ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ – ಪದ್ಯ – 4

ಚಂದ್ರಶೇಖರ ಪಾಟೀಲ

ಪ್ರವೇಶ : ಕನ್ನಡ ನಾಡು ನುಡಿಯ ಬಗೆಗೆ ಅಭಿಮಾನವಿರಬೇಕು. ಕನ್ನಡ ನಾಡು ನುಡಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. ಅದಕ್ಕಾಗಿ ನಾವೆಲ್ಲರೂ ಒಂದಾಗಬೇಕು. ಕನ್ನಡ ನಾಡನ್ನು ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು. ಕನ್ನಡ ಬಾಳಿಗೆ ಅನ್ನ ಕೊಡುವ ಭಾಷೆಯಾಗಬೇಕು. ಇದಕ್ಕಾಗಿ ಎಲ್ಲರೂ ಬನ್ನಿ ಕೈಜೋಡಿಸೋಣ ಎಂಬುದು ಕವಿಯ ಆಶಯವಾಗಿದೆ.

ಎಲ್ಲೆಲ್ಲೂ ಉಸಿರಬೇಕು
ನಮ್ಮ ನುಡಿ ಕನ್ನಡ
ಸಿರಿನಾಡನು ಕಟ್ಟಲಿಕ್ಕೆ
ಬರ್ರಿ ನಮ್ಮ ಸಂಗಡ

ಕೈಯ ತುಂಬ ಕೆಲಸಬೇಕು
ಬೇಕು ಹೊಟ್ಟೆಗನ್ನ
ಅಕ್ಷರಗಳ ಕನ್ನ ಕೊರೆದು
ಬರಲಿ ಅರಿವು – ಚಿನ್ನ

ಮೈಯ ತುಂಬ ಬಟ್ಟೆಬೇಕು
ನೆತ್ತಿಗೊಂದು ಆಸರ
ಭೂಮಿ ತುಂಬ ಬಿತ್ತಬೇಕು
ತನ್ನ ಬೆಳಕು ನೇಸರ

ತಲೆಯ ತುಂಬ ಬೆಂಕಿ ತುಂಬಿ
ಮಿಂಚಬೇಕು ಕಂಗಳು
ಎದೆಯ ತುಂಬಿ ತುಳುಕಬೇಕು
ಪ್ರೀತಿಯ ಬೆಳದಿಂಗಳು

ಇಂಥ ನಾಡು ಕಟ್ಟಬೇಕು
ಬರ್ರಿ ನಮ್ಮ ಸಂಗಡ
ಎಲ್ಲೆಲ್ಲೂ ಮೊಳಗಬೇಕು
ಕನ್ನಡ ಕನ್ನಡ
ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ

ಪದ್ಯದ ಮಾದರಿ ಗಾಯನ

https://youtu.be/YD6SBgGksGo

ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

Class 5 kannada poem”Kannada Kannada barri namma sangada”

ಕೃತಿಕಾರರ ಪರಿಚಯ

ಚಂದ್ರಶೇಖರ ಪಾಟೀಲ : ‘ಚಂಪಾ’ ಎಂಬ ಸಂಕ್ಷಿಪ್ತನಾಮದಿಂದ ಪ್ರಸಿದ್ಧರಾದ ಚಂದ್ರಶೇಖರ ಪಾಟೀಲ ಅವರು ಕ್ರಿ. ಶ. 1939 ರಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತಿಮತ್ತೂರಿನಲ್ಲಿ ಜನಿಸಿದರು. ಇವರು ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಇವರು ಬಾನುಲಿ, ಮಧ್ಯಬಿಂದು, ಗಾಂಧೀಸ್ಮರಣೆ, ಶಾಲ್ಮಲಾ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಪಂಪ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಪದಗಳ ಅರ್ಥ

ಆಸರ – ಆಶ್ರಯ, ನೆಲೆ
ಉಸಿರಬೇಕು – ಹೇಳಬೇಕು
ನೇಸರ – ಸೂರ್ಯ
ಬರ್ರಿ – ಬನ್ನಿರಿ
ಸಂಗಡ – ಜೊತೆ
ಹೊಟ್ಟೆಗನ್ನ – ಹಸಿವಿಗೆ ಆಹಾರ

ಸಂವೇದ ವಿಡಿಯೋ ಪಾಠಗಳು

SAMVEDA 5 FLK 12 Kannada Kannada Barri Namma Sangada 12

ಪೂರಕ ವಿಡಿಯೋಗಳು

ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ | 5 ನೇ ತರಗತಿ | ಪದ್ಯ 4 | kannada kannada barri namma sangada

ಪ್ರಶ್ನೋತ್ತರಗಳು

ಈ ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವ್ಯಾಕರಣ ಮಾಹಿತಿ

ಅ. ಸಂಧಿ ಪರಿಚಯ.

ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವುದಿಲ್ಲ. ಅವನು + ಅಲ್ಲಿ ಎಂಬ ಎರಡು ಶಬ್ದಗಳನ್ನು ಕೂಡಿಸಿ ‘ಅವನಲ್ಲಿ’ ಎಂದು ಹೇಳುತ್ತೇವೆ. ಅಂದರೆ ಅವುಗಳನ್ನು ಕೂಡಿಸಿಯೇ ಹೇಳುತ್ತೇವೆ.
ಉದಾ :
ಆಡು + ಇಸು = ಆಡಿಸು
ಮರ + ಅನ್ನು = ಮರವನ್ನು
ದೇವರು + ಇಗೆ = ದೇವರಿಗೆ
ಮಳೆ + ಕಾಲ = ಮಳೆಗಾಲ

ಹೀಗೆ ಎರಡು ಅಕ್ಷರಗಳ ಯಾವ ಕಾಲವಿಳಂಬವೂ ಇಲ್ಲದೆ ಪರಸ್ಪರ ಸೇರುವುದಕ್ಕೆ ‘ಸಂಧಿ’ ಎನ್ನುವರು.

ಪದ ಪದ ಸಂಧಿರೂಪ
ಅವನ + ಅಂಗಡಿ = ಅವನಂಗಡಿ
ಕುಲ + ಅನ್ನು = ಕುಲವನ್ನು
ಬೆಟ್ಟ + ತಾವರೆ = ಬೆಟ್ಟದಾವರೆ
ಮಳೆ + ಕಾಲ = ಮಳೆಗಾಲ

ಹೀಗೆ ಒಂದು ಪದ ಇನ್ನೊಂದು ಪದದೊಡನೆ ಸೇರಿದಾಗ ಪೂರ್ವಪದದ ಅಂತ್ಯದಲ್ಲಿ ಮತ್ತು ಉತ್ತರಪದದ ಆದಿಯಲ್ಲಿ ಮೂರು ಬಗೆಯ ಕಾರ್ಯಗಳು ನಡೆಯಬಹುದು. ಅಕ್ಷರವೊಂದು ಲೋಪವಾಗಬಹುದು, ಇನ್ನೊಂದು ಆಗಮಿಸಬಹುದು, ಒಂದು ಅಕ್ಷರ ಹೋಗಿ ಅದರ ಸ್ಥಾನದಲ್ಲಿ ಬೇರೆಯೇ ಅಕ್ಷರ ಬರಬಹುದು. ಇದನ್ನು ‘ಸಂಧಿಕಾರ್ಯ’ ಎನ್ನುವರು.

ಪೂರ್ವಪದ + ಉತ್ತರಪದ = ಸಂಧಿಕಾರ್ಯ
ಮಾತು + ಅನ್ನು = ಮಾತನ್ನು
(ಉ) + (ಅ) = ಉ
ಲೋಪ ಸಂಧಿಯ ವಿವಿಧ ಪ್ರಕಾರಗಳ ಬಗ್ಗೆ ಮುಂದಿನ ಪಾಠದಲ್ಲಿ ತಿಳಿದುಕೊಳ್ಳೋಣ.

KANNADA GRAMMAR/ಕನ್ನಡ ವ್ಯಾಕರಣ/ಸಂಧಿ ಪರಿಚಯ.

ಶುಭನುಡಿ

ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತಲೂ ಮಿಗಿಲು.
ಕನ್ನಡವೇ ಸತ್ಯ; ಕನ್ನಡವೇ ನಿತ್ಯ.
ಎಲ್ಲಾದರೂ ಎಂತಾದರೂ ಇರು ನೀ ಕನ್ನಡಿಗನಾಗಿರು.
ಕನ್ನಡಕ್ಕೆ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು.