ನೈಸರ್ಗಿಕ ಸಂಪನ್ಮೂಲಗಳು – ಪಾಠ – 5

ನಮ್ಮ ಭೂಮಿಯು ಜೀವಿಗಳು ಬದುಕಲು ಅಗತ್ಯವಾದ ಸಂಪನ್ಮೂಲಗಳನ್ನು ಒಳಗೊಂಡಿದೆ. ಸಂಪನ್ಮೂಲವೆಂದರೆ ಭೂಮಿಯಲ್ಲಿ ನೈಸರ್ಗಿಕವಾಗಿ ದೊರೆಯುವ ನೀರು, ಮಣ್ಣು, ಗಾಳಿ, ಖನಿಜಗಳು, ಸಸ್ಯ ಮತ್ತು ಪ್ರಾಣಿ ಸಂಪತ್ತು ಇತ್ಯಾದಿ. ಮಾನವರೂ ಸೇರಿದಂತೆ ಎಲ್ಲಾ ಜೀವಿಗಳು ಬದುಕಲು ಇವೂ ಅತ್ಯಗತ್ಯ. ಮಾನವರ ಪ್ರಗತಿಗೆ ಇವು ಅತ್ಯಮೂಲ್ಯ.

ನೈಸರ್ಗಿಕ ಸಂಪನ್ಮೂಲಗಳನ್ನು ಸಾಮಾನ್ಯವಾಗಿ ನವೀಕರಿಸಬಹುದಾದ ಮತ್ತು ನವೀಕರಿಸಲಾಗದ ಸಂಪನ್ಮೂಲಗಳಾಗಿ ವಿಂಗಡಿಸಬಹುದು.

1) ನವೀಕರಿಸಬಹುದಾದ ಸಂಪನ್ಮೂಲಗಳು.

ಸೌರಶಕ್ತಿ, ವಾಯು (ಗಾಳಿ), ನೀರು, ಮಣ್ಣು ಮತ್ತು ಕಾಡು (ಅರಣ್ಯ) ಗಳಂತಹ ಸಂಪನ್ಮೂಲಗಳು ಬಳಸಿದಷ್ಟೂ ದೊರಕುವಂತಹ ಸಂಪನ್ಮೂಲಗಳಾಗಿವೆ. ಮಾನವರ ಜೀವಿತಾವಧಿಯಲ್ಲಿ ಇವು ನಿರಂತರವಾಗಿ ಲಭ್ಯವಿರುವುದರಿಂದ ಈ ಸಂಪನ್ಮೂಲಗಳನ್ನು ನವೀಕರಿಸಬಹುದಾದ ಸಂಪನ್ಮೂಲಗಳು ಎನ್ನುವರು.

2) ನವೀಕರಿಸಲಾಗದ ಸಂಪನ್ಮೂಲಗಳು

ಕಲ್ಲಿದ್ದಲು, ಪೆಟ್ರೋಲ್, ಡೀಸೆಲ್ ಮತ್ತು ನೈಸರ್ಗಿಕ ಅನಿಲದಂತಹ ಸಂಪನ್ಮೂಲಗಳು ಬಳಸಿದಂತೆಲ್ಲಾ ಮುಗಿದು ಹೋಗುತ್ತವೆ. ಇಂತಹ ಸಂಪನ್ಮೂಲಗಳನ್ನು ನವೀಕರಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಸಂಪನ್ಮೂಲಗಳನ್ನು ನವೀಕರಿಸಲಾಗದ ಸಂಪನ್ಮೂಲಗಳು ಎನ್ನುವರು.

ಈ ಕೆಳಗೆ ಕೊಟ್ಟಿರುವ ಸಂಪನ್ಮೂಲಗಳನ್ನು ಸಂಬಂಧಿಸಿದ ಬುಟ್ಟಿಗೆ ಗೆರೆ ಎಳೆಯುವುದರ ಮೂಲಕ ಹಾಕು.

ಇದುವರೆಗೂ ನೀನು ನೈಸರ್ಗಿಕ ಸಂಪನ್ಮೂಲಗಳ ವಿಧಗಳನ್ನು ತಿಳಿದೆ. ಈಗ ನವೀಕರಿಸಬಹುದಾದ ಸಂಪನ್ಮೂಲಗಳ ಬಗ್ಗೆ ವಿವರವಾಗಿ ತಿಳಿಯೋಣ.

ಸೌರಶಕ್ತಿ

ಸೂರ್ಯನಿಂದ ದೊರಕುವ ಶಕ್ತಿಯೇ ಸೌರಶಕ್ತಿ. ಸೂರ್ಯನಿಂದ ನಮಗೆ ಬೆಳಕು ಮತ್ತು ಉಷ್ಣ ದೊರೆಯುತ್ತವೆ. ಭೂಮಿಗೆ ಸೂರ್ಯನೇ ನೈಸರ್ಗಿಕ ಬೆಳಕು ಮತ್ತು ಉಷ್ಣದ ಮೂಲ. ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಸಸ್ಯಗಳು ತಮ್ಮ ಆಹಾರವನ್ನು ತಯಾರಿಸುತ್ತವೆ ಎಂದು ನಿನಗೀಗಾಗಲೇ ಗೊತ್ತು.

ಸೂರ್ಯನ ಶಕ್ತಿಯನ್ನು ಬಳಸಿ ಮಾಡಬಹುದಾದ ಕೆಲಸಗಳನ್ನು ಪಟ್ಟಿ ಮಾಡು.

ಮಾಡಿ ನೋಡು : ಎರಡು ಮಣ್ಣಿನ ಕುಂಡಗಳನ್ನು ತೆಗೆದುಕೊಂಡು, ಎರಡರಲ್ಲಿಯೂ ಹುರುಳಿ ಬೀಜವನ್ನು ಹಾಕು. ಒಂದು ಕುಂಡವನ್ನು ಬಿಸಿಲು ಬೀಳುವ ಜಾಗದಲ್ಲಿ, ಮತ್ತೊಂದನ್ನು ಕತ್ತಲಿರುವ ಜಾಗದಲ್ಲಿಡು. ಪ್ರತಿನಿತ್ಯವೂ ಸ್ವಲ್ಪ ನೀರನ್ನು ಎರಡು ಕುಂಡಗಳಿಗೂ ಹಾಕುತ್ತಿರು. ಹದಿನೈದು ದಿನದ ನಂತರ ಅವುಗಳಲ್ಲಿ ಕಂಡುಬರುವ ಬದಲಾವಣೆಗಳನ್ನು ಗಮನಿಸು. ಇದರಿಂದ ನೀನೇನು ತಿಳಿದೆ ಎಂದು ಬರೆ.

ಸೌರಶಕ್ತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ವಿಸ್ಮಯ ಶಕ್ತಿ ಘಟಕದಲ್ಲಿ ಕಲಿಯುವೆ.

ವಾಯು ಮತ್ತು ನೀರು ಕೂಡ ನೈಸರ್ಗಿಕ ಸಂಪನ್ಮೂಲಗಳಾಗಿವೆ. ಇವುಗಳ ಬಗ್ಗೆ ಮುಂದಿನ ಪಾಠಗಳಲ್ಲಿ ತಿಳಿಯುವೆ.

ಮಣ್ಣು

ನಾವು ಮಣ್ಣಿನ ಮೇಲೆ ನಡೆದಾಡುತ್ತೇವೆ. ಇದರ ಮೇಲೆಯೇ ವಾಸಿಸುತ್ತೇವೆ. ನೀರಿನಂತೆಯೇ ಮಣ್ಣು ಕೂಡ ಒಂದು ಮುಗಿಯದ ಸಂಪನ್ಮೂಲವಾಗಿದೆ. ಸಸ್ಯಗಳ ಸಹಜವಾದ ಬೆಳವಣಿಗೆಗೆ ಮಣ್ಣು ಅತ್ಯಂತ ಅವಶ್ಯಕವಾಗಿರುತ್ತದೆ. ಸಸ್ಯಗಳು ತಮ್ಮ ಆಹಾರವನ್ನು ತಯಾರಿಸಿಕೊಳ್ಳಲು ಬೇಕಾದ ನೀರು ಮತ್ತು ಲವಣಗಳನ್ನು ಮಣ್ಣಿನ ಮೂಲಕ ಪಡೆಯುತ್ತವೆ ಎಂಬುದನ್ನು ನೀನು ಈಗಾಗಲೇ ತಿಳಿದಿರುವೆ. ಮಣ್ಣಿನ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದಿನ ತರಗತಿಯಲ್ಲಿ ಕಲಿಯುವೆ.

ಓದಿ-ತಿಳಿ :
ಶಿಲೆಗಳಿಂದಾದ ಭೂಮಿಯ ಮೇಲ್ಪದರ ಅಥವಾ ಚಿಪ್ಪಿನ ಪದರಗಳನ್ನು ಶಿಲಾಗೋಳ ಎನ್ನಲಾಗುತ್ತದೆ. ಖನಿಜಗಳು ಮತ್ತು ಸಾವಯವ ವಸ್ತುಗಳನ್ನು ಒಳಗೊಂಡಿರುವ ಶಿಲಾಗೋಳದ ತೆಳುವಾದ ಪದರವೇ ಮಣ್ಣು. ಇಂತಹ ಮಣ್ಣು ಸುಮಾರು 3cm ನಷ್ಟು ರೂಪುಗೊಳ್ಳಲು ಸುಮಾರು 500 ರಿಂದ 1500 ವರ್ಷಗಳು ಬೇಕಾಗುತ್ತದೆ. ಹರಿಯುವ ನೀರು, ಬೀಸುವ ಗಾಳಿ ಮತ್ತು ಜೀವಿಗಳಿಂದ ಶಿಲೆಗಳು ಶಿಥಿಲಗೊಂಡು ಮಣ್ಣು ರೂಪುಗೊಳ್ಳುತ್ತದೆ.

ಈ ಸಂದರ್ಭಗಳಲ್ಲಿ ಮೇಲ್ಮಣ್ಣು ಏನಾಗುತ್ತದೆ? ಗೆಳೆಯರೊಂದಿಗೆ ಚರ್ಚಿಸು.
* ಜೋರಾಗಿ ಗಾಳಿ ಬೀಸಿದಾಗ
* ಮಳೆ ಬಂದು ನೀರು ರಭಸವಾಗಿ ಹರಿಯುವಾಗ
ಮೇಲ್ಮಣ್ಣು ಕೊಚ್ಚಿಕೊಂಡು ಹೋಗದಂತೆ ಸಂರಕ್ಷಿಸಲು ಈ ಕ್ರಮಗಳನ್ನು ಅನುಸರಿಸುತ್ತಾರೆ. ಚಿತ್ರ ನೋಡಿ, ನೀನು ಏನು ತಿಳಿದೆ ಎಂಬುದನ್ನು ಬರೆ.

ಓದಿ-ತಿಳಿ :
ಸಮಪಾತಳಿ ಬೇಸಾಯ : ಮಣ್ಣಿನ ಸವೆತವನ್ನು ತಡೆಗಟ್ಟಲು ಭೂಮಿಯ ಆಕಾರಕ್ಕನುಗುಣವಾಗಿ ವ್ಯವಸಾಯ ಮಾಡುವುದನ್ನು ಸಮಪಾತಳಿ ಬೇಸಾಯ ಎನ್ನುವರು.

ಕಾಡುಗಳು

ಕಾಡುಗಳು ಪರಿಸರದಲ್ಲಿನ ಕಾಡು ಪ್ರಾಣಿ ಮತ್ತು ಪಕ್ಷಿಗಳಿಗೆ ನೈಸರ್ಗಿಕ ಆವಾಸವನ್ನು, ಪ್ರಾಣಿಗಳಿಗೆ ಆಹಾರ ಮತ್ತು ಮೇವನ್ನು ಹಾಗೂ ಮಾನವರಿಗೆ ಅಗತ್ಯವಾದ ಅನೇಕ ವಸ್ತುಗಳನ್ನು ಒದಗಿಸುತ್ತವೆ.

ಈ ಚಿತ್ರಗಳನ್ನು ನೋಡಿ ಕಾಡುಗಳಿಂದ ನಮಗಾಗುವ ಉಪಯೋಗಗಳನ್ನು ಬರೆ.

ಓದಿ-ತಿಳಿ :
ಕಾಡು ಸಹ ಒಂದು ಸ್ವಾಭಾವಿಕ ಸಂಪನ್ಮೂಲವಾಗಿದೆ. ಕಾಡುಗಳು ಹಣ್ಣು, ಹೂಗಳು, ಗಿಡಮೂಲಿಕೆಗಳು, ಮರ ಮುಟ್ಟುಗಳನ್ನು ಒದಗಿಸುತ್ತವೆ. ಕಾಡುಗಳು ಬುಡಕಟ್ಟು ಜನಾಂಗಕ್ಕೆ ಆಶ್ರಯತಾಣವೂ ಆಗಿವೆ. ಕಾಡುಗಳಿಂದ ಮಣ್ಣಿನ ಸವಕಳಿಯನ್ನು (ಮೇಲ್ಪದರದ ಮಣ್ಣು ಕೊಚ್ಚಿ ಹೋಗುವುದನ್ನು) ತಡೆಗಟ್ಟಬಹುದು. ಕಾಡಿನ ಮರಗಳಿಂದ ಆಕ್ಸಿಜನ್ ಪ್ರಮಾಣ ಹೆಚ್ಚಾಗುತ್ತದೆ. ಇಷ್ಟೆಲ್ಲಾ ಕೊಡುಗೆ ನೀಡುವ ಕಾಡುಗಳನ್ನು ನಗರಗಳ ವಿಸ್ತರಣೆ, ಕೈಗಾರಿಕೆಗಳ ಸ್ಥಾಪನೆ, ಅಣೆಕಟ್ಟು ನಿರ್ಮಾಣ – ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ನಾಶ ಮಾಡಲಾಗುತ್ತಿದೆ. ಕಾಡುಗಳ ನಾಶ, ಜೀವ ಸಂಕುಲದ ನಾಶ ಎಂಬುದನ್ನು ಮರೆಯಬಾರದು.

ಕಾಡುಗಳ ಸಂರಕ್ಷಣೆ

ಮರಗಳನ್ನು ಕಡಿಯುವುದನ್ನು ನಿಯಂತ್ರಿಸುವುದು, ಗಿಡ-ಮರಗಳನ್ನು ಬೆಳೆಸುವುದು, ಕಾಡಿನ ಸರಿಯಾದ ಬಳಕೆ, ಕಾಡ್ಗಿಚ್ಚು ಉಂಟುಮಾಡುವ ಮರಗಳ ರೆಂಬೆಗಳನ್ನು ಕತ್ತರಿಸುವ ಮೂಲಕ ಕಾಡುಗಳನ್ನು ಸಂರಕ್ಷಿಸಬಹುದು. ಕಾಡುಗಳನ್ನು ಸಂರಕ್ಷಿಸಲು ಸರ್ಕಾರವು ರಾಷ್ಟ್ರೀಯ ಅರಣ್ಯ ನೀತಿಯನ್ನು 1988ರಲ್ಲಿ ಪರಿಷ್ಕರಿಸಿ, ಜಾರಿಗೆ ತಂದು ಅರಣ್ಯಗಳ ಪೋಷಣೆ, ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ.

ಓದಿ-ತಿಳಿ :
* ಸರ್ಕಾರವು ಅರಣ್ಯ ಇಲಾಖೆಯ ಮೂಲಕ ರಾಷ್ಟ್ರೀಯ ಅರಣ್ಯಗಳನ್ನು ನಿರ್ವಹಿಸಿ, ಸಂರಕ್ಷಿಸುತ್ತಿದೆ.
* ಸಾಮಾಜಿಕ ಅರಣ್ಯಗಳನ್ನು ಗ್ರಾಮ ಪಂಚಾಯ್ತಿ ಮತ್ತು ಸಮುದಾಯದವರು ಸಂರಕ್ಷಿಸುತ್ತಾರೆ.
* ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯ ಜೀವಿಧಾಮಗಳು – ಕೆಲವು ಅರಣ್ಯ ಪ್ರದೇಶಗಳನ್ನು ಗುರ್ತಿಸಿ ಕಾಡಿನೊಂದಿಗೆ ವನ್ಯ ಜೀವಿಗಳನ್ನೂ ಸಂರಕ್ಷಿಸಲಾಗಿದೆ.
ಉದಾಹರಣೆ : ಬನ್ನೇರುಘಟ್ಟ, ಬಂಡೀಪುರ ಅರಣ್ಯಗಳನ್ನು ಸಂರಕ್ಷಿಸಲು ಕಾನೂನುಗಳನ್ನು ರೂಪಿಸಿ ಭದ್ರತೆಯನ್ನು ಒದಗಿಸಲಾಗಿದೆ. ಮರಗಳನ್ನು ಕಡಿಯುವುದು, ಮರಗಳ ಕಳ್ಳಸಾಗಣಿಕೆ, ವನ್ಯ ಪ್ರಾಣಿಗಳನ್ನು ಕೊಲ್ಲುವುದು ಅಪರಾಧವಾಗುತ್ತದೆ.
* ನಮ್ಮ ಹಿಂದಿನವರ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ಅರಣ್ಯ ಸಂರಕ್ಷಣೆಗೆ ಕಾರಣವಾಗಿದೆ.
ಉದಾಹರಣೆ : ದಕ್ಷಿಣ ಕನ್ನಡ ಜಿಲ್ಲೆಯ ನಾಗಬನ, ಕೊಡಗು ಜಿಲ್ಲೆಯಲ್ಲಿ ಕಂಡುಬರುವ ದೇವರ ಕಾಡು. ಇಲ್ಲಿ ಮರಗಳನ್ನು ಕಡಿಯುವುದನ್ನು ನಿಷೇಧಿಸಲಾಗಿದೆ.
ಕೆಲವು ದೊಡ್ಡ ಯೋಜನೆಗಳಿಗಾಗಿ ಅರಣ್ಯಗಳನ್ನು ಕಡಿಯುವ ಸಂದರ್ಭ ಒದಗಿದಾಗ ಅದನ್ನು ವಿರೋಧಿಸಿ ಅನೇಕ ಚಳುವಳಿಗಳು ನಡೆದಿವೆ.

ಕೆಲವು ದೊಡ್ಡ ಯೋಜನೆಗಳಿಗಾಗಿ ಅರಣ್ಯಗಳನ್ನು ಕಡಿಯುವ ಸಂದರ್ಭ ಒದಗಿದಾಗ ಅದನ್ನು ವಿರೋಧಿಸಿ ಅನೇಕ ಚಳುವಳಿಗಳು ನಡೆದಿವೆ.

ಓದಿ – ತಿಳಿ :
* ಕರ್ನಾಟಕದ ಜೀವ ವೈವಿಧ್ಯದಿಂದ ಕೂಡಿದ ಪಶ್ಚಿಮ ಘಟ್ಟದ ಅರಣ್ಯಗಳ ನಾಶವನ್ನು ತಡೆಗಟ್ಟಲು ಪಾಂಡುರಂಗ ಹೆಗಡೆಯವರು ಅಪ್ಪಿಕೊ ಚಳುವಳಿ ಪ್ರಾರಂಭಿಸಿದರು.
* ಕೇರಳದಲ್ಲಿರುವ ಜೀವ ವೈವಿಧ್ಯ ತಾಣವಾದ ಮೌನ ಕಣಿವೆಯಲ್ಲಿ ಜಲ ವಿದ್ಯುತ್ ಯೋಜನೆ ಪ್ರಾರಂಭಿಸಲು ಸರ್ಕಾರ ಯತ್ನಿಸಿದಾಗ ಪರಿಸರವಾದಿಗಳು ಮೌನ ಕಣಿವೆ ಹೋರಾಟದ ಮೂಲಕ ಯೋಜನೆಯನ್ನು ತಡೆಹಿಡಿದರು.
* ಬಿಹಾರದ ಅರಣ್ಯಗಳ ಸಂರಕ್ಷಣೆಗಾಗಿ ಪ್ರಾರಂಭವಾದ ಕಾಡನ್ನು ಉಳಿಸಿ (ಜಂಗಲ್ ಬಚಾವೊ) ಆಂದೋಲನ ಜಾರ್ಖಂಡ್ ಮತ್ತು ಒಡಿಶಾಗೂ ಹರಡಿ ಅರಣ್ಯಗಳ ಸಂರಕ್ಷಣೆಗೆ ಕಾರಣವಾಯಿತು.
* ಹಿಮಾಲಯದಲ್ಲಿನ ಅರಣ್ಯಗಳ ಸಂರಕ್ಷಣೆಗಾಗಿ ಸುಂದರ್‍ಲಾಲ್ ಬಹುಗುಣರವರು ಚಿಪ್ಕೋ ಚಳುವಳಿ ಪ್ರಾರಂಭಿಸಿ ಮರಗಳ ನಾಶವನ್ನು ತಡೆಹಿಡಿದರು.

* ಅರಣ್ಯಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಏಕೆ? ಬರೆ.

ಓದಿ-ತಿಳಿ :
ವೃಕ್ಷ ಮಾತೆ ಎಂದೇ ದೇಶದಾದ್ಯಂತ ಪ್ರಖ್ಯಾತಿ ಪಡೆದಿರುವ ಸಾಲು ಮರದ ತಿಮ್ಮಕ್ಕ ಕರ್ನಾಟಕದ ಹೆಮ್ಮೆಯ ಸುಪುತ್ರಿ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ವಿಜಯಮ್ಮ ಮತ್ತು ಚಿಕ್ಕರಂಗಯ್ಯ ದಂಪತಿಗಳ ಮಗಳಾದ ತಿಮ್ಮಕ್ಕ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದ ಬಿಕ್ಕಲ ಚಿಕ್ಕಯ್ಯನವರನ್ನು ವಿವಾಹವಾಗಿ, ಹುಲಿಕಲ್ಲಿನಲ್ಲಿ ವಾಸ್ತವ್ಯ ಹೂಡುತ್ತಾರೆ. ಆನಂತರದ ದಿನಗಳಲ್ಲಿ ತನ್ನ ಪತಿಯ ಸಹಕಾರದೊಂದಿಗೆ ತಮ್ಮ ಊರಾದ ಹುಲಿಕಲ್‍ನಿಂದ ಕುದೂರಿನವರೆಗೆ ರಸ್ತೆಯ ಇಕ್ಕೆಡೆಗಳಲ್ಲಿ ಆಲದ ಮರಗಳನ್ನು ನೆಟ್ಟು, ಪೋಷಿಸಿ ಬೆಳೆಸುತ್ತಾರೆ.
ಹೀಗೆ ಮರಗಳನ್ನು ಮಕ್ಕಳೆಂದು ಭಾವಿಸಿ ಅವುಗಳ ಪಾಲನೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಶತಾಯುಷಿ ತಿಮ್ಮಕ್ಕನವರನ್ನು ಸಾಲು ಮರದ ತಿಮ್ಮಕ್ಕ ಎಂದು ಕರೆಯಲಾಗುತ್ತಿದೆ. ಇವರ ಗೌರವಾರ್ಥವಾಗಿ ಕರ್ನಾಟಕ ಸರ್ಕಾರವು 2014-15 ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ಸಾಲು ಮರದ ತಿಮ್ಮಕ್ಕ ನ ನೆರಳು ಯೋಜನೆಯನ್ನು ಘೋಷಿಸಿ ಜಾರಿಗೆ ತಂದಿರುತ್ತದೆ.
ಪರಿಸರ ಕಾಳಜಿಗೆ ಪ್ರಶಂಸಿಸಿ ನೂರಾರು ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿರುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ –
* ನಾಡೋಜ ಪ್ರಶಸ್ತಿ – ಕನ್ನಡ ವಿಶ್ವವಿದ್ಯಾಲಯ, ಹಂಪಿ.
* ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
* ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ.
* ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ – ಭಾರತ ಸರ್ಕಾರ.
* ಪರಿಸರ ರತ್ನ ಪ್ರಶಸ್ತಿ.
ಪರಿಸರ ಸಂರಕ್ಷಣೆಯಲ್ಲಿ ನಮ್ಮೆಲ್ಲರಿಗೂ ಮಾದರಿಯಾಗಿರುವ ಸಾಲುಮರದ ತಿಮ್ಮಕ್ಕನವರ ಪರಿಸರದ ಮೇಲಿನ ಕಾಳಜಿ ಅನನ್ಯ ಹಾಗೂ ಅನುಕರಣೀಯ.

ಸಾಲು ಮರದ ತಿಮ್ಮಕ್ಕ

ಓದಿ-ತಿಳಿ :
ಪ್ರಾಣಿಗಳು ಕೂಡ ನವೀಕರಿಸಬಹುದಾದ ಸಂಪನ್ಮೂಲವಾಗಿವೆ. ಏಕೆಂದರೆ, ಅವು ಸಂತಾನೋತ್ಪತ್ತಿಯ ಮೂಲಕ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುತ್ತವೆ. ಕೆಲವೊಮ್ಮೆ ವನ್ಯ ಪ್ರಾಣಿಗಳನ್ನು ಬೇಟೆಯಾಡಿ ನಿರ್ಮೂಲನೆ ಮಾಡಿದರೆ, ಅವುಗಳ ವಂಶವೇ ಅಳಿದು ಹೋಗಿ, ನವೀಕರಿಸಲಾಗದ ಸಂಪನ್ಮೂಲವಾಗಿ ಬಿಡುತ್ತವೆ. ಇಂತಹ ಸಂಪನ್ಮೂಲವನ್ನು ರಕ್ಷಿಸಬೇಕಾಗಿರುವುದು ನಮ್ಮೆಲ್ಲರ ಹೊಣೆ.

ನೀನು ಇದುವರೆಗೂ ನವೀಕರಿಸಬಹುದಾದ ಸಂಪನ್ಮೂಲಗಳ ಬಗ್ಗೆ ತಿಳಿದೆ. ಈಗ ಕೆಲವು ನವೀಕರಿಸಲಾಗದ ಸಂಪನ್ಮೂಲಗಳ ಬಗ್ಗೆ ತಿಳಿಯೋಣ.

ಇಂಧನಗಳು

ಇಂಧನಗಳು ಉರಿದು ಶಕ್ತಿಯ ಜೊತೆಗೆ ಉಷ್ಣವನ್ನು ಬಿಡುಗಡೆ ಮಾಡುವ ವಸ್ತುಗಳಾಗಿವೆ. ಅನೇಕ ಕೆಲಸಗಳಿಗಾಗಿ ಇವುಗಳನ್ನು ಬಳಸುತ್ತೇವೆ.
ಉದಾಹರಣೆ : ವಾಹನ ಚಲಿಸುವಂತೆ ಮಾಡುವುದು, ಅಡುಗೆ ಮಾಡುವುದು.

ಲಕ್ಷಾಂತರ ವರ್ಷಗಳ ಹಿಂದೆ ಭೂಪದರದೊಳಗೆ ಹೂತು ಹೋದ (ಹುದುಗಿದ) ಸತ್ತ ಸಸ್ಯ ಮತ್ತು ಪ್ರಾಣಿಗಳ ದೇಹಗಳು ಆಕ್ಸಿಜನ್ ಇಲ್ಲದೆ ಕೊಳೆತು ಉಂಟಾಗಿರುವುದೇ ಪಳೆಯುಳಿಕೆ ಇಂಧನ. ಇದರಲ್ಲಿ ಪ್ರಮುಖವಾದವು ಎಂದರೆ ಪೆಟ್ರೋಲಿಯಮ್, ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲು.

ಪೆಟ್ರೋಲಿಯಮ್ :
ನಾವು ಬಳಸುವ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಮೇಣ ಇತ್ಯಾದಿಗಳು ಪೆಟ್ರೋಲಿಯಮ್‍ನ ಉಪ ಉತ್ಪನ್ನಗಳಾಗಿವೆ. ಪೆಟ್ರೋಲಿಯಮ್ ಎಂಬುದು ಭೂಮಿಯೊಳಗೆ ರೂಪುಗೊಂಡಿರುವ ಒಂದು ದ್ರವರೂಪದ ಖನಿಜ. ಶಿಲಾಪದರಗಳ ಅಡಿಯಲ್ಲಿ ಶೇಖರವಾದ ಸತ್ತ ಜೀವಿಗಳ ದೇಹದ ಮೇಲೆ ಬ್ಯಾಕ್ಟೀರಿಯಾಗಳ ಕ್ರಿಯೆ, ಅಧಿಕ ಉಷ್ಣತೆ ಮತ್ತು ಒತ್ತಡಗಳಿಂದ ಪೆಟ್ರೋಲಿಯಮ್ ರೂಪುಗೊಂಡಿದೆ.

ಮೇಣ, ಪ್ಯಾರಾಪಿನ್‍ಗಳಂತಹ ಪೆಟ್ರೋಲಿಯಮ್ ಉಪ ಉತ್ಪನ್ನಗಳನ್ನು ಮೇಣದ ಬತ್ತಿ, ಮರದ ಪಾಲಿಷ್, ಮುಲಾಮು, ಬಣ್ಣ, ಲಿಪ್‍ಸ್ಟಿಕ್, ರಾಸಾಯನಿಕ ಗೊಬ್ಬರ, ವಾಸಲಿನ್ ಜೆಲ್ಲಿ ಇತ್ಯಾದಿಗಳ ತಯಾರಿಕೆಯಲ್ಲಿಯೂ ಬಳಸುತ್ತಾರೆ.

ಪೆಟ್ರೋಲಿಯಮ್
ಪ್ಯಾರಾಪಿನ್‍ ಮೇಣ
ಮರದ ಪಾಲಿಷ್
ಮುಲಾಮು
ಲಿಪ್‍ಸ್ಟಿಕ್
ರಾಸಾಯನಿಕ ಗೊಬ್ಬರ
ವಾಸಲಿನ್ ಜೆಲ್ಲಿ

ನೈಸರ್ಗಿಕ ಅನಿಲ :
ನೈಸರ್ಗಿಕ ಅನಿಲವು ಪೆಟ್ರೋಲಿಯಮ್ ಬಾವಿಗಳಲ್ಲಿ ಪೆಟ್ರೋಲಿಯಮ್‍ನೊಂದಿಗೆ ದೊರೆಯುತ್ತದೆ. ಒತ್ತಡಕ್ಕೆ ಒಳಪಡಿಸಿದ ನೈಸರ್ಗಿಕ ಅನಿಲ (ಸಂಪೀಡಿತ ನೈಸರ್ಗಿಕ ಅನಿಲ)ವನ್ನು ಪೆಟ್ರೋಲ್ ಮತ್ತು ಡೀಸೆಲ್‍ಗಳ ಬದಲೀ ಇಂಧನವಾಗಿ ವಾಹನಗಳಿಗೆ ಬಳಸಲಾಗುತ್ತದೆ.

ನೈಸರ್ಗಿಕ ಅನಿಲ

ಓದಿ-ತಿಳಿ :
ಮನೆಯಲ್ಲಿ ಅಡುಗೆ ಅನಿಲ ಬಳಸುವುದನ್ನು ನೀನು ನೋಡಿರಬಹುದು. ಇದನ್ನು ದ್ರವೀಕರಿಸಿದ ನೈಸರ್ಗಿಕ ಅನಿಲ (Liquified Petroleum Gas – LPG ) ಎಂದು ಕರೆಯುತ್ತಾರೆ. ಪೆಟ್ರೋಲಿಯಮ್ ಅಥವಾ ತೇವದ ನೈಸರ್ಗಿಕ ಅನಿಲವನ್ನು ಸಂಸ್ಕರಿಸಿ ಇದನ್ನು ಪಡೆಯಲಾಗುತ್ತದೆ.

ಕಲ್ಲಿದ್ದಲು :
ಲಕ್ಷಾಂತರ ವರ್ಷಗಳ ಹಿಂದೆ ಭೂಮಿಯಲ್ಲಿ ಹೂತು ಹೋದ ಮರ ಗಿಡಗಳ ಅವಶೇಷಗಳು ಪೂರ್ಣವಾಗಿ ಕೊಳೆಯದೆ ಶಿಲಾ ಪದರಗಳ ಕೆಳಗೆ ಒತ್ತಡ ಮತ್ತು ಉಷ್ಣಕ್ಕೆ ಸಿಲುಕಿ ಕಲ್ಲಿದ್ದಲು ರೂಪಕ್ಕೆ ಪರಿವರ್ತಿತವಾಗಿವೆ. ವಿದ್ಯುತ್ ಉತ್ಪಾದಿಸಲು ಇದನ್ನು ಇಂಧನವಾಗಿ ಬಳಸುತ್ತಾರೆ. ಶಕ್ತಿಯ ಮೂಲವಾದ ಇದನ್ನು ಕೈಗಾರಿಕೆಗಳಲ್ಲೂ ಬಳಸುತ್ತಾರೆ.

ಕಲ್ಲಿದ್ದಲು

ಓದಿ-ತಿಳಿ :
ಇಂಧನಗಳ ಅತಿಯಾದ ಬಳಕೆ ಪರಿಸರಕ್ಕೆ ಹಾನಿಕರ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಸೌರಶಕ್ತಿಯಂತಹ ಶಕ್ತಿ ಮೂಲಗಳನ್ನು ಪಳೆಯುಳಿಕೆ ಇಂಧನಗಳಿಗೆ ಪರ್ಯಾಯವಾಗಿ ಬಳಕೆ ಮಾಡುವ ಪ್ರಯತ್ನಗಳು ಹೆಚ್ಚಾಗುತ್ತಿವೆ.

ಖನಿಜ ಸಂಪನ್ಮೂಲಗಳು

ಖನಿಜಗಳು ನೈಸರ್ಗಿಕ ಪ್ರಕ್ರಿಯೆಗಳಿಂದ ದೀರ್ಘಾವಧಿಯಲ್ಲಿ ಭೂಮಿಯಲ್ಲಿ ರೂಪುಗೊಳ್ಳುತ್ತವೆ. ಅವು ಶಿಲೆಗಳಲ್ಲಿ ದೊರೆಯುತ್ತವೆ. ಅದಿರಿನ ರೂಪದಲ್ಲಿ ಹೊರತೆಗೆದ ಖನಿಜಗಳನ್ನು ಕಾರ್ಖಾನೆಗಳಲ್ಲಿ ಶುದ್ಧೀಕರಿಸಿ, ಲೋಹಗಳನ್ನು ಬೇರ್ಪಡಿಸಲಾಗುತ್ತದೆ.
ಉದಾಹರಣೆ : ಕಬ್ಬಿಣದ ಅದಿರಿನಿಂದ ಕಬ್ಬಿಣವನ್ನು ಪಡೆಯುವುದು.
ಅಲ್ಯುಮಿನಿಯಮ್, ತಾಮ್ರ, ಬೆಳ್ಳಿ ಇತ್ಯಾದಿಗಳು ಖನಿಜಗಳಿಂದಲೇ ದೊರೆಯುತ್ತವೆ.

ಕಬ್ಬಿಣದ ಅದಿರು
ಅಲ್ಯುಮಿನಿಯಮ್
ತಾಮ್ರ
ಬೆಳ್ಳಿ

ಪದ ಸಹಾಯ :
ಖನಿಜ : ಇದು ನಿಸರ್ಗದಲ್ಲಿ ದೊರೆಯುವ, ಬಹುಪಯೋಗಿ ವಸ್ತುವಾಗಿದ್ದು ರಾಸಾಯನಿಕ ಸೂತ್ರದಿಂದ ಹೇಳಬಹುದಾದ ಸಂಯೋಜನೆಯನ್ನು ಹೊಂದಿರುತ್ತದೆ.

ಚಿತ್ರಗಳನ್ನು ನೋಡಿ ಖನಿಜಗಳ ಉಪಯೋಗ ತಿಳಿಸು.

ನಿಮ್ಮ ಮನೆಯಲ್ಲಿ ಯಾವ ಯಾವ ಖನಿಜದ ಉತ್ಪನ್ನಗಳನ್ನು ಬಳಸುವಿರಿ ಎಂಬುದನ್ನು ತರಗತಿಯಲ್ಲಿ ವಿವರಿಸು.

ಓದಿ-ತಿಳಿ :
ಖನಿಜಗಳು ನೈಸರ್ಗಿಕವಾಗಿ ಮತ್ತೆ ಭರ್ತಿಯಾಗಲು ಭೂಮಿಯ ಒಳಗೆ ನಡೆಯುವ ವೈಜ್ಞಾನಿಕ ಪ್ರಕ್ರಿಯೆಗಳನ್ನು ಅವಲಂಬಿಸಿವೆ. ಲಕ್ಷಾಂತರ ವರ್ಷಗಳ ದೀರ್ಘಾವಧಿಯಲ್ಲಿ ಖನಿಜಗಳು ರೂಪುಗೊಳ್ಳುತ್ತವೆ. ಆದ್ದರಿಂದ ಇವುಗಳನ್ನು ಮಿತವಾಗಿ ಬಳಸಬೇಕು.

ಪಟ್ಟಿಯಲ್ಲಿ ಕೊಟ್ಟಿರುವ ನೈಸರ್ಗಿಕ ಸಂಪನ್ಮೂಲಗಳ ಉಪಯೋಗಗಳನ್ನು ಬರೆ.

ನಮ್ಮ ಅಗತ್ಯಗಳ ಪೂರೈಕೆಗೆ ಅವಶ್ಯಕವಾಗಿರುವ ಈ ಸಂಪನ್ಮೂಲಗಳು ಎಲ್ಲಾ ಪ್ರದೇಶಗಳಲ್ಲೂ ಒಂದೇ ಸಮನಾಗಿ ಲಭ್ಯವಿರುವುದಿಲ್ಲ. ಲಭ್ಯವಿರುವ ಸಂಪನ್ಮೂಲಗಳ ಗುಣಮಟ್ಟದಲ್ಲಿಯೂ ಕೂಡ ವ್ಯತ್ಯಾಸವಿರುತ್ತದೆ. ನಮ್ಮ ಅಗತ್ಯಗಳಿಗಿಂತ ಹೆಚ್ಚಾಗಿ ಈ ಸಂಪನ್ಮೂಲಗಳನ್ನು ಅತಿಯಾಗಿ ಬಳಕೆ ಮಾಡುತ್ತಿರುವುದರಿಂದ ಇತ್ತೀಚೆಗೆ ಇವುಗಳ ಅಭಾವ (ಕೊರತೆ) ಕಂಡು ಬರುತ್ತಿದೆ. ಇವುಗಳ ಬಳಕೆ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಕೆಲವು ಸಂಪನ್ಮೂಲಗಳು ಸಿಗದೇ ಇರಬಹುದು. ಆದ್ದರಿಂದ ಇವುಗಳನ್ನು ಮಿತವಾಗಿ ಬಳಸಬೇಕು ಮತ್ತು ಅವಕಾಶವಿದ್ದಲ್ಲಿ ಪುನರ್ ಬಳಕೆ ಮಾಡುವುದರ ಮೂಲಕ ಉಳಿಸಿಕೊಳ್ಳಬೇಕು.

ಓದಿ-ತಿಳಿ ∙:
* ನೈಸರ್ಗಿಕ ಸಂಪನ್ಮೂಲಗಳು ನಮ್ಮ ಅಗತ್ಯಗಳಿಗಾಗಿಯೇ ಹೊರತು ದುರಾಸೆಗಳನ್ನು ಪೂರೈಸಲು ಅಲ್ಲ.
* ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಿ, ಪರಿಸರದ ಸಮತೋಲನವನ್ನು ಕಾಪಾಡಬೇಕು.

ನಿನಗಿದು ಗೊತ್ತೆ?
* ಹಿಂದೆ ಪರ್ವತ, ಕಾಡು, ಖನಿಜ ನಿಕ್ಷೇಪ, ಪ್ರಾಣಿ, ಮಣ್ಣು, ನೀರು ಇತ್ಯಾದಿ ನೈಸರ್ಗಿಕ ಅಂಶಗಳನ್ನು ಸಂಪನ್ಮೂಲಗಳೆಂದು ಪರಿಗಣಿಸಲಾಗುತ್ತಿತ್ತು. ಈಗ ಅದು ಬದಲಾಗಿ ಹೆಚ್ಚು ವ್ಯಾಪಕ ಅರ್ಥವನ್ನು ಹೊಂದಿದೆ. ಸಂಪನ್ಮೂಲ ಎಂಬ ಪದದ ಅರ್ಥವು ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿದೆ.
* ಒಂದು ವಸ್ತುವನ್ನು ಒಂದು ಕಾಲದಲ್ಲಿ ಸಂಪನ್ಮೂಲವೆಂದು ಪರಿಗಣಿಸಿರುವುದು, ಮತ್ತೊಂದು ಕಾಲದಲ್ಲಿ ಹಾಗೆ ಪರಿಗಣಿಸಲಾಗುವುದಿಲ್ಲ. ಉದಾಹರಣೆಗೆ : ನೈಸರ್ಗಿಕ ಅನಿಲ ಈಗ ಸಂಪನ್ಮೂಲ. ಒಂದು ಸಾವಿರ ವರ್ಷಗಳ ಹಿಂದೆ ಅದು ಜನರಿಗೆ ಸಂಪನ್ಮೂಲವಾಗಿರಲಿಲ್ಲ.
* ಎಲ್ಲಾ ಕಡೆಗೂ ದೊರೆಯುವ ಸಂಪನ್ಮೂಲವಾದ ಸೂರ್ಯನ ಬೆಳಕು, ನೀರು, ಮಣ್ಣನ್ನು ಸರ್ವವ್ಯಾಪಿ ಸಂಪನ್ಮೂಲವೆನ್ನುತ್ತಾರೆ.
* ಕಾಡು ಸಂಪನ್ಮೂಲಗಳನ್ನು ಉರುವಲು ಅಥವಾ ಮರಮುಟ್ಟುಗಳಿಗೆ ಉಪಯೋಗಿಸಿದರೆ ಪುನಃ ಉಪಯೋಗಿಸಲು ಸಾಧ್ಯವಿಲ್ಲ. ಆಗ ಕಾಡುಗಳು ನವೀಕರಿಸಲಾಗದ ಸಂಪನ್ಮೂಲಗಳಾಗುತ್ತದೆ. ಮರಗಳನ್ನು ಪುನಃ ಪುನಃ ಬೆಳೆಸುವುದು, ಮಿತವಾಗಿ ಬಳಸುವುದರ ಮೂಲಕ ನವೀಕರಿಸಬಹುದಾದ ಸಂಪನ್ಮೂಲಗಳಾಗಿ ಪರಿವರ್ತಿಸಬಹುದು.
* ಸಮುದ್ರದ ಉಪ್ಪು ನೀರನ್ನು ಕುಡಿಯಲು ಯೋಗ್ಯಮಾಡುವ ವಿಧಾನಗಳು ಈಗ ಬಳಕೆಯಲ್ಲಿವೆ. ಆದರೆ ಅದು ದುಬಾರಿ ವೆಚ್ಚದ್ದಾಗಿದೆ.
* ಮಾನವನಲ್ಲಿ ಹುದುಗಿದ ಬುದ್ಧಿಶಕ್ತಿ, ಕ್ರಿಯಾಶೀಲ ಮನಸ್ಸು, ಪರಿಣತಿ, ಸೌಂದರ್ಯ ಪ್ರಜ್ಞೆ ಮೊದಲಾದ ಅನೇಕ ಸಾಮರ್ಥ್ಯಗಳು ಇರುವುದರಿಂದ ಆತನು ಸಹ ಒಂದು ರೀತಿಯ ಸಂಪನ್ಮೂಲ ಎನ್ನಬಹುದು.

ಸಂವೇದ ವಿಡಿಯೋ ಪಾಠಗಳು

ನೈಸರ್ಗಿಕ ಸಂಪನ್ಮೂಲಗಳು – 5ನೇ ತರಗತಿ ಪರಿಸರ ಅಧ್ಯಯನ | Part 1
ನೈಸರ್ಗಿಕ ಸಂಪನ್ಮೂಲಗಳು – 5ನೇ ತರಗತಿ ಪರಿಸರ ಅಧ್ಯಯನ | Part 2

ಪೂರಕ ವಿಡಿಯೋಗಳು

ನೈಸರ್ಗಿಕ ಸಂಪನ್ಮೂಲಗಳು | ಪರಿಸರ ಅಧ್ಯಯನ | 5ನೇ ತರಗತಿ |ಪಾಠ5| Naisargika sampanmulagalu| 5th Std EVS Part 1
ನೈಸರ್ಗಿಕ ಸಂಪನ್ಮೂಲಗಳು | ಪರಿಸರ ಅಧ್ಯಯನ | 5ನೇ ತರಗತಿ | ಪಾಠ5 | Naisargika sampanmulagalu| 5th Std EVS Part 2
ನೈಸರ್ಗಿಕ ಸಂಪನ್ಮೂಲಗಳು | ಪರಿಸರ ಅಧ್ಯಯನ | 5ನೇ ತರಗತಿ |ಪಾಠ5| Naisargika sampanmulagalu| 5th Std EVS Part 3

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.