ದೇಹದ ಚಲನೆಗಳು – ಅಧ್ಯಾಯ-8

ಸ್ವಲ್ಪವೂ ಅಲುಗಾಡದೆ ಕುಳಿತುಕೊಳ್ಳಿ. ನಿಮ್ಮ ದೇಹದಲ್ಲಾಗುತ್ತಿರುವ ಚಲನೆಗಳನ್ನು ಗಮನಿಸಿ. ಆಗಿಂದಾಗ್ಗೆ, ನಿಮ್ಮ ಕಣ್ಣುಗಳನ್ನು ನೀವು ಮಿಟಕಿಸುತ್ತಿರಬಹುದು. ನೀವು ಉಸಿರಾಡುತ್ತಿದ್ದಂತೆ ನಿಮ್ಮ ದೇಹದಲ್ಲಾಗುವ ಚಲನೆಗಳನ್ನು ಗಮನಿಸಿ. ನಮ್ಮ ದೇಹದಲ್ಲಿ ಅನೇಕ ಚಲನೆಗಳುಂಟಾಗುತ್ತವೆ.

ನೀವು ನೋಟ್‍ಪುಸ್ತಕದಲ್ಲಿ ಬರೆಯುತ್ತಿರುವಾಗ ಅಥವಾ ನೀವು ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆಯ ಕಡೆ ತಿರುಗಿ ನೋಡಿದಾಗ ನಿಮ್ಮ ದೇಹದ ಯಾವ ಭಾಗವನ್ನು ಚಲಿಸುತ್ತೀರಿ? ಈ ಉದಾಹರಣೆಗಳಲ್ಲಿ, ನೀವು ಒಂದೇ ಕಡೆ ಇದ್ದರು ಕೂಡ, ನಿಮ್ಮ ದೇಹದ ವಿವಿಧ ಭಾಗಗಳು ಚಲಿಸುತ್ತಿರುತ್ತವೆ. ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೂ ಚಲಿಸುವಿರಿ. ನೀವು ನಿಮ್ಮ ಅಧ್ಯಾಪಕರ ಬಳಿ ಅಥವಾ ಶಾಲೆಯ ಆವರಣಕ್ಕೆ ಅಥವಾ ಶಾಲೆ ಮುಗಿದನಂತರ ಮನೆಗೆ ಹೋಗುವಿರಿ. ನೀವು ನಡೆಯುವಿರಿ, ಓಡುವಿರಿ, ಜಿಗಿಯುವಿರಿ, ನೆಗೆಯುವಿರಿ ಮತ್ತು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವಿರಿ.

ನಮ್ಮ ಸ್ನೇಹಿತರು, ಶಿಕ್ಷಕರು ಮತ್ತು ಪೋಷಕರೊಂದಿಗೆ ಚರ್ಚಿಸಿದ ನಂತರ ನಾವು ಕೋಷ್ಟಕ 8.1ನ್ನು ತುಂಬಿಸುತ್ತಾ, ಪ್ರಾಣಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೇಗೆ ಚಲಿಸುತ್ತವೆ ಎಂದು ನೋಡೋಣ.

ನಡೆಯುವಿಕೆ, ಓಡುವಿಕೆ, ಹಾರುವಿಕೆ, ನೆಗೆಯುವಿಕೆ, ಅಂಬೆಗಾಲಿಡುವಿಕೆ, ಹರಿದಾಡುವಿಕೆ ಮತ್ತು ಈಜುವಿಕೆ-ಇವೆಲ್ಲವೂ ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆ ಚಲಿಸುವ ಕೆಲವೇ ಕೆಲವು ರೀತಿಗಳು. ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವ ರೀತಿಯಲ್ಲಿ ಇಷ್ಟೊಂದು ವ್ಯತ್ಯಾಸಗಳು ಏಕೆ ಇವೆ? ಅನೇಕ ಪ್ರಾಣಿಗಳು ನಡೆಯುತ್ತವೆ ಆದರೆ ಹಾವು ಹರಿದಾಡುತ್ತದೆ ಅಥವಾ ತೆವಳುತ್ತದೆ ಮತ್ತು ಮೀನು ಈಜುತ್ತದೆ. ಏಕೆ?

8.1 ಮಾನವನ ದೇಹ ಮತ್ತು ಅದರ ಚಲನೆಗಳು

ಪ್ರಾಣಿಗಳಲ್ಲಿರುವ ಎಲ್ಲ ರೀತಿಯ ಚಲನೆಗಳನ್ನು ನೋಡುವುದಕ್ಕೆ ಮುಂಚೆ, ಮೊದಲು ನಮ್ಮದೇ ಚಲನೆಗಳನ್ನು ಹತ್ತಿರದಿಂದ ಗಮನಿಸೋಣ.

ಶಾಲೆಯಲ್ಲಿ ದೈಹಿಕ ವ್ಯಾಯಾಮ ಮಾಡುವುದನ್ನು ನೀವು ಆನಂದಿಸುವಿರ? ವಿವಿಧ ವ್ಯಾಯಾಮಗಳನ್ನು ಮಾಡುವಾಗ ನೀವು ಕೈ ಮತ್ತು ಕಾಲುಗಳನ್ನು ಹೇಗೆ ಚಲಿಸುತ್ತೀರಿ? ನಮ್ಮ ದೇಹವು ಮಾಡಬಲ್ಲ ಅನೇಕ ಚಲನೆಗಳಲ್ಲಿ ಕೆಲವನ್ನು ಮಾಡಲು ನಾವು ಪ್ರಯತ್ನಿಸೋಣ.

ಕಾಲ್ಪನಿಕ ವಿಕೆಟ್‍ಗೆ ಒಂದು ಕಾಲ್ಪನಿಕ ಚೆಂಡನ್ನು ಎಸೆಯಿರಿ. ನಿಮ್ಮ ತೋಳನ್ನು ಹೇಗೆ ಚಲಿಸಿದಿರಿ? ಭುಜದ ಬಳಿ ನೀವು ಚಕ್ರೀಯವಾಗಿ ತಿರುಗಿಸಿದಿರ? ನಿಮ್ಮ ಭುಜವೂ ಚಲಿಸಿತೆ? ಅಂಗಾತ ಮಲಗಿ ಸೊಂಟದ ಬಳಿ ನಿಮ್ಮ ಕಾಲುಗಳನ್ನು ತಿರುಗಿಸಿ. ನಿಮ್ಮ ತೋಳನ್ನು ಮೊಣಕೈನ ಬಳಿ ಮತ್ತು ನಿಮ್ಮ ಕಾಲನ್ನು ಮೊಣಕಾಲಿನ ಬಳಿ ಬಾಗಿಸಿ. ನಿಮ್ಮ ತೋಳನ್ನು ಪಕ್ಕಕ್ಕೆ ಚಾಚಿ. ನಿಮ್ಮ ಕೈ ಬೆರಳುಗಳು ಭುಜವನ್ನು ಮುಟ್ಟುವಂತೆ ತೋಳನ್ನು ಬಾಗಿಸಿ. ತೋಳಿನ ಯಾವ ಭಾಗವನ್ನು ಬಗ್ಗಿಸಿದಿರಿ? ನಿಮ್ಮ ತೋಳನ್ನು ನೇರಗೊಳಿಸಿ ಮತ್ತು ಹಿಮ್ಮುಖವಾಗಿ ಬಾಗಿಸಲು ಪ್ರಯತ್ನಿಸಿ. ನಿಮಗದು ಸಾಧ್ಯವೆ?
ನಿಮ್ಮ ದೇಹದ ವಿವಿಧ ಭಾಗಗಳನ್ನು ಚಲಿಸಲು ಪ್ರಯತ್ನಿಸಿ ಮತ್ತು ಅವುಗಳ ಚಲನೆಗಳನ್ನು ಕೋಷ್ಟಕ 8.2ರಲ್ಲಿ ದಾಖಲಿಸಿ.

ದೇಹದ ಕೆಲವು ಭಾಗಗಳನ್ನು ನಾವು ವಿವಿಧ ದಿಕ್ಕುಗಳಲ್ಲಿ ಸುಲಭವಾಗಿ ಚಲಿಸುತ್ತೇವೆ ಆದರೆ ಕೆಲವನ್ನು ಒಂದೇ ದಿಕ್ಕಿನಲ್ಲಿ ಚಲಿಸುತ್ತೇವೆ. ಏಕೆ? ಕೆಲವು ಭಾಗಗಳನ್ನು ನಾವು ಚಲಿಸಲು ಸಾಧ್ಯವೇ ಇಲ್ಲ, ಏಕೆ?

ಚಟುವಟಿಕೆ 1
ನಿಮ್ಮ ಮೊಣಕೈ ಮಧ್ಯಕ್ಕೆ ಬರುವಂತೆ ಒಂದು ಸ್ಕೇಲನ್ನು ನಿಮ್ಮ ತೋಳಿನ ಮೇಲೆ ಉದ್ದವಾಗಿಡಿ (ಚಿತ್ರ 8.1).

ಸ್ಕೇಲು ಮತ್ತು ನಿಮ್ಮ ತೋಳನ್ನು ಜೊತೆಯಾಗಿ ಕಟ್ಟಲು ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆಗೆ ಹೇಳಿ. ಈಗ ನಿಮ್ಮ ಮೊಣಕೈಯನ್ನು ಬಗ್ಗಿಸಲು ಪ್ರಯತ್ನಿಸಿ. ನಿಮಗೆ ಸಾಧ್ಯವಾಯಿತೆ?

ನಮ್ಮ ದೇಹದ ಎರಡು ಭಾಗಗಳು ಒಟ್ಟಿಗೆ ಸೇರಿರುವ ಕಡೆ ನಾವು ದೇಹವನ್ನು ಬಗ್ಗಿಸಲು ಅಥವಾ ತಿರುಗಿಸಲು ಸಾಧ್ಯ ಎಂದು ನೀವು ಗಮನಿಸಿದಿರ? ಉದಾಹರಣೆಗೆ ಮೊಣಕೈ, ಭುಜ ಅಥವಾ ಕುತ್ತಿಗೆ. ಈ ಜಾಗಗಳನ್ನು ಕೀಲುಗಳು ಅಥವಾ ಸಂಧಿಗಳು (joints) ಎನ್ನುತ್ತೇವೆ. ಈ ರೀತಿಯ ಇನ್ನೂ ಕೆಲವು ಕೀಲುಗಳನ್ನು ಹೆಸರಿಸಬಲ್ಲಿರ? ನಮ್ಮ ದೇಹದಲ್ಲಿ ಕೀಲುಗಳಿಲ್ಲದೇ ಹೋಗಿದ್ದರೆ, ನಮ್ಮ ದೇಹ ಯಾವುದೇ ರೀತಿಯಲ್ಲಿ ಚಲಿಸಲು ಸಾಧ್ಯವೆ? ಆಲೋಚಿಸಿ.

ಈ ಕೀಲುಗಳ ಬಳಿ ನಿಖರವಾಗಿ ಯಾವ ಭಾಗಗಳು ಸೇರಿರುತ್ತವೆ?
ತಲೆಯ ಮೇಲೆ, ಮುಖ, ಕತ್ತು, ಮೂಗು, ಕಿವಿ, ಭುಜದ ಹಿಂಭಾಗ, ಬೆರಳುಗಳ ಸಹಿತ ಕೈ ಮತ್ತು ಕಾಲುಗಳು, ಇವುಗಳನ್ನು ನಿಮ್ಮ ಕೈ ಬೆರಳುಗಳಿಂದ ಒತ್ತಿ.
ಯಾವುದೋ ಗಟ್ಟಿಯಾದದ್ದು ನಿಮ್ಮ ಬೆರಳುಗಳನ್ನು ಒತ್ತುತ್ತಿರುವ ಅನುಭವ ನಿಮಗಾಗುತ್ತಿದೆಯೆ? ಆ ಗಟ್ಟಿಯಾದ ರಚನೆಗಳೇ ಮೂಳೆಗಳು. ಈ ಚಟುವಟಿಕೆಯನ್ನು ದೇಹದ ಬೇರೆ ಭಾಗಗಳ ಮೇಲೆ ಪುನರಾವರ್ತಿಸಿ. ಎಷ್ಟೊಂದು ಮೂಳೆಗಳು!

ಮೂಳೆಗಳನ್ನು ಬಗ್ಗಿಸಲು ಸಾಧ್ಯವಿಲ್ಲ. ಹಾಗಾದರೆ, ಮೊಣಕೈಯನ್ನು ನಾವು ಹೇಗೆ ಬಗ್ಗಿಸುತ್ತೇವೆ? ಅದು ಮೇಲ್ತೋಳಿನಿಂದ ನಮ್ಮ ಮಣಿಕಟ್ಟಿನವರೆಗೆ ಇರುವ ಒಂದು ಉದ್ದ ಮೂಳೆಯಲ್ಲ. ಮೊಣಕೈನ ಬಳಿ ವಿಭಿನ್ನ ಮೂಳೆಗಳು ಒಟ್ಟಿಗೆ ಸೇರಿವೆ. ಅದೇ ರೀತಿ, ದೇಹದ ಪ್ರತಿಯೊಂದು ಭಾಗದಲ್ಲೂ ಅನೇಕ ಮೂಳೆಗಳು ಇವೆ. ಮೂಳೆಗಳು ಸೇರುವ ಸ್ಥಳಗಳಲ್ಲಿ ಮಾತ್ರ ನಾವು ನಮ್ಮ ದೇಹವನ್ನು ಬಾಗಿಸಲು ಅಥವಾ ಚಲಿಸಲು ಸಾಧ್ಯ.
ವಿಭಿನ್ನ ರೀತಿಯ ಚಲನೆ ಮತ್ತು ಚಟುವಟಿಕೆಗಳನ್ನು ಮಾಡಲು ನಮ್ಮ ದೇಹದಲ್ಲಿ ವಿವಿಧ ಬಗೆಯ ಕೀಲುಗಳಿವೆ. ಅವುಗಳಲ್ಲಿ ಕೆಲವನ್ನು ಕಲಿಯೋಣ.

ಗೋಲ ಮತ್ತು ಗುಳಿ ಕೀಲುಗಳು

ಚಟುವಟಿಕೆ 2
ಕಾಗದದ ಒಂದು ಪಟ್ಟಿಯನ್ನು ಕೊಳವೆಯಾಕಾರದಲ್ಲಿ ಸುತ್ತಿ. ಒಂದು ಹಳೆಯ ರಬ್ಬರ್ ಅಥವಾ ಪ್ಲಾಸ್ಟಿಕ್ ಚೆಂಡಿನಲ್ಲಿ ಒಂದು ರಂಧ್ರವನ್ನು ಮಾಡಿ (ಶಿಕ್ಷಕರ ಮೇಲ್ವಿಚಾರಣೆಯಲ್ಲಿ) ಮತ್ತು ಚಿತ್ರ 8.2ರಲ್ಲಿ ತೋರಿಸಿರುವಂತೆ ಕಾಗದದ ಕೊಳವೆಯನ್ನು ಅದರಲ್ಲಿ ತಳ್ಳಿ. ಕೊಳವೆಯನ್ನು ಚೆಂಡಿಗೆ ಅಂಟಿಸಲೂಬಹುದು. ಒಂದು ಸಣ್ಣ ಬಟ್ಟಲಿನಲ್ಲಿ ಚೆಂಡನ್ನು ಹಾಕಿ. ಬಟ್ಟಲಿನಲ್ಲಿ ಚೆಂಡು ಮುಕ್ತವಾಗಿ ತಿರುಗುತ್ತದೆಯೆ? ಕಾಗದದ ಕೊಳವೆಯೂ ಸಹ ತಿರುಗುತ್ತದೆಯೆ?

ಈಗ ಕಾಗದದ ಕೊಳವೆಯು ನಿಮ್ಮ ತೋಳು ಮತ್ತು ಚೆಂಡು ಅದರ ತುದಿಯೆಂದು ಊಹಿಸಿಕೊಳ್ಳಿ. ಬಟ್ಟಲು ನಿಮ್ಮ ಭುಜಕ್ಕೆ ತೋಳು ಸೇರಿರುವ ಭಾಗ ಇದ್ದಂತೆ. ದುಂಡಗಿರುವ ಒಂದು ಮೂಳೆಯ ತುದಿ ಮತ್ತೊಂದು ಮೂಳೆಯ ಕುಳಿ (ಟೊಳ್ಳಾದ ಜಾಗ) ಯಲ್ಲಿ ಜೋಡಣೆಯಾಗುತ್ತದೆ (ಚಿತ್ರ 8.3). ಈ ರೀತಿಯ ಕೀಲು ಎಲ್ಲಾ ದಿಕ್ಕುಗಳಲ್ಲು ಚಲನೆ ಮಾಡಲು ಅನುವು ಮಾಡುತ್ತದೆ. ಈ ಅಧ್ಯಾಯದ ಪ್ರಾರಂಭದಲ್ಲಿ ನಾವು ಪ್ರಯತ್ನಿಸಿದ ಎಲ್ಲ ದೈಹಿಕ ಚಲನೆಗಳನ್ನು ನೆನಪಿಸಿಕೊಳ್ಳುತ್ತಾ ಆಲೋಚಿಸಿ. ಈ ರೀತಿಯ ಮತ್ತೊಂದು ಕೀಲನ್ನು ನೀವು ಹೆಸರಿಸಬಲ್ಲಿರ?

ತಿರುಗಾಣಿ ಕೀಲು

ತಿರುಗಾಣಿ ಕೀಲು ಚಿತ್ರ 8.4 ತಿರುಗಾಣಿ ಕೀಲು ನಮ್ಮ ಕುತ್ತಿಗೆ ಎಲ್ಲಿ ತಲೆಯನ್ನು ಸೇರುತ್ತದೊ ಅದು ತಿರುಗಾಣಿ ಕೀಲು (pivotal joint) (ಚಿತ್ರ 8.4). ಇದು ನಮ್ಮ ತಲೆಯನ್ನು ಮುಂದಕ್ಕೆ ಮತ್ತು ಹಿಂದಕ್ಕೆ ಬಾಗಿಸಲು ಹಾಗೂ ಬಲ ಅಥವಾ ಎಡಕ್ಕೆ ತಿರುಗಲು ಅನುವು ಮಾಡುತ್ತದೆ. ಈ ಚಲನೆಗಳನ್ನು ಪ್ರಯತ್ನಿಸಿ. ನಮ್ಮ ತೋಳು ಗೋಲ ಮತ್ತು ಗುಳಿ ಕೀಲಿನಲ್ಲಿ ಸಂಪೂರ್ಣ ವೃತ್ತಾಕಾರವಾಗಿ ತಿರುಗುವುದಕ್ಕಿಂತ ಈ ರೀತಿಯ ಚಲನೆಗಳು ಹೇಗೆ ಭಿನ್ನ? ಒಂದು ತಿರುಗಾಣಿ ಕೀಲಿನಲ್ಲಿ ಸಿಲಿಂಡರ್ ಆಕಾರದ ಮೂಳೆಯು ಉಂಗುರಾಕೃತಿಯಲ್ಲಿ ತಿರುಗುತ್ತದೆ.

ಬಿಜಾಗರಿ ಕೀಲುಗಳು

ಕೆಲವು ಸಲ ಬಾಗಿಲನ್ನು ತೆರೆಯಿರಿ ಮತ್ತು ಮುಚ್ಚಿರಿ. ಬಾಗಿಲಿನ ತಿರುಗಣಿ (hinges)ಗಳನ್ನು ಸೂಕ್ಷ್ಮವಾಗಿ ಗಮನಿಸಿ. ಬಾಗಿಲು ಹಿಂದೆ ಮತ್ತು ಮುಂದೆ ಚಲಿಸುವಂತೆ ಇವು ಮಾಡುತ್ತವೆ.

ಚಟುವಟಿಕೆ 3
ಬಿಜಾಗರಿ ಕೀಲು (hinge joint) ಯಾವ ರೀತಿಯ ಚಲನೆಗೆ ಆಸ್ಪದ ಮಾಡುತ್ತದೆ ಎಂದು ನೋಡೋಣ. ಕಾರ್ಡ್‍ಬೋರ್ಡ್ ಅಥವಾ ದಪ್ಪಗಿರುವ ಚಾರ್ಟ್ ಕಾಗದದಿಂದ ಚಿತ್ರ 8.5 ರಲ್ಲಿ ತೋರಿಸಿರುವಂತೆ ಒಂದು ಸಿಲಿಂಡರನ್ನು ಮಾಡಿ. ಚಿತ್ರದಲ್ಲಿ ತೋರಿಸಿರುವಂತೆ, ಸಿಲಿಂಡರಿನ ಮಧ್ಯಭಾಗವನ್ನು ಚುಚ್ಚಿ ಒಂದು ಸಣ್ಣ ಪೆನ್ಸಿಲ್‍ಅನ್ನು ಅಂಟಿಸಿ. ಸಿಲಿಂಡರ್ ಸುಲಭವಾಗಿ ಜೋಡಣೆ ಆಗುವಂತೆ ಒಂದು ಟೊಳ್ಳಾದ ಅರ್ಧ ಸಿಲಿಂಡರನ್ನು ಕಾರ್ಡ್‍ಬೋರ್ಡ್‍ನಿಂದ ಮಾಡಿ. ಅರೆಟೊಳ್ಳಾದ ಸಿಲಿಂಡರ್ ಒಂದು ಬಿಜಾಗರಿಯಂತೆ ಒಳಗೆ ಕೂತಿರುವ ಸಿಲಿಂಡರ್‍ನ ಚಲನೆಗೆ ಅನುವು ಮಾಡಿಕೊಡುತ್ತದೆ. ಸಿಲಿಂಡರನ್ನು ಚಲಿಸಲು ಪ್ರಯತ್ನಿಸಿ. ಅದು ಹೇಗೆ ಚಲಿಸುತ್ತದೆ? ಕೃತಕ ಗೋಲ ಮತ್ತು ಗುಳಿ ಕೀಲಿನಲ್ಲಿ ಕಂಡ ಚಲನೆಗಿಂತ ಇದು ಹೇಗೆ ಭಿನ್ನ? ಚಟುವಟಿಕೆ 1ರಲ್ಲಿ ಈ ವಿಧದ ಚಲನೆಯನ್ನು ಮೊಣಕೈ ಹತ್ತಿರ ನೋಡಿದ್ದೇವೆ. ಚಿತ್ರ 8.5ರಲ್ಲಿ ನಾವು ರಚಿಸಿರುವಂತಹ ಕೀಲಿನ ಮಾದರಿ, ಬಿಜಾಗರಿ ಕೀಲಿಗಿಂತ ಖಂಡಿತವಾಗಿ ವಿಭಿನ್ನ. ಆದರೆ ಒಂದು ಬಿಜಾಗರಿ ಕೀಲು ಯಾವ ದಿಕ್ಕಿನ ಚಲನೆಗೆ ಅನುವು ಮಾಡಿಕೊಡುತ್ತದೆ ಎಂಬ ಚಿತ್ರಣವನ್ನು ಇದು ನೀಡುತ್ತದೆ. ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಲು ಆಸ್ಪದ ಮಾಡುವ ಬಿಜಾಗರಿ ಕೀಲು ಮೊಣಕೈಯಲ್ಲಿದೆ (ಚಿತ್ರ 8.5). ಇಂತಹ ಕೀಲುಗಳ ಬೇರೆ ಉದಾಹರಣೆಗಳ ಬಗ್ಗೆ ನೀವು ಯೋಚಿಸುವಿರ?

ಸ್ಥಿರ ಕೀಲುಗಳು

ನಮ್ಮ ತಲೆಯಲ್ಲಿರುವ ಮೂಳೆಗಳ ನಡುವೆ ಇರುವ ಕೆಲವು ಕೀಲುಗಳು ನಾವು ಇದುವರೆಗೂ ಚರ್ಚಿಸಿದವುಗಳಿಗಿಂತಲು ಭಿನ್ನ. ಈ ಕೀಲುಗಳ ಬಳಿ ಮೂಳೆಗಳು ಚಲಿಸಲು ಸಾಧ್ಯವಿಲ್ಲ. ಅಂತಹ ರೀತಿಯ ಕೀಲುಗಳನ್ನು ಸ್ಥಿರ ಕೀಲುಗಳು (fixed joints) ಎನ್ನುತ್ತೇವೆ. ನಿಮ್ಮ ಬಾಯನ್ನು ಅಗಲವಾಗಿ ತೆರೆದಾಗ, ನಿಮ್ಮ ಕೆಳದವಡೆಯನ್ನು ತಲೆಯಿಂದ ದೂರ ಸರಿಸಬಹುದಲ್ಲವೆ? ಈಗ ಮೇಲ್ದವಡೆಯನ್ನು ಚಲಿಸಲು ಪ್ರಯತ್ನಿಸಿ. ಅದನ್ನು ಚಲಿಸಲು ನಿಮಗೆ ಸಾಧ್ಯವೆ? ಮೇಲ್ದವಡೆ ಮತ್ತು ತಲೆಯ ಉಳಿದ ಭಾಗದ ಮಧ್ಯೆ ಒಂದು ಕೀಲು ಇದೆ. ಅದೇ ಸ್ಥಿರ ಕೀಲು.

ನಾವು ದೇಹದ ಭಾಗಗಳನ್ನು ಜೋಡಿಸುವ ಕೆಲವು ಕೀಲುಗಳ ಬಗ್ಗೆ ಚರ್ಚಿಸಿದೆವು.
ದೇಹದ ವಿವಿಧ ಭಾಗಗಳಿಗೆ ವಿವಿಧ ಆಕಾರಗಳನ್ನು ಯಾವುದು ಕೊಡುತ್ತದೆ?
ನೀವು ಒಂದು ಗೊಂಬೆಯನ್ನು ಮಾಡಬೇಕಾದರೆ, ಮೊದಲು ಏನನ್ನು ಮಾಡುತ್ತೀರ? ಅದರ ಬಾಹ್ಯ ರಚನೆಯನ್ನು ನೀಡುವುದಕ್ಕೆ ಮುಂಚೆ ಬಹುಶಃ ಗೊಂಬೆಗೆ ಆಕಾರ ನೀಡಲು ಒಂದು ಚೌಕಟ್ಟನ್ನು ಮಾಡುವಿರಿ, ಅಲ್ಲವೆ? ನಮ್ಮ ದೇಹದಲ್ಲಿರುವ ಎಲ್ಲ ಮೂಳೆಗಳು ಕೂಡ ನಮ್ಮ ದೇಹಕ್ಕೆ ಆಕಾರ ಕೊಡಲು ಚೌಕಟ್ಟನ್ನು ಮಾಡುತ್ತವೆ. ಈ ಚೌಕಟ್ಟನ್ನು ಅಸ್ಥಿಪಂಜರ (skeleton) ಎನ್ನುತ್ತೇವೆ (ಚಿತ್ರ 8.7).

ಇದು ಮಾನವನ ಅಸ್ಥಿಪಂಜರದ ಆಕಾರವೆಂದು ನಮಗೆ ಹೇಗೆ ಗೊತ್ತು? ನಮ್ಮ ದೇಹದಲ್ಲಿರುವ ವಿವಿಧ ಮೂಳೆಗಳ ಆಕಾರ ನಮಗೆ ಹೇಗೆ ತಿಳಿಯುತ್ತದೆ? ನಮ್ಮ ದೇಹದ ಕೆಲವು ಭಾಗಗಳನ್ನು ಮುಟ್ಟುವುದರಿಂದ, ದೇಹದಲ್ಲಿರುವ ಮೂಳೆಗಳ ಆಕಾರ ಮತ್ತು ಸಂಖ್ಯೆಯನ್ನು ಕಲ್ಪಸಿಕೊಳ್ಳಬಹುದು. ಮೂಳೆಗಳ ಆಕಾರದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವ ವಿಧಾನವೆಂದರೆ ಮಾನವನ ದೇಹದ ಎಕ್ಸ್-ರೇ (X-ray) ಚಿತ್ರಗಳನ್ನು ನೋಡುವುದು.

ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ದೇಹದ ಯಾವುದಾದರೂ ಭಾಗದ ಎಕ್ಸ್-ರೇ ತೆಗೆಸಿಕೊಂಡಿರುವಿರ? ಕೆಲವೊಮ್ಮೆ ನಮಗೆ ಪೆಟ್ಟಾದಾಗ ಅಥವಾ ಅಪಘಾತವಾದಾಗ, ಮೂಳೆಗಳಿಗೆ ಏನಾದರೂ ಪೆಟ್ಟಾಗಿದೆಯೇ ಎಂದು ಕಂಡುಹಿಡಿಯಲು ವೈದ್ಯರು, ಈ ಎಕ್ಸ್-ರೇಗಳನ್ನು ಉಪಯೋಗಿಸುತ್ತಾರೆ. ನಮ್ಮ ದೇಹದಲ್ಲಿರುವ ಮೂಳೆಗಳ ಆಕಾರವನ್ನು ಈ ಎಕ್ಸ್-ರೇಗಳು ತೋರಿಸುತ್ತವೆ.

ಹುಟ್ಟುವಾಗ ಮಾನವನ ಅಸ್ಥಿಪಂಜರದಲ್ಲಿ ಸುಮಾರು 305 ಮೂಳೆಗಳು ಇರುತ್ತವೆ. ವಯಸ್ಸಾಗುತ್ತಿದ್ದಂತೆ ಅಸ್ಥಿಪಂಜರದಲ್ಲಿ ಮೂಳೆಗಳ ಸಂಖ್ಯೆ ಬದಲಾಗುತ್ತದೆ. ಕೆಲವು ಮೂಳೆಗಳು ಪ್ರೌಢಾವಸ್ಥೆಯ ಹೊತ್ತಿಗೆ ಒಂದಕ್ಕೊಂದು ಸೇರುವುದರಿಂದ, ಮೂಳೆಗಳ ಸಂಖ್ಯೆ 206 ಕ್ಕೆ ಇಳಿಯುತ್ತದೆ.

ನಿಮ್ಮ ಮುಂದೋಳು, ಮೇಲ್ದೋಳು, ಕೆಳಕಾಲು ಮತ್ತು ತೊಡೆಯಲ್ಲಿರುವ ಮೂಳೆಗಳನ್ನು ಮುಟ್ಟಿ ನೋಡಿ. ಪ್ರತಿಯೊಂದು ಭಾಗದಲ್ಲೂ ಇರುವ ಮೂಳೆಗಳ ಸಂಖ್ಯೆಯನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಅದೇ ರೀತಿ, ನಿಮ್ಮ ಹರಡು(ಕಣಕಾಲು) ಮತ್ತು ಮಂಡಿಯ ಮೂಳೆಗಳನ್ನು ಸ್ಪರ್ಶಿಸಿ ಮತ್ತು ಎಕ್ಸ್-ರೇ ಚಿತ್ರಗಳೊಂದಿಗೆ ಇವುಗಳನ್ನು ಹೋಲಿಸಿ (ಚಿತ್ರ 8.8).

ನಿಮ್ಮ ಬೆರಳುಗಳನ್ನು ಬಾಗಿಸಿ. ಪ್ರತಿಯೊಂದು ಕೀಲಿನ ಬಳಿಯೂ ಅವುಗಳನ್ನು ಬಾಗಿಸಲು ನಿಮಗೆ ಸಾಧ್ಯವೆ? ನಿಮ್ಮ ಮಧ್ಯದ ಬೆರಳಿನಲ್ಲಿ ಎಷ್ಟು ಮೂಳೆಗಳಿವೆ? ನಿಮ್ಮ ಅಂಗೈನ ಮೇಲ್ಭಾಗವನ್ನು ಮುಟ್ಟಿ. ಅಲ್ಲಿ ಅನೇಕ ಮೂಳೆಗಳಿರುವಂತಿದೆ, ಅಲ್ಲವೆ? (ಚಿತ್ರ 8.9). ನಮ್ಮ ಮಣಿಕಟ್ಟು ಬಾಗುತ್ತದೆಯೆ? ಅದು ಕಾರ್ಪಲ್ ಎಂದು ಕರೆಯುವ ಅನೇಕ ಚಿಕ್ಕ ಮೂಳೆಗಳಿಂದ ಆಗಿದೆ. ಅದಕ್ಕೆ ಒಂದೇ ಮೂಳೆ ಇದ್ದಿದ್ದರೆ ಏನಾಗುತ್ತಿತ್ತು?

ಚಟುವಟಿಕೆ 4
ಗೂಡು ದೀರ್ಘವಾಗಿ ಉಸಿರೆಳೆದುಕೊಂಡು ಸ್ವಲ್ಪ ಹೊತ್ತು ಹಾಗೇ ಹಿಡಿದಿಟ್ಟುಕೊಳ್ಳಿ. ಎದೆಯ ಮಧ್ಯಭಾಗ ಮತ್ತು ಬೆನ್ನಿನ ಭಾಗವನ್ನು ಏಕಕಾಲದಲ್ಲಿ ಮೃದುವಾಗಿ ಒತ್ತುತ್ತಾ ನಿಮ್ಮ ಪಕ್ಕೆಲುಬುಗಳು (ಎದೆಯ ಮೂಳೆಗಳು) ಮತ್ತು ಬೆನ್ನಿನ ಮೂಳೆಯನ್ನು ಮುಟ್ಟಿ. ಸಾಧ್ಯವಾದಷ್ಟು ಪಕ್ಕೆಲುಬುಗಳನ್ನು ಎಣಿಸಿ. ಚಿತ್ರ 8.10ನ್ನು ಎಚ್ಚರಿಕೆಯಿಂದ ಗಮನಿಸಿ ಮತ್ತು ನೀವು ಮುಟ್ಟಿದ ಎದೆಯ ಮೂಳೆಗಳ ಅನುಭವದೊಂದಿಗೆ ಹೋಲಿಸಿ. ಕುತೂಹಲಕಾರಿ ರೀತಿಯಲ್ಲಿ ಪಕ್ಕೆಲುಬುಗಳು ಬಾಗಿರುವುದನ್ನು ನಾವು ನೋಡುತ್ತೇವೆ. ಅವು ಎದೆಯ ಮೂಳೆ ಮತ್ತು ಬೆನ್ನುಮೂಳೆಯೊಡನೆ ಜೋಡಣೆಯಾಗಿ ಒಂದು ಪೆಟ್ಟಿಗೆಯನ್ನು ರಚಿಸಿವೆ. ಇದನ್ನು ಪಕ್ಕೆಲುಬುಪಂಜರ (rib cage) ಎನ್ನುತ್ತೇವೆ. ಎದೆಯ ಎರಡೂ ಕಡೆ 12 ಪಕ್ಕೆಲುಬುಗಳಿವೆ. ಈ ಗೂಡಿನಲ್ಲಿ ದೇಹದ ಕೆಲವು ಪ್ರಮುಖ ಆಂತರಿಕ ಭಾಗಗಳಿದ್ದು ರಕ್ಷಣೆ ಪಡೆಯುತ್ತವೆ.

ಮೊಣಕಾಲನ್ನು ಬಗ್ಗಿಸದೆ ಅವರ ಕಾಲ್ಬೆರಳುಗಳನ್ನು ಮುಟ್ಟಲು ನಿಮ್ಮ ಕೆಲವು ಸ್ನೇಹಿತರನ್ನು ಕೇಳಿ. ನಿಮ್ಮ ಸ್ನೇಹಿತನ / ಸ್ನೇಹಿತೆಯ ಬೆನ್ನಿನ ಮೇಲೆ ನಿಮ್ಮ ಬೆರಳುಗಳನ್ನು ಕುತ್ತಿಗೆಯಿಂದ ಕೆಳಗಡೆಯವರೆಗೆ ಚಲಿಸಿ. ನಿಮ್ಮ ಸ್ಪರ್ಶಕ್ಕೆ ಬಂದದ್ದು ಬೆನ್ನುಮೂಳೆ (back bone). ಇದು ಅನೇಕ ಚಿಕ್ಕ ಮೂಳೆಗಳಾದ ಕಶೇರುಖಂಡ (vertebrate) ಗಳಿಂದ ಆಗಿದೆ. 33 ಕಶೇರುಖಂಡಗಳಿಂದ ಬೆನ್ನುಮೂಳೆ ಆಗಿದೆ (ಚಿತ್ರ 8.11). ಪಕ್ಕೆಲುಬು ಗೂಡು ಈ ಮೂಳೆಗಳಿಗೆ ಜೋಡಣೆಯಾಗಿದೆ.

ಬೆನ್ನುಮೂಳೆಯು ಒಂದೇ ಒಂದು ಉದ್ದ ಮೂಳೆಯಿಂದ ಆಗಿದ್ದರೆ, ನಿಮ್ಮ ಸ್ನೇಹಿತ / ಸ್ನೇಹಿತೆ ಬಗ್ಗಲು ಸಾಧ್ಯವಾಗುತ್ತಿತ್ತೆ?

ನಿಮ್ಮ ಸ್ನೇಹಿತ / ಸ್ನೇಹಿತೆ ನಿಂತುಕೊಂಡು ಎರಡು ಕೈಗಳಿಂದ ಗೋಡೆಯನ್ನು ಒತ್ತಿ ಅದನ್ನು ತಳ್ಳಲು ಪ್ರಯತ್ನಿಸಲಿ. ಭುಜಗಳಿರುವ ಕಡೆ ಪ್ರಧಾನವಾಗಿರುವ ಎರಡು ಮೂಳೆಗಳು ಏಳುವುದನ್ನು ನೀವು ಗಮನಿಸುವಿರ? ಅವುಗಳನ್ನು ಭುಜದ ಮೂಳೆಗಳು (shoulder bones) ಎನ್ನುತ್ತೇವೆ (ಚಿತ್ರ 8.12).

ಚಿತ್ರ 8.13ನ್ನು ಎಚ್ಚರಿಕೆಯಿಂದ ಗಮನಿಸಿ. ಈ ರಚನೆ ಸೊಂಟದ ಮೂಳೆಗಳಿಂದ (pelvic bones) ಆಗಿದೆ. ಅವು ಹೊಟ್ಟೆಯ ಕೆಳಗಿನ ಭಾಗವನ್ನು ಸುತ್ತುವರೆದಿವೆ. ಈ ಭಾಗದ ಮೇಲೆ ನೀವು ಕುಳಿತುಕೊಳ್ಳುವಿರಿ.

ತಲೆಬುರುಡೆ (skull) ಯು ಅನೇಕ ಮೂಳೆಗಳ ಜೋಡಣೆಯಿಂದ ಆಗಿದೆ (ಚಿತ್ರ 8.14). ಇದು ದೇಹದ ಅತ್ಯಂತ ಪ್ರಮುಖವಾದ ಮಿದುಳನ್ನು ಸುತ್ತುವರೆದು ಅದನ್ನು ರಕ್ಷಿಸುತ್ತದೆ.

ನಮ್ಮ ಅಸ್ಥಿಪಂಜರದ ಅನೇಕ ಮೂಳೆ ಮತ್ತು ಕೀಲುಗಳ ಬಗ್ಗೆ ಚರ್ಚಿಸಿದೆವು. ಮೂಳೆಗಳಷ್ಟು ಗಟ್ಟಿಯಲ್ಲದ ಮತ್ತು ಬಾಗಿಸಲು ಸಾಧ್ಯವಾಗುವ ಅಸ್ಥಿಪಂಜರದ ಕೆಲವು ಹೆಚ್ಚುವರಿ ಭಾಗಗಳಿವೆ. ಅವುಗಳನ್ನು ಮೃದ್ವಸ್ಥಿ (cartilage) ಎನ್ನುತ್ತೇವೆ.

ನಿಮ್ಮ ಕಿವಿಯನ್ನು ಸ್ಪರ್ಶಿಸಿ. ಬಾಗಿಸಲು ಸಾಧ್ಯವಾಗಬಲ್ಲ ಮೂಳೆಗಳಂತಹ ಗಟ್ಟಿ ಭಾಗಗಳನ್ನೇನಾದರು ಕಾಣುವಿರ (ಚಿತ್ರ 8.15)? ಇಲ್ಲಿ ಯಾವುದೇ ರೀತಿಯ ಮೂಳೆಗಳಿರುವಂತೆ ಕಾಣುವುದಿಲ್ಲ, ಅಲ್ಲವೆ? ನೀವು ಬೆರಳುಗಳ ಮಧ್ಯೆ ಒತ್ತುತ್ತಿದ್ದಂತೆ, ಕಿವಿಯ ಹಾಲೆ ಮತ್ತು ಅದರ ಮೇಲಿನ ಭಾಗಗಳ ನಡುವೆ ಏನಾದರೂ ಭಿನ್ನತೆ ಇರುವುದು ಕಂಡುಬಂತೆ? (ಚಿತ್ರ 8.16).

ಕಿವಿಯ ಮೇಲ್ಭಾಗದಲ್ಲಿ ಕಿವಿಯ ಹಾಲೆಯಂತೆ ಮೃದುವಾಗಿಲ್ಲದ, ಆದರೆ ಮೂಳೆಯಂತೆ ಗಟ್ಟಿಯಾಗೂ ಇಲ್ಲದ ಒಂದು ಭಾಗ ನಿಮ್ಮ ಅನುಭವಕ್ಕೆ ಬರುತ್ತದೆ, ಅಲ್ಲವೆ? ಇದು ಮೃದ್ವಸ್ಥಿ. ಮೃದ್ವಸ್ಥಿಯು ದೇಹದ ಕೀಲುಗಳಲ್ಲೂ ಕಂಡು ಬರುತ್ತದೆ.

ನಮ್ಮ ಅಸ್ಥಿಪಂಜರವು ಅನೇಕ ಮೂಳೆ, ಕೀಲು ಮತ್ತು ಮೃದ್ವಸ್ಥಿಗಳಿಂದ ಆಗಿದೆ ಎಂದು ನಾವು ನೋಡಿದ್ದೇವೆ. ಅವುಗಳಲ್ಲಿ ಬಹುತೇಕ ಮೂಳೆಗಳನ್ನು ನೀವು ಮುಟ್ಟಿ, ಬಾಗಿಸಿ ಮತ್ತು ಚಲಿಸಬಹುದು. ನಿಮ್ಮ ನೋಟ್‍ಪುಸ್ತಕದಲ್ಲಿ ಅಸ್ಥಿಪಂಜರದ ಅಂದವಾದ ಚಿತ್ರವನ್ನು ಬರೆಯಿರಿ.

ನಮ್ಮ ದೇಹದಲ್ಲಿರುವ ಮೂಳೆಗಳು ಮತ್ತು ವಿಭಿನ್ನ ರೀತಿಗಳಲ್ಲಿ ಚಲಿಸಲು ಸಹಾಯ ಮಾಡುವ ಕೀಲುಗಳ ಬಗ್ಗೆ ಕಲಿತಿದ್ದೇವೆ. ಮೂಳೆಗಳು ನಿರ್ದಿಷ್ಟ ರೀತಿಯಲ್ಲಿ ಚಲಿಸಲು ಹೇಗೆ ಸಾಧ್ಯವಾಗುತ್ತಿದೆ? ನಾವು ಕಂಡುಹಿಡಿಯೋಣ.

ನಿಮ್ಮ ಒಂದು ಕೈಯಿಂದ ಮುಷ್ಟಿ ಮಾಡಿ, ನಿಮ್ಮ ತೋಳನ್ನು ಮೊಣಕೈ ಬಳಿ ಬಾಗಿಸಿ ಮತ್ತು ಹೆಬ್ಬೆರಳಿನಿಂದ ಭುಜವನ್ನು ಮುಟ್ಟಿ (ಚಿತ್ರ 8.17). ನಿಮ್ಮ ಮೇಲ್ತೋಳಿನಲ್ಲಿ ಏನಾದರು ಬದಲಾವಣೆಯನ್ನು ಕಾಣುವಿರ? ಅದನ್ನು ಮತ್ತೊಂದು ಕೈಯಿಂದ ಮುಟ್ಟಿ. ನಿಮ್ಮ ಮೇಲ್ತೋಳು ಊದಿಕೊಂಡಿರುವುದು ನಿಮ್ಮ ಗಮನಕ್ಕೆ ಬಂತೆ? ಇದು ಒಂದು ಸ್ನಾಯು (muscle). ಸ್ನಾಯುವು ಉಬ್ಬಲು ಕಾರಣ ಸಂಕೋಚನ (contraction) (ಅದು ಉದ್ದಳತೆಯಲ್ಲಿ ಕಿರಿದಾಯಿತು). ಈಗ ನಿಮ್ಮ ತೋಳನ್ನು ಮಾಮೂಲಿ ಸ್ಥಿತಿಗೆ ತನ್ನಿ. ಸ್ನಾಯುವಿಗೆ ಏನಾಯಿತು? ಈಗಲೂ ಸಂಕುಚಿಸಿದೆಯೆ? ಇದೇ ರೀತಿ, ನೀವು ನಡೆಯುವಾಗ ಅಥವಾ ಓಡುವಾಗ ಕಾಲಿನ ಸ್ನಾಯುಗಳಲ್ಲಿ ಸಂಕೋಚನವನ್ನು ಗಮನಿಸಬಹುದು.

ಸಂಕೋಚನವಾದಾಗ ಸ್ನಾಯುವು ಗಿಡ್ಡ, ಬಿರುಸು ಮತ್ತು ದಪ್ಪವಾಗುತ್ತದೆ. ಇದು ಮೂಳೆಯನ್ನು ಎಳೆಯುತ್ತದೆ.

ಸ್ನಾಯುಗಳು ಜೋಡಿಗಳಲ್ಲಿ ಕೆಲಸ ಮಾಡುತ್ತವೆ. ಅದರಲ್ಲಿ ಒಂದು ಸಂಕುಚಿಸಿದರೆ, ಆ ದಿಕ್ಕಿನಲ್ಲಿ ಮೂಳೆಯ ಎಳೆತ ಆಗುತ್ತದೆ. ಜೋಡಿಯ ಮತ್ತೊಂದು ಸ್ನಾಯುವು ವಿಕಸನವಾಗುತ್ತದೆ. ವಿಶ್ರಾಂತ ಸ್ಥಿತಿಗೆ ಬರುತ್ತದೆ. ಮೂಳೆಯನ್ನು ವಿರುದ್ಧ ದಿಕ್ಕಿನಲ್ಲಿ ಚಲಿಸಲು, ವಿಕಸನಗೊಂಡ ಸ್ನಾಯುವು ಸಂಕುಚಿಸಿ, ಮೂಳೆಯನ್ನು ಮೊದಲಿನ ಸ್ಥಿತಿಗೆ ಎಳೆಯುತ್ತದೆ. ಅದೇ ಸಮಯದಲ್ಲಿ ಮೊದಲನೆಯ ಸ್ನಾಯು ವಿಕಸನಗೊಳ್ಳುತ್ತದೆ. ಒಂದು ಸ್ನಾಯು ಕೇವಲ ಎಳೆಯಬಲ್ಲದು. ಅದಕ್ಕೆ ತಳ್ಳಲಾಗುವುದಿಲ್ಲ. ಹಾಗಾಗಿ, ಒಂದು ಮೂಳೆಯನ್ನು ಚಲಿಸಲು, ಎರಡು ಸ್ನಾಯುಗಳು ಒಟ್ಟಿಗೆ ಕೆಲಸ ಮಾಡಬೇಕು (ಚಿತ್ರ 8.17).

ಚಲನೆಗೆ ಸ್ನಾಯು ಮತ್ತು ಮೂಳೆಗಳು ಯಾವಾಗಲೂ ಅವಶ್ಯಕವೆ? ಬೇರೆ ಪ್ರಾಣಿಗಳು ಹೇಗೆ ಚಲಿಸುತ್ತವೆ? ಎಲ್ಲ ಪ್ರಾಣಿಗಳಿಗೂ ಮೂಳೆಗಳಿವೆಯೆ? ಎರೆಹುಳು ಅಥವಾ ಬಸವನಹುಳು ಹೇಗೆ ಚಲಿಸುತ್ತವೆ? ಕೆಲವು ಪ್ರಾಣಿಗಳು ಚಲಿಸುವ ವಿಧಾನದ ಬಗ್ಗೆ ಅಂದರೆ ನಡಿಗೆಯ ಬಗ್ಗೆ ಅಭ್ಯಸಿಸೋಣ.

8.2 ಪ್ರಾಣಿಗಳ ನಡಿಗೆ

ಎರೆಹುಳು

ಚಟುವಟಿಕೆ 5
ಒಂದು ತೋಟದಲ್ಲಿ ಒಂದು ಎರೆಹುಳು ಮಣ್ಣಿನ ಮೇಲೆ ಚಲಿಸುತ್ತಿರುವುದನ್ನು ಗಮನಿಸಿ. ನಿಧಾನವಾಗಿ ಅದನ್ನು ಮೇಲೆತ್ತಿ ಮತ್ತು ಒಂದು ಹೀರು ಕಾಗದ ಅಥವಾ ಸೋಸು ಕಾಗದದ ಮೇಲಿಡಿ. ಅದರ ಚಲನೆಯನ್ನು ಗಮನಿಸಿ (ಚಿತ್ರ 8.18). ಆನಂತರ ಅದನ್ನು ನಯವಾದ ಗಾಜಿನ ಪ್ಲೇಟ್ ಅಥವಾ ಯಾವುದಾದರೂ ಜಾರುವ ಮೇಲ್ಮೈ ಮೇಲಿಡಿ. ಈಗ ಅದರ ಚಲನೆಯನ್ನು ಗಮನಿಸಿ. ಕಾಗದದ ಮೇಲಾದ ಚಲನೆಗಿಂತ ಇದು ಭಿನ್ನವಾಗಿದೆಯೆ? ಈ ಎರಡೂ ಮೇಲ್ಮೈಗಳಲ್ಲಿ, ಯಾವುದರ ಮೇಲೆ ಎರೆಹುಳು ಸುಲಭವಾಗಿ ಚಲಿಸುವುದನ್ನು ನೀವು ಕಾಣುವಿರಿ?

ಎರೆಹುಳುವಿನ ದೇಹವು ಒಂದರ ತುದಿ ಮತ್ತೊಂದರೊಂದಿಗೆ ಸೇರಿರುವ ಅನೇಕ ಉಂಗುರಗಳಿಂದ ಆಗಿದೆ. ಎರೆಹುಳುವಿನಲ್ಲಿ ಮೂಳೆಗಳಿಲ್ಲ. ಅದರಲ್ಲಿ ಸ್ನಾಯುಗಳಿದ್ದು, ದೇಹವು ವಿಸ್ತರಿಸಲು ಮತ್ತು ಕಿರಿದಾಗಲು ಸಹಕರಿಸುತ್ತವೆ. ಚಲನೆಯ ಸಮಯದಲ್ಲಿ ಎರೆಹುಳು ಅದರ ದೇಹದ ಹಿಂಭಾಗವನ್ನು ನೆಲಕ್ಕೆ ಸ್ಥಿರವಾಗಿರುವಂತೆ ನೆಲೆಗೊಳಿಸುತ್ತಾ, ಮುಂಭಾಗವನ್ನು ವಿಸ್ತರಿಸುತ್ತದೆ. ಅನಂತರ ಮುಂಭಾಗದ ತುದಿಯನ್ನು ಸ್ಥಿರವಾಗಿಸುತ್ತದೆ ಮತ್ತು ಹಿಂಭಾಗದ ತುದಿಯನ್ನು ಬಿಡುಗಡೆ ಮಾಡುತ್ತದೆ. ನಂತರ ದೇಹವನ್ನು ಕಿರಿದುಗೊಳಿಸುತ್ತದೆ ಮತ್ತು ಹಿಂಭಾಗದ ತುದಿಯನ್ನು ಮುಂದಕ್ಕೆ ಎಳೆಯುತ್ತದೆ. ಇದು ಸ್ವಲ್ಪ ದೂರ ಮುಂದಕ್ಕೆ ಚಲಿಸುವಂತೆ ಮಾಡುತ್ತದೆ. ಈ ರೀತಿಯ ಸ್ನಾಯುವಿನ ಪುನರಾವರ್ತಿತ ವಿಕಸನ ಮತ್ತು ಸಂಕೋಚನದಿಂದ ಎರೆಹುಳು ಮಣ್ಣಿನ ಮೇಲೆ ಚಲಿಸುತ್ತದೆ. ಚಲನೆಗೆ ಸಹಕರಿಸಲು ಅದರ ದೇಹವು ಲೋಳೆಯನ್ನು ಸ್ರವಿಸುತ್ತದೆ.

ತನ್ನ ದೇಹದ ಭಾಗಗಳನ್ನು ನೆಲಕ್ಕೆ ಹೇಗೆ ಅದು ಸ್ಥಿರಗೊಳಿಸುತ್ತದೆ? ಅದರ ದೇಹದಡಿಯಲ್ಲಿ, ಹೊರಕ್ಕೆ ಚಾಚಿಕೊಂಡಿರುವ ಅನೇಕ ಚಿಕ್ಕದಾದ ಬಿರುಗೂದಲುಗಳು ಇವೆ. ಬಿರುಗೂದಲುಗಳನ್ನು ಸ್ನಾಯುಗಳಿಗೆ ಜೋಡಿಸಲಾಗಿದೆ. ನೆಲಕ್ಕೆ ಉತ್ತಮ ಹಿಡಿತ ದೊರಕುವ ಹಾಗೆ ಬಿರುಗೂದಲುಗಳು ಸಹಕರಿಸುತ್ತವೆ.

ವಾಸ್ತವವಾಗಿ ಎರೆಹುಳು ತನ್ನ ಮಾರ್ಗದ ಮಣ್ಣನ್ನು ತಿನ್ನುತ್ತದೆ! ಆನಂತರ ಅದು ತಿಂದು ಜೀರ್ಣವಾಗದ ಭಾಗವನ್ನು ದೇಹದಿಂದ ಹೊರಹಾಕುತ್ತದೆ. ಎರೆಹುಳುವಿನ ಈ ಚಟುವಟಿಕೆಯು ಸಸ್ಯಗಳಿಗೆ ಮಣ್ಣನ್ನು ಹೆಚ್ಚು ಉಪಯುಕ್ತವಾಗಿಸುತ್ತದೆ.

ಬಸವನಹುಳು

ಚಟುವಟಿಕೆ 6
ನಿಮ್ಮ ತೋಟದಲ್ಲಿ ಅಥವಾ ಹೊಲದಲ್ಲಿ ಬಸವನಹುಳುವನ್ನು ವೀಕ್ಷಿಸಿ. ಅದರ ಬೆನ್ನ ಮೇಲೆ ದುಂಡಾಗಿರುವ ರಚನೆ ಇರುವುದನ್ನು ಗಮನಿಸಿದ್ದೀರ? (ಚಿತ್ರ 8.19).

ಇದನ್ನು ಚಿಪ್ಪು (shell) ಎನ್ನುತ್ತೇವೆ ಮತ್ತು ಇದು ಬಸವನಹುಳುವಿನ ಹೊರಕವಚ. ಆದರೆ ಇದು ಮೂಳೆಗಳಿಂದ ಮಾಡಲಾಗಿಲ್ಲ. ಚಿಪ್ಪು ಏಕಘಟಕವಾಗಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಲು ಸಹಕರಿಸುವುದಿಲ್ಲ. ಅದನ್ನೂ ಹೊತ್ತು ಹೋಗಬೇಕು.

ಬಸವನಹುಳುವನ್ನು ಗಾಜಿನ ತಟ್ಟೆಯ ಮೇಲಿಟ್ಟು ಗಮನಿಸಿ. ಅದು ಚಲಿಸಲು ಪ್ರಾರಂಭಿಸಿದ ಮೇಲೆ ಎಚ್ಚರಿಕೆಯಿಂದ ಗಾಜಿನ ತಟ್ಟೆಯನ್ನು ಬಸವನಹುಳುವಿನ ಸಮೇತ ನಿಮ್ಮ ತಲೆಯ ಮೇಲ್ಮಟ್ಟಕ್ಕೆ ಎತ್ತಿ. ಅದರ ಚಲನೆಗಳನ್ನು ಕೆಳಗಿನಿಂದ ಗಮನಿಸಿ.

ಚಿಪ್ಪಿನ ರಂಧ್ರದಿಂದ ಒಂದು ದಪ್ಪನಾದ ರಚನೆ ಮತ್ತು ತಲೆ ಆಚೆ ಬರುವುದು. ಆ ದಪ್ಪನಾದ ರಚನೆಯು ಶಕ್ತಿಯುತ ಸ್ನಾಯುಗಳಿಂದ ಮಾಡಿರುವ ಅದರ ಪಾದ. ಈಗ ಎಚ್ಚರಿಕೆಯಿಂದ ಗಾಜಿನ ತಟ್ಟೆಯನ್ನು ಓರೆಯಾಗಿಸಿ, ಅಲೆಯಾಕಾರದ ಪಾದದ ಚಲನೆಯನ್ನು ನೋಡಬಹುದು. ಎರೆಹುಳುವಿಗೆ ಹೋಲಿಸಿದರೆ ಬಸವನಹುಳುವಿನ ಚಲನೆ ನಿಧಾನವೆ ಅಥವಾ ವೇಗವೆ?

ಜಿರಳೆ

ಚಟುವಟಿಕೆ 7
ಒಂದು ಜಿರಳೆಯನ್ನು ಗಮನಿಸಿ (ಚಿತ್ರ 8.20).

ಜಿರಳೆಗಳು ನಡೆಯುತ್ತವೆ ಮತ್ತು ಹತ್ತುತ್ತವೆ. ಅಷ್ಟೇ ಅಲ್ಲದೆ ಗಾಳಿಯಲ್ಲಿ ಹಾರುತ್ತವೆ. ಅವುಗಳಿಗೆ ಮೂರು ಜೊತೆ ಕಾಲುಗಳಿವೆ. ಅವು ನಡೆಯಲು ಸಹಕರಿಸುತ್ತವೆ. ಅದರ ದೇಹವು ಕಠಿಣವಾದ ಹೊರ ಕಂಕಾಲದಿಂದ ಮುಚ್ಚಲ್ಪಟ್ಟಿದೆ. ಈ ಹೊರಕಂಕಾಲವು ಅನೇಕ ಫಲಕಗಳು ಒಟ್ಟಿಗೆ ಸೇರಿ ಆಗಿದ್ದು, ಅದು ಚಲನೆಗೆ ಅವಕಾಶ ಮಾಡಿಕೊಡುತ್ತದೆ.

ತಲೆಯ ಹಿಂಭಾಗದಲ್ಲಿ ಎರಡು ಜೊತೆ ರೆಕ್ಕೆಗಳು ಅದರ ದೇಹಕ್ಕೆ ಅಂಟಿಕೊಂಡಿವೆ. ಜಿರಳೆಗಳಿಗೆ ವಿಶಿಷ್ಟವಾದ ಸ್ನಾಯುಗಳಿದ್ದು, ಕಾಲುಗಳ ಬಳಿಯಿರುವ ಸ್ನಾಯುಗಳು ಕಾಲುಗಳನ್ನು ಚಲಿಸಿ ನಡೆಯುವಂತೆ ಮಾಡುತ್ತವೆ. ಜಿರಳೆ ಹಾರುವಾಗ ಹಾರಾಟದ ಸ್ನಾಯುಗಳು ರೆಕ್ಕೆಗಳನ್ನು ಚಲಿಸುತ್ತವೆ.

ಪಕ್ಷಿಗಳು

ಪಕ್ಷಿಗಳು ಗಾಳಿಯಲ್ಲಿ ಹಾರುತ್ತವೆ ಮತ್ತು ನೆಲದ ಮೇಲೆ ನಡೆಯುತ್ತವೆ. ಕೆಲವು ಪಕ್ಷಿಗಳಾದ ಬಾತುಕೋಳಿ ಮತ್ತು ಹಂಸಗಳು ನೀರಿನಲ್ಲಿ ಈಜುತ್ತವೆ. ಪಕ್ಷಿಗಳು ಹಾರಬಹುದು ಏಕೆಂದರೆ ಅವುಗಳ ದೇಹವು ಹಾರುವುದಕ್ಕೆ ಚೆನ್ನಾಗಿ ಹೊಂದಿಕೊಂಡಿದೆ. ಅವುಗಳ ಮೂಳೆಗಳು ಟೊಳ್ಳು ಮತ್ತು ಹಗುರ. ಹಿಂಗಾಲಿನ ಮೂಳೆಗಳು ನಡೆಯುವುದಕ್ಕೆ ಮತ್ತು ಕುಳಿತುಕೊಳ್ಳುವುದಕ್ಕೆ ಸೂಕ್ತ.

ಮುಂಗಾಲುಗಳು ಎಲುಬುಗಳ ಸಹಿತ ರೆಕ್ಕೆಗಳಾಗಿ ಮಾರ್ಪಟ್ಟಿವೆ. ಭುಜದ ಮೂಳೆಗಳು ಶಕ್ತಿಯುತವಾಗಿವೆ. ರೆಕ್ಕೆಗಳನ್ನು ಮೇಲೆ ಮತ್ತು ಕೆಳಗೆ ಚಲಿಸಲು ಉಪಯೋಗವಾಗುವ ಹಾರಾಟದ ಸ್ನಾಯುಗಳನ್ನು ಹಿಡಿದಿಡಲು ಎದೆಯ ಮೂಳೆ ಮಾರ್ಪಾಟಾಗಿದೆ (ಚಿತ್ರ 8.21).

ಮೀನು

ಚಟುವಟಿಕೆ 8
ಕಾಗದದ ಒಂದು ದೋಣಿಯನ್ನು ಮಾಡಿ. ನೀರಿನಲ್ಲಿ ಇಟ್ಟು ಚೂಪಾದ ತುದಿ ಮುಂದಿರುವಂತೆ ಒಂದು ತುದಿಯಿಂದ ಮತ್ತೊಂದು ತುದಿಗೆ ತಳ್ಳಿ [ಚಿತ್ರ 8.22 (ಎ)]. ಅದು ನೀರಿನಲ್ಲಿ ಸುಲಭವಾಗಿ ಹೋಯಿತೆ? ಈಗ ದೋಣಿಯನ್ನು ಅಡ್ಡ ಹಿಡಿದು ಅದರ ಅಗಲವಾದ ಕಡೆಯಿಂದ ನೀರಿನ ಕಡೆ ತಳ್ಳಿ [ಚಿತ್ರ 8.22 (ಬಿ)]. ದೋಣಿಯ ಪಾಶ್ರ್ವದಿಂದ ಅದನ್ನು ನೀರಿನಲ್ಲಿ ತಳ್ಳಿದಾಗ ದೋಣಿ ಚಲಿಸುವಂತೆ ಮಾಡಲು ನಿಮಗೆ ಸಾಧ್ಯವಾಯಿತೆ?

ದೋಣಿಯ ಆಕಾರವು ಬಹುತೇಕ ಮೀನಿನ ಆಕಾರದಂತಿರುವುದನ್ನು ನೀವು ಗಮನಿಸಿದ್ದೀರ? (ಚಿತ್ರ 8.23). ಮೀನಿನ ತಲೆ ಮತ್ತು ಬಾಲಗಳು ಮಧ್ಯ ಭಾಗಕ್ಕಿಂತ ಚಿಕ್ಕದಾಗಿರುತ್ತವೆ ಅಂದರೆ ದೇಹವು ಎರಡೂ ತುದಿಗಳಲ್ಲಿ ಚೂಪಾಗಿರುತ್ತದೆ. ಈ ದೇಹಾಕೃತಿಯನ್ನು ಸುಚಲನಾಕೃತಿ (streamlined) ಎನ್ನುತ್ತೇವೆ.

ಈ ಆಕಾರ ಹೇಗಿರುವುದೆಂದರೆ ನೀರು ಅದರ ಸುತ್ತಲೂ ಸುಲಭವಾಗಿ ಹರಿಯಬಹುದು ಮತ್ತು ಇದು ಮೀನನ್ನು ನೀರಿನಲ್ಲಿ ಚಲಿಸುವಂತೆ ಮಾಡುತ್ತದೆ. ಮೀನಿನ ಅಸ್ಥಿಪಂಜರವು ಶಕ್ತಿಯುತವಾದ ಸ್ನಾಯುಗಳಿಂದ ಆವರಿಸಲ್ಪಟ್ಟಿದೆ. ಈಜುವಾಗ ದೇಹದ ಮುಂಭಾಗವು ಒಂದು ಕಡೆಗೆ ಬಾಗುವಂತೆ ಸ್ನಾಯುಗಳು ಮಾಡುತ್ತವೆ ಮತ್ತು ಬಾಲದ ಭಾಗವು ವಿರುದ್ಧ ದಿಕ್ಕಿಗೆ ಬೀಸುತ್ತದೆ. ಚಿತ್ರ 8.24ರಲ್ಲಿ ತೋರಿಸಿರುವಂತೆ ಮೀನು ವಕ್ರರೇಖೆಯಲ್ಲಿರುತ್ತದೆ. ಆನಂತರ ದೇಹ ಮತ್ತು ಬಾಲ ವೇಗವಾಗಿ ಬೇರೆ ಕಡೆಗೆ ಬಾಗುತ್ತವೆ. ಇದು ಒಂದು ಹಠಾತ್ತಾದ ಎಳೆತವನ್ನು ಉಂಟು ಮಾಡಿ, ದೇಹವನ್ನು ಮುಂದಕ್ಕೆ ತಳ್ಳುತ್ತದೆ. ಈ ರೀತಿಯ ಹಠಾತ್ತನೆಯ ಎಳೆತಗಳ ಸರಣಿಯು ಮೀನು ಮುಂದಕ್ಕೆ ಈಜುವಂತೆ ಮಾಡುತ್ತದೆ. ಇದಕ್ಕೆ ಬಾಲದ ರೆಕ್ಕೆ ಸಹಕರಿಸುತ್ತದೆ.

ಮೀನುಗಳ ದೇಹದ ಮೇಲೆ ಬೇರೆ ಈಜುರೆಕ್ಕೆಗಳೂ ಇರುತ್ತವೆ. ಈಜುವಾಗ ದೇಹದ ಸಮತೋಲನ ಮತ್ತು ದಿಕ್ಕನ್ನು ಕಾಪಾಡಲು ಮುಖ್ಯವಾಗಿ ಇವು ಸಹಕಾರಿಯಾಗಿವೆ. ಅಂತರ್ಜಲ ಈಜುಗಾರರು ನೀರಿನಲ್ಲಿ ಸುಲಭವಾಗಿ ಚಲಿಸಲು ಸಹಕರಿಸುವ ಈಜುರೆಕ್ಕೆಗಳಂತಿರುವ ಈಜುಗೈಗಳನ್ನು ಅವರ ಪಾದಗಳಿಗೆ ಧರಿಸಿರುವುದನ್ನು ಗಮನಿಸಿದ್ದೀರ?

ಹಾವುಗಳು ಹೇಗೆ ಚಲಿಸುತ್ತವೆ?

ಹಾವು ಹರಿದಾಡುವುದನ್ನು ನೋಡಿದ್ದೀರ? ಅದು ನೇರವಾಗಿ ಚಲಿಸುತ್ತದೆಯೆ (ಚಿತ್ರ 8.25)?

ಹಾವುಗಳಿಗೆ ಉದ್ದವಾದ ಬೆನ್ನುಮೂಳೆಯಿರುತ್ತದೆ. ಅವುಗಳಿಗೆ ಅನೇಕ ತೆಳುವಾದ ಸ್ನಾಯುಗಳಿರುತ್ತವೆ. ಅವುಗಳು ಪರಸ್ಪರ ಸಂಪರ್ಕದಲ್ಲಿರುತ್ತವೆ. ಒಂದರಿಂದ ಮತ್ತೊಂದು ದೂರದಲ್ಲಿದ್ದರೂ ಬೆನ್ನುಮೂಳೆ, ಪಕ್ಕೆಲುಬುಗಳು ಮತ್ತು ಚರ್ಮದೊಂದಿಗೆ ಸ್ನಾಯುಗಳು ಅಂತರ್ ಜೋಡಣೆಯಾಗಿರುತ್ತವೆ.

ಹಾವಿನ ದೇಹವು ಅನೇಕ ಕುಣಿಕೆಗಳಾಗಿ ಬಾಗಿರುತ್ತದೆ. ಪ್ರತಿಯೊಂದು ಕುಣಿಕೆಯು ನೆಲಕ್ಕೆ ಒತ್ತುವುದರಿಂದ ಹಾವನ್ನು ಮುಂದಕ್ಕೆ ತಳ್ಳುವಂತೆ ಮಾಡುತ್ತದೆ. ಅದರ ಉದ್ದವಾದ ದೇಹವು ಅನೇಕ ಕುಣಿಕೆಗಳನ್ನು ಉಂಟು ಮಾಡುವುದರಿಂದ, ಪ್ರತಿಯೊಂದು ಕುಣಿಕೆಯು ದೇಹವನ್ನು ತಳ್ಳುವುದರಿಂದ ಅತಿವೇಗವಾಗಿ ವಕ್ರರೇಖೆಯಲ್ಲಿ ಹಾವು ಮುಂದಕ್ಕೆ ಸಾಗುತ್ತದೆ.

ವಿವಿಧ ಪ್ರಾಣಿಗಳ ಚಲನೆಗೆ ಮೂಳೆಗಳ ಮತ್ತು ಸ್ನಾಯುಗಳ ಉಪಯೋಗದ ಬಗ್ಗೆ ನಾವು ಕಲಿತಿದ್ದೇವೆ. ವಿವಿಧ ಪ್ರಾಣಿಗಳ ಚಲನೆಯ ಬಗ್ಗೆ ಪಹೇಲಿ ಮತ್ತು ಬೂಝೊರಲ್ಲಿ ಅನೇಕ ಪ್ರಶ್ನೆಗಳಿವೆ. ಹಾಗೆಯೇ, ನಿಮ್ಮ ಮನಸ್ಸಿನಲ್ಲಿಯೂ ಸಹ ಅನೇಕ ಉತ್ತರವಿಲ್ಲದ ಪ್ರಶ್ನೆಗಳು ಗುಯ್‍ಗುಡುತ್ತಿರಬಹುದಲ್ಲವೆ? ಪ್ರಾಚೀನ ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಪ್ರಾಣಿಗಳ ನಡಿಗೆ (Gait of animals) ಎಂಬ ತನ್ನ ಪುಸ್ತಕದಲ್ಲಿ ತನ್ನನ್ನು ತಾನೇ ಈ ಪ್ರಶ್ನೆಗಳನ್ನು ಕೇಳಿಕೊಂಡಿದ್ದಾನೆ. ವಿಭಿನ್ನ ಪ್ರಾಣಿಗಳಲ್ಲಿರುವ ದೇಹದ ಭಾಗಗಳು ಏಕೆ ಇವೆ ಮತ್ತು ಈ ಭಾಗಗಳು ಪ್ರಾಣಿಗಳ ಚಲನೆಗೆ ಹೇಗೆ ಸಹಕಾರಿ? ಈ ವಿವಿಧ ಪ್ರಾಣಿಗಳ ದೇಹದ ವಿವಿಧ ಭಾಗಗಳಿಗಿರುವ ಸಾಮ್ಯತೆ ಮತ್ತು ವ್ಯತ್ಯಾಸಗಳೇನು? ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಲು ವಿವಿಧ ಪ್ರಾಣಿಗಳಿಗೆ ದೇಹದ ಎಷ್ಟು ಭಾಗಗಳ ಅವಶ್ಯಕತೆಯಿದೆ? ಮಾನವರಿಗೆ ಎರಡು ಕಾಲುಗಳು ಮತ್ತು ಹಸು ಹಾಗು ಎಮ್ಮೆಗಳಿಗೆ ನಾಲ್ಕು ಕಾಲುಗಳೇಕೆ? ಅನೇಕ ಪ್ರಾಣಿಗಳಿಗೆ ಸರಿ ಸಂಖ್ಯೆಯ ಕಾಲುಗಳಿರುವಂತಿದೆ ಏಕೆ? ನಮ್ಮ ಕಾಲುಗಳ ಬಾಗುವಿಕೆ ಕೈಗಳದ್ದಕ್ಕಿಂತ ಭಿನ್ನವಾಗಿದೆ. ಏಕೆ?

ಎಷ್ಟೊಂದು ಪ್ರಶ್ನೆಗಳು! ಬಹುಶಃ ಈ ಅಧ್ಯಾಯದಲ್ಲಿ ಚಟುವಟಿಕೆಗಳ ಮುಖಾಂತರ ಕೆಲವು ಉತ್ತರಗಳಿಗಾಗಿ ಹುಡುಕಿದ್ದೇವೆ ಮತ್ತು ಇನ್ನೂ ಅನೇಕ ಉತ್ತರಗಳನ್ನು ಹುಡುಕುವ ಅವಶ್ಯಕತೆ ನಮಗಿದೆ.

ಯೋಗ – ಉತ್ತಮ ಆರೋಗ್ಯಕ್ಕೆ
ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ ಯೋಗ. ಸಂಯುಕ್ತ ರಾಷ್ಟ್ರಗಳ ಸಂಸ್ಥೆ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಪ್ರಕಟಿಸಿತು. ವ್ಯಕ್ತಿಯನ್ನು ಯೋಗ ಆರೋಗ್ಯವಾಗಿಡುತ್ತದೆ. ಇದು ಬೆನ್ನು ಮೂಳೆಯನ್ನು ನೇರವಾಗಿಟ್ಟು, ಕುಳಿತಾಗ ಬಾಗಿ ಕೂರದೆ ನೆಟ್ಟಗೆ ಕೂರಲು ಸಹಕರಿಸುತ್ತದೆ. ಯೋಗದ ಅನೇಕ ಭಂಗಿಗಳಲ್ಲಿ ನಿಮ್ಮದೆ ತೂಕವನ್ನು ನೀವೇ ಎತ್ತುವ ಅವಶ್ಯಕತೆ ಇರುವುದರಿಂದ ಮೂಳೆಗಳು ಬಲಯುತವಾಗುವಂತೆ ಮಾಡಿ, ಆಸ್ಟಿಯೋಪೋರೋಸಿಸ್ ಎಂಬ ಕಾಯಿಲೆಯನ್ನು ದೂರವಿಡುತ್ತದೆ. ಹಿರಿಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಕೀಲು ನೋವಿಗೆ ಮುಕ್ತಿ ನೀಡುತ್ತದೆ. ದೇಹದಲ್ಲಿರುವ ಎಲ್ಲಾ ಸ್ನಾಯುಗಳನ್ನು ಸರಿಯಾಗಿರುವಂತೆ ಮಾಡಿ, ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. ಹೃದಯವನ್ನು ಆರೋಗ್ಯವಾಗಿಟ್ಟು, ಸಮರ್ಥವಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಯೋಗದ ಕೆಲವು ಭಂಗಿಗಳನ್ನು ತರಬೇತಿ ಪಡೆದ ವ್ಯಕ್ತಿಯ ಮೇಲ್ವಿಚಾರಣೆಯಲ್ಲಿಯೇ ಮಾಡಬೇಕು.

ಪ್ರಮುಖ ಪದಗಳು

ಬೆನ್ನುಮೂಳೆ
ಸ್ನಾಯು
ಗೋಲ ಮತ್ತು ಗುಳಿ ಕೀಲು
ಬಾಹ್ಯಕಂಕಾಲ / ಹೊರಕಂಕಾಲ
ಬಿರುಗೂದಲುಗಳು
ಸೊಂಟದ ಮೂಳೆಗಳು
ಮೃದ್ವಸ್ಥಿ
ತಿರುಗಾಣಿ ಕೀಲು
ಕುಳಿ
ಪಕ್ಕೆಲುಬುಗೂಡು
ಸ್ಥಿರ ಕೀಲು
ಭುಜದ ಮೂಳೆಗಳು
ಪ್ರಾಣಿಗಳ ನಡಿಗೆ
ಅಸ್ಥಿಪಂಜರ
ಬಿಜಾಗರಿ ಕೀಲು
ಸುಚಲನಾಕೃತಿ

ಸಾರಾಂಶ

● ಮಾನವನ ದೇಹದ ಅಸ್ಥಿಪಂಜರವು, ಮೂಳೆಗಳು ಮತ್ತು ಮೃದ್ವಸ್ಥಿಗಳಿಂದ ಆಗಿದೆ. ಇದು ದೇಹಕ್ಕೆ ಚೌಕಟ್ಟು ಮತ್ತು ಆಕಾರವನ್ನು ಕೊಡುತ್ತದೆ ಹಾಗೂ ಚಲನೆಗೆ ಸಹಕರಿಸುತ್ತದೆ. ಇದು ಆಂತರಿಕ ಅಂಗಾಂಗಗಳನ್ನು ರಕ್ಷಿಸುತ್ತದೆ.
● ಮಾನವನ ಅಸ್ಥಿಪಂಜರವು ತಲೆಬುರುಡೆ, ಬೆನ್ನುಮೂಳೆ, ಪಕ್ಕೆಲುಬುಗಳು ಮತ್ತು ಎದೆಯ ಮೂಳೆ, ಭುಜ ಮತ್ತು ಸೊಂಟದ ಮೂಳೆಗಳು ಮತ್ತು ಕೈ ಹಾಗೂ ಕಾಲಿನ ಮೂಳೆಗಳನ್ನು ಒಳಗೊಂಡಿದೆ.
● ಎರಡು ಗುಂಪುಗಳ ಸ್ನಾಯುಗಳ ಪರ್ಯಾಯ ಸಂಕೋಚನ ಮತ್ತು ವಿಕಸನದಿಂದ ಮೂಳೆಗಳು ಚಲಿಸುತ್ತವೆ.
● ಕೀಲುಗಳ ಸ್ವಭಾವ ಮತ್ತು ಅವು ಚಲನೆಗೆ ಅವಕಾಶ ನೀಡುವ ದಿಕ್ಕನ್ನು ಅವಲಂಬಿಸಿ ವಿವಿಧ ಬಗೆಯ ಮೂಳೆಯ ಕೀಲುಗಳಿವೆ.
● ಶಕ್ತಿಯುತವಾದ ಸ್ನಾಯುಗಳು ಮತ್ತು ಹಗುರವಾದ ಮೂಳೆಗಳು ಒಟ್ಟಿಗೆ ಕೆಲಸ ಮಾಡಿ ಹಕ್ಕಿಗಳು ಹಾರಲು ಸಹಾಯ ಮಾಡುತ್ತವೆ. ಅವು ತಮ್ಮ ರೆಕ್ಕೆಗಳ ಬಡಿತದಿಂದ ಹಾರುತ್ತವೆ.
● ತಮ್ಮ ದೇಹದ ಇಕ್ಕೆಲಗಳಲ್ಲಿ ಪರ್ಯಾಯವಾಗಿ ಕುಣಿಕೆಗಳನ್ನು ಉಂಟುಮಾಡಿ ಮೀನುಗಳು ಈಜುತ್ತವೆ.
● ಹಾವುಗಳು ಪಾಶ್ರ್ವಕುಣಿಕೆಗಳಿಂದ ನೆಲದ ಮೇಲೆ ಹರಿದಾಡುತ್ತವೆ. ಬಹುಸಂಖ್ಯೆಯ ಮೂಳೆಗಳು ಮತ್ತು ಸಂಬಂಧಿತ ಸ್ನಾಯುಗಳು ದೇಹವನ್ನು ಮುಂದಕ್ಕೆ ತಳ್ಳುತ್ತವೆ.
● ಜಿರಳೆಗಳ ದೇಹ ಮತ್ತು ಕಾಲುಗಳಿಗೆ ಹೊರಕಂಕಾಲವೆಂಬ ಗಟ್ಟಿಯಾದ ಕವಚವಿದೆ. ಮೂರು ಜೊತೆ ಕಾಲುಗಳಿಗೆ ಮತ್ತು ಎರಡು ಜೊತೆ ರೆಕ್ಕೆಗಳಿಗೆ ಜೋಡಣೆಯಾಗಿರುವ ಎದೆಯ ಸ್ನಾಯುಗಳು ಜಿರಳೆ ನಡೆಯಲು ಮತ್ತು ಹಾರಲು ಸಹಕರಿಸುತ್ತವೆ.
● ಎರೆಹುಳುಗಳು ತಮ್ಮ ದೇಹದ ಸ್ನಾಯುಗಳ ಪರ್ಯಾಯ ವಿಕಸನ ಮತ್ತು ಸಂಕೋಚನಗಳಿಂದ ಚಲಿಸುತ್ತವೆ. ದೇಹದ ತಳಭಾಗದಲ್ಲಿರುವ ಬಿರುಗೂದಲುಗಳು ನೆಲವನ್ನು ಬಿಗಿಯಾಗಿ ಹಿಡಿದುಕೊಳ್ಳಲು ಸಹಕರಿಸುತ್ತವೆ.
● ಬಸವನಹುಳುಗಳು ಸ್ನಾಯುಯುತ ಪಾದದ ಸಹಾಯದಿಂದ ಚಲಿಸುತ್ತವೆ.

ಸಂವೇದ ವಿಡಿಯೋ ಪಾಠಗಳು

Samveda – 6th – Science – Dehada Chalanegalu (Part 1 of 4)
Samveda – 6th – Science – Dehada Chalanegalu (Part 2 of 4)
Samveda – 6th – Science – Dehada Chalaneglu (Part 3 of 4)
Samveda – 6th – Science – Dehada Chalanegalu (Part 4 of 4)

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

Body Joints – Ball — Socket Joint version 2 | ThinkTac
Ball & Socket Joint (DCF)
Pivot Joint (DCF)
Joints: Ball and socket joint and pivotal Joints
Skeletal System | Human Skeleton
Skeletal Lab Supplement: The Rib Cage
Spine or Vertebral column | Spine bones joints | Human Spine Anatomy 3D animation | Elearnin
BONES OF THE SKULL – LEARN IN 4 MINUTES
Osteology: Bird skeleton walkthrough (chicken)