ಎಳೆಯಿಂದ ಬಟ್ಟೆ – ಪಾಠ – 3
ಶಾಲೆಯಲ್ಲಿ ನಡೆದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಹೇಲಿ ಮತ್ತು ಬೂಝೊ ಪ್ರಥಮ ಬಹುಮಾನ ಗಳಿಸಿದರು. ಅವರಿಗೆ ತುಂಬಾ ಸಂತೋಷವಾಯಿತು. ಬಹುಮಾನದ ಹಣದಿಂದ ಅವರ ಪಾಲಕರಿಗೆ ಬಟ್ಟೆ ಖರೀದಿಸಲು ನಿರ್ಧರಿಸಿದರು. ಅಂಗಡಿಯಲ್ಲಿ ಬಗೆಬಗೆಯ ಬಟ್ಟೆಗಳನ್ನು ನೋಡಿದಾಗ ಅವರು ಗಲಿಬಿಲಿಗೊಂಡರು (ಚಿತ್ರ 3.1). ಕೆಲವು ಬಟ್ಟೆ ಅಥವಾ ಉಡುಪುಗಳು ಹತ್ತಿಯಿಂದ ಮಾಡಿದ್ದರೆ ಮತ್ತೆ ಕೆಲವು ಕೃತಕವಾಗಿ ಸಂಶ್ಲೇಷಿತವಾದವುಗಳು ಎಂದು ಅಂಗಡಿಯವನು ವಿವರಿಸಿದನು. ಅವನಲ್ಲಿ ಉಣ್ಣೆ ಮಫ್ಲರ್‍ಗಳು ಮತ್ತು ಶಾಲುಗಳು ಇದ್ದವು. ಅಲ್ಲಿ ಹಲವು ರೇಷ್ಮೆ ಸೀರೆಗಳು ಕೂಡ ಇದ್ದವು. ಪಹೇಲಿ ಮತ್ತು ಬೂಝೊಗೆ ತುಂಬಾ ಆಶ್ಚರ್ಯವಾಯಿತು. ವಿವಿಧ ಬಗೆಯ ಬಟ್ಟೆಗಳನ್ನು ಮುಟ್ಟಿ ಅವುಗಳ ಅನುಭವ ಪಡೆದರು. ಕೊನೆಯಲ್ಲಿ ಒಂದು ಉಣ್ಣೆಯ ಮಫ್ಲರ್ ಮತ್ತು ಒಂದು ಹತ್ತಿ ಸೀರೆಯನ್ನು ಅವರು ಕೊಂಡರು.
ಬಟ್ಟೆ ಅಂಗಡಿಗೆ ಭೇಟಿ ನೀಡಿದನಂತರ ಪಹೇಲಿ ಮತ್ತು ಬೂಝೊ ತಮ್ಮ ಸುತ್ತಮುತ್ತ ಇದ್ದ ವಿವಿಧ ಮಾದರಿಯ ಬಟ್ಟೆಗಳನ್ನು ಗಮನಿಸತೊಡಗಿದರು. ಚಾದರಗಳು (ಬೆಡ್‍ಶೀಟುಗಳು), ಕಂಬಳಿಗಳು, ಪರದೆಗಳು, ಮೇಜು ಬಟ್ಟೆಗಳು, ಟವೆಲ್‍ಗಳು, ಧೂಳು ಒರೆಸುವ ಬಟ್ಟೆ ಇವೆಲ್ಲ ವಿವಿಧ ರೀತಿಯ ಬಟ್ಟೆಗಳಿಂದ ಮಾಡಿದವುಗಳೆಂದು ಅವರು ಗುರುತಿಸಿದರು. ಅವರ ಸ್ಕೂಲ್‍ಬ್ಯಾಗುಗಳು ಮತ್ತು ಕೈಚೀಲಗಳೂ ಕೂಡ ಯಾವುದೊ ರೀತಿಯ ಬಟ್ಟೆಯಿಂದ ಮಾಡಿದವುಗಳಾಗಿದ್ದವು. ಈ ಬಟ್ಟೆಗಳನ್ನು ಹತ್ತಿ, ಉಣ್ಣೆ, ರೇಷ್ಮೆ ಅಥವಾ ಸಂಶ್ಲೇಷಿತ ಎಂಬುದಾಗಿ ಅವರು ಗುರುತಿಸಲು ಪ್ರಯತ್ನಿಸಿದರು. ಕೆಲವು ಬಟ್ಟೆಗಳನ್ನು ನೀವೂ ಈ ರೀತಿ ಗುರುತಿಸುವಿರ?
3.1 ಬಟ್ಟೆಗಳಲ್ಲಿ ವೈವಿಧ್ಯತೆ
ಚಟುವಟಿಕೆ 1
ಹತ್ತಿರದ ದರ್ಜಿ ಅಂಗಡಿಗೆ ಭೇಟಿ ನೀಡಿ, ಹೊಲಿದನಂತರ ಉಳಿದ ಬಟ್ಟೆ ತುಂಡುಗಳನ್ನು ಕಲೆಹಾಕಿ. ಪ್ರತಿಯೊಂದು ಬಟ್ಟೆ ತುಂಡನ್ನು ಮುಟ್ಟಿ ತಿಳಿಯಿರಿ. ಈಗ ದರ್ಜಿಯ ಸಹಾಯದಿಂದ ಕೆಲವು ಬಟ್ಟೆಗಳನ್ನು ಹತ್ತಿ, ರೇಷ್ಮೆ, ಉಣ್ಣೆ ಅಥವಾ ಸಂಶ್ಲೇಷಿತ ಎಂಬುದಾಗಿ ಗುರುತಿಸಲು ಪ್ರಯತ್ನಿಸಿ.
ಈ ವಿವಿಧ ಬಟ್ಟೆಗಳನ್ನು ಯಾವುದರಿಂದ ಮಾಡಲಾಗಿದೆ ಎಂದು ನಿಮಗೆ ಆಶ್ಚರ್ಯವಾಗುವುದೆ? ಯಾವುದೇ ಬಟ್ಟೆಯನ್ನು ನೀವು ನೋಡಿದಾಗ ಅದು ಅಖಂಡ ತುಂಡಿನಂತೆ ಕಾಣಿಸುವುದು. ಈಗ ಇದನ್ನೆ ಅತಿ ಹತ್ತಿರದಿಂದ ನೋಡಿ. ನೀವು ಏನನ್ನು ಗಮನಿಸುವಿರಿ (ಚಿತ್ರ 3.2)?
ಚಟುವಟಿಕೆ 2
ಚಟುವಟಿಕೆ 1ರಲ್ಲಿ ನೀವು ಗುರುತಿಸಿದ ಒಂದು ಹತ್ತಿ ಬಟ್ಟೆಯ ತುಂಡನ್ನು ಆಯ್ದುಕೊಳ್ಳಿ. ಈಗ ಯಾವುದಾದರೂ ಒಂದು ಅಂಚಿನಿಂದ ಬಿಡಿ ದಾರ ಅಥವಾ ನೂಲನ್ನು (yarn) ಗುರುತಿಸಿ ಅದನ್ನು ಎಳೆದು ತೆಗೆಯಿರಿ (ಚಿತ್ರ 3.3).
ಒಂದು ವೇಳೆ ಬಿಡಿ ನೂಲು ಕಾಣದಿದ್ದಲ್ಲಿ, ಪಿನ್ನು ಅಥವಾ ಸೂಜಿಯಿಂದ ಒಂದು ನೂಲನ್ನು ನಿಧಾನವಾಗಿ ಎಳೆಯಬಹುದು. ನೂಲುಗಳನ್ನು ಒಟ್ಟಾಗಿ ಜೋಡಿಸಿ ಬಟ್ಟೆಯನ್ನು ತಯಾರಿಸಲಾಗಿದೆ ಎಂಬುದನ್ನು ನಾವು ಕಾಣುತ್ತೇವೆ. ಈ ನೂಲುಗಳ ರಚನೆ ಯಾವುದರಿಂದ ಆಗಿದೆ?
3.2 ನಾರು
ಚಟುವಟಿಕೆ 3
ಹತ್ತಿ ಬಟ್ಟೆಯ ತುಂಡಿನಿಂದ ಒಂದು ದಾರವನ್ನು ತೆಗೆಯಿರಿ. ಈ ದಾರದ ತುಂಡನ್ನು ಮೇಜಿನ ಮೇಲಿಡಿ. ಈಗ ದಾರದ ಒಂದು ತುದಿಯನ್ನು ಹೆಬ್ಬೆರಳಿನಿಂದ ಒತ್ತಿ. ಚಿತ್ರ 3.4 ರಲ್ಲಿ ತೋರಿಸಿದಂತೆ ದಾರದ ಇನ್ನೊಂದು ತುದಿಯನ್ನು ನಿಮ್ಮ ಉಗುರಿನಿಂದ ಉದ್ದುದ್ದವಾಗಿ ಸೀಳಿ. ಈ ತುದಿಯಲ್ಲಿ ನಾರು (fibre) ತೆಳು ಎಳೆಗಳಾಗಿ ವಿಭಜಿತಗೊಳ್ಳುವುದನ್ನು ನೀವು ನೋಡುವಿರ (ಚಿತ್ರ 3.5)?
ಸೂಜಿಗೆ ದಾರ ಪೋಣಿಸುವಾಗ ಇದೇ ರೀತಿ ನೀವು ಎಳೆಗಳನ್ನು ಗಮನಿಸಿರಬಹುದು. ಹಲವು ಬಾರಿ ದಾರದ ತುದಿಯು ಕೆಲವು ತೆಳು ಎಳೆಗಳಾಗಿ ಬೇರ್ಪಟ್ಟಿರುತ್ತದೆ. ಇದರಿಂದ ಸೂಜಿಯ ರಂಧ್ರದ ಮೂಲಕ ದಾರವನ್ನು ತೂರಿಸಲು ಕಷ್ಟವಾಗುತ್ತದೆ. ನಾವು ನೋಡುವ ದಾರದ ಈ ತೆಳು ಎಳೆಗಳು ನಾರುಗಳು ಎಂಬ ಇನ್ನೂ ತೆಳುವಾದ ಎಳೆಗಳಿಂದ ಆಗಿವೆ.
ಬಟ್ಟೆಯು ದಾರಗಳಿಂದ ರಚಿತವಾಗಿದ್ದರೆ, ದಾರಗಳು ನಾರುಗಳಿಂದಾಗಿವೆ. ಈ ನಾರುಗಳು ಎಲ್ಲಿಂದ ದೊರೆಯುತ್ತವೆ?
ಕೆಲವು ಬಟ್ಟೆಗಳಾದ ಹತ್ತಿ, ಸೆಣಬು, ರೇಷ್ಮೆ ಮತ್ತು ಉಣ್ಣೆಗಳ ನಾರುಗಳನ್ನು ಸಸ್ಯ ಮತ್ತು ಪ್ರಾಣಿಗಳಿಂದ ಪಡೆಯುತ್ತೇವೆ. ಇವುಗಳನ್ನು ನೈಸರ್ಗಿಕ ನಾರುಗಳು (natural fibres) ಎಂದು ಕರೆಯುವರು. ಹತ್ತಿ ಮತ್ತು ಸೆಣಬು-ಇವು ಸಸ್ಯಗಳಿಂದ ಪಡೆಯುವ ನಾರುಗಳಿಗೆ ಉದಾಹರಣೆಗಳು. ಉಣ್ಣೆ ಮತ್ತು ರೇಷ್ಮೆ ನಾರುಗಳನ್ನು ಪ್ರಾಣಿಗಳಿಂದ ಪಡೆಯಲಾಗುತ್ತದೆ. ಕುರಿ ಅಥವಾ ಮೇಕೆಯ ತುಪ್ಪಟದಿಂದ ಉಣ್ಣೆಯನ್ನು ಪಡೆಯಲಾಗುತ್ತದೆ. ಇದನ್ನು ಮೊಲ, ಚಮರಿಮೃಗ ಮತ್ತು ಒಂಟೆಯ ಕೂದಲಿನಿಂದಲೂ ಪಡೆಯುತ್ತೇವೆ. ರೇಷ್ಮೆ ಹುಳುಗಳ ಗೂಡಿನಿಂದ ರೇಷ್ಮೆ ಎಳೆಯನ್ನು ತೆಗೆಯಲಾಗುತ್ತದೆ.
ಸಾವಿರಾರು ವರ್ಷಗಳವರೆಗೆ ಬಟ್ಟೆಗಳನ್ನು ಮಾಡಲು ನೈಸರ್ಗಿಕ ನಾರುಗಳು ಮಾತ್ರ ಸಿಗುತ್ತಿದ್ದವು. ಕಳೆದ ಸುಮಾರು ನೂರು ವರ್ಷಗಳಿಂದ ಸಸ್ಯ ಮತ್ತು ಪ್ರಾಣಿ ಮೂಲಗಳಿಂದಲ್ಲದೆ ಕೃತಕವಾಗಿ ರಾಸಾಯನಿಕ ವಸ್ತುಗಳಿಂದಲೂ ಸಹ ನಾರನ್ನು ಮಾಡಲಾಗುತ್ತಿದೆ. ಇವುಗಳನ್ನು ಸಂಶ್ಲೇಷಿತ ನಾರುಗಳು (synthetic fibres) ಎನ್ನುವರು. ಪಾಲಿಎಸ್ಟರ್ (polyester), ನೈಲಾನ್ (nylon) ಮತ್ತು ಅಕ್ರಿಲಿಕ್ (acrylic) ಸಂಶ್ಲೇಷಿತ ನಾರುಗಳಿಗೆ ಉದಾಹರಣೆಗಳು.
3.3 ಕೆಲವು ಸಸ್ಯ ನಾರುಗಳು
ಹತ್ತಿ
ನೀವು ಯಾವಾಗಲಾದರು ಎಣ್ಣೆ ದೀಪಗಳಿಗೆ ಬತ್ತಿಗಳನ್ನು ಮಾಡಿರುವಿರ? ಈ ಬತ್ತಿಗಳನ್ನು ಮಾಡಲು ನೀವು ಏನನ್ನು ಬಳಸುವಿರಿ? ಹಾಸಿಗೆಗಳು, ಗಾದಿ (ರಜಾಯಿ) ಅಥವಾ ದಿಂಬುಗಳಿಗೆ ತುಂಬುವುದಕ್ಕು ಸಹ ಹತ್ತಿ (cotton) ಯನ್ನು ಬಳಸಲಾಗುತ್ತದೆ.
ಸ್ವಲ್ಪ ಹತ್ತಿಯನ್ನು ತೆಗೆದುಕೊಳ್ಳಿ. ಇದನ್ನು ಸ್ವಲ್ಪ ಹಿಂಜಿ ಎಳೆಯಿರಿ ಮತ್ತು ಇದರ ಅಂಚುಗಳನ್ನು ನೋಡಿ. ನೀವು ಏನನ್ನು ಗಮನಿಸುವಿರಿ? ನೀವು ನೋಡುವ ಚಿಕ್ಕ, ತೆಳು ಎಳೆಗಳು ನಾರುಗಳಿಂದ ಮಾಡಲ್ಪಟ್ಟಿವೆ.
ಈ ಹತ್ತಿಯು ಎಲ್ಲಿಂದ ಬರುತ್ತದೆ? ಇದನ್ನು ಹೊಲಗಳಲ್ಲಿ ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ಕಪ್ಪು ಮಣ್ಣು ಮತ್ತು ಉಷ್ಣತೆಯ ಹವಾಮಾನವಿರುವ ಪ್ರದೇಶಗಳಲ್ಲಿ ಹತ್ತಿಯನ್ನು ಬೆಳೆಯಲಾಗುತ್ತದೆ. ನಮ್ಮ ದೇಶದಲ್ಲಿ ಹತ್ತಿ ಬೆಳೆಯುವ ಕೆಲವು ರಾಜ್ಯಗಳನ್ನು ನೀವು ಹೆಸರಿಸುವಿರ? ಹತ್ತಿಗಿಡದ ಹಣ್ಣುಗಳು (cotton bolls) ನಿಂಬೆಹಣ್ಣಿನ ಗಾತ್ರದಷ್ಟಿರುತ್ತವೆ. ಪಕ್ವವಾದ ಮೇಲೆ ಹತ್ತಿಕಾಯಿಗಳು ಒಡೆದು ತೆರೆದುಕೊಳ್ಳುತ್ತವೆ. ಆಗ ಹತ್ತಿ ನಾರುಗಳಿಂದ ಸುತ್ತುವರಿದಿರುವ ಬೀಜಗಳನ್ನು ಕಾಣಬಹುದು. ಕೊಯ್ಲಿಗೆ ಬಂದಿರುವ ಹತ್ತಿ ಹೊಲವನ್ನು ನೀವು ಎಂದಾದರು ನೋಡಿರುವಿರ? ಇದು ಮಂಜು ಆವರಿಸಿದ ಹೊಲದಂತೆ ಕಾಣುತ್ತದೆ (ಚಿತ್ರ 3.6).
ಸಾಮಾನ್ಯವಾಗಿ ಒಡೆದ ಹತ್ತಿ ಕಾಯಿಗಳಿಂದ ಹತ್ತಿಯನ್ನು ಕೈಯಿಂದ ತೆಗೆಯುತ್ತಾರೆ. ಬೀಜಗಳಿಂದ ನಾರನ್ನು ಬಾಚಿ ಪ್ರತ್ಯೇಕಿಸುತ್ತಾರೆ. ಈ ಕ್ರಿಯೆಗೆ ಹಿಂಜುವುದು (ginning) ಎನ್ನುವರು. ಸಾಂಪ್ರದಾಯಿಕವಾಗಿ ಹಿಂಜುವುದನ್ನು ಕೈಯಿಂದ ಮಾಡಲಾಗುತ್ತಿತ್ತು (ಚಿತ್ರ 3.7). ಈಗ ಹಿಂಜುವುದಕ್ಕೆ ಯಂತ್ರಗಳೂ ಬಳಕೆಯಾಗುತ್ತಿವೆ.
ಸೆಣಬು
ಸೆಣಬಿನ ಗಿಡದ ಕಾಂಡದಿಂದ ಸೆಣಬಿನ ನಾರನ್ನು ಪಡೆಯಲಾಗುತ್ತದೆ. ಇದನ್ನು ಮಳೆಗಾಲದಲ್ಲಿ ಬೆಳೆಯುತ್ತಾರೆ. ಭಾರತದಲ್ಲಿ ಸೆಣಬನ್ನು ಮುಖ್ಯವಾಗಿ ಪಶ್ಚಿಮ ಬಂಗಾಳ, ಬಿಹಾರ ಮತ್ತು ಅಸ್ಸಾಂಗಳಲ್ಲಿ ಬೆಳೆಯುತ್ತಾರೆ. ಸಾಮಾನ್ಯವಾಗಿ ಸೆಣಬಿನ ಗಿಡವನ್ನು ಹೂ ಬಿಡುವ ಹಂತದಲ್ಲಿ ಕೊಯ್ಯುತ್ತಾರೆ. ಕೊಯ್ಲು ಮಾಡಿದ ಸಸ್ಯಗಳ ಕಾಂಡಗಳನ್ನು ಕೆಲವು ದಿನಗಳ ಕಾಲ ನೀರಿನಲ್ಲಿ ಮುಳುಗಿಸಲಾಗುತ್ತದೆ. ಕಾಂಡಗಳು ಕೊಳೆತ ನಂತರ ನಾರುಗಳನ್ನು ಕೈಯಿಂದ ಬೇರ್ಪಡಿಸಲಾಗುತ್ತದೆ.
ಈ ಎಲ್ಲಾ ನಾರುಗಳಿಂದ ಬಟ್ಟೆಗಳನ್ನು ಮಾಡಬೇಕಾದರೆ, ಮೊದಲು ಅವುಗಳನ್ನು ನೂಲಾಗಿ ಮಾರ್ಪಾಟು ಮಾಡುತ್ತಾರೆ. ಇದನ್ನು ಹೇಗೆ ಮಾಡಲಾಗುತ್ತದೆ?
3.4 ಹತ್ತಿಯ ಎಳೆಯನ್ನು ನೂಲುವುದು
ಹತ್ತಿಯ ನೂಲನ್ನು ಮಾಡಲು ನೀವೂ ಪ್ರಯತ್ನಿಸಬಹುದು.
ಚಟುವಟಿಕೆ 4
ಒಂದು ಕೈಯಲ್ಲಿ ಸ್ವಲ್ಪ ಹತ್ತಿಯನ್ನು ಹಿಡಿದುಕೊಳ್ಳಿ. ಮತ್ತೊಂದು ಕೈಯಲ್ಲಿನ ಹೆಬ್ಬೆರಳು ಮತ್ತು ತೋರುಬೆರಳುಗಳ ಮಧ್ಯೆ ಸ್ವಲ್ಪ ಹತ್ತಿಯನ್ನು ನುಲಿಯಿರಿ. ಈಗ ನಾರುಗಳನ್ನು ಸತತವಾಗಿ ತಿರುಗಿಸುತ್ತಾ ಹತ್ತಿಯನ್ನು ನಿಧಾನವಾಗಿ ಹೊರಗೆಳೆಯಿರಿ (ಚಿತ್ರ 3.9). ನೂಲು ತೆಗೆಯಲು ನಿಮ್ಮಿಂದ ಸಾಧ್ಯವಾಯಿತೆ?
ನಾರುಗಳಿಂದ ನೂಲು ತಯಾರಿಸುವ ಕ್ರಿಯೆಯನ್ನು ನೂಲುವುದು (spinning) ಎನ್ನುವರು. ಈ ಕ್ರಿಯೆಯಲ್ಲಿ ಹತ್ತಿಯ ರಾಶಿಯಿಂದ ನಾರುಗಳನ್ನು ಹೊರ ಎಳೆದು ಹೆಣೆಯಲಾಗುವುದು. ಇದರಿಂದ ನಾರುಗಳು ಒಟ್ಟಾಗಿ ನೂಲಿನ ರೂಪ ಬರುತ್ತದೆ.
ನೂಲುವುದಕ್ಕೆ ಬಳಸುವ ಒಂದು ಸರಳ ಸಾಧನ ಕೈ-ಕೆದರು (handspindle). ಇದಕ್ಕೆ ತಕಲಿ ಎಂದೂ ಕರೆಯುತ್ತಾರೆ (ಚಿತ್ರ 3.10). ನೂಲುವುದಕ್ಕೆ ಬಳಸುವ ಕೈಯಿಂದ ಕಾರ್ಯ ನಿರ್ವಹಿಸಬಹುದಾದ ಮತ್ತೊಂದು ಸಾಧನ ಚರಕ (ಚಿತ್ರ 3.11). ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಗಾಂಧೀಜಿಯವರು ಚರಕದ ಬಳಕೆಯನ್ನು ಜನಪ್ರಿಯಗೊಳಿಸಿದರು. ಮನೆಯಲ್ಲೇ ನೇಯ್ದ ಬಟ್ಟೆಯನ್ನು ಧರಿಸಲು ಮತ್ತು ಬ್ರಿಟನ್ ಗಿರಣಿಗಳಲ್ಲಿ ತಯಾರಾಗಿ ಆಮದುಗೊಳ್ಳುತ್ತಿದ್ದ ಬಟ್ಟೆಯನ್ನು ಬಳಸದಂತೆಯೂ ಅವರು ಜನರನ್ನು ಪ್ರೇರೇಪಿಸಿದರು. ಖಾದಿಯನ್ನು ಜನಪ್ರಿಯಗೊಳಿಸಲು ಮತ್ತು ಪೆÇ್ರೀತ್ಸಾಹಿಸಲು, ಭಾರತ ಸರ್ಕಾರವು ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಮಂಡಲಿಯನ್ನು 1956ರಲ್ಲಿ ಸ್ಥಾಪಿಸಿತು.
ನೂಲುವ ಯಂತ್ರಗಳ ಸಹಾಯದಿಂದ ದೊಡ್ಡ ಪ್ರಮಾಣದಲ್ಲಿ ನೂಲುವರು. ನಂತರ ಈ ನೂಲನ್ನು ಬಟ್ಟೆ ತಯಾರಿಸಲು ಬಳಸುವರು.
3.5 ನೂಲಿನಿಂದ ಬಟ್ಟೆ
ನೂಲಿನಿಂದ ಬಟ್ಟೆಯನ್ನು ತಯಾರಿಸುವ ಹಲವಾರು ವಿಧಾನಗಳಿವೆ. ನೇಯುವುದು ಮತ್ತು ಹೆಣೆಯುವುದು-ಎರಡು ಪ್ರಮುಖ ವಿಧಾನಗಳು.
ನೇಯುವುದು
ಎರಡು ಗುಂಪುಗಳ ನೂಲುಗಳನ್ನು ಒಟ್ಟಿಗೆ ಜೋಡಿಸಿ ಬಟ್ಟೆಯನ್ನು ತಯಾರಿಸಲಾಗುವುದು ಎಂದು ಚಟುವಟಿಕೆ 2ರಲ್ಲಿ ನೀವು ಗಮನಿಸಿರಬಹುದು. ಎರಡು ಗುಂಪುಗಳ ನೂಲುಗಳನ್ನು ಒಟ್ಟಿಗೆ ಜೋಡಿಸಿ ಬಟ್ಟೆ ತಯಾರಿಸುವ ಕ್ರಿಯೆಯನ್ನು ನೇಯುವುದು (ತಿeಚಿviಟಿg) ಎನ್ನುವರು. ಕೆಲವು ಕಾಗದದ ಪಟ್ಟಿಗಳನ್ನು ನೇಯಲು ನಾವು ಪ್ರಯತ್ನಿಸೋಣ.
ಚಟುವಟಿಕೆ 5
ಬೇರೆ ಬೇರೆ ಬಣ್ಣಗಳ ಎರಡು ಕಾಗದದ ಹಾಳೆಗಳನ್ನು ತೆಗೆದುಕೊಳ್ಳಿ. ಪ್ರತಿ ಹಾಳೆಯಿಂದ ಉದ್ದ ಮತ್ತು ಅಗಲಗಳೆರಡೂ 30cmಗೆ ಸಮವಾಗಿರುವಂತೆ ಚೌಕವನ್ನು ಕತ್ತರಿಸಿ. ಈಗ ಎರಡೂ ಹಾಳೆಗಳನ್ನು ಅರ್ಧಕ್ಕೆ ಮಡಿಚಿ.
ಒಂದು ಹಾಳೆಯ ಮೇಲೆ ಚಿತ್ರ 3.12(ಎ)ನಲ್ಲಿ ತೋರಿಸಿರುವಂತೆ ಮತ್ತು ಇನ್ನೊಂದು ಹಾಳೆಯ ಮೇಲೆ ಚಿತ್ರ 3.12 (ಬಿ)ನಲ್ಲಿ ತೋರಿಸಿರುವಂತೆ ಗೆರೆಗಳನ್ನು ಎಳೆಯಿರಿ. ಚುಕ್ಕೆಗಳ ಸಾಲುಗಳಿಗನುಗುಣವಾಗಿ ಎರಡೂ ಹಾಳೆಗಳನ್ನು ಕತ್ತರಿಸಿ ನಂತರ ಬಿಡಿಸಿ. ಚಿತ್ರ 3.12(ಸಿ)ನಲ್ಲಿ ತೋರಿಸಿರುವಂತೆ ಕಾಗದದ ಪಟ್ಟಿಗಳನ್ನು ಕತ್ತರಿಸಿದ ಜಾಗಗಳ ಮೂಲಕ ಒಂದಾದ ಮೇಲೆ ಒಂದರಂತೆ ನೇಯಿರಿ. ಎಲ್ಲಾ ಬಣ್ಣದ ಪಟ್ಟಿಗಳನ್ನು ನೇಯ್ದ ನಂತರದ ನಮೂನೆಯನ್ನು ಚಿತ್ರ 3.12(ಡಿ)ನಲ್ಲಿ ಕಾಣಬಹುದು.
ಇದೇ ರೀತಿ ಒಂದು ಬಟ್ಟೆಯನ್ನು ತಯಾರಿಸಲು ಎರಡು ವಿಧದ ನೂಲುಗಳನ್ನು ನೇಯಲಾಗುವುದು. ಆದರೆ ಎಳೆಗಳು ಕಾಗದದ ಪಟ್ಟಿಗಳಿಗಿಂತ ತೆಳುವಾಗಿರುತ್ತವೆ. ಬಟ್ಟೆಯ ನೇಯ್ಗೆಯನ್ನು ಮಗ್ಗ (loom)ಗಳ ಮೇಲೆ ಮಾಡಲಾಗುತ್ತದೆ (ಚಿತ್ರ 3.13). ಮಗ್ಗಗಳು ಕೈ ಅಥವಾ ವಿದ್ಯುತ್ ಚಾಲಿತವಾಗಿರುತ್ತವೆ.
ಹೆಣೆಯುವುದು
ಸ್ವೆಟರ್‍ಗಳನ್ನು ಹೇಗೆ ಹೆಣೆಯಲಾಗುವುದು ಎಂಬುದನ್ನು ನೀವು ಗಮನಿಸಿದ್ದೀರ? ಹೆಣಿಗೆಯಲ್ಲಿ ಒಂದೇ ನೂಲನ್ನು ಬಳಸಿ ಬಟ್ಟೆಯ ತುಂಡನ್ನು ತಯಾರಿಸಲಾಗುತ್ತದೆ (ಚಿತ್ರ 3.14). ಹರಿದು ಹೋಗಿರುವ ಕಾಲು ಚೀಲದಿಂದ ಯಾವಾಗಲಾದರೂ ನೀವು ನೂಲನ್ನು ಎಳೆದಿದ್ದೀರ? ಏನಾಗುತ್ತದೆ? ಬಟ್ಟೆ ಬಿಡಿಸಿಕೊಳ್ಳುತ್ತಾ ಹೋದಂತೆ ಒಂದೇ ನೂಲು ನಿರಂತರವಾಗಿ ಎಳೆಯಲ್ಪಡುತ್ತದೆ. ಕಾಲುಚೀಲಗಳು ಮತ್ತು ಹಲವು ಇತರೆ ಬಟ್ಟೆಗಳನ್ನು ಹೆಣೆಯುವುದರ ಮೂಲಕ ಮಾಡುತ್ತಾರೆ. ಹೆಣಿಗೆಯನ್ನು ಕೈಯಿಂದ ಮತ್ತು ಯಂತ್ರಗಳಿಂದ ಸಹ ಮಾಡಲಾಗುತ್ತದೆ.
ನೇಯುವುದು ಮತ್ತು ಹೆಣೆಯುವುದರ ಮೂಲಕ ವಿವಿಧ ರೀತಿಯ ಬಟ್ಟೆಗಳನ್ನು ತಯಾರಿಸುತ್ತಾರೆ. ಈ ಬಟ್ಟೆಗಳನ್ನು ವಿವಿಧ ರೀತಿಯ ಉಡುಪುಗಳಿಗಾಗಿ ಬಳಸುತ್ತಾರೆ.
3.6 ಉಡುಪಿನ ಇತಿಹಾಸ
ಪ್ರಾಚೀನ ಕಾಲದಲ್ಲಿ ಜನರು ಉಡುಪುಗಳಿಗೆ ಯಾವ ವಸ್ತುಗಳನ್ನು ಬಳಸುತ್ತಿದ್ದರು ಎಂಬುದರ ಬಗ್ಗೆ ಯಾವಾಗಲಾದರೂ ಆಶ್ಚರ್ಯಪಟ್ಟಿದ್ದೀರಾ? ಆ ಕಾಲದಲ್ಲಿ ಜನರು ತಮ್ಮ ದೇಹವನ್ನು ಮುಚ್ಚಿಕೊಳ್ಳಲು ಮರಗಳ ತೊಗಟೆ ಮತ್ತು ದೊಡ್ಡ ಎಲೆಗಳು ಅಥವಾ ಪ್ರಾಣಿಗಳ ಚರ್ಮ ಮತ್ತು ತುಪ್ಪಟಗಳನ್ನು ಬಳಸುತ್ತಿದ್ದರೆಂದು ಕಾಣುತ್ತದೆ.
ಕೃಷಿ ಸಮುದಾಯಗಳಲ್ಲಿ ನೆಲೆಸಲು ಪ್ರಾರಂಭಿಸಿದ ನಂತರ ರೆಂಬೆಗಳು ಮತ್ತು ಹುಲ್ಲನ್ನು ನೇಯ್ದು ಚಾಪೆ ಮತ್ತು ಬುಟ್ಟಿಗಳನ್ನು ಮಾಡುವುದನ್ನು ಜನರು ಕಲಿತರು. ಬಳ್ಳಿಗಳು, ಪ್ರಾಣಿಗಳ ಉಣ್ಣೆ ಅಥವಾ ಕೂದಲನ್ನು ಉದ್ದನೆಯ ಎಳೆಗಳನ್ನಾಗಿ ಹೆಣೆಯುತ್ತಿದ್ದರು. ಇವುಗಳನ್ನು ಬಟ್ಟೆಗಳನ್ನಾಗಿ ನೇಯುತ್ತಿದ್ದರು. ಭಾರತದಲ್ಲಿ ನಮ್ಮ ಪೂರ್ವಜರು ಗಂಗಾ ನದಿಯ ತೀರ ಪ್ರದೇಶದ ಹತ್ತಿರ ಬೆಳೆದ ಹತ್ತಿಯಿಂದ ತಯಾರಿಸಿದ ಬಟ್ಟೆಗಳನ್ನು ಧರಿಸುತ್ತಿದ್ದರು. ಅಗಸೆ (flax)ಯೂ ಕೂಡ ನೈಸರ್ಗಿಕ ನಾರುಗಳನ್ನು ಕೊಡುವ ಸಸ್ಯ. ಪ್ರಾಚೀನ ಈಜಿಪ್ಟ್‍ನಲ್ಲಿ ನೈಲ್ ನದಿಯ ಸಮೀಪ ಹತ್ತಿ ಹಾಗೂ ಅಗಸೆಯನ್ನು ಬೆಳೆಯಲಾಗುತ್ತಿತ್ತು. ಅವುಗಳನ್ನು ಬಟ್ಟೆಗಳ ತಯಾರಿಕೆಗೆ ಬಳಸುತ್ತಿದ್ದರು.
ಆ ದಿನಗಳಲ್ಲಿ ಹೊಲಿಗೆ ತಿಳಿದಿರಲಿಲ್ಲ. ಜನರು ದೇಹದ ಬೇರೆ ಬೇರೆ ಭಾಗಗಳಿಗೆ ಬಟ್ಟೆಗಳನ್ನು ಸುತ್ತಿಕೊಳ್ಳುತ್ತಿದ್ದರು. ಆನಂತರ ಬಟ್ಟೆಗಳನ್ನು ಬೇರೆ ಬೇರೆ ತರಹ ಉಡುವಂತಾದರು. ಹೊಲಿಯುವ ಸೂಜಿಯ ಅನ್ವೇಷಣೆಯಾದ ನಂತರ ಜನರು ಬಟ್ಟೆಗಳಿಂದ ಉಡುಪುಗಳನ್ನು ಹೊಲಿಯಲು ಆರಂಭಿಸಿದರು. ಕ್ರಮೇಣ ಹೊಲಿದ ಉಡುಪುಗಳು ಅನೇಕ ಬದಲಾವಣೆಗೆ ಒಳಗಾಗಿವೆ. ಆದರೆ ಈಗಲೂ ಕೂಡ ಸೀರೆ, ಪಂಚೆ, ಲುಂಗಿ ಅಥವಾ ರುಮಾಲು (ಪೇಟ)ಗಳು ಹೊಲಿಯದೆ ಬಳಸುವ ಬಟ್ಟೆಗಳೆಂದರೆ ಆಶ್ಚರ್ಯವಾಗುವುದಿಲ್ಲವೇ?
ತಿನ್ನುವ ಆಹಾರದಲ್ಲಿ ವೈವಿಧ್ಯ ಇದ್ದಂತೆ ಬಟ್ಟೆ ಮತ್ತು ಉಡುಪುಗಳಲ್ಲಿಯು ಸಹ ನಮ್ಮ ದೇಶದೆಲ್ಲೆಡೆ ಅಪಾರ ವೈವಿಧ್ಯ ಇದೆ.
ಪ್ರಮುಖ ಶಬ್ದಗಳು
ಹತ್ತಿ
ಉಣ್ಣೆ ಬಟ್ಟೆ
ನಾರು
ಹೆಣೆಯುವುದು
ನೂಲುವುದು
ನೇಯುವುದು
ನೂಲು
ಸಾರಾಂಶ
● ಉಡುಪಿನ ಬಟ್ಟೆಗಳಲ್ಲಿ ವೈವಿಧ್ಯವಿದೆ. ಉದಾಹರಣೆಗೆ ಹತ್ತಿ, ರೇಷ್ಮೆ, ಉಣ್ಣೆ ಮತ್ತು ಪಾಲಿಸ್ಟರ್.
● ಬಟ್ಟೆಗಳು ನೂಲುಗಳಿಂದ ಆಗಿದ್ದರೆ, ನೂಲುಗಳು ನಾರುಗಳಿಂದಾಗಿವೆ.
● ನಾರುಗಳು ನೈಸರ್ಗಿಕ ಅಥವಾ ಸಂಶ್ಲೇಷಿತ. ಹತ್ತಿ, ಉಣ್ಣೆ, ರೇಷ್ಮೆ ಮತ್ತು ಸೆಣಬು ಇವುಗಳು ನೈಸರ್ಗಿಕ ನಾರುಗಳು, ಹಾಗೆಯೆ ನೈಲಾನ್ ಮತ್ತು ಪಾಲಿಸ್ಟರ್ ಸಂಶ್ಲೇಷಿತ ನಾರುಗಳಿಗೆ ಉದಾಹರಣೆಗಳು.
● ಹತ್ತಿ ಮತ್ತು ಸೆಣಬಿನ ನಾರುಗಳು ಸಸ್ಯಗಳಿಂದ ದೊರೆಯುತ್ತವೆ.
● ನಾರಿನಿಂದ ನೂಲನ್ನು ತಯಾರಿಸುವ ಕ್ರಿಯೆಯನ್ನು ನೂಲುವುದು ಎನ್ನುವರು.
● ನೂಲನ್ನು ನೇಯುವುದು ಮತ್ತು ಹೆಣೆಯುವುದರಿಂದ ಬಟ್ಟೆಯನ್ನು ತಯಾರಿಸಲಾಗುತ್ತದೆ.
ವಿಡಿಯೋ ಪಾಠಗಳು
ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು
ಪ್ರಶ್ನೋತ್ತರಗಳು
ಸೂಚಿತ ಯೋಜನಾ ಕಾರ್ಯ ಮತ್ತು ಚಟುವಟಿಕೆಗಳು
1) ಹತ್ತಿರದ ಕೈ ಮಗ್ಗ ಅಥವಾ ವಿದ್ಯುತ್ ಮಗ್ಗಕ್ಕೆ ಭೇಟಿ ನೀಡಿ ಅಲ್ಲಿ ಬಟ್ಟೆಯನ್ನು ನೇಯುವುದು ಅಥವಾ ಹೆಣೆಯುವುದನ್ನು ವೀಕ್ಷಿಸಿ.
2) ನಿಮ್ಮ ಪ್ರದೇಶದಲ್ಲಿ ನಾರನ್ನು ಪಡೆಯಲು ಯಾವುದಾದರು ಬೆಳೆ ಬೆಳೆಯುತ್ತಾರೆಯೆ ಎಂಬುದನ್ನು ತಿಳಿಯಿರಿ. ಹೌದಾಗಿದ್ದರೆ ಇದನ್ನು ಯಾವುದಕ್ಕೆ ಬಳಸಲಾಗುತ್ತದೆ?
3) ಭಾರತವು ಹತ್ತಿ ಮತ್ತು ಅದರ ಬಟ್ಟೆಯ ಪ್ರಮುಖ ಉತ್ಪಾದಕ. ಹತ್ತಿಯ ಬಟ್ಟೆ ಮತ್ತು ಉಡುಪುಗಳನ್ನು ಹಲವು ದೇಶಗಳಿಗೆ ಭಾರತ ರಪ್ತು ಮಾಡುತ್ತದೆ. ಇದು ನಮಗೆ ಹೇಗೆ ಸಹಾಯಕ? ತಿಳಿಯಿರಿ.
4) ಪ್ರಸಿದ್ಧ ಸೂಫಿಸಂತ ಮತ್ತು ಕವಿ ಎನಿಸಿಕೊಂಡಿದ್ದ ಕಬೀರರು ನೇಕಾರರಾಗಿದ್ದರೆಂಬುದು ನಿಮಗೆ ತಿಳಿದಿದೆಯೆ? ಅವರ ಜೀವನ ಮತ್ತು ಬೋಧನೆಗಳ ಬಗ್ಗೆ ತಿಳಿಯಿರಿ.
5) ನಿಮ್ಮ ಶಿಕ್ಷಕರು ಅಥವಾ ಪಾಲಕರ ಮೇಲ್ವಿಚಾರಣೆಯಲ್ಲಿ ಬಟ್ಟೆಯ ನೂಲುಗಳನ್ನು ಗುರುತಿಸಲು ಒಂದು ಚಟುವಟಿಕೆಯನ್ನು ನೀವು ಮಾಡಬಹುದು. ಒಂದು ಬಟ್ಟೆಯಿಂದ ಆರೆಂಟು ನೂಲುಗಳನ್ನು ಹೊರಗೆಳೆಯಿರಿ. ನೂಲಿನ ಒಂದು ತುದಿಯನ್ನು ಇಕ್ಕಳದಿಂದ ಹಿಡಿದು ಇನ್ನೊಂದು ತುದಿಯನ್ನು ಮೇಣದ ಬತ್ತಿಯ ಜ್ವಾಲೆಯ ಮೇಲೆ ತನ್ನಿ. ಎಚ್ಚರಿಕೆಯಿಂದ ಗಮನಿಸಿ. ನೂಲುಗಳು ಜ್ವಾಲೆಯಿಂದ ದೂರ ಸುರುಟುತ್ತವೆಯೆ? ನೂಲುಗಳು ಕರಗುತ್ತವೆಯೆ ಅಥವಾ ಸುಟ್ಟು ಹೋಗುತ್ತವೆಯೆ? ಯಾವ ರೀತಿಯ ವಾಸನೆ ಕೊಡುತ್ತವೆ? ನೀವು ವೀಕ್ಷಿಸಿದ್ದನ್ನು ಬರೆದುಕೊಳ್ಳಿ. ಇವು ಹತ್ತಿಯ ನೂಲುಗಳಾಗಿದ್ದಲ್ಲಿ ಸುಟ್ಟು ಹೋಗುತ್ತವೆ ಆದರೆ ಸುರುಟುವುದಿಲ್ಲ ಅಥವಾ ಕರಗುವುದಿಲ್ಲ. ಸುಟ್ಟು ಹೋಗುತ್ತಿರುವ ನೂಲಿನ ವಾಸನೆ ಸುಟ್ಟು ಹೋಗುತ್ತಿರುವ ಕಾಗದದ ಹಾಳೆಯ ವಾಸನೆಯಂತಿರುತ್ತದೆ. ರೇಷ್ಮೆಯ ನಾರು ಸುರುಟಿ ಜ್ವಾಲೆಯಿಂದ ದೂರ ಸರಿಯುತ್ತದೆ. ಇದು ಸುಟ್ಟು ಹೋಗುತ್ತದೆ ಆದರೆ ಕರಗುವುದಿಲ್ಲ. ಇದಕ್ಕೆ ಸುಟ್ಟ ಮಾಂಸದ ವಾಸನೆಯಿರುತ್ತದೆ. ಉಣ್ಣೆಯ ಎಳೆ ಸಹ ಸುರುಟುತ್ತದೆ ಮತ್ತು ಸುಟ್ಟು ಹೋಗುತ್ತದೆ, ಆದರೆ ಕರಗುವುದಿಲ್ಲ. ಸುಟ್ಟು ಹೋಗುತ್ತಿರುವ ಕೂದಲಿನ ಬಲವಾದ ವಾಸನೆ ಇದಕ್ಕಿರುತ್ತದೆ. ಸಂಶ್ಲೇಷಿತ ಎಳೆಗಳು ಮುದುಡುತ್ತವೆ ಮತ್ತು ಸುಟ್ಟು ಹೋಗುತ್ತವೆ. ಅವುಗಳೂ ಕರಗುತ್ತವೆ ಮತ್ತು ಸುಟ್ಟು ಹೋಗುತ್ತಿರುವ ಪ್ಲಾಸ್ಟಿಕ್ ತರಹದ ವಾಸನೆಯನ್ನು ಕೊಡುತ್ತವೆ.