ಎಳೆಯಿಂದ ಬಟ್ಟೆ – ಅಧ್ಯಾಯ-3

ಸಸ್ಯಗಳಿಂದ ಕೆಲವು ನಾರುಗಳನ್ನು ಪಡೆಯುತ್ತೇವೆ ಎಂಬುದನ್ನು ನೀವು 6ನೇ ತರಗತಿಯಲ್ಲಿ ಕಲಿತಿರುವಿರಿ. ಉಣ್ಣೆ ಮತ್ತು ರೇಷ್ಮೆ ನಾರುಗಳನ್ನು ಪ್ರಾಣಿಗಳಿಂದ ಪಡೆಯುತ್ತೇವೆ ಎಂಬುದನ್ನು ಕೂಡ ಕಲಿತಿರುವಿರಿ. ಕುರಿ ಅಥವಾ ಯಾಕ್‍ನ ತುಪ್ಪಳದಿಂದ ಉಣ್ಣೆ ದೊರೆಯುತ್ತದೆ. ರೇಷ್ಮೆ ಪತಂಗದ ಗೂಡಿನಿಂದ ರೇಷ್ಮೆ ಎಳೆ ದೊರೆಯುತ್ತದೆ. ಕುರಿಯ ದೇಹದ ಯಾವ ಭಾಗವು ಉಣ್ಣೆಯ ನಾರನ್ನು ನೀಡುವುದು ಎಂದು ನಿಮಗೆ ತಿಳಿದಿದೆಯೆ? ಸ್ವೆಟರ್‍ಗಳನ್ನು ಹೆಣೆಯಲು ನಾವು ಮಾರುಕಟ್ಟೆಯಿಂದ ಖರೀದಿಸುವ ಉಣ್ಣೆಯ ದಾರವಾಗಿ ಈ ನಾರು/ಎಳೆಗಳನ್ನು ಹೇಗೆ ಪರಿವರ್ತಿಸಲಾಗುತ್ತದೆ ಎಂಬುದು ನಿಮಗೆ ಅರಿವಿದೆಯೆ? ಸೀರೆಯಾಗಿ ನೇಯಲಾಗುವ ರೇಷ್ಮೆನೂಲು ರೇಷ್ಮೆ ನಾರಿನಿಂದ ಹೇಗೆ ತಯಾರಾಗುತ್ತದೆ ಎಂಬುದರ ಬಗ್ಗೆ ನೀವು ತಿಳಿದಿರುವಿರ?

ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಈ ಅಧ್ಯಾಯದಲ್ಲಿ ಮಾಡೋಣ.

ಪ್ರಾಣಿ ಎಳೆಗಳು – ಉಣ್ಣೆ ಮತ್ತು ರೇಷ್ಮೆ

ಉಣ್ಣೆ

ಉಣ್ಣೆಯನ್ನು ಕುರಿ, ಮೇಕೆ, ಯಾಕ್ ಮತ್ತು ಇತರ ಕೆಲವು ಪ್ರಾಣಿಗಳಿಂದ ಪಡೆಯಲಾಗುವುದು. ಉಣ್ಣೆಯನ್ನು ಉತ್ಪಾದಿಸುವ ಈ ಪ್ರಾಣಿಗಳ ಮೈಮೇಲೆ ದಟ್ಟವಾದ ಕೂದಲಿದೆ. ಈ ಪ್ರಾಣಿಗಳಿಗೇಕೆ ದಟ್ಟವಾದ ಕೂದಲಿನ ಹೊದಿಕೆ ಇದೆ ಎಂದು ನೀವು ತಿಳಿದಿರುವಿರ? ಕೂದಲು ತಮ್ಮ ನಡುವೆ ಹೆಚ್ಚು ಗಾಳಿಯನ್ನು ಹಿಡಿದಿಟ್ಟುಕೊಳ್ಳುತ್ತದೆ. ಗಾಳಿಯು ಉಷ್ಣದ ಅಲ್ಪವಾಹಕ ಎಂಬುದನ್ನು ನೀವು 4ನೇ ಅಧ್ಯಾಯದಲ್ಲಿ ಕಲಿಯುವಿರಿ. ಆದ್ದರಿಂದ ಕೂದಲು ಈ ಪ್ರಾಣಿಗಳನ್ನು ಬೆಚ್ಚಗಿಡುತ್ತದೆ. ಉಣ್ಣೆಯು ಈ ಕೂದಲಿನ ಎಳೆಗಳಿಂದ ಉತ್ಪಾದನೆಯಾಗುತ್ತದೆ.

ಚಟುವಟಿಕೆ 3.1
ನಿಮ್ಮ ದೇಹದ ಹಾಗೂ ತಲೆಯ ಮೇಲಿನ ಕೂದಲುಗಳನ್ನು ಸ್ಪರ್ಶಿಸಿ ನೋಡಿ. ಏನಾದರೂ ವ್ಯತ್ಯಾಸವನ್ನು ನೀವು ಗಮನಿಸುವಿರಾ? ಯಾವುದು ಒರಟು, ಯಾವುದು ನಯವಾಗಿದೆ?
ನಮ್ಮಂತೆಯೇ ಕೂದಲು ಹೊದ್ದ ಕುರಿಗಳ ಚರ್ಮವು ಎರಡು ವಿಧದ ಎಳೆಗಳಿಂದಾದ ತುಪ್ಪಳವುಳ್ಳದ್ದು. (i) ಒರಟಾದ ಹೊರಗೂದಲು (ii) ಚರ್ಮಕ್ಕೆ ಹತ್ತಿರದ ನಯವಾದ ಸೂಕ್ಷ್ಮ ಒಳಗೂದಲು. ನಯವಾದ ಕೂದಲು ಉಣ್ಣೆಯನ್ನು ತಯಾರಿಸಲು ಬೇಕಾಗುವ ಎಳೆಗಳನ್ನು ಒದಗಿಸುತ್ತದೆ. ಕೆಲವು ತಳಿಯ ಕುರಿಗಳು ಸೂಕ್ಷ್ಮವಾದ ಒಳಕೂದಲುಳ್ಳವು. ನಯವಾದ ಸೂಕ್ಷ್ಮ ಒಳಕೂದಲನ್ನೇ ಉಳ್ಳ ಕುರಿಗಳ ಸಂತಾನಕ್ಕೆಂದು ಪೋಷಕ ಕುರಿಗಳನ್ನು ವಿಶೇಷವಾಗಿ ಆಯ್ಕೆ ಮಾಡಲಾಗುತ್ತದೆ. ನಯವಾದ ಒಳಕೂದಲಿನಂತಹ ವಿಶೇಷ ಲಕ್ಷಣಗಳ ಸಂತತಿಗಳನ್ನು ಪಡೆಯಲು ಪೋಷಕ ಕುರಿಗಳನ್ನು ಆಯ್ಕೆ ಮಾಡುವ ಈ ವಿಧಾನವನ್ನು ಆಯ್ಕೆಯ ತಳೀಕರಣ (selective breeding) ಎನ್ನುವರು.

ದಟ್ಟವಾಗಿ ಕೂದಲು ಬೆಳೆದಿರುವ ಕುರಿ

ಉಣ್ಣೆಯನ್ನು ಉತ್ಪಾದಿಸುವ ಪ್ರಾಣಿಗಳು

ನಮ್ಮ ದೇಶದ ವಿವಿಧ ಭಾಗಗಳಲ್ಲಿ ಕುರಿಗಳ ಅನೇಕ ತಳಿಗಳು ಕಂಡು ಬರುತ್ತವೆ. ಕುರಿಯ ತುಪ್ಪಳವೊಂದೇ ಉಣ್ಣೆಯ ಆಕರ ಅಲ್ಲದಿದ್ದರೂ, ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೊರೆಯುವ ಉಣ್ಣೆಯು ಕುರಿಯದ್ದೆ ಆಗಿದೆ. ಟಿಬೆಟ್ ಮತ್ತು ಲಡಾಕ್‍ಗಳಲ್ಲಿ ಯಾಕ್‍ನ ಉಣ್ಣೆಯು ಸಾಮಾನ್ಯವಾಗಿ ದೊರೆಯುತ್ತದೆ. ಜಮ್ಮು ಕಾಶ್ಮೀರದಂತಹ ಬೆಟ್ಟ ಪ್ರದೇಶಗಳಲ್ಲಿ ಅಂಗೋರಾ ಮೇಕೆಗಳಿಂದ ಉಣ್ಣೆಯನ್ನು ಪಡೆಯಲಾಗುತ್ತದೆ.

ಮೇಕೆಯ ಕೂದಲಿನಿಂದಲೂ ಉಣ್ಣೆಯನ್ನು ಪಡೆಯಲಾಗುತ್ತದೆ. ಕಾಶ್ಮೀರಿ ಮೇಕೆಗಳ ಒಳ ತುಪ್ಪಳ ನಯವಾಗಿರುತ್ತದೆ. ಈ ತುಪ್ಪಳದಿಂದ ಪಶ್ಮಿನಾ ಶಾಲುಗಳು ಎಂಬ ಉತ್ಕೃಷ್ಟ ಶಾಲುಗಳನ್ನು ನೇಯುವರು.

ಒಂಟೆಗಳ ಮೈಮೇಲಿನ ತುಪ್ಪಳ (ಕೂದಲು)ವನ್ನು ಕೂಡಾ ಉಣ್ಣೆಯಾಗಿ ಬಳಸುತ್ತಾರೆ. ದಕ್ಷಿಣ ಅಮೇರಿಕಾದಲ್ಲಿ ಕಂಡುಬರುವ ಲಾಮಾ ಮತ್ತು ಅಲ್ಪಾಕಾ ಪ್ರಾಣಿಗಳು ಕೂಡಾ ಉಣ್ಣೆಯನ್ನು ಒದಗಿಸುತ್ತವೆ.

ಚಟುವಟಿಕೆ 3.2
ಉಣ್ಣೆಯಾಗಿ ಉಪಯೋಗವಾಗುವ ಕೂದಲುಳ್ಳ ಪ್ರಾಣಿಗಳ ಚಿತ್ರಗಳನ್ನು ಸಂಗ್ರಹಿಸಿ. ಆ ಚಿತ್ರಗಳನ್ನು ನಿಮ್ಮ ಯೋಜನಾ ಪುಸ್ತಕದಲ್ಲಿ ಅಂಟಿಸಿ. ಚಿತ್ರಗಳನ್ನು ಸಂಗ್ರಹಿಸಲು ಸಾಧ್ಯವಾಗದಿದ್ದರೆ, ಇಲ್ಲಿ ಕೊಟ್ಟಿರುವಂತೆ ಚಿತ್ರಗಳನ್ನು ಬಿಡಿಸಿ.

ಅಂಗೋರಾ ಮೇಕೆ
ಯಾಕ್
ಮೇಕೆ
ಒಂಟೆ
ಲಾಮಾ
ಅಲ್ಪಾಕಾ

ಚಟುವಟಿಕೆ 3.3
ಪ್ರಪಂಚ ಹಾಗೂ ಭಾರತದ ಭೂಪಟಗಳ ಬಾಹ್ಯ ರೇಖಾ ನಕ್ಷೆಗಳನ್ನು ಸಂಗ್ರಹಿಸಿ. ಉಣ್ಣೆಯನ್ನು ಉತ್ಪಾದಿಸುವ ಪ್ರಾಣಿಗಳು ಯಾವ ಪ್ರದೇಶದಲ್ಲಿ ಕಾಣಸಿಗುತ್ತವೆ ಎಂದು ತಿಳಿದು ಆ ಸ್ಥಳಗಳನ್ನು ನಕ್ಷೆಯ ಮೇಲೆ ಗುರುತು ಮಾಡಿ. ಬೇರೆ ಬೇರೆ ವಿಧದ ಉಣ್ಣೆಯನ್ನು ಉತ್ಪಾದಿಸುವ ಪ್ರಾಣಿಗಳಿರುವ ಪ್ರದೇಶಗಳನ್ನು ಸೂಚಿಸಲು ಬೇರೆ ಬೇರೆ ಬಣ್ಣಗಳನ್ನು ಬಳಕೆ ಮಾಡಿ.

ಎಳೆಯಿಂದ ಉಣ್ಣೆ

ಉಣ್ಣೆಯನ್ನು ಪಡೆಯಲು ಕುರಿಗಳನ್ನು ಸಾಕುವರು. ಅವುಗಳ ಕೂದಲನ್ನು ಕತ್ತರಿಸಿ ಉಣ್ಣೆಯಾಗಿ ಸಂಸ್ಕರಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ನಾವು ತಿಳಿಯೋಣ.
ಕುರಿಗಳ ಸಾಕಣೆ ಮತ್ತು ತಳಿ ಅಭಿವೃದ್ಧಿ : ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಂಚಲ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಮ್‍ನ ಬೆಟ್ಟಗಳು ಅಥವಾ ಹರಿಯಾಣ, ಪಂಜಾಬ್, ರಾಜಸ್ಥಾನ್ ಮತ್ತು ಗುಜರಾತ್‍ನ ಮೈದಾನಗಳ ಕಡೆಗೆ ಪ್ರಯಾಣಿಸಿದರೆ, ಕುರಿಗಾಹಿಗಳು ತಮ್ಮ ಕುರಿ ಮಂದೆಗಳನ್ನು ಮೇಯಿಸಲು ಕರೆದೊಯ್ಯುವುದನ್ನು ನೀವು ನೋಡಬಹುದು. ಕುರಿಗಳು ಸಸ್ಯಹಾರಿಗಳು, ಮುಖ್ಯವಾಗಿ ಹುಲ್ಲು ಮತ್ತು ಎಲೆಗಳನ್ನು ತಿನ್ನುತ್ತವೆ. ಕುರಿ ಸಾಕಣೆದಾರರು ಕುರಿಗಳನ್ನು ಮೇಯಿಸುವುದೇ ಅಲ್ಲದೇ, ಅವುಗಳಿಗೆ ದ್ವಿದಳ ಧಾನ್ಯಗಳು, ಮೆಕ್ಕೆಜೋಳ, ಜೋಳ, ಹಿಂಡಿ (ಎಣ್ಣೆ ಬೀಜಗಳಿಂದ ಎಣ್ಣೆ ತೆಗೆದ ಮೇಲೆ ಉಳಿಯುವ ವಸ್ತು) ಮತ್ತು ಖನಿಜಗಳ ಮಿಶ್ರಣವನ್ನು ಆಹಾರವಾಗಿ ನೀಡುವರು. ಚಳಿಗಾಲದಲ್ಲಿ ಕುರಿಗಳನ್ನು ಒಳಾಂಗಣಗಳಲ್ಲಿ ಕೂಡಿ ಅವುಗಳಿಗೆ ಎಲೆ, ಕಾಳು ಮತ್ತು ಒಣಮೇವನ್ನು ನೀಡುವರು.
ನಮ್ಮ ದೇಶದ ಅನೇಕ ಭಾಗಗಳಲ್ಲಿ ಕುರಿಗಳನ್ನು ಉಣ್ಣೆಗಾಗಿ ಸಾಕುತ್ತಾರೆ. ಉಣ್ಣೆಯನ್ನು ಉತ್ಪಾದಿಸುವುದಕ್ಕೋಸ್ಕರ ನಮ್ಮ ದೇಶದಲ್ಲಿ ಸಾಕುವ ಕುರಿಯ ಕೆಲವು ತಳಿಗಳ ಹೆಸರುಗಳು ಕೋಷ್ಟಕ 3.1 ರಲ್ಲಿವೆ. ಅವುಗಳಿಂದ ದೊರೆಯುವ ಉಣ್ಣೆಯ ಎಳೆಗಳ ಗುಣಮಟ್ಟ ಮತ್ತು ಎಳೆ ಜೋಡಣಾ ವಿನ್ಯಾಸ (texture) ವನ್ನು ಕೂಡಾ ಈ ಕೋಷ್ಟಕದಲ್ಲಿ ಸೂಚಿಸಲಾಗಿದೆ.
ಕುರಿಯ ಕೆಲವು ತಳಿಗಳು ತಮ್ಮ ದೇಹದ ಮೇಲೆ ದಟ್ಟ ಕೂದಲಿನ ಹೊದಿಕೆಯುಳ್ಳವು. ಅವುಗಳು ಉತ್ತಮ ಗುಣಮಟ್ಟದ ಉಣ್ಣೆಯನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸುತ್ತವೆ. ಈಗಾಗಲೆ ತಿಳಿಸಿದಂತೆ ಈ ಕುರಿಗಳು ಉತ್ತಮ ತಳಿಯ ಪೋಷಕ ಕುರಿಗಳಿಂದ ಆಯ್ಕೆಯ ತಳೀಕರಣ ಮಾಡಿದವುಗಳಾಗಿವೆ.
ಸಾಕಿದ ಕುರಿಗಳ ಮೈಮೇಲೆ ದಟ್ಟವಾದ ಕೂದಲು ಬೆಳೆಯುತ್ತಿದ್ದಂತೆ, ಉಣ್ಣೆಯನ್ನು ಪಡೆಯುವುದಕ್ಕೊಸ್ಕರ ಅವುಗಳ ಮೈಮೇಲಿನ ಕೂದಲನ್ನು ಕತ್ತರಿಸಲಾಗುತ್ತದೆ.

ಎಳೆಗಳನ್ನು ಉಣ್ಣೆಯಾಗಿ ಸಂಸ್ಕರಿಸುವುದು

ಸ್ವೆಟರ್ ಗಳನ್ನು ಹೆಣೆಯಲು ಅಥವಾ ಶಾಲುಗಳನ್ನು ನೇಯಲು ಬಳಸುವ ಉಣ್ಣೆಯು, ಈ ಕೆಳಗಿನ ಹಂತಗಳನ್ನೊಳಗೊಂಡ ದೀರ್ಘ ಪ್ರಕ್ರಿಯೆಯ ಅಂತಿಮ ಉತ್ಪನ್ನ.

ಹಂತ-1 : ಕುರಿಯ ಮೈಯಿಂದ ತುಪ್ಪಳವನ್ನು ಅತ್ಯಂತ ತೆಳುವಾದ ಚರ್ಮದೊಂದಿಗೆ ಬೇರ್ಪಡಿಸಲಾಗುತ್ತದೆ. ಈ ಕ್ರಿಯೆಯನ್ನು ಕತ್ತರಿಸುವಿಕೆ ((shearing) ಎನ್ನುವರು. ಇಲ್ಲಿ ಕೂದಲನ್ನು ಬೋಳಿಸಲು ಕ್ಷೌರಿಕರು ಬಳಸುವಂತಹ ಯಂತ್ರಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಸೆಖೆಯ ಹವಾಮಾನವಿರುವಾಗ ಕೂದಲನ್ನು ತೆಗೆಯಲಾಗುತ್ತದೆ. ಇದರಿಂದಾಗಿ ಕೂದಲಿನ ರಕ್ಷಣಾ ಹೊದಿಕೆ ಇಲ್ಲದಿದ್ದರೂ, ಕುರಿಗಳು ಬದುಕಬಲ್ಲವು. ಕೂದಲು ಉಣ್ಣೆಯ ಎಳೆಗಳನ್ನು ಒದಗಿಸುತ್ತದೆ. ಈ ಉಣ್ಣೆಯ ಎಳೆಗಳನ್ನು ಸಂಸ್ಕರಿಸಿದ ನಂತರ ಉಣ್ಣೆಯ ನೂಲನ್ನು ಉತ್ಪಾದಿಸಲಾಗುತ್ತದೆ. ನಿಮ್ಮ ಕೂದಲನ್ನು ಕತ್ತರಿಸುವಾಗ ಅಥವಾ ನಿಮ್ಮ ತಂದೆಯು ಗಡ್ಡವನ್ನು ಬೋಳಿಸುವಾಗ ಹೇಗೆ ನೋವಾಗುವುದಿಲ್ಲವೋ ಹಾಗೆಯೇ ಕುರಿಯ ಕೂದಲನ್ನು ಕತ್ತರಿಸುವಾಗಲೂ ಅದಕ್ಕೆ ನೋವಾಗುವುದಿಲ್ಲ. ಏಕೆಂದು ನಿಮಗೆ ಗೊತ್ತೇ? ಚರ್ಮದ ಅತ್ಯಂತ ಮೇಲ್ಪದರವು ನಿರ್ಜೀವವಾದುದು. ಅಲ್ಲದೆ ನಿಮ್ಮ ಕೂದಲಿನಂತೆಯೇ ಕುರಿಗಳ ಕೂದಲೂ ಕೂಡಾ ಪುನಃ ಬೆಳೆಯುತ್ತದೆ.

ಹಂತ-2 : ಕತ್ತರಿಸಿದ ತೆಳು ಚರ್ಮದೊಂದಿಗಿನ ಕೂದಲನ್ನು ನೀರಿನ ತೊಟ್ಟಿಗಳಲ್ಲಿ ಹಾಕಿ ಚೆನ್ನಾಗಿ ತೊಳೆದು, ಅವುಗಳಲ್ಲಿರುವ ಜಿಡ್ಡು, ಧೂಳು ಹಾಗೂ ಕೊಳೆಯನ್ನು ತೆಗೆಯಲಾಗುತ್ತದೆ ಇದನ್ನು ಉಜ್ಜಿ ಶುಭ್ರಗೊಳಿಸುವಿಕೆ (scouring) ಎನ್ನುವರು. ಇತ್ತೀಚಿನ ದಿನಗಳಲ್ಲಿ ಉಜ್ಜಿ ಶುಭ್ರಗೊಳಿಸಲು ಯಂತ್ರಗಳನ್ನು ಬಳಸಲಾಗುವುದು.

ಉಜ್ಜಿ ಶುಭ್ರಗೊಳಿಸುವಿಕೆ (scouring)

ಹಂತ-3 : ಉಜ್ಜಿ ಶುಭ್ರಗೊಳಿಸಿದ ನಂತರ ವಿಂಗಡಣೆ (sorting) ಮಾಡುವರು. ಚರ್ಮದೊಂದಿಗಿನ ಕೂದಲನ್ನು ಕಾರ್ಖಾನೆಗಳಿಗೆ ಸಾಗಿಸಲಾಗುತ್ತದೆ. ಅಲ್ಲಿ ಬೇರೆ ಬೇರೆ ಎಳೆಜೋಡಣಾ ವಿನ್ಯಾಸದ ಕೂದಲುಗಳನ್ನು ಬೇರ್ಪಡಿಸಲಾಗುತ್ತದೆ.

ಉಜ್ಜಿ ಶುಭ್ರಗೊಳಿಸಿದ ನಂತರ ವಿಂಗಡಣೆ (sorting) ಮಾಡುವರು.

ಹಂತ-4 : ಪುರುಳೆಗಳು (burrs) ಎಂದು ಕರೆಯಲ್ಪಡುವ ನಯವಾದ ಕೂದಲಿನ ಸಣ್ಣ ಎಳೆಗಳನ್ನು ಹೆಕ್ಕಿ ತೆಗೆಯಲಾಗುತ್ತದೆ. ಇವು ಕೆಲವೊಮ್ಮೆ ನಿಮ್ಮ ಸ್ವೆಟರ್‍ಗಳಲ್ಲಿ ಕಂಡುಬರುವ ಪುರುಳೆಗಳೇ ಆಗಿವೆ. ಈ ಎಳೆಗಳನ್ನು ಇನ್ನೊಮ್ಮೆ ಉಜ್ಜಿ ತೊಳೆದು ಒಣಗಿಸಲಾಗುತ್ತದೆ. ಇದು ಎಳೆಗಳನ್ನು ಬೇರ್ಪಡಿಸಲು ಸಿದ್ಧವಾದ ಉಣ್ಣೆ.

ಪುರುಳೆಗಳು (burrs)

ಹಂತ-5 : ಕುರಿ ಮತ್ತು ಮೇಕೆಗಳ ನೈಸರ್ಗಿಕ ತುಪ್ಪಳವು ಕಪ್ಪು, ಕಂದು ಅಥವಾ ಬಿಳಿಯ ಬಣ್ಣದ್ದಾಗಿರುವುದರಿಂದ, ಈ ಎಳೆಗಳಿಗೆ ವೈವಿಧ್ಯಮಯ ಬಣ್ಣಗಳನ್ನು ನೀಡಲಾಗುತ್ತದೆ.

ಹಂತ-6 : ಈ ಎಳೆಗಳನ್ನು ನೇರಗೊಳಿಸಿ, ಬಾಚಿ ಸಿಕ್ಕು ಬಿಡಿಸಿ ನಂತರ ನೂಲಾಗಿ ಸುತ್ತಲಾಗುತ್ತದೆ. ಉದ್ದವಾದ ಎಳೆಗಳನ್ನು ಸ್ವೆಟರ್ಗಳಿಗೆ ಬೇಕಾದ ಉಣ್ಣೆಯಾಗಿ ಮಾಡುತ್ತಾರೆ. ತುಂಡಾದ ಎಳೆಗಳನ್ನು ಹೊಸೆದು, ನಂತರ ಉಣ್ಣೆ ಬಟ್ಟೆಯಾಗಿ ನೇಯಲಾಗುತ್ತದೆ.

ನಾರನ್ನು ಉಣ್ಣೆಯಾಗಿ ಸಂಸ್ಕರಿಸುವ ಪ್ರಕ್ರಿಯೆಯನ್ನು ಈ ಕೆಳಗಿನಂತೆ ಪ್ರತಿನಿಧಿಸಬಹುದು.

ಕತ್ತರಿಸುವಿಕೆ ಉಜ್ಜಿ ಶುಭ್ರಗೊಳಿಸುವಿಕೆ ವಿಂಗಡಿಸುವಿಕೆ ಪುರುಳೆಗಳನ್ನು ಸ್ವಚ್ಛಗೊಳಿಸುವಿಕೆ ಬಣ್ಣ ನೀಡುವಿಕೆ ಸುತ್ತುವಿಕೆ

ಕಸುಬಿನ ಹಾನಿಗಳು
ನಮ್ಮ ದೇಶಲ್ಲಿ ಅನೇಕ ಜನರಿಗೆ ಉಣ್ಣೆ ಉದ್ಯಮ ಒಂದು ಪ್ರಮುಖ ಜೀವನೋಪಾಯವಾಗಿದೆ. ಆದರೆ ಉಣ್ಣೆಯನ್ನು ಬೇರ್ಪಡಿಸುವ ವೃತ್ತಿಯು ಅಪಾಯಕಾರಿ. ಕೆಲವೊಮ್ಮೆ ಸಾರ್ಟರ್ಸ್ ಡಿಸೀಸ್ ಎಂದು ಕರೆಯಲ್ಪಡುವ ಪ್ರಾಣಾಂತಿಕವಾದ ರಕ್ತ ಸಂಬಂಧಿ ಕಾಯಿಲೆಯನ್ನು ಉಂಟು ಮಾಡುವ ಅಂತ್ರಾಕ್ಸ್ ಬ್ಯಾಕ್ಟೀರಿಯಾದ ಸೋಂಕಿಗೆ ತುತ್ತಾಗುವುದೇ ಇದಕ್ಕೆ ಕಾರಣ. ಕಸುಬೊಂದರಲ್ಲಿ ಹೀಗೆ ಎದುರಾಗುವ ಗಂಡಾಂತರಗಳನ್ನು ಕಸುಬಿನ ಹಾನಿಗಳು ಎನ್ನುವರು.

ರೇಷ್ಮೆ
ರೇಷ್ಮೆ ಎಳೆಗಳು ಕೂಡಾ ಪ್ರಾಣಿ ಎಳೆಗಳು. ರೇಷ್ಮೆ ಎಳೆಗಳನ್ನು ರೇಷ್ಮೆ ಹುಳುಗಳು ಉತ್ಪಾದಿಸುತ್ತವೆ. ರೇಷ್ಮೆಗಾಗಿ ರೇಷ್ಮೆಹುಳುಗಳನ್ನು ಸಾಕುವುದನ್ನು ರೇಷ್ಮೆಕೃಷಿ (sericulture) ಎನ್ನುವರು. ನಿಮ್ಮ ಅಮ್ಮ/ ಚಿಕ್ಕಮ್ಮ/ಅಜ್ಜಿ ಇವರುಗಳ ಬಳಿ ಇರುವ ರೇಷ್ಮೆ ಸೀರೆಗಳ ವಿಧಗಳ ಬಗ್ಗೆ ತಿಳಿದುಕೊಳ್ಳಿ. ರೇಷ್ಮೆಯ ವಿಧಗಳನ್ನು ಪಟ್ಟಿಮಾಡಿ.

ರೇಷ್ಮೆಯ ವಿಧಗಳು


ರೇಷ್ಮೆಯನ್ನು ಪಡೆಯುವ ಪ್ರಕ್ರಿಯೆಯ ಬಗ್ಗೆ ಚರ್ಚಿಸುವ ಮೊದಲು ರೇಷ್ಮೆ ಪತಂಗದ ಆಸಕ್ತಿದಾಯಕ ಜೀವನ ಚರಿತ್ರೆಯನ್ನು ತಿಳಿದುಕೊಳ್ಳುವುದು ಅವಶ್ಯಕ.

ರೇಷ್ಮೆ ಪತಂಗದ ಜೀವನ ಚರಿತೆ
ಹೆಣ್ಣು ರೇಷ್ಮೆ ಪತಂಗವು ಮೊಟ್ಟೆಗಳನ್ನು ಇಡುತ್ತದೆ. ಈ ಮೊಟ್ಟೆಗಳು ಒಡೆದು, ಕಂಬಳಿಹುಳುಗಳು ಅಥವಾ ರೇಷ್ಮೆಹುಳುಗಳು ಎಂದು ಕರೆಯಲ್ಪಡುವ ಲಾರ್ವಗಳು ಹೊರಬರುತ್ತವೆ. ಇವುಗಳು ಬೆಳೆದು ಗಾತ್ರದಲ್ಲಿ ಹೆಚ್ಚಳವಾಗಿ ತಮ್ಮ ಜೀವನ ಚರಿತ್ರೆಯ ಮುಂದಿನ ಹಂತವಾದ ಕೋಶಾವಸ್ಥೆ (pupa) ಯನ್ನು ಪ್ರವೇಶಿಸುವಾಗ, ತಮ್ಮನ್ನು ಹಿಡಿದಿಟ್ಟುಕೊಳ್ಳಲು ಮೊದಲು ಬಲೆಯನ್ನು ನೇಯುತ್ತವೆ. ಅನಂತರ ಅವು ತಮ್ಮ ತಲೆಯನ್ನು ಸಂಖ್ಯೆ ಎಂಟರ (8) ಆಕಾರದಲ್ಲಿ ಅತ್ತಿತ್ತ ತೂಗಾಡಿಸುತ್ತವೆ. ಹುಳುಗಳು ತಮ್ಮ ತಲೆಯ ಈ ಚಲನೆಯ ಸಂದರ್ಭದಲ್ಲಿ ಪ್ರೊಟೀನ್ ನಿಂದ ಕೂಡಿದ ನಾರನ್ನು ಸ್ರವಿಸುತ್ತವೆ. ಈ ಎಳೆಯು ಗಾಳಿಯ ಸಂಪರ್ಕಕ್ಕೆ ಬಂದಾಗ ಬಿರುಸುಗೊಂಡು ರೇಷ್ಮೆ ಎಳೆಯಾಗುವುದು.

ರೇಷ್ಮೆಹುಳು ಶೀಘ್ರವಾಗಿ ತನ್ನನ್ನು ತಾನು ರೇಷ್ಮೆ ಎಳೆಗಳಿಂದ ಸಂಪೂರ್ಣವಾಗಿ ಆವರಿಸಿಕೊಂಡು ಕೋಶವಾಗಿ ಬದಲಾಗುತ್ತದೆ. ಇದನ್ನು ರೇಷ್ಮೆಗೂಡು (cocoon) ಎನ್ನುವರು. ಅನಂತರ ಕೋಶಾವಸ್ಥೆಯಿಂದ ಪತಂಗವಾಗುವ ಬೆಳವಣಿಗೆಯು ಗೂಡಿನೊಳಗೆ ಮುಂದುವರಿಯುತ್ತದೆ. ರೇಷ್ಮೆ ಬಟ್ಟೆಯನ್ನು ನೇಯಲು ರೇಷ್ಮೆ ಎಳೆಗಳನ್ನು ಬಳಸುವರು.

ರೇಷ್ಮೆನೂಲು ರೇಷ್ಮೆಪತಂಗದ ಗೂಡಿನಿಂದ ದೊರೆಯುತ್ತದೆ. ಒಂದಕ್ಕಿಂತ ಮತ್ತೊಂದು ಭಿನ್ನವಾಗಿ ಕಾಣುವ ರೇಷ್ಮೆಪತಂಗಗಳಿವೆ ಮತ್ತು ಅವುಗಳು ಬೇರೆ ಬೇರೆ ಎಳೆಜೋಡಣಾ ವಿನ್ಯಾಸದ ರೇಷ್ಮೆನೂಲುಗಳನ್ನು ಉತ್ಪತ್ತಿ ಮಾಡುತ್ತವೆ (ಒರಟು, ನಯ, ಹೊಳಪು ಇತ್ಯಾದಿ). ಹೀಗೆ ಬೇರೆ ಬೇರೆ ವಿಧದ ಪತಂಗಗಳು ಹೆಣೆದ ಗೂಡುಗಳಿಂದ ಟಸ್ಸರ್ ರೇಷ್ಮೆ, ಮೂಗಾ ರೇಷ್ಮೆ, ಕೋಸಾರೇಷ್ಮೆ ಇತ್ಯಾದಿಗಳು ದೊರೆಯುತ್ತವೆ. ಹಿಪ್ಪು ನೇರಳೆ ರೇಷ್ಮೆಪತಂಗವು ಬಹಳ ಸಾಮಾನ್ಯವಾಗಿ ಕಂಡುಬರುವ ರೇಷ್ಮೆ ಪತಂಗ. ಈ ಪತಂಗಗಳ ಗೂಡುಗಳಿಂದ ಪಡೆದ ರೇಷ್ಮೆ ಎಳೆಯು ನಯ, ಹೊಳಪು ಮತ್ತು ಸ್ಥಿತಿಸ್ಥಾಪಕ ಗುಣವುಳ್ಳದ್ದು. ಇದಕ್ಕೆ ಆಕರ್ಷಕ ಬಣ್ಣಗಳನ್ನು ನೀಡಬಹುದು.

ರೇಷ್ಮೆಕೃಷಿ ಅಥವಾ ರೇಷ್ಮೆಹುಳುಗಳ ಸಾಕಣೆಯು ಭಾರತದಲ್ಲಿ ಬಹಳ ಹಿಂದಿನ ಒಂದು ಕಸುಬು. ಭಾರತದಲ್ಲಿ ರೇಷ್ಮೆಯನ್ನು ವಾಣಿಜ್ಯಕ್ಕಾಗಿ ಹೇರಳ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ.

ಚಟುವಟಿಕೆ 3.5
ಅನೇಕ ವಿಧದ ರೇಷ್ಮೆ ಬಟ್ಟೆಯ ಚೂರುಗಳನ್ನು ಸಂಗ್ರಹಿಸಿ ಮತ್ತು ಅವುಗಳನ್ನು ನಿಮ್ಮ ಯೋಜನಾ ಪುಸ್ತಕದಲ್ಲಿ ಅಂಟಿಸಿ. ಅವುಗಳನ್ನು ದರ್ಜಿಯ ಅಂಗಡಿಯಲ್ಲಿ ಕತ್ತರಿಸಿ ಬಿಸಾಡಿದ ತ್ಯಾಜ್ಯದ ರಾಶಿಯಿಂದ ನೀವು ಸಂಗ್ರಹಿಸಬಹುದು. ನಿಮ್ಮ ತಾಯಿ, ಚಿಕ್ಕಮ್ಮ ಅಥವಾ ಶಿಕ್ಷಕರ ಸಹಾಯವನ್ನು ಪಡೆದು ಅವುಗಳನ್ನು ಹಿಪ್ಪುನೇರಳೆ ರೇಷ್ಮೆ, ಟಸ್ಸರ್ ರೇಷ್ಮೆ, ಎರಿ ರೇಷ್ಮೆ, ಮೂಗಾ ರೇಷ್ಮೆ ಇತ್ಯಾದಿ ರೇಷ್ಮೆಯ ವಿಧಗಳಾಗಿ ಗುರ್ತಿಸಿ. ಈ ರೇಷ್ಮೆ ವಿಧಗಳ ಎಳೆಜೋಡಣಾ ವಿನ್ಯಾಸವನ್ನು ಸಂಶ್ಲೇಷಿತ ಎಳೆಗಳುಳ್ಳ ಕೃತಕ ರೇಷ್ಮೆ ಬಟ್ಟೆಯ ಚೂರುಗಳೊಂದಿಗೆ ಹೋಲಿಸಿ. ಅನೇಕ ವಿಧದ ರೇಷ್ಮೆಯನ್ನು ನೀಡುವ ಹುಳುಗಳಿಗೆ ಸಂಬಂಧಿಸಿದ ಬೇರೆ ಬೇರೆ ರೇಷ್ಮೆ ಪತಂಗಗಳ ಚಿತ್ರಗಳನ್ನು ಸಂಗ್ರಹಿಸಲು ಪ್ರಯತ್ನಿಸಿ.

ಚಟುವಟಿಕೆ 3.6
ಒಂದು ಕೃತಕ (ಸಂಶ್ಲೇಷಿತ) ರೇಷ್ಮೆದಾರ, ಮತ್ತೊಂದು ಶುದ್ಧ ರೇಷ್ಮೆದಾರವನ್ನು ತೆಗೆದುಕೊಳ್ಳಿ. ಈ ದಾರಗಳನ್ನು ಎಚ್ಚರಿಕೆಯಿಂದ ದಹಿಸಿ. ದಹಿಸುತ್ತಿರುವಾಗ ವಾಸನೆಯಲ್ಲಿ ಯಾವುದೇ ವ್ಯತ್ಯಾಸವನ್ನು ಗಮನಿಸಿದಿರ? ಈಗ ಉಣ್ಣೆ ಎಳೆಯನ್ನು ಎಚ್ಚರಿಕೆಯಿಂದ ದಹಿಸಿರಿ. ಇದರ ವಾಸನೆಯು ಕೃತಕ ರೇಷ್ಮೆಯನ್ನು ದಹಿಸುವಾಗಿನ ವಾಸನೆಯಂತಿತ್ತೆ? ಅಥವಾ ಶುದ್ಧ ರೇಷ್ಮೆ ದಹಿಸುವಾಗಿನ ವಾಸನೆಯಂತಿತ್ತೆ? ಏಕೆಂದು ನೀವು ವಿವರಿಸಬಲ್ಲಿರ?

ಚಟುವಟಿಕೆ 3.7
ಚಿತ್ರ 3.9ರ ಛಾಯಾಚಿತ್ರವನ್ನು ತೆಗೆದುಕೊಳ್ಳಿ. ರೇಷ್ಮೆ ಪತಂಗದ ಜೀವನ ಚರಿತ್ರೆಯ ವಿವಿಧ ಹಂತಗಳ ಚಿತ್ರಗಳನ್ನು ಕತ್ತರಿಸಿ, ಅವುಗಳನ್ನು ರಟ್ಟಿನ ತುಂಡುಗಳ ಮೇಲೆ ಅಥವಾ ಚಾರ್ಟ್ ಹಾಳೆಯ ಮೇಲೆ ಅಂಟಿಸಿ. ಅವುಗಳನ್ನು ಅಸ್ತವ್ಯಸ್ತವಾಗಿ ಹರಡಿ. ಈಗ ಈ ಹಂತಗಳನ್ನು ಸರಿಯಾದ ಶ್ರೇಣಿಯಲ್ಲಿ ಚಕ್ರೀಯವಾಗಿ ಬರುವಂತೆ ಜೋಡಿಸಲು ಪ್ರಯತ್ನಿಸಿ. ಯಾರು ಇದನ್ನು ವೇಗವಾಗಿ ಮಾಡುತ್ತಾರೋ ಅವರು ಗೆಲ್ಲುತ್ತಾರೆ.

ಭಾರತದಲ್ಲಿ ಮಹಿಳೆಯರು ರೇಷ್ಮೆ ಉತ್ಪಾದನೆಗೆ ಸಂಬಂಧಿಸಿದ ಅನೇಕ ವಿಧದ ಉದ್ಯಮಗಳಲ್ಲಿ ಗಣನೀಯವಾಗಿ ತೊಡಗಿಸಿಕೊಂಡಿದ್ದಾರೆ. ಅವುಗಳೆಂದರೆ ರೇಷ್ಮೆಹುಳು ಸಾಕಣೆ, ರೇಷ್ಮೆಗೂಡಿನಿಂದ ರೇಷ್ಮೆಯನ್ನು ಸುತ್ತುವುದು ಮತ್ತು ಕಚ್ಚಾ ರೇಷ್ಮೆಯನ್ನು ವಸ್ತ್ರವಾಗಿ ಸಂಸ್ಕರಿಸುವುದು. ಇವರು ತಮ್ಮ ಉದ್ಯಮಶೀಲತೆಯಿಂದ ದೇಶದ ಆರ್ಥಿಕತೆಗೆ ಕೊಡುಗೆಯನ್ನು ನೀಡುತ್ತಾರೆ. ರೇಷ್ಮೆ ಉತ್ಪಾದನೆಯಲ್ಲಿ ಚೀನಾ ದೇಶವು ಪ್ರಪಂಚದಲ್ಲಿ ಅಗ್ರಸ್ಥಾನದಲ್ಲಿದೆ. ಭಾರತವು ಕೂಡಾ ರೇಷ್ಮೆ ಉತ್ಪಾದಿಸುವ ಅಗ್ರಪಂಕ್ತಿಯ ದೇಶಗಳಲ್ಲಿ ಒಂದು.

ರೇಷ್ಮೆಗೂಡಿನಿಂದ ರೇಷ್ಮೆಯವರೆಗೆ
ರೇಷ್ಮೆಯನ್ನು ಪಡೆಯಬೇಕಾದರೆ, ಪತಂಗಗಳನ್ನು ಸಾಕಬೇಕು ಮತ್ತು ರೇಷ್ಮೆದಾರವನ್ನು ಪಡೆಯಲು ಅವುಗಳ ಗೂಡುಗಳನ್ನು ಸಂಗ್ರಹಿಸಬೇಕು.
ರೇಷ್ಮೆಹುಳುಗಳ ಸಾಕಣೆ : ಹೆಣ್ಣು ರೇಷ್ಮೆ ಪತಂಗವು ಒಂದು ಬಾರಿಗೆ ನೂರಾರು ಮೊಟ್ಟೆಗಳನ್ನು ಇಡುತ್ತದೆ. ಇವುಗಳನ್ನು ಬಟ್ಟೆ ಅಥವಾ ಕಾಗದದ ಪಟ್ಟಿಗಳಲ್ಲಿ ಎಚ್ಚರಿಕೆಯಿಂದ ಸಂಗ್ರಹಿಸಿ, ರೇಷ್ಮೆಹುಳುಗಳನ್ನು ಸಾಕುವ ರೈತರಿಗೆ ಮಾರಲಾಗುತ್ತದೆ. ರೈತರು ಈ ಮೊಟ್ಟೆಗಳನ್ನು ಸ್ವಚ್ಛವಾದ ಹಾಗೂ ಸೂಕ್ತ ತಾಪ ಮತ್ತು ತೇವಾಂಶದ ಪರಿಸರದಲ್ಲಿ ಇಡುತ್ತಾರೆ.
ಈ ಮೊಟ್ಟೆಗಳು ಒಡೆದು ಲಾರ್ವಗಳು ಹೊರ ಬರಲು ಅವುಗಳನ್ನು ಸೂಕ್ತ ತಾಪಕ್ಕೆ ಬಿಸಿ ಮಾಡಲಾಗುತ್ತದೆ. ಇದನ್ನು ಹಿಪ್ಪುನೇರಳೆ ಗಿಡಗಳಲ್ಲಿ ತಾಜಾ ಎಲೆಗಳು ಬೆಳೆಯುವಾಗ ಮಾಡಲಾಗುತ್ತದೆ. ಕಂಬಳಿಹುಳು ಅಥವಾ ರೇಷ್ಮೆಹುಳುಗಳು ಎಂದು ಕರೆಯಲಾಗುವ ಲಾರ್ವಗಳು ಹಗಲೂ-ರಾತ್ರಿ ಹಿಪ್ಪುನೇರಳೆಯನ್ನು ತಿಂದು, ಗಾತ್ರದಲ್ಲಿ ತುಂಬಾ ದೊಡ್ಡದಾಗುತ್ತವೆ.

ಕತ್ತರಿಸಿದ ತಾಜಾ ಹಿಪ್ಪುನೇರಳೆ ಎಲೆಗಳೊಂದಿಗೆ ಸ್ವಚ್ಛವಾದ ಬಿದಿರಿನ ತಟ್ಟೆ (ಚಂದ್ರಿಕೆ) ಗಳಲ್ಲಿ ಈ ಲಾರ್ವಗಳನ್ನು ಇಡಲಾಗುತ್ತದೆ. 25 ರಿಂದ 30 ದಿನಗಳ ನಂತರ ಈ ಹುಳುಗಳು ತಿನ್ನುವುದನ್ನು ನಿಲ್ಲಿಸುತ್ತವೆ ಮತ್ತು ಗೂಡನ್ನು ಸುತ್ತಿಕೊಳ್ಳುವುದಕ್ಕಾಗಿ ತಟ್ಟೆಯಲ್ಲಿನ ಬಿದಿರಿನ ಚಿಕ್ಕ ಸಂದುಗಳೊಳಗೆ ಚಲಿಸುತ್ತವೆ. ಗೂಡುಗಳು ಅಂಟಿಕೊಳ್ಳುವುದಕ್ಕಾಗಿ ತಟ್ಟೆಗಳಲ್ಲಿ ಚಿಕ್ಕ ಅಟ್ಟಣಿಗೆಗಳು ಅಥವಾ ಸಣ್ಣ ರೆಂಬೆಗಳನ್ನು ಒದಗಿಸಲಾಗಿರುತ್ತದೆ. ಇಲ್ಲಿ ಕಂಬಳಿಹುಳು ಅಥವಾ ರೇಷ್ಮೆ ಹುಳು ಗೂಡನ್ನು ಸುತ್ತಿಕೊಳ್ಳುತ್ತದೆ ಮತ್ತು ಇದರ ಒಳಗೆ ರೇಷ್ಮೆ ಪತಂಗವಾಗಿ ಬೆಳೆಯುತ್ತದೆ.

ರೇಷ್ಮೆಯ ಆವಿಷ್ಕಾರ
ರೇಷ್ಮೆಯ ಆವಿಷ್ಕಾರದ ಸರಿಯಾದ ಕಾಲ ಬಹುಷಃ ತಿಳಿದು ಬಂದಿಲ್ಲ. ಒಂದು ಹಳೆಯ ಚೀನೀ ದಂತಕಥೆಯ ಪ್ರಕಾರ, ಸಾಮ್ರಾಟ್ ಹುವಾಂಗ್-ಟಿ ತನ್ನ ಸಾಮ್ರಾಜ್ಞಿ ಸಿ-ಲುಂಗ್-ಶಿ ಗೆ ಅವರ ಉದ್ಯಾನವನದಲ್ಲಿ ಬೆಳೆದಿದ್ದ ಹಿಪ್ಪುನೇರಳೆ ಗಿಡದ ಎಲೆಗಳಿಗೆ ಉಂಟಾದ ಹಾನಿಗೆ ಕಾರಣವನ್ನು ಕಂಡುಹಿಡಿಯಲು ಹೇಳಿದನು. ಸಾಮ್ರಾಜ್ಞಿಯು ಹಿಪ್ಪುನೇರಳೆ ಎಲೆಗಳನ್ನು ಬಿಳಿಬಣ್ಣದ ಹುಳುಗಳು ತಿನ್ನುತ್ತಿರುವುದನ್ನು ಕಂಡಳು. ಅವುಗಳು ತಮ್ಮ ಸೂತ್ತಲೂ ಹೊಳಪಾದ ಕೋಶಗಳನ್ನು ಸುತ್ತಿಕೊಳ್ಳುವುದನ್ನು ಕೂಡಾ ಅವಳು ಗಮನಿಸಿದಳು. ಆಕಸ್ಮಿಕವಾಗಿ ಒಂದು ಕೋಶವು ಅವಳ ಚಹಾ ಕಪ್‍ನೊಳಗೆ ಬಿದ್ದಿತು ಮತ್ತು ನವಿರಾದ ದಾರಗಳ ಸಿಕ್ಕುಗಳು ಕೋಶದಿಂದ ಬೇರ್ಪಟ್ಟವು. ಆಗಿನಿಂದ ರೇಷ್ಮೆ ಉದ್ಯಮವು ಚೀನಾದಲ್ಲಿ ಪ್ರಾರಂಭವಾಯಿತು ಮತ್ತು ನೂರಾರು ವರ್ಷಗಳ ಕಾಲ ಈ ರಹಸ್ಯವನ್ನು ಎಚ್ಚರಿಕೆಯಿಂದ ಕಾಪಾಡಲಾಯಿತು ನಂತರ ವರ್ತಕರು ಮತ್ತು ಪ್ರವಾಸಿಗರು ರೇಷ್ಮೆಯನ್ನು ಇತರ ದೇಶಗಳಿಗೆ ಪರಿಚಯಿಸಿದರು. ಅವರು ಪಯಣಿಸಿದ ದಾರಿಯನ್ನು ರೇಷ್ಮೆ ದಾರಿ (silk route) ಎಂದು ಈಗಲೂ ಕರೆಯುತ್ತಾರೆ.

ರೇಷ್ಮೆ ಸಂಸ್ಕರಣೆ : ರೇಷ್ಮೆ ಎಳೆಗಳನ್ನು ಪಡೆಯಲು ಗೂಡುಗಳ ರಾಶಿಯನ್ನೇ ಬಳಸುತ್ತಾರೆ. ಈ ಗೂಡುಗಳನ್ನು ಸೂರ್ಯನ ಬಿಸಿಲಿಗೆ ತೆರೆದಿಡುತ್ತಾರೆ ಅಥವಾ ನೀರಿನಲ್ಲಿ ಕುದಿಸುತ್ತಾರೆ ಅಥವಾ ಹಬೆಗೆ ಒಡ್ಡುತ್ತಾರೆ. ಇದರಿಂದ ರೇಷ್ಮೆ ಎಳೆಗಳು ಬೇರ್ಪಡುತ್ತವೆ. ರೇಷ್ಮೆಯಾಗಿ ಬಳಸುವುದಕ್ಕೋಸ್ಕರ ಗೂಡಿನಿಂದ ದಾರವನ್ನು ಹೊರ ತೆಗೆಯುವ ವಿಧಾನಕ್ಕೆ ರೇಷ್ಮೆಯ ನೂಲು ಸುತ್ತುವಿಕೆ (reeling the silk) ಎನ್ನುವರು. ಗೂಡುಗಳಿಂದ ರೇಷ್ಮೆದಾರ ಅಥವಾ ಎಳೆಗಳನ್ನು ಬಿಡಿಸಿ, ಸುತ್ತುವುದಕ್ಕೆ ವಿಶೇಷ ರೀತಿಯ ಯಂತ್ರಗಳನ್ನು ಬಳಕೆ ಮಾಡಲಾಗುತ್ತದೆ. ಅನಂತರ ರೇಷ್ಮೆ ಎಳೆಗಳನ್ನು ರೇಷ್ಮೆದಾರವಾಗಿ ಹೊಸೆಯಲಾಗುತ್ತದೆ. ಅನಂತರ ಅವು ರೇಷ್ಮೆ ಬಟ್ಟೆಯಾಗಿ ನೇಕಾರರಿಂದ ನೇಯಲ್ಪಡುತ್ತವೆ.

ರೇಷ್ಮೆಯ ನೂಲು ಸುತ್ತುವಿಕೆ (reeling the silk)

ಪ್ರಮುಖ ಪದಗಳು

ರೇಷ್ಮೆಗೂಡು

ತುಪ್ಪಳ

ಸುತ್ತುವಿಕೆ

ಉಜ್ಜಿ ಶುಭ್ರಗೊಳಿಸುವಿಕೆ

ರೇಷ್ಮೆಕೃಷಿ

ಕತ್ತರಿಸುವಿಕೆ

ರೇಷ್ಮೆಪತಂಗ

ರೇಷ್ಮೆಹುಳು

ವಿಂಗಡಿಸುವುದು

ನೀವು ಕಲಿತಿರುವುದು

• ರೇಷ್ಮೆಯು ರೇಷ್ಮೆಹುಳುಗಳಿಂದ ದೊರೆಯುತ್ತದೆ ಮತ್ತು ಉಣ್ಣೆಯು ಕುರಿ, ಮೇಕೆ ಮತ್ತು ಯಾಕ್‍ಗಳಿಂದ ದೊರೆಯುತ್ತದೆ. ಆದ್ದರಿಂದ ರೇಷ್ಮೆ ಮತ್ತು ಉಣ್ಣೆ ಪ್ರಾಣಿ ಜನ್ಯ ಎಳೆಗಳು.
• ಒಂಟೆ, ಲಾಮಾ ಮತ್ತು ಅಲ್ಪಾಕಾಗಳ ಕೂದಲುಗಳನ್ನು ಕೂಡಾ ಉಣ್ಣೆಯನ್ನು ಉತ್ಪಾದಿಸಲು ಸಂಸ್ಕರಿಸಲಾಗುತ್ತದೆ.
• ಭಾರತದಲ್ಲಿ ಉಣ್ಣೆಯನ್ನು ಪಡೆಯಲು ಹೆಚ್ಚು ಪ್ರಮಾಣದಲ್ಲಿ ಕುರಿಗಳನ್ನು ಸಾಕುತ್ತಾರೆ.
• ಉಣ್ಣೆಯನ್ನು ಉತ್ಪಾದಿಸಲು, ಕುರಿಯ ಮೈಮೇಲಿನ ಕೂದಲುಗಳನ್ನು ಕತ್ತರಿಸಿ, ಉಜ್ಜಿ ಶುಭ್ರಗೊಳಿಸಿ, ವಿಂಗಡಿಸಿ, ಒಣಗಿಸಿ, ಬಣ್ಣ ನೀಡಿ, ಹೊಸೆದು ನಂತರ ನೇಯಲಾಗುತ್ತದೆ.
• ರೇಷ್ಮೆಹುಳುಗಳು ರೇಷ್ಮೆ ಪತಂಗದ ಕಂಬಳಿಹುಳುಗಳು.
• ರೇಷ್ಮೆಹುಳುಗಳು ತಮ್ಮ ಜೀವನ ಚಕ್ರದಲ್ಲಿ, ರೇಷ್ಮೆ ಎಳೆಗಳ ಗೂಡುಗಳನ್ನು ಸುತ್ತಿಕೊಳ್ಳುತ್ತವೆ.
• ರೇಷ್ಮೆ ಎಳೆಗಳು ಒಂದು ವಿಧದ ಪ್ರೊಟೀನ್ ನಿಂದ ತಯಾರಾಗಿವೆ.
• ಗೂಡುಗಳಿಂದ ರೇಷ್ಮೆ ಎಳೆಗಳನ್ನು ಬೇರ್ಪಡಿಸಿ, ಅನಂತರ ರೇಷ್ಮೆ ದಾರವಾಗಿ ಸುತ್ತಲಾಗುತ್ತದೆ.
• ನೇಕಾರರು ರೇಷ್ಮೆ ದಾರಗಳನ್ನು ರೇಷ್ಮೆ ಬಟ್ಟೆಯಾಗಿ ನೇಯುತ್ತಾರೆ.

ವಿಡಿಯೋ ಪಾಠಗಳು

7th Class | Science | ಎಳೆಯಿಂದ ಬಟ್ಟೆ | ಭಾಗ – 1
7th Class | Science | ಎಳೆಯಿಂದ ಬಟ್ಟೆ | ಭಾಗ – 1

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.kseebsolutions.com/kseeb-solutions-for-class-7-science-chapter-3-in-kannada/
ಈ ಪಾಠದ ಪ್ರಶ್ನೋತ್ತರಗಳಿಗಾಗಿ ಕ್ಲಿಕ್ ಮಾಡಿ.

ವಿಸ್ತರಿತ ಕಲಿಕೆ – ಚಟುವಟಿಕೆಗಳು ಮತ್ತು ಯೋಜನೆಗಳು

  1. ಒಂದು ಗೂಡಿನಿಂದ ಪಡೆಯಬಹುದಾದ ತುಂಡಾಗದ ರೇಷ್ಮೆದಾರದ ಗರಿಷ್ಠ ಉದ್ದವನ್ನು ತಿಳಿಯಲು ಪಹೇಲಿ ಇಚ್ಛಿಸುತ್ತಾಳೆ.ಅವಳಿಗಾಗಿ ಕಂಡುಹಿಡಿಯಿರಿ.
How Silk is Made | Making of Silk thread from silkworm cocoons
Spinning Silk Thread from Silkworm Cocoons

2) ರೇಷ್ಮೆಹುಳುಗಳು ದೊಡ್ಡದಾಗಿ ಬೆಳೆದಾಗ ಅವುಗಳು ಚರ್ಮವನ್ನು ವಿಸರ್ಜಿಸುವ ಅವಶ್ಯಕತೆ ಇದೆ. ಆದರೆ ಮನುಷ್ಯರಿಗೆ ಹೀಗೇಕೆ ಇಲ್ಲ? ಎಂದು ತಿಳಿಯಲು ಬೂಝೊ ಇಚ್ಛಿಸುತ್ತಾನೆ. ನಿಮಗೇನಾದರೂ ಗೊತ್ತಿದೆಯೆ?

What’s Inside A Caterpillar ‘Cocoon?’
What happens to Our Body after we Die? + more videos #aumsum #kids #science #education #children

3) ರೇಷ್ಮೆಹುಳುಗಳನ್ನು ಬರಿಗೈಯಿಂದ ಏಕೆ ಸಂಗ್ರಹಿಸಬಾರದು ಎಂಬುದನ್ನು ತಿಳಿಯಲು ಬೂಝೊ ಇಚ್ಛಿಸುತ್ತಾನೆ. ಅವನಿಗೆ ಸಹಾಯ ಮಾಡುವಿರ?

Why we should not touch caterpillar bare hand?क्यों कैटेरपिल्लर्स को बिना ग्लव्स के उठाना नहीं चाहिए
Remarkable Time-Lapse: Watch Caterpillars Transform Into Butterflies | National Geographic

4) ರೇಷ್ಮೆ ಫ್ರಾಕನ್ನು ಕೊಂಡುಕೊಳ್ಳಲು ಪಹೇಲಿ ಇಚ್ಚಿಸಿ, ಅವಳ ತಾಯಿಯೊಂದಿಗೆ ಮಾರುಕಟ್ಟೆಗೆ ಹೋದಳು. ಅಲ್ಲಿ ಅವರು ಕೃತಕ (ಸಂಶ್ಲೇಷಿತ) ರೇಷ್ಮೆಯು ತುಂಬಾ ಅಗ್ಗವಾಗಿರುವುದನ್ನು ತಿಳಿದರು. ಇದು ಹೀಗೇಕೆ ಎಂದು ತಿಳಿಯಲು ಇಚ್ಛಿಸಿದರು. ಏಕೆಂದು ನಿಮಗೆ ತಿಳಿದಿದೆಯೇ?
ಕಂಡುಕೊಳ್ಳಿ.

How to Tell if a Fabric is Natural or Synthetic
How to Identify Pure Silk Cloth | How to Tell Real Silk from Polyester

5) ವಿಕುನ (vicuna) ಎಂಬ ಪ್ರಾಣಿಯು ಉಣ್ಣೆಯನ್ನು ನೀಡುತ್ತದೆ ಎಂದು ಪಹೇಲಿಗೆ ಒಬ್ಬರು ಹೇಳಿದರು. ಈ ಪ್ರಾಣಿಯು ಎಲ್ಲಿ ಕಂಡುಬರುತ್ತದೆ ಎಂಬುದನ್ನು ಅವಳಿಗೆ ನೀವು ಹೇಳಲು ಸಾಧ್ಯವೆ? ಶಬ್ದಕೋಶ (dictionary) ಅಥವಾ ವಿಶ್ವಕೋಶ (encyclopedia)ದಲ್ಲಿ ಹುಡುಕಿ.

Vicuña | Vicuna | Amazing Animals

6) ಕೈಮಗ್ಗದ ವಸ್ತ್ರಪ್ರದರ್ಶನಗಳು ಏರ್ಪಟ್ಟಾಗ, ಕೆಲವು ಮಳಿಗೆಗಳಲ್ಲಿ ಅನೇಕ ವಿಧದ ರೇಷ್ಮೆಯ ನಿಜವಾದ ಪತಂಗಗಳನ್ನು ಮತ್ತು ಅವುಗಳ ಜೀವನ ಚರಿತ್ರೆಗಳನ್ನು ಪ್ರದರ್ಶಿಸುತ್ತಾರೆ. ಇಂತಹ ಮಳಿಗೆಗಳಿಗೆ ನಿಮ್ಮ ಹಿರಿಯರೊಂದಿಗೆ ಅಥವಾ ಶಿಕ್ಷಕರೊಂದಿಗೆ ಭೇಟಿ ನೀಡಲು ಪ್ರಯತ್ನಿಸಿ ಹಾಗೂ ಈ ಪತಂಗಗಳು ಮತ್ತು ಅವುಗಳ ಜೀವನ ಚರಿತ್ರೆಯ ಹಂತಗಳನ್ನು ವೀಕ್ಷಿಸಿ.

Complete Life Cycle of Silkworm| Silk making
Life cycle of Silk Moth

7) ನಿಮ್ಮ ಕೈತೋಟ ಅಥವಾ ಉದ್ಯಾನವನ ಅಥವಾ ತುಂಬಾ ಸಸ್ಯಗಳಿರುವ ಇನ್ನಾವುದೇ ಜಾಗದಲ್ಲಿ ಪತಂಗ ಅಥವಾ ಚಿಟ್ಟೆಗಳ ಮೊಟ್ಟೆಗಳನ್ನು ಹುಡುಕಿ. ಎಲೆಗಳ ಮೇಲೆ ಅವು ಚಿಕ್ಕ ಕಣಗಳ(ಚುಕ್ಕಿಗಳ) ಗುಂಪಿನಂತೆ ಕಾಣಿಸುತ್ತವೆ. ಮೊಟ್ಟೆಗಳಿರುವ ಎಲೆಗಳನ್ನು ಕಿತ್ತು ತೆಗೆದು ಅವುಗಳನ್ನು ಒಂದು ರಟ್ಟಿನ ಪೆಟ್ಟಿಗೆಯಲ್ಲಿ ಇಡಿ. ಅದೇ ಸಸ್ಯದ ಅಥವಾ ಅದೇ ವಿಧದ ಇನ್ನೊಂದು ಸಸ್ಯದ ಕೆಲವು ಎಲೆಗಳನ್ನು ತೆಗೆದು, ಅವುಗಳನ್ನು ಕತ್ತರಿಸಿ, ಆ ಪೆಟ್ಟಿಗೆಯಲ್ಲಿ ಹಾಕಿ. ಮೊಟ್ಟೆಗಳೊಡೆದು ಹುಳುಗಳು ಹೊರಬರುತ್ತವೆ. ಅವುಗಳು ಹಗಲೂ ರಾತ್ರಿ ಎಡೆಬಿಡದೆ ತಿನ್ನುತ್ತಿರುತ್ತವೆ. ಪ್ರತಿದಿನ ಅವುಗಳಿಗೆ ಎಲೆಗಳನ್ನು ಆಹಾರವಾಗಿ ಹಾಕಿ. ಕೆಲವೊಮ್ಮೆ ನೀವು ರೇಷ್ಮೆಹುಳುಗಳನ್ನು ಆಯ್ದು ಸಂಗ್ರಹಿಸಬಹುದು. ಆದರೆ ಎಚ್ಚರಿಕೆಯಿರಲಿ. ರೇಷ್ಮೆಹುಳುವನ್ನು ಹಿಡಿಯಲು ಕಾಗದದ ಕರವಸ್ತ್ರ ಅಥವಾ ಹಾಳೆಯನ್ನು ಬಳಸಿ.

ಪ್ರತಿದಿನ ಗಮನಿಸಿ, ಈ ಅಂಶಗಳನ್ನು ಗುರುತು ಹಾಕಿಕೊಳ್ಳಿ.
(i) ಮೊಟ್ಟೆಯೊಡೆದು ಹುಳುವಾಗಲು ಬೇಕಾಗುವ ದಿನಗಳ ಸಂಖ್ಯೆ,
(ii) ಗೂಡಿನ ಹಂತವನ್ನು ತಲುಪಲು ತೆಗೆದುಕೊಂಡ ದಿನಗಳ ಸಂಖ್ಯೆ,
(iii) ಜೀವನ ಚಕ್ರವನ್ನು ಪೂರ್ಣಗೊಳಿಸಲು ತೆಗೆದುಕೊಂಡ ದಿನಗಳ ಸಂಖ್ಯೆ
ಗಮನಿಸಿದ ಅಂಶಗಳನ್ನು ನಿಮ್ಮ ನೋಟ್ ಪುಸ್ತಕದಲ್ಲಿ ದಾಖಲಿಸಿ
.

Silvery Checkerspot Butterfly Laying Eggs and Their Life Cycle
Life Cycle of a Butterfly 
Silk Worm Farming | Sericulture | ರೇಷ್ಮೆ ಕೃಷಿ | ರೇಷ್ಮೆ ಹುಳು ಸಾಕಾಣಿಕೆಯ ಬಗೆ ಮಾಹಿತಿ

ನಿಮಗಿದು ಗೊತ್ತೆ?
ಕುರಿಗಳ ಸಂಖ್ಯೆಯ ಆಧಾರದಲ್ಲಿ ಚೀನಾ ಮತ್ತು ಆಸ್ಟ್ರೇಲಿಯಾಗಳ ನಂತರ ಭಾರತವು ಮೂರನೇ ಸ್ಥಾನದಲ್ಲಿದೆ. ಆದರೆ ನ್ಯೂಜಿಲ್ಯಾಂಡ್‍ನ ಕುರಿಗಳು ಅತ್ಯುತ್ತಮ ಉಣ್ಣೆಯನ್ನು ನೀಡುತ್ತವೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

https://youtu.be/XASfFO3w2O8

How to Harvesting Wool – Amazing Sheep Factory – Wool Processing Mill – Modern Sheep Shearing | ಎಳೆಗಳನ್ನು ಉಣ್ಣೆಯಾಗಿ ಸಂಸ್ಕರಿಸುವುದು | ಲಿಂಕ್ ಮೇಲೆ ಕ್ಲಿಕ್ ಮಾಡಿ.

Silk thread from silk worm cocoon | ರೇಷ್ಮೆ ಸಂಸ್ಕರಣೆ
SILK: THE STORY OF INDIA’S MAGIC FABRIC