ಡಾ. ರಾಜಕುಮಾರ್ – ಪಾಠ-4

– ದೊಡ್ಡಹುಲ್ಲೂರು ರುಕ್ಕೋಜಿರಾವ್

ಪ್ರವೇಶ : ಬಡತನ ಮತ್ತು ಆರ್ಥಿಕ, ಸಾಮಾಜಿಕ ಬೆಂಬಲವಿಲ್ಲದ ಕೌಟುಂಬಿಕ ಹಿನ್ನೆಲೆಯಿಂದ ಬಂದ ಅನೇಕ ವ್ಯಕ್ತಿಗಳು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯಗಳಿಂದ ನಕ್ಷತ್ರಗಳಂತೆ ಬೆಳಗಿದ್ದಾರೆ. ಇಂತಹವರ ಬದುಕಿನ ಪುಟಗಳನ್ನು ಅವಲೋಕಿಸಿದಾಗ ಒಬ್ಬ ವ್ಯಕ್ತಿ ಶ್ರದ್ಧೆ ಮತ್ತು ಪರಿಶ್ರಮಗಳಿಂದ ಏನನ್ನು ಬೇಕಾದರೂ ಸಾಧಿಸಬಹುದೆಂಬ ಸ್ಫೂರ್ತಿ ಇತರರಲ್ಲೂ ಚಿಮ್ಮಬಹುದು. ವರನಟ, ಮೇರುನಟ, ಕನ್ನಡದ ಕಣ್ಮಣಿ, ಗಾನಗಂಧರ್ವ, ನಟಸಾರ್ವಭೌಮ ಎಂಬೆಲ್ಲಾ ಬಿರುದು-ಕೀರ್ತಿಗಳಿಗೆ ಪಾತ್ರರಾಗಿರುವ ಡಾ.ರಾಜಕುಮಾರ್ ಎಲ್ಲ ಅರ್ಥದಲ್ಲಿಯೂ ಮನೆಮಾತಾದವರು. ಕರ್ನಾಟಕದ ಹೆಮ್ಮೆಯ ಸುಪುತ್ರ. ಅವರ ಬದುಕಿನ ಕಿರು ಪಕ್ಷಿನೋಟದಿಂದ ಕನ್ನಡದ ಸೀಮಾಪುರುಷನೊಬ್ಬನ ಬದುಕು-ಸಾಧನೆಗಳನ್ನು ಅರಿಯಬಹುದೆಂಬ ಆಶಯ ಈ ಪಾಠದ ಹಿನ್ನೆಲೆಯಾಗಿದೆ.

ಕನ್ನಡಿಗರ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಡಾ.ರಾಜಕುಮಾರ್ ಅವರು 1929ರ ಏಪ್ರಿಲ್ 24ರಂದು ಜನಿಸಿದರು. ಚಾಮರಾಜನಗರದಿಂದ ಹನ್ನೆರಡು ಮೈಲಿ ದೂರದಲ್ಲಿರುವ ತಾಳವಾಡಿ ಪಕ್ಕದ ಗಾಜನೂರು ಇವರ ಹುಟ್ಟೂರು. ಗಾಜನೂರು ಲಕ್ಷ್ಮಮ್ಮನವರ ತವರೂರು. ಸಿಂಗನಲ್ಲೂರು ಪುಟ್ಟಸ್ವಾಮಯ್ಯನವರ ಮೂಲಸ್ಥಳ. ಸುಪ್ರಸಿದ್ಧ ರಂಗಭೂಮಿಯ ನಟರಾದ ಸಿಂಗಾನಲ್ಲೂರು ಶ್ರೀ ಪುಟ್ಟಸ್ವಾಮಯ್ಯನವರು ಇವರ ತಂದೆ. ತಾಯಿ ಶ್ರೀಮತಿ ಲಕ್ಷ್ಮಮ್ಮನವರು. ಮಳೆಯೇ ಇಲ್ಲದೆ ಭೂಮಿ ಬಿಸಿಲಿನ ಬೇಗೆಯಿಂದ ಬಳಲಿದ್ದ ಒಂದು ದಿನ. ಜೋರಾಗಿ ಮಳೆ ಸುರಿಯತೊಡಗಿತು. ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ವರ್ಷಧಾರೆಯು ಹರುಷ ತಂದಿತು. ಭೂಮಿಯೂ ತಂಪಾಯಿತು. ಇಂತಹ ತಣ್ಣನೆಯ ಹೊತ್ತಿನಲ್ಲೇ ಶ್ರೀಮತಿ ಲಕ್ಷ್ಮಮ್ಮನವರು ಗಂಡು ಮಗುವನ್ನು ಹೆತ್ತರೆಂಬ ಸುದ್ದಿ ಬಂತು. ಇಳೆಗೆ ಮಳೆಯನ್ನು ಕರೆತಂದ ಕಂದನೆಂದೇ ಊರ ಜನ ಸಂಭ್ರಮಿಸಿದರು. ತಾವು ಮುತ್ತತ್ತಿರಾಯ'ನಿಗೆ ಹೊತ್ತ ಹರಕೆಯಿಂದಲೇ ಗಂಡು ಮಗು ಜನಿಸಿತೆಂಬ ಸಂಭ್ರಮದಿಂದ ಕೆಂಪಗೆ, ಹಸಿಬೆಣ್ಣೆಯಂತಿದ್ದ ಹಸುಗೂಸನ್ನು ಪುಟ್ಟಸ್ವಾಮಯ್ಯನವರು ಎತ್ತಿ ಮುದ್ದಾಡಿದರು. ಮಗನ ಹೆಸರಿನಲ್ಲಿರಾಜು’ ಎಂಬ ಪದವಿರಬೇಕೆಂಬ ಆಸೆ ತಂದೆ-ತಾಯಿಯರದು. ಮುತ್ತುರಾಯನ ವರಪ್ರಸಾದವಾದ್ದರಿಂದ ಮುತ್ತು' ಮತ್ತು ತಮ್ಮಾಸೆಯ ಸೆಳೆತದಂತೆರಾಜು’ ಎಂಬುದನ್ನು ಸೇರಿಸಿ ಮಗುವಿಗೆ `ಮುತ್ತುರಾಜು’ ಎಂದು ನಾಮಕರಣ ಮಾಡಲಾಯಿತು. ಎಲ್ಲರ ಕಣ್ಮಣಿಯಾಗಿ ಮುತ್ತುರಾಜ ಬೆಳೆದನು.

ಗಾಜನೂರಿನಲ್ಲಿರುವ ಡಾ. ರಾಜಕುಮಾರ್ ಅವರ ಮನೆ ಮೂಲ ಮನೆ
ಗಾಜನೂರಿನಲ್ಲಿರುವ ಡಾ. ರಾಜಕುಮಾರ್ ಅವರ ಮನೆ

ಮುತ್ತುರಾಜುವಿನ ಬಹುತೇಕ ಬಾಲ್ಯವು ದೊಡ್ಡ ಗಾಜನೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಳೆಯಿತು. ತೀರಾ ಅಪರೂಪಕ್ಕೆ ನೋಡುತ್ತಿದ್ದ ದೊಡ್ಡ ಊರೆಂದರೆ ನಂಜನಗೂಡು. ಇನ್ನೂ ಅಪರೂಪಕ್ಕೆ ಮೈಸೂರಿನ ದರ್ಶನವೂ ಆಗುತ್ತಿತ್ತು. ಬಾಲ್ಯವು ಸಮೃದ್ಧವಾಗಿದ್ದಿತು. ಹಳ್ಳಿಯಲ್ಲಿ ಹುಟ್ಟಿದ ಯಾರಿಗೇ ಆದರೂ ಬಡತನ, ಹಸಿವು, ಜಗಳ, ಜಾತ್ರೆ, ಪೂಜೆ, ಉತ್ಸವ, ಹೊಲ, ತೋಟ, ಕಾಡು-ತೊರೆ, ಬಂಧು-ಬಳಗ, ತಾಯಿಯ ವಾತ್ಸಲ್ಯಧಾರೆ ಇವೆಲ್ಲ ಸಹಜವಾಗಿ ಒದಗಿ ಬರುವ ಭಾಗ್ಯಗಳು. ಮುತ್ತುರಾಜನೂ ಇವೆಲ್ಲವನ್ನು ಅನುಭವಿಸಿ ಬಾಲ್ಯವನ್ನು ಹಸನಾಗಿಸಿಕೊಂಡ ಭಾಗ್ಯವಂತನೇ! ಹಿರಿಪುರದ ಸರ್ಕಾರಿ ಶಾಲೆಗೆ ಮುತ್ತುರಾಜನನ್ನು ಸೇರಿಸಿದರೂ ಮುತ್ತುರಾಜನ ದೇಹಮಾತ್ರ ಶಾಲೆಯಲ್ಲಿರುತ್ತಿತ್ತು. ಮನಸ್ಸು ಸದಾ ಹೊರಗಿರುತ್ತಿತ್ತು. ಕುಟುಂಬದ ಬಡತನವೂ ಕಾರಣವಾಗಿ ವಿದ್ಯಾಭ್ಯಾಸ ಬಾಲ್ಯದಲ್ಲಿಯೇ ನಿಂತುಹೋದುದರಿಂದ ಬಾಲಕನಾಗಿರುವಾಗಲೇ ತಂದೆಯ ಜೊತೆ ರಂಗಭೂಮಿಗೆ ಬಂದರು. ಖ್ಯಾತ ರಂಗನಟರೆನಿಸಿದ್ದ ಪುಟ್ಟಸ್ವಾಮಯ್ಯನವರು ಮಗನಿಗೆ ಮನೆಯಲ್ಲಿಯೇ ಹಾಡುಗಾರಿಕೆ ಮತ್ತು ಅಭಿನಯದ ಪಾಠ ಹೇಳಿಕೊಟ್ಟರು. ಮುತ್ತುರಾಜನ ಮಾವಂದಿರಾದ ಅಪ್ಪಾಜಿಗೌಡರು ಹಾಗೂ ಸಣ್ಣೇಗೌಡರಿಂದ ಸಂಗೀತ ಪಾಠವಾಯಿತು.

ರಂಗಭೂಮಿಯು ಇವರ ಮೊದಲ ಆಡುಂಬೊಲ. ಗುಬ್ಬಿ ವೀರಣ್ಣನವರ ನಾಟಕ ಕಂಪನಿಯಲ್ಲಿ ಬಾಲ ಕಲಾವಿದನಾಗಿ ಮುತ್ತುರಾಜುವಿನ ವೃತ್ತಿಜೀವನ ಆರಂಭವಾಯಿತು. ಮೊದಮೊದಲು ಸಖಿ, ಸೇವಕಿ ಇತ್ಯಾದಿ ಪಾತ್ರಗಳನ್ನು ನಿರ್ವಹಿಸಬೇಕಾಯಿತು. ಆನಂತರವಷ್ಟೇ ಮುಖ್ಯ ಪುರುಷ ಪಾತ್ರಗಳು ಅರಸಿ ಬಂದವು. ಸುಬ್ಬಯ್ಯನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ' ಎಂಬ ನಾಟಕ ಸಂಸ್ಥೆಗೆ ಸೇರಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದು ಮುತ್ತುರಾಜರ ಬದುಕಿನ ಮಹತ್ವದ ದಿನಗಳು. ತಂದೆಯವರು ಇಹಲೋಕವನ್ನು ತ್ಯಜಿಸಿದ್ದರಿಂದ ಇಡೀ ಕುಟುಂಬದ ಹೊಣೆಗಾರಿಕೆಯನ್ನು ಮುತ್ತುರಾಜ ಹೊರಬೇಕಾಯಿತು. ನಾಟಕಗಳಲ್ಲಿ ಅಭಿನಯಿಸುತ್ತಲೇ ಕಷ್ಟದಲ್ಲಿ ಜೀವನ ಸಾಗಿಸಿದರು. ಸೋದರಮಾವನ ಮಗಳಾದ ‘ಪಾರ್ವತಿ’ ಅವರನ್ನು ವಿವಾಹವಾದ ಮೇಲೆ ಅವರ ಹೆಗಲೆಣೆಯ ಆಸರೆಯೂ ಒದಗಿ ಬಂತು.

ಡಾ. ಗುಬ್ಬಿ ವೀರಣ್ಣನವರು ಹಾಗೂ ಪತ್ನಿ
ಡಾ. ಗುಬ್ಬಿ ವೀರಣ್ಣ ರಂಗ ಮಂದಿರ, ಗುಬ್ಬಿ

ಮುತ್ತುರಾಜ'ರ ಮುಖ್ಯ ಕಾರ್ಯಕ್ಷೇತ್ರವೆಂದರೆ ಚಲನಚಿತ್ರರಂಗ. 1942ರಲ್ಲಿ ತೆರೆಕಂಡ ಭಕ್ತಪ್ರಹ್ಲಾದ’ ಮತ್ತು 1951ರಲ್ಲಿ ತೆರೆಗೆ ಬಂದ ಶ್ರೀನಿವಾಸ ಕಲ್ಯಾಣ' ಚಿತ್ರಗಳಲ್ಲಿ ಇವರು ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಕನ್ನಡ ಚಿತ್ರರಂಗದ ನಾಯಕರಾಗಿ ಪ್ರವೇಶಿಸಿದ್ದು 1954ರಲ್ಲಿ ಬಿಡುಗಡೆಯಾದಬೇಡರ ಕಣ್ಣಪ್ಪ’ದ ಮೂಲಕ. ಈ ಚಿತ್ರದ ನಿರ್ದೇಶಕರಾದ ಎಚ್.ಎಲ್.ಎನ್.ಸಿಂಹ ಅವರು ಮುತ್ತುರಾಜ' ಎಂಬ ಹೆಸರನ್ನುರಾಜಕುಮಾರ್’ ಎಂದು ಬದಲಾಯಿಸಿದರು. ಅಂದಿನಿಂದ ಅದೇ ಹೆಸರು ನಾಡ ಜನರ ಹೃದಯದಲ್ಲಿ ನೆಲೆ ನಿಂತಿತು. ಆರಂಭದಲ್ಲಿ ಭಕ್ತಿ ಪ್ರಧಾನವಾದ ಪಾತ್ರಗಳಲ್ಲಿಯೇ ರಾಜುಕುಮಾರ್ ನಟಿಸಿದರು. ಭಕ್ತವಿಜಯ, ಹರಿಭಕ್ತ, ಓಹಿಲೇಶ್ವರ, ಕೃಷ್ಣಗಾರುಡಿ, ಧರ್ಮವಿಜಯ, ದಶಾವತಾರ, ಶ್ರೀಶೈಲ ಮಹಾತ್ಮೆ, ಕಬೀರ್, ಭಕ್ತಚೇತ, ತುಕಾರಾಂ ಮುಂತಾದ ಭಕ್ತಿಪ್ರಧಾನ ಚಿತ್ರಗಳು ಚಿತ್ರರಸಿಕರ ಮನಸೂರೆಗೊಂಡವು. ಭೂಕೈಲಾಸದ ರಾವಣನಾಗಿ, ಮೋಹಿನಿ ಭಸ್ಮಾಸುರದ ಭಸ್ಮಾಸುರನಾಗಿ, ಭಕ್ತಕುಂಬಾರದಲ್ಲಿ ಕುಂಬಾರನಾಗಿ, ಬಬ್ರುವಾಹನನಾಗಿ, ಮಯೂರವರ್ಮನಾಗಿ, ಕಾಳಿದಾಸನಾಗಿ ಮನೋಜ್ಞ ಅಭಿನಯ ನೀಡಿದ ರಾಜಕುಮಾರ್ ಜನರ ಪ್ರೀತಿಯಲ್ಲಿ ಮಿಂದರು.

ಸಾಮಾಜಿಕ ಚಿತ್ರಗಳಲ್ಲೂ ಅವರದು ಅದ್ಭುತ ನಟನೆಯೇ. ರಾಯರ ಸೊಸೆ, ಕರುಣೆಯೇ ಕುಟುಂಬದ ಕಣ್ಣು, ನಂದಾದೀಪ, ಸಾಕುಮಗಳು, ಗೌರಿ, ಸಂಧ್ಯಾರಾಗ, ಚಂದವಳ್ಳಿಯ ತೋಟ, ನಾಂದಿ, ಉಯ್ಯಾಲೆ, ಕರುಳಿನ ಕರೆ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ಸನಾದಿ ಅಪ್ಪಣ್ಣ, ದೇವತಾ ಮನುಷ್ಯ, ಜೀವನಚೈತ್ರ – ಪ್ರತಿಯೊಂದೂ ರಾಜಕುಮಾರ್ ಅಭಿನಯ ಸಾಮಥ್ರ್ಯವನ್ನು ಹೊರಚೆಲ್ಲಿದ ಅಪೂರ್ವ ಚಿತ್ರಗಳು. ಅನೇಕ ಚಿತ್ರಗಳಲ್ಲಿನ ಮನೋಜ್ಞ ಅಭಿನಯಕ್ಕೆ ಶ್ರೇಷ್ಠ ನಟ ಪ್ರಶಸ್ತಿಯೂ ಲಭಿಸಿತು.

ರಾಜಕುಮಾರ್ ಅವರು ಶ್ರೇಷ್ಠ ನಟರಾಗಿರುವಂತೆ ಶ್ರೇಷ್ಠ ಗಾಯಕರೂ ಆಗಿದ್ದಾರೆ. ಸಂಪತ್ತಿಗೆ ಸವಾಲ್' ಚಿತ್ರದ ಯಾರೇ ಕೂಗಾಡಲೀ….’ ಎಂಬ ಹಾಡಿನೊಂದಿಗೆ ಗಾಯಕರಾಗಿ ಪ್ರಸಿದ್ಧಿ ಪಡೆದರು. ಅದಕ್ಕೂ ಮೊದಲೇ ಎರಡು ಸಿನಿಮಾಗಳಿಗೆ ಹಾಡಿದ್ದರು. ಮುಂದೆ ಇವರು ತಮ್ಮ ಪಾತ್ರಗಳಿಗೆ ತಾವೇ ಗಾಯಕರಾಗಿಯೂ ಗುರುತಿಸಿಕೊಂಡರು. ಸಾವಿರಾರು ಚಿತ್ರಗೀತೆ, ಭಕ್ತಿಗೀತೆ, ಭಾವಗೀತೆಗಳನ್ನು ಹಾಡಿರುವ ಇವರಿಗೆ ಜೀವನಚೈತ್ರ' ಸಿನಿಮಾದನಾದಮಯ’ ಎಂಬ ಹಾಡಿಗಾಗಿ `ರಾಷ್ಟ್ರ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದಾರೆ.

ರಂಗಭೂಮಿ, ಚಲನಚಿತ್ರ, ಗಾಯನ ರಾಜಕುಮಾರ್ ಅವರ ಬದುಕಿನ ಮುಖ್ಯ ಮಜಲುಗಳಾದರೆ `ಕನ್ನಡ ಪ್ರೀತಿ’ ಅವರ ಉಸಿರು ಎಂಬುದನ್ನು ಮರೆಯುವಂತಿಲ್ಲ. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕೆಂಬ ಆಶಯದ ಗೋಕಾಕ್ ಚಳುವಳಿಯನ್ನು ಮುಂಚೂಣಿಯಲ್ಲಿ ಮುನ್ನಡೆಸಿದವರು ರಾಜಕುಮಾರ್. ಅವರ ಕನ್ನಡದ ಪ್ರೀತಿ ಅನನ್ಯ, ಅದ್ವಿತೀಯವಾದದ್ದು. ಕನ್ನಡ ನಾಡು-ನುಡಿಗೆ ಅಪಾರ ಸೇವೆ ಸಲ್ಲಿಸಿದ್ದರಿಂದಲೇ ಅವರು ಚಿತ್ರರಂಗದ ಜನಪ್ರಿಯ ನಟರಾಗಿ ಉಳಿಯದೆ ಕರ್ನಾಟಕದ ಮೇರು ನಾಯಕರೆನಿಸಿದ್ದಾರೆಂಬುದು ಸ್ಮರಣಾರ್ಹ.

ರಾಜಕುಮಾರ್ ಅವರಿಗೆ ಸಂದಿರುವ ಗೌರವ-ಪುರಸ್ಕಾರಗಳೂ ಅಗಣಿತವಾಗಿವೆ. 1979ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದಂದಿನಿಂದ ಡಾ. ರಾಜಕುಮಾರ್' ಎನಿಸಿದರು. 1983ರಲ್ಲಿ ಕೇಂದ್ರ ಸರಕಾರಪದ್ಮಭೂಷಣ’ ಪ್ರಶಸ್ತಿ ನೀಡಿದೆ. ಕನ್ನಡ ಚಿತ್ರೋದ್ಯಮದ ಸರ್ವಾಂಗೀಣ ಅಭಿವೃದ್ಧಿಗಾಗಿ ದುಡಿದ ವ್ಯಕ್ತಿಗೆ ಸಲ್ಲುವ ಗುಬ್ಬಿ ವೀರಣ್ಣ ಪ್ರಶಸ್ತಿ' (1993ರಲ್ಲಿ) ದೊರೆತಿದೆ. 1992ರಲ್ಲಿ ಕರ್ನಾಟಕ ಸರಕಾರವುಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಅಭಿಮಾನಿಗಳು-ಸಂಘ ಸಂಸ್ಥೆಗಳು ಕಲಾಕೌಸ್ತುಭ, ಗಾನಗಂಧರ್ವ, ನಟಸಾರ್ವಭೌಮ, ಕಲಾಕೇಸರಿ, ಕನ್ನಡದ ಕಣ್ಮಣಿ, ವರನಟ, ರಸಿಕರ ರಾಜ ಮುಂತಾದ ಅನೇಕ ಬಿರುದುಗಳನ್ನು ನೀಡಿ ತಮ್ಮ ಪ್ರೀತಿಯನ್ನು ತೋರಿದ್ದಾರೆ. ಇವೆಲ್ಲಕ್ಕೆ ಕಿರೀಟವಿಟ್ಟಂತೆ `ಡಾ. ದಾದಾ ಸಾಹೇಬ್ ಫಾಲ್ಕೆ ಅವಾರ್ಡ್’ ಗೌರವ ಸಂದಿದೆ.

ರಾಜಕುಮಾರರ ಇಡೀ ಕುಟುಂಬವೇ ಚಿತ್ರೋದ್ಯಮಕ್ಕೆ ಸೇವೆ ಸಲ್ಲಿಸುತ್ತಿದೆ. ಶ್ರೀಮತಿ ಪಾರ್ವತಮ್ಮ ರಾಜಕುಮಾರರು ನಿರ್ಮಾಪಕಿಯಾಗಿ, ವಿತರಕಿಯಾಗಿ ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ. ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ನಾಯಕನಟರಾಗಿ ಖ್ಯಾತರಾಗಿದ್ದಾರೆ. ಪುನೀತ್ ರಾಜ್‍ಕುಮಾರ್ ಬಾಲ ನಟನಾಗಿ `ಬೆಟ್ಟದ ಹೂ’ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಗಳಿಸಿದ್ದಾರೆ. ಇವರೊಂದಿಗೆ ಮೂರನೇ ತಲೆಮಾರಿನ ನಟ- ನಟಿಯರೂ ಪ್ರಸಿದ್ಧಿಗೆ ಬರುತ್ತಿದ್ದಾರೆ. ರಾಜಕುಮಾರ್ ಸ್ವತಃ ಗಾಯನ ರಸಸಂಜೆಗಳನ್ನು ನಡೆಸಿ ಅನೇಕ ಸಂಘ-ಸಂಸ್ಥೆಗಳಿಗೆ, ಶಿಕ್ಷಣ ಕ್ಷೇತ್ರಗಳಿಗೆ ರಂಗಭೂಮಿಯ ಕಲಾವಿದ, ತಂತ್ರಜ್ಞರಿಗೆ ಅಗತ್ಯಬಿದ್ದಾಗ ನೆರವು ನೀಡಿದ್ದಾರೆ. ಬರಪರಿಹಾರ ನಿಧಿ, ನೆರೆ ಸಂತ್ರಸ್ತರಿಗೆ, ಮುಖ್ಯಮಂತ್ರಿ ನಿಧಿ ಹಲವು ಬಾರಿ ಹಣಕಾಸಿನ ಸಂಗ್ರಹ ಮಾಡಿಕೊಟ್ಟಿದ್ದರು. ಇದರಿಂದ ಅವರೊಬ್ಬ ಅಪ್ಪಟ ಹೃದಯ ಶ್ರೀಮಂತಿಕೆಯ ಕಲಾವಿದರಾಗಿದ್ದರೆಂಬುದು ವೇದ್ಯವಾಗುತ್ತದೆ.

ಶಿವರಾಜಕುಮಾರ್
ರಾಘವೇಂದ್ರ ರಾಜಕುಮಾರ್
ಪುನೀತ್ ರಾಜಕುಮಾರ್

ಕವಿ ಕೃತಿ ಪರಿಚಯ

ಶ್ರೀಯುತ ದೊಡ್ಡಹುಲ್ಲೂರು ರುಕ್ಕೋಜಿರಾವ್ ರವರು 1958 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ದೊಡ್ಡಹುಲ್ಲೂರಿನಲ್ಲಿ ಜನಿಸಿದರು. ರಂಗಭೂಮಿ, ಚಲನಚಿತ್ರ ಮತ್ತು ಬರವಣಿಗೆಗಳು ಇವರ ಆಸಕ್ತಿಯ ಕ್ಷೇತ್ರಗಳು. ಹಲವಾರು ವಾರಪತ್ರಿಕೆಗಳಲ್ಲಿ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಚಲನಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ರಚಿಸಿ, ಪ್ರಶಸ್ತಿ ಗಳಿಸಿದ್ದಾರೆ.

ಡಾ. ರಾಜಕುಮಾರ್ ಸಮಗ್ರ ಜೀವನಚರಿತ್ರೆಯನ್ನು ಅಭೂತಪೂರ್ವವಾಗಿ ಚಿತ್ರಸಹಿತವಾಗಿ ರಚಿಸಿ ಎರಡು ಮಹಾ ಸಂಪುಟಗಳಲ್ಲಿ ಹೊರತರುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. “ಸದನದಲ್ಲಿ ಸಿದ್ಧಲಿಂಗಯ್ಯ” ಎಂಬ ಕೃತಿಯನ್ನು ಎರಡು ಸಂಪುಟಗಳಲ್ಲಿ ಹೊರತಂದಿದ್ದಾರೆ. ರಾಜಕುಮಾರ್ ಅವರ ನಿಕಟವರ್ತಿಯಾಗಿದ್ದ ಶ್ರೀಯುತರ “ಡಾ. ರಾಜಕುಮಾರ್ ಸಮಗ್ರ ಜೀವನಚರಿತ್ರೆ” ಕೃತಿಯಿಂದ ಪ್ರಸ್ತುತ ಗದ್ಯಭಾಗವನ್ನು ಸಂಗ್ರಹಿಸಿ ಕೊಡಲಾಗಿದೆ.

ಪದಗಳ ಅರ್ಥ

ಅವಿಭಾಜ್ಯ – ಬೇರ್ಪಡಿಸಲಾಗದ,
ವರ್ಷಧಾರೆ – ಮಳೆ,
ಕಂಗೆಡು – ದಿಕ್ಕುತೋಚದಂತಾಗು,
ಸೆಳೆತ – ಆಕರ್ಷಣೆ,
ವಾತ್ಸಲ್ಯ – ಪ್ರೀತಿ,
ಹಸನು – ಸಮೃದ್ಧ,
ಆಡುಂಬೊಲ – ಆಟದ ಬಯಲು,
ಇಹಲೋಕ – ಭೂಮಿಯ ಮೇಲಿನ ಬದುಕು,
ತ್ಯಜಿಸು – ಬಿಟ್ಟುಬಿಡು,
ಹೊಣೆಗಾರಿಕೆ – ಜವಾಬ್ದಾರಿ,
ಹೆಗಲೆಣೆ – ನೆರವು; ಸಹಾಯ,
ಮಜಲು – ಹಂತ,
ಸ್ಮರಣಾರ್ಹ – ನೆನಪಿಟ್ಟುಕೊಳ್ಳಲು ಯೋಗ್ಯವಾದ,
ಅಗಣಿತ – ಲೆಕ್ಕವಿಲ್ಲದಷ್ಟು.

ಸಂವೇದ ವಿಡಿಯೋ ಪಾಠಗಳು

Samveda – 6th – Kannada – Dr. Rajkumar

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಚಟುವಟಿಕೆ

ರಾಜಕುಮಾರ್ ಅಭಿನಯದ ನಿಮ್ಮ ನೆಚ್ಚಿನ ಚಲನಚಿತ್ರದ ಬಗ್ಗೆ ಕಿರು ಪ್ರಬಂಧ ರಚಿಸಿ.

ಕೃಪೆ : ಪ್ರಜಾವಾಣಿ, 24 ಏಪ್ರಿಲ್ 2019