ಪಾಠದ ಪರಿಚಯ

ಈ ಅಧ್ಯಾಯದಲ್ಲಿ ಕೇಂದ್ರ ಸರ್ಕಾರದ ಶಾಸಕಾಂಗ ಮತ್ತು ಕಾರ್ಯಾಂಗಗಳ ರಚನೆ ಮತ್ತು ವ್ಯಾಪ್ತಿಯನ್ನು ಪರಿಚಯಿಸಲಾಗಿದೆ. ಅಲ್ಲದೆ, ಸಂಸತ್ ಸದಸ್ಯರ ಅರ್ಹತೆಗಳು ಮತ್ತು ಕಾರ್ಯಗಳು; ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯವರ ಅಧಿಕಾರ ಮತ್ತು ಕಾರ್ಯಗಳು; ಮತ್ತು ಮಂತ್ರಿಮಂಡಲದ ರಚನೆ ಹಾಗೂ ಕಾರ್ಯಗಳ ಬಗೆಗೆ ಪ್ರಸ್ತುತಪಡಿಸಲಾಗಿದೆ.

ಭಾರತದ ಒಕ್ಕೂಟ: ಭಾರತವು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿರುವ ಒಕ್ಕೂಟವಾಗಿದೆ. ಒಕ್ಕೂಟದ ಸರ್ಕಾರವನ್ನು ಕೇಂದ್ರ ಸರ್ಕಾರ ಎನ್ನುವರು. ಸರ್ಕಾರಕ್ಕೆ ಮೂರು ಅಂಗಗಳಿವೆ:

ಶಾಸಕಾಂಗ: ಶಾಸನಗಳನ್ನು ಅಥವಾ ಕಾಯಿದೆ ಕಾನೂನುಗಳನ್ನು ಮಾಡುವ ಅಂಗವೇ ಶಾಸಕಾಂಗ ಜೊತೆಗೆ ಇದು ಕಾರ್ಯಾಂಗದ ಮೇಲೆ ಹತೋಟಿ ಇಟ್ಟುಕೊಳ್ಳುವ ಕೆಲಸವನ್ನು ಮಾಡುತ್ತದೆ.

ಕಾರ್ಯಾಂಗ: ಇದು ಶಾಸನಗಳನ್ನು ಆಡಳಿತದ ಮುಖಾಂತರ ಕಾರ್ಯರೂಪಕ್ಕೆ ತರುತ್ತದೆ.

ನ್ಯಾಯಾಂಗ: ನ್ಯಾಯಾಂಗವು ನ್ಯಾಯನಿರ್ಣಯ ನೀಡುತ್ತದೆ.

ನ್ಯಾಯಾಂಗವು ಸಂವಿಧಾನ ಹಾಗೂ ಕಾನೂನುಗಳ ಬಗ್ಗೆ ಸ್ಪಷ್ಟನೆ ಹಾಗೂ ನಿರ್ಣಯಗಳನ್ನು ನೀಡುತ್ತದೆ. ವ್ಯಾಜ್ಯಗಳನ್ನು ಪರಿಹರಿಸುತ್ತದೆ. (ಉದಾ: ವ್ಯಕ್ತಿ-ವ್ಯಕ್ತಿಗಳ ನಡುವೆ, ವ್ಯಕ್ತಿ- ಸರ್ಕಾರದ ನಡುವೆ, ಸರ್ಕಾರ-ಸರ್ಕಾರದ ನಡುವೆ ಇತ್ಯಾದಿ.)

ಈ ಅಂಗಗಳ ರಚನೆ ಹೇಗಾಗುತ್ತದೆ? ಅವುಗಳ ಅಧಿಕಾರ ಹಾಗೂ ಕಾರ್ಯಗಳು ಯಾವುವು? ಎಂಬುದನ್ನು ಈಗ ತಿಳಿಯೋಣ.

ಕೇಂದ್ರ ಶಾಸಕಾಂಗ

ಕೇಂದ್ರ ಶಾಸಕಾಂಗವನ್ನು `ಸಂಸತ್ತು’ ಅಥವಾ `ಪಾರ್ಲಿಮೆಂಟ್’ ಎನ್ನುತ್ತೇವೆ. ಭಾರತದ ಸಂಸತ್ತು ರಾಷ್ಟ್ರಪತಿ ಮತ್ತು ಎರಡು ಸದನಗಳನ್ನು ಒಳಗೊಂಡಿದೆ. ಎರಡು ಸದನಗಳೆಂದರೆ `ಲೋಕಸಭೆ’ ಮತ್ತು `ರಾಜ್ಯಸಭೆ’. ಸಂಸತ್ತು ತನ್ನ ಸಭೆಯನ್ನು ಹೊಸದಿಲ್ಲಿಯಲ್ಲಿರುವ `ಪಾರ್ಲಿಮೆಂಟ್ ಭವನ’ದಲ್ಲಿ ನಡೆಸುತ್ತದೆ. ಇಲ್ಲಿ ಸಂಸತ್ತಿನ ಸದಸ್ಯರು ಚರ್ಚೆ ನಡೆಸಿ ಇಡಿ ದೇಶಕ್ಕೆ ಅನ್ವಯವಾಗುವ ಶಾಸನಗಳನ್ನು ರೂಪಿಸುತ್ತಾರೆ.

ಲೋಕಸಭೆ: ಲೋಕಸಭೆಯನ್ನು ಸಂಸತ್ತಿನ `ಕೆಳಮನೆ’ ಎನ್ನುವರು. ಲೋಕಸಭೆಯ ಸದಸ್ಯರನ್ನು 18 ವರ್ಷಕ್ಕೆ ಮೇಲ್ಪಟ್ಟ ಪ್ರಜೆಗಳು ನೇರವಾಗಿ ಚುನಾಯಿಸುತ್ತಾರೆ. ಸದಸ್ಯರ ಗರಿಷ್ಠ ಸಂಖ್ಯೆ 552.

ಲೋಕಸಭಾ ಸದಸ್ಯರು: ಲೋಕಸಭಾ ಸದಸ್ಯರ ಅಧಿಕಾರಾವಧಿ ಐದು ವರ್ಷ. ಲೋಕಸಭೆಯ ಸದಸ್ಯರು ಬಯಸಿದಷ್ಟು ಸಲ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು. ಐದು ವರ್ಷಗಳ ಅವಧಿ ಮುಗಿದ ನಂತರ ಲೋಕಸಭೆ ವಿಸರ್ಜನೆಯಾಗುತ್ತದೆ.

ಲೋಕಸಭಾ ಸದಸ್ಯರ ಅರ್ಹತೆಗಳು:

1. ಭಾರತದ ಪ್ರಜೆಯಾಗಿರಬೇಕು.

2. ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.

3. ಸರ್ಕಾರದ ಯಾವುದೇ ಹುದ್ದೆಯಲ್ಲಿರಬಾರದು.

4. ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿರಬಾರದು.

5. ನ್ಯಾಯಾಲಯದಿಂದ ಜೈಲು ಶಿಕ್ಷೆಗೆ ಒಳಗಾಗಿರಬಾರದು.

6. ಅವರು ದಿವಾಳಿಯಾಗಿರಬಾರದು; ಅಂದರೆ ಆರ್ಥಿಕವಾಗಿ ಎಲ್ಲವನ್ನು ಕಳೆದುಕೊಂಡವರು ಆಗಿರಬಾರದು.

7. ಸಂಸತ್ತು ಕಾಲಕಾಲಕ್ಕೆ ನಿಗಧಿಪಡಿಸುವ ಅರ್ಹತೆ ಪಡೆದಿರಬೇಕು.

ಲೋಕಸಭಾಧ್ಯಕ್ಷರು: ಲೋಕಸಭೆಯ ಸದಸ್ಯರು ತಮ್ಮೊಳಗೆ ಒಬ್ಬರನ್ನು ಲೋಕಸಭೆಯ ಅಧ್ಯಕ್ಷರನ್ನಾಗಿ (ಸ್ಪೀಕರ್) ಆಯ್ಕೆ ಮಾಡಿಕೊಳ್ಳುವರು. ಲೋಕಸಭಾಧ್ಯಕ್ಷರ ಅಧಿಕಾರ ಮತ್ತು ಕರ್ತವ್ಯಗಳು ಇಂತಿವೆ: ಸದನದಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ತೀರ್ಮಾನಿಸುವುದು; ಸದನದಲ್ಲಿ ಶಿಸ್ತು, ಶಾಂತಿ ಹಾಗೂ ಸಂಯಮ ಕಾಪಾಡುವುದು; ಮತ್ತು ಸರಿಯಾದ ರೀತಿಯಲ್ಲಿ ಚರ್ಚೆ ನಡೆಸುವುದು ಹಾಗೂ ನಿರ್ಣಯ ಕೈಗೊಳ್ಳುವುದು.

ರಾಜ್ಯಸಭೆ: ರಾಜ್ಯಸಭೆಯು ಸಂಸತ್ತಿನ `ಮೇಲ್ಮನೆ’ಯಾಗಿದೆ. ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ 250. ಇವರು ಪ್ರಜೆಗಳಿಂದ ನೇರವಾಗಿ ಆಯ್ಕೆಗೊಳ್ಳುವುದಿಲ್ಲ. ಅವರಲ್ಲಿ 238 ಸದಸ್ಯರನ್ನು ಎಲ್ಲಾ ರಾಜ್ಯಗಳ ವಿಧಾನಸಭಾ ಸದಸ್ಯರು ಆಯ್ಕೆ ಮಾಡುವರು. ಉಳಿದ 12 ಸದಸ್ಯರನ್ನು ರಾಷ್ಟ್ರಪತಿಯವರು ನಾಮನಿರ್ದೇಶನ ಮಾಡುವರು.

ರಾಜ್ಯಸಭಾ ಸದಸ್ಯರು: ರಾಜ್ಯಸಭೆಯ ಸದಸ್ಯರಾಗುವವರಿಗೆ ಕನಿಷ್ಠ 30 ವರ್ಷ ವಯಸ್ಸಾಗಿರಬೇಕು. ರಾಜ್ಯಸಭಾ ಸದಸ್ಯರ ಅಧಿಕಾರಾವಧಿ ಆರು ವರ್ಷ. ಭಾರತದ ಉಪರಾಷ್ಟ್ರಪತಿಯವರೇ ರಾಜ್ಯಸಭೆಯ ಸಭಾಧ್ಯಕ್ಷರು.

ಸಂಸತ್ ಸದಸ್ಯರ ಹಕ್ಕುಗಳು: ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರನ್ನು ಎಂ.ಪಿ. (ಮೆಂಬರ್ ಆಫ್ ಪಾರ್ಲಿಮೆಂಟ್) ಎಂದು ಕರೆಯುವರು. ಇವರಿಗೆ ಸಂಸತ್ತಿನೊಳಗೆ ವಾಕ್‍ಸ್ವಾತಂತ್ರ್ಯವಿದೆ. ಇವರು ಸಂಸತ್ತಿನಲ್ಲಿ ನೀಡುವ ಅಭಿಪ್ರಾಯವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

ಪ್ರತಿಪಕ್ಷ ನಾಯಕರ ಪಾತ್ರ ಮತ್ತು ಕಾರ್ಯ: ಪ್ರತಿಪಕ್ಷದ ನಾಯಕರಿಗೆ ಗೌರವಾನ್ವಿತ ಸ್ಥಾನವಿದೆ ಏಕೆಂದರೆ ಇವರು ಆಡಳಿತ ಸರ್ಕಾರ ತಪ್ಪು ಎಸಗುತ್ತಿದ್ದರೆ ಅವುಗಳನ್ನು ಎತ್ತಿ ತೋರಿಸುತ್ತಾರೆ; ಸರ್ಕಾರದ ನೀತಿ ನಿಯಮಗಳನ್ನು ಪರಾಮರ್ಶಿಸುತ್ತಾರೆ; ಮತ್ತು ಸರ್ಕಾರ, ಮಂತ್ರಿಮಂಡಲ ಹಾಗೂ ಅಧಿಕಾರಿಗಳನ್ನು ಸತರ್ಕ(ಎಚ್ಚರ)ಗೊಳಿಸುತ್ತಾರೆ.

ಸಂಸತ್ತಿನ ಅಧಿಕಾರ ಹಾಗೂ ಕಾರ್ಯಗಳು

ಸಂಸತ್ತಿನ ಕೆಲವು ಮುಖ್ಯ ಅಧಿಕಾರ ಹಾಗೂ ಕಾರ್ಯಗಳು ಇಂತಿವೆ:

1. ಶಾಸನೀಯ ಅಧಿಕಾರ: ಸಂಸತ್ತಿನ ಮುಖ್ಯ ಕಾರ್ಯವೆಂದರೆ ಶಾಸನ ರಚಿಸುವುದು. ಅವಶ್ಯವಿದ್ದಲ್ಲಿ ಸಂಸತ್ತು ಶಾಸನವನ್ನು ತಿದ್ದುಪಡಿ ಮಾಡಬಹುದು, ಇಲ್ಲವೆ ರದ್ದು ಪಡಿಸಬಹುದು. ಮುಖ್ಯವಾಗಿ ಕೇಂದ್ರದ ಮಂತ್ರಿಮಂಡಲದ (ಪ್ರಧಾನಿಯನ್ನು ಒಳಗೊಂಡಂತೆ) ಮೇಲೆ ನಿಯಂತ್ರಣ (ಹತೋಟಿ) ಇಟ್ಟುಕೊಳ್ಳುವುದು. ಒಂದು ವೇಳೆ ವರ್ತನೆ ಅಥವಾ ನೀತಿಗಳು ಅಸಮಾಧಾನಕರವಾಗಿದ್ದರೆ ಬಹುಮತದಿಂದ ಮಂತ್ರಿಮಂಡಲವನ್ನು ವಜಾ ಮಾಡುವುದು ಸಹ ಸಂಸತ್ತಿನ ಪ್ರಮುಖ ಅಧಿಕಾರವಾಗಿದೆ.

2. ಹಣಕಾಸಿನ ಅಧಿಕಾರ: ಹಣಕಾಸಿನ ವಿಧೇಯಕವನ್ನು (ಬಿಲ್) ಮೊದಲು ಲೋಕಸಭೆಯಲ್ಲಿಯೇ ಮಂಡಿಸಬೇಕು. ಸಂಸತ್ತಿನ ಒಪ್ಪಿಗೆಯಿಲ್ಲದೆ ಸರ್ಕಾರವು ಯಾವುದೇ ತೆರಿಗೆಯನ್ನು ಸಂಗ್ರಹಿಸುವಂತಿಲ್ಲ ಹಾಗೂ ಹಣವನ್ನು ವೆಚ್ಚ ಮಾಡುವಂತಿಲ್ಲ. ಅಂದರೆ ದೇಶದ ಹಣಕಾಸಿನ ವ್ಯವಸ್ಥೆಯ ಮೇಲೆ ಸಂಸತ್ತಿಗೆ ಪೂರ್ಣ ನಿಯಂತ್ರಣವಿದೆ ಎಂದಾಯಿತು.

3. ಆಡಳಿತದ ಅಧಿಕಾರ: ಸಂಸತ್ತಿನಲ್ಲಿ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಮಂತ್ರಿಗಳು ಜವಾಬ್ದಾರಿಯಿಂದ ಉತ್ತರ ನೀಡಬೇಕಾಗುವುದು. ಸದಸ್ಯರು ಮಂತ್ರಿಗಳ ಕಾರ್ಯನಿರ್ವಹಣೆಯನ್ನು ಗಮನಿಸಿ, ಮಾಡುವ ತಪ್ಪುಗಳನ್ನು ಮತ್ತು ಅಧಿಕಾರದ ದುರುಪಯೋಗವನ್ನು ಟೀಕಿಸಬಹುದು.

4. ಸಂವಿಧಾನ ತಿದ್ದುಪಡಿ ಅಧಿಕಾರ: ಸಾಮಾನ್ಯವಾಗಿ ಸಂಸತ್ತಿಗೆ ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರ ಹೊಂದಿದೆ.

ಕೇಂದ್ರ ಕಾರ್ಯಾಂಗ

ಕೇಂದ್ರ ಕಾರ್ಯಾಂಗವು ರಾಷ್ಟ್ರಪತಿ, ಪ್ರಧಾನಿ ಹಾಗೂ ಅವರ ಮಂತ್ರಿಮಂಡಲಗಳನ್ನೊಳಗೊಂಡಿದೆ.

ರಾಷ್ಟ್ರಪತಿ:

ಭಾರತ ಗಣರಾಜ್ಯದ ಅತ್ಯುನ್ನತ ಅಧಿಕಾರಿಗೆ `ರಾಷ್ಟ್ರಪತಿ’ ಎನ್ನುವರು. ಇವರನ್ನು ರಾಷ್ಟ್ರದ ಪ್ರಪ್ರಥಮ ಪ್ರಜೆ ಎನ್ನುತ್ತಾರೆ. ಇವರ ಅಧಿಕೃತ ನಿವಾಸವೇ `ರಾಷ್ಟ್ರಪತಿ ಭವನ’. ಸಂಸತ್ತಿನ ಎರಡು ಸದನಗಳ ಚುನಾಯಿತ ಸದಸ್ಯರು ಮತ್ತು ಎಲ್ಲ ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರು ರಾಷ್ಟ್ರಪತಿಯವರನ್ನು ಚುನಾಯಿಸುತ್ತಾರೆ.

ಭಾರತದ ರಾಷ್ಟ್ರಪತಿಯಾಗಬೇಕಾದರೆ ಅವರಿಗೆ ಕನಿಷ್ಠ 35 ವರ್ಷ ವಯಸ್ಸಾಗಿರಬೇಕು; ಮತ್ತು ಲೋಕಸಭೆಯ ಸದಸ್ಯರಿಗೆ ಇರುವ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು. ರಾಷ್ಟ್ರಪತಿಯವರ ಅಧಿಕಾರಾವಧಿ ಐದು ವರ್ಷ.

ಅಧಿಕಾರಗಳು:

(1) ರಾಷ್ಟ್ರಪತಿ ಲೋಕಸಭೆಯಲ್ಲಿ ಬಹುಮತದ ಬೆಂಬಲ ಪಡೆದ ಪಕ್ಷದ ನಾಯಕರನ್ನು ಪ್ರಧಾನ ಮಂತ್ರಿ ಯವರನ್ನಾಗಿ ನೇಮಿಸುವರು. ಪ್ರಧಾನ ಮಂತ್ರಿಯವರ ಸಲಹೆ ಮೇರೆಗೆ ಇತರ ಮಂತ್ರಿಗಳನ್ನು ನೇಮಿಸುವರು.

(2) ಯಾವುದೇ ಕರಡು ಶಾಸನವು ಕಾನೂನಾಗಲು ರಾಷ್ಟ್ರಪತಿಯವರ ಅಂಕಿತ ಅಗತ್ಯವಾಗಿರುತ್ತದೆ.

(3) ರಕ್ಷಣಾಪಡೆಗಳ ಮೇಲಿನ ಸರ್ವೋಚ್ಚ ಅಧಿಕಾರ ಇವರಿಗಿದೆ. ಯುದ್ಧಸಾರುವ ಅಧಿಕಾರವೂ ಇವರಿಗಿದೆ.

(4) ಇವರಿಗೆ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನು ನೇಮಕ ಮಾಡುವ ಅಧಿಕಾರವಿದೆ.

(5) ಅಪರಾಧಿಗಳಿಗೆ ಕ್ಷಮದಾನ ನೀಡುವ ಮತ್ತು ಶಿಕ್ಷೆಯನ್ನು ಕಡಿಮೆ ಮಾಡುವ ಅಧಿಕಾರವಿದೆ.

ಉಪರಾಷ್ಟ್ರಪತಿ:

ಕೇಂದ್ರ ಸಂಸತ್ತಿನ ಎರಡೂ ಸದನದ ಸದಸ್ಯರು ಉಪರಾಷ್ಟ್ರಪತಿ ಅವರನ್ನು ಚುನಾಯಿಸುವರು. ಭಾರತದ ಉಪರಾಷ್ಟ್ರಪತಿಯಾಗಬೇಕಾದರೆ ಅವರಿಗೆ ಕನಿಷ್ಠ 35 ವರ್ಷ ವಯಸ್ಸಾಗಿರಬೇಕು ಮತ್ತು ರಾಷ್ಟ್ರಪತಿಯಾಗಲು ಇರಬೇಕಾದ ಎಲ್ಲ ಅರ್ಹತೆಗಳನ್ನು ಹೊಂದಿರಬೇಕು. ಅವರ ಅಧಿಕಾರಾವಧಿ ಐದು ವರ್ಷ. ಅವರು ರಾಜ್ಯಸಭೆಯ ಅಧ್ಯಕ್ಷರು. ರಾಷ್ಟ್ರಪತಿ ಗೈರು ಹಾಜರಿಯಲ್ಲಿ ಅವರ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಾರೆ.

ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರ ಮಹತ್ವ: ಸಂಸದೀಯ ಪದ್ಧತಿಯಲ್ಲಿ ಪ್ರಧಾನಮಂತ್ರಿಯವರ ಪಾತ್ರ ಮಹತ್ವದ್ದಾಗಿದೆ. ದೇಶದ ಭದ್ರತೆಯನ್ನು ಕಾಪಾಡುವುದರಲ್ಲಿ ಇವರ ಜವಾಬ್ದಾರಿ ಅಪಾರವಾದದ್ದು. ಪ್ರಧಾನಿಯವರು-

1. ಲೋಕಸಭೆಯ ನಾಯಕರಾಗಿದ್ದಾರೆ.

2. ಖಾತೆಗಳ ಹಂಚಿಕೆಯ ಅಧಿಕಾರ ಇವರಿಗಿದೆ.

3. ಸರ್ಕಾರದ ಮುಖ್ಯಸ್ಥರಾಗಿದ್ದಾರೆ.

4. ಸಚಿವ ಸಂಪುಟದ ಪುನರ್‍ರಚನೆಯ ಅಧಿಕಾರ ಇವರಿಗಿದೆ.

5. ವಿವಿಧ ಇಲಾಖೆಗಳಿಗೆ ಸಚಿವರನ್ನು ನೇಮಕ ಮಾಡುವಂತೆ ರಾಷ್ಟ್ರಪತಿಯವರು ಶಿಫಾರಸು ಮಾಡುತ್ತಾರೆ.

6. ಸಚಿವರನ್ನು ಪದಚ್ಯುತಿಗೊಳಿಸುವಂತೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡುತ್ತಾರೆ.

ಕೇಂದ್ರ ಮಂತ್ರಿಮಂಡಲ ರಚನೆ: ರಾಷ್ಟ್ರಪತಿಯವರು ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷದ ನಾಯಕರನ್ನು ಸರ್ಕಾರ ರಚಿಸುವಂತೆ ಆಹ್ವಾನಿಸಿ, ಅವರನ್ನು ಪ್ರಧಾನಮಂತ್ರಿಯಾಗಿ ನೇಮಕ ಮಾಡುತ್ತಾರೆ. ಅನಂತರ ಪ್ರಧಾನಮಂತ್ರಿಯವರ ಸಲಹೆಯ ಮೇರೆಗೆ ಉಳಿದ ಸಚಿವರ ನೇಮಕ ಮಾಡುತ್ತಾರೆ. ಪ್ರಧಾನಿ ಮತ್ತು ಸಚಿವರು ಸೇರಿ ಕೇಂದ್ರ ಮಂತ್ರಿಮಂಡಲ (ಕ್ಯಾಬಿನೆಟ್) ರಚನೆಯಾಗುತ್ತದೆ. ಈ ರೀತಿ ಮಂತ್ರಿಮಂಡಲ ರಚನೆಯಾಗುವ ಪದ್ಧತಿಗೆ `ಸಂಸದೀಯ ಪದ್ಧತಿ’ (`ಕ್ಯಾಬಿನೆಟ್ ಪದ್ಧತಿ’) ಎನ್ನುವರು.

ಮಂತ್ರಿಯವರು ಒಂದು ಸಚಿವ ಖಾತೆಯ ರಾಜಕೀಯ ಮುಖ್ಯಸ್ಥರಾಗಿರುತ್ತಾರೆ. ಸಚಿವರ ಹೊಣೆಗಾರಿಕೆಯು ಕ್ಯಾಬಿನೆಟ್ ಪದ್ಧತಿಯ ತಿರುಳಾಗಿದೆ. ಅಂದರೆ ತನ್ನ ಖಾತೆಯ ಕಾರ್ಯನಿರ್ವಹಣೆಗೆ ಮಂತ್ರಿಯವರು ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ.

ಸಚಿವರ ಖಾತೆಗಳನ್ನು ಪ್ರಧಾನಿಯೇ ಹಂಚಿಕೊಡುತ್ತಾರೆ. ಪ್ರಧಾನಿಯವರು ಕೆಲವೊಂದು ಸಂದರ್ಭಗಳಲ್ಲಿ ಯಾವುದೇ ಸಚಿವರ ರಾಜೀನಾಮೆ ಕೇಳಬಹುದು. ಪ್ರಧಾನ ಮಂತ್ರಿಯವರು ರಾಜೀನಾಮೆ ನೀಡಿದಾಗ, ಅವರ ಸಂಗಡ ಸಚಿವ ಸಂಪುಟವೂ ವಿಸರ್ಜನೆಯಾಗುತ್ತದೆ. ಮಂತ್ರಿಮಂಡಲವು ಲೋಕಸಭೆಗೆ ಬದ್ಧವಾಗಿರುತ್ತದೆ. ಲೋಕಸಭೆಯು ಅವಿಶ್ವಾಸ ಗೊತ್ತುವಳಿ ಮಂಡಿಸಿ ಬಹುಮತ ಸಾಬೀತು ಪಡಿಸಿದರೆ ಮಂತ್ರಿಮಂಡಲ ವಜಾಗೊಳ್ಳುತ್ತದೆ.

ನಿಮಗೆ ತಿಳಿದಿರಲಿ

* ಹೊಸದಿಲ್ಲಿಯ ಪಾರ್ಲಿಮೆಂಟ್ ಭವನ, ರಾಷ್ಟ್ರಪತಿ ಭವನ ಮುಂತಾದ ಭವ್ಯ ಕಟ್ಟಡಗಳನ್ನು ಬ್ರಿಟಿಷರ ಆಡಳಿತ ಕಾಲದಲ್ಲಿ ನಿರ್ಮಾಣ ಮಾಡಲಾಗಿತ್ತು. ರಾಷ್ಟ್ರಪತಿ ಭವನದಲ್ಲಿ 340 ಕೊಠಡಿಗಳಿವೆ. ಇದು 1929ರಲ್ಲಿ ಪೂರ್ಣಗೊಂಡಿತು.

* ಸೆಂಟ್ರಲ್ ವಿಸ್ತಾಯೋಜನೆಯ ಭಾಗವಾಗಿ ನೂತನ ಸಂಸತ್ ಭವನವನ್ನು ನಿರ್ಮಿಸಿ 28-05-2023ರಂದು ಲೋಕಾರ್ಪಣೆಗೊಳಿಸಲಾಗಿದೆ. ಇದು 888 ಆಸನಗಳ ಲೋಕಸಭಾ ಸಭಾಂಗಣ ಹಾಗೂ 384 ಆಸನಗಳ ರಾಜ್ಯಸಭಾ ಸಭಾಂಗಣವನ್ನು ಹೊಂದಿದೆ.

* ಸಂಸತ್ ಸದಸ್ಯರು ಮಾಸಿಕ ವೇತನ ಮತ್ತು ಕ್ಷೇತ್ರ ಭತ್ಯೆ ಪಡೆಯುತ್ತಾರೆ. ಜೊತೆಗೆ ಮೊಬೈಲ್, ದೂರವಾಣಿ, ಕಚೇರಿ ವೆಚ್ಚ, ರಸ್ತೆ ಮೈಲೇಜ್ ಭತ್ಯೆಗಳು, ಉಚಿತ ವಿದ್ಯುತ್, ನೀರು, ಸ್ಥಳೀಯ ದೂರವಾಣಿ ಕರೆಗಳು – ಈ ಎಲ್ಲಾ ಸೌಲಭ್ಯಗಳನ್ನು ಅವರಿಗೆ ಒದಗಿಸಲಾಗಿದೆ.

ಕೇಂದ್ರ ಸರ್ಕಾರ | 7ನೇ ತರಗತಿ | Kendra sarkara question answer | 7th standard | Kendra sarkara notes|

ಭಾರತದ ಪ್ರಧಾನಮಂತ್ರಿಗಳ ಪಟ್ಟಿ ತಯಾರಿಸಿ ಶಾಲೆಯಲ್ಲಿ ಪ್ರದರ್ಶಿಸಿ.

ಪ್ರಧಾನ ಮಂತ್ರಿಯು ಸರ್ಕಾರದ ಮುಖ್ಯಸ್ಥ ಮತ್ತು ಮಂತ್ರಿಗಳ ಮಂಡಳಿಯ ನಾಯಕ. ಅವರು ಕೇಂದ್ರ ಸರ್ಕಾರದ ಕಾರ್ಯನಿರ್ವಾಹಕ ಶಾಖೆಯ ಮುಖ್ಯಸ್ಥರಾಗಿದ್ದಾರೆ. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ದೇಶಕ್ಕಾಗಿ ಕೆಲಸ ಮಾಡುವ ಉತ್ಸಾಹದಿಂದ ಶ್ರೇಷ್ಠ ಸಾಮರ್ಥ್ಯದ ವ್ಯಕ್ತಿಗಳು ಪ್ರಧಾನಿಯಾಗಿದ್ದಾರೆ. ಅವರ ಜೀವನ ಮತ್ತು ದೇಶ ಸೇವೆಯ ಕೆಲಸವನ್ನು ನೋಡೋಣ.

ಶ್ರೀ ಜವಾಹರಲಾಲ್ ನೆಹರು

ಪಂಡಿತ್ ನೆಹರು ಅವರು 1947 ರಿಂದ 1964 ರವರೆಗೆ 17 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ದೇಶವನ್ನು ಕೈಗಾರಿಕಾ ಮತ್ತು ತಾಂತ್ರಿಕ ಅಭಿವೃದ್ಧಿಯ ಯುಗಕ್ಕೆ ತರಲು ಸಹಾಯ ಮಾಡಿದ ಕಾರಣ ಅವರು ಆಧುನಿಕ ಭಾರತದ ಸಂಸ್ಥಾಪಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರ ಜನ್ಮದಿನವನ್ನು ಭಾರತದಾದ್ಯಂತ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ.

ಶ್ರೀ ಗುಲ್ಜಾರಿಲಾಲ್ ನಂದಾ

ಶ್ರೀ ಗುಲ್ಜಾರಿಲಾಲ್ ನಂದಾ ಅವರು ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿದ್ದರು ಮತ್ತು ಅವರು ಎರಡು ಸಂಕ್ಷಿಪ್ತ ಅವಧಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು. ಅವರು ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಅನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರಿಗೆ 1997 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಯಿತು.

ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ

ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭಾರತದ ಮೂರನೇ ಪ್ರಧಾನ ಮಂತ್ರಿಯಾಗಿದ್ದರು. ಪ್ರಧಾನ ಮಂತ್ರಿಯಾಗಿ, ಅವರು ಬಿಳಿ ಮತ್ತು ಹಸಿರು ಕ್ರಾಂತಿಗಳನ್ನು ಉತ್ತೇಜಿಸಿದರು ಮತ್ತು ಜನಪ್ರಿಯ ಘೋಷಣೆ ‘ಜೈ ಜವಾನ್, ಜೈ ಕಿಸಾನ್’ ಅನ್ನು ರಚಿಸಿದರು. ಅವರು 1965 ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತವನ್ನು ವಿಜಯದತ್ತ ಮುನ್ನಡೆಸಿದರು.

ಶ್ರೀಮತಿ. ಇಂದಿರಾ ಗಾಂಧಿ

ಶ್ರೀಮತಿ. ಇಂದಿರಾ ಗಾಂಧಿ ಅವರು ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿದ್ದರು ಮತ್ತು ಎರಡು ಅವಧಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು. ಆಕೆಯ ಅಧಿಕಾರಾವಧಿಯಲ್ಲಿ, ಭಾರತವು 1971 ರ ಪಾಕಿಸ್ತಾನದ ವಿರುದ್ಧದ ಯುದ್ಧವನ್ನು ಗೆದ್ದಿತು, ಇದು ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು. ಶ್ರೀಮತಿ. ಇಂದಿರಾ ಗಾಂಧಿಯವರು 1975 ರಿಂದ 1977 ರವರೆಗೆ ತುರ್ತು ಪರಿಸ್ಥಿತಿಯನ್ನು ಹೇರಿದರು.

ಶ್ರೀ ಮೊರಾರ್ಜಿ ದೇಸಾಯಿ

ಶ್ರೀ ಮೊರಾರ್ಜಿ ದೇಸಾಯಿ ಅವರು 1977 ರಿಂದ 1979 ರವರೆಗೆ 2 ವರ್ಷಗಳ ಕಾಲ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಭಾರತದ ಸಂವಿಧಾನದ ನಲವತ್ನಾಲ್ಕನೇ ತಿದ್ದುಪಡಿಯನ್ನು ಜಾರಿಗೆ ತರಲಾಯಿತು. ಶ್ರೀ ಮೊರಾರ್ಜಿ ದೇಸಾಯಿ ಅವರು ತಮ್ಮ 99 ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು, ಅವರನ್ನು ವಿಶ್ವದ ಅತ್ಯಂತ ಹಿರಿಯ ಮಾಜಿ ಸರ್ಕಾರದ ಮುಖ್ಯಸ್ಥರನ್ನಾಗಿ ಮಾಡಿದರು.

ಚೌಧರಿ ಚರಣ್ ಸಿಂಗ್

ಚೌಧರಿ ಚರಣ್ ಸಿಂಗ್ ಅವರು 170 ದಿನಗಳ ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ತಮ್ಮ ಜೀವನದುದ್ದಕ್ಕೂ ಅವರು ರೈತರ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿದರು. ಅವರ ಜನ್ಮದಿನವಾದ ಡಿಸೆಂಬರ್ 23 ಅನ್ನು ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ.

ಶ್ರೀ ರಾಜೀವ್ ಗಾಂಧಿ

ಶ್ರೀ ರಾಜೀವ್ ಗಾಂಧಿ ಅವರು ಭಾರತದ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯಾದರು ಮತ್ತು 1984 ರಿಂದ 1989 ರವರೆಗೆ ಒಂದೇ ಅವಧಿಗೆ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿಯಲ್ಲಿ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಂಬಂಧಿತ ಉದ್ಯಮಗಳನ್ನು ಉತ್ತೇಜಿಸಿದರು ಮತ್ತು ದೇಶದಲ್ಲಿ ಉನ್ನತ ಶಿಕ್ಷಣ ಸುಧಾರಣೆಗಳ ಹೊಸ ಯುಗವನ್ನು ಪ್ರಾರಂಭಿಸಿದರು.

ಶ್ರೀ ವಿ ಪಿ ಸಿಂಗ್

ಶ್ರೀ ವಿಶ್ವನಾಥ್ ಪ್ರತಾಪ್ ಸಿಂಗ್ ಅವರು 1989 ರಿಂದ 1990 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತರಲಾಯಿತು ಮತ್ತು ಅವರ ಅಧಿಕಾರಾವಧಿಯಲ್ಲಿ 1989 ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಯ್ದೆಯನ್ನು ಅಂಗೀಕರಿಸಲಾಯಿತು.

ಶ್ರೀ ಚಂದ್ರ ಶೇಖರ್

ಶ್ರೀ ಚಂದ್ರಶೇಖರ್ ಅವರು ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ ಭಾರತದ ಮೊದಲ ಪ್ರಧಾನ ಮಂತ್ರಿಯಾದರು. ಭಾರತವು ಸಾರ್ವಭೌಮ ಮರುಪಾವತಿಯಲ್ಲಿ ಡೀಫಾಲ್ಟ್ ಆಗುವುದನ್ನು ತಡೆಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಉರಿಯುತ್ತಿರುವ ಚೈತನ್ಯಕ್ಕೆ ಹೆಸರುವಾಸಿಯಾದ ಅವರನ್ನು ಹೆಚ್ಚಾಗಿ “ಯಂಗ್ ಟರ್ಕ್” ಎಂದು ಕರೆಯಲಾಗುತ್ತದೆ.

ಶ್ರೀ ಪಿವಿ ನರಸಿಂಹ ರಾವ್

ಶ್ರೀ ಪಾಮುಲಪರ್ತಿ ವೆಂಕಟ ನರಸಿಂಹ ರಾವ್ ಅವರು 1991 ರಿಂದ 1996 ರವರೆಗೆ ಒಂದೇ ಅವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿಯಲ್ಲಿ ಅವರು ಉದಾರೀಕರಣ ಮತ್ತು ಜಾಗತೀಕರಣದ ರೂಪದಲ್ಲಿ ಆರ್ಥಿಕ ಸುಧಾರಣೆಗಳನ್ನು ನಡೆಸಿದರು.

ಶ್ರೀ ಎಚ್ಡಿ ದೇವೇಗೌಡ

ಶ್ರೀ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು ಒಂದು ವರ್ಷಕ್ಕಿಂತ ಸ್ವಲ್ಪ ಕಡಿಮೆ ಕಾಲ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ದೇಶದ ರೈತರ ಮೇಲೆ ಕೇಂದ್ರೀಕರಿಸಿದರು ಮತ್ತು ದೆಹಲಿ ಮೆಟ್ರೋ ಯೋಜನೆಯನ್ನು ಕಿಕ್‌ಸ್ಟಾರ್ಟ್ ಮಾಡಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಕೃಷಿಗೆ ನೀಡಿದ ಕೊಡುಗೆಗಳಿಗಾಗಿ ಅವರನ್ನು ‘ಮಣ್ಣಿನ ಮಗ’ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ.

ಶ್ರೀ ಇಂದರ್ ಕುಮಾರ್ ಗುಜ್ರಾಲ್

ಶ್ರೀ ಇಂದರ್ ಕುಮಾರ್ ಗುಜ್ರಾಲ್ ಒಂದು ವರ್ಷಕ್ಕಿಂತ ಸ್ವಲ್ಪ ಕಡಿಮೆ ಅವಧಿಗೆ ಪ್ರಧಾನ ಮಂತ್ರಿಯಾದರು. ಅವರು ಭಾರತದ ಪ್ರಧಾನಿಯಾಗುವ ಮೊದಲು ವಿವಿಧ ಸಾಮರ್ಥ್ಯಗಳಲ್ಲಿ ವಿವಿಧ ಸಚಿವಾಲಯಗಳೊಂದಿಗೆ ಕೆಲಸ ಮಾಡಿದರು. ಅವರು ಗುಜ್ರಾಲ್ ಸಿದ್ಧಾಂತಕ್ಕೆ ಹೆಸರುವಾಸಿಯಾಗಿದ್ದಾರೆ, ಇದನ್ನು ಭಾರತದ ವಿದೇಶಾಂಗ ನೀತಿಯಲ್ಲಿ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.

ಶ್ರೀ ಅಟಲ್ ಬಿಹಾರಿ ವಾಜಪೇಯಿ

ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು 1996 ರಲ್ಲಿ 13 ದಿನಗಳ ಕಾಲ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು ಮತ್ತು 1998 ರಿಂದ 2004 ರವರೆಗೆ ಎರಡು ಅಪೂರ್ಣ ಅವಧಿಗಳಲ್ಲಿ ಸೇವೆ ಸಲ್ಲಿಸಿದರು. ಅವರು ಭಾರತದ ಆರ್ಥಿಕ ಬೆಳವಣಿಗೆಗೆ ಅವರ ಅಮೂಲ್ಯ ಕೊಡುಗೆಗಾಗಿ ಹೆಸರುವಾಸಿಯಾಗಿದ್ದಾರೆ. ಸಾಮಾನ್ಯವಾಗಿ ಕಾರ್ಗಿಲ್ ಯುದ್ಧ ಎಂದು ಕರೆಯಲ್ಪಡುವ ಆಪರೇಷನ್ ವಿಜಯ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದರು ಮತ್ತು ಗೆದ್ದರು. ಅವರು ಭಾರತವನ್ನು ಅಣ್ವಸ್ತ್ರ ಶಕ್ತಿಯನ್ನಾಗಿ ಮಾಡಿದರು.

ಶ್ರೀ ಮನಮೋಹನ್ ಸಿಂಗ್ ಡಾ

ಡಾ. ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (NREGA) ಮತ್ತು ಮಾಹಿತಿ ಹಕ್ಕು ಕಾಯಿದೆಯನ್ನು ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಅಂಗೀಕರಿಸಲಾಯಿತು. ಡಾ. ಮನಮೋಹನ್ ಸಿಂಗ್ ಅವರು ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದೊಂದಿಗೆ ಪರಮಾಣು ನಾಗರಿಕ ಒಪ್ಪಂದಕ್ಕೆ ಸಹಿ ಹಾಕಲು ಹೆಸರುವಾಸಿಯಾಗಿದ್ದಾರೆ.

ಶ್ರೀ ನರೇಂದ್ರ ಮೋದಿ

ಶ್ರೀ ನರೇಂದ್ರ ಮೋದಿ ಅವರು ಭಾರತದ ಪ್ರಸ್ತುತ ಮತ್ತು ನಾಲ್ಕನೇ ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿದ್ದಾರೆ. ಅವರು 14 ವರ್ಷಗಳ ಕಾಲ ಗುಜರಾತಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು ಮತ್ತು ಇತರ ಪ್ರಮುಖ ಬೆಳವಣಿಗೆಗಳ ನಡುವೆ ರಾಜ್ಯದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಸುಧಾರಿತ ಮೂಲಸೌಕರ್ಯಗಳನ್ನು ಸ್ಥಾಪಿಸಲು ಶ್ಲಾಘಿಸಿದರು. ಭಾರತದ ಪ್ರಧಾನಿಯಾಗಿ, ಅವರು ಸ್ವಚ್ಛ ಭಾರತ್, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾದಂತಹ ಅಭಿಯಾನಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಹಲವಾರು ಪುರಸ್ಕಾರಗಳಲ್ಲಿ, ಅವರು 2018 ರಲ್ಲಿ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬುದಾಗಿ ಪ್ರಸಿದ್ಧರಾಗಿದ್ದಾರೆ.