ಗುಪ್ತರು ಮತ್ತು ವರ್ಧನರು – ಅಧ್ಯಾಯ-4

ಪಾಠದ ಪರಿಚಯ
ಭಾರತದ ಸುವರ್ಣಯುಗವೆಂದೇ ಕರೆಯಲಾಗುವ ಗುಪ್ತರ ಕಾಲದ ಶ್ರೇಷ್ಠ ಸಾಮ್ರಾಟರೆಂದರೆ, ದಕ್ಷಿಣೋತ್ತರ ಭಾರತದಲ್ಲಿ ದಿಗ್ವಿಜಯಗೈದ ಸಮುದ್ರಗುಪ್ತ ಮತ್ತು ದೇಶದ ಸರ್ವತೋಮುಖ ಉನ್ನತಿಗೆ ಅಪೂರ್ವ ಕೊಡುಗೆಯನ್ನಿತ್ತ ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ. ಇವರ ಸಾಧನೆಯ ನಿರೂಪಣೆಯೊಂದಿಗೆ ಆ ಕಾಲದಲ್ಲಿ ಸಾಹಿತ್ಯ, ಸಂಸ್ಕøತಿ, ವಾಸ್ತುಶಿಲ್ಪ, ಮೂರ್ತಿಶಿಲ್ಪ, ಕಲೆ, ಆಯುರ್ವೇದ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಾದ ಅದ್ಭುತ ಮುನ್ನಡೆಯನ್ನು ಈ ಪಾಠದಲ್ಲಿ ವಿವರಿಸಲಾಗಿದೆ. ಇದರೊಂದಿಗೆ ಹರ್ಷವರ್ಧನ, ಬಾದಾಮಿಯ ಚಾಳುಕ್ಯರು ಹಾಗೂ ಕಾಂಚಿಯ ಪಲ್ಲವರ ಸಾಧನೆ, ಕೊಡುಗೆಗಳನ್ನು ಪ್ರಸ್ತುತಪಡಿಸಲಾಗಿದೆ.

ಪಾಠಪ್ರವೇಶ
ಉತ್ಸಾಹಿ ವಿದ್ಯಾರ್ಥಿ ಶಿವಮೂರ್ತಿ ಕೇಳಿದ ಪ್ರಶ್ನೆಯಿದು: `ಮೇಡಂ, ನಮ್ಮ ಕುಟುಂಬದ ಸದಸ್ಯರು ಪ್ರಯಾಗಕ್ಕೆ ತೀರ್ಥಯಾತ್ರೆಗಾಗಿ ಹೋಗುವವರಿದ್ದೇವೆ. ಪ್ರಯಾಗದ ಮಹತ್ವವೇನು?’’ ಶಿಕ್ಷಕರು: ಉತ್ತರ ಪ್ರದೇಶದಲ್ಲಿರುವ ಪ್ರಯಾಗವು ಗಂಗಾ, ಯಮುನಾ, ಸರಸ್ವತಿ ನದಿಗಳು ಸಂಗಮಗೊಳ್ಳುವಲ್ಲಿದೆ. ಅದನ್ನು ತೀರ್ಥರಾಜ’ ಎನ್ನುವರು. ಅಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಅಲ್ಲೊಂದು ಪ್ರಸಿದ್ಧ ಶಾಸನವಿದೆ.

ಪ್ರಯಾಗದಲ್ಲಿ ಪ್ರಾಚೀನ ಏಕಶಿಲಾ ಸ್ತಂಭವೊಂದಿದೆ. ಅದು ಅಶೋಕನ ಕಾಲದ್ದು.

ಅದರ ಮೇಲೆ ಪ್ರಸಿದ್ಧ ಶಾಸನವೊಂದಿದೆ. ಅದನ್ನು ರಚನೆ ಮಾಡಿದವನು ಹರಿಷೇಣ ಸಮುದ್ರಗುಪ್ತನ ಸೇನಾನಿ. ಶಾಸನದಲ್ಲಿ ಸಮುದ್ರಗುಪ್ತನ ಸಾಧನೆಗಳನ್ನು ನಿರೂಪಿಸಲಾಗಿದೆ.

ಗುಪ್ತ ವಂಶದಲ್ಲಿ ಅನೇಕ ಸಮರ್ಥ ಸಾಮ್ರಾಟರಿದ್ದರು. ಅವರು ಕಲಾಪೋಷಕರು ಆಗಿದ್ದರು. ಅವರಲ್ಲಿ ಪ್ರಸಿದ್ಧರೆಂದರೆ ಸಮುದ್ರಗುಪ್ತ ಮತ್ತು ಎರಡನೆಯ ಚಂದ್ರಗುಪ್ತ.

ಸಮುದ್ರಗುಪ್ತ

ಸಮುದ್ರಗುಪ್ತ

ದಿಗ್ವಿಜಯಗಳು:
ಮಹಾಪರಾಕ್ರಮಿಯಾಗಿದ್ದ ಸಮುದ್ರಗುಪ್ತನ ಚಿನ್ನದ ನಾಣ್ಯಗಳು ಸಮುದ್ರಗುಪ್ತನು ಪ್ರಾರಂಭದಲ್ಲಿ ಉತ್ತರ ಭಾರತದ ಅನೇಕ ರಾಜರನ್ನು ಸೋಲಿಸಿದನು. ಅವನ ಪ್ರಚಂಡ ಸೈನ್ಯ ಶಕ್ತಿಯನ್ನು ಅರಿತೇ ಅಲ್ಲಿಯ ಇನ್ನಿತರ ರಾಜರು ತಾವಾಗಿ ಶರಣಾದರು. ದೂರದ ಅಫ್‍ಘಾನಿಸ್ತಾನದ ಕುಷಾಣ ದೊರೆಗಳೂ ಗುಜರಾತಿನ ಸತ್ರಪರೂ (ಶಕರು) ಸಮುದ್ರಗುಪ್ತನ ಪರಮಾಧಿಕಾರವನ್ನು ಒಪ್ಪಿಕೊಂಡರು.

ಸಮುದ್ರಗುಪ್ತನ ಗಣನೀಯ ಸೈನಿಕ ಸಾಧನೆಯೆಂದರೆ ಆತನ ದಕ್ಷಿಣ ಭಾರತದ ದಂಡಯಾತ್ರೆ. ಈ ದಂಡಯಾತ್ರೆಯಲ್ಲಿ ಅವನು ಅನೇಕ ರಾಜರನ್ನು ಸೋಲಿಸಿದನಲ್ಲದೆ, ಕಾಂಚಿಯ ರಾಜನನ್ನು ಸದೆಬಡಿದನು. ದಂಡಯಾತ್ರೆಯ ನೆನಪಿಗಾಗಿ ರಾಜಧಾನಿಯಾದ ಪಾಟಲೀಪುತ್ರದಲ್ಲಿ ಅತ್ಯಂತ ವಿಜೃಂಭಣೆಯಿಂದ ಅಶ್ವಮೇಧಯಾಗವನ್ನು ಮಾಡಿದನು.

ಸಮುದ್ರಗುಪ್ತನು ವಿದ್ಯಾಪೋಷಕನಾಗಿದ್ದನು. ಸ್ವತಃ ಮಹಾಕವಿ ಹಾಗೂ ಸಂಗೀತಗಾರನಾಗಿದ್ದ ಈತನು `ಕವಿರಾಜ’ ಎಂಬ ಬಿರುದನ್ನು ಧರಿಸಿದ್ದನು. ಅವನು ವೀಣೆ ನುಡಿಸುವ ಚಿತ್ರವಿರುವ ನಾಣ್ಯಗಳಿವೆ. ವಸುಬಂಧು ಎಂಬ ಹಿರಿಯ ಬೌದ್ಧ ವಿದ್ವಾಂಸ ಅವನ ಮಂತ್ರಿಯಾಗಿದ್ದನು. ಸಮುದ್ರಗುಪ್ತನ ಚಿನ್ನದ ನಾಣ್ಯಗಳು ಗುಪ್ತ ಸಾಮ್ರಾಜ್ಯದ ಶಕ್ತಿ, ಸಂಪತ್ತು ಹಾಗೂ ವೈಭವವನ್ನು ಪ್ರತಿಬಿಂಬಿಸುತ್ತವೆ.

ಎರಡನೆಯ ಚಂದ್ರಗುಪ್ತ

ಸಮುದ್ರಗುಪ್ತನ ಪುತ್ರ ಹಾಗೂ ಉತ್ತರಾಧಿಕಾರಿಯಾದ ಎರಡನೆಯ ಚಂದ್ರಗುಪ್ತನು ಯುದ್ಧ ಕಲೆಯಲ್ಲಿ ನಿಪುಣನಾಗಿದ್ದನು. ಗುಜರಾತಿನಲ್ಲಿ ಮೂರು ಶತಮಾನಗಳಿಗಿಂತಲೂ ಹೆಚ್ಚು ಕಾಲ ಆಳ್ವಿಕೆ ನಡೆಸುತ್ತಿದ್ದ ಸತ್ರಪರನ್ನು ಚಂದ್ರಗುಪ್ತನು ಸೋಲಿಸಿದನು. ಇದರಿಂದಾಗಿ ಗುಜರಾತಿನಲ್ಲಿ ಪರಕೀಯರ ಆಳ್ವಿಕೆ ಅಂತ್ಯಗೊಂಡಿತು. ಇದು ಅವನ ಮುಖ್ಯ ಸೈನಿಕ ಸಾಧನೆಯಾಗಿತ್ತು. ಆತನಿಗೆ ಶಕಾರಿ ಮತ್ತು ವಿಕ್ರಮಾದಿತ್ಯ ಎಂಬ ಬಿರುದುಗಳಿದ್ದವು. ಚಂದ್ರಗುಪ್ತನು ಹೊಸ ಬಗೆಯ ಚಿನ್ನದ ನಾಣ್ಯಗಳನ್ನು ಹೊರಡಿಸಿದನು. ಆತನ ಆಸ್ಥಾನದಲ್ಲಿ ಮಹಾಕವಿ ಕಾಳಿದಾಸನೂ ಸೇರಿದಂತೆ ಒಂಬತ್ತು ಮಂದಿ ಪ್ರಖ್ಯಾತ ವಿದ್ವಾಂಸರಿದ್ದರು.

ಗುಪ್ತರ ಆಳ್ವಿಕೆಯ ಕಾಲದಲ್ಲಿ ಜನರು ಸುಖಶಾಂತಿಯಿಂದ ಜೀವನ ನಡೆಸಿದರು. ಸಾಮ್ರಾಜ್ಯವು ಆರ್ಥಿಕ ಕ್ಷೇತ್ರದಲ್ಲಿ ಭಾರಿ ಅಭಿವೃದ್ಧಿ ಸಾಧಿಸಿತು. ಸಾಹಿತ್ಯ, ಮೂರ್ತಿಶಿಲ್ಪ, ವಾಸ್ತುಶಿಲ್ಪ, ಚಿತ್ರಕಲೆ, ವಿಜ್ಞಾನ ಹಾಗೂ ಗಣಿತ ಕ್ಷೇತ್ರಗಳಲ್ಲಿ ಹಿಂದೆಂದೂ ಕಾಣದ ಸಾಧನೆಗಳಾದವು. ಆದುದರಿಂದ ಇತಿಹಾಸಕಾರರು ಗುಪ್ತರ ಯುಗವನ್ನು `ಸುವರ್ಣಯುಗ’ವೆಂದು ಕರೆದಿದ್ದಾರೆ.

ಫಾಹಿಯಾನ್: ಫಾಹಿಯಾನ್ ಚೀನಾ ದೇಶದ ಬೌದ್ಧ ಭಿಕ್ಷು. ಬೌದ್ಧಮತದ ತವರನ್ನು ನೋಡಬೇಕೆಂದು ಅವನು ಆತುರಪಡುತ್ತಿದ್ದನು. ಅವನು ಇನ್ನಿತರ ಬೌದ್ಧ ಭಿಕ್ಷುಗಳ ಜೊತೆಯಲ್ಲಿ ಕಾಲ್ನಡಿಗೆಯಲ್ಲೇ ಸಂಚಾರ ಮಾಡಿ ಪ್ರಯಾಸಪಟ್ಟು ಭಾರತವನ್ನು ತಲಪಿದನು. ಅದು ಎರಡನೇ ಚಂದ್ರಗುಪ್ತನ ಆಳ್ವಿಕೆ ಕಾಲವಾಗಿತ್ತು.

ಫಾಹಿಯಾನ್

ಫಾಹಿಯಾನ್ ಗುಪ್ತರ ಸಾಮ್ರಾಜ್ಯದಲ್ಲಿ ಶಾಂತಿ, ಸಮೃದ್ಧಿ ನೆಲೆಸಿತ್ತು ಎಂಬುದಾಗಿ ಬರೆದಿಟ್ಟಿದ್ದಾನೆ. ಅಪರಾಧಗಳು ಅಪರೂಪವಾಗಿದ್ದವು. ಆಡಳಿತ ಜನಪರವಾಗಿತ್ತು. ದೇಶ ಸಂಚಾರ ಸುಗಮವಾಗಿತ್ತು ಎಂಬುದಾಗಿ ಅವನು ಹೇಳಿರುತ್ತಾನೆ.

ಫಾಹಿಯಾನ್ ಭಾರತದಲ್ಲಿ ಅನೇಕ ವರ್ಷ ಪ್ರವಾಸ ಮಾಡಿ ಬೌದ್ಧ ಕ್ಷೇತ್ರಗಳನ್ನು ಸಂದರ್ಶಿಸಿ, ಧರ್ಮಗ್ರಂಥ, ವಿಗ್ರಹ ಮತ್ತು ಸ್ಮಾರಕ ವಸ್ತುಗಳನ್ನು ಸಂಗ್ರಹಿಸಿ ತಾಯ್ನಾಡಿಗೆ ತೆರಳಿದನು. ಇಲ್ಲಿಂದ ಒಯ್ದ ಧರ್ಮಗ್ರಂಥಗಳನ್ನು ಚೀನಿ ಭಾಷೆಗೆ ಅನುವಾದ ಮಾಡಿದನು. ಭಾರತದಲ್ಲಿಯೇ ಮರುಜನ್ಮ ಪಡೆಯಬೇಕೆಂಬುದು ಅವನ ಹೆಬ್ಬಯಕೆಯಾಗಿತ್ತು.

ಗುಪ್ತ ಯುಗದ ಸಾಧನೆಗಳು

ಸಂಸ್ಕೃತ ಸಾಹಿತ್ಯ: ಗುಪ್ತರ ಕಾಲದಲ್ಲಿ ಸಂಸ್ಕೃತವು ಪ್ರಧಾನ ಭಾಷೆಯಾಗಿತ್ತಲ್ಲದೆ ರಾಜ್ಯಭಾಷೆ ಕೂಡ ಆಗಿತ್ತು. ರಾಜಾಶ್ರಯ ಪಡೆದು ಸಂಸ್ಕೃತ ಸಾಹಿತ್ಯವು ವಿಶೇಷವಾಗಿ ಅರಳಿತು. ಕಾಳಿದಾಸನು ಗುಪ್ತಕಾಲದ ಮಹಾಕವಿ. ಈತನು ಜಗತ್ತಿನ ಶ್ರೇಷ್ಠ ನಾಟಕಕಾರರಲ್ಲಿ ಓರ್ವನೂ ಹೌದು. ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನವನ್ನು ಅಲಂಕರಿಸಿದ್ದ ಒಂಬತ್ತು ಜನ ಶ್ರೇಷ್ಠ ನವರತ್ನ’ರಲ್ಲಿ ಈತನು ಒಬ್ಬನಾಗಿದ್ದನು. ಕಾಳಿದಾಸನು ನಾಲ್ಕು ಕಾವ್ಯಗಳು ಮತ್ತು ಮೂರು ನಾಟಕಗಳನ್ನು ರಚಿಸಿದನು. ಅಭಿಜ್ಞಾನ ಶಾಕುಂತಲಾ’ ಆತನ ಶ್ರೇಷ್ಠ ನಾಟಕ. ಭಾರತೀಯ ಸಾಹಿತ್ಯದಲ್ಲಿ ಕಾಳಿದಾಸನ ಕೃತಿಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಅವನನ್ನು `ಕವಿಕುಲ ಗುರು’ ಎಂಬುದಾಗಿ ಪ್ರಶಂಸೆ ಮಾಡಲಾಗಿದೆ.

ಶೂದ್ರಕ (ಮೃಚ್ಛಕಟಿಕ’ ಇವನ ಕೃತಿ) ಮತ್ತು ವಿಶಾಖದತ್ತ (ಮುದ್ರಾರಾಕ್ಷಸ’) ಆ ಕಾಲದ ಇತರ ನಾಟಕಕಾರರು. ವಿಷ್ಣುಶರ್ಮನ ಪಂಚತಂತ್ರ’ ಎಂಬ ಕಥಾಸಂಗ್ರಹವು ಇದೇ ಕಾಲಕ್ಕೆ ಸೇರಿದ್ದು. ಪಂಚತಂತ್ರವು ಭಾರತೀಯರು ಕಥಾಕ್ಷೇತ್ರಕ್ಕೆ ನೀಡಿದ ಒಂದು ಅಮೋಘ ಕೊಡುಗೆಯಾಗಿದೆ. ಅಮರಸಿಂಹನ ಅಮರಕೋಶ’ ಎಂಬ ಶಬ್ದಕೋಶವು ಒಂದು ಅಪರೂಪದ ಕೃತಿ. ಅದು ಇಂದೂ ಬಳಕೆಯಲ್ಲಿದೆ.

ದೇವಾಲಯ ವಾಸ್ತುಶಿಲ್ಪ: ವಾಸ್ತುಶಿಲ್ಪ ನಿರ್ಮಾಣದ ಇತಿಹಾಸದಲ್ಲಿ ಗುಪ್ತರ ಕಾಲವನ್ನು ಸುವರ್ಣಯುಗವೆನ್ನಬಹುದು. ನಮ್ಮ ದೇಶದಲ್ಲಿ ದೇವಾಲಯ ನಿರ್ಮಾಣ ವಾಸ್ತು ಆರಂಭಗೊಂಡದ್ದು ಗುಪ್ತರ ಕಾಲದಲ್ಲಿ. ಮಧ್ಯಪ್ರದೇಶದ ಸಾಂಚಿಯ ದೇವಾಲಯವು ಭಾರತದಲ್ಲೇ ಅತಿ ಪ್ರಾಚೀನವಾದದು.

ಗುಪ್ತರ ಶ್ರೇಷ್ಠ ದೇವಾಲಯಗಳು ಮಧ್ಯಪ್ರದೇಶದ ಭಿತರ್‍ಗಾಂವ್ ಮತ್ತು ದೇವಗಢದಲ್ಲಿವೆ. ದೇವಗಢದ ದಶಾವತಾರ ದೇವಾಲಯದಲ್ಲಿರುವ ವಿಷ್ಣುವಿನ ಮೂರ್ತಿಶಿಲ್ಪ ಸುಂದರವಾಗಿದೆ.

ಗುಪ್ತರ ಶ್ರೇಷ್ಠ ದೇವಾಲಯ ಮಧ್ಯಪ್ರದೇಶದ ಭಿತರ್‍ಗಾಂವ್

ಸ್ತೂಪ ಮತ್ತು ಚೈತ್ಯಾಲಯ: ವಾರಾಣಸಿಯ ಸಮೀಪದ ಸಾರನಾಥ ಎಂಬಲ್ಲಿ ಇರುವ 128 ಅಡಿ ಎತ್ತರದ ಧಮೇಖ್ ಸ್ತೂಪವು ಗುಪ್ತರ ಕಾಲದ ಅನುಪಮ ನಿರ್ಮಾಣವಾಗಿದೆ.

ಚಿತ್ರಕಲೆ: ಗುಪ್ತರ ಕಾಲದಲ್ಲಿ ಬಂಡೆಯನ್ನು ಕೊರೆದು ಮಾಡಿದ ಬೌದ್ಧ ವಿಹಾರ ಮತ್ತು ಗುಹಾಲಯಗಳು ಅಜಂತಾ ಮತ್ತು ಎಲ್ಲೋರಾ ಎಂಬಲ್ಲಿವೆ.

ಅಜಂತಾದ ಗುಹಾಲಯ
ಅಜಂತಾದ ಗುಹಾಲಯ

ಅಜಂತಾದ ಗುಹಾಲಯಗಳಲ್ಲಿ ಗೋಡೆ ಮತ್ತು ಛಾವಣಿಗಳ ಮೇಲಿನ ಭಿತ್ತಿಚಿತ್ರಗಳು ಜಗದ್ವಿಖ್ಯಾತವಾಗಿವೆ. ಭಿತ್ತಿಚಿತ್ರಗಳಲ್ಲಿ ಜನಜೀವನದ ವಿವಿಧ ಮುಖಗಳು, ಬುದ್ಧನ ಜೀವನ ಕಥನ ಮತ್ತು ಜಾತಕ ಕಥೆಗಳು ಮೂಡಿಬಂದಿವೆ.

ವಿಜ್ಞಾನ ಗಣಿತ, ಖಗೋಳಶಾಸ್ತ್ರ: ಗುಪ್ತರ ಕಾಲದಲ್ಲಿ ಆರ್ಯಭಟ ವಿಜ್ಞಾನ ಮತ್ತು ತಂತ್ರಜ್ಞಾನವು ಅಪಾರ ಪ್ರಗತಿ ಸಾಧಿಸಿತು. ಪಾಟಲೀಪುತ್ರದ ಆರ್ಯಭಟನು ಗುಪ್ತ ಯುಗದ ಮಹಾನ್ ಗಣಿತಶಾಸ್ತ್ರಜ್ಞ. ಈತನ ಗ್ರಂಥ `ಆರ್ಯಭಟೀಯ’. ಆರ್ಯಭಟನು ಗ್ರಹಣಗಳ ಕಾರಣವನ್ನು ಕಂಡುಹಿಡಿದನಲ್ಲದೆ ಬೀಜಗಣಿತ ಮತ್ತು ತ್ರಿಕೋನಮಿತಿಗೆ ಮಹತ್ತರವಾದ ಕೊಡುಗೆ ನೀಡಿದನು. ಅವನು ಇಷ್ಟೊಂದು ಸಾಧನೆ ಮಾಡಿದ್ದು ಕೇವಲ ಇಪ್ಪತ್ತಮೂರು ವರ್ಷದವನಾಗಿದ್ದಾಗಲೇ. ಬ್ರಹ್ಮಗುಪ್ತ ಆ ಕಾಲದ ಇನ್ನೊಬ್ಬ ಗಣಿತ ವಿದ್ವಾಂಸ. ಶ್ರೇಷ್ಠ ಖಗೋಳಶಾಸ್ತ್ರಜ್ಞ ವರಾಹಮಿಹಿರನು ಇದೇ ಕಾಲದವನು.

ಲೋಹ ವಿಜ್ಞಾನ: ಗುಪ್ತರ ಕಾಲದಲ್ಲಿ ಲೋಹ ವಿಜ್ಞಾನವು ಗಣನೀಯ ಮುನ್ನಡೆ ಸಾಧಿಸಿತು. ದೆಹಲಿಯ ಸಮೀಪ ಮೆಹರೌಲಿ ಎಂಬಲ್ಲಿನ ಕಬ್ಬಿಣದ ಕಂಬವು ಇದಕ್ಕೊಂದು ಉದಾಹರಣೆ. ಈ ಕಂಬವು 1500 ವರ್ಷಗಳಷ್ಟು ಹಳೆಯದಾದರೂ ಅದಕ್ಕೆ ತುಕ್ಕು ಹಿಡಿದಿಲ್ಲ ಮತ್ತು ಸವೆದಿಲ್ಲ. ಇದೇ ಕಾಲದ ಎಂಟು ಅಡಿ ಎತ್ತರವಿರುವ ತಾಮ್ರದ ಬುದ್ಧ ವಿಗ್ರಹವು ನಲಂದಾದಲ್ಲಿದೆ.

ಆಯುರ್ವೇದ: ಗುಪ್ತರ ಕಾಲದ ವಾಗ್ಭಟನು ಪ್ರಾಚೀನ ಭಾರತದ ಶಸ್ತ್ರಚಿಕಿತ್ಸೆ ಚರಕ ಸಂಹಿತೆಯ ಸಾರವನ್ನು ಸಿದ್ಧಪಡಿಸಿದನು. ಅದುವೇ `ಅಷ್ಟಾಂಗ ಸಂಗ್ರಹ’. ಇದು ಆಯುರ್ವೇದದ ಪ್ರಮುಖ ಶಾಸ್ತ್ರಗ್ರಂಥವಾಗಿದ್ದು ಇಂದಿಗೂ ರೂಢಿಯಲ್ಲಿದೆ. ಪ್ರಾಚೀನ ಭಾರತದಲ್ಲಿ ಶಸ್ತ್ರಚಿಕಿತ್ಸೆಯೂ ಸಾಕಷ್ಟು ಪ್ರಗತಿ ಹೊಂದಿತ್ತು. ಶಸ್ತ್ರಚಿಕಿತ್ಸಕರು 127 ಬಗೆಯ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಬಳಸುತ್ತಿದ್ದರು. ದೇಹದೊಳಗೆ ಸೇರಿಕೊಂಡ ಕಬ್ಬಿಣ, ಕಲ್ಲುಗಳನ್ನು ಹೊರತೆಗೆಯುತ್ತಿದ್ದರು. ಪಾದರಸವನ್ನು ಔಷಧಿಯಾಗಿ ಮೊದಲ ಬಾರಿಗೆ ಬಳಕೆಗೆ ತಂದ ಕೀರ್ತಿ ಭಾರತೀಯ ವೈದ್ಯರಿಗೆ ಸಲ್ಲುತ್ತದೆ.

ಹೊಸ ಪದ : ತ್ರಿಕೋನಮಿತಿ – ಗಣಿತದ ಒಂದು ಶಾಖೆ (ಟ್ರಿಗೊನೊಮೆಟ್ರಿ).

ನಿಮಗೆ ತಿಳಿದಿರಲಿ

1 ಗುಪ್ತ ವಂಶವು ಸುಮಾರು 1600 ವರ್ಷಗಳಷ್ಟು ಹಿಂದೆ ಸ್ಥಾಪನೆಗೊಂಡು ಎರಡು ಶತಮಾನಗಳಿಗಿಂತಲೂ ಹೆಚ್ಚು ಕಾಲ ಆಳ್ವಿಕೆ ನಡೆಸಿತು.
2 ಕಾಳಿದಾಸನ ನಾಟಕಗಳು ಅಭಿಜ್ಞಾನ ಶಾಕುಂತಲಾ, ಮಾಲವಿಕಾಗ್ನಿಮಿತ್ರ ಮತ್ತು ವಿಕ್ರಮೋರ್ವಶೀಯ; ಕಾವ್ಯಗಳು ರಘುವಂಶ, ಕುಮಾರಸಂಭವ, ಋತುಸಂಹಾರ ಮತ್ತು ಮೇಘದೂತ.
3 ಗುಪ್ತರ ಕಾಲದ ದೇವಾಲಯವನ್ನು ಆರಂಭದಲ್ಲಿ ಚೌಕಾಕಾರದ ತಳಪಾಯದ ಮೇಲೆ ಕಟ್ಟಲಾಗುತ್ತಿದ್ದು, ಗರ್ಭಗೃಹ ಮತ್ತು ಮುಖಮಂಟಪಗಳು ಮಾತ್ರವೇ ಇದ್ದವು.
4 ಭಿತ್ತಿ ಎಂದರೆ ಗೋಡೆ. ಗೋಡೆಯ ಮೇಲೆ ಬರೆದ ಚಿತ್ರಗಳೇ ಭಿತ್ತಿಚಿತ್ರಗಳು. ಭಿತ್ತಿಚಿತ್ರಗಳು ಅಜಂತಾದ ಬೌದ್ಧ ಗುಹಾಲಯಗಳಲ್ಲಿವೆ. ಸಾಮಾನ್ಯ ಕುಂಚಗಳಿಂದ ಸ್ಥಳೀಯವಾಗಿ ಸಿಗುತ್ತಿದ್ದ ಬಣ್ಣಗಳಿಂದ ಚಿತ್ರಗಳನ್ನು ಬರೆಯಲಾಗಿದೆ. ಅನೇಕ ಶತಮಾನಗಳವರೆಗೆ ಈ ಗುಹೆಗಳು ಕಣ್ಣಿಗೆ ಮರೆಯಾಗಿದ್ದವು. 1819 ರಲ್ಲಿ ಅವನ್ನು ಪತ್ತೆಹಚ್ಚಲಾಯಿತು.
5 ಮೆಹರೌಲಿಯ ಕಬ್ಬಿಣದ ಕಂಬದ ತೂಕ ಆರು ಟನ್, ಎತ್ತರ 23 ಅಡಿ. 19 ನೇ ಶತಮಾನದ ಆರಂಭದವರೆಗೂ ಯೂರೋಪಿನ ಯಾವ ನಿಪುಣ ಕಮ್ಮಾರನಿಗೂ ಅಂಥ ಕಂಬವನ್ನು ಎರಕ ಹೊಯ್ಯಲು ಸಾಧ್ಯವಾಗುತ್ತಿರಲಿಲ್ಲ.

ವರ್ಧನರು

ಗುಪ್ತ ಸಾಮ್ರಾಜ್ಯದ ಅವನತಿಯ ಅನಂತರ ಉತ್ತರ ಭಾರತದಲ್ಲಿ ಅನೇಕ ಸ್ವತಂತ್ರ ರಾಜವಂಶಗಳು ಹುಟ್ಟಿಕೊಂಡವು. ಪುಷ್ಯಭೂತಿ ವಂಶವು ಅವುಗಳಲ್ಲಿ ಪ್ರಮುಖವಾಗಿತ್ತು. ಈ ವಂಶವನ್ನು ಆಳಿದ ರಾಜರುಗಳಲ್ಲಿ ಪ್ರಭಾಕರ ವರ್ಧನ, ರಾಜ್ಯವರ್ಧನ ಮತ್ತು ಹರ್ಷವರ್ಧನ ಪ್ರಖ್ಯಾತರಾಗಿದ್ದರು. ಹರ್ಷವರ್ಧನನ ಬಗ್ಗೆ ಕೆಲವು ವಿಷಯಗಳನ್ನು ತಿಳಿಯೋಣ.

Harshavardhana_Circa_AD_606-647

ಹರ್ಷವರ್ಧನನ ಸಾಧನೆಗಳು: ಹರ್ಷವರ್ಧನನು ಪಟ್ಟವನ್ನೇರಿದಾಗ ಆತ ಇನ್ನೂ ಹದಿನಾರು ವರ್ಷದ ಯುವಕನಾಗಿದ್ದನು. ಆ ವೇಳೆ ರಾಜ್ಯವು ಬಿಕ್ಕಟ್ಟಿನಲ್ಲಿ ಸಿಲುಕಿತ್ತು. ಆಡಳಿತದ ಅನುಭವ ಹರ್ಷವರ್ಧನಿಗಿರಲಿಲ್ಲ. ವೈರಿಗಳು ಇದರ ಲಾಭವನ್ನು ಪಡೆಯಲು ಮುಂದಾದರು. ಆದರೂ ಹರ್ಷವರ್ಧನನು ಸಂಚು ನಡೆಸುತ್ತಿದ್ದ ತನ್ನ ವೈರಿಗಳನ್ನು ಮಿಂಚಿನ ವೇಗದಲ್ಲಿ ಸದೆಬಡಿದನು. ರಾಜ್ಯವನ್ನು ಅಪಾಯದಿಂದ ಪಾರುಮಾಡಿ ಉತ್ತರ ಭಾಗದಲ್ಲಿ ಪ್ರಬಲ ಸಾಮ್ರಾಜ್ಯವೊಂದನ್ನು ಕಟ್ಟಿದನು.

ಸಾಹಿತ್ಯ: ಹರ್ಷವರ್ಧನನು ಪಂಡಿತರಿಗೆ ಆಶ್ರಯ ನೀಡಿದನು. ಅವರಲ್ಲಿ ಬಾಣಭಟ್ಟ ಪ್ರಮುಖನು. ಈತನ ಹರ್ಷಚರಿತ’ ಎಂಬ ಕೃತಿಯು ಹರ್ಷವರ್ಧನನ ಕುರಿತಾಗಿದೆ.ಕಾದಂಬರಿ’ ಬಾಣಭಟ್ಟನ ಇನ್ನೊಂದು ಕೃತಿ. ಹರ್ಷವರ್ಧನನೇ ಸ್ವತಃ ಪ್ರಿಯದರ್ಶಿಕಾ’, ರತ್ನಾವಳಿ’ ಮತ್ತು `ನಾಗಾನಂದ’ ಎಂಬ ಮೂರು ನಾಟಕಗಳನ್ನು ರಚಿಸಿದನು. ಹರ್ಷವರ್ಧನನು ನಾಲಂದಾ ವಿಶ್ವವಿದ್ಯಾಲಯಕ್ಕೆ ಉದಾರ ದತ್ತಿಗಳನ್ನು ನೀಡಿದನು.

ಧರ್ಮ: ಹರ್ಷವರ್ಧನನು ಧಾರ್ಮಿಕ ಹಾಗೂ ಉದಾರ ಸ್ವಭಾವದ ವ್ಯಕ್ತಿಯಾಗಿದ್ದ. ಪ್ರಜೆಗಳ ಕಲ್ಯಾಣಕ್ಕಾಗಿ ಅಪಾರ ಶ್ರಮವಹಿಸಿದ. ಬಡವರಿಗಾಗಿ ಆಹಾರ ಮತ್ತು ಔಷಧ ಒದಗಿಸುವ ಕೇಂದ್ರಗಳನ್ನು ಸ್ಥಾಪಿಸಿದ. ರಾಜ್ಯದ ಎಲ್ಲಾ ಕಡೆಗಳಲ್ಲಿಯೂ ಅಲ್ಲಲ್ಲಿ ವಿಶ್ರಾಂತಿ ಗೃಹಗಳನ್ನು ಕೂಡ ಕಟ್ಟಿಸಿದ.

ಧರ್ಮ ಸಮ್ಮೇಳನಗಳು: ಹರ್ಷವರ್ಧನನು ತನ್ನ ರಾಜಧಾನಿಯಾದ ಕನೌಜ್ ಮತ್ತು ಪ್ರಯಾಗದಲ್ಲಿ ಧರ್ಮಸಮ್ಮೇಳನಗಳನ್ನು ಐದು ವರ್ಷಗಳಿಗೊಮ್ಮೆ ನಡೆಸುತ್ತಿದ್ದನು.

ಹ್ಯುಯೆನ್‍ತ್ಸಾಂಗ್: ಹರ್ಷವರ್ಧನನ ಆಸ್ಥಾನಕ್ಕೆ ಹ್ಯುಯೆನ್‍ತ್ಸಾಂಗ್ ಹ್ಯುಯೆನ್‍ತ್ಸಾಂಗ್ ಎಂಬ ಚೀನಿ ಬೌದ್ಧ ಭಿಕ್ಷು ಬಂದಿದ್ದನು. ಅವನು ಭಾರತ ದೇಶ ಸಂಚಾರ ಮಾಡಿ ಬೌದ್ಧ ಸಾಹಿತ್ಯದ ಅಧ್ಯಯನ ನಡೆಸಿದ. ಸಿಯುಕಿ’ (ಪಶ್ಚಿಮದ ಭೂಮಿಯ ಕಥನ’) ಎಂಬ ತನ್ನ ಗ್ರಂಥದಲ್ಲಿ ಆತನು ಭಾರತ ಪ್ರವಾಸದ ವಿವರವನ್ನು ನೀಡಿದ್ದಾನೆ. ಹ್ಯುಯೆನ್‍ತ್ಸಾಂಗನನ್ನು ಭೇಟಿಯಾಗುವ ಮೊದಲೇ ಹರ್ಷವರ್ಧನನು ತನ್ನ ರಾಯಭಾರಿಯನ್ನು ಚೀನಾ ಚಕ್ರವರ್ತಿಯ ಆಸ್ಥಾನಕ್ಕೆ ಕಳುಹಿಸಿದ್ದನು. ಇದಕ್ಕೆ ಪ್ರತಿಯಾಗಿ ಚೀನಿ ರಾಯಭಾರಿಯನ್ನು ಇಲ್ಲಿಗೆ ಕಳುಹಿಸಲಾಗಿತ್ತು.

ನಲಂದಾ ವಿಹಾರ : ಬಿಹಾರ ರಾಜ್ಯದಲ್ಲಿರುವ ನಲಂದಾ ವಿಹಾರವು ಆರು ಶತಮಾನಗಳಿಗೂ ಹೆಚ್ಚು ಕಾಲ ಜಗತ್ಪ್ರಸಿದ್ಧಿ ಪಡೆದಿತ್ತು. ಅಧ್ಯಯನಕ್ಕಾಗಿ ಜಪಾನ್, ಚೀನಾ ಮುಂತಾದ ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರು. ಇವರೆಲ್ಲರಿಗೆ ಭಾರತೀಯ ಹೆಸರುಗಳನ್ನಿಡುತ್ತಿದ್ದರು. ಇಲ್ಲಿ ಎಂಟು ಮಹಾಪಾಠಶಾಲೆಗಳೂ ಮೂರು ಬೃಹತ್ ಗ್ರಂಥಭಂಡಾರಗಳೂ ಇದ್ದವು. ಬೌದ್ಧಮತ ಇಲ್ಲಿನ ಮುಖ್ಯ ಅಧ್ಯಯನ ವಿಷಯವಾಗಿದ್ದರೂ ವೇದ, ಯೋಗ, ವೈದ್ಯ ಮತ್ತಿತರ ವಿಷಯಗಳ ಬಗೆಗೂ ಶಿಕ್ಷಣವಿತ್ತು. ಹ್ಯೂಯೆನ್‍ತ್ಸಾಂಗ್ ಈ ಮಹಾವಿದ್ಯಾಲಯದಲ್ಲಿ ಹಲವಾರು ವರ್ಷಗಳನ್ನು ಕಳೆದಿದ್ದನು.

ಮುಂದೆ, ವಿದೇಶಿ ಆಕ್ರಮಣಕಾರರು ಹಿಂಸಾಚಾರ ನಡೆಸಿ ವಿದ್ಯಾಲಯವನ್ನು ಧ್ವಂಸಗೈದರು. ಇದರಿಂದ ಗ್ರಂಥಾಲಯಗಳು ಬೆಂಕಿಗೆ ಆಹುತಿಯಾದವು. ಮಹಾಪಂಡಿತರು ಅಸು ನೀಗಿದರು. ನಲಂದಾ ನಿರ್ನಾಮವಾಯಿತು.

ನಿಮಗೆ ತಿಳಿದಿರಲಿ

ನಲಂದಾ ವಿದ್ಯಾಕೇಂದ್ರದಲ್ಲಿ ಶಿಕ್ಷಣಕ್ಕಾಗಲಿ, ಊಟ ವಸತಿಗಳಿಗಾಗಲಿ ಶುಲ್ಕವಿರಲಿಲ್ಲ. ಈ ಎಲ್ಲ ಖರ್ಚನ್ನು ನಿರ್ವಹಿಸಲು ನೂರು ಗ್ರಾಮಗಳ ಆದಾಯವು ಮೀಸಲಾಗಿದ್ದಿತು. ಸಾಮ್ರಾಟ ಹರ್ಷವರ್ಧನ ಈ ವಿಶ್ವವಿದ್ಯಾಲಯದ ಪೋಷಕರಲ್ಲೊಬ್ಬ. ವಿದ್ಯಾರ್ಥಿ ಜೀವನ ಕಟ್ಟುನಿಟ್ಟಾಗಿತ್ತು. ಶ್ರೇಷ್ಠಪಂಡಿತರು, ಅಧ್ಯಾಪಕ ವರ್ಗದಲ್ಲಿದ್ದರು.

ಸಂವೇದ ವಿಡಿಯೋ ಪಾಠಗಳು

Social Science- Guptaru mattu Vardhanaru

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

Ajanta Caves, Maharashtra, India [Amazing Places 4K]
अशोक स्तंभ का इतिहास | History of Ashok Stambh – Ashoka Pillar
Gupta Empire as Golden Age | Art and Culture | Ancient India

ART & CULTURE | GUPTA AGE : TEMPLES AND SCULPTURE
दशावतार मंदिर:गुप्तकाल का गौरव. Dashavatar Temple.Pride of Gupta period
Great Iron Pillar Delhi – Non-rusting Iron pillar of India – Ancient marvel of India -Medieval India
The Ancient University of Nalanda | It Happens Only in India | National Geographic

ಪ್ರಶ್ನೋತ್ತರಗಳು

guptaru mattu vardhanaru notes in Kannada,6th standard social notes ಗುಪ್ತರು ಮತ್ತು ವರ್ಧನರು class 6

******************