ಹೀಗೊಂದು ಚಾರಣ…..
ಹುಲ್ಕುತ್ರಿಯಲ್ಲಿಯ ಜೈನರ ನೆಲೆಗಳ ಅಧ್ಯಯನ
(ಆಧಾರ : ‘‘ಹುಲ್ಕುತ್ರಿ ಸಂಸ್ಕೃತಿ” ಕೃತಿ)
ಸದಾ ತರಗತಿ ಕೋಣೆಯಲ್ಲಿ ಪಾಠ ಬೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳನ್ನು ತಮ್ಮ ಗ್ರಾಮದ ಸುತ್ತಮುತ್ತಲಿನ ಸ್ಥಳಗಳನ್ನು ಪರಿಚಯಿಸುವುದು ಹಾಗೂ ಸಾಧ್ಯವಾದರೆ ಅಲ್ಲಿಯ ಐತಿಹಾಸಿಕ ಮತ್ತು ಪೌರಾಣಿಕ ಸಂಗತಿಗಳನ್ನು ಪರಿಚಯಿಸುವ ಉದ್ದೇಶವೇ ಈ ‘ಚಾರಣ’ವಾಗಿದೆ. ಅಂತೆಯೇ ನಮ್ಮ ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದ್ದೇವೆ. ಈ ಗ್ರಾಮದ ಕುರಿತಂತೆ “ಹುಲ್ಕುತ್ರಿ ಸಂಸ್ಕøತಿ” ಕೃತಿಯಲ್ಲಿ ಇಲ್ಲಿನ ಅನೇಕ ಸ್ಥಳಗಳನ್ನು ಪ್ರಸ್ತಾಪಿಸಲಾಗಿದೆ. ಈ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಹುಲ್ಕುತ್ರಿಯ ಒಕ್ಕೋಟೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು ಎನ್ನುವ ಮಹದಾಸೆ ಇತ್ತು. ಅಂತೆಯೇ ಈ ಶೈಕ್ಷಣಿಕ ವರ್ಷದ ಚಾರಣವನ್ನು ಎಸ್.ಡಿ.ಎಮ್.ಸಿ.ಯ ತೀರ್ಮಾನದಂತೆ ಹಾವಿನಬೀಳು ಗ್ರಾಮದ ಜೈನರ ಕೇಂದ್ರ ಸ್ಥಳವಾದ “ಹುಲ್ಕುತ್ರಿಯ ಒಕ್ಕೋಟಿ”ಗೆ ದಿನಾಂಕ : 15-02-2020 ರಂದು ಶಾಲೆಯ 4 ರಿಂದ 7ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿದೆವು.
ಹುಲ್ಕುತ್ರಿಯ ಅಕ್ಕ-ಪಕ್ಕದಲ್ಲಿರುವ ಸ್ಥಳಗಳು ತನ್ನದೇ ಆದ ಚಾರಿತ್ರಿಕ ಹಿನ್ನೆಲೆಯನ್ನು ಒಳಗೊಂಡಿದೆ. ಅಷ್ಟೇ ಏಕೆ ಪ್ರತಿಯೊಂದು ಸ್ಥಳವೂ ಒಂದೊಂದು ರೋಚಕ ಕಥೆಯನ್ನೇ ಹೇಳುತ್ತದೆ. ಈ ಸ್ಥಳದಲ್ಲಿ ಪಾಂಡವರು ಹಾಗೂ ಜೈನರು ವಾಸವಾಗಿದ್ದರು ಎಂಬುದು ಗಮನಿಸಬೇಕಾದ ಅಂಶ. ಒಕ್ಕೋಟಿ, ಹೆಮಜೆನಿ, ಕಸಿಗೆ (ಕಶಿಗೆ), ಹುಟ್ಲೆ, ದುಗಳಮಕ್ಕಿ – ಇವು ಜೈನರ ಸ್ಥಳಗಳಾದರೆ, ಕೋಟೆಗುಡ್ಡ, ಪಾಂಡವರ ಗುಂಡಿ, ಪಾಂಡವರ ಕಟ್ಟು, ಭೀಮನ ಕಲ್ಲು – ಇವು ಪಾಂಡವರ ಸ್ಥಳಗಾಗಿವೆ. ಇದಕ್ಕೆ ಸಾಕ್ಷಿಯಾಗಿ ಪ್ರಮುಖ ಕುರುಹುಗಳನ್ನು ಗುರುತಿಸಬಹುದಾಗಿದೆ.
ಎಂದಿನಂತೆ ಪ್ರಾರ್ಥನೆ ಮುಗಿಸಿ ಶಾಲೆಯ 4 ರಿಂದ 7ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ನಮ್ಮ ತಂಡ ಚಾರಣಕ್ಕೆ ಹೊರಡಲಾಯಿತು. ಮೊದಲಿಗೆ ಹುಲ್ಕುತ್ರಿಯ ‘ಕೋಟೆಗುಡ್ಡ’ವನ್ನು ಏರಿದೆವು. ಈ ಕೋಟೆಗುಡ್ಡವು ಪೌರಾಣಿಕವಾಗಿ ವಿಶೇಷತೆಯನ್ನು ಹೊಂದಿದೆ.
ಹುಲ್ಕುತ್ರಿಯ ಹೃದಯ ಭಾಗದಲ್ಲಿ ಕೋಟೆಗುಡ್ಡ ಇದೆ. ಅನಾದಿ ಕಾಲದಲ್ಲಿ ಪಾಂಡವರು ಈ ಗುಡ್ಡವನ್ನು ‘ಗುತ್ತಿಶಿಖರ’ ಮಾಡುವ ಉದ್ದೇಶದಿಂದ ಬೆಳಗಾಗುವುದರೊಳಗಾಗಿ ಕೆಲಸ ಪೂರ್ಣಗೊಳಿಸಬೇಕು ಎಂದು ಕೆಲಸ ಪ್ರಾರಂಭಿಸಿದ್ದರಂತೆ. ಆದರೆ ಕಲ್ಲುಕೋಳಿ (ಅಪಶಕುನ) ಕೂಗಿದ್ದರಿಂದ ಈ ಕಾರ್ಯವನ್ನು ಅರ್ಧಕ್ಕೆ ಬಿಟ್ಟರೆಂದು ಎಂದು ಹೆಮಜೆನಿಯ ಅಣ್ಣಪ್ಪ ಭೈರ್ಯ ಗೌಡ ಹಾಗೂ ಹುಲ್ಕುತ್ರಿಯ ಜನಾರ್ಧನ ಗಣಪ ಗೌಡ ನುಡಿಯುತ್ತಾರೆ. ಈ ಗುಡ್ಡವನ್ನು ಕೆಳಭಾಗದಿಂದ ನೋಡಿದಾಗ ಟೋಪಿಯ ತರಹ ಕಾಣುತ್ತದೆ. ಗುಡ್ಡದ ಮೇಲಿಂದ ಸುತ್ತಲೂ ಹುಲ್ಕುತ್ರಿ ಹಾಗೂ ಒಕ್ಕೋಟಿಯ ಪ್ರಕೃತಿಯ ಸೊಬಗನ್ನು ಸವಿಯಬಹುದು.
ಕೋಟೆಗುಡ್ಡವನ್ನು ವೀಕ್ಷಿಸಿದ ಮೇಲೆ ಹುಲ್ಕುತ್ರಿಯ ‘ಜೈನರ ಶಕ್ತಿ ಕೇಂದ್ರ’ವಾದ ‘ಒಕ್ಕೋಟಿ’ ಕಡೆಗೆ ಹೊರಟೆವು. ಹುಲ್ಕುತ್ರಿಯಿಂದ ಪೂರ್ವಕ್ಕೆ 3ಕಿ.ಮೀ. ದೂರದಲ್ಲಿ ಒಕ್ಕೋಟಿ ಇದೆ. ಪಕ್ಕದಲ್ಲಿ ಸೋಮನದಿಯು ಪ್ರಶಾಂತವಾಗಿ ಹರಿಯುತ್ತಿದ್ದು, ಎತ್ತರದ ಸ್ಥಳದಿಂದ ಈ ಸ್ಥಳವು ರಮಣೀಯವಾಗಿ ಕಾಣುತ್ತದೆ. ಇದು ಅನಾದಿ ಕಾಲದಲ್ಲಿ ಜೈನರ ಸ್ಥಳವಾಗಿತ್ತು. ಇಲ್ಲಿ ಶಿಲಾ ಮೂರ್ತಿಗಳು, ನಾಗರ ಮೂರ್ತಿ, ಭತ್ತ ಕುಟ್ಟುವ ಒರಳು, ವೀರಗಲ್ಲು, ಮಾಸ್ತಿಮನೆ, ಗ್ರಾಮದ ದೇವರು, ಜೈನರ ‘ಕೊಟ್ಟ’ (ಹಿಂದಿನ ಕಾಲದಲ್ಲಿ ಧಾನ್ಯ ಸಂಗ್ರಹಿಸುವ ವ್ಯವಸ್ಥೆ) ಕಾಣಬಹುದಾಗಿದೆ. ಜೈನರು ಅನಾದಿ ಕಾಲದಲ್ಲಿ ವಸತಿ ನಿರ್ಮಿಸಿಕೊಂಡಿದ್ದ ಮಂದ್ಯಾಳವನ್ನೂ ಗುರುತಿಸಬಹುದು. ಅಂದಾಜು 70 ರಿಂದ 80 ವರ್ಷಗಳ ಹಿಂದೆ ಜೈನರ ಪಾಳು ಬಿದ್ದ ಮನೆಯ ಗೋಡೆಗಳನ್ನು ಸ್ಥಳೀಯರು ನೋಡಿದ್ದರೆಂದು ತಿಳಿಸುತ್ತಾರೆ. ಪಕ್ಕದಲ್ಲಿಯೇ ವಿಶಾಲವಾದ ಗದ್ದೆ ಬಯಲನ್ನು ಕಾಣಬಹುದು. ಗದ್ದೆಯಲ್ಲಿ ಮಕ್ಕಳಿಗೆ ಕೀಟಹಾರಿ ಸಸ್ಯ ‘ಡ್ರಾಸಿರ’ವನ್ನು ಪರಿಚಯಿಸಲಾಯಿತು. ಹಾಗೇ ಸೋಮನದಿಯ ದಂಡೆಯ ಮೇಲಿರುವ ವಿವಿಧ ಜಾತಿಯ ಮರಗಳನ್ನು ಪರಿಚಯಿಸಲಾಯಿತು. ಅದರಲ್ಲಿ ದಾಲ್ಚಿನಿ ಮರ ಹಾಗೂ ಅದರ ಎಲೆಯ ಪರಿಮಳ ಸವಿಯಲಾಯಿತು. ಜೈನರ ಭತ್ತ ಕುಟ್ಟುವ ಒರಳಿನ ಪಕ್ಕದಲ್ಲಿರುವ ಜೂನರ ವಿಗ್ರಹದ ಪಕ್ಕದಲ್ಲಿ ಔಷಧಿಯುಕ್ತ ‘ಅಶೋಕ ವೃಕ್ಷ’, ಅದರ ಪರಿಮಳ ಭರಿತ ಹೂವನ್ನು ಪರಿಚಯಿಸಲಾಯಿತು.
ಒಟ್ಟಿನಲ್ಲಿ ಎಸ್.ಡಿ.ಎಮ್.ಸಿ. ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಒಂದು ಉತ್ತಮ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ವಿಶೇಷತೆ ತಿಳಿದುಕೊಂಡಿದ್ದು ಸಾರ್ಥಕವೆನಿಸಿತು. ಅಲ್ಲದೇ ಸದಾ ತರಗತಿ ಕೋಣೆಯಲ್ಲಿ ಕುಳಿತು ಪಾಠ ಕೇಳುತ್ತಾ ಇರುವ ಮಕ್ಕಳಿಗೆ ಇಂತಹ ಚಾರಣ ಏರ್ಪಡಿಸುವುದರಿಂದ ಅವರಲ್ಲಿ ನವೋಲ್ಲಾಸ ಉಂಟಾಗುವುದರಲ್ಲಿ ಸಂದೇಹವಿಲ್ಲ. ಹಾಗೂ ನಮ್ಮ ಊರಿನ ಕುರಿತು ಇರುವ ಪೌರಾಣಿಕ ಹಿನ್ನೆಲೆಯನ್ನೂ ತಿಳಿದ ಹಾಗೆ ಆಗುತ್ತದೆ. ಜೊತೆಗೆ ಹೆಮ್ಮೆಯೂ ಅನಿಸುತ್ತದೆ. ಪ್ರತ್ಯಕ್ಷವಾಗಿ ಸ್ಥಳವನ್ನು ಸಂದರ್ಶಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಇದು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ.
ಇಂದ,
ಮುಖ್ಯಾಧ್ಯಾಪಕರು/ಸಹ ಶಿಕ್ಷಕರು/ವಿದ್ಯಾರ್ಥಿಗಳು
ಎಸ್.ಡಿ.ಎಮ್.ಸಿ./ಹಳೆ ವಿದ್ಯಾರ್ಥಿಗಳ ಸಂಘ, ಹುಲ್ಕುತ್ರಿ