ಆಸ್ಟ್ರೇಲಿಯ – ಅಧ್ಯಾಯ 26
ಪಾಠದ ಪರಿಚಯ: ಈ ಅಧ್ಯಾಯದಲ್ಲಿ ಆಸ್ಟ್ರೇಲಿಯ ಖಂಡದ ಸ್ಥಾನ ಮತ್ತು ಸನ್ನಿವೇಶ, ಅದರ ಪ್ರಾಕೃತಿಕ ವಿಭಾಗಗಳು ಮತ್ತು ನದಿವ್ಯವಸ್ಥೆ, ವಾಯುಗುಣ, ಸ್ವಾಭಾವಿಕ ಸಸ್ಯವರ್ಗ, ವ್ಯವಸಾಯ, ಪಶುಸಂಗೋಪನೆ, ಖನಿಜ ಮತ್ತು ಕೈಗಾರಿಕೆಗಳು, ಜನಸಂಖ್ಯೆಯ ಬೆಳವಣಿಗೆ, ಹಂಚಿಕೆ ಮತ್ತು ಸಾಂದ್ರತೆಗಳನ್ನು ಕುರಿತು ಪರಿಚಯಿಸಲಾಗಿದೆ.
ಸ್ಥಾನ, ವಿಸ್ತೀರ್ಣ ಮತ್ತು ಭೌಗೋಳಿಕ ಸನ್ನಿವೇಶ
ಸ್ಥಾನ: ಆಸ್ಟ್ರೇಲಿಯ ಖಂಡವು ಪೂರ್ಣವಾಗಿ ದಕ್ಷಿಣ ಮತ್ತು ಪೂರ್ವ ಗೋಳಾರ್ಧದಲ್ಲಿದೆ. ಇದು 100 45I ದಕ್ಷಿಣದಿಂದ 430 39I ದಕ್ಷಿಣ ಅಕ್ಷಾಂಶ ಹಾಗೂ 1130 9I ಪೂರ್ವದಿಂದ 1530 39I ಪೂರ್ವ ರೇಖಾಂಶಗಳ ನಡುವೆ ವಿಸ್ತರಿಸಿದೆ. ಮಕರ ಸಂಕ್ರಾಂತಿ ವೃತ್ತವು ಹೆಚ್ಚು ಕಡಿಮೆ ಈ ಖಂಡದ ಮಧ್ಯಭಾಗದಲ್ಲಿ ಹಾಯ್ದು ಹೋಗಿದೆ.
ವಿಸ್ತೀರ್ಣ: ವಿಸ್ತೀರ್ಣ ಮತ್ತು ಜನಸಂಖ್ಯೆಗಳೆರಡರಲ್ಲೂ ಆಸ್ಟ್ರೇಲಿಯವು ಪ್ರಪಂಚದಲ್ಲಿ ಚಿಕ್ಕ ಭೂಖಂಡ. ತಾಸ್ಮೇನಿಯ ದ್ವೀಪವೂ ಸೇರಿದಂತೆ ಇದರ ಒಟ್ಟು ವಿಸ್ತೀರ್ಣ 76.82 ಲಕ್ಷ ಚ.ಕಿ.ಮೀ.ಗಳು. ಅಮೇರಿಕ ಸಂಯುಕ್ತ ಸಂಸ್ಥಾನಕ್ಕಿಂತ ಸ್ವಲ್ಪ ಚಿಕ್ಕದು ಮತ್ತು ಭಾರತಕ್ಕಿಂತ ಎರಡು ಪಟ್ಟು ದೊಡ್ಡದು. ಪ್ರಪಂಚದ ಏಳನೆಯ ಭೂಖಂಡವಾಗಿರುವ ಇದು ದಕ್ಷಿಣೋತ್ತರವಾಗಿ 3,940 ಕಿ.ಮೀ. ಉದ್ದ ಮತ್ತು ಪೂರ್ವಪಶ್ಚಿಮವಾಗಿ 4,350 ಕಿ.ಮೀ. ಅಗಲವಾಗಿದೆ. 19,310 ಕಿ.ಮೀ. ತೀರಪ್ರದೇಶ ಒಳಗೊಂಡಿದೆ.

ಆಸ್ಟ್ರೇಲಿಯ ಎಂಬ ಪದ ದಕ್ಷಿಣ ಎಂದು ಅರ್ಥ ಕೊಡುವ ‘ಆಸ್ಟ್ರಲ್’ (ಲ್ಯಾಟಿನ್) ಎಂಬುದರಿಂದ ಬಳಕೆಗೆ ಬಂದಿದೆ.
ಮಧ್ಯ ಮತ್ತು ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ಸುಮಾರು 10,000 ದ್ವೀಪ ಸಮೂಹಗಳಿಗೆ `ಓಸಿಯಾನಿಯಾ’ ಎನ್ನುವರು. ಇದರಲ್ಲಿ ಆಸ್ಟ್ರೇಲಿಯ ಖಂಡ ಪ್ರಮುಖವಾದುದು.

ಭೌಗೋಳಿಕ ಸನ್ನಿವೇಶ: ಆಸ್ಟ್ರೇಲಿಯವು ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳ ನಡುವೆ ನೆಲೆಸಿರುವ ದ್ವೀಪಖಂಡ. ಈ ಖಂಡದ ವಾಯುವ್ಯಕ್ಕೆ ತೈಮರ್, ಆರಾಫುರ ಸಮುದ್ರಗಳು, ಈಶಾನ್ಯಕ್ಕೆ ಟೊರ್ರೆಸ್ ಜಲಸಂಧಿ ಹಾಗೂ ಆಗ್ನೇಯದಲ್ಲಿ ತಾಸ್ಮನ್ ಸಮುದ್ರಗಳಿವೆ. ದಕ್ಷಿಣದಲ್ಲಿ ಗ್ರೇಟ್ ಆಸ್ಟ್ರೇಲಿಯನ್ ಬೈಟ್ ಇದೆ.
ಪ್ರಾಕೃತಿಕ ವಿಭಾಗಗಳು ಮತ್ತು ನದಿಗಳ ವ್ಯವಸ್ಥೆ
ಪ್ರಾಕೃತಿಕ ವಿಭಾಗಗಳು: ಆಸ್ಟ್ರೇಲಿಯದ ಒಟ್ಟು ವಿಸ್ತೀರ್ಣದಲ್ಲಿ ಸುಮಾರು ಶೇ.94 ಭಾಗವು ಸಮುದ್ರಮಟ್ಟಕ್ಕೆ 600 ಮೀ.ಗಳಿಗಿಂತ ತಗ್ಗಿನಲ್ಲಿದ್ದು ಸಮತಟ್ಟಾಗಿದೆ. ಆದ್ದರಿಂದ ಅದನ್ನು `ಅತ್ಯಂತ ಸಮತಟ್ಟಾದ ಭೂಖಂಡ’ ಎಂದು ಕರೆಯಲಾಗಿದೆ. ಬಹಳಷ್ಟು ಪ್ರದೇಶವು ಮರುಭೂಮಿಯಿಂದ ಆವರಿಸಿರುವುದರಿಂದ ಇದನ್ನು `ಮರುಭೂಮಿಯ ಭೂಖಂಡ’ವೆಂತಲೂ ಕರೆಯುವರು.

ಆಸ್ಟ್ರೇಲಿಯವು ಮೂಲತಃ ಗೊಂಡ್ವಾನ ಭೂರಾಶಿಯ ಒಂದು ಭಾಗವಾಗಿದ್ದು ಅತ್ಯಂತ ಪುರಾತನವಾದುದು. ಇದನ್ನು ಭೂಸ್ವರೂಪದ ಆಧಾರದ ಮೇಲೆ ಮೂರು ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಲಾಗಿದೆ.



1. ಪೂರ್ವದ ಉನ್ನತ ಪ್ರದೇಶ
2. ಮಧ್ಯದ ತಗ್ಗು ಮೈದಾನ
3. ಪಶ್ಚಿಮದ ಪ್ರಸ್ಥಭೂಮಿ.
ಹದಿನೇಳನೆಯ ಶತಮಾನದಲ್ಲಿ ಯೂರೋಪಿನ ಜೇಮ್ಸ್ ಕುಕ್‍ನಿಂದ ಕಂಡುಹಿಡಿಯಲ್ಪಟ್ಟ ಆಸ್ಟ್ರೇಲಿಯವನ್ನು ಹೊಸ ಭೂಖಂಡವೆನ್ನುವರು.
1. ಪೂರ್ವದ ಉನ್ನತ ಪ್ರದೇಶ: ಇದು ಖಂಡದ ಪೂರ್ವಭಾಗದಲ್ಲಿದ್ದು ಉತ್ತರದಲ್ಲಿ ಯಾರ್ಕ್ ಭೂಶಿರದಿಂದ ದಕ್ಷಿಣದಲ್ಲಿ ತಾಸ್ಮೇನಿಯದ ಬಾಸ್ ಜಲಸಂಧಿಯವರೆಗೆ ವಿಸ್ತರಿಸಿದೆ. ಹೆಚ್ಚು ಕಡಿಮೆ ಪೂರ್ವ ಕರಾವಳಿಗೆ ಹೊಂದಿಕೊಂಡಂತಿರುವ ಈ ಪರ್ವತ ಸರಣಿಗಳ ಪೂರ್ವ ಭಾಗ ಕಡಿದಾಗಿಯೂ ಮತ್ತು ಪಶ್ಚಿಮ ಭಾಗವು ಇಳಿಜಾರಿನಿಂದ ಕೂಡಿದೆ. ಹಿಂದೆ ಪೂರ್ವ ಕರಾವಳಿಯಿಂದ ಪ್ರವೇಶಿಸುವವರಿಗೆ ದುರ್ಗಮವಾಗಿದ್ದರಿಂದ ಇದನ್ನು `ಗ್ರೇಟ್ ಡಿವೈಡಿಂಗ್ ಸರಣಿ’ ಎಂದು ಕರೆಯಲಾಯಿತು. ಈ ಸರಣಿಯು ನ್ಯೂಸೌತ್‍ವೇಲ್ಸ್ ನಲ್ಲಿ ಸಾಕಷ್ಟು ಎತ್ತರವಾಗಿದ್ದು ಕಡಿದಾದ ಇಳಿಜಾರಿನಿಂದ ಕೂಡಿದೆ. ಇವುಗಳನ್ನು “ಆಸ್ಟ್ರೇಲಿಯದ ಆಲ್ಪ್ಸ್’’ ಹಾಗೂ “ನ್ಯೂಇಂಗ್ಲೆಂಡ್ ಸರಣಿ” ಎಂದು ಕರೆಯುವರು. ಎತ್ತರವಾದ ಶಿಖರಗಳು ಚಳಿಗಾಲದಲ್ಲಿ ಹಿಮಾವೃತವಾಗಿರುತ್ತವೆ. ಈ ಭಾಗದ ಕೊಸಿಯುಸ್ಕೊ (2230 ಮೀ.) ಖಂಡದ ಅತಿ ಎತ್ತರವಾದ ಶಿಖರ.




ಆಸ್ಟ್ರೇಲಿಯದ ಪೂರ್ವ ತೀರದಿಂದಾಚೆ ದಕ್ಷಿಣೋತ್ತರವಾಗಿ “ಗ್ರೇಟ್ ಬ್ಯಾರಿಯರ್ ರೀಫ್” ಎಂಬ ಹವಳ ದಿಣ್ಣೆಗಳು (2000 ಕಿ.ಮೀ.) ಹಬ್ಬಿವೆ.



2. ಮಧ್ಯದ ತಗ್ಗುಮೈದಾನ: ಉತ್ತರದಲ್ಲಿ ಕಾರ್ಪೆಂಟೇರಿಯ ಕೊಲ್ಲಿಯಿಂದ ದಕ್ಷಿಣದ ಮರ್ರೆ ಬಯಲಿನವರೆಗೆ ಈ ತಗ್ಗು ಮೈದಾನ ಹರಡಿದೆ. ಇದು ಪೂರ್ವ ಉನ್ನತ ಭಾಗದಿಂದ ಪಶ್ಚಿಮಕ್ಕಿದ್ದು, ಆಂತರಿಕ ಜಲವ್ಯವಸ್ಥೆಯಿಂದ ಕೂಡಿದೆ. ಇದರ ಮಧ್ಯಭಾಗದಲ್ಲಿರುವ ಐರ್ ಸರೋವರದ ಕಡೆಗೆ ನದಿಗಳು ಹರಿಯುತ್ತವೆ. ಪ್ರಪಂಚದ ಪ್ರಸಿದ್ಧ ಆರ್ಟೀಸಿಯನ್ ನೀರಿನ ಬಾವಿಗಳನ್ನು ಕಾಣಬಹುದು.


ಈ ತಗ್ಗು ಮೈದಾನವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ:
1. ಮರ್ರೆ ಡಾರ್ಲಿಂಗ್ ಮೈದಾನ
2. ಐರ್ ಸರೋವರ ಮೈದಾನ
3. ಕಾರ್ಪೆಂಟೇರಿಯ ಮೈದಾನ.





ಮರ್ರೆ ಮತ್ತು ಡಾರ್ಲಿಂಗ್ ನದಿಗಳ ಬಯಲು, ಉತ್ತರದಲ್ಲಿರುವ ಐರ್ ಸರೋವರದಿಂದ ಪ್ರತ್ಯೇಕಗೊಂಡಿದೆ. ನದಿಗಳ ನೀರಿನ ಪೂರೈಕೆಯಿಂದಾಗಿ ಇದೊಂದು ಆಸ್ಟ್ರೇಲಿಯದ ಸಮೃದ್ಧ ಕೃಷಿ ಭಾಗವಾಗಿದೆ. ಇದರಿಂದ ಉತ್ತರಕ್ಕಿರುವ ಐರ್ ಸರೋವರ ಮೈದಾನವು ವಿಶಾಲವಾದ ತಟ್ಟೆ ಆಕಾರ(ಸಾಸರ್)ವುಳ್ಳದ್ದಾಗಿದೆ. ಇಲ್ಲಿ ಹಲವು ಉಪ್ಪಿನ ಸರೋವರಗಳಿವೆ. ಇದರ ಬಹು ಭಾಗ ಬರಡು ಪ್ರದೇಶವಾಗಿದ್ದು ಅತಿ ವಿರಳ ಜನಸಂಖ್ಯೆಯಿಂದ ಕೂಡಿದೆ. ಫ್ಲಿಂಡರ್ಸ್ ಮತ್ತು ಮಿಚೆಲ್ ನದಿಗಳು ಹರಿಯುವ ಕಾರ್ಪೆಂಟೇರಿಯ ಮೈದಾನವು ಸಮತಟ್ಟಾಗಿದೆ. ಇದನ್ನು ಐರ್ ನದಿಬಯಲಿನಿಂದ ಬಕ್ರ್ಲೆ ಪ್ರಸ್ಥಭೂಮಿಯು ಬೇರ್ಪಡಿಸುತ್ತದೆ.

3. ಪಶ್ಚಿಮದ ಪ್ರಸ್ಥಭೂಮಿ: ಇದು ಕಾರ್ಪೆಂಟೇರಿಯ ಕೊಲ್ಲಿಯಿಂದ ಆನ್‍ಸ್ಲೊ, ಪರ್ತ್ ಮತ್ತು ಆಲ್ಬೇನಿಯವರೆಗೆ ಹರಡಿದ ಆಸ್ಟ್ರೇಲಿಯದ 2/3 ಭಾಗವನ್ನಾವರಿಸಿದ ಏರುತಗ್ಗುಳ್ಳ ಪ್ರಸ್ಥಭೂಮಿ. ಗ್ರೇಟ್ ಸ್ಯಾಂಡಿ ಡೆಸರ್ಟ್, ಗಿಬ್ಸನ್ ಮತ್ತು ವಿಕ್ಟೋರಿಯ ಮರುಭೂಮಿಗಳನ್ನೊಳಗೊಂಡ ಈ ಭಾಗವು ಭಾರತದ ದಖನ್ ಪ್ರಸ್ಥಭೂಮಿಯಷ್ಟೇ ಪುರಾತನವಾದುದು. ಇಲ್ಲಿ ಅಪಾರ ಮರಳು ದಿಣ್ಣೆಗಳಿವೆ. ಅಲ್ಲಲ್ಲಿ ಪ್ರತ್ಯೇಕಿತ ಶಿಲಾ-ಬೆಟ್ಟ ಗುಡ್ಡಗಳಿವೆ. ಅವುಗಳಲ್ಲಿ ಖಂಡದ ಕೇಂದ್ರ ಭಾಗದಲ್ಲಿರುವ ಮ್ಯಾಕ್‍ಡೊನೆಲ್ ಮತ್ತು ಮಸ್‍ಗ್ರೇವ್ ಸರಣಿಗಳು ಎತ್ತರವಾದವು.





4. ನದಿಗಳ ವ್ಯವಸ್ಥೆ: ಅತಿಶಾಖ ಮತ್ತು ಶುಷ್ಕತೆಗಳಿಂದಾಗಿ ಆಸ್ಟ್ರೇಲಿಯದ ಬಹಳಷ್ಟು ಭಾಗವು ಮರುಭೂಮಿಯಿಂದ ಆವರಿಸಿದೆ. ಹೀಗಾಗಿ ನದಿ ವ್ಯವಸ್ಥೆ ಕಡಿಮೆ ಇದ್ದರೂ ಅವುಗಳಲ್ಲಿ ಹಲವು ಚಿಕ್ಕವು ಮತ್ತು ಅಕಾಲಿಕ ನದಿಗಳು. ಸಮುದ್ರ ಸೇರುವ ನದಿಗಳಿಗಿಂತ ಸರೋವರಗಳಿಗೆ ಸೇರುವ ಒಳನಾಡಿನ ನದಿಗಳೇ ಹೆಚ್ಚು. ಬಹಳಷ್ಟು ನದಿಗಳು ಪೂರ್ವದ ಉನ್ನತ ಪ್ರದೇಶಗಳಲ್ಲಿ ಉಗಮ ಹೊಂದಿ ಪೂರ್ವದೆಡೆಗೆ ಹರಿಯುತ್ತವೆ.

ಮರ್ರೆ ಆಸ್ಟ್ರೇಲಿಯದ ಅತಿ ಪ್ರಮುಖವಾದ ನದಿ. ಇದು ನ್ಯೂಸೌತ್‍ವೇಲ್ಸ್‍ನ ಆಗ್ನೇಯಕ್ಕಿರುವ ಕೊಸಿಯುಸ್ಕೊ ಶಿಖರದ ಬಳಿ ಉಗಮ ಹೊಂದಿ ಪೂರ್ವ ಹಾಗೂ ನೈಋತ್ಯಕ್ಕೆ ಹರಿದು (2,590 ಕಿ.ಮೀ.) ಎನ್‍ಕೌಂಟರ್ ಕೊಲ್ಲಿಯನ್ನು ಸೇರುತ್ತದೆ. ಡಾರ್ಲಿಂಗ್ ಲಾಚ್‍ಲನ್, ಮುರಂಬೀಚ್‍ಗಳು ಇದರ ಉಪನದಿಗಳು. ವರ್ಷದ ಕೆಲವು ಋತುಗಳಲ್ಲಿ ಮಾತ್ರ ಈ ನದಿ ಮೂಲಕ ನೌಕಾಯಾನ ಸಾಧ್ಯ. ಪೂರ್ವಾಭಿಮುಖವಾಗಿ ಹರಿಯುವ ನದಿಗಳು ಚಿಕ್ಕವು ಹಾಗೂ ವೇಗವಾಗಿ ಹರಿಯುತ್ತವೆ.





ಪೂರ್ವಕ್ಕೆ ಹರಿಯುವ ನದಿಗಳು ಚಿಕ್ಕದಾಗಿರುತ್ತವೆ ಮತ್ತು ವೇಗವಾಗಿರುತ್ತವೆ. ಅವುಗಳೆಂದರೆ ಹಂಟರ್, ಪೂರ್ವ ಫ್ಲಿಟ್ಜ್ರಾಯ್ ಮತ್ತು ಬೆಲ್ಯಾಂಡೋ. ಈಶಾನ್ಯ ಭಾಗದಲ್ಲಿರುವ ಮಿಚೆಲ್, ಗಿಲ್ಬರ್ಟ್ ಮತ್ತು ಫ್ಲಿಂಡರ್ಸ್ ನದಿಗಳು ವಾಯುವ್ಯಕ್ಕೆ ಹರಿದು ಕಾರ್ಪೆಂಟಾರಿಯಾ ಕೊಲ್ಲಿಯನ್ನು ಸೇರುತ್ತವೆ. ಡಾಲಿ, ವಿಕ್ಟೋರಿಯಾ, ಪಶ್ಚಿಮ ಫ್ಲಿಟ್ಜೆರಾಯ್ ಮತ್ತು ಇತ್ಯಾದಿ. ಉತ್ತರದ ಕಡೆಗೆ ಮತ್ತು ವಾಯುವ್ಯಕ್ಕೆ ಹರಿದು ಟಿಮೋರ್ ಸಮುದ್ರವನ್ನು ಸೇರುತ್ತವೆ.




ಕೂಪರ್ ಕ್ರೀಕ್, ಡೈಮಂಟಿನಾ ಮತ್ತು ಮುಕುಂಬಾ ನದಿಗಳು ಐರ್ ಸರೋವರಕ್ಕೆ ಬರುತ್ತವೆ. ಮರ್ಚಿಸನ್, ಏವನ್, ಬ್ಲ್ಯಾಕ್ ವುಡ್ ಇತ್ಯಾದಿ ನದಿಗಳು ಹಿಂದೂ ಮಹಾಸಾಗರಕ್ಕೆ ಹರಿಯುತ್ತವೆ.

ಆಸ್ಟ್ರೇಲಿಯದಲ್ಲಿ ಕೆಲವು ಸರೋವರಗಳಿವೆ. ಅವು ಚಿಕ್ಕವು ಮತ್ತು ಹೆಚ್ಚು ಉಪ್ಪು ನೀರಿನ ಸರೋವರಗಳು. ಉದಾ: ಐರ್, ಟಾರೆನ್ಸ್, ಗೆರ್ಡ್‍ನರ್ ಇತ್ಯಾದಿ. ಇವುಗಳಲ್ಲಿ ಐರ್ ಸರೋವರ ಅತಿ ದೊಡ್ಡದು ಮತ್ತು ಖಂಡದ ಅತ್ಯಂತ ತಗ್ಗಿನಲ್ಲಿದೆ. ಇದರಿಂದ ಪಶ್ಚಿಮ ಭಾಗದಲ್ಲಿ ಪ್ರಪಂಚದ ಅತಿದೊಡ್ಡ ಏಕಶಿಲೆಯಾದ ಆಯರ್ಸ್ (ಉಲೂರು) ಶಿಲೆಯಿದೆ.



ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗ
ವಾಯುಗುಣ: ಆಸ್ಟ್ರೇಲಿಯದ ಮಧ್ಯದಲ್ಲಿ ಮಕರ ಸಂಕ್ರಾಂತಿ ವೃತ್ತವು ಹಾಯ್ದು ಹೋಗಿದೆ. ಹೀಗಾಗಿ ಆಸ್ಟ್ರೇಲಿಯದಲ್ಲಿ ಉಷ್ಣವಲಯ ಮತ್ತು ಉಪಉಷ್ಣವಲಯದ ವಾಯುಗುಣವಿದೆ. ಖಂಡದ ಬಹಳಷ್ಟು ಭಾಗದಲ್ಲಿ ವರ್ಷವಿಡೀ ಅಧಿಕ ಉಷ್ಣಾಂಶವಿರುತ್ತದೆ. ಪಶ್ಚಿಮ ತೀರದಲ್ಲಿ ಶೀತಸಾಗರ ಪ್ರವಾಹ ಹರಿಯುತ್ತದೆ. ಇದರಿಂದ ಆಸ್ಟ್ರೇಲಿಯದ ಪಶ್ಚಿಮ ಭಾಗ ಮರುಭೂಮಿ ಮತ್ತು ಶುಷ್ಕ ವಾಯುಗುಣವನ್ನು ಹೊಂದಿದೆ. ಉತ್ತರ ಭಾಗಗಳಲ್ಲಿ ಮಾನ್ಸೂನ್ ಮತ್ತು ದಕ್ಷಿಣ ಕರಾವಳಿಯಲ್ಲಿ ಮೆಡಿಟರೇನಿಯನ್ ಮಾದರಿ ವಾಯುಗುಣವಿದೆ.
ಚಳಿಗಾಲ: ಆಸ್ಟ್ರೇಲಿಯ ಖಂಡವು ದಕ್ಷಿಣ ಗೋಳಾರ್ಧದಲ್ಲಿರುವುದರಿಂದ ಋತುಕಾಲಗಳು ಉತ್ತರ ಗೋಳಾರ್ಧಕ್ಕೆ ವಿರುದ್ಧ ಅವಧಿಯಲ್ಲಿ ಏರ್ಪಡುತ್ತವೆ. ಅಂದರೆ ಉತ್ತರ ಗೋಳಾರ್ಧದಲ್ಲಿ ಬೇಸಿಗೆಯಿದ್ದಾಗ ಇಲ್ಲಿ ಚಳಿಗಾಲವಾಗಿರುತ್ತದೆ. ಉದಾ: ಜೂನ್‍ನಿಂದ ಆಗಸ್ಟ್. ಈ ಅವಧಿಯಲ್ಲಿ ಉಷ್ಣಾಂಶ ಕಡಿಮೆ. ಅದು ಉತ್ತರದಿಂದ ದಕ್ಷಿಣಕ್ಕೆ ಕಡಿಮೆಯಾಗುತ್ತದೆ. ಆದರೆ ಒತ್ತಡ ಹೆಚ್ಚಾಗುತ್ತದೆ. ಮಾರುತಗಳು ಒಳನಾಡಿನಿಂದ ಸಮುದ್ರದ ಕಡೆಗೆ ಬೀಸುತ್ತವೆ. ಅವು ಹೆಚ್ಚು ಮಳೆ ತರುವುದಿಲ್ಲ. ಶುಷ್ಕ ಮತ್ತು ಶಾಖವುಳ್ಳ ವಾಯುಗುಣವಿರುತ್ತದೆ. ತಾಸ್ಮೇನಿಯದಲ್ಲಿ ಭಿನ್ನವಾದ ವಾಯುಗುಣವಿರುತ್ತದೆ.
ಬೇಸಿಗೆ ಕಾಲ: ಇದು ಡಿಸೆಂಬರಿನಿಂದ ಫೆಬ್ರವರಿವರೆಗಿರುತ್ತದೆ. ಈ ಅವಧಿಯಲ್ಲಿ ಉಷ್ಣಾಂಶ ಹೆಚ್ಚು. ಖಂಡದ ಪೂರ್ವಭಾಗಕ್ಕಿಂತ ಪಶ್ಚಿಮದ ಮರುಭೂಮಿಗಳಲ್ಲಿ ಗರಿಷ್ಠ ತಾಪಮಾನವಿರುತ್ತದೆ. ದಕ್ಷಿಣ, ಆಗ್ನೇಯ ಭಾಗಗಳು ಮತ್ತು ತಾಸ್ಮೇನಿಯ ದ್ವೀಪಗಳಲ್ಲಿ ಸಾಧಾರಣ ಉಷ್ಣಾಂಶವಿರುತ್ತದೆ. ಒಳನಾಡಿನಲ್ಲಿ ಕಡಿಮೆ ಒತ್ತಡವಿದ್ದು, ಮಾರುತಗಳು ಸಮುದ್ರದ ಕಡೆಯಿಂದ ಬೀಸುವಾಗ ಸ್ವಲ್ಪ ಮಳೆ ತರುತ್ತದೆ. ಖಂಡದ ದಕ್ಷಿಣ ಮತ್ತು ಆಗ್ನೇಯ ಭಾಗಗಳಿಗೆ ಮಳೆ ಹೆಚ್ಚು.
ಆಸ್ಟ್ರೇಲಿಯಾದಲ್ಲಿ ಚಂಡಮಾರುತಗಳನ್ನು ‘ವಿಲ್ಲಿ ವಿಲ್ಲಿಸ್’ ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ, ಆಸ್ಟ್ರೇಲಿಯಾದಲ್ಲಿ ಮಳೆಯು ಮಾನ್ಸೂನ್ ಪ್ರಕಾರದಂತಿದೆ, ಇದು ಸಮಯ ಮತ್ತು ಜಾಗದಲ್ಲಿ ವಿಶ್ವಾಸಾರ್ಹವಲ್ಲದ ಆಗ್ನೇಯ, ಉತ್ತರ ಮತ್ತು ನೈಋತ್ಯ ಕರಾವಳಿ ಪ್ರದೇಶಗಳಲ್ಲಿ ವಾರ್ಷಿಕ ಮಳೆ 75 ಸೆಂ.ಮೀ. ಇದು ಆಸ್ಟ್ರೇಲಿಯಾದ ಅತಿದೊಡ್ಡ ಆಂತರಿಕ ಮರುಭೂಮಿಯಲ್ಲಿ 25 ಸೆಂ.ಮೀಗಿಂತ ಕಡಿಮೆಯಿದೆ.
ಸ್ವಾಭಾವಿಕ ಸಸ್ಯವರ್ಗ ಮತ್ತು ಪ್ರಾಣಿ ಸಂಪತ್ತು
ಸ್ವಾಭಾವಿಕ ಸಸ್ಯವರ್ಗ: ದಟ್ಟವಾದ ಕಾಡುಗಳ ಕೊರತೆಯು ಆಸ್ಟ್ರೇಲಿಯದ ಪ್ರಮುಖ ಲಕ್ಷಣ. ಖಂಡದ ಬಹಳಷ್ಟು ಭಾಗವು ಹುಲ್ಲುಗಾವಲು, ಕುರುಚಲು ಸಸ್ಯ ಮತ್ತು ತೆರೆದ ವಿರಳವಾದ ಮರಗಳಿಂದ ಕೂಡಿದ ಸಸ್ಯವರ್ಗವನ್ನು ಹೊಂದಿದೆ. ಇದು ಖಂಡದ ವಾಯುಗುಣವನ್ನು ಪ್ರತಿಬಿಂಬಿಸುತ್ತದೆ. ಆಸ್ಟ್ರೇಲಿಯ ಖಂಡದ ವಿವಿಧ ಸ್ವಾಭಾವಿಕ ಸಸ್ಯವರ್ಗವು ಈ ಕೆಳಕಂಡಂತಿದೆ.

1. ಉಷ್ಣವಲಯದ ಕಾಡುಗಳು: ಹೆಚ್ಚು ಮಳೆ ಬೀಳುವ ಉತ್ತರ ಮತ್ತು ಈಶಾನ್ಯ ಕರಾವಳಿ ಪ್ರದೇಶಗಳಲ್ಲಿ ಇಂತಹ ಕಾಡುಗಳಿವೆ. ಅಲ್ಲಲ್ಲಿ ಚದುರಿದಂತೆ ಕಂಡುಬರುವ ಇವು ಬಹಳ ಕಡಿಮೆ ಕ್ಷೇತ್ರವನ್ನಾವರಿಸಿವೆ. ಇಲ್ಲಿ ಬೆಳೆಯುವ ಪ್ರಮುಖ ಮರಗಳೆಂದರೆ ಆ್ಯಶ್, ಸಿಡಾರ್, ಬೀಚ್ ಮತ್ತು ತಾಳೆ



2. ಸಮಶೀತೋಷ್ಣವಲಯದ ಕಾಡುಗಳು: ಇಂತಹ ಕಾಡುಗಳು ಪರ್ವತ ಮತ್ತು ಬೆಟ್ಟಗುಡ್ಡಗಳಲ್ಲಿ ಕಂಡು ಬರುತ್ತವೆ. ಹೀಗಾಗಿ ಇವುಗಳನ್ನು “ಗುಡ್ಡಗಾಡು ಅರಣ್ಯ”ಗಳೆಂತಲೂ ಕರೆಯುತ್ತಾರೆ. ಅವು ಹೆಚ್ಚಾಗಿ ಕ್ವೀನ್ಸ್‍ಲ್ಯಾಂಡ್, ನ್ಯೂಸೌತ್‍ವೇಲ್ಸ್, ವಿಕ್ಟೋರಿಯ ಮತ್ತು ತಾಸ್ಮೇನಿಯಗಳಲ್ಲಿ ಹಂಚಿಕೆಯಾಗಿವೆ. ಇಲ್ಲಿನ ಪ್ರಮುಖ ಮರಗಳೆಂದರೆ ನೀಲಗಿರಿ, ಪೈನ್, ಇತ್ಯಾದಿ. ಇವು ತೈಲ ಮತ್ತು ಕಾಗದ ತಯಾರಿಕೆಗೆ ಹೆಚ್ಚು ಉಪಯುಕ್ತ.


3. ಹುಲ್ಲುಗಾವಲು: ಆಸ್ಟ್ರೇಲಿಯದ ಹುಲ್ಲುಗಾವಲಿನಲ್ಲಿ ಎರಡು ವಿಧಗಳಿವೆ:
(i) ಉಷ್ಣವಲಯದ ಹುಲ್ಲುಗಾವಲು ಅಥವಾ ಸವನ್ನ
(ii) ಸಮಶೀತೋಷ್ಣವಲಯದ ಹುಲ್ಲುಗಾವಲು ಅಥವಾ ಡೌನ್ಸ್.
ಮೊದಲನೆಯದು ಪೂರ್ವದ ಉನ್ನತ ಪ್ರದೇಶಗಳಿಂದ ಪಶ್ಚಿಮ ಭಾಗಗಳಾದ ಕ್ವೀನ್ಸ್ ಲ್ಯಾಂಡ್, ಉತ್ತರ ಆಸ್ಟ್ರೇಲಿಯದ ಮಧ್ಯ ಮತ್ತು ಪಶ್ಚಿಮ ಆಸ್ಟ್ರೇಲಿಯದ ಉತ್ತರ ಭಾಗಗಳಲ್ಲಿ ಹರಡಿದೆ. ಎರಡನೆಯ ಪ್ರಕಾರದ ಹುಲ್ಲುಗಾವಲು ಮರ್ರೆ ಡಾರ್ಲಿಂಗ್ ಬಯಲಿನಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ. ಇದು ಪಶುಪಾಲನೆಗೆ ಹೆಚ್ಚು ಉಪಯುಕ್ತವಾಗಿದೆ. ಸಮಶೀತೋಷ್ಣವಲಯದ ಹುಲ್ಲುಗಾವಲಿನಲ್ಲಿ ಪೊದೆಹುಲ್ಲು. ವಿಚೆಲ್ ಮತ್ತು ಅಟ್ರೇಬಲ್ ಹುಲ್ಲು ಪ್ರಭೇದಗಳು ಕಂಡುಬರುತ್ತವೆ.



4. ಕುರುಚಲು ಸಸ್ಯವರ್ಗ: ಇದು ಪಶ್ಚಿಮ ಆಸ್ಟ್ರೇಲಿಯದ ದಕ್ಷಿಣ ಮತ್ತು ಪಶ್ಚಿಮ ಭಾಗಗಳು, ದಕ್ಷಿಣ ಆಸ್ಟ್ರೇಲಿಯ ಹಾಗೂ ಕ್ವೀನ್ಸ್‍ಲ್ಯಾಂಡ್‍ನ ಕೆಲವು ಭಾಗಗಳಲ್ಲಿ ಕಂಡು ಬರುತ್ತದೆ. ಮಳೆ ಕೊರತೆಯಿಂದಾಗಿ ಕುರುಚಲು ಗಿಡಗಳು ಬೆಳೆಯುತ್ತವೆ. ಇಲ್ಲಿ ಜಾಲಿಮರಗಳೇ ಹೆಚ್ಚಾಗಿ ಕಂಡುಬರುತ್ತವೆ. ಅಲ್ಲಲ್ಲಿ ನೀಲಗಿರಿ ಮರಗಳು, ಕತ್ತಾಳೆ ಮತ್ತು ಮುಳ್ಳಿನ ಗಿಡಗಂಟಿಗಳು ಬೆಳೆಯುತ್ತವೆ.

5. ಮರುಭೂಮಿ ಸಸ್ಯವರ್ಗ: ಪಶ್ಚಿಮ ಆಸ್ಟ್ರೇಲಿಯದ ಕೇಂದ್ರ ಮತ್ತು ಪೂರ್ವ ಭಾಗದಲ್ಲಿ ಈ ಸಸ್ಯವರ್ಗ ಹಂಚಿಕೆಯಾಗಿದೆ. ಇಲ್ಲಿ ಕಳ್ಳಿಜಾತಿ ಮರಗಳು, ಸಾಲ್ಟ್‍ಬುಶ್, ಕುಬ್ಜಹುಲ್ಲು ಹಾಗೂ ವಿವಿಧ ಮುಳ್ಳಿನ ಗಿಡಗಂಟಿಗಳು ಬೆಳೆಯುತ್ತವೆ. ಇವು ಕ್ಷಾಮ ನಿಭಾಯಿಸಬಲ್ಲ ಗುಣಲಕ್ಷಣವನ್ನು ಹೊಂದಿವೆ.

6. ಪ್ರಾಣಿವರ್ಗ: ಆಸ್ಟ್ರೇಲಿಯದಲ್ಲಿ ಬೇರೆಲ್ಲೂ ಇಲ್ಲದ ಅಪರೂಪದ ಹಾಗೂ ವಿಚಿತ್ರ ಪ್ರಾಣಿ ಪಕ್ಷಿಗಳಿವೆ. ಪ್ಲಾಟಿಪಸ್ ಎನ್ನುವ ಸಸ್ತನಿ ಮೊಟ್ಟೆ ಇಡುತ್ತದೆ ಹಾಗು ತನ್ನ ಮರಿಗಳಿಗೆ ಮೊಲೆಯುಣಿಸುತ್ತದೆ. ಮೈತುಂಬ ತುಪ್ಪಳವುಳ್ಳ ಚರ್ಮದ ಹೊದಿಕೆ ಹೊಂದಿದೆ. ಇವು ತಮ್ಮ ಮರಿಗಳನ್ನು ಹೊಟ್ಟೆಯ ಹೊರಚೀಲಗಳಲ್ಲಿ ಪೋಷಿಸುತ್ತವೆ. ಎಮು ಆಸ್ಟ್ರೇಲಿಯದ ಅತಿ ದೊಡ್ಡ ಪಕ್ಷಿ. ಲೈರ್ ಎಂಬುದು ನವಿಲಿನಂತಹ ಸುಂದರವಾದ ಪಕ್ಷಿ. ನಗುವಿನಂತೆ ಕೂಗುವ ಕೂಕಾಬುರ್ರ, ಕಪ್ಪು ಹಂಸ ಮುಂತಾದ ಪಕ್ಷಿಗಳಿವೆ. ಕಾಂಗರೂ ರಾಷ್ಟ್ರೀಯ ಪ್ರಾಣಿಯಾಗಿದೆ. ಡಿಂಗೊ ಎಂಬುದು ತೋಳದಂತೆ ಕಾಣುವ ಕಾಡುನಾಯಿ. ವಲ್ಲಬಿ, ನೊಣ ತಿನ್ನುವ ಎಕಿಡ್ನ, ಮರಹತ್ತುವ ಸಣ್ಣ ಆಕಾರವುಳ್ಳ ಕರಡಿಕೋಲ ಇತ್ಯಾದಿ ಪ್ರಾಣಿಗಳಿವೆ. ಸರೀಸೃಪಗಳು ಮತ್ತು ವಿಷಪೂರಿತ ಹಾವುಗಳು ಸರ್ವೇಸಾಮಾನ್ಯ.






ಆಸ್ಟ್ರೇಲಿಯ “ಅಪರೂಪದ ಪ್ರಾಣಿ ಪಕ್ಷಿಗಳ ನಾಡು”. ಸು.60%ರಷ್ಟು ಇಲ್ಲಿನ ಪ್ರಾಣಿ ಪಕ್ಷಿಗಳು ಪ್ರಪಂಚದಲ್ಲೆಲ್ಲೂ ಕಾಣುವುದಿಲ್ಲ. ಕಾಂಗರೂ ಆಸ್ಟ್ರೇಲಿಯಾದ ರಾಷ್ಟ್ರೀಯ ಚಿಹ್ನೆಯಾಗಿದೆ.
ವ್ಯವಸಾಯ ಮತ್ತು ಪಶುಸಂಗೋಪನೆ
ವ್ಯವಸಾಯ: ವ್ಯವಸಾಯ ಆಸ್ಟ್ರೇಲಿಯದ ವೃತ್ತಿಗಳಲ್ಲಿ ಒಂದಾಗಿದೆ. ಆದರೆ ಇಲ್ಲಿ ಕೃಷಿ ಭೂಮಿ ಕಡಿಮೆ. ಈ ಖಂಡದ ವಿಸ್ತೀರ್ಣದಲ್ಲಿ ಶೇ.4 ಭಾಗ ಮಾತ್ರ ಕೃಷಿಗೆ ಯೋಗ್ಯವಾದುದು. ಅದು ಸಮುದ್ರ ತೀರ ಮತ್ತು ನದಿ ಬಯಲುಗಳಲ್ಲಿ ಕಂಡುಬರುತ್ತದೆ. ಒಟ್ಟು ಜನಸಂಖ್ಯೆಯಲ್ಲಿ ಶೇ.44ರಷ್ಟು ಭಾಗ ಜನರು ಮಾತ್ರ ವ್ಯವಸಾಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಬಿಳಿಯರು ಈ ವೃತ್ತಿಯಲ್ಲಿ ನಿರತರಾಗಿರುವುದು ವಿಶೇಷ.
ಮಳೆಯ ಅಭಾವ ಮತ್ತು ಅಕಾಲಿಕ ಹಂಚಿಕೆ, ಫಲವತ್ತಲ್ಲದ ಮರಳುಮಣ್ಣು, ಕೃಷಿಯೋಗ್ಯ ಭೂಮಿಯ ಕೊರತೆ ಮತ್ತು ನೀರಾವರಿಯ ಕೊರತೆಗಳಿಂದಾಗಿ ಕೃಷಿಕ್ಷೇತ್ರ ಕಡಿಮೆ. ಆದರೂ ಆಸ್ಟ್ರೇಲಿಯವು ತನ್ನ ಬೇಡಿಕೆಯನ್ನು ಪೂರೈಸಿಕೊಳ್ಳುವಷ್ಟು ಕೃಷಿ ಉತ್ಪನ್ನಗಳಲ್ಲಿ ಸ್ವಯಂ ಪೂರ್ಣತೆಯನ್ನು ಹೊಂದಿದೆ.
ಆಸ್ಟ್ರೇಲಿಯವು ವಿಸ್ತರಣಾ ಬೇಸಾಯ ಪದ್ಧತಿಯನ್ನು ಅನುಸರಿಸುತ್ತದೆ. ಭೂಹಿಡುವಳಿ ಗಾತ್ರ ದೊಡ್ಡದು. ಆಧುನಿಕ ಬೇಸಾಯ ಕ್ರಮವನ್ನು ಬಳಸಲಾಗುವುದು. ರಫ್ತು ಮಾಡುವ ಉದ್ದೇಶದಿಂದ ವಾಣಿಜ್ಯ ಬೆಳೆಗಳ ಸಾಗುವಳಿಗೆ ಆದ್ಯತೆ ಹೆಚ್ಚು.ಆದರೂ ವಿವಿಧ ಬೆಳೆಗಳನ್ನು ಬೆಳೆಯಲಾಗುವುದು. ಉದಾ: ಗೋಧಿ, ಕಬ್ಬು, ಹತ್ತಿ, ತಂಬಾಕು, ಮೆಕ್ಕೆಜೋಳ, ವಿವಿಧ ಹಣ್ಣುಹಂಪಲು ಮತ್ತು ತರಕಾರಿಗಳು.

ಗೋಧಿ: ಆಸ್ಟ್ರೇಲಿಯದ ಅತ್ಯಂತ ಪ್ರಮುಖವಾದ ಆಹಾರ ಬೆಳೆ. ಇದನ್ನು ದಕ್ಷಿಣ ಆಸ್ಟ್ರೇಲಿಯ, ಕ್ವೀನ್ಸ್‍ಲ್ಯಾಂಡ್, ನ್ಯೂಸೌತ್‍ವೇಲ್ಸ್ ಮತ್ತು ವಿಕ್ಟೋರಿಯಗಳಲ್ಲಿ ಬೆಳೆಯಲಾಗುವುದು. ಮರ್ರೆ ಡಾರ್ಲಿಂಗ್ ಬಯಲು ಪ್ರದೇಶ ಗೋಧಿಗೆ ಪ್ರಸಿದ್ಧ. ಆಸ್ಟ್ರೇಲಿಯ ತನ್ನ ಗೋಧಿ ಉತ್ಪನ್ನದಲ್ಲಿ ಶೇ.70ರಷ್ಟು ಭಾಗವನ್ನು ರಫ್ತು ಮಾಡುತ್ತದೆ.
ಮೆಕ್ಕೆ ಜೋಳ ಮತ್ತೊಂದು ಆಹಾರದ ಬೆಳೆ. ಇದನ್ನು ಜಾನುವಾರುಗಳ ಆಹಾರ ತಯಾರಿಕೆಗಾಗಿ ಬೆಳೆಯಲಾಗುತ್ತದೆ. ಇದನ್ನು ಕ್ವೀನ್ಸ್‍ಲ್ಯಾಂಡ್ ಮತ್ತು ನ್ಯೂಸೌತ್‍ವೇಲ್ಸ್‍ಗಳಲ್ಲಿ ಹೆಚ್ಚು ಬೆಳೆಯಲಾಗುವುದು. ಮರ್ರೆ ಡಾರ್ಲಿಂಗ್ ಬಯಲಿನಲ್ಲಿ ಸ್ವಲ್ಪಮಟ್ಟಿಗೆ ಭತ್ತ ಬೆಳೆಯಲಾಗುತ್ತದೆ.
ಕಬ್ಬು: ಆಸ್ಟ್ರೇಲಿಯದ ಪ್ರಮುಖ ವಾಣಿಜ್ಯ ಬೆಳೆ. ಇದನ್ನು ಹೆಚ್ಚಾಗಿ ಪೂರ್ವ ಕರಾವಳಿಗೆ ಹೊಂದಿಕೊಂಡಿರುವ ಉತ್ತರ ನ್ಯೂಸೌತ್‍ವೇಲ್ಸ್‍ನಿಂದ ಕ್ವೀನ್ಸ್‍ಲ್ಯಾಂಡ್‍ವರೆಗಿನ ಪ್ರದೇಶದಲ್ಲಿ ಬೆಳೆಯಲಾಗುವುದು. ಮತ್ತೊಂದು ವಾಣಿಜ್ಯ ಬೆಳೆಯಾದ ತಂಬಾಕನ್ನು ಕ್ವೀನ್ಸ್‍ಲ್ಯಾಂಡ್‍ನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ವಿವಿಧ ಹಣ್ಣು ಮತ್ತು ತರಕಾರಿಗಳನ್ನು ತಾಸ್ಮೇನಿಯ, ವಿಕ್ಟೋರಿಯ ಮತ್ತು ನ್ಯೂಸೌತ್‍ವೇಲ್ಸ್‍ಗಳಲ್ಲಿ ಬೆಳೆಯಲಾಗುತ್ತದೆ. ಸೇಬು, ದ್ರಾಕ್ಷಿ, ಪೇರು, ಕಿತ್ತಳೆ ಮುಂತಾದವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.
ಪಶುಸಂಗೋಪನೆ: ಇದು ಆಸ್ಟ್ರೇಲಿಯದ ಅತಿ ಪ್ರಮುಖ ವೃತ್ತಿ. ಆಸ್ಟ್ರೇಲಿಯವು “ಪಶುಪಾಲನಾ ದೇಶ” ಎಂದೇ ಪ್ರಸಿದ್ಧಿ. ಹಾಲಿನ ಉತ್ಪನ್ನ, ಮಾಂಸ, ಉಣ್ಣೆ ಮತ್ತು ಚರ್ಮದ ವಸ್ತುಗಳಿಗಾಗಿ ಕುರಿ ಮತ್ತು ದನಕರುಗಳನ್ನು ಸಾಕಲಾಗುವುದು.

ಕುರಿಸಾಕಣೆಯು ಆಸ್ಟ್ರೇಲಿಯದ ಅತ್ಯಂತ ಪ್ರಮುಖ ಆರ್ಥಿಕ ವೃತ್ತಿ. ಅಧಿಕ ಸಂಖ್ಯೆಯ ಕುರಿಗಳನ್ನು ಹೊಂದಿರುವ ಈ ಖಂಡ ಉಣ್ಣೆಯ ಉತ್ಪಾದನೆ ಮತ್ತು ಕಚ್ಚಾಉಣ್ಣೆಯನ್ನು ರಫ್ತು ಮಾಡುವುದರಲ್ಲಿಯೂ ಮುಂದಿದೆ. ವಿಶಾಲ ಹುಲ್ಲುಗಾವಲು, ಆರ್ಟೀಸಿಯನ್ ಬಾವಿಗಳಿಂದ ನೀರಿನ ಲಭ್ಯತೆ, ತಂಪು ಮತ್ತು ಶುಷ್ಕ ವಾಯುಗುಣ, ಅತ್ಯಾಧುನಿಕ ವಿಧಾನದ ಕುರಿಸಾಕಣೆ, ವಿಶಾಲ ಮಾರುಕಟ್ಟೆ ಸೌಲಭ್ಯಗಳು ಕುರಿಸಾಕಣೆಗೆ ಉತ್ತೇಜಕವಾಗಿವೆ. ಇಲ್ಲಿ ಸಾಕುವ ಕುರಿಗಳಲ್ಲಿ ಸುಮಾರು ಶೇ.75 ಭಾಗ ‘ಮೆರಿನೊ’ ಜಾತಿಗೆ ಸೇರಿವೆ. ಅವು ಉತ್ತಮ ಗುಣಮಟ್ಟದ ಉಣ್ಣೆಯನ್ನು ನೀಡುತ್ತವೆ. ವಿಶಾಲವಾದ ಕುರಿಸಾಕಣೆ ಪ್ರದೇಶಕ್ಕೆ ‘ಕುರಿಗಾವಲು’ ಎನ್ನುವರು.
ದನಕರುಗಳನ್ನು ಪ್ರಮುಖವಾಗಿ ಗೋಮಾಂಸ ಮತ್ತು ಕ್ಷೀರೋತ್ಪನ್ನಗಳಿಗಾಗಿ ಸಾಕಲಾಗುತ್ತದೆ. ಸವನ್ನ ಪ್ರದೇಶದಲ್ಲಿ ಗೋಮಾಂಸಕ್ಕಾಗಿ ಮತ್ತು ಸಮಶೀತೋಷ್ಣವಲಯದ ಡೌನ್ಸ್ ಹುಲ್ಲುಗಾವಲಿನ ಪ್ರದೇಶದಲ್ಲಿ ಕ್ಷೀರೋತ್ಪನ್ನಗಳಿಗಾಗಿ ದನಕರುಗಳನ್ನು ಸಾಕಲಾಗುವುದು.
ಖನಿಜ ಮತ್ತು ಕೈಗಾರಿಕೆಗಳು
ಖನಿಜಗಳು: ಆಸ್ಟ್ರೇಲಿಯದಲ್ಲಿ ಸಾಕಷ್ಟು ಖನಿಜ ಸಂಪತ್ತಿದೆ. ಕಬ್ಬಿಣದ ಅದಿರು, ಬಾಕ್ಸೈಟ್, ಸತು, ನಿಕ್ಕಲ್, ತಾಮ್ರ, ಮ್ಯಾಂಗನೀಸ್, ಚಿನ್ನ, ತವರ, ಸೀಸ ಮತ್ತು ಯುರೇನಿಯಂ ಪ್ರಮುಖ ಖನಿಜಗಳು. ಜೊತೆಗೆ ಇಂಧನ ಖನಿಜಗಳಾದ ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳೂ ಸಹ ದೊರೆಯುತ್ತವೆ. ಇವುಗಳಲ್ಲಿ ಅನೇಕ ಖನಿಜಗಳು ರಫ್ತಾಗುತ್ತವೆ.
ಆಸ್ಟ್ರೇಲಿಯ ಒಂದು ಪ್ರಮುಖ ಕಬ್ಬಿಣದ ಅದಿರು ಉತ್ಪಾದಿಸುವ ದೇಶ. ಅತ್ಯಧಿಕ ಪ್ರಮಾಣದ ಕಬ್ಬಿಣದ ಅದಿರು ಜಪಾನಿಗೆ ರಫ್ತಾಗುತ್ತದೆ.
ಪ್ರಪಂಚದಲ್ಲೇ ಹೆಚ್ಚು ಬಾಕ್ಸೈಟ್ ನಿಕ್ಷೇಪವು ಆಸ್ಟ್ರೇಲಿಯದಲ್ಲಿದೆ. ಪಶ್ಚಿಮ ಆಸ್ಟ್ರೇಲಿಯದ ಕೂಲ್‍ಗಾರ್ಡಿ ಮತ್ತು ಕಾಲ್ಗೂರ್ಲಿಗಳು ಪ್ರಸಿದ್ಧ ಚಿನ್ನ ಉತ್ಪಾದಿಸುವ ಕೇಂದ್ರಗಳಾಗಿವೆ. ಸೀಸ, ಸತು ಮತ್ತು ಬೆಳ್ಳಿಗಳು ಜೊತೆಜೊತೆಯಾಗಿ ದೊರೆಯುತ್ತವೆ. ಚಿನ್ನವು ನ್ಯೂ ಸೌತ್ ವೇಲ್ಸ್, ವಿಕ್ಟೋರಿಯಾ ಮತ್ತು ಕ್ವೀನ್ಸ್‍ಲ್ಯಾಂಡ್‍ನಲ್ಲಿ ದೊರೆಯುತ್ತದೆ.
ನ್ಯೂಸೌತ್‍ವೇಲ್ಸ್‍ನಲ್ಲಿ ಹೆಚ್ಚು ತಾಮ್ರ ಉತ್ಪಾದನೆಯಾಗುತ್ತದೆ. ಹಾಗೆಯೇ ಕಾರ್ಪೆಂಟೇರಿಯ ಕೊಲ್ಲಿ ಪ್ರದೇಶವು ಮ್ಯಾಂಗನೀಸ್ ಉತ್ಪಾದನೆಯಲ್ಲಿ ಮುಂದಿದೆ. ಆಸ್ಟ್ರೇಲಿಯವು ಅತ್ಯಧಿಕ ಪ್ರಮಾಣದ ಯುರೇನಿಯಂ ನಿಕ್ಷೇಪವನ್ನು ಹೊಂದಿದೆ. ಅದು ಹೆಚ್ಚಾಗಿ ಉತ್ತರ ಪ್ರಾಂತ್ಯ (60%), ಪಶ್ಚಿಮ ಆಸ್ಟ್ರೇಲಿಯ ಮತ್ತು ದಕ್ಷಿಣ ಆಸ್ಟ್ರೇಲಿಯದಲ್ಲಿ ದೊರೆಯುತ್ತದೆ.
ಕೈಗಾರಿಕೆಗಳು: ಇಂದು ಆಸ್ಟ್ರೇಲಿಯವು ವಿವಿಧ ಕೈಗಾರಿಕೆಗಳ ಪ್ರಗತಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಖನಿಜ ಸಂಪತ್ತು, ಕೃಷಿ ಅಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಪ್ರಗತಿ, ವಿದೇಶೀ ಬಂಡವಾಳ ಹೂಡಿಕೆ ಮತ್ತು ವಿಶಾಲ ಮಾರುಕಟ್ಟೆಗಳು ಕೈಗಾರಿಕಾಭಿವೃದ್ಧಿಗೆ ಪೂರಕವಾಗಿವೆ. ಪ್ರಾರಂಭದಿಂದಲೂ ಆಸ್ಟ್ರೇಲಿಯದ ಕೈಗಾರಿಕೋದ್ಯಮ ವಿದೇಶಿ ನೆರವನ್ನು ಅವಲಂಬಿಸಿದೆ. ಅದರಲ್ಲೂ ಜಪಾನಿನ ಕೊಡುಗೆ ಅಪಾರವಾದುದು. ಆಸ್ಟ್ರೇಲಿಯದ ಕೆಲವು ಪ್ರಮುಖ ಕೈಗಾರಿಕೆಗಳು ಈ ಕೆಳಕಂಡಂತಿವೆ.
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
ಸ್ವಚಾಲಿತ ವಾಹನ ಕೈಗಾರಿಕೆ
ಹಡಗು ನಿರ್ಮಾಣ
ವಿದ್ಯುತ್ ಉಪಕರಣ
ಜವಳಿ ಉದ್ಯಮ
ಕಾಗದ, ರಟ್ಟು ಮತ್ತು ಮರದ ತಿರುಳು
ತೈಲ ಶುದ್ಧೀಕರಣ

ಇತರೆ ಕೈಗಾರಿಕೆಗಳೆಂದರೆ ವಿಮಾನ ತಯಾರಿಕೆ (ಸಿಡ್ನಿ, ಮೆಲ್ಬೋರ್ನ್), ಹಿಟ್ಟಿನ ಗಿರಣಿ, ಮೀನು ಮತ್ತು ಹಣ್ಣು ಸಂಸ್ಕರಣೆ, ರಾಸಾಯನಿಕ ವಸ್ತುಗಳ ತಯಾರಿಕೆ ಇತ್ಯಾದಿ.
ಜನಸಂಖ್ಯೆ
ಬೆಳವಣಿಗೆ: ಈಗಾಗಲೇ ತಿಳಿಸಿದಂತೆ ಆಸ್ಟ್ರೇಲಿಯ ಖಂಡವು ವಿಸ್ತೀರ್ಣದಲ್ಲಿ ಮಾತ್ರವಲ್ಲ ಜನಸಂಖ್ಯೆಯಲ್ಲೂ ಚಿಕ್ಕದು. ಇದರ ಒಟ್ಟು ಜನಸಂಖ್ಯೆ 20.0 ದಶಲಕ್ಷ (2012). ಇದು ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಶೇ.0.31 ಭಾಗದಷ್ಟು ಮಾತ್ರ. ಈ ಖಂಡದ ಜನಸಂಖ್ಯೆ 1860ರಲ್ಲಿ 1.15 ದಶಲಕ್ಷವಾಗಿತ್ತು. 1960ರಲ್ಲಿ 10 ದಶಲಕ್ಷ, 1980ರಲ್ಲಿ 14.8 ದಶಲಕ್ಷ ಮತ್ತು 1998ರಲ್ಲಿ 18.7 ದಶಲಕ್ಷವಾಯಿತು. ಕಳೆದ ಶತಮಾನದ ಅಂತ್ಯಾವಧಿಯಲ್ಲಿ ಖಂಡದ ಜನಸಂಖ್ಯಾ ಬೆಳವಣಿಗೆ ಹೆಚ್ಚಾಗಿರುವುದು ಕಂಡುಬರುತ್ತದೆ.
ಹಂಚಿಕೆ: ಆಸ್ಟ್ರೇಲಿಯದ ಜನಸಂಖ್ಯಾ ಹಂಚಿಕೆಯಲ್ಲಿ ವಿರಳತೆ ಮತ್ತು ಅಸಮಾನತೆಯಿದೆ. ಖಂಡದ ಒಳನಾಡಿನ ಬಹುಭಾಗವು ನಿರ್ಜನವಾದುದು. ನ್ಯೂಸೌತ್‍ವೇಲ್ಸ್ ಅತಿ ಜನಭರಿತವಾದ 1 3 ಪ್ರಾಂತ್ಯ. ವಿಕ್ಟೋರಿಯ ಎರಡನೆಯ 1 4 ಸ್ಥಾನದಲ್ಲಿದೆ. ತರುವಾಯ ಕ್ವೀನ್ಸ್‍ಲ್ಯಾಂಡ್, ದಕ್ಷಿಣ ಆಸ್ಟ್ರೇಲಿಯ ಮತ್ತು ತಾಸ್ಮೇನಿಯಗಳು ಸ್ಥಾನ ಪಡೆದಿವೆ. ಪ್ರತಿಯಾಗಿ ಉತ್ತರ ಪ್ರಾಂತ್ಯವು ಅತ್ಯಂತ ವಿರಳ ಜನರಿಂದ ಕೂಡಿದೆ. ದೇಶದ ಜನಸಂಖ್ಯೆಯಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಆರು ನಗರಗಳಲ್ಲಿ ಸಾಂದ್ರೀಕೃತವಾಗಿದೆ. ಉದಾ: ಸಿಡ್ನಿ, ಮೆಲ್ಬೋರ್ನ್, ಬ್ರಿಸ್ಬೇನ್, ಅಡಿಲೇಡ್, ಪರ್ತ ಮತ್ತು ನ್ಯೂಕ್ಯಾಸಲ್.
ಜನಸಾಂದ್ರತೆ: ಪ್ರಪಂಚದ ಅತಿ ಕಡಿಮೆ ಜನಸಾಂದ್ರತೆವುಳ್ಳ ದೇಶಗಳಲ್ಲಿ ಆಸ್ಟ್ರೇಲಿಯವು ಒಂದಾಗಿದೆ. ಇದರ ಸರಾಸರಿ ಜನಸಾಂದ್ರತೆ ಪ್ರತಿ ಚದರ ಕಿಲೋ ಮೀಟರ್‍ಗೆ ಮೂರು ಜನರು ಮಾತ್ರ. ಇದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ. ಎಲ್ಲಾ ನಗರ ಪ್ರದೇಶ, ರಾಜಧಾನಿ ಮತ್ತು ಕೈಗಾರಿಕಾ ಕೇಂದ್ರಗಳಲ್ಲಿ ಜನಸಾಂದ್ರತೆ ಹೆಚ್ಚು. ಉದಾ: ವಿಕ್ಟೋರಿಯ, ನ್ಯೂಸೌತ್‍ವೇಲ್ಸ್, ತಾಸ್ಮೇನಿಯ, ಕ್ವೀನ್ಸ್‍ಲ್ಯಾಂಡ್ ಇತ್ಯಾದಿ. ಈ ಖಂಡದ ಆಗ್ನೇಯ ಭಾಗಗಳಲ್ಲಿ ಸಾಧಾರಣ ಜನಸಾಂದ್ರತೆ ಇದೆ. ಆದರೆ ಮರುಭೂಮಿ ಮತ್ತು ಅರೆಮರುಭೂಮಿಗಳಿಂದ ಕೂಡಿದ ಸುಮಾರು ಶೇ.80 ಭಾಗದಲ್ಲಿ ಜನಸಾಂದ್ರತೆ ಅತಿ ವಿರಳ.
ಆಸ್ಟ್ರೇಲಿಯದಲ್ಲಿ ಗ್ರಾಮೀಣ ಜನಸಂಖ್ಯೆಗಿಂತ (15%) ನಗರ ಜನಸಂಖ್ಯೆಯ (85%) ಪ್ರಮಾಣ ಹೆಚ್ಚು.

ಹೊಸ ಪದಗಳು:
ದ್ವೀಪಖಂಡ, ಗೊಂಡ್ವಾನ, ತಟ್ಟೆ ಆಕಾರ, ಏಕಶಿಲೆ, ಹವಳದಿಣ್ಣೆ, ಕಾಂಗರೂ, ಲೈರ್, ಡಿಂಗೊ, ಕೂಕಾಬುರ್ರ, ವಲ್ಲಬಿ, ಎಕಿಡ್ನ ಮತ್ತು ಕರಡಿಕೋಲ, ಜನಸಾಂದ್ರತೆ, ಸಾಂದ್ರೀಕೃತ.
