ಕರ್ನಾಟಕದ ಸಮಾಜಮುಖಿ ಚಳವಳಿಗಳು – ಅಧ್ಯಾಯ 19
ಪಾಠದ ಪರಿಚಯ: ಅಧಿಕಾರರೂಢರು ಜನಪರವಲ್ಲದ ನಿರ್ಧಾರ, ಕಾರ್ಯಕ್ರಮ ಮತ್ತು ಯೋಜನೆಗಳನ್ನು ಕಾರ್ಯಗತ ಮಾಡಲು ಮುಂದಾದಾಗ, ಅವನ್ನು ವಿರೋಧಿಸುವ ಹಕ್ಕು ಜನತೆಯ ಕೈಯಲ್ಲಿದೆ. ಕರ್ನಾಟಕದಲ್ಲಿ ಇಂಥ ಪ್ರಸಂಗಗಳು ಕಾಣಿಸಿಕೊಂಡಾಗ, ಪ್ರಜ್ಞಾವಂತ ನಾಗರಿಕರು ಸಿಡಿದೆದ್ದು ಆಂದೋಲನಗಳನ್ನು ನಡೆಸಿದರು. ಇದೇ ವೇಳೆ ದುರ್ಬಲ, ಶೋಷಿತ ಮತ್ತು ಹಿಂದುಳಿದ ವರ್ಗಗಳು ತಮ್ಮ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಶ್ರೇಯೋಭಿವೃದ್ಧಿಗಾಗಿ ಹೋರಾಟ ಮಾಡಿದರು. ಈ ಅಧ್ಯಾಯದಲ್ಲಿ ಕರ್ನಾಟಕದ ಪರಿಸರವಾದಿಗಳು, ಮಹಿಳೆಯರು, ರೈತರು, ದಲಿತರು ಮತ್ತು ಕನ್ನಡಪರ ಸಂಘಟನೆಗಳು ಮಾಡಿರುವ ಚಳವಳಿಗಳನ್ನು ನಿರೂಪಣೆ ಮಾಡಲಾಗಿದೆಯಲ್ಲದೆ ಅಧಿಕಾರ ವಿಕೇಂದ್ರೀಕರಣದ ನಿಟ್ಟಿನಲ್ಲಿ ಜಾರಿಗೊಂಡ ಮಹತ್ವದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕೂಡ ಪರಿಚಯಿಸಲಾಗಿದೆ.
ಪರಿಸರ ಚಳವಳಿ
ನಮ್ಮ ಭೂಮಿಯ ಭಾಗವಾಗಿರುವ ಮಣ್ಣು, ಕಲ್ಲು, ನೀರು, ಗಾಳಿ, ಬೆಳಕುಗಳನ್ನು ಅವಲಂಬಿಸಿ ಪಶುಪಕ್ಷಿಗಳು, ಗಿಡಮರಗಳು ಮತ್ತು ಮನುಷ್ಯ ಸೇರಿದಂತೆ ಉಳಿದೆಲ್ಲ ಜೀವಿಗಳು ಬದುಕಬೇಕಾಗಿದೆ. ಪ್ರಕೃತಿಯಲ್ಲಿ ಸಹಜ ಸಮತೋಲನವಿದೆ. ಮನುಷ್ಯ ನಾಗರಿಕನಾಗಿ ಬೆಳೆಯುತ್ತಿದ್ದಂತೆ ಪರಿಸರವನ್ನು ತನ್ನ ಅಂಕೆಯಿಲ್ಲದ ಆಸೆಗಳಿಗೆ ಬಲಿಕೊಡುತ್ತಿದ್ದಾನೆ. ಪ್ರಕೃತಿಯನ್ನು ಸೃಷ್ಟಿಯ ಬೆಡಗು ಎಂದು ಅರಿಯದೆ ಕೇವಲ ತನ್ನ ಉಪಯೋಗಕ್ಕಾಗಿ ಇರುವ ಕಚ್ಚಾವಸ್ತುವೆಂದು ಪರಿಗಣಿಸಿದ್ದಾನೆ. ಮನೆಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಗುಬ್ಬಚ್ಚಿಗಳನ್ನು ನೋಡಲು ಊರ ಹೊರಗಡೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ.
ಭೂಮಿಯಲ್ಲಿರುವ ಜೈವಿಕ ಮತ್ತು ಅಜೈವಿಕ ಅಂಶಗಳೇ ಪರಿಸರ.
ಕೈಗಾರಿಕಾ ಕ್ರಾಂತಿ, ವಾಣಿಜ್ಯ ವ್ಯಾಪಾರದ ಕ್ರಾಂತಿಗಳುಂಟಾಗಿ ಪರಿಸರವು ತೀವ್ರವಾಗಿ ಹದಗೆಟ್ಟಿದೆ. ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ಪರಿಸರದ ಸಂಪತ್ತಿನ ಮೇಲೆ ತಮ್ಮ ಹಿಡಿತವನ್ನು ಸಾಧಿಸಲು ನಿರಂತರ ಪ್ರಯತ್ನಿಸುತ್ತಿದ್ದಾರೆ. ಇದರಿಂದ ಅನೇಕ ಹೊಸ ಸಮಸ್ಯೆಗಳು ಸೃಷ್ಟಿಯಾಗಿವೆ. ಜನ ಸಮುದಾಯಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿವೆ. ಒಟ್ಟಾರೆ ಪ್ರಾಕೃತಿಕ ಸಂಪತ್ತಿನ ನಾಶದಿಂದ ಬಹುಸಂಖ್ಯಾ ನಾಗರಿಕರು ತೀವ್ರ ಸಂಕಟವನ್ನು ಎದುರಿಸುತ್ತಿದ್ದಾರೆ. 20ನೇ ಶತಮಾನದ ಉತ್ತರಾರ್ಧದಲ್ಲಿ ಜನರಲ್ಲಿ ಹೊಸ ಎಚ್ಚರವನ್ನು ಮೂಡಿಸುವ ಸಲುವಾಗಿ ಪರಿಸರ ಜಾಗೃತಿ ಚಳವಳಿಗಳು ಆರಂಭವಾದವು. 1970ರ ದಶಕದಲ್ಲಿ ಪರಿಸರ ಚಳವಳಿ ಜಾಗತಿಕ ಮಟ್ಟದಲ್ಲಿ ಆರಂಭಗೊಂಡು ಕರ್ನಾಟಕವನ್ನು ತಲುಪಿತು.
ಗಾಂಧೀಜಿಯವರು ಹೇಳುವಂತೆ, “ಭೂಮಿಯು ಎಲ್ಲರ ಅವಶ್ಯಕತೆಯನ್ನು ಪೂರೈಸುತ್ತದೆ. ಆದರೆ ಅವರ ದುರಾಸೆಯನ್ನಲ್ಲ”.
ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಗಣಿಗಾರಿಕೆ ಪ್ರಾರಂಭವಾದುದರಿಂದ ಪರಿಸರ ಸಂರಕ್ಷಣಾ ಚಳವಳಿ ಅನಿವಾರ್ಯವಾಯಿತು. ‘ಸಹ್ಯಾದ್ರಿ ಗಣಿ ವಿರೋಧಿ ವೇದಿಕೆ’ ಪ್ರಾರಂಭವಾಗಿ ಕುದುರೆಮುಖ ಮತ್ತು ಇತರ ಪ್ರದೇಶಗಳ ಗಣಿಗಾರಿಕೆಯನ್ನು ವಿರೋಧಿಸಿತು. ಕೇಂದ್ರ ಸರಕಾರವೇ ಕಬ್ಬಿಣದ ಗಣಿಗಾರಿಕೆಯ ಕಂಪೆನಿಯನ್ನು ಪ್ರಾರಂಭಿಸಿತ್ತು. ಈ ಗಣಿಗಾರಿಕೆಯಿಂದ ಭದ್ರಾ ನದಿಯ ಮೂಲವೇ ಮಲಿನವಾಯಿತು. ಈ ಹೋರಾಟದಿಂದ ಸರಕಾರದ ಮೇಲೆ ತೀವ್ರ ಒತ್ತಡವುಂಟಾಗಿ ಕ್ರಮೇಣ ಸರ್ಕಾರವು ಪರಿಸರ ರಕ್ಷಣೆಯ ಕ್ರಮಗಳನ್ನು ಕೈಗೊಂಡಿತು.
ಸಾಲುಮರದ ತಿಮ್ಮಕ್ಕ: ಇಂದಿಗೂ ಹೋರಾಟ ನಡೆಸುತ್ತಿರುವ ವಯೋವೃದ್ಧೆ `ಸಾಲುಮರದ ತಿಮ್ಮಕ್ಕ’ 284 ಮರಗಳ ತಾಯಿ. ಅಕ್ಷರಸ್ಥರಲ್ಲದಿದ್ದರೂ ಪರಿಸರ ಸಂರಕ್ಷಣೆಯ ಪಾಠ ಹೇಳಿಕೊಟ್ಟ ನಿಸ್ವಾರ್ಥ ಬದುಕು ಇವರದು. ಇವರಿಗೆ 2019ರಲ್ಲಿ ದೇಶದ ನಾಲ್ಕನೇ ಉನ್ನತ ನಾಗರಿಕ ಸಮ್ಮಾನವಾದ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತು.

ಸಹ್ಯಾದ್ರಿ ಶ್ರೇಣಿಯ ಪ್ರಮುಖ ನದಿಯಾದ ತುಂಗಾ ಕಲುಷಿತವಾಗುತ್ತಿರುವುದನ್ನು ಗಮನಿಸಿ `ತುಂಗಾ ಮೂಲವನ್ನು ಉಳಿಸಿ’ ಆಂದೋಲನವನ್ನು ಆರಂಭಿಸಲಾಯಿತು. ಸಹ್ಯಾದ್ರಿ ಪರ್ವತ ಶ್ರೇಣಿಯ ಅರಣ್ಯ ಪ್ರದೇಶಗಳು ಕ್ರಮೇಣ ಬರಿದಾಗತೊಡಗಿದವು. ಗಿಡಮರಗಳು ಉಳಿಸಿ ಬೆಳೆಸುವ ಉದ್ದೇಶದಿಂದ ಅದರ ನಾಶವನ್ನು ತಡೆಯಲು ಭಾರತದ ವಿವಿಧ ಪ್ರದೇಶಗಳಲ್ಲಿ `ಚಿಪ್ಕೊ’ ಅಥವಾ `ಅಪ್ಪಿಕೊ’ ಚಳವಳಿಗಳು ಆರಂಭಗೊಂಡವು. ಚಿಪ್ಕೊ ಚಳವಳಿಯಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸುಂದರಲಾಲ್ ಬಹುಗುಣ ಅವರ ಪಾತ್ರವನ್ನು ನಾವು ಮರೆಯುವಂತಿಲ್ಲ.
ಅರಣ್ಯ ಇಲಾಖೆಯು ನೀಲಗಿರಿ, ಅಕೇಶಿಯಾಗಳಂತಹ ಆಮದು ಸಸ್ಯಗಳನ್ನು ನೆಡಲಾರಂಭಿಸಿತು. ಈ ಯೋಜನೆಯನ್ನು `ಸಾಮಾಜಿಕ ಅರಣ್ಯ’ವೆನ್ನುವರು. ನೀಲಗಿರಿಯು ಅಂತರ್‍ಜಲದ ಮಟ್ಟವನ್ನು ಕೆಳಕ್ಕೆ ತಳ್ಳುತ್ತದೆ ಎಂದು ಅದರ ನೆಡುವಿಕೆಯನ್ನು ಪರಿಸರವಾದಿಗಳು ವಿರೋಧಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರ ಪಾಲಿಫೈಬರ್ ಕೈಗಾರಿಕೆಯು ತಾಜ್ಯವಸ್ತುಗಳನ್ನು ತುಂಗಭದ್ರಾ ನದಿಗೆ ಬಿಟ್ಟು ನದಿಯ ನೀರನ್ನು ಹಾಳು ಮಾಡುವುದರ ವಿರುದ್ಧ ಹೋರಾಟ ನಡೆಯಿತು. ಇತರ ಚಳವಳಿಗಳೆಂದರೆ ಕಾರವಾರದ ಸೀಬರ್ಡ್ ನೌಕಾನೆಲೆಯ ವಿರುದ್ಧದ ಹೋರಾಟ, ಕರಾವಳಿಯಲ್ಲಿ ಕೋಜೆಂಟ್ರಿಕ್ಸ್ ನಾಗಾರ್ಜುನ ವಿದ್ಯುತ್ ಯೋಜನೆಯ ವಿರುದ್ಧ ಹೋರಾಟ. ಕೆರೆಗಳನ್ನು ಉಳಿಸಿ ಹೋರಾಟ, ಭದ್ರಾ ಮೇಲ್ದಂಡೆ ಯೋಜನೆಯ ವಿರುದ್ಧದ ಹೋರಾಟ, ಕಬ್ಬನ್ ಪಾರ್ಕ್ ಉಳಿಸಿ, ಕಾರ್ಗಿಲ್ ಸೀಡ್ಸ್ ಸಂಸ್ಥೆಯ ವಿರುದ್ಧದ ಹೋರಾಟ, ಕೈಗಾರಿಕಾ ನಗರಗಳ ವಿರುದ್ಧದ ಹೋರಾಟ ಮುಂತಾದವು.
ತೀರ ಇತ್ತೀಚಿಗೆ ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದವುಗಳೆಂದರೆ ಕರ್ನಾಟಕದಲ್ಲಿ ನಡೆದ ಗಣಿಗಾರಿಕಾ ವಿರುದ್ಧದ ಚಳವಳಿಗಳು. ಬಳ್ಳಾರಿ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ, ರಾಮನಗರ ಮುಂತಾದ ಜಿಲ್ಲೆಗಳಲ್ಲಿ ಗಣಿ ಸಂಪತ್ತನ್ನು ಲೂಟಿ ಹೊಡೆಯುವ ಶಕ್ತಿಗಳ ವಿರುದ್ಧದ ಈ ಚಳವಳಿಗಳು ಪ್ರಾರಂಭವಾದವು. ಭಾರತದ ಸರ್ವೋಚ್ಚ ನ್ಯಾಯಾಲಯವು ಪರಿಸರ ಸಂರಕ್ಷಣೆಯನ್ನು ಗಂಭೀರವಾಗಿ ಪರಿಗಣಿಸಿ ತೀರ್ಪುಗಳನ್ನು ನೀಡುತ್ತಿದೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ಪರಿಗಣಿಸಿ ಅಕ್ರಮ ಗಣಿಗಾರಿಕೆಯ ಕುರಿತು ನಡೆಸಿದ ಕೂಲಂಕಶ ತನಿಖೆಗಳು ಹಾಗೂ ಸುದೀರ್ಘ ವರದಿಗಳು ಉಲ್ಲೇಖಾರ್ಹವಾದುದು. ಇವೆಲ್ಲವುಗಳ ಪರಿಣಾಮವಾಗಿ ಪ್ರಕೃತಿಯ ಶೋಷಣೆ ಕಡಿಮೆಯಾಗುತ್ತಿದೆ. ಇಂದೂ ಅನೇಕ ಹೋರಾಟಗಳು ಮುಂದುವರಿದಿವೆ. ಕೃತಕ ರಾಸಾಯನಿಕದಿಂದ ಭೂಮಿಯನ್ನು ಹಾಳುಮಾಡುವ ಪದ್ಧತಿಗೆ ಪರ್ಯಾಯವಾಗಿ ನೈಸರ್ಗಿಕ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುವಂತೆ ಒತ್ತಾಯಿಸುವ ಹೋರಾಟವು ಒಂದು ಕ್ರಾಂತಿಯ ರೂಪವನ್ನು ತಳೆಯುತ್ತಿದೆ. ಇದು ಸಮಾಧಾನದ ಸಂಗತಿಯಾಗಿದೆ. ಕರ್ನಾಟಕದಲ್ಲಿ `ಸಾವಯವ ಕೃಷಿ ಮಿಷನ್’ ಸ್ಥಾಪನೆಗೊಂಡು ಸಾವಯವ ಕೃಷಿಗೆ ಪ್ರೋತ್ಸಾಹ ಸಿಗುತ್ತಿದೆ. ನೂರಾರು ಮಂದಿ ಕೃಷಿಕರು ಸಾವಯವ ಕೃಷಿಯ ಲಾಭ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಭಾರತದಲ್ಲೇ ಮುಂಚೂಣಿಯಲ್ಲಿದೆ. ಆದರೂ ಸಾಗಬೇಕಾದ ದಾರಿ ತುಂಬ ಇದೆ.
ಮಹಿಳಾ ಚಳವಳಿ
ಮಹಿಳಾ ಚಳವಳಿಯು ಆರಂಭದಲ್ಲಿ ಮುಖ್ಯವಾಗಿ ಸ್ತ್ರೀಶಿಕ್ಷಣಕ್ಕೆ ಒತ್ತುನೀಡಿತು. ಕರ್ನಾಟಕದಲ್ಲಿ ಶ್ರೀರಂಗಮ್ಮ ಮತ್ತು ರುಕ್ಮಿಣಮ್ಮ ಎಂಬವರು ಬಿ.ಎ. ಆನರ್ಸ್ ಪದವಿ ಗಳಿಸಿದ ಮೊದಲ ಮಹಿಳೆಯರು. ಇಂದಿರಮ್ಮ ಎಂಬುವರು ಬೆಂಗಳೂರಿನ ಪ್ರಥಮ ಮಹಿಳಾ ಮೇಯರ್ ಆಗಿದ್ದರು. ಇಷ್ಟಾದರೂ ಮಹಿಳೆಯರ ಸಬಲೀಕರಣವೆನ್ನುವುದು ಮರೀಚಿಕೆಯಾಗಿತ್ತು. ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು ಸಿಗುತ್ತಿರಲಿಲ್ಲ. ವಿವಿಧ ಧರ್ಮೀಯ ಮಹಿಳೆಯರು ಬೇರೆ ಬೇರೆ ಬಗೆಯಲ್ಲಿ ಶೋಷಣೆಗೆ ಒಳಗಾಗಿದ್ದಾರೆ.
ಅನೇಕ ಮಂದಿ ಮಹಿಳೆಯರು ಕುಟುಂಬದ ಚೌಕಟ್ಟಿನಿಂದ ಹೊರಗೆ ಬಂದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ದೇಶಸೇವೆಗೆ ಮುಂದಾದರು. ಕಮಲಾದೇವಿ ಚಟ್ಟೋಪಾಧ್ಯಾಯ, ಸರೋಜಿನಿ ನಾಯ್ಡು, ಅರುಣಾ ಅಸಫ್ ಅಲಿ, ಡಾ. ಮುತ್ತುಲಕ್ಷ್ಮಿ ರೆಡ್ಡಿ ಮುಂತಾದವರನ್ನು ನಾವಿಲ್ಲಿ ಸ್ಮರಿಸಬಹುದು.

1975ರಲ್ಲಿ ಅಂತರ್‍ರಾಷ್ಟ್ರೀಯ ಮಹಿಳಾ ವರ್ಷಾಚರಣೆ ಪ್ರಾರಂಭವಾಯಿತು. ಕರ್ನಾಟಕ ಸರಕಾರ ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಂಡಿತು. ಕ್ರಮೇಣ ಮಹಿಳಾ ಸಂಘಟನೆಗಳು ಸಕ್ರಿಯವಾದವು. ಎಡಪಂಥೀಯ ಸಂಘಟನೆಗಳು ಕಾರ್ಮಿಕ ಮಹಿಳೆಯರನ್ನು ಸಂಘಟಿಸುವ ಕೆಲಸವನ್ನು ಮಾಡಿದವು. ಮಹಿಳಾ ಸಂಘಟನೆಗಳು ವರದಕ್ಷಿಣೆ, ಅತ್ಯಾಚಾರ, ಕೌಟುಂಬಿಕ ಹಿಂಸೆಯನ್ನು ವಿರೋಧಿಸಿದವು. ಹಾಗೆಯೇ ಮಹಿಳೆಯರ ಹಕ್ಕುಗಳ ಪ್ರತಿಪಾದನೆಗೆ ಕಾನೂನು ಮಾರ್ಗವನ್ನು ಬಲಪಡಿಸಲು ಒತ್ತಡ ಹೇರಲಾಯಿತು. ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಸ್ಥಾನಗಳನ್ನು ಮೀಸಲಿಡುವ ಮೂಲಕ ಶಾಸನಸಭೆಗಳಲ್ಲಿ ಅವರ ನಿರ್ಣಾಯಕ ಪಾತ್ರವಿರಬೇಕೆಂದು ಈ ಸಂಘಟನೆಗಳು ಹೋರಾಡುತ್ತಿವೆ.
ಈ ಎಲ್ಲಾ ಹೋರಾಟಗಳ ಫಲವಾಗಿ ಸರ್ಕಾರ ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 50ರಷ್ಟು ಸ್ಥಾನವನ್ನು ಮಹಿಳೆಯರಿಗೆ ಕಾದಿರಿಸುವ ಆದೇಶ ಹೊರಡಿಸಿದ ಮೊದಲ ರಾಜ್ಯ ಕರ್ನಾಟಕ. ಸರಕಾರಿ ನೇಮಕಾತಿಯಲ್ಲಿಯೂ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನೀಡಿರುವ ಮೂಲಕ ಸ್ವಲ್ಪ ಮಟ್ಟಿಗೆ ಮಹಿಳೆಯರಿಗೆ ನ್ಯಾಯ ಒದಗಿಸಿದೆ. ಹೆಣ್ಣುಮಕ್ಕಳ ಹಾಗೂ ಮಹಿಳೆಯರ ಹಿತರಕ್ಷಣೆಗಾಗಿ ಸರ್ಕಾರವು ಮಹಿಳಾ ಆಯೋಗವನ್ನು ಸ್ಥಾಪಿಸಿದೆ. ಇದು ಸ್ತ್ರೀಯರ ಶೋಷಣೆಯ ವಿರುದ್ಧ ಧ್ವನಿ ಎತ್ತುವುದರ ಮೂಲಕ ಅವರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುತ್ತಿದೆ.
ರೈತ ಚಳವಳಿ
ರೈತರನ್ನು ನಮ್ಮ ದೇಶದ ಬೆನ್ನೆಲುಬು ಎಂದು ಮೊದಲಿನಿಂದಲು ಕರೆಯಲಾಗಿದೆ. ಆದರೆ ಈ ಬೆನ್ನಲುಬು ಗಟ್ಟಿಯಾಗಿರಲು ಬೇಕಾದ ಅವಶ್ಯಕತೆಗಳನ್ನು ಒದಗಿಸಿಲ್ಲ. ಇಂದೂ ಸಹ ನಮ್ಮ ರೈತರು ಸರಕಾರದ ನೆರವಿಲ್ಲದೆ ಬದುಕಲಾರದ ಸ್ಥಿತಿಯಲ್ಲಿದ್ದಾರೆ. ಕೈಗಾರಿಕೋದ್ಯಮಿಗಳು ತಾವು ಉತ್ಪಾದಿಸಿದ ವಸ್ತುವಿನ ಬೆಲೆಯನ್ನು ತಾವೇ ನಿರ್ಧರಿಸುತ್ತಾರೆ. ಆದರೆ ರೈತರು ಇಂದಿಗೂ ತಮ್ಮ ಉತ್ಪನ್ನಗಳ ಬೆಲೆ ನಿರ್ಧರಿಸುವ ಹಂತಕ್ಕೆ ಬೆಳೆದಿಲ್ಲ. ಅವರು ವರುಣನ ಕೃಪೆ ಅಥವಾ ಅವಕೃಪೆಗೆ ಸದಾ ಒಳಗಾಗಿದ್ದಾರೆ. ತಮ್ಮನ್ನು ರಕ್ಷಿಸಬೇಕಾದ ಸರಕಾರಗಳು ತಮ್ಮ ಕಷ್ಟದ ದಿನಗಳಲ್ಲಿ ನೆರವಿಗೆ ಬಾರದಿದ್ದಾಗ ರೈತರು ಹೋರಾಟದ ಹಾದಿಗಳನ್ನು ತುಳಿದಿದ್ದಾರೆ. ಅನೇಕ ರೈತರು ಈ ಹೋರಾಟಗಳಲ್ಲಿ ಪ್ರಾಣತೆತ್ತು ಹುತಾತ್ಮರಾಗಿದ್ದಾರೆ. ಶತಮಾನಗಳಿಂದಲೂ ರೈತರು ಹೋರಾಟ ಮಾಡಿಕೊಂಡೇ ಬಂದಿದ್ದರೂ ಅವರ ಹಸನಾದ ಬದುಕಿನ ಕನಸು ಇನ್ನೂ ದೂರವಿದೆ.
ರೈತ ಹೋರಾಟಗಳು ಪ್ರಮುಖವಾಗಿ ಭೂಮಾಲೀಕರ ವಿರುದ್ಧ ನಡೆದವು. ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ನಾವು ಕಾಣುವ ಪ್ರಥಮ ರೈತ ಹೋರಾಟ ಸಾ.ಶ.1951ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾಗೋಡಿನಲ್ಲಿ ನಡೆಯಿತು. ರೈತರು ಗೇಣಿಯನ್ನು ಅಳತೆ ಮಾಡುವ ‘ಕೊಳಗ’ದ ವಿರುದ್ಧ ಹೋರಾಟ ಪ್ರಾರಂಭಮಾಡಿದರು. ಕ್ರಮೇಣ ರೈತರ ಶೋಷಣೆಯ ವಿಷಯಗಳಾದ ಸಾಲದ ವಸೂಲಿ, ಗೇಣಿದಾರರಿಗೆ ನೀಡುತ್ತಿದ್ದ ಕಿರುಕುಳ ಮುಂತಾದ ಪ್ರಮುಖ ಸಮಸ್ಯೆಗಳ ವಿರುದ್ಧ ರೈತರು ಹೋರಾಟ ಮುಂದುವರೆಸಿದರು. ಸಮಾಜವಾದಿ ಪಕ್ಷದ ಶಾಂತವೇರಿ ಗೋಪಾಲ ಗೌಡರು ಈ ಹೋರಾಟದ ಮುಂಚೂಣಿಯಲ್ಲಿದ್ದರು. ಡಾ. ರಾಮಮನೋಹರ ಲೋಹಿಯಾ ಅವರು ಭೇಟಿ ನೀಡಿ ಈ ಹೋರಾಟಕ್ಕೆ ಹೊಸ ಶಕ್ತಿಯನ್ನು ತಂದುಕೊಟ್ಟರು.
ಸಾ.ಶ. 1950ರ ದಶಕದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಾಜವಾದಿಗಳು ರೈತ ಹೋರಾಟ ನಡೆಸಿದರು. ಸಾ.ಶ. 1972ರಲ್ಲಿ ಕೋಲಾರದಲ್ಲಿ ಭೂಆಕ್ರಮಣ ಚಳವಳಿ ನಡೆಯಿತು. ಸಾ.ಶ. 1980ರಲ್ಲಿ ಮಲಪ್ರಭಾ ನದಿ ಭಾಗದ ರೈತರು ಹತ್ತಿ ಬೆಳೆ ನೆಲಕಚ್ಚಿದಾಗ ಪ್ರತಿಭಟಿಸಿದರು. ಕೆಲವರು ಪೋಲೀಸರ ಗುಂಡಿಗೆ ಬಲಿಯಾದರು. ರೈತರು ಸರಕಾರದ ವಿರುದ್ಧ ಅಸಹಕಾರ ಚಳವಳಿಯನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ಇಪ್ಪತ್ತಕ್ಕೂ ಹೆಚ್ಚು ರೈತರು ನವಲಗುಂದ, ನರಗುಂದ ಮತ್ತು ಸವದತ್ತಿಯಲ್ಲಿ ಪ್ರಾಣತೆತ್ತರು.
ಈ ಹಿನ್ನೆಲೆಯಲ್ಲಿ ರೈತರು ತಮ್ಮದೆ ಆದ ಸಂಘಟನೆಗಳನ್ನು ಕಟ್ಟಿಕೊಂಡರು. ಕರ್ನಾಟಕ ರಾಜ್ಯ ರೈತ ಸಂಘ ಶಿವಮೊಗ್ಗ ಜಿಲ್ಲೆಯಲ್ಲಿ ಆರಂಭಗೊಂಡು, ಸ್ಥಳೀಯ ಸಮಸ್ಯೆಗಳನ್ನು ಕೈಗೆತ್ತಿಕೊಂಡಿತು. ದೂರಗಾಮಿ ನೇತ್ಯಾತ್ಮಕ ಪರಿಣಾಮಗಳನ್ನು ಸೃಷ್ಟಿ ಮಾಡಹೊರಟ ವಿದೇಶಿ ಕಂಪನಿಗಳ ಆಗಮನವನ್ನು ವಿರೋಧಿಸಿತು. ಕರ್ನಾಟಕ ಪ್ರಾಂತ್ಯ ರೈತ ಸಂಘ, ಕಿಸಾನ್ ಸಭಾ, ದಲಿತ ಸಂಘರ್ಷ ಸಮಿತಿ, ರೈತ ಕೂಲಿ ಕಾರ್ಮಿಕರ ಸಂಘ ಮುಂತಾದ ಸಂಘಟನೆಗಳು ರೈತರ ಸಮಸ್ಯೆಗಳಿಗೆ ಹೋರಾಟದ ದನಿಯಾದವು. ರೈತ ಹೋರಾಟದ ಮುಖಂಡರಲ್ಲಿ ಎಂ.ಡಿ. ನಂಜುಂಡಸ್ವಾಮಿ, ಸುಂದರೇಶ್, ಪುಟ್ಟಣ್ಣಯ್ಯ, ಕಡಿದಾಳು ಶಾಮಣ್ಣ ಮೊದಲಾದವರು ಪ್ರಮುಖರಾಗಿದ್ದಾರೆ.

ದಲಿತ ಚಳವಳಿ
ಪ್ರಸಿದ್ಧ ಮನಃಶಾಸ್ತ್ರಜ್ಞ ಆರ್.ಡಿ. ಲಿಯಾಂಗ್ ಒಂದು ಅದ್ಬುತವಾದ ಮಾತನ್ನು ದಾಖಲಿಸುತ್ತಾರೆ: “ಇತರರ ಅನುಭವವನ್ನು ನೀವು ಅರ್ಥಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಆ ಅನುಭವವನ್ನು ನೀವು ಅನುಭವಿಸಲು ಸಾಧ್ಯವೇ ಇಲ್ಲ”. ದಲಿತ ಮತ್ತು ಮಹಿಳಾ ನೆಲೆಗಳಿಗೆ ಇದು ಅಕ್ಷರಶಃ ಅನ್ವಯವಾಗುತ್ತದೆ. ದಲಿತರಿಗೆ ವರ್ಣವ್ಯವಸ್ಥೆಯಲ್ಲೂ ಸ್ಥಾನವಿರಲಿಲ್ಲ. ಅವರು ಶೂದ್ರಾತಿ ಶೂದ್ರರಾಗಿದ್ದರು. ಸಾಮಾಜಿಕವಾಗಿ ಯಾವುದೇ ಸ್ಥಾನವನ್ನು ಹೊಂದಿರದ ಅಸ್ಪ್ರಶ್ಯ ಜಾತಿಗಳಲ್ಲಿ ಹುಟ್ಟಿದ ಒಂದೇ ಕಾರಣಕ್ಕಾಗಿ ಈ ಸಮುದಾಯ ಸಮಾಜದ ಮುಖ್ಯ ವಾಹಿನಿಯಿಂದ ಹೊರಗುಳಿಯಿತು. ಇದರ ವಿರುದ್ದ ನಡೆದ ಅನೇಕ ಹೋರಾಟಗಳನ್ನು ಚರಿತ್ರೆಯ ಉದ್ದಕ್ಕೂ ನಾವು ಕಾಣುತ್ತೇವೆ. ಆದರೆ ವಸಾಹತುಶಾಹಿ ಕಾಲಘಟ್ಟದಲ್ಲಿ ದಲಿತರಿಗೆ ಸಂಬಂಧಿಸಿದ ವಿಷಯಗಳು ರಾಷ್ಟ್ರೀಯ ಹಂತದಲ್ಲಿ ಚರ್ಚೆ, ಸಂವಾದಗಳಿಗೆ ಒಳಗಾದವು. ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ನಡುವಿನ ಸಾ.ಶ. 1930ರ ದಶಕದ ಚರ್ಚೆಗಳೇ ಇದಕ್ಕೆ ಪ್ರಮುಖ ಸಾಕ್ಷಿ. ಇಬ್ಬರ ಗುರಿ ಒಂದೇ ಆದರೂ ಸಾಗಿದ ಮಾರ್ಗಗಳು ಬೇರೆಯಾಗಿದ್ದವು.
ಸ್ವಾಮಿ ವಿವೇಕಾನಂದರ ಮೈಸೂರಿನ ಭೇಟಿಯ ನಂತರ ಅವರ ಸಲಹೆಯ ಮೇರೆಗೆ ದಲಿತ ವರ್ಗದ ಪ್ರಮುಖ ಪ್ರಶ್ನೆಗಳನ್ನು ಅಂದಿನ ಮೈಸೂರಿನ ಮಹಾರಾಜರಾದ ಹತ್ತನೇ ಚಾಮರಾಜ ಒಡೆಯರು ಗಂಭೀರವಾಗಿ ಪರಿಗಣಿಸಿ ದಲಿತರಿಗೆ ಪ್ರತ್ಯೇಕ ಶಾಲೆಗಳನ್ನು ತೆರೆದರು.
1936ರಲ್ಲಿ ದಕ್ಷಿಣ ಭಾರತದ ದಲಿತ ನಾಯಕರಲ್ಲಿ ಪ್ರಮುಖರಾದ ಎಂ.ಸಿ. ರಾಜಾ ಅವರ ಸಮ್ಮುಖದಲ್ಲಿ ಮೈಸೂರು ಅರಮನೆಗೆ ದಲಿತರ ಪ್ರವೇಶವಾಯಿತು.
ಹಿಂದೆ ದಲಿತರ ಪರವಾಗಿ ಬಹುತೇಕ ದಲಿತೇತರರು ಹೋರಾಟ ಮಾಡಿದರು. ಈಗ ದಲಿತರೇ ತಮ್ಮ ಸಮಸ್ಯೆಗಳನ್ನು ತಾವೇ ಪ್ರತಿನಿಧಿಸತೊಡಗಿದ್ದಾರೆ. ಇವರಿಗೆ ಮೂಲ ಸ್ಫೂರ್ತಿ ಡಾ. ಬಿ.ಆರ್. ಅಂಬೇಡ್ಕರರ ಸೈದ್ಧಾಂತಿಕ ನಿಲುವುಗಳು. ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳು ದಲಿತ ಚಳವಳಿಗಳ ಬೀಜಮಂತ್ರಗಳಾದವು. ದಲಿತರ ಸಮಸ್ಯೆಗಳ ಪರಿಹಾರಕ್ಕೆ ರಾಜಕೀಯ ಸಾಧನೆಯನ್ನು ತಮ್ಮ ಧ್ಯೇಯವಾಗಿಸಿಕೊಂಡು ಸಂಘಟನಾತ್ಮಕವಾಗಿ ಜಾಗೃತರಾಗತೊಡಗಿದರು.
ದಲಿತ ವರ್ಗಗಳಲ್ಲಿ ಅಂಬೇಡ್ಕರರು ಅವರ ಸ್ವಾಭಿಮಾನದ ಸಂಕೇತವಾದರಲ್ಲದೆ `ದಲಿತ ಸೂರ್ಯ’ ಎಂಬ ಕೀರ್ತಿಗೆ ಪಾತ್ರರಾದರು. ಈ ಎಲ್ಲ ಬೆಳವಣಿಗೆಗಳ ಪ್ರತಿಧ್ವನಿಗಳು ಕರ್ನಾಟಕದಲ್ಲಿ ಮೊಳಗುವಂತಾಯಿತು.
ಇಪ್ಪತ್ತನೇ ಶತಮಾನದಲ್ಲಿ ಹುಟ್ಟಿ ಬೆಳೆದ ಬ್ರಾಹ್ಮಣೇತರ ಚಳವಳಿಗಳು ದಲಿತರನ್ನು ಹೆಚ್ಚು ಒಳಗೊಳ್ಳಲಿಲ್ಲ. ಇದನ್ನು ಪ್ರಶ್ನಿಸುತ್ತಾ ಸಾ.ಶ. 1970ರ ದಶಕದಲ್ಲಿ `ದಲಿತ ಚಳವಳಿ’ಯು ರೂಪುಗೊಂಡು ಒಂದು ನಿರ್ಣಾಯಕ ಶಕ್ತಿಯಾಗಿ ಬೆಳೆಯಿತು. `ಹೈದರಾಬಾದ್-ಕರ್ನಾಟಕ’ (ಈಗ ಈ ಪ್ರದೇಶವನ್ನು ಕಲ್ಯಾಣ-ಕರ್ನಾಟಕ ಎಂದು ಕರೆಯಲಾಗುತ್ತದೆ) ಪ್ರದೇಶದಲ್ಲಿ ಬಿ. ಶಾಮಸುಂದರ್ ಅವರು ಸಾ.ಶ. 1970ರಲ್ಲಿ ಭೀಮಸೇನಾ ಸಂಘಟನೆಯನ್ನು ಹುಟ್ಟುಹಾಕಿದರು. ದಲಿತ ಚಳವಳಿಗೆ ಒಂದು ಹೊಸ ತಿರುವನ್ನು ಕೊಟ್ಟಿದ್ದು ‘ಬಸವಲಿಂಗಪ್ಪ ಬೂಸಾ ಪ್ರಕರಣ’ (ಸಾ.ಶ. 1973).
ಸಚಿವರಾಗಿದ್ದ ಬಸವಲಿಂಗಪ್ಪನವರು ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಸಾಹಿತ್ಯ ಬೂಸಾ ಸಾಹಿತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಇದರ ವಿರುದ್ಧವಾಗಿ ಕರ್ನಾಟಕದಾದ್ಯಂತ ಹೋರಾಟಗಳಾದವು. ಕೊನೆಗೆ ಬಸವಲಿಂಗಪ್ಪನವರು ಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸಿದರು. ಈ ಪ್ರಕರಣ ಕ್ರಮೇಣ ದಲಿತ ಪ್ರಜ್ಞೆಯನ್ನು ತೀವ್ರವಾಗಿ ಬೆಳೆಸಲು ಕಾರಣವಾಯಿತು.
ಅನಂತರ ಸಾ.ಶ. 1976ರಲ್ಲಿ ಭದ್ರಾವತಿಯಲ್ಲಿ `ದಲಿತ ಲೇಖಕ ಕಲಾವಿದರ ಒಕ್ಕೂಟ’ ಸ್ಥಾಪನೆಯಾಯಿತು. ಕರ್ನಾಟಕದ ದಲಿತ ಚಳವಳಿಯ ಆರಂಭದ ಗಟ್ಟಿ ಹೆಜ್ಜೆಯನ್ನು ಈ ಒಕ್ಕೂಟದ ಪ್ರಾರಂಭದಲ್ಲಿ ಕಾಣಬಹುದು. ಮುಂದೆ ಇದರ ಆಶ್ರಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪನೆಗೊಂಡಿತು. ಪ್ರೋ ಬಿ. ಕೃಷ್ಣಪ್ಪ ಅದರ ರಾಜ್ಯ ಸಂಚಾಲಕರಾದರು. ಹೀಗೆ ಡಿ.ಎಸ್.ಎಸ್. ಒಂದು ಸಾಂಸ್ಥಿಕ ರೂಪ ಪಡೆಯಿತು.
ಕ್ರಮೇಣ ದಲಿತ ಸಂಘರ್ಷ ಸಮಿತಿಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು. ನೌಕರರು, ಮಹಿಳೆಯರು, ಪೌರಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಲೇಖಕರು ಹಾಗೂ ಕಲಾವಿದರ ಒಕ್ಕೂಟಗಳೆಂಬ ಅದರ ಶಾಖೆಗಳು ಆರಂಭಗೊಂಡವು. ಪಾರಂಪರಿಕವಾಗಿ ಭೂಮಿಯೇ ಇಲ್ಲದಿದ್ದ ದಲಿತರು ಭೂಮಿಯನ್ನು ಪಡೆಯುವ ಹೋರಾಟವನ್ನು ಆರಂಭಿಸಿದರು. ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವ ಮೂಲಕ ಅಧಿಕಾರದ ಕೇಂದ್ರಗಳಿಗೆ ಪ್ರವೇಶ ಪಡೆಯುವುದು ದಲಿತ ಚಳವಳಿಯ ಮತ್ತೊಂದು ಕಾರ್ಯಸೂಚಿಯಾಗಿತ್ತು. ಆದರೆ ಕಾಲಕ್ರಮೇಣ ದಲಿತ ಸಂಘರ್ಷ ಚಳವಳಿಯಲ್ಲಿ ಬಿರುಕುಗಳು ಕಾಣಿಸಲಾರಂಭಿಸಿದವು. ಬೇರೆ ಬೇರೆ ಹೆಸರುಗಳಲ್ಲಿ ಹೊಸ ಸಂಘಟನೆಗಳು ಹುಟ್ಟಿಕೊಂಡವು.
ಸಾಹಿತಿಗಳಾದ ದೇವನೂರು ಮಹಾದೇವ ಮತ್ತು ಡಾ. ಸಿದ್ಧಲಿಂಗಯ್ಯನವರು ಸಾಹಿತ್ಯದ ಮೂಲಕ ದಲಿತರ ಒಳಜಗತ್ತನ್ನು ದಲಿತೇತರಿಗೆ ತೆರೆದುಕೊಟ್ಟರು. ಇತರ ದಲಿತ ಲೇಖಕರು ಈ ಸಮುದಾಯಗಳು ಜಾಗತೀಕರಣದ ಹಿನ್ನೆಲೆಯಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಅನಾವರಣ ಮಾಡುತ್ತಿದ್ದಾರೆ. ಇಂದು ದಲಿತರು ಸಮಾಜದ ಎಲ್ಲ ಆಗುಹೋಗುಗಳಲ್ಲಿ ನಿರ್ಣಾಯಕ ಪಾತ್ರವಹಿಸುವ ಸಾಮಥ್ರ್ಯವನ್ನು ತೋರುತ್ತಿದ್ದಾರೆ. ಆದರೆ ಸಾಗಬೇಕಾದ ದಾರಿ ಬಹಳಷ್ಟಿದೆ.
ಕನ್ನಡ ಉಳಿಸಿ ಚಳವಳಿ ಅಥವಾ ಕನ್ನಡ ಕಾವಲು ಚಳವಳಿ
ಏಕೀಕರಣ ಚಳವಳಿಯು ಕನ್ನಡಿಗರಲ್ಲಿ ಆತ್ಮವಿಶ್ವಾಸ ಮತ್ತು ಅನ್ಯೋನ್ಯತೆಯನ್ನು ತಂದಿತು. ಸಾಹಿತ್ಯ ಸೃಷ್ಟಿಯ ಮೂಲಕ ಕನ್ನಡದ ಲೇಖಕರು ಜನರ ಕನ್ನಡತನವನ್ನು ಜೀವಂತವಾಗಿ ಇಟ್ಟಿದ್ದರು. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಹಾಗೂ ಕನ್ನಡಪರ ಸಂಘಟನೆಗಳ ಪಾತ್ರ ಹಿರಿದಾಗಿದೆ. ಸಾ.ಶ. 1960ರ ದಶಕದ ನಂತರ ಬೆಂಗಳೂರಿನಲ್ಲಿ ಅನ್ಯಭಾಷಿಕರ ಅಬ್ಬರ ಹೆಚ್ಚಾದಾಗ ಅ.ನ.ಕೃ., ಚಿದಾನಂದಮೂರ್ತಿ, ಮ.ನ. ರಾಮಮೂರ್ತಿ, ವಾಟಾಳ್ ನಾಗರಾಜ್ ಮುಂತಾದವರು ಹಾಗೂ ಕರ್ನಾಟಕ ಯುವಜನ ಸಭಾ, ಕನ್ನಡ ಜಾಗೃತ ಪರಿಷತ್, ಕನ್ನಡ ಶಕ್ತಿಕೇಂದ್ರ ಮುಂತಾದ ಸಂಘಟನೆಗಳು ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಮೇಲ್ಗೈಯನ್ನು ಸಾಧಿಸುವಲ್ಲಿ ಸಫಲರಾದರು. ಇವಲ್ಲದೆ ಇನ್ನೂ ಅನೇಕ ಕನ್ನಡಪರ ಸಂಘಟನೆಗಳು ಇಂದು ಕನ್ನಡ ನೆಲ, ಜಲ ಮತ್ತು ಭಾಷೆಯ ಸಂರಕ್ಷಣೆಯ ವಿಷಯದಲ್ಲಿ ಹೆಚ್ಚು ಕ್ರಿಯಾಶೀಲವಾಗಿವೆ.
ಗೋಕಾಕ್ ಚಳವಳಿ
ಒಂದರ್ಥದಲ್ಲಿ 1980ರ ದಶಕವು ಕನ್ನಡ ಭಾಷೆಯ ಅಸ್ತಿತ್ವಕ್ಕೆ ನಡೆದ ಹೋರಾಟದ ಕಾಲ. 1982ರಲ್ಲಿ ಗೋಕಾಕ ವರದಿಯ ಅನುಷ್ಠಾನಕ್ಕಾಗಿ ಒಂದು ನಿರ್ಣಾಯಕ ಚಾರಿತ್ರಿಕ ಹೋರಾಟ ಪ್ರಾರಂಭವಾಯಿತು. ಇಡೀ ಕನ್ನಡ ಸಮುದಾಯ ಅಭೂತಪೂರ್ವ ರೀತಿಯಲ್ಲಿ ಈ ಹೋರಾಟವನ್ನು ನಡೆಸಿತು. ಕರ್ನಾಟಕದಲ್ಲಿದ್ದ ಭಾಷಾ ಅಲ್ಪಸಂಖ್ಯಾತರು ಕನ್ನಡವನ್ನು ಕಡ್ಡಾಯವಾಗಿ ಕಲಿಯದೆ ಅವರ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುತ್ತೇವೆಂಬ ಹಟಕ್ಕೆ ಬಿದ್ದರು. ಅಂದಿನ ಮುಖ್ಯಮಂತ್ರಿಗಳಾದ ಆರ್. ಗುಂಡೂರಾಯರು ಉಡುಪಿಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಯ ಮಠಾಧಿಪತಿಗಳು ಸಂಸ್ಕೃತಕ್ಕೆ ಪ್ರಾಶಸ್ತ್ಯ ಕೊಡಬೇಕೆಂದು ಒತ್ತಾಯಿಸಿದರು. ಇದರ ಪರಿಣಾಮವಾಗಿ ಶಿಕ್ಷಣ ಯಾವ ಮಾಧ್ಯಮದಲ್ಲಿ ಇರಬೇಕು ಎನ್ನುವ ಪ್ರಶ್ನೆಯನ್ನು ಬಿಟ್ಟು ಶಿಕ್ಷಣದಲ್ಲಿ ಭಾಷೆಗಳ ಸ್ಥಾನಗಳು ಹೇಗಿರಬೇಕು ಎಂಬುದನ್ನು ನಿರ್ಧರಿಸಲು ಒಂದು ಸಮಿತಿ ರಚನೆಯಾಯಿತು. ಡಾ. ವಿನಾಯಕ ಕೃಷ್ಣ ಗೋಕಾಕರ ಅಧ್ಯಕ್ಷತೆಯಲ್ಲಿ ಭಾಷಾ ಸಮಿತಿ ರಚನೆಯಾಯಿತು. ಈ ಸಮಿತಿಯು ಕನ್ನಡ ಭಾಷೆಗೆ ಪ್ರಥಮ ಆದ್ಯತೆ ಮತ್ತು ಕಡ್ಡಾಯ ಮಾಡಬೇಕೆಂದು ಶಿಫಾರಸು ಮಾಡಿತು. ಈ ಸಮಿತಿಯು ತ್ರಿಭಾಷಾ ಸೂತ್ರಕ್ಕೆ 350 ಅಂಕಗಳನ್ನು ನಿಗದಿಪಡಿಸಿತು. ತ್ರಿಭಾಷಾ ಪರೀಕ್ಷೆಯಲ್ಲಿ ಕನ್ನಡವು 150 ಅಂಕಗಳ ಪ್ರಥಮ ಭಾಷೆ ಆಗಿರಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಿತು.
ಗೋಕಾಕ್ ವರದಿಯನ್ನು ಅಂದಿನ ಸರಕಾರ ಒಪ್ಪಲಿಲ್ಲ. ಡಾ. ರಾಜಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕದಾದ್ಯಂತ ಬೃಹತ್ ಆಂದೋಲನ ನಡೆಯಿತು. ಕುವೆಂಪು, ಪಾಟೀಲ ಪುಟ್ಟಪ್ಪ ಮುಂತಾದ ಹಿರಿಯ ಸಾಹಿತಿಗಳು ಈ ಹೋರಾಟಕ್ಕೆ ಬೆಂಬಲವನ್ನು ನೀಡಿದರು.

ಗೋಕಾಕ್ ಚಳವಳಿಯ ಪ್ರಮುಖ ಘೋಷಣೆಗಳೆಂದರೆ “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ”, “ಏನೇ ಬರಲಿ ಕನ್ನಡ ಇರಲಿ”, “ಗೋಕಾಕ್ ವರದಿ ಜಾರಿಗೆ ಬರಲಿ”, “ಕರ್ನಾಟಕದಲ್ಲಿ ಕನ್ನಡದ ಉಸಿರು ತುಂಬಲಿ”, ಮುಂತಾದವು.
