ನಾವು ದಿನನಿತ್ಯ ಅನೇಕ ದ್ರವ್ಯಗಳನ್ನು ಬಳಸುತ್ತೇವೆ. ಪ್ರಕೃತಿಯಲ್ಲಿ ದೊರೆಯುವ ಈ ದ್ರವ್ಯಗಳು ಅಣುಗಳಿಂದ ಅಥವಾ ಸಂಯುಕ್ತ ಅಣುಗಳಿಂದ ಕೂಡಿವೆ. ಈ ಸಂಯುಕ್ತ ಅಣುಗಳನ್ನು ವಿಭಜಿಸಿದಾಗ ಮೂಲಧಾತುಗಳು ಸಿಗುತ್ತವೆ. ಈ ಮೂಲಧಾತುವಿನ ಅತ್ಯಂತ ಚಿಕ್ಕ ಘಟಕವೇ ಪರಮಾಣು. ಪರಮಾಣುವು ಮೂಲಧಾತುವಿನ ಅದೇ ಗುಣಗಳುಳ್ಳ ಅತ್ಯಂತ ಚಿಕ್ಕ ಘಟಕವಾಗಿದೆ. ಕೆಲವು ಪರಮಾಣುಗಳು ಸುಲಭವಾಗಿ ಮತ್ತೊಂದರೊಡನೆ ಸೇರಿ ಬೇರೆ ಬೇರೆ ದ್ರವ್ಯಗಳಾಗುತ್ತವೆ. ದ್ರವ್ಯದಲ್ಲಿರುವ ಪರಮಾಣುಗಳನ್ನು ಆಧರಿಸಿ ಅವುಗಳನ್ನು ಧಾತು, ಸಂಯುಕ್ತ ಮತ್ತು ಮಿಶ್ರಣಗಳು ಎಂದು ವರ್ಗೀಕರಿಸಲಾಗಿದೆ.

ಈ ಪಾಠವನ್ನು ಕಲಿತ ನಂತರ ನೀನು,
* ದ್ರವ್ಯವನ್ನು ಧಾತು, ಸಂಯುಕ್ತ ಮತ್ತು ಮಿಶ್ರಣಗಳಾಗಿ ವರ್ಗೀಕರಿಸುವೆ.
* ಧಾತು, ಸಂಯುಕ್ತ ಮತ್ತು ಮಿಶ್ರಣಗಳ ನಡುವಣ ವ್ಯತ್ಯಾಸಗಳನ್ನು ಗುರುತಿಸುವೆ.

ಧಾತುಗಳು ಅತೀ ಸೂಕ್ಷ್ಮ ಕಣಗಳಿಂದಾಗಿವೆ. ಇವುಗಳು ಒಂದೇ ಲಕ್ಷಣದ ಕಣಗಳಿಂದಾಗಿವೆ.
ಉದಾಹರಣೆ : ಆಕ್ಸಿಜನ್ – O ; ಹೈಡ್ರೋಜನ್ – H

ಧಾತುಗಳನ್ನು ರಾಸಾಯನಿಕವಾಗಿ ವಿಭಜಿಸಲಾಗುವುದಿಲ್ಲ ಹಾಗೂ ಬೇರೆ ಬೇರೆ ಧಾತುಗಳಿಂದ ಸಂಶ್ಲೇಷಿಸಲಾಗುವುದಿಲ್ಲ.

ಕೆಲವು ಧಾತುಗಳು ನೈಸರ್ಗಿಕವಾಗಿ ಲಭ್ಯವಿದ್ದರೆ, ಇನ್ನೂ ಕೆಲವು ಧಾತುಗಳನ್ನು ಕೃತಕವಾಗಿ ಸೃಷ್ಟಿಸಲಾಗಿದೆ.
ಉದಾಹರಣೆ : ನೈಸರ್ಗಿಕ ಧಾತು – ಚಿನ್ನ ; ಕೃತಕ ಧಾತು – ಪ್ಲುಟೋನಿಯಮ್

ಧಾತುಗಳನ್ನು ಲೋಹಗಳು ಮತ್ತು ಅಲೋಹಗಳೆಂದು ವಿಂಗಡಿಸಲಾಗಿದೆ. ಲೋಹ ಅಲೋಹಗಳ ಬಗ್ಗೆ ಮುಂದಿನ ತರಗತಿಗಳಲ್ಲಿ ತಿಳಿಯುವೆ.

ಎರಡು ಅಥವಾ ಹೆಚ್ಚು ಧಾತುಗಳು ರಾಸಾಯನಿಕವಾಗಿ ಸಂಯೋಜನೆ ಹೊಂದಿದಾಗ ಸಂಯುಕ್ತ ವಸ್ತು ಉಂಟಾಗುತ್ತದೆ. ಇದರಲ್ಲಿ ವಿಭಿನ್ನ ಧಾತುಗಳ ಪರಮಾಣುಗಳ ಸಮೂಹಗಳಿರುತ್ತವೆ.

ಎರಡು ಅಥವಾ ಹೆಚ್ಚು ಧಾತುಗಳು ರಾಸಾಯನಿಕವಾಗಿ ನಿರ್ದಿಷ್ಟ ಅನುಪಾತದಲ್ಲಿ ಸಂಯೋಗಗೊಂಡು ಹೊಸ ಲಕ್ಷಣದ ವಸ್ತುವಾದಲ್ಲಿ ಅದಕ್ಕೆ ಸಂಯುಕ್ತವಸ್ತು ಎನ್ನಲಾಗುತ್ತದೆ.
ಉದಾಹರಣೆ : ನೀರು – H2O

ಹೈಡ್ರೊಜನ್ ಮತ್ತು ಆಕ್ಸಿಜನ್ 2:1 ಅನುಪಾತದಲ್ಲಿ ರಾಸಾಯನಿಕವಾಗಿ ಸಂಯೋಗಗೊಂಡು ಉಂಟಾದ ಸಂಯುಕ್ತವೇ ನೀರು.

ಸಂಯುಕ್ತಗಳನ್ನು ಸೂಚಿಸಲು ಅಣುಸೂತ್ರವನ್ನು ಉಪಯೋಗಿಸುವರು.

ಓದಿ-ತಿಳಿ : ಅಣುವಿನಲ್ಲಿರುವ ಪರಮಾಣುಗಳ ಸಂಖ್ಯೆಗಳನ್ನು ರಾಸಾಯನಿಕ ಸಂಕೇತದ ಮೂಲಕ ಸೂಚಿಸುವುದನ್ನು ಅಣುಸೂತ್ರ ಎನ್ನುವರು.

ಅಣುಸೂತ್ರವು ಸಂಯುಕ್ತ ವಸ್ತು ಯಾವ ಧಾತುಗಳಿಂದ ಕೂಡಿದೆ ಎಂಬುದನ್ನು ತಿಳಿಸುವುದರ ಜೊತೆಗೆ ಪರಮಾಣುಗಳ ಸಂಖ್ಯೆಯನ್ನು ಸೂಚಿಸುತ್ತದೆ.

ಸಂಯುಕ್ತ ವಸ್ತುವು ಅದರ ಮೂಲ ಘಟಕ ವಸ್ತುಗಳ ಲಕ್ಷಣಗಳನ್ನು ಹೊಂದಿರುವುದಿಲ್ಲ.

ಉದಾಹರಣೆ : ಸಕ್ಕರೆಯು ಕಾರ್ಬನ್, ಹೈಡ್ರೋಜನ್ ಮತ್ತು ಆಕ್ಸಿಜನ್‍ನಿಂದಾಗಿದೆ. ಆದರೆ ಸಕ್ಕರೆಯಲ್ಲಿ ಇವುಗಳ ಯಾವ ಲಕ್ಷಣಗಳೂ ಇರುವುದಿಲ್ಲ. ಸಂಯುಕ್ತಗಳ ಘಟಕಗಳನ್ನು ಸುಲಭವಾಗಿ ವಿಭಜಿಸಲು ಸಾಧ್ಯವಾಗುವುದಿಲ್ಲ.

ಓದಿ-ತಿಳಿ : ದಿನನಿತ್ಯ ಬಳಸುವ ಸೋಡಿಯಮ್ ಕ್ಲೋರೈಡ್ (ಉಪ್ಪು)ಅನ್ನು ತೆಗೆದುಕೊ. ಇದು ಸೋಡಿಯಮ್ ಮತ್ತು ಕ್ಲೋರಿನ್‍ನಿಂದ ಉಂಟಾದ ಸಂಯುಕ್ತವಾಗಿದೆ. ಸೋಡಿಯಮ್ ಮತ್ತು ಕ್ಲೋರಿನ್ ಎರಡೂ ವಿಷಯುಕ್ತವಾದರೂ ಅವುಗಳ ಸಂಯೋಗ ದಿಂದ ಉಂಟಾದ ಉಪ್ಪು ವಿಷಯುಕ್ತವಾಗಿರುವುದಿಲ್ಲ. ಇದನ್ನು ನಿತ್ಯ ಜೀವನದಲ್ಲಿ ಬಳಸುತ್ತೇವೆ.

ನಮ್ಮ ದಿನನಿತ್ಯದ ಜೀವನದಲ್ಲಿ ಹಲವು ಮಿಶ್ರಣಗಳನ್ನು ಕಾಣುತ್ತೇವೆ. ಮಿಶ್ರಣಗಳು ಎರಡು ಅಥವಾ ಹೆಚ್ಚು ವಸ್ತುಗಳಿಂದ ಕೂಡಿದ ವಸ್ತುಗಳಾಗಿವೆ.

ಎರಡು ಅಥವಾ ಹೆಚ್ಚು ವಸ್ತುಗಳು (ಧಾತುಗಳು ಅಥವಾ ಸಂಯುಕ್ತಗಳು) ಯಾವುದೇ ಅನುಪಾತದಲ್ಲಿ ಸೇರಿಸಲ್ಪಟ್ಟಾಗ, ಅವು ರಾಸಾಯನಿಕ ಬದಲಾವಣೆಯಾಗದೆ ತಮ್ಮ ಮೂಲ ಲಕ್ಷಣಗಳನ್ನು ಉಳಿಸಿಕೊಂಡಿದ್ದಲ್ಲಿ ಆ ವಸ್ತುವನ್ನು ಮಿಶ್ರಣ ಎನ್ನುತ್ತೇವೆ.

ಉದಾಹರಣೆ : ಮಣ್ಣು – ಮರಳು, ಜೇಡಿಮಣ್ಣು ಮತ್ತು ಹಲವು ಬಗೆಯ ಲವಣಗಳು ಹಾಗೂ ಸಸ್ಯ ಮತ್ತು ಪ್ರಾಣಿಗಳ ಅವಶೇಷಗಳ ಮಿಶ್ರಣವಾಗಿದೆ.

ಆವರ್ತ ಕೋಷ್ಟಕ
  1. ಧಾತುವಿನಲ್ಲಿ ಒಂದೇ ರೀತಿಯ __ ಗಳ ಸಮೂಹವಿರುತ್ತದೆ.
  2. ಸಂಯುಕ್ತ ವಸ್ತುವಿನಲ್ಲಿ ವಿಭಿನ್ನ __ ಪರಮಾಣುಗಳ ಸಮೂಹವಿರುತ್ತದೆ.
  3. ಸಂಯುಕ್ತ ವಸ್ತು ಎಂದರೆ __
  4. ಮಿಶ್ರಣ ಎಂದರೆ __
  5. ಇವುಗಳಿಗೆ ಪ್ರತಿಯೊಂದಕ್ಕೂ 5 ಉದಾಹರಣೆ ಕೊಡು (ಶಿಕ್ಷಕರ ಸಹಾಯ ಪಡೆ).
    ಧಾತು ______
    ಸಂಯುಕ್ತ
    _____
    ಮಿಶ್ರಣ _____
ಸಂಯುಕ್ತಗಳುಮಿಶ್ರಣಗಳು
1. ಎರಡು ಅಥವಾ ಎರಡಕ್ಕಿಂತಲೂ ಹೆಚ್ಚು ಧಾತುಗಳು ರಾಸಾಯನಿಕವಾಗಿ ಬೆರೆತಾಗ ಸಂಯುಕ್ತಗಳು ಉಂಟಾಗುತ್ತವೆ.ಎರಡು ಅಥವಾ ಹೆಚ್ಚಿನ ವಸ್ತುಗಳು ಭೌತಿಕವಾಗಿ ಬೆರೆತಾಗ ಮಿಶ್ರಣಗಳು ಉಂಟಾಗುತ್ತವೆ.
2. ಸಂಯುಕ್ತಗಳ ಘಟಕ ವಸ್ತುಗಳು ನಿರ್ದಿಷ್ಟ ಅನುಪಾತ ಅಥವಾ ಪ್ರಮಾಣದಲ್ಲಿ ಬೆರೆತಿರುತ್ತವೆ.ಮಿಶ್ರಣದ ಘಟಕ ವಸ್ತುಗಳು ಯಾವ ಪ್ರಮಾಣದಲ್ಲಿಯಾದರೂ ಬೆರೆತಿರಬಹುದು.
3. ಸಂಯುಕ್ತಗಳ ಘಟಕ ವಸ್ತುಗಳು ಒಂದುಗೂಡಿದ ನಂತರ ತಮ್ಮ ಮೂಲ
ಲಕ್ಷಣಗಳನ್ನು ಉಳಿಸಿಕೊಂಡಿರುವುದಿಲ್ಲ.
ಮಿಶ್ರಣದ ಘಟಕ ವಸ್ತುಗಳು ತಮ್ಮ ಮೂಲ ಲಕ್ಷಣಗಳನ್ನು ಉಳಿಸಿಕೊಂಡಿರುತ್ತವೆ.
4. ಸಂಯುಕ್ತಗಳ ಘಟಕ ವಸ್ತುಗಳನ್ನು ಸರಳವಾಗಿ (ರಾಸಾಯನಿಕ ಕ್ರಿಯೆಗಳಿಲ್ಲದೆ) ವಿಭಜಿಸಲು ಸಾಧ್ಯವಿಲ್ಲ.ಮಿಶ್ರಣದ ಘಟಕ ವಸ್ತುಗಳನ್ನು ಸರಳ ವಿಧಾನಗಳಿಂದ ವಿಭಜಿಸಬಹುದು.
Samveda – 5th – EVS – Dhaatu Samyukta mattu Mishragalu 
5ನೇ ತರಗತಿ#ಪರಿಸರ ಅಧ್ಯಯನ#ಧಾತು, ಸಂಯುಕ್ತ ಮತ್ತು ಮಿಶ್ರಣಗಳು ಪಾಠದ ಪ್ರಶ್ನೋತ್ತರಗಳು#5th dhatu, sayukta mishrana
ಪ್ರಶ್ನೋತ್ತರಗಳಿಗಾಗಿ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.