ಅನ್ನದ ಹಂಗು, ಅನ್ಯರ ಸ್ವತ್ತು – ಗದ್ಯಭಾಗ-3
-ಜೋಗಿ
ಪ್ರವೇಶ : ಒಮ್ಮೊಮ್ಮೆ ಗೊತ್ತಿಲ್ಲದಂತೆ ನಾವು ಯಾರದೋ ದಾಕ್ಷಿಣ್ಯಕ್ಕೆ ಯಾರದೋ ಮರ್ಜಿಗೆ ಸಿಲುಕುತ್ತೇವೆ. ಮಾಡುತ್ತಿರುವುದು ತಪ್ಪೆಂದು ಗೊತ್ತಿದ್ದೂ ತಪ್ಪಿಸಿಕೊಳ್ಳಲಾಗದ ಸ್ಥಿತಿಯಲ್ಲಿರುತ್ತೇವೆ. ಯಾವುದೋ ಕೃತಜ್ಞತೆ, ಇನ್ನಾವುದೋ ಒಂದು ಧನ್ಯತೆ, ಮನಸ್ಸಾಕ್ಷಿಯ ಪಿಸುಮಾತು ನಮ್ಮನ್ನು ಎಡಹುವಂತೆ ಮಾಡುತ್ತವೆ. ಇದಕ್ಕೆ ಉದಾಹರಣೆಯಾಗಿ ಮಹಾಭಾರತದ ಶಲ್ಯನ ಪಾತ್ರವನ್ನು ನೋಡಬಹುದು. ಶಲ್ಯ ರಾಜ, ಶೂರ, ಧೀರ. ತನ್ನ ಮನಸ್ಸಿನಂತೆ ನಡೆಯುವವನು. ಆದರೆ ಅಂತಹವನ ಜೀವನದಲ್ಲಿ ದಾಕ್ಷಿಣ್ಯ ಎಂಬುದು ಹೇಗೆ ಆಟ ಆಡಿಸಿತು?
ಈ ದಾಕ್ಷಿಣ್ಯ ಶಲ್ಯನನ್ನೇ ಒಂದು ಕ್ಷಣ ಅವಾಕ್ಕಾಗಿಸಿತು. ಅಂಥವನನ್ನೇ ದಾರಿತಪ್ಪಿಸಿತು. ಸಿಟ್ಟಿನ ಮಾತುಗಾರನಾಗಿದ್ದ ಶಲ್ಯ ಒಂದು ಕ್ಷಣದ ತಪ್ಪಿಗಾಗಿ ಸಾಕಷ್ಟು ಅವಮಾನ ಪಶ್ಚಾತ್ತಾಪ ಅನುಭವಿಸಬೇಕಾಗಿ ಬಂತು. ಅಂಥದ್ದೊಂದು ಪ್ರಸಂಗ ಇಲ್ಲಿದೆ.
ಶಲ್ಯ ಮದ್ರದೇಶದ ರಾಜನಾಗಿದ್ದ. ಆ ದೇಶದ ಪದ್ಧತಿಯಂತೆ ಆತನ ತಂಗಿಗೆ ಮಾದ್ರಿ ಅನ್ನುವ ಹೆಸರು ಬಂತು. ಮಾದ್ರಿಯನ್ನು ಪಾಂಡು ಮದುವೆಯಾದ. ಹೀಗಾಗಿ ಶಲ್ಯ, ನಕುಲ-ಸಹದೇವರಿಗೆ ಸೋದರಮಾಮ. ಉಳಿದ ಪಾಂಡವರಿಗೂ ಮಾವ.
ಕುರುಕ್ಷೇತ್ರ ಯುದ್ಧ ಶುರುವಾದಾಗ ಶಲ್ಯ ಪಾಂಡವರಿಗೆ ನೆರವಾಗುವುದಕ್ಕೆ ತನ್ನ ಅಗಾಧವಾದ ಸೇನೆಯನ್ನು ತೆಗೆದುಕೊಂಡು ಉಪಪ್ಲಾವ್ಯ ಎಂಬ ಪಟ್ಟಣದತ್ತ ಹೊರಡುತ್ತಾನೆ. ಶಲ್ಯ ಪಾಂಡವರಿಗೆ ಸಹಾಯ ಮಾಡುವುದಕ್ಕೆ ಹೊರಟು ನಿಂತ ಸಂಗತಿ ದುರ್ಯೋಧನನಿಗೆ ತಿಳಿಯುತ್ತದೆ. ಆತ ಕೂಡಲೇ ಒಂದು ಉಪಾಯ ಮಾಡುತ್ತಾನೆ. ಸಾವಿರಾರು ಸೇವಕರನ್ನು ಕಳುಹಿಸಿ ಶಲ್ಯನ ಸೇನೆ ಹಾದುಬರುವ ದಾರಿಯುದ್ದಕ್ಕೂ ಊಟ ಉಪಚಾರ, ವಸತಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವಂತೆ ಹೇಳುತ್ತಾನೆ. ಅವರು ದಾರಿಯುದ್ದಕ್ಕೂ ಅಲ್ಲಲ್ಲಿ ಸುಂದರವಾದ ವಸತಿಗೃಹಗಳನ್ನು ಕಟ್ಟಿ ರುಚಿಯಾದ ಅಡುಗೆಗಳನ್ನೂ ನೀರನ್ನೂ ವೈದ್ಯಕೀಯ ಶುಶ್ರೂಷೆಯ ವ್ಯವಸ್ಥೆಯನ್ನೂ ಮಾಡುತ್ತಾರೆ. ಈ ಸೇವೆಯೆಲ್ಲವನ್ನೂ ಪಾಂಡವರೇ ಮಾಡಿದ್ದಾರೆ ಎಂದುಕೊಂಡು ಶಲ್ಯ ಅದನ್ನೆಲ್ಲ ಮೆಚ್ಚಿಕೊಳ್ಳುತ್ತಾ ಸ್ವೀಕರಿಸುತ್ತಾನೆ.
ಇನ್ನೇನು ಉಪಪ್ಲವ್ಯ ನಗರ ಹತ್ತಿರವಾಗುತ್ತಿದ್ದಂತೆ ಶಲ್ಯ ತನ್ನ ಸೇವೆಯಲ್ಲಿದ್ದ ಸೇವಕರಲ್ಲಿ ಒಬ್ಬನನ್ನು ಕರೆದುಹೇಳುತ್ತಾನೆ. ‘`ಬಹಳ ಅದ್ಭುತವಾದ ಸೇವೆ ಮಾಡಿದ್ದೀರಿ. ನಿಮಗೆ ನಾನೊಂದಷ್ಟು ಬಹುಮಾನ ಕೊಡಬೇಕು ಅಂದುಕೊಂಡಿದ್ದೇನೆ. ಇನ್ನೊಬ್ಬರ ಸೇವೆಯಲ್ಲಿರುವ ನೀವು ಅವರ ಅನುಮತಿಯಿಲ್ಲದೆ ಕಾಣಿಕೆ ಸ್ವೀಕರಿಸುವುದು ತಪ್ಪು. ನಾನು ಹೀಗೆ ಹೇಳಿದೆನೆಂದು ಹೇಳಿ ನಿಮ್ಮ ದೊರೆಯ ಅನುಮತಿ ಪಡೆದುಕೊಂಡು ಬನ್ನಿ”
ಸೇವಕರು ಇದನ್ನೇ ದುರ್ಯೋಧನನ ಹತ್ತಿರ ಹೇಳುತ್ತಾರೆ. ದುರ್ಯೋಧನನಿಗೆ ಶಲ್ಯನ ಮುಂದೆ ಹಾಜರಾಗುವುದಕ್ಕೆ ಇದೇ ಸಕಾಲ ಅನ್ನುವುದು ಮನವರಿಕೆಯಾಗುತ್ತದೆ. ಕೌರವರ ಆತಿಥ್ಯವನ್ನು ಸ್ವೀಕರಿಸಿದ್ದಕ್ಕೆ ತನ್ನ ಕೃತಜ್ಞತೆಯನ್ನು ಅರ್ಪಿಸುತ್ತಾನೆ.
ಶಲ್ಯನಿಗೆ ತಾವು ಇದುವರೆಗೆ ಅನುಭವಿಸಿದ ಆದರಾತಿಥ್ಯವೆಲ್ಲ ಕೌರವನ ಏರ್ಪಾಡು ಎಂದು ತಿಳಿದು ಅಚ್ಚರಿಯಾಗುತ್ತದೆ. ಅಲ್ಲದೆ ಪಾಂಡವರ ಜೊತೆ ಸೇರಲು ಹೋಗುತ್ತಿರುವ ತನಗೆ ದುರ್ಯೋಧನ ಸೇವೆ ಮಾಡಿದ್ದನ್ನು ನೋಡಿ ಅವನ ಮೇಲೆ ಅಪಾರ ಗೌರವ ಮೂಡುತ್ತದೆ.
“ಹೇಳು ದುರ್ಯೋಧನ, ನಿನ್ನ ಹೃದಯವೈಶಾಲ್ಯಕ್ಕೆ ಬೆರಗಾಗಿದ್ದೇನೆ. ಬೇಕಾದ್ದು ಕೇಳು…. ಕೊಡುತ್ತೇನೆ” ಅನ್ನುತ್ತಾನೆ ಶಲ್ಯ.
“ಹಾಗಿದ್ದರೆ ನೀವು ಮತ್ತು ನಿಮ್ಮ ಸೇನೆ ನಮ್ಮ ಪರವಾಗಿ ಹೋರಾಡಬೇಕು” ಅನ್ನುತ್ತಾನೆ ದುರ್ಯೋಧನ.
ಶಲ್ಯ ದಿಗ್ಭ್ರಾಂತನಾಗುತ್ತಾನೆ. ಒಪ್ಪಿಕೊಳ್ಳಲಾಗದ ಸ್ಥಿತಿಯಲ್ಲಿರುತ್ತಾನೆ.
ಹೀಗೆ ಶಲ್ಯನನ್ನು ದುರ್ಯೋಧನ ತನ್ನ ಕಡೆಗೆ ಸೆಳೆದುಕೊಳ್ಳುತ್ತಾನೆ. ಅದನ್ನು ಮೋಸ ಎಂದು ಕರೆಯುವುದೂ ತಪ್ಪು. ಆದರೆ ದುರ್ಯೋಧನನ ಆತಿಥ್ಯವನ್ನು ಸ್ವೀಕರಿಸಿದ ತಪ್ಪಿಗಾಗಿ ಶಲ್ಯ ತನ್ನವರನ್ನೇ ಬಿಟ್ಟುಕೊಡಬೇಕಾಗಿ ಬರುತ್ತದೆ.
ಆದರೆ ಇಲ್ಲಿ ಇನ್ನೊಂದು ತಿರುವೂ ಇದೆ. ಶಲ್ಯ ಇಷ್ಟಾಗಿಯೂ ತನ್ನ ತಂಗಿಯ ಮಕ್ಕಳನ್ನು ನೋಡುವುದಕ್ಕೆ ಹೋಗುತ್ತಾನೆ.
ಈ ಪ್ರಸಂಗವನ್ನು ರಾಜಾತಿಥ್ಯವನ್ನು ಸ್ವೀಕರಿಸುವುದು ಮತ್ತು ತಾನು ಉಣ್ಣುತ್ತಿರುವುದು ಯಾರ ಅನ್ನ ಎಂದು ತಿಳಿಯದೇ ಉಣ್ಣುವುದು ಅಪಾಯಕಾರಿ ಅನ್ನುವುದನ್ನು ತಿಳಿ ಹೇಳುವುದಕ್ಕೆ ಬಳಸುತ್ತಾರೆ.
ದುರ್ಯೋಧನನ ಪರವಾಗಿ ಹೋರಾಡುವುದು ಎಂದು ನಿಶ್ಚಯಿಸಿದ ಅನಂತರವೂ ಶಲ್ಯ ಪಾಂಡವರ ಬಳಿಗೆ ಹೋಗುತ್ತಾನೆ. ಆಗ ಧರ್ಮರಾಯ ಆತನನ್ನು ಒಂದು ಪ್ರಶ್ನೆ ಕೇಳುತ್ತಾನೆ.
“ನೀನೂ ಕೃಷ್ಣನಷ್ಟೇ ಒಳ್ಳೆಯ ಸಾರಥಿ. ಒಂದು ವೇಳೆ ನೀನು ಕರ್ಣನಿಗೆ ಸಾರಥಿಯಾಗಿ ಅರ್ಜುನನನ್ನು ಕೊಲ್ಲುವುದಕ್ಕೆ ನೆರವಾಗಬೇಕಾಗಿ ಬಂದರೆ ಏನು ಮಾಡುತ್ತೀಯಾ?”
“ನಾನು ದುರ್ಯೋಧನನ ಪರವಾಗಿ ಹೋರಾಡಲೇಬೇಕು. ಕರ್ಣ ಅರ್ಜುನನ ಮೇಲೆ ಯುದ್ಧಕ್ಕೆ ಬಂದಾಗ ನಾನೇನಾದರೂ ಆತನ ಸಾರಥಿಯಾಗಿದ್ದರೆ ಅವನನ್ನು ನಾನು ಚುಚ್ಚು ಮಾತುಗಳಿಂದ ನೋಯಿಸುತ್ತೇನೆ. ನೊಂದ ಹೃದಯದಿಂದ ಆತ ಖಂಡಿತ ಯುದ್ಧವನ್ನು ಗೆಲ್ಲಲಾರ. ಅರ್ಜುನನೇ ಖಂಡಿತ ಗೆಲ್ಲುತ್ತಾನೆ”
ಈಗ ಹೇಳಿ, ದುರ್ಯೋಧನನ ಪರವಾಗಿ ನಿಂತ ಶಲ್ಯ ನಿಜಕ್ಕೂ ಯಾರ ಪರವಾಗಿ ಯುದ್ಧ ಮಾಡಿದ ಹಾಗಾಯಿತು?
ಆಶಯ :
‘ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಎಂಬ ಗಾದೆಯಿದೆ. ಅಕ್ಕಿ ಖರ್ಚಾಗಬಾರದು ನೆಂಟರೂ ಊಟಮಾಡಿ ಸಂತೋಷದಿಂದಿರಬೇಕು ಎಂದರೆ ಹೇಗೆ ಸಾಧ್ಯ? ನಮ್ಮ ಬದುಕಿನಲ್ಲೂ ಹಾಗೆಯೇ. ನಮ್ಮ ನಿಷ್ಠೆ ಎರಡು ಕಡೆಗೆ ಇರಬಾರದು. ಹೇಳುವುದು ಒಂದು ಮಾಡುವುದು ಮತ್ತೊಂದು ಎಂಬ ರೀತಿಯಲ್ಲಿ ಬದುಕಬಾರದು. ನಂಬಿಕೆ ಯಾವಾಗಲೂ ಒಂದು ಕಡೆಗೆ ಇರಬೇಕು. ಜೇಡರದಾಸಿಮಯ್ಯ “ನಿಮ್ಮ ದಾನವನುಂಡು ಅನ್ಯರನೆ ಹೊಗಳುವ ಕುನ್ನಿಗಳನೇನೆಂಬೆ ಹೇಳಾ ರಾಮನಾಥ” ಎನ್ನುತ್ತಾರೆ. ನಾವು ಇನ್ನೊಬ್ಬರ ಹಂಗಿಗೆ ಒಳಗಾಗುವ ಮುನ್ನ ಯೋಚಿಸಬೇಕು. ಇಬ್ಬರಿಗೂ ಆಶ್ವಾಸನೆ ನೀಡಿ, ನೀಡಿದ ಆಶ್ವಾಸನೆಯನ್ನು ನೆರವೇರಿಸಲಾಗದ ಶಲ್ಯನಂತಾಗಬಾರದು.
ಕೃತಿಕಾರರ ಪರಿಚಯ
ಜೋಗಿ ಎಂಬುದು ಗಿರೀಶರಾವ್ ಹತ್ವಾರ್ ಇವರ ಕಾವ್ಯನಾಮ ನವೆಂಬರ್ 1965ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹೊಸಬೆಟ್ಟಿನಲ್ಲಿ ಜನಿಸಿದರು. ಇದೇ ಜಿಲ್ಲೆಯ ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಪತ್ರಿಕೋದ್ಯಮಿಯಾದರು. ಸಣ್ಣ ಕತೆಗಾರ, ಅಂಕಣಕಾರರಾಗಿ ಜನಪ್ರಿಯರಾಗಿದ್ದಾರೆ, ಸಿನೆಮಾ ಮತ್ತು ದೂರದರ್ಶನಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಅವರ ‘ಕಥಾಸಮಯ’ ಎಂಬ ಕೃತಿಯಿಂದ ಸದರಿ ಪಾಠವನ್ನು ಆಯ್ಕೆಮಾಡಲಾಗಿದೆ.
ಪದಗಳ ಅರ್ಥ
ದಾಕ್ಷಿಣ್ಯ – ಸಂಕೋಚ, ಹಿಂಜರಿಕೆ, ಇನ್ನೊಬ್ಬರಿಗೆ ನೋವಾಗದಂತೆ ಅವರ ಮನಸ್ಸನ್ನು ಅನುಸರಿಸಿ ನಡೆದುಕೊಳ್ಳುವುದು;
ಮರ್ಜಿ – ಇಷ್ಟ, ಧೋರಣೆ
ಶುಶ್ರೂಷೆ – ಉಪಚಾರ, ಸೇವೆ
ಸಾರಥಿ – ರಥವನ್ನು ನಡೆಸುವ ಚಾಲಕ
ವಿವರಣೆ ತಿಳಿಯಿರಿ
ಪಾಂಡು – ಮಹಾಭಾರತದಲ್ಲಿ ಬರುವ ಪಾತ್ರ. ಪಾಂಡು, ಧೃತರಾಷ್ಟ್ರ ಮತ್ತು ವಿದುರ ಈ ಮೂವರೂ ಸೋದರರು. ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ ಪಾಂಡುವಿನ ಮಕ್ಕಳು. ಅದರಿಂದ ಈ ಐವರೂ ಪಾಂಡವರು.
ಕುರುಕ್ಷೇತ್ರ – ಭಾರತದ ಹರಿಯಾಣ ರಾಜ್ಯದಲ್ಲಿ ಈಗಲೂ ಇರುವ ಸ್ಥಳ. ಮಹಾಭಾರತ ಯುದ್ಧ ಈ ಸ್ಥಳದಲ್ಲಿ ನಡೆಯಿತು ಎಂಬ ನಂಬಿಕೆಯಿದೆ. ಹೀಗಾಗಿ ಕುರುಕ್ಷೇತ್ರ ಯುದ್ಧ ಎಂದು ಪ್ರಸಿದ್ಧವಾಗಿದೆ.
ದುರ್ಯೋಧನ – ಕೌರವರಲ್ಲಿ ಹಿರಿಯ, ಧೃತರಾಷ್ಟ್ರ ಮತ್ತು ಗಾಂಧಾರಿಯರ ಹಿರಿಮಗ
ಕರ್ಣ – ದುರ್ಯೋಧನನ ಗೆಳೆಯ, ಕುಂತಿಯ ಮಗ.
ಉಪಪ್ಲವ್ಯ – ವಿರಾಟ ರಾಜ್ಯದ ಒಂದು ಉಪನಗರ, ಪಾಂಡವರು ಅಜ್ಞಾತವಾಸದ ಬಳಿಕ ಇಲ್ಲಿ ವಾಸವಾಗಿದ್ದರು.
ಸಂವೇದ ವಿಡಿಯೋ ಪಾಠಗಳು
ಪೂರಕ ವಿಡಿಯೋಗಳು
ಈ ಪಾಠವನ್ನು ಸಂಪೂರ್ಣವಾಗಿ ವೀಕ್ಷಿಸಲು ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ
ವ್ಯಾಕರಣ – ವಿಭಕ್ತಿ ಪ್ರತ್ಯಯ, ಬಹುವಚನ
ವಿಭಕ್ತಿ ಪ್ರತ್ಯಯ
ಕೆಳಗಿನ ವಾಕ್ಯಗಳನ್ನು ಓದಿ ವ್ಯತ್ಯಾಸ ಗುರುತಿಸಿ.
ಅ) ಇರುವೆಯು ಬಂದಿತು. (ಇರುವೆ+ಉ=ಇರುವೆಯು)
ಆ) ಇರುವೆ ಬಂದಿತು.
ಮೇಲಿನ ವಾಕ್ಯಗಳಲ್ಲಿ ಎರಡೂ ವಾಕ್ಯಗಳೂ ಸರಿ. ಆದರೆ,
(ಅ) ಎಂಬ ವಾಕ್ಯದಲ್ಲಿರುವ ‘ಯು’ ಎಂಬ ಅಕ್ಷರವನ್ನು ಸೇರಿಸಲಾಗಿದೆ.
(ಆ) ಎಂಬ ವಾಕ್ಯದಲ್ಲಿ ‘ಯು’ ಅನ್ನು ಬಿಡಲಾಗಿದೆ. (ಆ) ಎಂಬ ವಾಕ್ಯದಲ್ಲಿ ‘ಯು’ ಅನ್ನು ಬಿಟ್ಟರೂ ಅರ್ಥ ವ್ಯತ್ಯಾಸವಾಗುವುದಿಲ್ಲ ಎಂಬುದನ್ನು ಗಮನಿಸಿ.
(ಕ) ಇರುವೆ ಗೂಡನ್ನು ಬಂದಿತು. (ಗೂಡು + ಅನ್ನು =ಗೂಡನ್ನು)
(ಗ) ಇರುವೆ ಗೂಡಿನಿಂದ ಬಂದಿತು. (ಗೂಡು+ನ+ಇಂದ=ಗೂಡಿನಿಂದ)
(ಚ) ಇರುವೆ ಗೂಡಿಗೆ ಬಂದಿತು. (ಗೂಡು+ಇಗೆ=ಗೂಡಿಗೆ)
(ಜ) ಇರುವೆ ಗೂಡಿನಲ್ಲಿ ಬಂದಿತು. (ಗೂಡು+ನ+ಅಲ್ಲಿ=ಗೂಡಿನಲ್ಲಿ, ಇದನ್ನು ಗೂಡು+ಅಲ್ಲಿ=ಗೂಡಲ್ಲಿ ಎಂದೂ ಬಳಸಬಹುದು)
ಮೇಲಿನ ನಾಲ್ಕು ವಾಕ್ಯಗಳಲ್ಲಿ (ಕ) ಮತ್ತು (ಜ) ವಾಕ್ಯಗಳಲ್ಲಿ ಅರ್ಥ ಸ್ಪಷ್ಟವಾಗುವುದಿಲ್ಲ. ಇಂಥ ವಾಕ್ಯ ಸರಿಯಲ್ಲ. ಈ ವಾಕ್ಯವನ್ನು ಬದಲಾಯಿಸಿ ಬರೆಯೋಣ.
(ಕ) ಇರುವೆ ಗೂಡನ್ನು ನೋಡಿತು.
(ಚ) ಇರುವೆ ಗೂಡಿನಲ್ಲಿ (ಗೂಡಲ್ಲಿ) ಇದೆ.
ಈಗ ಈ ವಾಕ್ಯಗಳು ಅರ್ಥವತ್ತಾಗಿ ಕಾಣಿಸುತ್ತವೆ.
ಮೇಲಿನ ನಾಲ್ಕು ವಾಕ್ಯಗಳಲ್ಲಿ (ಗ) ಮತ್ತು (ಚ) ವಾಕ್ಯಗಳಲ್ಲಿ ಅರ್ಥ ಸ್ಪಷ್ಟವಾಗುತ್ತದೆ. ಆದರೆ ಈ ವಾಕ್ಯಗಳಲ್ಲಿ ಬಳಕೆಯಾಗಿರುವ ಗೆ ಮತ್ತು ಇಂದ ಇವುಗಳನ್ನು ಸೇರಿಸಿರುವುದರಿಂದ ಅರ್ಥ ವ್ಯತ್ಯಾಸವಾಗಿದೆ. ಇರುವೆ ಗೂಡಿನಿಂದ ಬಂದಿತು. (ಹೊರಗೆ ಬಂದಿತು) ಇರುವೆ ಗೂಡಿಗೆ ಬಂದಿತು (ಒಳಗೆ ಬಂದಿತು) ಎಂಬ ಅರ್ಥವಾಗುತ್ತದೆ.
– ಕೊಟ್ಟೆ ಕಟ್ಟಲು ಕೊಂಬೆಗಳನ್ನು ಬಗ್ಗಿಸುತ್ತವೆ.
– ರಾಜು ಗಿಡವನ್ನು ನೆಟ್ಟನು.
– ಕೆಲಸಗಾರ ಇರುವೆಗಳು ರಾಣಿಗೆ ಆಹಾರ ತಿನ್ನಿಸುತ್ತವೆ.
– ಕಮಲ ಮನೆಗೆ ಹೋದಳು.
– ಚಗಳಿ ಇರುವೆಗಳು ಮರದಲ್ಲಿ ಕೊಟ್ಟೆ ಕಟ್ಟುತ್ತವೆ.
– ಪೂರ್ಣಿಮ ಪೇಟೆಯಲ್ಲಿ ಆಟಿಕೆ ಕೊಂಡಳು.
ಗಮನಿಸಿ :
ಅ. ಇರುವೆಗಳು ಲಾರ್ವಾವನ್ನು ಬಾಯಿಯಿಂದ ಸ್ರವಿಸುತ್ತವೆ.
ಆ. ರಾಜು ಮನೆಯಿಂದ ಬಂದನು.
ಮೇಲಿನ ವಾಕ್ಯಗಳಲ್ಲಿ ಗೆರೆ ಎಳೆದಿರುವ ಪದಗಳನ್ನು ಗಮನಿಸಿ. ಮೊದಲೆರಡು ವಾಕ್ಯಗಳಲ್ಲಿ ಬಾಯಿಯಿಂದ ಮತ್ತು ಮನೆಯಿಂದ ಪದಗಳನ್ನು ನೋಡಿದಾಗ ಬಾಯಿ ಮತ್ತು ಮನೆ ಎಂಬ ಮೂಲ ಪದಗಳಿಗೆ ‘ಇಂದ’ ಎಂಬ ಪ್ರತ್ಯಯ ಸೇರಿರುವುದು ಕಂಡು ಬರುತ್ತದೆ. ಇಂದ ಎಂಬ ಪ್ರತ್ಯಯವನ್ನು ಬಿಟ್ಟು ವಾಕ್ಯ ಓದಿದರೆ ಇರುವೆಗಳು ಲಾರ್ವಾ ಬಾಯಿ ಸ್ರವಿಸುತ್ತವೆ, ರಾಜು ಮನೆ ಬಂದನು ಎಂದಾಗುತ್ತವೆ. ಇದರಿಂದ ವಾಕ್ಯ ನಮಗೆ ಸರಿಯಾಗಿ ಅರ್ಥವಾಗುವುದಿಲ್ಲ.
ಹೀಗೆಯೇ ಸುಮ ಪೇಟೆ ಬಟ್ಟೆ ತಂದಳು ಎಂದರೆ ನಮಗೆ ಈ ವಾಕ್ಯ ಸರಿಯಾಗಿ ಅರ್ಥವಾಗುವುದಿಲ್ಲ. ಇದಕ್ಕೆ ಕೆಲವು ಅಕ್ಷರಗಳನ್ನು ಸೇರಿಸಿ ಸುಮ ಪೇಟೆಯಿಂದ ಬಟ್ಟೆಯನ್ನು ತಂದಳು ಎಂದು ಓದಿದಾಗ ನಮಗೆ ವಾಕ್ಯವು ಸಂಪೂರ್ಣವಾಗಿ ಅರ್ಥವಾಗುತ್ತದೆ.
ಈ ರೀತಿ ವಾಕ್ಯಗಳಲ್ಲಿ ಬಳಕೆಯಾಗುವ ವಿವಿಧ ಪದಗಳ ನಡುವೆ ಪರಸ್ಪರ ಸಂಬಂಧ ಕಲ್ಪಿಸುವ ಶಬ್ದಗಳೇ ‘ವಿಭಕ್ತಿ ಪ್ರತ್ಯಯಗಳು’. ಈ ಪ್ರತ್ಯಯಗಳು ಹೀಗಿವೆ.
1. ‘ಉ’
2. ‘ಅನ್ನು’
3. ‘ಇಂದ’
4. ‘ಗೆ’
5. ‘ದೆಸೆಯಿಂದ’
6. ‘ಅ’
7. ‘ಅಲ್ಲಿ’.
ಇದೇ ರೀತಿ ಪಾಠದಲ್ಲಿ ಬಂದಿರುವ ಈ ವಿಭಕ್ತಿ ಪ್ರತ್ಯಯ ಸಹಿತವಾಗಿರುವ ಪದಗಳನ್ನು ಪಟ್ಟಿ ಮಾಡಿ.
ಬಹುವಚನ
ಕೆಳಗಿನ ವಾಕ್ಯಗಳನ್ನು ಗಮನಿಸಿ ವ್ಯತ್ಯಾಸ ತಿಳಿಯಿರಿ :
1) ನನ್ನ ಬಳಿ ಒಂದು ಚೆಂಡು ಇದೆ.
2) ಅನ್ವರನ ಬಳಿ ನಾಲ್ಕು ಚೆಂಡುಗಳು ಇವೆ.
3) ಬೆಂಗಳೂರಿನಿಂದ ನಮ್ಮ ಶಾಲೆಗೆ ಒಬ್ಬಳು ಹುಡುಗಿ ಬಂದಿದ್ದಾಳೆ.
4) ಮೈಸೂರಿನಿಂದ ನಮ್ಮ ಶಾಲೆಗೆ ಮೂವರು ಹುಡುಗಿಯರು ಬಂದಿದ್ದಾರೆ.
5) ನಾಳೆ ವಿಜಯಪುರಕ್ಕೆ ಚೆಸ್ ಪಂದ್ಯದಲ್ಲಿ ಭಾಗವಹಿಸಲು ಒಬ್ಬ ಹುಡುಗ ಹೋಗುತ್ತಾನೆ.
6 )ನಾಳೆ ಬಾದಾಮಿಗೆ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಲು ಹದಿನಾರು ಹುಡುಗರು ಹೋಗುತ್ತಾರೆ.
1ನೆಯ ವಾಕ್ಯ ಗಮನಿಸಿ. ಇಲ್ಲಿ ಚೆಂಡು ಎಂಬುದು ನಾಮಪದ. ಇದೆ ಎಂಬುದು ಕ್ರಿಯಾಪದ. 2ನೆಯ ವಾಕ್ಯ ಗಮನಿಸಿ ಚೆಂಡುಗಳು ಎಂಬುದು ನಾಮಪದ. ಇವೆ ಎಂಬುದು ಕ್ರಿಯಾಪದ.
ಮೊದಲ ವಾಕ್ಯದಲ್ಲಿ ಚೆಂಡು ಒಂದು ಇದೆ. ಇದರಿಂದ ಚೆಂಡು ಎಂಬ ಪದ ಬಳಕೆಯಾಗಿದೆ. ಆದರೆ ಎರಡನೆಯ ವಾಕ್ಯದಲ್ಲಿ ಒಂದಕ್ಕಿಂತ ಹೆಚ್ಚು(ನಾಲ್ಕು) ಚೆಂಡುಗಳಿವೆ. ಇದರಿಂದ ಚೆಂಡುಗಳು ಎಂಬ ಪದ ಬಳಕೆಯಾಗಿದೆ. ಇಲ್ಲಿ –ಗಳು ಎಂಬುದು ಬಹುವಚನ ಸೂಚಿಸುವ ಪ್ರತ್ಯಯ.
3ನೆಯ ವಾಕ್ಯ ಗಮನಿಸಿ, ಇಲ್ಲಿ ಹುಡುಗಿ ಎಂಬುದು ನಾಮಪದ. ಬಂದಿದ್ದಾಳೆ ಎಂಬುದು ಕ್ರಿಯಾಪದ. 4ನೆಯ ವಾಕ್ಯ ಗಮನಿಸಿ, ಹುಡುಗಿಯರು ಎಂಬುದು ನಾಮಪದ ಬಂದಿದ್ದಾರೆ ಎಂಬುದು ಕ್ರಿಯಾಪದ. ಮೊದಲ ವಾಕ್ಯದಲ್ಲಿ ಒಬ್ಬಳು ಹುಡುಗಿ ಎಂದಿರುವುದರಿಂದ ಹುಡುಗಿ ಎಂಬ ಪದ ಬಳಕೆಯಾಗಿದೆ. ಆದರೆ ಎರಡನೆಯ ವಾಕ್ಯದಲ್ಲಿ ಒಂದಕ್ಕಿಂತ ಹೆಚ್ಚು ಹುಡುಗಿಯ ರಿರುವುದರಿಂದ ಹುಡುಗಿಯರು ಎಂಬ ಪದ ಬಳಕೆಯಾಗಿವೆ. ಇಲ್ಲಿ -ಅರು ಎಂಬುದು ಬಹುವಚನ ಸೂಚಿಸುವ ಪ್ರತ್ಯಯ.
5ನೆಯ ವಾಕ್ಯ ಗಮನಿಸಿ. ಇಲ್ಲಿ ಹುಡುಗಎಂಬುದು ನಾಮಪದ. ಹೋಗುತ್ತಾನೆ ಎಂಬುದು ಕ್ರಿಯಾಪದ. 6ನೆಯ ವಾಕ್ಯ ಗಮನಿಸಿ. ಹುಡುಗರು ಎಂಬುದು ನಾಮಪದ. ಹೋಗುತ್ತಾರೆ ಎಂಬುದು ಕ್ರಿಯಾಪದ. ಮೊದಲ ವಾಕ್ಯದಲ್ಲಿ ಒಬ್ಬ ಹುಡುಗ ಎಂದಿರುವುದರಿಂದ ಹುಡುಗ ಎಂಬ ಪದ ಬಳಕೆಯಾಗಿದೆ. ಆದರೆ ಎರಡನೆಯ ವಾಕ್ಯದಲ್ಲಿ ಒಂದಕ್ಕಿಂತ ಹೆಚ್ಚು(ಹದಿನಾರು) ಹುಡುಗರಿರುವುದರಿಂದ ಹುಡುಗರು ಎಂಬ ಪದ ಬಳಕೆಯಾಗಿವೆ. ಇಲ್ಲಿ-ರು ಎಂಬುದು ಬಹುವಚನ ಸೂಚಿಸುವ ಪ್ರತ್ಯಯ.
ಈಗ ಈ ನಿರ್ಧಾರಕ್ಕೆ ಬರೋಣ :
• ಒಂದಕ್ಕಿಂತ ಹೆಚ್ಚು ವ್ಯಕ್ತಿ ಅಥವಾ ವಸ್ತುವನ್ನು ಕುರಿತು ಮಾತನಾಡುವಾಗ ಬಹುವಚನ ಪ್ರತ್ಯಯ ಬಳಕೆಯಾಗುತ್ತದೆ.
• ಬಹುವಚನ ಪ್ರತ್ಯಯ ಬಳಕೆಯಾದಾಗ ಕ್ರಿಯಾಪದದ ರೂಪದಲ್ಲಿ ವ್ಯತ್ಯಾಸವಾಗಿ ಅಲ್ಲಿಯೂ ಬಹುವಚನದ ರೂಪ ಬಳಕೆಯಾಗುತ್ತದೆ.
ಚೆನ್ನುಡಿ
“ಲೋಕದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಅನುಭವಗಳಿವೆ. ಅವುಗಳಲ್ಲಿ ಕೆಲವು ಗ್ರಾಹ್ಯವಾದವು, ಕೆಲವು ತ್ಯಾಜ್ಯವಾದವು. ಯಾವುದು ತ್ಯಾಜ್ಯ ಎಂದು ನಿರ್ಧಾರ ಮಾಡುವ ಒರೆಗಲ್ಲು ಯಾವುದು? ಅವರವರ ಸ್ವಂತ ಅನುಭವವೆ!”
-ಜಿ.ಪಿ.ರಾಜರತ್ನಂ (ಕವಿ ಹಾಗೂ ಚಿಂತಕರು)
Just keep making good content. Exactly what I needed! I have been browsing the various search engines all day long for a decent article such as this