ಕರಡಿ ಕುಣಿತ – ಪದ್ಯ – 5

ದ. ರಾ. ಬೇಂದ್ರೆ

ಪ್ರವೇಶ : ‘ಕರಡಿ ಕುಣಿತ’ ಕವನವು ಬೇಂದ್ರೆ ಅವರ ಸರಳ ಕವನಗಳಲ್ಲಿ ಒಂದು. ಈ ಕವನವನ್ನು ಓದುತ್ತ ಹೋದಂತೆ ಕವನದ ಒಡಲಿನಲ್ಲಿರುವ ಶೋಷಣೆಯ ಸಂಕೀರ್ಣತೆಯು ಅನುಭವವೇದ್ಯವಾಗುವುದು. ಈ ಕವನದ ಅಂತ್ಯದಲ್ಲಿ ಬೇಂದ್ರೆ ಅವರು ಮಾನವನ ಬುದ್ಧಿಯ ಕುಣಿತ ಎಲ್ಲ ಪ್ರಾಣಿಗಳ ಕುಣಿತಕ್ಕಿಂತ ಮಿಗಿಲಾದುದು ಎಂಬ ತತ್ತ್ವವನ್ನು ಸಾರುತ್ತಾರೆ.

ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾಂವ ಬಂದಾನ!
ಗುಣುಗುಣುಗುಟ್ಟುತ ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ! ||1||

ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬವಂತನ ಹಿಡಿದು ತಂದಾನ?
‘ಧಣಿಯರ ಮನಿಮುಂದ ಕಾವಲು ಮಾಡಣ್ಣ
ಧಣಿ ದಾನ ಕೊಡುವನು’ ಅಂದಾನ. ||2||

ತ್ರೇತಾಯುಗದ ರಾಮನ್ನ ದ್ವಾಪರದ ಕೃಷ್ಣನ್ನ
ಕಲಿಯುಗದ ಕಲ್ಕೀನ ಕಂಡಾನ.
ಜಾಂಬು ನದಿ ದಂಡೆಯ ಜಂಬುನೇರಲ ಹಣ್ಣು
ಕೃತಯುಗದ ಕೊನೆಗೀಂವಾ ಉಂಡಾನ. ||3||

ಬಂದಾರೆ ಬರ್ರೆವ್ವ, ಕಂದನ ತರ್ರೆವ್ವ.
ಅಂಜೀಕಿ ಗಿಂಜೀಕಿ ಕೊಂದಾನ.
ರೋಮ ರೋಮಗಳಲ್ಲಿ ಭೀಮರಕ್ಷಿಯ ಬಲ
ಕೊರಳಾಗ ಕಟ್ಟಿರಿ ಒಂದಾನ. ||4||

‘ಕುಣಿಯಲೆ ಮಗನೆ ನೀ’ ಅನ್ನೊದೊಂದೇ ತಡ
ತನ್ನssನ ತಾನನ ತಂದಾನ.
ಮುದ್ದುಕೂಸಿನ ಹಾಂಗ ಮುಸುಮುಸು ಮಾಡುತ್ತ
ಕುಣಿದಾನ ಕುಣತ್ನssವ ಛಂದಾನ. ||5||

ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು,
ನಡೆದಾನ ಪಡೆದಾನ ಬಂಧ್ನಾssನ.
‘ಕುಣಿಸುವವರ ಹೊಟ್ಟಿ ತಣ್ಣಗಾಗಲಿ’ ಎಂದು
ಮುಗಿಲಿಗೆ ಕೈಮುಗಿದು ನಿಂದಾನ. ||6||

ಮನಬಲ್ಲ ಮಾನವ ಕುಣಿದಾನ ಕುಣಿಸ್ಯಾನ
ಪ್ರಾಣದ ಈ ಪ್ರಾಣಿ ಹಿಂದ್ನಾssನ.
ಕರಡಿಯ ಹೆಸರೀಲೆ ಚರಿತಾರ್ಥ ನಡಿಸ್ಯಾನ
ಪರಮಾರ್ಥ ಎಂಬಂತೆ ಬಂದಾನ. ||7||

ಈ ಮನಷಾ ಎಂದಿಂದೊ ಕವಲೆತ್ತು ಕೋಡಗ
ತನಗಾಗಿ ಕುಣಿಸುತ್ತ ನಡದಾನ.
ಕರಡೀ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ. ||8||

ಪದ್ಯದ ಮಾದರಿ ಗಾಯನ

https://youtu.be/fJC-Rgj7wvc

ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

https://youtu.be/6S6eNvTV-rk

ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

ತರಗತಿ 5 ಪದ್ಯ:- ಕರಡಿ ಕುಣಿತ…..! Class 5 poem:- “Karadi kunitha”…..!

ಕರಡಿ ಕುಣಿತ/ಸಿರಿ ಕನ್ನಡ/೫ನೇ ತರಗತಿ/೫ನೇ ಪದ್ಯ Karadi Kunitha/5th Class/Kannada Poem with Lyrics&Animation

ಕೃತಿಕಾರರ ಪರಿಚಯ

ದ. ರಾ. ಬೇಂದ್ರೆ : ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಕ್ರಿ. ಶ. 1896 ರಲ್ಲಿ ಧಾರವಾಡದ ಸಾಧನಕೇರಿಯಲ್ಲಿ ಜನಿಸಿದರು. ಇವರು ಪ್ರೌಢಶಾಲಾ ಅಧ್ಯಾಪಕರಾಗಿ, ಸೊಲ್ಹಾಪುರದ ರಾಜಾರಾಮ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಧಾರವಾಡದ ಬಾನುಲಿ ಕೇಂದ್ರದ ಸಲಹೆಗಾರರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಇವರು ಗರಿ, ನಾಕುತಂತಿ, ನಾದಲೀಲೆ, ಮೇಘದೂತ, ಗಂಗಾವತರಣ, ಸಖೀಗೀತ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರ ನಾಕುತಂತಿ ಕವನ ಸಂಕಲನಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿಯು ಲಭಿಸಿದೆ. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಪದಗಳ ಅರ್ಥ

ಕುಣಿಕೋಲು – ಕುಣಿಸುವವನು ಹಿಡಿದುಕೊಳ್ಳುವ ಕೋಲು.
ಕೈಕಡಗ – ಕೈಗೆ ಹಾಕಿಕೊಳ್ಳುವ ಬಳೆ
ಜಾಂಬವಂತ – ಕರಡಿ

ಸಂವೇದ ವಿಡಿಯೋ ಪಾಠಗಳು

Samveda – 5th – Kannada – Karadiya Kunitha (Part 1 of 2)

Samveda – 5th – Kannada – Karadiya Kunitha (Part 2 of 2)

ಪೂರಕ ವಿಡಿಯೋಗಳು

ಕರಡಿ ಕುಣಿತ | 5 ನೇ ತರಗತಿ ಪದ್ಯ 5 | karadi kunita 5th class kannada poem 5

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವ್ಯಾಕರಣ ಮಾಹಿತಿ – ಕನ್ನಡ ಸಂಧಿಗಳು

ಲೋಪಸಂಧಿ :

ಮೇಲೆ + ಇಟ್ಟು = ಮೇಲಿಟ್ಟು
ಮೇಲಿನ ಸಂಧಿಕಾರ್ಯವನ್ನು ಗಮನಿಸಿರಿ. ‘ಮೇಲೆ’ ಎಂಬ ಪೂರ್ವಪದದ ಕೊನೆಯಲ್ಲಿರುವ ಸ್ವರ ‘ಎ’ ಎಂಬುದು ಇಲ್ಲಿ ಲೋಪವಾಗಿದೆ.

ಮುಳ್ಳು + ಅನ್ನು = ಮುಳ್ಳನ್ನು
ಇಲ್ಲಿ ‘ಮುಳ್ಳು’ ಎಂಬ ಪೂರ್ವಪದದ ಕೊನೆಯಲ್ಲಿರುವ ಸ್ವರ ‘ಉ’ ಎಂಬುದು ಇಲ್ಲಿ ಲೋಪವಾಗಿದೆ. ಹೀಗೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದ ಕೊನೆಯಲ್ಲಿರುವ ಸ್ವರವು ಲೋಪವಾದರೆ ಅದನ್ನು ‘ಲೋಪಸಂಧಿ’ ಎನ್ನುವರು.

ಇದರಂತೆ ಇನ್ನು ಕೆಲವು ಉದಾಹರಣೆಗಳನ್ನು ಗಮನಿಸೋಣ.
ಒಸರುತ್ತ + ಇದ್ದ = ಒಸರುತ್ತಿದ್ದ : ಸ್ವರ ಲೋಪವಾಗಿದೆ.
ಹುಡುಗರು + ಎಲ್ಲರು = ಹುಡುಗರೆಲ್ಲರು : ಸ್ವರ ಲೋಪವಾಗಿದೆ.
ಮೇಲೆ + ಏರು = ಮೇಲೇರು : ಸ್ವರ ಲೋಪವಾಗಿದೆ.

ಆಗಮಸಂಧಿ :

ಹೊಲ + ಅನ್ನು = ಹೊಲವನ್ನು
ಮೇಲಿನ ಸಂಧಿಕಾರ್ಯವನ್ನು ಗಮನಿಸಿರಿ. ಹೊಲವನ್ನು ಎಂಬ ಪದದಲ್ಲಿ ‘ವ’ ಎಂಬ ಅಕ್ಷರವು ಬಂದು ಸೇರಿಕೊಂಡಿದೆ.

ಹೊಳೆ + ಅಲ್ಲಿ = ಹೊಳೆಯಲ್ಲಿ
ಇಲ್ಲಿ ‘ಹೊಳೆಯಲ್ಲಿ’ ಎಂಬ ಪದದಲ್ಲಿ ‘ಯ’ ಎಂಬ ಅಕ್ಷರವು ಬಂದು ಸೇರಿಕೊಂಡಿದೆ.
ಹೀಗೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಒಂದು ಅಕ್ಷರ ಆಗಮವಾದರೆ ಅದನ್ನು ಆಗಮಸಂಧಿ ಎನ್ನುವರು.

ಈ ರೀತಿಯಾದ ಇನ್ನು ಕೆಲವು ಉದಾಹರಣೆಗಳನ್ನು ಗಮನಿಸೋಣ :
ಗಡಿಬಿಡಿ + ಇಂದ = ಗಡಿಬಿಡಿಯಿಂದ : ಆಗಮವಾಗಿದೆ.
ಆರಂಭ + ಆಗು = ಆರಂಭವಾಗು : ಆಗಮವಾಗಿದೆ.

ಆದೇಶಸಂಧಿ :

ಕೋಪ + ಕೊಂಡು = ಕೋಪಗೊಂಡು
ಮೇಲಿನ ಸಂಧಿಕಾರ್ಯವನ್ನು ಗಮನಿಸಿರಿ. ಕೋಪಗೊಂಡು ಎಂಬ ಪದದಲ್ಲಿ ಕ (ಕೊ) ಅಕ್ಷರದ ಬದಲಿಗೆ (ಗೊ) ಅಕ್ಷರ ಬಂದಿದೆ.

ಮೈ + ತೊಳೆ = ಮೈದೊಳೆ
ಇಲ್ಲಿ ಮೈದೊಳೆ ಎಂಬ ಪದದಲ್ಲಿ ‘ತ’ (ತೊ) ಅಕ್ಷರದ ಬದಲಿಗೆ ‘ದ’ (ದೊ) ಅಕ್ಷರ ಬಂದಿದೆ.

ಹೀಗೆ ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರ ಬಂದರೆ ಅದನ್ನು ಆದೇಶಸಂಧಿ ಎನ್ನುವರು. ಇಲ್ಲಿ ಉತ್ತರ ಪದದ ಮೊದಲನೆಯ ಅಕ್ಷರವು ಬದಲಾಗುತ್ತದೆ. ಸಾಮಾನ್ಯವಾಗಿ ಕ,ತ,ಪ ಗಳಿಗೆ ಕ್ರಮವಾಗಿ ಗ,ದ,ಬ ಗಳು ಆದೇಶವಾಗಿ ಬರುತ್ತವೆ.

ಈ ರೀತಿಯಾದ ಇನ್ನು ಕೆಲವು ಉದಾಹರಣೆಗಳನ್ನು ಗಮನಿಸೋಣ :
ಕುಡು + ಕೋಲು = ಕುಡುಗೋಲು : ‘ಕ’ ದ ಬದಲು ‘ಗ’ ಆಗಿದೆ.
ಬೆಟ್ಟ + ತಾವರೆ = ಬೆಟ್ಟದಾದರೆ : ‘ತ’ ದ ಬದಲು ‘ದ’ ಆಗಿದೆ.
ಕಣ್ + ಪನಿ = ಕಂಬನಿ : ‘ಪ’ ದ ಬದಲು ‘ಬ’ ಆಗಿದೆ.

ಕನ್ನಡ ಪದಗಳು ಪರಸ್ಪರ ಸೇರಿ ಸಂಧಿಕಾರ್ಯ ನಡೆದಿದೆ. ಆದ್ದರಿಂದ ಇವುಗಳನ್ನು ‘ಕನ್ನಡ ಸಂಧಿ’ ಎಂದು ಕರೆಯುತ್ತೇವೆ.

ಇದುವರೆಗೆ ನಾವು ಮೂರು ರೀತಿಯ ಸಂಧಿಕಾರ್ಯಗಳನ್ನು ಗಮನಿಸಿದ್ದೇವೆ.

ಕನ್ನಡ ಸಂಧಿಗಳು 1. ಲೋಪ ಸಂಧಿ 2. ಆಗಮ ಸಂಧಿ 3. ಆದೇಶ ಸಂಧಿ very easy method

ಸಂಧಿ- ಕನ್ನಡ ಸಂಧಿಗಳು (kannada sandhi)

ಶುಭನುಡಿ

ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ.
ಪ್ರಾಣಿಗಳನ್ನು ಹಿಂಸಿಸಬಾರದು.