ನಮ್ಮ ಸುತ್ತಲಿನ ಬದಲಾವಣೆಗಳು – ಅಧ್ಯಾಯ – 6
ನಿಮ್ಮ ಸುತ್ತಮುತ್ತಲಿರುವ ವಸ್ತುಗಳನ್ನು ಬದಲಾವಣೆ ಮಾಡುವ ಮಾಂತ್ರಿಕ ಶಕ್ತಿಯನ್ನು ತಕ್ಷಣ ನೀವು ಪಡೆದರೆ ಎಂತಹ ಖುಷಿಯನ್ನು ಅನುಭವಿಸುವಿರಿ! ಯಾವೆಲ್ಲ ವಸ್ತುಗಳನ್ನು ಬದಲಾಯಿಸಲು ನೀವು ಇಚ್ಛಿಸುತ್ತೀರಿ?
ನಮ್ಮಲ್ಲಿ ಮಾಂತ್ರಿಕ ಶಕ್ತಿ ಇಲ್ಲದಿರಬಹುದು ಆದರೆ ನಮ್ಮ ಸುತ್ತಮುತ್ತಲಿನ ಕೆಲವು ವಸ್ತುಗಳನ್ನು, ಬಹುಶಃ ಬಹಳಷ್ಟು ವಸ್ತುಗಳನ್ನು ನಾವು ಬದಲಾಯಿಸಬಲ್ಲೆವು. ಯಾವುದೇ ಮಾಂತ್ರಿಕ ಶಕ್ತಿ ಇಲ್ಲದೆ ಬದಲಾವಣೆ ಮಾಡಬಹುದಾದ ನಿಮ್ಮ ಸುತ್ತಲಿನ ಕೆಲವು ವಸ್ತುಗಳನ್ನು ಪಟ್ಟಿ ಮಾಡುವಿರಾ?
ನಮ್ಮ ಸುತ್ತಲೂ ತಮ್ಮಷ್ಟಕ್ಕೇ ತಾವೇ ಕೆಲವು ಬದಲಾವಣೆಗಳು ಆಗುತ್ತಿರುತ್ತವೆ. ಕಾಲಕಾಲಕ್ಕೆ ಹೊಲಗದ್ದೆಗಳಲ್ಲಿ ಬೆಳೆಗಳು ಬದಲಾಗುತ್ತವೆ. ಕೆಲವೊಮ್ಮೆ ಎಲೆಗಳು ಮರದಿಂದ ಬೀಳುತ್ತವೆ, ಬಣ್ಣ ಬದಲಾಗುತ್ತದೆ ಮತ್ತು ಒಣಗುತ್ತದೆ. ಹೂಗಳು ಅರಳುತ್ತವೆ ಮತ್ತು ಬಾಡುತ್ತವೆ. ನಿಮ್ಮ ಶರೀರದಲ್ಲಿ ಏನಾದರೂ ಬದಲಾವಣೆಗಳು ಕಂಡುಬರುತ್ತವೆಯೆ? ನಿಮ್ಮ ಉಗುರುಗಳು ಬೆಳೆಯುತ್ತವೆ, ನಿಮ್ಮ ಕೂದಲೂ ಬೆಳೆಯುತ್ತದೆ. ನೀವು ಬೆಳೆದಂತೆಲ್ಲ ನಿಮ್ಮ ಎತ್ತರ ಹಾಗೂ ತೂಕ ಹೆಚ್ಚಾಗುತ್ತದೆ. ಅನೇಕ ಬದಲಾವಣೆಗಳು ನಿಮ್ಮ ಸುತ್ತಲೂ ಯಾವಾಗಲೂ ನಡೆಯುತ್ತಿವೆ ಎಂದು ನಿಮಗೆ ಮೊದಲೇ ತಿಳಿದಿತ್ತೇ?
ಕೆಲವು ಬದಲಾವಣೆಗಳನ್ನು ಗುಂಪು ಮಾಡಬಹುದೆ?
ವಿವಿಧ ಬದಲಾವಣೆಗಳನ್ನು ನಾವು ಹೇಗೆ ಗುಂಪು ಮಾಡಬಹುದು? ಅವುಗಳ ನಡುವೆ ಇರುವ ಕೆಲವು ಹೋಲಿಕೆಗಳನ್ನು ಗುರುತಿಸಿದಾಗ ಅದು ನಮಗೆ ಸಹಾಯವಾಗಬಲ್ಲದು.
6.1 ಈ ಎಲ್ಲಾ ಬದಲಾವಣೆಗಳನ್ನು ಯಾವಾಗಲೂ ಪರಾವರ್ತಗೊಳಿಸಬಹುದೇ?
ಚಟುವಟಿಕೆ 1
ಒಂದು ಬಲೂನನ್ನು ತೆಗೆದುಕೊಂಡು ಊದಿ. ಅದು ಒಡೆದು ಹೋಗದಂತೆ ಎಚ್ಚರವಹಿಸಿ. ಬಲೂನಿನ ಗಾತ್ರ ಮತ್ತು ಆಕಾರದಲ್ಲಿ ಬದಲಾವಣೆಯಾಯಿತು (ಚಿತ್ರ 6.1). ಈಗ ಬಲೂನಿನಲ್ಲಿರುವ ಗಾಳಿಯನ್ನು ಹೊರ ಬಿಡಿ.
ಚಟುವಟಿಕೆ 2
ಒಂದು ಕಾಗದದ ಚೂರನ್ನು ತೆಗೆದುಕೊಂಡು ಚಿತ್ರ 6.2ರಲ್ಲಿ ತೋರಿಸಿರುವಂತೆ ಮಡಚಿ. ನೀವೀಗ ಕಾಗದದ ಹಾಳೆಯನ್ನು ಆಟಿಕೆಯ ವಿಮಾನವಾಗಿ ಬದಲಾಯಿಸಿದ್ದೀರಿ. ಇಂತಹ ವಿಮಾನವನ್ನು ಹಾರಿಸಿ ನೀವು ತುಂಬಾ ಖುಷಿ ಪಟ್ಟಿರಬಹುದು. ಅದು ನಿಮಗೆ ಸಾಕೆನಿಸಿದಾಗ ಮಡಚಿರುವ ಕಾಗದವನ್ನು ವಾಪಸ್ಸು ಬಿಡಿಸಿ.
ಚಟುವಟಿಕೆ 3
ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದರಿಂದ ಉಂಡೆಯನ್ನು ತಯಾರಿಸಿ ರೊಟ್ಟಿಯನ್ನು ಲಟ್ಟಿಸಲು ಪ್ರಯತ್ನಿಸಿ (ಚಿತ್ರ 6.3). ಅದರ ಆಕಾರವು ನಿಮಗೆ ಇಷ್ಟವಾಗದಿದ್ದರೆ ಅದನ್ನು ಪುನಃ ನೀವು ಉಂಡೆಯಾಗಿ ಬದಲಾಯಿಸಬಹುದು.
ಈಗ ಚಟುವಟಿಕೆ 1, 2 ಮತ್ತು 3ರಲ್ಲಿ ನೀವು ಗಮನಿಸಿದ ಮೂರು ಬದಲಾವಣೆಗಳ ಬಗ್ಗೆ ಯೋಚಿಸಿ. ಅವುಗಳಲ್ಲಿರುವ ಸಾಮಾನ್ಯ ಅಂಶ ಏನು?
ಬಲೂನನ್ನು ಹಿಂದಿದ್ದ ಆಕಾರ ಮತ್ತು ಗಾತ್ರಕ್ಕೆ ತರಲು ಸಾಧ್ಯವೆ?
ವಿಮಾನವನ್ನು ತಯಾರಿಸುವ ಮೊದಲು ಮತ್ತು ತಯಾರಿಸಿದ ನಂತರ ಕಾಗದದ ಗಾತ್ರವು ಮೊದಲಿನಂತೇ ಇದೆಯೇ?
ಹಿಟ್ಟಿನ ಉಂಡೆಯನ್ನು ಮತ್ತೆ ಪಡೆಯಲು ಸಾಧ್ಯವಾಯಿತೆ?
ನಿಮ್ಮ ತೀರ್ಮಾನವೇನು? ಈ ಮೂರು ಚಟುವಟಿಕೆಗಳಲ್ಲಿ ಪ್ರತಿಯೊಂದು ಚಟುವಟಿಕೆಯನ್ನು ಪ್ರಾರಂಭಿಸಿದಾಗ ಇದ್ದ ಪದಾರ್ಥವನ್ನು ಮರಳಿ ಪಡೆಯಲು ಸಾಧ್ಯವೆ? ನಿಮ್ಮ ಉತ್ತರ ಹೌದು, ಎಂದಾದಲ್ಲಿ ಈ ಚಟುವಟಿಕೆಗಳಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಪರಾವರ್ತ(reverse)ಗೊಳಿಸಬಹುದು ಎಂದರ್ಥ. ಕೆಲವು ಬದಲಾವಣೆಗಳೊಂದಿಗೆ ಇದೇ ಚಟುವಟಿಕೆಗಳನ್ನು ಈಗ ಪುನರಾವರ್ತಿಸೋಣ.
ಚಟುವಟಿಕೆ 4
ಚಟುವಟಿಕೆ 1 ರಲ್ಲಿ ಬಳಸಿದ ಅದೇ ಬಲೂನನ್ನು ತೆಗೆದುಕೊಳ್ಳಿ ಅದನ್ನು ಪೂರ್ಣಗಾತ್ರಕ್ಕೆ ಊದಿ ಅದರ ಬಾಯಿಯನ್ನು ದಾರದಿಂದ ಬಿಗಿಯಾಗಿ ಕಟ್ಟಿ. ನಿಮ್ಮ ಪೆನ್ಸಿಲ್‍ನ ಮೊನಚು ತುದಿಯಿಂದ ಅದನ್ನು ಚುಚ್ಚಿ. ಅರೇ! ಅದು ಒಡೆದು ಹೋಯಿತು.
ಚಟುವಟಿಕೆ 5
ಚಟುವಟಿಕೆ 2 ರಲ್ಲಿ ಬಳಸಿದ ಅದೇ ಕಾಗದವನ್ನು ತೆಗೆದುಕೊಳ್ಳಿ. ಅದರ ಮೇಲೆ ವಿಮಾನವನ್ನು ಚಿತ್ರಿಸಿ, ಬಾಹ್ಯ ರೇಖೆಯ ಉದ್ದಕ್ಕೂ ಕತ್ತರಿಸಿ (ಚಿತ್ರ 6.4).
ಚಟುವಟಿಕೆ 6
ಹಿಟ್ಟಿನ ಉಂಡೆಯಿಂದ ಪುನಃ ರೊಟ್ಟಿಯನ್ನು ಲಟ್ಟಿಸಿ, ಕಾವಲಿಯ ಮೇಲಿಟ್ಟು ಸುಡಿ (ಚಿತ್ರ 6.5).
ಒಂದು ವೇಳೆ ಚಟುವಟಿಕೆ 3ರ ನಂತರ ನಿಮಗೆ ಮತ್ತದೇ ಮೂರು ಪ್ರಶ್ನೆಗಳನ್ನು ಕೇಳಿದರೆ ನಿಮ್ಮ ಉತ್ತರ ಏನಾಗಿರುತ್ತದೆ?
ಚಟುವಟಿಕೆ 4, 5 ಮತ್ತು 6ರಲ್ಲಿನ ಬದಲಾವಣೆಗಳನ್ನು ಪರಾವರ್ತಗೊಳಿಸಲಾಗುವುದಿಲ್ಲ ಎಂದು ನೀವು ನೋಡಿದಿರಿ.
ನೀವು ಪೆನ್ಸಿಲ್ ಮತ್ತು ರಬ್ಬರನ್ನು ಉಪಯೋಗಿಸುತ್ತೀರಿ. ಪದೇ ಪದೇ ಬಳಸಿದಾಗ ಅವುಗಳ ಆಕಾರ ಮತ್ತು ಗಾತ್ರ ಬದಲಾವಣೆಯಾಗುತ್ತದೆ. ಈ ಬದಲಾವಣೆಯನ್ನು ಪರಾವರ್ತಗೊಳಿಸಬಹುದೆ?
ಕುಂಬಾರನು ತನ್ನ ಚಕ್ರದೊಂದಿಗೆ ಕೆಲಸ ಮಾಡುವುದನ್ನು ನೀವು ನೋಡಿರಬೇಕು, ಕಲಸಿದ ಮಣ್ಣಿನ ಮುದ್ದೆಗೆ ಅವನು ಮಡಕೆಯ ಆಕಾರ ನೀಡುವನು. ಈ ಬದಲಾವಣೆಯನ್ನು ಪರಾವರ್ತಗೊಳಿಸಬಹುದೆ? ನಂತರ ಅವನು ಆ ಮಣ್ಣಿನ ಮಡಕೆಯನ್ನು ಒಲೆಯಲ್ಲಿ ಬೇಯಿಸುತ್ತಾನೆ. ಈಗ ಈ ಬದಲಾವಣೆಯನ್ನು ಪರಾವರ್ತಗೊಳಿಸಬಹುದೆ?
ಕೋಷ್ಟಕ 6.1ರಲ್ಲಿ ಕೆಲವು ಸಾಮಾನ್ಯ ಬದಲಾವಣೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಯಾವ ಬದಲಾವಣೆಗಳನ್ನು ಪರಾವರ್ತಗೊಳಿಸಬಹುದು ಎಂದು ನೀವು ಯೋಚಿಸುತ್ತೀರಿ.
ಬದಲಾವಣೆಗಳನ್ನು ಪರಾವರ್ತಗೊಳಿಸಬಹುದೇ ಎಂಬುದನ್ನು ಗುರುತಿಸುವುದು ಅವುಗಳನ್ನು ಗುಂಪು ಮಾಡುವ ಒಂದು ವಿಧಾನವೆಂದು ನಾವು ತಿಳಿದೆವು.
6.2 ಬದಲಾವಣೆ ತರಲು ಇನ್ನಿತರ ದಾರಿಗಳಿವೆಯೇ?
ಮಣ್ಣನ್ನು ಅಗೆಯಲು ಬಳಸುವ ಸಾಧನಗಳನ್ನು ನಾವೆಲ್ಲರೂ ನೋಡಿದ್ದೇವೆ (ಚಿತ್ರ 6.6). ಮರದ ಹಿಡಿಗೆ ಕಬ್ಬಿಣದ ಬ್ಲೇಡನ್ನು ಹೇಗೆ ಸಿಕ್ಕಿಸುತ್ತಾರೆ ಎಂದು ನೀವು ಯಾವಾಗಲಾದರೂ ನೋಡಿದ್ದೀರಾ?
ಈ ಸಾಧನಗಳಲ್ಲಿರುವ ಕಬ್ಬಿಣದ ಬ್ಲೇಡ್‍ನಲ್ಲಿರುವ ಉಂಗುರಕ್ಕೆ ಮರದ ಹಿಡಿಯನ್ನು ಜೋಡಿಸಿದೆ. ಆ ಉಂಗುರದ ಗಾತ್ರವು ಮರದ ಹಿಡಿಗಿಂತ ಸಾಮಾನ್ಯವಾಗಿ ಚಿಕ್ಕದಾಗಿರುತ್ತದೆ. ಹಿಡಿಯನ್ನು ಜೋಡಿಸಲು ಉಂಗುರವನ್ನು ಕಾಯಿಸಿದಾಗ ಅದು ತನ್ನ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗುತ್ತದೆ (ಹಿಗ್ಗುತ್ತದೆ). ಈಗ ಹಿಡಿಯು ಸುಲಭವಾಗಿ ಉಂಗುರದೊಳಗೆ ಸೇರಿಸಲ್ಪಡುತ್ತದೆ. ಉಂಗುರವು ತಣ್ಣಗಾದಾಗ ಕುಗ್ಗುತ್ತದೆ ಮತ್ತು ಮರದ ಹಿಡಿಗೆ ಗಟ್ಟಿಯಾಗಿ ಬಂಧಿಸಲ್ಪಡುತ್ತದೆ.
ಚಿತ್ರ 6.7ರಲ್ಲಿ ತೋರಿಸಿರುವಂತೆ ಅಂತಹ ಬದಲಾವಣೆಯನ್ನು ಮರದ ಚಕ್ರಕ್ಕೆ ಲೋಹದ ಬಳೆಯನ್ನು ಸೇರಿಸಲು ಸಹಾ ಬಳಸುತ್ತಾರೆ. ಇಲ್ಲಿಯೂ ಸಹ ಲೋಹದ ಬಳೆಯನ್ನು ಮರದ ಚಕ್ರಕ್ಕಿಂತ ಸ್ವಲ್ಪ ಚಿಕ್ಕದಾಗಿ ಮಾಡಿರುತ್ತಾರೆ. ಬಿಸಿ ಮಾಡಿದಾಗ ಬಳೆ ವಿಕಸನ ಹೊಂದಿ ಚಕ್ರಕ್ಕೆ ಸರಿಯಾಗಿ ಬಂಧಿಸಲ್ಪಡುತ್ತದೆ. ನಂತರ ತಣ್ಣೀರನ್ನು ಬಳೆಯ ಮೇಲೆ ಸುರಿದಾಗ ಬಳೆಯು ಕುಗ್ಗುತ್ತದೆ ಮತ್ತು ಚಕ್ರದ ಮೇಲೆ ಗಟ್ಟಿಯಾಗಿ ಕೂರುತ್ತದೆ.
ನಾವು ಒಂದು ಪಾತ್ರೆಯಲ್ಲಿ ನೀರನ್ನು ಕಾಯಿಸಿದಾಗ ಸ್ವಲ್ಪ ಹೊತ್ತಿನ ನಂತರ ಅದು ಕುದಿಯಲಾರಂಭಿಸುತ್ತದೆ. ಕಾಯಿಸುವುದನ್ನು ಮುಂದುವರಿಸಿದಾಗ ತಟ್ಟೆಯಲ್ಲಿರುವ ನೀರಿನ ಪ್ರಮಾಣ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ನೀರು ಆವಿಯಾಗಿ ಬದಲಾಗುತ್ತದೆ. ಅಧ್ಯಾಯ 5ರ ಚಟುವಟಿಕೆ 7ರಲ್ಲಿ ನೀರನ್ನು ತಣಿಸಿದಾಗ ನೀರಾವಿಯು ನೀರಾಗಿ ಬದಲಾವಣೆಗೊಳ್ಳುವುದನ್ನು ನಾವು ಗಮನಿಸಿದ್ದೇವೆ. ನಾವೆಲ್ಲರೂ ಮಂಜುಗಡ್ಡೆ ಕರಗುವುದನ್ನು ಗಮನಿಸಿದ್ದೇವೆ. ಬಿಸಿ ಮಾಡಿದಾಗ ಮಂಜುಗಡ್ಡೆಯು ಕರಗುತ್ತದೆ. ಅದು ಏನಾಗಿ ಬದಲಾವಣೆಯಾಯಿತು? ಈ ನೀರನ್ನು ಪುನಃ ಮಂಜುಗಡ್ಡೆಯಾಗಿ ಬದಲಿಸಲು ಸಾಧ್ಯವೆ?
ನಾವು ಇನ್ನೂ ಕೆಲವು ಬದಲಾವಣೆಗಳನ್ನು ವೀಕ್ಷಿಸೋಣ.
ಚಟುವಟಿಕೆ 7
ಒಂದು ಸಣ್ಣ ಮೇಣದ ಬತ್ತಿಯನ್ನು ತೆಗೆದುಕೊಳ್ಳಿ ಮತ್ತು ಅಳತೆ ಪಟ್ಟಿಯ ಸಹಾಯದಿಂದ ಅದರ ಉದ್ದವನ್ನು ಅಳೆಯಿರಿ. ಈಗ ಅದನ್ನು ಸೂಕ್ತವಾದ ಸ್ಥಳದಲ್ಲಿ ಅಂಟಿಸಿ, ನಂತರ ಹೊತ್ತಿಸಿ ಅದು ಸ್ವಲ್ಪ ಹೊತ್ತು ಉರಿಯಲಿ ಈಗ ಮೇಣದ ಬತ್ತಿಯನ್ನು ಆರಿಸಿ ಪುನಃ ಅದರ ಉದ್ದವನ್ನು ಅಳೆಯಿರಿ (ಚಿತ್ರ 6.8).
ಮೇಣದ ಬತ್ತಿಯ ಉದ್ದದಲ್ಲಿ ಆದ ಬದಲಾವಣೆಯನ್ನು ಪರಾವರ್ತಗೊಳಿಸಬಹುದೇ? ಒಂದು ಪಾತ್ರೆಯಲ್ಲಿ ಸ್ವಲ್ಪ ಮೇಣವನ್ನು ತೆಗೆದುಕೊಂಡು ಬಿಸಿ ಮಾಡಿದಾಗ ಆ ಬದಲಾವಣೆಯನ್ನು ಪರಾವರ್ತಗೊಳಿಸಬಹುದೆ (ಚಿತ್ರ 6.9)?
ಚಟುವಟಿಕೆ 7ನ್ನು ಊದುಬತ್ತಿಯ ಸಹಾಯದಿಂದ ಪುನರಾವರ್ತಿಸಿ ಅದು ಪೂರ್ತಿಯಾಗಿ ಉರಿಯುವ ತನಕ ಕಾಯಿರಿ. ಊದುಬತ್ತಿಯಲ್ಲಿ ಉಂಟಾದ ಬದಲಾವಣೆಗಳು ಯಾವುವು? ಕಡ್ಡಿಯು ಉರಿದು ಹೊಸ ಪದಾರ್ಥ ಉತ್ಪತ್ತಿಯಾಗುತ್ತದೆ. ಅವುಗಳೆಂದರೆ ಬೂದಿ ಮತ್ತು ಕೆಲವು ಅನಿಲಗಳು. ಈ ಅನಿಲಗಳನ್ನು ನೋಡಲು ಸಾಧ್ಯವಿಲ್ಲ ಆದರೆ ಅವುಗಳ ಸುವಾಸನೆಯಿಂದ ಅವುಗಳನ್ನು ಗುರುತಿಸಬಹುದು. ಈ ಬದಲಾವಣೆಯನ್ನು ಪರಾವರ್ತಗೊಳಿಸಬಹುದೆ? ಮೇಣದ ಬತ್ತಿ ಅಥವಾ ಊದುಬತ್ತಿಯನ್ನು ಹೊತ್ತಿಸಲು ಬಳಸಿದ ಬೆಂಕಿಕಡ್ಡಿಯಲ್ಲಿ ಉಂಟಾದ ಬದಲಾವಣೆ ಏನು?
ಕೊಟ್ಟಿರುವ ವಸ್ತುಗಳಲ್ಲಿ ಅಥವಾ ಅವುಗಳ ಪದಾರ್ಥಗಳಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಈವರೆಗೆ ನಾವು ಚರ್ಚಿಸಿದ್ದೇವೆ. ಎರಡು ವಸ್ತುಗಳನ್ನು ಬೆರೆಸಿದಾಗ (ಮಿಶ್ರಗೊಳಿಸಿದಾಗ) ಉಂಟಾಗುವ ಬದಲಾವಣೆಗಳೇನು?
ಅಧ್ಯಾಯ 4ರಲ್ಲಿ ನಾವು ಉಪ್ಪನ್ನು ನೀರಿನಲ್ಲಿ ಕರಗಿಸಿದ್ದೆವು. ಈ ಬದಲಾವಣೆಯು ಉಪ್ಪಿನಲ್ಲಿ ಆಯಿತೆ ಅಥವಾ ನೀರಿನಲ್ಲಿ ಆಯಿತೆ? ಅಲೋಚಿಸಿ. ಈ ಬದಲಾವಣೆಯನ್ನು ಪರಾವರ್ತಗೊಳಿಸಲು ಸಾಧ್ಯವೆ? ಸ್ವಲ್ಪ ತಾಳಿ, ಉಪ್ಪನ್ನು ಅದರ ದ್ರಾವಣದಿಂದ ಬೇರ್ಪಡಿಸುವುದು ಹೇಗೆಂದು 5ನೇ ಅಧ್ಯಾಯದಲ್ಲಿ ನಾವು ಕಲಿತಿದ್ದೇವೆ. ಆದ್ದರಿಂದ ಉಪ್ಪನ್ನು ನೀರಿನಲ್ಲಿ ಕರಗಿಸುವ ಬದಲಾವಣೆಯು ಪರಾವರ್ತ ಕ್ರಿಯೆ ಎಂದು ನಾವು ಹೇಳಬಹುದೆ?
ಮೊಸರು ಮಾಡುವುದನ್ನು ನೀವು ಯಾವಾಗಲಾದರೂ ನೋಡಿರುವಿರಾ ಎಂದು ಪಹೇಲಿ ಕೇಳುತ್ತಾಳೆ. ಸ್ವಲ್ಪ ಪ್ರಮಾಣದ ಮೊಸರನ್ನು ಬೆಚ್ಚನೆಯ ಹಾಲಿಗೆ ಸೇರಿಸಲಾಗುತ್ತದೆ. ಹಾಲನ್ನು ಕಲಕಿ ಕೆಲವು ಗಂಟೆಗಳವರೆಗೆ ಬೆಚ್ಚನೆಯ ಸ್ಥಳದಲ್ಲಿ ಇಡಲಾಗುತ್ತದೆ. ಕೆಲವೇ ಗಂಟೆಗಳಲ್ಲಿ ಹಾಲು ಮೊಸರಾಗಿ ಬದಲಾಗುತ್ತದೆ. ಈ ಬದಲಾವಣೆಯನ್ನು ಪರಾವರ್ತಗೊಳಿಸಬಹುದೆ?
ಒಂದು ಪದಾರ್ಥವನ್ನು ಕಾಯಿಸುವುದು ಅಥವಾ ಅದನ್ನು ಇತರ ಪದಾರ್ಥಗಳೊಂದಿಗೆ ಬೆರೆಸುವುದು ಆ ಪದಾರ್ಥದಲ್ಲಿ ಬದಲಾವಣೆಗಳನ್ನು ತರಬಹುದಾದ ಕೆಲವು ವಿಧಾನಗಳು ಎಂಬುದನ್ನು ನಾವು ತಿಳಿದೆವು. ಕೆಲವು ಬದಲಾವಣೆಗಳನ್ನು ಪರಾವರ್ತಗೊಳಿಸಬಹುದು ಮತ್ತು ಕೆಲವನ್ನು ಪರಾವರ್ತಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ಕೂಡಾ ನಾವು ತಿಳಿದೆವು. ನಮ್ಮ ಸುತ್ತಲಿನ ವಸ್ತುಗಳನ್ನು ಬದಲಿಸುವ ಇನ್ನು ಅನೇಕ ಮಾರ್ಗಗಳು ಇರಲೇಬೇಕು. ಕೆಲವನ್ನು ಪರಾವರ್ತಗೊಳಿಸಬಹುದು. ಹೀಗೆ ನಮ್ಮ ಸುತ್ತಲಿನ ಬದಲಾವಣೆಗಳನ್ನು ಪರಾವರ್ತಗೊಳಿಸಬಹುದಾದ ಅಥವಾ ಪರಾವರ್ತಗೊಳಿಸಲಾಗದ ಬದಲಾವಣೆಗಳು ಎಂದು ಗುಂಪುಮಾಡಬಹುದು. ಬದಲಾವಣೆಗಳನ್ನು ಮಾಡುವ ವಿಧಾನಗಳು ಮತ್ತು ಅವುಗಳನ್ನು ವಿಂಗಡಿಸುವ ಬಗ್ಗೆ ಮುಂದಿನ ತರಗತಿಗಳಲ್ಲಿ ಹೆಚ್ಚಾಗಿ ಕಲಿಯುವಿರಿ.
ಪ್ರಮುಖ ಪದಗಳು
ಬದಲಾವಣೆಗಳು
ಕುಗ್ಗುವುದು
ಆವಿಯಾಗುವುದು
ಹಿಗ್ಗುವುದು
ದ್ರವಿಸುವುದು
ಸಾರಾಂಶ
* ಕೆಲವು ಬದಲಾವಣೆಗಳನ್ನು ಪರಾವರ್ತಗೊಳಿಸಬಹುದು ಮತ್ತು ಕೆಲವನ್ನು ಪರಾವರ್ತಗೊಳಿಸಲು ಸಾಧ್ಯವಿಲ್ಲ.
* ಒಂದು ಪದಾರ್ಥವನ್ನು ಕಾಯಿಸುವುದರಿಂದ ಅಥವಾ ಅದನ್ನು ಬೇರೆ ಪದಾರ್ಥದೊಂದಿಗೆ ಬೆರೆಸುವುದರಿಂದ ಬದಲಾವಣೆ ಉಂಟಾಗಬಹುದು.
ಸಂವೇದ ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು
ಸೂಚಿತ ಯೋಜನಾ ಕಾರ್ಯಗಳು ಮತ್ತು ಚಟುವಟಿಕೆಗಳು
1) ನಿಂಬೆಹಣ್ಣು, ಬಣ್ಣದ ಕುಂಚ ಮತ್ತು ಕಾಗದದ ತುಂಡನ್ನು ತೆಗೆದುಕೊಳ್ಳಿ. ನಿಂಬೆಹಣ್ಣನ್ನು ಕತ್ತರಿಸಿ ಅದರ ರಸವನ್ನು ಬಟ್ಟಲಿಗೆ ಹಿಂಡಿ. ನಿಂಬೆ ರಸದಲ್ಲಿ ಬಣ್ಣದ ಕುಂಚವನ್ನು ಅದ್ದಿ ಕಾಗದದ ಮೇಲೆ ಸಂದೇಶವೊಂದನ್ನು ಬರೆಯಿರಿ. ಕಾಗದವನ್ನು ಒಣಗಲು ಬಿಡಿ. ನಿಮ್ಮ ಸಂದೇಶದಲ್ಲಿರುವ ಅಕ್ಷರಗಳು ಗೋಚರಿಸದಿರುವುದನ್ನು ನೀವು ನೋಡುವಿರಿ. ಈಗ ಬಿಸಿಯಾದ ಇಸ್ತ್ರಿ ಪೆಟ್ಟಿಗೆಯಿಂದ ಕಾಗದವನ್ನು ಒತ್ತಿ ಅಥವಾ ಮೇಣದ ಬತ್ತಿಯ ಜ್ವಾಲೆಯ ಮೇಲೆ ಹಿಡಿದು ಬೆಚ್ಚಗೆ ಮಾಡಿ (ಬೆಂಕಿ ತಗಲದಂತೆ ಎಚ್ಚರ ವಹಿಸಿ). ಕಾಗದವು ಬಿಸಿಯಾಗುತ್ತಿದ್ದಂತೆ ಅಗೋಚರವಾದ ಅಕ್ಷರಗಳು ಕಡುಕಂದು ಬಣ್ಣಕ್ಕೆ ತಿರುಗುತ್ತವೆ. ಈ ಪ್ರಕ್ರಿಯೆಯಲ್ಲಿ ಪರಾವರ್ತಗೊಳಿಸಬಹುದಾದ ಬದಲಾವಣೆಗಳನ್ನು ಗುರುತಿಸಿ.
2) ನಿಮ್ಮ ಮನೆಯಲ್ಲಿ ಖಾದ್ಯ ಪದಾರ್ಥಗಳನ್ನು ತಯಾರಿಸುವುದನ್ನು ಗಮನಿಸಿ, ಪರಾವರ್ತಗೊಳಿಸಬಹುದಾದ ಎರಡು ಬದಲಾವಣೆಗಳನ್ನು ಗುರುತಿಸಿ.
3) ತರಕಾರಿಗಳು, ಉಡುಪು, ಪರಿಸರ ಮತ್ತು ನಿಮ್ಮ ಸುತ್ತಮುತ್ತ ಜರುಗುವ ಘಟನೆಗಳ ಬಗ್ಗೆ ಋತುಮಾನಕ್ಕೆ ತಕ್ಕಂತೆ ಒಂದು ವರ್ಷದಲ್ಲಿ ಆಗುವ ಬದಲಾವಣೆಗಳ ದಾಖಲೆಯನ್ನು ನಿರ್ವಹಿಸಿ, ಪರಾವರ್ತಗೊಳಿಸಬಹುದಾದ ಅಥವಾ ಪರಾವರ್ತಗೊಳಿಸಲಾಗದ ಬದಲಾವಣೆಗಳನ್ನು ಗುರುತಿಸಿ.
onion darknet market darknet market ddos