ಪರಿಸರ ಸಮತೋಲನ – ಪಾಠ-4

ಕೃಷ್ಣಾನಂದ ಕಾಮತ್-

ಪ್ರವೇಶ : ನಾವು ಇಂದು ಪ್ರತಿಯೊಂದಕ್ಕೂ ಪ್ರಕೃತಿಯನ್ನೇ ಅವಲಂಬಿಸಿದ್ದೇವೆ. ಪ್ರಾಕೃತಿಕ ಪರಿಸರ ಹಾಗೂ ಜೀವಪರಿಸರದ ನಡುವೆ ಅವಿನಾಭಾವ ಸಂಬಂಧವಿದೆ. ನಾವು ನಮ್ಮ ದಿನನಿತ್ಯದ ಅಗತ್ಯಗಳಾದ ಆಹಾರ, ಬಟ್ಟೆ, ಗಾಳಿ, ಬೆಳಕು, ಔಷಧ ಮುಂತಾದ ಜೀವನಾವಶ್ಯಕ ಸಕಲ ಸೌಕರ್ಯಗಳಿಗೂ ಪ್ರಕೃತಿಯೇ ಜೀವನಾಧಾರವಾಗಿದೆ. ಈ ನೈಸರ್ಗಿಕ ಸಂಪತ್ತು ಎಲ್ಲಾ ಜೀವರಾಶಿಗಳನ್ನು ತನ್ನ ಮಡಿಲಿನಲ್ಲಿಟ್ಟುಕೊಂಡು ತಾಯಿಯಂತೆ ಪೋಷಿಸುತ್ತದೆ. ಮಾನವರಾದ ನಾವು ನಮ್ಮ ಅಜ್ಞಾನ, ದುರಾಸೆ, ದುಂದುಗಾರಿಕೆ ಹಾಗೂ ಮೋಜುಮಸ್ತಿಗಳಿಗಾಗಿ ಇಂತಹ ಅಮೂಲ್ಯವಾದ ಪರಿಸರವನ್ನು ನಾಶಮಾಡಿದರೆ ಅಸಮತೋಲನ ಉಂಟಾಗುತ್ತದೆ. ಈ ಸುಂದರ ಭೂಮಿ, ಇಲ್ಲಿನ ಜೀವಜಾಲದ ವ್ಯವಸ್ಥೆ ನಾಶವಾಗಿ ನಮ್ಮ ನಾಶಕ್ಕೆ ನಾವೇ ಪರೋಕ್ಷವಾಗಿ ಕಾರಣವಾಗುತ್ತಿದ್ದೇವೆ. ಆದ್ದರಿಂದ ಈ ಸುಂದರ ಪರಿಸರದ ಸಂರಕ್ಷಣೆಯ ಜವಾಬ್ದಾರಿ ನಮ್ಮ ಮೇಲಿದೆ ಎನ್ನುವ ಸಾಮಾನ್ಯ ಅರಿವು ಎಲ್ಲರದ್ದಾಗಬೇಕು. ಈ ಪರಿಸರದಲ್ಲಿ ಬದುಕುವ ಹಕ್ಕು ನಮಗೆ ಮಾತ್ರವಲ್ಲ ಎಲ್ಲಾ ಪ್ರಾಣಿ, ಪಕ್ಷಿ, ಗಿಡ, ಮರ ಹಾಗೂ ಸಕಲ ಜೀವರಾಶಿಗೂ ಇದೆ ಎಂಬ ಅರಿವು ಅತ್ಯಗತ್ಯ. ಈ ನಿಟ್ಟಿನಲ್ಲಿ ಚಿಂತಿಸಿ ಕಾರ್ಯ ಪ್ರವೃತ್ತರಾಗಬೇಕಾದ ಅನಿವಾರ್ಯತೆಯನ್ನು ಈ ವೈಜ್ಞಾನಿಕ ಲೇಖನದಲ್ಲಿ ಲೇಖಕರು ಮನಮುಟ್ಟುವಂತೆ ವಿವರಿಸಿದ್ದಾರೆ.

ಭೂಮಂಡಲದಲ್ಲಿ ಪ್ರತಿಯೊಂದು ಪ್ರಾಣಿಯೂ ತನಗಿರುವ ಸಂತಾನ ಸಾಮಥ್ರ್ಯವನ್ನು ಬಳಸಿದ್ದರೆ, ಇಲ್ಲವೇ ಅವುಗಳ ಮರಿಗಳೆಲ್ಲಾ ಬದುಕಿ ಇರುವಂತಾಗಿದ್ದರೆ, ಯಾವ ಪ್ರಾಣಿಗೂ ಹೊಟ್ಟೆ ತುಂಬ ಆಹಾರ ಸಿಗುತ್ತಿರಲಿಲ್ಲ. ಐದು ವರ್ಷಕ್ಕೊಮ್ಮೆ ಒಂದು ಮರಿಗೆ ಜನ್ಮಕೊಡುವ ಆನೆ, ಸಂತತಿ ನಿರ್ಮಿತಿಯಲ್ಲಿ ಅತಿ ಮಂದಗತಿಯದು ಎಂದು ಪರಿಗಣಿಸಿದೆ. ಹೀಗಿದ್ದರೂ ಆನೆಯ ಎಲ್ಲ ಮರಿಗಳೂ ಸರಿಯಾಗಿ ಬೆಳೆದು ಐದು ವರ್ಷಕ್ಕೆ ಒಂದು ಮರಿಗೆ ಜನ್ಮ ಕೊಡುತ್ತಾ ಹೋದರೆ ಒಂದೇ ಶತಮಾನದಲ್ಲಿ ಜಗತ್ತೆಲ್ಲಾ ಆನೆಮಯವಾಗಿ ಹೋಗುತ್ತಿತ್ತು. ಪ್ರತಿಯೊಂದು ಪ್ರಾಣಿಯೂ ತನ್ನ ವಂಶಜರೂ ಬಾಳಬೇಕೆಂದು ಹೆಚ್ಚೆಚ್ಚು ಪ್ರಮಾಣದಲ್ಲಿ ಸಂತಾನ ಅಭಿವೃದ್ಧಿ ಮಾಡುತ್ತದೆ. ಇದರಿಂದಾಗಿ ಆಹಾರ ಆಚ್ಛಾದನಗಳಿಗಾಗಿ ಸ್ಪರ್ಧೆ ಏರ್ಪಡುವುದು.

ಸಾಮರ್ಥ್ಯವುಳ್ಳ ವರ್ಗ ಬದುಕಿ ಬಾಳಿದರೆ ಅಸಮರ್ಥ ಗುಂಪು ನಿರ್ನಾಮವಾಗುತ್ತದೆ. ಉದಾಹರಣೆಗೆ ಒಂದು ಪ್ರದೇಶದಲ್ಲಿ ಕುದುರೆ, ಒಂಟೆ, ಜಿರಾಫೆಗಳು ಬದುಕುತ್ತವೆ ಎಂದಿಟ್ಟುಕೊಳ್ಳೋಣ. ಈ ಮೂರೂ ಪ್ರಾಣಿಗಳು ಹೆಚ್ಚಿನ ಸಂತಾನ ನಿರ್ಮಾಣ ಮಾಡಿದ್ದರಿಂದ ಅಲ್ಲಿದ್ದ ಆಹಾರ ಕಡಿಮೆಯಾಗುತ್ತಾ ಹೋಗುತ್ತದೆ. ಐದಾರು ಅಡಿ ಎತ್ತರದಲ್ಲಿದ್ದ ಪರ್ಣ(ಎಲೆ)ಗಳು ತೀರಿದವೆಂದರೆ ಕುದುರೆಗಳು ಹಸಿವೆಯಿಂದ ಬಳಲಿ ಸಾಯುತ್ತವೆ. ಆದರೆ ಉದ್ದಕತ್ತುಳ್ಳ ಒಂಟೆ-ಜಿರಾಫೆಗಳು ಎಂಟು-ಹತ್ತು ಅಡಿ ಎತ್ತರದಲ್ಲಿರುವ ಪರ್ಣಗಳನ್ನು ತಿಂದು ಬದುಕುತ್ತವೆ. ಅಲ್ಲಿಯ ಆಹಾರ ತೀರಲು ಒಂಟೆಗೂ ಉಪವಾಸ ಕಟ್ಟಿಟ್ಟದ್ದೇ. ಆದರೆ ಜಿರಾಫೆ ಹನ್ನೆರಡು ಅಡಿಗೂ ಎತ್ತರದಲ್ಲಿದ್ದ ಪರ್ಣ ತಿನ್ನುವಷ್ಟು ಉದ್ದ ಕಾಲು, ಗೋಣು ಪಡೆದಿದ್ದರಿಂದ ಆಹಾರ-ಸ್ಪರ್ಧೆಯಲ್ಲಿ ಕೊನೆಗೆ ಇದೇ ವರ್ಗ ಯಶಸ್ವಿಯಾಗುವುದೆಂದು ಒಂದು ಸಿದ್ಧಾಂತ. ಈ ಶತಮಾನದಲ್ಲಿ ಪ್ರಾಣಿ – ಪರಿಸರಗಳ ಸಂಬಂಧ ಕೂಲಂಕಷವಾಗಿ ಅಭ್ಯಸಿಸಿದ್ದರಿಂದ ಮಾನವನು ಅದರ ಸಂಪೂರ್ಣ ಲಾಭ ಪಡೆದುಕೊಳ್ಳಬಹುದು.

ಜಿರಾಫೆ ವರ್ಗದಲ್ಲಿಯೂ ಅತಿಸಂತಾನ ಇರುವುದರಿಂದ ಇವುಗಳಲ್ಲಿಯೂ ಸ್ಪರ್ಧೆ ಇದ್ದೇ ಇರುತ್ತದೆ. ಇಲ್ಲಿ ಜಿರಾಫೆಗಳಿಗೂ ಉದ್ದಕಾಲು, ಉದ್ದಗೋಣು ಇರುವುದರಿಂದ ಅವುಗಳಲ್ಲಿಯ ಸ್ಪರ್ಧೆ, ಕುದುರೆ, ಒಂಟೆಗಳೊಡನೆ ಇರುವ ಸ್ಪರ್ಧೆಗಿಂತ ತೀಕ್ಷವಾಗಿರುತ್ತದೆ. ಆದ್ದರಿಂದ ಜಿರಾಫೆಗಳಲ್ಲಿಯೇ ಸ್ವಲ್ಪ ಉದ್ದಕಾಲು, ಗೋಣುಗಳು ಇದ್ದವುಗಳ ವಂಶ ಮುಂದುವರಿಯುವುದೆಂದೂ ಉಳಿದವು ಅಳಿದು ಹೋಗುವುದೆಂದೂ ನಂಬಿದೆ. ಆದರೆ ಆ ಪಿತೃಗಳ ಸಾಧನೆ ವಂಶ ಪರಂಪರಾಗತವಾಗಿ ಮಕ್ಕಳಿಗೆ ಬರುತ್ತದೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಶತಮಾನಗಳಿಂದ ಕನ್ನಡಿಗರು ವೀಳ್ಯ ಚರ್ವಣದಿಂದ ತುಟಿಗಳನ್ನು ಕೆಂಪು ಮಾಡಿಕೊಂಡರೂ ಅವರ ಮಕ್ಕಳು ಕೆಂದುಟಿ ಪಡೆದೇನು ಹುಟ್ಟುವುದಿಲ್ಲ. ಅದರಂತೆ ಹಿಂದಿನ ಚೀನೀ ಹೆಂಗಳೆಯರು ಶತಮಾನಗಳಿಂದ ತಮ್ಮ ಕಾಲುಗಳನ್ನು ಕೃತಕವಾಗಿ ಕಿರಿದು ಮಾಡಿಕೊಳ್ಳುತ್ತ ಬಂದಿದ್ದರೂ ಅವರ ಮಕ್ಕಳ ಕಾಲು ಕಿರಿದಾಗಲೇ ಇಲ್ಲ! ಇದರಂತೆ ಪ್ರಯೋಗಾಲಯದಲ್ಲಿ ಇಲಿಗಳ ನೂರು ತಲೆಮಾರಿನವರೆಗೆ ಬಾಲಕಡಿದರೂ ಯಾವ ತಲೆಮಾರಿನ ಇಲಿಗಳೂ ಬಾಲವಿಲ್ಲದೆ ಜನಿಸಲೇ ಇಲ್ಲ, ಬಹಳ ಆಳವಾದ ಸಂಶೋಧನೆಯ ಅನಂತರ ಇದಕ್ಕೆ ಉತ್ತರ ಕಂಡುಹಿಡಿಯಲಾಗಿದೆ. ಪ್ರತಿಯೊಂದು ಪ್ರಾಣಿಯ ವ್ಯಕ್ತಿತ್ವವನ್ನು ಅದರ ಪ್ರತಿಯೊಂದು ಜೀವಾಣುವಿನಲ್ಲಿ ಇರುವ ಕ್ರೋಮೋಜೋಮುಗಳು ನಿಯಂತ್ರಿಸುತ್ತವೆ.

ಪ್ರಾಣಿಗಳಂತೆ ಸಸ್ಯಗಳೂ ತಮ್ಮ ವಂಶ ಮುಂದುವರಿಯಬೇಕೆಂದು ಯತ್ನಿಸುವ ವರ್ಗಕ್ಕೆ ಸೇರಿವೆ. ಕೀಟ, ವಾಯು, ನೀರು ಮೊದಲಾದವುಗಳ ಮೂಲಕ ಬೀಜಗಳನ್ನು ವಿತರಣೆ ಮಾಡುತ್ತವೆ. ಈ ಬೀಜಗಳು ಎಲ್ಲ ಭೂಜಲ-ಪ್ರದೇಶದಲ್ಲಿ ಹರಡಿಕೊಂಡರೂ ಅವು ತಮಗೆ ಅನುಕೂಲವಾದ ವಾತಾವರಣ ದೊರೆತರೆ ಮಾತ್ರ ಬೆಳವಣಿಗೆ ಹೊಂದುತ್ತವೆ. ವಿಪುಲವಾದ ನೀರು, ಆದ್ರ್ರತೆ ಇರುವಲ್ಲಿ ದಟ್ಟವಾದ ಕಾಡು ಬೆಳೆದರೆ, ಬಯಲು ಪ್ರದೇಶದಲ್ಲಿ ಜಾಲಿ ಗಿಡಗಳೇ ವೃಕ್ಷರಾಜ ಎನಿಸಿಕೊಳ್ಳುವುವು. ಇವೇ ಬೀಜಗಳು ಮರುಭೂಮಿ, ರಸ್ತೆ, ಕಟ್ಟಡಗಳ ಮೇಲೆ ಬಿದ್ದರೆ ಅವುಗಳ ಬೆಳವಣಿಗೆಗೆ ಅವಕಾಶವೇ ದೊರೆಯುವುದಿಲ್ಲವಾದ್ದರಿಂದ ನಾಶವಾಗುವುವು.

ಮಾನವ ತನ್ನ ಸ್ವಾರ್ಥಕ್ಕಾಗಿ ಎಷ್ಟೋ ಪ್ರಾಣಿಗಳನ್ನು ನಿರ್ನಾಮ ಮಾಡಿದ್ದಾನೆ, ಮಾಡುತ್ತಿದ್ದಾನೆ. ಜೀವಿತ ಪ್ರಾಣಿಗಳಲ್ಲಿಯೇ ದೊಡ್ಡದು ಎನಿಸಿಕೊಂಡ ದೇಹ-ಆಕಾರ ದೊಡ್ಡದಿದ್ದರೂ ಅತಿ ಸಣ್ಣದಾಗಿರುವ ಸಸ್ಯಾಹಾರವನ್ನೇ ಭಕ್ಷಿಸುವ ಮಾನವನಿಗೆ ಯಾವ ರೀತಿಯಿಂದಲೂ ಕೇಡು ಮಾಡದ ತಿಮಿಂಗಿಲಗಳನ್ನು ಅದರ ಕೊಬ್ಬಿಗಾಗಿ ಬೇಟೆಯಾಡಿ ಇಂದು ಅದರ ಜಾತಿಯೇ ನಿರ್ನಾಮವಾಗುವಷ್ಟು ಕಡಿಮೆ ತಿಮಿಂಗಿಲಗಳು ಉಳಿದಿವೆ. ಮೊಸಳೆಗಳ ಚರ್ಮಕ್ಕೆ ಪಾಶ್ಚಾತ್ಯ ಮಹಿಳೆಯರು ಮನಸೋತಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ಮೊಸಳೆಗಳನ್ನು ಅತಿಯಾಗಿ ಬೇಟೆಯಾಡಿ ಇಂದು ಕರ್ನಾಟಕದ ಬನ್ನೇರುಘಟ್ಟದಲ್ಲಿ ಮೊಸಳೆಗಳಿಗಾಗಿಯೇ ಮಾಡಿದ ಆಲಯದಲ್ಲಿ ಹೆಚ್ಚಿನ ದಕ್ಷತೆಯಿಂದ ಪಾಲನೆ- ಪೋಷಣೆ ಮಾಡುವ ಪ್ರಸಂಗ ಬರಲಿಲ್ಲವೇ? ಅದರಂತೆ ಹುಲಿ, ಸಿಂಹ, ಚಿರತೆಗಳ ಮೈದೊಗಲು, ಅಪಾರ ಧನ ತರುವುದರಿಂದ ಅವುಗಳನ್ನು ಹೆಚ್ಚಾಗಿ ಬೇಟೆಯಾಡಿದ್ದರಿಂದ ಅವುಗಳ ಸಂತತಿ ಕಡಿಮೆಯಾಗಿದೆ. ಹಾವುಗಳನ್ನಂತೂ ಆಜನ್ಮ ವೈರಿಗಳಂತೆ ಭಾವಿಸಿ ಸಿಕ್ಕಲ್ಲಿ ಕೊಂದು ಕೆಲವು ಜಾತಿಯ ಹಾವುಗಳು ಇಂದು ನಶಿಸಿ ಹೋಗಿದ್ದರಿಂದ ವಿಷಕಾರಿ ಹಾವುಗಳನ್ನು ಸಾಕುವ ಕೇಂದ್ರಗಳನ್ನು ಮುಂಬಯಿ ಮತ್ತು ಮದ್ರಾಸಿನಲ್ಲಿ ಪ್ರಾರಂಭಿಸಬೇಕಾದ ಪ್ರಸಂಗ ಬಂತು.

ಹೊಲಗಳಲ್ಲಿ ಹಾವುಗಳು ಇಲಿಗಳನ್ನು ತಿಂದು ಜೀವಿಸುತ್ತಿದ್ದವು. ಅವುಗಳನ್ನು ನಾಶ ಮಾಡಿದ್ದರಿಂದ ವಿನಾಯಕನ-ವಾಹನಗಳು ಅತಿಯಾಗಿ ಬೆಳೆದು ಗುಲ್ಬರ್ಗಾ ಜಿಲ್ಲೆಯಲ್ಲಿ ಮಾನವನ ಆಹಾರವನ್ನೇ ಭಕ್ಷಿಸಿ ಅವನು ಹೌಹಾರುವಂತೆ ಮಾಡಿವೆ. ಟ್ರಾಂವ್ ಟ್ರಾಂವ್ ಎಂದು ಹಾಡಿ ಮಳೆರಾಯನನ್ನು ಬರ ಮಾಡಿಕೊಳ್ಳುವ ಕಪ್ಪೆಯರಸನ ಮೇಲೆ ಮಾನವನು ಕೊಲೆಗಡುಕನ ಕತ್ತಿಯನ್ನೆತ್ತಿದ್ದಾನೆ. ಅವುಗಳ ಕಾಲುಗಳಿಗೆ ಪಾಶ್ಚಾತ್ಯ ದೇಶದಲ್ಲಿ ಬೇಡಿಕೆ ಇರುವುದರಿಂದ ಅವುಗಳನ್ನು ಸಿಕ್ಕಲ್ಲಿ ಹಿಡಿದು ಕೊಂದು ಕಿಸೆ ತುಂಬಿಸಿಕೊಳ್ಳುತ್ತಿದ್ದಾನೆ. ಮಾನವನು ಬೆಳೆದ ಆಹಾರ ಧಾನ್ಯದಲ್ಲಿ ಶೇಕಡ 10-15ರಷ್ಟು ಬೆಳೆಗಳನ್ನು ಕ್ರಿಮಿಕೀಟಗಳು ನಾಶ ಮಾಡುತ್ತವೆ ಎಂದು ಲೆಕ್ಕಾಚಾರ ಹಾಕಿದ್ದಾರೆ. ಒಂದು ಕಪ್ಪೆ ದಿನವೊಂದಕ್ಕೆ 100-200 ತನಕ ಕ್ರಿಮಿಕೀಟಗಳನ್ನು ಭಕ್ಷಿಸಿ ಎಷ್ಟೋ ಆಹಾರ ಧಾನ್ಯವನ್ನು ಸಂರಕ್ಷಿಸುತ್ತದೆ. ಈಗ ಅವುಗಳ ಹತ್ಯೆಯನ್ನು ಪ್ರಾರಂಭಿಸಿದರೆ ಅನ್ನದೇವರು ಮೆಚ್ಚುವನೇ?

ಒಂದು ದಟ್ಟವಾದ ಕಾಡನ್ನು ಮಾನವ ಕಡಿದನೆಂದು ಇಟ್ಟುಕೊಳ್ಳೋಣ. ಅಲ್ಲಿದ್ದ ಹಕ್ಕಿಗಳು ಬೇರೆ ತಾಣ ಹುಡುಕಿಕೊಳ್ಳಬೇಕಾಗುತ್ತದೆ. ಮೇವು ಇಲ್ಲದ್ದರಿಂದ ಚಿಗರೆಗಳು ಮಾಯವಾಗುತ್ತವೆ. ಚಿಗರೆಗಳನ್ನು ಬೇಟೆಯಾಡಿ ಜೀವಿಸಿದ್ದ ಹುಲಿ, ಚಿರತೆ, ಸಿಂಹಗಳೂ ತೊಲಗಬೇಕಾಗುತ್ತದೆ. ಅವಿತುಕೊಳ್ಳಲು ಮರೆ ಇಲ್ಲದ್ದರಿಂದ ತೋಳ-ಕರಡಿಗಳು ಓಡಿಹೋಗುತ್ತವೆ. ಹಣ್ಣು-ಹಂಪಲುಗಳು ಸಿಗದಿದ್ದರಿಂದ ಇಣಚಿ-ಕಣ್ಣು ಕಪ್ಪಡಿಗಳು ಪ್ರಯಾಣ ಬೆಳೆಸುತ್ತವೆ. ಬೋಳು ಮಾಡಿದ ಕಾಡಿನಲ್ಲಿ ವಾಸಿಸಿ ಏನು ಪ್ರಯೋಜನವೆಂದು ಇಲಿಗಳೂ ಹೊರಡುತ್ತವೆ. ಇಲಿಗಳನ್ನು ನಂಬಿದ್ದ ಹಾವೂ ಹಿಂಬಾಲಿಸುತ್ತದೆ. ಕೊರೆಯುವ ಚಳಿ, ಸುಡುವ ಬಿಸಿಲು, ಹರಿವ ನೀರಿಗೆ ನೆಲದೊಳಗಿನ ಪ್ರಾಣಿಗಳು ಸಾವಿಗೀಡಾಗುತ್ತವೆ. ಇಂತಹ ಭೂಮಿಯನ್ನು ಹೊಲಗಳಿಗೆ ಬಳಸಿದರೆ ಅಲ್ಲಿ ಹೊಸ ಪ್ರಾಣಿಗಳು ಬೀಡು ಬಿಡುವುವು.

ಇದರಂತೆ ಮಾನವನು ವಿಮಾನ, ರೈಲ್ವೇ, ಮೋಟಾರು ನಿಲ್ದಾಣಗಳನ್ನು ಕಟ್ಟುವುದರಿಂದ, ಹೆದ್ದಾರಿಗಳನ್ನು ಮಾಡುವುದರಿಂದ ಬಹಳ ಕಾಲದಿಂದ ಇದ್ದ ಸರೋವರ, ಕೆರೆ, ಹೊಂಡಗಳನ್ನು ಬೇರೆಯೇ ಕೆಲಸಕ್ಕೆ ಬಳಸುವುದು ವಾಡಿಕೆ. ಆದ್ದರಿಂದ ಕಾರ್ಖಾನೆ-ಊರುಗಳನ್ನು ಬೆಳೆಸುವುದಕ್ಕೆ ಕಾಡು-ಗಿಡ-ಗಂಟಿಗಳನ್ನು ಕಡಿಯುವುದರಿಂದ ಆಗುವ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂಬುದು ಜನಸಾಮಾನ್ಯರಿಗೆ ಅರಿವಾಗುವುದೇ ಇಲ್ಲ. ಆದ್ದರಿಂದ ಅಧಿಕಾರದಲ್ಲಿದ್ದವರು, ಅದಕ್ಕಿಂತ ಮಿಗಿಲಾಗಿ ಮುಂದಿನ ಪೀಳಿಗೆಗೆ ಇಂದೇ ಯೋಜನೆಯನ್ನು ತಯಾರಿಸುವ ವಿಜ್ಞಾನಿಗಳು ನಿಸರ್ಗದ ಆಗುಹೋಗುಗಳನ್ನು ವಿವರವಾಗಿ ಅಭ್ಯಸಿಸಿ ಮಾನವನ ಚಟುವಟಿಕೆ ಮಾನವನಿಗೇ ಕಂಟಕಪ್ರಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿ, ವಿಧಾಯಕವಾಗಿ ಕಾರ್ಯಕ್ರಮಗಳನ್ನು ಕೈಗೊಂಡರೆ ಮಾತ್ರ ಈ ಹಿಂದೆ ಮಾಡಿದ ತಪ್ಪುಗಳೆಲ್ಲಾ ಮುಂದೆಯೂ ಆಗುವುದು ನಿಂತೀತು.

ಆಶಯ : ಪ್ರಕೃತಿ ಒಂದು ಅದ್ಭುತ ಸೃಷ್ಟಿ. ಪ್ರಕೃತಿಯಲ್ಲಿ ಕ್ರಿಮಿ, ಕೀಟ, ಪ್ರಾಣಿ, ಪಕ್ಷಿಗಳು ಒಂದು ಮಿತಿಯಲ್ಲಿದ್ದರೆ ಮಾತ್ರ ಪರಿಸರ ಸಮತೋಲನವಾಗಿರುತ್ತದೆ, ಇಲ್ಲದಿದ್ದರೆ ಪರಿಸರದಲ್ಲಿ ಅಸಮತೋಲನವುಂಟಾಗಿ ಜೀವರಾಶಿಗಳಿಗೆಲ್ಲ ಅಪಾಯ ಕಟ್ಟಿಟ್ಟದ್ದು. ಎಲ್ಲಾ ಪ್ರಾಣಿ ಪಕ್ಷಿಗಳು ತಮ್ಮ ಸಂತತಿ ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತವೆ. ಜನಿಸಿದ ಎಲ್ಲಾ ಪ್ರಾಣಿ ಪಕ್ಷಿಗಳು ಉಳಿಯುವುದಿಲ್ಲ. ಅವು ಬದುಕಿಗಾಗಿ ಇತರ ಪ್ರಾಣಿ ಪಕ್ಷಿಗಳೊಂದಿಗೆ ಹೋರಾಟ ನಡೆಸಿ, ಶಕ್ತಿಯುತವಾದವು ಉಳಿಯುತ್ತವೆ. ದುರ್ಬಲ ಪ್ರಾಣಿಗಳು ನಶಿಸಿ ಹೋಗುತ್ತವೆ. ಬದುಕುಳಿದ ಪ್ರಾಣಿ ಪಕ್ಷಿಗಳನ್ನು ಮಾನವ ದುರಾಸೆ, ಮೋಜು ಅಥವಾ ಹೊಟ್ಟೆಪಾಡಿಗಾಗಿ ನಾಶಮಾಡುತ್ತಿದ್ದಾನೆ. ಜನಸಂಖ್ಯಾ ಏರಿಕೆ, ಕೈಗಾರಿಕೀಕರಣ, ನಗರೀಕರಣ, ಆಧುನೀಕರಣಗಳ ಭರಾಟೆಯಲ್ಲಿ ಸುಂದರ ಸಸ್ಯ – ಪ್ರಾಣಿ – ಪಕ್ಷಿಸಂಕುಲ ನಶಿಸಿ ಹೋಗುತ್ತಿದೆ. ನಾವು ಬದುಕಿ ಇತರರನ್ನು ಬದುಕಲು ಬಿಡಬೇಕು. ನಾಳಿನ ಸುಂದರ ಬದುಕನ್ನು ಮುಂದಿನ ಪೀಳಿಗೆ ಕಾಣಬೇಕೆಂಬುದು ಎಲ್ಲರ ಸದಾಶಯವಾಗಬೇಕು. ಇದೇ ಪಾಠದ ಮುಖ್ಯ ಭಾವ.

ಲೇಖಕರ ಪರಿಚಯ

ಡಾ. ಕೃಷ್ಣಾನಂದ ಕಾಮತ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ 29-09-1934 ರಲ್ಲಿ ಜನಿಸಿದರು. 1959 ರಲ್ಲಿ ಎಂ.ಎಸ್ಸಿ. ಪದವಿಯಲ್ಲಿ ಉತ್ತೀರ್ಣರಾದ ಕಾಮತ್ ಅವರು ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು. 1961 ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಉದಯಪುರ ಮತ್ತು ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್‍ಟ್ಯೂಟ್ ಆಫ್ ಬಯಲಾಜಿಕಲ್ ಕಂಟ್ರೋಲ್ ಸಂಸ್ಥೆಯ ಕೀಟ ಸಂಶೋಧನಾಧಿಕಾರಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವರು. ಬೆಂಗಳೂರಿನಲ್ಲಿ ವೈಜ್ಞಾನಿಕ ಛಾಯಾಗ್ರಹಣ ಲ್ಯಾಬೊರೇಟರಿ ಪ್ರಾರಂಭಿಸಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳ ಛಾಯಾಗ್ರಹಣ ಮಾಡಿದ್ದಾರೆ. ಡಾ. ಕೃಷ್ಣಾನಂದ ಕಾಮತ್ ಅವರ ಕೃತಿಗಳೆಂದರೆ – ನಾನೂ ಅಮೆರಿಕಾಗೆ ಹೋಗಿದ್ದೆ, ಪ್ರಾಣಿ ಪರಿಸರ, ಕೀಟ ಜಗತ್ತು, ಪಶು ಪಕ್ಷಿ ಪ್ರಪಂಚ, ಸಸ್ಯ ಪರಿಸರ, ಇರುವೆಯ ಇರವು, ಸರ್ಪ ಸಂಕುಲ ಮತ್ತು ಕಾವಿ ಕಲೆ ಇತ್ಯಾದಿ. ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 20-02-2002 ರಂದು ಇಹಲೋಕ ತ್ಯಜಿಸಿದರು.

ಪದಗಳ ಅರ್ಥ

ಆಚ್ಛಾದನ – ಬಟ್ಟೆ, ವಸ್ತ್ರ;
ಪರ್ಣ – ಎಲೆ;
ಗೋಣು – ಕುತ್ತಿಗೆ;
ಪಿತೃ – ತಂದೆ;
ವೀಳ್ಯ – ತಾಂಬೂಲ (ಎಲೆ, ಅಡಿಕೆ);
ಚರ್ವಣ – ಅಗಿದು ತಿನ್ನುವುದು;
ಶತಮಾನ – ನೂರು ವರ್ಷಗಳು;
ಕ್ರೋಮೋಜೋಮು – ವರ್ಣತಂತು;
ರಾಜಿ – ಗುಂಪು;
ವಿಪುಲ – ಹೆಚ್ಚು, ಜಾಸ್ತಿ;
ಆದ್ರ್ರತೆ – ನೀರಿನ ಅಂಶ, ತೇವಾಂಶ;
ಪಾಶ್ಚಾತ್ಯ – ಪಶ್ಚಿಮದೇಶ;
ಕಿಸೆ – ಜೇಬು;
ತಾಣ – ಜಾಗ, ಸ್ಥಳ;
ಚಿಗರೆ – ಜಿಂಕೆ;
ಅವಿತು – ಬಚ್ಚಿಟ್ಟುಕೊಳ್ಳುವುದು;
ಕಣ್ಣು ಕಪ್ಪಡಿ – ಬಾವಲಿ;
ವಿಧಾಯಕ – ರಚನಾತ್ಮಕ

ಸಂವೇದ ವಿಡಿಯೋ ಪಾಠಗಳು

Samveda – 7th – Kannada – Parisara Samatholana (Part 1 of 2)
Samveda – 7th – Kannada – Parisara Samatholana (Part 2 of 2)

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವ್ಯಾಕರಣ ಮಾಹಿತಿ

ಸಂಧಿಗಳು

ಕನ್ನಡ ಸಂಧಿಗಳು : ಲೋಪಸಂಧಿ, ಆಗಮಸಂಧಿ, ಆದೇಶ ಸಂಧಿ.

ಒಂದು ಊರಲ್ಲಿ ಒಬ್ಬ ಜಿಪುಣ ವ್ಯಕ್ತಿ ಇದ್ದನು. ಅವನಿಗೆ ಹಣದಾಸೆ ಬಹಳ. ಅವನ ಬಳಿ ಒಂದು ಕೋಳಿ ಇತ್ತು. ಅದು ಚಿನ್ನದ ಮೊಟ್ಟೆಯಿಡುತ್ತಿತ್ತು. ಹಾಗಾಗಿ ಅವನು ಅದನ್ನು ಊರಾಚೆಗಿನ ಬೆಟ್ಟದಾವರೆಯ ಕೊಳದ ಬಳಿ ಬಚ್ಚಿಟ್ಟಿದ್ದನು. ಅದು ದಿನವೊಂದಕ್ಕೆ ಒಂದೊಂದು ಮೊಟ್ಟೆಯಂತೆ ನೂರಾರು ಮೊಟ್ಟೆಗಳನ್ನು ಕೊಟ್ಟಿತ್ತು. ಆದರೂ ಅವನಿಗೆ ಆಸೆ. ಅದನ್ನು ಕೊಂದುಬಿಟ್ಟರೆ ಅದರ ಹೊಟ್ಟೆಯೊಳಗೆ ತುಂಬಾ ಚಿನ್ನದ ಮೊಟ್ಟೆ ಸಿಗಬಹುದು ಎಂದುಕೊಂಡು ಒಂದು ದಿನ ಕೊಂದುಬಿಟ್ಟನು. ಮುಂದೇನಾಯಿತು ಯೋಚಿಸಿ.

ಊರಲ್ಲಿ, ಮೊಟ್ಟೆಯಿಡು, ಬೆಟ್ಟದಾವರೆ ಮೊದಲಾದ ಪದಗಳನ್ನು ಊರು, ಅಲ್ಲಿ, ಮೊಟ್ಟೆಯಿಡು, ಬೆಟ್ಟ, ತಾವರೆ ಎಂದು ಓದಬಹುದಾದರೂ ನಾವು ಮಾತನಾಡುವಾಗ ಸುಲಭವಾಗಲು ಈ ಪದಗಳನ್ನು ಕೂಡಿಸಿ ಊರಲ್ಲಿ, ಮೊಟ್ಟೆಯಿಡು, ಬೆಟ್ಟದಾವರೆ ಇತ್ಯಾದಿಯಾಗಿ ಓದುತ್ತೇವೆ. ಹೀಗೆ ಪದಗಳನ್ನು ಎಡೆಬಿಡದೆ ಒಟ್ಟಿಗೆ ಕೂಡಿಸಿ ಓದುವುದಕ್ಕೆ ಅಥವಾ ಹೇಳುವುದಕ್ಕೆ ‘ಸಂಧಿ’ ಎಂದು ಹೆಸರು.

ಈ ಪದಗಳನ್ನು ಸೇರಿಸಿ ಹೇಳುವಾಗ ಆ ಪದಗಳಲ್ಲಿ ಇರುವ ಅಕ್ಷರಗಳಲ್ಲಿ ಒಂದು ಅಕ್ಷರ ಬಿಟ್ಟುಹೋಗಬಹುದು (ಉದಾಹರಣೆ ಗಮನಿಸಿ), ಇಲ್ಲವೇ ಇರುವ ಅಕ್ಷರಗಳ ಜೊತೆಗೆ ಒಂದು ಅಕ್ಷರ ಹೊಸದಾಗಿ ಸೇರಿಕೊಳ್ಳಬಹುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬರಬಹುದು. ಹೀಗೆ ಸಂಧಿಯಾಗುವಾಗ ಅಕ್ಷರಗಳು ಲೋಪವಾಗುವುದು, ಅಕ್ಷರ ಬಂದು ಸೇರುವುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದು ಸೇರುವುದಕ್ಕೆ ‘ಸಂಧಿಕಾರ್ಯ’ ಎನ್ನುವರು.

ಸಂಧಿಯಾಗುವಾಗ ಅಕ್ಷರ ಲೋಪವಾದರೆ ಅದನ್ನು ‘ಲೋಪಸಂಧಿ’ ಎನ್ನುವರು. ಉದಾ: ಊರು + ಅಲ್ಲಿ – ಊರಲ್ಲಿ

ಸಂಧಿಯಾಗುವಾಗ ಒಂದು ಅಕ್ಷರ ಹೊಸದಾಗಿ ಬಂದರೆ ಅದನ್ನು ‘ಆಗಮ ಸಂಧಿ’ ಎನ್ನುವರು. ಉದಾ: ಮೊಟ್ಟೆ + ಇಡು – ಮೊಟ್ಟೆಯಿಡು.

ಸಂಧಿಯಾಗುವಾಗ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದರೆ ಅದನ್ನು ‘ಆದೇಶ ಸಂಧಿ’ ಎನ್ನುವರು. ಉದಾ: ಬೆಟ್ಟ + ತಾವರೆ = ಬೆಟ್ಟದಾವರೆ

ಸಂಸ್ಕೃತ ಸಂಧಿಗಳು

ಕೆಳಗಿನ ವಾಕ್ಯವೃಂದವನ್ನು ಗಮನಿಸಿ
ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು. ಸೂರ್ಯೋದಯಕ್ಕೆ ಮುನ್ನ ಎದ್ದು ಅಭ್ಯಾಸ ಮಾಡುವುದು ಒಳ್ಳೆಯದು. ಸೂರ್ಯ ನಮಗೆ ಹತ್ತಿರದ ಏಕೈಕ ನಕ್ಷತ್ರ. ಸೂರ್ಯನಿಂದ ಅತ್ಯಂತ ಪ್ರಖರವಾದ ಬೆಳಕು ಭೂಮಿಗೆ ದೊರೆಯುತ್ತದೆ. ಸೂರ್ಯ ದಿಗಂತದಲ್ಲಿದ್ದಂತೆ ಕಾಣುತ್ತಾನೆ. ಸೂರ್ಯನೇ ಜಗಜ್ಜ್ಯೋತಿ, ಸೂರ್ಯನೇ ಚಿನ್ಮಯ.

ಮೇಲಿನ ವಾಕ್ಯವೃಂದದಲ್ಲಿ ಹಲವು ಸಂಸ್ಕೃತ ಪದಗಳಿವೆ. ಈ ಪದಗಳು ಕನ್ನಡ ಭಾಷೆಯಲ್ಲಿ ಹಾಸುಹೊಕ್ಕಾಗಿ ಸೇರಿವೆ. ಕೆಲವು ಪದಗಳು ಸಂಧಿಯಾಗಿ ಪ್ರಯೋಗವಾಗಿವೆ. ಇಲ್ಲಿಯ ಸಂಧಿಕಾರ್ಯ ಸಂಸ್ಕೃತ ಭಾಷೆಯ ನಿಯಮಗಳ ಪ್ರಕಾರ ನಡೆದಿದೆ. ಇಂಥ ಪದಗಳ ಸೇರಿಕೆಯನ್ನು ಸಂಸ್ಕೃತ ಸಂಧಿಗಳು ಎಂದು ಕರೆಯುತ್ತೇವೆ. ಅಂದರೆ, ಸಂಸ್ಕೃತ-ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ಅಂತಹ ಸಂಧಿಗಳನ್ನು ಸಂಸ್ಕೃತ ಸಂಧಿ ಎಂದು ಕರೆಯುತ್ತೇವೆ. ಕನ್ನಡದಂತೆಯೇ ಸಂಸ್ಕೃತದಲ್ಲೂ ಸ್ವರಸಂಧಿಗಳೂ ವ್ಯಂಜನಸಂಧಿಗಳೂ ಇವೆ. ಅವುಗಳ ಬಗ್ಗೆ ತಿಳಿಯೋಣ.

ಸಂಸ್ಕೃತ ಸ್ವರ ಸಂಧಿಗಳು

ಸವರ್ಣದೀರ್ಘ ಸಂಧಿ

1. ನನ್ನ ಗೆಳೆಯ ರವೀಂದ್ರ.
2. ಕರ್ನಾಟಕದಲ್ಲಿ ಹಲವು ದೇವಾಲಯಗಳಿವೆ.
3. ಗುರೂಪದೇಶವನ್ನು ಪಡೆಯುವುದು ಒಳ್ಳೆಯದು.
4. ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆಯಲಾಗುತ್ತದೆ.

ಮೇಲಿನ ವಾಕ್ಯಗಳಲ್ಲಿರುವ ರವೀಂದ್ರ, ದೇವಾಲಯ, ಗುರೂಪದೇಶ, ಮಹಾತ್ಮ ಈ ಶಬ್ದಗಳಲ್ಲಿ ಆಗಿರುವ ಸಂಧಿಕಾರ್ಯವನ್ನು ಗಮನಿಸಿ.

ಪೂರ್ವಪದ + ಉತ್ತರಪದ = ಸಂಧಿಪದ
1. ರವಿ + ಇಂದ್ರ – ರವೀಂದ್ರ (ಇ + ಇ = ಈ)
2. ದೇವ + ಆಲಯ – ದೇವಾಲಯ (ಅ + ಆ = ಆ)
3. ಗುರು + ಉಪದೇಶ – ಗುರೂಪದೇಶ (ಉ + ಉ = ಊ)
4. ಮಹಾ + ಆತ್ಮ- ಮಹಾತ್ಮ (ಆ + ಆ = ಆ)

ಮೇಲಿನ ಪದಗಳಲ್ಲಿರುವಂತೆ ಪೂರ್ವಪದದ ಅಂತ್ಯಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದು ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘಸ್ವರವು ಆದೇಶವಾಗಿರುವುದು ಕಂಡುಬರುತ್ತದೆ. ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘಸ್ವರ ಆದೇಶವಾದರೆ ಅಂತಹ ಸಂಧಿಯನ್ನು ‘ಸವರ್ಣದೀರ್ಘಸಂಧಿ’ ಎಂದು ಕರೆಯುತ್ತೇವೆ.

ಗುಣಸಂಧಿ

ಪೂರ್ವಪದ + ಉತ್ತರಪದ = ಸಂಧಿಪದ
1. ದೇವ + ಇಂದ್ರ = ದೇವೇಂದ್ರ (ಅ + ಇ = ಎ)
2. ಮಹಾ + ಈಶ = ಮಹೇಶ (ಆ + ಈ = ಏ)
3. ಅರುಣ + ಉದಯ = ಅರುಣೋದಯ (ಅ + ಉ = ಓ)
4. ಮಹಾ + ಋಷಿ = ಮಹರ್ಷಿ (ಆ + ಋ = ಅರ್)

‘ಅ’ ಅಥವಾ ‘ಆ’ ಎಂಬ ಸ್ವರಗಳಿಗೆ ‘ಇ’ ಅಥವಾ ‘ಈ’ ಎಂಬ ಸ್ವರ ಸೇರಿದಾಗ ‘ಏ’ ಕಾರವೂ ‘ಉ’ ಅಥವಾ ‘ಊ’ ಸ್ವರ ಸೇರಿದಾಗ ‘ಓ’ ಕಾರವೂ ‘ಋ’ ಎಂಬ ಸ್ವರವು ಸೇರಿದಾಗ ‘ಅರ್’ ಕಾರವೂ ಆದೇಶವಾಗಿ ಬರುವುದನ್ನು ‘ಗುಣಸಂಧಿ’ ಎಂದು ಕರೆಯುತ್ತೇವೆ.

ವೃದ್ಧಿಸಂಧಿ

ಪೂರ್ವಪದ + ಉತ್ತರಪದ = ಸಂಧಿಪದ
1. ಏಕ + ಏಕ = ಏಕೈಕ (ಅ + ಏ = ಐ)
2. ಶಿವ + ಐಕ್ಯ = ಶಿವೈಕ್ಯ (ಅ + ಐ = ಐ)
3. ಮಹಾ + ಔದಾರ್ಯ = ಮಹೌದಾರ್ಯ (ಆ + ಔ = ಔ)
4. ವನ + ಓಷಧಿ = ವನೌಷಧಿ (ಅ + ಓ = ಔ)

‘ಅ’ ‘ಆ’ ಕಾರಗಳ ಮುಂದೆ ‘ಏ’, ‘ಐ’ ಕಾರಗಳು ಬಂದರೆ ಅವೆರಡರ ಸ್ಥಾನದಲ್ಲಿ ‘ಐ’ಕಾರವೂ ‘ಓ’, ‘ಔ’ ಕಾರಗಳು ಬಂದರೆ ಅವೆರಡರ ಸ್ಥಾನದಲ್ಲಿ ‘ಔ’ ಕಾರವೂ ಆದೇಶವಾಗಿ ಬರುವುದು. ಇದಕ್ಕೆ ‘ವೃದ್ಧಿಸಂಧಿ’ ಎಂದು ಹೆಸರು.

ಯಣ್‍ಸಂಧಿ

ಪೂರ್ವಪದ + ಉತ್ತರಪದ = ಸಂಧಿಪದ
1. ಇತಿ + ಆದಿ = ಇತ್ಯಾದಿ (ಇ + ಆ = ಯ್)
2. ಗುರು + ಆಜ್ಞೆ = ಗುರ್ವಾಜ್ಞೆ (ಉ + ಆ = ವ್)
3. ಪಿತೃ + ಆರ್ಜಿತ = ಪಿತ್ರಾರ್ಜಿತ (ಋ + ಆ = ರ್)
4. ಪ್ರತಿ + ಉಪಕಾರ = ಪ್ರತ್ಯುಪಕಾರ (ಇ + ಉ = ಯ್)
5. ಜಾತಿ + ಅತೀತ = ಜಾತ್ಯತೀತ (ಇ + ಅ = ಯ್)

ಇ, ಈ , ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ, ‘ಇ’ ‘ಈ’ ಕಾರಗಳಿಗೆ ‘ಯ’ಕಾರವೂ ಉ, ಊ ಕಾರಗಳಿಗೆ ‘ವ’ ಕಾರವೂ ಋ ಕಾರಕ್ಕೆ ‘ರ’ ಕಾರವೂ ಆದೇಶವಾಗಿ ಬರುವುದನ್ನು `ಯಣ್ ಸಂಧಿ’ ಎಂದು ಕರೆಯುವರು.

ಸಂಸ್ಕೃತ ವ್ಯಂಜನ ಸಂಧಿಗಳು

ಜಶ್ತ್ವಸಂಧಿ

ಪೂರ್ವಪದ + ಉತ್ತರ ಪದ = ಸಂಧಿಪದ
1. ವಾಕ್ + ಈಶ = ವಾಗೀಶ
2. ವಾಕ್ + ದಾನ = ವಾಗ್ದಾನ
3. ದಿಕ್ + ಅಂತ = ದಿಗಂತ
4. ಬೃಹತ್ + ಆಕಾಶ = ಬೃಹದಾಕಾಶ
5. ಷಟ್ + ಆನನ = ಷಡಾನನ

ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಕ, ಚ, ಟ, ತ, ಪ ಗಳಿಗೆ ಗ, ಜ, ಡ, ದ, ಬ ಗಳು ಆದೇಶವಾಗಿ ಬರುವುದನ್ನು ‘ಜಶ್ತ್ವ ಸಂಧಿ’ ಎಂದು ಕರೆಯುತ್ತೇವೆ.

ಶ್ಚುತ್ವಸಂಧಿ

ಪೂರ್ವಪದ + ಉತ್ತರ ಪದ = ಸಂಧಿಪದ
1. ಮನಸ್ + ಶುದ್ಧಿ = ಮನಶ್ಶುದ್ಧಿ
2. ಯಶಸ್ + ಚಂದ್ರಿಕೆ = ಯಶಶ್ಚಂದ್ರಿಕೆ
3. ಸತ್ + ಚಿತ್ರ = ಸಚ್ಚಿತ್ರ

‘ಶ್ಚು’ ಎಂದರೆ ಶಕಾರ ಮತ್ತು ಚವರ್ಗಾಕ್ಷರಗಳು. ಈ ಅಕ್ಷರಗಳು ಆದೇಶವಾಗಿ ಬಂದರೆ ಶ್ಚುತ್ವ ಸಂಧಿ. ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಸಕಾರ ಅಥವಾ ತವರ್ಗದ ಅಕ್ಷರಗಳಿರುತ್ತವೆ ಉತ್ತರಪದ ಶಕಾರ ಅಥವಾ ಚವರ್ಗದ ಅಕ್ಷರಗಳಿಂದ ಆರಂಭವಾಗುತ್ತದೆ. ‘ಸ’ ಕಾರವಿದ್ದ ಕಡೆ ಶಕಾರವೂ ತವರ್ಗದ ಅಕ್ಷರಗಳಿದ್ದ ಕಡೆ ಚವರ್ಗದ ಅಕ್ಷರಗಳೂ ಆದೇಶವಾಗಿ ಬರುವುದನ್ನು ‘ಶ್ಚುತ್ವ ಸಂಧಿ’ ಎಂದು ಕರೆಯುತ್ತೇವೆ.

ಅನುನಾಸಿಕಸಂಧಿ

ಪೂರ್ವಪದ + ಉತ್ತರಪದ = ಸಂಧಿಪದ
1. ವಾಕ್ + ಮಯ = ವಾಙ್ಮಯ
2. ಷಟ್ + ಮುಖ = ಷಣ್ಮುಖ
3. ಸತ್ + ಮಾನ = ಸನ್ಮಾನ

ಙ,ಞ,ಣ,ನ,ಮ ಇವು ಅನುನಾಸಿಕ ಅಕ್ಷರಗಳು. ಈ ಅಕ್ಷರಗಳು ಆದೇಶವಾಗಿ ಬಂದರೆ ಅನುನಾಸಿಕ ಸಂಧಿ. ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಕ್,ಚ್,ಟ್,ತ್,ಪ್ ಅಕ್ಷರಗಳಿರುತ್ತವೆ. ಉತ್ತರಪದ ಅನುನಾಸಿಕ ಅಕ್ಷರಗಳಿಂದ ಆರಂಭವಾಗುತ್ತದೆ. ವರ್ಗದ ಕ,ಚ,ಟ,ತ,ಪ ವ್ಯಂಜನಗಳಿಗೆ ಅದೇ ವರ್ಗದ ಅನುನಾಸಿಕ ಅಕ್ಷರಗಳೂ ಆದೇಶವಾಗಿ ಬರುವುದನ್ನು ‘ಅನುನಾಸಿಕ ಸಂಧಿ’ ಎಂದು ಕರೆಯುತ್ತೇವೆ.