ಆಹಾರ – ಜೀವದ ಜೀವಾಳ – ಪಾಠ – 9

ಹಸಿಯದೆ ಉಣಬೇಡ ಹಸಿದು ಮತ್ತಿರಬೇಡ

ಬಿಸಿಗೂಡಿ ತಂಗಳುಣಬೇಡ

ವೈದ್ಯನಾಗಸಣೆಯೇ ಬೇಡ ಸರ್ವಜ್ಞ

ಸರ್ವಜ್ಞ ಕವಿಯ ಈ ತ್ರಿಪದಿಯನ್ನು ಗಮನಿಸು. ಎರಡನೆ ಸಾಲಿನಲ್ಲಿನ ಬಿಸಿಗೂಡಿ ತಂಗಳುಣಬೇಡ ಎಂದು ಯಾವುದರ ಬಗ್ಗೆ ಹೇಳಿದ್ದಾರೆ? ಯೋಚಿಸು. ನಿನ್ನ ಉತ್ತರವನ್ನು ಇಲ್ಲಿ ಬರೆ.

…………………………………………………………………………………………………………………………………………………………………………………………

ಹೌದು, ಈ ಸಾಲು ನಾವು ಸೇವಿಸುವ ಆಹಾರದ ಬಗ್ಗೆ ಹೇಳಿದ್ದು. ಆಹಾರ ನಮ್ಮ ಬದುಕಿನ ಜೀವಾಳ. ಪ್ರತಿದಿನ ನಾವು ಒಂದಿಲ್ಲೊಂದು ಕೆಲಸ ಮಾಡುತ್ತಿರುತ್ತೇವೆ. ನಾವು ಮಾಡುವ ಕೆಲಸಗಳಿಗೆ ಶಕ್ತಿ ಬೇಕು. ನಾವು ಸೇವಿಸುವ ಆಹಾರದಿಂದ ನಮಗೆ ಶಕ್ತಿ ದೊರೆಯುತ್ತದೆ. ಆಹಾರವು ನಮ್ಮ ಬೆಳವಣಿಗೆಗೆ, ವಿಕಾಸಕ್ಕೆ ಹಾಗೂ ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿದೆ. ಹಾಗಾದರೆ ನಾವು ಸೇವಿಸುವ ಆಹಾರದಲ್ಲಿ ಏನಿದೆ? ನಮ್ಮ ಆಹಾರ ಹೇಗಿರಬೇಕು? ಇದರ ಬಗ್ಗೆ ಒಂದಷ್ಟು ಮಾಹಿತಿ ಈ ಘಟಕದಲ್ಲಿದೆ. ಓದಿ ಅರ್ಥೈಸಿಕೊ.

ಈ ಪಾಠವನ್ನು ಕಲಿತ ನಂತರ ನೀನು, ƒ

ಆಹಾರದಲ್ಲಿನ ಪೋಷಕಾಂಶಗಳನ್ನು ಪುನರ್ ನೆನಪಿಸಿಕೊಳ್ಳುವೆ. ƒ

ಆಹಾರ ದೊರೆಯುವ ಮೂಲಗಳು ಹಾಗೂ ಆಹಾರ ಲಭ್ಯತೆಯ ಪರಿಚಯ ಮಾಡಿಕೊಳ್ಳುವೆ.

ಆಹಾರ ಪದ್ಧತಿಯನ್ನು ನಿರ್ಧರಿಸುವ ಅಂಶಗಳನ್ನು ತಿಳಿದು ವಿವಿಧ ಪ್ರದೇಶಗಳ ಆಹಾರ ವೈವಿಧ್ಯತೆಯನ್ನು ಗುರುತಿಸುವೆ.

ಬದಲಾಗುತ್ತಿರುವ ಆಹಾರದ ಅಭ್ಯಾಸಗಳು ಹಾಗೂ ಅದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ತಿಳಿಯುವೆ. ƒ

ಆಹಾರದ ಪೋಲಾಗುವಿಕೆ ಹಾಗೂ ಅದರ ಸಂರಕ್ಷಣಾ ಕ್ರಮಗಳನ್ನು ತಿಳಿಯುವೆ.

ನಾವು ಸೇವಿಸುವ ಆಹಾರದಲ್ಲಿ ಅನೇಕ ಪೋಷಕಾಂಶಗಳಿವೆ ಎಂದು ನೀನೀಗಾಗಲೆ ತಿಳಿದಿರುವೆ. ಆಹಾರದ ಪೋಷಕಾಂಶಗಳು ಹಾಗೂ ಆ ಪೋಷಕಾಂಶಗಳು ಹೆಚ್ಚು ಪ್ರಮಾಣದಲ್ಲಿ ಇರುವ ಆಹಾರ ಪದಾರ್ಥಗಳನ್ನು ಕೆಳಗೆ ನೀಡಲಾಗಿದೆ. ಪೋಷಕಾಂಶಗಳಿಗೆ ಹೊಂದುವ ಸರಿಯಾದ ಹೇಳಿಕೆಯನ್ನು ಜೋಡಿಸು.

ಪೋಷಕಾಂಶಗಳು ಹಾಗೂ ಅವುಗಳ ಸರಿಯಾದ ಆಹಾರ ಪದಾರ್ಥಗಳನ್ನು ಜೋಡಿಸಿರುವೆಯಲ್ಲವೆ? ಈ ಪೋಷಕಾಂಶಗಳು ನಮ್ಮ ಬೆಳವಣಿಗೆಗೆ, ನಮ್ಮ ದೇಹದ ದುರಸ್ತಿಗೆ, ದೇಹ ನಿರ್ಮಾಣಕ್ಕೆ ಹಾಗೂ ನಾವು ಆರೋಗ್ಯದಿಂದ ಇರಲು ನೆರವಾಗುತ್ತವೆ.

ಕೆಳಗಿನ ಆಹಾರ ಪದಾರ್ಥಗಳನ್ನು ಗಮನಿಸು:

ಅಕ್ಕಿ, ನವಣೆ, ಮಾಂಸ, ಸಜ್ಜೆ, ಮಾವು, ಗಿಣ್ಣು, ರಾಗಿ, ತುಪ್ಪ, ಮೊಟ್ಟೆ, ಹೂಕೋಸು, ಹಾಲು, ಮೆಂತ್ಯ, ಕ್ಯಾರೆಟ್, ಮಜ್ಜಿಗೆ, ಮೂಲಂಗಿ.

ಈ ಪದಾರ್ಥಗಳು ನಮಗೆ ಸಸ್ಯ ಮೂಲದಿಂದ ಮತ್ತು ಪ್ರಾಣಿ ಮೂಲದಿಂದ ದೊರೆಯುತ್ತವೆ.

ಸಸ್ಯ ಮೂಲದ ಆಹಾರ ಪದಾರ್ಥಗಳನ್ನು ಕೆಳಗಿನಂತೆ ವಿಂಗಡಿಸಬಹುದು.

* ಏಕದಳ ಧಾನ್ಯಗಳು

* ದ್ವಿದಳ ಧಾನ್ಯಗಳು (ಬೇಳೆಕಾಳುಗಳು)

* ಎಣ್ಣೆಬೀಜಗಳು

* ತರಕಾರಿಗಳು

* ಸೊಪ್ಪುಗಳು

* ಹಣ್ಣುಗಳು

ಸಸ್ಯ ಮೂಲದಿಂದ ಪಡೆಯಲಾಗುವ ಕೆಲವು ಆಹಾರ ಪದಾರ್ಥಗಳ ಪಟ್ಟಿಯನ್ನು ನೀಡಿದೆ. ಗಮನಿಸು.

ಮೇಲಿನ ಈ ಆಹಾರ ಪದಾರ್ಥಗಳನ್ನು ಸಸ್ಯಮೂಲದ ಸಂಬಂಧಿಸಿದ ದಳಗಳಲ್ಲಿ ಬರೆ.

ಸಿರಿಧಾನ್ಯಗಳು

ನಾವು ಸೇವಿಸುವ ಆಹಾರದಲ್ಲಿ ಒಂದಕ್ಕಿಂತ ಹೆಚ್ಚು ಪೋಷಕಾಂಶಗಳಿರುತ್ತವೆ. ಅದರಲ್ಲೂ ಸಸ್ಯಮೂಲದ ನವಣೆ, ಊದಲು, ಆರ್ಕದಂತಹ ಸಿರಿಧಾನ್ಯಗಳಂತೂ ಪೋಷಕಾಂಶಗಳ ಕಣಜವೆ ಆಗಿವೆ. ನಮ್ಮ ಹಿರಿಯರು ಸಿರಿಧಾನ್ಯಗಳನ್ನು ಹೆಚ್ಚು ಬಳಸುತ್ತಿದ್ದರು. ಆರೋಗ್ಯಕ್ಕೆ ಉತ್ತಮ ಎನಿಸಿರುವ ಇವುಗಳ ಉಪಯೋಗ ಇತ್ತೀಚೆಗೆ ಕಡಿಮೆಯಾಗುತ್ತಿದೆ.

ಪ್ರಮುಖ ಸಿರಿ ಧಾನ್ಯಗಳು

ಜೋಳ
ಸಜ್ಜೆ
ಕೂರಲೆ
ಸಾಮೆ
ರಾಗಿ
ಆರ್ಕ್
ಬರಗು
ನವಣೆ
ಊದಲು

ಸಿರಿಧಾನ್ಯಗಳ ಉಪಯೋಗಗಳು

* ಸಿರಿಧಾನ್ಯಗಳನ್ನು ಕಡಿಮೆ ನೀರನ್ನು ಬಳಸಿ ಕಡಿಮೆ ಅವಧಿಯಲ್ಲಿ ಬೆಳೆಯಬಹುದು. ƒ

* ಇವು ಬಹುತೇಕ ವಿವಿಧ ಪರಿಸರ, ವಾಯುಗುಣದಲ್ಲಿ ಸುಲಭವಾಗಿ ಬೆಳೆಯುತ್ತವೆ. ƒ

* ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಕಳೆನಾಶಕಗಳಿಲ್ಲದೆ ಇವುಗಳನ್ನು ಬೆಳೆಯಬಹುದು. ƒ

* ಇವುಗಳನ್ನು ಬರಗಾಲದ ಮಿತ್ರರು ಎನ್ನುತ್ತಾರೆ. ƒ

* ಇವು ಹೆಚ್ಚು ಪೋಷಕಾಂಶಗಳುಳ್ಳ ಧಾನ್ಯಗಳಾಗಿವೆ.

ಆಹಾರದ ಲಭ್ಯತೆ : ನಮ್ಮ ರಾಜ್ಯದ ಕೃಷಿ ಭೂಮಿಯ ಫಲವತ್ತತೆ ಹಾಗೂ ವಾಯುಗುಣ ಸ್ಥಳದಿಂದ ಸ್ಥಳಕ್ಕೆ ಬೇರೆಯಾಗಿದೆ. ಹೀಗಾಗಿ ಎಲ್ಲ ಪ್ರದೇಶಗಳಲ್ಲಿ ಎಲ್ಲ ರೀತಿಯ ಬೆಳೆಗಳನ್ನು ಬೆಳೆಯಲಾಗದು. ಅದರಲ್ಲೂ ಜೋಳ, ರಾಗಿ, ಭತ್ತದಂತ ಆಹಾರ ಪದಾರ್ಥಗಳನ್ನು ಎಲ್ಲಾ ಕಡೆ ಬೆಳೆಯಲು ಸಾಧ್ಯವಿಲ್ಲ.

ಜನರಿಗೆ ಆಹಾರವು ಲಭ್ಯವಾಗುವಂತಾಗಲು ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ.

ಉದಾಹರಣೆ :

1. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಹಾಲು ಹಾಗೂ ಮಧ್ಯಾಹ್ನದ ವೇಳೆಯಲ್ಲಿ ಬಿಸಿಯೂಟ ನೀಡಲಾಗುತ್ತಿದೆ.

2. ನ್ಯಾಯಬೆಲೆ ಅಂಗಡಿಗಳ ಮೂಲಕ ಕಡಿಮೆ ಬೆಲೆಯಲ್ಲಿ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ.

3. ವ್ಯಾಪಾರಿಗಳು ಅಗತ್ಯಕ್ಕಿಂತ ಹೆಚ್ಚು ಆಹಾರ ಪದಾರ್ಥಗಳನ್ನು ಸಂಗ್ರಹ ಮಾಡದಂತೆ ಕ್ರಮವಹಿಸಿದೆ.

4. ರೈತರು ಬೆಳೆದ ಆಹಾರ ಪದಾರ್ಥಗಳನ್ನು ಖರೀದಿಸಿ, ಗೋದಾಮುಗಳಲ್ಲಿ ಸಂಗ್ರಹಿಸಿ, ವಿತರಿಸಲಾಗುತ್ತಿದೆ.

ಆಹಾರ ಪದಾರ್ಥಗಳು ಲಭ್ಯವಾಗುವುದರಿಂದ ನಮಗೆ ಆಹಾರ ತಯಾರಿಸಲು ಸಾಧ್ಯವಾಗುತ್ತಿದೆ. ನಿನ್ನ ಮನೆಯಲ್ಲಿ ತಯಾರಿಸುವ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ಕೆಳಗೆ ಪಟ್ಟಿಮಾಡು.

1] ………………………………………………………………………………

2] ………………………………………………………………………………

3] ………………………………………………………………………………

4] ………………………………………………………………………………

ಈ ಪಟ್ಟಿಯನ್ನು ನಿನ್ನ ಗೆಳೆಯರ ಪಟ್ಟಿಯೊಂದಿಗೆ ಹೋಲಿಸು. ನಿನ್ನ ಹಾಗೂ ನಿನ್ನ ಗೆಳೆಯ / ಗೆಳತಿಯ ಆಹಾರ ಪಟ್ಟಿಯು ಬೇರೆ ಬೇರೆಯಾಗಿದೆಯಾ? ಗಮನಿಸು.

ಕೆಳಗಿನ ಚಟುವಟಿಕೆಯನ್ನು ಪೂರ್ಣಗೊಳಿಸು.

ನಿನ್ನ ಆಹಾರ

ಕಾಲಗಳು ಸೇವಿಸುವ ಆಹಾರ

ಬೇಸಿಗಾಲ ………………………….

ಮಳೆಗಾಲ ………………………….

ಚಳಿಗಾಲ ………………………….

ಕರ್ನಾಟಕದ ವಿವಿಧ ಪ್ರದೇಶಗಳ ಸಾಮಾನ್ಯ ಆಹಾರ (ಶಿಕ್ಷಕರ ಸಹಾಯ ಪಡೆ)

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು. (ಮೇಲಿನ ಚಾರ್ಟ್ ಸಹಾಯ ಪಡೆ)

* ಬೇಸಿಗೆ ಕಾಲದಲ್ಲಿ ನೀನು ಹೆಚ್ಚು ಸೇವಿಸುವ ಆಹಾರ ಯಾವುದು?

* ಚಳಿಗಾಲದಲ್ಲಿ ನೀನು ಸೇವಿಸುವ ಸಾಮಾನ್ಯ ಆಹಾರ ಯಾವುದು?

* ನಿನ್ನ ಜಿಲ್ಲೆಯ ಮುಖ್ಯ ಆಹಾರ ಯಾವುದು?

* ಕರ್ನಾಟಕದ ವಿವಿಧ ಪ್ರದೇಶಗಳ ಆಹಾರ ಬೇರೆ ಬೇರೆಯಾಗಿದೆ. ಏಕೆ ಎಂಬುದನ್ನು ಶಿಕ್ಷಕರೊಂದಿಗೆ ಚರ್ಚಿಸಿ, ಅದರ ಕಾರಣಗಳನ್ನು ಬರೆ.

1] ………………………………………………………………………………

2] ………………………………………………………………………………

3] ………………………………………………………………………………

ಪ್ರಶ್ನೆಗಳಿಗೆ ಉತ್ತರಿಸಿದೆಯಲ್ಲವೆ? ನಾವು ಸೇವಿಸುವ ಆಹಾರವನ್ನು ನಿರ್ಧರಿಸುವ ಕೆಲವು ಹೇಳಿಕೆಗಳನ್ನು ನೀಡಲಾಗಿದೆ. ಗಮನಿಸು.

* ನಾವು ಒಂದೇ ರಾಜ್ಯದವರಾಗಿದ್ದರೂ, ನಾವು ವಾಸಿಸುವ ಪ್ರದೇಶದಲ್ಲಿ ದೊರೆಯುವ/ ಬೆಳೆಯುವ ಆಹಾರ ಪದಾರ್ಥಗಳು ಹಾಗೂ ವಾಯುಗುಣಕ್ಕೆ ಅನುಗುಣವಾಗಿ ನಮ್ಮ ಆಹಾರ ಪದ್ಧತಿ ಇರುತ್ತದೆ.

* ನಾವು ಸೇವಿಸುವ ಆಹಾರವು ಆಯಾ ಕುಟುಂಬದ ಸಂಪ್ರದಾಯ/ನಂಬಿಕೆಗಳಿಂದ ನಿರ್ಧರಿತವಾಗುತ್ತದೆ.

* ಬೇಸಿಗೆ, ಮಳೆ ಹಾಗೂ ಚಳಿಗಾಲಕ್ಕೆ ತಕ್ಕಂತೆ ನಮ್ಮ ಆಹಾರ ಬದಲಾಗುತ್ತದೆ.

ನಮ್ಮ ಆಹಾರದ ಮೇಲೆ ಇವುಗಳ ಪ್ರಭಾವವಿದ್ದರೂ ಇತ್ತೀಚೆಗೆ ನಮ್ಮ ಆಹಾರ ಅಭ್ಯಾಸಗಳು ಒಂದೇ ರೀತಿಯಾಗುತ್ತಿವೆ. ಈ ಕೆಳಗಿನ ಚಿತ್ರಗಳನ್ನು ಗಮನಿಸು.

ನಮ್ಮ ಆಹಾರದ ಅಭ್ಯಾಸಗಳು ಬದಲಾಗಲು ಮೇಲಿನ ಅಂಶಗಳು ಕಾರಣವಾಗಿವೆ.

ಅವುಗಳನ್ನು ಈ ರೀತಿ ಹೇಳಬಹುದು.

* ಪತ್ರಿಕೆಗಳು, ಜಾಹೀರಾತುಗಳು.

* ಟಿ.ವಿ ರೇಡಿಯೋ ಚಾನಲ್‍ಗಳಲ್ಲಿ ಪ್ರಸಾರವಾಗುವ ಅಡುಗೆ ಸಂಬಂಧಿತ ಕಾರ್ಯಕ್ರಮಗಳು.

* ಮೊಬೈಲ್, ಕಂಪ್ಯೂಟರ್‍ಗಳಲ್ಲಿನ ಇಂಟರ್‍ನೆಟ್ ಬಳಕೆಯಿಂದಾಗಿ ಹೊಸ ಆಹಾರ ಅಭ್ಯಾಸಗಳು ಸಾಮಾನ್ಯವಾಗಿವೆ.

* ಅಡುಗೆ ಪುಸ್ತಕ

ಇವೆಲ್ಲವುಗಳ ಪ್ರಭಾವದಿಂದಾಗಿ ನಮ್ಮ ಆಹಾರದ ಅಭ್ಯಾಸಗಳು ಕೆಳಗಿನಂತೆ ಬದಲಾಗಿವೆ.

* ಉತ್ತಮ ಪೋಷಕಾಂಶವುಳ್ಳ ಮನೆ ಊಟದ ಬದಲಿಗೆ ಪಿಜ್ಜಾ, ಬರ್ಗರ್, ಸಾಸ್, ಸಮೋಸಾ, ಕಾರ್ನ್‍ಫ್ಲೇಕ್, ಸೂಪ್, ನೂಡಲ್ಸ್, ಐಸ್‍ಕ್ರೀಂ, ಚಾಕ್‍ಲೇಟ್, ಚಿಪ್ಸ್‍ನಂತಹ ಆಹಾರ ಪದಾರ್ಥಗಳ ಸೇವನೆ ಹೆಚ್ಚಾಗುತ್ತಿದೆ. ಇವುಗಳಲ್ಲಿ ಕೆಲವನ್ನು ಜಂಕ್‍ಫುಡ್ ಎಂದು ಪರಿಗಣಿಸಲಾಗಿದೆ.

ಓದಿ ತಿಳಿ : ಜಂಕ್‍ಫುಡ್ ಎಂದರೆ ಆರೋಗ್ಯಕ್ಕೆ ಅನಗತ್ಯವಾದ ಅಥವಾ ಕಡಿಮೆ ಪೌಷ್ಠಿಕಾಂಶ ಹೊಂದಿರುವ ಆಹಾರ ಪದಾರ್ಥ.

* ಆಹಾರ ಹೆಚ್ಚು ರುಚಿಕರವಾಗಿರಲು ರಾಸಾಯನಿಕ ಅಂಶವಿರುವ ಸಾಸ್ ಬಳಸಿ ಮಾಡುವ ಗೋಬಿ ಮಂಚೂರಿ, ಪಾನಿಪೂರಿ, ಚೈನಿಸ್ ಫುಡ್‍ಗಳ ಬಳಕೆ ಸಾಮಾನ್ಯವಾಗುತ್ತಿದೆ.

* ನಗರ/ಪಟ್ಟಣಗಳ ಯಾಂತ್ರಿಕ ಜೀವನದಲ್ಲಿ ಸಿದ್ಧಪಡಿಸಿದ ಆಹಾರ ಪದಾರ್ಥಗಳ ಬಳಕೆ ಹೆಚ್ಚಾಗುತ್ತಿದೆ. ಫಾಸ್ಟ್‍ಫುಡ್ ಸೇವನೆ ಇದಕ್ಕೊಂದು ಉದಾಹರಣೆ.

ಬದಲಾದ ಆಹಾರ ಅಭ್ಯಾಸದ ಪರಿಣಾಮಗಳು

* ಜನರು ಬಹಳ ಬೇಗ ರೋಗಗಳಿಗೆ ತುತ್ತಾಗುತ್ತಿದ್ದಾರೆ.

* ಆರೋಗ್ಯಕರ ಆಹಾರಕ್ಕಿಂತ, ರುಚಿಕರ ಆಹಾರ ಸೇವನೆ ಹೆಚ್ಚಾಗಿರುವುದರಿಂದ ದೇಹಕ್ಕೆ ವಿಷಯುಕ್ತ ರಾಸಾಯನಿಕಗಳು ಸೇರುತ್ತಿವೆ.

* ದೇಹವು ರೋಗಗಳ ವಿರುದ್ಧ ಹೋರಾಡುವ ಶಕ್ತಿ ಕಳೆದುಕೊಳ್ಳುತ್ತಿದೆ.

* ಮಸಾಲೆಯುಕ್ತ ಆಹಾರ, ಜಂಕ್ ಫುಡ್‍ಗಳಿಂದಾಗಿ ಬೊಜ್ಜು ಸಮಸ್ಯೆ ಉಂಟಾಗಿದೆ.

ಸಿದ್ಧಪಡಿಸಿದ ಆಹಾರದ ಪೊಟ್ಟಣಗಳು

ಇಂದು ಮಾರುಕಟ್ಟೆಯಲ್ಲಿ ನಾವು ಸೇವಿಸುವ ಆಹಾರವು ಪೊಟ್ಟಣಗಳಲ್ಲಿ ಹೆಚ್ಚಾಗಿ ಸಿಗುತ್ತದೆ. ಇವುಗಳನ್ನು ಕೊಳ್ಳುವಾಗ ಕೆಳಗಿನ ಅಂಶಗಳನ್ನು ಗಮನಿಸು.

* ತಯಾರಾದ ದಿನಾಂಕ, ಅವಧಿ ಮುಗಿಯುವ ದಿನಾಂಕ.

* ಆಹಾರ ಪದಾರ್ಥಗಳಿಗೆ ಸೇರಿಸಿದ ಇತರೆ ಪದಾರ್ಥಗಳು (ಇನ್‍ಗ್ರೇಡಿಯೆಂಟ್ಸ್) / ರಾಸಾಯನಿಕ ಪ್ರಮಾಣ.

* ಆ ಪೊಟ್ಟಣವನ್ನು ಸಂರಕ್ಷಿಸಲು ಬೇಕಾದ ಉಷ್ಣತೆ.

ಆಹಾರ ಪೋಲು ಮಾಡುವಿಕೆ

ನಾವು ಸೇವಿಸುವ ಆಹಾರವನ್ನು ಎಲ್ಲೆಂದರಲ್ಲಿ ಚೆಲ್ಲಿ ಪೋಲು ಮಾಡಿರುವುದನ್ನು ಈ ಚಿತ್ರಗಳಲ್ಲಿ ಕಾಣಬಹುದು. ಸೇವಿಸಲು ಯೋಗ್ಯವಾಗಿರುವ ಆಹಾರವನ್ನು ಸೇವಿಸದೇ ಎಲ್ಲೆಂದರಲ್ಲಿ ಚೆಲ್ಲುವುದನ್ನು ಆಹಾರದ ಪೋಲಾಗುವಿಕೆ ಎನ್ನುವರು.

ನಮಗೆ ದೊರೆಯುವ ಆಹಾರ ಅಥವಾ ಆಹಾರ ಪದಾರ್ಥಗಳು ಪೋಲಾಗದಂತೆ ಹಾಗೂ ಕೆಡದಂತೆ ರಕ್ಷಿಸುವುದು ಮುಖ್ಯವಾಗಿದೆ. ಇತ್ತೀಚೆಗೆ ಕೆಲವು ವಿಧಾನಗಳನ್ನು ಅನುಸರಿಸಿ ಆಹಾರ ಪದಾರ್ಥಗಳನ್ನು ಕೆಡದಂತೆ ಸಂರಕ್ಷಿಸುತ್ತಾರೆ. ಅವುಗಳೆಂದರೆ –

* ಉಪ್ಪಿನಕಾಯಿಯ ರುಚಿ ನಮಗೆಲ್ಲ ಗೊತ್ತು. ಅದು ಬಹಳ ದಿನ ಕೆಡದಂತೆ ಇರಲು ಅದಕ್ಕೆ ಉಪ್ಪನ್ನು ಹಾಕಿರುತ್ತಾರೆ. ತಾಜಾ ಹಣ್ಣುಗಳನ್ನು ಸಂರಕ್ಷಿಸಲು, ಸಕ್ಕರೆಯಂತಹ ವಸ್ತುಗಳನ್ನು ಬಳಸಲಾಗುತ್ತದೆ.

* ದ್ರಾಕ್ಷಿಹಣ್ಣನ್ನು ಒಣಗಿಸಿ ಒಣದ್ರಾಕ್ಷಿಯಾಗಿ ಬಳಸುತ್ತಾರೆ.

ಚಟುವಟಿಕೆ : ಒಣಗಿಸುವ ಮೂಲಕ ಸಂರಕ್ಷಿಸಲಾಗುವ ಆಹಾರ ಪದಾರ್ಥಗಳನ್ನು ಪಟ್ಟಿ ಮಾಡು.

1] ……………………………………………..

2] ……………………………………………..

3] …………………………………………….

* ಮೀನು, ಮಾಂಸ ಮತ್ತು ಹಾಲನ್ನು ಅತಿ ಕಡಿಮೆ ಉಷ್ಣತೆಯಲ್ಲಿ ಸಂಗ್ರಹಿಸಿ ರಕ್ಷಿಸುತ್ತಾರೆ. ಇದನ್ನು ಶೀತಕ ಸಂಗ್ರಹಣೆ ಎನ್ನುವರು. ಉದಾಹರಣೆಗೆ, ರೆಫ್ರೀಜರೇಟರ್(ಫ್ರಿಡ್ಜ್).

ಉತ್ತಮ ಆಹಾರವು ನಮ್ಮನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಂತರನ್ನಾಗಿಸುತ್ತದೆ. ಆಹಾರವು ನಮ್ಮ ಜೀವಾಳ. ಉತ್ತಮ ಆಹಾರ ಸೇವನೆಯಿಂದ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ.

ಸಂವೇದ ವಿಡಿಯೋ ಪಾಠಗಳು

Samveda – 5th – EVS – Aahaara Jeevada Jeevaala (Part 1 of 3)

Samveda – 5th – EVS – Aahaara Jeevada Jeevaala (Part 2 of 3)

Samveda – 5th – EVS – Aahaara Jeevada Jeevaala (Part 3 of 3)

ಪೂರಕ ವಿಡಿಯೋಗಳು

ಆಹಾರ ಜೀವದ ಜೀವಾಳ | 5TH EVS | AAHaARA JEEVADA JEEVALA | chapter 9 | EVS 5th class

ಆಹಾರ ಜೀವದ ಜೀವಾಳ | 5TH EVS | AAHaARA JEEVADA JEEVALA | chapter 9 | EVS 5th class

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.