ತಾಯಿಗೊಂದು ಪತ್ರ – ಪಾಠ – 8
ಕ್ಷೇಮ ಶ್ರೀ 9ನೆಯ ಅಕ್ಟೋಬರ್-2017
ಬಸವನ ಬಾಗೇವಾಡಿ
ಪ್ರೀತಿಯ ಅಮ್ಮನಿಗೆ ನಿಮ್ಮ ಮಗನಾದ ಉಲ್ಲಾಸ್ ಬೇಡುವ ಆಶೀರ್ವಾದಗಳು. ನಾನು, ಅಜ್ಜ, ಅಜ್ಜಿ, ಮಾವಂದಿರು ತೇಜಸ್ವಿನಿ ಹಾಗೂ ಧನುಷ್ ಎಲ್ಲರೂ ಕ್ಷೇಮವಾಗಿದ್ದೇವೆ. ನಿಮ್ಮೆಲ್ಲರ ಕ್ಷೇಮ ಸಮಾಚಾರಕ್ಕಾಗಿ ಈ ಕಾಗದ ತಲುಪಿದ ಕೂಡಲೇ ಕಾಗದ ಬರೆಯುತ್ತೀರೆಂದು ನಂಬಿರುತ್ತೇನೆ.
ಅಮ್ಮ, ಈ ದಸರೆ ರಜೆಯಲ್ಲಿ ಅಜ್ಜ ನಮ್ಮನ್ನು ಮೈಸೂರು ದಸರೆಗೆ ಕರೆದುಕೊಂಡು ಹೋಗಿದ್ದರು. ದಸರೆ ಮೆರವಣಿಗೆಯಲ್ಲಿನ ಸ್ತಬ್ಧ ಚಿತ್ರಗಳು, ಕಲಾ ತಂಡಗಳ ಪ್ರದರ್ಶನಗಳು ಆಕರ್ಷಕವಾಗಿದ್ದವು. ಆನೆ ಮೇಲೆ ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ದೇವಿ ನೋಡಿ ತುಂಬಾ ಸಂತೋಷವಾಯಿತು. ಸಂಜೆ ನೋಡಿದ ಪಂಜಿನ ಕವಾಯತು ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ದಸರೆ ಮುಗಿದ ಮರುದಿನ ಚಾಮುಂಡಿಬೆಟ್ಟಕ್ಕೆ ಹೋಗಿ ದೇವಿಗೆ ಪೂಜೆ ಮಾಡಿಸಿದೆವು. ಅಜ್ಜಿ ನನಗೆ ಮತ್ತು ಧನುಷ್‍ಗೆ ಆಟದ ಸಾಮಾನು ಕೊಡಿಸಿದರು. ತೇಜಸ್ವಿನಿ ಅಕ್ಕನಿಗೆ ಸರ, ಬಳೆ ಕೊಡಿಸಿದರು. ಅಲ್ಲಿಂದ ನಗರ ಸಾರಿಗೆ ಬಸ್ ಹತ್ತಿ ಪ್ರಾಣಿ ಸಂಗ್ರಹಾಲಯಕ್ಕೆ ಬಂದೆವು. ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ವಿವಿಧ ರೀತಿಯ ಪಕ್ಷಿಗಳನ್ನು ನೋಡಿದೆವು. ಬಣ್ಣ ಬಣ್ಣದ ಹಕ್ಕಿಗಳು ಅವುಗಳ ಚಿಂವ್ ಚಿಂವ್’ ಧ್ವನಿ ಕೇಳಲು ಸುಮಧುರವಾಗಿತ್ತು. ಅಲ್ಲಿಂದ ಮುಂದೆ ಕೆಂಪು ಮತ್ತು ಕಪ್ಪು ಮುಖದ ಕೋತಿಗಳನ್ನು ಕಂಡೆವು. ಧನುಷ್ ಅವುಗಳಿಗೆ ತಿಂಡಿ ಪದಾರ್ಥ ಕೊಡುವುದನ್ನು ನೋಡಿದ ಕಾವಲುಗಾರಹಾಗೆ ಮಾಡಬಾರದು’ ಎಂದನು. ಅಲ್ಲಲ್ಲಿ ಬರೆದು ಹಾಕಿರುವ ಮುಟ್ಟಬೇಡಿ’,ಪ್ರಾಣಿಗಳಿಗೆ ತಿಂಡಿ ಪದಾರ್ಥ ಕೊಡಬೇಡಿ’ ಎಂಬ ಸೂಚನಾ ಫಲಕಗಳನ್ನು ನೋಡಿ ಎಂದು ತೋರಿಸಿದನು. ಅದೇ ಸಮಯದಲ್ಲಿ ಸಿಂಹ ಘರ್ಜಿಸಿ ನಮ್ಮನ್ನು ಆ ಕಡೆಗೆ ಸೆಳೆಯಿತು. ಮಾವನವರು `ಗಲಾಟೆ ಮಾಡದೆ ಮೌನವಾಗಿ ಬನ್ನಿ’ ಎಂದರು.
ನಾವು ಶೇಂಗಾ ತಿನ್ನುತ್ತಾ ಒಂದು ಕಡೆಯಿಂದ ಆನೆ, ಜಿಂಕೆ ಹಿಂಡು, ಹುಲಿ, ಚಿರತೆ, ಸಿಂಹ, ಘೇಂಡಾಮೃಗ ನೋಡಿ ಖುಷಿಪಟ್ಟೆವು. ಪಕ್ಕದ ಮರದ ಕೊಂಬೆಯ ಮೇಲೆ ಕಾಡು ಮನುಷ್ಯ ನಮ್ಮ ಹಾಗೇ ನಡೆದಾಡುತ್ತಿತ್ತು. ಮುಂದೆ ಹಾವುಗಳ ಸಾಮ್ರಾಜ್ಯ. ಅಲ್ಲಿ ಕಾಳಿಂಗ ಸರ್ಪ, ಹೆಬ್ಬಾವು ಮುಂತಾದ ಬೇರೆಬೇರೆ ಜಾತಿಯ ಹಾವುಗಳನ್ನು ಕಂಡು ಮೈ ಜುಮ್! ಎಂದಿತು. ಈ ಹಾವುಗಳನ್ನು ಎಲ್ಲಿಂದ ತಂದದ್ದು?’ ಎಂದಾಗ, ಅಲ್ಲಿದ್ದ ಕಾವಲುಗಾರ ಬಂಡೀಪುರದ ಕಾಡಿನಿಂದ’ ಎಂದನು. ಅಲ್ಲಿಂದ ಮುಂದೆ ಜಿರಾಫೆ ನೋಡಿದೆವು. ಅದು ತನ್ನ ಮರಿಗೆ ಹಾಲು ಉಣಿಸುತ್ತಿತ್ತು. ಜಿರಾಫೆಯ ಕತ್ತು ನೋಡಿ ಆಶ್ಚರ್ಯವಾಯಿತು. ಅಲ್ಲಿಯೇ ಇದ್ದ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದೆವು. ಅಲ್ಲಿಟ್ಟಿದ್ದ ಪ್ರಾಣಿಗಳ ಮಾದರಿಗಳು ನಿಜವಾದ ಪ್ರಾಣಿಗಳೇ ಎಂಬಂತಿದ್ದವು. ಇವೆಲ್ಲವನ್ನು ನೋಡುವಷ್ಟರಲ್ಲಿ ಸಂಜೆ ಆಯಿತು. ಆಮೇಲೆ ಅರಮನೆಯನ್ನು ನೋಡಿಕೊಂಡು ಊರಿಗೆ ಹಿಂದಿರುಗಿದೆವು.
ಅಮ್ಮ, ಬಹಳ ಸಂತೋಷವಾಯಿತು. ನಾನು ಊರಿಗೆ ಬಂದಾಗ ಎಲ್ಲರೂ ಮತ್ತೊಮ್ಮೆ ಮೈಸೂರಿಗೆ ಹೋಗೋಣ.
ತುಂಬಾ ಖುಷಿಯಿಂದ ಈ ಕಾಗದ ಬರೆದಿರುತ್ತೇನೆ. ಎಲ್ಲರಿಗೂ ನನ್ನ ನಮಸ್ಕಾರಗಳನ್ನು ತಿಳಿಸಿ.
ಇತಿ ನಿಮ್ಮ ಪ್ರೀತಿಯ ಮಗ
ಉಲ್ಲಾಸ್
ಇವರಿಗೆ,
ಶ್ರೀಮತಿ ಸಂಪಿಗೆ
ಕಸ್ತೂರಿ ನಿವಾಸ
ಯಳಂದೂರು ತಾಲೂಕು-571441
ಪದಗಳ ಅರ್ಥ
ಸಮಾಚಾರ – ವಿಷಯ, ಸಂಗತಿ;
ಸ್ತಬ್ಧಚಿತ್ರ – ನಿಶ್ಚಲವಾದ ಚಿತ್ರ; ಆಕೃತಿ.
ತಂಡ – ಗುಂಪು, ಸಮೂಹ;
ಧ್ವನಿ – ದನಿ, ಸ್ವರ;
ಸುಮಧುರ – ಇಂಪಾದ;
ಉದ್ಯಾನವನ – ಕೈತೋಟ;
ಗರ್ಜನೆ – ಗಟ್ಟಿಯಾಗಿ ಕೂಗು, ಆರ್ಭಟಿಸು;
ಶೇಂಗಾ – ಕಡ್ಲೆಕಾಯಿ, ನೆಲಗಡಲೆ.
ಟಪ್ಪಣಿ
ದಸರೆ – ಶುಕ್ಲಪಕ್ಷ ಪಾಡ್ಯದಿಂದ ದಶಮಿಯವರೆಗಿನ ಹತ್ತು ದಿನಗಳ ಹಬ್ಬ.
ಅಂಬಾರಿ – ಆನೆಯ ಮೇಲೆ ಕುಳಿತುಕೊಳ್ಳಲು ಹಾಕುವ ಮಂಟಪದಂತಹ ಭದ್ರಾಸನ.
ಪಂಜು – ಕೋಲಿಗೆ ದಪ್ಪ ಬಟ್ಟೆ ಸುತ್ತಿ ಎಣ್ಣೆ ಅಥವಾ ತುಪ್ಪ ಸುರಿದು ಉರಿಸುವ ದೀಪ.
ಕವಾಯತು – ಸೈನಿಕರು, ಪೊಲೀಸರು, ಗೃಹರಕ್ಷಕರು ಮಾಡುವ ಕಸರತ್ತು.
ಫಲಕ – ಲೋಹ, ಮರ, ಗಾಜು ಮುಂತಾದವುಗಳ ತೆಳುವಾದ ಹಾಳೆ.
ಪಂಜರ – ಹಕ್ಕಿ, ಪ್ರಾಣಿ ಮುಂತಾದವುಗಳನ್ನು ಇಡುವ ಗೂಡು.
ಸಂವೇದ ವಿಡಿಯೋ ಪಾಠಗಳು
Samveda Kannada 4th Tayigondu Patra 1of1 – 4 FLK
ಪೂರಕ ವಿಡಿಯೋಗಳು
ತಾಯಿಗೊಂದು ಪತ್ರ/೪ ನೇ ತರಗತಿ/8ನೇ ಪಾಠ/Thaigondu Patra/4th class Kannada/ಕನ್ನಡ/ಸವಿ ಕನ್ನಡ/types of letter
ಪ್ರಶ್ನೋತ್ತರಗಳು
ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.