ಜೀವಿಗಳು – ಅವುಗಳ ಲಕ್ಷಣಗಳು ಮತ್ತು ಆವಾಸಗಳು – ಅಧ್ಯಾಯ-9

ಪಹೇಲಿ ಮತ್ತು ಬೂಝೊ ರಜಾ ದಿನಗಳನ್ನು ಕಳೆಯಲು ಹಲವು ಆಸಕ್ತಿಯುತ ಸ್ಥಳಗಳಿಗೆ ಪ್ರವಾಸ ಹೋದರು. ಆ ರೀತಿಯ ಒಂದು ಪ್ರವಾಸ ಅವರನ್ನು ಋಷಿಕೇಶದ ಗಂಗಾನದಿಗೆ ಕರೆದೊಯ್ಯಿತು. ಅವರು ಹಿಮಾಲಯದ ಪರ್ವತಗಳನ್ನು ಹತ್ತಿದರು. ಅಲ್ಲಿ ತುಂಬಾ ಶೀತದ ವಾತಾವರಣವಿತ್ತು. ಆ ಪರ್ವತಗಳ ಮೇಲೆ ವಿವಿಧ ಜಾತಿಯ ಮರಗಳಾದ ಓಕ್, ಪೈನ್ ಮತ್ತು ದೇವದಾರು ಮರಗಳನ್ನು ಅವರು ನೋಡಿದರು. ಈ ಮರಗಳು ಅವರ ಮನೆಯ ಹತ್ತಿರದ ಸಮತಟ್ಟಾದ ಪ್ರದೇಶದಲ್ಲಿರುವ ಮರಗಳಿಗಿಂತ ತುಂಬಾ ಭಿನ್ನವಾಗಿದ್ದವು! ಮತ್ತೊಂದು ಪ್ರವಾಸದಲ್ಲಿ ಅವರು ರಾಜಾಸ್ಥಾನಕ್ಕೆ ಪ್ರಯಾಣಿಸಿದರು ಹಾಗು ಅಲ್ಲಿ ಅತಿ ಹೆಚ್ಚು ಉಷ್ಣತೆಯಿರುವ ಮರುಭೂಮಿಯಲ್ಲಿ ಒಂಟೆಗಳ ಮೇಲೆ ಸಂಚರಿಸಿದರು. ಪ್ರವಾಸದಲ್ಲಿ ಹಲವು ವಿಧದ ಕ್ಯಾಕ್ಟಸ್ (ಕಳ್ಳಿ) ಗಿಡಗಳನ್ನು ಸಂಗ್ರಹಿಸಿದರು. ಕೊನೆಯದಾಗಿ ಪುರಿಗೆ ಹೋಗಿ ಅಲ್ಲಿ ಕ್ಯಾಶುರೈನಾ ಮರಗಳಿರುವ ಸಮುದ್ರ ತೀರಕ್ಕೆ ಭೇಟಿ ನೀಡಿದರು. ಈ ಎಲ್ಲಾ ಪ್ರವಾಸಗಳಲ್ಲಿ ಅವರು ಅನುಭವಿಸಿದ ಸಂತಸವನ್ನು ನೆನಪಿಸಿಕೊಳ್ಳುವಾಗ ಅವರ ಮನಸ್ಸಿಗೆ ಒಂದು ಆಲೋಚನೆ ಹೊಳೆಯಿತು. ಈ ಎಲ್ಲಾ ಸ್ಥಳಗಳು ಒಂದಕ್ಕಿಂತ ಒಂದು ಭಿನ್ನ. ಕೆಲವು ಸ್ಥಳಗಳು ಶೀತಮಯವಾಗಿದ್ದರೆ, ಕೆಲವು ಅತಿ ಹೆಚ್ಚು ಬಿಸಿಯಾದ ಒಣ ಪ್ರದೇಶಗಳು ಇನ್ನೂ ಕೆಲವು ಸ್ಥಳಗಳಲ್ಲಿ ಅತಿ ಹೆಚ್ಚು ತೇವಾಂಶವುಳ್ಳ ವಾತಾವರಣ. ಆದಾಗ್ಯೂ, ಈ ಎಲ್ಲಾ ಸ್ಥಳಗಳಲ್ಲಿ ವಿವಿಧ ರೀತಿಯ ಜೀವಿಗಳು ಇವೆ.

ಜೀವಿಗಳೇ ಇಲ್ಲದಿರಬಹುದಾದ ಭೂಮಿಯ ಮೇಲಿನ ಜಾಗವನ್ನು ಊಹಿಸಲು ಪಹೇಲಿ ಮತ್ತು ಬೂಝೊ ಪ್ರಯತ್ನಿಸಿದರು. ಬೂಝೊ ತನ್ನ ಮನೆಯ ಹತ್ತಿರದ ಸ್ಥಳಗಳ ಬಗ್ಗೆ ಆಲೋಚಿಸಿದನು. ಮನೆಯ ಒಳಗೆ ಕಪಾಟುಗಳನ್ನು ವೀಕ್ಷಿಸಿದನು. ಮೊದಲಿಗೆ ಅದರಲ್ಲಿ ಯಾವುದೇ ಜೀವಿಗಳು ಇಲ್ಲದಿರಬಹುದೆಂದು ಆಲೋಚಿಸಿದನು. ಆದರೆ ಆ ಕಪಾಟಿನಲ್ಲಿ ಒಂದು ಸಣ್ಣ ಜೇಡವನ್ನು ಕಂಡನು. ಅದೇ ರೀತಿ, ಮನೆಯ ಹೊರಗೂ ಕೂಡ ಒಂದಲ್ಲ ಒಂದು ವಿಧದ ಜೀವಿಗಳು ಇಲ್ಲದಿರುವ ಯಾವುದೇ ಸ್ಥಳ ಇರುವುದಕ್ಕೆ ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಕ್ಕೆ ಬಂದನು (ಚಿತ್ರ 9.1). ಪಹೇಲಿ ದೂರದ ಸ್ಥಳಗಳ ಬಗ್ಗೆ ಪುಸ್ತಕಗಳನ್ನು ಓದಲು ಹಾಗೂ ಆಲೋಚಿಸಲು ಪ್ರಾರಂಭಿಸಿದಳು. ಜ್ವಾಲಾಮುಖಿಯ ತೆರೆದ ಬಾಯಿಗಳಲ್ಲೂ ಸಹ ಅತಿ ಸಣ್ಣ ಸೂಕ್ಷ್ಮ ಜೀವಿಗಳಿರುವುದನ್ನು ಜನರು ಕಂಡಿದ್ದಾರೆ ಎಂದು ಅವಳು ಪುಸ್ತಕದಲ್ಲಿ ಓದಿದಳು!

9.1 ಜೀವಿಗಳು ಮತ್ತು ಅವುಗಳು ವಾಸಿಸುವ ಸುತ್ತಲಿನ ಪರಿಸರ

ಪಹೇಲಿ ಮತ್ತು ಬೂಝೊಗೆ ಅವರು ಭೇಟಿ ನೀಡಿದ್ದ ಸ್ಥಳಗಳಲ್ಲಿದ್ದ ವಿವಿಧ ಜೀವಿಗಳ ಬಗ್ಗೆ ಮತ್ತೊಂದು ಆಲೋಚನೆ ಬಂದಿತು. ಮರುಭೂಮಿಯಲ್ಲಿ ಒಂಟೆಗಳು ಹಾಗೂ ಪರ್ವತ ಪ್ರದೇಶಗಳಲ್ಲಿ ಮೇಕೆಗಳು ಮತ್ತು ಚಮರಿಮೃಗಗಳು ಇದ್ದವು. ಸಮುದ್ರ ದಂಡೆಯಲ್ಲಿ ಏಡಿಗಳು ಹಾಗೂ ಸಮುದ್ರದಲ್ಲಿ ಮೀನುಗಾರರು ಹಿಡಿಯುತ್ತಿದ್ದ ವಿವಿಧ ರೀತಿಯ ಮೀನುಗಳು ಮತ್ತು ಇನ್ನಿತರ ಜೀವಿಗಳು ಪುರಿಯಲ್ಲಿ ಇದ್ದವು. ಜೊತೆಗೆ, ಈ ಎಲ್ಲ ಸ್ಥಳಗಳಲ್ಲಿ ಇರುವೆಯಂತಹ ಕೆಲವು ಜೀವಿಗಳಿರುವುದನ್ನೂ ಕಂಡರು. ಒಂದೊಂದು ಸ್ಥಳದಲ್ಲಿಯು ಕಂಡುಬಂದ ವಿವಿಧ ಸಸ್ಯಗಳು ಬೇರೆ ಸ್ಥಳಗಳಲ್ಲಿ ಕಂಡುಬರುವ ಸಸ್ಯಗಳಿಗಿಂತ ತುಂಬಾ ಭಿನ್ನವಾಗಿದ್ದವು. ಹಾಗಾದರೆ, ಈ ಎಲ್ಲ ಬೇರೆ ಬೇರೆ ಪ್ರದೇಶಗಳಲ್ಲಿ ಪರಿಸರ ಹೇಗಿತ್ತು? ಒಂದೇ ರೀತಿ ಇತ್ತೆ?

ಚಟುವಟಿಕೆ 1
ಒಂದು ಅರಣ್ಯದಿಂದ ನಾವು ಪ್ರಾರಂಭಿಸೋಣ. ಅಲ್ಲಿ ಕಂಡುಬರುವ ಎಲ್ಲ ಸಸ್ಯಗಳು, ಪ್ರಾಣಿಗಳು ಹಾಗೂ ಇನ್ನಿತರ ವಸ್ತುಗಳ ಬಗ್ಗೆ ಆಲೋಚಿಸಿ. ಕೋಷ್ಟಕ 9.1ರ ಕಾಲಂ-1ರಲ್ಲಿ ಅವುಗಳನ್ನು ಪಟ್ಟಿ ಮಾಡಿ. ಕೋಷ್ಟಕದಲ್ಲಿ ತೋರಿಸಿರುವಂತೆ, ಇನ್ನಿತರ ಪ್ರದೇಶಗಳಲ್ಲಿ ಕಂಡುಬರುವ ವಸ್ತುಗಳು, ಪ್ರಾಣಿಗಳು ಮತ್ತು ಸಸ್ಯಗಳನ್ನು ಪಟ್ಟಿ ಮಾಡಿ. ಕೋಷ್ಟಕ 9.1ನ್ನು ಭರ್ತಿ ಮಾಡಲು ಈ ಪಾಠದಲ್ಲಿ ಕೊಟ್ಟಿರುವ ಉದಾಹರಣೆಗಳನ್ನು ಬಳಸಬಹುದು. ಕೋಷ್ಟಕವನ್ನು ತುಂಬಲು ಹೆಚ್ಚಿನ ಉದಾಹರಣೆಗಳಿಗಾಗಿ ನಿಮ್ಮ ಸ್ನೇಹಿತರು, ಶಿಕ್ಷಕರು ಮತ್ತು ಪೆÇೀಷಕರೊಂದಿಗೆ ಚರ್ಚಿಸಿ. ವಿವಿಧ ಪ್ರದೇಶಗಳಲ್ಲಿರುವ ಪ್ರಾಣಿಗಳು, ಸಸ್ಯಗಳು ಮತ್ತು ಖನಿಜಗಳ ಬಗ್ಗೆ ಗ್ರಂಥಾಲಯಗಳಲ್ಲಿ ದೊರೆಯುವ ಹಲವು ಉಪಯುಕ್ತ ಪುಸ್ತಕಗಳಿಂದಲೂ ನೀವು ಮಾಹಿತಿಯನ್ನು ಪಡೆಯಬಹುದು.

ಕೋಷ್ಟಕದ ಪ್ರತಿಯೊಂದು ಕಾಲಂನಲ್ಲಿ, ಅನೇಕ ದೊಡ್ಡ ಹಾಗೂ ಸಣ್ಣ ಸಸ್ಯಗಳು, ಪ್ರಾಣಿಗಳು ಮತ್ತು ವಸ್ತುಗಳನ್ನು ಸೇರಿಸಲು ಪ್ರಯತ್ನಿಸಿ. ಸಸ್ಯ ಅಥವಾ ಪ್ರಾಣಿಗಳಾಗಿರದೆ ಇರಬಹುದಾದ ಇನ್ನಿತರ ವಸ್ತುಗಳನ್ನು ನಾವು ಕಾಣಬಹುದೆ? ಬಹುಶಃ ಸಸ್ಯದ ಭಾಗಗಳಾದ ಒಣ ಎಲೆಗಳು ಹಾಗೂ ಪ್ರಾಣಿಗಳ ಭಾಗಗಳಾದ ಮೂಳೆಗಳನ್ನು ಕಾಣಬಹುದು. ಜೊತೆಗೆ, ವಿವಿಧ ರೀತಿಯ ಮಣ್ಣು ಮತ್ತು ಬೆಣಚು ಕಲ್ಲುಗಳನ್ನು ಸಹ ಕಾಣಬಹುದು. ಈಗಾಗಲೆ ಅಧ್ಯಾಯ 5ರಲ್ಲಿ ಚರ್ಚಿಸಿರುವಂತೆ ಸಾಗರದ ನೀರು ಹಲವಾರು ಲವಣಗಳನ್ನು ತನ್ನಲ್ಲಿ ಕರಗಿಸಿಕೊಂಡಿರಬಹುದು. ಹಾಗೆಯೆ ಇನ್ನೂ ಹಲವಾರು ವಸ್ತುಗಳಿರಬಹುದು.

ನಾವು ಈ ಅಧ್ಯಾಯದ ಮೂಲಕ ಹೋಗುವಾಗ ಹೆಚ್ಚು ಉದಾಹರಣೆಗಳನ್ನು ಕೋಷ್ಟಕ 9.1ರಲ್ಲಿ ಸೇರಿಸುತ್ತಾ ಇರಿ. ಮತ್ತಷ್ಟು ಆಕರ್ಷಕ ಸ್ಥಳಗಳಿಗೆ ಪ್ರಯಾಣ ಮಾಡುವಾಗ ಈ ಕೋಷ್ಟಕದ ಬಗ್ಗೆ ಚರ್ಚಿಸೋಣ.

9.2 ಆವಾಸ ಮತ್ತು ಹೊಂದಾಣಿಕೆ

ಚಟುವಟಿಕೆ 1ರಲ್ಲಿ ಪಟ್ಟಿ ಮಾಡಿರುವ ಪ್ರಾಣಿಗಳು ಮತ್ತು ಸಸ್ಯಗಳಿಂದ ನೀವು ಏನನ್ನು ತಿಳಿಯುವಿರಿ? ಇವುಗಳಲ್ಲಿ ಹೆಚ್ಚಿನ ವೈವಿಧ್ಯತೆಯನ್ನು ಕಂಡಿರ? ಕೋಷ್ಟಕ 9.1ರಲ್ಲಿ ಮರುಭೂಮಿ ಮತ್ತು ಸಮುದ್ರಗಳಿಗೆ ಸಂಬಂಧಿಸಿದ ಕಾಲಂಗಳಲ್ಲಿ ನೀವು ಏನನ್ನು ಪಟ್ಟಿ ಮಾಡಿರುವಿರಿ, ಗಮನಿಸಿ. ಈ ಎರಡು ಕಾಲಂಗಳಲ್ಲಿ ಬಹಳ ಭಿನ್ನವಾಗಿರುವ ಜೀವಿಗಳನ್ನು ಪಟ್ಟಿ ಮಾಡಿದ್ದೀರ?

ಮರುಭೂಮಿ ಮತ್ತು ಸಮುದ್ರ – ಇವುಗಳ ಪರಿಸರ ಹೇಗಿದೆ?
ಸಮುದ್ರದಲ್ಲಿ ಪ್ರಾಣಿಗಳು ಮತ್ತು ಸಸ್ಯಗಳು ಉಪ್ಪು ನೀರಿನಿಂದ (saline or salty water) ಆವೃತಗೊಂಡಿವೆ. ಅವುಗಳಲ್ಲಿ ಬಹುತೇಕ ಜೀವಿಗಳು ನೀರಿನಲ್ಲಿ ಕರಗಿರುವ ಆಕ್ಸಿಜನ್‍ಅನ್ನು ಉಸಿರಾಡಲು ಬಳಸುತ್ತವೆ.

ಮರುಭೂಮಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ನೀರು ದೊರೆಯುತ್ತದೆ. ಅಲ್ಲಿ ಹಗಲು ಹೆಚ್ಚು ಬಿಸಿ, ರಾತ್ರಿ ತುಂಬಾ ಶೀತ. ಮರುಭೂಮಿಯಲ್ಲಿ ವಾಸಿಸುವ ಸಸ್ಯಗಳು ಮತ್ತು ಪ್ರಾಣಿಗಳು ಗಾಳಿಯಲ್ಲಿನ ಮುಕ್ತ ಆಕ್ಸಿಜನ್‍ಅನ್ನು ಉಸಿರಾಡುತ್ತವೆ.

ಸಮುದ್ರ ಹಾಗೂ ಮರುಭೂಮಿ ವಿಭಿನ್ನ ಪರಿಸರಗಳಾಗಿದ್ದು, ಈ ಎರಡು ಪ್ರದೇಶಗಳಲ್ಲಿ ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿಗಳನ್ನು ಕಾಣುತ್ತೇವೆ. ಹೌದಲ್ಲವೆ? ನಾವು ಈಗ ಮರುಭೂಮಿ ಮತ್ತು ಸಮುದ್ರದಲ್ಲಿರುವ ವಿಭಿನ್ನವಾದ ಎರಡು ಪ್ರಾಣಿಗಳಾದ ಒಂಟೆ ಮತ್ತು ಮೀನುಗಳನ್ನು ಗಮನಿಸೋಣ. ಒಂಟೆಯ ದೇಹದ ರಚನೆಯು ಮರುಭೂಮಿಯ ಪರಿಸರದಲ್ಲಿ ಬದುಕಲು ಸಹಾಯಕ. ಒಂಟೆಗೆ ಉದ್ದನೆಯ ಕಾಲುಗಳಿದ್ದು, ಅದರ ದೇಹವನ್ನು ಮರಳಿನ ತಾಪದಿಂದ ದೂರವಿಡಲು ಸಹಾಯ ಮಾಡುತ್ತವೆ (ಚಿತ್ರ 9.2). ಅದು ಸ್ವಲ್ಪ ಪ್ರಮಾಣದ ಮೂತ್ರವನ್ನು ಹಾಗೂ ಒಣ ಸಗಣಿಯನ್ನು ವಿಸರ್ಜಿಸುತ್ತದೆ ಮತ್ತು ಬೆವರುವುದಿಲ್ಲ. ಒಂಟೆಯು ತನ್ನ ದೇಹದಿಂದ ಅತಿ ಕಡಿಮೆ ನೀರನ್ನು ಹೊರಹಾಕುವುದರಿಂದ ಹಲವು ದಿನಗಳವರೆಗೆ ನೀರಿಲ್ಲದೆ ಬದುಕಬಲ್ಲದು.

ಈಗ ವಿವಿಧ ರೀತಿಯ ಮೀನುಗಳನ್ನು ಗಮನಿಸೋಣ. ಇವುಗಳಲ್ಲಿ ಕೆಲವನ್ನು ಚಿತ್ರ 9.3ರಲ್ಲಿ ತೋರಿಸಿದೆ. ಮೀನುಗಳಲ್ಲಿ ಹಲವು ವಿಧ. ಆದರೆ ಅವುಗಳ ಆಕಾರದಲ್ಲಿ ಏನಾದರು ಸಾಮ್ಯತೆಯನ್ನು ನೀವು ಕಾಣುತ್ತೀರ? ಈಗಾಗಲೇ ಅಧ್ಯಾಯ 8ರಲ್ಲಿ ಚರ್ಚಿಸಿರುವಂತೆ ಎಲ್ಲಾ ವಿಧದ ಮೀನುಗಳ ದೇಹವು ದೋಣಿಯಾಕಾರದಲ್ಲಿದೆ. ಈ ರೀತಿಯ ಆಕಾರವು ಮೀನುಗಳು ನೀರಿನಲ್ಲಿ ಚಲಿಸಲು ಸಹಾಯಕ. ಮೀನುಗಳ ದೇಹದ ಮೇಲ್ಮೈಯಲ್ಲಿ ಜಾರುವ ಹುರುಪೆ (scale)ಗಳಿವೆ. ಈ ಹುರುಪೆಗಳು ಮೀನನ್ನು ರಕ್ಷಿಸುವುದರ ಜೊತೆಗೆ, ನೀರಿನಲ್ಲಿ ಸುಲಭವಾಗಿ ಚಲಿಸಲು ಸಹಾಯಕ. ಅಧ್ಯಾಯ 8ರಲ್ಲಿ ಚರ್ಚಿಸಿರುವಂತೆ, ಮೀನುಗಳು ಚಪ್ಪಟೆಯಾದ ಈಜುರೆಕ್ಕೆ ಹಾಗೂ ಬಾಲದ ರೆಕ್ಕೆಯನ್ನು ಹೊಂದಿದ್ದು, ಮೀನುಗಳ ದಿಕ್ಕನ್ನು ಬದಲಿಸಲು ಮತ್ತು ದೇಹದ ಸಮತೋಲನ ಕಾಪಾಡಲು ಇವು ಸಹಾಯಕ. ಮೀನಿನಲ್ಲಿರುವ ಕಿವಿರುಗಳು (gills) ನೀರಿನಲ್ಲಿ ಕರಗಿರುವ ಆಕ್ಸಿಜನ್‍ಅನ್ನು ಉಸಿರಾಟಕ್ಕೆ ಹೀರಿಕೊಳ್ಳಲು ಸಹಾಯಕವಾಗಿವೆ.

ಮೀನಿನ ಲಕ್ಷಣಗಳು ಅದನ್ನು ನೀರಿನಲ್ಲಿ ವಾಸಿಸುವಂತೆಯೂ ಹಾಗು ಒಂಟೆಯ ದೇಹದ ಲಕ್ಷಣಗಳು ಅದನ್ನು ಮರುಭೂಮಿಯಲ್ಲಿಯೇ ಜೀವಿಸಲು ಸಹಾಯಕವಾಗಿರುವುದನ್ನು ನೋಡುತ್ತೇವೆ.

ಭೂಮಿಯ ಮೇಲೆ ವಾಸಿಸುವ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಲ್ಲಿ ನಾವು ಕೇವಲ ಎರಡು ಉದಾಹರಣೆಗಳನ್ನು ಮಾತ್ರ ತೆಗೆದುಕೊಂಡಿದ್ದೇವೆ. ತಮ್ಮ ಸುತ್ತಲಿನ ಪರಿಸರದಲ್ಲಿ ವಾಸಿಸಲು ಸಹಾಯ ಮಾಡುವ ಕೆಲವು ಲಕ್ಷಣಗಳನ್ನು ಈ ಎಲ್ಲಾ ವಿವಿಧ ಜೀವಿಗಳಲ್ಲಿ ಕಾಣುತ್ತೇವೆ. ಯಾವುದೇ ಸಸ್ಯ ಅಥವಾ ಪ್ರಾಣಿ ತನ್ನ ಸುತ್ತಲಿನ ಪರಿಸರದಲ್ಲಿ ಸಹಜವಾಗಿ ಜೀವಿಸಲು ಸಹಾಯಕವಾದ ನಿರ್ದಿಷ್ಟ ಲಕ್ಷಣಗಳು ಅಥವಾ ಅಭ್ಯಾಸಗಳನ್ನು ಹೊಂದಾಣಿಕೆ (adaptation)ಎನ್ನುವರು. ಜೀವಿಗಳ ವಾಸಸ್ಥಳದ ಆಧಾರದ ಮೇಲೆ, ಅವುಗಳ ಹೊಂದಾಣಿಕೆಯಲ್ಲಿ ವ್ಯತ್ಯಾಸವಿರುತ್ತದೆ. ಹಾಗಾಗಿ, ಸಮುದ್ರದಲ್ಲಿ ಒಂಟೆ ಮತ್ತು ನೀರಿನ ಹೊರಗಡೆ ಮೀನು ವಾಸಿಸಲಾಗುವುದಿಲ್ಲ.

ಜೀವಿಗಳು ವಾಸಿಸುವ ಸ್ಥಳಕ್ಕೆ ಆವಾಸ (habitat) ಎನ್ನುವರು. ಆವಾಸವೆಂದರೆ ವಾಸಿಸುವ ಸ್ಥಳ (ಮನೆ). ಆಹಾರ, ನೀರು, ಗಾಳಿ, ವಸತಿ ಹಾಗೂ ಇತರೆ ಅಗತ್ಯತೆಗಳನ್ನು ಆವಾಸವು ಜೀವಿಗಳಿಗೆ ಒದಗಿಸುತ್ತದೆ. ಅನೇಕ ವಿಧದ ಪ್ರಾಣಿ ಮತ್ತು ಸಸ್ಯಗಳು ಒಂದೇ ಆವಾಸದಲ್ಲಿ ವಾಸಿಸುತ್ತವೆ.

ಭೂಮಿಯ ಮೇಲೆ ವಾಸಿಸುವ ಸಸ್ಯ ಹಾಗೂ ಪ್ರಾಣಿಗಳನ್ನು ಭೂಆವಾಸ (terrestrial habitats)ಗಳಲ್ಲಿ ವಾಸಿಸುವ ಜೀವಿಗಳು ಎನ್ನುವರು. ಅರಣ್ಯ, ಹುಲ್ಲುಗಾವಲು, ಮರುಭೂಮಿ, ಕಡಲತೀರ ಮತ್ತು ಪರ್ವತ ಪ್ರದೇಶಗಳು ಭೂ ಆವಾಸಗಳಿಗೆ ಕೆಲವು ಉದಾಹರಣೆಗಳು. ನೀರಿನಲ್ಲಿ ವಾಸಿಸುವ ಪ್ರಾಣಿಗಳ ಮತ್ತು ಸಸ್ಯಗಳ ಆವಾಸಗಳನ್ನು ಜಲಆವಾಸಗಳು (aquatic habitats) ಎನ್ನುವರು. ಸರೋವರ, ನದಿ ಹಾಗೂ ಸಾಗರಗಳು ಜಲ ಆವಾಸಗಳಿಗೆ ಕೆಲವು ಉದಾಹರಣೆಗಳು. ಭೂ ಆವಾಸಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಅಂದರೆ, ಪ್ರಪಂಚದ ವಿವಿಧ ಭಾಗಗಳಲ್ಲಿರುವ ಅರಣ್ಯ, ಹುಲ್ಲುಗಾವಲು, ಮರುಭೂಮಿ, ಕಡಲತೀರ ಹಾಗೂ ಪರ್ವತ ಪ್ರದೇಶಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ.

ಸುತ್ತಲಿನ ಪರಿಸರದಲ್ಲಿ ಆಗುವ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಹಾಯವಾಗುವಂತೆ ಅಲ್ಪಾವಧಿಯ ಕೆಲವು ಬದಲಾವಣೆಗಳು ಒಂದು ಜೀವಿಯಲ್ಲಿ ಆಗಬಹುದು. ಉದಾಹರಣೆಗೆ, ಸಮತಟ್ಟಾದ ಪ್ರದೇಶದಲ್ಲಿ ವಾಸಿಸುವ ನಾವು ಆಕಸ್ಮಾತ್ ಎತ್ತರವಾದ ಪರ್ವತ ಪ್ರದೇಶಗಳಿಗೆ ಹೋದರೆ, ಕೆಲವು ದಿನಗಳ ಕಾಲ ಉಸಿರಾಡಲು ಮತ್ತು ದೈಹಿಕ ಕೆಲಸ ಮಾಡಲು ಕಷ್ಟವಾಗಬಹುದು. ಕೆಲವು ದಿನಗಳನಂತರ ಪರ್ವತ ಪ್ರದೇಶದ ಪರಿಸ್ಥಿತಿಗೆ ನಮ್ಮ ದೇಹ ಹೊಂದಿಕೊಳ್ಳುತ್ತದೆ. ಸುತ್ತಮುತ್ತಲ ಪರಿಸರದಲ್ಲಿ ಆಗುವ ಬದಲಾವಣೆಗಳ ಸಣ್ಣಪುಟ್ಟ ಸಮಸ್ಯೆಗಳಿಂದ ಹೊರಬರಲು, ಯಾವುದೇ ಜೀವಿಯ ದೇಹದಲ್ಲಿ ಆಗುವ ಅಲ್ಪಾವಧಿಯ ಸಣ್ಣ ಬದಲಾವಣೆಗಳಿಗೆ ಒಗ್ಗಿಕೊಳ್ಳುವಿಕೆ (acclimatization) ಎಂದು ಕರೆಯುತ್ತೇವೆ. ಸಾವಿರಾರು ವರ್ಷಗಳಲ್ಲಿ ಉಂಟಾಗುವ ಹೊಂದಾಣಿಕೆಗಳಿಗಿಂತ ಈ ಬದಲಾವಣೆಗಳು ಭಿನ್ನವಾಗಿರುತ್ತವೆ.

ಒಂದು ಆವಾಸದಲ್ಲಿರುವ ಜೀವಿಗಳಾದ ಸಸ್ಯಗಳು ಮತ್ತು ಪ್ರಾಣಿಗಳು ಅದರ ಜೈವಿಕ ಘಟಕಗಳು (biotic components). ಅದೇ ರೀತಿ ನಿರ್ಜೀವಿಗಳಾದ ಕಲ್ಲುಬಂಡೆಗಳು, ಮಣ್ಣು, ಗಾಳಿ, ಮತ್ತು ನೀರು ಅದರ ಅಜೈವಿಕ ಘಟಕಗಳು (abiotic components). ಸೂರ್ಯನ ಬೆಳಕು ಮತ್ತು ಶಾಖ ಜೈವಿಕ ಅಥವಾ ಅಜೈವಿಕ ಘಟಕಗಳೆ?

ಕೆಲವು ಸಸ್ಯಗಳು ಬೀಜಗಳಿಂದ ಬೆಳೆಯುತ್ತವೆ ಎಂದು ನಾವು ತಿಳಿದಿದ್ದೇವೆ. ಬೀಜಗಳು ಸಸ್ಯಗಳಾಗಿ ಬೆಳೆಯುವ ಸಂದರ್ಭದಲ್ಲಿ ಅವುಗಳ ಮೇಲೆ ಪರಿಣಾಮ ಬೀರುವ ಕೆಲವು ಅಜೈವಿಕ ಅಂಶಗಳ ಬಗ್ಗೆ ತಿಳಿಯೋಣ.

ಚಟುವಟಿಕೆ 2
ಅಧ್ಯಾಯ 1ರ ಚಟುವಟಿಕೆ 5ನ್ನು ಸ್ಮರಿಸಿಕೊಳ್ಳಿ. ಕಡ್ಲೆಕಾಳು ಮತ್ತು ಹೆಸರುಕಾಳುಗಳಿಂದ ಮೊಳಕೆಗಳನ್ನು ಬೆಳೆಸಿದೆವು. ಬೀಜ ಮೊಳಕೆಯಾದಾಗ, ಅದು ಮೊಳೆತಿದೆ (germinated) ಎಂದು ಹೇಳುತ್ತೇವೆ. ಇದು ಬೀಜದಿಂದ ಹೊಸ ಸಸ್ಯದ ಬೆಳವಣಿಗೆಯ ಆರಂಭ.

ಕೆಲವು ಒಣಗಿದ ಹೆಸರುಕಾಳುಗಳನ್ನು ಸಂಗ್ರಹಿಸಿ. ಸುಮಾರು 20-30 ಹೆಸರುಕಾಳುಗಳನ್ನು ಒಂದು ಕಡೆ ಇರಿಸಿ ಮತ್ತು ಸ್ವಲ್ಪ ಕಾಳುಗಳನ್ನು ದಿನಪೂರ್ತಿ ನೀರಿನಲ್ಲಿ ನೆನೆಸಿ. ನೆನೆಸಿದ ಬೀಜಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ. ಒಂದು ಭಾಗವನ್ನು 3-4 ದಿನಗಳವರೆಗೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಸಿ ಇಡಿ. ಒಣ ಕಾಳುಗಳು ಮತ್ತು ನೀರಿನಲ್ಲಿ ಮುಳುಗಿಸಿರುವ ಕಾಳುಗಳನ್ನು ಕದಲಿಸಬೇಡಿ. ನೀರಿನಲ್ಲಿ ನೆನೆಸಿದ ಕಾಳುಗಳ ಒಂದು ಭಾಗವನ್ನು ಸೂರ್ಯನ ಬಿಸಿಲು ಬೀಳುವ ಕೊಠಡಿಯಲ್ಲಿಡಿ. ಇನ್ನೊಂದು ಭಾಗವನ್ನು ಸೂರ್ಯನ ಬೆಳಕು ಪ್ರವೇಶಿಸದಿರುವ, ಸಂಪೂರ್ಣವಾಗಿ ಕತ್ತಲೆಯಿಂದ ಕೂಡಿದ ಕಪಾಟಿನಲ್ಲಿ ಇಡಿ. ಕೊನೆಯ ಭಾಗವನ್ನು ಅತಿ ತಂಪಾದ ಪರಿಸರವಾದ ರೆಫ್ರಿಜರೇಟರ್‍ನಲ್ಲಿ ಅಥವಾ ಅವುಗಳ ಸುತ್ತ ಮಂಜುಗಡ್ಡೆಯಿರುವಂತೆ ಇಡಿ. ಈ ಮೂರು ಭಾಗಗಳಲ್ಲಿರುವ ಕಾಳುಗಳನ್ನು ಜಾಲಿಸಿ, ಪ್ರತಿದಿನ ನೀರನ್ನು ಬದಲಾಯಿಸಿ ಇಡಿ. ಸ್ವಲ್ಪ ದಿನಗಳ ನಂತರ ನೀವು ಏನನ್ನು ಗಮನಿಸುವಿರಿ? ಐದೂ ಭಾಗಗಳ ಕಾಳುಗಳು ಸಮಾನವಾಗಿ ಮೊಳಕೆಯೊಡೆಯುತ್ತವೆಯೆ? ಇವುಗಳಲ್ಲಿ ಯಾವುದಾದರು ನಿಧಾನವಾಗಿ ಮೊಳಕೆಯಾಗುವುದು ಅಥವಾ ಆಗದೇ ಇರುವುದನ್ನು ನೀವು ಗಮನಿಸುವಿರ?

ಸಸ್ಯಗಳು ಬೆಳೆಯಲು ಅಜೈವಿಕ ಅಂಶಗಳಾದ ಗಾಳಿ, ನೀರು, ಬೆಳಕು ಮತ್ತು ಶಾಖ ಮುಖ್ಯ ಎಂದು ನೀವು ಅರಿತುಕೊಂಡಿರ? ವಾಸ್ತವವಾಗಿ ಎಲ್ಲ ಜೀವಿಗಳಿಗೆ ಈ ಅಜೈವಿಕ ಅಂಶಗಳು ಅತ್ಯಂತ ಅವಶ್ಯಕ.

ಅತಿ ತಂಪಾದ ಹಾಗು ಅತಿ ಉಷ್ಣತೆ ಇರುವ ವಾಯುಗುಣಗಳೆರಡರಲ್ಲಿಯೂ ಜೀವಿಗಳು ಕಂಡುಬರುತ್ತವೆ. ಹೌದಲ್ಲವೆ? ಅವು ಹೇಗೆ ಬದುಕುತ್ತವೆ? ಜೀವಿಗಳು ಹೊಂದಾಣಿಕೆ ಮೂಲಕ ವಾಯುಗುಣಕ್ಕೆ ಉತ್ತಮವಾಗಿ ಒಗ್ಗಿಕೊಳ್ಳುತ್ತವೆ.

ಅಲ್ಪಾವಧಿಯಲ್ಲಿ ಹೊಂದಾಣಿಕೆ ಆಗುವುದಿಲ್ಲ. ಏಕೆಂದರೆ ಒಂದು ಪ್ರದೇಶದ ಅಜೈವಿಕ ಅಂಶಗಳು ತುಂಬಾ ನಿಧಾನಗತಿಯಲ್ಲಿ ಬದಲಾಗುತ್ತವೆ. ಯಾವ ಪ್ರಾಣಿಗಳು ಈ ಬದಲಾವಣೆಗಳಿಗೆ ಹೊಂದಿಕೊಳ್ಳುವುದಿಲ್ಲವೋ, ಅವುಗಳು ಸಾಯುತ್ತವೆ ಹಾಗೂ ಹೊಂದಾಣಿಕೆ ಮಾಡಿಕೊಳ್ಳಬಲ್ಲ ಪ್ರಾಣಿಗಳು ಮಾತ್ರ ಬದುಕುತ್ತವೆ. ಅಜೈವಿಕ ಅಂಶಗಳಿಗೆ ಪ್ರಾಣಿಗಳು ವಿವಿಧ ರೀತಿಯಲ್ಲಿ ಹೊಂದಿಕೊಳ್ಳುತ್ತವೆ. ವಿವಿಧ ಆವಾಸಗಳಲ್ಲಿರುವ ವೈವಿಧ್ಯಮಯ ಜೀವಿಗಳೇ ಇದರ ಫಲಿತಾಂಶ.

ಕೆಲವು ಆವಾಸಗಳು, ಇವುಗಳ ಅಜೈವಿಕ ಅಂಶಗಳು ಮತ್ತು ಈ ಆವಾಸಗಳಿಗೆ ಪ್ರಾಣಿಗಳ ಹೊಂದಾಣಿಕೆಗಳ ಬಗ್ಗೆ ತಿಳಿಯೋಣ.

9.3 ವಿವಿಧ ಆವಾಸಗಳ ಮೂಲಕ ಒಂದು ಪಯಣ
ಕೆಲವು ಭೂಆವಾಸಗಳು

ಮರುಭೂಮಿಗಳು

ಈಗಾಗಲೆ ನಾವು ಮರುಭೂಮಿಯ ಅಜೈವಿಕ ಅಂಶಗಳು ಹಾಗೂ ಅವುಗಳಿಗೆ ಒಂಟೆಗಳ ಹೊಂದಾಣಿಕೆಯ ಬಗ್ಗೆ ಚರ್ಚಿಸಿದ್ದೇವೆ. ಮರುಭೂಮಿಗಳಲ್ಲಿ ಕಾಣಸಿಗುವ ಇತರೆ ಪ್ರಾಣಿಗಳು ಮತ್ತು ಸಸ್ಯಗಳ ಬಗ್ಗೆ ಏನೆನಿಸುತ್ತದೆ? ಅವು ಕೂಡ ಇದೇ ರೀತಿಯ ಹೊಂದಾಣಿಕೆಗಳನ್ನು ಮಾಡಿಕೊಂಡಿವೆಯೆ?

ಮರುಭೂಮಿಯ ಪ್ರಾಣಿಗಳಾದ ಇಲಿಗಳು ಮತ್ತು ಹಾವುಗಳಿಗೆ ಒಂಟೆಯ ರೀತಿ ಉದ್ದನೆಯ ಕಾಲುಗಳು ಇರುವುದಿಲ್ಲ. ಹಗಲು ಸಮಯದಲ್ಲಿ ಸೂರ್ಯನ ತೀವ್ರ ಶಾಖದಿಂದ ದೂರ ಉಳಿಯಲು ಮರಳಿನ ಒಳಗೆ ಆಳವಾದ ಬಿಲಗಳಲ್ಲಿ ಈ ಪ್ರಾಣಿಗಳು ವಾಸಿಸುತ್ತವೆ (ಚಿತ್ರ 9.4). ರಾತ್ರಿಯ ವೇಳೆ ತಂಪಾಗಿರುವ ಸಮಯದಲ್ಲಿ ಮಾತ್ರ ಈ ಪ್ರಾಣಿಗಳು ಬಿಲದಿಂದ ಹೊರಗೆ ಬರುತ್ತವೆ.

ಮರುಭೂಮಿಯಲ್ಲಿ ಬೆಳೆಯುವ ಕೆಲವು ವಿಶಿಷ್ಟ ಸಸ್ಯಗಳನ್ನು ಚಿತ್ರ 9.5ರಲ್ಲಿ ತೋರಿಸಿದೆ. ಈ ಸಸ್ಯಗಳು ಮರುಭೂಮಿಗೆ ಹೇಗೆ ಹೊಂದಿಕೊಂಡಿವೆ?

ಚಟುವಟಿಕೆ 3
ಕುಂಡದಲ್ಲಿ ಬೆಳೆಸಿರುವ ಪಾಪಸುಕಳ್ಳಿ ಮತ್ತು ಎಲೆಗಳುಳ್ಳ ಒಂದು ಸಸ್ಯವನ್ನು ತರಗತಿಗೆ ತನ್ನಿ. ಅಧ್ಯಾಯ 7ರ ಚಟುವಟಿಕೆ 4ರಲ್ಲಿ ಬಾಷ್ಪ ವಿಸರ್ಜನೆಯ ಬಗ್ಗೆ ಕಲಿಯಲು ಮಾಡಿದಂತೆ ಎರಡೂ ಸಸ್ಯಗಳ ಕೆಲವು ಭಾಗಗಳನ್ನು ಪಾಲಿಥೀನ್ / ಪ್ಲಾಸ್ಟಿಕ್ ಚೀಲದೊಳಗೆ ಸೇರಿಸಿ ಕಟ್ಟಿ. ಕುಂಡಗಳಲ್ಲಿರುವ ಈ ಎರಡೂ ಸಸ್ಯಗಳನ್ನು ಕೆಲವು ಗಂಟೆಗಳವರೆಗೆ ಸೂರ್ಯನ ಬಿಸಿಲಿನಲ್ಲಿ ಇಡಿ. ನಂತರ ನೀವು ಏನನ್ನು ಗಮನಿಸುವಿರಿ? ಎರಡೂ ಪಾಲಿಥೀನ್ ಚೀಲಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣದಲ್ಲಿ ಏನಾದರು ವ್ಯತ್ಯಾಸ ಕಾಣುವಿರ?

ಮರುಭೂಮಿಯ ಸಸ್ಯಗಳು ಬಾಷ್ಪವಿಸರ್ಜನೆಯ ಮೂಲಕ ಅತಿ ಕಡಿಮೆ ಪ್ರಮಾಣದಲ್ಲಿ ನೀರನ್ನು ಕಳೆದುಕೊಳ್ಳುವುವು. ಮರುಭೂಮಿಯ ಸಸ್ಯಗಳಲ್ಲಿ ಎಲೆಗಳು ಇಲ್ಲದಿರಬಹುದು ಅಥವಾ ಚಿಕ್ಕದಾಗಿರಬಹುದು ಅಥವಾ ಮುಳ್ಳಿನ ಆಕಾರದಲ್ಲಿ ಇರಬಹುದು. ಇದು ಬಾಷ್ಪವಿಸರ್ಜನೆಯ ಮೂಲಕ ಎಲೆಗಳಿಂದ ನೀರು ಹೊರಹೋಗುವ ಪ್ರಮಾಣ ಕಡಿಮೆಯಾಗಲು ಸಹಾಯಕ. ಪಾಪಸುಕಳ್ಳಿಯಲ್ಲಿ ನೀವು ಕಾಣುವ ಆ ಸಸ್ಯದ ಎಲೆಯಂತಹ ಭಾಗವು ವಾಸ್ತವವಾಗಿ ಕಾಂಡ ಭಾಗ (ಚಿತ್ರ 9.5). ಈ ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆಯು ಸಾಮಾನ್ಯವಾಗಿ ಕಾಂಡದಲ್ಲಿ ನಡೆಯುತ್ತದೆ. ಜೊತೆಗೆ ಕಾಂಡವು ದಪ್ಪನೆಯ ಮೇಣದಂತಹ ಪದರದಿಂದ ಆವೃತವಾಗಿದ್ದು, ಪಾಪಸು ಕಳ್ಳಿಯ ಅಂಗಾಂಶಗಳಲ್ಲಿ ನೀರನ್ನು ಉಳಿಸಿಕೊಳ್ಳಲು ಅದು ಸಹಾಯಕ. ಬಹಳಷ್ಟು ಮರುಭೂಮಿ ಸಸ್ಯಗಳ ಬೇರುಗಳು ನೀರನ್ನು ಹೀರಿಕೊಳ್ಳಲು ಮಣ್ಣಿನಲ್ಲಿ ಆಳವಾಗಿ ಇಳಿದಿರುತ್ತವೆ.

ಪರ್ವತ ಪ್ರದೇಶಗಳು

ಸಾಮಾನ್ಯವಾಗಿ ಈ ಆವಾಸಗಳು ತುಂಬಾ ಶೀತ ಹಾಗೂ ಬಿರುಗಾಳಿಯಿಂದ ಕೂಡಿವೆ. ಕೆಲವು ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಹಿಮಪಾತವೂ ಆಗಬಹುದು.

ಪರ್ವತ ಪ್ರದೇಶಗಳಲ್ಲಿ ವಾಸಿಸುವ ಸಸ್ಯ ಹಾಗೂ ಪ್ರಾಣಿಗಳಲ್ಲಿ ಹೆಚ್ಚಿನ ವೈವಿಧ್ಯತೆಯಿರುತ್ತದೆ. ಚಿತ್ರ 9.6ರಲ್ಲಿ ತೋರಿಸಿರುವಂತಹ ಮರಗಳನ್ನು ನೀವು ನೋಡಿದ್ದೀರ?

ಒಂದು ವೇಳೆ ನೀವು ಪರ್ವತ ಪ್ರದೇಶದಲ್ಲಿ ವಾಸವಾಗಿದ್ದರೆ ಅಥವಾ ಆ ಪ್ರದೇಶಕ್ಕೆ ಭೇಟಿ ನೀಡಿದ್ದರೆ ಅಂತಹ ಹಲವಾರು ಮರಗಳನ್ನು ನೀವು ನೋಡಿರಬಹುದು. ಆದರೆ, ಅದೇ ರೀತಿಯ ಮರಗಳು ಇನ್ನಿತರ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುವುದನ್ನು ನೀವು ಯಾವಾಗಲಾದರು ಗಮನಿಸಿರುವಿರ?

ಈ ಮರಗಳು ಅವುಗಳ ಆವಾಸದಲ್ಲಿರುವ ಪರಿಸ್ಥಿತಿಗಳಿಗೆ ಹೇಗೆ ಹೊಂದಿಕೊಂಡಿವೆ? ಈ ಮರಗಳು ಸಾಮಾನ್ಯವಾಗಿ ಶಂಖದ ಆಕಾರದಲ್ಲಿದ್ದು, ಅವುಗಳಲ್ಲಿ ಓರೆಯಾಗಿರುವ ರೆಂಬೆಗಳಿರುತ್ತವೆ. ಕೆಲವು ಮರಗಳ ಎಲೆಗಳು ಸೂಜಿಯಾಕಾರದಲ್ಲಿದ್ದು, ಇವು ಮಳೆಯ ನೀರು ಮತ್ತು ಮಂಜಿನ ಹನಿಗಳು ಸುಲಭವಾಗಿ ಜಾರಲು ಸಹಾಯ ಮಾಡುತ್ತವೆ. ಈ ಮರಗಳಿಗಿಂತ ಭಿನ್ನವಾದ ಆಕಾರವುಳ್ಳ ಮರಗಳೂ ಕೂಡ ಪರ್ವತ ಪ್ರದೇಶಗಳಲ್ಲಿ ಇರಬಹುದು. ಪರ್ವತ ಪ್ರದೇಶದಲ್ಲಿ ಬದುಕಲು ಅವುಗಳಲ್ಲಿ ಬೇರೆ ಬೇರೆ ರೀತಿಯ ಹೊಂದಾಣಿಕೆಗಳು ಇರಬಹುದು.

ಪರ್ವತ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳೂ ಕೂಡ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಂಡಿರುತ್ತವೆ (ಚಿತ್ರ 9.7). ತಮ್ಮ ದೇಹವನ್ನು ಶೀತದಿಂದ ರಕ್ಷಿಸಿಕೊಳ್ಳಲು, ಅವು ದಪ್ಪವಾದ ಚರ್ಮ ಅಥವಾ ತುಪ್ಪಟ ಹೊಂದಿರುತ್ತವೆ. ಉದಾಹರಣೆಗೆ, ಚಮರಿಮೃಗಗಳಲ್ಲಿ ದೇಹವನ್ನು ಬೆಚ್ಚಗಿಡಲು ಉದ್ದನೆಯ ಕೂದಲುಗಳು ಇರುತ್ತವೆ. ಪಾದಗಳು ಮತ್ತು ಕಾಲ್ಬೆರಳುಗಳನ್ನು ಒಳಗೊಂಡು ಹಿಮಚಿರತೆಯ ದೇಹದ ಮೇಲೆ ದಪ್ಪನಾದ ತುಪ್ಪಟ ಇರುತ್ತದೆ. ಇದು ಹಿಮದ ಮೇಲೆ ಚಲಿಸುವಾಗ ತುಪ್ಪಟ ಅದರ ಪಾದಗಳನ್ನು ಶೀತದಿಂದ ರಕ್ಷಿಸುತ್ತದೆ. ಜಾರು ಕಲ್ಲು ಬಂಡೆಗಳಿರುವ ಪರ್ವತಗಳ ಮೇಲಕ್ಕೆ ಓಡಲು ಪರ್ವತ ಮೇಕೆಯಲ್ಲಿ ಬಲವಾದ ಗೊರಸು (hooves)ಗಳು ಇರುತ್ತವೆ.

ಪರ್ವತ ಪ್ರದೇಶಗಳಲ್ಲಿ ನಾವು ಮೇಲೆ ಹೋದಂತೆಲ್ಲ ಸುತ್ತಲಿನ ಪರಿಸರ ಬದಲಾಗುತ್ತಾ ಹೋಗುತ್ತದೆ ಹಾಗೂ ಬೇರೆ ಬೇರೆ ಎತ್ತರದ ಪ್ರದೇಶದಲ್ಲಿ ಬೇರೆ ಬೇರೆ ರೀತಿಯ ಹೊಂದಾಣಿಕೆಗಳನ್ನು ಕಾಣುತ್ತೇವೆ.

ಹುಲ್ಲುಗಾವಲುಗಳು

ಕಾಡು ಅಥವಾ ಹುಲ್ಲುಗಾವಲು ಪ್ರದೇಶಗಳಲ್ಲಿ ಸಿಂಹ ವಾಸವಾಗಿರುತ್ತದೆ ಮತ್ತು ಇದು ಜಿಂಕೆಯಂತಹ ಪ್ರಾಣಿಗಳನ್ನು ಬೇಟೆಯಾಡಿ ಕೊಲ್ಲುವಂತಹ ಬಲಿಷ್ಠ ಪ್ರಾಣಿ. ಇದರ ಬಣ್ಣ ತಿಳಿಕಂದು. ಸಿಂಹ ಮತ್ತು ಜಿಂಕೆಯ ಚಿತ್ರಗಳನ್ನು ಗಮನಿಸಿ (ಚಿತ್ರ 9.8). ಈ ಎರಡೂ ಪ್ರಾಣಿಗಳ ಮುಖದಲ್ಲಿ ಕಣ್ಣುಗಳು ಎಲ್ಲಿವೆ? ಅವು ಮುಖದ ಮುಂಭಾಗದಲ್ಲಿವೆಯೊ ಅಥವಾ ಪಾಶ್ರ್ವಭಾಗದಲ್ಲಿವೆಯೊ? ಒಳಭಾಗಕ್ಕೆ ಸರಿಯುವಂತಹ ಉದ್ದನೆಯ ಉಗುರುಗಳು ಸಿಂಹಗಳ ಮುಂಭಾಗದ ಕಾಲುಗಳಲ್ಲಿವೆ. ಈ ಲಕ್ಷಣಗಳು ಸಿಂಹ ಬದುಕುಳಿಯಲು ಯಾವ ರೀತಿಯಲ್ಲಾದರೂ ಸಹಾಯಕವೆ? ಸಿಂಹದ ತಿಳಿಕಂದು ಬಣ್ಣವು ಒಣ ಹುಲ್ಲುಗಾವಲಿನಲ್ಲಿ ಅವಿತುಕೊಂಡು ತಾನು ತಿನ್ನುವ ಪ್ರಾಣಿಯನ್ನು ಬೇಟೆಯಾಡಲು ಸಹಾಯಕ. ಬೇಟೆಯಾಡಬೇಕಾದ ಪ್ರಾಣಿಯಿರುವ ಸ್ಥಳವನ್ನು ಸರಿಯಾಗಿ ತಿಳಿಯಲು ಮುಖದ ಮುಂಭಾಗದಲ್ಲಿರುವ ಕಣ್ಣುಗಳು ನೆರವಾಗುತ್ತವೆ.

ಅರಣ್ಯ ಮತ್ತು ಹುಲ್ಲುಗಾವಲುಗಳಲ್ಲಿ ವಾಸಿಸುವ ಮತ್ತೊಂದು ಪ್ರಾಣಿ ಜಿಂಕೆ. ಕಾಡಿನಲ್ಲಿ ಸಿಗುವ ಗಡಸು ಗಿಡಗಂಟೆಗಳನ್ನು ಅಗಿಯಲು ಇದರಲ್ಲಿ ಗಟ್ಟಿಯಾದ ಹಲ್ಲುಗಳಿವೆ. ಸಿಂಹದಂತಹ ಭಕ್ಷಕ ಪ್ರಾಣಿಗಳ ಸುಳಿವನ್ನು ತಿಳಿಯುವ ಆವಶ್ಯಕತೆ ಜಿಂಕೆಗಿದ್ದು, ಅವುಗಳಿಗೆ ಆಹಾರವಾಗಿ ಸಿಗದೆ, ಅವುಗಳಿಂದ ತಪ್ಪಿಸಿಕೊಂಡು ಓಡಿ ಹೋಗುವುದೂ ಅವಶ್ಯಕ. ಭಕ್ಷಕ ಪ್ರಾಣಿಗಳ ಚಲನವಲನಗಳನ್ನು ಆಲಿಸಲು ಇದಕ್ಕೆ ಉದ್ದನೆಯ ಕಿವಿಗಳಿವೆ. ಮುಖದ ಪಾಶ್ರ್ವಭಾಗದಲ್ಲಿರುವ ಕಣ್ಣುಗಳು ಎಲ್ಲ ದಿಕ್ಕುಗಳಲ್ಲೂ ನೋಡಿ ಅಪಾಯದ ಸುಳಿವನ್ನು ತಿಳಿಯಲು ಅನುವು ಮಾಡುತ್ತವೆ. ಭಕ್ಷಕ ಪ್ರಾಣಿಗಳಿಂದ ತಪ್ಪಿಸಿಕೊಂಡು ಓಡಲು ಜಿಂಕೆಯ ವೇಗವು ಸಹಾಯಕ.

ಸಿಂಹ, ಜಿಂಕೆ ಅಥವಾ ಇತರೆ ಪ್ರಾಣಿಗಳು ಮತ್ತು ಸಸ್ಯಗಳು ತಮ್ಮ ಆವಾಸದಲ್ಲಿ ಬದುಕಲು ಇನ್ನೂ ಹಲವು ಲಕ್ಷಣಗಳಿವೆ.

ಕೆಲವು ಜಲ ಆವಾಸಗಳು
ಸಾಗರಗಳು

ಸಮುದ್ರದಲ್ಲಿ ವಾಸಿಸಲು ಮೀನುಗಳು ಹೇಗೆ ಹೊಂದಾಣಿಕೆ ಮಾಡಿಕೊಂಡಿವೆ ಎಂಬುದನ್ನು ಈಗಾಗಲೆ ನಾವು ಚರ್ಚಿಸಿದ್ದೇವೆ. ಹಲವು ಬೇರೆ ಜಲಚರ ಪ್ರಾಣಿಗಳು ನೀರಿನಲ್ಲಿ ವೇಗವಾಗಿ ಚಲಿಸಲು ದೋಣಿಯಾಕಾರದ ದೇಹವನ್ನು ಹೊಂದಿವೆ. ಸಮುದ್ರದಲ್ಲಿ ವಾಸಿಸುವ ಕೆಲವು ಪ್ರಾಣಿಗಳಾದ ಸ್ಕ್ವಿಡ್ ಮೀನುಗಳು (squids) ಮತ್ತು ಅಷ್ಟಪಾದಿ ಮೃದ್ವಂಗಿ (ಆಕ್ಟೊಪಸ್)ಗಳು ದೋಣಿಯಾಕಾರದಲ್ಲಿಲ್ಲ. ಅವುಗಳು ಸಾಗರದ ಆಳದಲ್ಲಿ ವಾಸಿಸುತ್ತಿದ್ದು, ತಮ್ಮೆಡೆಗೆ ಬರುವ ಪ್ರಾಣಿಗಳನ್ನು ಹಿಡಿದು ತಿನ್ನುತ್ತವೆ. ಆದರೆ ಅವುಗಳು ನೀರಿನಲ್ಲಿ ಚಲಿಸಬೇಕಾದರೆ ತಮ್ಮ ದೇಹವನ್ನು ದೋಣಿಯಾಕಾರದಂತೆ ಮಾಡಿಕೊಳ್ಳುತ್ತವೆ. ನೀರಿನಲ್ಲಿ ಕರಗಿರುವ ಆಕ್ಸಿಜನ್‍ಅನ್ನು ಉಸಿರಾಡಲು ಸಹಾಯ ಮಾಡುವ ಕಿವಿರುಗಳು ಈ ಪ್ರಾಣಿಗಳಲ್ಲಿವೆ.

ಕೆಲವು ಜಲಚರ ಪ್ರಾಣಿಗಳಾದ ಡಾಲ್ಫಿನ್ ಮತ್ತು ತಿಮಿಂಗಿಲಗಳಲ್ಲಿ ಕಿವಿರುಗಳು ಇರುವುದಿಲ್ಲ. ತಲೆಯ ಮೇಲ್ಭಾಗದಲ್ಲಿರುವ ತಮ್ಮ ಮೂಗಿನ ಹೊಳ್ಳೆಗಳು (nostrils) ಅಥವಾ ಊದುರಂಧ್ರಗಳ (blowholes) ಮೂಲಕ ಅವು ಉಸಿರಾಡುತ್ತವೆ. ಅವು ನೀರಿನ ಮೇಲ್ಮೈ ಬಳಿ ಈಜುವಾಗ ವಾತಾವರಣದ ಗಾಳಿಯನ್ನು ಉಸಿರಾಡಲು ಈ ರಂಧ್ರಗಳು ಅನುವು ಮಾಡಿಕೊಡುತ್ತವೆ. ಈ ಪ್ರಾಣಿಗಳು ಬಹಳ ಸಮಯದವರೆಗೆ ನೀರಿನೊಳಗಿದ್ದು, ಉಸಿರಾಡದೆ ಇರಬಲ್ಲವು. ಉಸಿರಾಡಲು ಆಗಾಗ್ಗೆ ನೀರಿನ ಮೇಲ್ಮೈಗೆ ಇವುಗಳು ಬರುತ್ತವೆ. ಡಾಲ್ಫಿನ್‍ಗಳ ಆಸಕ್ತಿಯುತ ಚಟುವಟಿಕೆಯನ್ನು ದೂರದರ್ಶನ ಕಾರ್ಯಕ್ರಮದಲ್ಲಿ ಅಥವಾ ಸಾಗರದ ಜೀವನ ಕುರಿತ ಸಿನಿಮಾಗಳಲ್ಲಿ ಯಾವಾಗಲಾದರು ನೀವು ನೋಡಿದ್ದೀರ?

ಕೆರೆಗಳು ಮತ್ತು ಸರೋವರಗಳು

ಕೆರೆ, ನದಿ, ಸರೋವರಗಳಲ್ಲಿ ಮತ್ತು ಕೆಲವು ಚರಂಡಿಗಳಲ್ಲಿಯೂ ಬೆಳೆಯುವ ಸಸ್ಯಗಳನ್ನು ನೀವು ನೋಡಿದ್ದೀರ? ಸಾಧ್ಯವಾದರೆ ಶಿಕ್ಷಕರ ಜೊತೆ ಹತ್ತಿರದ ಕೆರೆಗೆ ಪ್ರವಾಸ ಕೈಗೊಂಡು, ಅಲ್ಲಿ ಕಂಡುಬರುವ ವಿವಿಧ ಸಸ್ಯಗಳನ್ನು ವೀಕ್ಷಿಸಲು ಪ್ರಯತ್ನಿಸಿ. ಈ ಸಸ್ಯಗಳ ಎಲೆ, ಬೇರು ಮತ್ತು ಕಾಂಡಗಳನ್ನು ವೀಕ್ಷಿಸಿ.

ಕೆಲವು ಸಸ್ಯಗಳು ತಮ್ಮ ಬೇರುಗಳನ್ನು ನೀರಿನ ಕೆಳಗೆ ಮಣ್ಣಿನಲ್ಲಿ ಬಂಧಿಸಿರುತ್ತವೆ (ಚಿತ್ರ 9.9). ಸಾಮಾನ್ಯವಾಗಿ ಭೂವಾಸಿ ಸಸ್ಯಗಳಲ್ಲಿ ನೀರು ಮತ್ತು ಪೋಷಕಗಳನ್ನು ಮಣ್ಣಿನಿಂದ ಹೀರಿಕೊಳ್ಳುವಲ್ಲಿ ಬೇರುಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಆದರೆ ಜಲವಾಸಿ ಸಸ್ಯಗಳಲ್ಲಿ ಬೇರುಗಳು ಚಿಕ್ಕದಾಗಿದ್ದು, ಸಸ್ಯವನ್ನು ಸ್ಥಳದಲ್ಲಿ ಹಿಡಿದಿಡುವುದೆ ಅವುಗಳ ಮುಖ್ಯ ಕಾರ್ಯ.

ಈ ಸಸ್ಯಗಳ ಕಾಂಡಗಳು ಉದ್ದ, ಟೊಳ್ಳು ಮತ್ತು ಹಗುರ. ಕಾಂಡಗಳು ನೀರಿನ ಮೇಲ್ಮೈತನಕ ಬೆಳೆದರೆ, ಎಲೆಗಳು ಮತ್ತು ಹೂಗಳು ನೀರಿನ ಮೇಲೆ ತೇಲುತ್ತವೆ.

ಕೆಲವು ಜಲವಾಸಿ ಸಸ್ಯಗಳು ನೀರಿನಲ್ಲಿ ಮುಳುಗಿರುತ್ತವೆ. ಈ ರೀತಿಯ ಸಸ್ಯಗಳ ಎಲ್ಲಾ ಭಾಗಗಳು ನೀರಿನೊಳಗೆ ಇರುತ್ತವೆ. ಈ ಕೆಲವು ಸಸ್ಯಗಳಲ್ಲಿ ಕಿರಿದಾದ ಹಾಗೂ ತೆಳ್ಳುವಾದ ರಿಬ್ಬನ್ ರೀತಿಯ ಎಲೆಗಳಿರುತ್ತವೆ. ಹರಿಯುವ ನೀರಿನಲ್ಲಿ ಇವುಗಳು ಬಾಗುತ್ತವೆ. ಸಂಪೂರ್ಣವಾಗಿ ಮುಳುಗಿರುವ ಇನ್ನೂ ಕೆಲವು ಸಸ್ಯಗಳಲ್ಲಿ ಎಲೆಗಳು ಅತಿಯಾಗಿ ವಿಭಜನೆಯಾಗಿರುತ್ತವೆ. ಇದರಿಂದ ಎಲೆಗಳಿಗೆ ಯಾವುದೇ ರೀತಿಯ ಹಾನಿ ಮಾಡದೆ ನೀರು ಎಲೆಗಳ ಮೂಲಕ ಸರಾಗವಾಗಿ ಹರಿಯಬಲ್ಲದು.

ಸಾಮಾನ್ಯವಾಗಿ ಕಪ್ಪೆಗಳು ಕೆರೆಗಳಲ್ಲಿ ವಾಸಿಸುತ್ತವೆ. ಕಪ್ಪೆಗಳು ನೀರಿನ ಒಳಗು ಮತ್ತು ನೆಲದ ಮೇಲು ಜೀವಿಸಬಲ್ಲವು. ಅವುಗಳ ಹಿಂಗಾಲುಗಳು ಗಟ್ಟಿಯಾಗಿದ್ದು, ನೆಗೆಯಲು ಸಹಾಯಕವಾಗಿವೆ. ನೀರಿನಲ್ಲಿ ಈಜಲು ಸಹಾಯಕವಾಗುವ ಜಾಲಪಾದಗಳು ಕಪ್ಪೆಗಳಲ್ಲಿವೆ.

ವಿವಿಧ ಆವಾಸಗಳಲ್ಲಿ ವಾಸಿಸುವ ವೈವಿಧ್ಯಮಯ ಜೀವಿಗಳಲ್ಲಿ ಕೆಲವೇ ಕೆಲವು ಸಾಮಾನ್ಯ ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಅಧ್ಯಾಯ 7ರಲ್ಲಿ ಸೂಚಿಸಿದ ಚಟುವಟಿಕೆಗಳಲ್ಲಿ ಒಂದು ಭಾಗವಾದ ಸಸ್ಯಗಳ ಹರ್ಬೇರಿಯಮ್ ಸಿದ್ಧಪಡಿಸುವಾಗ, ನಿಮ್ಮ ಸುತ್ತಮುತ್ತಲಿರುವ ಸಸ್ಯಗಳಲ್ಲಿ ವೈವಿಧ್ಯವನ್ನು ನೀವು ಗಮನಿಸಿರಬಹುದು. ಭೂಮಿಯ ಎಲ್ಲಾ ಪ್ರದೇಶಗಳಲ್ಲಿರುವ ಸಸ್ಯಗಳ ಎಲೆಗಳ ಹರ್ಬೇರಿಯಮ್‍ನಲ್ಲಿ ನೀವು ಕಾಣಬಹುದಾದ ವೈವಿಧ್ಯವನ್ನು ಊಹಿಸಿ!

9.4 ಜೀವಿಗಳ ಲಕ್ಷಣಗಳು

ವಿವಿಧ ಆವಾಸಗಳ ಮೂಲಕ ನಾವು ಪಯಣಿಸಿ, ಹಲವು ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ಚರ್ಚಿಸಿದ್ದೇವೆ. ವಿವಿಧ ಪರಿಸರಗಳಲ್ಲಿ ಕಾಣಸಿಗುವ ಸಸ್ಯಗಳು, ಪ್ರಾಣಿಗಳು ಹಾಗೂ ವಸ್ತುಗಳ ಪಟ್ಟಿಯನ್ನು ಚಟುವಟಿಕೆ 1ರಲ್ಲಿ ಮಾಡಿದ್ದೇವೆ. ಒಂದು ವೇಳೆ ಸ್ವಲ್ಪ ಸಮಯ ಆಲೋಚಿಸಬಹುದಾದರೆ, ನಾವು ಪಟ್ಟಿ ಮಾಡಿರುವ ಉದಾಹರಣೆಗಳಲ್ಲಿ ಜೀವಿಗಳು ಯಾವುವು? ಕಾಡಿನಲ್ಲಿರುವ ಕೆಲವು ಉದಾಹರಣೆಗಳ ಬಗ್ಗೆ ನಾವು ಆಲೋಚಿಸೋಣ. ಕಾಡಿನಲ್ಲಿರುವ ಕೆಲವು ಅಂಶಗಳೆಂದರೆ ಮರಗಳು, ಬಳ್ಳಿಗಳು, ಸಣ್ಣ ಮತ್ತು ದೊಡ್ಡ ಪ್ರಾಣಿಗಳು, ಪಕ್ಷಿಗಳು, ಹಾವುಗಳು, ಕೀಟಗಳು, ಕಲ್ಲುಬಂಡೆಗಳು, ಮಣ್ಣು, ನೀರು, ಗಾಳಿ, ಒಣ ಎಲೆಗಳು, ಸತ್ತ ಪ್ರಾಣಿಗಳು, ಅಣಬೆಗಳು ಹಾಗೂ ಹಾವಸೆಗಳು (mosses). ಇವುಗಳಲ್ಲಿ ಜೀವಿಗಳು ಯಾವುವು?

ಈ ಕ್ಷಣದಲ್ಲಿ ನಿಮ್ಮ ಸುತ್ತಲಿನ ಪರಿಸರದಲ್ಲಿ ಕಾಣುವ ಅಂಶಗಳ ಬಗ್ಗೆ ಯೋಚಿಸಿ ಹಾಗೂ ಅವುಗಳನ್ನು ಜೀವಿ ಮತ್ತು ನಿರ್ಜೀವಿಗಳನ್ನಾಗಿ ವಿಂಗಡಿಸಿ. ಕೆಲವು ಸಂದರ್ಭಗಳಲ್ಲಿ ಇದನ್ನು ತಿಳಿಯುವುದು ತುಂಬಾ ಸುಲಭ. ಉದಾಹರಣೆಗೆ, ನಮ್ಮ ಮನೆಗಳಲ್ಲಿರುವ ಕುರ್ಚಿ ಅಥವಾ ಮೇಜು ನಿರ್ಜೀವಿಗಳು ಎಂದು ನಮಗೆ ತಿಳಿದಿದೆ. ಎಡ್ವರ್ಡ್ ಲೇರ್ (Edward Lear) ಬರೆದಿರುವ ಕಂಪ್ಲೀಟ್ ನಾನ್‍ಸೆನ್ಸ್ (Complete Nonsense) ಪದ್ಯವನ್ನು ಪಹೇಲಿ ಓದುತ್ತಿದ್ದಳು.

ಪಹೇಲಿ ಮತ್ತು ಬೂಝೊ ಈ ಪದ್ಯವನ್ನು ತುಂಬಾ ಹಾಸ್ಯಾಸ್ಪದವಾಗಿ ಕಾಣುತ್ತಾರೆ. ಏಕೆಂದರೆ ಕುರ್ಚಿ ಅಥವಾ ಮೇಜು ಜೀವಿಗಳಲ್ಲ ಮತ್ತು ಅವುಗಳು ಮಾತಾನಾಡುವುದಿಲ್ಲ ಅಥವಾ ನಡೆಯುವುದಿಲ್ಲ ಎಂದು ಅವರಿಗೆ ತಿಳಿದಿತ್ತು.

ಕುರ್ಚಿ, ಮೇಜು, ಕಲ್ಲು ಅಥವಾ ನಾಣ್ಯ ಇವುಗಳೆಲ್ಲವೂ ನಿರ್ಜೀವಿಗಳು. ಅದೇ ರೀತಿ ನಾವು ಮತ್ತು ಪ್ರಪಂಚದಲ್ಲಿರುವ ಎಲ್ಲಾ ಜನರು ಜೀವಿಗಳೆಂದು ತಿಳಿದಿದ್ದೇವೆ. ನಮ್ಮ ಸುತ್ತಲಿನ ಪರಿಸರದಲ್ಲಿರುವ ನಾಯಿ, ಬೆಕ್ಕು, ಕೋತಿ, ಅಳಿಲು, ಕೀಟ ಮತ್ತು ಇನ್ನಿತರ ಪ್ರಾಣಿಗಳಿಗೆ ಜೀವವಿರುವುದನ್ನು ಸಹ ನಾವು ನೋಡಿದ್ದೇವೆ.

ಯಾವುದಾದರೂ ಒಂದು ಘಟಕವು ಜೀವಿ ಎಂದು ನಮಗೆ ಹೇಗೆ ಗೊತ್ತಾಗುತ್ತದೆ? ಹಲವು ಸಲ ಇದನ್ನು ನಿರ್ಧರಿಸುವುದು ಅಷ್ಟು ಸುಲಭವಲ್ಲ. ಸಸ್ಯಗಳು ಜೀವಿಗಳು ಎಂದು ನಮಗೆ ಹೇಳಿದ್ದಾರೆ. ಆದರೆ ಅವುಗಳು ನಾಯಿ ಅಥವಾ ಪಾರಿವಾಳದ ರೀತಿ ಚಲಿಸುವುದಿಲ್ಲ. ಮತ್ತೊಂದೆಡೆ ಕಾರು ಅಥವಾ ಬಸ್ಸು ಚಲಿಸಬಲ್ಲವಾದರೂ ಅವುಗಳನ್ನು ನಿರ್ಜೀವಿಗಳೆಂದೆ ಪರಿಗಣಿಸುತ್ತೇವೆ. ಕಾಲ ಕಳೆದಂತೆ ಸಸ್ಯ ಮತ್ತು ಪ್ರಾಣಿಗಳು ಬೆಳೆಯುವುದನ್ನು ಕಾಣುತ್ತೇವೆ. ಆದರೆ ಕೆಲವು ಸಲ ಆಕಾಶದಲ್ಲಿರುವ ಮೋಡಗಳು ಕೂಡ ಬೆಳೆಯುವ ಹಾಗೆ ಕಾಣುತ್ತವೆ. ಇದರರ್ಥ, ಮೋಡಗಳು ಜೀವಿಗಳೆಂದೆ? ಇಲ್ಲ! ಹಾಗಾದರೆ ಜೀವಿ ಮತ್ತು ನಿರ್ಜೀವಿಗಳ ನಡುವಿನ ವ್ಯತ್ಯಾಸವನ್ನು ಹೇಗೆ ಕಂಡುಕೊಳ್ಳುವಿರಿ? ನಿರ್ಜೀವಿಗಳಿಗಿಂತ ಭಿನ್ನವೆನಿಸುವ ಕೆಲವು ಸಾಮಾನ್ಯ ಲಕ್ಷಣಗಳೇನಾದರು ಜೀವಿಗಳಲ್ಲಿ ಇವೆಯೆ?

ಜೀವಿಗೆ ನೀವು ಒಂದು ಅದ್ಭುತ ಉದಾಹರಣೆ. ಒಂದು ನಿರ್ಜೀವಿಗಿಂತ ತುಂಬಾ ವಿಭಿನ್ನ ಎನ್ನುವುದಕ್ಕೆ ನೀವು ಹೊಂದಿರುವ ಲಕ್ಷಣಗಳಾವುವು? ನಿಮ್ಮ ನೋಟ್‍ಪುಸ್ತಕದಲ್ಲಿ ಅಂತಹ ಕೆಲವು ಲಕ್ಷಣಗಳನ್ನು ಪಟ್ಟಿ ಮಾಡಿ. ಪಟ್ಟಿ ಮಾಡಿರುವ ಲಕ್ಷಣಗಳನ್ನು ನೋಡಿ, ಪ್ರಾಣಿಗಳು ಮತ್ತು ಸಸ್ಯಗಳಲ್ಲಿಯೂ ಕಂಡುಬರುವಂತಹ ಈ ಲಕ್ಷಣಗಳನ್ನು ಗುರುತಿಸಿ.
ಬಹುಶಃ, ಎಲ್ಲ ಜೀವಿಗಳಲ್ಲಿಯೂ ಈ ಕೆಲವು ಲಕ್ಷಣಗಳು ಸಾಮಾನ್ಯ.

ಎಲ್ಲ ಜೀವಿಗಳಿಗೂ ಆಹಾರದ ಅಗತ್ಯವಿದೆಯೆ?

ಎಲ್ಲ ಜೀವಿಗಳಿಗೂ ಆಹಾರದ ಅಗತ್ಯವಿದೆ. ಪ್ರಾಣಿಗಳಿಗೆ ಮತ್ತು ನಮಗೆ ಅದು ಹೇಗೆ ಅವಶ್ಯಕ ಎಂಬುದನ್ನು ಅಧ್ಯಾಯ 1 ಮತ್ತು 2ರಲ್ಲಿ ಕಲಿತಿದ್ದೇವೆ. ಹಾಗೆಯೆ ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ ಎಂಬುದನ್ನೂ ಕಲಿತಿದ್ದೇವೆ. ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಇತರೆ ಪ್ರಾಣಿಗಳು ಅಥವಾ ಸಸ್ಯಗಳ ಮೇಲೆ ಅವಲಂಬಿತವಾಗಿವೆ.

ಜೀವಿಗಳು ಬೆಳೆಯಲು ಅಗತ್ಯವಾದ ಶಕ್ತಿಯನ್ನು ಆಹಾರವು ಕೊಡುತ್ತದೆ. ಅಷ್ಟೇ ಅಲ್ಲದೆ, ಜೀವಿಗಳಿಗೆ ತಮ್ಮ ದೇಹದಲ್ಲಿ ನಡೆಯುವ ಇನ್ನಿತರ ಕ್ರಿಯೆಗಳಿಗೂ ಶಕ್ತಿಯ ಅಗತ್ಯತೆ ಇರುತ್ತದೆ.

ಎಲ್ಲ ಜೀವಿಗಳೂ ಬೆಳವಣಿಗೆಯನ್ನು ತೋರಿಸುತ್ತವೆಯೆ?

ನಾಲ್ಕು ವರ್ಷದ ಹಿಂದೆ ನೀವು ಉಪಯೋಗಿಸುತ್ತಿದ್ದ ಕುರ್ತ ಈಗಲು ನಿಮಗೆ ಆಗುತ್ತದೆಯೆ? ಖಂಡಿತ ಈಗ ನೀವು ಅದನ್ನು ಹಾಕಿಕೊಳ್ಳಲು ಸಾಧ್ಯವಿಲ್ಲ. ಹೌದಲ್ಲವೆ? ಇತ್ತೀಚಿನ ವರ್ಷಗಳಲ್ಲಿ ನೀವು ಎತ್ತರವಾಗಿ ಬೆಳೆದಿರಬಹುದು. ನಿಮಗದು ಅರಿವಿಲ್ಲದಿರಬಹುದು. ಆದರೆ ನೀವು ಯಾವಾಗಲೂ ಬೆಳೆಯುತ್ತಿರುತ್ತೀರಿ ಹಾಗು ಇನ್ನೂ ಕೆಲವು ವರ್ಷಗಳಲ್ಲಿ ನೀವು ವಯಸ್ಕರಾಗುತ್ತೀರಿ (ಚಿತ್ರ 9.10).

All age categories

ಪ್ರಾಣಿಗಳ ಮರಿಗಳೂ ಕೂಡ ಬೆಳೆದು ಪ್ರೌಢಾವಸ್ಥೆ ತಲುಪುತ್ತವೆ. ನಾಯಿಮರಿಗಳು ಬೆಳೆದು ದೊಡ್ಡ ನಾಯಿಗಳಾಗಿರುವುದನ್ನು ನೀವು ನಿಜವಾಗಿಯು ಗಮನಿಸಿರಬಹುದು. ಮೊಟ್ಟೆಯಿಂದ ಬಂದ ಕೋಳಿ ಮರಿ ಬೆಳೆದು ಕೋಳಿ ಅಥವಾ ಹುಂಜವಾಗುತ್ತದೆ (ಚಿತ್ರ 9.11).

ಸಸ್ಯಗಳೂ ಬೆಳೆಯುತ್ತವೆ. ನಿಮ್ಮ ಸುತ್ತಮುತ್ತಲಿನ ನಿರ್ದಿಷ್ಟ ವಿಧದ ಕೆಲವು ಸಸ್ಯಗಳನ್ನು ನೋಡಿ. ಕೆಲವು ತುಂಬಾ ಚಿಕ್ಕದಾಗಿದ್ದು ಎಳೆಯದಾಗಿರುತ್ತವೆ. ಇನ್ನೂ ಕೆಲವು ಬೆಳೆದು ದೊಡ್ಡದಾಗಿರುತ್ತವೆ. ಅವೆಲ್ಲವು ಬೆಳವಣಿಗೆಯ ಬೇರೆ ಬೇರೆ ಹಂತಗಳಲ್ಲಿರಬಹುದು. ಕೆಲವು ದಿನಗಳ ಅಥವಾ ವಾರಗಳ ನಂತರ ಸಸ್ಯಗಳನ್ನು ವೀಕ್ಷಿಸಿ. ಅವುಗಳಲ್ಲಿ ಕೆಲವು ತಮ್ಮ ಗಾತ್ರದಲ್ಲಿ ಬೆಳೆದಿರುವುದನ್ನು ನೀವು ಕಾಣಬಹುದು. ಬೆಳವಣಿಗೆ ಎಲ್ಲ ಜೀವಿಗಳಲ್ಲಿಯೂ ಸಾಮಾನ್ಯ ಎಂದು ಕಾಣುತ್ತದೆ.
ನಿರ್ಜೀವಿಗಳು ಬೆಳವಣಿಗೆ ಹೊಂದುತ್ತವೆ ಎಂದು ನೀವು ಆಲೋಚಿಸುವಿರ?

ಎಲ್ಲ ಜೀವಿಗಳು ಉಸಿರಾಡುತ್ತವೆಯೆ?

ನಾವು ಉಸಿರಾಡದೆ ಬದುಕಲು ಸಾಧ್ಯವೆ? ನಾವು ಉಸಿರಾಡುವಾಗ ಹೊರಗಿನ ವಾತಾವರಣದಿಂದ ಗಾಳಿಯು ನಮ್ಮ ದೇಹದ ಒಳಗೆ ಹೋಗುತ್ತದೆ. ನಾವು ಉಸಿರು ಬಿಟ್ಟಾಗ ಗಾಳಿಯು ದೇಹದಿಂದ ಹೊರಕ್ಕೆ ಹೋಗುತ್ತದೆ. ಶ್ವಾಸೋಚ್ಛಾಸವು ಉಸಿರಾಟ ಕ್ರಿಯೆಯ ಒಂದು ಭಾಗ. ಈ ಪ್ರಕ್ರಿಯೆಯಲ್ಲಿ ನಾವು ಉಸಿರಾಡಿದ ಗಾಳಿಯಲ್ಲಿರುವ ಸ್ವಲ್ಪ ಆಕ್ಸಿಜನ್‍ಅನ್ನು ನಮ್ಮ ದೇಹ ಉಪಯೋಗಿಸುತ್ತದೆ ಮತ್ತು ಉತ್ಪತ್ತಿಯಾದ ಕಾರ್ಬನ್ ಡೈ ಆಕ್ಸೈಡನ್ನು ಉಸಿರಿನ ಮೂಲಕ ಹೊರಹಾಕುತ್ತೇವೆ.

ಪ್ರಾಣಿಗಳಾದ ಹಸು, ಎಮ್ಮೆ, ನಾಯಿ, ಬೆಕ್ಕುಗಳಲ್ಲಿಯು ಉಸಿರಾಟ ಕ್ರಿಯೆಯು ಮನುಷ್ಯರಲ್ಲಿ ನಡೆಯುವಂತೆಯೆ ನಡೆಯುತ್ತದೆ. ವಿಶ್ರಾಂತ ಸ್ಥಿತಿಯಲ್ಲಿರುವ ಈ ಯಾವುದಾದರೂ ಒಂದು ಪ್ರಾಣಿಯ ಉದರದ ಚಲನೆಯನ್ನು ಗಮನಿಸಿ. ಉದರದ ನಿಧಾನವಾದ ಚಲನೆಯು (ಏರಿಳಿತಗಳು) ಈ ಪ್ರಾಣಿಯು ಉಸಿರಾಡುತ್ತಿದೆ ಎಂದು ತೋರಿಸುತ್ತದೆ.

ಉಸಿರಾಟ ಎಲ್ಲ ಜೀವಿಗಳಿಗೂ ಅತ್ಯವಶ್ಯ. ಈ ಉಸಿರಾಟದ ಮೂಲಕವೇ ಜೀವಿಗಳು ತಾವು ತಿಂದ ಆಹಾರದಿಂದ ಅಂತಿಮವಾಗಿ ಶಕ್ತಿಯನ್ನು ಪಡೆಯುತ್ತವೆ.

ಉಸಿರಾಟ ಕ್ರಿಯೆಯ ಒಂದು ಭಾಗವಾದ ಅನಿಲಗಳ ವಿನಿಮಯಕ್ಕೆ ಪ್ರಾಣಿಗಳಲ್ಲಿ ವಿಭಿನ್ನ ವಿಧಾನಗಳಿರಬಹುದು. ಉದಾಹರಣೆಗೆ, ಎರೆಹುಳುಗಳು ಅವುಗಳ ಚರ್ಮದ ಮೂಲಕ ಉಸಿರಾಡುತ್ತವೆ. ನೀರಿನಲ್ಲಿ ಕರಗಿರುವ ಆಕ್ಸಿಜನ್ ಅನ್ನು ಉಪಯೋಗಿಸಲು ಮೀನುಗಳಲ್ಲಿ ಕಿವಿರುಗಳಿರುತ್ತವೆ ಎಂಬುದನ್ನು ನಾವು ಈಗಾಗಲೆ ಕಲಿತಿದ್ದೇವೆ. ನೀರಿನಲ್ಲಿ ಕರಗಿರುವ ಆಕ್ಸಿಜನ್‍ಅನ್ನು ಕಿವಿರುಗಳು ಹೀರುತ್ತವೆ.

ಸಸ್ಯಗಳೂ ಉಸಿರಾಡುತ್ತವೆಯೆ? ಸಸ್ಯಗಳಲ್ಲಿ ಅನಿಲಗಳ ವಿನಿಮಯ ಮುಖ್ಯವಾಗಿ ಎಲೆಗಳ ಮೂಲಕ ನಡೆಯುತ್ತದೆ. ಎಲೆಗಳು ತಮ್ಮಲ್ಲಿರುವ ರಂಧ್ರಗಳ ಮೂಲಕ ಗಾಳಿಯನ್ನು ತೆಗೆದುಕೊಂಡು ಅದರಲ್ಲಿರುವ ಆಕ್ಸಿಜನ್ ಅನ್ನು ಉಪಯೋಗಿಸಿಕೊಳ್ಳುತ್ತವೆ. ಅವುಗಳು ಕಾರ್ಬನ್ ಡೈ ಆಕ್ಸೈಡನ್ನು ಗಾಳಿಗೆ ಬಿಡುತ್ತವೆ.

ಸೂರ್ಯನ ಬೆಳಕಿನಲ್ಲಿ ಸಸ್ಯಗಳು ತಮ್ಮ ಆಹಾರವನ್ನು ತಯಾರಿಸಿಕೊಳ್ಳಲು ಗಾಳಿಯಲ್ಲಿರುವ ಕಾರ್ಬನ್ ಡೈ ಆಕ್ಸೈಡನ್ನು ಉಪಯೋಗಿಸುತ್ತವೆ ಎಂದು ಕಲಿತೆವು. ಈ ಕ್ರಿಯೆಯಲ್ಲಿ ಆಕ್ಸಿಜನ್ ಅನ್ನು ಬಿಡುತ್ತವೆ. ಸಸ್ಯಗಳು ಆಹಾರ ತಯಾರಿಸುವ ಕ್ರಿಯೆಯ ಮೂಲಕ ಬಿಡುಗಡೆ ಮಾಡುವ ಆಕ್ಸಿಜನ್ ಪ್ರಮಾಣವು ಅವುಗಳು ಉಸಿರಾಟ ಕ್ರಿಯೆಯಲ್ಲಿ ಉಪಯೋಗಿಸುವ ಆಕ್ಸಿಜನ್ ಪ್ರಮಾಣಕ್ಕಿಂತ ಹೆಚ್ಚಾಗಿರುತ್ತದೆ. ಸಸ್ಯಗಳಲ್ಲಿ ಉಸಿರಾಟವು ಹಗಲು ಮತ್ತು ರಾತ್ರಿ ನಡೆಯುತ್ತದೆ.

ಎಲ್ಲ ಜೀವಿಗಳು ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ನೀಡುತ್ತವೆಯೆ?

ನೀವು ಬರಿಗಾಲಿನಲ್ಲಿ ನಡೆಯುವಾಗ ಚೂಪಾದ ಮುಳ್ಳಿನಂತಹ ವಸ್ತುವಿನ ಮೇಲೆ ಆಕಸ್ಮಿಕವಾಗಿ ಕಾಲಿಟ್ಟರೆ ಯಾವ ರೀತಿ ಪ್ರತಿಕ್ರಿಯಿಸುವಿರಿ? ನಿಮಗಿಷ್ಟವಾದ ಆಹಾರವನ್ನು ನೋಡಿದಾಗ ಅಥವಾ ಅದರ ಬಗ್ಗೆ ಆಲೋಚಿಸಿದಾಗ ನಿಮಗೇನನಿಸುತ್ತದೆ? ಕತ್ತಲಿನಿಂದ ತೀಕ್ಷ್ಣವಾದ ಸೂರ್ಯನ ಬೆಳಕಿನೆಡೆಗೆ ಇದ್ದಕ್ಕಿದ್ದಂತೆ ನೀವು ಹೋದಾಗ ಏನಾಗುತ್ತದೆ? ಬದಲಾದ ತೀಕ್ಷ್ಣ ಪರಿಸರಕ್ಕೆ ಹೊಂದಿಕೊಳ್ಳುವವರೆಗೆ ನಿಮ್ಮ ಕಣ್ಣುಗಳು ಸ್ವಯಂಚಾಲಿತವಾಗಿ ತಾವಾಗಿಯೇ ಸ್ವಲ್ಪಕಾಲ ಮುಚ್ಚಿಕೊಳ್ಳುತ್ತವೆ. ನಿಮಗಿಷ್ಟವಾದ ಆಹಾರ, ತೀಕ್ಷ್ಣ ಬೆಳಕು ಮತ್ತು ಮುಳ್ಳು-ಇಂತಹ ಸನ್ನಿವೇಶಗಳು ನಿಮ್ಮ ಸುತ್ತಲಿನ ಪರಿಸರದಲ್ಲಿ ಆಗುವ ಬದಲಾವಣೆಗಳಿಗೆ ಕೆಲವು ಉದಾಹರಣೆಗಳು. ನಾವೆಲ್ಲರೂ ಇಂತಹ ಬದಲಾವಣೆಗಳಿಗೆ ತಕ್ಷಣ ಪ್ರತಿಕ್ರಿಯಿಸುತ್ತೇವೆ. ನಾವು ಪ್ರತಿಕ್ರಿಯೆ ತೋರಿಸುವಂತೆ ಮಾಡುವ ನಮ್ಮ ಸುತ್ತಮುತ್ತಲಿನ ಬದಲಾವಣೆಗಳಿಗೆ ಪ್ರಚೋದನೆಗಳು (stimuli) ಎನ್ನುತ್ತಾರೆ.

ಇತರ ಪ್ರಾಣಿಗಳು ಕೂಡ ಪ್ರಚೋದನೆಗಳಿಗೆ ತಕ್ಕ ಪ್ರತಿಕ್ರಿಯೆ ನೀಡುತ್ತವೆಯೆ? ಪ್ರಾಣಿಗಳಿಗೆ ಆಹಾರವನ್ನು ನೀಡಿದಾಗ ಅವುಗಳ ವರ್ತನೆಯನ್ನು ಗಮನಿಸಿ. ಅವುಗಳು ಆಹಾರವನ್ನು ನೋಡಿದ ಕೂಡಲೆ ಸಕ್ರಿಯವಾಗುವುದನ್ನು ಕಾಣುತ್ತೀರ? ನೀವು ಒಂದು ಪಕ್ಷಿಯ ಕಡೆ ಚಲಿಸಿದಾಗ ಅದು ಏನು ಮಾಡುತ್ತದೆ? ಕಾಡು ಪ್ರಾಣಿಗಳ ಕಡೆಗೆ ತೀಕ್ಷ್ಣವಾದ ಬೆಳಕು ಬಿದ್ದಾಗ ಅವುಗಳು ಓಡಿ ಹೋಗುತ್ತವೆ. ಅದೇ ರೀತಿ ರಾತ್ರಿಯ ವೇಳೆ ಅಡುಗೆ ಮನೆ ದೀಪವನ್ನು ಸ್ವಿಚ್ ಅನ್ ಮಾಡಿದ ಕೂಡಲೇ ಜಿರಲೆಗಳು ತಾವು ಅವಿತುಕೊಳ್ಳುವ ಸ್ಥಳದ ಕಡೆಗೆ ಓಡುತ್ತವೆ. ಪ್ರಾಣಿಗಳು ಪ್ರಚೋದನೆಗಳಿಗೆ ನೀಡುವ ಪ್ರತಿಕ್ರಿಯೆಗಳಿಗೆ ಮತ್ತಷ್ಟು ಉದಾಹರಣೆಗಳನ್ನು ನೀವು ಕೊಡಬಲ್ಲಿರ?

ಸಸ್ಯಗಳು ಕೂಡ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ನೀಡುತ್ತವೆಯೆ? ಕೆಲವು ಸಸ್ಯಗಳ ಹೂಗಳು ರಾತ್ರಿಯಲ್ಲಿ ಮಾತ್ರ ಅರಳುತ್ತವೆ. ಇನ್ನೂ ಕೆಲವು ಸಸ್ಯಗಳಲ್ಲಿ ಸೂರ್ಯಸ್ತವಾದ ನಂತರ ಹೂಗಳು ಮುದುಡುತ್ತವೆ. ಮಿಮೋಸ (ಮುಟ್ಟಿದರೆ ಮುನಿ)ದಂತಹ ಕೆಲವು ಸಸ್ಯಗಳನ್ನು ಯಾರಾದರೂ ಸ್ಪರ್ಶಿಸಿದರೆ ಅದರ ಎಲೆಗಳು ಮುದುಡಿಕೊಳ್ಳುತ್ತವೆ. ಸಸ್ಯಗಳು ತಮ್ಮ ಸುತ್ತಲಿನ ಪರಿಸರದ ಬದಲಾವಣೆಗಳಿಗೆ ಪ್ರತಿಕ್ರಿಯಿಸುವುದಕ್ಕೆ ಇವು ಕೆಲವು ಉದಾಹರಣೆಗಳು.

ಚಟುವಟಿಕೆ 4

ಚಿತ್ರ 9.12 ಸಸ್ಯವು ಬೆಳಕಿಗೆ ಪ್ರತಿಕ್ರಿಯಿಸುತ್ತದೆ ಹಗಲಿನಲ್ಲಿ ಬೆಳಕು ಬರುವ ಕೊಠಡಿಯೊಂದರ ಕಿಟಕಿಯ ಸಮೀಪ ಕುಂಡ ಸಹಿತ ಸಸ್ಯವನ್ನು ಇಡಿ (ಚಿತ್ರ 9.12). ಕೆಲವು ದಿನಗಳವರೆಗೆ ಈ ಸಸ್ಯಕ್ಕೆ ನೀರು ಹಾಕುವುದನ್ನು ಮುಂದುವರೆಸಿ. ಹೊರಗಡೆಯಿರುವ ಇತರ ಸಸ್ಯಗಳಂತೆ ಈ ಸಸ್ಯವು ನೇರವಾಗಿ ಬೆಳೆಯುವುದೆ? ಒಂದು ವೇಳೆ ನೇರವಾಗಿ ಬೆಳೆಯದೆ ಹೋದರೆ ಅದು ಯಾವ ದಿಕ್ಕಿನಲ್ಲಿ ಬಾಗುತ್ತದೆ ಎಂಬುದನ್ನು ಗುರುತಿಸಿ. ಇದನ್ನು ನೀವು ಒಂದು ಪ್ರಚೋದನೆಗೆ ಪ್ರತಿಕ್ರಿಯೆ ಎಂದು ಆಲೋಚಿಸುವಿರ? ಎಲ್ಲಾ ಜೀವಿಗಳು ತಮ್ಮ ಸುತ್ತಲಿನ ಬದಲಾವಣೆಗಳಿಗೆ ಪ್ರತಿಕ್ರಿಯಿಸುತ್ತವೆ.

ಜೀವಿಗಳು ಮತ್ತು ವಿಸರ್ಜನೆ

ಎಲ್ಲಾ ಜೀವಿಗಳಿಗೆ ಆಹಾರ ಅವಶ್ಯ. ತಿಂದ ಎಲ್ಲ ಆಹಾರವನ್ನು ನಿಜವಾಗಿಯೂ ಉಪಯೋಗಿಸುವುದಿಲ್ಲ. ಕೇವಲ ಸ್ವಲ್ಪ ಭಾಗವನ್ನು ದೇಹ ಉಪಯೋಗಿಸುತ್ತದೆ. ಉಳಿದ ಭಾಗ ಏನಾಗುತ್ತದೆ? ಇದನ್ನು ದೇಹದಿಂದ ತ್ಯಾಜ್ಯರೂಪದಲ್ಲಿ ಹೊರಹಾಕಲೇಬೇಕಾಗುತ್ತದೆ. ಇತರ ಜೈವಿಕ ಕ್ರಿಯೆಗಳಿಂದಲೂ ನಮ್ಮ ದೇಹ ಒಂದಷ್ಟು ತ್ಯಾಜ್ಯವನ್ನು ಉತ್ಪತ್ತಿ ಮಾಡುತ್ತದೆ. ಜೀವಿಗಳು ತಮ್ಮಲ್ಲಿರುವ ತ್ಯಾಜ್ಯವನ್ನು ಹೊರಹಾಕುವ ಪ್ರಕ್ರಿಯೆಗೆ ವಿಸರ್ಜನೆ (excretion) ಎನ್ನುವರು.

ಸಸ್ಯಗಳಲ್ಲೂ ಕೂಡ ವಿಸರ್ಜನೆ ನಡೆಯುತ್ತದೆಯೆ? ಅವುಗಳು ಕೂಡ ವಿಸರ್ಜಿಸುತ್ತವೆ ಆದರೆ, ಪ್ರಾಣಿಗಳಂತೆ ಅಲ್ಲ. ಸಸ್ಯಗಳಲ್ಲಿ ಈ ಪ್ರಕ್ರಿಯೆ ಸ್ವಲ್ಪ ಬೇರೆಯಾಗಿರುತ್ತದೆ. ಕೆಲವು ಸಸ್ಯಗಳು ತ್ಯಾಜ್ಯ ಉತ್ಪನ್ನಗಳನ್ನು ಯಾವುದೇ ಹಾನಿಯುಂಟು ಮಾಡದ ರೀತಿಯಲ್ಲಿ ತಮ್ಮಲ್ಲಿಯೇ ಕೆಲವು ಭಾಗಗಳಲ್ಲಿ ಶೇಖರಿಸಿಡುತ್ತವೆ. ಕೆಲವು ಸಸ್ಯಗಳು ತ್ಯಾಜ್ಯಗಳನ್ನು ಸ್ರವಿಸುವ ಮೂಲಕ ಹೊರಹಾಕುತ್ತವೆ. ವಿಸರ್ಜನೆಯು ಎಲ್ಲಾ ಜೀವಿಗಳಲ್ಲಿಯು ಸಾಮಾನ್ಯವಾಗಿರುವ ಮತ್ತೊಂದು ಲಕ್ಷಣ.

ಎಲ್ಲ ಜೀವಿಗಳು ತಮ್ಮದೇ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆಯೇ?

ಪಾರಿವಾಳಗಳಂತಹ ಪಕ್ಷಿಗಳ ಗೂಡನ್ನು ನೀವು ಯಾವಾಗಲಾದರು ವೀಕ್ಷಿಸಿದ್ದೀರ? ಹಲವಾರು ಪಕ್ಷಿಗಳು ತಮ್ಮ ಗೂಡಲ್ಲಿ ಮೊಟ್ಟೆಯನ್ನಿಡುತ್ತವೆ. ಕೆಲವು ಮೊಟ್ಟೆಗಳಿಂದ ಮರಿಪಕ್ಷಿಗಳು ಹೊರಬರುತ್ತವೆ (ಚಿತ್ರ 9.13).

ಪ್ರಾಣಿಗಳು ತಮ್ಮನ್ನೇ ಹೋಲುವ ಸಂತಾನವನ್ನು ಉತ್ಪತ್ತಿ ಮಾಡುತ್ತವೆ. ಬೇರೆ ಬೇರೆ ಪ್ರಾಣಿಗಳಲ್ಲಿ ಸಂತಾನೋತ್ಪತ್ತಿಯ reproduction) ವಿಧಾನಗಳು ಬೇರೆ ಬೇರೆಯಾಗಿರುತ್ತವೆ. ಕೆಲವು ಪ್ರಾಣಿಗಳು ಮೊಟ್ಟೆಗಳ ಮೂಲಕ ಅವುಗಳ ಮರಿಗಳನ್ನು ಉತ್ಪತ್ತಿ ಮಾಡುತ್ತವೆ. ಕೆಲವು ಪ್ರಾಣಿಗಳು ಮರಿಗಳಿಗೆ ಜನ್ಮ ನೀಡುತ್ತವೆ (ಚಿತ್ರ 9.14).

ಸಸ್ಯಗಳು ಕೂಡ ಸಂತಾನೋತ್ಪತ್ತಿ ಮಾಡುತ್ತವೆ. ಪ್ರಾಣಿಗಳಂತೆಯೆ ಸಸ್ಯಗಳೂ ಕೂಡ ವಂಶಾಭಿವೃದ್ಧಿ ಮಾಡುವ ವಿಧಾನದಲ್ಲಿ ಭಿನ್ನವಾಗಿರುತ್ತವೆ. ಹಲವಾರು ಸಸ್ಯಗಳು ಬೀಜಗಳ ಮೂಲಕ ವಂಶಾಭಿವೃದ್ಧಿ ಮಾಡುತ್ತವೆ. ಸಸ್ಯಗಳು ಬೀಜಗಳನ್ನು ಉತ್ಪತ್ತಿ ಮಾಡುತ್ತವೆ. ಆ ಬೀಜಗಳು ಮೊಳಕೆಯೊಡೆದು ಮರಿ ಸಸ್ಯಗಳಾಗಿ ಬೆಳೆಯುತ್ತವೆ (ಚಿತ್ರ 9.15).

ಕೆಲವು ಸಸ್ಯಗಳು ಬೀಜವನ್ನು ಹೊರತುಪಡಿಸಿ ಸಸ್ಯದ ಇತರೆ ಭಾಗಗಳಿಂದ ವಂಶಾಭಿವೃದ್ಧಿ ಮಾಡುತ್ತವೆ. ಉದಾಹರಣೆಗೆ, ಮೊಗ್ಗು ಇರುವ ಆಲೂಗಡ್ಡೆಯ ಒಂದು ಭಾಗ ಮರಿ ಸಸ್ಯವಾಗಿ ಬೆಳೆಯುತ್ತದೆ (ಚಿತ್ರ 9.16).

ಸಸ್ಯಗಳು ತಮ್ಮ ಕತ್ತರಿಸಿದ ಭಾಗಗಳ ಮೂಲಕವೂ ವಂಶಾಭಿವೃದ್ಧಿ ಹೊಂದುತ್ತವೆ. ಈ ವಿಧಾನದ ಮೂಲಕ ನೀವಾಗಿಯೆ ಒಂದು ಸಸ್ಯವನ್ನು ಬೆಳೆಯಲು ಇಷ್ಟಪಡುವಿರ?

ಚಟುವಟಿಕೆ 5
ಮೆಹಂದಿ ಅಥವಾ ಗುಲಾಬಿ ಗಿಡದ ಕತ್ತರಿಸಿದ ಒಂದು ಭಾಗವನ್ನು ತೆಗೆದುಕೊಳ್ಳಿ. ಅದನ್ನು ಮಣ್ಣಿನಲ್ಲಿ ನೆಟ್ಟು ಪ್ರತಿದಿನ ನೀರು ಹಾಕಿ. ಕೆಲವು ದಿನಗಳ ನಂತರ ಏನನ್ನು ಗಮನಿಸುವಿರಿ?

ಸಸ್ಯಗಳನ್ನು ಅವುಗಳ ಕತ್ತರಿಸಿದ ಭಾಗಗಳಿಂದ ಬೆಳೆಯುವುದು ಅಷ್ಟು ಸುಲಭವಾಗಿರದೆ ಇರಬಹುದು. ಒಂದು ವೇಳೆ ನೀವು ನೆಟ್ಟ ಸಸ್ಯದ ಕತ್ತರಿಸಿದ ಭಾಗ ಬೆಳೆಯದಿದ್ದರೆ ನಿರಾಶರಾಗಬೇಡಿ. ಕತ್ತರಿಸಿದ ಭಾಗಗಳಿಂದ ಸಸ್ಯಗಳನ್ನು ಬೆಳೆಯುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಬಗ್ಗೆ ಉದ್ಯಾನವನದ ಮಾಲಿಯ ಜೊತೆ ಸಾಧ್ಯವಾದರೆ ಮಾತನಾಡಿ.

ಜೀವಿಗಳು ತಮ್ಮನ್ನೇ ಹೋಲುವ ಹೊಸ ಜೀವಿಗಳನ್ನು ವಂಶಾಭಿವೃದ್ಧಿಯ ಮೂಲಕ ಉತ್ಪತ್ತಿ ಮಾಡುತ್ತವೆ. ಈ ಕ್ರಿಯೆಯು ವಿವಿಧ ಜೀವಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತದೆ.

ಎಲ್ಲ ಜೀವಿಗಳು ಚಲಿಸುತ್ತವೆಯೆ?

ಪ್ರಾಣಿಗಳು ವಿವಿಧ ರೀತಿಯಲ್ಲಿ ಚಲಿಸುವುದರ ಬಗ್ಗೆ ನಾವು ಅಧ್ಯಾಯ 8ರಲ್ಲಿ ಚರ್ಚಿಸಿದ್ದೇವೆ. ಅವುಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುತ್ತವೆ ಹಾಗೂ ಇತರೆ ದೈಹಿಕ ಚಲನೆಗಳನ್ನು ಸಹ ತೋರಿಸುತ್ತವೆ.

ಹಾಗಾದರೆ, ಸಸ್ಯಗಳು! ಅವುಗಳೂ ಚಲಿಸುತ್ತವೆಯೆ? ಸಾಮಾನ್ಯವಾಗಿ ಸಸ್ಯಗಳು ಮಣ್ಣಿನಲ್ಲಿ ಬಂಧಿತವಾಗಿರುವುದರಿಂದ ಅವುಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವುದಿಲ್ಲ. ಆದರೆ, ಅನೇಕ ವಸ್ತುಗಳು ಅಂದರೆ ನೀರು, ಖನಿಜಗಳು ಮತ್ತು ಸಸ್ಯಗಳಿಂದ ತಯಾರಿಸಲ್ಪಟ್ಟ ಆಹಾರ ಇವು ಸಸ್ಯದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಚಲಿಸುತ್ತವೆ. ಸಸ್ಯಗಳಲ್ಲಿ ಇನ್ಯಾವುದೇ ರೀತಿಯ ಚಲನೆಯನ್ನು ನೀವು ಗಮನಿಸಿದ್ದೀರ? ಹೂಗಳ ಅರಳುವಿಕೆ ಅಥವಾ ಮುದುಡುವಿಕೆಯು ಚಲನೆಯೆ? ಕೆಲವು ಸಸ್ಯಗಳು ನಿರ್ದಿಷ್ಟ ಪ್ರಚೋದನೆಗಳಿಗೆ ಚಲನೆಯ ಮೂಲಕ ಪ್ರತಿಕ್ರಿಯೆ ನೀಡುವುದನ್ನು ನೀವು ಸ್ಮರಿಸಿಕೊಳ್ಳುವಿರ?

ಕೆಲವು ನಿರ್ಜೀವ ವಸ್ತುಗಳು ಕೂಡ ಚಲಿಸುತ್ತವೆ. ಅವುಗಳೆಂದರೆ ಬಸ್ಸು, ಕಾರು, ಕಾಗದದ ಚೂರುಗಳು, ಮೋಡಗಳು ಇತ್ಯಾದಿ. ಈ ಚಲನೆಗಳು ಜೀವಿಗಳ ಚಲನೆಗಳಿಗಿಂತ ಭಿನ್ನವೆ?

ನಾವು ಈಗಾಗಲೇ ಚರ್ಚಿಸಿರುವಂತೆ ಜೀವಿಗಳಲ್ಲಿ ವೈವಿಧ್ಯವಿದ್ದರೂ ಅವೆಲ್ಲವೂ ಕೆಲವು ಸಾಮಾನ್ಯ ಲಕ್ಷಣಗಳನ್ನು ತೋರಿಸುತ್ತವೆ. ಮತ್ತೊಂದು ಸಾಮಾನ್ಯ ಲಕ್ಷಣವೆಂದರೆ ಜೀವಿಗಳು ಸಾಯುತ್ತವೆ. ಹೀಗಾಗಿ ನಿರ್ದಿಷ್ಟ ವಿಧಗಳ ಜೀವಿಗಳು ವಂಶಾಭಿವೃದ್ಧಿಯ ಮೂಲಕ ತಮ್ಮನ್ನೇ ಹೋಲುವ ಜೀವಿಗಳಿಗೆ ಜನ್ಮ ನೀಡಿದರೆ ಮಾತ್ರ ಅವು ಸಾವಿರಾರು ವರ್ಷಗಳ ಕಾಲ ಬದುಕಬಲ್ಲವು. ಯಾವುದೋ ಒಂದು ಜೀವಿ ವಂಶಾಭಿವೃದ್ಧಿ ನಡೆಸದೆ ಸಾಯಬಹುದು. ಆದರೆ, ಒಂದು ನಿರ್ದಿಷ್ಟ ವಿಧವಾದ ಜೀವಿ ವಂಶಾಭಿವೃದ್ಧಿಯಿಂದ ಮಾತ್ರ ಅಸ್ತಿತ್ವದಲ್ಲಿರಬಹುದು.

ಎಲ್ಲ ಜೀವಿಗಳು ಕೆಲವು ಸಾಮಾನ್ಯ ಲಕ್ಷಣಗಳನ್ನು ಹೊಂದಿವೆಯೆಂದು ನಾವು ತಿಳಿದಿದ್ದೇವೆ. ಅವುಗಳೆಲ್ಲವೂ ಆಹಾರ ತಿನ್ನುತ್ತವೆ, ಉಸಿರಾಡುತ್ತವೆ, ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ನೀಡುತ್ತವೆ, ವಂಶಾಭಿವೃದ್ಧಿ ಮಾಡುತ್ತವೆ, ಚಲಿಸುತ್ತವೆ, ಬೆಳೆಯುತ್ತವೆ ಮತ್ತು ಸಾಯುತ್ತವೆ.

ಈ ಮೇಲಿನ ಕೆಲವು ಲಕ್ಷಣಗಳನ್ನು ತೋರಿಸುವ ಕೆಲವು ನಿರ್ಜೀವ ವಸ್ತುಗಳನ್ನು ನಾವು ಕಾಣುತ್ತೇವೆಯೆ? ಕಾರುಗಳು, ಬೈಸಿಕಲ್‍ಗಳು, ಗಡಿಯಾರದ ಮುಳ್ಳುಗಳು ಮತ್ತು ನದಿಯಲ್ಲಿನ ನೀರು ಚಲಿಸುತ್ತವೆ. ಆಕಾಶದಲ್ಲಿ ಚಂದ್ರನು ಚಲಿಸುತ್ತಾನೆ. ನಮ್ಮ ಕಣ್ಣುಗಳ ಮುಂದೆಯೇ ಮೋಡವು ಬೆಳೆದು ದೊಡ್ಡದಾಗುತ್ತದೆ. ಇವುಗಳನ್ನು ಜೀವಿಗಳು ಎಂದು ಕರೆಯಬಹುದೆ? ನಮಗೆ ನಾವೇ ಕೇಳಿಕೊಳ್ಳೋಣ. ಈ ವಸ್ತುಗಳು ಜೀವಿಗಳಂತೆ ಇತರ ಎಲ್ಲಾ ಲಕ್ಷಣಗಳನ್ನು ತೋರಿಸುತ್ತವೆಯೆ?

ಒಟ್ಟಾರೆ ನಾವು ಚರ್ಚಿಸಿದ ಎಲ್ಲ ಲಕ್ಷಣಗಳನ್ನು ಜೀವಿಗಳು ಹೊಂದಿರಬಹುದು. ಆದರೆ, ನಿರ್ಜೀವಿಗಳು ಈ ಎಲ್ಲ ಲಕ್ಷಣಗಳನ್ನು ತೋರಿಸದೆ ಇರಬಹುದು.

ಇದು ಯಾವಾಗಲೂ ನಿಜವೆ? ಈಗಾಗಲೆ ಚರ್ಚಿಸಿರುವ ಎಲ್ಲ ಲಕ್ಷಣಗಳನ್ನು ಜೀವಿಗಳು ತೋರಿಸುತ್ತವೆಯೆಂದು ನಾವು ಯಾವಾಗಲೂ ಗಮನಿಸುತ್ತೇವೆಯೆ? ಹಾಗೆಯೇ ನಿರ್ಜೀವಿಗಳು ಕೆಲವೇ ಕೆಲವು ಲಕ್ಷಣಗಳನ್ನು ತೋರಿಸಬಹುದು ಮತ್ತು ಎಲ್ಲಾ ಲಕ್ಷಣಗಳನ್ನಲ್ಲ ಎಂಬುದನ್ನು ನಾವು ಯಾವಾಗಲೂ ಗಮನಿಸಿದ್ದೇವೆಯೆ?

ಇದರ ಬಗ್ಗೆ ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಒಂದು ನಿರ್ದಿಷ್ಟ ಉದಾಹರಣೆಯನ್ನು ನೋಡೋಣ. ಯಾವುದಾದರೂ ಬೀಜವನ್ನು ಪರಿಗಣಿಸಿ. ಉದಾಹರಣೆಗೆ, ಹೆಸರುಕಾಳು. ಇದು ಜೀವಿಯೆ? ಇದು ಅಂಗಡಿಯಲ್ಲಿ ತಿಂಗಳುಗಟ್ಟಲೆ ಇರಬಲ್ಲದು. ಆದರೆ ಯಾವುದೇ ಬೆಳವಣಿಗೆ ತೋರಿಸುವುದಿಲ್ಲ ಅಥವಾ ಜೀವಿಯ ಇನ್ನಿತರೆ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಈ ಬೀಜವನ್ನೇ ತಂದು ಮಣ್ಣಿನಲ್ಲಿ ಬಿತ್ತನೆ ಮಾಡಿ, ನೀರುಣಿಸಿ, ಗೊಬ್ಬರ ಹಾಕಿದಾಗ ಈ ಬೀಜವು ಒಂದು ಸಂಪೂರ್ಣ ಸಸ್ಯವಾಗಿ ಬೆಳೆಯುತ್ತದೆ. ಈ ಬೀಜವು ತಿಂಗಳುಗಳ ಕಾಲ ಅಂಗಡಿಯಲ್ಲಿದ್ದಾಗ ಅದಕ್ಕೆ ಆಹಾರದ ಆವಶ್ಯಕತೆ ಇತ್ತೆ? ವಿಸರ್ಜನೆ, ಬೆಳವಣಿಗೆ ಅಥವಾ ವಂಶಾಭಿವೃದ್ಧಿ ನಡೆಸಿತೆ?

ಕೆಲವು ಸನ್ನಿವೇಶಗಳಲ್ಲಿ ಒಂದು ವಸ್ತುವನ್ನು ಜೀವಿ ಎಂದು ಕರೆಯಲು ನಾವು ಇದುವರೆಗೂ ಚರ್ಚಿಸಿರುವ ಎಲ್ಲ ಲಕ್ಷಣಗಳು ಅದರಲ್ಲಿ ಇವೆ ಎಂದು ಸುಲಭವಾಗಿ ಹೇಳಲಾಗುವುದಿಲ್ಲ ಎನ್ನುವುದನ್ನು ಮನಗಂಡಿದ್ದೇವೆ.

ಹಾಗಾದರೆ ಜೀವ ಎಂದರೇನು?

ಗೋಧಿಯ ಚೀಲದೊಳಗೆ ನಿಮ್ಮ ಕೈಯನ್ನು ತೂರಿಸಿ ಒಳಭಾಗದಲ್ಲಿ ಬಿಸಿಯಿರುವುದನ್ನು ಗಮನಿಸುವಿರ? ಗೋಧಿಯ ಚೀಲದೊಳಗೆ ಸ್ವಲ್ಪ ಶಾಖ ಉತ್ಪತ್ತಿಯಾಗುತ್ತದೆ. ಬೀಜಗಳು ಉಸಿರಾಡುತ್ತವೆ. ಆ ಕ್ರಿಯೆಯಲ್ಲಿ ಒಂದಷ್ಟು ಶಾಖವನ್ನು ಬಿಡುಗಡೆ ಮಾಡುತ್ತವೆ.

ಬೀಜಗಳಲ್ಲಿ ಇನ್ನಿತರ ಜೀವಕ್ರಿಯೆಗಳು ಸಕ್ರಿಯವಾಗಿಲ್ಲದಿದ್ದರೂ ಉಸಿರಾಟ ಕ್ರಿಯೆಯು ನಡೆಯುವುದನ್ನು ನಾವು ಗಮನಿಸುತ್ತೇವೆ.

ಹಾಗಾದರೆ ಜೀವ ಎಂದರೇನು? ಈ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಾಗಿಲ್ಲದಿರಬಹುದು. ಆದಾಗ್ಯು, ನಮ್ಮ ಸುತ್ತಲಿನ ವೈವಿಧ್ಯಮಯ ಜೀವಿಗಳನ್ನು ನೋಡುವುದರ ಮೂಲಕ, ಜೀವನ ಸುಂದರವಾಗಿದೆ! ಎಂದು ನಾವು ತೀರ್ಮಾನಿಸಬಹುದು.

ಪ್ರಮುಖ ಪದಗಳು

ಹೊಂದಾಣಿಕೆ
ಆವಾಸ
ಜಲಆವಾಸ
ಜೀವಿ
ಜೈವಿಕ ಘಟಕ
ವಂಶಾಭಿವೃದ್ಧಿ
ವಿಸರ್ಜನೆ
ಉಸಿರಾಟ
ಬೆಳವಣಿಗೆ
ಪ್ರಚೋದನೆ

ಸಾರಾಂಶ

● ಸಸ್ಯಗಳು ಮತ್ತು ಪ್ರಾಣಿಗಳು ವಾಸಿಸುವ ಸುತ್ತಲಿನ ಪರಿಸರವನ್ನು ಅವುಗಳ ಆವಾಸ ಎನ್ನುವರು
● ಹಲವು ಬಗೆಯ ಸಸ್ಯಗಳು ಮತ್ತು ಪ್ರಾಣಿಗಳು ಒಂದೇ ಆವಾಸವನ್ನು ಹಂಚಿಕೊಂಡಿರಬಹುದು.
● ಒಂದು ನಿರ್ದಿಷ್ಟ ಆವಾಸದಲ್ಲಿ ಒಂದು ಸಸ್ಯ ಅಥವಾ ಪ್ರಾಣಿಯು ಜೀವಿಸುವ ಸಾಮಥ್ರ್ಯವನ್ನು ನೀಡುವ ಅದರ ನಿರ್ದಿಷ್ಟ ಲಕ್ಷಣಗಳು ಮತ್ತು ಅಭ್ಯಾಸಗಳನ್ನು ಹೊಂದಾಣಿಕೆ ಎಂದು ಕರೆಯುತ್ತೇವೆ.
● ಹಲವು ರೀತಿಯ ಆವಾಸಗಳಿವೆ. ಇವುಗಳನ್ನು ಎರಡು ಮುಖ್ಯ ಗುಂಪುಗಳಾಗಿ ವಿಂಗಡಿಸಬಹುದು. ಅವುಗಳೆಂದರೆ ಭೂಆವಾಸ ಮತ್ತು ಜಲಆವಾಸ.
● ವಿವಿಧ ಆವಾಸಗಳಲ್ಲಿ ಹಲವು ಬಗೆಯ ಜೀವಿಗಳಿರುತ್ತವೆ.
● ಸಸ್ಯಗಳು, ಪ್ರಾಣಿಗಳು ಹಾಗೂ ಸೂಕ್ಷ್ಮಜೀವಿಗಳು ಒಟ್ಟಾರೆಯಾಗಿ ಜೈವಿಕ ಘಟಕಗಳು.
● ಕಲ್ಲುಬಂಡೆಗಳು, ಮಣ್ಣು, ಗಾಳಿ, ನೀರು, ಬೆಳಕು ಹಾಗು ಉಷ್ಣತೆ ಮುಂತಾದವು ನಮ್ಮ ಸುತ್ತಲಿನ ಅಜೈವಿಕ ಘಟಕಗಳು.
● ಜೀವಿಗಳಲ್ಲಿ ಕೆಲವು ಸಾಮಾನ್ಯ ಲಕ್ಷಣಗಳಿರುತ್ತವೆ. ಅವುಗಳಿಗೆ ಆಹಾರ ಬೇಕು. ಅವುಗಳು ಉಸಿರಾಡುತ್ತವೆ ಮತ್ತು ತ್ಯಾಜ್ಯ ವಸ್ತುಗಳನ್ನು ವಿಸರ್ಜಿಸುತ್ತವೆ. ಸುತ್ತಲಿನ ಪರಿಸರಕ್ಕೆ ಪ್ರತಿಕ್ರಿಯಿಸುತ್ತವೆ. ವಂಶಾಭಿವೃದ್ಧಿ ಮಾಡುತ್ತವೆ, ಬೆಳೆಯುತ್ತವೆ ಹಾಗೂ ಚಲನೆಯನ್ನು ತೋರಿಸುತ್ತವೆ.

ಸಂವೇದ ವಿಡಿಯೋ ಪಾಠಗಳು

Samveda – 6th – Science – Jeevigala Lakshanagalu (Part 1 of 2)

Samveda – 6th – Science – Jeevigalalli Hondanike (Part 2 of 2)

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಸೂಚಿತ ಯೋಜನಾಕಾರ್ಯಗಳು ಮತ್ತು ಚಟುವಟಿಕೆಗಳು

1. ಭೂಮಿಯಿಂದಾಚೆ ಜೀವಿಗಳು ಇರುವ ಸಾಧ್ಯತೆಗಳ ಬಗ್ಗೆ ಹಲವು ನಿಯತಕಾಲಿಕಗಳು ಮತ್ತು ದಿನಪತ್ರಿಕೆಗಳು ಚರ್ಚಿಸುತ್ತವೆ. ಈ ಲೇಖನಗಳನ್ನು ಓದಿ ಹಾಗೂ ಭೂಮಿಯಿಂದಾಚೆ ಇರಬಹುದಾದ ಜೀವಿಗಳನ್ನು ಹೇಗೆ ವ್ಯಾಖ್ಯಾನಿಸಬಹುದು ಎಂದು ನಿಮ್ಮ ತರಗತಿಯಲ್ಲಿ ಚರ್ಚಿಸಿ.

Is There Life Beyond Earth?

The Search For Life Beyond Earth

2. ಸ್ಥಳೀಯ ಮೃಗಾಲಯವನ್ನು ಭೇಟಿ ಮಾಡಿ ಹಾಗು ವಿವಿಧ ಆವಾಸಗಳಿಂದ ತಂದಿರುವ ಪ್ರಾಣಿಗಳಿಗೆ ಯಾವ ರೀತಿಯ ವಿಶೇಷ ಏರ್ಪಾಟುಗಳನ್ನು ಮಾಡಿದ್ದಾರೆ ಎಂಬುದನ್ನು ತಿಳಿಯಿರಿ.

Nehru Zoopark | Summer Arrangements at Zoo park

3. ಹಿಮಕರಡಿ ಮತ್ತು ಪೆಂಗ್ವಿನ್‍ಗಳ ಆವಾಸಗಳು ಎಲ್ಲಿವೆ ಎಂಬುದನ್ನು ಕಂಡುಹಿಡಿಯಿರಿ. ಪ್ರತಿ ಪ್ರಾಣಿಯು ತನ್ನ ಆವಾಸಕ್ಕೆ ಚೆನ್ನಾಗಿ ಹೊಂದಾಣಿಕೆಯಾಗಿರುವ ಎರಡು ರೀತಿಗಳನ್ನು ವಿವರಿಸಿ.

Polar Bears 101 | Nat Geo Wild

Where do penguins live?

Go Inside an Antarctic ‘City’ of 400,000 King Penguins — Ep. 4 | Wildlife: Resurrection Island

4. ಹಿಮಾಲಯದ ತಪ್ಪಲಿನಲ್ಲಿ ಯಾವ ಪ್ರಾಣಿಗಳು ವಾಸಿಸುತ್ತವೆ ಎಂದು ಕಂಡುಹಿಡಿಯಿರಿ. ಹಿಮಾಲಯದ ಪರ್ವತ ಪ್ರದೇಶದ ಮೇಲೆ ಹೋದಂತೆಲ್ಲಾ ಸಸ್ಯಗಳ ಹಾಗೂ ಪ್ರಾಣಿಗಳ ವೈವಿಧ್ಯತೆಯಲ್ಲಿ ಬದಲಾವಣೆಗಳು ಇರುತ್ತವೆಯೆ ಎಂದು ಕಂಡುಹಿಡಿಯಿರಿ.

TOP 7 हिमालय के सबसे अद्भुत जानवर Wonderful Animals of Himalayan Mountains

5. ಆವಾಸಗಳ ಒಂದು ಆಲ್ಬಮ್ (ಛಾಯಾ ಚಿತ್ರಗಳ ಪುಸ್ತಕ) ತಯಾರಿಸಿ. ಚಟುವಟಿಕೆ 1ರಲ್ಲಿ ಪಟ್ಟಿ ಮಾಡಿರುವ ಸಸ್ಯಗಳ ಮತ್ತು ಪ್ರಾಣಿಗಳ ಚಿತ್ರಗಳನ್ನು ಸಂಗ್ರಹಿಸಲು ಪ್ರಯತ್ನಿಸಿ ಹಾಗು ವಿವಿಧ ಆವಾಸಗಳ ಭಾಗಗಳಲ್ಲಿ ಅವುಗಳನ್ನು ಆಲ್ಬಮ್‍ನಲ್ಲಿ ಅಂಟಿಸಿ. ಈ ವಿವಿಧ ಪ್ರದೇಶಗಳಲ್ಲಿ ಕಾಣಸಿಗುವ ಮರಗಳ ಎಲೆಯ ಆಕಾರ ಮತ್ತು ರಚನೆಗಳ ಚಿತ್ರಗಳನ್ನು ಬಿಡಿಸಿ ಹಾಗೂ ಇವುಗಳನ್ನು ಆಲ್ಬಮ್‍ನಲ್ಲಿ ಸೇರಿಸಿ. ಇದರ ಜೊತೆಗೆ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಮರಗಳ ಕೊಂಬೆಗಳ ನಮೂನೆಯ ಚಿತ್ರ ಬಿಡಿಸಿ ಆಲ್ಬಮ್‍ನಲ್ಲಿ ಸೇರಿಸಿ.

Different types of leaf🍃/Evs project work