ಇಕೋ ಕ್ಲಬ್ ವತಿಯಿಂದ ಕೃಷಿ ಅಧ್ಯಯನದ ಪ್ರಾಯೋಗಿಕ ಪಾಠ

ತಾಲ್ಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಕುತ್ರಿ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮಂಗಳವಾರ ಗದ್ದೆಕೊಯ್ಲು ಮಾಡಿ ಸಂಭ್ರಮಿಸಿದರು.

ಪ್ರತಿ ವರ್ಷ ಕೃಷಿ ಅಧ್ಯಯನದ ಅಂಗವಾಗಿ ಗದ್ದೆನಾಟಿ, ಗದ್ದೆ ಕೊಯ್ಲು ಮಾಡುವ ಈ ಶಾಲೆಯ ವಿದ್ಯಾರ್ಥಿಗಳು ಕೋವಿಡ್ ನಿಂದಾಗಿ ಕಳೆದ ವರ್ಷ ಹಾಗೂ ಈ ವರ್ಷ ನಾಟಿ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಅಧಿಕೃತವಾಗಿ ಶಾಲೆ ಪ್ರಾರಂಭವಾಗಿರುವುದರಿಂದ ಗದ್ದೆಕೊಯ್ಲಿಗೆ ಉತ್ಸುಕರಾಗಿದ್ದ ಮಕ್ಕಳಿಗೆ ಇಕೊ ಕ್ಲಬ್ ವತಿಯಿಂದ ಶಾಲೆಯ ಪಕ್ಕದ ಊರಾದ ಹೆಮಜೆನಿಯ ಶ್ರೀ ಕೆರಿಯಾ ಗಣಪ ಗೌಡ ಇವರು ತಮ್ಮ ಗದ್ದೆಯನ್ನು ಕೊಯ್ಲಿಗೆ ಅವಕಾಶ ಮಾಡಿಕೊಟ್ಟರು.

ಕಳೆದ ಎರಡು ವರ್ಷಗಳಿಂದ ಕೃಷಿ ಅಧ್ಯಯನ ನಡೆಸುತ್ತಿರುವ ಈ ಶಾಲೆಯ ಮಕ್ಕಳು ಕೃಷಿ ಕಾರ್ಯವನ್ನು ಕರಗತ ಮಾಡಿಕೊಂಡಿದ್ದರು. ಅಂದಾಜು 4 ಗುಂಟೆ ಕ್ಷೇತ್ರವನ್ನು 4 ರಿಂದ 7ನೇ ತರಗತಿಯ 17 ವಿದ್ಯಾರ್ಥಿಗಳು ಅರ್ಧ ಗಂಟೆಯಲ್ಲಿ ಪೂರ್ಣಗೊಳಿಸಿ ಸಂಭ್ರಮಿಸಿದರು.

ಅಲ್ಲದೇ ತಮ್ಮ ಪಾಠದಲ್ಲಿ ಬಂದಿರುವ ಕೃಷಿ ಪಾಠ, ಡಿಗ್ನಿಟಿ ಆಫ್ ಲೇಬರ್ ಹಾಗೂ ಸೀನ ಶೆಟ್ಟರು ನಮ್ಮ ಟೀಚರು ಪಾಠದ ಪ್ರಾಯೋಗಿಕ ಅನುಭವ ಪಡೆದರು.

ಸ್ಥಳದಲ್ಲಿ ಗದ್ದೆಯ ಗದ್ದೆಯ ಮಾಲಿಕರಾದ ಶ್ರೀ ಕೆರಿಯಾ ಗಣಪ ಗೌಡ, ಹೆಮಜೆನಿ, ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ರಾಧಾ ವೆಂಕಟ್ರಮಣ ಗೌಡ, ಹೆಮಜೆನಿ, ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ದರ್ಶನ ಹರಿಕಾಂತ, ಶ್ರೀಮತಿ ಅನ್ನಪೂರ್ಣ ಕೆರಿಯಾ ಗೌಡ ಹಾಗೂ ಊರ ಹಿರಿಯರಾದ ಶ್ರೀ ರಾಮ ಗೌಡ ಇವರು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡಿದರು.

“ಶಿಕ್ಷಕರ ಸಹಕಾರದಿಂದ ಹಾಗೂ ರೈತರಿಂದ ಕೃಷಿ ಕಾರ್ಯವನ್ನು ತಿಳಿದುಕೊಂಡಿದ್ದೇನೆ. ನಾಟಿ ಮಾಡಲಾಗದಿದ್ದರೂ ಕೊಯ್ಲು ಮಾಡುವುದರ ಮೂಲಕ ಸಂಭ್ರಮಿಸಿದ್ದೇನೆ”ತ್ರಿಶಾಂತ ನರಹರಿ ಗೌಡ, 7ನೇ ತರಗತಿ

ದಿನಪತ್ರಿಕೆಗಳಲ್ಲಿ..

ವಿಜಯವಾಣಿ
ನುಡಿಜೇನು
ಕೊಂಕಣವಾಣಿ
ಸಾಗರ ಸಾಮ್ರಾಟ