ಅದ್ಭುತ ಯಂತ್ರ-ನಮ್ಮ ದೇಹ – ಪಾಠ – 13
ಜ್ಞಾನೇಂದ್ರಿಯಗಳು ಹಾಗೂ ಅವುಗಳ ಕೆಲಸದ ಬಗ್ಗೆ ಹಿಂದಿನ ತರಗತಿಯಲ್ಲಿ ಕಲಿತಿರುವ ಅಂಶಗಳನ್ನು ನೆನಪಿಸಿಕೊ. ಕೆಳಗಿನ ಪಟ್ಟಿಯಲ್ಲಿ ಜ್ಞಾನೇಂದ್ರಿಯಗಳು ಹಾಗೂ ಅವುಗಳ ಕೆಲಸಗಳನ್ನು ಕೊಟ್ಟಿದೆ. ಗೆರೆ ಎಳೆದು ಹೊಂದಿಸು.
ಅ | ಆ |
ಕಣ್ಣು | ವಾಸನೆ ಗ್ರಹಿಸುವುದು |
ಕಿವಿ | ರುಚಿ ಸವಿಯುವುದು |
ಮೂಗು | ವಸ್ತುಗಳನ್ನು ನೋಡುವುದು |
ನಾಲಿಗೆ | ಬಿಸಿ, ತಂಪು ಇತ್ಯಾದಿ ಅನುಭವಗಳನ್ನು ಗ್ರಹಿಸುವುದು |
ಚರ್ಮ | ಆಲಿಸುವುದು |
ಈ ಅಂಗಗಳೆಲ್ಲವೂ ನಮಗೆ ಕಾಣುವಂತೆ ಇವೆ. ನಮ್ಮ ದೇಹದ ಒಳಗೂ ಹಲವು ಅಂಗಗಳಿವೆ. ಅವು ನಮಗೆ ಕಾಣುವುದಿಲ್ಲ. ಅವುಗಳ ಬಗ್ಗೆ ತಿಳಿಯೋಣ.



ನಿನ್ನ ಚರ್ಮವನ್ನು ನೋಡಿಕೊ. ಅದರ ಅಡಿಯಲ್ಲಿ ಮಾಂಸ ಖಂಡಗಳು ಹಾಗೂ ಮೂಳೆಗಳಿವೆ. ಇವು ನಿನಗೆ ಕಾಣುವುದಿಲ್ಲ. ಇವುಗಳ ಮೇಲೆ ಹೊದಿಕೆಯಂತಿರುವ ಚರ್ಮ ನಮ್ಮ ದೇಹಕ್ಕೆ ರಕ್ಷಣೆ ಕೊಡುತ್ತದೆ. ಮೂಳೆಗಳು ಮತ್ತು ಮಾಂಸಖಂಡಗಳು ಸೇರಿ ನಮ್ಮ ದೇಹಕ್ಕೆ ಆಕಾರ ಮತ್ತು ರೂಪವನ್ನು ಕೊಟ್ಟಿವೆ. ನಿನ್ನ ದೇಹದ ಆಕಾರ, ರೂಪಕ್ಕೂ ನಿನ್ನ ಗೆಳೆಯ/ಗೆಳತಿಯ ದೇಹದ ಆಕಾರ ಮತ್ತು ರೂಪಕ್ಕೂ ವ್ಯತ್ಯಾಸವಿದೆ. ಗಮನಿಸು.
ನಮ್ಮ ದೇಹದಲ್ಲಿ ಹಲವಾರು ಕ್ರಿಯೆಗಳು ನಡೆಯುತ್ತಿರುತ್ತವೆ. ಉಸಿರಾಟ, ಜೀರ್ಣಕ್ರಿಯೆ, ರಕ್ತ ಪರಿಚಲನೆ ಹಾಗೂ ಕಶ್ಮಲಗಳ ವಿಸರ್ಜನೆ ಇತ್ಯಾದಿ ಕ್ರಿಯೆಗಳು ನಮ್ಮ ದೇಹವನ್ನು ಸದೃಢವಾಗಿಯೂ, ಆರೋಗ್ಯಕರವಾಗಿಯೂ ಇಟ್ಟುಕೊಂಡಿವೆ. ದೇಹದಲ್ಲಿರುವ ವಿವಿಧ ಅಂಗಗಳ ಬಗ್ಗೆ, ಅವುಗಳು ಭಾಗವಹಿಸುವ ಕ್ರಿಯೆಗಳ ಬಗ್ಗೆ ತಿಳಿದುಕೊ.
ಉಸಿರಾಟ
ಮಗೂ, ನೀನು ಗಾಳಿಯನ್ನು ಮೂಗಿನ ಮೂಲಕ ದೇಹದ ಒಳಗೆ ತೆಗೆದುಕೊಳ್ಳುವೆ ಎಂಬುದನ್ನು ತಿಳಿದಿರುವೆ.
ಮಾಡಿ – ನೋಡು : ನಿನ್ನ ಕೈಯನ್ನು ಎದೆಯ ಮೇಲೆ ಇಟ್ಟುಕೊ. ಮೂಗಿನ ಮೂಲಕ ಗಾಳಿಯನ್ನು ನಿಧಾನವಾಗಿ ಒಳಗೆ ತೆಗೆದುಕೊ. ಹಾಗೆಯೇ ನಿಧಾನವಾಗಿ ಗಾಳಿಯನ್ನು ಹೊರಗೆ ಬಿಡು. ಎದೆಯ ಮೇಲಿರುವ ಕೈಗೆ ಎಂತಹ ಅನುಭವ ಆಯಿತು?
ಚಿತ್ರವನ್ನು ನೋಡು. ಗಾಳಿಯು ಮೂಗು, ಶ್ವಾಸನಾಳ ಮತ್ತು ಶ್ವಾಸಕೋಶಗಳಿಗೆ ಹೋಗಿ ಮತ್ತೆ ಅದೇ ದಾರಿಯ ಮೂಲಕ ಹೊರಬರುತ್ತದೆ. ಹಾಗಾಗಿ ಎದೆಯ ಮೇಲಿರುವ ಕೈಗೆ ಏರಿಳಿತದ ಅನುಭವವಾಗುತ್ತದೆ. ಚಿತ್ರದಲ್ಲಿ ಗಾಳಿ ಒಳಗೆ-ಹೊರಗೆ ಹೋಗುವ ದಾರಿಯನ್ನು ಹಾಗೂ ಅಂಗಗಳನ್ನು ತೋರಿಸಿದೆ.



ಅವುಗಳನ್ನು ಕ್ರಮವಾಗಿ ಬರೆ.
- ___
- ___
- ___
ಗಾಳಿಯಲ್ಲಿರುವ ಆಕ್ಸಿಜನ್ ಎಂಬ ಅನಿಲ ನಮ್ಮ ದೇಹಕ್ಕೆ ಬೇಕು. ಉಸಿರಾಟದ ಮೂಲಕ ತೆಗೆದುಕೊಂಡ ಗಾಳಿಯಲ್ಲಿರುವ ಆಕ್ಸಿಜನ್ ಶ್ವಾಸಕೋಶಗಳಿಂದ ರಕ್ತಕ್ಕೆ ಸೇರುತ್ತದೆ. ಶ್ವಾಸಕೋಶಗಳಲ್ಲಿ ಸಂಗ್ರಹವಾಗಿರುವ ನಮ್ಮ ದೇಹಕ್ಕೆ ಬೇಡವಾದ ಕಾರ್ಬನ್ ಡೈಆಕ್ಸೈಡ್ ಎಂಬ ಅನಿಲ ಗಾಳಿಯಲ್ಲಿ ಸೇರಿ, ಶ್ವಾಸನಾಳ ಹಾಗೂ ಮೂಗಿನ ಮೂಲಕ ದೇಹದಿಂದ ಹೊರಹೋಗುತ್ತದೆ.
ಹೀಗೆ ಆಕ್ಸಿಜನ್‍ಅನ್ನು ಒಳಗೆ ತೆಗೆದುಕೊಂಡು ಕಾರ್ಬನ್ ಡೈಆಕ್ಸೈಡ್‍ಅನ್ನು ಹೊರಬಿಡುವ ಕ್ರಿಯೆಗೆ ಉಸಿರಾಟ ಎನ್ನುವರು.
ಮಾಡಿ-ನೋಡು
ಒಂದು ನಿಮಿಷಕ್ಕೆ ಎಷ್ಟು ಬಾರಿ ಉಸಿರಾಡುವೆ? ಎಣಿಸು.
ಉಸಿರಾಟ ಕ್ರಿಯೆಗೆ ತೊಂದರೆಯಾಗದಂತೆ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊ. ಕೆಲವನ್ನು ಇಲ್ಲಿ ಕೊಟ್ಟಿದೆ.
ಓದಿ-ತಿಳಿ
* ಸ್ನಾನ ಮಾಡುವಾಗ ಮೂಗನ್ನು ಸ್ವಚ್ಛಗೊಳಿಸು.
* ಮಲಗಿದಾಗ ಮುಸುಕು ಹಾಕಿ ಮಲಗಬೇಡ.
* ಧೂಳು ಹೆಚ್ಚಾಗಿರುವ ಪ್ರದೇಶದಲ್ಲಿ ಸಂಚರಿಸುವಾಗ ಮೂಗಿಗೆ ಧೂಳು ಸೇರದಂತೆಎಚ್ಚರಿಕೆ ವಹಿಸು.
* ಅವಸರವಾಗಿ ಊಟ ಮಾಡುವುದಾಗಲಿ, ನೀರು ಕುಡಿಯುವುದಾಗಲಿ ಮಾಡಬೇಡ.
* ದಟ್ಟ ಹೊಗೆ ಇರುವ ಕಡೆ ಹೋಗಬೇಡ. ದಟ್ಟ ಹೊಗೆಯನ್ನು ಉಸಿರಾಡಿದರೆ ಶ್ವಾಸಕೋಶಕ್ಕೆಸಂಬಂಧಿಸಿದ ತೊಂದರೆಗಳು ಬರುತ್ತವೆ.
* ದಿನಕ್ಕೆ ಒಂದು ಸಲವಾದರೂ ನೇರವಾಗಿ ಕುಳಿತು ಹತ್ತು ಸಲ ಆಳವಾಗಿ ಉಸಿರಾಡುವುದನ್ನುಅಭ್ಯಾಸ ಮಾಡು.
* ಮೂಗಿಗೆ ಕಡ್ಡಿ, ಪೆನ್ನು, ಬಳಪದಂತಹ ಯಾವುದೇ ವಸ್ತುಗಳನ್ನು ಹಾಕಬೇಡ.
* ಬಾಯಿಯ ಮೂಲಕ ಉಸಿರಾಡಬೇಡ.
* ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರವನ್ನು ಬಾಯಿಗೆ ಅಡ್ಡವಾಗಿ ಹಿಡಿ. ನಿನಗೆ ನೆಗಡಿ, ಕೆಮ್ಮು ಇದ್ದಲ್ಲಿ ಬಾಯಿಯ ಮೂಲಕ ಕ್ರಿಮಿಗಳು ಗಾಳಿಯನ್ನು ಸೇರದಂತೆತಡೆಯಬಹುದು. ಇದರಿಂದ ಕೆಮ್ಮು ಅಥವಾ ನೆಗಡಿ ಇತರರಿಗೆ ಹರಡುವುದನ್ನುತಪ್ಪಿಸಬಹುದು.
ರಕ್ತ ಪರಿಚಲನೆ
ಈ ಚಿತ್ರವನ್ನು ಗಮನಿಸು. ಇದರ ಹೆಸರನ್ನು ಇಲ್ಲಿ ಬರೆ. ……………………………………………..



ದೇಹದ ಯಾವುದೇ ಭಾಗದಲ್ಲಿ ಗಾಯವಾದಾಗ ರಕ್ತ ಬರುವುದನ್ನು ನೀನು ನೋಡಿರುವೆ. ರಕ್ತದ ಬಣ್ಣವೇನು? ಇಲ್ಲಿ ಬರೆ. ……………………………………….
ದೇಹದ ಎಲ್ಲ ಭಾಗಗಳಲ್ಲಿ ರಕ್ತ ಹರಿಯುತ್ತಿರುತ್ತದೆ ಎಂದು ನಿನಗೆ ಗೊತ್ತೆ? ದೇಹದ ಎಲ್ಲ ಭಾಗಗಳಿಗೆ ರಕ್ತವನ್ನು ಹರಿಸುವ ಮುಖ್ಯ ಅಂಗವೇ ಹೃದಯ.
ಮಾಡಿ-ನೋಡು: ನಿನ್ನ ಎಡಗೈ ಬೆರಳುಗಳನ್ನು ಮಡಚಿ ಮುಷ್ಟಿ ಕಟ್ಟು. ನಿನ್ನ ಎಡಗೈ ಮುಷ್ಟಿಯಷ್ಟು ನಿನ್ನ ಹೃದಯದ ಗಾತ್ರವಿದೆ.

ಶ್ವಾಸಕೋಶಗಳ ಬಗ್ಗೆ ನೀನಾಗಲೇ ತಿಳಿದಿರುವೆ. ಅವುಗಳ ನಡುವೆ ಸ್ವಲ್ಪ ಎಡಭಾಗದಲ್ಲಿ ಹೃದಯ ಇದೆ. ಎದೆಯ ಗೂಡಿನಿಂದ ಇದು ರಕ್ಷಿಸಲ್ಪಟ್ಟಿದೆ.
ಬಾವಿಯ ನೀರನ್ನು ಪಂಪಿನ ಸಹಾಯದಿಂದ ಎತ್ತರದ ಕೊಳವೆಗಳ ಮೂಲಕ ಹರಿಸುವುದನ್ನು ನೀನು ನೋಡಿದ್ದೀಯಲ್ಲವೆ? ಹೃದಯವೂ ಪಂಪ್‍ನಂತೆ ಕೆಲಸ ಮಾಡಿ ರಕ್ತವನ್ನು ರಕ್ತನಾಳಗಳ ಮೂಲಕ ದೇಹದ ಎಲ್ಲ ಭಾಗಗಳಿಗೂ ತಲುಪಿಸುತ್ತದೆ.
ಮಾಡಿ-ನೋಡು
ನಿನ್ನ ಸ್ನೇಹಿತರ ಎದೆಯ ಮೇಲೆ ಕೈಯಿಡು. ಹೃದಯದ ಲಬ್ ಡಬ್ ಅನುಭವವನ್ನು ಪಡೆ. ಹೃದಯವು ರಕ್ತವನ್ನು ಪಂಪ್ ಮಾಡುವಾಗ ಲಬ್ ಡಬ್ ಬಡಿತದ ಅನುಭವವಾಗುತ್ತದೆ.
ಹೃದಯದಿಂದ ರಕ್ತವು ಶ್ವಾಸಕೋಶಗಳನ್ನು ತಲುಪುತ್ತದೆ. ಅಲ್ಲಿ ಅದು ಕಾರ್ಬನ್ ಡೈ ಆಕ್ಸೈಡ್‍ಅನ್ನು ಬಿಟ್ಟು ಆಕ್ಸಿಜನ್‍ಅನ್ನು ಪಡೆದು ಶುದ್ಧವಾಗುತ್ತದೆ. ಶುದ್ಧ ರಕ್ತವು ರಕ್ತನಾಳಗಳ ಮೂಲಕ ಮತ್ತೆ ಹೃದಯವನ್ನು ತಲುಪುತ್ತದೆ. ಹೃದಯದಿಂದ ಆಕ್ಸಿಜನ್ ಇರುವ ಶುದ್ಧ ರಕ್ತವು ರಕ್ತನಾಳಗಳ ಮೂಲಕ ದೇಹದ ಎಲ್ಲ ಭಾಗಗಳಿಗೆ ತಲುಪುತ್ತದೆ. ಇದೇ ರಕ್ತ ಪರಿಚಲನೆ.
ವೈದ್ಯರು ಹೃದಯದ ಬಡಿತವನ್ನು ಹೇಗೆ ಪರೀಕ್ಷಿಸುತ್ತಾರೆ? ನೀನು ನೋಡಿರುವೆಯಾ?
ವೈದ್ಯರು ಹೃದಯ ಬಡಿತವನ್ನು ತಿಳಿಯಲು ಬಳಸುವ ಉಪಕರಣದ ಚಿತ್ರ ಇಲ್ಲಿ ಇದೆ. ಇದರ ಹೆಸರನ್ನು ಬರೆ. ………………………………


ಮಾಡಿ-ನೋಡು
ಮೂರು ಪ್ಲಾಸ್ಟಿಕ್ ನಾಳಗಳು, ಒಂದು ಟಿ (T) ಆಕಾರದ ನಾಳ, ಆಲಿಕೆ, ಪ್ಲಾಸ್ಟಿಕ್ ಹಾಳೆ ಮತ್ತು ರಬ್ಬರ್ ಬ್ಯಾಂಡ್‍ಗಳನ್ನು ಚಿತ್ರದಲ್ಲಿ ತೋರಿಸಿದಂತೆ ಜೋಡಿಸು. ಈಗ ಸ್ಟೆತೋಸ್ಕೋಪ್ ತಯಾರು.

ಸ್ಟೆತೋಸ್ಕೋಪ್‍ನ ಆಲಿಕೆಯನ್ನು ನಿನ್ನ ಸ್ನೇಹಿತನ ಎದೆಯ ಮೇಲಿಡು. ನಿನ್ನ ಕಿವಿಗಳಲ್ಲಿ ಎರಡು ಕೊಳವೆಗಳನ್ನು ಇಟ್ಟುಕೊಂಡು ಹೃದಯ ಬಡಿತವನ್ನು ಎಣಿಸು.
ಒಂದು ನಿಮಿಷಕ್ಕೆ ಹೃದಯವು ಎಷ್ಟು ಸಲ ಬಡಿಯುತ್ತದೆ? ನಿನ್ನ ಕೈಯನ್ನು ಎದೆಯ ಮೇಲಿಟ್ಟು ಬಡಿತವನ್ನು ಎಣಿಸು.
ನಿನ್ನ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ನಡೆಯಲು ತರಕಾರಿ ಮತ್ತು ಹಣ್ಣುಗಳನ್ನು ನಿಯಮಿತವಾಗಿ ಸೇವಿಸು. ಪ್ರತಿದಿನ ವ್ಯಾಯಾಮ ಮಾಡುವುದನ್ನು ರೂಢಿಸಿಕೊ.
ಜೀರ್ಣಕ್ರಿಯೆ
ಪ್ರತಿದಿನ ನೀನು ಊಟ ಮಾಡುವೆಯಲ್ಲವೆ? ಅದು ದೇಹದ ಯಾವ ಭಾಗಕ್ಕೆ ಹೋಗುತ್ತದೆ? ಏನಾಗುತ್ತದೆ, ನಿನಗೆ ಗೊತ್ತೆ?





ಆಟ-ಆಡು
ಜೀರ್ಣಕ್ರಿಯೆಯಲ್ಲಿ ಭಾಗವಹಿಸುವ ಅಂಗಗಳ ಹೆಸರು ಬರೆದು ಡಬ್ಬಿಯಲ್ಲಿ ಹಾಕು. ಗೆಳೆಯ-ಗೆಳತಿಯರಿಗೆ ಡಬ್ಬಿಯಿಂದ ಒಂದೊಂದು ಚೀಟಿ ತೆಗೆದುಕೊಳ್ಳಲು ಹೇಳು. ಅದರಲ್ಲಿ ಬರೆದಿರುವ ಅಂಗದ ಒಂದು ಕಾರ್ಯವನ್ನು ಹೇಳಲು ತಿಳಿಸು. ಆಟವನ್ನು ಪುನರಾವರ್ತಿಸು. ಅಗತ್ಯವಿದ್ದಲ್ಲಿ ಶಿಕ್ಷಕರ ನೆರವನ್ನು ಪಡೆ.
ಓದಿ-ತಿಳಿ
ಉತ್ತಮ ಆಹಾರಾಭ್ಯಾಸಗಳು
* ಊಟ ಮಾಡುವ ಮುನ್ನ ಮತ್ತು ನಂತರ ಕೈ-ಕಾಲುಗಳನ್ನು ತೊಳೆ.
* ಹುರುಳಿಕಾಯಿ, ಮೂಲಂಗಿ ಇತ್ಯಾದಿ ನಾರು ಪದಾರ್ಥಗಳಿರುವ ಆಹಾರ ಸೇವಿಸು.
* ಶುದ್ಧವಾದ ಹಾಗೂ ಆರೋಗ್ಯಕರವಾದ ಆಹಾರವನ್ನು ಸೇವಿಸು.
* ಆಹಾರ ಸೇವನೆಯ ನಂತರ ಪ್ರತಿ ಬಾರಿ ಬಾಯಿ, ಹಲ್ಲುಗಳು ಹಾಗೂ ನಾಲಿಗೆಯನ್ನು ಸ್ಚಚ್ಛಗೊಳಿಸಿಕೊ.
* ಆಹಾರವನ್ನು ನಿಧಾನವಾಗಿ ಚೆನ್ನಾಗಿ ಅಗಿದು ಸೇವಿಸು.
* ಒಂದು ಆಹಾರ ಸೇವನೆಯಿಂದ ಮತ್ತೊಂದು ಆಹಾರ ಸೇವನೆಯ ನಡುವೆ ಮೂರರಿಂದನಾಲ್ಕು ಗಂಟೆಯ ಅಂತರವಿದ್ದರೆ ಉತ್ತಮ.
ಈ ಚಿತ್ರದಲ್ಲಿ ಸೂಚಿಸಿರುವ ಅಂಗದ ಕೆಲಸವನ್ನು ಅದರ ಮುಂದೆ ತೋರಿಸಿದ ಸ್ಥಳದಲ್ಲಿ ಬರೆ.


ವಿಸರ್ಜನಾ ಕ್ರಿಯೆ
ಮನೆಯಲ್ಲಿ ನಡೆಯುವ ಚಟುವಟಿಕೆಗಳಿಂದ ಕಸವು ಉತ್ಪತ್ತಿಯಾಗುತ್ತದೆ. ಈ ಕಸವನ್ನು ನಾವು ದಿನವೂ ಹೊರಗೆ ಹಾಕುತ್ತೇವೆ. ಅದೇ ರೀತಿ ನಮ್ಮ ದೇಹಕ್ಕೆ ಬೇಡವಾದ ಹಲವು ವಸ್ತುಗಳು ಜೀರ್ಣಕ್ರಿಯೆ ಮುಂತಾದ ಕ್ರಿಯೆಗಳಿಂದ ದೇಹದ ನಾನಾ ಭಾಗಗಳಲ್ಲಿ ಉತ್ಪತ್ತಿಯಾಗುತ್ತವೆ. ಅವೇ ಕಶ್ಮಲಗಳು.
ದೇಹದಲ್ಲಿ ಉಂಟಾಗುವ ಕಶ್ಮಲಗಳು ದೇಹದಲ್ಲಿಯೇ ಉಳಿದುಬಿಟ್ಟರೆ ನಮ್ಮ ದೇಹವು ಹಲವು ರೋಗಗಳಿಗೆ ತುತ್ತಾಗಬಹುದು. ಹೀಗಾಗಿ ತನ್ನಲ್ಲಿ ಉತ್ಪತ್ತಿಯಾಗುವ ಕಶ್ಮಲಗಳನ್ನು ದೇಹವು ಚರ್ಮ, ಶ್ವಾಸಕೋಶಗಳು ಮತ್ತು ಮೂತ್ರ ಪಿಂಡಗಳ ಮೂಲಕ ಹೊರಹಾಕುತ್ತದೆ. ಮೂತ್ರ ಪಿಂಡಗಳು ನಮ್ಮ ದೇಹದ ಮುಖ್ಯ ವಿಸರ್ಜನಾಂಗಗಳಾಗಿವೆ.
ಮೂತ್ರದ ಮೂಲಕ ದೇಹವು ಕಶ್ಮಲಗಳನ್ನು ಹೊರಹಾಕಲು ಸಹಾಯ ಮಾಡುವ ವಿಸರ್ಜನಾಂಗಗಳ ಬಗ್ಗೆ ತಿಳಿಯೋಣ.


ಮೇಲಿನ ಚಿತ್ರವನ್ನು ಗಮನಿಸು. ಇದರ ಭಾಗಗಳನ್ನು ಇಲ್ಲಿ ಬರೆ.
1) ______
2) ______
3) ______
4) ______
ಕಿಬ್ಬೊಟ್ಟೆಯ ಒಳಗಡೆ, ಬೆನ್ನು ಮೂಳೆಯ ಎರಡೂ ಪಕ್ಕಗಳಲ್ಲಿ ಒಂದು ಜೊತೆ ಮೂತ್ರ ಪಿಂಡಗಳಿವೆ. ಇವು ರಕ್ತವನ್ನು ಸೋಸಿ, ದೇಹಕ್ಕೆ ಬೇಡವಾದ ವಸ್ತುಗಳನ್ನು ನೀರಿನೊಡನೆ ಹೊರಹಾಕುತ್ತವೆ. ಇದೇ ಮೂತ್ರ. ಈ ಮೂತ್ರವು ಮೂತ್ರ ನಾಳದ ಮೂಲಕ ಮೂತ್ರ ಕೋಶವನ್ನು ಸೇರುತ್ತದೆ. ನಂತರ ಮೂತ್ರ ದ್ವಾರದ ಮೂಲಕ ದೇಹದಿಂದ ಹೊರಹೋಗುತ್ತದೆ.
ಈ ಪ್ರಶ್ನೆಗಳಿಗೆ ಉತ್ತರ ಬರೆ.
ದೇಹದಿಂದ ಕಾರ್ಬನ್ ಡೈಆಕ್ಸೈಡ್‍ಅನ್ನು ಹೊರಹಾಕುವ ಅಂಗ ಯಾವುದು?
ಕಶ್ಮಲಗಳನ್ನು ಬೆವರಿನ ರೂಪದಲ್ಲಿ ಹೊರಹಾಕುವ ಅಂಗ ಯಾವುದು?
ಕಶ್ಮಲಗಳನ್ನು ಮೂತ್ರವಾಗಿ ಹೊರಹಾಕುವ ಅಂಗ ಯಾವುದು?
ಓದಿ-ತಿಳಿ
* ನಿಯಮಿತವಾಗಿ ಮೂತ್ರವನ್ನು ವಿಸರ್ಜಿಸು.
* ಪ್ರತಿದಿನ ಸ್ನಾನ ಮಾಡಿ, ಸ್ವಚ್ಛವಾದ ಉಡುಪುಗಳನ್ನು ಧರಿಸು.
* ಆಗಾಗ್ಗೆ ಕೈ-ಕಾಲು ಮುಖ ತೊಳೆ. ಹೀಗೆ ಮಾಡುವುದರಿಂದ ಬೆವರಿನ ಮೂಲಕಹೊರಬಂದು, ಸಂಗ್ರಹ ಆಗಿರುವ ಕಶ್ಮಲಗಳು ತೊಳೆದು ಹೋಗುತ್ತವೆ. ಚರ್ಮವುಸ್ವಚ್ಛವಾಗಿ ಬೆವರು ರಂಧ್ರಗಳು ಚೆನ್ನಾಗಿ ತೆರೆದುಕೊಳ್ಳುತ್ತವೆ.
* ದಿನಕ್ಕೆ 2 ಲೀಟರ್‍ಗಳಷ್ಟು ನೀರು ಕುಡಿ. ಇದರಿಂದ ಬೆವರು ಮತ್ತು ಮೂತ್ರದ ಮೂಲಕಕಶ್ಮಲಗಳು ದೇಹದಿಂದ ಹೊರಹೋಗುತ್ತವೆ.
ಉಸಿರಾಟ, ರಕ್ತಪರಿಚಲನೆ, ಜೀರ್ಣಕ್ರಿಯೆ ಮತ್ತು ವಿಸರ್ಜನೆ ಕೆಲಸಗಳನ್ನು ಮಾಡುವ ನಮ್ಮ ದೇಹ ಅದ್ಭುತ ಯಂತ್ರದಂತಿದೆ ಎಂದು ತಿಳಿದೆಯಲ್ಲವೆ. ನಿನ್ನ ದೇಹ ಸರಿಯಾಗಿ ಕೆಲಸ ಮಾಡಬೇಕಾದರೆ ಏನು ಮಾಡಬೇಕೆಂದು ಓದಿ ತಿಳಿ.
ಓದಿ-ತಿಳಿ
* ನಿಗದಿತ ಸಮಯದಲ್ಲಿ ಆಹಾರ ಸೇವನೆ, ಮಲ-ಮೂತ್ರ ವಿಸರ್ಜನೆ ಮಾಡುವ ಅಭ್ಯಾಸಮಾಡಿಕೊ.
* ಪ್ರತಿದಿನ ಆಟ ಆಡು, ವ್ಯಾಯಾಮ ಮಾಡು, ಸಾಕಷ್ಟು ನಡೆಯುವ ಅಭ್ಯಾಸ ಮಾಡಿಕೊ.
* ಆಹಾರವನ್ನು ಹಿತಮಿತವಾಗಿ ಸೇವಿಸು. ಕರಿದ ಪದಾರ್ಥಗಳನ್ನು, ಸಿಹಿತಿಂಡಿಗಳನ್ನುಅತಿಯಾಗಿ ತಿನ್ನಬೇಡ.
* ಪ್ರತಿ ದಿನ ಸ್ನಾನ ಮಾಡಿ ದೇಹವನ್ನು ಸ್ಚಚ್ಛವಾಗಿಟ್ಟುಕೊ. ಪ್ರತಿದಿನ ಒಗೆದ ಶುಭ್ರಉಡುಪುಗಳನ್ನು ಧರಿಸು.
ನಿನಗಿದು ಗೊತ್ತೆ?
* ನಮ್ಮ ದೇಹದಲ್ಲಿ 206 ಮೂಳೆಗಳಿವೆ. 600ಕ್ಕೂ ಹೆಚ್ಚಿನ ಕೀಲುಗಳಿವೆ.
* ನಿನ್ನ ದೇಹದಲ್ಲಿರುವ ಸಣ್ಣ ಕರುಳು 21 ಅಡಿ ಉದ್ದವಿರುತ್ತವೆ. ಅದು ಸುರುಳಿಯಾಗಿ ಸುತ್ತಿಕೊಂಡಿರುತ್ತದೆ.
* ನಮ್ಮ ಹೃದಯ ನಿಮಿಷಕ್ಕೆ ಎಪ್ಪತ್ತು ಸಲ ಬಡಿಯುತ್ತದೆ. ದಿನಕ್ಕೆ ಒಂದು ಲಕ್ಷ ಸಲಬಡಿದುಕೊಳ್ಳುತ್ತದೆ.
* ಶ್ವಾಸಕೋಶಗಳಲ್ಲಿ ಸುಮಾರು 3 ಲೀಟರ್‍ಗಳಷ್ಟು ಗಾಳಿ ತುಂಬಬಹುದು.
* ಮಾನವನ ದೇಹದಲ್ಲಿ ಸುಮಾರು 5.5 ಲೀಟರ್‍ಗಳಷ್ಟು ರಕ್ತವಿರುತ್ತದೆ.
* ಒಮ್ಮೆ ರಕ್ತದಾನ ಮಾಡಿದ ನಂತರ ರಕ್ತ ಮತ್ತೆ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಇದಕ್ಕೆ4 ರಿಂದ 5 ವಾರಗಳು ಬೇಕು.
ಸಂವೇದ ವಿಡಿಯೋ ಪಾಠಗಳು
ಪೂರಕ ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು
* * * * * * *