ದಕ್ಷಿಣ ಭಾರತದ ಪ್ರಾಚೀನ ರಾಜವಂಶಗಳು – ಅಧ್ಯಾಯ 5
ಪಾಠದ ಪರಿಚಯ
ಈ ಪಾಠದಲ್ಲಿ ಸಂಗಂ ಯುಗದ ವಿಶಿಷ್ಟ ಸಾಹಿತ್ಯಿಕ ಕೊಡುಗೆಗಳನ್ನು ವಿವರಿಸಲಾಗಿದೆ. ಆಮೇಲೆ ದಕ್ಷಿಣ ಭಾರತದ ಪ್ರಾಚೀನ ಅರಸುಮನೆತನಗಳಾದ ಸಾತವಾಹನ, ಕದಂಬ, ಗಂಗ, ಬಾದಾಮಿಯ ಚಾಳುಕ್ಯ, ಕಾಂಚಿಯ ಪಲ್ಲವ, ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಳುಕ್ಯರ ಸಂಸ್ಕೃತಿಕ ಸಾಧನೆಗಳನ್ನು ನಿರೂಪಿಸಲಾಗಿದೆ. ಹೊಯ್ಸಳ ಮತ್ತು ಚೋಳ ರಾಜಮನೆತನಗಳ ಗಣ್ಯ ಸಾಮ್ರಾಟರು ಮತ್ತು ಅವರು ಶಿಲ್ಪಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ನೀಡಿರುವ ವಿಶೇಷ ಕೊಡುಗೆಗಳನ್ನು ಪರಿಚಯಿಸಲಾಗಿದೆ. ಜೊತೆಗೆ ಚೋಳರ ಗ್ರಾಮಾಡಳಿತ ಪದ್ಧತಿಯನ್ನು ವಿವರಿಸಲಾಗಿದೆ. ಹೊಯ್ಸಳ ಮತ್ತು ಚೋಳ ರಾಜಮನೆತನಗಳ ಗಣ್ಯ ಸಾಮ್ರಾಟರು ಮತ್ತು ಅವರು ಶಿಲ್ಪಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ನೀಡಿರುವ ವಿಶೇಷ ಕೊಡುಗೆಗಳನ್ನು ಪರಿಚಯಿಸಲಾಗಿದೆ. ಜೊತೆಗೆ ಚೋಳರ ಗ್ರಾಮಾಡಳಿತ ಪದ್ಧತಿಯನ್ನು ವಿವರಿಸಲಾಗಿದೆ.
ಪಾಠಪ್ರವೇಶ
ಮೇರಿ ಮತ್ತು ಮಮತಾ ಐದನೇ ತರಗತಿಯ ಆಪ್ತ ಗೆಳತಿಯರು. ಅವರ ಜೋಡಿ ಜಡೆಗಳು ನೋಡಲು ಬಲು ಸುಂದರ. ಪರಸ್ಪರ ತಮಾಷೆ ಮಾಡುತ್ತ, ಕತೆ ಹೇಳುತ್ತ ಆನಂದಿಸುವರು. ‘ನಿನ್ನ ಊರಿನ ಕತೆಯೊಂದ ಹೇಳೆ ಮೇರಿ’, ಎಂದು ಗೆಳತಿ ಕೇಳಿದಾಗ ಅವಳಿಗೆ ತಕ್ಷಣ ಹೊಳೆದದ್ದು ಕಣ್ಣಗಿಯ ಕತೆ.
ಕಣ್ಣಗಿಯ ಕತೆ:
ಕಾವೇರಿಪಟ್ಟಣದ ಕೋವಲನ್ ಒಬ್ಬ ಶ್ರೀಮಂತ ವ್ಯಾಪಾರಿ. ಕಣ್ಣಗಿ ಅವನ ಧರ್ಮಪತ್ನಿ. ಆತನು ತನ್ನ ದಾಸಿಯಾದ ಮಾಧವಿಯ ಮೋಹಕ್ಕೊಳಗಾಗಿ ತನ್ನೆಲ್ಲ ಸಂಪತ್ತನ್ನು ಕಳೆದುಕೊಳ್ಳುತ್ತಾನೆ. ಆದರೆ ಪತಿಭಕ್ತಿಯುಳ್ಳವಳಾದ ಕಣ್ಣಗಿ ಗಂಡನ ಮೇಲೆ ಸ್ವಲ್ಪವೂ ಕೋಪಗೊಳ್ಳುವುದಿಲ್ಲ. ಇಬ್ಬರೂ ಮಧುರೆಗೆ ಹೋಗಿ ಹೊಸ ಬಾಳನ್ನು ಆರಂಭಿಸುವ ನಿರ್ಧಾರ ಮಾಡುತ್ತಾರೆ. ಜೀವನ ನಿರ್ವಹಣೆಗಾಗಿ ಕಣ್ಣಗಿ ತನ್ನ ರತ್ನಖಚಿತ ಕಾಲಂದುಗೆಯನ್ನು ತೆಗೆದು ಪತಿಗೆ ನೀಡುತ್ತಾಳೆ. ಕೋವಲನ್ ಅದನ್ನು ಮಾರುವುದಕ್ಕಾಗಿ ಚಿನ್ನಾಭರಣ ಅಂಗಡಿಗೆ ಹೋಗುತ್ತಾನೆ. ಮಧುರೆಯ ಪಾಂಡ್ಯರಾಜನ ರಾಣಿ, ಕಳೆದುಕೊಂಡಿದ್ದ ಕಾಲಂದುಗೆಯೇ ಅದಾಗಿದೆ ಎಂಬ ಅನುಮಾನದ ಮೇಲೆ ಕೋವಲನನ್ನು ಬಂಧಿಸಿ, ಅನಂತರ ಕೊಲ್ಲಲಾಗುತ್ತದೆ. ಕಣ್ಣಗಿಯ ದುಃಖ, ಕೋಪ ಉಕ್ಕೇರುತ್ತದೆ. ಅವಳು ತನ್ನ ಇನ್ನೊಂದು ಕಾಲಂದುಗೆಯನ್ನು ಹಿಡಿದು ಕೋವಲನ್ ನಿರ್ದೋಷಿ ಎಂದು ಮಧುರೆಯ ಬೀದಿಬೀದಿಗಳಲ್ಲಿ ಸಾರುತ್ತ, ರಾಜನನ್ನು ಎದುರಿಸುತ್ತಾಳೆ, ನಿರಪರಾಧಿ ಗಂಡನನ್ನು ಕೊಲ್ಲಿಸಿದ ರಾಜನಿಗೆ ಶಾಪ ಕೊಡುತ್ತಾಳೆ. ಶಾಪದ ಫಲವಾಗಿ ರಾಜ ರಾಣಿಯರು ನಾಶವಾಗುತ್ತಾರೆ; ಮಧುರೆಗೆ ಬೆಂಕಿ ಆವರಿಸುತ್ತದೆ. ಕಡೆಗೆ ಪಟ್ಟಣದ ಅಧಿದೇವತೆಯ ಸೂಚನೆಯಂತೆ, ಕಣ್ಣಗಿ ತನ್ನ ಶಾಪವನ್ನು ಹಿಂದಕ್ಕೆ ಪಡೆಯುತ್ತಾಳೆ.
ಸಂಗಂ ಸಾಹಿತ್ಯ, ಸಂಗಂ ಯುಗ: ಕಣ್ಣಗಿ ‘ಶಿಲಪ್ಪದಿಗಾರಂ’ ಎಂಬ ಪ್ರಾಚೀನ ತಮಿಳ್ ಮಹಾಕಾವ್ಯದ ಕಥಾನಾಯಕಿ. ಈ ಮಹಾಕಾವ್ಯವು ಭಾರತದ ಅತ್ಯುತ್ತಮ ಸಾಹಿತ್ಯ ಕೃತಿಗಳಲ್ಲೊಂದು.
‘ಮಣಿಮೇಗಿಲೈ’ ತಮಿಳರ ಇನ್ನೊಂದು ಮಹಾಕಾವ್ಯ. ಇದರ ಕಥಾನಾಯಕಿ ಮಣಿಮೇಗಲೆ. ಅವಳು ಕೋವಲನ್ ಮತ್ತು ಅವನ ದಾಸಿಯಾದ ಮಾಧವಿಯ ಮಗಳು. ಅವಳೇ ಮುಂದೆ ಬೌದ್ಧ ಸನ್ಯಾಸಿನಿಯಾಗಿ ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ, ಬಡವರ ಹಸಿವು ಹಾಗೂ ರೋಗರುಜಿನಗಳನ್ನು ನಿವಾರಿಸುತ್ತಾಳೆ.
ಶಿಲಪ್ಪದಿಗಾರಂ ಮತ್ತು ಮಣಿಮೇಗಿಲೈ ಈ ಎರಡು ಮಹಾಕಾವ್ಯಗಳಲ್ಲದೆ, ತಮಿಳರ ಜನಪ್ರಿಯ ನೀತಿ ಗ್ರಂಥವೊಂದಿದೆ: ಅದೇ ‘ತಿರುಕ್ಕುರಳ್, ಅದರ ರಚನಕಾರ ತಿರುವಳ್ಳುವರ್. ಅವನು ಸಂಗಂ ಯುಗದ ಅತ್ಯಂತ ಮಹತ್ವದ ಕವಿ. ‘ತಿರು’ ಎಂದರೆ ‘ಶ್ರೀ. “ಕುರಳ್’’ ಎಂಬುದರ ಅರ್ಥ ‘ಚಿಕ್ಕದು’. ಕುರಳ್ ಕೇವಲ ಒಂದೂವರೆ ಸಾಲಿನ ಪದ್ಯ. ಆದರೂ ಅದರಲ್ಲಿ ಅರ್ಥ ಹಿರಿದಾದದ್ದು.
ಕುರಳ್ ಕುರಿತು, “ಸಾಸಿವೆಯನ್ನು ಕೊರೆದು ಟೊಳ್ಳು ಮಾಡಿ ಅದರೊಳಗೆ ಸಪ್ತಸಾಗರಗಳನ್ನು ಅಡಗಿಸಿದಂತೆ’’, ಎಂದು ಹೇಳಲಾಗಿದೆ.
ಶಿಲಪ್ಪದಿಗಾರಂ, ಮಣಿಮೇಗಿಲೈ ಮತ್ತು ‘ತಿರುಕ್ಕುರಳ್’’ ಇವುಗಳಲ್ಲದೆ ಪ್ರಾಚೀನ ಕಾಲಕ್ಕೆ ಸೇರಿದ ಇನ್ನೂ ಕೆಲವು ಸಾಹಿತ್ಯ ಕೃತಿಗಳಿವೆ. ಇವನ್ನೆಲ್ಲಾ ಒಟ್ಟಾಗಿ ‘ಸಂಗಂ ಸಾಹಿತ್ಯ’ ಎನ್ನುವರು. ಮಧುರೆಯ ಪಾಂಡ್ಯ ದೊರೆಗಳು ತಮ್ಮ ರಾಜಧಾನಿ ಮಧುರೆಯಲ್ಲಿ ತಮಿಳ್ ಸಂಗಂ (ತಮಿಳು ಸಾಹಿತ್ಯ ಸಂಘ) ಸ್ಥಾಪಿಸಿ ಕವಿಗಳಿಗೆ ಆಶ್ರಯ ಕೊಟ್ಟಿದ್ದರು, ಕವಿಗಳು ತಮ್ಮ ಕೃತಿಗಳನ್ನು ಪರಿಶೀಲನೆಗಾಗಿ ಸಂಘಕ್ಕೆ ಒಪ್ಪಿಸುವ ಪರಿಪಾಠವಿತ್ತು.
ಸಂಗಂ ಸಾಹಿತ್ಯ ರಚನೆ ಸುಮಾರು ಐದು ಶತಮಾನಗಳ ಕಾಲ ಮುಂದುವರಿಯಿತು. ಈ ಕಾಲಾವಧಿಯನ್ನು ‘ಸಂಗಂ ಯುಗ’ ಎನ್ನುವರು. ಸಂಗಂ ಸಾಹಿತ್ಯ ಕೃತಿಗಳಲ್ಲಿ ಅಂದಿನ ಅರಸು ಮನೆತನಗಳಾದ ಚೋಳ, ಚೇರ ಮತ್ತು ಪಾಂಡ್ಯ ರಾಜರ ಆಳ್ವಿಕೆ ಮತ್ತು ಆ ಕಾಲದ ಜನಜೀವನದ ವರ್ಣನೆಯಿದೆ.
ಸಾತವಾಹನರು
ಪ್ರಾಚೀನ ಕಾಲದಲ್ಲಿ ಸಾತವಾಹನ (ಶಾತವಾಹನ) ಎಂಬ ರಾಜವಂಶವು ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳುತ್ತಿತ್ತು. ಮಹಾರಾಷ್ಟ್ರದ ಪ್ರತಿಷ್ಠಾನಪುರ (ಈಗಿನ ಪೈಠಾಣ) ಅದರ ರಾಜಧಾನಿ. (ಭೂಪಟ ನೋಡಿ).
ಗೌತಮೀಪುತ್ರ ಸಾತಕರ್ಣಿ : ಸಾತವಾಹನ ವಂಶದ ಪ್ರಮುಖ ರಾಜನೆಂದರೆ ಗೌತಮೀಪುತ್ರ ಸಾತಕರ್ಣಿ, ಪರಾಕ್ರಮಿಯಾಗಿದ್ದ ಈತನು ವಿದೇಶಿ ಆಳರಸರನ್ನು ಸೋಲಿಸಿ ಅವರ ವಿಸ್ತಾರವಾದ ರಾಜ್ಯವನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು.
ಕರ್ನಾಟಕದ ಕೆಲ ಭಾಗಗಳು ಕೂಡ ಅವನ ಕೈಕೆಳಗಿದ್ದವು. ನಾಸಿಕ ಎಂಬಲ್ಲಿ ದೊರಕಿದ ಶಾಸನದಲ್ಲಿ ಈತನು ಸುಂದರ ಪುರುಷನು, ಉತ್ತಮ ಗುಣದವನು, ದುರ್ಬಲರ ಬಗ್ಗೆ ವಿಶೇಷ ಕಾಳಜಿಯುಳ್ಳವನೆಂದು ವರ್ಣಿಸಲಾಗಿದೆ. ಗೌತಮೀಪುತ್ರನು ವೈದಿಕಧರ್ಮ ಸಂಪ್ರದಾಯವನ್ನು ಮತ್ತೆ ಬಳಕೆಗೆ ತಂದನು. ಈತನು ಅನ್ಯಮತ ಸಹಿಷ್ಣುವಾಗಿದ್ದನು.
ಧರ್ಮ ಮತ್ತು ಸಮಾಜ: ಸಾತವಾಹನರು ವೈದಿಕ ಧರ್ಮದ ಅನುಯಾಯಿಗಳಾಗಿದ್ದರು. ಅಶ್ವಮೇಧ ಮೊದಲಾದ ಯಜ್ಞಯಾಗಾದಿಗಳನ್ನು ಮಾಡುತ್ತಿದ್ದರು. ಅವರ ಸಾಮ್ರಾಜ್ಯದಲ್ಲಿ ನೆಲೆಸಿದ ವಿದೇಶಿಯರು ಹಿಂದೂಧರ್ಮ ಅಥವಾ ಬೌದ್ಧಮತವನ್ನು ತಾವಾಗಿಯೇ ಸ್ವೀಕರಿಸಿ, ಇಲ್ಲಿನ ದೇವದೇವತೆಗಳ ಹೆಸರುಗಳನ್ನು ಇಟ್ಟುಕೊಂಡರು. ಶಿವ ಮತ್ತು ವಿಷ್ಣುವನ್ನು ಪೂಜಿಸಿದರು. ಸಮಾಜದಲ್ಲಿ ಒಂದಾಗಿ ಬಾಳಿದರು. ಸ್ತ್ರೀಯರಿಗೆ ಗೌರವದ ಸ್ಥಾನಮಾನವಿತ್ತು. ಅವರು ಆಸ್ತಿಪಾಸ್ತಿ ಹೊಂದಿದ್ದು, ಧಾರ್ಮಿಕ ಕೇಂದ್ರಗಳಿಗೆ ಅಪಾರ ದಾನ ನೀಡುತ್ತಿದ್ದರು.
ವಾಸ್ತುಶಿಲ್ಪಕ್ಕೆ ಕೊಡುಗೆ: ಸಾತವಾಹನರು ವಾಸ್ತುಶಿಲ್ಪಕ್ಕೆ ಅಪಾರ ಕೊಡುಗೆ ನೀಡಿದರು. ಅವರ ಕಾಲದ ಮೂರು ವಿಧದ ಬೌದ್ಧ ರಚನೆಗಳೆಂದರೆ ಚೈತ್ಯ, ವಿಹಾರ ಮತ್ತು ಸ್ತೂಪಗಳು. ಚೈತ್ಯವೆಂದರೆ ಬೌದ್ಧರ ಪ್ರಾರ್ಥನಾ ಮಂದಿರ, ಬೌದ್ಧ ಭಿಕ್ಷುಗಳ ನಿವಾಸವೇ ವಿಹಾರ.
ಸಾತವಾಹನರ ರಚನೆಗಳು ಭಾರಿ ಬಂಡೆಗಳನ್ನು ಕೊರೆದು ಮಾಡಿರುವ ಚೈತ್ಯ ಮತ್ತು ವಿಹಾರಗಳಾಗಿವೆ. ಮಹಾರಾಷ್ಟ್ರದ ಕಾರ್ಲೆ ಎಂಬಲ್ಲಿನ ಚೈತ್ಯವು ದೊಡ್ಡ ಗಾತ್ರದ್ದಾಗಿದ್ದು ಸುಂದರವಾಗಿದೆ. ಕನ್ನೇರಿ ಎಂಬಲ್ಲಿರುವ ಚೈತ್ಯವು ಪ್ರಸಿದ್ಧವಾಗಿದೆ. ಚೈತ್ಯಗಳ ಪಕ್ಕದಲ್ಲಿ ಬಂಡೆಗಳನ್ನು ಕೊರೆದು ಮಾಡಿದ ವಿಹಾರಗಳಿವೆ. ಆಂಧ್ರಪ್ರದೇಶದ ಅಮರಾವತಿಯ ಅಮೃತಶಿಲೆಯ ಸ್ತೂಪವು ಕಲಾತ್ಮಕವಾಗಿದೆ. ಕರ್ನಾಟಕದಲ್ಲಿ ಸಾತವಾಹನರ ರಚನೆಗಳ ಅವಶೇಷಗಳನ್ನು ಗುಲ್ಬರ್ಗ ಜಿಲ್ಲೆಯ ಸನ್ನತಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಕಾಣಬಹುದು. ಸಾತವಾಹನರ ಸಾವಿರಾರು ನಾಣ್ಯಗಳು ದೊರಕಿವೆ.
ವ್ಯಾಪಾರ ಮತ್ತು ಪಟ್ಟಣಗಳು : ಸಾತವಾಹನರ ಆಳ್ವಿಕೆಯ ಕಾಲವು ಆರ್ಥಿಕ ಸಮೃದ್ಧಿಯ ಕಾಲವಾಗಿತ್ತು. ಇದಕ್ಕೆ ಮುಖ್ಯ ಕಾರಣವೆಂದರೆ ಬಿರುಸಾಗಿ ನಡೆಯುತ್ತಿದ್ದ ಒಳನಾಡಿನ ಮತ್ತು ಹೊರನಾಡಿನ ವ್ಯಾಪಾರ ಚಟುವಟಿಕೆಗಳು.
ಸಾಮ್ರಾಜ್ಯದ ಹಲವು ಪಟ್ಟಣಗಳು ವ್ಯಾಪಾರಿಕೇಂದ್ರಗಳಾಗಿದ್ದವು. ಇಂಥ ಪಟ್ಟಣಗಳನ್ನು “ನಿಗಮಗಳು” ಎನ್ನುತ್ತಿದ್ದರು.
ಮಹಾರಾಷ್ಟ್ರದ ಪೈಠಾಣ, ಕಾರ್ಲೆ, ಕನ್ಹೇರಿ, ಜುನ್ನಾರ್ ಮತ್ತು ನಾಸಿಕ್, ಆಂಧ್ರಪ್ರದೇಶದ ಧಾನ್ಯಕಟಕ (ಧರಣೀಕೋಟೆ) ಮತ್ತು ಉತ್ತರ ಕನ್ನಡ ಜಿಲ್ಲೆಯ ವೈಜಯಂತಿ (ಬನವಾಸಿ) ಮುಂತಾದವು ನಿಗಮಗಳಾಗಿದ್ದವು.
ಪಟ್ಟಣಗಳಲ್ಲಿ `ಶ್ರೇಣಿ’ ಎಂಬ ಸಂಘಗಳಿದ್ದವು. ಶ್ರೇಣಿಗಳೆಂದರೆ ವ್ಯಾಪಾರಿಗಳು ಮತ್ತು ವಿವಿಧ ಕಸಬುದಾರರು ತಮ್ಮ ಹಿತರಕ್ಷಣೆಗಾಗಿ ಕಟ್ಟಿಕೊಂಡ ಸಂಘಗಳು, ಉದಾಹರಣೆಗೆ – ‘ಧಾನಿಕ ಶ್ರೇಣಿ’ ಎಂಬುದು ಧಾನ್ಯವ್ಯಾಪಾರಿಗಳ ಸಂಘವಾಗಿತ್ತು. ಇದೇ ರೀತಿ ಗಾಣಿಗ, ಕಮ್ಮಾರ, ಕಂಚುಗಾರ, ಕುಂಬಾರ ಮತ್ತಿತರ ಕಸಬುದಾರರು ತಮ್ಮ ತಮ್ಮ ಶ್ರೇಣಿಗಳನ್ನು ಕಟ್ಟಿಕೊಂಡಿದ್ದರು. ಶ್ರೇಣಿಗೊಬ್ಬ ಹಿರಿಯನಿದ್ದು, ಅವನನ್ನು ಶ್ರೇಷ್ಠಿ ಅಥವಾ ಸೆಟ್ಟಿ ಎನ್ನುತ್ತಿದ್ದರು.
ಶ್ರೇಣಿಗಳು ಆಧುನಿಕ ಬ್ಯಾಂಕ್‍ಗಳಂತೆ ಹಣಕಾಸು ವ್ಯವಹಾರ ನಡೆಸುತ್ತಿದ್ದವು. ಅವು ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಕೂಡ ವಿಶೇಷ ಬೆಂಬಲ ನೀಡುತ್ತಿದ್ದವು. ಕಾರ್ಲೆಯ ಖ್ಯಾತ ಚೈತ್ಯವನ್ನು ಕಟ್ಟಿಸಿದವನು ಓರ್ವ ಶ್ರೇಷ್ಠಿಯಾಗಿದ್ದನು.
ಸಾಮ್ರಾಜ್ಯದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳ ಉದ್ದಕ್ಕೂ ಅನೇಕ ಬಂದರುಗಳಿದ್ದವು. ಪಶ್ಚಿಮ ತೀರದಲ್ಲಿ ಭರುಕಚ್ಛ (ಈಗಿನ ಬೋಚ್), ಮುಂಬೈ ಸಮೀಪದ ಸೊಪಾರಾ ಮತ್ತು ಕಲ್ಯಾಣ ಮುಖ್ಯ ಬಂದರುಗಳು. ಪೂರ್ವ ತೀರದಲ್ಲಿ ಕೂಡ ಅನೇಕ ಬಂದರುಗಳಿದ್ದವು.
ಸಾತವಾಹನರ ಕಾಲದಲ್ಲಿ ಯುರೋಪಿನ ರೋಮನ್ ಸಾಮ್ರಾಜ್ಯದೊಡನೆ ಭಾರತದ ವಾಣಿಜ್ಯ ಸಂಬಂಧವು ಉತ್ತಮವಾಗಿತ್ತು. ವ್ಯಾಪಾರದಲ್ಲಿ ಭಾರತದ ರಫ್ತು ಅಧಿಕವಾಗಿದ್ದ ಕಾರಣ, ಅಲ್ಲಿಂದ ಪಾವತಿಯ ರೂಪದಲ್ಲಿ ಬಂಗಾರವು ಭಾರಿ ಪ್ರಮಾಣದಲ್ಲಿ ಇಲ್ಲಿಗೆ ಬರುತ್ತಿತ್ತು. ಅಲ್ಲದೆ ಪೂರ್ವ ತೀರದ ಬಂದರುಗಳ ಮೂಲಕ ವಿದೇಶಿ ವ್ಯಾಪಾರ ನಡೆಯುತ್ತಿತ್ತು. ವಿದೇಶಿ ವ್ಯಾಪಾರದಿಂದಾಗಿ ಸಾತವಾಹನ ಸಾಮ್ರಾಜ್ಯವು ಭಾರಿ ಆರ್ಥಿಕ ಪ್ರಗತಿಯನ್ನು ಕಂಡಿತು.
ಬನವಾಸಿಯ ಕದಂಬರು
ಕದಂಬ ವಂಶದ ಸ್ಥಾಪಕ ಮಯೂರಶರ್ಮ. ಅವನ ಮನೆಯ ಬಳಿ ಕದಂಬ ವೃಕ್ಷವಿದ್ದ ಕಾರಣ ಅವನ ವಂಶ ‘ಕದಂಬ’ ಎಂದಾಯಿತು. ಮಯೂರಶರ್ಮನು ಕದಂಬ ವಂಶದ ಸ್ಥಾಪಕ ಹಾಗೂ ಪ್ರಸಿದ್ದ ರಾಜ. ಕದಂಬರ ರಾಜಧಾನಿ ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಅವರ ಲಾಂಛನ ಸಿಂಹ.
ಕದಂಬರ ಕಾಲದಲ್ಲಿ ಪ್ರಾಕೃತ, ಸಂಸ್ಕೃತ ಮತ್ತು ಕನ್ನಡ ಭಾಷೆಗಳು ಪ್ರಚಲಿತದಲ್ಲಿದ್ದವು. ಪ್ರಾರಂಭದಲ್ಲಿ ಪ್ರಾಕೃತ ಭಾಷೆ, ಅನಂತರ ಸಂಸ್ಕೃತ ಭಾಷೆಯು ಹೆಚ್ಚಿನ ಮಾನ್ಯತೆ ಪಡೆಯಿತು. ಸಂಸ್ಕೃತವು ಆಸ್ಥಾನದ ಭಾಷೆಯಾಗಿದ್ದು ಶಿಕ್ಷಣದಲ್ಲಿ ಅದರ ಬಳಕೆಯಿತ್ತು. ಮುಂದೆ ಕನ್ನಡ ಭಾಷೆಗೆ ಹೆಚ್ಚಿನ ಮಾನ್ಯತೆ ದೊರಕಿತು.
* ಹಾಸನ ಜಿಲ್ಲೆಯ ಹಲ್ಮಿಡಿ ಗ್ರಾಮದಲ್ಲಿ ಕದಂಬರ ಕಾಲದ ಶಾಸನವೊಂದು ಕನ್ನಡ ಭಾಷೆ ಹಾಗೂ ಲಿಪಿಯಲ್ಲಿದೆ. ಇದು ಕನ್ನಡ ಶಾಸನಗಳಲ್ಲೇ ಅತಿ ಪ್ರಾಚೀನ.
* ಶಿವಮೊಗ್ಗ ಜಿಲ್ಲೆಯ ತಾಳಗುಂದ ಎಂಬಲ್ಲಿ ಕದಂಬರ ಕಾಲದ ಸಂಸ್ಕೃತ ಶಾಸನವೊಂದು ದೊರಕಿದೆ. ಇದನ್ನು ಕುಬ್ಬ ಎಂಬ ಕವಿಯು ರಚಿಸಿದನು. ಕರ್ನಾಟಕದ ಸಂಸ್ಕೃತ ಕವಿಗಳಲ್ಲಿ ಈತನೇ ಅತಿ ಪ್ರಾಚೀನನು, ತಾಳಗುಂದ ಶಾಸನವು ಕರ್ನಾಟಕದಲ್ಲಿ ದೊರೆತಿರುವ ಪ್ರಥಮ ಸಂಸ್ಕೃತ ಶಾಸನವಾಗಿದೆ.
ಕದಂಬರು ಕರ್ನಾಟಕದ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಕ್ಕೆ ವಿಶೇಷ ಕೊಡುಗೆ ನೀಡಿದರು. ಅವರು ಬನವಾಸಿಯಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಮಧುಕೇಶ್ವರ ಇಲ್ಲಿಯ ಮುಖ್ಯ ದೇವಾಲಯ, ಮಧುಕೇಶ್ವರ ಕದಂಬ ಅರಸರು ಆರಾಧಿಸುತ್ತಿದ್ದ ದೇವರು. ಬನವಾಸಿ ಯಲ್ಲಿ ಮನಸೆಳೆಯುವ ಪರಶುರಾಮನ ಮೂರ್ತಿಶಿಲ್ಪವೊಂದಿದೆ.
ತಲಕಾಡಿನ ಗಂಗರು
ಶ್ರವಣಬೆಳಗೊಳ ಎಂದೊಡನೆ ನೆನಪಾಗುವುದು ಅಲ್ಲಿನ ಬಾಹುಬಲಿ (ಗೊಮ್ಮಟ) ವಿಗ್ರಹ. ಬಾಹುಬಲಿ ತ್ಯಾಗ ಮತ್ತು ವೈರಾಗ್ಯಗಳ ಸಂಕೇತ. ಇವು ಅತಿ ಉನ್ನತ ಭಾರತೀಯ ಮೌಲ್ಯಗಳು.
ಗೊಮ್ಮಟ ಎಂದರೆ ಸುಂದರ ಎಂದರ್ಥ. ಗೊಮ್ಮಟ ಶಿಲ್ಪವು ವಿಶ್ವದಲ್ಲಿಯೇ ಅತ್ಯಂತ ಎತ್ತರದ ಏಕಶಿಲಾ ಶಿಲ್ಪವೆಂದಾಗ ನಾವು ಹೆಮ್ಮೆಪಡುವುದಿಲ್ಲವೆ? ಅಷ್ಟೇ ಅಲ್ಲ, ಅದು ಒಂದು ಸಾವಿರ ವರ್ಷಗಳಷ್ಟು ಪುರಾತನವಾದದ್ದು. ದೊಡ್ಡಬೆಟ್ಟದ ಮೇಲೆ ನಿಂತಿರುವ ವಿಗ್ರಹದ ಎತ್ತರ 17.6 ಮೀ. (58 ಅಡಿ), ಇದನ್ನು ನಿರ್ಮಾಣ ಮಾಡಿಸಿದ ಕೀರ್ತಿ ಚಾವುಂಡರಾಯನಿಗೆ ಸಲ್ಲುತ್ತದೆ. ಈತನು ಗಂಗರಾಜ ನಾಲ್ಕನೇ ರಾಚಮಲ್ಲನ ಮಂತ್ರಿ. ವಿಗ್ರಹ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸ್ವಾರಸ್ಯವಾದ ಕತೆ ಇಲ್ಲಿದೆ.
ಗುಳ್ಳಕಾಯಜ್ಜಿಯ ಕತೆ
ಚಾವುಂಡರಾಯನಿಗೂ ಗುಳ್ಳಕಾಯಜ್ಜಿಗೂ ಸಂಬಂಧ ಕಲ್ಪಿಸುವ ಕತೆಯೊಂದಿದೆ. ಅದರಂತೆ ಚಾವುಂಡರಾಯನು ಬಾಹುಬಲಿಯ ವಿಗ್ರಹಕ್ಕೆ ಮಸ್ತಕಾಭಿಷೇಕವನ್ನು ಮಾಡಲು ಸಕಲ ಸಿದ್ಧತೆಗಳನ್ನು ಮಾಡಿ, ಹಾಲನ್ನು ವಿಗ್ರಹದ ಮಸ್ತಕದ ಮೇಲೆ ಸುರಿಯಲು ಪ್ರಾರಂಭಿಸಿದ. ಕೊಡಗಟ್ಟಲೆ ಸೇರು ಹಾಲು ಸುರಿದರೂ ಅದು ತೊಡೆಯ ಕೆಳಗೆ ಇಳಿಯಲಿಲ್ಲವಂತೆ. ದುಃಖಿತನಾದ ಚಾವುಂಡರಾಯ ಇದಕ್ಕೆ ಕಾರಣವೇನೆಂದು ತನ್ನ ಗುರುಗಳನ್ನು ಕೇಳಿದ ಗುರುಗಳು ಅಲ್ಲಿಗೆ ಬಂದಿದ್ದ ಮುದುಕಿಯೊಬ್ಬಳು ಗುಳ್ಳದಲ್ಲಿ (ಗುಂಡು ಬದನೆ ಆಕಾರದ ಸಣ್ಣ ಪಾತ್ರೆ) ತಂದ ಹಾಲನ್ನು ಅಭಿಷೇಕ ಮಾಡಬೇಕು ಎಂಬುದಾಗಿ ಆದೇಶ ಮಾಡಿದರು. ಅದರಂತೆ ಅಭಿಷೇಕ ಮಾಡಿದಾಗ ಗುಳ್ಳದ ಹಾಲು ಮಸ್ತಕದಿಂದ ಧಾರಾಕಾರವಾಗಿ ಹರಿದು ವಿಗ್ರಹದ ಪೂರ್ಣ ಮೈ ತೋಯಿಸಿ, ಬೆಟ್ಟದಿಂದ ದಟ್ಟವಾದ ಹಾಲಿನ ತೊರೆಯಾಗಿ ಕೆಳಕ್ಕೆ ಹರಿಯಿತಂತೆ! ಮುದುಕಿಯನ್ನು ಗುಳ್ಳಕಾಯಜ್ಜಿ ಎಂದು ಕರೆಯಲಾಯಿತು. ಅಲ್ಲಿಯ ಪ್ರದೇಶಕ್ಕೆ ‘ಬೆಳ್ಗೊಳ (ಬಿಳಿಯ ಕೊಳ, ಹಾಲಿನ ಕೊಳ) ಎಂಬ ಹೆಸರು ಬಂತು. ಅಲ್ಲಿ ಶ್ರವಣರು (ಜೈನ ಯತಿಗಳು) ವಾಸಮಾಡುತ್ತಿದ್ದುದರಿಂದ ಅದು ಶ್ರವಣಬೆಳಗೊಳ ಎಂದಾಯಿತು.
ಗುಳ್ಳಕಾಯಜ್ಜಿಯ ಪ್ರತಿಮೆಯನ್ನು ದೊಡ್ಡ ಬೆಟ್ಟದ ಮೇಲೆ ಈಗಲೂ ಕಾಣಬಹುದು. ಐದು ಅಡಿ ಎತ್ತರದ ಕರಿಯ ಕಲ್ಲಿನ ಈ ಪ್ರತಿಮೆ ಕಲಾತ್ಮಕವಾಗಿದೆ. ಇದನ್ನು ಸಹ ಚಾವುಂಡರಾಯನೇ ನಿರ್ಮಾಣ ಮಾಡಿಸಿದನು.
ಗಂಗರು ತಲಕಾಡಿನಲ್ಲಿ ಪಾತಾಳೇಶ್ವರ ಮತ್ತು ಮರುಳೇಶ್ವರ, ಕೋಲಾರದಲ್ಲಿ ಕೋಲಾರಮ್ಮ ಮುಂತಾದ ಸುಂದರ ದೇವಸ್ಥಾನಗಳನ್ನು ನಿರ್ಮಾಣ ಮಾಡಿದರು. ಶ್ರವಣಬೆಳಗೊಳದ ಚಿಕ್ಕಬೆಟ್ಟದ ಮೇಲೆ ಚಾವುಂಡರಾಯ ಬಸದಿಯಿದೆ. ನೂರಾರು ವೀರಗಲ್ಲುಗಳು ಗಂಗರ ಕಾಲದ ವಿಶಿಷ್ಟ ಕೊಡುಗೆ. ಅವು ಯುದ್ಧದಲ್ಲಿ ಮರಣ ಹೊಂದಿದ ವೀರನ ನೆನಪಿಗಾಗಿ ನೆಡುವ ಕಲ್ಲುಗಳು, ವೀರನ ಸಾಹಸಗಳನ್ನು ವರ್ಣಿಸುವ ಬರವಣಿಗೆ ಅಥವಾ ಚಿತ್ರದ ಕೆತ್ತನೆಯನ್ನು ಅಲ್ಲಿ ಕಾಣಬಹುದು.
ಗಂಗವಂಶದ ರಾಜರು ಕನ್ನಡ ನಾಡಿನ ಇತಿಹಾಸದಲ್ಲೇ ಅತೀ ದೀರ್ಘಕಾಲ ಆಳ್ವಿಕೆ ನಡೆಸಿದರು. ಮೈಸೂರು ಜಿಲ್ಲೆಯ ತಲಕಾಡು ಗಂಗರ ರಾಜಧಾನಿ. (ಭೂಪಟ ನೋಡಿ). ತಾವು ಪ್ರಜೆಗಳ ಹಿತರಕ್ಷಣೆಗಾಗಿಯೇ ರಾಜ್ಯಾಡಳಿತವನ್ನು ಮಾಡುತ್ತಿರುವುದಾಗಿ ಶಾಸನಗಳಲ್ಲಿ ರಾಜರು ಸಾರಿ ಹೇಳಿದ್ದಾರೆ. ಗಂಗರ ಲಾಂಛನ ಆನೆ.
ದುರ್ವಿನೀತನು ಗಂಗ ರಾಜರಲ್ಲಿ ಶ್ರೇಷ್ಠನು, ಶಾಸನಗಳಲ್ಲಿ ಆತನನ್ನು ಶ್ರೀಕೃಷ್ಣನಿಗೆ ಸಮಾನನೆಂದು ವರ್ಣಿಸಲಾಗಿದೆ. ಆತನು ಓರ್ವ ಮಹಾವಿದ್ವಾಂಸ, ವಿದ್ವಾಂಸರಿಗೆ ಆಶ್ರಯ, ಗೌರವ ನೀಡಿದ. ದಕ್ಷಿಣ ಭಾರತದ ಅತಿ ಶ್ರೇಷ್ಠ ರಾಜರಲ್ಲಿ ಇವನೊಬ್ಬನಾಗಿದ್ದನು.
ಸಾಹಿತ್ಯ: ಗಂಗರ ಆಳ್ವಿಕೆಯ ಕಾಲದಲ್ಲಿ ಸಂಸ್ಕೃತ, ಪ್ರಾಕೃತ ಮತ್ತು ಕನ್ನಡ ಭಾಷೆಗಳಲ್ಲಿ ಸಾಕಷ್ಟು ಸಾಹಿತ್ಯ ರಚನೆಯಾಯಿತು. ಗಂಗ ಪ್ರಭುಗಳೇ ಸ್ವತಃ ಗ್ರಂಥ ರಚನೆಯನ್ನು ಮಾಡಿದರು. ಚಾವುಂಡರಾಯನು ‘ಚಾವುಂಡರಾಯ ಪುರಾಣ’ ಎಂಬ ಕೃತಿಯನ್ನು ರಚಿಸಿದನು. ಇದು ಕನ್ನಡ ಗದ್ಯಸಾಹಿತ್ಯದಲ್ಲಿ ಒಂದು ಪ್ರಮುಖ ಕೃತಿಯಾಗಿದೆ.
ಬಾದಾಮಿಯ ಚಾಳುಕ್ಯರು
ಬಾದಾಮಿಯ ಚಾಳುಕ್ಯರು ಕರ್ನಾಟಕದಲ್ಲಿ ಸುಮಾರು ಎರಡು ಶತಮಾನ ಕಾಲ ವೈಭವದಿಂದ ರಾಜ್ಯಭಾರ ನಡೆಸಿದರು. ಬಾಗಲಕೋಟೆ ಜಿಲ್ಲೆಯ ಬಾದಾಮಿ (ವಾತಾಪಿ) ಚಾಳುಕ್ಯರ ರಾಜಧಾನಿ. ವರಾಹ ಚಾಳುಕ್ಯರ ಲಾಂಛನ.
ಇಮ್ಮಡಿ ಪುಲಿಕೇಶಿ: ಇಮ್ಮಡಿ ಪುಲಿಕೇಶಿಯು ಚಾಳುಕ್ಯ ವಂಶದ ಶ್ರೇಷ್ಠ ಅರಸ. ಪರಾಕ್ರಮಶಾಲಿಯಾಗಿದ್ದ ಈತನು ರಾಜ್ಯ ವಿಸ್ತರಣೆಗಾಗಿ ಅನೇಕ ದಂಡಯಾತ್ರೆಗಳನ್ನು ಕೈಗೊಂಡನು.
ಕದಂಬರು ಮತ್ತು ಗಂಗರು ಪುಲಿಕೇಶಿಗೆ ತಾವಾಗಿಯೇ ಶರಣಾದರು. ಉತ್ತರ ಭಾರತದ ಸಾಮ್ರಾಟ ಹರ್ಷವರ್ಧನನನ್ನು ಪುಲಿಕೇಶಿಯು ನರ್ಮದಾ ತೀರದಲ್ಲಿ ನಡೆದ ಘೋರ ಸಂಗ್ರಾಮದಲ್ಲಿ ಪರಾಜಯಗೊಳಿಸಿದ್ದು ಆತನ ಮಹತ್ಸಾಧನೆಯಾಗಿದೆ. ಈ ನಡುವೆ ಪೂರ್ವ ಪ್ರಾಂತಗಳಾದ ಕೋಸಲ ಮತ್ತು ಕಳಿಂಗ ದೇಶಗಳ ರಾಜರುಗಳು ಯುದ್ಧಗೈಯದೆ ಪುಲಿಕೇಶಿಗೆ ಶರಣಾದರು. ದಕ್ಷಿಣ ಭಾರತದಲ್ಲಿ ಪುಲಿಕೇಶಿಯು ಕಾಂಚಿಯ ಪಲ್ಲವರನ್ನು ಸೋಲಿಸಿದನು. ಅಲ್ಲಿಂದ ಕಾವೇರಿ ನದಿಯನ್ನು ದಾಟಿ ಚೋಳ, ಕೇರಳ ಮತ್ತು ಪಾಂಡ್ಯರನ್ನು ಒಲಿಸಿಕೊಂಡನು. ಹೀಗೆ ನಾಲ್ಕೂ ದಿಕ್ಕುಗಳಲ್ಲಿ ವಿಜಯ ಸಾಧಿಸಿದ ಪುಲಿಕೇಶಿಯು ವಾತಾಪಿಗೆ ಮರಳಿದನು. ಅವನ ಸಾಮ್ರಾಜ್ಯವು ಪಶ್ಚಿಮ ಸಮುದ್ರದಿಂದ ಪೂರ್ವ ಸಮುದ್ರದವರೆಗೂ ಹರಡಿತ್ತು.
ಪುಲಿಕೇಶಿಯ ಕೀರ್ತಿಯು ಭಾರತದ ಹೊರಗೂ ವ್ಯಾಪಿಸಿತ್ತು. ಅವನು ಪರ್ಷಿಯ ದೇಶದ ರಾಜನಾದ ಖುಸ್ರುವಿನಲ್ಲಿಗೆ ನಿಯೋಗವೊಂದನ್ನು ಕಳುಹಿಸಿ ಅಮೂಲ್ಯ ವಸ್ತುಗಳನ್ನೂ ಒಂದು ಉತ್ತಮ ಆನೆಯನ್ನೂ ಉಡುಗೊರೆಯಾಗಿ ನೀಡಿದ್ದನು. ಖುಸ್ರುವು ಒಂದು ಮಿತ್ರ ನಿಯೋಗವನ್ನು ಪುಲಿಕೇಶಿಯ ಆಸ್ಥಾನಕ್ಕೆ ಕಳುಹಿಸಿದನು. ಅಜಂತದ ಗುಹೆಯೊಂದರಲ್ಲಿ ಖುಸ್ರುವೂ ಅವನ ರಾಣಿಯೂ ಪುಲಿಕೇಶಿಯ ರಾಯಭಾರಿಯನ್ನು ಸ್ವಾಗತಿಸುವ ವರ್ಣರಂಜಿತ ಭಿತ್ತಿಚಿತ್ರವಿದೆ.
ಚಾಳುಕ್ಯರ ವಾಸ್ತುಶಿಲ್ಪ:
ಬಾದಾಮಿ ಚಾಳುಕ್ಯರ ಮುಖ್ಯ ವಾಸ್ತುಶಿಲ್ಪಗಳು ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮಹಾಕೂಟ ಮತ್ತು ನಾಗರಾಳ ಎಂಬಲ್ಲಿವೆ. ಐಹೊಳೆ ಮತ್ತು ಬಾದಾಮಿಯಲ್ಲಿ ಚಾಳುಕ್ಯರ ಕಾಲದ ಗುಹಾಲಯಗಳಿವೆ.
ಐಹೊಳೆಯ ದೇವಾಲಯಗಳಲ್ಲಿ ಸೂರ್ಯ (ಲಾಡ್‍ಖಾನ್), ಮೇಗುತಿ, ಕಾರ್ತಿಕೇಯ (ಹುಚ್ಚಿಮಲ್ಲಿ) ಮತ್ತು ದುರ್ಗ ಮುಖ್ಯವಾದವುಗಳು. ಐಹೊಳೆಯನ್ನು “ದೇವಾಲಯಗಳ ಶಿಲ್ಪದ ತೊಟ್ಟಿಲು’’ ಎಂಬುದಾಗಿ ಕರೆಯುತ್ತಾರೆ. ಬಾದಾಮಿಯ ಗುಹಾಲಯದಲ್ಲಿರುವ ನಟರಾಜ ಮತ್ತು ವಿಷ್ಣುವಿನ ಉಬ್ಬುಶಿಲ್ಪಗಳು ಅದ್ಭುತವಾಗಿವೆ.
ಐಹೊಳೆಯ ಸೂರ್ಯ (ಲಾಡ್‍ಖಾನ್) ದೇವಾಲಯ
ಐಹೊಳೆಯ ಕಾರ್ತಿಕೇಯ (ಹುಚ್ಚಿಮಲ್ಲಿ) ದೇವಾಲಯ
ಐಹೊಳೆಯ ದುರ್ಗ ದೇವಾಲಯ
ಪಟ್ಟದಕಲ್ಲಿನ ದೇವಾಲಯಗಳಲ್ಲಿ ವಿರೂಪಾಕ್ಷ ದೇವಾಲಯವು ಸುಂದರವಾಗಿದ್ದು, ಗಾತ್ರದಲ್ಲಿ ದೊಡ್ಡದಾಗಿದೆ. ಪಟ್ಟದಕಲ್ಲು ವಿಶ್ವಪರಂಪರೆಗೆ ಸೇರಿದ ತಾಣವಾಗಿದೆ.
ಹೊಸ ಪದ
ವಿಶ್ವಪರಂಪರೆ ತಾಣ– ಜಗತ್ತಿನ ಕೆಲವು ಅಪೂರ್ವ, ಅಮೂಲ್ಯ ತಾಣಗಳು ವಿಶ್ವಪರಂಪರೆಗೆ ಸೇರಿದ್ದು ಎಂಬುದಾಗಿ ವಿಶ್ವಸಂಸ್ಥೆ ಘೋಷಣೆ ಮಾಡಿದೆ. ಇವುಗಳಿಗೆ ವಿಶೇಷ ಸಂರಕ್ಷÀಣೆ ನೀಡಲಾಗುತ್ತದೆ. ಕರ್ನಾಟಕದಲ್ಲಿ ಹಂಪಿ ಮತ್ತು ಪಟ್ಟದಕಲ್ಲು, ವಿಶ್ವಪರಂಪರೆಯ ತಾಣಗಳು.
ಕಾಂಚಿಯ ಪಲ್ಲವರು
ಪಲ್ಲವ ರಾಜವಂಶವು ದಕ್ಷಿಣ ಭಾರತದ ಒಂದು ಪ್ರಸಿದ್ಧ ರಾಜವಂಶ. ತಮಿಳುನಾಡಿನ ಕಾಂಚಿ ಪಲ್ಲವರ ರಾಜಧಾನಿ. ಅವರು ಸುಮಾರು 300 ವರ್ಷಗಳ ಕಾಲ ಆಳ್ವಿಕೆ ನಡೆಸಿದರು.
ನರಸಿಂಹವರ್ಮ: ನರಸಿಂಹವರ್ಮನು ಪಲ್ಲವ ಅರಸರಲ್ಲಿಯೇ ಶ್ರೇಷ್ಠ. ಮಹಾಮಲ್ಲ ಎಂಬುದು ಈತನ ಬಿರುದು. ಪರಾಕ್ರಮಿಯಾಗಿದ್ದ ಈತನು ಚಾಳುಕ್ಯ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಇಮ್ಮಡಿ ಪುಲಿಕೇಶಿಯನ್ನು ಸೋಲಿಸಿ ಬಾದಾಮಿಯನ್ನು ಗೆದ್ದುಕೊಂಡನು. ವಿಜಯದ ಸಂಕೇತವಾಗಿ `ವಾತಾಪಿಕೊಂಡ’ ಎಂಬ ಬಿರುದನ್ನು ಧರಿಸಿದನು. ನರಸಿಂಹವರ್ಮನು ಮಾಮಲ್ಲಪುರ (ಈಗಿನ ಮಹಾಬಲಿಪುರಂ) ರೇವುಪಟ್ಟಣವನ್ನು ಸುಂದರ ನಗರವನ್ನಾಗಿ ಅಭಿವೃದ್ಧಿಗೊಳಿಸಿದನು.
ಶಿಲ್ಪಕಲೆಗೆ ಪಲ್ಲವರ ಕೊಡುಗೆ: ಶಿಲ್ಪಕಲೆಗೆ ಪಲ್ಲವರು ನೀಡಿದ ಕೊಡುಗೆ ಅಮೂಲ್ಯವಾಗಿದೆ. ಮಹಾಬಲಿಪುರಂ ಎಂಬಲ್ಲಿ ನರಸಿಂಹವರ್ಮನ ಕಾಲದ ಎಂಟು ಏಕಶಿಲಾ ರಥಗಳಿವೆ. ಜಗತ್ಪ್ರಸಿದ್ಧವಾದ ಇವನ್ನು ಒಂದೊಂದೇ ಶಿಲೆಯಲ್ಲಿ ಕೆತ್ತಲಾಗಿದೆ. ಮಹಾಬಲಿಪುರದಲ್ಲಿ `ಗಂಗಾವತರಣ’ ಎಂಬ ಉಬ್ಬುಶಿಲ್ಪ ಇದೆ. ಈ ಕೆತ್ತನೆಯಲ್ಲಿ ಭಗೀರಥನು ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ತರಲು ಪ್ರಯತ್ನಿಸುವ ಚಿತ್ರಣವಿದೆ. ಇದೊಂದು ಪ್ರಸಿದ್ಧ ಉಬ್ಬು ಶಿಲ್ಪವಾಗಿದೆ.
ಪಲ್ಲವರು ಭಾರಿ ಗಾತ್ರದ ದೇವಾಲಯಗಳನ್ನು ಕಟ್ಟಿಸಿದರು. ಅವುಗಳಲ್ಲೊಂದು ಮಹಾಬಲಿಪುರದ ಸಮುದ್ರತೀರದಲ್ಲಿ ನಿರ್ಮಿಸಲಾದ ಶಿವ ದೇವಾಲಯ. ಪಲ್ಲವರು ನಿರ್ಮಾಣ ಮಾಡಿಸಿದ ಇನ್ನೆರಡು ಪ್ರಸಿದ್ಧ ದೇವಾಲಯಗಳೆಂದರೆ ಕಾಂಚಿಯ ಕೈಲಾಸನಾಥ ಹಾಗೂ ವೈಕುಂಠ ಪೆರುಮಾಳ್.
ಹೊಸ ಪದ
ಉಬ್ಬುಶಿಲ್ಪ– ಉಬ್ಬಿ ಮೇಲೆ ಕಾಣುವಂತೆ ಕೆತ್ತಿದ ಶಿಲ್ಪ.
ರಾಷ್ಟ್ರಕೂಟರು
ಬಾದಾಮಿ ಚಾಳುಕ್ಯರ ಸಾಮ್ರಾಜ್ಯದ ನಂತರ ರಾಷ್ಟ್ರಕೂಟರ ಆಳ್ವಿಕೆ ಪ್ರಾರಂಭವಾಯಿತು. ರಾಷ್ಟ್ರಕೂಟರು ಎಂದಾಕ್ಷಣ ನೆನಪಿಗೆ ಹೊಳೆಯುವುದು – ಕವಿರಾಜಮಾರ್ಗ, ಆದಿಕವಿ ಪಂಪ ಮತ್ತು ಎಲ್ಲೋರದ ಕೈಲಾಸ ದೇವಾಲಯ. ಇಲ್ಲಿಂದಲೇ ಪಾಠ ಪ್ರಾರಂಭಿಸೋಣ.
* ‘ಕವಿರಾಜಮಾರ್ಗ’ ಎಂಬ ಮಹತ್ವದ ಲಕ್ಷಣಗ್ರಂಥವು ರಾಷ್ಟ್ರಕೂಟರ ಕಾಲಕ್ಕೆ ಸೇರಿದ್ದು, ಇದನ್ನು ರಚಿಸಿದವನು ಶ್ರೀವಿಜಯ. ಈವರೆಗೆ ದೊರೆತಿರುವ ಕನ್ನಡ ಗ್ರಂಥಗಳಲ್ಲಿ ಇದು ಅತ್ಯಂತ ಪ್ರಾಚೀನವಾದುದು. ಇದರ ಕಾಲ 9ನೇ ಶತಮಾನ.
ಲಕ್ಷಣಗ್ರಂಥವೆಂದರೆ ಭಾಷೆ, ಶೈಲಿ, ಛಂದಸ್ಸು ಮುಂತಾದ ಲಕ್ಷಣಗಳನ್ನು ವಿವರಿಸುವ ಗ್ರಂಥ.
* ಪಂಪ: ಸಂಸ್ಕೃತಕ್ಕೆ ವಾಲ್ಮೀಕಿಯು ಹೇಗೆ ಆದಿಕವಿಯೋ ಹಾಗೆ ಕನ್ನಡಕ್ಕೆ ಪಂಪನು ಆದಿಕವಿ. ಪಂಪನ ಕಾಲಕ್ಕೆ ಹಿಂದೆ ಕನ್ನಡದಲ್ಲಿ ರಚನೆಯಾಗಿರುವ ಕಾವ್ಯಗಳು ನಮಗೆ ಈವರೆಗೆ ದೊರಕಿಲ್ಲ.
‘ವಿಕ್ರಮಾರ್ಜುನ ವಿಜಯ’ ಪಂಪನ ಮಹಾಕಾವ್ಯ. ಇದು `ಪಂಪಭಾರತ’ವೆಂದು ವಿಖ್ಯಾತವಾಗಿದೆ. ಇದರಲ್ಲಿ ಮಹಾಭಾರತದ ಕಥೆಯಿದೆ. ಕನ್ನಡದ ಪ್ರಮುಖ ಕವಿಗಳ ಮೇಲೆ ಪಂಪ ಬೀರಿರುವ ಪ್ರಭಾವ ಅಪಾರವಾಗಿದೆ.
ಪಂಪನು ವೇಮುಲವಾಡದ ಮಾಂಡಲಿಕ ಅರಿಕೇಸರಿಯ ಆಸ್ಥಾನದಲ್ಲಿದ್ದನು.
ಇದೇ ಕಾಲಕ್ಕೆ ಸೇರಿದ ಪೊನ್ನ ಕನ್ನಡದ ಮತ್ತೊಬ್ಬ ಮಹಾಕವಿ.
ಎಲ್ಲೋರ ಮತ್ತು ಎಲಿಫೆಂಟ
ಎಲ್ಲೋರದ ಕೈಲಾಸ ದೇವಾಲಯವು ನೂರಡಿ ಎತ್ತರದ ಬಂಡೆಯನ್ನು ಮೇಲಿನಿಂದ ಕೆಳಕ್ಕೆ ಕೊರೆದು ಮಾಡಿರುವ ಏಕಶಿಲಾ ಮಂದಿರವಾಗಿದೆ. ಇದನ್ನು ನಿರ್ಮಿಸಿದ ಕೀರ್ತಿ ರಾಷ್ಟ್ರಕೂಟ ಅರಸ ಒಂದನೇ ಕೃಷ್ಣನಿಗೆ ಸಲ್ಲುತ್ತದೆ. ಪ್ರಪಂಚದಲ್ಲಿ ಇಂಥದ್ದೊಂದು ವಾಸ್ತುಶಿಲ್ಪ ಇನ್ನೆಲ್ಲಿಯೂ ಕಾಣೆವು. ಇಲ್ಲಿನ ಮೂರ್ತಿಶಿಲ್ಪ ವೈಭವವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಮೂರ್ತಿಶಿಲ್ಪಗಳಲ್ಲಿ ರಾವಣನು ಕೈಲಾಸ ಪರ್ವತವನ್ನೆತ್ತುವ ಕಥಾಪ್ರಸಂಗವು ರಮಣೀಯವಾದುದು.
ರಾಷ್ಟ್ರಕೂಟರ ಸಾಮ್ರಾಜ್ಯದಲ್ಲಿ ಈಗಿನ ಮಹಾರಾಷ್ಟ್ರದ ಬಹುಭಾಗಗಳು ಸೇರಿದ್ದುವು. ಎಲ್ಲೋರ ಹಾಗೂ ಎಲಿಫೆಂಟಾ ಮಹಾರಾಷ್ಟ್ರದಲ್ಲಿವೆ.
ರಾಷ್ಟ್ರಕೂಟರ ಮೂರ್ತಿಶಿಲ್ಪ ಕಲಾವೈಭವವನ್ನು ಎಲಿಫೆಂಟಾ ಗುಹಾಲಯದಲ್ಲಿ ಕಾಣಬಹುದು. ಎಲಿಫೆಂಟ ಮುಂಬೈ ಬಂದರಿನ ಸಮೀಪವಿರುವ ಒಂದು ಪುಟ್ಟ ದ್ವೀಪ. ಇಲ್ಲಿನ ಭಾರಿ ಗಾತ್ರದ ಮೂರು ಮುಖವುಳ್ಳ ಮಹೇಶಮೂರ್ತಿ ವಿಸ್ಮಯಕರವಾಗಿದೆ.
ಗಣ್ಯ ಚಕ್ರವರ್ತಿಗಳು
* ಮೂರನೆಯ ಗೋವಿಂದ: ಮೂರನೆಯ ಗೋವಿಂದನು ರಾಷ್ಟ್ರಕೂಟ ಸಾಮ್ರಾಟರಲ್ಲಿ ಅತಿ ಗಣ್ಯನು. ಇವನು ದಕ್ಷಿಣ ಭಾರತದ ಎಲ್ಲೆಡೆ ಪ್ರಭುತ್ವ ಸಾಧಿಸಿದನು. ಮುಂದೆ ಹಿಮಾಲಯದ ತಪ್ಪಲಿನವರೆಗೂ ತನ್ನ ಸೈನ್ಯದೊಂದಿಗೆ ಜಯಭೇರಿ ಬಾರಿಸುತ್ತ ಮುನ್ನಡೆದನು. ಈ ಮಹತ್ಸಾಧನೆಯನ್ನು ಅವನ ಆಸ್ಥಾನ ಕವಿಯು “ಗೋವಿಂದನ ಯುದ್ಧದ ಮದ್ದಾನೆಗಳು ಗಂಗಾನದಿಯ ಪುಣ್ಯತೀರ್ಥದ ರುಚಿ ನೋಡಿದವು” ಎಂಬುದಾಗಿ ಮನಮೋಹಕವಾಗಿ ವರ್ಣಿಸಿದ್ದಾನೆ.
* ಅಮೋಘವರ್ಷ ನೃಪತುಂಗ: ಅಮೋಘವರ್ಷ ನೃಪತುಂಗನು ಮುಮ್ಮಡಿ ಗೋವಿಂದನ ಮಗ. ಪಟ್ಟಾಭಿಷೇಕವಾದಾಗ ಇವನು ಹದಿನಾಲ್ಕರ ತರುಣ. ಇವನು 60 ವರ್ಷಗಳಿಗಿಂತಲೂ ಹೆಚ್ಚು ಕಾಲ ಆಳ್ವಿಕೆ ನಡೆಸಿದನು. ಸ್ವತಃ ವಿದ್ವಾಂಸನಾಗಿದ್ದ. ಶ್ರೀವಿಜಯ ಅವನ ಆಸ್ಥಾನ ವಿದ್ವಾಂಸ.
ಅಮೋಘವರ್ಷ ನೃಪತುಂಗನಿಗೆ ಅತ್ಯಂತ ಇಷ್ಟವಾದ ಸಂಗತಿಯೆಂದರೆ ತನ್ನ ಪ್ರಜೆಗಳ ಕ್ಷೇಮ. ಅವನು ಮಾನ್ಯಖೇಟ ಪಟ್ಟಣದ (ಈಗಿನ ಮಳಖೇಡ, ಗುಲ್ಬರ್ಗ ಜಿಲ್ಲೆ) ನಿರ್ಮಾಣ ಮಾಡಿದನು. ಇದು ರಾಷ್ಟ್ರಕೂಟರ ರಾಜಧಾನಿಯಾಯಿತು. ಆ ಕಾಲದ ವಿಶ್ವದ ನಾಲ್ಕು ವಿಶಾಲ ಸಾಮ್ರಾಜ್ಯಗಳಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯವು ಒಂದಾಗಿತ್ತೆಂದು ವಿದೇಶಿ ಪ್ರವಾಸಿ ಸುಲೈಮಾನ್ ಬರೆದಿದ್ದಾನೆ. (ಉಳಿದವುಗಳೆಂದರೆ ರೋಮನ್, ಅರಬ್ಬ ಮತ್ತು ಚೀನೀ ಸಾಮ್ರಾಜ್ಯಗಳು).
* ಮೂರನೆಯ ಕೃಷ್ಣ: ಮೂರನೆಯ ಕೃಷ್ಣನ ಕಾಲದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯವು ಮತ್ತೊಮ್ಮೆ ಭಾರತದ ರಾಜಕೀಯದಲ್ಲಿ ಅಗ್ರಸ್ಥಾನ ಪಡೆಯಿತು. ಕೃಷ್ಣನು ಚೋಳರನ್ನು ಪರಾಜಯಗೊಳಿಸಿ, ರಾಮೇಶ್ವರದವರೆಗೂ ತನ್ನ ಸೈನ್ಯದೊಂದಿಗೆ ಜಯಭೇರಿ ಬಾರಿಸುತ್ತ ಸಾಗಿ, ಅಲ್ಲೊಂದು ವಿಜಯಸ್ತಂಭವನ್ನೂ ದೇವಾಲಯವನ್ನೂ ಸ್ಥಾಪಿಸಿದನು. ಈತನು ಪಾಂಡ್ಯ, ಚೇರರನ್ನು ಸೋಲಿಸಿದನಲ್ಲದೆ, ಸಿಂಹಳದ ಅರಸನಿಂದ ಕಪ್ಪ ಸಂಗ್ರಹಿಸಿದನು. ಇಷ್ಟೇ ಅಲ್ಲ, ಮೂರನೆಯ ಗೋವಿಂದನಂತೆ ಉತ್ತರ ಭಾರತದಲ್ಲಿಯೂ ಅತ್ಯಂತ ಯಶಸ್ವಿಯಾಗಿ ದಂಡಯಾತ್ರೆ ನಡೆಸಿದನು.
ಕವಿ ಪೊನ್ನ ಕೃಷ್ಣನ ಆಶ್ರಯ ಪಡೆದಿದ್ದನು. ಮೂರನೆಯ ಕೃಷ್ಣನ ಅನಂತರ ರಾಷ್ಟ್ರಕೂಟ ಆಳ್ವಿಕೆಯು ಅವನತಿ ಹೊಂದಲಾರಂಭಿಸಿತು.
ಕಲ್ಯಾಣದ ಚಾಳುಕ್ಯರು
ರಾಷ್ಟ್ರಕೂಟರ ನಂತರ ಚಾಳುಕ್ಯ ವಂಶದವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರು. ಇವರೇ ಕಲ್ಯಾಣದ ಚಾಳುಕ್ಯರು. ಬೀದರ್ ಜಿಲ್ಲೆಯ ಬಸವಕಲ್ಯಾಣ ಇವರ ರಾಜಧಾನಿ.
ಆರನೆಯ ವಿಕ್ರಮಾದಿತ್ಯ: ಆರನೆಯ ವಿಕ್ರಮಾದಿತ್ಯನು ಕಲ್ಯಾಣದ ಚಾಳುಕ್ಯ ವಂಶದ ಅತಿ ಶ್ರೇಷ್ಠ ಚಕ್ರವರ್ತಿ. ಇವರ ಸುದೀರ್ಘ ಆಳ್ವಿಕೆಯ ಕಾಲದಲ್ಲಿ ಕನ್ನಡನಾಡು ಅಭಿವೃದ್ಧಿ ಕಂಡಿತು. ಇವನು ‘ಚಾಳುಕ್ಯ ವಿಕ್ರಮ ಶಕೆ’ಯನ್ನು ಆರಂಭಿಸಿದನು. ವಿಕ್ರಮಾದಿತ್ಯನು ಅನೇಕ ವಿದ್ವಾಂಸರಿಗೆ ಆಶ್ರಯ ನೀಡಿದನು. ಈತನ ಆಶ್ರಯ ಪಡೆದಿದ್ದ ಪಂಡಿತ ಬಿಲ್ಹಣನು ವಿಕ್ರಮಾಂಕದೇವಚರಿತ ಎಂಬ ಮಹಾಕಾವ್ಯವನ್ನು ರಚಿಸಿದನು. ಇದರಲ್ಲಿ ವಿಕ್ರಮಾದಿತ್ಯನ ಜೀವನ ವೃತ್ತಾಂತವಿದೆ. ವಿಜ್ಞಾನೇಶ್ವರನು ಆಸ್ಥಾನದ ಇನ್ನೊಬ್ಬ ಶ್ರೇಷ್ಠ ವಿದ್ವಾಂಸ. ಮಿತಾಕ್ಷರ ಸಂಹಿತೆ ಈತನ ಕೃತಿ. ಇದು ಹಿಂದೂ ಕಾನೂನು ಪದ್ಧತಿಯ ಪ್ರಮಾಣ ಗ್ರಂಥವೆಂದು ಮನ್ನಣೆ ಪಡೆದಿದೆ.
ಮುಮ್ಮಡಿ ಸೋಮೇಶ್ವರ: ವಿಕ್ರಮಾದಿತ್ಯನ ಮಗನಾದ ಮುಮ್ಮಡಿ ಸೋಮೇಶ್ವರನ ಕಾಲದಲ್ಲಿ ಸಾಮ್ರಾಜ್ಯದಲ್ಲಿ ಶಾಂತಿ, ಸಮೃದ್ಧಿ ನೆಲೆಗೊಂಡಿತು. ರಾಜನ ಒಲವು ಸಾಹಿತ್ಯ, ಕಲೆಗಳ ಕಡೆಗಿತ್ತು. ಇವನು ಮಾನಸೋಲ್ಲಾಸ ಎಂಬ ಖ್ಯಾತ ಸಂಸ್ಕೃತ ಗ್ರಂಥವನ್ನು ರಚಿಸಿದನು. ಇದರಲ್ಲಿ ಸರ್ವಶಾಸ್ತ್ರಗಳೂ ಅಡಗಿದೆ. ಸೋಮೇಶ್ವರನು ಮಹಾನ್ ವಿದ್ವಾಂಸನಾಗಿದ್ದು, ಸರ್ವಜ್ಞ ಚಕ್ರವರ್ತಿ ಎಂದೇ ಪ್ರಖ್ಯಾತನಾಗಿದ್ದಾನೆ.
ಸಾಹಿತ್ಯ: ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಸಾಹಿತ್ಯಕ್ಕೆ ಪ್ರೋತ್ಸಾಹ ದೊರಕಿತು.
ಕವಿ ಚಕ್ರವರ್ತಿ ಎಂಬ ಬಿರುದು ಗಳಿಸಿದ ರನ್ನನು ಸಾಹಸಭೀಮವಿಜಯ ಅಥವಾ ಗದಾಯುದ್ಧ ಎಂಬ ವೀರಕಾವ್ಯವನ್ನು ರಚಿಸಿದನು. ಪಂಪ, ಪೊನ್ನ ಮತ್ತು ರನ್ನರನ್ನು ಕನ್ನಡ ಸಾಹಿತ್ಯದ ರತ್ನತ್ರಯರೆಂದು ಕರೆಯುತ್ತಾರೆ.
ವಚನ ಸಾಹಿತ್ಯ ಚಾಳುಕ್ಯರ ಕಾಲದ ವಿಶಿಷ್ಟ ಕೊಡುಗೆಯಾಗಿದೆ. ವಚನಕಾರರು ಸರಳ ಕನ್ನಡದಲ್ಲಿ ವಚನಗಳನ್ನು ಬರೆದರು.
ಜೇಡರ ದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ಧರಾಮ, ಮಡಿವಾಳ ಮಾಚಯ್ಯ ಇವರು ಈ ಕಾಲದ ಪ್ರಮುಖ ವಚನಕಾರರು.
ವಾಸ್ತುಶಿಲ್ಪ: ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾದುವು. ಅವು ಲಲಿತಕಲೆಗಳಿಗೂ ಕೇಂದ್ರವಾಗಿದ್ದುವು. ಕೊಪ್ಪಳ ಜಿಲ್ಲೆಯ ಇಟಗಿಯ ಮಹಾದೇವ ದೇವಾಲಯ ಈ ಕಾಲದ ಅತ್ಯುತ್ತಮ ವಾಸ್ತುಕೃತಿ. ಇದನ್ನು ಅಲ್ಲಿಯ ಶಾಸನವೊಂದು `ದೇವಾಲಯಗಳ ಚಕ್ರವರ್ತಿ’ ಎಂದು ವರ್ಣಿಸಿದೆ.
ಕಾಲಗಣನೆ
ರಾಷ್ಟ್ರಕೂಟರ ಆಳ್ವಿಕೆಯ ಕಾಲ – ಸುಮಾರು 750 ರಿಂದ 950
ಕಲ್ಯಾಣದ ಚಾಳುಕ್ಯರ ಆಳ್ವಿಕೆಯ ಕಾಲ – ಸುಮಾರು 970ರಿಂದ 1150
ಮೂರನೆಯ ಗೋವಿಂದ – 793-814
ಅಮೋಘವರ್ಷ ನೃಪತುಂಗ – 814-878
ಮುಮ್ಮಡಿ ಕೃಷ್ಣ – 939-967
ಆರನೆಯ ವಿಕ್ರಮಾದಿತ್ಯ – 1076-1127
ಚಾಳುಕ್ಯ ವಿಕ್ರಮ ಶಕೆ – 1076
ಮುಮ್ಮಡಿ ಸೋಮೇಶ್ವರ – 1127-1137
ಹೊಯ್ಸಳರು
ಮಾವಿನಕೆರೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬೇಲೂರಿನ ಚೆನ್ನಕೇಶವ ದೇವಾಲಯವನ್ನು ನೋಡಲು ನಿರ್ಧರಿಸಿದರು. ಬಸ್ಸನ್ನೇರಿ ದೇವಾಲಯದ ಎದುರು ಬಂದು ನಿಂತಾಗ ಅವರು ಕಂಡದ್ದೇನು? ಹೊಂಬಿಸಿಲಿನಲ್ಲಿ ಕಂಗೊಳಿಸುವ ಶಿಲ್ಪಕಲೆಯ ಮಾಯಾಲೋಕ!
ಶಿಕ್ಷಕರು : ಮಕ್ಕಳೇ, ಇದುವೇ ಹೊಯ್ಸಳರ ವಿಶ್ವವಿಖ್ಯಾತ ದೇವಾಲಯ. ಇದರ ಎರಡು ಹೊಸತನವೇನೆಂದರೆ: ಗುಡಿಯನ್ನು ಎತ್ತರದ ಜಗತಿ(ಜಗಲಿ)ಯ ಮೇಲೆ ಕಟ್ಟಿರುವುದು, ಮತ್ತು ಜಗತಿಯು ನಕ್ಷತ್ರಾಕಾರದಲ್ಲಿರುವುದು.
ವಿದ್ಯಾರ್ಥಿ : ಜಗತಿಯ ಮೇಲೇಕೆ ಗುಡಿಯನ್ನು ನಿಲ್ಲಿಸಲಾಗಿದೆ?
ಶಿಕ್ಷಕರು : ಏಕೆಂದರೆ ಗುಡಿಯ ಭವ್ಯತೆಯು ನೋಡುಗರ ಕಣ್ಣಿಗೆ ಚೆನ್ನಾಗಿ ಕಂಡು ಮನದಟ್ಟಾಗಲಿ ಎಂದು.
ವಿದ್ಯಾರ್ಥಿ : ಜಗತಿಯು ನಕ್ಷತ್ರಾಕಾರದಲ್ಲಿದೆಯೇಕೆ?
ಶಿಕ್ಷಕರು : ಜಗಲಿ ಮಾತ್ರವಲ್ಲ, ಗುಡಿಯ ಗೋಡೆಗಳು, ಗರ್ಭಗೃಹ ಮತ್ತು ಶಿಖರ ಇವೆಲ್ಲವೂ ನಕ್ಷತ್ರಾಕಾರದಲ್ಲಿವೆ. ಇದರಿಂದ ಅವುಗಳ ಮೈಮೇಲೆ ಬೆಳಕು ನೆರಳು ಚೆಲ್ಲಾಟವಾಡಲು ಅವಕಾಶ ಒದಗಿಸಿದಂತಾಗಿದೆ. ಅಲ್ಲದೆ ಉಬ್ಬು ಶಿಲ್ಪಗಳು ಇನ್ನಷ್ಟು ಹರಿತವಾಗಿ ಎದ್ದುಕಾಣುತ್ತವೆ.
ಹೊಯ್ಸಳರು ಅಸಂಖ್ಯ ದೇವಾಲಯಗಳನ್ನು ಬಳಪದ ಮೃದುಕಲ್ಲಿನಿಂದ ರಚಿಸಿದರು. ಶಿಲ್ಪಿಗಳು ಅಲಂಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಹೊರಗೋಡೆಯ ಕೆಳಗಿನ ಭಾಗದಲ್ಲಿ ಆನೆಗಳು, ಕುದುರೆ ಸವಾರರು, ಲತಾತೋರಣಗಳು, ಸಿಂಹಮುಖ ಮುಂತಾದ ಉಬ್ಬುಶಿಲ್ಪಗಳ ನವಿರಾದ ಪಟ್ಟಿಕೆಗಳಿವೆ. ನಯಗೆಲಸದ ಕೋಮಲ ಶಿಲ್ಪದಲ್ಲಿ ಹೊಯ್ಸಳರನ್ನು ಮೀರಿಸಿದವರಿಲ್ಲ.
ವಿದ್ಯಾರ್ಥಿ : ಗುರುಗಳೇ, ಗುಡಿಯೊಳಗೆ ಹೋಗೋಣವೆ?
ಶಿಕ್ಷಕರು : ಆಗಬಹುದು. ಒಳಗೆ ಬನ್ನಿ. ಇದು ‘ನವರಂಗ’. ಪೂಜಾ ಕಾಲದಲ್ಲಿ ಸಂಗೀತ, ನೃತ್ಯ ಮುಂತಾದ ಕಲಾಸೇವೆಗಾಗಿ ಇರುವ ಸ್ಥಳ. ನವರಂಗದ ನಾಲ್ಕು ಕಂಬಗಳನ್ನು ಗಮನಿಸಿ. ಇವು ಚರಕಿಯಂತ್ರದ (ಕಡೆತಯಂತ್ರ) ಮೂಲಕ ಮಾಡಿರುವ ಕಂಬಗಳು. ಕಂಬಗಳು ಕನ್ನಡಿಯಂತೆ ಹೊಳೆಯುತ್ತಿವೆಯಲ್ಲವೆ? ನವರಂಗದ ಚಾವಣಿಯನ್ನೊಮ್ಮೆ ತಲೆಎತ್ತಿ ನೋಡಿ. ಇದನ್ನು ‘ಭುವನೇಶ್ವರಿ’ ಎನ್ನುವರು. ಭುವನೇಶ್ವರಿಯ ಶಿಲ್ಪವಿನ್ಯಾಸ ಅದೆಷ್ಟು ಅನುಪಮ!
ಮಕ್ಕಳೇ, ಇನ್ನೂ ಒಳಬನ್ನಿ. ಇದು ಗರ್ಭಗುಡಿ. ಇಲ್ಲಿನ ಸುಂದರವಾದ ವಿಜಯನಾರಾಯಣನ ಮೂರ್ತಿಯನ್ನು ನೋಡಿ. ಬೇಲೂರು ದೇವಾಲಯದ ಮುಖ್ಯವಾದ ಆಕರ್ಷಣೆಯೆಂದರೆ ಮದನಿಕೆ ವಿಗ್ರಹಗಳು ಮತ್ತು ನಾನಾ ಭಂಗಿಗಳಲ್ಲಿರುವ ರಮ್ಯವಾದ ಸ್ತ್ರೀವಿಗ್ರಹಗಳು.
ವಿದ್ಯಾರ್ಥಿ : ಹೊಯ್ಸಳ ಮಂದಿರಗಳನ್ನು ಕಟ್ಟಿದ ಶಿಲ್ಪಿ ಜಕಣಾಚಾರಿ ಎಂದು ಹೇಳುವರಲ್ಲ. ಅವನ ಬಗ್ಗೆ ಹೇಳಿರಿ.
ಶಿಕ್ಷಕರು : ಜಕಣಾಚಾರಿಯ ಬಗ್ಗೆ ಖಚಿತವಾಗಿ ಏನೂ ತಿಳಿದು ಬಂದಿಲ್ಲವಾದರೂ ಅವನ ಕುರಿತಾದ ಐತಿಹ್ಯವೊಂದಿದೆ.
ಜಕಣಾಚಾರಿ: ಜಕಣಾಚಾರಿ ತನ್ನ ಹೆಂಡತಿ ಮತ್ತು ಗಂಡು ಮಗುವನ್ನು ಬಿಟ್ಟು ಊರೂರು ಅಲೆಯುತ್ತ ಅಲ್ಲಲ್ಲಿ ದೇವಾಲಯಗಳನ್ನು ನಿರ್ಮಿಸುತ್ತ ಹತ್ತಾರು ವರ್ಷಗಳನ್ನು ಕಳೆದನಂತೆ. ಒಮ್ಮೆ ಅವನು ಹೊಯ್ಸಳ ರಾಜಧಾನಿಯಲ್ಲಿ ದೇವಾಲಯವೊಂದನ್ನು ನಿರ್ಮಾಣ ಮಾಡುತ್ತಿದ್ದಾಗ ಅವನ ಮಗ ಡಂಕಣಾಚಾರಿ ತಂದೆಯನ್ನು ಹುಡುಕುತ್ತಾ ಅಲೆದಾಡಿ ಅಲ್ಲಿಗೆ ಬಂದ. ಇವನೂ ಶಿಲ್ಪ ವಿದ್ಯೆಯಲ್ಲಿ ಪ್ರವೀಣನಾಗಿದ್ದ. ಮಂದಿರದಲ್ಲಿ ಪ್ರತಿಷ್ಠೆ ಮಾಡಲು ಜಕಣಾಚಾರಿ ಸಿದ್ಧಪಡಿಸಿಟ್ಟಿದ್ದ ಮೂರ್ತಿಯನ್ನು ಕಂಡ. ಅದರಲ್ಲಿ ದೋಷವಿದೆಯೆಂದು ಡಂಕಣಾಚಾರಿ ಹೇಳಿದಾಗ, ಹಾಗೆಂದು ತೋರಿಸಿಕೊಟ್ಟರೆ ತನ್ನ ಕೈಯನ್ನು ಕತ್ತರಿಸಿಕೊಳ್ಳುವುದಾಗಿ ಜಕಣಾಚಾರಿ ಪಣತೊಟ್ಟ. ಚಂದನವನ್ನು ತೇಯ್ದು ಮೂರ್ತಿಯ ಹೊಟ್ಟೆಯ ಭಾಗಕ್ಕೆ ಬಳಿದಾಗ ಚಂದನ ಹೊಕ್ಕಳಿನ ಭಾಗದಲ್ಲಿ ಮಾತ್ರ ಹಸಿಯಾಗಿ ಉಳಿಯಿತು. ಆ ಭಾಗದಲ್ಲಿ ವಿಗ್ರಹವನ್ನು ಒಡೆದಾಗ ಅದು ಟೊಳ್ಳಾಗಿದ್ದುದನ್ನೂ, ಅದರಲ್ಲಿ ಸ್ವಲ್ಪ ನೀರು, ಮರಳು ಮತ್ತು ಕಪ್ಪೆ ಇದ್ದುದನ್ನೂ ಕಂಡ ಜಕಣಾಚಾರಿ ತನ್ನ ಕೈಯನ್ನು ತತ್‍ಕ್ಷಣ ಕತ್ತರಿಸಿಕೊಂಡ. ಜಕಣಾಚಾರಿ ತನ್ನ ತಂದೆಯೆಂದು ಡಂಕಣಾಚಾರಿಗೂ, ಆ ಹುಡುಗ ತನ್ನ ಮಗನೆಂದು ಜಕಣಾಚಾರಿಗೂ ತಿಳಿದದ್ದು ಆಮೇಲೆಯೇ. ಮುಂದೆ ಜಕಣಾಚಾರಿ ತನ್ನ ಹುಟ್ಟೂರಿನಲ್ಲಿ ಒಂದೇ ಕೈಯಲ್ಲಿ ಕೇಶವ ದೇವಾಲಯವನ್ನು ಕಟ್ಟಿದ. ಅದು ಪೂರೈಸುತ್ತ ಬಂದ ಹಾಗೆ ಅವನ ಕೈ ಮೊದಲಿನಂತೆ ಬೆಳೆಯಿತಂತೆ!
ಶಿಕ್ಷಕರು : ಹೊತ್ತು ಏರುತ್ತಿದೆ. ಇನ್ನು ಹೊರಡೋಣ.
ವಿದ್ಯಾರ್ಥಿ : ಆಗಬಹುದು, ಗುರುಗಳೆ. ಹೊಯ್ಸಳ ಶೈಲಿಯ ನೂರಾರು ದೇವಾಲಯಗಳಿವೆ. ಅವುಗಳಲ್ಲಿ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ಮತ್ತು ಮೈಸೂರು ಜಿಲ್ಲೆಯ ಸೋಮನಾಥಪುರದಲ್ಲಿರುವ ದೇವಾಲಯಗಳು ಅತ್ಯಂತ ಶ್ರೇಷ್ಠವಾಗಿವೆ. ಹೊಯ್ಸಳರ ಬಹುತೇಕ ದೇವಾಲಯಗಳು ಹಾಸನ, ತುಮಕೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿವೆ.
ಹಳೇಬೀಡಿನಲ್ಲಿರುವ ವಿಶಾಲವಾದ ಪ್ರಾಚೀನ ಕೆರೆಯಿಂದಲೇ ಇದಕ್ಕೆ `ದೋರಸಮುದ್ರ’ ಎಂಬ ಹೆಸರಾಯಿತು. ದೋರಸಮುದ್ರವನ್ನು ದಿಲ್ಲಿಯ ಸುಲ್ತಾನ್ ಅಲಾವುದ್ದೀನನ ದಂಡನಾಯಕ ಮಲ್ಲಿಕ್ ಕಾಫರ್ ಕೊಳ್ಳೆಹೊಡೆದ (1310). ಬಳಿಕ ಅದು ಮತ್ತೆ ಚೇತರಿಸಿಕೊಳ್ಳಲಿಲ್ಲ. ಅದು `ಹಳೇಬೀಡು’ ಆಯಿತು.
ಹೊಯ್ಸಳರು ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಭೌಗೋಳಿಕ ಪ್ರದೇಶಗಳು ಸೇರಿದಂತೆ ವಿಶಾಲ ಪ್ರದೇಶವನ್ನು ಮೂರು ಶತಮಾನಗಳಿಗೂ ಹೆಚ್ಚುಕಾಲ ವೈಭವಪೂರ್ಣವಾಗಿ ಆಳಿದರು. ಪ್ರಾರಂಭದಲ್ಲಿ ಬೇಲೂರು, ಅನಂತರ ದೋರಸಮುದ್ರ ಅವರ ರಾಜಧಾನಿಯಾಗಿತ್ತು. ಹುಲಿಯನ್ನು ಕೊಲ್ಲುವ ಸಳನ ಚಿತ್ರವೇ ಹೊಯ್ಸಳರ ಲಾಂಛನ.
ಹೊಯ್ಸಳ ರಾಜವಂಶದ ಪ್ರಮುಖ ಅರಸರು
ವಿಷ್ಣುವರ್ಧನ: ವಿಷ್ಣುವರ್ಧನನು ಹೊಯ್ಸಳ ವಂಶದ ಗಣ್ಯ ರಾಜ. ಅವನು ಚೋಳ ಮತ್ತು ಪಾಂಡ್ಯರನ್ನು ಸೋಲಿಸಿ ಅವರ ವಶದಲ್ಲಿದ್ದ ಕನ್ನಡ ಪ್ರದೇಶಗಳನ್ನು ಗೆದ್ದುಕೊಂಡನು. ಈತನು ಜೈನಮತೀಯನಾಗಿದ್ದು, ಅನಂತರ ಶ್ರೀವೈಷ್ಣವ ಪಂಥವನ್ನು ಸ್ವೀಕರಿಸಿದನು. ಈತನ ರಾಣಿ ಶಾಂತಲೆಯು ಜೈನಮತದಲ್ಲಿಯೇ ಮುಂದುವರಿದಳು. ಧರ್ಮಸಹಿಷ್ಣುವಾಗಿದ್ದ ಈತ ಶೈವ ಮತ್ತು ಜೈನ ಮತಗಳಿಗೆ ಉದಾರ ಪ್ರೋತ್ಸಾಹ ನೀಡಿದನು.
ಮೂರನೆಯ ಬಲ್ಲಾಳ: ಮೂರನೆಯ ಬಲ್ಲಾಳನು ಹೊಯ್ಸಳ ವಂಶದ ಕೊನೆಯ ಪ್ರಮುಖ ಅರಸ. ಇವನು ಐವತ್ತು ವರ್ಷಗಳಷ್ಟು ಕಾಲ ಸುದೀರ್ಘ ಆಳ್ವಿಕೆ ನಡೆಸಿದ. ಇವನ ಕಾಲದಲ್ಲಿ ದಿಲ್ಲಿಯ ಸುಲ್ತಾನರು ಮೇಲಿಂದ ಮೇಲೆ ದಕ್ಷಿಣ ಭಾರತದ ರಾಜ್ಯಗಳ ಮೇಲೆ ದಂಡೆತ್ತಿ ಬಂದರು. ದೇವಾಲಯಗಳು ಭಗ್ನಗೊಂಡವು. ಅಲ್ಲಿನ ಸಂಪತ್ತು ಸೂರೆಯಾಯಿತು.
ಆಕ್ರಮಣಗಳ ಪರಿಣಾಮವಾಗಿ ದಕ್ಷಿಣ ಭಾರತದ ಪ್ರಮುಖ ಅರಸು ಮನೆತನಗಳು ಕಣ್ಮರೆಯಾದವು. ಆದರೆ ಸುಲ್ತಾನರು ಹೊಯ್ಸಳ ರಾಜ್ಯವನ್ನು ಮಾತ್ರವೇ ಹತ್ತಿಕ್ಕದೆ ಹೋದರು. ಈ ಘೋರ ವಿಪತ್ತನ್ನು ಮೂರನೇ ಬಲ್ಲಾಳನೊಬ್ಬನೇ ಎದುರಿಸಬೇಕಾಯಿತು.
ಈ ನಡುವೆ ದಿಲ್ಲಿಯ ಪ್ರತಿನಿಧಿಯಾಗಿದ್ದ ಮಧುರೆಯ ಸುಲ್ತಾನನ ಕ್ರೌರ್ಯ ಹೆಚ್ಚಿತು. ವಯಸ್ಸಾಗಿದ್ದರೂ ಬಲ್ಲಾಳನು ಅವನನ್ನು ದಂಡಿಸಲು ಹೋದನು. ಯುದ್ಧದಲ್ಲಿ ಸುಲ್ತಾನನು ಮೋಸದಿಂದ ಬಲ್ಲಾಳನನ್ನು ಸೆರೆಹಿಡಿದು ಕ್ರೂರತನದಿಂದ ಕೊಲ್ಲಿಸಿದನು. ಪರಕೀಯರ ಆಕ್ರಮಣದ ಸಂಧಿಕಾಲದ ಕತ್ತಲಲ್ಲಿ ಮೂರನೇ ಬಲ್ಲಾಳನು ಏಕಾಂಗಿಯಾಗಿ ಬೆಳಗಿದ ಬೆಳ್ಳಿಯಂತಾಗಿದ್ದಾನೆ. ನಂತರ ಅವನ ಮಗ ನಾಲ್ಕನೇ ಬಲ್ಲಾಳನು ಕ್ರಿ.ಶ. 1346ರಲ್ಲಿ ಮಧುರೆಯ ಸುಲ್ತಾನನಿಂದ ಹತನಾದಾಗ ಹೊಯ್ಸಳ ಅರಸೊತ್ತಿಗೆ ಅಳಿಯಿತು. ಆಗಲೇ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯಾಗಿತ್ತು.
ಕನ್ನಡ ಸಾಹಿತ್ಯಕ್ಕೆ ಹೊಯ್ಸಳರ ಕೊಡುಗೆ
ಜನ್ನ, ಹರಿಹರ ಮತ್ತು ರಾಘವಾಂಕ ಇವರು ಹೊಯ್ಸಳರ ಕಾಲದ ಶ್ರೇಷ್ಠ ಕವಿಗಳು. ಜನ್ನನು ಆ ಕಾಲದ ಅತ್ಯಂತ ಶ್ರೇಷ್ಠ ಕವಿ. ಕವಿಚಕ್ರವರ್ತಿಯೆಂಬ ಬಿರುದು ಇವನಿಗಿತ್ತು. ಹರಿಹರನು ರಗಳೆಗಳನ್ನು ಮತ್ತು ಮಹಾಕಾವ್ಯವನ್ನು ಬರೆದನು. ರಾಘವಾಂಕನು ಅನೇಕ ಕಾವ್ಯಗಳನ್ನು ರಚಿಸಿದನು. ಇವು ಭಾಷೆಯಲ್ಲಿನ ಹೊಸ ಬೆಳವಣಿಗೆಗೆ ದಾರಿಮಾಡಿಕೊಟ್ಟವು.
ಆಂಡಯ್ಯನು ಅಚ್ಚಕನ್ನಡದಲ್ಲಿ ಕೃತಿ ರಚಿಸಿದನು. ಇದೇ ಕಾಲದಲ್ಲಿ ಬಸವೇಶ್ವರ ಮತ್ತಿತರ ಶರಣರ ವಚನಗಳು ಕನ್ನಡ ಸಾಹಿತ್ಯ ಸಂಪತ್ತನ್ನು ಹೆಚ್ಚಿಸಿದವು.
ಕವಿ, ಕಾವ್ಯಗಳು: ಜನ್ನ – `ಯಶೋಧರ ಚರಿತ’. ಹರಿಹರ – `ಗಿರಿಜಾ ಕಲ್ಯಾಣ’. ರಾಘವಾಂಕ – `ಹರಿಶ್ಚಂದ್ರ ಕಾವ್ಯ’. ಆಂಡಯ್ಯ – `ಕಬ್ಬಿಗರ ಕಾವಂ’
ಚೋಳರು
ಚೋಳರ ಕಾಲದ ಮೇಲಿನ ಕಂಚುಶಿಲ್ಪಗಳನ್ನು ಗುರುತಿಸಬಲ್ಲಿರಾ?
ಇವೇ ನಟರಾಜ ಮತ್ತು ಕಾಳಿಂಗನ ಮೇಲೆ ನಲಿದಾಡುವ ಬಾಲಮುರಳೀ ಕೃಷ್ಣ. ಕಂಚುಶಿಲ್ಪ ಚೋಳರು ಭಾರತೀಯ ಮೂರ್ತಿಶಿಲ್ಪಕ್ಕೆ ನೀಡಿದ ಅಪೂರ್ವ ಕೊಡುಗೆಯಾಗಿದೆ.
ತಾಮ್ರ ಮತ್ತು ತವರ ಇವೆರಡರ ಮಿಶ್ರಲೋಹವೇ ಕಂಚು. ಕಂಚು ಗಟ್ಟಿಯಾಗಿದ್ದು ಹೊಳಪು ಹೊಂದಿದೆ. ಅಚ್ಚುಗಳಲ್ಲಿ ಕಂಚನ್ನು ಎರಕಹೊಯ್ದು ಕಂಚಿನ ವಿಗ್ರಹಗಳನ್ನು ತಯಾರಿಸಲಾಗುತ್ತದೆ. ಈ ವಿಧಾನ ಇಂದಿಗೂ ರೂಢಿಯಲ್ಲಿದೆ.
ಚೋಳರು ವಾಸ್ತುಶಿಲ್ಪ ಕ್ಷೇತ್ರಕ್ಕೆ ಕೂಡ ವಿಶೇಷ ಕೊಡುಗೆ ನೀಡಿದರು. ತಂಜಾವೂರಿನ ಬೃಹದೀಶ್ವರ ಮಂದಿರ ಚೋಳರ ವಿಶ್ವವಿಖ್ಯಾತ ವಾಸ್ತುಕೃತಿಯಾಗಿದೆ. ಇದು ಒಂದು ಸಾವಿರ ವರ್ಷಗಳಷ್ಟು ಹಿಂದಿನದು.
ಬೃಹದೀಶ್ವರ ದೇವಾಲಯದ ವಿಮಾನವನ್ನು ಗಮನಿಸಿ. ವಿಮಾನವೆಂದರೆ ಗರ್ಭಗುಡಿಯ ಮೇಲಿರುವ ಗೋಪುರ. ಈ ದೇವಾಲಯದ ವಿಮಾನವು ಹದಿಮೂರು ಅಂತಸ್ತುಗಳಲ್ಲಿ ಮೇಲೆದ್ದು ಗಗನವನ್ನು ಮುಟ್ಟುವಂತಿದೆ. ವಿಮಾನದ ಎತ್ತರ 61 ಮೀ. (200 ಅಡಿ). ಬೃಹದೀಶ್ವರ ಭಾರತದಲ್ಲಿಯೇ ಎತ್ತರದ ಹಾಗೂ ಗಾತ್ರದಲ್ಲಿ ಅತಿ ದೊಡ್ಡದಾದ ದೇವಾಲಯವಾಗಿದೆ. ವಿಶ್ವಪರಂಪರೆಯ ತಾಣವೆಂದು ಇದು ಮನ್ನಣೆ ಪಡೆದಿದೆ.
ಎಲ್ಲ ಶಿವಾಲಯಗಳ ಮುಂಭಾಗದಲ್ಲಿ ನಂದಿ ವಿಗ್ರಹ ಇರುವುದು ವಾಸ್ತುಶಿಲ್ಪದ ಒಂದು ಲಕ್ಷಣವಾಗಿದೆ. ಇಲ್ಲಿನ ನಂದಿ ವಿಗ್ರಹವು ದಕ್ಷಿಣ ಭಾರತದಲ್ಲೇ ಗಾತ್ರದಲ್ಲಿ ದೊಡ್ಡದು. ಚೋಳರ ಇನ್ನೊಂದು ಬೃಹತ್ ದೇವಾಲಯವೆಂದರೆ ಗಂಗೈಕೊಂಡ ಚೋಳಪುರಂ ಎಂಬಲ್ಲಿರುವ ಶಿವಮಂದಿರ.
‘ಭಾರತ ರಿಸರ್ವ ಬ್ಯಾಂಕ್ 2010ರಲ್ಲಿ ರೂ. 1000 ಮುಖಬೆಲೆಯ “ಸಹಸ್ರವರ್ಷ ತುಂಬಿರುವ ಬೃಹದೀಶ್ವರ ದೇವಾಲಯ” ಎಂಬ ನಾಣ್ಯವನ್ನು ಹೊರತಂದಿದೆ.
ಪ್ರಮುಖ ಚೋಳ ಸಾಮ್ರಾಟರು
ಚೋಳರು ದಕ್ಷಿಣ ಭಾರತದ ಪ್ರಬಲ ರಾಜಕೀಯ ಶಕ್ತಿಯಾಗಿ ಸುಮಾರು ನಾಲ್ಕು ಶತಮಾನಗಳ ಕಾಲ ಮೆರೆದರು. ತಂಜಾವೂರು (ತಮಿಳುನಾಡು) ಚೋಳರ ರಾಜಧಾನಿ. ಚೋಳ ಸಾಮ್ರಾಟರಲ್ಲಿ ರಾಜರಾಜ ಮತ್ತು ರಾಜೇಂದ್ರ ಪ್ರಮುಖರು.
ರಾಜರಾಜ ಚೋಳ : ರಾಜರಾಜನು ಪರಾಕ್ರಮಿ ಹಾಗೂ ದಕ್ಷ ಆಡಳಿತಗಾರನಾಗಿದ್ದನು. ವಿಶಾಲವಾಗಿದ್ದ ಇವನ ಸಾಮ್ರಾಜ್ಯವು ತುಂಗಭದ್ರಾ ನದಿಯ ದಕ್ಷಿಣಕ್ಕಿದ್ದ ಎಲ್ಲಾ ಪ್ರದೇಶಗಳು, ಶ್ರೀಲಂಕಾ ಮತ್ತು ಮಾಲ್ದೀವ್ ದ್ವೀಪಗಳನ್ನು ಒಳಗೊಂಡಿತ್ತು. ಸಾಮ್ರಾಜ್ಯದ ರಕ್ಷಣೆಗಾಗಿ ಪ್ರಬಲವಾದ ಭೂಸೇನೆ ಮತ್ತು ನೌಕಾದಳವನ್ನು ಇವನು ಕಟ್ಟಿದನು. ಬೃಹದೀಶ್ವರ ದೇವಾಲಯವು ರಾಜರಾಜನ ಕೊಡುಗೆಯಾಗಿದೆ.
ರಾಜೇಂದ್ರ ಚೋಳ: ರಾಜರಾಜನ ಅನಂತರ ಅವನ ಮಗ ರಾಜೇಂದ್ರನು ಸಾಮ್ರಾಜ್ಯದ ಉತ್ತರಾಧಿಕಾರಿಯಾದನು. ಉತ್ತರ ಭಾರತದ ಯಶಸ್ವೀ ದಂಡಯಾತ್ರೆಯು ಇವನ ಒಂದು ಮುಖ್ಯ ಸಾಧನೆಯಾಗಿದೆ. ಈ ವಿಜಯದ ನೆನಪಿಗಾಗಿ ರಾಜೇಂದ್ರನು `ಗಂಗೈಕೊಂಡ’ ಎಂಬ ಬಿರುದನ್ನು ಧರಿಸಿದ. ಅಲ್ಲದೆ ಗಂಗೈಕೊಂಡ ಚೋಳಪುರಂ ಎಂಬ ಹೊಸ ರಾಜಧಾನಿಯನ್ನೂ ಅಲ್ಲೊಂದು ಬೃಹತ್ ಶಿವದೇವಾಲಯವನ್ನೂ ನಿರ್ಮಿಸಿದನು. ರಾಜಧಾನಿಯ ಸಮೀಪ ನೀರಾವರಿಗೆ ಯೋಗ್ಯವಾದ `ಚೋಳಗಂಗಂ’ ಎಂಬ ಭಾರಿ ಗಾತ್ರದ ಕೆರೆಯನ್ನು ತೋಡಿಸಿದನು. ಉತ್ತರ ಭಾರತದಿಂದ ಸಂಭ್ರಮದಿಂದ ಹೊತ್ತುತಂದ ಪವಿತ್ರ ಗಂಗಾಜಲವನ್ನು ವಿಧಿವತ್ತಾಗಿ ಕೆರೆಗೆ ಸುರಿಯಲಾಯಿತು. ನಮ್ಮ ಪೂರ್ವಜರಿಗೆ ಗಂಗಾಜಲದ ಬಗ್ಗೆ ಎಂತಹ ಪೂಜ್ಯ ಭಾವನೆ!
ಆಗ್ನೇಯ ಏಷ್ಯದ ಸುಮಾತ್ರಾದಲ್ಲಿನ ಶ್ರೀವಿಜಯ ರಾಜ್ಯವನ್ನು ಗೆದ್ದುಕೊಂಡಿದ್ದು ರಾಜೇಂದ್ರನ ಇನ್ನೊಂದು ಗಣನೀಯ ಸಾಧನೆಯಾಗಿದೆ.
ಸಾಹಿತ್ಯ: ಚೋಳರ ಆಳ್ವಿಕೆಯ ಕಾಲವು ತಮಿಳು ಸಾಹಿತ್ಯ ಮತು ಸಂಸ್ಕøತಿಯ ಸುವರ್ಣ ಯುಗವಾಗಿತ್ತು. ಅವರ ಕಾಲದಲ್ಲಿ ಭಕ್ತಿ ಸಾಹಿತ್ಯವು ಹುಲುಸಾಗಿ ಬೆಳೆಯಿತು. `ಪೆರಿಯಪುರಾಣಂ’ ಭಕ್ತಿ ಸಾಹಿತ್ಯದಲ್ಲಿ ಪ್ರಮುಖ ಸ್ಥಾನಪಡೆದಿದೆ. ಇದೇ ಕಾಲಕ್ಕೆ ಸೇರಿದ ಕಂಬನ್ ಬರೆದಿರುವ ರಾಮಾಯಣವು ಇಂದಿಗೂ ಜನಪ್ರಿಯವಾಗಿದೆ.
ಗ್ರಾಮಾಡಳಿತ: ಚೋಳರ ಗ್ರಾಮಾಡಳಿತ ಪದ್ಧತಿಯು ಆದರ್ಶಪ್ರಾಯವಾಗಿತ್ತು. ಗ್ರಾಮಾಡಳಿತವನ್ನು ಆಯಾ ಗ್ರಾಮಸಭೆಗಳೇ ನಡೆಸುತ್ತಿದ್ದವು. ಗ್ರಾಮಸಭೆಯ ಸದಸ್ಯರನ್ನು ಚುನಾಯಿಸಲಾಗುತ್ತಿತ್ತು. ಕೆಲವು ಮಂದಿ ಸದಸ್ಯರನ್ನು ಒಳಗೊಂಡ ಸಮಿತಿಗಳನ್ನು ರಚಿಸಿ ಅವುಗಳಿಗೆ ನಿರ್ದಿಷ್ಟವಾದ ಕಾರ್ಯಗಳನ್ನು ಗೊತ್ತುಪಡಿಸಲಾಗುತ್ತಿತ್ತು. ಸಮಿತಿಗಳು ಹಣಕಾಸಿನ ಲೆಕ್ಕವನ್ನು ಒಪ್ಪಿಸಬೇಕಿತ್ತು. ಅನರ್ಹ ಸದಸ್ಯರನ್ನು ಗ್ರಾಮಸಭೆಯಿಂದ ದೂರವಿಡುವ ಕ್ರಮವಿತ್ತು. ಚೋಳ ಗ್ರಾಮಾಡಳಿತ ವ್ಯವಸ್ಥೆಯು ಸಾಮಾನ್ಯವಾಗಿ ಇಂದಿನ ಪಂಚಾಯಿತಿ ವ್ಯವಸ್ಥೆಯಂತಿತ್ತು.
ಭಾರತದಲ್ಲಿ ಆಡಳಿತ ನಡೆಸಿದ ಬ್ರಿಟಿಷ್ ಅಧಿಕಾರಿಗಳು ಚೋಳರ ದಕ್ಷ ಆಡಳಿತವನ್ನು ಮೆಚ್ಚಿಕೊಂಡು, ಚೋಳರ ಕಾಲದ ಗ್ರಾಮಗಳು ‘ಪುಟ್ಟ ಗಣರಾಜ್ಯಗಳು’ ಎಂಬಂತೆ ಇದ್ದವೆಂದು ಬಣ್ಣಿಸಿದ್ದಾರೆ.
ವ್ಯಾಪಾರ: ಚೋಳ ಸಾಮ್ರಾಜ್ಯವು ಸಂಪದ್ಭರಿತವಾಗಿತ್ತು. ವಿದೇಶಿ ವ್ಯಾಪಾರವು ಬಿರುಸಾಗಿ ನಡೆಯುತ್ತಿತ್ತು. ಚೀನ, ಸುಮಾತ್ರಾ, ಜಾವಾ ಮತ್ತು ಅರೇಬಿಯ ಮುಂತಾದ ಪ್ರದೇಶಗಳೊಡನೆ ಸಾಮ್ರಾಜ್ಯವು ವ್ಯಾಪಾರ ಸಂಬಂಧವನ್ನಿರಿಸಿಕೊಂಡಿತ್ತು. ವ್ಯಾಪಾರಿ ಸಂಘಗಳು ದೇಶವಿದೇಶಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದವು.
ಹೊಸ ಪದಗಳು
ಕಾಲಂದುಗೆ – ಕಾಲಿನಲ್ಲಿ ಧರಿಸುವ ಕಡಗ; ನೂಪುರ.
ಕಾಲಗಣನೆ
ಹೊಯ್ಸಳರ ಆಳ್ವಿಕೆಯ ಕಾಲ – 1006-1346
ಚೋಳರ ಆಳ್ವಿಕೆಯ ಕಾಲ – ಸುಮಾರು 850-1200
ವಿಷ್ಣುವರ್ಧನ – ಸುಮಾರು 1108-1141
ಮೂರನೆಯ ಬಲ್ಲಾಳ – ಸುಮಾರು 1291-1343
ವಿಜಯನಗರದ ಸ್ಥಾಪನೆ – 1336
ರಾಜರಾಜ ಚೋಳ – 985-1014
ರಾಜೇಂದ್ರ ಚೋಳ – 1015-1044
ನಿಮಗೆ ತಿಳಿದಿರಲಿ
1 ತಿರುಕ್ಕುರಳ್‍ನಲ್ಲಿ 1300 ಪದ್ಯಗಳಿವೆ. ಅದರ ಕೆಲವು ನೀತಿವಾಕ್ಯಗಳು ಇಂತಿವೆ: ಮನಸ್ಸಿನಲ್ಲಿ ಕಳಂಕ ಇಲ್ಲದಿರುವುದೇ ಧರ್ಮ. ಎಲ್ಲ ಮಾನವರು ಹುಟ್ಟಿನಿಂದ ಒಂದೇ. ರಾಜನಿಗೆ ಜಯ ತರುವುದು ಈಟಿಯಲ್ಲ, ಅವನ ನಿಷ್ಪಕ್ಷ ಆಡಳಿತ.
2 ಸಂಗಂ ಸಾಹಿತ್ಯ ರಚನೆ ಸುಮಾರು 2300 ವರ್ಷಗಳ ಹಿಂದಿನಿಂದ ಆರಂಭಗೊಂಡು ಸುಮಾರು 500 ವರ್ಷಗಳಷ್ಟು ಕಾಲ ಮುಂದುವರಿಯಿತು.
3 ಬನವಾಸಿಯು ವೈಜಯಂತಿ ಎಂಬ ಹೆಸರಿನಲ್ಲಿ ಸಾತವಾಹನರ ಪ್ರಾಂತೀಯ ರಾಜಧಾನಿ ಯಾಗಿತ್ತು. ಸಾತವಾಹನರ ಕಾಲದಲ್ಲಿ ಪ್ರಾಕೃತವು ಜನಪ್ರಿಯ ಭಾಷೆಯಾಗಿತ್ತು.
4 ಸಾತವಾಹನರ ಆಳ್ವಿಕೆ ಸುಮಾರು 2300 ವರ್ಷಗಳ ಹಿಂದಿನಿಂದ ಆರಂಭಗೊಂಡು ಸುಮಾರು ನಾಲ್ಕು ಶತಮಾನ ಕಾಲದವರೆಗೆ ಮುಂದುವರಿಯಿತು.
5 ಕದಂಬರ ಆಳ್ವಿಕೆ ಸುಮಾರು 1650 ವರ್ಷಗಳ ಹಿಂದೆ ಆರಂಭಗೊಂಡಿತು. ಅವರು ಸುಮಾರು 190 ವರ್ಷಗಳ ಕಾಲ ಆಳಿದರು. ಹಲ್ಮಿಡಿ ಮತ್ತು ತಾಳಗುಂದ ಶಾಸನಗಳು ಸುಮಾರು 1550 ವರ್ಷಗಳಷ್ಟು ಹಿಂದಿನವು.
6 ಗಂಗರ ಕಾಲದಲ್ಲಿ ಕೃಷಿಭೂಮಿಯು ಗಣನೀಯವಾಗಿ ವಿಸ್ತರಣೆಗೊಂಡಿತು. ಗಂಗರಾಜರು ಕೆರೆಕಟ್ಟೆಗಳನ್ನು ನಿರ್ಮಿಸಿ ವ್ಯವಸಾಯಕ್ಕೆ ನೆರವಿತ್ತರು. ಸಾಮಾನ್ಯವಾಗಿ ಗ್ರಾಮದಲ್ಲೊಂದು ಕೆರೆ ಇರುತ್ತಿತ್ತು. ಭತ್ತ, ರಾಗಿ, ಜೋಳ, ಹತ್ತಿ ಮುಖ್ಯ ಬೆಳೆಗಳು, ಪಶುಸಂಪತ್ತು ಹೇರಳವಾಗಿತ್ತು. ಮಹಿಷಿ, ಗೋವು, ಅಶ್ವ, ಕುಕ್ಕುಟಗಳು (ಎತ್ತು, ಹಸು, ಕುದುರೆ, ಕೋಳಿ) ರಾಜ್ಯದಲ್ಲಿ ಸಮೃದ್ಧವಾಗಿದ್ದವು.
7 ಗಂಗರ ಕಾಲದಲ್ಲಿ ಕೆಲವೆಡೆ ಸ್ತ್ರೀಯರು ಅಧಿಕಾರಿಗಳಾಗಿದ್ದರು. ಸ್ವಂತವಾಗಿ ದಾನಗಳನ್ನು ನೀಡುತ್ತಿದ್ದರು. ಸತ್ಯಶೀಲತೆ, ಸ್ವಾಮಿನಿಷ್ಠೆ, ಶೌರ್ಯ ಮತ್ತು ತಾಳ್ಮೆಇವು ಆ ಕಾಲದ ಸಾಮಾಜಿಕ ಮೌಲ್ಯಗಳು.
8 ಶ್ರವಣಬೆಳಗೊಳದ ಚಿಕ್ಕಬೆಟ್ಟದ ಮೇಲೆ ಚಂದ್ರಗುಪ್ತ ಬಸದಿಯಿದೆ. ಅದನ್ನು ಚಂದ್ರಗುಪ್ತ ಮೌರ್ಯನು ಕಟ್ಟಿಸಿದನು. ಆದ್ದರಿಂದ ಆ ಚಿಕ್ಕಬೆಟ್ಟಕ್ಕೆ ‘ಚಂದ್ರಗಿರಿ’ ಎಂಬ ಹೆಸರು ಬಂದಿದೆ. ದೊಡ್ಡಬೆಟ್ಟವನ್ನು ಇಂದ್ರಗಿರಿ’ ಎಂದು ಕರೆಯುತ್ತಾರೆ.
9 ಗುಳ್ಳಕಾಯಜ್ಜಿಯ ಕಥೆಯು ಒಂದು ಐತಿಹ್ಯವಾಗಿದೆ. ಐತಿಹ್ಯಗಳ ಮುಖ್ಯ ಆಶಯ ಮೌಲ್ಯ ಪ್ರತಿಪಾದನೆ.
10 ಕರ್ನಾಟಕದಲ್ಲಿ ಕಾರ್ಕಳ (ಉಡುಪಿ ಜಿಲ್ಲೆ), ವೇಣೂರು (ದಕ್ಷಿಣ ಕನ್ನಡ), ಗೊಮ್ಮಟಗಿರಿ (ಮೈಸೂರು ಜಿಲ್ಲೆ), ಬಸ್ತಿಹಳ್ಳಿ (ಮಂಡ್ಯ ಜಿಲ್ಲೆ) ಮತ್ತು ಇತರೆಡೆ ಪ್ರಾಚೀನ ಗೊಮ್ಮಟ ವಿಗ್ರಹಗಳಿವೆ. ಧರ್ಮಸ್ಥಳದ ಗೊಮ್ಮಟ ವಿಗ್ರಹದ ಶಿಲ್ಪಿ ಕಾರ್ಕಳದ ರಂಜಾಳ ಗೋಪಾಲ ಶೆಣೈ.
ಸಂವೇದ ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು
ಪೂರಕ ವಿಡಿಯೋಗಳು
*********