ಉತ್ತರ ಭಾರತದ ಪ್ರಾಚೀನ ರಾಜ ಮನೆತನಗಳು – ಅಧ್ಯಾಯ-12
ಪಾಠದ ಪರಿಚಯ
ಮೌರ್ಯ ಸಾಮ್ರಾಜ್ಯವು ಭಾರತದ ಪ್ರಥಮ ಐತಿಹಾಸಿಕ ಸಾಮ್ರಾಜ್ಯ. ವಿವಿಧ ಕ್ಷೇತ್ರಗಳಿಗೆ ಅದು ನೀಡಿದ ಕೊಡುಗೆ ಅಪೂರ್ವವಾದುದ್ದು. ಚಂದ್ರಗುಪ್ತ ಮೌರ್ಯ ಮತ್ತು ಅಶೋಕ ಈ ವಂಶದ ಹೆಸರಾಂತ ಸಾಮ್ರಾಟರು. ಇವರ ಜೀವನ ಮತ್ತು ಸಾಧನೆಗಳನ್ನು ವಿವರಿಸಲಾಗಿದೆ. ಕುಶಾನ ವಂಶದ ಪ್ರಸಿದ್ಧ ದೊರೆ ಕನಿಷ್ಕನ ಕೊಡುಗೆಗಳನ್ನೂ ಸ್ಮರಿಸಲಾಗಿದೆ. ನಂತರ ಗುಪ್ತರಲ್ಲಿ ಶ್ರೇಷ್ಠ ದೊರೆಯಾದ ಸಮುದ್ರಗುಪ್ತನ ದಿಗ್ವಿಜಯ ಮತ್ತು ಎರಡನೇ ಚಂದ್ರಗುಪ್ತನ ಕಾಲದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಅದ್ಭುತ ಮುನ್ನಡೆಯನ್ನು ವಿವರಿಸಲಾಗಿದೆ. ಹರ್ಷವರ್ಧನ ಸಂಕಷ್ಟಮಯ ಕಾಲದಲ್ಲಿ ಸಾಮ್ರಾಜ್ಯವನ್ನು ರಕ್ಷಿಸಿದ ಬಗೆ ಮತ್ತು ಬೌದ್ಧಧರ್ಮದ ಏಳಿಗೆಗೆ ಸಲ್ಲಿಸಿದ ಕಾಣಿಕೆಯನ್ನು ಪರಿಚಯಿಸಲಾಗಿದೆ. ಸಾ.ಶ. 620 ರಿಂದ ಸಾ.ಶ. 1200ರ ಕಾಲಾವಧಿಯ ಕಾರ್ಕೋಟ, ಅಹೋಮ್ ಹಾಗೂ ರಜಪೂತ ವಂಶಗಳ ಇತಿಹಾಸ, ಅವರ ಆರ್ಥಿಕ, ಸಾಮಾಜಿಕ, ಸಾಹಿತ್ಯಕ ಕೊಡುಗೆಗಳನ್ನು ತಿಳಿಸಲಾಗಿದೆ. ಜೊತೆಗೆ ರಜಪೂತರ ಪ್ರಮುಖ ವಂಶಗಳಾದ ಗುರ್ಜರ ಪ್ರತಿಹಾರರು, ಚೌಹಾಣರು, ಪಾಲರು, ಪ್ರತಿಹಾರರು
ಬಗ್ಗೆ ತಿಳಿಸಲಾಗಿದೆ.
ಮೌರ್ಯರು
ಮಕ್ಕಳೇ, ನಮ್ಮ ರಾಷ್ಟ್ರ ಧ್ವಜದ ನಡುವೆ ಒಂದು ಚಕ್ರವಿದೆ. ಅದರ ಹೆಸರೇನು ಗೊತ್ತೆ? ಅದೇ ಅಶೋಕ ಚಕ್ರ. ಪ್ರಗತಿಯ ಸಂಕೇತವಾಗಿ ನಮ್ಮ ರಾಷ್ಟ್ರಧ್ವಜದಲ್ಲಿ ಅದನ್ನು ಅಳವಡಿಸಲಾಗಿದೆ. ಹಾಗಾದರೆ ಈ
ಅಶೋಕ ಯಾರು? ಯಾವ ಮನೆತನಕ್ಕೆ ಸೇರಿದವನು? ಆ ಮನೆತನದ ಇತಿಹಾಸವೇನು? ಅಶೋಕನ ಕೊಡುಗೆಗಳೇನು? ಎಂಬುದನ್ನು ತಿಳಿಯೋಣ.

ಭಾರತದ ಮೊಟ್ಟಮೊದಲ ಸಾಮ್ರಾಜ್ಯ ಮೌರ್ಯ ಸಾಮ್ರಾಜ್ಯ. ಈ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯ.

ಚಂದ್ರಗುಪ್ತ ಮೌರ್ಯ
ಚಂದ್ರಗುಪ್ತ ಮೌರ್ಯ ಒಬ್ಬ ಸಾಹಸಿ ಯುವಕ. ತಕ್ಷಶಿಲೆಯ ವಿಷ್ಣುಗುಪ್ತನು ನಂದ ವಂಶದ ರಾಜನಾದ ಧನನಂದನಿಂದ ಅವಮಾನಿತನಾಗಿದ್ದನು. ಚಾಣಾಕ್ಷನೂ, ಕುಟಿಲ ತಂತ್ರಗಳಲ್ಲಿ ನಿಪುಣನೂ ಆದ ವಿಷ್ಣುಗುಪ್ತನಿಗೆ ಚಾಣಕ್ಯ, ಕೌಟಿಲ್ಯ ಎಂಬ ಹೆಸರುಗಳೂ ಇದ್ದವು. ಈತನು ಚಂದ್ರಗುಪ್ತ ಮೌರ್ಯನಿಗೆ ಸೈನಿಕ ಮತ್ತು ಯುದ್ಧ ತರಬೇತಿ ನೀಡಿ ಸೇನೆಯನ್ನು ಸಜ್ಜುಗೊಳಿಸಲು ನೆರವಾದನು. ಈ ವೇಳೆಗೆ ಧನನಂದನು ಪ್ರಜೆಗಳ ವಿಶ್ವಾಸ ಕಳೆದುಕೊಂಡಿದ್ದರಿಂದ ಸುಲುವಾಗಿ ಅವನನ್ನು ಸಿಂಹಾಸನದಿಂದ ಕೆಳಗಿಳಿಸಲು ಚಂದ್ರಗುಪ್ತ ಮೌರ್ಯನಿಗೆ ಸಾಧ್ಯವಾಯಿತು. ಹೀಗೆ ಚಂದ್ರಗುಪ್ರ ಮೌರ್ಯನು 2300 ವರ್ಷಗಳ ಹಿಂದೆ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿ ಪಾಟಲಿಪುತ್ರ (ಈಗಿನ ಬಿಹಾರದ ರಾಜಧಾನಿ ಪಾಟ್ನ) ವನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡನು.



ನಂತರ ಚಂದ್ರಗುಪ್ತ ಮೌರ್ಯನು ಬೃಹತ್ ಸೇನೆಯನ್ನು ಸಂಘಟಿಸಿ ವಾಯುವ್ಯ ಭಾರತದ ಕಡೆಗೆ ನುಗ್ಗಿದನು. ಮ್ಯಾಸಿಡೋನಿಯಾದ ದೊರೆ ಅಲೆಗ್ಸಾಂಡರನು ಈ ಮೊದಲು ಆಕ್ರಮಿಸಿಕೊಂಡಿದ್ದ ಪ್ರದೇಶಗಳನ್ನು ಅವನ ಪ್ರತಿನಿಧಿ ಸೆಲ್ಯೂಕಸ್ ನೋಡಿಕೊಳ್ಳುತ್ತಿದ್ದನು. ಚಂದ್ರಗುಪ್ತ ಮೌರ್ಯನ ಸೈನ್ಯದ ಎದುರು ಸೋತ ಸೆಲ್ಯೂಕಸ್ ಅವನೊಡನೆ ಒಪ್ಪಂದಕ್ಕೆ ಮುಂದಾದನು. ಆಫ್ಘಾನಿಸ್ತಾನ, ಬಲೂಚಿಸ್ತಾನ ಮತ್ತು ಸಿಂಧ್‍ನ ಪಶ್ಚಿಮ ಪ್ರದೇಶಗಳನ್ನು ಚಂದ್ರಗುಪ್ತ ಮೌರ್ಯನಿಗೆ ನೀಡಿದನಲ್ಲದೆ ತನ್ನ ಮಗಳನ್ನೂ ಕೊಟ್ಟು ಮದುವೆ ಮಾಡಿದನು. ಇದಕ್ಕೆ ಪ್ರತಿಯಾಗಿ ಚಂದ್ರಗುಪ್ತ ಮೌರ್ಯನು 500 ಆನೆಗಳನ್ನು ಸೆಲ್ಯೂಕಸ್‍ನಿಗೆ ಬಳುವಳಿಯಾಗಿ ನೀಡಿದನು. ಸೆಲ್ಯೂಕಸನು ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಮೆಗಾಸ್ತನೀಸ್ ಎಂಬ ರಾಯಭಾರಿಯನ್ನು ಕಳುಹಿಸಿ ಕೊಟ್ಟನು. ಮೆಗಸ್ತನೀಸ್ ‘ಇಂಡಿಕಾ’ ಎಂಬ ಕೃತಿಯಲ್ಲಿ ಇಲ್ಲಿನ ತನ್ನ ಅನುಭವಗಳನ್ನು ದಾಖಲಿಸಿದ್ದಾನೆ.






ವಿಷ್ಣುಗುಪ್ತ ಅಥವಾ ಕೌಟಿಲ್ಯನು ಚಂದ್ರಗುಪ್ತ ಮೌರ್ಯನ ಪ್ರಧಾನಮಂತ್ರಿಯಾಗಿದ್ದನು. ಈತನು ಬರೆದ ‘ಅರ್ಥಶಾಸ್ತ್ರ’ ಕೃತಿಯು ರಾಜತಂತ್ರಗಳಿಗೆ ಸಂಬಂಧಿಸಿದ ಹಲವು ಸಂಗತಿಗಳನ್ನು ತಿಳಿಸುತ್ತದೆ. ಲೋಕ ಪ್ರಸಿದ್ಧವಾದ ಈ ಕೃತಿಯು ಮೈಸೂರಿನ ಒರಿಯಂಟಲ್ ಗ್ರಂಥಾಲಯದ ಹಸ್ತಪ್ರತಿ ಸಂಗ್ರಹಾಲಯದಲ್ಲಿ ಮೊಟ್ಟಮೊದಲು ದೊರಕಿತು. ಇದನ್ನು ಆರ್. ಶಾಮಶಾಸ್ತ್ರಿ ಎಂಬ ವಿದ್ವಾಂಸರು ಶೋಧಿಸಿದರು.



ಚಂದ್ರಗುಪ್ತ ಮೌರ್ಯ ಜೈನಧರ್ಮವನ್ನು ಸ್ವೀಕರಿಸಿದನು. ತನ್ನ ಕೊನೆಯ ದಿನಗಳಲ್ಲಿ ಸಿಂಹಾಸನವನ್ನು ಮಗನಾದ ಬಿಂದುಸಾರನಿಗೆ ವಹಿಸಿಕೊಟ್ಟು ಜೈನ ಯತಿಗಳೊಡನೆ ಕರ್ನಾಟಕಕ್ಕೆ ಬಂದನು. ಇಂದಿನ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಸಲ್ಲೇಖನ ಎಂಬ ಕಠಿಣ ವ್ರತವನ್ನು ಕೈಗೊಂಡು ದೇಹತ್ಯಾಗ ಮಾಡಿದನು. ಬಿಂದುಸಾರನು ಸುಮಾರು 25 ವರ್ಷಗಳ ಕಾಲ ಆಳ್ವಿಕೆ ನಡೆಸಿದನು.

ಸಾಮ್ರಾಟ ಅಶೋಕ
ಬಿಂದುಸಾರನ ನಂತರ ಅವನ ಮಗ ಅಶೋಕನು ಅಧಿಕಾರಕ್ಕೆ ಬಂದನು. ಜಗತ್ತಿನ ಇತಿಹಾಸದಲ್ಲಿ ಅವನಿಗೆ ವಿಶಿಷ್ಟ ಸ್ಥಾನವಿದೆ. “ಪ್ರಜೆಗಳೆಲ್ಲರು ನನ್ನ ಮಕ್ಕಳಿದ್ದಂತೆ” ಎನ್ನುವ ಮೂಲಕ ಪ್ರಜಾಪಾಲನೆಗೆ ಆದ್ಯತೆ ನೀಡಿದ ಮೊದಲ ದೊರೆ.

ಅಶೋಕನ ಶಾಸನಗಳು: ಭಾರತ ಉಪಖಂಡದ ಉದ್ದಗಲಕ್ಕೂ ನೂರಾರು ಅಶೋಕನ ಶಾಸನಗಳು ಹರಡಿಕೊಂಡಿವೆ. ಈ ಶಾಸನಗಳು ಪ್ರಧಾನವಾಗಿ ಬ್ರಾಹ್ಮಿಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿ ಕಂಡುಬಂದಿವೆ. ಕರ್ನಾಟಕದ ಒಂಭತ್ತು ಸ್ಥಳಗಳಲ್ಲಿ ಅಶೋಕನ 17 ಶಾಸನಗಳು ದೊರೆತಿವೆ. ಇವುಗಳಲ್ಲಿ ರಾಯಚೂರು ಜಿಲ್ಲೆಯ ಮಸ್ಕಿ ಶಾಸನ ಪ್ರಮುಖವಾದುದು. ಏಕೆಂದರೆ ಈ ಶಾಸನದಲ್ಲಿ ಮೊಟ್ಟಮೊದಲ ಬಾರಿಗೆ ಅಶೋಕನ ಹೆಸರು ಕಂಡುಬಂದಿತು. ಆ ವರೆಗಿನ ಶಾಸನಗಳಲ್ಲಿ ‘ದೇವನಾಂಪ್ರಿಯ, ಪ್ರಿಯದರ್ಶಿ’ ಎಂದಷ್ಟೇ ಇದ್ದಿತು. ಮಸ್ಕಿಯ ಶಾಸನದಲ್ಲಿ ‘ದೇವನಾಂಪ್ರಿಯ, ಪ್ರಿಯದರ್ಶಿ ಅಶೋಕ’ ಎಂದು ಬರೆಯಲಾಗಿತ್ತು. ಇದರಿಂದಾಗಿ ಆಶೋಕನೇ ‘ದೇವನಾಂಪ್ರಿಯ, ಪ್ರಿಯದರ್ಶಿ’ ಎಂಬುದಾಗಿ ತಿಳಿದುಬಂದಿತು. ಅಶೋಕನ ಶಾಸನಗಳಿಂದ ಅವನ ಜೀವನ, ಸಾಧನೆ,
ಸಾಮ್ರಾಜ್ಯದ ವ್ಯಾಪ್ತಿ ಮೊದಲಾದ ಅಂಶಗಳನ್ನು ತಿಳಿದುಕೊಳ್ಳಬಹುದು.






ನಿಮಗಿದು ತಿಳಿದಿರಲಿ
ಇಂದಿಗೆ 180 ವರ್ಷಗಳ ಹಿಂದೆ ಜೇಮ್ಸ್ ಪ್ರಿನ್ಸೆಪ್ ಎಂಬ ಬ್ರಿಟಿಷ್ ಅಧಿಕಾರಿಯು ಮೊಟ್ಟಮೊದಲ ಬಾರಿಗೆ ಅಶೋಕನ ಶಾಸನಗಳನ್ನು ಓದಿದರು. ಆ ಮೊದಲು ಯಾರೂ ಓದಲಾಗಿರಲಿಲ್ಲ. ಆರು ಶತಮಾನಗಳಿಗೂ ಹಿಂದೆ ದೆಹಲಿಯ ಸುಲ್ತಾನನಾದ ಫಿರೋಜ್ ಷಾ ತುಘಲಕ್‍ನು ಅಶೋಕನ ಶಾಸನಗಳನ್ನು ಓದಿಸುವ ಪ್ರಯತ್ನ ನಡೆಸಿ ವಿಫಲನಾಗಿದ್ದನು.


ಕಳಿಂಗ ಯುದ್ಧ: ಅಶೋಕನು ಅಧಿಕಾರಕ್ಕೆ ಬಂದ ಎಂಟನೆಯ ವರ್ಷದಲ್ಲಿ ಕಳಿಂಗ ರಾಜ್ಯದ ಮೇಲೆ ಯುದ್ಧ ಸಾರಿದನು. ಇದು ಅವನ ಜೀವನದ ಮಹತ್ವದ ಘಟನೆಯಾಗಿದೆ. ಕಳಿಂಗ ರಾಜ್ಯವು ಇಂದಿನ ಒಡಿಶಾ ರಾಜ್ಯದ ಭಾಗವಾಗಿದ್ದು, ಇದರ ಮೇಲೆ ಅಶೋಕನು ಯುದ್ಧ ನಡೆಸಿದನು. ಯುದ್ಧದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಒಂದು ಲಕ್ಷ ಜನರು ಗಾಯಗೊಂಡರು. ಒಂದೂವರೆ ಲಕ್ಷ ಶತೃ ಸೈನಿಕರು ಬಂಧಿತರಾದರು. ರಣರಂಗದಲ್ಲಿ ಸಾವು ನೋವಿನ ಘೋರ ದೃಶ್ಯಗಳು ಅಶೋಕನ ಮನಕಲಕಿದವು. ಇದರಿಂದ ಮನನೊಂದ ಅಶೋಕನು ಆ ಕ್ಷಣದಿಂದಲೇ ಯುದ್ಧ ಮಾಡದಿರಲು
ನಿರ್ಧರಿಸಿದನು. ಈ ರೀತಿ ಮನಪರಿವರ್ತನೆಗೊಂಡ ಮತ್ತೊಬ್ಬ ಸಾಮ್ರಾಟ ಜಗತ್ತಿನ ಇತಿಹಾಸದಲ್ಲಿಯೇ ಇಲ್ಲ. ಯುದ್ಧಮಾರ್ಗದ ಬದಲು ಧರ್ಮಮಾರ್ಗವನ್ನು ಹಿಡಿದ ಸಾಮ್ರಾಟ ಅಶೋಕನನ್ನು ಮಹಾಶಯನೆಂದು ಕರೆಯುವ ಮೂಲಕ ಗೌರವಿಸಲಾಗುತ್ತಿದೆ.




ಚಟುವಟಿಕೆ: ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತಿರುವ ಸ್ಥಳಗಳನ್ನು ಪಟ್ಟಿ ಮಾಡಿ.
ಅಶೋಕನ ಶಾಸನಗಳು ದೊರೆತಿರುವ ಸ್ಥಳಗಳು
ಕರ್ನಾಟಕದಲ್ಲಿರುವ ಅಶೋಕನ ಶಾಸನಗಳು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗ ರಾಮೇಶ್ವರ, ಕೊಪ್ಪಳ ಜಿಲ್ಲೆಯ ಕೊಪ್ಪಳ, ಬಳ್ಳಾರಿ ಜಿಲ್ಲೆಯ ನಿಟ್ಟೂರು ಮತ್ತು ಉದೆಗೊಳು ಹಾಗೂ ರಾಯಚೂರು ಜಿಲ್ಲೆಯ ಮಸ್ಕಿಗಳಲ್ಲಿ ನಿಕ್ಷಿಪ್ತ ವಾಗಿವೆ. ಕರ್ನಾಟಕದಲ್ಲಿ ಒಟ್ಟು ಹನ್ನೊಂದು ಇಂತಹ ಶಾಸನಗಳು ದೊರಕಿವೆ. ಅವೆಲ್ಲವನ್ನೂ ಪ್ರಾಕೃತ ಭಾಷೆ ಮತ್ತು ಬ್ರಾಹ್ಮೀ ಲಿಪಿಯಲ್ಲಿ ಬರೆಯಲಾಗಿದೆ. ನೇರವಾಗಿ, ಅಶೋಕನ ಹೆಸರನ್ನು ಹೇಳುವ ಶಾಸನಗಳು ಇಡೀ ದೇಶದಲ್ಲಿ ಎರಡೇ ಎರಡು. ಅವುಗಳಲ್ಲಿ ಒಂದು ಮಸ್ಕಿಯ ಶಾಸನ. ಉಳಿದ ಶಾಸನಗಳಲ್ಲಿ ಅವನನ್ನು ‘ದೇವಾನಾಂ ಪ್ರಿಯ’ ಎಂದು ಕರೆಯಲಾಗಿದೆ. ಕೊಪ್ಪಳದ ಶಾಸನಗಳು, ಗವಿಮಠ ಮತ್ತು ಪಾಲ್ಕಿಗುಂಡು ಎಂಬ ಗುಡ್ಡಗಳಲ್ಲಿಯೂ ಸಿದ್ದಾಪುರದ ಶಾಸನವು ಎಮ್ಮೆತಮ್ಮನ ಗುಂಡು ಎಂಬ ಸ್ಥಳದಲ್ಲಿಯೂ ದೊರೆತಿವೆ.
ಧರ್ಮ ಪ್ರಸಾರ : ಅಶೋಕನು ಬೌದ್ಧ ಧರ್ಮದತ್ತ ಆಕರ್ಷಿತನಾಗಿ, ಆ ಧರ್ಮವನ್ನು ಸ್ವೀಕರಿಸಿದನು. ಧರ್ಮದ ಸಂದೇಶಗಳನ್ನು ಪ್ರಜೆಗಳಿಗೆ ಸಾರಹೊರಟನು. ಗುರು ಹಿರಿಯರು ಮತ್ತು ತಂದೆ ತಾಯಿಯರಿಗೆ ವಿಧೇಯರಾಗಿರಬೇಕು. ಕರುಣೆ, ಔದಾರ್ಯ, ಸತ್ಯಸಂಧತೆಗಳಿಂದ ಕೂಡಿರಬೇಕು. ಹಿಂಸೆ, ಕೋಪ, ಮಾತ್ಸರ್ಯ ಮೊದಲಾದವುಗಳನ್ನು ತೊರೆಯಬೇಕು ಎಂದನು. ಅಶೋಕನು ಪಾಟಲೀಪುತ್ರದಲ್ಲಿ ಮೂರನೇ ಬೌದ್ಧ¸ ಸಮ್ಮೇಳನವನ್ನು ನಡೆಸಿದನು. ಬೌದ್ಧ ಸ್ತೂಪಗಳನ್ನು ನಿರ್ಮಿಸಿದನು. ಬುದ್ಧನ ಸಂದೇಶಗಳನ್ನು ಹರಡಲು ರಾಯಭಾರಿಗಳನ್ನು ದೇಶವಿದೇಶಗಳಿಗೆ ಕಳುಹಿಸಿದನು.
ಮೌರ್ಯರ ಆಡಳಿತ ಪದ್ಧತಿ: ರಾಜನೇ ಆಡಳಿತ ವ್ಯವಸ್ಥೆಯ ಮುಖ್ಯಸ್ಥನಾಗಿದ್ದನು. ಎಲ್ಲ ಅಧಿಕಾರಗಳು ಆತನ ಕೈಯಲ್ಲಿದ್ದವು. ರಾಜನಿಗೆ ಸಲಹೆ ನೀಡಲು ಮಂತ್ರಿ ಮಂಡಲವೊಂದಿತ್ತು.
ಆಡಳಿತದ ವಿಭಾಗಗಳನ್ನು ನೋಡಿಕೊಳ್ಳಲು ಉನ್ನತ ಅಧಿಕಾರಿಗಳಿದ್ದರು. ಅವರಲ್ಲಿ ‘ಧರ್ಮಮಹಾಮಾತ್ರರು’ ಎಂಬ ವಿಶೇಷ ಅಧಿಕಾರಿಗಳು ಜನರಲ್ಲಿ ಉತ್ತಮ ನೀತಿ ನಡತೆಯನ್ನು ಪ್ರಚಾರ ಮಾಡುತ್ತಿದ್ದರು. ಅನಾಥರು, ವಿಧವೆಯರು ಮತ್ತು ವಯೋವೃದ್ಧರ ಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಅವರಿಗಿತ್ತು. ಆಡಳಿತದ ಅನುಕೂಲಕ್ಕಾಗಿ ವಿಶಾಲವಾದ ಸಾಮ್ರಾಜ್ಯವನ್ನು ಹಲವು ಪ್ರಾಂತಗಳಾಗಿ ವಿಂಗಡಿಸಲಾಗಿತ್ತು. ಗ್ರಾಮಗಳಲ್ಲಿ ‘ಗ್ರಾಮಿಕ’ನು ಅಲ್ಲಿಯ ಹಿರಿಯರ ನೆರವಿನಿಂದ ಆಡಳಿತ ಮಾಡುತ್ತಿದ್ದನು. ಗ್ರಾಮಗಳಿಗೆ ಸಾಕಷ್ಟು ಅಧಿಕಾರ ನೀಡಲಾಗಿತ್ತು. ಗ್ರಾಮದ ವಿವಾದಗಳನ್ನು ಗ್ರಾಮಸಭೆಯೇ ಬಗೆಹರಿಸುತ್ತಿತ್ತು. ಮೌರ್ಯರ ಆಡಳಿತವು ಮುಂದಿನ ಅನೇಕ ರಾಜಮನೆತನಗಳ ಮೇಲೆ ತನ್ನ ಪ್ರಭಾವವನ್ನು ಬೀರಿತು.
ವಾಸ್ತು ಮತ್ತು ಮೂರ್ತಿಶಿಲ್ಪ: ಅಶೋಕನ ಕಾಲದ ಕೆಲವು ವಾಸ್ತು ಮತ್ತು ಮೂರ್ತಿಶಿಲ್ಪಗಳನ್ನು
ಇಂದಿಗೂ ಕಾಣಬಹುದಾಗಿದೆ. ಅವುಗಳಲ್ಲಿ ಸ್ತೂಪಗಳು ಮತ್ತು ಸ್ತಂಭಗಳು ಪ್ರಮುಖವಾಗಿವೆ. ಅವುಗಳಲ್ಲಿ ಮಧ್ಯಪ್ರದೇಶದ ಸಾಂಚಿಯ ಸ್ತೂಪ ಮತ್ತು ಸಾರನಾಥದ ಸ್ತಂಭಗಳು ಪ್ರಸಿದ್ಧವಾಗಿವೆ. ಸಾರನಾಥ ಸ್ತಂಭದ ಮೇಲಿನ ನಾಲ್ಕುತಲೆಯ ಸಿಂಹ ಬೋದಿಗೆಯು ನಮ್ಮ ರಾಷ್ಟ್ರ ಲಾಂಛನವಾಗಿದೆ.



ಕುಶಾನರು
ಸುಮಾರು 2000 ವರ್ಷಗಳ ಹಿಂದೆ ಗಾಂಧಾರ (ಈಗಿನ ಅಫ್ಘಾನಿಸ್ತಾನ) ಎಂಬ ಪ್ರದೇಶದಲ್ಲಿ ಕುಶಾನ ಎಂಬ ರಾಜವಂಶವು ಆಳ್ವಿಕೆ ನಡೆಸುತ್ತಿತ್ತು. ಕಾಲಕ್ರಮೇಣ ಭಾರತದ ಕೆಲವು ಭಾಗಗಳು ಕುಶಾನರ ವಶವಾದವು. ಕುಶಾನರಲ್ಲಿ ಕನಿಷ್ಕ ಪ್ರಸಿದ್ಧನಾದ ಅರಸ. ಅವನು ಸುದೀರ್ಘಕಾಲ ಯುದ್ಧಗಳನ್ನು ನಡೆಸಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಉತ್ತರ ಭಾರತದಲ್ಲಿ ಅವನ ಸಾಮ್ರಾಜ್ಯವು ಅಫ್ಘಾನಿಸ್ತಾನದಿಂದ ಬಿಹಾರದವರೆಗೂ ಹಬ್ಬಿತ್ತು.


ಕನಿಷ್ಕ: ಬೌದ್ಧಧರ್ಮದ ಅನುಯಾಯಿಯಾಗಿದ್ದ ಕನಿಷ್ಕನು ಕೂಡ ಸಾಮ್ರಾಟ ಅಶೋಕನಂತೆ
ಹಲವು ಸ್ತೂಪಗಳನ್ನು ಕಟ್ಟಿಸಿದನು. ಬೌದ್ಧಮತ ಪ್ರಚಾರಕರನ್ನು ದೇಶವಿದೇಶಗಳಿಗೆ ಕಳುಹಿಸಿದನು. ಅಲ್ಲದೆ, ಕಾಶ್ಮೀರದಲ್ಲಿ ನಾಲ್ಕನೆಯ ಬೌದ್ಧ ಮಹಾಸಭೆಯನ್ನು ನಡೆಸಿದನು. ಕನಿಷ್ಕನು ತಾನು ಅಧಿಕಾರಕ್ಕೆ ಬಂದ ನೆನಪಿಗಾಗಿ ಶಕ (ಶಾಲಿವಾಹನ ಶಕ) ವರ್ಷವನ್ನು ಪ್ರಾರಂಭ ಮಾಡಿದನು. ಇದೇ ಇಂದು ಭಾರತ ಸರ್ಕಾರದ ಅಧಿಕೃತ ಕ್ಯಾಲೆಂಡರ್ ವರ್ಷವಾಗಿದೆ.
ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪ: ಕನಿಷ್ಕನು ಹಲವು ಸ್ತೂಪಗಳನ್ನು ನಿರ್ಮಿಸಿದನು. ಪುರಷಾಪುರ (ಇಂದಿನ ಪೇಷಾವರ)ದಲ್ಲಿ ಅವನು ಕಟ್ಟಿಸಿದ ಸ್ತೂಪಕ್ಕೆ ಹದಿಮೂರು ಅಂತಸ್ತುಗಳ ಗೋಪುರವಿತ್ತು. ಗೋಪುರವು 400 ಅಡಿ ಎತ್ತರವಿದ್ದು ಆ ಕಾಲದ ಒಂದು ಕೌತುಕವೆನಿಸಿತ್ತು.


ಕನಿಷ್ಕನು ಕಲಾಪೋಷಕನಾಗಿದ್ದನು. ಅವನು ಬೇರೆ ಬೇರೆ ದೇಶಗಳ ಕಲಾಕಾರರನ್ನು ತನ್ನಲ್ಲಿಗೆ ಕರೆಸಿಕೊಂಡಿದ್ದನು. ಇದರ ಪರಿಣಾಮವಾಗಿ ವಿವಿಧ ಕಲಾ ಶೈಲಿಗಳು ಬೆರೆತು ಗಾಂಧಾರ ಮತ್ತು ಮಥುರಾ ಎಂಬ ಹೊಸ ಶೈಲಿಗಳು ಹುಟ್ಟಿಕೊಂಡವು.










ಮಥುರೆಯಲ್ಲಿ ಕನಿಷ್ಕನ ಕಲ್ಲಿನ ವಿಗ್ರಹ ದೊರೆಕಿದೆ. ಇದರ ತಲೆಭಾಗವು ನಾಶವಾಗಿದ್ದು, ಕೆಳಭಾಗದಲ್ಲಿ ಕನಿಷ್ಕನ ಹೆಸರನ್ನು ಕೆತ್ತಲಾಗಿದೆ. ಕುಶಾನರ ಅನೇಕ ನಾಣ್ಯಗಳು ದೊರೆತಿವೆ. ಇವರೇ ಭಾರತದಲ್ಲಿ ಮೊಟ್ಟ ಮೊದಲು ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದವರು.



ಸಾಹಿತ್ಯ: ಕನಿಷ್ಕನು ವಿದ್ವಾಂಸರು ಮತ್ತು ಸಾಹಿತಿಗಳಿಗೆ ಆಶ್ರಯ ನೀಡಿದ್ದನು. ಅವರಲ್ಲಿ ಅಶ್ವಘೋಷ ಪ್ರಮುಖನು. ಇವನು ‘ಬುದ್ಧ ಚರಿತ’ ಎಂಬ ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದ್ದಾನೆ.
ನಾಗಾರ್ಜುನನು ಕನಿಷ್ಕನ ಆಸ್ಥಾನದಲ್ಲಿದ್ದ ಶ್ರೇಷ್ಠ ತತ್ವಜ್ಞಾನಿ ಹಾಗೂ ವಿಜ್ಞಾನಿ. ವಸುಮಿತ್ರ ಓರ್ವ ವಿದ್ವಾಂಸ ಹಾಗೂ ಕಾಶ್ಮೀರದಲ್ಲಿ ನಡೆದ 4ನೇ ಬೌದ್ಧ ಮಹಾಸಭೆಯ ಅಧ್ಯಕ್ಷನಾಗಿದ್ದವನು. ಚರಕ ಎಂಬುವನು ಕನಿಷ್ಕನ ಸಮಕಾಲೀನ ವೈದ್ಯನಾಗಿದ್ದನೆಂದು ಹೇಳಲಾಗುತ್ತದೆ. ಚರಕ ಸಂಹಿತೆ ಎಂಬ ಗ್ರಂಥವನ್ನು ಬರೆದನು.
ಹೊಸ ಪದಗಳು:
ರಾಯಭಾರಿ – ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಕಳುಹಿಸಲ್ಪಡುವ ರಾಜದೂತ ಅಥವಾ ಪ್ರತಿನಿಧಿ.
ಸಾಮ್ರಾಜ್ಯ – ಅತಿ ವಿಸ್ತಾರವಾದ ರಾಜ್ಯ.
ಗೂಢಚಾರ – ಗುಟ್ಟಾಗಿ ಶೋಧನೆ ಮಾಡುವವನು.
ಶಿಲಾಶಾಸನ – ಬಂಡೆಗಳ ಮೇಲೆ ಕೊರೆದಿಟ್ಟ ಬರಹ.
ಸ್ತೂಪ – ಬುದ್ಧನ ಶರೀರದ ಅವಶೇಷಗಳನ್ನು (ಹಲ್ಲು, ಎಲುಬು ಇತ್ಯಾದಿ) ಕಲಶದಲ್ಲಿ ಶೇಖರಿಸಿ, ಆ ಕಲಶದ ಸುತ್ತಲೂ ಕಟ್ಟಿದ ಅರ್ಧಗೋಲಾಕೃತಿಯ ರಚನೆ.
ನಿಮಗೆ ತಿಳಿದಿರಲಿ
* ಅಶೋಕನು ಬೌದ್ಧ ರಾಯಭಾರಿಗಳನ್ನು ಬೇರೆ ಬೇರೆ ರಾಜ್ಯಗಳಿಗೆ ಮಾತ್ರವಲ್ಲದೆ ಬರ್ಮಾ (ಮಯನ್ಮಾರ್), ಶ್ರೀಲಂಕಾ, ಈಜಿಪ್ಟ್, ಪಶ್ಚಿಮ ಏಷ್ಯ ಹಾಗೂ ಪೂರ್ವ ಯೂರೋಪ್ ದೇಶಗಳಿಗೂ ಕಳುಹಿಸಿದ್ದನು. ಅಶೋಕನ ಮಗ ಮಹೇಂದ್ರ ಮತ್ತು ಪುತ್ರಿ ಸಂಘಮಿತ್ರಾ ಶ್ರೀಲಂಕೆಗೆ ತೆರಳಿದ್ದರು. ಕರ್ನಾಟಕದ ಮೈಸೂರಿಗೆ (ಆಗಿನ ಮಹಿಷಮಂಡಲ) ಮಹಾದೇವ ಮತ್ತು ಉತ್ತರ ಕನ್ನಡ ಜಿಲ್ಲೆಯ ಬನವಾಸಿಗೆ ರಕ್ಷಿತ ಎಂಬ ಧರ್ಮಪ್ರ್ರಚಾರಕರು ಬಂದಿದ್ದರು.
* ವಾಸ್ತುಶಿಲ್ಪ ಎಂದರೆ ಕಟ್ಟಡ ನಿರ್ಮಾಣದ ಕಲೆ. ಮೂರ್ತಿಶಿಲ್ಪ ಎಂದರೆ ವಿಗ್ರಹಗಳನ್ನು ನಿರ್ಮಿಸುವ ಕಲೆ. ಅಶೋಕನ ಕಾಲದಲ್ಲಿ ವಾಸ್ತುಶಿಲ್ಪ ನಿರ್ಮಾಣಕ್ಕಾಗಿ ಕಟ್ಟಿಗೆ ಮತ್ತು ಇಟ್ಟಿಗೆಗಳ ಬದಲು ಕಲ್ಲುಗಳ ಬಳಕೆ ಆರಂಭವಾಯಿತು. ಇದರಿಂದಾಗಿಯೇ ಮೌರ್ಯರ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳು ಇಂದಿಗೂ ಉಳಿದು ಬಂದಿವೆ.
* ಅಶೋಕನ ಶಾಸನಗಳು ಕರ್ನಾಟಕದಲ್ಲಿ ರಾಯಚೂರು, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿವೆ. ಮಸ್ಕಿ (ರಾಯಚೂರು ಜಿಲ್ಲೆ) ಎಂಬಲ್ಲಿನ ಶಿಲಾಶಾಸನದಲ್ಲಿ ಅಶೋಕನನ್ನು ದೇವಾನಾಂಪ್ರಿಯ’ ಮತ್ತು
ಪ್ರಿಯದರ್ಶಿ’ ಎಂದು ಕರೆಯಲಾಗಿದೆ.
* 2300 ವರ್ಷಗಳಿಗೂ ಹಿಂದಿನ ಮೌರ್ಯರ ಆಡಳಿತ ಪದ್ಧತಿಯ ಮೂಲಸ್ವರೂಪವನ್ನು ಭಾರತದ ಈಗಿನ ಆಡಳಿತದಲ್ಲಿ ಕಾಣಬಹುದು. ಈಗಿನ ಆಡಳಿತ ಸ್ತರಗಳು ಹೀಗಿವೆ: ಕೇಂದ್ರ, ರಾಜ್ಯಗಳು, ವಿಭಾಗಗಳು, ಜಿಲ್ಲೆಗಳು, ತಾಲೂಕುಗಳು, ಹೋಬಳಿ ಮತ್ತು ಗ್ರಾಮಗಳು.
* ಭಾರತದಲ್ಲಿ ಹುಟ್ಟಿದ ಆಯುರ್ವೇದ ಪದ್ದತಿಯು ಇಂದಿಗೂ ಅತ್ಯಂತ ಜನಪ್ರಿಯ ವೈದ್ಯಕೀಯ ಪದ್ಧತಿಯಾಗಿದೆ. ವಿಶ್ವಸಂಸ್ಥೆ ಇದಕ್ಕೆ ಮಾನ್ಯತೆ ನೀಡಿದೆ. ಇತರ ದೇಶಗಳಲ್ಲಿಯೂ ಈ ಪದ್ಧತಿಯ ಬಳಕೆ ಹೆಚ್ಚುತ್ತಿದೆ.
ಸಂವೇದ ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು
* * * * * *