ಆಹಾರ-ಆರೋಗ್ಯ – ಪಾಠ-8

ಅಂದು ದೀಪಾಳ ಹುಟ್ಟುಹಬ್ಬ. ಕ್ಯಾರೆಟ್ ಹಲ್ವ ಅವಳಿಗೆ ಬಹಳ ಪ್ರೀತಿಯ ಸಿಹಿ. ಮನೆಯಲ್ಲಿ ಅವಳ ಹುಟ್ಟುಹಬ್ಬಕ್ಕಾಗಿ ಕ್ಯಾರೆಟ್ ಹಲ್ವ ಮಾಡಿದ್ದರು. ಕ್ಯಾರೆಟ್ ಹಲ್ವವನ್ನು ಚೆನ್ನಾಗಿ ಸವಿದ ದೀಪಾಳಿಗೆ ತೂಕಡಿಕೆ. ಮೆಲ್ಲನೆ ನಿದ್ದೆಗೆ ಜಾರಿದ ದೀಪಾಳ ಕನಸಿನಲ್ಲಿ ಬಂದದ್ದು ಕ್ಯಾರೆಟ್.

ಕ್ಯಾರೆಟ್ : ದೀಪಾ, ನಾನು ಕ್ಯಾರೆಟ್. ನನ್ನ ಹಲ್ವ ಚೆನ್ನಾಗಿ ತಿಂದಿರುವೆ. ಈಗ ನೀನು ದಿನವೂ ತಿನ್ನುವ ಆಹಾರದ ಬಗ್ಗೆ ಸ್ವಲ್ಪ ಹೇಳು.

ದೀಪಾ : ಕ್ಯಾರೆಟಕ್ಕಾ, ನಾನು ದಿನವೂ ಬೇರೆ ಬೇರೆ ಆಹಾರವನ್ನು ಚೆನ್ನಾಗಿ ತಿನ್ನುತ್ತೇನೆ. ಅವುಗಳನ್ನು ಯಾವ ಆಹಾರ ವಸ್ತುಗಳಿಂದ ಮಾಡಿದ್ದಾರೆ ಎಂಬುದು ನನಗೆ ಗೊತ್ತು.

ಕ್ಯಾರೆಟ್ : ಸರಿ, ನೀನು ತಿನ್ನುವ ನಿನಗೆ ಗೊತ್ತಿರೋ ಆಹಾರ ವಸ್ತುಗಳನ್ನು ಪಟ್ಟಿ ಮಾಡು.

ಚಟುವಟಿಕೆ : ನೀನೂ ಸಹ ದೀಪಾಳಂತೆ ನಿನಗೆ ಗೊತ್ತಿರುವ ಆಹಾರ ವಸ್ತುಗಳ ಪಟ್ಟಿ ಮಾಡು.

ಕ್ಯಾರೆಟ್ : ನಿನ್ನ ಪಟ್ಟಿಯಲ್ಲಿನ ಆಹಾರ ವಸ್ತುಗಳನ್ನು ಕೆಳಗೆ ಕೊಟ್ಟಿರುವ ಜಾಗದಲ್ಲಿ ವಿಂಗಡಿಸಿ ಬರೆ.

ಶಕ್ತಿ ಪ್ರಧಾನವಾದ ಆಹಾರ ವಸ್ತುಗಳು

ಬೆಳವಣಿಗೆಗೆ ಸಹಾಯ ಮಾಡುವ ಅಹಾರ ವಸ್ತುಗಳು

ದೇಹಕ್ಕೆ ರಕ್ಷಣೆ ಒದಗಿಸುವ ಆಹಾರ ವಸ್ತುಗಳು

ಕ್ಯಾರೆಟ್ : ದೀಪಾ, ನೀನು ತಿನ್ನುವ ಆಹಾರ ವಸ್ತುಗಳಲ್ಲಿ ಶಕ್ತಿಯನ್ನು ನೀಡುವ, ಬೆಳವಣಿಗೆಗೆ ಸಹಾಯ ಮಾಡುವ ಮತ್ತು ದೇಹದ ಆರೋಗ್ಯವನ್ನು ಕಾಪಾಡುವ ಪೋಷಕಾಂಶಗಳಿವೆ ಎಂದು ನಿನಗೆ ಗೊತ್ತೆ?

ದೀಪಾ : ಇಲ್ಲವಲ್ಲಾ!

ಕ್ಯಾರೆಟ್ : ಈ ಪೋಷಕಾಂಶಗಳೇ 1) ಶರ್ಕರ ಪಿಷ್ಟಗಳು 2) ಪ್ರೋಟೀನ್‍ಗಳು 3) ಮೇದಸ್ಸು ಅಥವಾ ಕೊಬ್ಬು 4) ಖನಿಜ ಲವಣಗಳು 5) ಜೀವಸತ್ವಗಳು

ಈಗ ಈ ಪೋಷಕಾಂಶಗಳು ಯಾವ ಯಾವ ಆಹಾರ ಪದಾರ್ಥಗಳಲ್ಲಿವೆ ಎಂಬುದನ್ನು ನನ್ನ ಗೆಳೆಯರಿಂದ ತಿಳಿ.

ನಾನು ರಾಗಿ. ನನ್ನಲ್ಲಿರುವ ಪೋಷಕಾಂಶಗಳಲ್ಲಿ ಪಿಷ್ಟವೇ ಪ್ರಧಾನ. ನನ್ನಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.

ಪಿಷ್ಟವೇ ಹೆಚ್ಚಾಗಿರುವ ನನ್ನ ಇತರ ಗೆಳೆಯರ ಚಿತ್ರಗಳು ಇಲ್ಲಿವೆ. ಅವರನ್ನು ಗುರುತಿಸಿ ಹೆಸರಿಸು.

ಪಿಷ್ಟದ ಕೊರತೆಯುಂಟಾದರೆ ನಿಶ್ಯಕ್ತಿಯಿಂದ ಬಳಲಬೇಕಾಗುತ್ತದೆ.

ದೀಪಾ, ಇಲ್ಲಿ ನೋಡು. ನಾನು ಅವರೆ ಕಾಯಿ. ನನ್ನಲ್ಲಿ ಪ್ರೋಟೀನ್ ಅಂಶ ಪ್ರಧಾನವಾಗಿದೆ. ನಾನು ನಿನ್ನ ದೇಹದ ಬೆಳವಣಿಗೆಗೆ ಸಹಾಯ ಮಾಡುತ್ತೇನೆ.

ನನ್ನ ಇತರ ಗೆಳೆಯರನ್ನು ನೋಡು. ಅವರನ್ನು ಗುರುತಿಸಿ, ಹೆಸರು ಬರೆ.

ಕಾಳುಗಳಲ್ಲದೆ ಇನ್ನೂ ಹಲವು ಆಹಾರ ಪದಾರ್ಥಗಳಲ್ಲಿಯೂ ಪ್ರೊಟೀನ್ ಅಂಶ ಪ್ರಧಾನವಾಗಿರುತ್ತದೆ. ಈ ಚಿತ್ರಗಳನ್ನು ಗಮನಿಸಿ ಅವುಗಳ ಹೆಸರು ಬರೆ.

ಕ್ಯಾರೆಟ್ : ದೀಪಾ, ಇಲ್ಲಿ ನೋಡು ಬೆಣ್ಣೆ. ಬೆಣ್ಣೆಯಲ್ಲಿರುವುದೇ ಕೊಬ್ಬು ಅಥವಾ ಮೇದಸ್ಸು. ಕಡಲೆಕಾಯಿ ಎಣ್ಣೆ, ಕೊಬ್ಬರಿಎಣ್ಣೆ, ಎಳ್ಳೆಣ್ಣೆ, ತುಪ್ಪಗಳಲ್ಲಿಯೂ ಕೊಬ್ಬಿನ ಅಂಶ ಹೆಚ್ಚಾಗಿರುತ್ತದೆ.

ದೀಪಾ : ಇದರಿಂದ ನಮಗೆ ಏನು ಉಪಯೋಗ?

ಕ್ಯಾರೆಟ್ : ಇವನ್ನು ಸ್ವಲ್ಪ ತಿಂದರೂ ಸಾಕು. ಇವು ಪಿಷ್ಟಗಳಿಗಿಂತ ಎರಡು ಪಟ್ಟು ಹೆಚ್ಚು ಶಕ್ತಿಯನ್ನು ಕೊಡುತ್ತವೆ.

ದೀಪಾ : ಹೌದೇ?

ಕ್ಯಾರೆಟ್ : ವಿವಿಧ ತರಕಾರಿ, ಹಣ್ಣುಗಳು, ಉಪ್ಪು ಅಥವಾ ಲವಣ ಇದನ್ನೆಲ್ಲಾ ನೀನು ತಿನ್ನುವೆಯೆಲ್ಲಾ?

ದೀಪಾ : ಹೌದು ತಿನ್ನುತ್ತೇನೆ. ಆದರೆ ನನಗೆ ಸೊಪ್ಪು ಇಷ್ಟವಿಲ್ಲ ಕ್ಯಾರೆಟಕ್ಕಾ.

ಕ್ಯಾರೆಟ್ : ನೋಡು ದೀಪಾ, ಎಲ್ಲ ಬಗೆಯ ತರಕಾರಿ, ಸೊಪ್ಪು, ಹಣ್ಣುಗಳನ್ನೂ ತಿನ್ನಬೇಕು. ಇವುಗಳಲ್ಲಿ ಖನಿಜ ಲವಣಗಳೂ, ಜೀವಸತ್ವಗಳೂ ಹೆಚ್ಚಿನ ಪ್ರಮಾಣದಲ್ಲಿವೆ. ಹೀಗಾಗಿ ಇವು ನಿನ್ನನ್ನು ರೋಗಗಳಿಂದ ಕಾಪಾಡಿ ಆರೋಗ್ಯವಾಗಿಡುತ್ತವೆ. ದೀಪಾ, ಜೀವಸತ್ವಗಳ ಬಗ್ಗೆ ನಿನಗೆ ತಿಳಿದಿದೆಯೇ?

ದೀಪಾ : ಹೌದು, 4 ಮುಖ್ಯ ಜೀವಸತ್ವಗಳಿವೆ ಎಂದು ಕೇಳಿದ್ದೇನೆ.

ಕ್ಯಾರೆಟ್ : ಇವನ್ನು ಎ, ಬಿ, ಸಿ, ಡಿ ಎಂಬುದಾಗಿ ಕರೆಯುತ್ತಾರೆ. ಕೆಳಗಿನ ಕೋಷ್ಟಕ ನೋಡು.

ದೀಪಾ : ಕ್ಯಾರೆಟಕ್ಕಾ! ಇವನ್ನು ತಿನ್ನದೇ ಇದ್ದರೆ ಏನಾಗುತ್ತೇ?

ಕ್ಯಾರೆಟ್ : ಈ ಚಾರ್ಟ್(ಕೋಷ್ಟಕ) ನೋಡಿ ಹೇಳು.

ಕ್ಯಾರೆಟ್ : ನಿನಗೆ ಸದಾ ರೋಗಿಯಾಗಲು ಇಷ್ಟವೇ?

ದೀಪಾ : ಇಲ್ಲ ಕ್ಯಾರೆಟಕ್ಕಾ, ಆರೋಗ್ಯವಾಗಿರಲು ಇನ್ನೂ ಏನನ್ನು ತಿನ್ನಬೇಕು?

ಕ್ಯಾರೆಟ್ : ಮೇಲಿನ ಎಲ್ಲಾ ಆಹಾರಗಳ ಜೊತೆಗೆ ಹುರುಳಿಕಾಯಿ, ಮೂಲಂಗಿ, ದಂಟು, ಸಿಪ್ಪೆ ಸಹಿತ ತಿನ್ನುವ ಹಣ್ಣುಗಳು, ಧಾನ್ಯಗಳು ಇವೆಲ್ಲವನ್ನೂ ಸೇವಿಸಬೇಕು. ಇವುಗಳಲ್ಲಿ ನಾರಿನ ಅಂಶ ಹೆಚ್ಚಾಗಿ ಇರುತ್ತದೆ. ನಾರಿನಾಂಶವು ಮಲವಿಸರ್ಜನೆ ಸರಿಯಾಗಿ ಆಗುವಂತೆ ಮಾಡುತ್ತದೆ.

ದೀಪಾ : ಈ ಎಲ್ಲಾ ಆಹಾರ ವಸ್ತುಗಳನ್ನು ಒಮ್ಮೆಲೆ ಸೇವಿಸಲು ಸಾಧ್ಯವೇ?

ಕ್ಯಾರೆಟ್ : ಹಾಗಲ್ಲಾ… ಈ ಎಲ್ಲಾ ಆಹಾರ ವಸ್ತುಗಳನ್ನು ಒಂದು ಗೊತ್ತಾದ ಪ್ರಮಾಣದಲ್ಲಿ ದಿನ ನಿತ್ಯವೂ ತಿನ್ನಬೇಕು. ಇದರಿಂದ ದೇಹಕ್ಕೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು ಸರಿಯಾದ ಪ್ರಮಾಣದಲ್ಲಿ ದೊರೆಯುತ್ತವೆ. ಹೀಗೆ ನಮ್ಮ ದೇಹಕ್ಕೆ ಅಗತ್ಯವಾದಷ್ಟು ಎಲ್ಲಾ ಪೌಷ್ಟಿಕಾಂಶಗಳನ್ನು ಒದಗಿಸುವ ಆಹಾರವೇ ಸಮತೋಲನ ಆಹಾರ. ಇದರ ಜೊತೆಗೆ 4 ರಿಂದ 5 ಲೋಟಗಳಷ್ಟು ನೀರು ಕುಡಿಯಬೇಕು.

ದೀಪಾ : ಸಮತೋಲನ ಆಹಾರ ಹೇಗಿರಬೇಕು?

ಕ್ಯಾರೆಟ್ : ಈ ಚಾರ್ಟ್ ನೋಡಿ ತಿಳಿ.

ಹಾಡಿ-ನಲಿ

ಕಬ್ಬು, ಧಾನ್ಯದಿ ಪಿಷ್ಟದ ಅಂಶ

ಎಣ್ಣೆ, ತುಪ್ಪದಿ ಕೊಬ್ಬಿನ ಅಂಶ

ಕಾಳಲಿ, ಹಾಲಲಿ, ಪ್ರೊಟೀನ್ ಅಂಶ

ತರಕಾರಿ, ಹಣ್ಣಲಿ, ವಿಟಮಿನ್ ಅಂಶ.

ಎಲ್ಲದರಲ್ಲಿಯೂ ಖನಿಜಗಳು

ಪುಷ್ಟಿಯ ಕೊಡುವವು ಎಲ್ಲರೊಳು

ಇವೆಲ್ಲವು ಬೇಕು ಊಟದಲಿ

ನಿತ್ಯವೂ ಅಗತ್ಯ ಪ್ರಮಾಣದಲಿ.

ಆಟ-ಆಡು

ನಿನ್ನ ಗೆಳೆಯರೊಂದಿಗೆ ಆಟ ಆಡು. ಸೀಮೆಸುಣ್ಣದ ಖಾಲಿ ಡಬ್ಬಗಳನ್ನು ತೆಗೆದುಕೊ. ಅವುಗಳನ್ನು ಬಣ್ಣದ ಕಾಗದದಿಂದ ಅಲಂಕರಿಸು. ಅವುಗಳ ಮೇಲೆ ಪೌಷ್ಟಿಕಾಂಶಗಳ ಹೆಸರನ್ನು ಬರೆ.

ಡ್ರಾಯಿಂಗ್ ಹಾಳೆಯನ್ನು ವೃತ್ತಾಕಾರದ ಸಣ್ಣ ಸಣ್ಣ ಬಿಲ್ಲೆಗಳಾಗಿ ಕತ್ತರಿಸು. ಅವುಗಳ ಮೇಲೆ ಆಹಾರ ಪದಾರ್ಥಗಳ ಹೆಸರನ್ನು ಬರೆ ಅಥವಾ ಚಿತ್ರ ಅಂಟಿಸು.

ಶಿಕ್ಷಕರ ಸಹಾಯದಿಂದ ಆಹಾರ ಪದಾರ್ಥದ ಹೆಸರು ಅಥವಾ ಚಿತ್ರವಿರುವ ಬಿಲ್ಲೆಗಳನ್ನು ಸಂಬಂಧಿಸಿದ ಪೌಷ್ಟಿಕಾಂಶಗಳ ಹೆಸರಿರುವ ಡಬ್ಬಗಳಲ್ಲಿ ತುಂಬು.

ಒಬ್ಬೊಬ್ಬರೇ ಬಂದು, ಡಬ್ಬದಲ್ಲಿರುವ ಬಿಲ್ಲೆಗಳನ್ನು ತೆಗೆದು ಆಹಾರ ವಸ್ತುಗಳ ಹೆಸರನ್ನು ಜೋರಾಗಿ ಓದಲಿ. ನಂತರ ಅವುಗಳನ್ನು ಡಬ್ಬದ ಹೊರಗೆ ಇಡಲಿ.

ಇದರ ನಂತರ ಎಲ್ಲಾ ಬಿಲ್ಲೆಗಳನ್ನು ಮಿಶ್ರಮಾಡಿ ಡಬ್ಬದಿಂದ ಸ್ವಲ್ಪ ದೂರದಲ್ಲಿ ರಾಶಿ ಹಾಕು.

ಪುನಃ ಒಬ್ಬೊಬ್ಬರೇ ಬಂದು ರಾಶಿಯಿಂದ ಆಹಾರ ವಸ್ತುಗಳ ಬಿಲ್ಲೆ ತೆಗೆದು ಸಂಬಂಧಿಸಿದ ಪೋಷಕಾಂಶದ ಡಬ್ಬಕ್ಕೆ ಹಾಕಲಿ.

ಆಟದ ಕೊನೆಯಲ್ಲಿ ಪ್ರತಿ ಡಬ್ಬದಲ್ಲಿ ಸಂಗ್ರಹವಾಗಿರುವ ಬಿಲ್ಲೆಗಳನ್ನು ಎಣಿಸಿ ಯಾವುದರಲ್ಲಿ ಹೆಚ್ಚು, ಯಾವುದರಲ್ಲಿ ಕಮ್ಮಿ ಎಂಬುದನ್ನು ಗುರ್ತಿಸು.

ದೀಪಾ : ಕ್ಯಾರೆಟಕ್ಕಾ, ನಮ್ಮ ಹಾಗೆ ಪ್ರಾಣಿ-ಪಕ್ಷಿಗಳಿಗೂ ಆಹಾರ ಬೇಕಲ್ಲವೆ?

ಕ್ಯಾರೆಟ್ : ಹೌದು,

ಕೆಳಗಿನ ಪ್ರಾಣಿಗಳ ಆಹಾರವನ್ನು ಬರೆ.

ದೀಪಾ : ಪ್ರಾಣಿಗಳು ಆಹಾರವನ್ನು ಹೇಗೆ ಸೇವಿಸುತ್ತವೆ?

ಕ್ಯಾರೆಟ್ : ಪ್ರಾಣಿಗಳಿಗೆ ಆಹಾರ ಸೇವಿಸಲು ಕೊಕ್ಕು, ಹಲ್ಲು, ಹೀರು ನಳಿಕೆಗಳು ಹೇಗೆ ಸಹಕರಿಸುತ್ತವೆ ಎಂಬುದನ್ನು ನೋಡಿ ತಿಳಿ.

ಚಿತ್ರ ನೋಡಿ, ಬಿಟ್ಟ ಜಾಗವನ್ನು ಭರ್ತಿ ಮಾಡು.

* ಹುಲಿ ತನ್ನ ____________ ಸಹಾಯದಿಂದ ಮಾಂಸವನ್ನು ಸಿಗಿಯುತ್ತಿದೆ.ಹದ್ದಿಗೆ ತನ್ನ ಆಹಾರವನ್ನು ಹಿಡಿಯಲು ____________ ವಾದ ಕಾಲುಗಳಿವೆ.

* ಚಿಟ್ಟೆಗೆ ____________ ವನ್ನು ಹೀರಲು ಅನುಕೂಲವಾದ ಹೀರುನಳಿಕೆ ಇದೆ.

* ಕೊಕ್ಕರೆಗೆ ತನ್ನ ಆಹಾರವಾದ _________ ನ್ನು ಹಿಡಿಯಲು ಉದ್ದವಾದ ಕೊಕ್ಕು ಇದೆ.

* ಆನೆ ಸೊಪ್ಪನ್ನು _____________ ನಿಂದ ಹಿಡಿದು ತಿನ್ನುತ್ತದೆ.

ಹೀಗೆ ನಿನಗೆ ಗೊತ್ತಿರುವ ಬೇರೆ ಬೇರೆ ಪ್ರಾಣಿಗಳು ಅವುಗಳ ಆಹಾರ ಪಡೆಯಲು ಕೊಕ್ಕು, ಕಾಲು ಮತ್ತು ಹಲ್ಲುಗಳು ಹೇಗೆ ನೆರವಾಗಿವೆ ಎಂಬುದನ್ನು ಬರೆ.

ದೀಪಾ : ಅಬ್ಬಾ! ಪ್ರಾಣಿಗಳು ಆಹಾರ ಸೇವಿಸುವ ಕ್ರಮ ಅದ್ಭುತವಾಗಿದೆ. ಕ್ಯಾರೆಟಕ್ಕಾ ಸ್ವಲ್ಪ ತಾಳು ಮತ್ತೆ ಹಸಿವಾಗುತ್ತಿದೆ. ಇನ್ನೂ ಸ್ವಲ್ಪ ಹಲ್ವ ತಿಂದು ಬರುತ್ತೇನೆ.

ದೀಪಾ ಅಡುಗೆ ಮನೆಗೆ ಹೋದಳು. ಅಲ್ಲಿ ನೋಡಿದರೆ ಹಲ್ವವನ್ನು ಜಿರಳೆಗಳು ತಿನ್ನುತ್ತಿದ್ದವು. ಅದನ್ನು ನೋಡಿದ ದೀಪಾ ಕಿಟಾರನೆ ಕಿರುಚಿದಳು.

ಕ್ಯಾರೆಟ್ : ಏಕೆ ದೀಪ, ಏನಾಯಿತು.

ದೀಪಾ : ಹಲ್ವವನ್ನು ಜಿರಳೆಗಳು ತಿನ್ನುತ್ತಿವೆ. ಅವನ್ನು ಓಡಿಸು. ನಾನು ಹಲ್ವ ತಿನ್ನಬೇಕು.

ಕ್ಯಾರೆಟ್ : ಬೇಡ ದೀಪ, ಆ ಹಲ್ವವನ್ನು ತಿನ್ನಬೇಡ. ಪ್ರಾಣಿಗಳು ಕುಳಿತ ಆಹಾರವು ಅಶುದ್ಧವಾಗಿರುತ್ತದೆ. ಅದನ್ನು ತಿನ್ನಬಾರದು.

ದೀಪಾ : ತಿಂದರೆ ಏನಾಗುತ್ತದೆ?

ಕ್ಯಾರೆಟ್ : ದಿನಪತ್ರಿಕೆಯಲ್ಲಿನ ಈ ಸುದ್ದಿಯನ್ನು ಓದು.

ಅಶುದ್ಧ ಆಹಾರ ತಿಂದು ಮಕ್ಕಳು ಅಸ್ವಸ್ಥ. ಜಾತ್ರೆಯೊಂದರಲ್ಲಿ ತೆರೆದಿಟ್ಟ ಆಹಾರವನ್ನು ಕೆಲವು ಮಕ್ಕಳು ತಿಂದು ಅಸ್ವಸ್ಥರಾಗಿದ್ದಾರೆ. ಆಹಾರದ ಅಶುದ್ಧತೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ನೊಣ, ಜಿರಳೆ ಕುಳಿತ ಆಹಾರ ತಿಂದು ವಾಂತಿ ಬೇಧಿಯಿಂದ ನರಳುತ್ತಿದ್ದ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ತೀವ್ರ ಅಸ್ವಸ್ಥರಾದ 4 ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ಸೇರಿಸಲಾಗಿದೆ.

ದೀಪಾ : ಅಯ್ಯೋ! ಪಾಪ.

ಕ್ಯಾರೆಟ್ : ಬಾ, ನಿನ್ನನ್ನು ಹತ್ತಿರದ ಜಾತ್ರೆಗೆ ಕರೆದೊಯ್ಯುತ್ತೇನೆ. ಆ ಅಂಗಡಿಯಲ್ಲಿ ತೆರೆದಿಟ್ಟ ತಿನಿಸುಗಳನ್ನು ನೋಡು.

ದೀಪಾ : ಅಯ್ಯೋ, ನೊಣಗಳು ಕೊಳೆತ ವಸ್ತುಗಳ ಮೇಲೆ ಇವೆ. ಅವೇ ಮತ್ತೆ ಹಾರಿ ಬಂದು ಸಿಹಿ ತಿಂಡಿಯ ಮೇಲೂ ಕುಳಿತಿವೆ.

ಕ್ಯಾರೆಟ್ : ಇಂತಹ ಆಹಾರವನ್ನು ಸೇವಿಸಿದರೆ ಕಾಲರಾದಂತಹ ರೋಗಗಳು ಬರುತ್ತವೆ. ಆದ್ದರಿಂದ ಯಾವಾಗಲೂ ಆಹಾರವನ್ನು ಕೀಟಗಳು ಕುಳಿತುಕೊಳ್ಳದ ಹಾಗೆ ಮುಚ್ಚಿಡಬೇಕು. ಅಡುಗೆಗೆ ಬಳಸುವ ಮತ್ತು ಕುಡಿಯುವ ನೀರನ್ನು ಸಂಗ್ರಹಿಸಿಡುವ ಪಾತ್ರೆಗಳನ್ನು ಮುಚ್ಚಿಡಬೇಕು. ನೀರು ಮಲಿನವಾಗದಂತೆ ಎಚ್ಚರ ವಹಿಸಬೇಕು. ಆಹಾರ ತಿನ್ನುವ ಮೊದಲು ಕೈಗಳನ್ನು ಶುಚಿಯಾಗಿ ತೊಳೆಯಬೇಕು. ತಿಳಿಯಿತಾ?

ದೀಪಾ : ತಿಳಿಯಿತು ಕ್ಯಾರೆಟಕ್ಕಾ.

ಕ್ಯಾರೆಟ್ : ಹಳಸಿದ ಆಹಾರವನ್ನು ತಿನ್ನಬಾರದು. ಹಸಿಯಾದ ತರಕಾರಿ ಹಣ್ಣುಗಳನ್ನು ಚೆನ್ನಾಗಿ ತೊಳೆದು ತಿನ್ನಬೇಕು. ಕತ್ತರಿಸಿದ ಹಣ್ಣುಗಳನ್ನು ತಕ್ಷಣ ತಿನ್ನು. ತರಕಾರಿಗಳನ್ನು ಹೆಚ್ಚು ಬೇಯಿಸಬಾರದು. ಅದರಲ್ಲಿರುವ ಪೌಷ್ಟಿಕಾಂಶಗಳು ನಾಶವಾಗುತ್ತವೆ. ಆಹಾರವನ್ನು ಬೇಯಿಸಿದಾಗ ಅದು ಮೃದುವಾಗುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಅದರಲ್ಲಿರುವ ರೋಗಾಣುಗಳು ನಾಶವಾಗುತ್ತವೆ. ಆಹಾರವನ್ನು ಬಿಸಿಯಾಗಿ ತಿನ್ನು. ಜಿಡ್ಡಿನ, ಕರಿದ ಹಾಗೂ ಹೆಚ್ಚು ಮಸಾಲೆ ಸೇರಿಸಿದ ಆಹಾರ ವಸ್ತುಗಳನ್ನು ಹೆಚ್ಚಾಗಿ ತಿನ್ನಬೇಡ.

ದೀಪಾ : ಇದೆಲ್ಲ ನಾನು ಮಾಡುತ್ತಿದ್ದೇನೆ ಗೊತ್ತಾ?

ಕ್ಯಾರೆಟ್ : ಹಾಗಾದರೆ ಜಿರಳೆಗಳು ತಿಂದಿರುವ ಹಲ್ವವನ್ನು ಈಗಲೇ ಹೊರಗೆ ಎಸೆ.

ದೀಪಾ : ಆಯಿತು. (ದೀಪಾ ಬಿಕ್ಕುತ್ತಾ ಹಲ್ವವನ್ನು ಹೊರಗೆಸೆದಳು).

ಕನಸಿನಲ್ಲಿ ಬಿಕ್ಕುತಿದ್ದ ದೀಪಾಳನ್ನು ಅವಳಮ್ಮ ಎಬ್ಬಿಸಿದರು. ಚಕ್ಕನೆ ಎದ್ದ ದೀಪಾ ಅಮ್ಮನನ್ನು “ಹಲ್ವವನ್ನು ಸರಿಯಾಗಿ ಮುಚ್ಚಿಟ್ಟಿದ್ದೀಯಾ?” ಎಂದು ಕೇಳಿದಳು. ಅಮ್ಮ “ದೀಪಾ, ನೀನೇನು ಕನಸು ಕಂಡೆಯಾ?” ಎಂದು ನಕ್ಕರು.

ನಿನ್ನ ಮನೆಯಲ್ಲಿ ತಯಾರಿಸಿದ ಆಹಾರವನ್ನು ಹೇಗೆ ಕಾಪಾಡಿಕೊಳ್ಳುವೆ? ತಿಳಿಸು.

ನಿನಗಿದು ಗೊತ್ತೆ?

* ಸೂರ್ಯನ ಕಿರಣಗಳು ದೇಹದಲ್ಲಿ ಡಿ ಜೀವಸತ್ವವನ್ನು ಉತ್ಪಾದಿಸಲು ಸಹಾಯ ಮಾಡುತ್ತವೆ.

* ಅಯೋಡಿನ್ ಲವಣದ ಕೊರತೆಯಿಂದ ಬರುವ ರೋಗವೇ ಗಳಗಂಡ.

* ನಾವು ಬಳಸುವ ಅತಿ ಮುಖ್ಯ ಆಹಾರ ಧಾನ್ಯಗಳೆಂದರೆ ಅಕ್ಕಿ, ಗೋಧಿ, ಜೋಳ, ರಾಗಿ.

* ಸೂಕ್ಷ್ಮಾಣು ಜೀವಿಗಳು ಅಹಾರದಲ್ಲಿ ಸೇರಿದಾಗ ಆಹಾರ ಕೆಡುತ್ತದೆ ಅಥವಾ ಹಳಸುತ್ತದೆ. ಈ ಜೀವಿಗಳು ನಂಜಿನ ಪದಾರ್ಥಗಳನ್ನು ಉತ್ಪಾದಿಸುತ್ತವೆ. ಹೀಗಾಗಿ ಇಂತಹ ಆಹಾರವನ್ನು ಸೇವಿಸುವುದರಿಂದ ಜಠರ ಹಾಗೂ ಕರುಳಿಗೆ ಸಂಬಂಧಿಸಿದ ರೋಗಗಳು ಬರುತ್ತವೆ. ಕೆಲವೊಮ್ಮೆ ರೋಗಗಳು ತೀವ್ರಗೊಂಡು ಸಾವೂ ಸಂಭವಿಸಬಹುದು.

* ಒಣಗಿಸುವುದು, ಉಪ್ಪು ಹಾಕುವುದು, ಹೊಗೆ ಹಾಕುವುದು, ತಂಪುಗೊಳಿಸುವುದು, ಕುದಿಸುವುದು ಇತ್ಯಾದಿ ವಿಧಾನಗಳಿಂದ ಮನೆಯಲ್ಲಿ ಆಹಾರವನ್ನು ಸಂರಕ್ಷಿಸುತ್ತಾರೆ. ಮಾರುಕಟ್ಟೆಯಲ್ಲಿ ಹಲವು ವಿಧಾನಗಳಿಂದ ಆಹಾರವನ್ನು ಸಂಸ್ಕರಿಸಿ, ಸಂರಕ್ಷಿಸಿ ಮಾರುತ್ತಾರೆ. ಉದಾಹರಣೆಗೆ, ತಂಪು ಪಾನೀಯಗಳು, ಬ್ರೆಡ್, ಹಣ್ಣುಗಳ ರಸ, ಜ್ಯಾಮ್.

ಸಂವೇದ ವಿಡಿಯೋ ಪಾಠಗಳು

Samveda EVS 4th EVS 4th Aahara Aarogya 1 of 2

Samveda 4th EVS Aahara Aarogya 2 of 2

ಪೂರಕ ವಿಡಿಯೋಗಳು

ಆಹಾರ ಆರೋಗ್ಯ | Shara arogya | 4th standard EVS | lesson 8 | EVS | food health |

ಆಹಾರ ಆರೋಗ್ಯ | Ahara arogya | 4th standard EVS | lesson 8 | EVS | food health |

ಆಹಾರ ಆರೋಗ್ಯ | Ahara arogya | 4th standard EVS | lesson 8 | EVS | food health | part 3

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.