ವಿವಿಧ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ಕೈಚಳಕ ಪ್ರದರ್ಶಿಸಿದ ವಿದ್ಯಾರ್ಥಿಗಳು

ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಶಾಲೆಯಲ್ಲಿ ದಿನಾಂಕ 11-02-2022 ರಂದು ಇಂಧನ ರಹಿತ ಅಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜೀವನ ಶಿಕ್ಷಣದ ವಿಷಯದ ಅಂಗವಾಗಿ ವಿದ್ಯಾರ್ಥಿಗಳಿಗೆ ಇಂಧನ ರಹಿತವಾಗಿ ಆಹಾರ ಪದಾರ್ಥ ಸಿದ್ಧಪಡಿಸುವುದು, ಸ್ವಚ್ಛತೆ, ಅಚ್ಚುಕಟ್ಟುತನ, ಸಿದ್ಧಪಡಿಸಿದ ಆಹಾರ ಪದಾರ್ಥಗಳ ಪ್ರದರ್ಶನ ಈ ಎಲ್ಲಾ ಅಂಶಗಳ ಕರಗತಮಾಡಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಾಲಾ ಶಿಕ್ಷಕಿಯರಾದ ಕು. ಮೈತ್ರಿ ಹೆಗಡೆ ಹಾಗೂ ಕು. ರಂಜನಾ ಭಂಡಾರಿ ಅವರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

4 ರಿಂದ 7ನೇ ತರಗತಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಅಂದಾಜು 20ಕ್ಕೂ ಹೆಚ್ಚಿನ ಪದಾರ್ಥಗಳನ್ನು ಸಿದ್ಧಪಡಿಸಿ ತಮ್ಮ ಕೈಚಳಕ ಪ್ರದರ್ಶಿಸಿದರು. ಬಾಳೆಹಣ್ಣಿನ ಉಂಡೆ, ವಿವಿಧ ಬಗೆಯ ಮಾಸಾಲಾ ಮಂಡಕ್ಕಿ, ಕೊಸುಂಬರಿಯಲ್ಲಿ ಕ್ಯಾರೇಟ್, ಸವತೆಕಾಯಿ ಹಾಗೂ ಹೆಸರುಕಾಳು ಕೋಸಂಬರಿಗಳು, ವಿವಿಧ ಬಗೆಯ ಬಾಳೆಹಣ್ಣಿನ ಪಾಯಸ, ಕಿತ್ತಳೆ, ಲಿಂಬು, ಮಾವಿನಹಣ್ಣು, ಕಂಚಿಕಾಯಿ ಜ್ಯೂಸ್, ಹೆಸರುಕಾಳು ಪಾನಕಗಳು, ಬ್ರೇಡ್ ಸ್ಯಾಂಡ್ವಿಚ್, ವೆಜಿಟೇಬಲ್ ಹಾಗೂ ಫ್ರುಟ್ ಸಲಾಡ್ ಹೀಗೆ ತರಹೇವಾರಿ ಪದಾರ್ಥಗಳು ನೋಡುಗರ ಬಾಯಲ್ಲಿ ನೀರೂರಿಸುತ್ತಿದ್ದವು.

ನಂತರ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಿದ್ಧಪಡಿಸಿದ ಪದಾರ್ಥಗಳನ್ನು ಸವಿದರು. ಒಟ್ಟಾರೆ ಪ್ರತಿ ವರ್ಷ ಇಂಧನ ರಹಿತ ಅಡುಗೆ ಕಲೆಯಲ್ಲಿ ವಿದ್ಯಾರ್ಥಿಗಳು ಪರಿಣಿತಿ ಸಾಧಿಸುತ್ತಿದ್ದುದ್ದು ವಿಶೇಷ.