ಕೃಷಿ – ಪಾಠ-8

ನೇಗಿಲ ಹಿಡಿದು ಹೊಲದೊಳು ಹಾಡುತ
ಉಳುವ ಯೋಗಿಯ ನೋಡಲ್ಲಿ
ಫಲವನು ಬಯಸದೆ ಸೇವೆಯೆ ಪೂಜೆಯು
ಕರ್ಮವೆ ಇಹಪರ ಸಾಧನವು
ಕಷ್ಟದೊಳು ಅನ್ನವ ದುಡಿವನೆ ತ್ಯಾಗಿ
ಸೃಷ್ಟಿ ನಿಯಮದೊಳಗವನೇ ಭೋಗಿ.

ರಾಷ್ಟ್ರಕವಿ ಕುವೆಂಪು ಬರೆದಿರುವ ಮೇಲಿನ ಹಾಡನ್ನು ಗಮನಿಸು. ಈ ಹಾಡಿನಲ್ಲಿ ಉಳುವ ಯೋಗಿ, ಅನ್ನವ ದುಡಿವನೆ ತ್ಯಾಗಿ ಎಂಬ ಪದಗಳನ್ನು ಬಳಸಲಾಗಿದೆ. ಅಲ್ಲವೆ? ಹಾಗೆಂದರೆ ಯಾರು? ನಿನ್ನ ಉತ್ತರವನ್ನು ಇಲ್ಲಿ ಬರೆ. – ರೈತ

ನಮಗೆಲ್ಲಾ ಅನ್ನದಾತ ಎನಿಸಿರುವ ರೈತರ ಬಗ್ಗೆ ಬರೆದ ಹಾಡಿದು. ರೈತರ ಮುಖ್ಯ ಕಸುಬು ಕೃಷಿ. ಹಾಗಾಗಿ ರೈತರನ್ನು ಕೃಷಿಕರು ಎಂತಲೂ ಕರೆಯುತ್ತಾರೆ. ತಮ್ಮ ಜೀವನ ಸಾಗಿಸಲು ಕೃಷಿಕರು, ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ನಾವೀಗ ಕೃಷಿ ಹಾಗೂ ಕೃಷಿಕರ ಬಗ್ಗೆ ಒಂದಷ್ಟು ಮಾಹಿತಿ ತಿಳಿಯೋಣ.

ಈ ಕೆಳಗಿನ ಚಿತ್ರಗಳನ್ನು ಗಮನಿಸು. ಅವುಗಳ ಮುಂದಿನ ಹೇಳಿಕೆಗಳನ್ನು ಓದು. ಚಿತ್ರಗಳಿಗೂ ಮತ್ತು ಹೇಳಿಕೆಗೂ ಜೋಡಣೆ ಸರಿಯಾಗಿಲ್ಲ. ಚಿತ್ರಗಳನ್ನು ಅವುಗಳ ಸರಿಯಾದ ಹೇಳಿಕೆಯೊಂದಿಗೆ ಗೆರೆ ಎಳೆದು ಜೋಡಿಸು.

ಕೃಷಿಕರು ಕೃಷಿ ಕಾರ್ಯಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಾರೆ ಎಂಬುದುನ್ನು ನೀನು ತಿಳಿದಿರುವೆ. ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಕೃಷಿಕರಲ್ಲಿ ಈ ಕೆಳಕಂಡ ಮೂರು ಬಗೆಯ ಕೃಷಿಕರಿರುತ್ತಾರೆ.
1) ಕೃಷಿ ಕಾರ್ಮಿಕರು
2) ಸಣ್ಣ ಕೃಷಿಕರು
3) ದೊಡ್ಡ ಕೃಷಿಕರು

ಕೆಳಗಿನ ಮಾಹಿತಿಯನ್ನು ಓದಿ, ಮೂರು ರೀತಿಯ ಕೃಷಿಕರನ್ನು ಪರಿಚಯಿಸಿಕೊ. ಶಿಕ್ಷಕರು / ಹಿರಿಯರ ನೆರವು ಪಡೆ.

ಅದೊಂದು ಹಳ್ಳಿ. ಆ ಹಳ್ಳಿಯ ಜನರೆಲ್ಲ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ.

ರಂಗಮ್ಮ ಅದೇ ಊರಿನವಳು. ಆಕೆಗೆ ತನ್ನದೆ ಆದ ಸ್ವಂತ ಜಮೀನು ಇಲ್ಲ. ತನ್ನ ಕುಟುಂಬ ನಿರ್ವಹಣೆ ಆಕೆಯ ಜವಾಬ್ದಾರಿಯಾಗಿದೆ. ಅದಕ್ಕಾಗಿ ಆಕೆ ಬೇರೆಯವರ ಜಮೀನಿನಲ್ಲಿ ಕಳೆಕೀಳುವ, ಸಸಿ ನಾಟುವ, ಹತ್ತಿ ಬಿಡಿಸುವಂಥ ಕೃಷಿ ಕೆಲಸ ಮಾಡಲು ಹೋಗುತ್ತಾಳೆ. ಆ ಊರಿನ ಜುಲೇಕಮ್ಮಳಿಗೂ ಆಕೆಗೂ ಗಾಢ ಸ್ನೇಹ.

ಜುಲೇಕಮ್ಮ ಒಬ್ಬ ರೈತ ಮಹಿಳೆ. ಆಕೆಗೆ ತನ್ನದೇ ಆದ ಸ್ವಲ್ಪ ಜಮೀನು ಇದೆ. ತನ್ನ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಮಾರಿ ಬರುವ ಹಣದಿಂದ ತನ್ನ ಕುಟುಂಬ ನಡೆಸುತ್ತಾಳೆ. ಇವರಿಬ್ಬರೂ ಆ ಊರಿನ ಮಂಜಮ್ಮನನ್ನು ಬಹಳ ಇಷ್ಟ ಪಡುತ್ತಾರೆ.

ಮಂಜಮ್ಮ ಆ ಊರಿನ ಯಶಸ್ವಿ ರೈತ ಮಹಿಳೆ. ಆಕೆಗೆ ತನ್ನದೇ ಆದ 10-15 ಎಕರೆ ಜಮೀನಿದೆ. ಆಕೆಯ ಜಮೀನಿನಲ್ಲಿ ರಂಗಮ್ಮಳಂಥ ಹತ್ತಾರು ಮಹಿಳೆಯರು ಕೃಷಿ ಕಾರ್ಯ ಮಾಡುತ್ತಾರೆ. ಮಂಜಮ್ಮ ತನ್ನ ಜಮೀನಿನಲ್ಲಿ ಬೆಳೆಯನ್ನಷ್ಟೇ ಅಲ್ಲದೆ, ಕೋಳಿ, ಕುರಿ, ದನಕರು ಸಾಕಣೆ ಮಾಡುತ್ತಾಳೆ. ಕೃಷಿ ಮಾಡಲು ದೊಡ್ಡ ಯಂತ್ರಗಳನ್ನು ಖರೀದಿಸಿದ್ದಾಳೆ. ಅಲ್ಲದೆ ಜೇನು ಮತ್ತು ರೇಷ್ಮೆ ಕೃಷಿಯ ಮೂಲಕ ಆಕೆಗೆ ಹಣ ಬರುತ್ತದೆ. ಆದ್ದರಿಂದ ಆ ಊರಿನವರು ಆಕೆಯನ್ನು ದೊಡ್ಡ ಕೃಷಿಕರು ಎಂದು ಗೌರವಿಸುತ್ತಾರೆ. ಮಂಜಮ್ಮ ತನ್ನಂತೆ ಕೃಷಿ ಮಾಡಲು ಆ ಊರಿನವರಿಗೆ ಯಾವಾಗಲೂ ಸಲಹೆ ಕೊಡುತ್ತಿರುತ್ತಾಳೆ.

ಮಾಹಿತಿಯನ್ನು ಓದಿದೆಯಲ್ಲವೆ? ಇದರಲ್ಲಿರುವ ಪಾತ್ರಗಳನ್ನು ಸರಿಯಾದ ಪದದೊಂದಿಗೆ ಜೋಡಿಸು.

ಕೃಷಿ ಕಾರ್ಮಿಕರು

ಇವರಿಗೆ ತಮ್ಮದೇ ಸ್ವಂತ ಜಮೀನು ಇರುವುದಿಲ್ಲ. ತಮ್ಮ ಜೀವನ ಸಾಗಿಸಲು ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಾರೆ.

ಇವರಿಗೆ ತಮ್ಮದೇ ಸ್ವಂತ ಜಮೀನು ಇರುವುದಿಲ್ಲ. ತಮ್ಮ ಜೀವನ ಸಾಗಿಸಲು ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಾರೆ.
ಕೃಷಿ ಕಾರ್ಮಿಕರಿಗೆ ತಮ್ಮದೇ ಆದ ಸಮಸ್ಯೆಗಳಿವೆ. ಕೆಳಗೆ ಕೆಲವು ಹೇಳಿಕೆಗಳಿವೆ. ಅವುಗಳಲ್ಲಿ ಕೃಷಿ ಕಾರ್ಮಿಕರ ಸಮಸ್ಯೆಗಳ ಮುಂದೆ (ಸರಿ) ಅಥವಾ (ತಪ್ಪು) ಗುರುತು ಹಾಕು.
1. ಕೃಷಿ ಕಾರ್ಮಿಕರಿಗೆ ವರ್ಷ ಪೂರ್ತಿ ಕೆಲಸ ದೊರೆಯುವುದಿಲ್ಲ.
2. ಕೆಲವೊಮ್ಮೆ ಕೂಲಿ ತುಂಬಾ ಕಡಿಮೆ ಇರುತ್ತದೆ.
3. ಕೃಷಿ ಕಾರ್ಮಿಕರು ತುಂಬಾ ಶ್ರೀಮಂತರು.

ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದೆ.

ಉದಾಹರಣೆ : ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ.

ಸಣ್ಣ ಕೃಷಿಕರು

ಸಣ್ಣ ಕೃಷಿಕರಿಗೆ ತಮ್ಮದೇ ಆದ ಸ್ವಲ್ಪ ಜಮೀನು ಇರುತ್ತದೆ. ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳನ್ನು ಮಾರಿ ಬರುವ ಹಣದಿಂದ ಜೀವನ ಸಾಗಿಸುತ್ತಿರುತ್ತಾರೆ. ಇವರು ಸಹ ಸಮಸ್ಯೆಗಳನ್ನು ಹೊಂದಿದ್ದಾರೆ.

ಉದಾಹರಣೆ :

* ಕೃಷಿ ಮಾಡಲು ಹಣದ ಅಭಾವವಿರುತ್ತದೆ.

* ಕೃಷಿ ಜಮೀನು ಕಡಿಮೆ ಇರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿರುತ್ತದೆ.

* ಕೃಷಿ ಜಮೀನಿಗೆ ನೀರಿನ ಸೌಲಭ್ಯ (ನೀರಾವರಿ) ಕಡಿಮೆ ಇರುತ್ತದೆ. ಹಲವು ಸನ್ನಿವೇಶಗಳಲ್ಲಿ ಜಮೀನಿಗೆ ನೀರು ದೊರೆಯುವುದೇ ಇಲ್ಲ.ಕೃಷಿ ಭೂಮಿಯ ಫಲವತ್ತತೆಗನುಗುಣವಾಗಿ ಹಾಗೂ ಋತುಮಾನಕ್ಕನುಗುಣವಾಗಿ ಬೆಳೆ ತೆಗೆಯಲು ಇವರಿಗೆ ಸರಿಯಾದ ಮಾರ್ಗದರ್ಶನ ಇರುವುದಿಲ್ಲ.

ಇವರ ಸಮಸ್ಯೆಗಳನ್ನು ಪರಿಹರಿಸಲು ಹಲವು ಪರಿಹಾರಗಳನ್ನು ಕೈಗೊಳ್ಳಲಾಗಿದೆ.

ಉದಾಹರಣೆ :

* ಹಣದ ಸಹಾಯಕ್ಕಾಗಿ ಬ್ಯಾಂಕ್‍ಗಳ ಮೂಲಕ ಸಾಲ ಒದಗಿಸಿದೆ.

* ಕಾಲುವೆಗಳ ಮೂಲಕ ನೀರಿನ ಸೌಲಭ್ಯ ಒದಗಿಸಿದೆ.

ದೊಡ್ಡ ಕೃಷಿಕರು

ಸಾಮಾನ್ಯವಾಗಿ ದೊಡ್ಡ ಕೃಷಿಕರು ಹೆಚ್ಚು ಜಮೀನು ಹೊಂದಿರುತ್ತಾರೆ. ಜಮೀನಿನಲ್ಲಿ ಕೃಷಿ ಕೆಲಸಗಳಿಗಾಗಿ ಕುಟುಂಬದ ಸದಸ್ಯರಲ್ಲದೆ, ಸಹಾಯಕರೂ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ದೊಡ್ಡ ಕೃಷಿಕರ ಬಗೆಗೆ ಕೆಲವು ಹೇಳಿಕೆಗಳನ್ನು ನೀಡಿದೆ. ಗಮನಿಸು.

* ಆಧುನಿಕ ಕೃಷಿಯಂತ್ರಗಳನ್ನು ಖರೀದಿಸಿ, ಬಳಸುತ್ತಾರೆ.

* ಧಾನ್ಯಗಳನ್ನು ಉಗ್ರಾಣಗಳಲ್ಲಿ ಸಂಗ್ರಹಿಸಿ ಉತ್ತಮ ಬೆಲೆ ಇದ್ದಾಗ ಮಾರಾಟ ಮಾಡುತ್ತಾರೆ.ಬ್ಯಾಂಕ್‍ಗಳ ಹಣಕಾಸು ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಾರೆ.

* ವಿವಿಧ ಬೆಳೆಗಳ ಕೃಷಿ ಮಾಡುವುದರಿಂದ ಇವರು ಹೆಚ್ಚಿನ ಆದಾಯ ಹೊಂದಿರುತ್ತಾರೆ.

ಕೃಷಿಕರು ಜಮೀನುಗಳಲ್ಲಿ ಕೃಷಿ ಕಾರ್ಯ ಕೈಗೊಳ್ಳುತ್ತಾರೆ ಎನ್ನುವುದು ನಿನಗೆ ತಿಳಿದಿದೆ. ಕೃಷಿಕರು ಹೊಂದಿರುವ ಕೃಷಿ ಭೂಮಿ (ಜಮೀನು)ಯನ್ನು ಮುಖ್ಯವಾಗಿ ಎರಡು ವಿಧದಲ್ಲಿ ವಿಭಾಗಿಸಲಾಗಿದೆ.

1) ಮಳೆಯಾಧಾರಿತ ಕೃಷಿ ಭೂಮಿ

2) ನೀರಾವರಿ ಕೃಷಿ ಭೂಮಿ

ಕೃಷಿಕರು ಈ ಎರಡೂ ಬಗೆಯ ಭೂಮಿಗೆ ಅನುಗುಣವಾಗಿ ಕೃಷಿ ಮಾಡುತ್ತಾರೆ.

1. ಮಳೆಯಾಧಾರಿತ ಕೃಷಿ ಭೂಮಿ

ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿನ ಜಮೀನು ಮಳೆಯಾಧಾರಿತ ಕೃಷಿ ಭೂಮಿಯಾಗಿದೆ. ಕಡಿಮೆ ನೀರನ್ನು ಬಳಸುವ ಬೆಳೆಗಳನ್ನು ಭೂಮಿಯ ಮಣ್ಣಿಗನುಗುಣವಾಗಿ ಬೆಳೆಯುತ್ತಾರೆ. ಮಳೆಯಾಧಾರಿತ ಕೃಷಿ ಭೂಮಿಯ ಬೇಸಾಯವನ್ನು ಖುಷ್ಕಿ ಅಥವಾ ಒಣಭೂಮಿ ಬೇಸಾಯ ಎಂತಲೂ ಕರೆಯಲಾಗುವುದು.

2. ನೀರಾವರಿ ಕೃಷಿ ಭೂಮಿ

ಕೃಷಿಕರಿಗೆ ನೀರು ಮುಖ್ಯ ಸಂಪತ್ತು. ನೀರಿಲ್ಲದೆ ಬೇಸಾಯ ಮಾಡಲಾಗುವುದಿಲ್ಲ. ನೀರಿನ ಮುಖ್ಯ ಮೂಲ ಮಳೆ. ಮಳೆ ಎಲ್ಲ ಕಾಲದಲ್ಲೂ ಬೀಳದ ಕಾರಣ ನೀರನ್ನು ವಿವಿಧ ಆಕರಗಳಲ್ಲಿ ಸಂಗ್ರಹಿಸಿ ಬೇಸಾಯ ಮಾಡುವುದನ್ನು ಕೃಷಿಕರು ರೂಢಿಸಿಕೊಂಡಿದ್ದಾರೆ.

ಕೆಳಗೆ ಕೆಲವು ಚಿತ್ರಗಳನ್ನು ನೀಡಿದೆ ಗಮನಿಸು.

ಬೆಳೆಗಳಿಗೆ ಮಳೆಯ ನೀರನ್ನು ಹೊರತುಪಡಿಸಿದರೆ ಕೆರೆ, ಕಾಲುವೆ, ಬಾವಿ, ಕೊಳವೆ ಬಾವಿಗಳಿಂದ ನೀರನ್ನು ಪೂರೈಸಲಾಗುತ್ತದೆ. ಹೀಗೆ ನೀರನ್ನು ಬಳಸಿ ಕೃಷಿ ಮಾಡುವುದನ್ನು ನೀರಾವರಿ ಕೃಷಿ ಎನ್ನುವರು.

ನೀರಾವರಿ ಭೂಮಿಯಲ್ಲಿ ಮಣ್ಣಿಗೆ ತಕ್ಕಂತೆ ಕಬ್ಬು, ಭತ್ತ, ಹತ್ತಿಯಂತಹ ಬೆಳೆಗಳನ್ನು ಬೆಳೆಯುತ್ತಾರೆ. ಅವುಗಳನ್ನು ನೀರಾವರಿ ಬೆಳೆಗಳು ಎನ್ನುವರು.

ಕೆರೆ, ಕಾಲುವೆ, ಬಾವಿ, ಕೊಳವೆ ಬಾವಿಗಳಿಂದ ರೈತರ ಜಮೀನುಗಳಿಗೆ ನೀರು ದೊರೆಯುವುದರಿಂದ ಇವುಗಳನ್ನು ನೀರಾವರಿಯ ಆಕರಗಳು ಎನ್ನುತ್ತಾರೆ. ನೀರಾವರಿಯ ಆಕರಗಳಿರುವ ರೈತರು ನೀರು ಹೆಚ್ಚು ಪೆÇೀಲಾಗುವುದನ್ನು ತಡೆಗಟ್ಟಲು ವಿಶಿಷ್ಟ ನೀರಾವರಿ ಪದ್ಧತಿಗಳನ್ನು ಅನುಸರಿಸುತ್ತಾರೆ. ಅವುಗಳೆಂದರೆ –

1) ಹನಿ ನೀರಾವರಿ

2) ತುಂತುರು ನೀರಾವರಿ

ಕೆಳಗಿನ ಚಿತ್ರಗಳನ್ನು ಗಮನಿಸಿ, ಹನಿ ನೀರಾವರಿ ಹಾಗೂ ತುಂತುರು ನೀರಾವರಿಯನ್ನು ಅರ್ಥೈಸಿಕೊ.

ಹನಿ ನೀರಾವರಿಯಲ್ಲಿ ಬೆಳೆಗಳ ಬೇರುಗಳಿಗೆ ನೀರು ಹನಿಹನಿಯಾಗಿ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತದೆ. ತುಂತುರು ನೀರಾವರಿ ಪದ್ಧತಿಯಲ್ಲಿ ನೀರು ಬೆಳೆಗಳ ಮೇಲೆ ಮಳೆಯಂತೆ ತುಂತುರು ರೂಪದಲ್ಲಿ ಸಮವಾಗಿ ಬೀಳುವಂತೆ ವ್ಯವಸ್ಥೆ ಮಾಡಲಾಗುತ್ತದೆ.

ಓದಿ-ತಿಳಿ : ಕೆಲವು ಪ್ರದೇಶಗಳಲ್ಲಿನ ಕೃಷಿ ಭೂಮಿಯು ಅತೀ ಕಡಿಮೆ ಪೆÇೀಷಕಾಂಶಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಇದನ್ನು ಬಂಜರು ಭೂಮಿ ಎನ್ನುತ್ತಾರೆ. ಇಲ್ಲಿ ಬೆಳೆಗಳನ್ನು ಸುಲಭವಾಗಿ ಬೆಳೆಯಲು ಸಾಧ್ಯವಿಲ್ಲ. ಆದರೆ ಇತ್ತೀಚೆಗೆ ಬಂಜರು ಭೂಮಿಯಲ್ಲಿ ಜತ್ರೋಪ ಮತ್ತು ಹೊಂಗೆಯಂತಹ ಜೈವಿಕ ಇಂಧನ ಪಡೆಯಲಾಗುವ ಗಿಡ-ಮರಗಳನ್ನು ಬೆಳೆಯಲಾಗುತ್ತಿದೆ.

ಕೃಷಿ ಭೂಮಿಯ ವಿಧಗಳನ್ನು ತಿಳಿದೆಯಲ್ಲವೆ. ಮಳೆಯಾಶ್ರಿತ ಕೃಷಿ ಭೂಮಿ ಅಥವಾ ನೀರಾವರಿ ಕೃಷಿ ಭೂಮಿ ಯಾವುದೇ ಇದ್ದರೂ ರೈತರು ಇಂದು ಎರಡು ರೀತಿಯ ಕೃಷಿ ಪದ್ಧತಿಗಳನ್ನು ಅನುಸರಿಸಿ ಬೆಳೆ ಬೆಳೆಯುತ್ತಾರೆ. ಅವುಗಳೆಂದರೆ –

1) ಸಾವಯವ ಕೃಷಿ

2) ರಾಸಾಯನಿಕ ಕೃಷಿ

ಇವೆರಡರ ಬಗ್ಗೆ ತಿಳಿಯಲು ಕೆಳಗಿನ ಹೇಳಿಕೆಗಳನ್ನು ಓದಿ ಅರ್ಥೈಸಿಕೊ. ಶಿಕ್ಷಕರ ನೆರವಿನಿಂದ ಸಾವಯವ ಮತ್ತು ರಾಸಾಯನಿಕ ಕೃಷಿಯ ಹೇಳಿಕೆಗಳನ್ನು ಗುರುತಿಸು. ಕೆಳಗಿನ ಚಾರ್ಟ್‍ನಲ್ಲಿ ಬರೆ.

ಹೇಳಿಕೆಗಳು

* ರಾಸಾಯನಿಕ ಗೊಬ್ಬರಗಳನ್ನು ಬಳಸಲಾಗುತ್ತದೆ.

* ಕೊಟ್ಟಿಗೆ / ತಿಪ್ಪೆಗೊಬ್ಬರವನ್ನು ಕೃಷಿ ಭೂಮಿಗೆ ಬಳಸಲಾಗುತ್ತದೆ..

* ಎರೆಹುಳು ಗೊಬ್ಬರವನ್ನು ಮಣ್ಣಿನ ಪೋಷಕಾಂಶ ಹೆಚ್ಚಿಸಲು ಉಪಯೋಗಿಸಲಾಗುತ್ತದೆ.

* ರಾಸಾಯನಿಕ ಪೀಡೆ ನಾಶಕಗಳ ಸಿಂಪಡಣೆ ಮಾಡಿ ಬೆಳೆ ಬೆಳೆಯಲಾಗುತ್ತದೆ.

* ಹಸಿರೆಲೆ / ಒಣಗಿದ ತರಗೆಲೆಗಳನ್ನೂ ಈ ಕೃಷಿಯಲ್ಲಿ ಬಳಸಲಾಗುತ್ತದೆ.

ರಾಸಾಯನಿಕ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳು, ಪೀಡೆ ನಾಶಕಗಳನ್ನು ಬಳಸಿ ಬೆಳೆಗಳನ್ನು ಬೆಳೆಯುತ್ತಾರೆ. ಸಾವಯವ ಕೃಷಿಯಲ್ಲಿ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರ, ಸಾವಯವ ಪೀಡೆ ನಾಶಕ ಬಳಸಿ ಬೆಳೆಗಳನ್ನು ಬೆಳೆಯುತ್ತಾರೆ.

ಕೃಷಿಯಲ್ಲಿ ಹಲವು ವಿಧಾನಗಳನ್ನು ಅನುಸರಿಸಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಉದಾಹರಣೆಗಾಗಿ ಕೆಲವು ಬೇಸಾಯ ವಿಧಾನಗಳನ್ನು ಇಲ್ಲಿ ನೀಡಿದೆ. ಓದಿ ಅರ್ಥೈಸಿಕೊ.

1. ಸಾಂದ್ರ ಬೇಸಾಯ : ಒಂದೇ ಕೃಷಿ ಜಮೀನಿನಲ್ಲಿ ವರ್ಷವೊಂದಕ್ಕೆ 2 ರಿಂದ 3 ಬೆಳೆಗಳನ್ನು ಬೆಳೆಯುವುದು. ಉದಾಹರಣೆಗೆ, ಜೋಳ, ಭತ್ತ, ರಾಗಿ, ಸೂರ್ಯಕಾಂತಿ, ಹತ್ತಿ, ಹುರಳಿ, ಕಡಲೆ, ತೊಗರಿ.

2. ಮಿಶ್ರ ಬೇಸಾಯ : ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯುವುದರ ಜೊತೆಗೆ ದನಕರು, ಕೋಳಿ, ರೇಷ್ಮೆ, ಜೇನು ಸಾಕಾಣಿಕೆ ಮಾಡುವುದು.

3. ತೋಟಗಾರಿಕೆ : ಆಹಾರದ ಬೆಳೆಗಳ ಬದಲಿಗೆ ಕೃಷಿ ಜಮೀನಿನಲ್ಲಿ ವಿವಿಧ ಹಣ್ಣುಗಳು, ತರಕಾರಿ, ಕಾಫಿ, ಟೀ ಅಥವಾ ಹೂಗಳನ್ನು ಬೆಳೆಯುವುದು.

ಹೀಗೆ ರೈತರು ತಮ್ಮ ಜಮೀನಿನಲ್ಲಿ ಹಲವು ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಆದಾಯ ಗಳಿಸುತ್ತಾರೆ.

ಕೃಷಿಕರು ಬೆಳೆಗಳನ್ನು ಬೆಳೆದ ನಂತರ ಅವುಗಳನ್ನು ಸಂಗ್ರಹಿಸಿ, ರಕ್ಷಿಸುವುದು ಕೂಡಾ ಮುಖ್ಯ. ಕೆಳಗಿನ ಚಿತ್ರಗಳನ್ನು ಗಮನಿಸು. ಧಾನ್ಯಗಳನ್ನು ಸಂಗ್ರಹಿಸುವ, ಸಂರಕ್ಷಿಸುವ ಕೆಲವು ವಿಧಾನಗಳನ್ನು ನೀಡಿದೆ. ಅವುಗಳನ್ನು ಶಿಕ್ಷಕರ ನೆರವಿನಿಂದ ಗುರುತಿಸು.

ಇವುಗಳಲ್ಲಿ ಮೊದಲ ಎರಡು ಚಿತ್ರಗಳಲ್ಲಿರುವ ಸಂಗ್ರಹ ವಿಧಾನವು ನಮ್ಮ ಹಿರಿಯರ ಕೊಡುಗೆಯಾಗಿದೆ. ಅವುಗಳನ್ನು ಹಗೇವು ಮತ್ತು ಬಿದಿರಿನ ಕಣಜ ಎನ್ನುತ್ತಾರೆ. ಇವು ಧಾನ್ಯಗಳ ಸಂಗ್ರಹಣೆ ಮಾಡುವ ಸಾಂಪ್ರದಾಯಿಕ ವಿಧಾನಗಳಾಗಿವೆ.

ಆಹಾರ ಧಾನ್ಯಗಳು / ಪದಾರ್ಥಗಳನ್ನು ಹೆಚ್ಚು ಬೆಳೆಯುತ್ತಿರುವುದರಿಂದ ಅವುಗಳನ್ನು ಸಂಗ್ರಹಿಸಿ, ಸಂರಕ್ಷಿಸಲು ಉಗ್ರಾಣಗಳನ್ನು ನಿರ್ಮಿಸಲಾಗಿದೆ. ಸರ್ಕಾರವೆ ನಿರ್ಮಿಸಿದ ಉಗ್ರಾಣಗಳಲ್ಲಿ ರೈತರು ತಮ್ಮ ಧಾನ್ಯಗಳನ್ನು ಅತಿ ಕಡಿಮೆ ಖರ್ಚಿನಲ್ಲಿ ಸಂಗ್ರಹಿಸಬಹುದು.

ಒಟ್ಟಾರೆ, ಕೃಷಿ ಹಾಗೂ ಕೃಷಿಕರು ಎತ್ತಿನ ಗಾಡಿಯ ಎರಡು ಚಕ್ರಗಳಿದ್ದಂತೆ. ಹೆಚ್ಚು ಜನರಿಗೆ ಕೆಲಸ ನೀಡುವ ಕೃಷಿ ನಮ್ಮ ದೇಶದ ಮುಖ್ಯ ಕಸುಬಾಗಿದೆ. ಕೃಷಿಯನ್ನು ಅವಲಂಬಿಸಿ ಬದುಕು ಸಾಗಿಸುವ ಕೃಷಿಕರೇ ನಮ್ಮ ನಿಜವಾದ ಅನ್ನದಾತರು. ಒಕ್ಕಲಿಗ ಒಕ್ಕಿದರೆ ನಕ್ಕು ನಲಿವುದು ಜಗವೆಲ್ಲ. ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ಕವಿವಾಣಿ ಕೃಷಿಕರ ಮಹತ್ವವನ್ನು ತಿಳಿಸುತ್ತದೆ. ಅನ್ನ ನೀಡುವ ಅನ್ನದಾತರನ್ನು ನಾವೆಲ್ಲರೂ ಗೌರವಿಸೋಣ.

ಸಂವೇದ ವಿಡಿಯೋ ಪಾಠಗಳು

Samveda – 5th – EVS – Krushi (Part 1 of 4)

Samveda – 5th – EVS – Krushi (Part 2 of 4)

Samveda – 5th – EVS – Krushi (Part 3 of 4)

Samveda – 5th – EVS – Krushi (Part 4 of 4) 

ಪೂರಕ ವಿಡಿಯೋಗಳು

ಕೃಷಿ | ಪರಿಸರ ಅಧ್ಯಯನ | 5ನೇ ತರಗತಿ |ಪಾಠ 8| Krushi| Agriculture 5th Std EVS Part 1

ಕೃಷಿ | ಪರಿಸರ ಅಧ್ಯಯನ | 5ನೇ ತರಗತಿ |ಪಾಠ 8| Krushi| Agriculture 5th Std EVS Part 2

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.