ಪಾಠದ ಪರಿಚಯ: ಈ ಅಧ್ಯಾಯದಲ್ಲಿ ನೀವು ಆಫ್ರಿಕದ ಭೌಗೋಳಿಕ ಸ್ಥಾನ, ವಿಸ್ತೀರ್ಣ ಹಾಗೂ ಭೌಗೋಳಿಕ ಸನ್ನಿವೇಶ. ಪ್ರಾಕೃತಿಕ ಲಕ್ಷಣಗಳು, ನದಿ ವ್ಯವಸ್ಥೆ, ವಾಯುಗುಣ ಹಾಗೂ ಸ್ವಾಭಾವಿಕ ಸಸ್ಯವರ್ಗ ಮತ್ತು ಪ್ರಾಣಿಸಂಪತ್ತು, ವ್ಯವಸಾಯ, ಕೈಗಾರಿಕೆಗಳು, ಬೆಲೆಬಾಳುವ ಖನಿಜಗಳು, ಜನಸಂಖ್ಯೆಯ ಬೆಳವಣಿಗೆ, ಹಂಚಿಕೆ ಮತ್ತು ಜನಸಾಂದ್ರತೆಗಳ ಬಗ್ಗೆ ತಿಳಿಯುವಿರಿ.

ಪೀಠಿಕೆ: ಆಫ್ರಿಕ ಖಂಡವು ಏಷ್ಯಾದ ನಂತರ ಪ್ರಪಂಚದ ಎರಡನೆಯ ಅತ್ಯಂತ ದೊಡ್ಡ ಖಂಡವಾಗಿದೆ. ಇದು ಜನ ಸಂಖ್ಯೆಯಲ್ಲಿ ಎರಡನೆಯ ಸ್ಥಾನದಲ್ಲಿದೆ. ಇತ್ತೀಚಿನ ವರ್ಷಗಳವರೆಗೂ ಆಫ್ರಿಕ ಖಂಡವನ್ನು `ಕತ್ತಲೆಯ ಖಂಡ’ವೆಂದು ಕರೆಯಲಾಗುತ್ತಿತ್ತು. ಇದಕ್ಕೆ ಈ ಖಂಡದಲ್ಲಿ ಪ್ರಧಾನವಾಗಿ ಕಪ್ಪು ಜನರಿರುವುದರಿಂದಲ್ಲ: ಬದಲಾಗಿ ಅದರ ಪ್ರಸ್ಥಭೂಮಿಗಳು ಸಮುದ್ರ ತೀರದವರೆಗೂ ವಿಸ್ತರಿಸಿರುವುದು ಮತ್ತು ಉತ್ತರದಲ್ಲಿ ಸಹರ ಮರುಭೂಮಿ ಇದ್ದು, ಅದು ಹೊರ ಪ್ರಪಂಚಕ್ಕೆ ಬಹಳ ದೀರ್ಘ ಅವಧಿಯವರೆಗೂ ಶೋಧನೆಗೆ ಒಳಗಾಗದೆ ಉಳಿದಿತ್ತು. ಆಫ್ರಿಕ 54 World population review.com ದೇಶಗಳನ್ನು ಹೊಂದಿದೆ.

Is Africa splitting into two continents? | East African Rift Valley | Geography, geology

ಸ್ಥಾನ: ಆಫ್ರಿಕ ಖಂಡವು 37ಡಿಗ್ರಿ ಉತ್ತರ ಮತ್ತು 35 ಡಿಗ್ರಿ ದಕ್ಷಿಣ ಅಕ್ಷಾಂಶ ಹಾಗೂ 17 ಡಿಗ್ರಿ ಪಶ್ಚಿಮ ಮತ್ತು 50 ಡಿಗ್ರಿ ಪೂರ್ವ ರೇಖಾಂಶಗಳ ನಡುವೆ ನೆಲಸಿದೆ. ಆಫ್ರಿಕದ ಪಶ್ಚಿಮ ಭಾಗದಲ್ಲಿ ಪ್ರಧಾನ ರೇಖಾಂಶವು ಉತ್ತರ-ದಕ್ಷಿಣವಾಗಿ ಹಾಯ್ದು ಹೋಗುತ್ತದೆ. ವಿಶೇಷ ಸಂಗತಿ ಎಂದರೆ ಈ ಖಂಡದಲ್ಲಿ ಕರ್ಕಾಟಕ ವೃತ್ತ ಮತ್ತು ಮಕರ ವೃತ್ತಗಳೆರಡೂ ಹಾಯ್ದುಹೋಗಿವೆ. ಭೂ ಮಧ್ಯರೇಖೆಯು ಹೆಚ್ಚು ಕಡಿಮೆ ಈ ಖಂಡದ ಮಧ್ಯಭಾಗದಲ್ಲಿ ಹಾಯ್ದು ಹೋಗುವುದರಿಂದ ಇದನ್ನು `ಕೇಂದ್ರೀಯ ಖಂಡ’ವೆನ್ನುವರು.

ವಿಸ್ತೀರ್ಣ: ಆಫ್ರಿಕದ ಒಟ್ಟು ವಿಸ್ತೀರ್ಣ 30.4 ಮಿಲಿಯನ್ ಚ.ಕಿ.ಮೀ. ಇದು ದಕ್ಷಿಣೋತ್ತರವಾಗಿ 8000 ಕಿ.ಮೀ. ಉದ್ದ ಹಾಗೂ ಪೂರ್ವ-ಪಶ್ಚಿಮವಾಗಿ 7400 ಕಿ.ಮೀ ಅಗಲವಾಗಿದೆ. ಆಲ್-ಘಿರಮ್ (ಟುನಿಸಿಯ) ಆಫ್ರಿಕದ ಉತ್ತರ ತುದಿಯಾದರೆ ಅಗುಲ್ಹಾಸ್ (ದಕ್ಷಿಣ ಆಫ್ರಿಕ) ಭೂಶಿರವು ದಕ್ಷಿಣ ತುದಿಯಾಗಿದೆ.

ಭೌಗೋಳಿಕ ಸನ್ನಿವೇಶ: ಆಫ್ರಿಕದ ಬಹುತೇಕ ಭೂಭಾಗವು ಒಂದಿಲ್ಲೊಂದು ಸಮುದ್ರ ಅಥವಾ ಮಹಾಸಾಗರಗಳಿಂದ ಸುತ್ತುವರೆಯಲ್ಪಟ್ಟಿದೆ. ಉತ್ತರದಲ್ಲಿ ಮೆಡಿಟರೇನಿಯನ್ ಸಮುದ್ರ, ಪಶ್ಚಿಮಕ್ಕೆ ಅಟ್ಲಾಂಟಿಕ್ ಸಾಗರ, ಪೂರ್ವಕ್ಕೆ ಕೆಂಪು ಸಮುದ್ರ ಹಾಗೂ ಹಿಂದೂ ಮಹಾಸಾಗರಗಳು ಸುತ್ತುವರಿದಿವೆ. ಹಿಂದೆ ಈ ಖಂಡದ ಈಶಾನ್ಯ ಭಾಗವು ಸಿನಾಯ್ ಪರ್ಯಾಯ ದ್ವೀಪದಿಂದ ಏಷ್ಯಾದೊಂದಿಗೆ ಜೋಡಣೆಯಾಗಿದ್ದು, ಈಗ ಅದು ಸೂಯೇಜ್ ಕಾಲುವೆಯಿಂದ ಪ್ರತ್ಯೇಕ ಗೊಂಡಿದೆ. ಜಿಬ್ರಾಲ್ಟರ್ ಜಲಸಂಧಿಯಿಂದ ಯೂರೋಪ್ ಖಂಡ ಹಾಗೂ ಕೆಂಪು ಸಮುದ್ರದಿಂದ ಅರೇಬಿಯ ಪರ್ಯಾಯ ದ್ವೀಪ ಆಫ್ರಿಕದಿಂದ ಪ್ರತ್ಯೇಕಗೊಂಡಿದೆ. ಆಫ್ರಿಕ ಖಂಡದ ಸಮುದ್ರತೀರ 30500 ಕಿ.ಮೀ. ಉದ್ದವಾಗಿದೆ.

ಆಫ್ರಿಕ ಖಂಡದ ಪ್ರಾಕೃತಿಕ ಲಕ್ಷಣವು ಅದರ ಆಂತರಿಕ ರಚನೆಯ ಪ್ರತಿ ಬಿಂಬವಾಗಿದೆ. ಇಡಿ ಖಂಡವನ್ನೇ ವಿಶಾಲವಾದ ಪ್ರಸ್ಥಭೂಮಿಯಾಗಿ ಪರಿಗಣಿಸಲಾಗಿದೆ. ಅದು ಪುರಾತನ ಸ್ಫಟಿಕ ಶಿಲೆಗಳಿಂದ ರಚನೆಯಾಗಿದೆ. ಅದು ಕಿರಿದಾದ ಸಮುದ್ರದಂಚಿನಿಂದ ಕಡಿದಾಗಿ ಎದ್ದುಕೊಂಡ ಪೀಠಭೂಮಿ. ಹೀಗಾಗಿ ಈ ಖಂಡದ ಒಳನಾಡಿಗೆ ಪ್ರವೇಶಿಸುವುದು ಕಷ್ಟ. ಪೀಠಭೂಮಿ (ಪ್ರಸ್ಥಭೂಮಿ)ಯು ಆಗ್ನೇಯ ಭಾಗದಲ್ಲಿ ಎತ್ತರವಾಗಿದೆ ಮತ್ತು ಈಶಾನ್ಯಕ್ಕೆ ಕಡಿದಾದ ಇಳಿಜಾರನ್ನು ಹೊಂದಿದೆ. ಆಫ್ರಿಕ ಖಂಡವನ್ನು ಅದರ ವಿಸ್ತೀರ್ಣಕ್ಕೆ ಹೋಲಿಸಿದಾಗ ಅದು ಇತರೆ ಖಂಡಗಳಿಗಿಂತ ಕಡಿಮೆ ಎತ್ತರವುಳ್ಳ ಪರ್ವತ ಮತ್ತು ತಗ್ಗು ಮೈದಾನಗಳನ್ನು ಹೊಂದಿದೆ.

ಆಫ್ರಿಕದ ಸಮುದ್ರ ತೀರವು ಹೆಚ್ಚೂ ಕಡಿಮೆ ನೇರವಾಗಿದೆ. ಅದು ಕೆಲವೇ ದೊಡ್ಡ ತಗ್ಗು ಮೈದಾನ, ಸ್ವಾಭಾವಿಕ ಬಂದರು ಹಾಗೂ ಅಳಿವೆಗಳನ್ನು ಹೊಂದಿದೆ. ಅಲ್ಲಿ ಯಾವುದೇ ಕೊಲ್ಲಿ (Bay) ಮತ್ತು ಒಳಚಾಚುಗಳಿಲ್ಲ. ಅಲ್ಲದೆ ಕಡಲ ತೀರದ ಒಳಭಾಗಗಳು ಆಳವಾಗಿ ಕೊರೆಯಲ್ಪಟ್ಟಿವೆ.

ಮಹಾಸೀಳು ಕಣಿವೆ: ಎರಡು ಸಾಮಾನ್ಯ ಸ್ತರಭಂಗಗಳು ಅಥವಾ ಎರಡು ತಗ್ಗುಗಳ ನಡುವಣ ಭೂಭಾಗವು ಕುಸಿಯುವುದರಿಂದ ನಿರ್ಮಾಣಗೊಂಡ ಸಪಾಟಾದ ತಳವುಳ್ಳ ಕಣಿವೆಯನ್ನು ‘ಸೀಳುಕಣಿವೆ’ ಎನ್ನುವರು. ಆಫ್ರಿಕದ ಮಹಾಸೀಳು ಕಣಿವೆ ಬಹಳ ಉದ್ದವಾದುದು (6900 ಕಿ.ಮೀ). ಹೀಗಾಗಿ ಇದನ್ನು ‘ಮಹಾಸೀಳು ಕಣಿವೆ’ ಎಂದು ಕರೆಯಲಾಗಿದೆ.

ಇಂಗ್ಲಿಷ್ ಅಕ್ಷರ Y ಆಕಾರದಲ್ಲಿರುವ ಬಹುದೊಡ್ಡ ಸೀಳುಕಣಿವೆಯು ಆಫ್ರಿಕ ಖಂಡದ ಎದ್ದು ಕಾಣುವ ಬಹು ಸ್ಪಷ್ಟವಾದ ಪ್ರಾಕೃತಿಕ ಲಕ್ಷಣವಾಗಿದೆ. ಇದು ದಕ್ಷಿಣದ ಮೊಜಾಂಬಿಕ್‍ದಿಂದ ಪ್ರಾರಂಭವಾಗಿ ಮಲಾವಿ, ಟಾಂಜನಿಯಾ, ಕೀನ್ಯಾ ಮತ್ತು ಇಥಿಯೋಪಿಯಗಳ ಮೂಲಕ ಹಾಯ್ದು ಕೆಂಪು ಸಮುದ್ರದವರೆಗೆ ಹಬ್ಬಿದೆ. ಅಲ್ಲಿಂದ ಆಕ್ಯುಬಾ ಖಾರಿ, ಮೃತ ಸಮುದ್ರ ಹಾಗೂ ಗಾಲಿಲೀ ಸಮುದ್ರದಿಂದ ಮುಂದುವರೆದು ಜೋರ್ಡಾನದ ಸಿರಿಯ ಕಣಿವೆಯಲ್ಲಿ ಅಂತ್ಯವಾಗುತ್ತದೆ.

ಆಫ್ರಿಕದ ತಗ್ಗುಪ್ರದೇಶಗಳು: ಆಫ್ರಿಕದಲ್ಲಿ ಐದು ಪ್ರಮುಖ ತಗ್ಗು ಪ್ರದೇಶಗಳಿವೆ. ಅವುಗಳ ವಿವರ ಕೆಳಕಂಡಂತಿದೆ.

1. ಸುಡಾನ್ ತಗ್ಗುಪ್ರದೇಶವು ಬಿಳಿ ಮತ್ತು ನೀಲಿ ನೈಲ್‍ನದಿಗಳು ಹರಿಯುವ ಪ್ರದೇಶ. ಪ್ರಪಂಚದಲ್ಲೇ ಅತಿ ವಿಸ್ತಾರವಾಗಿರುವ ಈ ಜವುಗು ಭೂಮಿಯನ್ನು ‘ಸಡ್’ (Sudd) ಎಂದು ಕರೆಯುವರು.

2. ಚಾಡ್ ತಗ್ಗುಪ್ರದೇಶವು ಚಾಡ್ ಸರೋವರದಿಂದಾವರಿಸಿದೆ. ಇದೂ ಸಹ ಜವುಗು ಪ್ರದೇಶವಾಗಿದ್ದು, ಇದನ್ನು ಸಹರಾ ಮರುಭೂಮಿಯು ಆಕ್ರಮಿಸುತ್ತಿದೆ.

3. ಜೋಫ್ (Djouf) ತಗ್ಗು ಪ್ರದೇಶವು ಸಹರಾ ಮರುಭೂಮಿಯ ಪಶ್ಚಿಮ ಭಾಗವನ್ನೊಳಗೊಂಡಿದೆ ಮತ್ತು ಮಾರಿಟಾನಿಯ-ಮಾಲಿ ಗಡಿಯ ಉದ್ದಕ್ಕೂ ಸಾಕಷ್ಟು ವಿಸ್ತರಿಸಿದೆ. ಈ ಮೂಲಕ ನೈಜರ್ ನದಿ ಹರಿಯುತ್ತದೆ.

4. ಕಾಂಗೊ (ಜೈರೆ) ತಗ್ಗು ಪ್ರದೇಶವು ಒಂದು ರಚನಾತ್ಮಕ ಭೂಸ್ವರೂಪವಾಗಿದ್ದು ಅದು ಪ್ರಸ್ಥಭೂಮಿಯಿಂದ ಸುತ್ತುವರಿಯಲ್ಪಟ್ಟಿದೆ. ಈ ಮೂಲಕ ಕಾಂಗೊ ಮತ್ತು ಅದರ ಉಪನದಿಗಳು ಹರಿಯುತ್ತವೆ. ಇದೊಂದು ಅರಣ್ಯ ಪ್ರದೇಶ.

5. ಕಲಹರಿ ತಗ್ಗು ಪ್ರದೇಶವು ಬಹಳಷ್ಟು ಮಟ್ಟಿಗೆ ಮರುಭೂಮಿ ಮತ್ತು ಸ್ಟೆಪ್ಪಿ ಹುಲ್ಲುಗಾವಲಿನ ಭಾಗ. ಇದು ಪ್ರಸ್ಥಭೂಮಿಗಳಿಂದ ಸುತ್ತುವರಿದಿದೆ.

ಸರೋವರಗಳು: ಆಫ್ರಿಕ ಖಂಡವು ಆರ್ಥಿಕ ಸಾಮಥ್ರ್ಯವನ್ನು ವೃದ್ಧಿಸುವ ಅನೇಕ ಸರೋವರಗಳನ್ನು ಹೊಂದಿದೆ. ಅವುಗಳಲ್ಲಿ ಎಂಟು ಪ್ರಮುಖವಾದವು. ಪೂರ್ವ ಆಫ್ರಿಕದಲ್ಲಿ ಅತೀ ದೊಡ್ಡ ಮತ್ತು ಆಳವುಳ್ಳ ಸರೋವರಗಳಿವೆ. ಅವುಗಳೆಲ್ಲ ಸಾಧಾರಣವಾಗಿ ಸೀಳು ಕಣಿವೆಯೊಂದಿಗೆ ಸಂಬಂಧವನ್ನು ಹೊಂದಿದೆ. ಸೀಳು ಕಣಿವೆಯ ಪಶ್ಚಿಮಕ್ಕೆ ಅಲ್ಬರ್ಟ್, ಎಡ್ವರ್ಡ್, ಕಿವು, ಟಾಂಗನಿಕ ಮತ್ತು ನ್ಯಾಸ ಸರೋವರಗಳಿವೆ. ಅಲ್ಲದೆ ಸೀಳು ಕಣಿವೆಯ ಪೂರ್ವಕ್ಕೆ ರುಡಾಲ್ಫ್ (ಟುರ್ಕಾನ) ನಟ್ರೋನ್ ಮತ್ತು ಇಯಾಸಿ ಸರೋವರಗಳಿವೆ.

ಟಾಂಗನಿಕ ಸರೋವರವು ಪ್ರಪಂಚದ ಎರಡನೆಯ ಅತಿ ಆಳವಾದ ಸರೋವರವಾಗಿದೆ. ಅದು ಸುಮಾರು 1,436 ಮೀ ಆಳವಾಗಿದೆ. ಸೀಳುಕಣಿವೆಯ ಎರಡೂ ಸಾಲುಗಳ ನಡುವೆ ಇರುವ ವಿಕ್ಟೋರಿಯಾ ಸರೋವರವು ಆಫ್ರಿಕದ ಬಹು ದೊಡ್ಡ ಸರೋವರವಾಗಿದೆ. ಅದು ಸುಮಾರು 69,481 ಚ. ಕಿ.ಮೀ ವಿಸ್ತಾರವಾಗಿದೆ. ಇಲ್ಲಿಂದ ನೈಲ್‍ನದಿ ಉಗಮವಾಗುತ್ತದೆ.

ಟಾಂಗನಿಕ ಸರೋವರ
ಟಾಂಗನಿಕ ಸರೋವರ
 GREAT LAKES OF AFRICA || A LAKE WITH GAS UNDER IT !!!

ಪರ್ವತಗಳು: ಆಫ್ರಿಕ ಖಂಡವು ಹಲವು ಪರ್ವತಗಳನ್ನು ಹೊಂದಿದೆ. ಆಫ್ರಿಕದ ಸಮತಟ್ಟಾದ ಮೈದಾನದ ಏಕತಾನತೆಯನ್ನು ಮುರಿಯುವಲ್ಲಿ ಕೆಲವು ಸಣ್ಣ ಸಣ್ಣ ಬೆಟ್ಟ ಶ್ರೇಣಿಗಳು ಇವೆ. ಅವುಗಳಲ್ಲಿ ಅಟ್ಲಾಸ್ ಸರಣಿ, ಡ್ರೇಕನ್ಸ್‍ಬರ್ಗ್ ಪರ್ವತ ಮತ್ತು ಕಿಲಿಮಾಂಜರೋ ಪರ್ವತಗಳು ಪ್ರಮುಖವಾಗಿವೆ.

ಅಟ್ಲಾಸ್ ಸರಣಿ: ಇವು ನಮ್ಮ ಭಾರತದ ಹಿಮಾಲಯ ಪರ್ವತಗಳಂತೆಯೇ ಮಡಿಕೆ ಪರ್ವತಗಳಾಗಿವೆ. ಇವು ದಕ್ಷಿಣ ಯುರೋಪಿನ ಪರ್ವತಗಳ ಮುಂದುವರಿಕೆಗಳಾಗಿವೆ. ಮೌಂಟ್ ಟಾಬ್ಕಾಲ್ ಎತ್ತರವಾದ ಶಿಖರ. ಅಟ್ಲಾಸ್ ಸರಣಿಗಳು ಅಲ್ಜಿರಿಯ, ಮೊರಾಕೊ ಮತ್ತು ಟುನಿಸಿಯಗಳಲ್ಲಿ ಹಬ್ಬಿವೆ.

ಡ್ರೇಕನ್ಸ್ ಬರ್ಗ್ ಪರ್ವತಗಳು: ಆಫ್ರಿಕದ ಆಗ್ನೇಯ ಸಮುದ್ರ ತೀರದ ಉದ್ದಕ್ಕೂ ಇವು ಹಬ್ಬಿವೆ. ಇವು ಹೆಸರಿಗಷ್ಟೇ ಪರ್ವತಗಳು. ಪೀಠ ಭೂಮಿಗಳ ಓರೆಯಾದ ಅಂಚುಗಳಾಗಿವೆ.

ಕಿಲಿಮಾಂಜರೊ ಪರ್ವತಗಳು: ಈ ಪರ್ವತ ಶ್ರೇಣಿಯು ಆಫ್ರಿಕದ ಪೂರ್ವ ಭಾಗದಲ್ಲಿದೆ. ಇದು ಆಫ್ರಿಕ ಖಂಡದ ಅತ್ಯಂತ ಎತ್ತರವಾದ ಶಿಖರವನ್ನು ಹೊಂದಿದೆ. ಅದರ ಎತ್ತರ 5,895 ಮೀಟರುಗಳು ಇದು ಸಮಭಾಜಕ ವೃತ್ತದ ಸಮೀಪ ಇದ್ದರೂ ಇದರ ಶಿಖರವು ಯಾವಾಗಲೂ ಹಿಮದಿಂದ ಆವರಿಸಿದೆ. ಅದಕ್ಕೆ ಕಾರಣ ಅದರ ಎತ್ತರ.

ಕಿಲಿಮಾಂಜರೋ ಪರ್ವತ

ಮೇಲ್ಕಂಡವುಗಳಲ್ಲದೆ ಆಹಾಗ್ಗಾರ್, ಟೆಬೆಸ್ಟಿ, ರುವೆಂಜೊರಿ, ಕೇಪ್ ಸರಣಿ ಮತ್ತು ಪೂರ್ವ ಆಫ್ರಿಕ ಸರಣಿಗಳು ಆಫ್ರಿಕದ ಇತರೆ ಪರ್ವತಗಳು.

ಆಫ್ರಿಕದ ಅತ್ಯಂತ ಎತ್ತರವಾದ ಶಿಖರ ಕಿಲಿಮಾಂಜರೊ ಮತ್ತು ಅತ್ಯಂತ ತಗ್ಗು ಪ್ರದೇಶ ಅಸಲ್ (ಜಿಬೋಟಿ) ಸರೋವರವಾಗಿದೆ.

ಸೂಯೇಜ್ ಭೂಕಂಠ: ಎರಡು ವಿಶಾಲವಾದ ಭೂಭಾಗಗಳನ್ನು ಕೂಡಿಸುವ ಮತ್ತು ಎರಡು ಜಲರಾಶಿಗಳನ್ನು ಪ್ರತ್ಯೇಕಿಸುವ ಕಿರಿದಾದ ಭೂಭಾಗವೇ “ಭೂಕಂಠ”. ಸೂಯೇಜ್ ಭೂಕಂಠ ಪ್ರಖ್ಯಾತವಾದುದು.

ಸೂಯೇಜ್ ಭೂಕಂಠವು ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರಗಳ ನಡುವಣ ಕಿರಿದಾದ ಭೂಭಾಗವಾಗಿದೆ. ಅದು ಆಫ್ರಿಕ ಮತ್ತು ಏಷ್ಯಾ ಖಂಡಗಳನ್ನು ಸೇರಿಸುವಂತಾದ್ದು. ಪ್ರಸ್ತುತ ಆಫ್ರಿಕ ಖಂಡದ ದೇಶಗಳಲ್ಲಿ ಒಂದಾದ ದೇಶಕ್ಕೆ ಈ ಭೂಕಂo ಭಾಗವು ಸೇರಿದೆ ಮತ್ತು ಆಫ್ರಿಕದ ಈಶಾನ್ಯ ಭಾಗದಲ್ಲಿದೆ. ಅದನ್ನು ಸೂಯೇಜ್ ಕಾಲುವೆ ನಿರ್ಮಿಸಲು ತೋಡಲಾಗಿದೆ. ಈ ಕಾಲುವೆ ಅಸಾಧಾರಣ ಮಾನವ ನಿರ್ಮಿತವಾದುದು ಮತ್ತು ಅದು ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರಗಳನ್ನು ಸಂಪರ್ಕಿಸುತ್ತದೆ. ಇದು ಪ್ರಪಂಚದಲ್ಲೇ ಹೆಚ್ಚು ಹಡಗು ಸಂಚರಿಸುವ ಪ್ರಮುಖ ಸಾಗರ ಮಾರ್ಗವಾಗಿದ್ದು ಯೂರೋಪ್ ಮತ್ತು ಏಷ್ಯಾಗಳನ್ನು ಕಡಿಮೆ ಅಂತರದಿಂದ ಸಂಪರ್ಕಿಸುತ್ತದೆ.

Suez Canal Ship Crossing Video I Suez Canal History I Suez Canal Facts
Sahara : The Largest Desert In The World | Lesson For Kids
5 Major Deserts of Africa in 4K

ಆಫ್ರಿಕದ ನದಿ ವ್ಯವಸ್ಥೆಗಳು ತಮ್ಮದೇ ಆದ ವೈಚಿತ್ರ್ಯಗಳನ್ನು ಹೊಂದಿವೆ. ಬಹಳಷ್ಟು ನದಿಗಳು ತಮ್ಮ ಮೇಲ್ಕಣಿವೆ ಪಾತ್ರದಲ್ಲಿ ಆಳವಾದ ಕಂದರಗಳನ್ನು ನಿರ್ಮಿಸಿವೆ. ಜಲಪಾತಗಳು, ತ್ವರಿತ ಪ್ರವಾಹಗಳನ್ನು (Rapids) ಹೊಂದಿವೆ. ಋತುಕಾಲಿಕ ಮಳೆಯ ಹಂಚಿಕೆಯ ಪರಿಣಾಮದಿಂದ ಅರೆಕಾಲಿಕವಾಗಿ ಹರಿಯುತ್ತವೆ. ಮುಕ್ತ ನೌಕಯಾನಕ್ಕೆ ಸೂಕ್ತವಲ್ಲ. ಸರ್ವಕಾಲಿಕ ನದಿಗಳು ಕಡಿಮೆ. ಇಲ್ಲಿ ಒಳನಾಡಿನ ನದಿಗಳೇ ಹೆಚ್ಚು.

ಆಫ್ರಿಕ ಖಂಡವು ನಾಲ್ಕು ಪ್ರಮುಖ ನದಿಗಳನ್ನು ಹೊಂದಿದೆ. ಅವುಗಳೆಂದರೆ – ನೈಲ್, ಕಾಂಗೊ (ಜೈರೆ), ನೈಜರ್ ಮತ್ತು ಜಾಂಬೆಜಿ ನದಿಗಳು ಆಫ್ರಿಕದ ಇತರ ಮಹತ್ವದ ನದಿಗಳೆಂದರೆ: ಸೆನೆಗಲ್, ಆರೆಂಜ್ ಮತ್ತು ಲಿಂಪೋಪೋಗಳಾಗಿವೆ.

ನೈಲ್ ನದಿ: ನೈಲ್ ನದಿಯು ಜಗತ್ತಿನ ಅತ್ಯಂತ ಉದ್ದವಾದ ನದಿ. ಇದು 6,650 ಕಿ.ಮೀ ಉದ್ದ ಹರಿಯುತ್ತದೆ. ವಿಕ್ಟೋರಿಯ ಸರೋವರದಲ್ಲಿ ನೈಲ್‍ನದಿಯಾಗಿ ಉಗಮಗೊಂಡು ಸಹರಾ ಮರುಭೂಮಿಯಗುಂಟ ಉತ್ತರಾಭಿಮುಖವಾಗಿ ಹರಿದು ಮೆಡಿಟರೇನಿಯನ್ ಸಮುದ್ರದಲ್ಲಿ ಸಂಗಮಗೊಳ್ಳುತ್ತದೆ. ನೈಲ್‍ನದಿಯ ಬಯಲು ಅತ್ಯಂತ ಫಲವತ್ತಾಗಿದೆ. ಸಹಸ್ರಾರು ಜನರ ಬದುಕಿಗೆ ನೆರವಾಗಿದ್ದು, ಜನರು ಅದರ ನೀರನ್ನು ನೀರಾವರಿಗಾಗಿ ಬಳಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಅಲ್-ಗಜಲ್ ಎಂಬುದು ಎಡದಂಡೆಯ ಉಪನದಿ ಮತ್ತು ಸೂಬತ್, ನೀಲಿನೈಲ್ ಮತ್ತು ಅಟ್ಬಾರ ಎಂಬುವವು ಬಲದಂಡೆಯ ಉಪನದಿಗಳು.

ನೈಲ್ ನದಿ

ನೀಲಿ ನೈಲ್ ನದಿಯು ಥಾನಾ ಸರೋವರದಲ್ಲಿ (ಇಥಿಯೋಪಿಯ) ಉಗಮ ಹೊಂದುತ್ತದೆ ಮತ್ತು ಕಾರ್ಟೂಮ್ ಎಂಬಲ್ಲಿ ಬಿಳಿ ನೈಲ್ ನದಿಯನ್ನು ಕೂಡಿಕೊಳ್ಳುತ್ತದೆ. ನೈಲ್ ನದಿಯು ಪ್ರಪಂಚದಲ್ಲೆ ಪ್ರಸಿದ್ದ ಮುಖಜ ಭೂಮಿಯನ್ನು ನಿರ್ಮಿಸಿದೆ. ಈ ನದಿಗೆ ನಿರ್ಮಿಸಿರುವ ಅಣೆಕಟ್ಟೆಗಳಲ್ಲಿ ಅಸ್ವಾನ್ ಅಣೆಕಟ್ಟೆ ದೊಡ್ಡದು.

ಕಾಂಗೋ ನದಿ: ಕಾಂಗೋ ಅಥವಾ ಜೈರೆ ನದಿಯು ಆಫ್ರಿಕದ ಎರಡನೆಯ ಉದ್ದವಾದ ನದಿ. ಆಫ್ರಿಕದ ಜನ ಈ ನದಿಯನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಉಗಮ ಸ್ಥಾನದಲ್ಲಿ ಈ ನದಿಯನ್ನು ಲುಆಪುಲಾ ಎಂದು ಮತ್ತು ಉಳಿದ ಎಲ್ಲ ಕಡೆಗೆ ಲುಆಲಾಬ ಎಂದು ಕರೆಯುತ್ತಾರೆ.

ಕಾಂಗೊ (ಜೈರೆ)
ಕಾಂಗೊ (ಜೈರೆ)

ಕಾಂಗೋ ನದಿಯು ಸಮಭಾಜಕ ವೃತ್ತಕ್ಕೆ ಸಮೀಪದಲ್ಲಿ ಉಗಮಹೊಂದಿ ಮೊದಲು ಉತ್ತರಕ್ಕೆ, ಅನಂತರ ನೈಋತ್ಯಕ್ಕೆ 4640 ಕಿ.ಮೀ ದೂರ ಹರಿಯುತ್ತ ಅಟ್ಲಾಂಟಿಕ್ ಸಾಗರ ಸೇರುತ್ತದೆ. ಇದು ಆಫ್ರಿಕದ ಮಧ್ಯಭಾಗದಲ್ಲಿ ಸಮಭಾಜಕ ವೃತ್ತದ ಅರಣ್ಯಗಳ ನಡುವೆ ಹರಿಯುತ್ತದೆ. ಪ್ರಸಿದ್ಧ ಲಿವಿಂಗ್‍ಸ್ಟನ್ ಜಲಪಾತವನ್ನು ನಿರ್ಮಿಸುತ್ತದೆ. ಆದರೆ ನದಿ ಮುಖಜ ಭೂಮಿ ಹೊಂದಿಲ್ಲ.

ನೈಜರ್ ನದಿ: ಆಫ್ರಿಕದ ಮೂರನೇ ಉದ್ದವಾದ ನದಿ ಇದಾಗಿದೆ. ಈ ನದಿಯು ಪಶ್ಚಿಮ ಕರಾವಳಿಯ ಎತ್ತರದ ಭಾಗದಲ್ಲಿ ಉಗಮಹೊಂದುತ್ತದೆ. ಇದು ಕೂಡಾ ಅಟ್ಲಾಂಟಿಕ್ ಮಹಾಸಾಗರವನ್ನು ಕೂಡಿಕೊಳ್ಳುತ್ತದೆ. ಇದು ವರ್ಷವಿಡಿ ತುಂಬಿ ಹರಿಯುವ ನದಿಯಲ್ಲ. ಈ ನದಿಯ ಉದ್ದ 4000 ಕಿ.ಮೀ.

ನೈಜರ್ ನದಿ
ನೈಜರ್ ನದಿ

ಜಾಂಬೆಜಿ ನದಿ: ಆಫ್ರಿಕದ ನಾಲ್ಕನೆಯ ಪ್ರಮುಖ ನದಿ. ಇದು ಆಫ್ರಿಕದ ದಕ್ಷಿಣಭಾಗದ ಮಹತ್ವದ ನದಿಯಾಗಿದೆ. ಇದು ಕೇಂದ್ರ ಆಫ್ರಿಕ ಪ್ರದೇಶದಲ್ಲಿ ಹುಟ್ಟಿ ಆಗ್ನೇಯದ ಕಡೆಗೆ ಹರಿಯುತ್ತದೆ. ಹಿಂದೂ ಮಹಾಸಾಗರದಲ್ಲಿ ಸೇರುತ್ತದೆ. ಇದು ತನ್ನ ಪಾತ್ರದ ಉದ್ದಕ್ಕೂ ಸಾಕಷ್ಟು ಪ್ರವಾಹ ಹಾಗೂ ಜಲಪಾತಗಳನ್ನು ಉಂಟುಮಾಡಿದೆ. ಅವುಗಳಲ್ಲಿ ಅತ್ಯಂತ ವಿಶಿಷ್ಟವಾದುದು ವಿಕ್ಟೋರಿಯ ಜಲಪಾತ. ಈ ನದಿಯು ಹಲವು ಆಳವಾದ ಕಂದರಗಳ ಮುಖಾಂತರ ಹರಿಯುತ್ತದೆ. ಅವುಗಳಲ್ಲಿ ‘ಕರಿಬ ಕಂದರ’ ಪ್ರಸಿದ್ಧವಾದುದು. ಈ ನದಿಯ ಉದ್ದ ಸುಮಾರು 3500 ಕಿ.ಮೀ ಗಳು.

ಜಾಂಬೆಜಿ ನದಿ
ಜಾಂಬೆಜಿ ನದಿ
360° Victoria Falls – The Devil’s Pool | National Geographic

ಸೆನೆಗಲ್‍ ನದಿ: ಇದು ಗಿನಿಯ ಘೌಟಾ ಜಾಲ್ಲೊನ್ ಪ್ರಸ್ಥಭೂಮಿಯಲ್ಲಿ ಉಗಮ ಹೊಂದುತ್ತದೆ. ಅನಂತರ ವಾಯುವ್ಯಕ್ಕೆ ಸುಮಾರು 1640 ಕಿ.ಮೀ. ಹರಿದು, ಅಂತಿಮವಾಗಿ ಅಟ್ಲಾಂಟಿಕ್ ಸಾಗರ ಸೇರುವುದು. ಮಾರಿಟಾನಿಯ ಮತ್ತು ಸೆನೆಗಲ್ ಪ್ರಾಂತ್ಯಗಳ ನಡುವೆ ಗಡಿಯಾಗಿ ಹರಿಯುವುದು.

ಸೆನೆಗಲ್‍ ನದಿ
ಸೆನೆಗಲ್‍ ನದಿ
Top 10 Most Powerful Rivers in Africa

ವಾಯುಗುಣ: ಅತ್ಯಂತ ಉದ್ದ ಮತ್ತು ಅಗಲವನ್ನುಳ್ಳ ಆಫ್ರಿಕ ಖಂಡವು ಉತ್ತರಾರ್ಧಗೋಳ ಮತ್ತು ದಕ್ಷಿಣಾರ್ಧಗೋಳಗಳಲ್ಲಿ ವಿಸ್ತರಿಸಿಕೊಂಡಿದೆ. ಹೀಗಾಗಿ ಇದನ್ನು ಕೇಂದ್ರಸ್ಥಾನ ಭೂಖಂಡವೆಂದು ಕರೆಯಲಾಗಿದೆ. ಈ ಭೂಖಂಡದ ಮಧ್ಯಭಾಗದಲ್ಲಿ ಸಮಭಾಜಕ ವೃತ್ತವು ಹಾಯ್ದು ಹೋಗಿರುವುದರಿಂದ ಸೂರ್ಯನ ಕಿರಣಗಳು ಲಂಬವಾಗಿ ಪ್ರಸರಿಸುತ್ತವೆ. ಆದ್ದರಿಂದ ಈ ಖಂಡದಲ್ಲಿ ಉಷ್ಣವಲಯದ ವಾಯುಗುಣವಿದೆ. ಜೊತೆಗೆ ಇನ್ನೂ ಹಲವು ಅಂಶಗಳು ಆಫ್ರಿಕದ ವಾಯುಗುಣದ ಮೇಲೆ ಪ್ರಭಾವ ಬೀರುತ್ತವೆ. ಉದಾ: ಎತ್ತರವುಳ್ಳ ಪರ್ವತಗಳು ಇಲ್ಲದಿರುವುದು, ಪ್ರವಾಹಗಳು, ಪೂರ್ವ-ಪಶ್ಚಿಮಕ್ಕೆ ಹೆಚ್ಚು ವಿಸ್ತರಣೆ ಮತ್ತು ಸನ್ನಿವೇಶ. ಸಹರಾದ ಪಶ್ಚಿಮದಂಚಿನ ಉದ್ದಕ್ಕೂ ಹರಿಯುವ (ಕೆನರಿ ಪ್ರವಾಹ) ಹಾಗೂ ಕಲಹರಿಯ ಪಶ್ಚಿಮ ಕರಾವಳಿಗೆ ಹೊಂದಿಕೊಂಡಂತೆ ಹರಿಯುವ ಶೀತಸಾಗರ (ಬೆಂಗ್ವಲಪ್ರವಾಹ) ಪ್ರವಾಹಗಳು ಕರಾವಳಿಯ ತಗ್ಗು ಪ್ರದೇಶಗಳಿಗೆ ಹೊಂದಿಕೊಂಡಿರುವ ಭಾಗಗಳ ಉಷ್ಣಾಂಶವನ್ನು ಕಡಿಮೆಗೊಳಿಸುವವು. ಈ ಎರಡೂ ಶೀತ ಪ್ರವಾಹಗಳಾಗಿರುವುದರಿಂದ ಅವು ಹೆಚ್ಚು ತೇವಾಂಶವನ್ನು ತರಲಾರವು. ಆದರೆ ಆಗ್ನೇಯ ಕರಾವಳಿಗೆ ಹೊಂದಿಕೊಂಡು ಹರಿಯುವ ಮೊಸಾಂಬಿಕ್ ಉಷ್ಣಸಾಗರ ಪ್ರವಾಹವು ಹೆಚ್ಚು ತೇವಾಂಶವನ್ನು ತರುವುದರೊಂದಿಗೆ ಮಳೆ ಸುರಿಸುತ್ತದೆ.

ಎತ್ತರವುಳ್ಳ ಪರ್ವತಗಳು ಇಲ್ಲದಿರುವುದು ಹಾಗೂ ವಾಯುಗುಣದ ಇತರೆ ವಿಭಾಜಕಗಳೂರತೆಯು ಇಲ್ಲಿ ಉಷ್ಣವಲಯದ ವಾಯುವಿನ ಮುಕ್ತಚಲನೆಗೆ ಅನುವು ಮಾಡಿಕೊಡುತ್ತದೆ. ಹೀಗಾಗಿ ವಾಯುಗುಣದಲ್ಲಿ ಬದಲಾವಣೆಯು ನಿಧಾನವಾಗಿ ಸಾಗುವುದು.

ಆಫ್ರಿಕದ ವಾಯುಗುಣದ ಮೇಲೆ ಮಳೆಯ ಹಂಚಿಕೆಯೂ ಮಹತ್ವದ ಪಾತ್ರವಹಿಸುತ್ತದೆ. ಸಮಭಾಜಕ ವೃತ್ತದ ಬಳಿ ಮಳೆಯು ಹೆಚ್ಚಾಗಿರುತ್ತದೆ. ಈ ಪ್ರದೇಶದಲ್ಲಿ ವಾರ್ಷಿಕ ಸರಾಸರಿ ಮಳೆಯು 200 ಸೆಂ.ಮೀ., ಆಗಿರುತ್ತದೆ ಮತ್ತು ಸಮಭಾಜಕ ವೃತ್ತದಿಂದ ದೂರ ಹೋದಂತೆ ಮಳೆ ಕಡಿಮೆಯಾಗುತ್ತದೆ. ಸಹರ, ಕಲಹರಿ ಮತ್ತು ನಮೀಬಿಯ ಪ್ರದೇಶಗಳಲ್ಲಿ ಮಳೆ ಕೇವಲ 15 ಸೆಂ. ಮೀ ಆಗಿರುತ್ತದೆ. ಆದಾಗ್ಯೂ ಕ್ಯಾಮರೂನ್ ಆಫ್ರಿಕದ ಅತ್ಯಂತ ತೇವದ ಪ್ರದೇಶವಾಗಿದ್ದು 1016 ಸೆಂ.ಮೀ ವಾರ್ಷಿಕ ಸರಾಸರಿ ಮಳೆಯನ್ನು ಪಡೆಯುತ್ತದೆ.

ವಾಯುಗುಣದ ಪರಿಸ್ಥಿತಿಯನ್ನಾಧರಿಸಿ ಆಫ್ರಿಕ ಖಂಡವನ್ನು ಈ ಕೆಳಕಂಡಂತೆ ಎಂಟು ವಲಯಗಳನ್ನಾಗಿ ವಿಂಗಡಿಸಲಾಗಿದೆ.

1. ಸಮಭಾಜಕ ವೃತ್ತದ ತೇವ ಪ್ರದೇಶ.

2. ಸವನ್ನಮಾದರಿ ಪ್ರದೇಶ.

3. ಉಷ್ಣವಲಯದ ಮರುಭೂಮಿ ಪ್ರದೇಶ.

4. ಮೆಡಿಟರೇನಿಯನ್ ಪ್ರದೇಶ.

5. ಸಮಶೀತೋಷ್ಣ ಹುಲ್ಲುಗಾವಲು ಪ್ರದೇಶ.

6. ಎತ್ತರವುಳ್ಳ ಪ್ರದೇಶ.

7. ಆರ್ಧ್ರ ಉಪ-ಉಷ್ಣವಲಯ.

8. ಶುಷ್ಕಚಳಿಗಾಲವುಳ್ಳ ಉಪ-ಉಷ್ಣವಲಯ.

1. ಸಮಭಾಜಕ ವೃತ್ತದ ತೇವು ಪ್ರದೇಶ: ಇದು ಸಮಭಾಜಕ ವೃತ್ತದ ಎರಡೂ ಕಡೆಗೂ ಹರಡಿರುವ ತಗ್ಗುಪ್ರದೇಶ ಹಾಗೂ ಕಾಂಗೊ ಬಯಲಿನಿಂದ ಗಿನಿಪ್ರದೇಶದವರೆಗೆ ವಿಸ್ತರಿಸಿದೆ. ಇಲ್ಲಿನ ವಾಯುಗುಣ ವರ್ಷವೆಲ್ಲಾ ಅತಿಶಾಖ ಮತ್ತು ಮಳೆಯಿಂದ ಕೂಡಿರುತ್ತದೆ. ಇಲ್ಲಿ ನಿತ್ಯವೂ ಅಪರಾಹ್ನ ವೇಳೆಯಲ್ಲಿ ಸುರಿಮಳೆ (downpour) ಯಾಗುತ್ತದೆ. ಅದು ಪರಿಸರಣ ರೀತಿಯ ಮಳೆ. ಅತಿಶಾಖ ಮತ್ತು ತೇವು ಪರಿಸ್ಥಿತಿಯ ಈ ವಾಯುಗುಣ ಹಿತಕರವಾದುದಲ್ಲ.

2. ಸವನ್ನಮಾದರಿ ವಾಯುಗುಣ ಪ್ರದೇಶ: ಇದು ಸೋಮಾಲಿಯ, ಇಥಿಯೋಪಿಯ, ಸುಡಾನ್, ಚಾಡ್ ಮತ್ತು ನೈಜರ್ ಪ್ರಾಂತ್ಯಗಳ ಭಾಗಗಳನ್ನೊಳಗೊಂಡಿದೆ. ಈ ಮಾದರಿಯ ವಾಯುಗುಣವು ಹೆಚ್ಚಾಗಿ ಸುಡಾನ್‍ನಲ್ಲಿ ಕಂಡುಬರುವುದು. ಹೀಗಾಗಿ ಇದನ್ನು ‘ಸುಡಾನ್ ಮಾದರಿ ವಾಯುಗುಣ’ ಎಂತಲೂ ಕರೆಯುವರು. ಇಲ್ಲಿ ಉಷ್ಣಾಂಶ ಹೆಚ್ಚು. ಅದು ತಗ್ಗು ಪ್ರದೇಶಗಳಿಗಿಂತ ಪೂರ್ವಭಾಗದ ಎತ್ತರವಾದ ಪ್ರದೇಶಗಳಲ್ಲಿ ಕಡಿಮೆ, ಬೇಸಿಗೆಯಲ್ಲಿ ಮಳೆ ಹೆಚ್ಚು.

3. ಉಷ್ಣವಲಯದ ಮರುಭೂಮಿ ಪ್ರದೇಶ: ಆಫ್ರಿಕ ಖಂಡದ ಉತ್ತರಭಾಗ ಮತ್ತು ದಕ್ಷಿಣ ಭಾಗಗಳೆರಡರಲ್ಲೂ ಮರುಭೂಮಿಗಳಿವೆ. ಈ ಪ್ರದೇಶದಲ್ಲಿ ಬೇಸಿಗೆ ಅತಿ ಉಷ್ಣವಾಗಿದ್ದರೆ ಚಳಿಗಾಲವು ತಂಪಾಗಿರುತ್ತದೆ. ಬೇಸಿಗೆ ಮತ್ತು ಚಳಿಗಾಲಗಳಿಗಿಂತಲೂ ಹಗಲು ಮತ್ತು ರಾತ್ರಿಗಳ ಉಷ್ಣಾಂಶದ ಹಂಚಿಕೆಯಲ್ಲಿ ಹೆಚ್ಚು ವ್ಯತ್ಯಾಸವಿರುತ್ತದೆ. ಮಳೆ ಬಹಳ ವಿರಳ. ಆಕಾಶದಲ್ಲಿ ಮೋಡಗಳ ರಚನೆ ಬಹಳ ಅಪರೂಪ.

4. ಮೆಡಿಟರೇನಿಯನ್ ವಾಯುಗುಣ ಪ್ರದೇಶ: ಆಫ್ರಿಕ ಖಂಡದ ಉತ್ತರದ ಕರಾವಳಿ ಪ್ರದೇಶ ಹಾಗೂ ದಕ್ಷಿಣದ ತುದಿ ಭಾಗಗಳಲ್ಲಿ ಇಂತಹ ವಾಯುಗುಣವು ಕಂಡು ಬರುತ್ತದೆ. ಈ ಪ್ರದೇಶದಲ್ಲಿ ಮೊರಾಕೊ, ಉತ್ತರ ಅಲ್ಜೀರಿಯ ಮತ್ತು ಕೇಪ್ ಪ್ರಾಂತ್ಯಗಳು ಸೇರಿವೆ. ಅತಿ ಉಷ್ಣ ಮತ್ತು ಶುಷ್ಕವಾದ ಬೇಸಿಗೆ ಹಾಗೂ ತಂಪು ಮತ್ತು ಮಳೆ ಬೀಳುವ ಚಳಿಗಾಲಗಳು ಈ ವಾಯುಗುಣದ ಮುಖ್ಯ ಲಕ್ಷಣಗಳು. ಇದೊಂದೇ ಚಳಿಗಾಲದಲ್ಲಿ ಮಳೆ ಪಡೆಯುವ ವಾಯುಗುಣ ಪ್ರದೇಶ.

5. ಸಮಶೀತೋಷ್ಣ ಹುಲ್ಲುಗಾವಲು ಪ್ರದೇಶ: ಇದನ್ನು ಉನ್ನತ ವೆಲ್ಡ್ ಪ್ರದೇಶವೆಂತಲೂ ಕರೆಯಲಾಗಿದೆ. ಡಚ್ ಭಾಷೆಯಲ್ಲಿ ವೆಲ್ಡ್ಸ್ (Veldts) ಎಂದರೆ ‘ಕ್ಷೇತ್ರ’ ಎಂದರ್ಥ. ಈ ವಾಯುಗುಣ ಪ್ರದೇಶವು ದಕ್ಷಿಣ ಆಫ್ರಿಕದ ಒಳನಾಡಿನಲ್ಲಿ ಕಂಡುಬರುತ್ತದೆ. ಇದು ಸಮುದ್ರ ತೀರದಿಂದ ದೂರವಿರುವುದು. ಇದರಿಂದ ಚಳಿಗಾಲ ಮತ್ತು ಬೇಸಿಗೆಗಳ ಉಷ್ಣಾಂಶದ ಪ್ರಮಾಣದಲ್ಲಿ ಹೆಚ್ಚು ವ್ಯತ್ಯಾಸವಿರುತ್ತದೆ. ಬೇಸಿಗೆಯಲ್ಲಿ ತಾಪಮಾನ ಹೆಚ್ಚು ಮತ್ತು ಚಳಿಗಾಲವು ಶೀತವಾಗಿರುತ್ತದೆ. ಈ ಎರಡೂ ಕಾಲಗಳಲ್ಲಿ ಮಳೆಯ ಪ್ರಮಾಣ ಕಡಿಮೆ.

6. ಎತ್ತರವುಳ್ಳ ವಾಯುಗುಣ ಪ್ರದೇಶ: ಇದು ಇಥಿಯೋಪಿಯಾದ ಎತ್ತರವಾದ ಭಾಗ ಮತ್ತು ಪೂರ್ವ ಆಫ್ರಿಕದ ಭಾಗಗಳನ್ನೊಳಗೊಂಡಿದೆ. ಸಮುದ್ರ ಮಟ್ಟಕ್ಕೆ ಹೆಚ್ಚು ಎತ್ತರವುಳ್ಳ ಈ ಪ್ರದೇಶದಲ್ಲಿ ತಂಪಾದ ವಾಯುಗುಣವಿರುತ್ತದೆ. ಮಳೆಯ ಹಂಚಿಕೆ ವಿರಳ ಮತ್ತು ಅದು ಬೇಸಿಗೆಯಲ್ಲಿ ಮಾತ್ರ ಬೀಳುವುದು.

7. ಆರ್ಧ‍-ಉಪ ಉಷ್ಣವಲಯದ ವಾಯುಗುಣ ಪ್ರದೇಶ: ಈ ಪ್ರದೇಶವು ಡ್ರೇಕನ್ಸ್ ಬರ್ಗ್ ಪರ್ವತ ಭಾಗಗಳು ಹಾಗೂ ಮಡಗಾಸ್ಕರ್ ದ್ವೀಪವನ್ನೂ ಒಳಗೊಂಡಂತೆ ಪೂರ್ವಕರಾವಳಿವರೆಗೂ ವಿಸ್ತರಿಸಿದೆ. ಇಲ್ಲಿನ ವಾಯುಗುಣದಲ್ಲಿ ಬೇಸಿಗೆ ಅತಿ ಉಷ್ಣ ಮತ್ತು ಮಳೆಯಿಂದಲೂ ಮತ್ತು ಚಳಿಗಾಲವು ತಂಪು ಮತ್ತು ಶುಷ್ಕತೆಯಿಂದ ಕೂಡಿರುತ್ತದೆ.

8. ಶುಷ್ಕ ಚಳಿಗಾಲವುಳ್ಳ ಉಪ-ಉಷ್ಣವಲಯ: ಇದು ಆಫ್ರಿಕದ ಆಗ್ನೇಯ ಭಾಗವನ್ನೊಳಗೊಂಡಿದೆ. ಅತಿ ಶಾಖ ಮತ್ತು ಮಳೆಬೀಳುವ ಬೇಸಿಗೆ ಹಾಗೂ ಸೌಮ್ಯ ಮತ್ತು ಶುಷ್ಕತೆಯುಳ್ಳ ಚಳಿಗಾಲಗಳು ಈ ವಾಯುಗುಣದ ಮುಖ್ಯ ಲಕ್ಷಣಗಳು. ಸಮಭಾಜಕವೃತ್ತ ಪ್ರದೇಶದ ತೇವ ವಾಯುಗುಣವಲಯದ ಮಾದರಿಯಂತಹ ಮಳೆಯ ಹಂಚಿಕೆ ಇಲ್ಲಿಯೂ ಕಂಡು ಬರುತ್ತದೆ. ಆದರೆ ಎತ್ತರ ಮತ್ತು ದಟ್ಟನೆಯ ಮಂಜುಗಳಿಂದಾಗಿ ಉಷ್ಣಾಂಶದ ಹಂಚಿಕೆಯಲ್ಲಿ ಮಾರ್ಪಾಡಾಗುವುದು.

ಆಫ್ರಿಕದ ಸ್ವಾಭಾವಿಕ ಸಸ್ಯವರ್ಗದಲ್ಲಿ ವೈವಿಧ್ಯವಿದೆ. ಏಕೆಂದರೆ ಸಸ್ಯವರ್ಗ ಮತ್ತು ಪ್ರಾಣಿವರ್ಗಗಳ ಮೇಲೆ ವಾಯುಗುಣ, ಮಣ್ಣು, ಮೇಲ್ಮೈ ಲಕ್ಷಣಗಳು ಮತ್ತು ಮಾನವನ ಪ್ರವೇಶಗಳ ಪರಸ್ಪರ ಪೂರಕ ಪ್ರಭಾವ ನೇರವಾಗಿ ಕಂಡುಬರುತ್ತದೆ. ಈ ಖಂಡದ ಬಹಳಷ್ಟು ಭಾಗಗಳಲ್ಲಿ ಸಸ್ಯವರ್ಗದ ಸ್ವರೂಪವು ಮಾನವ ಕೃತ್ಯಗಳಿಂದ ಬದಲಾಗಿದೆ. ಬಹಳಷ್ಟು ಅರಣ್ಯ ಮತ್ತು ಹುಲ್ಲುಗಾವಲುಗಳು ವಿವಿಧ ಉದ್ದೇಶಗಳಿಗಾಗಿ ಕಡಿಯಲ್ಪಟ್ಟಿವೆ ಮತ್ತು ಸುಡಲ್ಪಟ್ಟಿವೆ. ಹೀಗಾಗಿ ಆಫ್ರಿಕ ಖಂಡದ ಪ್ರಸ್ತುತ ಸಸ್ಯವರ್ಗದಲ್ಲಿ ಎಲ್ಲವೂ ‘ಸ್ವಾಭಾವಿಕವಲ್ಲ’.

ಸಮಭಾಜಕ ವೃತ್ತದ ಅತಿ ಉಷ್ಣ ಮತ್ತು ಆಧ್ರ್ರಭರಿತ ವಾಯುಗುಣವು ಅಲ್ಲಿ ದಟ್ಟವಾದ ಕಾಡು ಬೆಳೆಯುವಂತೆ ಮಾಡಿದೆ. ಮರಗಳು ಎತ್ತರವಾಗಿ ಬೆಳೆಯುತ್ತವೆ. ಸಮಭಾಜಕ ವೃತ್ತದ ಸದಾಹಸಿರಾಗಿರುವ ಅರಣ್ಯಗಳ ಮುಖ್ಯ ಲಕ್ಷಣವೆಂದರೆ ಅವೆಲ್ಲ ಅಗಲವಾದ ಎಲೆಗಳನ್ನು ಹೊಂದಿವೆ ಮತ್ತು ಅಪ್ಪುಸಸ್ಯ (ಅಧಿಸಸ್ಯ) ಗುಣವನ್ನು ಹೊಂದಿವೆ.

ವಿಶೇಷ ಲಕ್ಷಣವುಳ್ಳ ಪ್ರಭೇದದ ಮರಗಳು ಇಲ್ಲಿ ಬಹಳ ವಿರಳವಾಗಿವೆ. ಆದಾಗ್ಯೂ ಉಷ್ಣವಲಯದ ಬೆಲೆಬಾಳುವ ಗಟ್ಟಿ ಮರಗಳಾದ ರಬ್ಬರ್, ಬೀಟೆ, ಎಬೋನಿ, ಸಿಂಕೋನ, ತೇಗ, ತಾಳೆ, ಕರಿಮರ ಮುಂತಾದ ಮರಗಳು ಬೆಳೆಯುತ್ತವೆ. ಮ್ಯಾಂಗ್ರೋವ್ ಸಸ್ಯಗಳು ಕೂಡಾ ಸಮುದ್ರದ ಅಳಿವೆಗಳ ಜವುಗು ಪ್ರದೇಶದಲ್ಲಿ ಬೆಳೆಯುತ್ತವೆ.

xr:d:DAFBoN1bOp0:110,j:237970482080952052,t:23101020

ಸದಾ ಹಸಿರಾಗಿರುವ ಸಮಭಾಜಕ ವೃತ್ತದ ಕಾಡುಗಳಿಂದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಜಾಲಿ ಮತ್ತು ಬೆಯೋಬಾಬ್ (ಆನೆ ಹುಣಿಸೆ) (Baobab) ಮರಗಳಿಂದ ಆವೃತ್ತವಾದ ಸವನ್ನ ಕಾಡುಗಳಿವೆ. ಮಳೆ ಕಡಿಮೆಯಾಗುವ ಪ್ರದೇಶದಲ್ಲಿ ಸವನ್ನ ಕಾಡುಗಳು ಮುಳ್ಳು ಕಂಟಿ ಮತ್ತು ಹುಲ್ಲುಗಾವಲಿಗೆ ದಾರಿ ಮಾಡಿಕೊಡುತ್ತವೆ. ಮುಳ್ಳು ಕಂಟಿಗಳು ಮತ್ತು ಪೈನ್, ಜುನಿಪರ್, ಕಾರ್ಕ್, ಸಿಡಾರ್, ಫಿಗ್ ಮತ್ತು ಆಲಿವ್ ಮರಗಳು ಮೆಡಿಟರೇನಿಯನ್ ವಾಯುಗುಣವಿರುವ ಪ್ರದೇಶದಲ್ಲಿ ಕಂಡುಬರುತ್ತವೆ.

ಪ್ರಸ್ಥಭೂಮಿಗಳ ಎತ್ತರವಾದ ಭಾಗಗಳಲ್ಲಿ ಪರ್ವತ ಸಸ್ಯವರ್ಗ ಮತ್ತು ಸಹರ ಮತ್ತು ಕಲಹರಿ ಭಾಗಗಳಲ್ಲಿ ಮರುಭೂಮಿ ಸಸ್ಯವರ್ಗವಿದೆ. ದಕ್ಷಿಣ ಆಫ್ರಿಕದ ಕರ್ರೂ ಭಾಗದಲ್ಲಿ ಪ್ರಸಿದ್ಧ ಕುರುಚಲು ಸಸ್ಯವರ್ಗ, ನೈಲ್‍ನದಿ ಬಯಲಿನಲ್ಲಿ `ಸಡ್’ ಎಂಬ ವಿಶೇಷ ಸಸ್ಯವರ್ಗವಿದೆ.

13 Fascinating Facts About Baobab Trees

ಆಫ್ರಿಕದ ವನ್ಯ ಪ್ರಾಣಿ ಸಂಪತ್ತಿನಲ್ಲಿ ಬಹಳ ವೈವಿಧ್ಯತೆ ಇದೆ. ಇಲ್ಲಿನ ವಾಯುಗುಣದ ಪರಿಸ್ಥಿತಿ, ಮೇಲ್ಮೈ ಲಕ್ಷಣ, ಅರಣ್ಯ, ಮಣ್ಣಿನ ಪ್ರಕಾರಗಳು, ಏಷ್ಯಾ ಮತ್ತು ಯುರೋಪ್ ಖಂಡಗಳ ಸಂಪರ್ಕ ಈ ಬಗೆಯ ಪ್ರಾಣಿ ವೈವಿಧ್ಯಕ್ಕೆ ಕಾರಣವಾಗಿವೆ. ಮಳೆ ಕಾಡುಪ್ರದೇಶವು ಬಹಳಷ್ಟು ಪ್ರಾಣಿಗಳ ತಾಣವಾಗಿದೆ. ಚಿಂಪಾಂಜೀ, ವಿವಿಧ ಬಗೆಯ ಮಂಗಗಳು, ಗೊರಿಲ್ಲಾ, ಕಾಡೆಮ್ಮೆ, ಚಿರತೆ ಹಾಗೂ ಇತರೆ ಗೊರಸುಳ್ಳ ಪ್ರಾಣಿಗಳು ಇಲ್ಲಿ ಕಂಡುಬರುತ್ತವೆ.

ಮೊಸಳೆಗಳು ಮತ್ತು ನೀರಾನೆಗಳು ನದಿಗಳು ಮತ್ತು ಜಲಾವೃತ ಜವುಗು ಪ್ರದೇಶಗಳಲ್ಲಿ ಕಂಡುಬಂದರೆ, ಆಕರ್ಷಕ ವಿವಿಧ ಬಣ್ಣ ಪಕ್ಷಿಗಳು ಇಲ್ಲಿ ಸರ್ವೆಸಾಮಾನ್ಯ. ಉದಾ: ಉಷ್ಟ್ರಪಕ್ಷಿ, ಗರುಡಪಕ್ಷಿ, ಮಿಂಚುಳ್ಳಿ ಇತ್ಯಾದಿ.

ಜೀಬ್ರಾ, ಕಾಡುಬೆಕ್ಕು, ಜಿರಾಫೆ, ಘೇಂಡಾಮೃಗ, ಆನೆ, ಇಂಪಾಲ, ಚೀತಾ ಮತ್ತು ಆಫ್ರಿಕಸಿಂಹಗಳು ಉಷ್ಣವಲಯದ ಹುಲ್ಲುಗಾವಲು ಮತ್ತು ಸವನ್ನಾ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಮರುಭೂಮಿ ಪ್ರದೇಶದಲ್ಲಿ ಚೇಳು, ಒಂಟೆ, ಹಲ್ಲಿ, ಮರುಭೂಮಿ ನರಿ, ವಿವಿಧ ಬಗೆಯ ಕೀಟಗಳು ಕಾಣಬರುತ್ತವೆ. ಇದರೊಂದಿಗೆ ಜಿಂಕೆ ಜಾತಿಗೆ ಸೇರಿದ ಸುಂದರ ಪ್ರಾಣಿ, ಕತ್ತೆ, ಕುದುರೆ ಮತ್ತು ಅಡಾಕ್ಷಗಳು (Addax ಕಂಡುಬರುತ್ತವೆ. ಒಂಟೆ ಬಹಳ ಮಹತ್ವದ ಹಾಗೂ ಎಲ್ಲರಿಗೂ ತಿಳಿದಿರುವ ಮರುಭೂಮಿಯ ಪ್ರಾಣಿಯಾಗಿದೆ. ಇದನ್ನು ಕೆಲವೊಮ್ಮೆ ಮರುಭೂಮಿಯ ಹಡಗು ಎಂದು ಕರೆಯಲಾಗುತ್ತದೆ.

ಉಷ್ಟ್ರಪಕ್ಷಿ: ಇದು ಆಫ್ರಿಕದ ಮೂಲವಾಸಿ ಆಗಿದ್ದು ಕಲಹರಿ ಮರುಭೂಮಿ ಮತ್ತು ಆಫ್ರಿಕದ ದಕ್ಷಿಣ ಮೈದಾನಗಳಲ್ಲಿ ಕಂಡುಬರುತ್ತದೆ. ಇದು ಪ್ರಪಂಚದಲ್ಲಿಯೇ ಜೀವಂತವಿರುವ ಅತ್ಯಂತ ದೊಡ್ಡದಾದ ಪಕ್ಷಿಯಾಗಿದೆ. ಜಗತ್ತಿನಲ್ಲಿಯೇ ಅತಿ ದೊಡ್ಡಗಾತ್ರದ ಮೊಟ್ಟೆಯಿಡುತ್ತದೆ. ಇದು ಹಾರಲಾರದು. ಆದರೆ ಅತ್ಯಂತ ವೇಗವಾಗಿ ಓಡುವ ಪಕ್ಷಿ ಮತ್ತು ತನ್ನ ಕಾಲುಗಳಿಗೆ ಎರಡು ಬೆರಳುಗಳನ್ನು ಹೊಂದಿರುವ ಪ್ರಪಂಚದ ಏಕೈಕ ಪಕ್ಷಿಯಾಗಿದೆ.

African Safari 4K – Amazing Wildlife of African Savanna | Scenic Relaxation Film

ಆಫ್ರಿಕದ ಬಹಳಷ್ಟು ದೇಶಗಳಲ್ಲಿ ವ್ಯವಸಾಯ(ಒಕ್ಕಲುತನ)ವು ಬಹಳ ಮಹತ್ವದ ಜನರ ಆರ್ಥಿಕ ಚಟುವಟಿಕೆಯಾಗಿದೆ. ಸುಮಾರು ಶೇ.75ಕ್ಕೂ ಹೆಚ್ಚು ಜನರು ವ್ಯವಸಾಯದಲ್ಲಿ ತೊಡಗಿದ್ದಾರೆ.

ಸಮಭಾಜಕ ವೃತ್ತದ ಪ್ರದೇಶವನ್ನು ಹೊರತು ಪಡಿಸಿ ಆಫ್ರಿಕದ ಬಹಳಷ್ಟು ದೇಶಗಳಲ್ಲಿ ಒಕ್ಕಲುತನವು ಜೀವನಾಧಾರ ಬೇಸಾಯವಾಗಿದೆ. ಆಧುನಿಕ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಉಪಯೋಗ ಬಹಳ ಕಡಿಮೆ. ಬಹಳಷ್ಟು ಕಡೆ ಒಕ್ಕಲುತನವು ಮಾನವ ಶ್ರಮದಿಂದ ನಡೆಯುತ್ತವೆ. ಪ್ರತಿ ಹೆಕ್ಟೇರ್ ಇಳುವರಿ ಕೂಡ ಬಹಳ ಕಡಿಮೆ.

ಬಹಳಷ್ಟು ಬೇಸಾಯ ಪ್ರದೇಶದಲ್ಲಿ ಆಹಾರಧಾನ್ಯ ಬೆಳೆಗಳು ಮಹತ್ವದ ಸ್ಥಾನವನ್ನು ಪಡೆದಿವೆ. ಮೆಕ್ಕೆಜೋಳ, ಭತ್ತ, ನವಣೆ, ಸಿಹಿ ಆಲೂಗಡ್ಡೆ ಮತ್ತು ಗೆಣಸು, ಕಡಲೆಕಾಯಿ, ಬಟಾಣಿ ಮತ್ತು ಹಿಟ್ಟಿನ ಬೆಳೆಗಳು ಪ್ರಧಾನ ಬೆಳೆಗಳು. ಸಮಭಾಜಕವೃತ್ತ ವಲಯದ ವಾಯುಗುಣವುಳ್ಳ ಪ್ರದೇಶದಲ್ಲಿ ನೆಡುತೋಟದ ಬೇಸಾಯವು ಪ್ರಮುಖವಾದುದು. ಬುರುಂಡಿ ಪ್ರದೇಶವು ರಫ್ತಿಗಾಗಿ ಕಾಫಿ ಬೆಳೆಗೆ, ಕೋಕೊ ಬೆಳೆಯು ಕೋಟೆ-ಡಿ-ವೋರೆ ಮತ್ತು ಘಾನದಲ್ಲಿಯೂ ಹಾಗೂ ಬಟಾಣಿಗಳಂತಹ ಬೇಳೆಕಾಳುಗಳು ಗ್ಯಾಂಬಿಯಾ ದೇಶಗಳಲ್ಲಿ ಬೆಳೆಯಲಾಗುತ್ತದೆ. ಆಫ್ರಿಕದಲ್ಲಿ ಬೆಳೆಯುವ ಇತರ ಬೆಳೆಗಳೆಂದರೆ ಕಬ್ಬು, ಬಾಳೆ, ಚಹ, ತಾಳೆಎಣ್ಣೆ ಬೆಳೆ, ಮತ್ತು ನಿಂಬೆಜಾತಿಯ ಹಣ್ಣುಗಳು. ಇವೆಲ್ಲ ದೊಡ್ಡ ಎಸ್ಟೇಟ್‍ಗಳಲ್ಲಿ ಮತ್ತು ನೀರಾವರಿ ಬೇಸಾಯದಲ್ಲಿ ಬೆಳೆಯಲಾಗುವುದು.

ಸೆನೆಗಲ್, ಮಾರಿಟಾನಿಯಾ, ಮಾಲಿ, ನೈಜರ್, ಚಾಡ್, ಉತ್ತರ ಸುಡಾನ್, ಇಥಿಯೋಪಿಯ ಮತ್ತು ಸೋಮಾಲಿಯ ದೇಶಗಳು (Sahel) ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತವೆ ಮತ್ತು ಅಲ್ಲಿಯ ಜನರು ಹಸಿವಿನಿಂದ ಬಳಲುವರು.

ಆಫ್ರಿಕವು ವಿವಿಧ ಜಾತಿಯ ಹಣ್ಣುಗಳಿಗೆ ಪ್ರಸಿಧ್ಧವಾಗಿದೆ. ಮೆಡಿಟರೇನಿಯನ್ ಪ್ರದೇಶದಲ್ಲಿ ನಿಂಬೆ ಜಾತಿಗೆ ಸೇರಿದ ಹಣ್ಣುಗಳಾದ, ಆಲೀವ್, ಲಿಂಬೆ, ಕಿತ್ತಳೆ, ದ್ರಾಕ್ಷಿ ಸಾಮಾನ್ಯವಾಗಿವೆ. ಪೂರ್ವ ಆಫ್ರಿಕದಲ್ಲಿ ಗೋಡಂಬಿ ಬೆಳೆಯುತ್ತಾರೆ. ಜಾಂಜೀಬಾರ ದ್ವೀಪ ಮತ್ತು ಟಾಂಟನಿಯಾಗಳು ಲವಂಗ ಬೆಳೆಗೆ ಪ್ರಸಿದ್ಧಿ ಪಡೆದಿವೆ.

ಇಲ್ಲಿ ಗೋವಿನ ಜೋಳ (ಮೆಕ್ಕೆಜೋಳ) ಬಹಳ ಮಹತ್ವ ಪಡೆದಿದೆ. ಸ್ವಲ್ಪ ಪ್ರದೇಶದಲ್ಲಿ ಮತ್ತು ಕಬ್ಬುಬೆಳೆಗಳನ್ನು ಬೆಳೆಯುತ್ತಾರೆ. ಹಣದ ಬೆಳೆಗಳಾದ ಕಾಫಿ, ತಾಳೆ, ನೆಲಗಡಲೆಗಳನ್ನು ಮಧ್ಯ, ಪೂರ್ವ ಹಾಗೂ ಆಫ್ರಿಕದ ಇತರೆ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಕಾಫಿಯನ್ನು ಇಥಿಯೋಪಿಯಾದಲ್ಲಿ ಸಾವಿರಾರು ವರ್ಷಗಳಿಂದಲೂ ಬೆಳೆಯುತ್ತಾ ಬಂದಿದ್ದಾರೆ. ಈಜಿಪ್ಟ್ ದೇಶವು ಹತ್ತಿ ಬೆಳೆಗೆ ಪ್ರಸಿದ್ಧವಾಗಿದೆ.

ಯೂರೋಪಿಯನ್ನರು ನೆಲೆಗೊಂಡಿರುವಂತಹ ಕೀನ್ಯ, ದಕ್ಷಿಣ ಆಫ್ರಿಕ ಮತ್ತು ಜಿಂಬಾಬ್ವೆಗಳಲ್ಲಿ ಆಕಳು ಸಾಕಣೆ ಮುಖ್ಯ ಉದ್ಯೋಗವಾಗಿದೆ. ಪ್ರಪಂಚದ ಶೇ.15 ಭಾಗದಷ್ಟು ಆಕಳುಗಳು ಆಫ್ರಿಕ ಒಂದರಲ್ಲಿಯೇ ಇವೆ.

ವ್ಯವಸಾಯ ಹಿಂದುಳಿಯುವುದಕ್ಕೆ ಕಾರಣಗಳು: ಆಫ್ರಿಕದಲ್ಲಿ ವ್ಯವಸಾಯ ಹಿಂದುಳಿಯಲು ಹಳೆಯ ಕೃಷಿ ಪದ್ಧತಿ, ಜೀವನೋಪಾಯ ಬೇಸಾಯದ ವಿಧಾನ, ಹಳೆಯ ಕೃಷಿ ಉಪಕರಣಗಳ ಬಳಕೆ, ಅನರಕ್ಷರತೆ, ಬುಡಕಟ್ಟು ಪದ್ಧತಿ, ಬಂಡವಾಳ ಹಾಗೂ ವಿದೇಶೀ ಬಂಡವಾಳದ ಹೂಡುವಿಕೆಯ ಕೊರತೆ ಇತ್ಯಾದಿಗಳು ಕಾರಣ.

* ಆಫ್ರಿಕದ ಅನೇಕ ದೇಶಗಳು ನೀರು, ಅರಣ್ಯ ಮತ್ತು ಖನಿಜ ಸಂಪತ್ತಿನಲ್ಲಿ ಶ್ರೀಮಂತವಾಗಿವೆ. ಈ ನೈಸರ್ಗಿಕ ಸಂಪತ್ತಿನ ಹಂಚಿಕೆ ಸಮನಾಗಿಲ್ಲ. ಇಲ್ಲಿಯ ಬಹಳಷ್ಟು ದೇಶಗಳ ಆರ್ಥಿಕತೆಯು ಬೇಸಾಯ ಅವಲಂಬಿತ ಗುಣಲಕ್ಷಣವನ್ನು ಹೊಂದಿದೆ.

* ಕಳೆದ ಶತಮಾನದ ಮಧ್ಯಕಾಲದವರೆಗೂ ಆಫ್ರಿಕದ ನೈಸರ್ಗಿಕ ಸಂಪತ್ತು ಯುರೋಪಿಯನ್‍ರಿಂದ ಲೂಟಿಗೆ ಒಳಗಾಗುತ್ತಲೇ ಇತ್ತು. ಇದು ಅಲ್ಲಿ ಕೈಗಾರಿಕೀಕರಣ ನಿಧಾನವಾಗಲು ಕಾರಣವಾಗಿದೆ. ಇದರೊಂದಿಗೆ ಕೈಗಾರಿಕೀಕರಣಕ್ಕೆ ಬೇಕಾದ ಮೂಲಭೂತ ಸೌಕರ್ಯಗಳ ಕೊರತೆ, ಕಡಿಮೆ ಬಂಡವಾಳ, ತಂತ್ರಜ್ಞಾನದ ಕೊರತೆ ನುರಿತ ಕಾರ್ಮಿಕರ ಕೊರತೆ, ಕಡಿಮೆ ಕೊಳ್ಳುವ ಶಕ್ತಿ, ಮತ್ತು ರಾಜಕೀಯ ಗೊಂದಲಗಳು ಆಫ್ರಿಕ ದೇಶಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಕುಂಟಿತವಾಗಲು ಕಾರಣವಾಗಿವೆ.

* ಕಳೆದ ಕೆಲವು ದಶಕಗಳಲ್ಲಿ ಕೈಗಾರಿಕೀಕರಣಕ್ಕೆ ಒಳಗಾಗುತ್ತಿರುವ ದೇಶಗಳೆಂದರೆ ಜಿಂಬಾಬ್ವೆ, ನೈಜಿರಿಯ, ಈಜಿಪ್ಟ್, ಅಲ್ಜೀರಿಯ ಮತ್ತು ದಕ್ಷಿಣ ಆಫ್ರಿಕ ಸ್ವತಂತ್ರ ಪಡೆದ ನಂತರ ಬಹಳಷ್ಟು ಆಫ್ರಿಕದ ದೇಶಗಳು ಲಘು ಕೈಗಾರಿಕಾ ಬೆಳವಣಿಗೆಯಲ್ಲಿ ಆಸಕ್ತಿ ತೋರಿವೆ. ಜವಳಿ ಉದ್ಯಮ, ಔಷಧಿ ಮತ್ತು ಆಹಾರ ಸಂಸ್ಕರಣ ಹಾಗೂ ಪಾನೀಯ ಉದ್ದಿಮೆಗಳು ಜಾರಿಗೆ ಬರುತ್ತಿವೆ.

* ಬೃಹತ್ ಉದ್ದಿಮೆಗಳಾದ ಕಬ್ಬಿಣ ಮತ್ತು ಉಕ್ಕು, ರಬ್ಬರ್, ಸಿಮೆಂಟ್, ಮತ್ತು ಪೆಟ್ರೊ ರಾಸಾಯನಿಕಗಳ ತಯಾರಿಕೆಗಳು ದಕ್ಷಿಣ ಆಫ್ರಿಕದಲ್ಲಿ ಕೇಂದ್ರೀಕರಣಗೊಳ್ಳುತ್ತಿವೆ. ಅಲ್ಜೀರಿಯ, ಟುನಿಸಿಯ, ಈಜಿಪ್ಟ್ ಮತ್ತು ಜಿಂಬಾಬ್ವೆ ದೇಶಗಳಲ್ಲಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಳು ಹಂಚಿಕೆಯಾಗಿವೆ. ಆಫ್ರಿಕದ ಇತರ ಪ್ರಮುಖ ಕೈಗಾರಿಕೆಗಳೆಂದರೆ ವಿದ್ಯುತ್‍ಯಂತ್ರ, ಸಾರಿಗೆ ಉಪಕರಣ, ಟ್ರಾಕ್ಟರ್ ತಯಾರಿಕೆ ಹಾಗೂ ಸಮರಕ್ಕೆ ಬಳಕೆಯಾಗುವ ವಿಮಾನ ಜೋಡಣೆ.

ಆಫ್ರಿಕ ಖಂಡವು ಅಪಾರವಾದ ಖನಿಜ ಸಂಪತ್ತನ್ನು ಹೊಂದಿದೆ. ಆದರೆ ಬೆಲೆಬಾಳುವ ಖನಿಜಗಳಾದ ವಜ್ರ, ಬಂಗಾರ ಮತ್ತು ಪ್ಲಾಟಿನಮ್‍ಗಳನ್ನು ಹೆಚ್ಚು ಉತ್ಪಾದಿಸುತ್ತದೆ.

ವಜ್ರ: ಪ್ರಪಂಚದ ಒಟ್ಟು ವಜ್ರದ ನಿಕ್ಷೇಪದಲ್ಲಿ ಶೇ 80 ಭಾಗವು ಆಫ್ರಿಕ ಒಂದರಲ್ಲೇ ಕಂಡುಬರುತ್ತದೆ. ಬೋನ್ಸ್‍ವಾನ, ಜೈರೆ ಮತ್ತು ದಕ್ಷಿಣ ಆಫ್ರಿಕಗಳು ಅತಿ ಹೆಚ್ಚು ವಜ್ರವನ್ನು ಉತ್ಪಾದಿಸುವ ದೇಶಗಳಾಗಿವೆ. ಅಂಗೋಲ, ನಮೀಬಿಯ ಮತ್ತು ಘಾನ ದೇಶಗಳು ಇತರೆ ಉತ್ಪಾದಕರು. ವಜ್ರವನ್ನು ಹರಳುವಜ್ರ ಮತ್ತು ಕೈಗಾರಿಕಾ ವಜ್ರವೆಂದು ವಿಂಗಡಿಸಲಾಗಿದೆ. ಕೈಗಾರಿಕಾ ವಜ್ರವು ಮುಖ್ಯವಾಗಿ ಉಜ್ಜು ಕಾಗದ ಮತ್ತು ಗಾಜು ಕತ್ತರಿಸುವ ಉಪಕರಣಗಳ ತಯಾರಿಕೆಗೆ ಬಳಕೆಯಾಗುತ್ತದೆ.

How diamond Mine found in Africa ? The Kimberley Diamond Rush

ಬಂಗಾರ: ಪ್ರಪಂಚದ ಅರ್ಧದಷ್ಟು ಬಂಗಾರದ ನಿಕ್ಷೇಪವು ದಕ್ಷಿಣ ಆಫ್ರಿಕ ಒಂದರಲ್ಲೇ ಕಂಡುಬರುತ್ತದೆ. ಬಂಗಾರ ಹಂಚಿಕೆಯಾಗಿರುವ ಮುಖ್ಯಸ್ಥಳಗಳೆಂದರೆ ವಿಟ್‍ವಾಟರ್ಸ್‍ರ್ಯಾಂಡ್ (ಟ್ರಾನ್ಸವಾಲ್) ಮತ್ತು ಆರೆಂಜ್ ಫ್ರೀ ಸ್ಟೇಟ್ ರಾಜ್ಯಗಳಾಗಿವೆ. ಈ ಖಂಡದ ಒಟ್ಟು ಬಂಗಾರದ ಉತ್ಪಾದನೆಯಲ್ಲಿ ಶೇ.50ಕ್ಕೂ ಹೆಚ್ಚಿನ ಭಾಗವು ದಕ್ಷಿಣ ಆಫ್ರಿಕ, ಜಿಂಬಾಬ್ವೆ ಮತ್ತು ಕಾಂಗೋ (ಜೈರೆ) ಗಣರಾಜ್ಯಗಳಿಂದ ಪೂರೈಕೆಯಾಗುತ್ತದೆ.

ಪ್ರಪಂಚದಲ್ಲಿ ಮೊಟ್ಟಮೊದಲು ಮನುಷ್ಯ ಕಾಣಿಸಿಕೊಂಡು ಉಪಕರಣಗಳನ್ನು ಬಳಸಲು ಕಲಿತದ್ದು ಆಫ್ರಿಕದಲ್ಲೇ ಎಂದು ಪರಿಗಣಿಸಲಾಗಿದೆ. ಮಾನವಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳ ಅಭಿಪ್ರಾಯದಂತೆ ಹೋಮೋಸೇಪಿಯನ್ನರು ಆಫ್ರಿಕದ ಕೀನ್ಯ ಮತ್ತು ಇಥಿಯೋಪಿಯಗಳಲ್ಲಿಯ ಪೂರ್ವ ಸರೋವರದ ಬಳಿ ಕಾಣಿಸಿಕೊಂಡರೆಂದು ತಿಳಿದುಬರುತ್ತದೆ.

ಪ್ರಧಾನವಾಗಿ ನೀಗ್ರೊ ಹಾಗೂ ಅವರ ಮೂಲನಿವಾಸಿಗಳ ಗುಂಪುಗಳಿಂದ ಕೂಡಿದೆ. ಈಗ ಆಫ್ರಿಕವು ವಿವಿಧ ಜನಾಂಗ ಮತ್ತು ಕುಲವರ್ಗಗಳನ್ನು ಹೊಂದಿದೆ. ಈ ಖಂಡದಲ್ಲಿ ವಿವಿಧ ಜನರು, ಭಾಷೆ ಮತ್ತು ಸಂಸ್ಕೃತಿಗಳ ಮಿಲನವಾಗಿದೆ.

ಸುಮಾರು 1051 ಮಿಲಿಯನ್ ಜನರು ಆಫ್ರಿಕ ಖಂಡದಲ್ಲಿ ವಾಸಿಸುತ್ತಾರೆ. ನೈಜೀರಿಯ, ಈಜಿಪ್ಟ್, ಇಥಿಯೋಪಿಯ, ಜೈರೆ ಮತ್ತು ದಕ್ಷಿಣ ಆಫ್ರಿಕಗಳು ಹೆಚ್ಚು ಜನಸಾಂದ್ರತೆಯನ್ನು ಹೊಂದಿವೆ. ಕಳೆದ ಮೂರು ದಶಕಗಳಲ್ಲಿ ಆಫ್ರಿಕದ ಕೆಲವು ರಾಷ್ಟ್ರಗಳಲ್ಲಿ ಮರಣ ಪ್ರಮಾಣವು ಕಡಿಮೆಯಾಗಿದೆ. ಅದಕ್ಕೆ ಕಾರಣ, ಆಹಾರದ ಹೆಚ್ಚು ಉತ್ಪಾದನೆ, ಔಷಧಿಯ ಸರಬರಾಜು ಮತ್ತು ಸ್ವಚ್ಚ ನಿರ್ವಹಣಾ ಸುಧಾರಣೆಗಳೇ ಆಗಿವೆ. ಆದರೆ ಜನನ ಪ್ರಮಾಣವು ಹೆಚ್ಚಾಗಿದ್ದು ಅಧಿಕ ಜನಸಾಂದ್ರತೆಗೆ ಕಾರಣವಾಗಿದೆ. ಆಫ್ರಿಕದ ಜನಸಂಖ್ಯಾ ಬೆಳವಣಿಗೆ ದರವು ಪ್ರಪಂಚದ ಸರಾಸರಿ ಅಥವಾ ಅದಕ್ಕೂ ಹೆಚ್ಚಾಗಿರುತ್ತದೆ.

ಕೆಲವು ದೇಶಗಳಾದ ಸೋಮಾಲಿಯ, ಇಥಿಯೋಪಿಯ, ಚಾಡ್, ನೈಜೀರಿಯ, ಮಾಲಿಗಳಲ್ಲಿ ಜೀವಿತಾವಧಿ ಬಹಳ ಕಡಿಮೆ. ಅಂದರೆ 50 ವರ್ಷಗಳು ಮಾತ್ರ.

ವಿಶೇಷವಾದ ಸಂಗತಿ ಎಂದರೆ ಜನಸಂಖ್ಯೆಯ ಹಂಚಿಕೆ ಅಸಮಾನವಾಗಿರುವುದು. ಅತಿ ಹೆಚ್ಚು ಜನಸಾಂದ್ರತೆಯು ಆಫ್ರಿಕದ ಗಿನಿಯ ಕರಾವಳಿ ಪ್ರದೇಶ, ನೈಲ್ ನದಿಯ ಕಣಿವೆ, ಪೂರ್ವ ಆಫ್ರಿಕದ ಎತ್ತರ ಪ್ರದೇಶ, ಮತ್ತು ಮಡಗಾಸ್ಕರ್ ಹಾಗೂ ಉತ್ತರದ ಕರಾವಳಿ ದಕ್ಷಿಣ ಆಫ್ರಿಕ, ಜಿಂಬಾಬ್ವೆ ಹಾಗೂ ಜೈರೆಗಳ ನಗರ ಮತ್ತು ಗಣಿ ಪ್ರದೇಶಗಳಲ್ಲಿ ತುಂಬಿಕೊಂಡಿದೆ.

ಕಡಿಮೆ ಜನಸಾಂದ್ರತೆಯು ಮರುಭೂಮಿ, ಪರ್ವತ ಪ್ರದೇಶಗಳು ಹಾಗೂ ಸಮಭಾಜಕವೃತ್ತದ ಅಭಯಾರಣ್ಯ ಭಾಗಗಳಲ್ಲಿ ಕಂಡುಬರುತ್ತದೆ. ಲಿಬಿಯದ ಸಹರಾ ಮತ್ತು ಅಲ್ಜೀರಿಯಗಳಲ್ಲಿ ಕಡಿಮೆ ಜನಸಾಂದ್ರತೆ ಇದೆ. ಇಲ್ಲಿಯ ಜನಸಾಂದ್ರತೆಯು ಪ್ರತಿ ಚ.ಕಿ.ಮೀ. ಗೆ 15 ಜನರು.

1. ಪಿಗ್ಮಿಗಳು, ಬುಶ್‍ಮೆನ್ ಮತ್ತು ಮಸಾಯಿ. ಇವರು ಸಹರಾ ಮರುಭೂಮಿಯ ದಕ್ಷಿಣ ಭಾಗದಲ್ಲಿ ವಾಸಿಸುತ್ತಾರೆ.

2. ಅರಬ್ಬರು ಉತ್ತರ ಆಫ್ರಿಕದಲ್ಲಿ ವಾಸಿಸುತ್ತಾರೆ.

3. ಇಂಡಿಯನ್‍ರು ದಕ್ಷಿಣ ಮತ್ತು ಪೂರ್ವ ಆಫ್ರಿಕದಲ್ಲಿ ವಾಸಿಸುತ್ತಾರೆ.

4. ಯುರೋಪಿಯನ್ನರು ದಕ್ಷಿಣ ಆಫ್ರಿಕದಲ್ಲಿ ಹಾಗೂ ಇತರ ಫಲವತ್ತಾದ ನದಿ ಬಯಲುಗಳಲ್ಲಿ ವಾಸಿಸುತ್ತಾರೆ.

ಪರ್ಯಾಯ ದ್ವೀಪ, ಕೊಲ್ಲಿ, ಮರುಭೂಮಿ, ಸೀಳು ಕಣಿವೆ, ಸರೋವರಗಳು, ಜೀವಿತಾವಧಿ, ಜನಸಾಂದ್ರತೆ, ಪ್ರಧಾನ ರೇಖಾಂಶ, ಭೂಕಂಠ, ಕರ್ಕವೃತ್ತ, ಮಕರವೃತ್ತ, ಸವನ್ನ.

* ನೈಲ್ ನದಿಯ ಉದ್ದದ ಬಹುಭಾಗ ಸಹರ ಮರುಭೂಮಿಯಲ್ಲಿ ಸಾಗುತ್ತದೆ. ಆದರೂ ಅದು ಎಂದೂ ಬತ್ತಿ ಹೋಗುವುದಿಲ್ಲ ಇದಕ್ಕೆ ನೈಲ್ ನದಿಯ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಮಳೆ ಬೀಳುವುದೇ ಪ್ರಮುಖ ಕಾರಣ.

* ಸಹರ ಮರುಭೂಮಿಯು ಆಫ್ರಿಕದ ಉತ್ತರದ ಭಾಗವನ್ನು ಆವರಿಸಿದ್ದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ಮರುಭೂಮಿ.

* ಲಿಬಿಯಾದ ಇಲ್ ಅಜಿಜಿಯಾದಲ್ಲಿ ಪ್ರಪಂಚದಲ್ಲೇ ಅತಿಹೆಚ್ಚು ಉಷ್ಣಾಂಶ 58ಲಿ ಸೆಲ್ಸಿಯಸ್ ದಾಖಲಾಗುತ್ತದೆ.

* ಅಡ್ಡಾಕ್ಷ ಎಂಬ ಪ್ರಾಣಿ ಉದ್ದವಾದ ತಿರುಚಲ್ಪಟ್ಟ ಕೋಡುಗಳುಳ್ಳ ಚಿಗರೆಯಾಗಿದೆ. ಇದು ನೀರು ಕುಡಿಯುವುದಿಲ್ಲ. ಬದಲಾಗಿ ತನಗೆ ಬೇಕಾದ ನೀರನ್ನು ತಾನು ತಿನ್ನುವ ಹುಲ್ಲು ಮತ್ತು ಸಸ್ಯಗಳಿಂದ ಪಡೆದುಕೊಳ್ಳುತ್ತದೆ.

* ಆಫ್ರಿಕದಲ್ಲಿ ಬೆಯೋಬಾಬ್ ಎಂಬ ಮರ ಇದೆ. ಇದು ಬಾಟಲಿ ಆಕಾರದಲ್ಲಿ ಇದ್ದು ಇದರ ಕಾಂಡವು ನೀರನ್ನು ಹಿಡಿದಿಡಲು ಉಬ್ಬಿಕೊಂಡಿರುತ್ತದೆ. ಇದು 1000ದಿಂದ 12000 ಲೀಟರ್ ನೀರನ್ನು ಹಿಡಿದಿಡಬಲ್ಲದು. ನೀರು ಬೇಕಾದ ಪ್ರಯಾಣಿಕರು ಕೆಲವು ಸಲ ಈ ಮರದ ನೀರನ್ನು ಬಳಸುತ್ತಾರೆ.

* ಪ್ರಪಂಚದ ಶೇ.24 ಭಾಗದಷ್ಟು ಕಾಫಿ ಉತ್ಪನ್ನವು ಆಫ್ರಿಕದಿಂದ ಉತ್ಪಾದನೆಯಾಗುತ್ತದೆ.

* ಪ್ರಪಂಚದ ಶೇ.50 ಭಾಗಕ್ಕೂ ಹೆಚ್ಚು ಕೋಕೋವನ್ನು ಆಫ್ರಿಕ ಒಂದೇ ಉತ್ಪಾದಿಸುತ್ತದೆ.

* ಪಿಗ್ಮಿಗಳು ಪ್ರಪಂಚದಲ್ಲಿಯೇ ಅತಿ ಗಿಡ್ಡ ಜನರಾಗಿದ್ದಾರೆ. ಅವರು ಕಾಂಗೋ ಕಣಿವೆಯಲ್ಲಿ ವಾಸಿಸುತ್ತಾರೆ.

* ಆಫ್ರಿಕ ಖಂಡದ ಜನರು ಹೆಚ್ಚು ಫಲವಂತಿಕೆ ಶಕ್ತಿ ಹೊಂದಿದ್ದಾರೆ. ಆದರೆ ಅವರ ನಿರೀಕ್ಷಾ ವಯಸ್ಸು ಕಡಿಮೆ.

* ಆಫ್ರಿಕ ಖಂಡದಲ್ಲಿ 800ಕ್ಕೂ ಹೆಚ್ಚು ಭಾಷೆ ಮಾತನಾಡುವವರಿದ್ದಾರೆ.

* ಆಫ್ರಿಕದಲ್ಲಿ ಗ್ರಾಮೀಣ ಜನಸಂಖ್ಯೆ ಹೆಚ್ಚು. ಇದು ಕಡಿಮೆ ನಗರೀಕರಣವುಳ್ಳ ಖಂಡ.

ಈಜಿಪ್ಟ್ ಪಿರಮಿಡ್ ಒಳಗೆ ಹೋಗೋಣ ಬನ್ನಿ.! Dr Bro | Egypt 🇪🇬
6th ಸಮಾಜ ವಿಜ್ಞಾನ – ಆಫ್ರಿಕಾ ಕೇಂದ್ರೀಯ ಭೂಖಂಡ-1, 6th Social Science – Africa – 1
6th ಸಮಾಜ ವಿಜ್ಞಾನ – ಆಫ್ರಿಕಾ ಕೇಂದ್ರೀಯ ಭೂಖಂಡ-2, 6th Social Science – Africa – 2
6th ಸಮಾಜ ವಿಜ್ಞಾನ – ಆಫ್ರಿಕಾ ಕೇಂದ್ರೀಯ ಭೂಖಂಡ-3, 6th Social Science – Africa – 3
ಆಫ್ರಿಕಾ ಖಂಡ | 6ನೇ ತರಗತಿ | Africa khanda question answer | 6th class | Africa khanda notes |