ಕರ್ನಾಟಕ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆ – ಅಧ್ಯಾಯ 20
ಪಾಠದ ಪರಿಚಯ: ಈ ಅಧ್ಯಾಯದಲ್ಲಿ ಕರ್ನಾಟಕದಲ್ಲಿ ಸ್ವಾತಂತ್ರ್ಯಾನಂತರದ ಕಾಲಘಟ್ಟದಲ್ಲಿ ಆದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಮೂಲ ಅಂಶಗಳನ್ನು ತಿಳಿಯುವ ಪ್ರಯತ್ನ ಮಾಡಲಾಗಿದೆ.
ಕೆಲವು ವರ್ಗಗಳು ಅಭಿವೃದ್ಧಿಯ ಸಿಂಹಪಾಲನ್ನು ಪಡೆದರೆ ಉಳಿದವು ವಿವಿಧ ಕಾರಣಗಳಿಗಾಗಿ ಅಭಿವೃದ್ಧಿಯಿಂದ ದೂರ ಉಳಿದಿವೆ. ಇದರ ಪರಿಣಾಮವೇ ಸಾಮಾಜಿಕ ಅಸಮತೋಲನ. ಇದನ್ನು ಹೋಗಲಾಡಿಸಲು ಸಂವಿಧಾನದ ಆಶಯಗಳ ಚೌಕಟ್ಟಿನಲ್ಲಿ ಸರ್ಕಾರವು ಭೂಸುಧಾರಣೆಗಳು, ಹಿಂದುಳಿದ ವರ್ಗಗಳ ಆಯೋಗಗಳ ನೇಮಕಾತಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಭೂಸುಧಾರಣೆ

ಭೂಮಿಯ ಹಿಡುವಳಿಗಳಲ್ಲಿ ಇರುವ ಸಮಸ್ಯೆಗಳನ್ನು ಹೋಗಲಾಡಿಸಲು ಜಾರಿಗೊಳಿಸಲಾಗಿರುವ ಕ್ರಮಗಳನ್ನು ಭೂಸುಧಾರಣೆ ಎನ್ನುವರು. ಭೂಮಿಯು ಮನುಷ್ಯನ ಬದುಕಿನ ಅವಿಭಾಜ್ಯ ಅಂಗ. ಅವನು ತನ್ನ ಬದುಕನ್ನು ರೂಪಿಸಿಕೊಳ್ಳಲು ಭೂಮಿಯನ್ನು ಅವಲಂಬಿಸಿದ್ದಾನೆ. ಆದರೆ ಭೂಮಿಯು ಎಲ್ಲಾ ಸಮುದಾಯಗಳಿಗೆ ಸಮಾನವಾಗಿ ಹಂಚಿಕೆಯಾಗಿಲ್ಲ. ಈ ಭೂಒಡೆತನದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಭೂಸುಧಾರಣೆಯನ್ನು ಕೈಗೊಳ್ಳಲಾಯಿತು.
ಹಿಂದೆ ಭೂಮಾಲಿಕರ ಪರವಾದ ಕಾನೂನುಗಳು ಇದ್ದವೇ ವಿನಹ ಗೇಣಿದಾರನ ಪರವಾದ ಕಾನೂನುಗಳು ಇರಲಿಲ್ಲ. ಇದರಿಂದ ಸಂಪತ್ತಿನ ಕ್ರೋಢೀಕರಣ ಮತ್ತು ಹಂಚಿಕೆಯಲ್ಲಿ ಗಣನೀಯ ಅಸಮತೋಲನ ಏರ್ಪಟ್ಟಿತು. ಭೂಸುಧಾರಣೆಯ ಮೂಲಕ ಸಮ ಸಮಾಜವನ್ನು ರೂಪಿಸುವ ಪ್ರಯತ್ನವನ್ನು 1970ರ ದಶಕದಲ್ಲಿ ಕಾಣುತ್ತೇವೆ. ಕೂಲಿ ರೈತರ ಮತ್ತು ದಲಿತ ಚಳವಳಿಗಳ ಪರಿಣಾಮವಾಗಿ ಭೂಹಂಚಿಕೆಯ ಪ್ರಶ್ನೆಗಳು ಉದ್ಭವಿಸಿದವು. ಭೂಹೀನ ಕೆಳ ಸಮುದಾಯಗಳಿಗೆ ಭೂಮಿಯನ್ನು ನೀಡಬೇಕೆಂದು ಆಗ್ರಹಿಸಿ ಅನೇಕ ಹೋರಾಟಗಳು ನಡೆದವು. ಇದರ ಪರಿಣಾಮವಾಗಿ ಭೂಸುಧಾರಣೆಗಳು ಜಾರಿಯಾದವು. ಈ ಸುಧಾರಣೆಗಳ ಪ್ರಮುಖ ಅಂಶಗಳು ಇವಾಗಿವೆ.
1. ಜಮೀನ್ದಾರಿ ಪದ್ಧತಿಯ ನಿರ್ಮೂಲನ: ಭೂಮಿಯ ಮೇಲಿನ ಭೂಮಾಲೀಕ ವರ್ಗದ ಹಿಡಿತವನ್ನು ಮಿತಿಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ. 1955ರಲ್ಲಿ ಭಾರತದ ಮಾಜಿ ಉಪರಾಷ್ಟಪತಿ ಬಿ.ಡಿ. ಜತ್ತಿಯವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಭೂಸುಧಾರಣೆಯನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಲವು ಶಿಫಾರಸುಗಳನ್ನು ಮಾಡಿತು. ಈ ಸಮಿತಿಯು ಪ್ರತಿ ಕುಟುಂಬಕ್ಕೆ ಗರಿಷ್ಠ ಪ್ರಮಾಣ, ಅಂದರೆ 116 ಎಕರೆ ಒಣ ಭೂಮಿಯನ್ನು ಅಥವಾ 27 ಎಕರೆ ನೀರಾವರಿ ಭೂಮಿಯನ್ನು ಹೊಂದಬಹುದೆಂದು ಶಿಫಾರಸು ಮಾಡಿತು. ಈ ಶಿಫಾರಸುಗಳು ಉಳ್ಳವರ ಪರವಾಗಿದ್ದವು. ಸಾ.ಶ. 1957ರಲ್ಲಿ ಜಾರಿಗೊಂಡ ಈ ಶಿಫಾರಸುಗಳು ಇದ್ದ ವ್ಯವಸ್ಥೆಯನ್ನು ನಿರ್ಣಾಯಕವಾಗಿ ಬದಲಾಯಿಸಲು ಸಾಧ್ಯವಾಗಲಿಲ್ಲ. ಸಾ.ಶ. 1974ರ ಭೂಸುಧಾರಣೆ ಕಾನೂನುಗಳು ಈ ಪದ್ಧತಿಯನ್ನು ಹೋಗಲಾಡಿಸುವಲ್ಲಿ ನಿರ್ಣಾಯಕವಾದವು.
ಒಂದು ಎಕರೆಗೆ 100 ಸೆಂಟ್ಸ್ ಅಥವಾ 40 ಗುಂಟೆ.
2. ಗೇಣಿ ಪದ್ಧತಿಯಲ್ಲಿ ಸುಧಾರಣೆ: ಭಾರತದ ಗೇಣಿದಾರರು ಅನೇಕ ಸಮಸ್ಯೆಯನ್ನು ಎದುರಿಸುತ್ತಿದ್ದರು. ಅವುಗಳೆಂದರೆ ಹೆಚ್ಚಿನ ಪ್ರಮಾಣದ ಗೇಣಿ, ಭೂಹಿಡುವಳಿಯಲ್ಲಿ ಅಭದ್ರತೆ ಮತ್ತು ಒಡೆತನವಿಲ್ಲದ ಭೂಹೀನ ಸ್ಥಿತಿ. ಈ ಸಮಸ್ಯೆಯನ್ನು ಹೋಗಲಾಡಿಸಲು ಸಾ.ಶ. 1974ರಲ್ಲಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರು ಭೂಹಿಡುವಳಿ ಬಗ್ಗೆ ಕ್ರಾಂತಿಕಾರಕ ಕಾನೂನನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದರು. ಇದರಂತೆ ‘ಊಳುವವನೆ ಭೂಮಿಯ ಒಡೆಯ’ನಾದನು. ತಲೆಮಾರುಗಳಿಂದ ಗೇಣಿಯನ್ನು ಮಾಡುತ್ತಿದ್ದ ಅನೇಕ ಭೂಹೀನರು ನವಭೂಮಾಲೀಕರಾದರು.
ಸಾ.ಶ. 1974ರ ಭೂಸುಧಾರಣಾ (ತಿದ್ದುಪಡಿ) ಕಾಯ್ದೆಯ ಪ್ರಮುಖ ಅಂಶಗಳು:
1. ಅದು ಎಲ್ಲ ರೀತಿಯ ಗೇಣಿಯನ್ನು ರದ್ದುಗೊಳಿಸಿತು.
2. ರೈತನಿಗೆ ತಾನು ಉಳುಮೆ ಮಾಡುತ್ತಿದ್ದ ಭೂಮಿಯ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಲು ಅವಕಾಶ ನೀಡಲಾಯಿತು.
3. ಗೇಣಿಯ ಎಲ್ಲ ಭೂಮಿಯು ಸರಕಾರದ ಸ್ವಾಧೀನಕ್ಕೆ ಸೇರಿತು. ಭೂಮಿಯ ಮೇಲೆ ಹಕ್ಕನ್ನು ಪಡೆಯಬಯಸುವವರು ಮತ್ತು ಪರಿಹಾರ ಪಡೆಯಬೇಕಾದವರು ನ್ಯಾಯಮಂಡಳಿಯ (ಟ್ರಿಬ್ಯೂನಲ್) ಮೂಲಕ ಅರ್ಜಿ ಹಾಕಬೇಕಿತ್ತು.
4. ನ್ಯಾಯಮಂಡಳಿಯ ನಿರ್ಧಾರ ಅಂತಿಮವಾಗಿತ್ತು. ಅದರ ನಿರ್ಧಾರವನ್ನು ಉಚ್ಚ ನ್ಯಾಯಾಲಯದಲ್ಲಿ ಮಾತ್ರ ಪ್ರಶ್ನಿಸಬಹುದಾಗಿತ್ತು.
3. ಗರಿಷ್ಠ ಹಿಡುವಳಿಯ ಮಿತಿ: ಸಾ.ಶ. 1957ರ ನಂತರದಲ್ಲಿ ಆದ ಪ್ರಮುಖ ಪ್ರಯತ್ನಗಳು ಸಾ.ಶ. 1970ರ ದಶಕದಲ್ಲಿ ನಡೆದವು. ಒಂದು ಕುಟುಂಬ ಹೊಂದಬಹುದಾದ ಭೂಮಿಯ ಗರಿಷ್ಠ ಮಿತಿಯನ್ನು ಅಂದಿನ ರಾಜ್ಯ ಸರ್ಕಾರ ನಿಗದಿಪಡಿಸಿತು.
ಸಾ.ಶ. 1974ರಲ್ಲಿ ಭೂಮಿಯ ಗರಿಷ್ಠ ಮಿತಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲಾಯಿತು. ನೀರಿನ ಸೌಕರ್ಯವಿಲ್ಲದ ಖುಷ್ಕಿ ಭೂಮಿಯಾಗಿದ್ದರೆ ಅದರ ಮಿತಿ ಒಂದು ಕುಟುಂಬಕ್ಕೆ 54 ಎಕರೆಗಳಾಗಿರಬೇಕು. ನೀರಾವರಿ ಸೌಕರ್ಯವಿದ್ದು ಎರಡು ಅಥವಾ ಅದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯುತ್ತಿದ್ದರೆ ಪ್ರತಿ ಕುಟುಂಬಕ್ಕೆ 10ರಿಂದ 18ಎಕರೆಗಳು. ಒಂದು ಬೆಳೆ ತೆಗೆಯುವ ನೀರಾವರಿ ಭೂಮಿಯಾದರೆ ಒಂದು ಕುಟುಂಬಕ್ಕೆ ಗರಿಷ್ಠ 27 ಎಕರೆ ನಿಗದಿಪಡಿಸಲಾಗಿತ್ತು. ಜೊತೆಗೆ ಸಾ.ಶ. 1977ರಲ್ಲಿ ಇನಾಂ ರದ್ದತಿ ಕಾಯ್ದೆ ಜಾರಿಗೆ ಬಂದಿತು.
4. ಆರ್ಥಿಕ ಹಿಡುವಳಿಗಳ ರಚನೆ: ಯಾವ ಹಿಡುವಳಿಯಿಂದ ಬೇಸಾಯಗಾರನು ಬೇಸಾಯ ವೆಚ್ಚಗಳನ್ನು ಕಳೆದು ತನಗೂ ತನ್ನ ಕುಟುಂಬಕ್ಕೂ ನೆಮ್ಮದಿಯಾಗಿರಲು ಬೇಕಾದ ಆದಾಯ ಗಳಿಸಬಲ್ಲನೋ ಅಂತಹ ಜೀವನಾಧಾರ ಹಿಡುವಳಿಯನ್ನು `ಆರ್ಥಿಕ ಹಿಡುವಳಿ’ ಎನ್ನುತ್ತಾರೆ. ಹಿಡುವಳಿಗಳ ಕ್ರೋಢೀಕರಣ ಮತ್ತು ಗರಿಷ್ಠ ಪ್ರಮಾಣದ ಮಿತಿಯಿಂದ ಅನೇಕ ಕೃಷಿಕರ ಜೀವನಮಟ್ಟ ಸುಧಾರಿಸಿತು.
5. ಸಹಕಾರಿ ಬೇಸಾಯ ಅಭಿವೃದ್ಧಿ: ರೈತರು ಸ್ವಯಂಪ್ರೇರಣೆಯಿಂದ ಸಹಕಾರಿ ಸಂಘಗಳನ್ನು ಸ್ಥಾಪಿಸಿಕೊಂಡು ತಮ್ಮ ಎಲ್ಲಾ ಹಿಡುವಳಿಯನ್ನು ಸಹರೈತರ ಉಸ್ತುವಾರಿಗೆ ಒಪ್ಪಿಸಿ ಒಟ್ಟಾಗಿ ಸೇರಿ ಸಾಗುವಳಿ ಮಾಡುತ್ತಾರೆ. ಉತ್ಪಾದನೆಯು ಕೈಗೆ ಬಂದಾಗ ಜಮೀನಿನ ಶಾಶ್ವತ ಅಭಿವೃದ್ಧಿಗೆ ಅಗತ್ಯ ಬಂಡವಾಳವನ್ನು ತೆಗೆದಿಟ್ಟು ಉಳಿದ ಭಾಗವನ್ನು ಹಂಚಿಕೊಳ್ಳುತ್ತಾರೆ. ಇದನ್ನು `ಸಹಕಾರಿ ಬೇಸಾಯ ಪದ್ಧತಿ’ ಎನ್ನುತ್ತೇವೆ.
ಭೂಸುಧಾರಣೆಯಿಂದ ಭೂಹೀನರಿಗೆ ಭೂಮಿಯ ಒಡೆತನದ ಹಕ್ಕು ಸಣ್ಣ ಪ್ರಮಾಣದಲ್ಲಿ ದೊರಕಿತು. ಸಾಗುವಳಿದಾರರ ಹಕ್ಕುಗಳನ್ನು ಕಾಪಾಡಲಾಯಿತು. ಸಹಕಾರಿ ಬೇಸಾಯ ಪದ್ಧತಿಯಿಂದ ರೈತರು ಸ್ವಲ್ಪಮಟ್ಟಿಗಿನ ಲಾಭವನ್ನು ಹೊಂದಲು ಸಾಧ್ಯವಾಯಿತು. ಆದರೆ ಸಹಕಾರಿ ಬೇಸಾಯ ಪದ್ಧತಿಯು ನಿರೀಕ್ಷಿತ ಪ್ರಮಾಣದಲ್ಲಿ ಜನರಿಗೆ ಒಪ್ಪಿತ ಬೇಸಾಯ ಪದ್ಧತಿಯಾಗಲಿಲ್ಲ.
ಹಿಂದುಳಿದ ವರ್ಗಗಳ ಆಯೋಗಗಳು
ಭಾರತದ ಸಾಮಾಜಿಕ ವ್ಯವಸ್ಥೆ ಅಸಮಾನತೆಯಿಂದ ಕೂಡಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ಅನೇಕ ಜಾತಿಗಳು ಹಿಂದುಳಿದವುಗಳಾಗಿಯೆ ಉಳಿದವು. ಬ್ರಿಟಿಷರು ಭಾರತಕ್ಕೆ ಬಂದ ನಂತರ ಹೊಸ ಸಾಮಾಜಿಕ ಚಲನಶೀಲತೆ ಪ್ರಾರಂಭವಾಯಿತು.
ಬ್ರಿಟಿಷರ ಆಡಳಿತದಡಿಯಲ್ಲಿ ಯಾವುದೇ ಜಾತಿ ವರ್ಗಗಳ ತಾರತಮ್ಯವಿಲ್ಲದೆ ಎಲ್ಲರೂ ಇಂಗ್ಲಿಷ್ ಭಾಷೆಯನ್ನು ಕಲಿಯಲು ಅರ್ಹರಾದರು. ಇಂಗ್ಲಿಷ್ ಭಾಷೆ ಕಲಿತವರಿಗೆ ಬ್ರಿಟಿಷ್ ಸರಕಾರದಲ್ಲಿ ಹೊಸ ಅವಕಾಶಗಳು ದೊರೆಯತೊಡಗಿದವು. ಬ್ರಾಹ್ಮಣೇತರರು ವಿದ್ಯಾಭ್ಯಾಸ ಕ್ಷೇತ್ರಕ್ಕೆ ತೆರೆದುಕೊಂಡ ನಂತರ ಅವರಲ್ಲಿ ಹೊಸ ಎಚ್ಚರ ಪ್ರಾರಂಭವಾಯಿತು. ಬಹುಸಂಖ್ಯಾತರಾಗಿದ್ದರೂ ತಮ್ಮ ವರ್ಗಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಸೂಕ್ತ ಪ್ರಾತಿನಿಧ್ಯವಿರಲಿಲ್ಲ. ಇದರ ಪರಿಣಾಮವಾಗಿ ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣೇತರರು ಸಾಹುಕಾರ ಚೆನ್ನಯ್ಯ, ಎಂ. ಬಸವಯ್ಯ ಮುಂತಾದವರ ನೇತೃತ್ವದಲ್ಲಿ ಬ್ರಾಹ್ಮಣೇತರ ಚಳವಳಿಯನ್ನು ಹುಟ್ಟುಹಾಕಿದರು.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಭಾರತದಲ್ಲೇ ಪ್ರಥಮವಾಗಿ ಹಿಂದುಳಿದ ವರ್ಗಗಳ ಆಯೋಗವು ನ್ಯಾಯಮೂರ್ತಿ ಲೆಸ್ಲೆ ಸಿ. ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ 1918ರಲ್ಲಿ ನೇಮಕವಾಯಿತು. ಒಂದು ಜಾತಿಯಲ್ಲಿ ಶೇಕಡ ಐದು ಅಥವಾ ಅದಕ್ಕಿಂತ ಹೆಚ್ಚಿನವರು ಇಂಗ್ಲಿಷ್ ಬಲ್ಲವರಿದ್ದರೆ ಅಂತಹ ಜಾತಿಯನ್ನು ಮುಂದುವರೆದವರು ಎಂದು ಈ ಸಮಿತಿ ಆಭಿಪ್ರಾಯ ಪಟ್ಟಿತು. 1921ರಲ್ಲಿ ಮೈಸೂರು ರಾಜ್ಯದಲ್ಲಿ ಪ್ರಥಮ ಮೀಸಲಾತಿ ಆಜ್ಞೆ ಜಾರಿಗೆ ಬಂದಿತು.
ಮುಖ್ಯಮಂತ್ರಿ ಡಿ. ದೇವರಾಜ್ ಅರಸ್‍ರವರು 1975ರಲ್ಲಿ ಎಲ್.ಜಿ. ಹಾವನೂರು ಅವರ ನೇತೃತ್ವದಲ್ಲಿ ಪ್ರಥಮ ಹಿಂದುಳಿದ ವರ್ಗಗಳ ಆಯೋಗವನ್ನು ನೇಮಿಸಿದರು. ಸಾ.ಶ. 1975ನೇ ಇಸವಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿವಿಧ ಜಾತಿಯ ವಿದ್ಯಾರ್ಥಿಗಳ ಶೇಕಡಾವಾರನ್ನು ಜಾತಿಗಳ ಹಿಂದುಳಿದಿರುವಿಕೆಯನ್ನು ಗುರುತಿಸಲು ಮಾನದಂಡವನ್ನಾಗಿ ತೆಗೆದುಕೊಳ್ಳಲಾಯಿತು. ಹಾವನೂರು ವರದಿಯ ಆಧಾರದ ಮೇಲೆ ಸಾ.ಶ. 1977ರಲ್ಲಿ ಸರಕಾರಿ ಆಜ್ಞೆಯನ್ನು ಜಾರಿಗೆ ತರಲಾಯಿತು. ಇದು ಒಂದು ಕ್ರಾಂತಿಕಾರಕ ಆಜ್ಞೆಯಾಯಿತು. ಹಿಂದುಳಿದ ವರ್ಗಗಳು ಎಲ್.ಜಿ. ಹಾವನೂರು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಬಲರಾಗಲು ಈ ಆಜ್ಞೆ ಬಹುಮಟ್ಟಿಗೆ ಕಾರಣವಾಯಿತು. ಇದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಈ ವರದಿಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲಾಗುವುದು ಎನ್ನುವ ಭರವಸೆಯನ್ನು ಕರ್ನಾಟಕ ಸರ್ಕಾರವು ನ್ಯಾಯಾಲಯಕ್ಕೆ ನೀಡಿತು. ಇದರ ಪರಿಣಾಮವಾಗಿ ಸಾ.ಶ. 1983ರಲ್ಲಿ ಟಿ. ವೆಂಕಟಸ್ವಾಮಿ ಆಯೋಗದ ನೇಮಕವಾಯಿತು. ರಾಜಕೀಯ ಒತ್ತಡದ ಕಾರಣಗಳಿಗಾಗಿ ವೆಂಕಟಸ್ವಾಮಿ ವರದಿಯನ್ನು ಸರ್ಕಾರ ಒಪ್ಪಲಿಲ್ಲ. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಆಡಳಿತಾವಧಿಯಲ್ಲಿ ನ್ಯಾಯಮೂರ್ತಿ ಓ. ಚಿನ್ನಪ್ಪ ರೆಡ್ಡಿಯವರ ನೇತೃತ್ವದಲ್ಲಿ ಒಂದು ಸಮಿತಿಯ ರಚನೆಯಾಯಿತು. ಈ ವರದಿಯ ಶಿಫಾರಸುಗಳು ಕೂಡ ರಾಜಕೀಯ ಒತ್ತಡಗಳಿಂದಾಗಿ ಜಾರಿಗೆ ಬರಲಿಲ್ಲ.

ಇಲ್ಲಿಯವರೆಗೂ ಜಾರಿಗೊಂಡ ಎಲ್ಲಾ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಮೀಸಲಾತಿ ಆಜ್ಞೆಗಳು ರಾಜೀಸೂತ್ರದ ಆಜ್ಞೆಗಳಾಗಿವೆಯೇ ಹೊರತು ಯಾವುದೇ ವೈಜ್ಞಾನಿಕ ವರದಿಯ ಶಿಫಾರಸುಗಳ ಮೇಲೆ ರೂಪಿತವಾದ ಆಜ್ಞೆಗಳಾಗಿಲ್ಲ.
ಪಂಚಾಯತ್ ರಾಜ್ ವ್ಯವಸ್ಥೆ
ಪಂಚಾಯತ್ ರಾಜ್ ವ್ಯವಸ್ಥೆಯನ್ನು ಆಡಳಿತದ ವಿಕೇಂದ್ರೀಕರಣ ವ್ಯವಸ್ಥೆ ಎಂದು ಸರಳ ಭಾಷೆಯಲ್ಲಿ ಹೇಳಬಹುದು. ಸ್ಥಳೀಯರಿಗೆ ಆಡಳಿತದಲ್ಲಿ ಭಾಗವಹಿಸುವ ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಕೊಡುವುದೇ ಈ ವ್ಯವಸ್ಥೆಯ ಕೇಂದ್ರ ಆಶಯ. ಭಾರತಕ್ಕೆ ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಯ ಪರಿಚಯವಿದ್ದರೂ ಸ್ವಾತಂತ್ರ್ಯಾನಂತರ ಅದಕ್ಕೆ ಸಂವಿಧಾನಾತ್ಮಕ ರೂಪಕೊಡುವ ಕಾರ್ಯ ಚಾಲನೆಗೆ ಬಂದಿತು. ಕೇಂದ್ರ ಸರಕಾರವು ಸಾ.ಶ. 1955ರಲ್ಲಿ ಬಲವಂತರಾಯ್ ಮೆಹತಾ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು. ಸಮಿತಿಯು ಮೂರು ಹಂತದ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಶಿಫಾರಸು ಮಾಡಿತು.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಅಂದಿನ ರಾಜ್ಯ ಸರಕಾರವು ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ಆಶಯಕ್ಕನುಗುಣವಾಗಿ ಸಾ.ಶ. 1959ರಲ್ಲಿ ಮೈಸೂರು ಗ್ರಾಮ ಪಂಚಾಯಿತಿಗಳ ಅಧಿನಿಯಮವನ್ನು ಜಾರಿಗೊಳಿಸಿತು. ತನ್ಮೂಲಕ ಕರ್ನಾಟಕದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಕಾಯಂ ನೆಲೆಯನ್ನು ಕಲ್ಪಿಸಿತು. ಹೊಸ ಕಾನೂನಿನ ಪ್ರಕಾರ ಆಡಳಿತ ವ್ಯವಸ್ಥೆಯ ಮೂರು ಹಂತಗಳು ಇವಾಗಿವೆ.
* ಗ್ರಾಮ ಪಂಚಾಯತ್
* ತಾಲ್ಲೂಕ್ ಪಂಚಾಯತ್
* ಜಿಲ್ಲಾ ಪಂಚಾಯತ್
ಕರ್ನಾಟಕದಲ್ಲಿ ಸಾ.ಶ. 1983ರಲ್ಲಿ ಅಸ್ತಿತ್ವಕ್ಕೆ ಬಂದ ಜನತಾ ಸರಕಾರ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿತು. ಇದರ ರೂವಾರಿ ಅಂದಿನ ಪಂಚಾಯತ್ ರಾಜ್ ಖಾತೆ ಸಚಿವ ಶ್ರೀ ನಜೀರ್ ಸಾಬ್ ಅವರು. ದಲಿತ, ಹಿಂದುಳಿದ ಮತ್ತು ಮಹಿಳಾ ವರ್ಗಗಳಿಗೆ ಸ್ವಯಮಾಡಳಿತದಲ್ಲಿ ಪಾಲ್ಗೊಳ್ಳುವ ಹೆಚ್ಚಿನ ಅವಕಾಶವನ್ನು ಪಂಚಾಯತ್ ರಾಜ್ ವ್ಯವಸ್ಥೆ ಒದಗಿಸಿತು. ಈ ಹೊಸ ವ್ಯವಸ್ಥೆಯನ್ನು ಕ್ರಮೇಣ ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ನಕ್ಷೆಯನ್ನೇ ಬದಲಿಸಿತು.
ಹೊಸ ಪದ:
ಗೇಣಿ: ಭೂಮಾಲೀಕ ಮತ್ತು ಗೇಣಿದಾರನ ನಡುವೆ ನಡೆಯುವ ಒಪ್ಪಂದದ ಫಲವಾಗಿ ಗೇಣಿದಾರನು ಒಟ್ಟು ಉತ್ಪಾದನೆಯಲ್ಲಿ ಪಡೆಯುವ ಪಾಲು.
ಪ್ರಶ್ನೋತ್ತರಗಳು
* * * * * * *
