ಪಾಠದ ಪರಿಚಯ: ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಹಿರಿದಾದುದು. ಕರ್ನಾಟಕದ ಮುನ್ನಡೆಯಲ್ಲಿ ಕೃಷಿ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ರಾಂತಿಗಳು ನಿರ್ಣಾಯಕ ಪಾತ್ರ ವಹಿಸಿವೆ. ಇವುಗಳ ಬಗ್ಗೆ ಈ ಅಧ್ಯಾಯದಲ್ಲಿ ಸಂಕ್ಷಿಪ್ತ ಪರಿಚಯವನ್ನು ನೀಡಲಾಗಿದೆ.

ಒಬ್ಬರಿಂದ ಮತ್ತೊಬ್ಬರಿಗೆ ಅಥವಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುದ್ದಿ ಅಥವಾ ವಿಷಯವನ್ನು ತಲುಪಿಸುವ ವಿಧಾನವನ್ನು ಸಂಪರ್ಕ ವ್ಯವಸ್ಥೆ ಎಂದು ಕರೆಯಲಾಗಿದೆ. ವಿವಿಧ ಕಾಲಘಟ್ಟಗಳಲ್ಲಿ ಬೇರೆ ಬೇರೆ ಬಗೆಯ ಸಂಪರ್ಕ ಮಾಧ್ಯಮಗಳನ್ನು ನಮ್ಮ ಹಿರಿಯರು ಬಳಸುತ್ತಿದ್ದರು. ಉದಾಹರಣೆಗೆ ಪ್ರಾಚೀನಾ ಕಾಲದಲ್ಲಿ ಪಾರಿವಾಳ, ಒಂಟೆ ಮುಂತಾದವುಗಳನ್ನು ಸಂಪರ್ಕ ಮಾಧ್ಯಮವನ್ನಾಗಿಯೂ ಬಳಸಲಾಗುತ್ತಿತ್ತು.

ಆಧುನಿಕ ಕಾಲಕ್ಕೆ ಬಂದಾಗ ಸಂಪರ್ಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಉಂಟಾದವು. ಈ ಕ್ರಾಂತಿಯು ಪಾಶ್ಚಿಮಾತ್ಯ ದೇಶಗಳಿಂದ ಭಾರತಕ್ಕೆ ಬಳುವಳಿಯಾಗಿ ಬಂತು. ಅಂಚೆ ಮತ್ತು ತಂತಿ ವ್ಯವಸ್ಥೆ 20ನೇ ಶತಮಾನದ ಕೊನೆಯವರೆಗೂ ಬಹುವಾಗಿ ಬಳಕೆಯಾಗುತ್ತಿದ್ದ ಸಂಪರ್ಕ ಮಾಧ್ಯಮವಾಗಿತ್ತು. ಇಂದು ರೇಡಿಯೋ, ದೂರದರ್ಶನ, ಮೊಬೈಲ್, ಅಂತರ್ಜಾಲ ಮುಂತಾದ ಸಂಪರ್ಕ ಮಾಧ್ಯಮಗಳು ಬಹುತೇಕ ಎಲ್ಲಾ ಸಮುದಾಯಗಳನ್ನು ತಲುಪಿವೆ. ಇವುಗಳನ್ನು ಬಿಟ್ಟು ಜನರು ಬದುಕುವುದನ್ನು ಊಹಿಸಿಕೊಳ್ಳುವುದು ಕಷ್ಟ.

ಸಮೂಹ ಮಾಧ್ಯಮಗಳನ್ನು ಪ್ರಮುಖವಾಗಿ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ

* ಮುದ್ರಣ ಮಾಧ್ಯಮ * ವಿದ್ಯುನ್ಮಾನ ಮಾಧ್ಯಮ * ಮನರಂಜನಾ ಮಾಧ್ಯಮ

1. ಮುದ್ರಣ ಮಾಧ್ಯಮ: ಇಂದು ಮುದ್ರಣ ಮಾಧ್ಯಮದಲ್ಲಿ ಇಂಗ್ಲಿಷ್ ಮತ್ತು ಇತರ ಪ್ರ್ರಾದೇಶಿಕ ಭಾಷೆಗಳಲ್ಲಿ ಅಸಂಖ್ಯಾತ ಪತ್ರಿಕೆಗಳು ಪ್ರಕಟವಾಗುತ್ತಿವೆ. ದಿನಪತ್ರಿಕೆಗಳು ಅಂದಂದಿನ ಚರಿತ್ರೆಯ ದಾಖಲೆಗಳೆಂದು ಪರಿಗಣಿಸಲಾಗಿದೆ. ಈ ಪತ್ರಿಕೆಗಳು ನಗರ, ಹಳ್ಳಿ ಎನ್ನುವ ಭೇದವಿಲ್ಲದೆ ಎಲ್ಲರನ್ನು ತಲುಪುವ ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿವೆ.

ಕನ್ನಡದಲ್ಲಿ ಪ್ರಕಟವಾದ ಮೊಟ್ಟಮೊದಲ ಪತ್ರಿಕೆ `ಮಂಗಳೂರು ಸಮಾಚಾರ’. ಪತ್ರಿಕೆಗಳಲ್ಲಿ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸಿಕ ಪತ್ರಿಕೆ, ಅರ್ಧವಾರ್ಷಿಕ, ವಾರ್ಷಿಕ ಪತ್ರಿಕೆಗಳಿವೆ.

2. ವಿದ್ಯುನ್ಮಾನ ಮಾಧ್ಯಮ: 20ನೇ ಶತಮಾನದ ಕೊನೆಯ ಭಾಗದಲ್ಲಿ ವಿದ್ಯುನ್ಮಾನದ ಕ್ರಾಂತಿ ಪ್ರಾರಂಭವಾಯಿತು. `ದೂರದರ್ಶನ’ ಜನರ ಪ್ರಮುಖ ಆಕರ್ಷಣೆಯಾಯಿತು. ಈ ಮಾಧ್ಯಮವು ಅವಶ್ಯಕ ಮಾಹಿತಿಗಳ ಜೊತೆಗೆ ಬೃಹತ್ ಮನರಂಜನೆಯನ್ನು ಒದಗಿಸುತ್ತದೆ.

ವಿದ್ಯುನ್ಮಾನ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ಪ್ರಾರಂಭವಾಗಿ ವಿವಿಧ ಖಾಸಗಿ ಸಂಸ್ಥೆಗಳು ನಾಮುಂದು ತಾಮುಂದು ಎಂಬಂತೆ ರೈತರು, ಕಾರ್ಮಿಕರು, ಹೂಡಿಕೆದಾರರು, ವಿವಿಧ ಗ್ರಾಹಕರು, ವಿದ್ಯಾರ್ಥಿಗಳು ಮತ್ತು ಇತರ ವರ್ಗಗಳಿಗೆ ಬೇಕಾದ ವಿಪುಲ ಮಾಹಿತಿಯನ್ನು ಒದಗಿಸುತ್ತಿವೆ. ಇಂದು ಆಡಳಿತ ಯಂತ್ರವು ವಿದ್ಯುನ್ಮಾನಗೊಳ್ಳುತ್ತಿದೆ.

ಜಗತ್ತಿನ ಯಾವ ಮೂಲೆಯಲ್ಲಿ ಏನೇ ಘಟನೆ ಸಂಭವಿಸಿದರೂ ಅದರ ದೃಶ್ಯಾವಳಿಯನ್ನು ಕ್ಷಣ ಮಾತ್ರದಲ್ಲಿ ಕಣ್ಣ ಮುಂದೆ ಸಾದರಪಡಿಸುತ್ತದೆ. ಭೂಕಂಪ, ಪ್ರವಾಹ, ಅಪಘಾತ ಮುಂತಾದವುಗಳ ಬಗ್ಗೆ ಸುದ್ದಿಯನ್ನು ಬಿತ್ತರಿಸುತ್ತದೆ. ಅಲ್ಲದೆ ಹವಾಮಾನ ವೈಪರೀತ್ಯಗಳನ್ನು ಸಕಾಲದಲ್ಲಿ ಜನರಿಗೆ ತಲುಪಿಸುವ ಮೂಲಕ ಆಗುವ ಅನಾಹುತಗಳ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ. ದೂರದರ್ಶನವಲ್ಲದೆ ಇನ್ನಿತರ ಪ್ರಭಾವಿ ವಿದ್ಯುನ್ಮಾನ ಮಾಧ್ಯಮಗಳೆಂದರೆ ರೇಡಿಯೋ, ಮೊಬೈಲ್ ಮತ್ತು ಅಂತರ್ಜಾಲ. ಇವು ಅನೇಕರ ಬದುಕಿನ ಅವಿಭಾಜ್ಯ ಭಾಗಗಳಾಗಿವೆ. ಅಂತರ್ಜಾಲವು ನಗರ ಸಮುದಾಯಗಳಲ್ಲಿ ಹೆಚ್ಚಿಗೆ ಬಳಕೆಯಲ್ಲಿದೆ.

ಮೊಬೈಲ್ ಅಕ್ಷರಸ್ಥ ಮತ್ತು ಅನಕ್ಷರಸ್ಥರಿಬ್ಬರನ್ನೂ ತಲುಪಿರುವ ಪ್ರಭಾವಿ ಮಾಧ್ಯಮವಾಗಿದೆ. ಹಾಗೆಯೇ ರೇಡಿಯೋ ಮಾಧ್ಯಮವು ಇಂದು ಪ್ರಭಾವಿ ಮಾಧ್ಯಮವಾಗಿ ಉಳಿದಿದೆ. ಇದು ಮಾಹಿತಿ ಮತ್ತು ಮನರಂಜನೆ ಎರಡಕ್ಕೂ ಇರುವ ಪ್ರಮುಖ ಶ್ರವಣ ಮಾಧ್ಯಮವಾಗಿದೆ.

ಅಂತರ್ಜಾಲವು ಜಗತ್ತನ್ನು ಹತ್ತಿರ ಮಾಡಿದೆ. ಇದು ಕ್ಷಣ ಮಾತ್ರದಲ್ಲಿ ಜಗತ್ತಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಸುದ್ದಿಯನ್ನು ಮುಟ್ಟಿಸಲು ಇರುವ ಪ್ರಬಲ ಅಸ್ತ್ರವಾಗಿದೆ. ಇಂದು ರೂಪುಗೊಳ್ಳುತ್ತಿರುವ ಅನೇಕ ಚಳವಳಿಗಳಿಗೆ ಅಂತರ್ಜಾಲದಲ್ಲಿ ಲಭ್ಯವಿರುವ ಫೇಸ್ ಬುಕ್, ಟ್ವಿಟರ್ ಮುಂತಾದವು ವಿದ್ಯುನ್ಮಾನ ಮಾಧ್ಯಮಗಳಾಗಿವೆ. ಹೀಗೆ ವಿದ್ಯುನ್ಮಾನ ಮಾಧ್ಯಮಗಳು ನಮ್ಮ ಸಮಾಜದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.

3. ಮನರಂಜನಾ ಮಾಧ್ಯಮ: ಮನರಂಜನೆಯ ಕ್ಷೇತ್ರದಲ್ಲಿ ಸಿನಿಮಾ ಬಹು ದೊಡ್ಡ ಮಾಧ್ಯಮವಾಗಿದೆ. ಇದರೊಂದಿಗೆ ಇರುವ ಮತ್ತೊಂದು ಮಾಧ್ಯಮವೆಂದರೆ ನಾಟಕ ಪ್ರದರ್ಶನ.

ಸಿನಿಮಾ ದೃಶ್ಯ ಮಾಧ್ಯಮವಾದ್ದರಿಂದ ಎಲ್ಲಾ ವರ್ಗದ ಜನರನ್ನು ಆಕರ್ಷಿಸುತ್ತಿರುವ ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿದೆ. ಸಿನಿಮಾಗಳಲ್ಲಿ ಪ್ರಧಾನವಾಗಿ ವಾಣಿಜ್ಯ ಸಿನಿಮಾಗಳನ್ನು ಕಾಣುತ್ತೇವೆ. ಇದರೊಂದಿಗೆ ಪರ್ಯಾಯ ಸಿನಿಮಾಗಳು ಎಂದರೆ ಪ್ರಾಯೋಗಿಕ ಸಿನಿಮಾಗಳು ಇವೆ. ಪರ್ಯಾಯ ಸಿನಿಮಾಗಳು ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಸಂಶೋಧನಾ ದೃಷ್ಟಿಕೋನವನ್ನು ಹೊಂದಿರುತ್ತವೆ ಮತ್ತು ಸಾಮಾಜಿಕ ಮೂಢನಂಬಿಕೆಗಳನ್ನು ತೊಡೆದು ಹಾಕಲು ಪ್ರಯತ್ನಿಸುತ್ತವೆ. ಹೆಚ್ಚು ಜನರು ಅವುಗಳನ್ನು ನೋಡಬೇಕಾಗಿದೆ.

ಸಂಪರ್ಕ ಮಾಧ್ಯಮವು ಇಂದು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಇದು ದೇಶದ ಏಕತೆ, ಒಗ್ಗಟ್ಟು ಹಾಗೂ ಅಖಂಡತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಹಾಗೆಯೇ ವ್ಯಾಪಾರ ಮತ್ತು ವಾಣಿಜ್ಯ ಮೊದಲಾದ ಕ್ಷೇತ್ರಗಳಲ್ಲಿನ ಅಭಿವೃದ್ಧಿಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಹಿರಿದಾಗಿದೆ. ಬೃಹತ್ ಕಂಪನಿಗಳು ಇವುಗಳ ಏಕಸ್ವಾಮ್ಯಕ್ಕೆ ಪೈಪೋಟಿ ನಡೆಸುತ್ತಿವೆ.

ಪ್ರಸ್ತುತ ಸಂದರ್ಭವನ್ನು ‘ಮಾಹಿತಿ ಯುಗ’ಎಂದು ಕರೆಯುತ್ತಾರೆ. ತಂತ್ರಜ್ಞಾನದ ನೆರವಿನಿಂದ ಮಾಹಿತಿಯ ಸೃಷ್ಟಿ ಮತ್ತು ಪ್ರಸರಣದ ಪ್ರಕ್ರಿಯೆಯನ್ನು ಮಾಹಿತಿ ತಂತ್ರಜ್ಞಾನ ಎಂದು ವ್ಯಾಖ್ಯಾನಿಸಲಾಗಿದೆ.

ಗಣಕಯಂತ್ರ ತಂತ್ರಾಂಶ ಮತ್ತು ತಂತಿ ಸಂವಹನಗಳ ಸಂಯೋಜನೆ ಸಾ.ಶ. 1990ರ ದಶಕದಲ್ಲಿ ದೊಡ್ಡ ಕ್ರಾಂತಿಯನ್ನು ಸೃಷ್ಟಿಸಿತು. ಮಾಹಿತಿ ಎನ್ನುವುದು ಒಂದು ಉತ್ಪಾದಿತ ವಸ್ತುವಾಗಿ ಪರಿಗಣಿತವಾಯಿತು. ತಂತ್ರಾಂಶದ ಉತ್ಪಾದನೆಯಲ್ಲಿ ಬೆಂಗಳೂರಿನ ದೈತ್ಯ ಕಂಪನಿಗಳಾದ ಇನ್ಫೊಸಿಸ್ ಮತ್ತು ವಿಪ್ರೊಗಳ ಕೊಡುಗೆ ಅಪಾರವಾದುದು. ಬೆಂಗಳೂರನ್ನು ಸೈಬರ್ ಅಥವಾ ಸಿಲಿಕಾನ್ ನಗರವೆಂದು ಕರೆಯುವರು.

ಕರ್ನಾಟಕ ಸರಕಾರವು ಸಾ.ಶ. 1997ರಲ್ಲಿ ಮಾಹಿತಿ ತಂತ್ರಜ್ಞಾನ ಕುರಿತ ಹೊಸ ಯೋಜನೆಯನ್ನು ಸಿದ್ಧಪಡಿಸಿತು. ಹೊಸ ಕಾಯ್ದೆಯನ್ನು ಜಾರಿಗೊಳಿಸಿತು. ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ಕೈಗಾರಿಕೆ, ವ್ಯವಸಾಯ, ವ್ಯಾಪಾರ, ವಾಣಿಜ್ಯ, ಶಿಕ್ಷಣ, ಆರೋಗ್ಯ, ಕನ್ನಡ ಭಾಷೆಯ ಬೆಳವಣಿಗೆ, ಆಡಳಿತ ಮುಂತಾದ ಕ್ಷೇತ್ರಗಳಿಗೆ ಹೊಸ ರೂಪವನ್ನು ಕೊಡುವ ಪ್ರಯತ್ನವನ್ನು ಮಾಡಲಾಯಿತು. ಈ ಕ್ರಾಂತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದ ಉದ್ಯೋಗ ಸೃಷ್ಟಿಯಾಯಿತು. ಅಂತರ್ಜಾಲವು ಈ ಕ್ಷೇತ್ರದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.

ಮತ್ತೊಂದು ಮುಖ್ಯ ಬೆಳವಣಿಗೆಯೆಂದರೆ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರಗಳು ಜಂಟಿಯಾಗಿ 2000ದಲ್ಲಿ ಸೈಬರ್ ಪಾರ್ಕಿನ ಯೋಜನೆಯನ್ನು ಪ್ರಾರಂಭಿಸಿದವು. ಏಳು ಕೇಂದ್ರಗಳಲ್ಲಿ ಯುವಡಾಟ್‍ಕಾಮ್‍ನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲಾಯಿತು. ಕನ್ನಡ ಭಾಷೆಯ ಅಭಿವೃದ್ಧಿಗೆ ಸಹಾಯಕವಾಗುವ ತಂತ್ರಾಂಶಕ್ಕೆ ಶಿಷ್ಟ ಸಂಕೇತಗಳನ್ನು ಒದಗಿಸುವ ಕೀಲಿಮಣೆಯನ್ನು (Key Board) ಸೃಷ್ಟಿಸಲಾಯಿತು.

ಮಾಹಿತಿ ತಂತ್ರಜ್ಞಾನದಿಂದ ವಿವಿಧ ವರ್ಗಗಳ ಸಾಮಾಜಿಕ ಸಬಲೀಕರಣದ ಆಶಯವನ್ನು ರೂಪಿಸಲಾಗಿದೆ. ಇಡೀ ಜಗತ್ತು ಮಾಹಿತಿ ತಂತ್ರಜ್ಞಾನವನ್ನು ಅನಿವಾರ್ಯವಾಗಿ ಅವಲಂಬಿಸಲೇ ಬೇಕಾದ ಸಂದರ್ಭವನ್ನು ಇಂದು ನಾವು ಕಾಣುತ್ತಿದ್ದೇವೆ.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಕ್ಷೇತ್ರದಲ್ಲಾದ ಬದಲಾವಣೆಗಳು 20ನೇ ಶತಮಾನದ ಕೊನೆಯ ಭಾಗದಲ್ಲಿ ಆರಂಭವಾದ ಬಹುದೊಡ್ಡ ಕ್ರಾಂತಿಗಳು. ಜೀವವಿಜ್ಞಾನ ಮತ್ತು ಇತರ ಮೂಲ ವಿಜ್ಞಾನಗಳ ಅನ್ವಯಿಕ ರೂಪವನ್ನು ಜೈವಿಕ ತಂತ್ರಜ್ಞಾನವೆಂದು ಹೇಳುವರು. ಸರಳವಾಗಿ ಹೇಳುವುದಾದರೆ ಜೀವಿಗಳ ಗುಣಲಕ್ಷಣಗಳನ್ನು ಬಳಸಿಕೊಂಡು ಉಪಯುಕ್ತ ಉತ್ಪನ್ನಗಳನ್ನು ತಾಂತ್ರಿಕವಾಗಿ ಪಡೆಯುವ ಕ್ರಮವನ್ನು ಜೈವಿಕ ತಂತ್ರಜ್ಞಾನವೆನ್ನುವರು.

ಇತ್ತೀಚಿನ ದಶಕಗಳಲ್ಲಿ ಕರ್ನಾಟಕ ಒಂದು ಪ್ರಮುಖ ಜೈವಿಕ ತಂತ್ರಜ್ಞಾನದ ಕ್ಷೇತ್ರವಾಗಿದೆ. ಹಿಂದಿನಿಂದಲೂ ಜೈವಿಕ ತಂತ್ರಜ್ಞಾನವು ಅನ್ವಯಿಕ ರೂಪದಲ್ಲಿ ಚಾಲ್ತಿಯಲ್ಲಿತ್ತು. ಆದರೆ ಜೈವಿಕ ತಂತ್ರಜ್ಞಾನವು ಒಂದು ವಿಶಿಷ್ಟ ವಿಜ್ಞಾನ ಶಾಖೆಯಾಗಿ ಬೆಳೆದದ್ದು 20ನೇ ಶತಮಾನದಲ್ಲಿ. ಜೈವಿಕ ತಂತ್ರಜ್ಞಾನವು ವಿವಿಧ ಶಾಖೆಗಳಲ್ಲಿ ಮೈದಳೆಯುತ್ತಿದೆ. ಅವುಗಳೆಂದರೆ ತಳಿ ತಂತ್ರಜ್ಞಾನ, ಡಿ.ಎನ್.ಎ., ಬೆರಳಚ್ಚು ತಂತ್ರಜ್ಞಾನ (fingerprint), ಅಂಗಾಂಶ ಕೃಷಿ, ತದ್ರೂಪಿ ಸೃಷ್ಟಿ ಮುಂತಾದವು. ಸಾ.ಶ. 1997ರಲ್ಲಿ ವಿಲ್ಮಟ್ ಎಂಬ ವಿಜ್ಞಾನಿಯು ಪ್ರಪಂಚದ ಮೊಟ್ಟಮೊದಲ ತದ್ರೂಪಿ ಪ್ರಾಣಿ ಕುರಿಯೊಂದನ್ನು (ಡಾಲಿ) ಸೃಷ್ಟಿಸಿದನು. ಅನಂತರ ಅನೇಕ ತದ್ರೂಪಿಗಳು ಸೃಷ್ಟಿಯಾಗಿವೆÉ.

ಇಂದು ಇಂಧನ ಕೊರತೆ ಒಂದು ಗಂಭೀರ ಸಮಸ್ಯೆಯಾಗಿದೆ. ಗಗನಕ್ಕೇರಿದ ಇಂಧನ ಬೆಲೆಯನ್ನು ಜನರಿಂದ ಭರಿಸಲಾಗುತ್ತಿಲ್ಲ. ಇದಕ್ಕೆ ಪರ್ಯಾಯವಾಗಿ ಜೈವಿಕ ಇಂಧನವನ್ನು ತಯಾರಿಸುವ ಸಂಶೋಧನಾ ಪ್ರಯತ್ನಗಳು ವಿಪುಲವಾಗಿ ನಡೆದಿವೆ.

ಕೃಷಿ ವಲಯದಲ್ಲಿ ಜೈವಿಕ ತಂತ್ರಜ್ಞಾನದ ಅಳವಡಿಕೆಯ ಪ್ರಯತ್ನಗಳು ಭರದಿಂದ ನಡೆಯುತ್ತಿವೆ. ಕರ್ನಾಟಕದಲ್ಲಿ ಈ ಎಲ್ಲಾ ಬಗೆಯ ಪ್ರಯತ್ನಗಳು ನಡೆದಿವೆ. ಬೆಂಗಳೂರು ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಜೈವಿಕ ತಂತ್ರಜ್ಞಾನ ಪಾರ್ಕುಗಳನ್ನು ಸ್ಥಾಪಿಸಲಾಗಿದೆ. ಹಾಗೆಯೇ ತೀರ ಪ್ರದೇಶಗಳ ಜೈವಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಸಲುವಾಗಿ ಕಾರವಾರದಲ್ಲಿ ಜೈವಿಕ ತಂತ್ರಜ್ಞಾನ ಕೇಂದ್ರವೊಂದನ್ನು ಸ್ಥಾಪಿಸಲಾಗಿದೆ. ಕೃಷಿ ಜೈವಿಕ ತಾಂತ್ರಿಕ ಸಂಸ್ಥೆಯನ್ನು ಧಾರವಾಡದಲ್ಲಿ ಸ್ಥಾಪಿಸಲಾಗಿದೆ. ಖಾಸಗಿ ಕ್ಷೇತ್ರದಲ್ಲಿ ಬಯೋಕಾನ್‍ನಂತಹ ಬೃಹತ್ ಕಂಪನಿಗಳು ಕಾರ್ಯನಿರತವಾಗಿವೆ. ಈ ಬೆಳವಣಿಗೆಗಳು ನಮ್ಮ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳ ಮೇಲೆ ದೂರಗಾಮಿ ಪರಿಣಾಮಗಳನ್ನು ಉಂಟುಮಾಡುತ್ತಿವೆ.

ಭೂಮಿಯೆಂದರೆ ನೈಸರ್ಗಿಕ ಸಂಪನ್ಮೂಲಗಳಾದ ನೆಲ, ಜಲ, ಖನಿಜ, ಅರಣ್ಯ, ಅಣು ಹಾಗೂ ಶಕ್ತಿ ಸಂಪನ್ಮೂಲಗಳ ಸಂಯೋಜನೆ. ಇವುಗಳನ್ನು ಸಮರ್ಥವಾಗಿ ಬಳಸಿಕೊಂಡಾಗ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಭಾರತದ ಬಹುತೇಕ ಕುಟುಂಬಗಳು ತಮ್ಮ ಬದುಕಿನ ಪೆÇೀಷಣೆಗಾಗಿ ಕೃಷಿಯನ್ನೇ ಅವಲಂಬಿಸಿವೆ. ಕರ್ನಾಟಕದ ಸ್ಥಿತಿಯೂ ಕೂಡ ಇದಕ್ಕೆ ಹೊರತಾಗಿಲ್ಲ.

ವ್ಯವಸಾಯವು ನಮಗೆ ಬೇಕಾದ ಆಹಾರ ಧಾನ್ಯಗಳನ್ನು ಪೂರೈಸುತ್ತದೆ. ಕೈಗಾರಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು ಸರಬರಾಜು ಮಾಡುತ್ತದೆ. ಅದು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ; ಕೈಗಾರಿಕಾ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಲ್ಪಿಸುತ್ತದೆ; ಮತ್ತು ತಲಾ ಆದಾಯ ಹಾಗೂ ರಾಷ್ಟ್ರೀಯ ಆದಾಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಎಲ್ಲಾ ದೃಷ್ಟಿಯಿಂದ ಕೃಷಿಯು ರಾಷ್ಟ್ರದ ಆರ್ಥಿಕತೆಯ ಮೂಲ ಜೀವಾಳವಾಗಿದೆ.

ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣವು ಸುಮಾರು 1,90,000 ಚ.ಕಿ.ಮೀ. ಆಗಿದೆ. ಭೂವಿಸ್ತೀರ್ಣದ ದೃಷ್ಟಿಯಿಂದ ಕರ್ನಾಟಕವು ಭಾರತದಲ್ಲಿ ಏಳನೆಯ ದೊಡ್ಡ ರಾಜ್ಯವಾಗಿದೆ.

ಭೂಮಿಯನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಉಪಯೋಗಿಸಲಾಗುತ್ತಿದೆ. ಕರ್ನಾಟಕವು ಸುಮಾರು 19 ಮಿಲಿಯನ್ (19,060,620) ಹೆಕ್ಟೇರ್‍ಗಳಷ್ಟು ಭೂಮಿಯನ್ನು ಹೊಂದಿದೆ. ಆದರೆ ಇದರಲ್ಲಿ ಸುಮಾರು 11 ಮಿಲಿಯನ್ ಹೆಕ್ಟೇರು ಪ್ರದೇಶ ಮಾತ್ರ ಸಾಗುವಳಿಗೆ ಯೋಗ್ಯವಾಗಿದೆ. ಸಾಗುವಳಿಗೆ ಬಳಸಲು ಯೋಗ್ಯವಾದ ಪ್ರದೇಶವು ಒಟ್ಟು ಭೂಮಿಯ ಶೇ.58ರಷ್ಟಿದೆ. ಕೃಷಿಯೇತರ ಭೂಮಿ ಶೇ.11 ಮತ್ತು ಅರಣ್ಯ ಪ್ರದೇಶ ಶೇ.19ರಷ್ಟಿದೆ.

1. ನೀರಾವರಿ ವ್ಯವಸ್ಥೆ: ಕರ್ನಾಟಕದ ಕೃಷಿ ಉತ್ಪನ್ನಗಳ ಬೆಳವಣೆಗೆಗಾಗಿ ಅನೇಕ ನೀರಾವರಿ ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ. ತುಂಗಭದ್ರಾ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಭದ್ರಾ ಯೋಜನೆ, ಘಟಪ್ರಭಾ ಯೋಜನೆ, ಮಲಪ್ರಭಾ ಯೋಜನೆ, ಹೇಮಾವತಿ, ಹಾರಂಗಿ, ವಾಣಿವಿಲಾಸ, ಕಾರಂಜಾ, ವಾರಾಹಿ, ಬೆಣ್ಣೆತೊರೆ ಮತ್ತು ಹಿಪ್ಪರಗಿ ಮುಂತಾದವು ಪ್ರಮುಖ ಯೋಜನೆಗಳಾಗಿವೆ. ಇರುವ ನೀರನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳಲು ಮತ್ತಷ್ಟು ಸುಧಾರಣೆಗಳನ್ನು ತರಬೇಕಾಗಿದೆ.

2011ರ ಆರ್ಥಿಕ ಸಮೀಕ್ಷೆಯ ಪ್ರಕಾರ ಕರ್ನಾಟಕವು ಕೃಷಿ ಉತ್ಪಾದನೆಯಲ್ಲಿ 5ನೇ ಸ್ಥಾನವನ್ನು ಪಡೆದಿದೆ.

2. ಮಣ್ಣಿನ ಸಂರಕ್ಷಣೆಗೆ ಒತ್ತು: ಗಾಳಿ, ಮಳೆ ಮತ್ತು ಪ್ರವಾಹ ಮೊದಲಾದ ನೈಸರ್ಗಿಕ ಕ್ರಿಯೆಗಳಿಂದ ಮಣ್ಣಿನ ಫಲವತ್ತಾದ ಮೇಲಿನ ಪದರು ಕಳಚಿ ಹೋಗುವುದಕ್ಕೆ `ಮಣ್ಣಿನ ಸವಕಳಿ’ ಎನ್ನುತ್ತಾರೆ. ಅರಣ್ಯ ನಾಶ, ದೋಷಪೂರಿತ ಬೇಸಾಯ ಪದ್ಧತಿ ಮೊದಲಾದ ಕಾರಣಗಳಿಂದಲೂ ಮಣ್ಣಿನ ಸವಕಳಿ ಉಂಟಾಗುತ್ತದೆ. ಕರ್ನಾಟಕ ಸರ್ಕಾರವು ರೈತರನ್ನು ಈ ಸಂಕಷ್ಟದಿಂದ ಪಾರುಮಾಡಲು ಹಲವು ಮಾರ್ಗಸೂಚಿಗಳನ್ನು ನೀಡಿದೆ. ಬಾನುಲಿಗಳಲ್ಲಿ ಹಾಗೂ ದೂರದರ್ಶನಗಳಲ್ಲಿ ಬಿತ್ತರಗೊಳ್ಳುವ `ಕೃಷಿರಂಗ’ ಕಾರ್ಯಕ್ರಮಗಳಲ್ಲಿ ರೈತರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ.

3. ಸಾವಯವ ಕೃಷಿ ಪದ್ಧತಿಗೆ ಪ್ರೋತ್ಸಾಹ: ಆಧುನಿಕ ಕೃಷಿ ಪದ್ಧತಿಯನ್ನು ಅನುಷ್ಠಾನಗೊಳಿಸಿ ಕೃಷಿ ಉತ್ಪನ್ನ ಪ್ರಮಾಣ ಹೆಚ್ಚಿಸಲಾಗುತ್ತಿದೆ. ರಾಸಾಯನಿಕ ಗೊಬ್ಬರ ಹಾಗೂ ಕೀಟ ನಾಶಕಗಳ ಅತಿಯಾದ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಜನರು ಮನಗಂಡಿದ್ದಾರೆ. ಇತ್ತೀಚೆಗೆ ನಡೆದ ಪರಿಸರ ಸಂರಕ್ಷಣ ಚಳವಳಿಗಳು ಸರ್ಕಾರದ ಕಣ್ಣು ತೆರೆಸುವ ಪ್ರಯತ್ನಗಳಾಗಿವೆ. ಸಾವಯವ ಗೊಬ್ಬರಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸರ್ಕಾರ ಕ್ರಮಕೈಗೊಂಡಿದೆ.

2011ರಲ್ಲಿ ಕರ್ನಾಟಕದಲ್ಲಿ ಕೃಷಿಯನ್ನು ಅವಲಂಬಿಸಿದವರ ಸಂಖ್ಯೆ ಶೇ.49

ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಪಾತ್ರ ಹಿರಿದಾದುದು. ಕೈಗಾರಿಕೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಸಣ್ಣ ಕೈಗಾರಿಕೆಗಳು, ಮಧ್ಯಮ ಕೈಗಾರಿಕೆಗಳು ಮತ್ತು ಬೃಹತ್ ಕೈಗಾರಿಕೆಗಳು. ವಿವಿಧ ಉದ್ಯಮಗಳು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸುವುದು ಹಾಗೂ ಅವುಗಳಿಗೆ ಸಂಬಂಧಿಸಿದ ಸಾರಿಗೆ, ಸಂಪರ್ಕ ಮೊದಲಾದ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದಕ್ಕೆ `ಕೈಗಾರಿಕೀಕರಣ’ ಎನ್ನುತ್ತೇವೆ. ಇದೊಂದು ನಿರಂತರ ಪ್ರಕ್ರಿಯೆ. ಹೊಸ ಹೊಸ ಉದ್ದಿಮೆಗಳು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸುತ್ತಾ ಹೋದಂತೆ ಅವುಗಳಿಗೆ ಬೇಕಾದ ಮೂಲಭೂತ ವ್ಯವಸ್ಥೆಗಳನ್ನು (ಉದಾ: ವಿದ್ಯುತ್ ಸ್ಥಾವರಗಳ ಸ್ಥಾಪನೆ, ಸಾರಿಗೆ, ಸಂಪರ್ಕ) ಅಭಿವೃದ್ಧಿಪಡಿಸಲೇಬೇಕಾಗುತ್ತದೆ. ಕರ್ನಾಟಕವು ಈ ದಿಸೆಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ಆದರೆ ತೀವ್ರವಾದ ವಿದ್ಯುಚ್ಛಕ್ತಿ ಬೇಡಿಕೆಯನ್ನು ಪೂರೈಸುವಲ್ಲಿ ಅದು ಇನ್ನೂ ಹಿಂದಿದೆ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಬಹುಬಗೆಯ ಉದ್ದಿಮೆಗಳನ್ನು ಸ್ಥಾಪಿಸಲಾಗಿದೆ.

ಕರ್ನಾಟಕದ ಪ್ರಮುಖ ಕೈಗಾರಿಕೆಗಳೆಂದರೆ:

* ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ

* ಹತ್ತಿಬಟ್ಟೆ ಕೈಗಾರಿಕೆ

* ಸಕ್ಕರೆ ಕೈಗಾರಿಕೆ

* ವಿದ್ಯುನ್ಮಾನ ಕೈಗಾರಿಕೆ

* ಅಲ್ಯೂಮಿನಿಯಂ ಕೈಗಾರಿಕೆ

* ರೇಷ್ಮೆ ಕೈಗಾರಿಕೆ

* ಕಾಗದ ಕೈಗಾರಿಕೆ

* ಸಿಮೆಂಟ್ ಕೈಗಾರಿಕೆ ಇತ್ಯಾದಿಗಳು

ಈ ಉದ್ಯಮಗಳು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಿದ್ದಲ್ಲದೆ ವಿದೇಶಿ ವಿನಿಮಯವನ್ನು ಪಡೆಯುವಲ್ಲಿಯೂ ನೆರವಾಗಿವೆ. ಆದರೂ ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳ ಬೆಳವಣಿಗೆಗಳಲ್ಲಿ ಸಮನ್ವಯತೆ ಮತ್ತು ಸಮತೋಲನಗಳನ್ನು ಕಾಪಾಡಿಕೊಳ್ಳುವ ಅವಶ್ಯಕತೆಯಿದೆ.

ಗೃಹ ಮತ್ತು ಸಣ್ಣ ಕೈಗಾರಿಕೆಗಳು ಕರ್ನಾಟಕದ ಆರ್ಥಿಕ ವ್ಯವಸ್ಥೆಯ ಜೀವಾಳ. ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಈ ಕೈಗಾರಿಕೆಗಳೇ ಆಧಾರ ಸ್ತಂಭಗಳು. ಮಹಾತ್ಮ ಗಾಂಧೀಜಿಯವರ ಹೇಳಿಕೆಯ ಪ್ರಕಾರ “ಗೃಹಕೈಗಾರಿಕೆಗಳೇ ದೇಶವನ್ನು ಪ್ರಗತಿ ಪಥದತ್ತ ಕೊಂಡ್ಯೊಯುವ ದೀವಟಿಕೆಗಳು”. ಕರ್ನಾಟಕ ಸರ್ಕಾರವು ಗೃಹ ಕೈಗಾರಿಕೆ ಹಾಗೂ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹಿಸಲು ವಿವಿಧ ರೀತಿಯ ಸಹಾಯಹಸ್ತ ನೀಡುತ್ತಿದೆ. ಇದಕ್ಕಾಗಿ ಅನೇಕ ನಿಗಮಗಳನ್ನು ಸ್ಥಾಪಿಸಿದೆ. ಉದಾ: ತೆಂಗಿನನಾರು ಅಭಿವೃದ್ಧಿ ನಿಗಮ, ಗೇರುಬೀಜ ಅಭಿವೃದ್ಧಿ ನಿಗಮ, ಮುಂತಾದವು.

ಸಾರ್ವಜನಿಕ ಹಾಗೂ ಖಾಸಗಿ ರಂಗಗಳಲ್ಲಿ ಕೈಗಾರಿಕೆಗಳ ಸ್ಥಾಪನೆ, ಬಂಡವಾಳ ಹೂಡುವಿಕೆ, ಕೈಗಾರಿಕೆಗಳಿಗೆ ವಿದೇಶಿ ನೆರವು ನೀಡಿಕೆ, ಕೈಗಾರಿಕಾ ತೆರಿಗೆ, ಕಾರ್ಮಿಕರ ಬಳಕೆ, ಅವರ ರಕ್ಷಣೆ ಇತ್ಯಾದಿ ಅಂಶಗಳೆಲ್ಲವೂ ಕೈಗಾರಿಕಾ ನೀತಿಯ ವ್ಯಾಪ್ತಿಗೆ ಒಳಪಡುತ್ತವೆ. ಸಾ.ಶ. 1948ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ನೀತಿಯ ಹಿನ್ನೆಲೆಯಲ್ಲಿ ಕರ್ನಾಟಕದ ಕೈಗಾರಿಕಾ ನೀತಿಗಳು ರೂಪುಗೊಂಡಿವೆ. ರಾಜ್ಯದ ಕೈಗಾರಿಕಾ ನೀತಿಯು ತನ್ನಲ್ಲಿ ದೊರೆಯುವ ಸಂಪನ್ಮೂಲಗಳನ್ನು ಆಧರಿಸಿ ರೂಪುಗೊಂಡಿದೆ. ಸಾ.ಶ. 1956, ಸಾ.ಶ. 1977 ಮತ್ತು ಸಾ.ಶ. ಸಾ.ಶ. 1980ರಲ್ಲಿ ಪ್ರಮುಖ ಕೈಗಾರಿಕಾ ನೀತಿಗಳನ್ನು ಕೇಂದ್ರ ಸರಕಾರಗಳು ಜಾರಿಗೊಳಿಸಿದವು.

ಕರ್ನಾಟಕ ಸರ್ಕಾರವು ಸಾ.ಶ. 1996ರಲ್ಲಿ ತನ್ನದೇ ಆದ ಕೈಗಾರಿಕಾ ನೀತಿಯನ್ನು ರೂಪಿಸಿತು. ಇದರಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಕ್ರಿಯಾತ್ಮಕ ಸಹಭಾಗಿತ್ವಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಕೈಗಾರಿಕಾ ಉದ್ಯಾನ (ಇಂಡಸ್ಟ್ರಿಯಲ್ ಪಾರ್ಕ್), ವಿಮಾನ ನಿಲ್ದಾಣ ಇತ್ಯಾದಿ ಮೂಲಸೌಕರ್ಯಗಳ ಸೃಷ್ಟಿಯ ಬಗ್ಗೆ ಅಂದಾಜು ಮಾಡಿ ಯೋಜನೆಯನ್ನು ರೂಪಿಸಲು ಸರ್ಕಾರವು ಕ್ರಮಕೈಗೊಂಡಿದೆ. ನಂತರ 2001ರಲ್ಲಿ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿ ಮಾರುಕಟ್ಟೆಗಳ ಬೆಳವಣಿಗೆಗೆ ಉತ್ತೇಜನ, ತಂತ್ರಜ್ಞಾನ ಕ್ಷೇತ್ರದ ಉದ್ದಿಮೆಗಳ ಉನ್ನತೀಕರಣ, ಕೃಷಿ ತೋಟಗಾರಿಕೆ, ಪಶುಸಂಗೋಪನೆ, ಖನಿಜ ಹಾಗೂ ಮಾನವ ಸಂಪನ್ಮೂಲ ಬೆಳವಣಿಗೆ ಮುಂತಾದ ಕ್ಷೇತ್ರಗಳಿಗೆ ಸರ್ಕಾರವು ಉತ್ತೇಜನ ನೀಡಿತು.

ಪ್ರಾಕೃತಿಕ ಸೌಂದರ್ಯವನ್ನು ಹಾಳುಗೆಡಹದೆ, ಪರಿಸರ ಮಾಲಿನ್ಯಕ್ಕೆ ಎಡೆಕೊಡದೆ, ನೈಸರ್ಗಿಕ ಸಂಪನ್ಮೂಲಗಳನ್ನು ನಾಶಮಾಡದೆ ಸದ್ಬಳಕೆ ಮಾಡಿಕೊಂಡು ಬೆಳೆಯುವ ಕೈಗಾರಿಕೆಗಳು ಜನಸಮುದಾಯದ ಅಭಿವೃದ್ಧಿಗೆ ಪೂರಕವಾಗುತ್ತವೆ. ಅಂತಹ ಆಶಯಗಳನ್ನು ಬಿಟ್ಟು ಆಗುವ ಎಲ್ಲಾ ಕೈಗಾರಿಕಾ ಬೆಳವಣಿಗೆಗಳು ಅಭಿವೃದ್ಧಿಗೆ ಮಾರಕವಾಗಿರುತ್ತವೆ. ಕೈಗಾರಿಕೆಗಳ ಬೆಳವಣಿಗೆಗಳು ಮನುಷ್ಯನ ಬದುಕಿಗೆ ಮಾರಕವಾಗದೆ ಪೂರಕವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಸರ್ಕಾರಗಳ ಹಾಗೂ ನಮ್ಮ ಕರ್ತವ್ಯವೂ ಆಗಿದೆ.

ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆ | 7ನೇ ತರಗತಿ | Vividha kshetragalalli munnade question answer |