಿಯಲು ಬಯಸುವ ಅಭ್ಯರ್ಥಿಗಳಿಂದ ನಾಮಪತ್ರ ಹಿಂತೆಗೆತ.
● ಮತಯಾಚನೆಗಾಗಿ ಅಭ್ಯರ್ಥಿಗಳಿಂದ ಮತ್ತು ಪಕ್ಷಗಳ ನಾಯಕರಿಂದ ಚುನಾವಣಾ ಪ್ರಚಾರ.
● ನಿಗದಿತ ದಿನದಂದು ಮತದಾನ.
● ಮತಗಳ ಎಣಿಕೆ ಹಾಗೂ ಫಲಿತಾಂಶದ ಘೋಷಣೆ.
● ವಿಜೇತ ಅಭ್ಯರ್ಥಿಗಳ ಯಾದಿ ಬಿಡುಗಡೆ.

ಹೊಸ ಪದಗಳು

ಮತದಾನ – ಚುನಾವಣೆಯಲ್ಲಿ ಆಯ್ಕೆಯನ್ನು ವ್ಯಕ್ತಪಡಿಸುವುದು, ವೋಟು ಕೊಡುವುದು.
ವಂಶಪಾರಂಪರ್ಯ ಆಡಳಿತ – ಒಂದೇ ಮನೆತನದವರು ಆಡಳಿತ ನಡೆಸುವುದು.
ಮತಪತ್ರ – ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳು ಮುದ್ರಿತವಾದ ಮತದಾನದ ಚೀಟಿ,
ರಹಸ್ಯ ಮತದಾನ – ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂಬುದನ್ನು ಘೋಷಿಸುವ ಅಗತ್ಯವಿಲ್ಲದೆ ಪೌರನೊಬ್ಬ ಮತ ಹಾಕಬಹುದಾದ ವ್ಯವಸ್ಥೆ
ಮತಗಟ್ಟೆ – ಮತ ಚಲಾಯಿಸುವ ಸ್ಥಳ.

ನಿಮಗೆ ತಿಳಿದಿರಲಿ

1 ಇತ್ತೀಚೆಗೆ ಮತದಾನಕ್ಕಾಗಿ ಎಲೆಕ್ಟ್ರಾನಿಕ್ ಯಂತ್ರಗಳ ಬಳಕೆ ಪ್ರಾರಂಭವಾಗಿದೆ.
2 ಭಾರತದಲ್ಲಿ ಚುನಾವಣಾ ಕಾರ್ಯಗಳನ್ನು ನಿರ್ವಹಿಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ಆಯೋಗವು ಸ್ವತಂತ್ರವಾಗಿ ಕಾರ್ಯಮಾಡುತ್ತದೆ.

ಸಂವೇದ ವಿಡಿಯೋ ಪಾಠಗಳು

SAMVEDA 6th So Science Prabhutwa

ಪ್ರಶ್ನೋತ್ತರಗಳು

6th Standard | Social Science | Prajaprabhutva | Question Answer

***********