ಉಷ್ಣ – ಅಧ್ಯಾಯ-4

ಉಣ್ಣೆಯ ಬಟ್ಟೆಗಳನ್ನು ಪ್ರಾಣಿಗಳ ತುಪ್ಪಳದ ಎಳೆಗಳಿಂದ ತಯಾರಿಸಲಾಗುತ್ತದೆ ಎಂಬುದನ್ನು 3ನೇ ಅಧ್ಯಾಯದಲ್ಲಿ ನೀವು ಕಲಿತಿರುವಿರಿ. ಹತ್ತಿಯ ಬಟ್ಟೆಗಳು ಸಸ್ಯ ಮೂಲದ ನಾರಿನಿಂದ ಮಾಡಲ್ಪಟ್ಟಿವೆ ಎಂಬುದನ್ನು ನೀವು ತಿಳಿದಿರುವಿರಿ. ಚಳಿಗಾಲದಲ್ಲಿ ವಾತಾವರಣ ತಂಪಾಗಿದ್ದಾಗ ನಾವು ಉಣ್ಣೆಯ ಉಡುಪುಗಳನ್ನು ಧರಿಸುತ್ತೇವೆ. ಉಣ್ಣೆಯ ಉಡುಪುಗಳು ನಮ್ಮ ದೇಹವನ್ನು ಬೆಚ್ಚಗಿರಿಸುತ್ತವೆ. ಬೇಸಿಗೆಯಲ್ಲಿ ನಾವು ತಿಳಿ ಬಣ್ಣದ ಹತ್ತಿಯ ಬಟ್ಟೆಗಳನ್ನು ಧರಿಸಲು ಇಚ್ಛಿಸುತ್ತೇವೆ. ಇವು ನಮಗೆ ತಂಪಾದ ಅನುಭವವನ್ನು ನೀಡುತ್ತವೆ. ನಿರ್ದಿಷ್ಟ ಋತುಮಾನಗಳಿಗೆ ತಕ್ಕಂತೆ ನಿರ್ದಿಷ್ಟ ರೀತಿಯ ಬಟ್ಟೆಗಳು ಏಕೆ ಅಗತ್ಯ ಎಂಬ ಕುತೂಹಲ ನಿಮಗೆ ಉಂಟಾಗಿರಬಹುದು.

ನಿಮಗೆ ಚಳಿಗಾಲದಲ್ಲಿ ಮನೆಯ ಒಳಗೆ ತಣ್ಣನೆಯ ಅನುಭವವಾಗುತ್ತದೆ. ನೀವು ಹೊರಗಿನ ಬಿಸಿಲಿಗೆ ಬಂದರೆ ಬೆಚ್ಚನೆಯ ಅನುಭವವಾಗುತ್ತದೆ. ಬೇಸಿಗೆ ಕಾಲದಲ್ಲಿ ನಿಮಗೆ ಮನೆಯ ಒಳಭಾಗದಲ್ಲಿ ಸೆಖೆಯ ಅನುಭವವಾಗುತ್ತದೆ. ಒಂದು ವಸ್ತುವು ಬಿಸಿಯಾಗಿದೆ ಅಥವಾ ತಂಪಾಗಿದೆ ಎಂಬುದು ನಮಗೆ ಹೇಗೆ ತಿಳಿಯುತ್ತದೆ? ಒಂದು ವಸ್ತುವು ಎಷ್ಟು ಬಿಸಿಯಾಗಿದೆ ಅಥವಾ ಎಷ್ಟು ತಂಪಾಗಿದೆ ಎಂದು ಕಂಡುಕೊಳ್ಳುವುದು ಹೇಗೆ? ಇಂತಹ ಹಲವು ಪ್ರಶ್ನೆಗಳಿಗೆ ಈ ಅಧ್ಯಾಯದಲ್ಲಿ ಉತ್ತರಗಳನ್ನು ಕಂಡುಕೊಳ್ಳಲು ನಾವು ಪ್ರಯತ್ನಿಸೋಣ.

4.1 ಬಿಸಿ ಮತ್ತು ತಂಪು

ನಮ್ಮ ದೈನಂದಿನ ಜೀವನದಲ್ಲಿ ಅನೇಕ ವಸ್ತುಗಳನ್ನು ಬಳಸುತ್ತೇವೆ. ಅವುಗಳಲ್ಲಿ ಕೆಲವು ಬಿಸಿಯಾಗಿದ್ದರೆ ಮತ್ತೆ ಕೆಲವು ತಂಪಾಗಿರುತ್ತವೆ. ಚಹಾ ಬಿಸಿಯಾಗಿರುತ್ತದೆ. ಮಂಜುಗಡ್ಡೆ ತಣ್ಣಗಿರುತ್ತದೆ. ನೀವು ಸಾಮಾನ್ಯವಾಗಿ ಬಳಸುವ ಕೆಲವು ವಸ್ತುಗಳನ್ನು ಕೋಷ್ಟಕ 4.1ರಲ್ಲಿ ಪಟ್ಟಿ ಮಾಡಿ, ಬಿಸಿ ಅಥವಾ ತಣ್ಣಗಿರುವುದನ್ನು ಗುರ್ತಿಸಿ.

ಕೆಲವು ವಸ್ತುಗಳು ಬಿಸಿಯಾಗಿದ್ದರೆ, ಕೆಲವು ವಸ್ತುಗಳು ತಣ್ಣಗಿರುವುದನ್ನು ನಾವು ಕಾಣುತ್ತೇವೆ. ಕೆಲವು ವಸ್ತುಗಳು ಇನ್ನೂ ಕೆಲವಕ್ಕಿಂತ ಹೆಚ್ಚು ಬಿಸಿಯಾಗಿದ್ದರೆ, ಕೆಲವು ವಸ್ತುಗಳು ಮತ್ತೆ ಕೆಲವಕ್ಕಿಂತ ಹೆಚ್ಚು ತಣ್ಣಗಿರುವವೆಂದೂ ನೀವು ತಿಳಿದಿರುವಿರಿ. ಒಂದು ವಸ್ತುವು ಮತ್ತೊಂದು ವಸ್ತುವಿಗಿಂತ ಹೆಚ್ಚು ಬಿಸಿಯಾಗಿದೆ ಎಂದು ನಾವು ತೀರ್ಮಾನಿಸುವುದು ಹೇಗೆ? ಸಾಮಾನ್ಯವಾಗಿ ನಾವು ವಸ್ತುಗಳನ್ನು ಸ್ಪರ್ಶಿಸಿ ತಿಳಿಯುತ್ತೇವೆ. ಆದರೆ ನಮ್ಮ ಸ್ಪರ್ಶಜ್ಞಾನ ಎಷ್ಟು ವಿಶ್ವಾಸಾರ್ಹ? ಕಂಡುಹಿಡಿಯೋಣ.

ಚಟುವಟಿಕೆ 4.1
ಮೂರು ಚಿಕ್ಕ ಪಾತ್ರೆಗಳನ್ನು ತೆಗೆದುಕೊಳ್ಳಿ. ಅವುಗಳನ್ನು ಎ, ಬಿ ಮತ್ತು ಸಿ ಎಂದು ಗುರ್ತಿಸಿ. ಎ ಪಾತ್ರೆಯಲ್ಲಿ ತಣ್ಣೀರನ್ನು ಮತ್ತು ಬಿ ಪಾತ್ರೆಯಲ್ಲಿ ಬಿಸಿ ನೀರನ್ನು ಹಾಕಿ. ಸಿ ಪಾತ್ರೆಯಲ್ಲಿ ಬಿಸಿನೀರು ಹಾಗೂ ತಣ್ಣೀರನ್ನು ಬೆರೆಸಿ.

ನೀರು ನಿಮ್ಮ ಕೈ ಸುಡುವಷ್ಟು ಹೆಚ್ಚು ಬಿಸಿಯಾಗಿಲ್ಲವೆಂದು ಖಚಿತಪಡಿಸಿಕೊಳ್ಳಿ.

ಈಗ ಎ ಪಾತ್ರೆಯ ನೀರಿನಲ್ಲಿ ನಿಮ್ಮ ಎಡಗೈ ಅದ್ದಿ ಮತ್ತು ಬಿ ಪಾತ್ರೆಯ ನೀರಿನಲ್ಲಿ ಬಲಗೈ ಅದ್ದಿ. 2-3 ನಿಮಿಷಗಳ ನಂತರ ಸಿ ಪಾತ್ರೆಯ ನೀರಿನಲ್ಲಿ ನಿಮ್ಮ ಎರಡೂ ಕೈಗಳನ್ನು ಒಟ್ಟಾಗಿ ಅದ್ದಿ (ಚಿತ್ರ 4.1). ನಿಮ್ಮ ಎರಡೂ ಕೈಗಳಿಗೆ ಒಂದೇ ರೀತಿಯ ಅನುಭವವಾಗುವುದೆ?

ಒಂದು ವಸ್ತುವು ಬಿಸಿಯಾಗಿದೆಯೆ ಅಥವಾ ತಣ್ಣಗಿದೆಯೆ ಎಂದು ತೀರ್ಮಾನಿಸಲು ನಾವು ಯಾವಾಗಲೂ ಸ್ಪರ್ಶ ಜ್ಞಾನವನ್ನೇ ಅವಲಂಬಿಸಲು ಸಾಧ್ಯವಿಲ್ಲ ಎಂಬುದು ಬೂಝೊನ ಗೊಂದಲದಿಂದ ಕಂಡುಬರುತ್ತದೆ. ಕೆಲವೊಮ್ಮೆ ನಾವು ಮೋಸ ಹೋಗಬಹುದು.

ಹಾಗಾದರೆ ಒಂದು ವಸ್ತುವು ನಿಜವಾಗಿ ಎಷ್ಟು ಬಿಸಿಯಾಗಿದೆ ಎಂಬುದನ್ನು ನಾವು ಹೇಗೆ ಕಂಡುಹಿಡಿಯುವುದು? ವಸ್ತುವಿನ ಉಷ್ಣತೆಯ ಮಟ್ಟದ ಒಂದು ವಿಶ್ವಾಸನೀಯ ಅಳತೆಯೇ ಅದರ ತಾಪ (temperature). ತಾಪವನ್ನು ಅಳೆಯುವ ಸಾಧನವೇ ತಾಪಮಾಪಕ (thermometer).

4.2 ತಾಪದ ಅಳೆಯುವಿಕೆ

ನೀವು ತಾಪಮಾಪಕವನ್ನು ನೋಡಿರುವಿರ? ನಿಮ್ಮ ಕುಟುಂಬದಲ್ಲಿ ನಿಮಗೆ ಅಥವಾ ಯಾರಿಗಾದರೂ ಜ್ವರ ಬಂದಾಗ ತಾಪವನ್ನು ತಾಪಮಾಪಕದಿಂದ ಅಳತೆ ಮಾಡಿದ್ದನ್ನು ನೆನಪಿಸಿಕೊಳ್ಳಿ. ನಮ್ಮ ದೇಹದ ತಾಪವನ್ನು ಅಳೆಯುವ ತಾಪಮಾಪಕವನ್ನು ವೈದ್ಯಕೀಯ ತಾಪಮಾಪಕ (clinical thermometer) ಎನ್ನುವರು.

ವೈದ್ಯಕೀಯ ತಾಪಮಾಪಕವನ್ನು ಕೈಯಿಂದ ಹಿಡಿದು ಎಚ್ಚರಿಕೆಯಿಂದ ಪರೀಕ್ಷಿಸಿ ನೋಡಿ. ವೈದ್ಯಕೀಯ ತಾಪಮಾಪಕ ನಿಮ್ಮ ಬಳಿ ಇಲ್ಲದಿದ್ದರೆ ನಿಮ್ಮ ಗೆಳೆಯರನ್ನು ಕೇಳಿ ಪಡೆಯಿರಿ. ವೈದ್ಯಕೀಯ ತಾಪಮಾಪಕವು ಚಿತ್ರ 4.2ರಂತೆ ಕಂಡುಬರುತ್ತದೆ.

ಚಿತ್ರ 4.2 ವೈದ್ಯಕೀಯ ತಾಪಮಾಪಕ

ವೈದ್ಯಕೀಯ ತಾಪಮಾಪಕವು ಕಿರಿದಾದ ಸಮಗಾತ್ರದ ಉದ್ದನೆಯ ಗಾಜಿನ ನಳಿಕೆಯನ್ನು ಹೊಂದಿದೆ. ಒಂದು ತುದಿಯಲ್ಲಿ ಗಾಜಿನ ಬುರುಡೆ ಇದ್ದು ಪಾದರಸವನ್ನು ಹೊಂದಿದೆ. ಗಾಜಿನ ಬುರುಡೆಯಿಂದ ಹೊರಗೆ ಪಾದರಸದ ಹೊಳೆಯುವ ಒಂದು ಸಣ್ಣ ಎಳೆಯನ್ನು ನೋಡಬಹುದು.

ಪಾದರಸದ ಎಳೆ ನಿಮಗೆ ಕಾಣಿಸದಿದ್ದರೆ, ತಾಪಮಾಪಕವನ್ನು ಸ್ವಲ್ಪ ಹೊರಳಿಸಿ ನೋಡಿ. ತಾಪಮಾಪಕದ ಮೇಲೆ ನಿಮಗೆ ಒಂದು ಅಳತೆಪಟ್ಟಿಯೂ ಕಾಣಿಸುತ್ತದೆ. ಇದು ಸೆಲ್ಸಿಯಸ್ ಅಳತೆಪಟ್ಟಿ, ಇದನ್ನು oC (ಡಿಗ್ರಿ ಸೆಲ್ಸಿಯಸ್) ನಿಂದ ಸೂಚಿಸುವರು.

ವೈದ್ಯಕೀಯ ತಾಪಮಾಪಕವು 35o C ನಿಂದ 42o C ವರೆಗಿನ ತಾಪವನ್ನು ಅಳೆಯುವುದು.

ಚಟುವಟಿಕೆ 4.2
ತಾಪಮಾಪಕವನ್ನು ಓದುವುದು
ನಾವು ತಾಪಮಾಪಕವನ್ನು ಹೇಗೆ ಓದಬೇಕೆಂದು ಕಲಿಯೋಣ. ಮೊದಲು ತಾಪಮಾಪಕದ ಅಳತೆ ಪಟ್ಟಿಯ ಎರಡು ದೊಡ್ಡ ಗೆರೆಗಳ ನಡುವಿನ ತಾಪದ ವ್ಯತ್ಯಾಸವನ್ನು ಗುರ್ತಿಸಿಕೊಳ್ಳಿ ಹಾಗೂ ಇವುಗಳ ನಡುವಿನ ವಿಭಜನೆ (ಸಣ್ಣಗೆರೆ)ಗಳ ಸಂಖ್ಯೆಯನ್ನು ಬರೆದುಕೊಳ್ಳಿ. ದೊಡ್ಡಗೆರೆಗಳು ಒಂದು ಡಿಗ್ರಿಯನ್ನು ಅಳೆದರೆ ಅವುಗಳ ನಡುವೆ ಐದು ವಿಭಜನೆಗಳಿವೆ. ಒಂದು ಸಣ್ಣ ವಿಭಜನೆಯು 1/5 = 0.2o C ಅನ್ನು ಅಳೆಯಬಲ್ಲದು.

ವೈದ್ಯಕೀಯ ತಾಪಮಾಪಕವನ್ನು ಓದುವಾಗ ಗಮನಿಸಬೇಕಾದ ಮುನ್ನೆಚ್ಚರಿಕೆಗಳು
• ತಾಪಮಾಪಕದ ಬಳಕೆಗೆ ಮುನ್ನ ಮತ್ತು ನಂತರ ನಂಜು ನಿರೋಧಕ (antiseptic) ದ್ರಾವಣದಿಂದ ಅದನ್ನು ತೊಳೆಯಬೇಕು.
• ಬಳಸುವ ಮೊದಲು ಪಾದರಸದ ಮಟ್ಟ 35o C ಗಿಂತಲೂ ಕಡಿಮೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
• ತಾಪಮಾಪಕವನ್ನು ಕಣ್ಣಿನ ದೃಷ್ಟಿಯ ನೇರದಲ್ಲಿ ಹಿಡಿದು ಪಾದರಸದ ಮಟ್ಟವನ್ನು ಓದಬೇಕು (ಚಿತ್ರ 4.3 ನೋಡಿ).
• ತಾಪಮಾಪಕವನ್ನು ಎಚ್ಚರದಿಂದ ಬಳಸಿ. ಇದು ಗಟ್ಟಿ ವಸ್ತುವಿಗೆ ತಾಕಿದರೆ ಒಡೆಯುತ್ತದೆ.
• ತಾಪಮಾಪಕವನ್ನು ಓದುವಾಗ ಪಾದರಸದ ಬುರುಡೆಯನ್ನು ಹಿಡಿದುಕೊಳ್ಳಬಾರದು.

ತಾಪಮಾಪಕವನ್ನು ನಂಜುನಿರೋಧಕ ದ್ರಾವಣದಿಂದ ತೊಳೆಯಿರಿ. ಕೈಯಲ್ಲಿ ಗಟ್ಟಿಯಾಗಿ ಹಿಡಿದು ಪಾದರಸದ ಬುರುಡೆಯನ್ನು ಕೆಳಗೆ ಮಾಡಿ ಜೋಪಾನವಾಗಿ ಕೊಡವಿರಿ. ಈ ರೀತಿ ಕೊಡವಿದಾಗ ಪಾದರಸದ ಮಟ್ಟ ಕೆಳಗೆ ಬರುವುದು. ಇದು 35o C ಗಿಂತಲೂ ಕೆಳಗೆ ಇಳಿದಿರುವ ಬಗ್ಗೆ ದೃಢಪಡಿಸಿಕೊಳ್ಳಿ.

ಈಗ ತಾಪಮಾಪಕದ ಬುರುಡೆಯು ನಾಲಿಗೆಯ ಕೆಳಗೆ ಬರುವಂತೆ ಇಟ್ಟುಕೊಳ್ಳಿ. ಒಂದು ನಿಮಿಷದ ನಂತರ ತಾಪಮಾಪಕವನ್ನು ಹೊರತೆಗೆದು ಅಳತೆಯನ್ನು ಬರೆದುಕೊಳ್ಳಿ. ಇದೇ ನಿಮ್ಮ ದೇಹದ ತಾಪ. ಯಾವಾಗಲೂ ತಾಪವನ್ನು ಅದರ ಏಕಮಾನ oC ನಿಂದ ನಮೂದಿಸಬೇಕು.

ನಿಮ್ಮ ದೇಹದ ತಾಪ ಎಷ್ಟು ಎಂದು ದಾಖಲಿಸಿದಿರಿ?
ಮಾನವನ ದೇಹದ ಸಾಮಾನ್ಯ ತಾಪ 37o C. ತಾಪವನ್ನು ಅದರ ಏಕಮಾನದಿಂದ ನಮೂದಿಸಿರುವುದನ್ನು ಗಮನಿಸಿ.

ಚಟುವಟಿಕೆ 4.3
ನಿಮ್ಮ ಕೆಲವು ಸ್ನೇಹಿತರ (ಕನಿಷ್ಠ 10) ದೇಹದ ತಾಪವನ್ನು ವ್ಯೆದ್ಯಕೀಯ ತಾಪಮಾಪಕದಿಂದ ಅಳೆಯಿರಿ. ನೀವು ಗಮನಿಸಿದ ಅಂಶಗಳನ್ನು ಕೋಷ್ಟಕ 4.2ರಲ್ಲಿ ದಾಖಲಿಸಿ.

ಇಲ್ಲಿ ಎಲ್ಲರ ದೇಹದ ತಾಪವೂ 37o C ಇದೆಯೆ?
ಎಲ್ಲರ ದೇಹದ ತಾಪವೂ 37o C ಇಲ್ಲದೆ ಇರಬಹುದು. ಇದು ಸ್ವಲ್ಪ ಹೆಚ್ಚು ಅಥವಾ ಕಡಿಮೆ ಇರುತ್ತದೆ. ವಾಸ್ತವವಾಗಿ ಸಾಮಾನ್ಯ ತಾಪ ಎಂಬುದು ಬಹಳಷ್ಟು ಸಂಖ್ಯೆಯ ಆರೋಗ್ಯವಂತ ವ್ಯಕ್ತಿಗಳ ದೇಹದ ಸರಾಸರಿ ತಾಪವಾಗಿದೆ.
ವೈದ್ಯಕೀಯ ತಾಪಮಾಪಕವನ್ನು ಮಾನವನ ದೇಹದ ತಾಪವನ್ನು ಅಳೆಯಲು ಮಾತ್ರ ರೂಪಿಸಲಾಗಿದೆ. ಸಾಮಾನ್ಯವಾಗಿ ಮಾನವನ ದೇಹದ ತಾಪ 35o C ಗಿಂತ ಕಡಿಮೆ ಅಥವಾ 42o C ಗಿಂತ ಹೆಚ್ಚು ಇರುವುದಿಲ್ಲ. ಈ ಕಾರಣದಿಂದಲೇ ವೈದ್ಯಕೀಯ ತಾಪಮಾಪಕ 35o C ನಿಂದ 42o C ವ್ಯಾಪ್ತಿ ಹೊಂದಿದೆ.

ಎಚ್ಚರಿಕೆ
ಮಾನವನ ದೇಹವನ್ನು ಹೊರತುಪಡಿಸಿ, ಬೇರೆ ಯಾವುದೇ ವಸ್ತುಗಳ ತಾಪವನ್ನು ಅಳೆಯಲು ವೈದ್ಯಕೀಯ ತಾಪಮಾಪಕವನ್ನು ಉಪಯೋಗಿಸಬಾರದು. ತಾಪಮಾಪಕವನ್ನು ಬಿಸಿಲಿನಲ್ಲಿ ಅಥವಾ ಬೆಂಕಿಯ ಜ್ವಾಲೆಯ ಹತ್ತಿರ ಇಡುವುದರಿಂದ ಅದು ಒಡೆದು ಹೋಗುವುದು.

4.3 ಪ್ರಯೋಗಶಾಲಾ ತಾಪಮಾಪಕ

ಇತರೆ ವಸ್ತುಗಳ ತಾಪವನ್ನು ನಾವು ಹೇಗೆ ಅಳೆಯುತ್ತೇವೆ? ಈ ಉದ್ದೇಶಕ್ಕಾಗಿ ಬೇರೆ ತಾಪಮಾಪಕಗಳಿವೆ. ಇಂತಹ ಒಂದು ತಾಪಮಾಪಕವನ್ನೇ ಪ್ರಯೋಗಶಾಲಾ ತಾಪಮಾಪಕ (laboratory thermometer) ಎನ್ನುವರು. ಶಿಕ್ಷಕರು ಈ ತಾಪಮಾಪಕವನ್ನು ನಿಮಗೆ ತೋರಿಸುವರು.

ಬೇರೆ ಬೇರೆ ಉದ್ದೇಶಗಳಿಗಾಗಿ ಬೇರೆ ಬೇರೆ ರೀತಿಯ ತಾಪಮಾಪಕಗಳನ್ನು ಉಪಯೋಗಿಸುವರು. ಹವಾಮಾನ ವರದಿಗಳಲ್ಲಿ ಹಿಂದಿನ ದಿನದ ಗರಿಷ್ಠ ಮತ್ತು ಕನಿಷ್ಠ ತಾಪವನ್ನು ಗರಿಷ್ಠ-ಕನಿಷ್ಠ ತಾಪಮಾಪಕದಿಂದ ಅಳೆದು ವರದಿ ಮಾಡುವರು.
ಚಿತ್ರ 4.4 ಪ್ರಯೋಗಶಾಲಾ ತಾಪಮಾಪಕ

ತಾಪಮಾಪಕವನ್ನು ಸೂಕ್ಷ್ಮವಾಗಿ ಗಮನಿಸಿ. ಇದು ಅಳೆಯಬಹುದಾದ ಗರಿಷ್ಠ ಮತ್ತು ಕನಿಷ್ಠ ತಾಪವನ್ನು ಗುರ್ತಿಸಿಕೊಳ್ಳಿ. ಪ್ರಯೋಗಶಾಲಾ ತಾಪಮಾಪಕದಿಂದ ಅಳೆಯಬಹುದಾದ ತಾಪದ ವ್ಯಾಪ್ತಿ ಸಾಮಾನ್ಯವಾಗಿ -10o C ನಿಂದ 110o C (ಚಿತ್ರ 4.4). ಈ ಹಿಂದೆ ನೀವು ವೈದ್ಯಕೀಯ ತಾಪಮಾಪಕದಲ್ಲಿ ಅಳತೆ ಮಾಡಿದ ರೀತಿಯಲ್ಲಿಯೆ ಈ ತಾಪಮಾಪಕದ ಅಳತೆ ಪಟ್ಟಿಯ ಸಣ್ಣ ವಿಭಜನೆಯ ಅಳತೆ ಎಷ್ಟು ಎಂಬುದನ್ನು ಕಂಡುಹಿಡಿಯಿರಿ. ತಾಪಮಾಪಕವನ್ನು ಸರಿಯಾಗಿ ಓದಲು ಈ ಮಾಹಿತಿ ನಿಮಗೆ ಅವಶ್ಯಕ.

ಈ ತಾಪಮಾಪಕವನ್ನು ಉಪಯೋಗಿಸುವುದು ಹೇಗೆಂದು ನಾವು ಈಗ ತಿಳಿದುಕೊಳ್ಳೋಣ.

ಚಟುವಟಿಕೆ 4.4
ಒಂದು ಬೀಕರ್ ಅಥವಾ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಳ್ಳಿ. ತಾಪಮಾಪಕದ ಬುರುಡೆಯು ತಳಕ್ಕೆ ಅಥವಾ ಪಕ್ಕಕ್ಕೆ ತಾಕದಂತೆ ಲಂಬವಾಗಿ (ಚಿತ್ರ 4.5) ಹಿಡಿಯಿರಿ. ತಾಪಮಾಪಕದಲ್ಲಿ ಪಾದರಸದ ಚಲನೆಯನ್ನು ಗಮನಿಸಿ. ಪಾದರಸದ ಎಳೆಯು ಸಮಸ್ಥಿತಿಗೆ ಬರುವವರೆಗೆ ಕಾಯ್ದು, ಅಳತೆಯನ್ನು ಗುರ್ತಿಸಿಕೊಳ್ಳಿ. ಈ ಕ್ಷಣದಲ್ಲಿ ಇದೇ ನೀರಿನ ತಾಪ.
ತರಗತಿಯ ಪ್ರತಿ ವಿದ್ಯಾರ್ಥಿಯೂ ದಾಖಲಿಸಿದ ನೀರಿನ ತಾಪದ ಅಳತೆಗಳನ್ನು ಹೋಲಿಸಿ ನೋಡಿ.

ಚಿತ್ರ 4.5 ಪ್ರಯೋಗಶಾಲಾ ತಾಪಮಾಪಕದಿಂದ
ನೀರಿನ ತಾಪವನ್ನು ಅಳೆಯುವುದು
ವೈದ್ಯಕೀಯ ತಾಪಮಾಪಕವನ್ನು ಬಳಸಲು ಅಗತ್ಯವಿರುವ ಮುನ್ನೆಚ್ಚರಿಕೆಗಳ ಜೊತೆಗೆ, ಪ್ರಯೋಗಶಾಲಾ ತಾಪಮಾಪಕವನ್ನು ಹೀಗೆ ಬಳಸಿ-
• ಓರೆಯಾಗಿರದೇ ನೇರವಾಗಿರಲಿ (ಚಿತ್ರ 4.5).
• ಪಾದರಸದ ಬುರುಡೆಯು ತಾಪವನ್ನು ಅಳೆಯಬೇಕಾದ ಪದಾರ್ಥದಿಂದ ಎಲ್ಲಾ ಬದಿಗಳಲ್ಲೂ ಆವರಿಸಲ್ಪಟ್ಟಿರಲಿ. ಪಾತ್ರೆಯ ಮೈಗೆ ಪಾದರಸದ ಬುರುಡೆ ತಾಕದಂತಿರಲಿ.

ಚಟುವಟಿಕೆ 4.5
ಒಂದು ಬೀಕರ್ ಅಥವಾ ಗಾಜಿನ ಲೋಟದಲ್ಲಿ ಸ್ವಲ್ಪ ಬಿಸಿನೀರನ್ನು ತೆಗೆದುಕೊಳ್ಳಿ. ತಾಪಮಾಪಕವನ್ನು ನೀರಿನಲ್ಲಿ ಅದ್ದಿ. ಪಾದರಸದ ಎಳೆ ಸಮಸ್ಥಿತಿಗೆ ಬರುವವರೆಗೆ ಕಾಯ್ದು ಅಳತೆಯನ್ನು ಗುರ್ತಿಸಿಕೊಳ್ಳಿ. ಈಗ ತಾಪಮಾಪಕವನ್ನು ನೀರಿನಿಂದ ಹೊರಗೆ ತೆಗೆಯಿರಿ. ಏನಾದರೂ ಬದಲಾವಣೆಯಾಗುವುದೇ ಎಂದು ಎಚ್ಚರದಿಂದ ಗಮನಿಸಿ. ನೀವು ತಾಪಮಾಪಕವನ್ನು ನೀರಿನಿಂದ ಹೊರತೆಗೆದ ತಕ್ಷಣ ಪಾದರಸದ ಮಟ್ಟ ಕೆಳಗೆ ಇಳಿಯುವುದನ್ನು ಗಮನಿಸುವಿರಿ. ಅಂದರೆ ತಾಪಮಾಪಕ ನೀರಿನಲ್ಲಿರುವಾಗಲೇ ತಾಪವನ್ನು ಅಳೆಯಬೇಕು ಎಂಬುದು ಇದರ ಅರ್ಥ.

ನಿಮ್ಮ ದೇಹದ ತಾಪವನ್ನು ಅಳೆಯಲು ತಾಪಮಾಪಕವನ್ನು ನಿಮ್ಮ ಬಾಯಿಂದ ಹೊರಗೆ ತೆಗೆದು ಅಳತೆಯನ್ನು ಗುರ್ತಿಸಿಕೊಳ್ಳಬೇಕಾಯಿತು ಎಂಬುದನ್ನು ನೀವು ಸ್ಮರಿಸಬಹುದು. ಹಾಗಾದರೆ ಪ್ರಯೋಗಶಾಲಾ ತಾಪಮಾಪಕವನ್ನು ಬಳಸಿ ನಿಮ್ಮ ದೇಹದ ತಾಪವನ್ನು ಅಳೆಯುವಿರ? ವಾಸ್ತವವಾಗಿ ಪ್ರಯೋಗಶಾಲಾ ತಾಪಮಾಪಕವನ್ನು ಈ ಉದ್ದೇಶಕ್ಕೆ ಬಳಸುವುದು ಯೋಗ್ಯವಲ್ಲ.

ವೈದ್ಯಕೀಯ ತಾಪಮಾಪಕವನ್ನು ಬಾಯಿಂದ ಹೊರಗೆ ತೆಗೆದಾಗ ಪಾದರಸದ ಮಟ್ಟದಲ್ಲಿ ಇಳಿಕೆಯಾಗಲಿ ಅಥವಾ ಏರಿಕೆಯಾಗಲಿ ಉಂಟಾಗುವುದಿಲ್ಲ. ಏಕೆ?
ಪುನಃ ವೈದ್ಯಕೀಯ ತಾಪಮಾಪಕವನ್ನು ಗಮನಿಸಿ. ಬುರುಡೆಯ ಹತ್ತಿರ ಒಂದು ವಕ್ರತೆ (kink) ನಿಮಗೆ ಕಾಣಿಸುವುದೆ?
(ಚಿತ್ರ 4.6) ಈ ವಕ್ರತೆಯಿಂದ ಏನು ಉಪಯೋಗ? ಇದು ಪಾದರಸದ ಮಟ್ಟ ತಾನಾಗಿಯೇ ಕುಸಿಯುವುದನ್ನು ತಡೆಯುತ್ತದೆ.

ತಾಪಮಾಪಕದಲ್ಲಿರುವ ಪಾದರಸವನ್ನು ಸಾಕಷ್ಟು ಎಚ್ಚರದಿಂದ ಬಳಸಬೇಕು. ಪಾದರಸವು ಒಂದು ವಿಷಕಾರಿ ಪದಾರ್ಥ. ತಾಪಮಾಪಕ ಒಡೆದರೆ ಇದನ್ನು ವಿಲೇವಾರಿ ಮಾಡುವುದು ಬಹಳ ಕಷ್ಟ. ಇತ್ತೀಚಿನ ದಿನಗಳಲ್ಲಿ ಪಾದರಸವನ್ನು ಬಳಸದೇ ಇರುವ ಡಿಜಿಟಲ್ ತಾಪಮಾಪಕಗಳು (digital thermometer) ದೊರೆಯುತ್ತವೆ.

Digital Thermometer

4.4 ಉಷ್ಣ ವರ್ಗಾವಣೆ

ಬೆಂಕಿಯ ಮೇಲೆ ಇಟ್ಟ ಬಾಣಲೆ ಬಿಸಿಯಾಗುವುದನ್ನು ನೀವು ನೋಡಿರಬಹುದು. ಉಷ್ಣವು ಬೆಂಕಿಯಿಂದ ಬಾಣಲೆಗೆ ಹರಿಯುವುದೇ ಇದಕ್ಕೆ ಕಾರಣ. ಬೆಂಕಿಯ ಮೇಲಿಂದ ಬಾಣಲೆಯನ್ನು ಹೊರತೆಗೆದಾಗ ನಿಧಾನವಾಗಿ ತಣ್ಣಗಾಗುತ್ತದೆ. ಇದು ತಣ್ಣಗಾಗಲು ಕಾರಣವೇನು? ಉಷ್ಣವು ನಿಧಾನವಾಗಿ ಬಾಣಲೆಯಿಂದ ಸುತ್ತಲಿನ ಪ್ರದೇಶಕ್ಕೆ ವರ್ಗಾವಣೆಯಾಗುತ್ತದೆ. ಆದ್ದರಿಂದ ಈ ಎರಡೂ ಸಂದರ್ಭಗಳಲ್ಲಿ ಉಷ್ಣವು ಬಿಸಿಯಾದ ವಸ್ತುವಿನಿಂದ ತಣ್ಣನೆಯ ವಸ್ತುವಿಗೆ ಹರಿಯುತ್ತದೆ.
ಎಲ್ಲಾ ಸಂದರ್ಭಗಳಲ್ಲಿಯೂ ಉಷ್ಣವು ಸಹಜವಾಗಿ ಬಿಸಿಯಾದ ವಸ್ತುವಿನಿಂದ ತಣ್ಣನೆಯ ವಸ್ತುವಿಗೆ ಹರಿಯುತ್ತದೆ.
ಉಷ್ಣವು ಹೇಗೆ ಹರಿಯುತ್ತದೆ? ಇದನ್ನು ನಾವು ಕಂಡು ಹಿಡಿಯೋಣ.

ಚಟುವಟಿಕೆ 4.6
ಅಲ್ಯೂಮಿನಿಯಮ್ ಅಥವಾ ಕಬ್ಬಿಣದ ಒಂದು ತೆಳುವಾದ ಸರಳು ಇಲ್ಲವೇ ಚಪ್ಪಟೆಯಾದ ಲೋಹದ ಪಟ್ಟಿಯನ್ನು ತೆಗೆದುಕೊಳ್ಳಿ. ಇದರ ಮೇಲೆ ಮೇಣದ ಕೆಲವು ತುಣುಕುಗಳನ್ನು ಅಂಟಿಸಿ. ಇವು ಸಮಾನ ಅಂತರದಲ್ಲಿರಲಿ (ಚಿತ್ರ 4.7). ಸರಳನ್ನು ಒಂದು ಪೀಠಕ್ಕೆ ಬಂಧಿಸಿ, ಪೀಠ ದೊರೆಯದಿದ್ದರೆ ಸರಳಿನ ಒಂದು ತುದಿಯನ್ನು ಎರಡು ಇಟ್ಟಿಗೆಗಳ ನಡುವೆ ಬಂಧಿಸಿ. ಈಗ ಸರಳಿನ ಇನ್ನೊಂದು ತುದಿಯನ್ನು ಕಾಯಿಸಿ, ವೀಕ್ಷಿಸಿ.

ಚಿತ್ರ 4.7 ಲೋಹದ ಪಟ್ಟಿಯ ಮೂಲಕ ಉಷ್ಣದ ವರ್ಗಾವಣೆ

ಎಲ್ಲಾ ವಸ್ತುಗಳು ಸುಲಭವಾಗಿ ಉಷ್ಣವನ್ನು ಹರಿಯಲು ಬಿಡುತ್ತವೆಯೆ? ಅಡುಗೆ ಮಾಡಲು ಬಳಸುವ ಲೋಹದ ಬಾಣಲೆಗೆ ಪ್ಲಾಸ್ಟಿಕ್ ಅಥವಾ ಮರದ ಹಿಡಿಕೆ ಇರುವುದನ್ನು ನೀವು ನೋಡಿರುತ್ತೀರಿ. ಏನೂ ತೊಂದರೆ ಮಾಡಿಕೊಳ್ಳದೆ ಸುಡುವ ಬಾಣಲೆಯ ಹಿಡಿಕೆಯನ್ನು ಹಿಡಿದು ಮೇಲೆತ್ತುವಿರ?

ಚಿತ್ರ 4.8 ವಿವಿಧ ವಸ್ತುಗಳಲ್ಲಿ ಉಷ್ಣ ವಹನ ಕ್ರಿಯೆ

ಚಟುವಟಿಕೆ 4.7
ಸಣ್ಣ ಬೀಕರ್ ಅಥವಾ ಬಾಣಲೆಯಲ್ಲಿ ನೀರನ್ನು ಕಾಯಿಸಿ. ಸ್ಟೀಲ್ ಚಮಚ, ಪ್ಲಾಸ್ಟಿಕ್ ಸ್ಕೇಲ್, ಪೆನ್ಸಿಲ್, ವಿಭಾಜಕ ಮುಂತಾದ ಕೆಲವು ಉಪಕರಣಗಳನ್ನು ಸಂಗ್ರಹಿಸಿ ಅವುಗಳ ಒಂದು ತುದಿಯನ್ನು ಬೀಕರಿನ ಬಿಸಿನೀರಿನಲ್ಲಿ ಅದ್ದಿ (ಚಿತ್ರ 4.8). ಕೆಲವು ನಿಮಿಷಗಳ ನಂತರ ಅವುಗಳ ಇನ್ನೊಂದು ತುದಿಯನ್ನು ಮುಟ್ಟಿನೋಡಿ. ನೀವು ಗಮನಿಸಿದ ಅಂಶಗಳನ್ನು ಕೋಷ್ಟಕ 4.3ರಲ್ಲಿ ದಾಖಲಿಸಿ.

ತಮ್ಮ ಮೂಲಕ ಸುಲಭವಾಗಿ ಉಷ್ಣವನ್ನು ಹರಿಯಲು ಬಿಡುವ ವಸ್ತುಗಳೇ ಉಷ್ಣವಾಹಕಗಳು (conductors). ಉದಾಹರಣೆಗೆ, ಅಲ್ಯೂಮಿನಿಯಮ್, ಕಬ್ಬಿಣ ಮತ್ತು ತಾಮ್ರ. ತಮ್ಮ ಮೂಲಕ ಸುಲಭವಾಗಿ ಉಷ್ಣವನ್ನು ಹರಿಯಲು ಬಿಡದೇ ಇರುವ ವಸ್ತುಗಳೇ ಅಲ್ಪ ಉಷ್ಣವಾಹಕಗಳು (poor conductors). ಉದಾಹರಣೆಗೆ, ಪ್ಲಾಸ್ಟಿಕ್ ಮತ್ತು ಮರ. ಅಲ್ಪ ಉಷ್ಣವಾಹಕಗಳನ್ನು ಅವಾಹಕಗಳು (insulators) ಎನ್ನುವರು.
ನೀರು ಮತ್ತು ಗಾಳಿ ಅಲ್ಪ ಉಷ್ಣವಾಹಕಗಳು. ಹಾಗಾದರೆ ಇವುಗಳ ಮೂಲಕ ಉಷ್ಣ ಹೇಗೆ ವರ್ಗಾವಣೆಯಾಗುತ್ತದೆ? ಇದನ್ನು ನಾವು ಕಂಡುಹಿಡಿಯೋಣ.

ಚಟುವಟಿಕೆ 4.8
ಒಂದು ಚಪ್ಪಟೆ ತಳದ ಫ್ಲಾಸ್ಕ್ ತೆಗೆದುಕೊಳ್ಳಿ (ಫ್ಲಾಸ್ಕ್ ದೊರೆಯದೇ ಇದ್ದರೆ ಬೀಕರ್ ಬಳಸಿ). ಇದರ 2/3 ಭಾಗದಷ್ಟು ನೀರನ್ನು ತುಂಬಿ, ತ್ರಿಪಾದ ಸ್ತಂಭದ ಮೇಲಿಡಿ ಅಥವಾ ಫ್ಲಾಸ್ಕ್‍ನ ಕೆಳಗೆ ಮೇಣದ ಬತ್ತಿ ಹಿಡಿದು ಕಾಯಿಸುವ ವ್ಯವಸ್ಥೆ ಮಾಡಿ. ಫ್ಲಾಸ್ಕ್‍ನ ನೀರು ನಿಶ್ಚಲ ಸ್ಥಿತಿಗೆ ಬಂದ ನಂತರ ಒಂದು ಕೊಳವೆಯ ಮೂಲಕ ಎಚ್ಚರದಿಂದ ಪೊಟ್ಯಾಸಿಯಮ್ ಪರ್ಮಾಂಗನೇಟ್‍ನ ಒಂದು ಹರಳನ್ನು ಫ್ಲಾಸ್ಕ್‍ನ ತಳದಲ್ಲಿ ಇರಿಸಿ. ಈಗ ಹರಳಿನ ಕೆಳಗೆ ಸರಿಯಾಗಿ ಜ್ವಾಲೆಯು ಉರಿಯುವಂತೆ ಕಾಯಿಸಿ. ಚಿತ್ರ 4.9 ನೀರಿನಲ್ಲಿ ಉಷ್ಣ ಸಂವಹನ ನೀವು ಗಮನಿಸಿದ ಅಂಶಗಳನ್ನು ನಿಮ್ಮ ನೋಟ್‍ಪುಸ್ತಕದಲ್ಲಿ ಬರೆಯಿರಿ ಮತ್ತು ಅದರ ಚಿತ್ರವನ್ನು ಬಿಡಿಸಿ (ಚಿತ್ರ 4.9).

ಚಿತ್ರ 4.9 ನೀರಿನಲ್ಲಿ ಉಷ್ಣ ಸಂವಹನ

ನೀರನ್ನು ಕಾಯಿಸಿದಾಗ ಬೆಂಕಿಯ ಜ್ವಾಲೆಯ ಹತ್ತಿರದ ನೀರು ಬಿಸಿಯಾಗುತ್ತದೆ. ಬಿಸಿಯಾದ ನೀರು ಮೇಲೇರುತ್ತದೆ. ಅಕ್ಕಪಕ್ಕದ ತಣ್ಣನೆಯ ನೀರು ಕೆಳಗಿನ ಉಷ್ಣ ಆಕರದ ಕಡೆಗೆ ಪ್ರವಹಿಸುತ್ತದೆ. ಈ ನೀರೂ ಬಿಸಿಯಾಗುತ್ತದೆ ಮತ್ತು ಮೇಲೇರುತ್ತದೆ. ಪುನಃ ಅಕ್ಕಪಕ್ಕದ ನೀರು ಕೆಳಗೆ ಬರುತ್ತದೆ. ಎಲ್ಲ ನೀರೂ ಬಿಸಿಯಾಗುವವರೆಗೆ ಈ ಪ್ರಕ್ರಿಯೆಯು ಮುಂದುವರಿಯುತ್ತದೆ. ಈ ರೀತಿಯ ಉಷ್ಣ ಪ್ರಸಾರ ವಿಧಾನವನ್ನು ಸಂವಹನ (convection) ಎನ್ನುವರು.
ಗಾಳಿಯಲ್ಲಿ ಉಷ್ಣವು ಹೇಗೆ ಪ್ರಸಾರವಾಗುತ್ತದೆ? ಯಾವ ದಿಕ್ಕಿನಲ್ಲಿ ಹೊಗೆಯು ಹೋಗುತ್ತದೆ?
ಉಷ್ಣ ಆಕರದ ಬಳಿಯ ಗಾಳಿಯು ಬಿಸಿಯಾಗಿ ಮೇಲೇರುತ್ತದೆ. ಈ ಸ್ಥಳವನ್ನು ಅಕ್ಕಪಕ್ಕದ ಗಾಳಿ ಆಕ್ರಮಿಸುತ್ತದೆ. ಈ ರೀತಿ ಗಾಳಿ ಬಿಸಿಯಾಗುತ್ತದೆ. ಕೆಳಗಿನ ಚಟುವಟಿಕೆ ಇದನ್ನು ದೃಢಪಡಿಸುತ್ತದೆ.

ಚಟುವಟಿಕೆ 4.9
ಒಂದು ಮೇಣದ ಬತ್ತಿಯನ್ನು ಹೊತ್ತಿಸಿ, ನಿಮ್ಮ ಒಂದು ಕೈಯನ್ನು ಜ್ವಾಲೆಯ ಮೇಲೆ, ಮತ್ತೊಂದನ್ನು ಪಕ್ಕದಲ್ಲಿ ಹಿಡಿಯಿರಿ (ಚಿತ್ರ 4.10). ನಿಮ್ಮ ಎರಡೂ ಕೈಗಳಿಗೆ ಸಮಾನವಾಗಿ ಬಿಸಿಯ ಅನುಭವವಾಗುವುದೆ? ಇಲ್ಲವಾದರೆ ಯಾವ ಕೈಗೆ ಹೆಚ್ಚು ಬಿಸಿಯ ಅನುಭವವಾಗುತ್ತಿದೆ? ಹೀಗೇಕೆ?

ಚಿತ್ರ 4.10 ಸಂವಹನದಿಂದ ಗಾಳಿಯಲ್ಲಿ ಉಷ್ಣ ಪ್ರಸಾರ

ಎಚ್ಚರವಹಿಸಿ. ನಿಮ್ಮ ಕೈಗಳು ಸುಡದಂತೆ ಜ್ವಾಲೆಯಿಂದ ಸುರಕ್ಷಿತ ಅಂತರದಲ್ಲಿರಲಿ.

ಮೇಲ್ಮುಖ ಉಷ್ಣ ಸಂವಹನದಿಂದ ಗಾಳಿಯು ಬಿಸಿಯಾಗುತ್ತದೆ ಎಂಬುದನ್ನು ಗಮನಿಸಿ. ಆದ್ದರಿಂದ ಜ್ವಾಲೆಯ ಮೇಲೆ ಹಿಡಿದ ಕೈಗೆ ಬಿಸಿಯ ಅನುಭವವಾಗುತ್ತದೆ. ಆದರೆ ಪಕ್ಕಕ್ಕೆ ಉಷ್ಣ ಸಂವಹನವಾಗದೇ ಇರುವುದರಿಂದ ಇಲ್ಲಿನ ಗಾಳಿಯು ಮೇಲ್ಭಾಗದ ಗಾಳಿಗಿಂತ ಹೆಚ್ಚು ಬಿಸಿ ಎನಿಸುವುದಿಲ್ಲ.
ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರು ಕುತೂಹಲಕಾರಿಯಾದ ಒಂದು ವಿದ್ಯಮಾನವನ್ನು ಅನುಭವಿಸುವರು. ಹಗಲಿನಲ್ಲಿ ಭೂಮಿಯು ನೀರಿಗಿಂತ ವೇಗವಾಗಿ ಬಿಸಿಯಾಗುತ್ತದೆ. ಬಿಸಿಯು ಹೆಚ್ಚಾಗಿ ಭೂಮಿಯ ಮೇಲಿನ ಗಾಳಿಯು ಮೇಲೇರುತ್ತದೆ. ಇದರ ಜಾಗವನ್ನು ಆಕ್ರಮಿಸಲು ಸಮುದ್ರದ ಮೇಲಿನ ತಂಪಾದ ಗಾಳಿಯು ಭೂಮಿಯ ಕಡೆಗೆ ನುಗ್ಗುತ್ತದೆ. ಭೂಮಿಯ ಮೇಲಿನ ಬಿಸಿಗಾಳಿಯು ಸಮುದ್ರದ ಕಡೆಗೆ ಚಲಿಸಿ, ಅದರ ಚಕ್ರವನ್ನು ಪೂರ್ಣಗೊಳಿಸುತ್ತದೆ (ಚಿತ್ರ 4.11). ಸಮುದ್ರದಿಂದ ಬೀಸುವ ಗಾಳಿಯನ್ನು ಕಡಲ್ಗಾಳಿ (sea breeze) ಎನ್ನುವರು. ಸಮುದ್ರದ ತಂಗಾಳಿ ಒಳಬರುವಂತೆ ಕರಾವಳಿ ತೀರ ಪ್ರದೇಶಗಳ ಮನೆಯ ಕಿಟಕಿಗಳನ್ನು ಸಮುದ್ರಕ್ಕೆ ಎದುರಾಗಿ ನಿರ್ಮಿಸುವರು. ರಾತ್ರಿಯ ವೇಳೆಯಲ್ಲಿ ಇದಕ್ಕೆ ವಿರುದ್ಧವಾಗಿ ಭೂಮಿಗಿಂತಲೂ ನೀರು ನಿಧಾನವಾಗಿ ತಣಿಯುತ್ತದೆ. ಆದ್ದರಿಂದ ಭೂಮಿಯ ಮೇಲಿನ ತಂಗಾಳಿ ಸಮುದ್ರದ ಕಡೆಗೆ ಚಲಿಸುತ್ತದೆ. ಇದನ್ನು ನೆಲಗಾಳಿ (land breeze) ಎನ್ನುವರು.

ಚಿತ್ರ 4.11 ಕಡಲ್ಗಾಳಿ ಮತ್ತು ನೆಲಗಾಳಿ

ಬಿಸಿಲಿನಲ್ಲಿ ನಾವು ಹೊರಗೆ ಬಂದಾಗ ಬೆಚ್ಚನೆಯ ಅನುಭವವಾಗುತ್ತದೆ. ಸೂರ್ಯನಿಂದ ಉಷ್ಣವು ನಮ್ಮನ್ನು ಹೇಗೆ ತಲುಪುತ್ತದೆ? ಭೂಮಿ ಮತ್ತು ಸೂರ್ಯನ ನಡುವಿನ ಅವಕಾಶದಲ್ಲಿ ಬಹುಪಾಲು ವಾಯು ಮಾಧ್ಯಮ ಇಲ್ಲದೇ ಇರುವುದರಿಂದ ಉಷ್ಣವು ವಹನ ಅಥವಾ ಸಂವಹನದಿಂದ ನಮ್ಮನ್ನು ತಲುಪಲಾರದು. ವಿಕಿರಣ (radiation) ಎಂಬ ಮತ್ತೊಂದು ಪ್ರಕ್ರಿಯೆಯಿಂದ ಸೂರ್ಯನ ಉಷ್ಣವು ನಮ್ಮನ್ನು ತಲುಪುತ್ತದೆ. ವಿಕಿರಣದಿಂದ ಉಷ್ಣ ವರ್ಗಾವಣೆಯಾಗಲು ಯಾವುದೇ ಮಾಧ್ಯಮದ ಅಗತ್ಯವಿಲ್ಲ. ಮಾಧ್ಯಮ ಇದ್ದರೂ ಅಥವಾ ಇಲ್ಲದಿದ್ದರೂ ಇದು ನಡೆಯುತ್ತದೆ. ನಾವು ಕೋಣೆ ತಾಪಕ (room heater) ದ ಮುಂದೆ ಕುಳಿತಾಗ ವಿಕಿರಣ ಕ್ರಿಯೆಯಿಂದ ಬಿಸಿಯ ಅನುಭವವಾಗುತ್ತದೆ. ಬಿಸಿಯಾದ ಪಾತ್ರೆಯನ್ನು ಬೆಂಕಿ ಜ್ವಾಲೆಯಿಂದ ದೂರ ಇಟ್ಟಾಗ, ಅದು ತನ್ನ ಸುತ್ತಮುತ್ತಲಿನ ಪ್ರದೇಶಕ್ಕೆ ವಿಕಿರಣ ಕ್ರಿಯೆಯಿಂದ ಉಷ್ಣವನ್ನು ವರ್ಗಾಯಿಸುತ್ತದೆ. ನಮ್ಮ ದೇಹವೂ ವಿಕಿರಣದಿಂದಲೇ ಸುತ್ತಲಿನ ಪ್ರದೇಶಕ್ಕೆ ಉಷ್ಣವನ್ನು ಬಿಟ್ಟುಕೊಡುತ್ತದೆ ಹಾಗೂ ಪಡೆದುಕೊಳ್ಳುತ್ತದೆ.

ಬಿಸಿಯಾದ ಎಲ್ಲಾ ವಸ್ತುಗಳು ಉಷ್ಣವನ್ನು ಹೊರಸೂಸುತ್ತವೆ. ಕೆಲವು ವಸ್ತುಗಳು ಉಷ್ಣದ ಸಂಪರ್ಕಕ್ಕೆ ಬಂದಾಗ ಉಷ್ಣದ ಸ್ವಲ್ಪ ಭಾಗವನ್ನು ಪ್ರತಿಫಲಿಸುತ್ತವೆ. ಸ್ವಲ್ಪ ಭಾಗವನ್ನು ಹೀರಿಕೊಳ್ಳುತ್ತವೆ. ಮತ್ತೆ ಸ್ವಲ್ಪ ಭಾಗವನ್ನು ಪ್ರಸಾರ ಮಾಡುತ್ತವೆ. ಯಾವುದೇ ವಸ್ತುವಿನ ತಾಪವು ತಾನು ಹೀರಿಕೊಂಡ ಉಷ್ಣದಿಂದ ಹೆಚ್ಚಾಗುತ್ತದೆ. ಬಿಸಿಲಿನಲ್ಲಿ ನೀವು ಹೊರಗೆ ಹೋಗುವಾಗ ಛತ್ರಿ ಬಳಸಲು ಏಕೆ ಸಲಹೆ ನೀಡುವರು?

4.5 ಬೇಸಿಗೆ ಮತ್ತು ಚಳಿಗಾಲದಲ್ಲಿ ನಾವು ಧರಿಸುವ ಬಟ್ಟೆಯ ವಿಧಗಳು

ಬೇಸಿಗೆ ಕಾಲದಲ್ಲಿ ತಿಳಿ-ಬಿಳಿ ಬಣ್ಣದ ಮತ್ತು ಚಳಿಗಾಲದಲ್ಲಿ ದಟ್ಟವಾದ ಬಣ್ಣದ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತೇವೆ ಎಂಬುದು ನಿಮಗೆ ತಿಳಿದಿದೆ. ಹೀಗೇಕೆ? ಇದನ್ನು ತಿಳಿದುಕೊಳ್ಳೋಣ.

ಚಟುವಟಿಕೆ 4.10
ಒಂದೇ ರೀತಿಯ ಎರಡು ಲೋಹದ ಪಾತ್ರೆಗಳನ್ನು ತೆಗೆದುಕೊಳ್ಳಿ. ಒಂದರ ಹೊರ ಮೇಲ್ಮೈಗೆ ಕಪ್ಪು ಬಣ್ಣ ಹಾಗೂ ಮತ್ತೊಂದಕ್ಕೆ ಬಿಳಿಯ ಬಣ್ಣ ಹಚ್ಚಿ (ಚಿತ್ರ 4.12). ಎರಡರಲ್ಲೂ ಸಮಪ್ರಮಾಣದಲ್ಲಿ ನೀರು ತುಂಬಿ ಮಧ್ಯಾಹ್ನದ ಬಿಸಿಲಿನಲ್ಲಿ ಸುಮಾರು ಒಂದು ಗಂಟೆಯ ಕಾಲ ಇಡಿ. ಎರಡರಲ್ಲೂ ನೀರಿನ ತಾಪವನ್ನು ಅಳೆಯಿರಿ. ತಾಪದಲ್ಲೇನಾದರೂ ವ್ಯತ್ಯಾಸ ನಿಮಗೆ ಕಂಡುಬರುವುದೆ?

ಚಿತ್ರ 4.12 ಕಪ್ಪು ಮತ್ತು ಬಿಳಿ ಮೇಲ್ಮೈನ ಪಾತ್ರೆಗಳು

ನಮ್ಮ ಮನೆಯನ್ನು ಬೆಚ್ಚಗೆ ಅಥವಾ ತಂಪಾಗಿಡಲು ವಿದ್ಯುತ್, ಕಟ್ಟಿಗೆ ಮತ್ತು ಕಲ್ಲಿದ್ದಲಿನಂತಹ ಇಂಧನಗಳನ್ನು ಸಾಮಾನ್ಯವಾಗಿ ಬಳಸುತ್ತೇವೆ. ಹೊರಗಿನ ಬಹುಪಾಲು ಚಳಿ ಅಥವಾ ಧಗೆಯಿಂದ ತೊಂದರೆಗೆ ಒಳಗಾಗದಂತೆ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವೆ? ಕಟ್ಟಡದ ಹೊರಗೋಡೆಗಳು ಗಾಳಿಯ ಪದರಗಳನ್ನು ಹಿಡಿದಿಟ್ಟುಕೊಳ್ಳುವಂತೆ ನಿರ್ಮಿಸುವುದರಿಂದ ಇದು ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ದೊರೆಯುತ್ತಿರುವ ಟೊಳ್ಳಾದ ಇಟ್ಟಿಗೆ (hollow bricks) ಗಳನ್ನು ಬಳಸುವುದು ಈ ರೀತಿ ಮಾಡಬಹುದಾದ ಒಂದು ವಿಧಾನವಾಗಿದೆ.

ಯಾವ ಪಾತ್ರೆಯ ನೀರು ಹೆಚ್ಚು ಬಿಸಿಯಾಗಿದೆ? ಎರಡೂ ಪಾತ್ರೆಗಳ ನೀರನ್ನು ಮುಟ್ಟಿನೋಡಿ ವ್ಯತ್ಯಾಸ ತಿಳಿಯಬಹುದು.

ಚಟುವಟಿಕೆ 4.11
ಚಟುವಟಿಕೆ 4.10ರಲ್ಲಿ ಬಳಸಿದ ಪಾತ್ರೆಗಳಿಗೆ ಸಮಾನ ತಾಪದ (ಸುಮಾರು 60o C) ಬಿಸಿನೀರನ್ನು ಸಮ ಪ್ರಮಾಣದಲ್ಲಿ ತುಂಬಿ. ಈ ಪಾತ್ರೆಗಳನ್ನು ಕೊಠಡಿಯ ಒಳಗೆ ಅಥವಾ ನೆರಳಿನಲ್ಲಿ ಇಡಿ. 10-15 ನಿಮಿಷಗಳ ನಂತರ ತಾಪವನ್ನು ಅಳೆಯಿರಿ. ಎರಡೂ ಪಾತ್ರೆಗಳ ನೀರಿನ ತಾಪ ಸಮಾನ ಪ್ರಮಾಣದಲ್ಲಿ ಕಡಿಮೆಯಾಗಿದೆಯೆ?
ಬೇಸಿಗೆ ಕಾಲದಲ್ಲಿ ತಿಳಿ-ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಮತ್ತು ಚಳಿಗಾಲದಲ್ಲಿ ದಟ್ಟವಾದ ಬಣ್ಣದ ಬಟ್ಟೆಗಳನ್ನು ಧರಿಸುವುದು ಏಕೆ ಆರಾಮದಾಯಕ ಎಂದು ಈ ಚಟುವಟಿಕೆಗಳಿಂದ ತಿಳಿಯಿತೆ? ದಟ್ಟವಾದ ಬಣ್ಣದ ಮೇಲ್ಮೈಗಳು ಹೆಚ್ಚು ಉಷ್ಣವನ್ನು ಹೀರಿಕೊಳ್ಳುತ್ತವೆ. ಆದ್ದರಿಂದಲೇ ಚಳಿಗಾಲದಲಿ ದಟ್ಟವಾದ ಬಣ್ಣದ ಬಟ್ಟೆಗಳು ನಮಗೆ ಆರಾಮದಾಯಕ ಎನಿಸುತ್ತವೆ. ತಿಳಿ-ಬಿಳಿ ಬಣ್ಣದ ಬಟ್ಟೆಗಳು ತಮ್ಮ ಮೇಲೆ ಬೀಳುವ ಬಹುಪಾಲು ಉಷ್ಣವನ್ನು ಪ್ರತಿಫಲಿಸುತ್ತವೆ. ಆದ್ದರಿಂದಲೇ ಇವುಗಳನ್ನು ಬೇಸಿಗೆಯಲ್ಲಿ ಧರಿಸುವುದು ಹೆಚ್ಚು ಆರಾಮದಾಯಕ ಎನಿಸುತ್ತದೆ.

ಉಣ್ಣೆಯ ಬಟ್ಟೆಗಳು ಚಳಿಗಾಲದಲ್ಲಿ ನಮ್ಮನ್ನು ಬೆಚ್ಚಗೆ ಇರಿಸುತ್ತವೆ.
ಚಳಿಗಾಲದಲ್ಲಿ ನಾವು ಉಣ್ಣೆಯ ಬಟ್ಟೆಗಳನ್ನು ಬಳಸುತ್ತೇವೆ. ಉಣ್ಣೆಯು ಅಲ್ಪ ಉಷ್ಣವಾಹಕ. ಅಲ್ಲದೇ ಉಣ್ಣೆಯ ಎಳೆಗಳ ನಡುವೆ ಹಿಡಿದಿಡಲ್ಪಟ್ಟ ಗಾಳಿಯು ನಮ್ಮ ದೇಹದಿಂದ ಸುತ್ತಮುತ್ತಲಿನ ಪ್ರದೇಶಕ್ಕೆ ಉಷ್ಣದ ವರ್ಗಾವಣೆಯನ್ನು ತಡೆಯುತ್ತದೆ. ಇದರಿಂದ ನಮಗೆ ಬೆಚ್ಚನೆಯ ಅನುಭವವಾಗುತ್ತದೆ.
ಚಳಿಗಾಲದಲ್ಲಿ ಹೊದ್ದುಕೊಳ್ಳಲು ನಿಮಗೆ ಒಂದು ದಪ್ಪ ಕಂಬಳಿ ಅಥವಾ ಎರಡು ತೆಳುವಾದ ಕಂಬಳಿಗಳನ್ನು ಜೋಡಿಸಿ ನೀಡಿದರೆ ನೀವು ಯಾವುದನ್ನು ಆಯ್ಕೆ ಮಾಡುವಿರಿ? ಏಕೆ? ಕಂಬಳಿಗಳ ನಡುವೆ ಗಾಳಿಯ ಪದರವಿರುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ.

ಪ್ರಮುಖ ಪದಗಳು
ಸೆಲ್ಸಿಯಸ್ ಅಳತೆಪಟ್ಟಿ
ಅವಾಹಕ
ಕಡಲ್ಗಾಳಿ
ವಹನ
ನೆಲಗಾಳಿ
ತಾಪ
ವಾಹಕ
ವಿಕಿರಣ
ತಾಪಮಾಪಕ
ಸಂವಹನ.

ನೀವು ಕಲಿತಿರುವುದು

• ವಸ್ತುವಿನ ಉಷ್ಣತೆಯ ಅಳತೆಗೆ ಯಾವಾಗಲೂ ನಮ್ಮ ಸ್ಪರ್ಶಜ್ಞಾನವೊಂದೆ ವಿಶ್ವಾಸಾರ್ಹ ಮಾರ್ಗವಲ್ಲ.
• ವಸ್ತುವಿನ ಉಷ್ಣತೆಯ ಮಟ್ಟದ ಅಳತೆಯೇ ತಾಪ.
• ತಾಪವನ್ನು ಅಳೆಯಲು ಬಳಸುವ ಉಪಕರಣ ತಾಪಮಾಪಕ.
• ದೇಹದ ತಾಪವನ್ನು ಅಳೆಯಲು ವೈದ್ಯಕೀಯ ತಾಪಮಾಪಕವನ್ನು ಬಳಸುವರು. ಈ ತಾಪಮಾಪಕದ ವ್ಯಾಪ್ತಿ 35o C ನಿಂದ 42o C. ಇತರೆ ಉದ್ದೇಶಗಳಿಗಾಗಿ ನಾವು ಪ್ರಯೋಗಶಾಲಾ ತಾಪಮಾಪಕವನ್ನು ಬಳಸುತ್ತೇವೆ. ಈ ತಾಪಮಾಪಕದ ವ್ಯಾಪ್ತಿ ಸಾಮಾನ್ಯವಾಗಿ -10o ಅ ರಿಂದ 110o C.
• ಮಾನವನ ದೇಹದ ಸಾಮಾನ್ಯ ತಾಪ 37o ಅ.
• ಉಷ್ಣವು ಹೆಚ್ಚು ತಾಪದ ವಸ್ತುವಿನಿಂದ ಕಡಿಮೆ ತಾಪದ ವಸ್ತುವಿಗೆ ಹರಿಯುತ್ತದೆ. ಒಂದು ವಸ್ತುವಿನಿಂದ ಮತ್ತೊಂದು ವಸ್ತುವಿಗೆ ಉಷ್ಣ ಪ್ರಸಾರವಾಗಲು ಮೂರು ವಿಧಾನಗಳಿವೆ ಅವುಗಳೆಂದರೆ ವಹನ, ಸಂವಹನ ಮತ್ತು ವಿಕಿರಣ.
• ಘನವಸ್ತುಗಳಲ್ಲಿ ಉಷ್ಣವು ಸಾಮಾನ್ಯವಾಗಿ ವಹನದಿಂದ ಪ್ರಸಾರವಾಗುತ್ತದೆ. ದ್ರವ ಮತ್ತು ಅನಿಲಗಳಲ್ಲಿ ಉಷ್ಣವು ಸಂವಹನದಿಂದ ಪ್ರಸಾರವಾಗುತ್ತದೆ. ವಿಕಿರಣದಿಂದ ಉಷ್ಣ ಪ್ರಸಾರವಾಗಲು ಮಾಧ್ಯಮದ ಅಗತ್ಯವಿಲ್ಲ.
• ತಮ್ಮ ಮೂಲಕ ಸುಲಭವಾಗಿ ಉಷ್ಣವನ್ನು ಹರಿಯಲು ಬಿಡುವ ವಸ್ತುಗಳೇ ಉಷ್ಣವಾಹಕಗಳು.
• ತಮ್ಮ ಮೂಲಕ ಸುಲಭವಾಗಿ ಉಷ್ಣವನ್ನು ಹರಿಯಲು ಬಿಡದೇ ಇರುವ ವಸ್ತುಗಳೇ ಅವಾಹಕಗಳು.
• ದಟ್ಟವಾದ ಬಣ್ಣದ ವಸ್ತುಗಳು ತಿಳಿಯಾದ ಬಣ್ಣದ ವಸ್ತುಗಳಿಗಿಂತ ಹೆಚ್ಚು ಉಷ್ಣವನ್ನು ಹೀರಿಕೊಳ್ಳುತ್ತವೆ. ಇದೇ ಕಾರಣದಿಂದ ಬೇಸಿಗೆ ಕಾಲದಲ್ಲಿ ತಿಳಿ-ಬಿಳಿ ಬಣ್ಣದ ಬಟ್ಟೆಗಳು ಹೆಚ್ಚು ಆರಾಮದಾಯಕ ಎನಿಸುತ್ತವೆ.
• ಉಣ್ಣೆಯ ಬಟ್ಟೆಗಳು ಚಳಿಗಾಲದಲ್ಲಿ ನಮ್ಮನ್ನು ಬೆಚ್ಚಗೆ ಇರಿಸುತ್ತವೆ. ಏಕೆಂದರೆ ಉಣ್ಣೆಯು ಒಂದು ಅಲ್ಪ ಉಷ್ಣವಾಹಕ ಮತ್ತು ಅದು ತನ್ನ ಎಳೆಗಳ ನಡುವೆ ಗಾಳಿಯನ್ನು ಹಿಡಿದಿಟ್ಟುಕೊಳ್ಳುತ್ತದೆ.

ವಿಡಿಯೋ ಪಾಠಗಳು

7th Class | Science – Part-1
7th Class | Science – Part-2
7th Class | Science – Part-3

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

Heat Class 7 Science – Thermometer – Clinical Thermometer – Measurement of Temperature
Conduction of Heat in Metals – Experiment
Convection of heat in water and air
Sea Breeze and land Breezes

ವಿಸ್ತರಿತ ಕಲಿಕೆ – ಚಟುವಟಿಕೆಗಳು ಮತ್ತು ಯೋಜನೆಗಳು

1) ನಿಮ್ಮ ಹತ್ತಿರದ ಆರೋಗ್ಯ ಕೇಂದ್ರ ಅಥವಾ ವೈದ್ಯರ ಬಳಿ ಹೋಗಿ, ರೋಗಿಗಳ ದೇಹದ ತಾಪ ಅಳೆಯುವುದನ್ನು ಗಮನಿಸಿ. ಇವುಗಳ ಬಗ್ಗೆ ವಿಚಾರಿಸಿ.

(ಎ) ತಾಪಮಾಪಕವನ್ನು ಬಳಸುವ ಮುನ್ನ ಒಂದು ದ್ರವದಲ್ಲಿ ಅದ್ದುವರು. ಏಕೆ?

(ಬಿ) ತಾಪಮಾಪಕವನ್ನು ನಾಲಿಗೆಯ ಕೆಳಗೆ ಇಡುವುದು ಏಕೆ?

(ಸಿ) ತಾಪಮಾಪಕವನ್ನು ಬಾಯಿಯ ಬದಲಾಗಿ ದೇಹದ ಬೇರೆ ಭಾಗಗಳಲ್ಲಿ ಇಟ್ಟು ತಾಪವನ್ನು ಅಳೆಯಬಹುದೆ?

(ಡಿ) ದೇಹದ ಬೇರೆ ಬೇರೆ ಭಾಗಗಳ ತಾಪ ಒಂದೇ ಆಗಿದೆಯೇ ಅಥವಾ ಬೇರೆಯಾಗಿದೆಯೆ? ನಿಮ್ಮ ಮನಸ್ಸಿಗೆ ಹೊಳೆದ ಇತರೆ ಪ್ರಶ್ನೆಗಳನ್ನು ಸೇರಿಸಿಕೊಳ್ಳಬಹುದು.

How to check body temperature fever with mercury thermometer

2) ಪಶುವೈದ್ಯರನ್ನು (ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು) ಭೇಟಿ ಮಾಡಿ ಚರ್ಚಿಸಿ. ಸಾಕುಪ್ರಾಣಿಗಳು ಮತ್ತು ಪಕ್ಷಿಗಳ ದೇಹದ ಸಾಮಾನ್ಯ ತಾಪವನ್ನು ತಿಳಿದುಕೊಳ್ಳಿ.

1. Dog – 38.9°C 

2. Horse – 38°C

3. Rabbit – 38.3°C 

4. Cow – 38.6°C 

5. Cat – 39°C 

6. Goat- 39.7°C 

7. Pigeon – 44.1°C 

8. Crow – 40°C 

9. Duck – 40.7°C 

10. Karaknath – 41.8°C 

11. Parrot – 41°C

3) ಒಂದು ಕಬ್ಬಿಣದ ಸರಳಿನ ಸುತ್ತ ತೆಳುವಾದ ಕಾಗದವನ್ನು ಬಿಗಿಯಾಗಿ ಸುತ್ತಿ. ಸರಳನ್ನು ತಿರುಗಿಸುತ್ತಾ ಮೇಣದ ಬತ್ತಿಯಿಂದ ಕಾಗದವನ್ನು ಸುಡಲು ಪ್ರಯತ್ನಿಸಿ. ಬೆಂಕಿ ಹೊತ್ತಿಕೊಳ್ಳುವುದೆ? ನೀವು ಗಮನಿಸಿದ್ದನ್ನು ವಿವರಿಸಿ.

ಕಬ್ಬಿಣದ ರಾಡ್ ಅನ್ನು ನಿರಂತರವಾಗಿ ತಿರುಗಿಸುವಾಗ ಕಾಗದವನ್ನು ಸುಡುವುದಿಲ್ಲ ಏಕೆಂದರೆ ಕಬ್ಬಿಣವು ಶಾಖದ ಉತ್ತಮ ವಾಹಕವಾಗಿರುವುದರಿಂದ, ಶಾಖವು ಅವುಗಳ ಮೂಲಕ ಹಾದುಹೋಗಲು ಅನುವು ಮಾಡಿಕೊಡುತ್ತದೆ. ಪರಿಣಾಮವಾಗಿ ಶಾಖವನ್ನು ಕಾಗದದಿಂದ ತೆಗೆಯಲಾಗುತ್ತದೆ ಮತ್ತು ಕಾಗದವು ಸುಡುವುದಿಲ್ಲ.

ಕಾಗದದ ಒಂದು ಹಾಳೆಯನ್ನು ತೆಗೆದುಕೊಳ್ಳಿ. ಚಿತ್ರ 4.14ರಲ್ಲಿ ತೋರಿಸಿದಂತೆ ಒಂದು ಸುರುಳಿಯನ್ನು ಬರೆಯಿರಿ. ಗೆರೆಯ ಹಾದಿಯಲ್ಲಿಯೇ ಕಾಗದವನ್ನು ಕತ್ತರಿಸಿ, ಚಿತ್ರದಲ್ಲಿರುವಂತೆ ಉರಿಯುವ ಮೇಣದ ಬತ್ತಿಯ ಮೇಲೆ ತೂಗುಬಿಡಿ. ಏನಾಗುವುದೆಂದು ಗಮನಿಸಿ. ವಿವರಣೆಯ ಬಗ್ಗೆ ಆಲೋಚಿಸಿ.

Convection spiral

ಅಗಲವಾದ ಬಾಯಿ ಇರುವ ಒಂದೇ ರೀತಿಯ ಪಾರದರ್ಶಕ (transparent)ವಾದ ಎರಡು ಗಾಜಿನ ಸೀಸೆಗಳನ್ನು ತೆಗೆದುಕೊಳ್ಳಿ. ಒಂದು ಸೀಸೆಯಲ್ಲಿ ಪೊಟ್ಯಾಸಿಯಮ್ ಪರ್ಮಾಂಗನೇಟ್‍ನ ಕೆಲವು ಹರಳು ಅಥವಾ ಕೆಲವು ಹನಿ ಶಾಯಿಯನ್ನು ಹಾಕಿ. ಒಂದು ಸೀಸೆಗೆ ಬಿಸಿನೀರು ತುಂಬಿ ಇನ್ನೊಂದು ಸೀಸೆಗೆ ತಣ್ಣೀರು ತುಂಬಿ. ತಣ್ಣೀರಿನ ಸೀಸೆಯ ಬಾಯನ್ನು ಅಂಚೆ ಕಾಗದದಂತಹ ದಪ್ಪ ಕಾಗದದಿಂದ ಮುಚ್ಚಿ. ಒಂದು ಕೈಯಿಂದ ಆ ಸೀಸೆಯನ್ನು ಹಿಡಿದು ಮತ್ತೊಂದು ಕೈಯಿಂದ ಅಂಚೆಕಾಗದವನ್ನು ಒತ್ತಿ ಹಿಡಿಯಿರಿ. ಆ ಸೀಸೆಯನ್ನು ತಲೆಕೆಳಗೆ ಮಾಡಿ ಬಿಸಿನೀರಿರುವ ಸೀಸೆಯ ಮೇಲೆ ಇಟ್ಟು, ಗಟ್ಟಿಯಾಗಿ ಒತ್ತಿ ಹಿಡಿದು ಅಂಚೆಕಾರ್ಡನ್ನು ಎಳೆದುಕೊಳ್ಳಲು ಮತ್ತೊಬ್ಬರಿಗೆ ತಿಳಿಸಿ. ಏನಾಗುತ್ತದೆಂದು ಗಮನಿಸಿ. ವಿವರಿಸಿ.

ಕಾರ್ಡ್ ತೆಗೆದ ತಕ್ಷಣ ಬಣ್ಣದ ಬಿಸಿ ನೀರು ಮೇಲಕ್ಕೆ ಚಲಿಸುತ್ತದೆ ಮತ್ತು ತಣ್ಣಿರು ಕೆಳಕ್ಕೆ ಚಲಿಸುತ್ತದೆ. ಅಂದರೆ, ಪ್ರಸರಣ ನಡೆಯುತ್ತದೆ.

ಬಿಸಿ ದ್ರವ (ನೀರು) ತಣ್ಣನೆಯ ದ್ರವಕ್ಕಿಂತ (ನೀರು) ಹಗುರವಾಗಿರುವುದು ಇದಕ್ಕೆ ಕಾರಣ.

ಗಮನಿಸಿ : ದ್ರವವು ಎಲ್ಲಾ ದ್ರವಗಳು ಮತ್ತು ಅನಿಲಗಳಿಗೆ ಸಾಮಾನ್ಯ ಪದವಾಗಿದೆ.

ನಿಮಗಿದು ಗೊತ್ತೆ?
1742ರಲ್ಲಿ ಸೆಲ್ಸಿಯಸ್ ಅಳತೆಪಟ್ಟಿಯನ್ನು ಸ್ವೀಡನ್ನಿನ ಖಗೋಳಜ್ಞ ಆಂಡರ್ಸ್ ಸೆಲ್ಸಿಯಸ್ ರೂಪಿಸಿದರು. ಆಶ್ಚರ್ಯಕರವಾಗಿ ಇವರು ನೀರಿನ ಕುದಿ ಬಿಂದುವನ್ನು 0o C ಎಂದು ಮತ್ತು ನೀರಿನ ಘನೀಕರಣ ಬಿಂದುವನ್ನು 100o C ಎಂದೂ ನಿಗದಿಪಡಿಸಿದ್ದರು. ಆದರೆ ಈ ಕ್ರಮ ಶೀಘ್ರದಲ್ಲೇ ಅದಲು ಬದಲಾಯಿತು.