ಪುಷ್ಪರಾಗ – ಪಾಠ – 5
ಅಂದು ಕೆಲವು ಹುಡುಗಿಯರು ಶಾಲೆಗೆ ಮಲ್ಲಿಗೆ ಹೂ ಮುಡಿದು ಬಂದಿದ್ದರು.
ಶಿಕ್ಷಕರು : ಏನಿದು ! ಈ ಕೋಣೆಯಲ್ಲಿ ಸುವಾಸನೆ ಹೊಮ್ಮುತ್ತಿದೆ.
ಹಸೀನಾ : ಸಾರ್, ಕೆಲವು ಹುಡುಗಿಯರು ಮಲ್ಲಿಗೆ ಹೂ ಮುಡಿದಿದ್ದಾರೆ.
ವಿಜಯ : ಹೌದು, ಈಗ ಮಲ್ಲಿಗೆ ಹೂವಿನ ಕಾಲವಲ್ಲವೇ?
ಶಿಕ್ಷಕರು : ಬೇಸಿಗೆಯಲ್ಲಿ ಮಲ್ಲಿಗೆ, ಮಳೆಗಾಲದಲ್ಲಿ ಡೇರ (ಡೇಲಿಯಾ), ಚಳಿಗಾಲದಲ್ಲಿ ಸೇವಂತಿಗೆ, ಹೀಗೆ ವಿವಿಧ ಕಾಲದಲ್ಲಿ ವಿವಿಧ ಹೂಗಳು ಬಿಡುತ್ತವೆ.
ಚಟುವಟಿಕೆ :
ನಿನ್ನ ಊರಿನಲ್ಲಿ ಸಿಗುವ ಹೂಗಳನ್ನು ಪಟ್ಟಿ ಮಾಡು. ಅವು ಯಾವ ಕಾಲದಲ್ಲಿ ಬಿಡುತ್ತವೆ, ಅವುಗಳನ್ನು ಏತಕ್ಕಾಗಿ ಉಪಯೋಗಿಸುತ್ತಾರೆ ಎಂಬ ಮಾಹಿತಿಗಳನ್ನು ಸಂಗ್ರಹಿಸಿ ಬರೆ.
ಹೂವಿನ ಹೆಸರು | ಗಿಡ / ಪೋದೆ / ಮರ / ಬಳ್ಳಿ | ಹೂ ದೊರೆಯುವ ಕಾಲ | ಉಪಯೋಗ |
ನಿನ್ನ ಊರಿನಲ್ಲಿ ದೊರಕುವ ಹೂಗಳನ್ನು ಸಂಗ್ರಹಿಸು. ಅವುಗಳನ್ನು ಚೆನ್ನಾಗಿ ಗಮನಿಸು. ಅವುಗಳ ಲಕ್ಷಣಗಳನ್ನು ಈ ಕೋಷ್ಟಕದಲ್ಲಿ ಬರೆ.
ಹೂವಿನ ಹೆಸರು | ಬಣ್ಣ | ಆಕಾರ | ದಳಗಳ ಸಂಖ್ಯೆ | ಪರಿಮಳ ಇದೆ / ಇಲ್ಲ |
ಶಿಕ್ಷಕರು : ಬನ್ನಿ, ಪಕ್ಕದಲ್ಲಿರುವ ಕೈತೋಟಕ್ಕೆ ಹೋಗಿ ವಿವಿಧ ಹೂಗಳ ಪರಿಚಯ ಮಾಡಿಕೊಳ್ಳೋಣ. ಆದರೆ ತೋಟದಲ್ಲಿ ಯಾರೂ ಹೂ ಕೀಳಬಾರದು. (ಹೂವಿನ ತೋಟಕ್ಕೆ ಹೊರಡುವರು)

ಹಸೀನಾ : ಅಬ್ಬಾ ! ಎಷ್ಟೊಂದು ಹೂಗಳು ಅರಳಿವೆ. ತೋಟ ನೋಡಲು ಬಹಳ ಚೆಂದವಾಗಿದೆ. ಹೂ ಕೀಳಬಾರದು ಎಂಬ ಸೂಚನಾ ಫಲಕವನ್ನೂ ಹಾಕಿದ್ದಾರೆ.
ಶಿಕ್ಷಕರು : ಸೂಚನೆಯಂತೆ ನಡೆಯಿರಿ. ನೀವು ಕೂಡ ಹೂಗಿಡಗಳನ್ನು ಮನೆಯಲ್ಲಿ ಮತ್ತು ಶಾಲೆಯಲ್ಲಿ ಬೆಳೆಸುವುದನ್ನು ಅಭ್ಯಾಸ ಮಾಡಿಕೊಳ್ಳಿ.
ನಾಗರಾಜ : ಅಗೋ, ಅಲ್ಲಿ ನೋಡಿ. ಆ ಕೊಳದಲ್ಲಿಯೂ ಹೂಗಳಿವೆ.
ಶಿಕ್ಷಕರು : ಮಕ್ಕಳೇ ನೀರಿನಲ್ಲಿ ಬೆಳೆಯುವ 3 ಹೂಗಳ ಹೆಸರುಗಳನ್ನು ಹೇಳಿ.
ನೀರಿನಲ್ಲಿ ಬೆಳೆಯುವ 3 ಹೂಗಳು




ಹಾಡಿ-ನಲಿ :
ಇಟ್ಟರೆ ಪೂಜೆಗಾದೆ
ಕಟ್ಟಿದರೆ ಹಾರವಾದೆ
ಮುಡಿಗಿಟ್ಟರೆ ಅಲಂಕಾರವಾದೆ
ಜೇನಿಗೆ ಆಹಾರವಾದೆ
ರೋಗಕ್ಕೆ ಔಷಧವಾದೆ
ಪರಿಮಳಕ್ಕೆ ಸುಗಂಧ ದ್ರವ್ಯವಾದೆ
ನಾನೆಲ್ಲರಿಗೂ ಉಪಯೋಗಿಯಾದೆ.
ಹಾಡಿ-ನಲಿ
ಹೂವಾಡಗಿತ್ತಿ
ಹೂವನು ಮಾರುತ
ಹೂವಾಡಗಿತ್ತಿ
ಹಾಡುತ ಬರುತಿಹಳು
`ಘಮ ಘಮ ಹೂಗಳು
ಬೇಕೇ’ ಎನುತ
ಹಾಡುತ ಬರುತಿಹಳು || 1 ||
ಬಿಳುಪಿನ ಮಲ್ಲಿಗೆ
ಹಳದಿಯ ಸಂಪಿಗೆ
ಹಸುರಿನ ಹೊಸ ಮರುಗ
ಹಾಕಿಕಟ್ಟಿರುವೆ
ಬೇಕೇ ಎನುತ
ಹಾಡುತ ಬರುತಿಹಳು || 2 ||
ಹೊಸ ಸೇವಂತಿಗೆ
ಹೊಸ ಇರುವಂತಿಗೆ
ಅರಸಿನ ತಾಳೆಯಿದೆ
ಅಚ್ಚ ಮಲ್ಲೆಯಲಿ
ಪಚ್ಚ ತೆನೆಗಳು
ಸೇರಿದ ಮಾಲೆಯಿದೆ || 3 ||
ಕಂಪನು ಚೆಲ್ಲುವ
ಕೆಂಪು ಗುಲಾಬಿ
ಅರಳಿದ ಹೊಸ ಕಮಲ
ಬಿಳುಪಿನ ಜಾಜಿ
ಹಳದಿಯ ಜಾಜಿ
ಅರಳಿದ ಬಿಳಿಕಮಲ || 4 |
ಬಗೆ ಬಗೆ ಹೂಗಳು
ಬೇಕೇ ಎನುತ
ಹಾಡುತ ಬರುತಿಹಳು
ಹೂವನು ಮಾರುವ
ಹೂವಾಡಗಿತ್ತಿ
ಹಾಡುತ ಬರುತಿಹಳು || 5 ||
– ಎಂ.ವಿ. ಸೀತಾರಾಮಯ್ಯ (ರಾಘವ)
ನೀನು ಹೂಗಳನ್ನು ಬಳಸುವೆಯಾ?
ನಿನ್ನ ಮನೆಯಲ್ಲಿ ಹೂಗಳನ್ನು ಬಳಸುತ್ತಾರೆಯೆ?
ನಿನ್ನ ಮನೆಯಲ್ಲಿ ಬಳಸುವ ಹೂಗಳನ್ನು ಮನೆಯಲ್ಲಿ ಬೆಳೆಸುತ್ತೀರಾ? ಇಲ್ಲವೇ ಕೊಂಡು ತರುವಿರಾ?
ಗಿರಿಜ : ಷಾಹಿನಳ ತಂದೆ ಹೂವಿನ ಅಂಗಡಿ ಇಟ್ಟಿದ್ದಾರೆ.
ವಿಜಯ : ಷಾಹಿನ ನಿಮ್ಮ ಅಂಗಡಿಗೆ ಹೂವನ್ನು ಎಲ್ಲಿಂದ ತರುವಿರಿ?
ಷಾಹಿನ : ನಮ್ಮ ತಂದೆ ಮಾರುಕಟ್ಟೆಯಲ್ಲಿ ಬಿಡಿ ಹೂ ತರುವರು. ಮನೆಯಲ್ಲಿ ಎಲ್ಲರೂ ಸೇರಿ ಹೂ ಕಟ್ಟುವೆವು.
ಶಿಕ್ಷಕರು : ಷಾಹಿನ ಒಂದು kg ಮಲ್ಲಿಗೆ ಹೂವಿನ ಬೆಲೆ ಎಷ್ಟು? ಕಟ್ಟಿದ ಹೂವನ್ನು ಹೇಗೆ ಮಾರುವಿರಿ?
ಷಾಹಿನ : ಇಂದು ಒಂದು kg ಮಲ್ಲಿಗೆ ಹೂವಿನ ಬೆಲೆ 250 ಒಂದು ಮೊಳಕ್ಕೆ 10 ರಂತೆ ಮಾರುವರು.
ಶಿಕ್ಷಕರು : ಮೊಳ, ಮಾರು ಇವುಗಳ ಬಗ್ಗೆ ನಿಮಗೆ ಗೊತ್ತಿದೆಯೇ?


ಫಾತಿಮಾ : ಗೊತ್ತಿದೆ. ಒಂದು ಮಾರಿಗೆ ನಾಲ್ಕು ಮೊಳಗಳು.
ಶಿಕ್ಷಕರು : ಇವು ಅನೌಪಚಾರಿಕ ಅಳತೆ ಮಾನಗಳು. ಹೂ ಕಟ್ಟುವವರಿಗೆ, ಮಾರುವವರಿಗೆ ಹಾಗೂ ಕೊಳ್ಳುವವರಿಗೆ ಈ ಅಳತೆಗಳನ್ನು ಬಳಸುವುದು ಬಹಳ ಸುಲಭ.
ಮಾಡಿ-ನೋಡು :
ಒಂದು kg ಮಲ್ಲಿಗೆ ಹೂವಿನ ಬೆಲೆ ` 250 ಆದರೆ 5 kg ಮಲ್ಲಿಗೆ ಹೂವಿನ ಬೆಲೆ ಎಷ್ಟು?
ಒಂದು ಮೊಳ ಹೂವಿನ ಬೆಲೆ `4 ಆದರೆ ಒಂದು ಮಾರಿನ ಬೆಲೆ ಎಷ್ಟು?
ನಿನ್ನ ಊರಿನ ಮಾರುಕಟ್ಟೆಗೆ ಹೋಗು. ಅಲ್ಲಿ ಮಾರುವ 5 ವಿವಿಧ ಹೂಗಳ ಬೆಲೆಯನ್ನು ತಿಳಿದು ಇಲ್ಲಿ ಬರೆ. ಒಂದು ಉದಾಹರಣೆಯನ್ನು ಇಲ್ಲಿ ಕೊಟ್ಟಿದೆ.
ಹೂವಿನ ಹೆಸರು | ಅಳತೆ | ಬೆಲೆ |
ಉದಾಹರಣೆ : ಮಲ್ಲಿಗೆ | ಒಂದು ಮೊಳ | 10 |
ಶಿಕ್ಷಕರು : ನಿಮ್ಮ ಮನೆಯ ಆವರಣದಲ್ಲಿ ಹೂ ಗಿಡಗಳನ್ನು ನೆಡಿ, ಇಲ್ಲವೇ ಕುಂಡಗಳಲ್ಲಿ ಬೆಳೆಸಿ. ಹಾಗೆಯೇ ಹೂಗಳನ್ನು ಉಪಯೋಗಿಸುವುದನ್ನೂ ಅಭ್ಯಾಸ ಮಾಡಿಕೊಳ್ಳಿ.
ವಿಜಯ : ಸಾರ್, ಹಸೀನಾಳ ಬಟ್ಟೆ ಮೇಲೆ ಹೂಗಳೋ ಹೂಗಳು.
ಶಿಕ್ಷಕರು : ಹೂವಿನ ಚಿತ್ರಗಳನ್ನು ಹಲವು ಕಡೆ ಕಾಣುವಿರಿ. ಹೂಗಳು ಚಿತ್ರಕಲೆಗೆ ಸ್ಫೂರ್ತಿ ನೀಡುತ್ತವೆ.
ನಿನ್ನ ಸುತ್ತಲೂ ಇರುವ ವಸ್ತುಗಳನ್ನು ಗಮನಿಸು. ಹೂಗಳ ಚಿತ್ರವನ್ನು ಯಾವ ಯಾವ ವಸ್ತುಗಳ ಮೇಲೆ ಕಾಣುವೆ?

ಸಂವೇದ ವಿಡಿಯೋ ಪಾಠಗಳು
ಪೂರಕ ವಿಡಿಯೋಗಳು
ಪ್ರಶ್ನೋತ್ತರಗಳು
ನಿನಗಿದು ಗೊತ್ತೆ?
1) ರಫ್ಲೇಸಿಯಾ ಎಂಬ ಸಸ್ಯದ ಹೂ ಅತ್ಯಂತ ದೊಡ್ಡದು. ಈ ಹೂವು ಒಂದು ಮೀಟರ್ ಸುತ್ತಳತೆ ಮತ್ತು 7 kg ತೂಕ ಇರುತ್ತದೆ. ಆದರೆ ಇದರ ಬೀಜ ಮಾತ್ರ ಗಸಗಸೆ ಕಾಳಿನಂತಿದೆ. ಈ ಹೂ ಅತ್ಯಂತ ಕೆಟ್ಟ ವಾಸನೆ ಬೀರುತ್ತದೆ.

2) ಭಾರತದಲ್ಲಿನ ವುಲ್ಫಿಯಾ ಎಂಬ ಜಲಸಸ್ಯದ ಹೂ ಅತ್ಯಂತ ಚಿಕ್ಕ ಹೂ. ಒಂದು ಸೂಜಿಯ ತುದಿಯ ಮೇಲೆ ಹಲವಾರು ವುಲ್ಫಿಯಾ ಹೂಗಳನ್ನು ಇಡಬಹುದು.


3) ಪ್ರಪಂಚದ 15 ಅತಿ ಸುಂದರ ಹೂಗಳಲ್ಲಿ ಲಂಟಾನ (ಬೇಲಿಗಿಡ) ಹೂ ಒಂದು.


4) ಗುಲಾಬಿ ಹೂವಿನಿಂದ ಸುಗಂಧ ದ್ರವ್ಯವನ್ನಷ್ಟೇ ಅಲ್ಲದೆ ರುಚಿಕರವಾದ, ಆರೋಗ್ಯಕ್ಕೆ ಒಳ್ಳೆಯದಾದ ಗುಲ್ಕನ್ ಎಂಬ ಸಿಹಿಯನ್ನು ತಯಾರಿಸುತ್ತಾರೆ.



5) ಹೂವಿನ ಕೃಷಿಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಒಂದು ವರದಿಯ ಪ್ರಕಾರ ದೇಶದ ಸುಮಾರು 75 ಭಾಗ ಹೂಗಳು ಉತ್ಪಾದನೆಯಾಗುವುದೇ ಇಲ್ಲಿ.

6) ನಮ್ಮ ದೇಶದ ಹೂಗಳನ್ನು ವಿದೇಶಗಳಿಗೂ ಕಳುಹಿಸುತ್ತಾರೆ.

* * * * * * * * *
Your point of view caught my eye and was very interesting. Thanks. I have a question for you. https://accounts.binance.com/ka-GE/register-person?ref=S5H7X3LP