ಕೃಷ್ಣ – ಸುಧಾಮ (ನಾಟಕ) – ಪಾಠ–3
ವಿ.ಎಸ್ ಶಿರಹಟ್ಟಿ ಮಠ
ಪ್ರವೇಶ : ಗೆಳೆತನವೆಂಬುದು ಪವಿತ್ರವಾದ ಒಂದು ಸಂಬಂಧ. ಇಲ್ಲಿ ಬಡತನ, ಸಿರಿತನ, ವಿದ್ಯಾವಂತ, ಅವಿದ್ಯಾವಂತ ಇತ್ಯಾದಿಯಾದ ಯಾವುದೇ ಬಗೆಯ ಭೇದ ಭಾವ ಇರುವುದಿಲ್ಲ. ಹುಟ್ಟುತ್ತಾ ಅಣ್ಣ ತಮ್ಮಂದಿರಾಗಿಯೂ ಬೆಳೆಯುತ್ತಾ ದಾಯಾದಿಗಳಾಗಿಯೂ ಬದುಕು ಸಾಗಿಸುವವರು ನಮ್ಮ ನಡುವೆ ಇದ್ದಾರೆ. ಒಂದೇ ತರಗತಿಯಲ್ಲಿ ಕಲಿತ ಬಾಲ್ಯ ಸ್ನೇಹಿತರೂ ಸಿರಿತನ, ಬಡತನ ನಿಮಿತ್ತವಾಗಿ ಬೇರ್ಪಡುತ್ತಾರೆ. ನಿಜವಾದ ಗೆಳೆತನದ ಬೆಸುಗೆ ಮುರಿದು ಹೋಗುವಂಥದ್ದಲ್ಲ ಎಂಬುದನ್ನು ಎತ್ತಿ ತೋರಿಸುವುದು ಪ್ರಸ್ತುತ ಪಾಠದ ಆಶಯವಾಗಿದೆ.
ದೃಶ್ಯ – 1
[ಸುಧಾಮನ ಗುಡಿಸಲು, ರಾತ್ರಿಯ ಸಮಯ. ಸುಧಾಮ ಯೋಚಿಸುತ್ತಾ ಶತಪತಿಸುತ್ತಿದ್ದಾನೆ. ಆತನ ಮುಖದಲ್ಲಿ ನಿರಾಸೆ ತುಂಬಿದೆ.]
ಸುಧಾಮ : (ಸ್ವಗತ) ಜೀವನದಲ್ಲಿ ಬರೀ ಕಷ್ಟಗಳೇ ಬರುತ್ತಿವೆಯಲ್ಲ! ಸುಖದ ದಿನಗಳು ಯಾವಾಗ ಬರುತ್ತವೊ? ಹಾ! (ನಿಟ್ಟುಸಿರುಬಿಟ್ಟು) ಅದೆಲ್ಲಾ ಆ ದೇವರಿಗೇ ಗೊತ್ತು!
ಹೆಂಡತಿ : ಬಡತನ ನಮ್ಮ ಬೆನ್ನು ಹತ್ತಿದೆ. ಅದು ನಮ್ಮನ್ನು ಬಿಟ್ಟು ಹೋಗುವುದಿಲ್ಲ.
ಸುಧಾಮ : ‘ಬಡತನ ನಮಗಿರಲಿ, ಮನೆ ತುಂಬ ಮಕ್ಕಳಿರಲಿ’ ಎಂದು ದೇವರಲ್ಲಿ ನೀ ಬೇಡಿಕೊಂಡೆಯೋ ಹೇಗೆ ?
ಹೆಂಡತಿ : ಮಕ್ಕಳಿರಲಿ ಅಂದಿದ್ದು ನಿಜ. ಆದ್ರೆ…………..
ಮಗಳು : (ಮಕ್ಕಳ ಪ್ರವೇಶ) ಅಮ್ಮಾ …. ಅಮ್ಮಾ ….. ಹಸಿವಾಗ್ತಿದೆ.
ಮಗ : ನನಗೂ ಹಸಿವು, ಊಟ ಕೊಡಮ್ಮ.
ಹೆಂಡತಿ : ನೋಡಿದ್ರಾ, ಮಕ್ಕಳೆಲ್ಲಾ ಹಸಿವಿನಿಂದ ಕಂಗಾಲಾಗಿವೆ. ಪಾಂಡಿತ್ಯವುಳ್ಳ ನನ್ನ ಗಂಡ ದುಡಿದು ತರ್ತಾರೇಂತ ತಿಳಿದಿದ್ದೆ.
ಸುಧಾಮ : ಯಾವುದಕ್ಕೂ ಕಾಲ ಕೂಡಿ ಬರಬೇಕಲ್ಲ.
ಹೆಂಡತಿ : ಅಂತೂ ಇಂತೂ ನಮಗೆ ಬಡತನವೇ ಗತಿ.
ಸುಧಾಮ : ಚಿಂತೆ ಮಾಡಿದರೆ ಏನು ಬಂತು? ಜೀವನದಲ್ಲಿ ಬಂದದ್ದನ್ನು ಅನುಭವಿಸಲೇ ಬೇಕು. ಅದೇ ಮಾನವ ಧರ್ಮ.
ಹೆಂಡತಿ : ನೀವು ನೀತಿ ಹೇಳುವುದರಲ್ಲಿ ಬಹಳ ಮುಂದು.
ಸುಧಾಮ : ನೀತಿ, ನಿಯಮ, ವಿಧೇಯತೆ, ಪಾಂಡಿತ್ಯ ಇದ್ದುದರಿಂದಲೇ ಗುರುಕುಲದಲ್ಲಿ ಶ್ರೀಕೃಷ್ಣ ನನ್ನ ಸ್ನೇಹಿತನಾದದ್ದು.
ಹೆಂಡತಿ : ಮಾತುಮಾತಿಗೂ “ಶ್ರೀಕೃಷ್ಣ ನನ್ನ ಸ್ನೇಹಿತನಾಗಿದ್ದ” ಅಂತೀರಿ.
ಸುಧಾಮ : ಹೂಂ! ನಿಜಕ್ಕೂ ಆತ ನನ್ನ ಪರಮ ಮಿತ್ರನಾಗಿದ್ದ. ಗುರುಕುಲದಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದೆವು.
ಹೆಂಡತಿ : ಸತ್ಯ ಹೇಳುವಿರಾ! ಆ ಶ್ರೀಮಂತರೆಲ್ಲಿ, ನೀವೆಲ್ಲಿ? ಯಾಕೆ ಸುಮ್ಮನೆ ಬಡಾಯಿ ಬಿಡ್ತೀರಾ?
ಸುಧಾಮ : ಯಾಕೆ ಸುಳ್ಳು ಹೇಳಲಿ ನಾನು, ಕೃಷ್ಣ ಸದಾ ನನ್ನ ಜೊತೆಯಲ್ಲಿಯೇ ಇರುತ್ತಿದ್ದ. ಒಟ್ಟಿಗೆ ಕಲಿಯುತ್ತಿದ್ದೆವು. ನನ್ನನ್ನು ಕಂಡರೆ ಅವನಿಗೆ ಅಪಾರ ಪ್ರೀತಿ, ಸ್ನೇಹ, ಗೌರವ.
ಹೆಂಡತಿ : ಅಂತಹ ಶ್ರೀಮಂತ ಸ್ನೇಹಿತನಿದ್ದರೂ ಇಲ್ಲಿಯವರೆಗೆ ನೀವು ಏಕೆ ಅವರ ಹತ್ತಿರ ಸಹಾಯ ಕೇಳಲಿಲ್ಲ?
ಸುಧಾಮ : (ಕ್ಷಣ ಹೊತ್ತು ಮೌನ) ಬಡವನಾದವ ದೊಡ್ಡವರ ಮನೆಗೆ ಸಹಾಯ ಕೇಳಲು ಹೋಗಬಾರದು.
ಹೆಂಡತಿ : ಸ್ನೇಹಿತರೆದುರು ಎಂಥ ಸ್ವಾಭಿಮಾನ ! ದಯವಿಟ್ಟು ಹೋಗಿ ಅವರಲ್ಲಿ ಸಹಾಯ ಕೇಳಿ.
ಸುಧಾಮ : ಹೇಗೆ ಕೇಳುವುದು?
ಹೆಂಡತಿ : ಆತ್ಮೀಯ ಗೆಳೆಯ ಅನ್ನುತ್ತೀರಿ, ಅಂದ ಮೇಲೆ ಅವರು ಸಹಾಯ ಮಾಡೇ ಮಾಡುತ್ತಾರೆ.
ಸುಧಾಮ : ಇಲ್ಲ ಅನ್ನಲಾರ, ಆದರೂ ಕೇಳುವುದಕ್ಕೆ ಸಂಕೋಚ.
ಹೆಂಡತಿ : ಸಂಕೋಚ ಬೇಡಾರೀ, ಹಸಿದಿರುವ ಮಕ್ಕಳಿಗೋಸ್ಕರವಾದರೂ ಹೋಗಿ ಕೇಳಿ.
ಸುಧಾಮ : ಆಗಲಿ, ಹೋಗುತ್ತೇನೆ. ಆದರೆ ಗೆಳೆಯನನ್ನು ನೋಡಲು ಬರಿಗೈಯಲ್ಲಿ ಹೋಗಲಾ?
ಹೆಂಡತಿ : ನಿನ್ನೆ ತಂದ ಅವಲಕ್ಕಿಯಲ್ಲಿ ಸ್ವಲ್ಪವೇ ಉಳಿದಿದೆ. ಮಕ್ಕಳ ಉಪಾಹಾರಕ್ಕೆ ಏನೇನೂ ಸಾಲದು. ಅದನ್ನೇ ಕಟ್ಟಿಕೊಡಲೆ?
ಮಗ : ಹಸಿವು, ಅದನ್ನಾದರೂ ನನಗೆ ಕೊಡಮ್ಮ.
ಹೆಂಡತಿ : ತುಸು ತಡೆದುಕೋ ಕಂದಾ, ದೇವರ ದಯೆಯಿದ್ದರೆ ಈ ಅವಲಕ್ಕಿಯೇ ಬಂಗಾರವಾದೀತು (ಗಂಡನಿಗೆ) ಕಟ್ಟಿಕೊಡಲೆ?
ಸುಧಾಮ : ಸರಿ, ಹಾಗೆ ಮಾಡು.
ದೃಶ್ಯ – 2
[ಕೃಷ್ಣನ ಅರಮನೆ- ಕಾವಲುಗಾರ ಸುಧಾಮನನ್ನು ಅರಮನೆಯೊಳಕ್ಕೆ ಬಿಡದೆ ಬಾಗಿಲಲ್ಲೇ ನಿಲ್ಲಿಸುವನು. ಕೃಷ್ಣ ಆಕಸ್ಮಿಕವಾಗಿ ಹೊರಗೆ ಬರುವನು. ಸುಧಾಮನನ್ನು ನೋಡುವನು.]
ಕೃಷ್ಣ : (ಆಶ್ಚರ್ಯದಿಂದ) ಓಹೋ ಸುಧಾಮ! ಯಾವಾಗ ಬಂದೆ? ಬಾ ಒಳಗೆ (ಸುಧಾಮನ ಕೈ ಹಿಡಿಯುವನು. ಕಾವಲುಗಾರ ಆಶ್ಚರ್ಯದಿಂದ ದೂರ ಸರಿಯುವನು.)
ಸುಧಾಮ : ಶ್ರೀಕೃಷ್ಣ ಮಹಾರಾಜರು! (ಅತೀವ ಸಂತೋಷದಿಂದ ಆನಂದಬಾಷ್ಪ ಸುರಿಯುತ್ತದೆ. ಮಾತೇ ಹೊರಡದಂತಾಗಿದೆ.)
ಕೃಷ್ಣ : ಏಕೆ ಸುಧಾಮ ಕಣ್ಣಲ್ಲಿ ನೀರು?
ಸುಧಾಮ : ಬಹಳ ದಿನಗಳ ಅನಂತರ ನಿಮ್ಮನ್ನು ನೋಡುತ್ತಿರುವೆನಲ್ಲ! ಅದಕ್ಕಾಗಿ ಆನಂದದ ಕಣ್ಣೀರು.
ಕೃಷ್ಣ : ದೂರದಿಂದ ದಣಿದು ಬಂದಿದ್ದೀಯ. ಸ್ನಾನ ಮುಗಿಸಿ ಊಟ ಮಾಡಿ ವಿಶ್ರಾಂತಿ ತೆಗೆದುಕೋ. ಅಷ್ಟುಬೇಗ ನಿನ್ನನ್ನು ಹೋಗಗೊಡುವುದಿಲ್ಲ.
ಸುಧಾಮ : ಅಯ್ಯೋ, ಅಲ್ಲಿ ಮನೆಯಲ್ಲಿ ಯಾರೂ ಇಲ್ಲ. ಮಕ್ಕಳಿಗೆ……..
ಕೃಷ್ಣ : ಸುಮ್ಮನಿರು, ಬಂದ ತಕ್ಷಣ ಹೋಗಬೇಕಿದ್ದರೆ ಯಾಕೆ ಬಂದೆ? ಯಾರಲ್ಲಿ? ಸುಧಾಮನಿಗೆ ವಿಶ್ರಾಂತಿಯ ವ್ಯವಸ್ಥೆ ಮಾಡಿ. (ಸುಧಾಮನಿಗೆ) ನನಗೂ ತುರ್ತು ಕೆಲಸವಿದೆ. ಅದು ಮುಗಿದ ತಕ್ಷಣ ಬಂದು ಬಿಡುವೆ.
ದೃಶ್ಯ – 3
(ಕೃಷ್ಣನ ಅರಮನೆ- ಸುಧಾಮನಿರುವ ಕೋಣೆ. ತೆರೆ ಸರಿದಾಗ)
ಸುಧಾಮ : (ಸ್ವಗತ) ಶ್ರೀಕೃಷ್ಣನಂತಹ ಮಿತ್ರನನ್ನು ಪಡೆದ ನಾನೇ ಧನ್ಯನು, ನನ್ನನ್ನು ಮರೆತಿಲ್ಲ. ನಾನು ತಂದ ಅವಲಕ್ಕಿಯನ್ನು ತಾನೂ ತಿಂದು ಹೆಂಡತಿಗೂ ಪ್ರೀತಿಯಿಂದ ತಿನ್ನಿಸಿದ. ಇಷ್ಟೊಂದು ಪ್ರೀತಿ ವಿಶ್ವಾಸವಿರುವ ಕೃಷ್ಣನ ಹತ್ತಿರ ನನ್ನ ಬಡತನ ಹೇಳಿ ಆತನ ಮನಸ್ಸಿಗೆ ಬೇಸರವುಂಟುಮಾಡಬಾರದು. ನನ್ನ ಬಡತನ ನನಗಿರಲಿ.
ಕೃಷ್ಣ : (ಹಿಂದಿನಿಂದ ಬರುತ್ತ) ಏನು ಯೋಚಿಸುತ್ತಿರುವೆ ಸುಧಾಮ?
ಸುಧಾಮ : ಏನಿಲ್ಲ ಕೃಷ್ಣ ….. ಏನಿಲ್ಲ, ಸುಮ್ಮನೆ.
ಕೃಷ್ಣ : ನೀ ಬಂದು ನನ್ನ ಮನಸ್ಸಿಗೆ ತುಂಬಾ ಸಂತೋಷವನ್ನುಂಟುಮಾಡಿದೆ. ನನಗೆ ಗುರುಕುಲದ ಜೀವನ ನೆನಪಾಗುತ್ತಿದೆ.
ಸುಧಾಮ : ಒಟ್ಟಿಗೆ ಊಟ ಮಾಡುತ್ತಿದ್ದೆವು, ಕೂಡಿ ಕಲಿಯುತ್ತಿದ್ದೆವು, ಕಟ್ಟಿಗೆ ತರಲು ಹೋಗುತ್ತಿದ್ದೆವು.
ಕೃಷ್ಣ : ಗುರುಮಾತೆ ಕೊಟ್ಟ ಹುರಿದ ಕಡಲೆ ತಿಂದಿದ್ದು! ನಿನ್ನ ಪಾಲಿನ ಕಡಲೆ ನಾ ಕಸಿದುಕೊಂಡಿದ್ದು!
ಸುಧಾಮ : (ತಡವರಿಸುತ್ತಾ) ಹಸಿವು……ಬಡತನ…..(ಏನೋ ನೆನಪು ಮಾಡಿಕೊಳ್ಳಲು ಯತ್ನಿಸಿ ಮೌನಿಯಾಗುವನು.)
ಕೃಷ್ಣ : ಪ್ರಜೆಗಳ ಹಸಿವು ಹಿಂಗಿಸಲು ಅವರ ಕಷ್ಟ ಕಾರ್ಪಣ್ಯ ನೀಗಿಸಲು ರಾಜನಾದವನು ಶ್ರಮಿಸಬೇಕು. ಆಗ ಮಾತ್ರ ಅವನು ನಿಜವಾದ ರಾಜನಾಗುವನು. ನಿನ್ನನ್ನು ಪೀಡಿಸಿದ್ದು ತಪ್ಪೆಂದು ಕ್ರಮೇಣ ನನ್ನ ಅರಿವಿಗೆ ಬಂತು ನೋಡು.
ಸುಧಾಮ : ಕೃಷ್ಣ, ಇಷ್ಟು ದಿನ ಇಲ್ಲಿದ್ದು ಅದನ್ನೆಲ್ಲ ಕಣ್ಣಾರೆ ಕಂಡಿರುವೆ.
ಕೃಷ್ಣ : ಸುಧಾಮ, ನಿನಗೇನು ಬೇಕು?
ಸುಧಾಮ : ನನಗೇನೂ ಬೇಡ. ನಿನ್ನ ಸತ್ಕಾರ ಜೀವನದಲ್ಲಿ ಮರೆಯುವಂತಿಲ್ಲ ನಿನ್ನ ಸ್ನೇಹವೊಂದೆ ಸಾಕು. ಇನ್ನು ನನ್ನೂರಿಗೆ ಹೊರಡುವೆ.
ಕೃಷ್ಣ : ಇಷ್ಟು ಬೇಗ !
ಸುಧಾಮ : ನಾನು ಇಷ್ಟು ದೀರ್ಘಕಾಲ ಮನೆಬಿಟ್ಟು ಇದ್ದವನೆ ಅಲ್ಲ. ಅಲ್ಲಿ ಹೆಂಡತಿ ಮಕ್ಕಳು ನನ್ನ ದಾರಿ ಕಾದು ಕಂಗಾಲಾಗಿರಬಹುದು.
ಕೃಷ್ಣ : ಇಲ್ಲಿಗೆ ಬಂದ ವಿಷಯ ಅವರಿಗೆ ಗೊತ್ತಿದೆಯಲ್ಲ.
ಸುಧಾಮ : ಗೊತ್ತಿದೆ. ಆದರೆ ನನಗೆ ಮಕ್ಕಳದೇ ಚಿಂತೆ. ಹೊರಡಲು ಅಪ್ಪಣೆ ಕೊಡು ಕೃಷ್ಣಾ.
ಕೃಷ್ಣ : ನಿನ್ನ ಇಷ್ಟದಂತೆಯೇ ಆಗಲಿ, ಹೋಗಿ ಬಾ. ಶುಭವಾಗಲಿ ಗೆಳೆಯ. ಅಂದ ಹಾಗೆ ನಿನ್ನ ಮನೆಗೆ ನನ್ನನ್ನು ಕರೆಯಲೇ ಇಲ್ಲ! ಪರವಾಗಿಲ್ಲ. ನೀನು ಕರೆಯದಿದ್ದರೂ ನಾನೇ ಬರುವೆ.
ಸುಧಾಮ : ಅಯ್ಯೋ! ನನ್ನ ಮನೆಗೆ! ಬೇಡ ಕೃಷ್ಣಾ!
ಕೃಷ್ಣ : ಈಗ ಚಿಂತೆ ಬಿಟ್ಟು ಹೊರಡು. ಒಳ್ಳೆಯದಾಗಲಿ.
ದೃಶ್ಯ – 4
[ಸುಧಾಮನ ಸುಂದರವಾದ ಮನೆ. ದೂರದಲ್ಲಿ ಮರಗಳು. ಹೆಂಡತಿ, ಮಕ್ಕಳು ಹೊಸಬಟ್ಟೆ ಧರಿಸಿ ಮನೆಯಲ್ಲಿ ಸಂತೋಷದಿಂದ ಇರುವ ಸನ್ನಿವೇಶ.]
ಸುಧಾಮ : (ಆಶ್ಚರ್ಯದಿಂದ ಹೆಂಡತಿಗೆ) ನೀವು ಯಾರ ಮನೆಯಲ್ಲಿದ್ದೀರಿ?
ಹೆಂಡತಿ : ಇದು ನಮ್ಮ ಮನೆ ಕಣ್ರೀ!
ಸುಧಾಮ : ನಮ್ಮ ಗುಡಿಸಲು ಎಲ್ಲಿ?
ಹೆಂಡತಿ : ಆ ಗುಡಿಸಲಿನ ಜಾಗದಲ್ಲಿಯೇ ಈ ಅರಮನೆಯಂತಹ ಮನೆ ನಿರ್ಮಾಣವಾಗಿದೆ.
ಸುಧಾಮ : ಅರೆ! ನಾನು ಹೋಗಿ ಬರುವುದರೊಳಗೆ ಇದು ಹೇಗೆ ಸಾಧ್ಯವಾಯ್ತು?
ಹೆಂಡತಿ : (ನಗುತ್ತ) ನಿಮ್ಮ ಮಿತ್ರನ ಕೃಪೆಯಿಂದ.
ಸುಧಾಮ : (ಆಶ್ಚರ್ಯದಿಂದ) ನನ್ನ ಮಿತ್ರ ಶ್ರೀಕೃಷ್ಣನಿಂದ!
ಹೆಂಡತಿ : ಹೌದು, ಆ ಮಹಾರಾಯ ಶ್ರೀಕೃಷ್ಣನಿಂದಲೇ.
ಸುಧಾಮ : ನಾನು ಅವನಿಗೆ ಸಹಾಯ ಮಾಡು ಎಂದು ಕೇಳಿಯೇ ಇಲ್ಲ.
ಹೆಂಡತಿ : ನಿಜವಾಗಿಯೂ!
ಸುಧಾಮ : ಸತ್ಯವಾಗಿಯೂ.
ಹೆಂಡತಿ : ನೀವು ದ್ವಾರಕಾ ನಗರ ತಲುಪಿದ ದಿನವೇ ಅಲ್ಲಿಂದ ಸೇವಕರ ದಂಡು ಬಂತು. ಬೇಕಾದ ಎಲ್ಲ ವಸ್ತುಗಳನ್ನು ತಂದರು. ಚಕಚಕಾಂತ ಮನೆ ನಿರ್ಮಿಸಿದರು. ನಮಗೆಲ್ಲ ಹೊಸ ಉಡುಪು, ಆಭರಣಗಳನ್ನು ಸಹ ಕೊಟ್ಟರು.
ಸುಧಾಮ : ಪರಮಾಶ್ಚರ್ಯ, ನನ್ನ ಮನದ ಇಂಗಿತವನ್ನು ತಿಳಿದುಕೊಂಡು ಎಲ್ಲಾ ರೀತಿಯ ಸಹಾಯ ಮಾಡಿದ್ದಾನೆ ಶ್ರೀಕೃಷ್ಣ.
ಹೆಂಡತಿ : ನೀವು ತೆಗೆದುಕೊಂಡು ಹೋದ ಅವಲಕ್ಕಿಯನ್ನು ಅವರಿಗೆ ನೀಡಿದಿರಾ?
ಸುಧಾಮ : ಹೂಂ! ಕೊಟ್ಟೆ. ಬಹಳ ಆನಂದದಿಂದ ತಿಂದು, ಹೆಂಡತಿ ರುಕ್ಮಿಣಿಗೂ ತಿನ್ನಿಸಿದ.
ಹೆಂಡತಿ : ಅಬ್ಬಾ…….! ಬಡವರ ಮನೆ ಅವಲಕ್ಕಿಯನ್ನು ಸಂತೋಷವಾಗಿ ತಿಂದರಲ್ಲ. ಇದು ಅವರ ನಿಜವಾದ ಸ್ನೇಹ ಹಾಗೂ ದೊಡ್ಡ ಗುಣ. ಮತ್ತೆ ನೀವು ಯಾಕೆ ಸಹಾಯ ಕೇಳಲಿಲ್ಲ?
ಸುಧಾಮ : ಆತ ಸತ್ಕಾರ ಮಾಡಿದ್ದು ನೋಡಿ ನನ್ನ ಮನಸ್ಸು ನಾಚಿ ಕುಗ್ಗಿ ಹೋಯಿತು. ಮತ್ತೆ ಏನನ್ನು ಕೇಳಲೂ ಮನಸ್ಸಾಗಲಿಲ್ಲ.
ಹೆಂಡತಿ : ನೀವು ಕೇಳಲಿಲ್ಲ ನಿಜ, ಆದರೆ ಆ ಶ್ರೀಕೃಷ್ಣ ಪರಮಾತ್ಮನೇ ತಮ್ಮ ಕರ್ತವ್ಯ ಮಾಡಿದ್ದಾರೆ.
ಸುಧಾಮ : ಮಕ್ಕಳೆಲ್ಲಾ ಎಲ್ಲಿದ್ದಾರೆ?
(ಮಕ್ಕಳ ಆಗಮನ)
ಮಗಳು : ಅಪ್ಪಾ…..ನನ್ನ ಹೊಸ ಬಟ್ಟೆ ನೋಡಿ, ಎಷ್ಟು ಚೆನ್ನಾಗಿದೆ ಸರ, ಓಲೆ, ಬಳೆ ಎಲ್ಲ……
ಮಗ : ಅಪ್ಪಾ….. ನಿಮಗೂ ರೇಷ್ಮೆಬಟ್ಟೆ ಕೊಟ್ಟಿದ್ದಾರೆ, ನೋಡಿ.
ಸುಧಾಮ : ನನಗೆ ಬೇಡ, ನೀವೆಲ್ಲ ಧರಿಸಿಕೊಳ್ಳಿ. ನನಗೆ ಆ ಕೃಷ್ಣದೇವನ ಸ್ನೇಹವೇ ರೇಷ್ಮೆ ಬಟ್ಟೆ, ಅವನ ಮಾತೆ ನನಗೆ ಆಭರಣ. ಅವನಂತಹ ಗೆಳೆಯನನ್ನು ಪಡೆದ ನಾನೇ ಧನ್ಯ.
(ಎಲ್ಲರೂ ನರ್ತಿಸುವರು.)
(ಹಿನ್ನೆಲೆಯಲ್ಲಿ ಶ್ರೀಕೃಷ್ಣ ಹಾಗೂ ರುಕ್ಮಿಣಿ ನರ್ತಿಸುತ್ತ ಸಾಗುವರು)
ಕವಿ ಕೃತಿ ಪರಿಚಯ
ವಿ.ಎಸ್. ಶಿರಹಟ್ಟಿಮಠರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿಯ ಶ್ರೀ ವೀರಭದ್ರೇಶ್ವರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗದಗ ಜಿಲ್ಲೆಯ ಹೊಂಬಳದಲ್ಲಿ ದಿನಾಂಕ 1-2-1953ರಂದು ಜನಿಸಿದ ವಿ.ಎಸ್. ಶಿರಹಟ್ಟಿಮಠರ ತಂದೆ ಶಂಕರಯ್ಯ, ತಾಯಿ ಗುರುಸಿದ್ಧವ್ವ. ಅನುವಾದಕರಾಗಿ, ನಾಟಕಕಾರರಾಗಿ ಗುರುತಿಸಿಕೊಂಡಿದ್ದಾರೆ. ತುಂಬಿದ ಕೊಡ, ನರಗುಂದ ಬಂಡಾಯ, ಮಾಡಿದ್ದುಣ್ಣೋ ಮಾರಾಯ, ಗುಣವಂತ ರಾಜಕುಮಾರ ಮುಂತಾದ ಅರವತ್ತಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ.
ರಂಗಭೂಮಿ ಹಾಗೂ ಮಕ್ಕಳ ರಂಗಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ 2002 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯು ಪ್ರಶಸ್ತಿ ನೀಡಿ ಗೌರವಿಸಿದೆ. ವಿ.ಎಸ್ ಶಿರಹಟ್ಟಿಮಠರವರ “ಹೂವಿನ ಹಂದರ” ಕೃತಿಯಿಂದ ‘ಕೃಷ್ಣ -ಸುಧಾಮ’ ನಾಟಕವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಪದಗಳ ಅರ್ಥ
ಕಂಗಾಲಾಗು – ಕಂಗೆಡು, ತಬ್ಬಿಬ್ಬಾಗು.
ವಿಧೇಯತೆ – ನಮ್ರತೆ, ಅನುಸರಿಸುವ ಗುಣ.
ಪಾಂಡಿತ್ಯ – ವಿದ್ವತ್ತು.
ಸ್ನೇಹ – ಗೆಳೆತನ, ಮಿತ್ರತ್ವ.
ಸಂಕೋಚ – ಕುಗ್ಗುವುದು, ಮುದುಡುವುದು.
ಕೃಪೆ – ದಯೆ, ಕರುಣೆ.
ಆಶ್ಚರ್ಯ – ವಿಸ್ಮಯ, ಬೆರಗು.
ಆಭರಣ– ಒಡವೆ.
ಇಂಗಿತ – ಆಶಯ.
ವಿವರ ತಿಳಿಯಿರಿ
ದಾಯಾದಿ : ಅಣ್ಣತಮ್ಮಂದಿರ ಮಕ್ಕಳು.
ಶತಪತಿಸು : ಹಿಂದಕ್ಕೆ ಮುಂದಕ್ಕೆ ನಡೆದಾಡು.
ರಾಜಧರ್ಮ : ಅರಸನು ಪ್ರಜೆಗಳ ಕ್ಷೇಮಕ್ಕಾಗಿ ಪಾಲಿಸಬೇಕಾದ ನೀತಿ.
ಕಾಲಕೂಡಿಬರು : ಸಮಯ, ಸಂದರ್ಭ ಒದಗಿ ಬರುವುದು.
ಗುರುಕುಲ : ಹಿಂದಿನ ಕಾಲದಲ್ಲಿ ಗುರುಗಳ ಮನೆಯೆ ಪಾಠಶಾಲೆ ಆಗಿರುತ್ತಿತ್ತು. ಅದನ್ನು ಗುರುಕುಲ ಎನ್ನುವರು.
ಸಂವೇದ ವಿಡಿಯೋ ಪಾಠಗಳು
ಪೂರಕ ವಿಡಿಯೋಗಳು
ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ
ವ್ಯಾಕರಣ ಮಾಹಿತಿ (ವಿಡಿಯೋ ಸಹಿತ)
ಹಿಂದಿನ ಪಾಠದಲ್ಲಿ ನಾಮಪದಗಳ ವಿಧಗಳ ಬಗ್ಗೆ ತಿಳಿದೆವು. ಇಲ್ಲಿ ನುಡಿಗಟ್ಟು, ಗಾದೆಮಾತು, ಒಗಟುಗಳ ಬಗ್ಗೆ ತಿಳಿಯೋಣ.
ನುಡಿಗಟ್ಟು :
ವಿಶೇಷಾರ್ಥವುಳ್ಳ ಮತ್ತು ಒಳಾರ್ಥವುಳ್ಳ ಪದಪುಂಜವನ್ನು ನುಡಿಗಟ್ಟು ಎನ್ನುವರು. ನಮ್ಮ ಭಾವನೆಯನ್ನು ಸಂಗ್ರಹಿಸಿ ಅರ್ಥಪೂರ್ಣವಾಗಿ ವ್ಯಕ್ತಪಡಿಸಲು ಸಹಾಯಕವಾಗುವ ಪದಪುಂಜವೇ ನುಡಿಗಟ್ಟು. ಇದು ಭಾಷೆಯ ಬಿಗುವನ್ನು ಹೆಚ್ಚಿಸಿ ಮಾತಿನ ಸೊಬಗನ್ನು ಇಮ್ಮಡಿಗೊಳಿಸುತ್ತದೆ.
ಉದಾ:
- ಅಟ್ಟಕ್ಕೇರಿಸು – ಹೊಗಳಿ ಹೊಗಳಿ ಉಬ್ಬಿಸು.
- ಗುಡ್ಡವನ್ನು ಬೆಟ್ಟ ಮಾಡು – ಅಲ್ಪ ವಿಷಯವನ್ನು ದೊಡ್ಡದು ಮಾಡು.
- ಕಂಬಿ ಕೀಳು – ಹೇಳದೆ ಕೇಳದೆ ಓಡಿ ಹೋಗು, ಪಲಾಯನ ಮಾಡು.
- ನೀರಿನ ಮೇಲೆ ಹೋಮ – ಭಾರಿ ದೊಡ್ಡ ಕೆಲಸ ಮಾಡಿದರೂ ಏನೂ ಪ್ರತಿಫಲ ದೊರಕದೆ ಹೋಗುವುದು.
- ಗುಬ್ಬಿ ಮೇಲೆ ಬ್ರಹ್ಮಾಸ್ತ್ರ – ಸಣ್ಣವರ ಮೇಲೆ ಬಲ ಪ್ರದರ್ಶನ.
ಗಾದೆ :
ನಾಣ್ಣುಡಿ, ಲೋಕೋಕ್ತಿ : ಒಂದು ವಿಷಯವನ್ನು ಕುರಿತು ಪರಿಣಾಮಕಾರಿಯಾಗಿ ತಿಳಿ ಹೇಳುವ ಘನವಾದ ಅರ್ಥವನ್ನು ಹೊಂದಿರುವ ಹೇಳಿಕೆಗಳೇ ಗಾದೆ ಮಾತುಗಳು. ನೂರು ಮಾತುಗಳಲ್ಲಿ ಹೇಳುವುದನ್ನು ಒಂದು ವಾಕ್ಯದಲ್ಲಿ ಗಾದೆ ಹೇಳಬಲ್ಲದು. ಗಾದೆ ಜಾನಪದ ಸಾಹಿತ್ಯ ಪ್ರಕಾರಗಳಲ್ಲೊಂದು. ಗಾದೆ ಅನುಭವದಿಂದ ಹುಟ್ಟಿಕೊಳ್ಳುವಂಥದ್ದು.
ಉದಾ :
- ಕೂತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು.
- ನಾಲಿಗೆ ಚೆನ್ನಾಗಿದ್ದರೆ ನಾಡೆಲ್ಲಾ ಒಳ್ಳೆಯದು.
- ಕೈಕೆಸರಾದರೆ ಬಾಯಿ ಮೊಸರು.
- ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
- ಕುಣಿಯಲಾರದವ ನೆಲ ಡೊಂಕು ಅಂದ.
ಒಗಟು :
ಒಗಟನ್ನು ಒಂಟು, ಒಡಪು, ಒಡಚು, ಒಡಗತೆ ಇತ್ಯಾದಿಯಾಗಿ ಕನ್ನಡದಲ್ಲಿ ನಾನಾ ರೂಪಗಳಲ್ಲಿ ಹೇಳುತ್ತಾರೆ. ಇಂಗ್ಲಿಷಿನಲ್ಲಿ ಒಗಟಿಗೆ Riddle ಎಂದು ಹೇಳುತ್ತಾರೆ. ಮುಖ್ಯವಾಗಿ ಒಗಟು ಎಂದಾಗ ಒಂದು ಸಮಸ್ಯೆ ಎಂದರ್ಥವಾಗುವುದು. ಒಗಟುಗಳು ಬುದ್ಧಿಪ್ರಧಾನವಾದವುಗಳಾಗಿದ್ದು ಅರ್ಥಗರ್ಭಿತವಾಗಿರುತ್ತವೆ.
ಉದಾ :
- ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ. (ಕಪ್ಪೆ)
- ಚಿಪ್ಪುಂಟು ಆಮೆಯಲ್ಲ, ಜುಟ್ಟುಂಟು ಪೂಜಾರಿಯಲ್ಲ. ಮೂರು ಕಣ್ಣುಂಟು ಹರನಲ್ಲ, ಹಾಗಾದರೆ ನಾನು ಯಾರು? (ತೆಂಗಿನ ಕಾಯಿ)
- ಮುಳ್ಳುಗಳಿವೆ ಅಪಾಯವಿಲ್ಲ. ಸಂಖ್ಯೆಗಳಿವೆ ಲೆಕ್ಕದ ಪುಸ್ತಕವಲ್ಲ, ಗಂಟೆ ಹೊಡೆಯುತ್ತದೆ ದೇವಾಲಯವಲ್ಲ. (ಗಡಿಯಾರ)
ಇಂತಹ ಅನೇಕ ಒಗಟುಗಳನ್ನು ಸಂಗ್ರಹಿಸಿ ಶಾಲೆಯಲ್ಲಿ ಮಿತ್ರರೊಂದಿಗೆ ಹಂಚಿಕೊಳ್ಳಿರಿ.
ಯೋಜನೆ
* ಕೆಳಗೆ ಹೇಳಿದ ಮಕ್ಕಳ ನಾಟಕ ಪುಸ್ತಕಗಳನ್ನು ಸಂಗ್ರಹಿಸಿರಿ. ಅವುಗಳಲ್ಲಿ ಒಂದು ನಾಟಕವನ್ನು ನಿಮ್ಮ ಶಾಲಾ ಕಾರ್ಯಕ್ರಮದಲ್ಲಿ ಅಭಿನಯಿಸಿರಿ.
* ಕುವೆಂಪು- ಬೊಮ್ಮನಹಳ್ಳಿಯ ಕಿಂದರಿ ಜೋಗಿ
* ಬಿ.ವಿ.ಕಾರಂತ- ಪಂಜರ ಶಾಲೆ
* ಚಂದ್ರಶೇಖರ ಕಂಬಾರ- ಕಿಟ್ಟಿಕಥೆ
ಪೂರಕ ಓದು
* ಬುದ್ಧನು ಅಂಗುಲೀಮಾಲನ ಮನಸ್ಸನ್ನು ಪರಿವರ್ತಿಸಿದ ಘಟನೆಯನ್ನು ಓದಿರಿ.
* ಚಂದಮಾಮ, ಅಮರಚಿತ್ರಕಥಾ ಮುಂತಾದ ಪುಸ್ತಿಕೆಗಳಲ್ಲಿ ಬರುವ ಪುರಾಣದ ಕಥೆಗಳನ್ನು ಓದಿರಿ
ಶುಭ ನುಡಿ
* ಯಾವುದು ಜೀವಿಗಳ ಹಿತ ಸಾಧನೆಗೆ ಸಹಕಾರಿಯಾಗುವುದೋ ಅದೇ ಧರ್ಮ.
* ಮಾನವೀಯತೆಯೇ ಮನುಷ್ಯ ಧರ್ಮ.
* ಪ್ರೀತಿಯು ನಮ್ಮ ಲಾಂಛನವಾಗಿರಲಿ, ಮಾನವೀಯತೆಯು ನಮ್ಮ ಆಲೋಚನೆಯಾಗಿರಲಿ.