ದಕ್ಷಿಣ ಅಮೆರಿಕ-ಆ್ಯಂಡೀಸ್‍ಗಳ ನಾಡು
ಪಾಠದ ಪರಿಚಯ
ಈ ಪಾಠದಲ್ಲಿ ದಕ್ಷಿಣ ಅಮೆರಿಕ ಖಂಡದ ಸ್ಥಾನ, ವಿಸ್ತೀರ್ಣ ಮತ್ತು ಭೌಗೋಳಿಕ ಸನ್ನಿವೇಶ, ನದಿಗಳು ಮತ್ತು ಸರೋವರಗಳು, ವಾಯುಗುಣ, ಸ್ವಾಭಾವಿಕ ಸಸ್ಯವರ್ಗ, ವನ್ಯಜೀವಿಗಳು, ಕೃಷಿ ಮತ್ತು ಪ್ರಾಣಿಸಾಕಣೆ, ಜನಸಂಖ್ಯೆಯ ಸಂಯೋಜನೆ, ಹಂಚಿಕೆ ಹಾಗೂ ಸಾಂದ್ರತೆಗಳನ್ನು ಕುರಿತ ಪರಿಚಯ.
ದಕ್ಷಿಣ ಅಮೆರಿಕವು ಪ್ರಪಂಚದ ನಾಲ್ಕನೇಯ ಅತಿ ದೊಡ್ಡ ಭೂಖಂಡವಾಗಿದೆ. ಕ್ರಿ.ಶ. 1498ರಲ್ಲಿ ಕ್ರಿಸ್ಟೋಫರ್ ಕೊಲಂಬಸನು ಈ ಭೂಖಂಡವನ್ನು ತಲುಪಿ, ಅದನ್ನು ಭಾರತವೆಂದು ಭಾವಿಸಿದ. ಅಲ್ಲಿನ ಸ್ಥಳೀಯರನ್ನು ರೆಡ್ ಇಂಡಿಯನ್ನರೆಂದು ಕರೆದನು. ಅನಂತರ ಯುರೋಪಿಯನ್ನರು (ಸ್ಪ್ಯಾನಿಷ್ ಮತ್ತು ಪೋರ್ಚುಗೋಸರು) ಈ ಭೂಖಂಡಕ್ಕೆ ಮುಗಿಬಿದ್ದರು.
ದಕ್ಷಿಣ ಅಮೆರಿಕವು ಆ್ಯಂಡೀಸ್ ಪರ್ವತ ಮತ್ತು ಅಮೆಜಾನ್ ನದಿ ವ್ಯವಸ್ಥೆವುಳ್ಳ ವಿಶೇಷವಾದ ಭೂಭಾಗವಾಗಿದೆ. ಅದು ಪ್ರಪಂಚದಲ್ಲೇ ಅತ್ಯಧಿಕ ಕಾಫಿಯನ್ನು ಉತ್ಪಾದಿಸುತ್ತಿದೆ ಇದನ್ನು ಸಾಮಾನ್ಯವಾಗಿ `ಹುಲ್ಲುಗಾವಲುಗಳ ನಾಡು’ ಎಂದು ಕರೆಯಲಾಗಿದೆ.
1) ಸ್ಥಾನ, ವಿಸ್ತಾರ ಮತ್ತು ಭೌಗೋಳಿಕ ಸನ್ನಿವೇಶ
ಸ್ಥಾನ : ದಕ್ಷಿಣ ಆಮೆರಿಕ ಖಂಡದ ಬಹುಭಾಗವು ದಕ್ಷಿಣಾರ್ಧಗೋಳದಲ್ಲಿದೆ. ಸ್ವಲ್ಪ ಭಾಗ ಉತ್ತರಾರ್ಧಗೋಳದಲ್ಲಿದೆ. ಭೂಮಧ್ಯರೇಖೆ ಮತ್ತು ಮಕರ ಸಂಕ್ರಾಂತಿ ವೃತ್ತಗಳು ಈ ಖಂಡದ ಮೂಲಕ ಹಾದುಹೋಗಿವೆ.
ಇದು ಉತ್ತರದಲ್ಲಿ ಅಗಲವಾಗಿಯೂ ಮತ್ತು ದಕ್ಷಿಣದ ಕಡೆಗೆ ಕಿರಿದಾಗಿದ್ದು ತ್ರಿಕೋನಾಕಾರವಾಗಿದೆ. ಅದರ ಅಕ್ಷಾಂಶಿಕವಾಗಿ 120 ಉ. ಅಕ್ಷಾಂಶದಿಂದ 560 ದಕ್ಷಿಣ ಅಕ್ಷಾಂಶದವರೆಗೂ ಮತ್ತು ರೇಖಾಂಶಿಕವಾಗಿ 350 ಪ. ರೇಖಾಂಶದಿಂದ 810 ಪಶ್ಚಿಮ ರೇಖಾಂಶದವರೆಗೂ ವಿಸ್ತರಿಸಿದೆ. ದಕ್ಷಿಣ ಅಮೆರಿಕ ಖಂಡವು ಪಶ್ಚಿಮಾರ್ಧಗೋಳದಲ್ಲಿ ನೆಲೆಗೊಂಡಿದೆ.
ಭೌಗೋಳಿಕ ಸನ್ನಿವೇಶ : ದಕ್ಷಿಣ ಅಮೆರಿಕ ಖಂಡವು ಉತ್ತರ ಭಾಗವನ್ನು ಹೊರತುಪಡಿಸಿ ಉಳಿದೆಲ್ಲಾ ದಿಕ್ಕುಗಳು ಜಲಭಾಗಗಳಿಂದ ಸುತ್ತುವರೆದಿದೆ. ಉತ್ತರದಲ್ಲಿ ಪನಾಮ ಕಾಲುವೆಯು ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕಗಳನ್ನು ಪ್ರತ್ಯೇಕಿಸಿದೆ. ದಕ್ಷಿಣ ಅಮೆರಿಕ ಖಂಡವು ಉತ್ತರದಲ್ಲಿ ಕೆರಿಬಿಯನ್ ಸಮುದ್ರಗಡಿಯಿಂದ, ಪೂರ್ವ ಮತ್ತು ಈಶಾನ್ಯ ಭಾಗದಲ್ಲಿ ಅಟ್ಲಾಂಟಿಕ್ ಸಾಗರದಿಂದ, ಪಶ್ಚಿಮದಲ್ಲಿ ಪೆಸಿಫಿಕ್ ಮಹಾಸಾಗರದಿಂದ ಮತ್ತು ದಕ್ಷಿಣದಲ್ಲಿ ಅಂಟಾಕ್ರ್ಟಿಕ್ ಸಾಗರದ ಹಿಮನೀರಿನಿಂದ ಆವರಿಸಲ್ಪಟ್ಟಿದೆ.
ವಿಸ್ತೀರ್ಣ : ದಕ್ಷಿಣ ಅಮೆರಿಕದ ಒಟ್ಟು ಭೂಭಾಗವು ಸುಮಾರು 177.1 ಲಕ್ಷ ಚ.ಕಿ.ಮೀ.ಗಳಷ್ಟಿದ್ದು ಅದು ಭಾರತಕ್ಕಿಂತಲೂ ಮೂರುವರೆ ಪಟ್ಟು ದೊಡ್ಡದಾಗಿದೆ. ಈ ಖಂಡದಲ್ಲಿ ಒಟ್ಟು ಹದಿಮೂರು ರಾಷ್ಟ್ರಗಳಿವೆ. ಬ್ರೆಜಿಲ್ ಅತಿ ದೊಡ್ಡ ಮತ್ತು ಫ್ರೆಂಚ್ ಗಯಾನವು ಅತಿ ಚಿಕ್ಕ ರಾಷ್ಟ್ರವಾಗಿದೆ, ಬೊಲಿವಿಯಾ ಮತ್ತು ಪರಾಗ್ವೆ ಹೊರತುಪಡಿಸಿ ದಕ್ಷಿಣ ಅಮೆರಿಕದ ಉಳಿದೆಲ್ಲಾ ದೇಶಗಳು ಸಮುದ್ರ ತೀರವನ್ನು ಹೊಂದಿವೆ. ಚಿಲಿ ದೇಶವು ನೀಳವಾದ ರಾಷ್ಟ್ರವಾಗಿದೆ.
* ಪನಾಮ ಕಾಲುವೆಯು (1912) ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕಗಳ ಮಧ್ಯೆ ಇರುವ ಮುಖ್ಯ ಸಾಗರ ಮಾರ್ಗವಾಗಿದೆ.
* ಈಕ್ವೆಡಾರ್ ದೇಶದ ಹೆಸರು ಈಕ್ವೇಟರ್ ಎಂಬ ಆಂಗ್ಲಭಾಷಾ ಶಬ್ಧದಿಂದ ಬಂದಿದೆ.
* ಅರ್ಜೆಂಟೈನಾ ಮತ್ತು ಬ್ರೆಜಿಲ್‍ಗಳು ಕಾಲ್ಚೆಂಡಾಟಕ್ಕೆ ಪ್ರಖ್ಯಾತವಾಗಿವೆ.
* ಕ್ರಿ.ಶ. 2016ರಲ್ಲಿ ಬ್ರೆಜಿಲ್‍ನಲ್ಲಿ ಒಲಿಂಪಿಕ್ ಸಮಾವೇಶ ನಡೆದಿದೆ.
* ವೆನಿಜ್ವೆಲ ದೇಶವು ಮಾಡಲಿಂಗ್ ಮತ್ತು ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ.
* ಸವೋ ಪೊಲೊ ಸಿಟಿ ಆಫ್ ಸ್ಕೈಸ್ಕೇಪರ್ (ಗಗನಚುಂಬಿ ಕಟ್ಟಡಗಳ ಶಹರ) ಎಂದು ಪ್ರಖ್ಯಾತವಾಗಿದೆ.
2) ಮೇಲ್ಮೈ ಲಕ್ಷಣಗಳು
ದಕ್ಷಿಣ ಅಮೆರಿಕವು ವಿಶಿಷ್ಟವಾದ ಭೂಮೇಲ್ಮೈ ಲಕ್ಷಣಗಳನ್ನು ಹೊಂದಿದೆ. ಅದು ಹಿಮಾವೃತವಾದ ಶಿಖರಗಳನ್ನು ಮತ್ತು ದಟ್ಟವಾದ (ಉಷ್ಣವಲಯದ) ಸಮಭಾಜಕವೃತ್ತದ ಅರಣ್ಯಗಳನ್ನು ಹೊಂದಿದೆ. ಈ ಭೂಖಂಡವು ಅತಿ ಫಲವತ್ತಾದ ಮೈದಾನ ಪ್ರದೇಶ ಅಂತೆಯೇ ಅನುಪಯುಕ್ತ ಮರುಭೂಮಿಗಳನ್ನು ಹೊಂದಿದೆ. ಈ ಖಂಡದ ಪ್ರಮುಖ ಪ್ರಾಕೃತಿಕ ವಿಭಾಗಗಳೆಂದರೆ:
1) ಆ್ಯಂಡೀಸ್ ಪರ್ವತಗಳು
2) ಪೂರ್ವದ ಎತ್ತರ ಪ್ರದೇಶಗಳು
3) ಕೇಂದ್ರದ ತಗ್ಗು ಪ್ರದೇಶಗಳು
4) ಪಶ್ಚಿಮದ ಕರಾವಳಿ ಮೈದಾನಗಳು
1) ಆ್ಯಂಡೀಸ್ ಪರ್ವತಗಳು
ಆ್ಯಂಡೀಸ್ ಪರ್ವತಗಳು ಪೆಸಿಫಿಕ್ ಸಾಗರದ ಕರಾವಳಿ ತೀರದುದ್ದಕ್ಕೂ ಸುಮಾರು 6,440 ಕಿ.ಮೀ.ಗಳಷ್ಟು ದೂರ ಹಬ್ಬಿರುವ ಪ್ರಪಂಚದ ಅತ್ಯಂತ ಉದ್ದವಾದ ಪರ್ವತ ಸರಣಿಯಾಗಿದೆ. ಇವು ಪೆಸಿಫಿಕ್ ಸಾಗರದಂಚಿನ ಅಗ್ನಿಯುಂಗುರ ಪ್ರದೇಶದಲ್ಲಿರುವುದರಿಂದ ಈ ಭಾಗದಲ್ಲಿ ಹಲವು ಭೂಕಂಪನಗಳು ಮತ್ತು ಜ್ವಾಲಾಮುಖಿಗಳಿರುವುದನ್ನು ಗುರುತಿಸಬಹುದು. ಮೌಂಟ್ ಅಕನ್‍ಕಾಗುವ (6,960 ಮಿ.) ಅರ್ಜೆಂಟೈನಾ-ಚಿಲಿ ಗಡಿಭಾಗದಲ್ಲಿದ್ದು ಅದು ಈ ಸರಣಿಯ ಅತಿ ಎತ್ತರದ ಶಿಖರವಾಗಿದೆ. ಇಕ್ವೆಡಾರ್‍ನಲ್ಲಿನ ಕೊಟೂಪಾಕ್ಷಿ (5896 ಮೀ.) ಮತ್ತು ಚಿಂಬೋರಾಸೊ (6272 ಮೀ.) ಇತರ ಪರ್ವತಗಳಾಗಿವೆ. ಆ್ಯಂಡೀಸ್ ಪರ್ವತ ಪ್ರದೇಶದಲ್ಲಿ ತಾಮ್ರ ಮತ್ತು ತವರಗಳಂತಹ ಖನಿಜಗಳು ಸಮೃದ್ಧವಾಗಿದೆ.
2) ಪೂರ್ವದ ಎತ್ತರದ ಪ್ರದೇಶಗಳು
ಈ ಪ್ರದೇಶವು ಎರಡು ವಿಭಿನ್ನ ಉನ್ನತ ಏಂಜಲ್ ಜಲಪಾತ ಪ್ರದೇಶಗಳನ್ನು ಒಳಗೊಂಡಿದೆ. (i) ಉತ್ತರದಲ್ಲಿ ಗಯಾನ ಉನ್ನತ ಪ್ರದೇಶಗಳು ಮತ್ತು (ii) ದಕ್ಷಿಣದಲ್ಲಿ ಬ್ರೆಜಿಲ್ ಉನ್ನತ ಪ್ರದೇಶಗಳು. ಇವುಗಳು ಭಾರತದ ದಕ್ಷಿಣ ಪ್ರಸ್ಥಭೂಮಿಯಂತೆ ಹಳೆಯ ಶಿಲೆಗಳಿಂದ ರಚಿಸಲ್ಪಟ್ಟಿವೆ. ಓರಿನೊಕೊ ನದಿಯ ಉಪನದಿಯಾದ ಚೂರನ್ ನದಿಯು ವಿಶ್ವದ ಅತ್ಯಂತ ಎತ್ತರವಾದ ಏಂಜಲ್ ಜಲಪಾತವನ್ನು (974 ಮೀ.) ಗಯಾನ ಪ್ರದೇಶದಲ್ಲಿ ನಿರ್ಮಿಸಿದೆ.
3) ಕೇಂದ್ರದ ತಗ್ಗು ಪ್ರದೇಶಗಳು
ಆ್ಯಂಡೀಸ್ ಪರ್ವತಗಳು ಮತ್ತು ಪೂರ್ವದ ಉನ್ನತ ಭೂಭಾಗಗಳ ಮಧ್ಯೆ ಕಂಡುಬರುತ್ತವೆ. ಇವು ವಿಶಾಲವಾದ ನದಿ ಜಲಾನಯನ ಪ್ರದೇಶಗಳಿಂದ ಕೂಡಿವೆ. ಅವುಗಳೆಂದರೆ : ಅಮೆಜಾನ್, ಓರಿನೊಕೊ ಮತ್ತು ಲಾಪ್ಲಾಟಾ ನದಿಬಯಲುಗಳಾಗಿವೆ. ಅವುಗಳಲ್ಲಿ ಅಮೆಜಾನ್ ನದಿ ಜಲಾನಯನ ಪ್ರದೇಶವು ಅತಿ ದೊಡ್ಡದಾಗಿದ್ದು ಪ್ರಖ್ಯಾತವಾಗಿದೆ. ದಕ್ಷಿಣ ಅಮೆರಿಕಾದ ಉತ್ತರ ಭಾಗದಲ್ಲಿ ಓರಿನೋಕೋ ನದಿಯು ಮೈದಾನವನ್ನು ನಿರ್ಮಿಸಿದ್ದು ಅದು ಗಯಾನ ಉನ್ನತ ಪ್ರದೇಶ ಮತ್ತು ಅಮೇಜಾನ್ ಬಯಲುಗಳಿಂದ ಪ್ರತ್ಯೇಕವಾಗಿದೆ. ಆ್ಯಂಡೀಸ್ ಪರ್ವತಗಳ ಪೂರ್ವಭಾಗದಲ್ಲಿ ಗ್ರ್ಯಾನ್‍ಚಾಕೊ (ಬೇಟೆಯ ಅಥವಾ ಶಿಖಾರಿನಾಡು) ವಿಶಾಲವಾದ ಮೆಕ್ಕಲು ಮಣ್ಣಿನ ಪ್ರದೇಶವಿದೆ. ಇದು ಪ್ರಸಿದ್ಧ ಜಾನುವಾರು ಗೋಮಾಳವಾಗಿದೆ.
2) ಪಶ್ಚಿಮ ಕರಾವಳಿ ಮೈದಾನಗಳು
ಇವುಗಳು ಕಿರಿದಾದ ಮೈದಾನಗಳಾಗಿದ್ದು ಪೆಸಿಫಿಕ್ ಮಹಾಸಾಗರ ಮತ್ತು ಆ್ಯಂಡೀಸ್ ಪರ್ವತ ಶ್ರೇಣಿಗಳ ಮಧ್ಯೆ ಕಂಡುಬರುತ್ತವೆ. ಪಶ್ಚಿಮ ಕರಾವಳಿ ತೀರವು ಬಹುತೇಕ ಒಡೆದ ತೀರದಂತಿದೆ. ಏಕೆಂದರೆ ಕರಾವಳಿಯಿಂದ ಆ್ಯಂಡೀಸ್ ಪರ್ವತವು ಕಡಿದಾಗಿ ಮೇಲಕ್ಕೆತ್ತಲ್ಪಟ್ಟಿದೆ. ಕೇಂದ್ರೀಯ ಚಿಲಿ ಮತ್ತು ಕೊಲಂಬಿಯಗಳ ಪಶ್ಚಿಮ ಕರಾವಳಿ ತೀರದುದ್ದಕ್ಕೂ ಕಿರಿದಾದ ಕರಾವಳಿ ಮೈದಾನಗಳನ್ನು ಕಾಣಬಹುದು. ಈ ಕರಾವಳಿಯು ಒಡೆದ ತೀರವಾಗಿದೆ. ಹಲವಾರು ದೊಡ್ಡನಗರಗಳು ಕರಾವಳಿ ಮೈದಾನದಲ್ಲಿ ನೆಲೆಗೊಂಡಿವೆ. ಕರಾವಳಿಯ ದಕ್ಷಿಣ ಭಾಗದಲ್ಲಿ ಹಾಗೂ ಇತರ ಕಡೆಗಳಲ್ಲಿ ಹಲವು ದ್ವೀಪಗಳಿವೆ.
3) ನದಿಗಳು ಮತ್ತು ಸರೋವರಗಳು
ಅಮೆಜಾನ್, ಪರಾನ, ಪರಗ್ವೆ, ಉರುಗ್ವೆ ಮತ್ತು ಓರಿನೊಕೊಗಳು ದಕ್ಷಿಣ ಅಮೆರಿಕದ ಪ್ರಮುಖ ನದಿವ್ಯೂಹಗಳಾಗಿವೆ. ಅಮೆಜಾನ್ (6,450 ಕಿ.ಮೀ.) ನದಿಯು ಆ್ಯಂಡೀಸ್ ಪರ್ವತದಲ್ಲಿ ಹುಟ್ಟುವ ದಕ್ಷಿಣ ಅಮೆರಿಕದ ಅತಿ ಉದ್ದವಾದ ನದಿಯಾಗಿರುವುದಲ್ಲದೆ ಪ್ರಪಂಚದ ಅತಿ ದೊಡ್ಡ ನದಿಯಾಗಿದೆ. ಈ ನದಿಯ ಪಾತ್ರದುದ್ದಕ್ಕೂ ಬಹುದೂರ ನೌಕಾಯಾನಕ್ಕೆ ಅನುಕೂಲವಾಗಿದೆ. ಓರಿನೊಕೊ ಮತ್ತೊಂದು ಪ್ರಮುಖವಾದ ನದಿವ್ಯೂಹವಾಗಿದೆ. ಪರಾನ, ಪರಗ್ವೆ ಮತ್ತು ಉರುಗ್ವೆಗಳ ಒಗ್ಗೂಡಿದ ನದಿವ್ಯೂಹವನ್ನು ಲಾಪ್ಲಾಟಾವೆಂದು ಕರೆಯಲಾಗಿದೆ.
ಟಿಟಿಕಾಕ ಸರೋವರವು (ಬೊಲಿವಿಯ) ಪ್ರಪಂಚದಲ್ಲಿಯೇ ಎತ್ತರದಲ್ಲಿರುವ ಸರೋವರವಾಗಿದೆ ಹಾಗೂ ದಕ್ಷಿಣ ಅಮೆರಿಕದ ನೌಕಾಯಾನಕ್ಕೆ ಸಹಾಯಕವಾಗಿರುವ ಸರೋವರವಾಗಿದೆ. ಜುನಿನ್ ಸರೋವರ, ಪೆರುವಿನ ಪರೋಕೋಚ್ ಸರೋವರ, ಬೋಲಿವಿಯಾದ ಪೂಪಾ ಸರೋವರಗಳು ದಕ್ಷಿಣ ಅಮೆರಿಕಾದ ಇತರ ಪ್ರಮುಖ ಸರೋವರಗಳಾಗಿವೆ.
ಅಮೆಜಾನ್ ನದಿ ವೈಶಿಷ್ಟ್ಯಗಳು
* ಮರಾಜೊ ನದಿ ದ್ವೀಪ
* ಅನಕೊಂಡ ಮತ್ತು ಪಿರಾನ್ಹ ಜೀವಿಗಳ ಆವಾಸ
* ಅತಿದೊಡ್ಡ ನದಿ, 1,000ಕ್ಕಿಂತ ಅಧಿಕವಾದ ಉಪನದಿಗಳು
* ಪ್ರಪಂಚದ ಸುಮಾರು 11.5%ದಷ್ಟು ಭೂಭಾಗ
* ಹುಂಗ-ನೆಲದೊಳಗಿನ ನದಿ
3) ವಾಯುಗುಣ
ದಕ್ಷಿಣ ಅಮೆರಿಕವು ವೈವಿಧ್ಯಮಯ ವಾಯುಗುಣವನ್ನು ಹೊಂದಿದೆ. ಈ ಖಂಡದ ವಾಯುಗುಣದಲ್ಲಿನ ವ್ಯತ್ಯಾಸಕ್ಕೆ ಅಲ್ಲಿನ ಅಕ್ಷಾಂಶ ವಿಸ್ತರಣೆ, ಎತ್ತರ. ಪೆಸಿಫಿಕ್ ಹಾಗು ಅಟ್ಲಾಂಟಿಕ್ ಮಹಾಸಾಗರಗಳ ಸಾಮೀಪ್ಯ ಕಾರಣವಾಗಿದೆ.
ಈ ಖಂಡದ ಉತ್ತರ ಭಾಗದಲ್ಲಿ ಭೂಮಧ್ಯೆರೇಖೆಯು ಹಾದುಹೋದರೆ, ಇದರ ದಕ್ಷಿಣ ಭಾಗದಲ್ಲಿ ಮಕರ ಸಂಕ್ರಾಂತಿ ವೃತ್ತವು ಹಾದು ಹೋಗಿದೆ. ಈ ಎರಡು ಅಕ್ಷಾಂಶಗಳ ಮಧ್ಯೆ ಕಂಡುಬರುವ ಭೂಭಾಗವು ಉಷ್ಣವಲಯದಲ್ಲಿದೆ. ಉತ್ತರದಲ್ಲಿ ಅಗಲವಾದ ಭಾಗವು ಉಷ್ಣವಲಯ ವಾಯುಗುಣದ ಪ್ರಭಾವಕ್ಕೆ ಒಳಪಟ್ಟಿದೆ. ಆದ್ದರಿಂದ ಇಲ್ಲಿನ ವಾಯುಗುಣವು ಶಾಖ ಮತ್ತು ತೇವಯುತವಾಗಿದೆ. ಸಮಭಾಜಕವೃತ್ತವಿರುವುದರಿಂದ ಅಮೆಜಾನ್ ನದಿ ಬಯಲು ಉಷ್ಣ ಮತ್ತು ತೇವಯುತ ಸಮಭಾಜಕವೃತ್ತದ ವಾಯುಗುಣವನ್ನು ಹೊಂದಿದೆ. ಈ ಪ್ರದೇಶವು ಬಹುತೇಕವಾಗಿ ಪ್ರತಿನಿತ್ಯವೂ ಪರಿಸರಣ ಮಳೆಯ ಅನುಭವವನ್ನು ಹೊಂದಿದೆ. ಈ ಪ್ರದೇಶದಲ್ಲಿ ಬೀಳುವ ಭಾರಿ ಮಳೆಯು ದಟ್ಟವಾದ ಅರಣ್ಯದ ಬೆಳವಣಿಗೆಗೆ ಕಾರಣವಾಗಿದೆ. ಅಮೆಜಾನ್ ಮುಖಜಭೂಮಿಯು ದಟ್ಟ ಅರಣ್ಯವನ್ನು ಹೊಂದಿದ್ದು, ಸಸ್ಯವರ್ಗ ಮತ್ತು ಪ್ರಾಣಿವರ್ಗಗಳಿಗೆ ನೆಲೆಯನ್ನು ಕಲ್ಪಿಸಿಕೊಟ್ಟಿದೆ. ಸರೀಸೃಪಗಳು, ಪಕ್ಷಿಗಳು ಮತ್ತು ಮಂಗಗಳು ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.
ಒಂದು ಭೂಭಾಗದ ಜಲರಾಶಿಯು ಬೆಳಗಿನಿಂದಲೇ ಸೂರ್ಯನ ಶಾಖದಿಂದ ಆವಿಯಾಗಿ ಮೇಲೇರಿ, ಮೋಡವಾಗಿ ಅಂದೇ ಅದೇ ಪ್ರದೇಶದಲ್ಲಿ ಮಳೆಯಾಗುವುದಕ್ಕೆ `ಪರಿಸರಣ ಮಳೆ’ ಎನ್ನುತ್ತಾರೆ. ಸಮಭಾಜಕ ವೃತ್ತ ಪ್ರದೇಶದಲ್ಲಿ ಬೀಳುವ ಪರಿಸರಣ ಮಳೆಯನ್ನು ಅಪರಾಹ್ನದ ಮಳೆ, ಚಹ ವಿರಾಮದ ಮಳೆ, ಮತ್ತು 4 ಗಂಟೆಯ ಮಳೆ ಎಂದು ಕರೆಯಲಾಗಿದೆ.
ಈ ಖಂಡದ ಪಶ್ಚಿಮ ಅಂಚಿನುದ್ದಕ್ಕೂ ಆ್ಯಂಡೀಸ್ ಪರ್ವತಗಳು ಹಬ್ಬಿವೆ. ಕರಾವಳಿ ಅಂಚಿನಲ್ಲಿ ಬೀಸುವ ಮಾರುತಗಳು ವಾಯುಮುಖ ಭಾಗದ ಕಡೆಗೆ ಮಳೆಯನ್ನು ತರುತ್ತವೆ. ಆದರೆ, ಆ್ಯಂಡೀಸ್ ಪರ್ವತದ ಪೂರ್ವ ಭಾಗಗಳು ಕಡಿಮೆ ಮಳೆಯನ್ನು ಪಡೆಯುತ್ತವೆ. ಇದು ಮಳೆನೆರಳಿನ ಪ್ರದೇಶವಾಗಿದ್ದು, ಇಲ್ಲಿ ದಕ್ಷಿಣ ಅಮೆರಿಕದ ಸಮಶೀತೋಷ್ಣವಲಯದ ಮರುಭೂಮಿಗಳಿವೆ. ಖಂಡದ ವಾಯುಗುಣದ ಮೇಲೆ ಸಾಗರ ಪ್ರವಾಹಗಳೂ ಸಹ ಪ್ರಭಾವ ಬೀರುತ್ತವೆ. ಬ್ರೆಜಿಲಿಯನ್ ಉಷ್ಣ ಪ್ರವಾಹವು ಪೂರ್ವ ಕರಾವಳಿಗುಂಟ ಚಲಿಸಿ ಮಳೆಯನ್ನುಂಟು ಮಾಡುವುದು. ಅದೇ ರೀತಿ ಪಶ್ಚಿಮ ಕರಾವಳಿಯಲ್ಲಿ ಪೆರುವಿಯನ್ (ಹಂಬೋಲ್ಟ್) ಶೀತ ಪ್ರವಾಹವು ಅಲ್ಲಿನ ಉಷ್ಣತೆಯನ್ನು ಕಡಿಮೆಗೊಳಿಸುವುದು ಮತ್ತು ಒಣದಾಗಿಸುವುದು. ಆದ್ದರಿಂದ ಉಷ್ಣ ಮರಭೂಮಿ ಬಗೆಯ ವಾಯುಗುಣವು ಉತ್ತರ ಚಿಲಿ ಮತ್ತು ದಕ್ಷಿಣ ಪೆರುವಿನ ಕೆಲವು ಭಾಗಗಳಲ್ಲಿ ಕಂಡುಬರುವುದು. ಆ್ಯಂಡೀಸ್‍ನ ಪಶ್ಚಿಮ ಭಾಗ ಮತ್ತು ಚಿಲಿಯ ಬಹುತೇಕ ದಕ್ಷಿಣ ಪ್ರದೇಶವು ವರ್ಷವಿಡೀ ಮಳೆಯನ್ನು ಪಡೆಯುವುದು. ಇದು ಚಳಿಗಾಲದಲ್ಲಿ ಹೆಚ್ಚಿಗಿರುತ್ತದೆ. ಈ ಪ್ರದೇಶವು ಸಾಗರೀಕ ವಾಯುಗುಣವನ್ನು ಹೊಂದಿದೆ. ಚಿಲಿ ತೀರದ ಉತ್ತರ ಮತ್ತು ಕೇಂದ್ರ ಪ್ರದೇಶವು ಉಷ್ಣ ಬೇಸಿಗೆ ಮತ್ತು ಸೌಮ್ಯ ಚಳಿಗಾಲಗಳು ಜೊತೆಗೆ ಚಳಿಗಾಲದಲ್ಲಿ ಮಳೆಯನ್ನು ಹೊಂದಿರುವುದು. ಈ ಪ್ರದೇಶವು ಮೆಡಿಟರೇನಿಯನ್ ಮಾದರಿಯ ವಾಯುಗುಣವನ್ನು ಹೊಂದಿದೆ. ಅಟಕಾಮ ಮರುಭೂಮಿಯು (ಚಿಲಿ) ಭೂಮಿಯ ಮೇಲಿನ ಅತಿ ಶುಷ್ಕ ಪ್ರದೇಶವಾಗಿದೆ. ಕಳೆದ 200 ವರ್ಷಗಳಿಂದಲೂ ಇಲ್ಲಿ ಮಳೆ ಬಿದ್ದಿಲ್ಲ.
4) ಸ್ವಾಭಾವಿಕ ಸಸ್ಯವರ್ಗ
ಅಮೆಜಾನ್ ಬಯಲಿನ ಸಮಭಾಜಕವೃತ್ತ ಪ್ರದೇಶವು ವಿಶ್ವದ ಅತಿದೊಡ್ಡ ಮಳೆಅರಣ್ಯವಾಗಿದ್ದು, ಸ್ಥಳೀಯವಾಗಿ ಸೆಲ್ವಾಸ್ ಎಂದು ಕರೆಯಲಾಗಿದೆ. ಗಟ್ಟಿ ಮರದ ನಿತ್ಯ ಹರಿದ್ವರ್ಣ ಕಾಡುಗಳು ಸಾಂದ್ರವಾದ ಚಪ್ಪರದಾಕಾರದ ಮರಗಳಿಂದ ಕೂಡಿರುವುದನ್ನು ಇಲ್ಲಿ ಕಾಣಬಹುದು. ಮಹಾಗನಿ ಮತ್ತು ಎಬೋನಿಗಳು ಈ ಪ್ರದೇಶದಲ್ಲಿ ಕಂಡುಬರುವ ಬೆಲೆಬಾಳುವ ಮರಗಳಾಗಿವೆ. ಇಲ್ಲಿನ ರಬ್ಬರ್ ಮರಗಳನ್ನು `ಲ್ಯಾಟೆಕ್ಸ್’ (ರಬ್ಬರ್ ಹಾಲು) ತೆಗೆಯಲು ಬಳಸಲಾಗುತ್ತದೆ. ಸಮಭಾಜಕವೃತ್ತ ಅರಣ್ಯಗಳ ಎರಡೂ ಪಾರ್ಶ್ವಭಾಗಗಳಲ್ಲಿ ಹುಲ್ಲುಗಾವಲುಗಳಿವೆ. ಇವುಗಳನ್ನು ಓರಿನೊಕೊ ನದಿ ಬಯಲಿನಲ್ಲಿ ಲಾನೋಸ್ ಎಂದು ಕರೆದರೆ, ಬ್ರೆಜಿಲಿನ ಉನ್ನತ ಭಾಗಗಳಲ್ಲಿ (ವೆನಿಜೂಲ) ಕಾಂಪಾಸ್ ಎಂದು ಕರೆಯಲಾಗುತ್ತದೆ. ಬ್ರೆಜಿಲಿನ ಆಗ್ನೇಯ ಕರಾವಳಿಯು ಉಷ್ಣವಲಯದ ಎಲೆಯುದುರುವ ಕಾಡುಗಳಿಂದ ಕೂಡಿದೆ.
ದಕ್ಷಿಣ ಅಮೆರಿಕ `ಹುಲ್ಲುಗಾವಲುಗಳ ನಾಡು’
ವೆನಿಜೂಲದ ಲಾನೋಸ್ (Llanos)
ಬ್ರೆಜಿಲ್‍ನ ಕಾಂಪಾಸ್ (Campos)
ಅರ್ಜೆಂಟೈನಾದ ಪಂಪಾಸ್ (Pampos)
ಗ್ರಾನ್ ಚಾಕೋ ಪ್ರದೇಶದ ದಕ್ಷಿಣ ಭಾಗವು ಸಮಶೀತೋಷ್ಣವಲಯದ ಹುಲ್ಲುಗಾವಲು (ಅರ್ಜೆಂಟೈನಾ ಮತ್ತು ಉರುಗ್ವೆ) ಅತಿ ವಿಸ್ತಾರವಾದ ಸಮಶೀತೋಷ್ಣವಲಯದ ಹುಲ್ಲುಗಾವಲುಗಳಿಂದ ಕೂಡಿದ್ದು, ಅದನ್ನು ಪಂಪಾಸ್ ಎಂದು ಕರೆಯಲಾಗಿದೆ. ಆ್ಯಂಡೀಸ್ ಪರ್ವತದ ಪೂರ್ವದ ಕಡೆಗೆ ಪಟಗೋನಿಯ ಪ್ರಸ್ಥಭೂಮಿಯಿದ್ದು ಕುರುಚಲು ಸಸ್ಯವರ್ಗಗಳಿಂದ ಕೂಡಿದ ಸಮಶೀತೋಷ್ಣವಲಯ ಮರುಭೂಮಿಯನ್ನು ಹೊಂದಿದೆ. ಕೇಂದ್ರೀಯ ಪ್ರದೇಶವು ಮಿಶ್ರ ವಿಧದ ಅರಣ್ಯಗಳಿಂದ ಕೂಡಿದೆ. ಬಳಿದಾದ ಇಳುಕಲಿನ ಮೇಲೆ ಸಮಶೀತೋಷ್ಣವಲಯದ ಎಲೆಗಳುದುರಿಸುವ ಅರಣ್ಯಗಳು ಕಂಡುಬಂದರೆ, ಕಡಿದಾದ ಇಳುಕಲಿನ ಮೇಲೆ ಕೋನಿಫೆರಸ್ ಅರಣ್ಯಗಳು ಕಂಡುಬರುತ್ತವೆ. ನಿತ್ಯಹರಿದ್ವರ್ಣದ ಮರಗಳನ್ನು ಮತ್ತು ಕುರುಚಲು ಸಸ್ಯಗಳನ್ನು ಒಳಗೊಂಡ ಕೇಂದ್ರ ಚಿಲಿಯು ಮೆಡಿಟರೇನಿಯನ್ ಮಾದರಿಯ ವಾಯುಗುಣವನ್ನು ಹೊಂದಿದೆ.
5) ವನ್ಯ ಜೀವಿಗಳು
ದಕ್ಷಿಣ ಅಮೆರಿಕವು ವೈವಿಧ್ಯಮಯವಾದ ವನ್ಯಪ್ರಾಣಿಗಳು, ಪಕ್ಷಿಗಳು ಮತ್ತು ಸರೀಸೃಪಗಳನ್ನು ಹೊಂದಿದೆ. ದಕ್ಷಿಣ ಅಮೆರಿಕ ಖಂಡವನ್ನು `ಪಕ್ಷಿಗಳ ಖಂಡ’ ಎಂದು ಕರೆಯಲಾಗಿದೆ. ಕಾಂಡರ್ ಪ್ರಪಂಚದ ಅತಿದೊಡ್ಡ ಪಕ್ಷಿಯಾಗಿದೆ. ಆಫ್ರಿಕದಲ್ಲಿನ ಆಸ್ಟ್ರಿಚ್‍ನಂತೆ ರ್ಹಿಯಾ ಹಾರಲಾರದ ಒಂದು ದೊಡ್ಡ ಪಕ್ಷಿಯಾಗಿದೆ. ಹಾರುವ ಮಂಗ, ಅಳಿಲು ಮತ್ತು ಮಂಗಗಳು ಅಮೆಜಾನ್ ಅರಣ್ಯಗಳ ಮರಗಳಲ್ಲಿ ವಾಸಿಸುತ್ತವೆ. ಅನಕೊಂಡ ಹೆಬ್ಬಾವು ಇಲ್ಲಿನ ಮಳೆ ಅರಣ್ಯಗಳಲ್ಲಿ ಜೀವಿಸುತ್ತಿರುವ ಅತಿ ದೊಡ್ಡ ಸರೀಸೃಪವಾಗಿದೆ. ಪ್ಯೂಮ ಮತ್ತು ಜಾಗ್ವಾರ್‍ಗಳು ದೊಡ್ಡ ಪ್ರಾಣಿಗಳಾಗಿದ್ದು ಕೋತಿ ಮತ್ತು ಇತರ ಸಣ್ಣ ಪ್ರಾಣಿಗಳನ್ನು ಆಹಾರವನ್ನಾಗಿ ಉಪಯೋಗಿಸುತ್ತಿವೆ. ಲಾಮ ಮತ್ತು ಆಲ್‍ಪಾಕಗಳು ಒಂಟೆಯಂತಹ ಪ್ರಾಣಿಗಳಾಗಿದ್ದು, ಅವು ಉದ್ದವಾದ ಕುತ್ತಿಗೆಯನ್ನು ಹೊಂದಿವೆ. ಇವುಗಳನ್ನು ಸ್ಥಳೀಯ ನಿವಾಸಿಗಳು ತಮ್ಮ ದೈನಂದಿನ ಕೆಲಸಗಳಲ್ಲಿ ಬಳಸಿಕೊಳ್ಳುತ್ತಾರೆ. ಗಾಲ್ಪಗೋಸ್ ದ್ವೀಪಗಳು ಬೃಹದಾಕಾರದ ಆಮೆಗಳಿಗೆ ಪ್ರಖ್ಯಾತಿಯಾಗಿವೆ. ಅಲ್ಲಿನ ನೊಣಗಳು ಮತ್ತು ಕೀಟಗಳು ನಿದ್ರಾ ಹೀನತೆಗೆ ಕಾರಣಗಳಾಗಿವೆ. ಅಮೆಜಾನ್ ನದಿಯು ವೈವಿಧ್ಯಮಯ ಮೀನುಗಳನ್ನು ಹೊಂದಿದೆ. ಅವುಗಳೆಂದರೆ ಸ್ಟಿಂಗ್ ರೇ, ಎಲೆಕ್ಟ್ರಿಕ್ ಪಿಷ್ ಮತ್ತು ಪಿರಾನ್ಹ [ವಿಶ್ವದಲ್ಲೇ ಅತಿ ಅಪಾಯಕಾರಿ ಮೀನು]ಗಳಾಗಿವೆ. ನದಿಗಳು ಮೊಸಳೆಗಳನ್ನು ಸಹ ಹೊಂದಿವೆ.
6) ಕೃಷಿ ಮತ್ತು ಪ್ರಾಣಿಸಾಕಣೆ
ದಕ್ಷಿಣ ಅಮೆರಿಕದಲ್ಲಿನ ಕೃಷಿ ಭೂಮಿ ಕಡಿಮೆಯಿದೆ. ಇದು ಕೇವಲ ಶೇ.10ರಷ್ಟು ಸಾಗುವಳಿ ಭೂಮಿಯಲ್ಲಿ ವ್ಯವಸಾಯದ ಬೆಳೆ ಬೆಳೆಯಲಾಗುತ್ತಿದೆ. ಪ್ರಮುಖವಾದ ಕೃಷಿ ಪ್ರದೇಶಗಳೆಂದರೆ ಅರ್ಜೆಂಟೈನಾದ ಪಂಪಾಸ್ ಮತ್ತು ಉರುಗ್ವೆ, ಬ್ರೆಜಿಲ್‍ನ ಉನ್ನತ ಪ್ರದೇಶಗಳ ಭಾಗಗಳು ಹಾಗು ಮಧ್ಯ ಚಿಲಿಯ ಪೂರ್ವ ಕರಾವಳಿಗಳಾಗಿವೆ. ದಕ್ಷಿಣ ಅಮೆರಿಕದ ಅತಿ ಪ್ರಮುಖವಾದ ಬೆಳೆಗಳೆಂದರೆ ಮೆಕ್ಕೆ ಜೋಳ, ಗೋಧಿ, ಭತ್ತ, ಕಾಫಿ, ಹತ್ತಿ, ಕಬ್ಬು ಇತ್ಯಾದಿಗಳು.
ಮೆಕ್ಕೆ ಜೋಳವು ದಕ್ಷಿಣ ಅಮೆರಿಕದ ದೇಶೀಯ ಬೆಳೆಯಾಗಿದೆ ಹಾಗೂ ಇದು ಬೆಚ್ಚನೆಯ ಉಷ್ಣವಲಯ ಪ್ರದೇಶದಲ್ಲಿ ಅತಿ ಪ್ರಮುಖವಾದ ಆಹಾರ ಬೆಳೆಯಾಗಿದೆ. ಗೋಧಿಯನ್ನು ಅರ್ಜೆಂಟೈನ ಮತ್ತು ಚಿಲಿ ದೇಶಗಳ ತಂಪಾದ ಸಮಶೀತೋಷ್ಣವಲಯ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಗೋಧಿಯನ್ನು ಅರ್ಜೆಂಟೈನದಿಂದಲೂ ಸಹ ರಫ್ತು ಮಾಡಲಾಗುತ್ತದೆ. ಆಲೂಗಡ್ಡೆಯನ್ನು ಆ್ಯಂಡೀಸ್ ಪ್ರದೇಶದಲ್ಲಿ ವಿಶಾಲ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಭತ್ತವನ್ನು ಬ್ರೆಜಿಲ್‍ನ ಕರಾವಳಿ ತೀರದುದ್ದಕ್ಕೂ ಬೆಳೆಯಲಾಗುತ್ತಿದೆ.
ಬ್ರೆಜಿಲ್‍ನ್ನು ಪ್ರಪಂಚದ ಕಾಫಿಯ ಪಾತ್ರೆ'
ಎಂದು ಕರೆಯಲಾಗಿದೆ. ಆಫ್ರಿಕದಲ್ಲಿರುವ ಇಥಿಯೋಪಿಯಾ ದೇಶದ 'ಕಾಫಿ' ಪ್ರದೇಶವು ಕಾಫಿ ಬೆಳೆಯ ಮೂಲವಾಗಿದ್ದು
'ಕಾಫಾ'
ಅಥವಾ
ಕಾಫೀ
ಎನ್ನುತ್ತಾರೆ. ಬ್ರೆಜಿಲ್‍ನ ಫೆಜೆಂಡಾದಲ್ಲಿ ಸಾವಿರಾರು ಕಾಫಿ ತೋಟಗಳಿವೆ. ರಿಯೋಡಿ ಜನೈರೊವನ್ನು
ವಿಶ್ವದ ಕಾಫಿ ಬಂದರು’ ಎಂದು ಕರೆಯಲಾಗಿದೆ.
ಆಹಾರೇತರ ಬೆಳೆಗಳಾದ ಕಾಫಿ ಹಾಗು ಕೋಕೊಗಳನ್ನು ಉತ್ಪಾದಿಸುವುದರಲ್ಲಿ ದಕ್ಷಿಣ ಅಮೆರಿಕವು ಒಂದು ಪ್ರಮುಖವಾದ ರಾಷ್ಟ್ರವಾಗಿದೆ. ಬ್ರೆಜಿಲ್ ವಿಶ್ವದಲ್ಲಿ ಅತಿ ಹೆಚ್ಚು ಕಾಫಿಯನ್ನು ಉತ್ಪಾದಿಸುತ್ತದೆ. ಕೊಲಂಬಿಯ ಮತ್ತು ಈಕ್ವೆಡಾರ್‍ಗಳು ಸಹ ಪ್ರಮುಖವಾಗಿ ಕಾಫಿಯನ್ನು ಉತ್ಪಾದಿಸುತ್ತವೆ. ಬ್ರೆಜಿಲ್‍ನ ಕರಾವಳಿ ಪ್ರದೇಶದಲ್ಲಿ ಅಪಾರ ಪ್ರಮಾಣದ ಕೋಕೊವನ್ನು ಉತ್ಪಾದಿಸಲಾಗುತ್ತಿದೆ.
ಹತ್ತಿಯನ್ನು ಆ್ಯಂಡೀಸ್ ಪ್ರದೇಶದ ಶುಷ್ಕ ಇಳಿಜಾರುಗಳಲ್ಲಿ ಬೆಳೆಯಲಾಗುತ್ತಿದೆ ಹಾಗೂ ಕಚ್ಚಾ ಹತ್ತಿಯನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ದಕ್ಷಿಣ ಅಮೆರಿಕವು ಕಬ್ಬು ಉತ್ಪಾದನೆಯ ಒಂದು ಪ್ರಮುಖ ರಾಷ್ಟ್ರವಾಗಿದ್ದು. ಅದನ್ನು ಉಷ್ಣವಲಯದ ತಗ್ಗುಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಬ್ರೆಜಿಲ್ ಕಬ್ಬನ್ನು ಉತ್ಪಾದಿಸುತ್ತಿರುವ ಪ್ರಮುಖ ರಾಷ್ಟ್ರವಾಗಿದ್ದು, ಇದು ಜಗತ್ತಿನ ಎರಡನೇಯ ಅಧಿಕ ಉತ್ಪಾದನಾ ರಾಷ್ಟ್ರವಾಗಿದೆ.
ಪಂಪಾಸ್ ಹುಲ್ಲುಗಾವಲುಗಳು ಪ್ರಾಣಿ ಸಾಕಣೆಗೆ ಸೂಕ್ತವಾಗಿವೆ. ಪ್ರಾಣಿ ಸಾಕಣೆಯು ಮುಖ್ಯವಾಗಿ ಕುದುರೆಗಳು, ಹಂದಿಗಳು, ಕುರಿ ಮತ್ತು ಹಸುಗಳನ್ನು ಒಳಗೊಂಡಿದೆ. ಒಂದು ಕಾಲದಲ್ಲಿ ಪ್ರಪಂಚದಲ್ಲಿ ದನದ ಮಾಂಸವನ್ನು ಅಧಿಕ ಪ್ರಮಾಣದಲ್ಲಿ ರಫ್ತು ಮಾಡುತ್ತಿದ್ದ ದೇಶ ಅರ್ಜೆಂಟೈನವಾಗಿತ್ತು. ಮಾಂಸಕ್ಕಾಗಿ ಹಸು ಸಾಕಣೆ ಮಾಡಲು ಮೇವಿಗಾಗಿ ಪಂಪಾಸ್‍ಗಳು ಉತ್ತಮ ಹುಲ್ಲುಗಾವಲುಗಳಾಗಿವೆ. ಉತ್ತಮ ಹಾಗೂ ದಟ್ಟವಾದ ಹಸಿರು ಮೇವಿರುವ ಪ್ರದೇಶಗಳು ಡೈರಿ ಉತ್ಪನ್ನನೀಡುವ ಪ್ರಾಣಿಸಾಕಣೆಗಾಗಿ ಮೀಸಲಾಗಿದೆ. ಹಾಗೆಯೇ ಕಡಿಮೆ ಪ್ರಮಾಣದ ಮೇವಿರುವ ಪಟಗೋನಿಯದ ಮೈದಾನಗಳು ಮತ್ತು ಪರ್ವತಗಳು ಕುರಿ ಸಾಕಣೆಗೆ ಮೀಸಲಾಗಿವೆ. ಗಾಚೊ (Gauchos) ಎಂಬ ಗೋಪಾಲಕರು ಕುರಿಪಾಲನೆ ಮಾಡುವರು.
ಪೆಸಿಫಿಕ್ ಮಹಾಸಾಗರದ ಕರಾವಳಿಯಂಚಿನಲ್ಲಿ ಅತ್ಯುತ್ತಮವಾದ ಮೀನುಗಾರಿಕಾ ಪ್ರದೇಶಗಳು ನೆಲೆಗೊಂಡಿವೆ. ಪೆರು ಮತ್ತು ಚಿಲಿ ದೇಶಗಳ ಕರಾವಳಿ ತೀರಗಳು ಅತಿ ಮುಖ್ಯವಾದ ಮೀನುಗಾರಿಕಾ ಕೇಂದ್ರಗಳನ್ನು ಹೊಂದಿದೆ. ಪೆರು ದೇಶವು ಪ್ರಮುಖ ಮೀನುಗಾರಿಕಾ ರಾಷ್ಟ್ರಗಳಲ್ಲಿ ಒಂದಾಗಿದೆ. ಆದಾಗ್ಯೂ ಅದರ ಪ್ರಾಮುಖ್ಯತೆಯು ಕಡಿಮೆಯಾಗುತ್ತಿದೆ. ಏಕೆಂದರೆ ಅದು ಸಂಗ್ರಹಿಸುವ ಸಮುದ್ರ ಮೀನುಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಣ್ಣ ಮೀನುಗಳಾಗಿರುತ್ತವೆ. ಅವುಗಳನ್ನು ರಾಸಾಯನಿಕ ಗೊಬ್ಬರಗಳ ತಯಾರಿಕೆಗೆ ಬಳಸಲಾಗುತ್ತದೆ. ಚಿಲಿ ದೇಶದ ಮೀನು ಉತ್ಪಾದನೆ ಬಹಳಷ್ಟು ಮಟ್ಟಿಗೆ ಕೆನಡಾದ ಉತ್ಪಾದನೆಗೆ ಸಮ. ಆದರೆ ಬಹುತೇಕ ಪ್ರಮಾಣದ ಇಲ್ಲಿನ ಮೀನುಗಳನ್ನು ಆಹಾರಕ್ಕಿಂತ ಹೆಚ್ಚಾಗಿ ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಟಿಟಿಕಾಕ ಸರೋವರ ಮತ್ತು ಅಮೆಜಾನ್ ನದಿಗಳು ಸಿಹಿನೀರಿನ ಮೀನುಗಾರಿಕೆಗೆ ಪ್ರಾಮುಖ್ಯತೆ ಪಡೆದಿವೆ.
7) ಜನಸಂಖ್ಯೆ
ದಕ್ಷಿಣ ಅಮೆರಿಕದ ನಿವಾಸಿಗಳು ಮಿಶ್ರ ಜನಾಂಗೀಯ ಗುಂಪುಗಳಿಗೆ ಸೇರಿದವರಾಗಿದ್ದಾರೆ. ಯೂರೋಪಿಯನ್ನರು ಚಿನ್ನವನ್ನು ಅರಸಿ ಬಂದ ನಂತರ ಇಲ್ಲಿಯೇ ನೆಲೆಸಿ, ಇಲ್ಲಿನ ತೋಟಗಳಲ್ಲಿ ಕೆಲಸಮಾಡಲು ಆಫ್ರಿಕದಿಂದ ಗುಲಾಮರನ್ನು ಕರೆದು ತಂದರು. ಈ ಗುಂಪುಗಳ ನಡುವೆ ವಿವಾಹವೇರ್ಪಟ್ಟ ಪ್ರಯುಕ್ತ ಮಿಶ್ರ ಜನಾಂಗವು ನಿರ್ಮಾಣವಾಯಿತು. ದಕ್ಷಿಣ ಅಮೆರಿಕದಲ್ಲಿ ಮೂರು ಪ್ರಮುಖವಾದ ಜನಾಂಗಗಳಿವೆ.
ದಕ್ಷಿಣ ಅಮೆರಿಕವು ಪ್ರಪಂಚದ ಸರಾಸರಿ (47%) ನಗರೀಯ ಜನಸಂಖ್ಯೆಯ ಪ್ರಮಾಣಕ್ಕಿಂತ ಅತ್ಯಧಿಕ ಪ್ರಮಾಣವನ್ನು (80%) ಹೊಂದಿದೆ. ಅತ್ಯಧಿಕ ನಗರ ಜನಸಂಖ್ಯೆಯು ಉರುಗ್ವೆಯಲ್ಲಿದ್ದು (93%), ಕನಿಷ್ಟ ನಗರ ಜನಸಂಖ್ಯೆಯು ಗಯಾನದಲ್ಲಿದೆ (36%).
ದಟ್ಟಕಾಡಿನ ಅಮೆಜಾನ್ ಹಾಗೂ ಆ್ಯಂಡಿಯನ್ ಪರ್ವತಗಳು, ಅಟಕಾಮ ಮತ್ತು ಪೆಟಗೋನಿಯಗಳಂತಹ ಮರುಭೂಮಿಗಳಲ್ಲಿ ಅತಿ ವಿರಳ ಜನಸಂಖ್ಯೆಯಿದೆ. ಗ್ರಾನ್ ಚಾಕೊ ಮತ್ತು ಗಯಾನ ಎತ್ತರ ಪ್ರದೇಶಗಳಲ್ಲಿಯೂ ವಿರಳ ಜನಸಾಂದ್ರತೆಯಿದೆ. ಬಹುತೇಕ ಜನಸಾಂದ್ರತೆಯು ಬೃಹತ್ ನಗರಗಳು ಮತ್ತು ಬಂದರುಗಳಾದ ಬ್ಯೂನಸ್ ಐರಿಸ್, ರಿಯೋಡಿ ಜನೈರೊ, ಸವೊ ಪೊಲೋ ಮುಂತಾದ ನಗರಗಳಲ್ಲಿ ಕಂಡುಬರುತ್ತದೆ.
ದಕ್ಷಿಣ ಅಮೆರಿಕ ಖಂಡದ ಅಧಿಕ ಜನರು ಮುಖ್ಯವಾಗಿ ಕರಾವಳಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಖಂಡದ ಕೇಂದ್ರಭಾಗವು ವಿರಳ ಜನಸಂಖ್ಯೆಯಿಂದ ಕೂಡಿದ್ದು ಈ ಖಂಡವನ್ನು `ಟೊಳ್ಳುಭೂಮಿ’ ಎಂದು ಕರೆಯುತ್ತಾರೆ.
ದಕ್ಷಿಣ ಅಮೆರಿಕವು ಪ್ರಪಂಚದ ಸರಾಸರಿ ಜನನ ಪ್ರಮಾಣದಷ್ಟೇ ಜನನ ಪ್ರಮಾಣವನ್ನು [21/1000] ದಾಖಲಿಸಿದೆ. ಆದರೆ ಮರಣ ಪ್ರಮಾಣವು ಪ್ರಪಂಚದ [9/1000] ಸರಾಸರಿ ಪ್ರಮಾಣಕ್ಕಿಂತ ಕಡಿಮೆ [6/1000] ಇದೆ. ಆದುದರಿಂದ ದಕ್ಷಿಣ ಅಮೆರಿಕದ ಸ್ವಾಭಾವಿಕ ಜನಸಂಖ್ಯಾ ಹೆಚ್ಚಳದ ದರವು ಪ್ರಪಂಚದ ಸರಾಸರಿ ದರಕ್ಕಿಂತ ಅಧಿಕವಾಗಿದೆ.
ಹೊಸ ಪದಗಳು
ರೆಡ್ ಇಂಡಿಯನ್ಸ್, ಆ್ಯಂಡೀಸ್, ಅಗ್ನಿಯುಂಗುರ, ಈಕ್ವೆಡಾರ್, ಗಯಾನ, ಓರಿನೊಕೊ, ಅಮೆಜಾನ್, ಲಾಪ್ಲಾಟಾ, ಗ್ರಾನ್‍ಚಾಕೋ, ಗಾಲಪಗೋಸ್, ಹೋರ್ನೋಸ್, ಪರಾನ, ಪರಾಗ್ವೆ, ಉರುಗ್ವೆ, ಟಿಟಿಕಾಕ, ಉಷ್ಣೋದಕ, ಶೀತೋದಕ, ಸೆಲ್ವಾಸ್, ಲ್ಯಾಟೆಕ್ಸ್, ಕಾಂಪಾಸ್, ಪಂಪಾಸ್, ಪಿರಾನ್ಹ, ಗೌಶೋಸ್, ಪಟಗೋನಿಯ, ಅಟಕಾಮ.
ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು
ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು
ಚಟುವಟಿಕೆಗಳು
1) ದಕ್ಷಿಣ ಅಮೆರಿಕ ಖಂಡದ ಬಾಹ್ಯರೇಖಾ ನಕ್ಷೆಯಲ್ಲಿ ಅಟ್ಲಾಸ್ ಪುಸ್ತಕದ ಸಹಾಯದಿಂದ ದೇಶಗಳು ಮತ್ತು ಅವುಗಳ ರಾಜಧಾನಿ, ಪ್ರಮುಖ ಪರ್ವತಗಳು, ನದಿಗಳು, ಸರೋವರಗಳು ಮತ್ತು ಹುಲ್ಲುಗಾವಲುಗಳನ್ನು ಪಟ್ಟಿಮಾಡಿ ಗುರುತಿಸಿರಿ.
2) ದಕ್ಷಿಣ ಅಮೆರಿಕದಲ್ಲಿ ಕಂಡುಬರುವ ಪ್ರಮುಖ ಸಸ್ಯ, ಪ್ರಾಣಿ ಹಾಗೂ ಪಕ್ಷಿಗಳನ್ನು ಪಟ್ಟಿಮಾಡಿ ಅವುಗಳ ಚಿತ್ರಗಳನ್ನು ಸಂಗ್ರಹಿಸಿರಿ.
Thank you your helping sir thank you very much
Super