ವಿಶ್ವಸಂಸ್ಥೆ – ಅಧ್ಯಾಯ 25
ಪಾಠದ ಪರಿಚಯ: ಇತಿಹಾಸದಲ್ಲೇ ಅತಿ ಭೀಕರವಾದ ಎರಡನೆಯ ಮಹಾಯುದ್ಧವು ಯುರೋಪಿನ ರಾಷ್ಟ್ರಗಳ ನಡುವೆ ಸತತ ಆರು ವರ್ಷಗಳ ಕಾಲ ನಡೆದು (1939-1945) ಸುಮಾರು ನಾಲ್ಕು ಕೋಟಿ ಜನ ಮತ್ತು ಅಪಾರ ಪ್ರಮಾಣದ ಸ್ವತ್ತುಗಳು ವಿನಾಶಗೊಂಡವು.
ಉಗ್ರ ಹಿಂಸೆಯಿಂದ ತತ್ತರಿಸಿದ ಮನುಕುಲವು ಶಾಶ್ವತ ಶಾಂತಿಗಾಗಿ ಹಂಬಲಿಸುತ್ತಿತ್ತು. ಈ ವಿಷಮ ಕಾಲಘಟ್ಟದಲ್ಲಿ ಐವತ್ತೊಂದು ರಾಷ್ಟ್ರಗಳ ಪ್ರತಿನಿಧಿಗಳು ಅಮೇರಿಕದ ಸ್ಯಾನ್ ಫ್ರಾನ್ಸಿಸ್ಕೊ ನಗರದಲ್ಲಿ ಸಮಾವೇಶಗೊಂಡು 1945 ಅಕ್ಟೋಬರ್ 24ರಂದು ಶಾಶ್ವತ ಶಾಂತಿಗಾಗಿ ವಿಶ್ವಸಂಸ್ಥೆಯನ್ನು ಸ್ಥಾಪಿಸಿದರು.
ಈ ಅಧ್ಯಾಯದಲ್ಲಿ ವಿಶ್ವಸಂಸ್ಥೆಯ ಸ್ಥಾಪನೆಯ ಹಿನ್ನೆಲೆ, ಮೂಲ ಉದ್ದೇಶಗಳು, ಅಂಗಸಂಸ್ಥೆಗಳು, ವಿಶೇಷ ಸೇವಾಸಂಸ್ಥೆಗಳು ಮತ್ತು ಅವುಗಳ ಸಾಧನೆಗಳನ್ನು ವಿವರಿಸಲಾಗಿದೆ. ವಿಶ್ವಸಂಸ್ಥೆಯಲ್ಲಿ ಭಾರತವು ವಹಿಸಿದ ಪಾತ್ರವನ್ನು ಕೂಡ ತಿಳಿಸಲಾಗಿದೆ.

ಇಲ್ಲಿ ಕೊಟ್ಟಿರುವ ಲಾಂಛನವನ್ನು ಗಮನಿಸಿ. ಲಾಂಛನದ ವಿಶ್ವಸಂಸ್ಥೆಯ ಲಾಂಛನ ಮಧ್ಯ ಭಾಗದಲ್ಲಿ ಭೂಖಂಡಗಳನ್ನು ತೋರಿಸಲಾಗಿದೆ. ಲಾಂಛನದ ಎರಡೂ ಕಡೆಗಳಲ್ಲಿ ಆಲಿವ್ ರೆಂಬೆಗಳಿವೆ. ಇವು ಏನನ್ನು ಸೂಚಿಸುತ್ತವೆ?

ಲಾಂಛನದಲ್ಲಿ ತೋರಿಸಲಾದ ಭೂಖಂಡಗಳು ಜಗತ್ತಿನ ಎಲ್ಲಾ ದೇಶಗಳನ್ನು ಮತ್ತು ಆಲಿವ್ ರೆಂಬೆಗಳು ಸ್ನೇಹ ಮತ್ತು ಶಾಂತಿ ಸೂಚಿಸುತ್ತವೆ. ಇದು ವಿಶ್ವಸಂಸ್ಥೆಯ ಮೂಲ ಆದರ್ಶವನ್ನು ಬಿಂಬಿಸುವ ಲಾಂಛನವಾಗಿದೆ.

ವಿಶ್ವ ಸಂಸ್ಥೆಯ ಉದಯ
ವಿಶ್ವಸಂಸ್ಥೆ ಎಂದರೇನು? ಅದನ್ನು ಏತಕ್ಕಾಗಿ ಸ್ಥಾಪಿಸಲಾಯಿತು ಗೊತ್ತೆ?
ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಯುರೋಪಿನ ದೇಶಗಳ ನಡುವೆ ಅತಿ ಭೀಕರ ಯುದ್ಧವೊಂದು ಪ್ರಾರಂಭವಾಯಿತು. ಅಲ್ಪಕಾಲದಲ್ಲೇ ಇತರ ಖಂಡಗಳ ದೇಶಗಳು ಯುದ್ಧದಲ್ಲಿ ಸೇರಿಕೊಂಡವು. ಇದೇ ಎರಡನೆಯ ಮಹಾಯುದ್ಧ. ಯುದ್ಧದ ಪರಿಣಾಮವಾಗಿ ಅಸಂಖ್ಯಾತ ಜೀವ, ಸ್ವತ್ತುಗಳು ನಾಶವಾದವು. ಯುದ್ಧಾಗ್ನಿಯಿಂದ ಬಳಲಿ ಹೋದ ಮನುಕುಲವು ಯುದ್ಧಮುಕ್ತ ಶಾಶ್ವತ ಶಾಂತಿಯಿಂದ ಕೂಡಿದ ಜಗತ್ತಿಗಾಗಿ ಹಂಬಲಿಸುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಅಮೇರಿಕದ ಅಧ್ಯಕ್ಷ ರೂಸ್‍ವೆಲ್ಟ್, ಬ್ರಿಟಿಷ್ ಪ್ರಧಾನಿ ಚರ್ಚಿಲ್ ಹಾಗೂ ರಷ್ಯದ ಸರ್ವಾಧಿಕಾರಿ ಸ್ಟಾಲಿನ್ ಮುಂತಾದವರ ಮುಂದಾಳು ತನದಲ್ಲಿ ಐವತ್ತೊಂದು ದೇಶಗಳ ಪ್ರತಿನಿಧಿಗಳು ಸಮಾವೇಶಗೊಂಡು ವಿಶ್ವದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸುವ ನಿರ್ಣಯವನ್ನು ಕೈಗೊಂಡರು. ಇದನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಸ್ಥಾಪಿಸಿದ ಸಂಸ್ಥೆಯೇ ವಿಶ್ವಸಂಸ್ಥೆ ಅಥವಾ ಸಂಯುಕ್ತ ರಾಷ್ಟ್ರ ಸಂಘ (ಯು.ಎನ್.ಓ.) ಇದು 1945 ಅಕ್ಟೋಬರ್ 24ರಂದು ಜನ್ಮತಾಳಿತು.



ಹಿಂದೆ UNO ಎಂದು ಇದ್ದದ್ದನ್ನು, ಅದು ಒಂದು ಸಂಘ ಅಲ್ಲ ಎಂಬ ಕಾರಣಕ್ಕಾಗಿ, UN ಎಂದಷ್ಟೇ ಬಳಸಲಾಗುತ್ತದೆ. ಯಾಕೆಂದರೆ ಅದು ವಿಶ್ವರಾಷ್ಟ್ರಗಳನ್ನು ಪ್ರತಿನಿಧಿಸುತ್ತದೆ. UN ಎಂದರೆ ಯುನೈಟೆಡ್ ನೇಷನ್ಸ್.
ವಿಶ್ವಸಂಸ್ಥೆಯ ಮೂಲ ಉದ್ದೇಶಗಳು
* ಯುದ್ಧಗಳನ್ನು ತಡೆಗಟ್ಟಿ ವಿಶ್ವದಲ್ಲಿ ಶಾಶ್ವತ ಶಾಂತಿ ಮತ್ತು ಭದ್ರತೆಯ ಸ್ಥಾಪನೆ.
* ರಾಷ್ಟ್ರಗಳ ನಡುವೆ ಸ್ನೇಹ ಸೌಹಾರ್ದವನ್ನು ಸಾಧಿಸುವುದು.
* ಅಂತಾರಾಷ್ಟ್ರೀಯ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನವೀಯ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಸಹಕರಿಸುವುದು.
* ಮಾನವ ಹಕ್ಕುಗಳ ಬಗ್ಗೆ ಗೌರವವನ್ನು ಬೆಳೆಸುವುದು.
* ಮೇಲಿನ ಗುರಿಗಳ ಸಾಧನೆಗಾಗಿ ಸಮನ್ವಯ ಕೇಂದ್ರವಾಗಿ ಕಾರ್ಯಮಾಡುವುದು.
ವಿಶ್ವಸಂಸ್ಥೆಯ ಅಂಗಸಂಸ್ಥೆಗಳು
ವಿಶ್ವಸಂಸ್ಥೆಯ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಯಾವ ಯಾವ ಅಂಗ ಸಂಸ್ಥೆಗಳನ್ನು ರಚಿಸಲಾಗಿದೆ?

1. ಮಹಾಸಭೆ: ಇದು ವರ್ಷಕೊಮ್ಮೆ ಸೆಪ್ಟಂಬರ್ ತಿಂಗಳಲ್ಲಿ ಸಮಾವೇಶಗೊಳ್ಳುತ್ತದೆ. ಸದಸ್ಯ ರಾಷ್ಟ್ರಗಳು ಮಹಾಸಭೆಯಲ್ಲಿ ಪಾಲ್ಗೊಳ್ಳುತ್ತವೆ. ಪ್ರತಿ ಸದಸ್ಯ ರಾಷ್ಟ್ರದ ಐದು ಜನ ಪ್ರತಿನಿಧಿಗಳಿದ್ದರೂ ಆ ರಾಷ್ಟ್ರವು ಒಂದೇ ಮತವನ್ನು ಚಲಾಯಿಸುವ ಹಕ್ಕನ್ನು ಹೊಂದಿರುತ್ತದೆ. ಮಹಾಸಭೆಯು ವಿಶ್ವಸಂಸ್ಥೆಯ ಸಂಸತ್ತಿನಂತೆ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ (2022) ವಿಶ್ವದ 193 ರಾಷ್ಟ್ರಗಳು ವಿಶ್ವಸಂಸ್ಥೆಯ ಸದಸ್ಯರಾಷ್ಟ್ರಗಳಾಗಿವೆ. ಸುಡಾನ್ ವಿಶ್ವಸಂಸ್ಥೆಯ 193ನೇ ಸದಸ್ಯರಾಷ್ಟ್ರ.

2. ಭದ್ರತಾ ಮಂಡಳಿ: ಭದ್ರತಾ ಮಂಡಳಿಯು ವಿಶ್ವಸಂಸ್ಥೆಯ ಕಾರ್ಯಾಂಗವಿದ್ದಂತೆ. ಮಹಾಸಭೆಯು ಕೈಗೊಳ್ಳುವ ನಿರ್ಣಯಗಳ ಕುರಿತು ಸಲಹೆ ನೀಡುವುದು, ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವುದು ಇದರ ಅತಿ ಮುಖ್ಯ ಕಾರ್ಯಗಳಾಗಿವೆ.
ಭದ್ರತಾ ಮಂಡಳಿಯಲ್ಲಿ 15 ಸದಸ್ಯರಾಷ್ಟ್ರಗಳ ಪ್ರತಿನಿಧಿಗಳಿರುತ್ತಾರೆ. ಅವರಲ್ಲಿ ಅಮೇರಿಕ, ರಷ್ಯ, ಬ್ರಿಟಿನ್, ಫ್ರಾನ್ಸ್ ಮತ್ತು ಚೀನಾ ಶಾಶ್ವತ ಸದಸ್ಯರಾಷ್ಟ್ರಗಳು. ಉಳಿದ ಹತ್ತು ಸದಸ್ಯರಾಷ್ಟ್ರಗಳನ್ನು ಮಹಾಸಭೆಯು ಎರಡು ವರ್ಷಗಳ ಅವಧಿಗೆ ತಾತ್ಕಾಲಿಕ ಸದಸ್ಯರೆಂದು ಚುನಾಯಿಸುತ್ತದೆ.
ಭದ್ರತಾ ಮಂಡಳಿಯಲ್ಲಿ ಯಾವುದೇ ನಿರ್ಣಯ ಅಂಗೀಕೃತವಾಗಲು ಒಂಬತ್ತು ಸದಸ್ಯ ರಾಷ್ಟ್ರಗಳ ಒಪ್ಪಿಗೆ ಅವಶ್ಯಕ. ಆದರೆ ಶಾಶ್ವತ ಸದಸ್ಯ ರಾಷ್ಟ್ರಗಳ ಪೈಕಿ ಯಾವುದೇ ಒಂದು ರಾಷ್ಟ್ರವು ನಿರ್ಣಯವನ್ನು ವಿರೋಧಿಸಿದರೂ ಆ ನಿರ್ಣಯವು ಅಂಗೀಕರಿಸಲ್ಪಡುವುದಿಲ್ಲ. ಶಾಶ್ವತ ಸದಸ್ಯರಾಷ್ಟ್ರದ ವಿರೋಧಿಸುವ ಈ ಅಧಿಕಾರವನ್ನು `ವಿಟೋ’ ಎನ್ನುವರು.
3. ಆರ್ಥಿಕ ಮತ್ತು ಸಾಮಾಜಿಕ ಮಂಡಳಿ: ಪ್ರಪಂಚದ ಎಲ್ಲಾ ದೇಶಗಳು ಸಾಮಾನ್ಯವಾಗಿ ಎದುರಿಸುವ ಅನೇಕ ಸಮಸ್ಯೆಗಳಿವೆ. ವರ್ಣ, ಭಾಷೆ, ಧರ್ಮ, ಗಡಿಗಳ ಹಿನ್ನೆಲೆಯಲ್ಲಿ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಇದು ಹೊಂದಿದೆ.
ಅನಕ್ಷರತೆ, ಬಡತನ, ಹಸಿವು, ನಿರಾಶ್ರಿತರ ಪುನರ್ವಸತಿ, ಆರೋಗ್ಯ, ಸ್ತ್ರೀ ಸಮಾನತೆ, ಶಿಶು ಸಂರಕ್ಷಣೆ, ಮಾದಕ ವಸ್ತುಗಳ ನಿಯಂತ್ರಣ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಪರಸ್ಪರ ಸಹಕಾರ ಮತ್ತು ನೆರವನ್ನು ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯು ನೀಡುತ್ತದೆ.
4. ಅಂತಾರಾಷ್ಟ್ರೀಯ ನ್ಯಾಯಾಲಯ: ಅಂತಾರಾಷ್ಟ್ರೀಯ ನ್ಯಾಯಾಲಯವು ನೆದರ್‍ಲ್ಯಾಂಡಿನ ಹೇಗ್ ನಗರದಲ್ಲಿದೆ. ಈ ನ್ಯಾಯಾಲಯದಲ್ಲಿ ಹದಿನೈದು ಮಂದಿ ನ್ಯಾಯಾಧೀಶರಿರುತ್ತಾರೆ. ಭದ್ರತಾ ಮಂಡಳಿ ಹಾಗೂ ಮಹಾಸಭೆಯ ಸದಸ್ಯರು ಇವರನ್ನು ಚುನಾಯಿಸುತ್ತಾರೆ. ಸದಸ್ಯರಾಷ್ಟ್ರಗಳ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸುವುದು ಅಂತಾರಾಷ್ಟ್ರೀಯ ನ್ಯಾಯಾಲಯದ ಕಾರ್ಯವಾಗಿದೆ.

5. ಪ್ರಧಾನ ಕಾರ್ಯಾಲಯ: ನ್ಯೂಯಾರ್ಕಿನ ಬಳಿಯ ಲೇಕ್ ಸಕ್ಸೆಸ್ ನಗರದಲ್ಲಿ ವಿಶ್ವಸಂಸ್ಥೆಯ ಶಾಶ್ವತ ಪ್ರಧಾನ ಕಾರ್ಯಾಲಯವಿದೆ. ಮಹಾಕಾರ್ಯದರ್ಶಿಯು ಇದರ ಆಡಳಿತ ನಿರ್ವಹಣೆಯನ್ನು ಮಾಡುವ ಮುಖ್ಯ ಅಧಿಕಾರಿ. ಜಾಗತಿಕ ಶಾಂತಿಯನ್ನು ಕದಡುವ ಯಾವುದೇ ಸಂಗತಿಯನ್ನು ವಿಶ್ವಸಂಸ್ಥೆಯ ಗಮನಕ್ಕೆ ತಕ್ಷಣ ತಂದು ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಮಹಾಕಾರ್ಯದರ್ಶಿಗಿದೆ.


ಈಗಿನ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಅಂಟೊನಿಯೊ ಗುಟೆರಸ್ (ಪೋರ್ಚುಗಲ್). ಮಹಾಸಭೆಯಲ್ಲಿ ಆಯ್ಕೆಯಾದ ಅಭ್ಯರ್ಥಿಯು ಭದ್ರತಾ ಮಂಡಳಿಯ ಅನುಮೋದನೆಗೆ ಒಳಪಟ್ಟು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುತ್ತಾರೆ.

6. ಧರ್ಮದರ್ಶಿ ಮಂಡಳಿ: ವಿಶ್ವಸಂಸ್ಥೆಯು ಸ್ಥಾಪನೆಯಾದ ಕಾಲದಲ್ಲಿ ಹನ್ನೊಂದು ಪ್ರದೇಶಗಳಲ್ಲಿ ಇನ್ನೂ ಸ್ವಯಂ ಆಡಳಿತವಿರಲಿಲ್ಲ. ಇವುಗಳ ಹಿತಾಸಕ್ತಿಯನ್ನು ನೋಡಿಕೊಳ್ಳಲು ಐದು ಸದಸ್ಯರಾಷ್ಟ್ರಗಳ ಮಂಡಳಿಯನ್ನು ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿ ರಚಿಸಲಾಯಿತು. ಇದೇ ಧರ್ಮದರ್ಶಿ ಮಂಡಳಿ. 1994ರಲ್ಲಿ ಈ ಎಲ್ಲಾ ಪ್ರದೇಶಗಳು ಸ್ವತಂತ್ರಗೊಂಡಿವೆ.
ವಿಶ್ವಸಂಸ್ಥೆಯ ಧ್ವಜ ಮತ್ತು ಆಡಳಿತ ಭಾಷೆ

ವಿಶ್ವಸಂಸ್ಥೆಗೆ ತನ್ನದೇ ಆದ ಧ್ವಜವಿದೆ. ಧ್ವಜವು ತಿಳಿನೀಲಿ ಬಣ್ಣದ ಹಿನ್ನೆಲೆಯನ್ನು ಹೊಂದಿದ್ದು ಮಧ್ಯದಲ್ಲಿ ವಿಶ್ವಸಂಸ್ಥೆಯ ಲಾಂಛನವಿದೆ. ಪ್ರತಿವರ್ಷ ಅಕ್ಟೋಬರ್ 24ರಂದು ವಿಶ್ವಸಂಸ್ಥೆಯ ದಿನವನ್ನು ಪ್ರಪಂಚದ ಎಲ್ಲೆಡೆ ಆಚರಿಸಲಾಗುತ್ತದೆ.
ವಿಶ್ವಸಂಸ್ಥೆಯ ಆಡಳಿತ ಭಾಷೆಯಾಗಿ ಇಂಗ್ಲಿಷ್, ರಷ್ಯನ್, ಸ್ಪಾನಿಷ್, ಚೀನಿ, ಫ್ರೆಂಚ್, ಅರೇಬಿಕ್ ಇತ್ಯಾದಿ ಭಾಷೆಗಳು ಪ್ರಚಲಿತದಲ್ಲಿವೆ. ಸಾಮಾನ್ಯವಾಗಿ ಇಂಗ್ಲಿಷ್ ಬಳಸಲಾಗುತ್ತದೆ.
ವಿಶೇಷ ಸೇವಾಸಂಸ್ಥೆಗಳು:
ವಿಶ್ವಸಂಸ್ಥೆಯ ಆಶ್ರಯದಲ್ಲಿ ಹಲವಾರು ವಿಶೇಷ ಸೇವಾಸಂಸ್ಥೆಗಳು (ಉಪ ಅಂಗಗಳು) ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಕೆಲಸ ಮಾಡುತ್ತಿವೆ. ಕೆಲವು ಪ್ರಮುಖ ಸೇವಾಸಂಸ್ಥೆಗಳೆಂದರೆ
* ವಿಶ್ವಸಂಸ್ಥೆಯ ಶೈಕ್ಷಣಿಕ. ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಘ (United Nations Educational, cientific and Cultural Organisation – UNESCO).
ಇದರ ಪ್ರಧಾನ ಕಾರ್ಯಾಲಯ ಫ್ರಾನ್ಸಿನ ಪ್ಯಾರಿಸ್‍ನಲ್ಲಿದೆ.

* ಆಹಾರ ಮತ್ತು ಕೃಷಿ ಸಂಘ (Food and Agricultural Organisation – FAO). ಇದರ ಪ್ರಧಾನ ಕಾರ್ಯಾಲಯ ಇಟಲಿಯ ರೋಮ್ ನಗರದಲ್ಲಿದೆ.
* ವಿಶ್ವ ಆರೋಗ್ಯ ಸಂಸ್ಥೆ (World Health Organisation – WHO). ಇದರ ಪ್ರಧಾನ ಕಾರ್ಯಾಲಯ ಸ್ವಿಟ್ಜರ್‍ಲೆಂಡ್‍ನ ಜಿನೀವದಲ್ಲಿದೆ.
* ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತುನಿಧಿ (United Nations International Children’s Emergency Fund – UNICEF).
ಇದರ ಪ್ರಧಾನ ಕಾರ್ಯಾಲಯ ಅಮೇರಿಕದ ನ್ಯೂಯಾರ್ಕ್‍ನಲ್ಲಿದೆ.
ವಿಶ್ವಸಂಸ್ಥೆಯ ಸಾಧನೆಗಳು ಮತ್ತು ಮಿತಿಗಳು
* ಆರ್ಥಿಕ ಕೊಡುಗೆ: ಆರೋಗ್ಯ, ಸಾರಿಗೆ ಸಂಪರ್ಕ, ಆಹಾರ ವಿಜ್ಞಾನ, ಶಿಕ್ಷಣ ಮುಂತಾದ ರಂಗಗಳಿಗೆ ವಿಶ್ವಸಂಸ್ಥೆಯು ಅಪಾರ ಆರ್ಥಿಕ ನೆರವು ನೀಡಿದೆ.
* ಸಾಮಾಜಿಕ ಕೊಡುಗೆ: ವಿಶ್ವಸಂಸ್ಥೆಯು ಕೋಟ್ಯಂತರ ನಿರಾಶ್ರಿತರಿಗೆ ನೆರವು ಒದಗಿಸಿದೆ. ಎಳೆಯ ಮಕ್ಕಳು, ತಾಯಂದಿರು ಹಾಗೂ ದುರ್ಬಲ ವರ್ಗಗಳ ವಿಶೇಷ ಅವಶ್ಯಕತೆಗಳನ್ನು ಪೂರೈಸಿ ಮೆಚ್ಚುವಂತಹ ಸೇವೆ ಸಲ್ಲಿಸಿದೆ.
* ಮಾನವ ಹಕ್ಕುಗಳ ಘೋಷಣೆ: ಮಾನವ ಹಕ್ಕುಗಳ ಘೋಷಣೆಯು ವಿಶ್ವಸಂಸ್ಥೆಯು ಮಾಡಿರುವ ಒಂದು ವಿಶೇಷ ಸಾಧನೆಯಾಗಿದೆ. (ಡಿಸೆಂಬರ್ 10, 1948)
* ಹೊಸ ರಾಷ್ಟ್ರಗಳ ಉದಯಕ್ಕೆ ನೆರವು: ವಿದೇಶಿಯರ ಆಳ್ವಿಕೆಯಲ್ಲಿದ್ದ ಅನೇಕ ವಸಾಹತುಗಳು ಸ್ವತಂತ್ರ ರಾಷ್ಟ್ರಗಳಾಗಿ ಉದಯಿಸಲು ವಿಶ್ವಸಂಸ್ಥೆ ಶ್ರಮಿಸಿದೆ.
* ಶಾಂತಿ ಸ್ಥಾಪನೆ: ಎರಡು ಮಹಾಯುದ್ಧಗಳಿಂದ ಜರ್ಜರಿತಗೊಂಡ ಜಗತ್ತಿಗೆ ಶಾಂತಿಯ ಭರವಸೆಯನ್ನು ಕೊಡುವುದರ ಮೂಲಕ ಮತ್ತೊಂದು ಮಹಾಯುದ್ಧ ನಡೆಯದಂತೆ ವಿಶ್ವಸಂಸ್ಥೆ ತಡೆಗಟ್ಟಿದೆ. 1945ರ ನಂತರ ಅಣ್ವಸ್ತ್ರ ಬಳಕೆಯಾಗದಿರುವುದು ವಿಶ್ವಸಂಸ್ಥೆಯ ಮಹಾಸಾಧನೆಯಾಗಿದೆ.
ಜಗತ್ತಿನಲ್ಲಿ ಅನೇಕ ಕದನಗಳು ನಡೆದಿದ್ದರೂ ಅವುಗಳನ್ನು ನಿಯಂತ್ರಿಸಲು ವಿಶ್ವಸಂಸ್ಥೆ ಸಾಧ್ಯವಾದ ಎಲ್ಲ ಮಾರ್ಗಗಳನ್ನು ಅನುಸರಿಸಿದೆ.
ಮಿತಿಗಳು
* ಸೋವಿಯತ್ ರಷ್ಯದ ವಿಘಟನೆಯ ನಂತರ ಶೀತಲ ಸಮರವು ಕೊನೆಗೊಂಡಿತು. ಈ ಬದಲಾದ ಸನ್ನಿವೇಶದಲ್ಲಿ ಅಮೇರಿಕವು ಜಗತ್ತಿನ ಎಲ್ಲ ರಾಷ್ಟ್ರಗಳ ನಾಯಕ ತಾನೇ ಎಂಬಂತೆ ದೊಡ್ಡಣ್ಣನ ಮನೋಧರ್ಮವನ್ನು ಪ್ರದರ್ಶಿಸುತ್ತಿದೆ. ಇದು ಬಹುಮುಖಿ ಸಾಂಸ್ಕೃತಿಕ ಬದುಕಿಗೆ ಮಾರಕವಾಗಿದೆ.
* ವಿಶ್ವಸಂಸ್ಥೆಯ ಹಲವಾರು ನಿರ್ಣಯಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ. ತನ್ನ ಸದಸ್ಯರಾಷ್ಟ್ರಗಳ ಮಿಲಿಟರಿ ಶಕ್ತಿಯ ನೆರವಿನಿಂದಲೇ ಸಂಘರ್ಷಗಳನ್ನು ಎದುರಿಸಬೇಕಾಗಿರುವುದರಿಂದ ಸದಸ್ಯ ರಾಷ್ಟ್ರಗಳು ತಮ್ಮ ಮಿಲಿಟರಿ ಶಕ್ತಿಯನ್ನು ನೀಡಲು ನಿರಾಕರಿಸಿದ ಸಂದರ್ಭಗಳಲ್ಲಿ ಇಂತಹ ಬಿಕ್ಕಟ್ಟುಗಳು ಉಂಟಾಗಿವೆ. ವಿಶ್ವಸಂಸ್ಥೆ ಸ್ವಂತ ಸೇನಾಪಡೆಯನ್ನು ಹೊಂದಿಲ್ಲ.
* ಶಾಶ್ವತ ಸದಸ್ಯರಾಷ್ಟ್ರಗಳ ಒಪ್ಪಿಗೆ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಯಾವುದಾದರೂ ಒಂದು ಕಾಯಂ ಸದಸ್ಯರಾಷ್ಟ್ರ ಒಪ್ಪದಿದ್ದಾಗ ನಿರ್ಣಯ ಕೈಗೊಳ್ಳಲಾಗುವುದಿಲ್ಲ.
ಭಾರತ ಮತ್ತು ವಿಶ್ವಸಂಸ್ಥೆ
1945ರಲ್ಲಿ ವಿಶ್ವಸಂಸ್ಥೆಯ ಸಂವಿಧಾನಕ್ಕೆ ಸಹಿ ಹಾಕಿರುವ ದೇಶಗಳಲ್ಲಿ ಭಾರತವು ಒಂದಾಗಿತ್ತು. ಸ್ವಾತಂತ್ರ್ಯಗೊಂಡ ನಂತರ ಭಾರತವು ಜಾಗತಿಕ ವ್ಯವಹಾರಗಳಲ್ಲಿ ಸಕ್ರಿಯ ಪಾತ್ರವಹಿಸಿದೆ.
* ಆರಂಭದಿಂದಲೇ ಭಾರತವು ವರ್ಣಭೇದ ನೀತಿಯನ್ನು ವಿರೋಧಿಸಿದೆ.
* ವಸಾಹತುಶಾಹಿಯ ನಿರ್ಮೂಲನಕ್ಕಾಗಿ ಭಾರತ ಸತತ ಯತ್ನ ನಡೆಸಿದೆ.
* ಅಣ್ವಸ್ತ್ರ ಪರೀಕ್ಷೆ ಪೂರ್ಣವಾಗಿ ನಿಲ್ಲಬೇಕೆಂದು ಒತ್ತಿ ಹೇಳಿದ ದೇಶಗಳಲ್ಲಿ ಭಾರತವು ಮೊದಲನೆಯದು. ಇದಲ್ಲದೆ ಭಾರತವು ಶಸ್ತ್ರಾಸ್ತ್ರ ನಿಯಂತ್ರಣ ಹಾಗೂ ವಿಶ್ವಶಾಂತಿಯನ್ನು ಸತತವಾಗಿ ಪ್ರತಿಪಾದಿಸಿದೆ.
* ದೇಶಗಳ ನಡುವೆ ಕದನಗಳು ನಡೆದಾಗ ಶಾಂತಿ ಸ್ಥಾಪನೆಗೆ ಭಾರತ ತನ್ನ ಸೈನ್ಯದ ತುಕಡಿಗಳನ್ನು ವಿಶ್ವಸಂಸ್ಥೆಯ ನೆರವಿಗೆ ಕಳುಹಿಸಿದೆ.
* ಶ್ರೀಮತಿ ವಿಜಯಲಕ್ಷ್ಮೀ ಪಂಡಿತ್ ವಿಶ್ವಸಂಸ್ಥೆಯ ಮಹಾಸಭೆಯ ಪ್ರಥಮ ಮಹಿಳಾ ಅಧ್ಯಕ್ಷೆ.
* ಭಾರತೀಯರಾದ ಬೆನೆಗಲ್ ನರಸಿಂಗರಾವ್ ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಮತ್ತು ಡಾ|| ನಾಗೇಂದ್ರ ಸಿಂಗ್ ಮುಖ್ಯ ನ್ಯಾಯಾಧೀಶರಾಗಿ ಸ್ಮರಣೀಯ ಸೇವೆಗೈದಿದ್ದಾರೆ.
* ಕರ್ನಾಟಕದವರಾದ ಜನರಲ್ ಕೆ.ಎಸ್. ತಿಮ್ಮಯ್ಯ ಮತ್ತಿತರ ಭಾರತೀಯ ದಂಡನಾಯಕರು ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುತ್ತಾರೆ.
ಈಗ ಶಾಶ್ವತ ಸದಸತ್ವ ಹೊಂದಿರುವ ರಾಷ್ಟ್ರಗಳು ಸ್ವಹಿತಾಸಕ್ತಿಗಳ ಹಿನ್ನೆಲೆಯಲ್ಲಿ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವವನ್ನು ಕೇವಲ ಐದು ರಾಷ್ಟ್ರಗಳಿಗೆ ಸೀಮಿತಗೊಳಿಸಿವೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಖಾಯಂ ಸದಸ್ಯತ್ವ ಲಭಿಸದೆ ಇರುವುದು ವಿಪರ್ಯಾಸವೆ ಸರಿ.
ಪ್ರಶ್ನೋತ್ತರಗಳು
* * * * * *
