ಉತ್ತರ ಅಮೇರಿಕ ಖಂಡ – ಅಧ್ಯಾಯ-13
ಪಾಠದ ಪರಿಚಯ
ಕಳೆದ ವರ್ಷ ನೀವು ಏಷ್ಯ, ಯುರೋಪ್ ಮತ್ತು ಆಫ್ರಿಕ ಖಂಡಗಳ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಾಮುಖ್ಯತೆಯ ಬಗ್ಗೆ ಅಧ್ಯಯನ ಮಾಡಿದ್ದೀರಿ. ಈ ವರ್ಷ ನೀವು ಉತ್ತರ ಅಮೇರಿಕ, ದಕ್ಷಿಣ ಅಮೇರಿಕ, ಆಸ್ಟ್ರೇಲಿಯ ಮತ್ತು ಅಂಟಾರ್ಕಟಿಕ್ ಖಂಡಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯುವಿರಿ.
ಈ ಅಧ್ಯಾಯದಲ್ಲಿ ಉತ್ತರ ಅಮೇರಿಕ ಖಂಡದ ಸ್ಥಾನ, ವಿಸ್ತೀರ್ಣ, ಭೌಗೋಳಿಕ ಸನ್ನಿವೇಶ, ಪ್ರಾಕೃತಿಕ ವಿಭಾಗಗಳು, ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗ, ವ್ಯವಸಾಯ, ಪ್ರಮುಖ ಖನಿಜಗಳು ಹಾಗೂ ಕೈಗಾರಿಕೆಗಳು, ಜನಸಂಖ್ಯೆಯ ಬೆಳವಣಿಗೆ, ಹಂಚಿಕೆ ಮತ್ತು ಸಾಂದ್ರತೆಗಳನ್ನು ಪರಿಚಯಿಸಲಾಗಿದೆ.
ಉತ್ತರ ಅಮೇರಿಕವು ಇತ್ತೀಚೆಗೆ ಕಂಡುಹಿಡಿದ ಖಂಡವಾಗಿದೆ. ಈ ಖಂಡದಲ್ಲಿನ ಬಹುತೇಕ ನಿವಾಸಿಗಳು ಯುರೋಪಿಯನ್ನರು ಮತ್ತು ಇತರ ದೇಶಗಳಿಂದ ವಲಸೆ ಬಂದವರಾಗಿದ್ದಾರೆ. ಅವರಲ್ಲಿ ಸ್ಪೇನಿನವರು ಮೆಕ್ಸಿಕೋದ ಚಿನ್ನವನ್ನು ಬಳಕೆ ಮಾಡಿದರೆ, ಫ್ರೆಂಚರು ಕೆನಡದಲ್ಲಿ ಉಣ್ಣೆ (fur) ವ್ಯಾಪಾರವನ್ನು ಲಾಭದಾಯಕವಾಗಿ ಮಾಡಿಕೊಂಡರು. ಬ್ರಿಟಿಷರು ಕೆನಡದ ಅಟ್ಲಾಂಟಿಕ್ ಪ್ರಾಂತ್ಯ ಮತ್ತು ನ್ಯೂಇಂಗ್ಲೆಂಡ್ನಲ್ಲಿ ಮೀನುಗಾರಿಕೆ ಮಾಡಿದರಲ್ಲದೆ ಅಲ್ಲಿನ ಅರಣ್ಯವನ್ನು ಲೂಟಿಮಾಡಿದರು.

ಉತ್ತರ ಅಮೇರಿಕದ ಹೇರಳವಾದ ಸಂಪನ್ಮೂಲಗಳು ಅಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ತಳಹದಿಯಾಗಿವೆ. ವಿಸ್ತಾರವಾದ ಸ್ಥಳೀಯ ಮಾರುಕಟ್ಟೆ, ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧ, ಉತ್ತಮ ಸಾರಿಗೆ ಮುಂತಾದವುಗಳಿಂದ ಉತ್ತರ ಅಮೇರಿಕವು ಜಗತ್ತಿನ ಅತಿ ಶ್ರೀಮಂತ ಮತ್ತು ಆರ್ಥಿಕವಾಗಿ ಪ್ರಾಬಲ್ಯ ಹೊಂದಿದ ಖಂಡಗಳಲ್ಲೊಂದಾಗಿದೆ. ಈ ಖಂಡವನ್ನು ಮಾದರಿಯಾಗಿಟ್ಟುಕೊಂಡು ಇತರ ಖಂಡಗಳೊಡನೆ ಹೋಲಿಕೆ ಮಾಡಿ ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ.

ನೆಲೆ, ಸ್ಥಾನ ಮತ್ತು ವಿಸ್ತೀರ್ಣ:
ಉತ್ತರ ಅಮೇರಿಕವು ಸಂಪೂರ್ಣವಾಗಿ ಸಮಭಾಜಕವೃತ್ತದ ಉತ್ತರದಲ್ಲಿ ನೆಲೆಗೊಂಡಿದೆ. ಅದು ಅಕ್ಷಾಂಶಿಕವಾಗಿ 70 ಉತ್ತರ ಅಕ್ಷಾಂಶದಿಂದ 840 ಉತ್ತರ ಅಕ್ಷಾಂಶದವರೆಗೆ ಹಬ್ಬಿದೆ. ಕರ್ಕಾಟಕ ಸಂಕ್ರಾಂತಿ ವೃತ್ತವು (231/20 ಉ.ಅ) ಈ ಖಂಡದ ದಕ್ಷಿಣದಲ್ಲಿಯೂ ಉತ್ತರ ಮೇರು ವೃತ್ತವು (661/20 ಉ.ಆಕ್ರ್ಟಿಕ್ ವೃತ್ತ) ಉತ್ತರ ಭಾಗದಲ್ಲಿಯೂ ಹಾದು ಹೋಗಿವೆ. ಉತ್ತರ ಅಮೇರಿಕವು ಪೂರ್ವದಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದಲೂ, ಪಶ್ಚಿಮದಲ್ಲಿ ಫೆಸಿಫಿಕ್ ಮಹಾಸಾಗರದಿಂದಲೂ ಮತ್ತು ಉತ್ತರದಲ್ಲಿ ಆಕ್ರ್ಟಿಕ್ (ಉತ್ತರ ಶೀತ) ಸಾಗರದಿಂದಲೂ ಸುತ್ತುವರಿದಿದೆ. ಬೇರಿಂಗ್ ಜಲಸಂಧಿಯು ಇದನ್ನು ಏಷ್ಯ ಖಂಡದಿಂದ ಪ್ರತ್ಯೇಕಿಸಿದೆ. ಪನಾಮ ಭೂಕಂಠದಿಂದಾಗಿ ಇದು ದಕ್ಷಿಣ ಅಮೇರಿಕದೊಂದಿಗೆ ಭೂಸಂಪರ್ಕವನ್ನು ಹೊಂದಿದೆ. ಅಸಂಖ್ಯಾತ ಸಣ್ಣ ಸಣ್ಣ ಜಲಭಾಗಗಳನ್ನು ಇಲ್ಲಿ ಕಾಣಬಹುದು. ಉದಾ:- ಮೆಕ್ಸಿಕೊ ಖಾರಿ, ಹಡ್ಸನ್ಕೊಲ್ಲಿ, ಅಲಾಸ್ಕ್ ಖಾರಿ, ಕ್ಯಾಲಿಫೋರ್ನಿಯ ಖಾರಿ ಇತ್ಯಾದಿ. ವೆಸ್ಟ್ ಇಂಡಿಸ್ ಮತ್ತು ಕ್ಯೂಬಾ ದ್ವೀಪಗಳನ್ನು ಕೆರಬಿಯನ್ ಸಮುದ್ರದಲ್ಲಿ ಕಾಣಬಹುದು. ಕೆನಡದ ಪೂರ್ವ ಕರಾವಳಿಯಲ್ಲಿ ನ್ಯೂಫೌಂಡ್ಲ್ಯಾಂಡ್ ಪ್ರದೇಶವಿದೆ. ಆಕ್ರ್ಟಿಕ್ ಮಹಾಸಾಗರದಲ್ಲಿ ಅಸಂಖ್ಯಾತ ದ್ವೀಪಗಳಿದ್ದು, ಅವುಗಳಲ್ಲಿ ಗ್ರೀನ್ಲ್ಯಾಂಡ್ ಅತಿ ದೊಡ್ಡದಾಗಿದೆ. ಉತ್ತರ ಅಮೇರಿಕದ ದಕ್ಷಿಣದಲ್ಲಿರುವ ಅಂಚಿನ ಭೂಭಾಗವನ್ನು ಮಧ್ಯ ಅಮೇರಿಕವೆಂದು ಕರೆಯಲಾಗಿದೆ.
ಉತ್ತರ ಅಮೇರಿಕವು ಭೂವಿಸ್ತೀರ್ಣದಲ್ಲಿ (16.46%) ಏಷ್ಯ ಮತ್ತು ಆಫ್ರಿಕಗಳ ನಂತರ
ಮೂರನೇ ಅತಿ ದೊಡ್ಡ ಭೂಖಂಡವಾಗಿದೆ. ಇದು ಭಾರತಕ್ಕಿಂತ ಸುಮಾರು ಏಳು ಪಟ್ಟು
(24.24 ದಶಲಕ್ಷ ಚ.ಕಿ.ಮೀ) ದೊಡ್ಡದಾಗಿದೆ. ಉತ್ತರ ಅಮೇರಿಕದಲ್ಲಿ 24 ದೇಶಗಳಿವೆ.
ಕೆನಡ, ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಮೆಕ್ಸಿಕೋ ಈ ಮೂರು ದೇಶಗಳು ಗಾತ್ರದಲ್ಲಿ
ದೊಡ್ಡದಾಗಿವೆ. ಉತ್ತರ ಅಮೇರಿಕದ ಭೌತಿಕ ವ್ಯಾಖ್ಯೆಯಲ್ಲಿ ಕೆರಿಬಿಯನ್ ದ್ವೀಪಗಳನ್ನೂ
ಸಹ ಸೇರಿಸಲಾಗಿದೆ.
ನಿಮಗಿದು ತಿಳಿದಿದೆಯೇ?
ದೇಶಗಳು ಅವುಗಳ ವಿಶೇಷತೆ
ಮೆಕ್ಸಿಕೋ – ಮಾಯನ್ ನಾಗರಿಕತೆಯ ತಾಣಗಳು
ಕೆನಡ – ಹಿಮ ಹಕ್ಕಿ, ಹಿಮ ಕರಡಿ
ಯು.ಎಸ್.ಎ. – ಗ್ರ್ಯಾಂಡ್ ಕ್ಯಾನಿಯನ್, ಹೋಮ್ಸ್, ಬಾರ್ ರಿಂಗರ್ ಕ್ರೇಟರ್, ವಾಲ್ಕನಾಸ್
ವೆಸ್ಟ್ ಇಂಡಿಸ್ – ಕ್ರಿಕೆಟ್, ದ್ವೀಪಗಳು







ಪ್ರಾಕೃತಿಕ ವಿಭಾಗಗಳು:
ಉತ್ತರ ಅಮೇರಿಕ ಖಂಡವನ್ನು ನಾಲ್ಕು ಮುಖ್ಯ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ..
1. ಪಶ್ಚಿಮದ ಪರ್ವತಾವಳಿಗಳು ಅಥವಾ ರಾಕಿ ಪರ್ವತಗಳು
2. ಮಹಾ ಮತ್ತು ಕೇಂದ್ರೀಯ ಮೈದಾನಗಳು
3. ಕೆನಡಿಯನ್ ಭೂಫಲಕ
4. ಅಪಲೇಷಿಯನ್ ಉನ್ನತ ಪ್ರದೇಶಗಳು

1. ಪಶ್ಚಿಮದ ಪರ್ವತಾವಳಿಗಳು: ಇವುಗಳು, ಭಾರತದ ಹಿಮಾಲಯ ಪರ್ವತಗಳಂತೆಯೇ ಮಡಿಕೆ ಪರ್ವತ ಶ್ರೇಣಿಗಳಾಗಿವೆ. ಪಶ್ಚಿಮದ ಈ ಪರ್ವತಾವಳಿಗಳು ಉತ್ತರದಲ್ಲಿ ಅಲಾಸ್ಕದಿಂದ ದಕ್ಷಿಣದಲ್ಲಿ ಪನಾಮದವರೆಗೂ ಹಬ್ಬಿವೆ. ಅವು ನಿರಂತರವಾದ ಪ್ರಸ್ಥಭೂಮಿಗಳನ್ನು ಒಳಗೊಂಡಿವೆ. ಉದಾ: ಕೊಲರಾಡೊ, ಮೆಕ್ಸಿಕನ್, ಯೂಕಟನ್ ಪ್ರಸ್ಥಭೂಮಿಗಳು.




ಪಶ್ಚಿಮದ ಪರ್ವತಾವಳಿಗಳಲ್ಲಿ ರಾಕಿ ಪರ್ವತಗಳು ಅತಿ ಪ್ರಮುಖವಾದ ಸರಣಿಗಳಾಗಿವೆ. ಈ ಪ್ರದೇಶದಲ್ಲಿ ಮೌಂಟ್ ಮ್ಯಾಕ್ಕಿನ್ಲೆ (6194 ಮೀ) ಅತಿ ಎತ್ತರವಾದ ಶಿಖರವಾಗಿದ್ದರೆ, ಮೃತ್ಯುಕಣಿವೆಯು (ಸಮುದ್ರ ಮಟ್ಟದಿಂದ 86 ಮೀ.ನಷ್ಟು ತಗ್ಗಾದ) ಅತಿ ತಗ್ಗಾದ ಭಾಗವಾಗಿದೆ. ಕ್ಯಾಲಿಫೋರ್ನಿಯದಲ್ಲಿರುವ ವೈಟ್ನೇ ಪರ್ವತ ಮತ್ತು ಶ್ವೇತ ಪರ್ವತಗಳು ತಮ್ಮದೇ ಆದ ಏರಿಳಿತ ಲಕ್ಷಣಗಳನ್ನು ಹೊಂದಿದ್ದು, ಅವು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿವೆ. ಈ ಪ್ರಸ್ಥಭೂಮಿಗಳ ಮಧ್ಯೆ ಕೆಲವು ಅಂತರ್ ಪರ್ವತ ಪ್ರಸ್ಥಭೂಮಿಗಳನ್ನು ಕಾಣಬಹುದು. ಕೊಲಂಬಿಯ, ಕೊಲರಾಡೊ ಮತ್ತು ಮೆಕ್ಸಿಕನ್ ಪ್ರಸ್ಥಭೂಮಿಗಳು ಅವುಗಳಲ್ಲಿ ಪ್ರಮುಖವಾದವುಗಳಾಗಿವೆ. ಕೊಲರಾಡೊ ನದಿಯು ಕೊಲರಾಡೊ ಪ್ರಸ್ಥಭೂಮಿಯನ್ನು ತನ್ನ ಅಪಾರ ಸವಕಳಿಯ ಮೂಲಕ `ಮಹಾ ಕಂದರ’ (ಗ್ರ್ಯಾಂಡ್ ಕ್ಯಾನಿಯನ್) ನಿರ್ಮಾಣಕ್ಕೆ ಕಾರಣವಾಗಿದೆ.








2. ಮಹಾ ಮತ್ತು ಕೇಂದ್ರೀಯ ಮೈದಾನಗಳು: ಕೇಂದ್ರೀಯ ಮೈದಾನಗಳನ್ನು ಪ್ರೈರೀಸ್ನ ಮಹಾಮೈದಾನಗಳೆಂದೂ ಕರೆಯಲಾಗಿದೆ. ಅವುಗಳು ಪೂರ್ವದಲ್ಲಿ ಅಪಲೇಷಿಯನ್ಗಳು ಮತ್ತು ಪಶ್ಚಿಮದಲ್ಲಿ ಪರ್ವತಾವಳಿಗಳ ಮಧ್ಯೆ ಕಂಡುಬರುತ್ತವೆ. ಈ ಮೈದಾನಗಳು ಹೆಚ್ಚು ವಿಸ್ತಾರವಾಗಿದ್ದು (ಉತ್ತರ ಅಮೇರಿಕದ ಒಟ್ಟು ಭೂಭಾಗದ 3/5ರಷ್ಟು) ಸಮತಟ್ಟಾದ ಲಕ್ಷಣದಿಂದ ಇಳಿಜಾರು ಲಕ್ಷಣದವರೆಗಿನ ಭೂಭಾಗದಿಂದ ಕೂಡಿವೆ. ಈ ಮೈದಾನಗಳು ಮಿಸಿಸಿಪ್ಪಿ ಮತ್ತು ಮಿಸ್ಸೌರಿ ನದಿಗಳು ಮತ್ತು ಅವುಗಳ ಉಪನದಿಗಳಿಂದ ನಿರ್ಮಾಣವಾಗಿವೆ. ಇದು ವಿಶ್ವದ ಅತಿ ಫಲವತ್ತಾದ ಮೈದಾನಗಳಲ್ಲೊಂದಾಗಿದ್ದು, ಉತ್ತಮ ಕೃಷಿ ಪ್ರದೇಶವಾಗಿದೆ. ಈ ಪ್ರದೇಶದ ಉತ್ತರ ಭಾಗವು ಹಿಮಹಾಳೆಗಳಿಂದ (ಹಿಮನದಿ) ಭೂನಗ್ನೀಕರಣಕ್ಕೆ ಒಳಗಾಗಿರುವ ಕಾರಣದಿಂದಾಗಿ ಅಧಿಕ ಸಂಖ್ಯೆಯ ಜಲಾನಯನ ತಗ್ಗುಗಳು ನಿರ್ಮಾಣಗೊಂಡಿವೆ. ಈ ತಗ್ಗುಗಳು ಸರೋವರಗಳಿಂದ ಕೂಡಿವೆ.


ಧೂಳಿನ ಬೋಗುಣಿ (Dust Bowl) – ಇದು ಧೂಳಿನಿಂದ ಕೂಡಿದ ಸ್ಥಳೀಯ ಸುಂಟರಗಾಳಿಯಿಂದಾಗಿದೆ. ಇದು ಅಮೇರಿಕ ಮತ್ತು ಕೆನಡದ ಪ್ರೈರೀಸ್ನಲ್ಲಿನ ಕೃಷಿಗೆ ಅನಾಹುತವನ್ನುಂಟು ಮಾಡುತ್ತದೆ.


3. ಕೆನಡಿಯನ್ ಭೂಫಲಕ: ಕೆನಡಿಯನ್ ಭೂಫಲಕವು ಉತ್ತರ ಅಮೇರಿಕದ ಉತ್ತರ ಭಾಗದಲ್ಲಿದ್ದು, ಹಡ್ಸನ್ ಕೊಲ್ಲಿಯ ಸುತ್ತಲೂ ವಿಸ್ತರಿಸಿದೆ. ಇದು ಭಾರತದ ದಖ್ಖನ್ ಪ್ರಸ್ಥಭೂಮಿಯಂತೆ ಜಗತ್ತಿನ ಕೆಲವು ಅತಿ ಪ್ರಾಚೀನ ಶಿಲೆಗಳಿಂದ ನಿರ್ಮಾಣಗೊಂಡಿದೆ.


4. ಅಪಲೇಷಿಯನ್ ಉನ್ನತ ಪ್ರದೇಶಗಳು: ಪೂರ್ವದ ಉನ್ನತ ಪ್ರದೇಶಗಳನ್ನು ಅಪಲೇಷಿಯನ್ಗಳೆಂದೂ ಕರೆಯಲಾಗುತ್ತದೆ. ಇವುಗಳು ಭೂಖಂಡದ ಪೂರ್ವ ಅಂಚಿನುದ್ದಕ್ಕೂ ನ್ಯೂಫೌಂಡ್ಲ್ಯಾಂಡ್ ವಿಸ್ತರಿಸಿವೆ. ಅಪಲೇಷಿಯನ್ಗಳು ಪ್ರದೇಶದಿಂದ ಪ್ರಾಚೀನ ಮಡಿಕೆ ಅಲಬಾಮದವರೆಗೂ ಪರ್ವತಗಳಾಗಿದ್ದು ಭೂನಗ್ನೀಕರಣದಿಂದಾಗಿ ಅವುಗಳು ಪ್ರಸ್ತುತ ಎತ್ತರವನ್ನು ಹೊಂದಿವೆ.


ಅಪಲೇಷಿಯನ್ ಸರಣಿಗಳ ಪೂರ್ವ ಭಾಗಗಳು ಪಾದಭಾಗದ ಪ್ರಸ್ಥಭೂಮಿ ಮತ್ತು ಅಟ್ಲಾಂಟಿಕ್ ಕರಾವಳಿಗಳಲ್ಲಿ ಕಂಡುಬರುತ್ತವೆ. ಸೆಂಟ್ ಲಾರೆನ್ಸ್ ಕಣಿವೆಯು ಲಾಬ್ರಡಾರ್ ಸ್ಥಭೂಮಿಯನ್ನು ಅಪಲೇಷಿಯನ್ ಶ್ರೇಣಿಗಳಿಂದ ಪ್ರತ್ಯೇಕಿಸುತ್ತದೆ. ಅವುಗಳು ಕಲ್ಲಿದ್ದಲು, ಸೀಸ, ಸತು, ಕಬ್ಬಿಣದ ಅದಿರು, ತಾಮ್ರ, ಜಲಶಕ್ತಿ ಮತ್ತು ಕಾಡುಮರಗಳಂತಹ ಸಂಪನ್ಮೂಲಗಳಲ್ಲಿ ಶ್ರೀಮಂತವಾಗಿವೆ. ಈ ಪ್ರದೇಶವು ಅಪಾರ ಜನಸಂಖ್ಯೆಯನ್ನು ಹೊಂದಿದ್ದು, ಅದು ಉತ್ತರ ಅಮೇರಿಕದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡಿದೆ.


ನದಿಗಳು ಮತ್ತು ದೊಡ್ಡ ಸರೋವರಗಳು: ಉತ್ತರ ಅಮೇರಿಕವು ಕೆಲವು ದೊಡ್ಡ ಮತ್ತು ಚಿಕ್ಕ ನದಿಗಳನ್ನು ಹೊಂದಿದೆ. ಈ ಖಂಡದ ಕೆನಡಿಯನ್ ಭೂಫಲಕದಲ್ಲಿ ಒಂದೇ ರೀತಿಯ ಭೌತಿಕ ಲಕ್ಷಣಹೊಂದಿರುವ ಅಸಂಖ್ಯಾತ ಸರೋವರಗಳು ನಿರ್ಮಾಣಗೊಂಡಿವೆ. ಅವು ಹಿಮನದಿಗಳ ಕಾರ್ಯಾಚರಣೆಯಿಂದಾಗಿವೆ.

ನದಿಗಳು: ಮಿಸಿಸಿಪ್ಪಿ ಮತ್ತು ಮಿಸ್ಸೋರಿಗಳು ಉತ್ತರ ಅಮೇರಿಕದ ಅತಿ ದೊಡ್ಡ ನದಿಗಳಾಗಿದ್ದು, ಒಟ್ಟಾರೆ ಅವು 2/3ರಷ್ಟು ಭೂಭಾಗದ ಮೂಲಕ ಹರಿಯುತ್ತವೆ. ಮಿಸಿಸಿಪ್ಪಿ ಅತಿ ದೊಡ್ಡ ನದಿಯಾಗಿದ್ದು, ಮೆಕ್ಸಿಕೊ ಖಾರಿಯೊಳಕ್ಕೆ ಹರಿಯುತ್ತದೆ.

ಕೊಲರಾಡೊ ನದಿಯು ಕೊಲರಾಡೊ ಪ್ರಸ್ಥಭೂಮಿಯ ಮೂಲಕ ಹರಿಯುತ್ತಾ ಮಹಾಕಂದರವನ್ನು ನಿರ್ಮಾಣ ಮಾಡಿದೆ. ಅದು ಪ್ರಕೃತಿ ಸೌಂದರ್ಯ ಮತ್ತು ಪ್ರವಾಸೋದ್ಯಮದ ಕೇಂದ್ರವಾಗಿದೆ. ಮಹಾಕಂದರವನ್ನು `ಪ್ರಪಂಚದ ಪ್ರಾಕೃತಿಕ ಅದ್ಭುತ’ ಎಂದು ಕರೆಯಲಾಗಿದೆ.

ಸೆಂಟ್ ಲಾರೆನ್ಸ್ ಅಮೇರಿಕದ ಸಂಯುಕ್ತ ಸಂಸ್ಥಾನ ಮತ್ತು ಕೆನಡಗಳ ಅತಿ ಪ್ರಮುಖವಾದ ನದಿಯಾಗಿದೆ. ಇದು ಮಹಾಸರೋವರಗಳ ಮೂಲಕ ಹರಿಯುತ್ತದೆ. ಒಂದು ವರ್ಷದ ಅವಧಿಯಲ್ಲಿ ಇದು ಮೂರು ತಿಂಗಳುಗಳ ಕಾಲ ಹಿಮರೂಪದಲ್ಲಿರುತ್ತದೆ.
ಸರೋವರಗಳು: ಉತ್ತರ ಅಮೇರಿಕವು ಅಪಾರ ಸಂಖ್ಯೆಯ ಸಿಹಿನೀರಿನ ಮತ್ತು ಉಪ್ಪು ನೀರಿನ ಸರೋವರಗಳನ್ನು ಹೊಂದಿದೆ. ಅವುಗಳು ಕೆನಡಿಯನ್ ಭೂಫಲಕದ ದಕ್ಷಿಣದ ಗಡಿಭಾಗದಲ್ಲಿ ನೆಲೆಗೊಂಡಿವೆ. ಹ್ಯೂರಾನ್, ಓಂಟಾರಿಯೊ, ಮಿಚಿಗನ್, ಐರಿ ಮತ್ತು ಸುಪೀರಿಯರ್ಗಳು ಪ್ರಮುಖವಾದ ಸರೋವರಗಳಾಗಿವೆ.

ಒಟ್ಟಾರೆಯಾಗಿ ಸರೋವರಗಳನ್ನು ಹೋಮ್ಸ್ ಎಂದು ಕರೆಯಲಾಗಿದೆ. ಸುಪೀರಿಯರ್ ಸರೋವರವು ಮಹಾಸರೋವರಗಳಲ್ಲಿ ದೊಡ್ಡದಾಗಿದ್ದು ವಿಶ್ವದ ಅತಿ ದೊಡ್ಡ ಸಿಹಿ ನೀರಿನ ಸರೋವರವಾಗಿದೆ. ಚಿಕಾಗೊ ಮತ್ತು ಡೆಟ್ರಾಯಿಟ್ ನಗರಗಳು ಮಿಚಿಗನ್ ಸರೋವರದ ದಡದ ಮೇಲೆ ನೆಲೆಗೊಂಡಿವೆ. ಈ ಎಲ್ಲಾ ಸರೋವರಗಳು ಪ್ರಮುಖವಾದ ಜಲಮಾರ್ಗಗಳನ್ನು ಒದಗಿಸಿವೆ.
ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗ
ವಾಯುಗುಣ: ಉತ್ತರ ಅಮೇರಿಕವು ಅತಿ ವಿಸ್ತಾರವಾದ ವಿಭಿನ್ನ ಮೇಲ್ಮೈ ಲಕ್ಷಣ ಮುಂತಾದವುಗಳಿಂದಾಗಿ ಭಿನ್ನವಾದ ವಾಯುಗುಣವನ್ನು ಹೊಂದಿದೆ. ಅಲಾಸ್ಕ ಮತ್ತು ಗ್ರೀನ್ಲ್ಯಾಂಡ್ ಹೆಪ್ಪುಗಟ್ಟುವ ಹವಾಗುಣ ಪರಿಸ್ಥಿತಿಗಳನ್ನು (ಟಂಡ್ರಾ ಮಾದರಿ) ಹೊಂದಿದ್ದರೆ, ಅಮೇರಿಕ ಸಂಯುಕ್ತ ಸಂಸ್ಥಾನದ ನೈರುತ್ಯದಲ್ಲಿರುವ ಮರುಭೂಮಿಗಳು ಸುಡುವ ಶಾಖವನ್ನು ಹೊಂದಿವೆ. ಫ್ಲಾರಿಡದ ಆಗ್ನೇಯ ಭಾಗ, ಕೆರಿಬಿಯನ್ ಮತ್ತು ಕೇಂದ್ರೀಯ ಅಮೇರಿಕ ಉಷ್ಣವಲಯ ಪರಿಸ್ಥಿತಿಯನ್ನು ಹೊಂದಿವೆ. ಈ ಖಂಡದ ಕೇಂದ್ರ ಮತ್ತು ದಕ್ಷಿಣ ಪ್ರದೇಶಗಳು ಹರಿಕೇನ್ಸ್ ಮತ್ತು ಟರ್ನೋಡೊಗಳಂತಹ ತೀವ್ರವಾದ ಬಿರುಗಾಳಿಯುಕ್ತ ಪ್ರದೇಶಗಳಾಗಿವೆ.





ಸ್ವಾಭಾವಿಕ ಸಸ್ಯವರ್ಗ: ಸ್ವಾಭಾವಿಕ ಸಸ್ಯವರ್ಗ ಮತ್ತು ಪ್ರಾಣಿವರ್ಗಗಳ ಜೀವನವು ಹೆಚ್ಚಾಗಿ ಅಲ್ಲಿನ ವಾಯುಗುಣ, ಮಣ್ಣು ಮತ್ತು ಭೂಸ್ವರೂಪ ಲಕ್ಷಣಗಳನ್ನು ಅವಲಂಬಿಸಿದೆ. ಉತ್ತರ ಅಮೇರಿಕವು ಹೊಂದಿರುವ ವಾಯುಗುಣ ಮತ್ತು ಭೂಸ್ವರೂಪದ ವೈವಿಧ್ಯತೆಯಿಂದಾಗಿ, ಅದು ಅಧಿಕ ಪ್ರಮಾಣದ ವೈವಿಧ್ಯಮಯ ಅರೆಶುಷ್ಕ ಸಸ್ಯವರ್ಗಗಳನ್ನು ಹೊಂದಿದೆ.

ಈ ಸಸ್ಯವರ್ಗದ ಪಟ್ಟಿಗಳು ಮುಖ್ಯವಾಗಿ ವಾಯುಗುಣ ಪ್ರದೇಶಗಳನ್ನು ಅನುಸರಿಸುತ್ತವೆ. ಅವುಗಳೆಂದರೆ ಟಂಡ್ರಾ ಮಾದರಿಯ ಸಸ್ಯವರ್ಗವು ಉತ್ತರ ಮೇರುವೃತ್ತ (ಆಕ್ರ್ಟಿಕ್ ವೃತ್ತ)ದೊಳಗೆ ಕಂಡುಬರುತ್ತದೆ. ಅದರಲ್ಲೂ ಮುಖ್ಯವಾಗಿ ಕೆನಡ, ಅಲಾಸ್ಕ್ ಮತ್ತು ಗ್ರೀನ್ಲ್ಯಾಂಡ್ಗಳಲ್ಲಿ ಕಂಡುಬರುತ್ತದೆ. ಚಳಿಗಾಲವು ದೀರ್ಘ ಮತ್ತು ಹೆಪ್ಪುಗಟ್ಟುವ ಹಾಗೂ ಬೇಸಿಗೆಯು ಅತಿಕಡಿಮೆ ಅವಧಿಯ ಲಕ್ಷಣದಿಂದ ಕೂಡಿದೆ. ಇಲ್ಲಿ ಕಂಡುಬರುವ ಸಸ್ಯವರ್ಗಗಳೆಂದರೆ ಪಾಚಿ ಮತ್ತು ಹಾವಸೆಗಳು ಮಾತ್ರ. ಬೇಸಿಗೆ ಋತುಮಾನದಲ್ಲಿ ಕೆಲವು ಸುಗಂಧದ್ರವ್ಯಕ್ಕೆ ಸಂಬಂಧಿಸಿದ ಹೂಬಿಡುವ ಸಸ್ಯಗಳುಬೆಳೆಯುತ್ತವೆ. ಇಂತಹ ಕಷ್ಟ ಮತ್ತು ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಬದುಕಬಲ್ಲ ಹಿಮಜಿಂಕೆ, ಕಾರಿಬೊ ಮತ್ತು ಶಾಖಾಹಾರಿಗಳಾದ ಹಿಮಕರಡಿಗಳು ಇಲ್ಲಿ ಕಂಡುಬರುತ್ತವೆ.

ಟಂಡ್ರಾ ಪಟ್ಟಿಯ ದಕ್ಷಿಣದಲ್ಲಿ ತಂಪಾದ ಸಮಶೀತೋಷ್ಣ ವಿಧದ ವಾಯುಗುಣ ಪ್ರದೇಶವಿರುವುದರಿಂದ ಶೀತವಾಯುಗುಣದ ನರಿಗಳು ಕಂಡುಬರುತ್ತವೆ. ಇದು ವಾಸ್ತವವಾಗಿ
ಸೂಚಿಪರ್ಣ ಅರಣ್ಯದ ಪಟ್ಟಿಯಾಗಿದ್ದು ಅದನ್ನು ಟೈಗಾ ಎಂದು ಕರೆಯಲಾಗಿದೆ. ಸೂಚಿಪರ್ಣ ಅರಣ್ಯಗಳಲ್ಲಿ ಸದಾ ಹಸಿರಿನಿಂದ ಕೂಡಿದ ಸಂಕುಲಗಳಾದ ಪೈನ್, ಫರ್, ಸ್ಪ್ರೂಸ್, ಲಾರ್ಚ್ ಮುಂತಾದವುಗಳು ಕಂಡುಬರುತ್ತವೆ. ಉಣ್ಣೆಯಂತಹ ಕೂದಲನ್ನು ಹೊಂದಿರುವ ಪ್ರಾಣಿಗಳನ್ನು ಈ ಪ್ರದೇಶದಲ್ಲಿ ಕಾಣಬಹುದು. ಉದಾ: ಲೈನಾಕ್ಸ್, ಸಾಬಲ್, ಸಿಲ್ವರ್ ಫಾಕ್ಸ್ ಇತ್ಯಾದಿ.







ಎಲೆಯುದುರುವ ವಿಧದ ಅರಣ್ಯಗಳನ್ನು ಸೆಂಟ್ ಲಾರೆನ್ಸ್ ಮತ್ತು ಮಹಾಸರೋವರಗಳ ಪೂರ್ವಭಾಗದಲ್ಲಿ ಕಾಣಬಹುದು. ಈ ಪ್ರಾಂತ್ಯದ ಉತ್ತರ ಭಾಗವು ಶೀತದಿಂದ ಮತ್ತು ದಕ್ಷಿಣದ ಭಾಗವು ಬೆಚ್ಚನೆಯ ಗುಣದಿಂದ ಕೂಡಿದೆ. ಚಳಿಗಾಲವು ಶೀತವಾಗಿದ್ದರೆ ಬೇಸಿಗೆಯು ಬೆಚ್ಚಗಾಗಿದೆ ಮತ್ತು ಸಾಮಾನ್ಯವಾಗಿ ಮಳೆಯನ್ನು ಪಡೆಯುತ್ತದೆ. ಇಲ್ಲಿ ಕಂಡುಬರುವ ಮರಗಳು ನಿರ್ದಿಷ್ಟ ಪಡಿಸಿದ ಅವಧಿಯಲ್ಲಿ ತಮ್ಮ ಎಲೆಗಳನ್ನು ಉದುರಿಸಿಕೊಳ್ಳುತ್ತವೆ. ಉದಾ: ಸೈಪ್ರಸ್, ಓಕ್, ಆಶ್ ಮತ್ತು ಚೆಸ್ಟ್ನಟ್ಗಳು. ಇಲ್ಲಿ ಕಂಡುಬರುವ ವನ್ಯಜೀವಿಗಳೆಂದರೆ ಬೀವರ್, ಕಪ್ಪುಕರಡಿ, ಹಿಮಇಲಿ ಮತ್ತು ಪೋರ್ಕುಪೈನ್ಗಳಾಗಿವೆ.

ತಂಪಾದ ಸಮಶೀತೋಷ್ಣವಲಯದ ಸಸ್ಯವರ್ಗ ಮತ್ತು ವಾಯುಗುಣವನ್ನು ಅಮೇರಿಕ ಸಂಯುಕ್ತ ಸಂಸ್ಥಾನದ ಭಾಗಗಳಲ್ಲಿ ಕಾಣಬಹುದಾಗಿದೆ. ರಾಕೀ ಪರ್ವತಗಳು ಮತ್ತು ಮಿಸಿಸಿಪ್ಪಿ- ಮಿಸ್ಸೋರಿ ಮಹಾನದಿ ಮುಖಜಭೂಮಿಗಳ ಮಧ್ಯೆ ವಿಶಾಲವಾದ ಹುಲ್ಲುಗಾವಲು ಪ್ರದೇಶವಿದೆ. ಇದನ್ನು ಪ್ರೈರೀಸ್ ಎಂತಲೂ ಕರೆಯಲಾಗುತ್ತದೆ. ಇದು ವಾಸ್ತವವಾಗಿ ವಿಶಾಲವಾದ ವೃಕ್ಷರಹಿತ ಮೈದಾನವಾಗಿದೆ. ಈ ಮೈದಾನ ಪ್ರದೇಶವು ಗೋಧಿ ಬೇಸಾಯ ಮತ್ತು ಪಶುಸಂಗೋಪನೆಗೆ ಹೆಸರುವಾಸಿಯಾಗಿದೆ. ಇದನ್ನು ಪ್ರಪಂಚದ ಗೋಧಿಯ ಕಣಜ ಅಥವಾ `ರೊಟ್ಟಿಯ ಬುಟ್ಟಿ’ ಎಂದು ಕರೆಯುತ್ತಾರೆ.

ಸೂಚಿಪರ್ಣ ಮತ್ತು ಎಲೆಯುದುರುವ ಅರಣ್ಯಗಳ ಮರಗಳು ಸಮಶೀತೋಷ್ಣ ಮಿಶ್ರ ಅರಣ್ಯಗಳಲ್ಲಿ ಕಂಡುಬರುತ್ತವೆ. ಕೆನಡ ಮತ್ತು ಉತ್ತರ ಕ್ಯಾಲಿಫೋರ್ನಿಯಗಳು ಅಂತಹ ಅರಣ್ಯಗಳನ್ನು ಹೊಂದಿವೆ. ಈ ಅರಣ್ಯ ಪ್ರದೇಶದಲ್ಲಿ ಕಂಡುಬರುವ ಪ್ರಮುಖ ಮರಗಳೆಂದರೆ ಬರ್ಚ್, ಬೀಚ್, ಮ್ಯಾಪಲ್, ಓಕ್ ಮುಂತಾದವುಗಳು.



ಕೆನಡ ಸರೋವರಗಳಿಂದ ಕೂಡಿದ ದೇಶ. ವಿರಳ ಜನಸಂಖ್ಯೆ ಹಾಗೂ ಅಪಾರ ಟೈಗಾ ಮಾದರಿಯ ಕಾಡುಗಳಿಂದಾಗಿದೆ. ಪ್ರಪಂಚದ ಅತ್ಯಧಿಕ ಮರದ ರಫ್ತು ಇಲ್ಲಿಂದಾಗುತ್ತದೆ.
ಮೆಕ್ಸಿಕೊದ ದಕ್ಷಿಣ ಭಾಗ ಮತ್ತು ವೆಸ್ಟ್ ಇಂಡೀಸ್ ಪ್ರದೇಶವು ಉಷ್ಣವಲಯದ ಅರಣ್ಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಗಟ್ಟಿಮರಗಳಾದ ಮಹಾಗನಿ ಮತ್ತು ಲಾಗ್ವುಡ್ಗಳನ್ನು ಒಳಗೊಂಡಂತಿರುವ ಮಿಶ್ರ ಅರಣ್ಯಗಳನ್ನು ಕಾಣಬಹುದು.

ಕ್ಯಾಲಿಫೋರ್ನಿಯದ ಪಶ್ಚಿಮ ಕರಾವಳಿಯು ಮೆಡಿಟರೇನಿಯನ್ ವಿಧದ ವಾಯುಗುಣ ಪರಿಸ್ಥಿಯನ್ನು ಹೊಂದಿದೆ. ದಕ್ಷಿಣ ಕ್ಯಾಲಿಫೋರ್ನಿಯ, ಮೆಕ್ಸಿಕೊ ಮತ್ತು ಅರಿಝೋನಗಳಲ್ಲಿ ಈ ಖಂಡದ ಪಶ್ಚಿಮ ಭಾಗದ ಮರುಭೂಮಿಯಂತಹ (ಶುಷ್ಕ) ಪರಿಸ್ಥಿತಿಯನ್ನು ಕಾಣಬಹುದಾಗಿದೆ. ವಿವಿಧ ರೀತಿಯ ಪಾಪಾಸು ಕಳ್ಳಿ ಮತ್ತು ಮುಳ್ಳಿನ ಪೊದೆಗಳು ಇಲ್ಲಿ ಸರ್ವೇಸಾಮಾನ್ಯ. ಇಲ್ಲಿನ ಮರುಭೂಮಿಯ ರಾತ್ರಿಗಳನ್ನು `ಮರುಭೂಮಿಗಳ ಚಳಿಗಾಲ’ವೆಂದು ಕರೆಯಲಾಗಿದೆ.

ಕೃಷಿ: ಕೃಷಿಯು ಉತ್ತರ ಅಮೇರಿಕದ ಒಂದು ಪ್ರಮುಖವಾದ ಕಸುಬಾಗಿದೆ. ಈ ಖಂಡದ ಕೇಂದ್ರೀಯ ತಗ್ಗು ಪ್ರದೇಶಗಳಾದ ಅದರಲ್ಲೂ ವಿಶೇಷವಾಗಿ ಕೆನಡ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನಗಳು ಅತ್ಯಧಿಕ ಕೃಷಿ ಉತ್ಪನ್ನ ರಾಷ್ಟ್ರಗಳಾಗಿವೆ. ಉತ್ತರ ಅಮೇರಿಕದ ಒಟ್ಟು ಭೂಭಾಗದಲ್ಲಿನ ಶೇ.10ರಷ್ಟು ಪ್ರದೇಶವು ಮಾತ್ರ ಕೃಷಿಗೆ ಸೂಕ್ತವಾಗಿದೆ. ಆದರೆ ಆ ಕೃಷಿ ಕ್ಷೇತ್ರಗಳಿಂದ ಬರುತ್ತಿರುವ ಉತ್ಪನ್ನ ಅತಿ ಹೆಚ್ಚು ಏಕೆಂದರೆ ವಿಸ್ತಾರವಾದ ಕೃಷಿ ಕ್ಷೇತ್ರಗಳು, ಫಲವತ್ತಾದ ಮಣ್ಣು, ಸಾಕಷ್ಟು ನೀರಾವರಿ, ಯಾಂತ್ರಿಕ ಬೇಸಾಯ ಹಾಗೂ ಇತರ ಸೌಲಭ್ಯಗಳ ಜೊತೆಗೆ ಮಾನವನ ಪೂರ್ಣ ಶ್ರಮವಿರುವುದರಿಂದ ಉತ್ತರ ಅಮೇರಿಕವನ್ನು ವಿಶ್ವದ ಅತಿದೊಡ್ಡ ಕೃಷಿ ಪ್ರದೇಶವನ್ನಾಗಿ ಮಾರ್ಪಡಿಸಿದೆ.
ವಿಶಿಷ್ಟ ಬೆಳೆಗಳ ಉತ್ಪಾದನೆಯಲ್ಲಿ ವಿಶಿಷ್ಟತೆಯನ್ನು ಹೊಂದಿರುವ ಪ್ರಾಂತ್ಯಗಳನ್ನು ಬೆಳೆಪಟ್ಟಿ ಎಂದು ಕರೆಯಲಾಗಿದೆ. ಉದಾ: ಕಾರ್ನ್ಪಟ್ಟಿ, ಗೋಧಿಪಟ್ಟಿ, ಹತ್ತಿಪಟ್ಟಿ, ತಂಬಾಕುಪಟ್ಟಿ ಇತ್ಯಾದಿ.
ಉತ್ತರ ಅಮೇರಿಕ ಅದರಲ್ಲೂ ವಿಶೇಷವಾಗಿ ಕೆನಡ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನಗಳು ಗೋಧಿಯನ್ನು ಒಂದು ಪ್ರಮುಖ ಆಹಾರ ಧಾನ್ಯವನ್ನಾಗಿ ಬೆಳೆಯುತ್ತಿದೆ. ಪ್ರೈರಿ ಪ್ರದೇಶವು ಗೋಧಿ ಬೇಸಾಯಕ್ಕೆ ಸೂಕ್ತ ಮಣ್ಣನ್ನು ಒದಗಿಸಿದೆ. ಇಲ್ಲಿನ ಜನಸಂಖ್ಯೆಯು ಕಡಿಮೆಯಿದ್ದು, ಅಪಾರ ಪ್ರಮಾಣದ ಉತ್ಪಾದನೆ ಇರುವುದರಿಂದ ಅದನ್ನು ರಫ್ತು ಮಾಡಲಾಗುತ್ತಿದೆ. ಮೆಕ್ಕೆಜೋಳವು ಕಾರ್ನ್ ಎಂದು ಪ್ರಖ್ಯಾತಿಪಡೆದಿದೆ. ಅದನ್ನು ಸಂಯುಕ್ತ ರಾಜ್ಯಗಳು ಮತ್ತು ಮೆಕ್ಸಿಕೊಗಳಲ್ಲಿ ವಿಶಾಲ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಬಹುತೇಕ ಪ್ರಮಾಣದ ಮೆಕ್ಕೆ ಜೋಳವನ್ನು ಹಸುಗಳು ಮತ್ತು ಹಂದಿಗಳ ಮೇವುಗಳಿಗಾಗಿ ಉಪಯೋಗಿಸಲಾಗುತ್ತದೆ. ಇವುಗಳನ್ನು ಮೆಕ್ಸಿಕೊದಲ್ಲಿ ಮಾಂಸಕ್ಕಾಗಿ ಸಾಕಲಾಗುತ್ತದೆ. ಇದೊಂದು ಆಹಾರ ಧಾನ್ಯವಾಗಿದೆ. ಆದರೆ ಇಂದು ಮೆಕ್ಕೆಜೋಳವು ಇಂಧನ ಬೆಳೆಯಾಗಿ ಬೆಳೆಯಲಾಗುತ್ತಿದೆ.

ಇತರ ಪ್ರಧಾನ ಬೆಳೆಗಳೆಂದರೆ ಬಾರ್ಲಿ, ಓಟ್ಸ್ ಮತ್ತು ಆಲೂಗಡ್ಡೆಗಳಾಗಿವೆ. ಬಾರ್ಲಿಯನ್ನು ಬಿಯರ್ (beer) ತಯಾರಿಕೆಗೆ ಬಳಸಲಾಗುತ್ತದೆ. ಓಟ್ಸನ್ನು ಪ್ರಾಣಿಗಳ ಮೇವುಗಳಿಗಾಗಿ ಉಪಯೋಗಿಸಲಾಗುತ್ತದೆ. ಈ ಖಂಡದಲ್ಲಿ ಆಲುಗಡ್ಡೆಯನ್ನು ಸಹ ಬೆಳೆಯಲಾಗುತ್ತಿದ್ದು ಇದು ಪ್ರಮುಖ ಆಹಾರ ಬೆಳೆಯಾಗಿದೆ.


ಉತ್ತರ ಅಮೇರಿಕದಲ್ಲಿ ಹತ್ತಿ ಮತ್ತು ತಂಬಾಕುಗಳನ್ನು ವಾಣಿಜ್ಯ ಬೆಳೆಗಳನ್ನಾಗಿ ದಕ್ಷಿಣ ಭಾಗಗಳಲ್ಲಿ ಬೆಳೆಯಲಾಗುತ್ತಿದೆ. ಮಿಸಿಸಿಪಿ ನದಿಯ ಕಣಿವೆಯುದ್ದಕ್ಕೂ ಹತ್ತಿ ಪ್ರದೇಶವು ಕಂಡುಬರುತ್ತದೆ. ಅಮೇರಿಕ ತಂಬಾಕು ಬೆಳೆಯುತ್ತಿರುವ ವಿಶ್ವದ ರಾಷ್ಟ್ರಗಳಲ್ಲಿ ಚೀನದ ನಂತರ ಎರಡನೇ ಸ್ಥಾನದಲ್ಲಿದೆ.
ಕಬ್ಬು ಇಲ್ಲಿ ಬೆಳೆಯುತ್ತಿರುವ ಮತ್ತೊಂದು ಪ್ರಮುಖ ಬೆಳೆಯಾಗಿದೆ. ಕ್ಯೂಬಾ ವಿಶ್ವದಲ್ಲಿ ಸಕ್ಕರೆ ಉತ್ಪಾದನೆಯ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿರುವುದರಿಂದಲೇ ಇದನ್ನು `ಜಗತ್ತಿನ ಸಕ್ಕರೆ ಬೋಗುಣಿ’ ಎಂದು ಕರೆಯಲಾಗಿದೆ.

ಕಾಫಿ ಮತ್ತು ಕೋಕ್ಗಳು ಉಷ್ಣವಲಯದ ತೋಟಗಾರಿಕಾ ಬೆಳೆಯಾಗಿದ್ದು, ಇದನ್ನು ಕೇಂದ್ರೀಯ ಅಮೇರಿಕದ ಭಾಗಗಳು ಮತ್ತು ವೆಸ್ಟ್ ಇಂಡಿಸ್ಗಳಲ್ಲಿ ಬೆಳೆಯಲಾಗುತ್ತಿದೆ. ಕ್ಯಾಲಿಫೋರ್ನಿಯ, ಫ್ಲಾರಿಡಾ, ನ್ಯೂಜೆರ್ಸಿ ಮತ್ತು ನಗರ ಕೇಂದ್ರಗಳ ಸುತ್ತಲಿನ ಪ್ರದೇಶಗಳಲ್ಲಿ ದ್ರಾಕ್ಷಿ, ಕಿತ್ತಳೆ, ನಿಂಬೆ (ಲಿಂಬೆ), ಸೇಬು, ಸೀಬೆ, ಪೀಚ್ ಇತ್ಯಾದಿ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಕ್ಯಾಲಿಫೋರ್ನಿಯವು ಉತ್ತರ ಅಮೇರಿಕದ ಶೇ.90ರಷ್ಟು ದ್ರಾಕ್ಷಿಯನ್ನು ಬಳಸಿ ದ್ರಾಕ್ಷಾರಸ ಉತ್ಪಾದಿಸುತ್ತದೆ. ಆದುದರಿಂದ ಕ್ಯಾಲಿಫೋರ್ನಿಯವನ್ನು `ದ್ರಾಕ್ಷಾರಸದ ರಾಜ್ಯ’ ಎಂದು ಕರೆಯಲಾಗಿದೆ.
ಉತ್ತರ ಅಮೇರಿಕ ಖಂಡದ ಈಶಾನ್ಯ ಭಾಗದ ಅಂಟ್ಲಾಂಟಿಕ್ ಸಾಗರ ತೀರದಲ್ಲಿ ಗ್ರ್ಯಾಂಡ್ ಬ್ಯಾಂಕ್ಗಳು, ನ್ಯೂಇಂಗ್ಲೆಂಡಿನ ಜಾರ್ಜಸ್ ಬ್ಯಾಂಕ್ಗಳು ಮತ್ತು ನ್ಯೂಫೌಂಡ್ ಲ್ಯಾಂಡ್ ಕರಾವಳಿಗಳ ಆಳವಿಲ್ಲದ ಖಂಡಾವರಣ ಪ್ರದೇಶಗಳು ಹೆಸರಾಂತ ಮೀನುಗಾರಿಕಾ ಪ್ರದೇಶಗಳಾಗಿವೆ.
ಪ್ರಮುಖ ಖನಿಜಗಳು ಮತ್ತು ಕೈಗಾರಿಕೆಗಳು
ಉತ್ತರ ಅಮೇರಿಕವು ಸಾಕಷ್ಟು ಸಂಪನ್ಮೂಲಗಳ ಕೃಪೆಗೆ ಒಳಗಾಗಿದೆ. ಅದರ ನೈಸರ್ಗಿಕ ಸಂಪನ್ಮೂಲಗಳೆಂದರೆ ವೈವಿಧ್ಯಮಯ ಮಣ್ಣುಗಳು, ವಿಸ್ತಾರವಾದ ಹುಲ್ಲುಗಾವಲುಗಳು, ಖನಿಜಗಳು, ಶಕ್ತಿ ಸಂಪನ್ಮೂಲಗಳು ಮತ್ತು ಅರಣ್ಯ ಸಂಪತ್ತುಗಳಾಗಿವೆ.
ಉತ್ತರ ಅಮೇರಿಕ ಭೂಖಂಡವು ವಿವಿಧ ಬೆಲೆಬಾಳುವ ಖನಿಜಗಳ ಅಧಿಕ ನಿಕ್ಷೇಪವನ್ನು ಹೊಂದಿದೆ. ಇಲ್ಲಿರುವ ಚಿನ್ನದ ನಿಕ್ಷೇಪವು ಜನರನ್ನು ಈ ಖಂಡಕ್ಕೆ ಬಹು ಹಿಂದೆಯೇ ಆಕರ್ಷಿಸಿದೆ. ಇದಲ್ಲದೆ ಕಬ್ಬಿಣದ ಅದಿರು, ತಾಮ್ರ, ನಿಕಲ್, ಬೆಳ್ಳಿ ಮತ್ತು ಸತುಗಳು ಇತರ ಪ್ರಮುಖವಾದ ಖನಿಜ ನಿಕ್ಷೇಪಗಳಾಗಿವೆ. ಈ ಖಂಡವು ಸಾಕಷ್ಟು ಪ್ರಮಾಣದ ಕಲ್ಲಿದ್ದಲು, ಕಲ್ಲೆಣ್ಣೆ (ಸೀಮೆಎಣ್ಣೆ) ಮತ್ತು ನೈಸರ್ಗಿಕ ಅನಿಲಗಳನ್ನು ಹೊಂದಿದೆ.
ಉತ್ತರ ಅಮೇರಿಕದಲ್ಲಿ ಪ್ರಪ್ರಥಮ ಖನಿಜ ಗಣಿಯೆಂದರೆ ಚಿನ್ನದ ಗಣಿಯಾಗಿದೆ. ಕ್ಯಾಲಿಫೋರ್ನಿಯ ಮತ್ತು ಯೂಕಾಟನ್ ಕಣಿವೆಗಳು ಚಿನ್ನದ ಗಣಿಗಳ ಪ್ರಮುಖ ಪ್ರದೇಶಗಳಾಗಿವೆ. ಸುಪೀರಿಯರ್ ಸರೋವರ ಮತ್ತು ಅದನ್ನು ಸುತ್ತುವರಿದಿರುವ ಪ್ರದೇಶಗಳು ಅಪಾರ ಪ್ರಮಾಣದ ಕಬ್ಬಿಣದ ಅದಿರಿನ ನಿಕ್ಷೇಪಕ್ಕೆ ಪ್ರಖ್ಯಾತಿ ಪಡೆದಿವೆ. ಅತಿ ಉತ್ಕೃಷ್ಟ ದರ್ಜೆಯ ಕಬ್ಬಿಣದ ಅದಿರನ್ನು ಕೆನಡಿಯನ್ ಭೂಫಲಕದಲ್ಲಿ ಮತ್ತು ಅದನ್ನು ಸುತ್ತುವರಿದ ಪ್ರದೇಶದಲ್ಲಿ ಕಾಣಬಹುದಾಗಿದೆ. ಮೆಕ್ಸಿಕೊ ವಿಶ್ವದ ಪ್ರಮುಖ ಬೆಳ್ಳಿ ಉತ್ಪಾದಿಸುತ್ತಿರುವ ರಾಷ್ಟ್ರವಾಗಿದೆ. ಅಮೇರಿಕ ಸಂಯುಕ್ತ ಸಂಸ್ಥಾನವು ಪ್ರಪಂಚದಲ್ಲಿ ಅತ್ಯಧಿಕ ತಾಮ್ರವನ್ನು ಉತ್ಪಾದಿಸುತ್ತಿರುವ ರಾಷ್ಟ್ರವಾಗಿದೆ.


ಉತ್ತರ ಅಮೇರಿಕವು ಇಲ್ಲಿನ ಅಪಲೇಷಿಯನ್ ಪ್ರದೇಶದಲ್ಲಿ ಉತ್ತಮ ದರ್ಜೆಯ ಕಲ್ಲಿದ್ದಲ್ಲಿನ ಅಧಿಕ ನಿಕ್ಷೇಪವನ್ನು ಹೊಂದಿದೆ. ಅಮೇರಿಕ ಸಂಯುಕ್ತ ಸಂಸ್ಥಾನವು ಪ್ರಪಂಚದ ಅತ್ಯಧಿಕ ಕಲ್ಲಿದ್ದಲನ್ನು ರಫ್ತು ಮಾಡುತ್ತಿರುವ ದೇಶವಾಗಿದೆ. ಪೆಸಿಫಿಕ್ ಮಹಾಸಾಗರದಂಚಿನ ಪ್ರದೇಶಗಳು ನೈಸರ್ಗಿಕ ಅನಿಲದ ಅಧಿಕ ನಿಕ್ಷೇಪವನ್ನು ಹೊಂದಿವೆ. ಅಮೇರಿಕ ಸಂಯುಕ್ತ ಸಂಸ್ಥಾನವು ಪ್ರಮುಖ ಪೆಟ್ರೋಲಿಯಂ ಉತ್ಪಾದಿಸುತ್ತಿರುವ ರಾಷ್ಟ್ರವಾಗಿದೆಯಲ್ಲದೆ ವಿಶ್ವದಲ್ಲಿ ಅಧಿಕ ಅಣುಶಕ್ತಿಯನ್ನು ಉತ್ಪಾದಿಸುತ್ತಿರುವ ದೇಶವೂ ಆಗಿದೆ.

ಉತ್ತರ ಅಮೇರಿಕದ ದೇಶಗಳಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಗಳು ಅತಿ ಕೈಗಾರಿಕೀಕರಣಕ್ಕೊಳಪಟ್ಟಿವೆ. ಇಲ್ಲಿ ಲಭ್ಯವಿರುವ ಕಬ್ಬಿಣದ ಅದಿರು, ಕಲ್ಲಿದ್ದಲು, ತಾಮ್ರ, ಬಾಕ್ಸೈಟ್ ಳಂತಹ ಕಚ್ಚಾ ವಸ್ತುಗಳು ಭಾರಿ ಕೈಗಾರಿಕೆಗಳಿಗೆ ಸಹಾಯಕವಾಗಿವೆ. ಶಕ್ತಿ, ಸಾರಿಗೆ ಮತ್ತು ಆಧುನಿಕ ತಾಂತ್ರಿಕತೆಗಳ ಲಭ್ಯತೆಯು ವಿಸ್ತೃತ ಕೈಗಾರಿಕೀಕರಣಕ್ಕೆ ಕಾರಣವಾಗಿದೆ.
ಐರಿ, ಸುಪೀರಿಯರ್ ಮತ್ತು ಮಿಚಿಗನ್ ಸರೋವರಗಳ ಪ್ರದೇಶಗಳಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು ಉತ್ತಮವಾಗಿ ಅಭಿವೃದ್ಧಿಗೊಂಡಿರುವುದನ್ನು ಕಾಣಬಹುದು. ಇದಕ್ಕೆ ಇಲ್ಲಿನ ಕಚ್ಚಾವಸ್ತುಗಳು ಮತ್ತು ಜಲಸಾರಿಗೆಗಳು ಸಹಾಯಕವಾಗಿವೆ. ಇಲ್ಲಿನ ಪಿಟ್ಸ್ಬರ್ಗ್ ನಗರವನ್ನು `ಉಕ್ಕಿನ ನಗರ’ ಎಂದು ಕರೆಯಲಾಗಿದೆ. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯು ಮೂಲ ಕೈಗಾರಿಕೆಯಾದ್ದರಿಂದ ಇದು ಇತರ ಕೈಗಾರಿಕೆಗಳಾದ ಆಟೋಮೊಬೈಲ್, ಹಡಗು ನಿರ್ಮಾಣ, ಲೋಕೋಮೋಟೀವ್ಸ್, ಭಾರಿ ಇಂಜಿನಿಯರಿಂಗ್, ವಿಮಾನ ನಿರ್ಮಾಣ ಮುಂತಾದ ಕೈಗಾರಿಕೆಗಳ ಅಭಿವೃದ್ಧಿಗೆ ಸಹಾಯಕವಾಗಿದೆ.

ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಗಳಲ್ಲಿ ಮೃದು ಮರಗಳನ್ನು ಕಾಗದ, ಕಾರ್ಡ್ಬೋರ್ಡ್ ಮತ್ತು ನ್ಯೂಸ್ಪ್ರಿಂಟ್ಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ತಿರುಳನ್ನು ಕೃತಕ ನಾರು ತಯಾರಿಕೆಯಲ್ಲಿ ಬಳಸುವರು. ಕಾಗದ, ತಿರುಳು ಮತ್ತು ನ್ಯೂಸ್ಪ್ರಿಂಟ್ಗಳ ರಫ್ತಿನಲ್ಲಿ ಕೆನಡವು ಅತಿ ಪ್ರಮುಖ ರಾಷ್ಟ್ರವಾಗಿದೆ. ಮರಕಡಿಯುವಿಕೆ ಉತ್ತರ ಅಮೇರಿಕದಲ್ಲಿ ಉತ್ತಮ ಸಂಘಟಿತ ವೃತ್ತಿಯಾಗಿದೆ. ಕೆನಡದಲ್ಲಿ ಮರಕಡಿಯುವ ವೃತ್ತಿಯನ್ನು ಅವಲಂಬಿಸಿರುವ ಜನರನ್ನು ಲಂಬರ್ ಜಾಕ್ಸ್ ಎಂದು ಕರೆಯಲಾಗುತ್ತದೆ. ರಾಸಾಯನಿಕ ಕೈಗಾರಿಕೆಯು ಕೃತಕ ರಬ್ಬರ್, ಪ್ಲಾಸ್ಟಿಕ್, ರಸಗೊಬ್ಬರಗಳು ಮತ್ತು ಔಷಧಿಗಳಂತಹ ವಿಭಿನ್ನ ವಸ್ತುಗಳನ್ನು ಉತ್ಪಾದಿಸುತ್ತದೆ. ಈಗ ಮರದ ಬದಲಾಗಿ ಪ್ಲಾಸ್ಟಿಕ್ನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅಮೇರಿಕ ಸಂಯುಕ್ತ ಸಂಸ್ಥಾನದ ಎಲ್ಲಾ ಭಾಗಗಳಲ್ಲಿಯೂ ಪ್ಲಾಸ್ಟಿಕ್ನ್ನು ತಯಾರಿಸಲಾಗುತ್ತಿದೆ. ಚಿಕಾಗೊ ನಗರವು ಪ್ಲಾಸ್ಟಿಕ್ ಕೈಗಾರಿಕೆಗೆ ಹೆಸರುವಾಸಿಯಾಗಿದೆ.
ಮಾಂಸವನ್ನು ಡಬ್ಬಿಗಳಲ್ಲಿ ತುಂಬುವುದು ಒಂದು ಪ್ರಮುಖ ಕೈಗಾರಿಕೆಯಾಗಿದ್ದು, ಅಸಂಖ್ಯಾತ ಕೇಂದ್ರಗಳಲ್ಲಿ ಮುಖ್ಯವಾಗಿ ಚಿಕಾಗೊ, ಕಾನ್ಸಾಸ್ ನಗರ ಮತ್ತು ಸೆಂಟ್ ಲೂಯಿಸ್ಗಳಲ್ಲಿ ವಿಸ್ತøತವಾಗಿ ಹರಡಿದೆ. ವಿದ್ಯುತ್ ಮತ್ತು ವಿದ್ಯುನ್ಮಾನ ವಸ್ತುಗಳು ಸಹ ಅಧಿಕ ಪ್ರಮಾಣದಲ್ಲಿ ಉತ್ಪಾದಿಸಲ್ಪಡುತ್ತವೆ. ಹಲವು ಕೈಗಾರಿಕಾ ಉತ್ಪನ್ನಗಳು ಮತ್ತು ಯಂತ್ರಗಳು ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡ ರಾಷ್ಟ್ರಗಳಿಂದ ರಫ್ತಾಗುತ್ತವೆ.
ಜನಸಂಖ್ಯೆ: ಬಹುತೇಕ ಉತ್ತರ ಅಮೇರಿಕನ್ನರು ಯುರೋಪಿಯನ್ನರು, ಅಮೇರಿಕನ್ ಇಂಡಿಯನ್ಸ್ ಮತ್ತು ಆಫ್ರಿಕನ್ನರಾಗಿದ್ದಾರೆ. ಅವರಲ್ಲಿ ಬಹುತೇಕ ಜನರು ಸ್ಪ್ಯಾನಿಷ್, ಇಂಗ್ಲಿಷ್, ಫ್ರೆಂಚ್ ಅಥವಾ ಅಮೇರಿಕನ್ ಇಂಡಿಯನ್ ಭಾಷೆಗಳನ್ನು ಮಾತನಾಡುತ್ತಾರೆ.

ಉತ್ತರ ಅಮೇರಿಕದ ಪೂರ್ವಭಾಗಗಳಲ್ಲಿ ಅತಿ ಹೆಚ್ಚಿನ ಜನಸಾಂದ್ರತೆಯನ್ನು ಕಾಣಬಹುದು. ಇಲ್ಲಿ ಹೆಚ್ಚಿನ ನಗರೀಕರಣವಿದೆ. ಉದಾ: ನ್ಯೂಯಾರ್ಕ್, ವಾಷಿಂಗ್ಟನ್, ಚಿಕಾಗೊ ಇತ್ಯಾದಿ. ಆದರೆ ಖಂಡದ ಬಹುತೇಕ ಉತ್ತರ ಭಾಗವು ಸಾಮಾನ್ಯವಾಗಿ ಹೆಚ್ಚು ಹಿಮಾವೃತದಿಂದ ಕೂಡಿರುವುದರಿಂದ ಖಾಲಿ ಲಕ್ಷಣದಿಂದ ಕೂಡಿದೆ.
ಅಮೇರಿಕ ಸಂಯುಕ್ತ ಸಂಸ್ಥಾನದ ನಗರ ಕೇಂದ್ರಗಳು ಮತ್ತು ಕೈಗಾರಿಕಾ ಪ್ರದೇಶಗಳು ಅಧಿಕ ಜನಸಾಂದ್ರತೆಯ ಪ್ರದೇಶಗಳಾಗಿವೆ. ಉತ್ತರ ಅಮೇರಿಕದ ಶೇ.98ರಷ್ಟು ಜನಸಂಖ್ಯೆಯು ನಗರ ಜನಸಂಖ್ಯೆಯಾಗಿದೆ.
ಹೊಸ ಪದಗಳು:
ಪ್ರೈರೀಸ್, ಕೆರಿಬಿಯನ್, ಪರ್ವತಾವಳಿಗಳು, ರಾಕೀಸ್, ಅಪಲೇಷಿಯನ್, ಕೆನಡಿಯನ್, ಮಡಿಕೆ ಪರ್ವತ, ಭೂಫಲಕ, ಮಹಾಕಂದರ, ಹೋಮ್ಸ್, ಹರಿಕೇನ್ಸ್, ಟರ್ನೋಡೊ, ಟಂಡ್ರಾ, ಹಿಮಜಿಂಕೆ, ಕಾರಿಬೊ, ತೈಗಾ, ಬೆಳೆಪಟ್ಟಿ, ಓಟ್ಸ್, ಡಸ್ಟಬೌಲ್, ಕೋಕಿಂಗ್, ಲೋಕೋಮೋಟೀವ್ಸ್, ಲಂಬರ್ ಜಾಕ್ಸ್.
ಸಂವೇದ ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು
* * * * * *