ನೀ ಹೋದ ಮರುದಿನ – ಪದ್ಯಭಾಗ-3
– ಚೆನ್ನಣ್ಣ ವಾಲೀಕಾರ
ಪ್ರವೇಶ : ಹೊಸಗನ್ನಡ ಸಾಹಿತ್ಯವು ನವೋದಯ, ಪ್ರಗತಿಶೀಲ, ದಲಿತ-ಬಂಡಾಯ, ಮಹಿಳಾ ಸಾಹಿತ್ಯ ಎಂಬ ವಿವಿಧ ದೃಷ್ಠಿಕೋನಗಳಲ್ಲಿ ಬೆಳೆದು ಬಂದಿದೆ. ದಲಿತರು ತಮ್ಮ ಬದುಕಿನ ಶೋಷಣೆ ನೋವುಗಳನ್ನು ಹಾಡಾಗಿ ಹೊಮ್ಮಿಸಿದ್ದೆ ದಲಿತ ಸಾಹಿತ್ಯ. ಸ್ವಾತಂತ್ರ್ಯ, ಸಂವಿಧಾನ ಬಂದರೂ ನಮ್ಮ ಬದುಕು ಇನ್ನೂ ಬದಲಾಗಲಿಲ್ಲ ಎಂಬ ನೋವಿದೆ. ಬದಲಾವಣೆಯ ಗಾಳಿ ಬೀಸಲಿ ಬದುಕು ಹಸನಾಗಲಿ ಎಂಬ ಆಶಯವನ್ನು ಈ ಕವಿತೆ ಹೊಂದಿದೆ.
ನೀ ಹೋದ ಮರುದಿನ ಮೊದಲಂಗೆ ನಮ್ ಬದುಕು
ಹಾಗ್ಯಾದೋ ಬಾಬಾ ಸಾಹೇಬ
ನಿನ್ನಂಗ ದುಡಿದವರು ಕಳಕಳಿಯ ಪಡುವವರು
ಇನ್ನುತನ ಬರಲಿಲ್ಲ ಒಬ್ಬ || ನೀ ಹೋದ ||
ಪ್ರತಿನಿತ್ಯ ಎದ್ದಾಗ ನಮಸುದ್ದಿ ಸಂಭ್ರಮವು
ಕೇಕುವುದು ತಪ್ಪಿಲ್ಲ ನಮಗ ||
ಹೋದ ಹೋದಲ್ಲ ಮೇಲವರ ಆಟಗಳು
ಉರಿ ಹಚ್ಚಿ ಬಿಡುತ್ತಾರೆ ಒಳಗೆ || ನೀ ಹೋದ ||
ಎಲ್ಲಿ ಕೇಳಿದರಲ್ಲಿ ಬೂಟುಗಾಲಿನ ಸದ್ದು
ತರತರದ ನೋವುಗಳು ನಮಗ ||
ತಮ್ಮಂಗೆ ಇರದಿದ್ರೆ ತಲೆ ಕಡಿದು ಹಾಕುವರು
ಹೆಸರೀಗೆ ಸ್ವಾತಂತ್ರ್ಯ ನಮಗ || ನೀ ಹೋದ ||
ಕೈಕಾಲು ಕಿವಿ ಮೂಗು ಮೈಮನಸು ತಲೆ ಕಣ್ಣು
ಕಳಕೊಂಡ ಬರಡು ಗಿಡ ನಾವು ||
ಮೈ ತುಂಬಾ ಮನತುಂಬಾ ಸಿಕ್ಕವರ ಮುಖಮುದ್ರೆ
ಚೀರಾಟ ಹಾರಾಟ ಸಾವೋ || ನೀ ಹೋದ ||
ಹೋಗ್ಬಾರೋ ದಾರಿಯಲಿ ಅಡುಗಲ್ಲುಗಳು ಸೇರಿ
ಮುಳುಕಲ್ಲು ಹಾಸ್ಯಾವೋ ಪೂರ ||
ಹೆಚ್ಚಿಗೆ ಬೆಳೆದವರ ಉಳಿದವರ ಜೀವಗಳ
ಹಗಲಾಗ ಹೊಡೆದಾರ ಟಾರ || ನೀ ಹೋದ ||
ಎಷ್ಟಂತ ಉರಿತಾರ ಎಷ್ಟಂತ ಹರಿತಾರ
ತಾಳದಕ್ಕೂ ಮಿತಿಯುಂಟು ಇಲ್ಲಿ ||
ತಾಳಿ ತಾಳಿಯೂ ಒಮ್ಮೆ ಚೇಳಾಗಿ ಕುಟುಕುವನು
ಸಾಮಾನ್ಯನಲ್ಲೋ ಬಡಜೀವಿ || ನೀ ಹೋದ ||
ದುಡಿದುಂಡು ಹುಟ್ಟಿರಲು ಕತ್ತಲಿರುವಾತನಕ
ಕೊತ್ತಿಗಳು ಹೊತ್ತಾವ ಜೋರಾ ||
ರೊಡಿಗಿದ್ದವರೆಲ್ಲ ಗ್ವಾಡ್ಯಾಗ ಕುಂತಾರ
ಇನ್ನಿಲ್ಲ ನಮ ದಾರಿ ದೂರಾ || ನೀ ಹೋದ ||
ಬಾಬಾಸಾಹೇಬರೇನು ಹುಚ್ಚರಲ್ಲವೆ ಅಲ್ಲ
ಗಾಂಧಿಜೊತೆ ಇರಲಿಲ್ಲ ಸುಮ್ಮ ||
ಅಷ್ಟು ಒದ್ದಾಡಿದಕೆ ಇಂಗೈತೆ ನಮ್ ಬದುಕು
ತಿಳಿಯೀತೆ ಈಗ್ಲಾದ್ರು ತಮ್ಮ || ನೀ ಹೋದ ||
ಕವಿ ಕೃತಿ ಪರಿಚಯ:
ಡಾ. ಚೆನ್ನಣ್ಣ ವಾಲಿಕಾರರವರು 1943 ರಂದು ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಶಂಕರವಾಡಿಯಲ್ಲಿ ಜನಿಸಿದರು. ತಂದೆ : ಧಳಪ್ಪ ವಾಲಿಕಾರ, ತಾಯಿ : ಸಾಬವ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ, ಪಿಹೆಚ್.ಡಿ ಪಡೆದ ಇವರು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.
ದಲಿತ-ಬಂಡಾಯಯದ ಹಿನ್ನೆಲೆಯಲ್ಲಿ ಮರದ ನೀರಿನ ಗಾಳಿ, ಪ್ಯಾಂಥರ್ಸ್ ಪದ್ಯಗಳು, ಧಿಕ್ಕಾರದ ಹಾಡುಗಳು ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ಕಪ್ಪು ಕತೆಗಳು, ಹೆಪ್ಪುಗಟ್ಟಿದ ಸಮುದ್ರ, ಕುತ್ತದಲಿ ಕುದ್ದವರ ಕತೆಗಳು ಎಂಬ ಕಥಾಸಂಕಲನಗಳನ್ನು, ವ್ಯೋಮ ವ್ಯೋಮ, ಸುನೀತಂಗಳ ಸುಖಾವ್ಯಾಮೃತ ಎಂಬ ಮಹಾಕಾವ್ಯಗಳನ್ನು, ಟೊಂಕದ ಕೆಳಗಿನ ಜನ, ನರಭಕ್ಷಕ ರಾಜನ ಕಥೆ, ತಲೆ ಹಾಕುವವರು ಎಂಬ ನಾಟಕಗಳೊಂದಿಗೆ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಗೌರವ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಕವಿತೆಯನ್ನು ಇವರ ಸಮಗ್ರ ಕಾವ್ಯ ಸಂಪುಟದಿಂದ ಆರಿಸಿಕೊಳ್ಳಲಾಗಿದೆ.
ಪದಗಳ ಅರ್ಥ
ಬರಡು – ಸತ್ವಹೀನ;
ಕೊತ್ತಿಗಳು – ಬೆಕ್ಕುಗಳು;
ಟಾರ – ಡಾಂಬರು.
ವಿವರ ತಿಳಿಯಿರಿ :
ಬಾಬಾ ಸಾಹೇಬ – ಡಾ. ಬಿ. ಆರ್. ಅಂಬೇಡ್ಕರ್
ಸಂವೇದ ವಿಡಿಯೋ ಪಾಠಗಳು
ಪೂರಕ ವಿಡಿಯೋಗಳು
ಪದ್ಯದ ಮಾದರಿ ಗಾಯನ
ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ
ವ್ಯಾಕರಣ ಮಾಹಿತಿ – ಲೇಖನ ಚಿಹ್ನೆಗಳ ಬಳಕೆ.
ಕೆಳಗಿನ ವಾಕ್ಯಗಳನ್ನು ಗಮನಿಸಿರಿ :
* ಒಂದಾನೊಂದು ಕಾಲದಲ್ಲಿ ಒಂದು ದಟ್ಟವಾದ ಅರಣ್ಯವಿತ್ತು.
* ಲಘುಪತನಕ ಮರದ ಮೇಲಕ್ಕೆ ಹಾರಿತು.
ಇಲ್ಲಿ ವಾಕ್ಯದ ಕೊನೆಯಲ್ಲಿ ಪೂರ್ಣವಿರಾಮ ಚಿಹ್ನೆ (.) ಬಳಕೆಯಾಗಿದೆ. ಇದನ್ನು ‘ಬಿಂದು’ ಎಂದೂ ಕರೆಯುತ್ತಾರೆ. ಇದು ವಾಕ್ಯದ ಪೂರ್ಣಾರ್ಥ ಕ್ರಿಯೆಯನ್ನು ಸೂಚಿಸುತ್ತದೆ. ಇದು ವಾಕ್ಯದ ಕೊನೆಯಲ್ಲಿ ಬಳಕೆಯಾಗುತ್ತದೆ.
* ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ.
* ಅಷ್ಟು ಸಾಕು; ಮುಂದಿನದು ನನಗೆ ಬಿಡು.
ಇಲ್ಲಿ ವಾಕ್ಯದ ನಡುವೆ ‘ಅರ್ಧವಿರಾಮ ಚಿಹ್ನೆ’ (;) ಬಳಕೆಯಾಗಿದೆ. ಇದು ಪ್ರಧಾನ ವಾಕ್ಯಗಳಲ್ಲಿನ ಉಪವಾಕ್ಯಗಳ ಅಂತ್ಯದಲ್ಲಿ ಬಳಕೆಯಾಗುತ್ತದೆ.
* ಮಂಧರಕ, ಹಿರಣ್ಯರೋಮ, ಲಘುಪತನಕ ಮತ್ತು ಚಿತ್ರಾಂಗ ನಾಲ್ವರು ಗೆಳೆಯರು.
* ಬೇಡನು ಕೂಡಲೆ ಮಂಧರಕನನ್ನೂ ಬಲೆಯನ್ನೂ ನೆಲಕ್ಕಿಳಿಸಿ ಹೊರಟನು.
ಇಲ್ಲಿ ವಾಕ್ಯದ ನಡುನಡುವೆ ಅಲ್ಪವಿರಾಮ ಚಿಹ್ನೆ (,) ಬಳಕೆಯಾಗಿದೆ. ಇದು ಸಂಬೋಧನೆಯ ಮುಂದೆ, ಕರ್ತೃ, ಕರ್ಮ, ಕ್ರಿಯಾಪದಗಳಿಗೆ ವಿಶೇಷಣಗಳು ಬಂದಾಗ ಬಳಕೆಯಾಗುತ್ತದೆ. ಹಾಗೂ ಕೊನೆಯ ಪದವನ್ನು ಬಿಟ್ಟು ಉಳಿದ ಪದಗಳ ಮುಂದೆ ಅಗತ್ಯಕ್ಕೆ ಹೊಂದಿಕೊಂಡು ಬಳಕೆಯಾಗುತ್ತದೆ.
* ನೀನು ಏಕೆ ಓಡೋಡಿ ಬಂದೆ?
* ಯಾರಿವರು? ಎಲ್ಲಿಂದ ಬಂದರು?
ಇಲ್ಲಿ ವಾಕ್ಯದ ಕೊನೆಯಲ್ಲಿ ‘ಪ್ರಶ್ನಾರ್ಥಕ ಚಿಹ್ನೆ’ (?) ಬಳಕೆಯಾಗಿದೆ. ಇದು ಪ್ರಶ್ನೆ ಕೇಳುವ ಸಂದರ್ಭದಲ್ಲಿ ಪದ ಅಥವಾ ವಾಕ್ಯದ ಅಂತ್ಯದಲ್ಲಿ ಬಳಕೆಯಾಗುತ್ತದೆ.
* ಅಬ್ಬಾ! ಎಂಥ ಸೊಗಸಾದ ಹಾಡು!
* ಆಹಾ! ಎಂಥ ಸುಂದರ ದೃಶ್ಯ!
ಇಲ್ಲಿರುವ ವಾಕ್ಯದಲ್ಲಿ ‘ಭಾವಸೂಚಕ ಚಿಹ್ನೆ’ (!) ಬಳಕೆಯಾಗಿದೆ. ಇದನ್ನು ‘ಆಶ್ಚರ್ಯಸೂಚಕ ಚಿಹ್ನೆ’ ಎಂದೂ ಹೇಳುತ್ತಾರೆ. ಇದು ಭಾವನೆಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಬಳಕೆಯಾಗುತ್ತದೆ.
ಸಂದರ್ಭಕ್ಕೆ ತಕ್ಕಂತೆ ಬರವಣಿಗೆಯಲ್ಲಿ ಲೇಖನ ಚಿಹ್ನೆಗಳನ್ನು ಬಳಸಬೇಕು. ಇದರಿಂದ ಸ್ಪಷ್ಟವಾಗಿ ಓದಲು, ಅರ್ಥ ತಿಳಿಯಲು ಸಾಧ್ಯವಾಗುತ್ತದೆ. ಇನ್ನೂ ಕೆಲವು ಲೇಖನ ಚಿಹ್ನೆಗಳಿವೆ. ಅವುಗಳ ವಿವರಣೆಯನ್ನು ಮುಂದೆ ತಿಳಿಯೋಣ.
Thanks for sharing. I read many of your blog posts, cool, your blog is very good.