ಯೂರೋಪ್ ಖಂಡ – ಅಧ್ಯಾಯ 23
ಪಾಠದ ಪರಿಚಯ:
ಈ ಅಧ್ಯಾಯದಲ್ಲಿ ಯೂರೋಪ್ ಖಂಡದ ಸ್ಥಾನ, ವಿಸ್ತೀರ್ಣ ಮತ್ತು ಭೌಗೋಳಿಕ ಸನ್ನಿವೇಶ. ಪ್ರಾಕೃತಿಕ ಮತ್ತು ವಾಯುಗುಣ ವಿಭಾಗಗಳು, ಸಸ್ಯವರ್ಗ, ವ್ಯವಸಾಯ, ಹೈನುಗಾರಿಕೆ ಮತ್ತು ಮೀನುಗಾರಿಕೆ. ಖನಿಜ ಮತ್ತು ಕೈಗಾರಿಕೆಗಳು ಹಾಗೂ ಜನಸಂಖ್ಯೆಯ ಬೆಳವಣಿಗೆ, ಹಂಚಿಕೆ ಮತ್ತು ಸಾಂದ್ರತೆಗಳನ್ನು ಪರಿಚಯಿಸಲಾಗಿದೆ.
ಪ್ರಸ್ತಾವನೆ: ಪ್ರಪಂಚದ ಹೆಚ್ಚು ಜನಸಾಂದ್ರತೆ ಹಾಗೂ ನಗರೀಕರಣಗೊಂಡ ಭೂಖಂಡಗಳಲ್ಲಿ ಯೂರೋಪ್ ಒಂದಾಗಿದೆ. ಅಲ್ಲದೆ ಇದು ಸಮೃದ್ಧ ಮತ್ತು ಕೈಗಾರಿಕೀಕರಣಗೊಂಡ ಭೂಖಂಡ. ವಿಸ್ತೀರ್ಣದಲ್ಲಿ ಪ್ರಪಂಚದ ಆರನೇಯ ಸ್ಥಾನದಲ್ಲಿದೆ. ಇದು ಸಂಕೀರ್ಣ ಮತ್ತು ವೈವಿಧ್ಯ ಭೌಗೋಳಿಕ ಸನ್ನಿವೇಶ, ಸಾಮಾಜಿಕ-ಸಾಂಸ್ಕೃತಿಕ ಹಾಗೂ ರಾಜಕೀಯ ವ್ಯವಸ್ಥೆಯನ್ನು ಹೊಂದಿದೆ. ಅನೇಕ ದೊಡ್ಡ ಹಾಗೂ ಸಣ್ಣ ದೇಶಗಳನ್ನು ಹೊಂದಿದ್ದು, ಅವುಗಳ ಒಟ್ಟು ಸಂಖ್ಯೆ 56ಗಳಾಗಿರುತ್ತದೆ.
1. ಸ್ಥಾನ, ವಿಸ್ತೀರ್ಣ ಮತ್ತು ಭೌಗೋಳಿಕ ಸನ್ನಿವೇಶ
ಸ್ಥಾನ: ಯೂರೋಪ್ 10 ಡಿಗ್ರಿ ಪಶ್ಚಿಮದಿಂದ 60 ಡಿಗ್ರಿ ಪೂರ್ವ ರೇಖಾಂಶ ಹಾಗೂ 36 ಡಿಗ್ರಿ ಉತ್ತರದಿಂದ 72 ಡಿಗ್ರಿ ಉತ್ತರ ಅಕ್ಷಾಂಶಗಳಲ್ಲಿ ನೆಲೆಗೊಂಡಿದೆ.
ವಿಸ್ತೀರ್ಣ: ಯೂರೋಪ್ ಪ್ರಪಂಚದ ಎರಡನೆಯ ಚಿಕ್ಕ ಭೂಖಂಡ ಅದರ ಒಟ್ಟು ವಿಸ್ತೀರ್ಣ 10.4 ಮಿಲಿಯನ್ ಚ.ಕಿ.ಮೀಗಳು. ಇದು ಭಾರತದ ವಿಸ್ತೀರ್ಣಕ್ಕಿಂತ ಮೂರು ಪಟ್ಟು ದೊಡ್ಡದು. ಈ ಖಂಡವು ಪೃಥ್ವಿಯ ಒಟ್ಟು ವಿಸ್ತೀರ್ಣದಲ್ಲಿ ಶೇ. 7 ಭಾಗವನ್ನು ಹೊಂದಿದೆ. ಆದರೆ ಪ್ರಪಂಚದ ಜನಸಂಖ್ಯೆಯಲ್ಲಿ 1/4 ಭಾಗವನ್ನು ಹೊಂದಿದೆ.
ಭೌಗೋಳಿಕ ಸನ್ನಿವೇಶ: ಯೂರೋಪ್ ಏಷ್ಯಾಖಂಡದ ಪರ್ಯಾಯ ದ್ವೀಪ. ಈ ಖಂಡವು ಮೂರು ಕಡೆ ನೀರಿನಿಂದಾವರಿಸಿದೆ. ಉತ್ತರದಲ್ಲಿ ಬೇರೆಂಟ್ ಸಮುದ್ರ, ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಮತ್ತು ದಕ್ಷಿಣದಲ್ಲಿ ಮೆಡಿಟರೇನಿಯನ್ ಸಮುದ್ರಗಳು ಆವರಿಸಿವೆ.

ಯೂರೋಪಿನ ಪೂರ್ವಭಾಗದಲ್ಲಿ ಏಷ್ಯಾ ಖಂಡವಿದ್ದು, ಅದನ್ನು ಯೂರಲ್ಸ್ ಪರ್ವತ, ಕಕಾಸಸ್ ಪರ್ವತ ಮತ್ತು ಕ್ಯಾಸ್ಪಿಯನ್ ಸಮುದ್ರಗಳು ಯೂರೋಪಿನಿಂದ ಬೇರ್ಪಡಿಸುತ್ತವೆ. ದಕ್ಷಿಣಭಾಗಕ್ಕೆ ಆಫ್ರಿಕ ಖಂಡವಿದೆ.


ಆದರೆ ಮೇಲೆ ಹೇಳಿದ ಭೌಗೋಳಿಕ ಸ್ವರೂಪಗಳೇನು ಯೂರೋಪ್ ಮತ್ತು ಏಷ್ಯಾಗಳ ನಡುವಣ ಸುಭದ್ರ ಗಡಿಗಳಾಗಿರುವುದಿಲ್ಲ. ಹೀಗಾಗಿ ಇದನ್ನು ‘ಯೂರೇಷ್ಯ’ ಎಂದು ಒಂದೇ ಹೆಸರಿನಿಂದ ಕರೆಯಲಾಗುತ್ತದೆ.
2. ಪ್ರಾಕೃತಿಕ ಲಕ್ಷಣಗಳು
ಯೂರೋಪ್ ಖಂಡವು ವಿಶಿಷ್ಟವಾದ ಪ್ರಾಕೃತಿಕ ಲಕ್ಷಣಗಳಿಂದ ಕೂಡಿದೆ. ಈ ಖಂಡದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ಹಿಮದಿಂದಾವೃತ ಶಿಖರಗಳನ್ನುಳ್ಳ ಪರ್ವತ, ಕಂದರ, ಕಣಿವೆ ಮತ್ತು ಚಿಕ್ಕ ಮೈದಾನಗಳಿವೆ. ಆದರೆ ಈ ಖಂಡದ ಪೂರ್ವಭಾಗದ ಹೆಚ್ಚು ಭಾಗವು ಸ್ಥಿರ ಪೀಠಭೂಮಿಯಿಂದ ಆವರಿಸಿದೆ. ಅಲ್ಲಲ್ಲಿ ಸ್ವಲ್ಪ ಬದಲಾವಣೆ ಕಂಡುಬರುತ್ತದೆ.
ಯೂರೋಪ್ ಖಂಡದ ಅತಿ ಎತ್ತರವಾದ ಬಿಂದು ಕಕಾಸಸ್ ಪರ್ವತ ಸರಣಿಯ ಮೌಂಟ್ ಎಲ್ಬ್ರುಸ್ ಶಿಖರ (5633 ಮೀ). ಅತ್ಯಂತ ತಗ್ಗಾದ ಸ್ಥಳ ಕ್ಯಾಸ್ಪಿಯನ್ ಸಮುದ್ರ. ಇದು ಸಮುದ್ರ ಮಟ್ಟಕ್ಕೆ 28 ಮೀ. ತಗ್ಗಿನಲ್ಲಿದೆ.

ವಾಸ್ತವವಾಗಿ ಏಷಿಯನ್ ಭೂರಾಶಿಯಲ್ಲಿ ಯೂರೋಪ್ ಒಂದು ದೊಡ್ಡ ಪರ್ಯಾಯ ದ್ವೀಪ. ಈ ಖಂಡದಲ್ಲಿ ಹಲವು ಪರ್ಯಾಯ ದ್ವೀಪಗಳಿವೆ. ಉದಾ: ಸ್ಕಾಂಡಿನೇವಿಯ, ಐಬೀರಿಯ, ಜಟ್ಲ್ಯಾಂಡ್, ಬಾಲ್ಕನ್ ಮೊದಲಾದವು. ಆದ್ದರಿಂದ ಯೂರೋಪನ್ನು “ಪರ್ಯಾಯ ದ್ವೀಪಗಳ ಪರ್ಯಾಯ ದ್ವೀಪ” ಎಂದು ಕರೆಯಲಾಗಿದೆ.
ಯೂರೋಪಿನಲ್ಲಿ 80500 ಕಿ.ಮೀ ಉದ್ದವುಳ್ಳ ಒಳಚಾಚುಗಳನ್ನುಳ್ಳ ಸಮುದ್ರ ತೀರವಿದೆ. ಅದು ಏಷ್ಯಾ ಖಂಡದ ತೀರಕ್ಕಿಂತಲೂ ಉದ್ದವಾದುದು. ಈ ಖಂಡದ ತೀರದುದ್ದಕ್ಕೂ ಸಾವಿರಾರು ದ್ವೀಪಕಲ್ಪಗಳಿವೆ. ಅವುಗಳಲ್ಲಿ ಬ್ರಿಟನ್ ಮತ್ತು ಐರ್ಲೆಂಡ್ ದೊಡ್ಡವು. ಶೆಟ್ಲ್ಯಾಂಡ್, ಫೈರೋಸ್, ಓರ್ಕೆನಿ, ಸಿಸಿಲಿ, ಸಾರ್ಡಿನಿಯ, ಕೊರ್ಸಿಕ, ಕ್ರೇಟ್ ಮತ್ತು ಚಾನೆಲ್ ದ್ವೀಪ ಇವು ಇತರೆ ಪ್ರಮುಖ ದ್ವೀಪಗಳು.
ಪ್ರಾಕೃತಿಕ ವಿಭಾಗಗಳು:
ಮೇಲ್ಮೈ ಲಕ್ಷಣಗಳನ್ನಾಧರಿಸಿ ಯೂರೋಪನ್ನು ಸಾಮಾನ್ಯವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.
1 ವಾಯುವ್ಯದ ಎತ್ತರದ ಭಾಗಗಳು.
2 ಉತ್ತರದ ಯೂರೋಪ್ ಮೈದಾನಗಳು.
3 ಕೇಂದ್ರದ ಎತ್ತರವಾದ ಭಾಗಗಳು.
4 ದಕ್ಷಿಣದ ಪರ್ವತಗಳು.
1. ವಾಯುವ್ಯ ಎತ್ತರದ ಭಾಗಗಳು: ಈ ಪ್ರಾಕೃತಿಕ ವಿಭಾಗವು ಅತ್ಯಂತ ಪುರಾತನ ಪರ್ವತ ಸರಣಿಗಳನ್ನುಳ್ಳ ಫಿನ್ಲ್ಯಾಂಡ್, ಸ್ವೀಡನ್, ನಾರ್ವೆಗಳನ್ನೊಳಗೊಂಡಿದ್ದು, ಐಸ್ಲ್ಯಾಂಡ್ ಮತ್ತು ಬ್ರಿಟನ್ವರೆಗೂ ವಿಸ್ತರಿಸಿದೆ. ಇವು ಅವಶೇಷ ಪರ್ವತಗಳು. ಹಿಮನದಿಗಳ ಸವೆತದಿಂದಾಗಿ ಕಡಿಮೆ ಎತ್ತರವನ್ನು ಹೊಂದಿವೆ. ಅವು ಪುರಾತನ ಶಿಲೆಗಳಿಂದ ರಚಿತವಾಗಿವೆ. ಸ್ಕಾಂಡಿನೇವಿಯಾದಲ್ಲಿ ಇವುಗಳ ಸಾಮಾನ್ಯ ಎತ್ತರ 2000 ಮೀ. ಮತ್ತು ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ಗಳಲ್ಲಿ 600 ಮೀ. ಮಾತ್ರ. ಗೋಲ್ಡೊಪಿಗ್ಗೆನ್ (2469 ಮೀ.) ಈ ವಿಭಾಗದ ಅತ್ಯಂತ ಎತ್ತರವಾದ ಶಿಖರ (ನಾರ್ವೆ). ಸ್ಕಾಟ್ಲೆಂಡಿನ ಬೆನ್ನೆವಿಸ್ (1343 ಮೀ.) ಮತ್ತು ವೇಲ್ಸ್ನ ಸ್ನೊಡೋನ್ (1085 ಮೀ.) ಇತರೆ ಶಿಖರಗಳು. ಈ ವಿಭಾಗವು ಉತ್ತರದ ಕಡೆಗೆ ಸಾಧಾರಣ ಇಳಿಜಾರಾಗಿದೆ. ತನ್ಮೂಲಕ ಅನೇಕ ನದಿಗಳು ಹರಿಯುತ್ತವೆ.

2. ಉತ್ತರ ಯೂರೋಪ್ ಮೈದಾನಗಳು: ಇದನ್ನು ‘ಕೇಂದ್ರದ ತಗ್ಗು ಭಾಗಗಳು’ ಎಂತಲೂ ಕರೆಯಲಾಗುತ್ತದೆ. ಇದು ಪೂರ್ವದಲ್ಲಿ ಯೂರಲ್ ಪರ್ವತಗಳಿಂದ ಪಶ್ಚಿಮದಲ್ಲಿ ಅಟ್ಲಾಂಟಿಕ್ ತೀರದವರೆಗೆ ವಿಸ್ತರಿಸಿದೆ. ಯೂರೋಪಿನ ಬಹಳಷ್ಟು ಭಾಗವು ಈ ಭಾಗದಲ್ಲಿದೆ. ಇದರಲ್ಲಿ ಯೂರೋಪಿಯನ್ ರಷ್ಯ, ಪೋಲೆಂಡ್, ಉತ್ತರ ಜರ್ಮನಿ, ನೆದರ್ಲೆಂಡ್ಸ್ (ಹಾಲೆಂಡ್), ಡೆನ್ಮಾರ್ಕ್, ಬೆಲ್ಜಿಯಂ, ಉತ್ತರ ಫ್ರಾನ್ಸ್ ಹಾಗೂ ಇಂಗ್ಲೆಂಡ್ನ ಪೂರ್ವಭಾಗಗಳು ಸೇರಿವೆ.
ಇದು ಭಾರತದ ಸಿಂಧೂ-ಗಂಗಾ ನದಿ ಬಯಲುಗಳಷ್ಟು ಸಮತಟ್ಟಾದುದಲ್ಲ. ಕೆಲವು ಭಾಗಗಳಲ್ಲಿ ಈ ಮೈದಾನಗಳು ಸಾಧಾರಣ ಇಳಿಜಾರಿನಿಂದ ಕೂಡಿದ್ದರೆ, ಮತ್ತೆ ಕೆಲವೆಡೆ ಪರ್ವತ ಮತ್ತು ಬೆಟ್ಟಗಳ ಸಾಲಿನಿಂದ ಪ್ರತ್ಯೇಕಗೊಳ್ಳುತ್ತವೆ. ಇಲ್ಲಿ ಪ್ರಪಂಚದಲ್ಲೇ ಪ್ರಖ್ಯಾತ ಫಲವತ್ತಾದ ಕೃಷಿ ಭೂಮಿಗಳಿವೆ.
3. ಕೇಂದ್ರದ ಎತ್ತರವಾದ ಭಾಗಗಳು: ಇದು ಪುರಾತನ ಶಿಲೆಗಳಿಂದ ರಚನೆಗೊಂಡಿದ್ದು, ಹಲವು ಪುರಾತನ ಪರ್ವತ, ಬೆಟ್ಟ ಮತ್ತು ಪೀಠ ಭೂಮಿಗಳನ್ನು ಒಳಗೊಂಡಿದೆ. ಅವುಗಳ ಸರಾಸರಿ ಎತ್ತರ ಸಮುದ್ರ ಮಟ್ಟಕ್ಕೆ 600 ಮೀಟರ್ಗಳಿಗೆ ಹೆಚ್ಚಿಲ್ಲ.
ಈ ವಿಭಾಗವು ಪಶ್ಚಿಮದಲ್ಲಿ ಐರ್ಲೆಂಡ್ನಿಂದ ಪೂರ್ವದಲ್ಲಿ ರಷ್ಯದವರೆಗೆ ವಿಸ್ತರಿಸಿದೆ. ಇದರಲ್ಲಿ ಸ್ಪೇನ್ ಮತ್ತು ಪೋರ್ಚಗಲ್ಲಿನ ಮೆಸೆಟ, ಫ್ರಾನ್ಸಿನ ಕೇಂದ್ರ ಮಾಸಿಫ್ ಮತ್ತು ವೊಸ್ಜೆಸ್, ಜರ್ಮನಿಯ ಬ್ಲಾಕ್ಫಾರೆಸ್ಟ್ ಹಾಗೂ ಜೆಕ್ ಮತ್ತು ಸ್ಲೋವೇಕಿಯ ಗಣರಾಜ್ಯಗಳಲ್ಲಿರುವ ಕಡಿಮೆ ಎತ್ತರವುಳ್ಳ ಹಲವು ಸರಣಿಗಳು ಸೇರಿವೆ.

ಈ ವಿಭಾಗದ ಕೆಲಭಾಗಗಳು ಅರಣ್ಯಗಳಿಂದ ಆವರಿಸಿವೆ. ಬಹಳಷ್ಟು ಪ್ರದೇಶವು ಕಲ್ಲುಬಂಡೆಗಳಿಂದ ಕೂಡಿದೆ. ಇಲ್ಲಿನ ಮಣ್ಣು ಕೃಷಿಗೆ ಫಲವತ್ತಾಗಿಲ್ಲ. ಆದರೆ ನದಿ ಕಣಿವೆಗಳು ಉತ್ತಮ ಕೃಷಿ ಭೂಮಿಯನ್ನು ನೀಡಿವೆ.
4. ದಕ್ಷಿಣದ ಪರ್ವತಗಳು: ಈ ವಿಭಾಗವನ್ನು ‘ಆಲ್ಪೈನ್ ಪರ್ವತಗಳ ಭಾಗ’ ವೆಂತಲೂ ಕರೆಯಲಾಗಿದೆ. ಇದರಲ್ಲಿ ಅನೇಕ ಪರ್ವತ ಸರಣಿಗಳಿವೆ – ಸಿಯೆರ್ರಮೊರೇನ, (ಸ್ಪೇನ್), ಫ್ರಾನ್ಸ್ ಮತ್ತು ಸ್ಪೇನ್ಗಳ ಮಧ್ಯದಲ್ಲಿ ಗಡಿಯಂತಿರುವ ಪಿರನೀಸ್ ಪರ್ವತಗಳು. ಇವು ಪಶ್ಚಿಮದಲ್ಲಿ ಅಟ್ಲಾಂಟಿಕ್ ತೀರದಿಂದ ಪೂರ್ವದಲ್ಲಿ ಕ್ಯಾಸ್ಪಿಯನ್ ಸಮುದ್ರದವರೆಗೂ ಒಂದಕ್ಕೊಂದು ಸಮಾನಾಂತರ ಸರಣಿಗಳಾಗಿ ಹಬ್ಬಿವೆ. ಇವು ಹಿಮಾಲಯಗಳಂತೆ ಮಡಿಕೆ ಪರ್ವತಗಳಾಗಿವೆ.
ಈ ಭಾಗದಲ್ಲಿ ಆಲ್ಪ್ಸ್ ಪರ್ವತಗಳುಮುಖ್ಯವಾದವು. ಇಲ್ಲಿನ ಅತ್ಯಂತ ಎತ್ತರವಾದ ಶಿಖರವೆಂದರೆ ಮೌಂಟ್ ಬ್ಲ್ಯಾಂಕ್ (4807 ಮೀ). ಆಲ್ಪ್ಸ್ ಪರ್ವತಗಳು ಫ್ರಾನ್ಸಿನ ಆಗ್ನೇಯ ಭಾಗ, ಇಟಲಿಯ ಉತ್ತರ, ಸ್ವಿಟ್ಜ್ರ್ಲೆಂಡ್ನ ಬಹಳಷ್ಟು ಭಾಗ, ಜರ್ಮನಿ, ಆಸ್ಟ್ರಿಯ ಮತ್ತು ಸ್ಲೊವೇನಿಯ ಭಾಗಗಳಲ್ಲಿ ಹಂಚಿಕೆಯಾಗಿವೆ. ಇಟಲಿಯ ಹೆಚ್ಚಿನ ಭಾಗದಲ್ಲಿ ಅಪನೈನ್ ಪರ್ವತ, ಕ್ರೋಸಿಯ, ಬೋಸ್ನಿಯ ಮತ್ತು ಯುಗೋಸ್ಲಾವಿಯಗಳಲ್ಲಿ ಡಿನಾರಿಕ್ ಆಲ್ಪ್ಸ್, ಬಲ್ಗೇರಿಯಾದ ಬಾಲ್ಕನ್ ಮತ್ತು ಉತ್ತರ ಸ್ಲೋವೇನಿಯಾದಲ್ಲಿ ಕಾರ್ಪೇಥಿಯನ್ ಪರ್ವತಗಳಿವೆ.
3. ವಾಯುಗುಣ ಪ್ರದೇಶಗಳು ಮತ್ತು ಸ್ವಾಭಾವಿಕ ಸಸ್ಯವರ್ಗ
ಯೂರೋಪಿನ ವಾಯುಗುಣ ಪ್ರದೇಶಗಳನ್ನು ಕುರಿತು ಚರ್ಚಿಸುವುದಕ್ಕೂ ಮೊದಲು ಅದರ ಸಾಮಾನ್ಯ ವಾಯುಗುಣದ ಪರಿಸ್ಥಿತಿಯನ್ನು ತಿಳಿಯೋಣ. ಈ ಖಂಡದ ಹೆಚ್ಚಿನ ಭಾಗವು ‘ಸಮಶೀತೋಷ್ಣವಲಯದ ವಾಯುಗುಣ’ವನ್ನು ಹೊಂದಿದೆ. ಇದನ್ನು ‘ಹಿತಕರ ವಾಯುಗುಣ’ ಎಂತಲೂ ಕರೆಯಲಾಗಿದೆ. ಇದು ಪ್ರಮುಖ ವಾಯುಗುಣ ನಿಯಂತ್ರಣ ಘಟಕಗಳ ಪರಸ್ಪರ ಪ್ರಕ್ರಿಯೆಯ ಫಲವಾಗಿದೆ. ಅವುಗಳೆಂದರೆ ಅಕ್ಷಾಂಶ, ಮೇಲ್ಮೈಲಕ್ಷಣ, ಮಾರುತಗಳು ಮತ್ತು ಸ್ಥಾನ. ಆದರೂ ಖಂಡದಾದ್ಯಂತ ಪ್ರಚಲಿತವಾಗಿರುವ ಅಟ್ಲಾಂಟಿಕ್ ಸಾಗರದಿಂದ ಬೀಸುವ ಮಾರುತಗಳು ಈ ಖಂಡದ ಬಹಳಷ್ಟು ವಾಯುಗುಣದ ಮೇಲೆ ಹೆಚ್ಚು ಪ್ರಭಾವ ಬೀರುವವು. ಇದಕ್ಕೆ ಗಲ್ಫ್ ಸ್ಟ್ರೀಮ್ ಉಷ್ಣಸಾಗರ ಪ್ರವಾಹ ಮತ್ತು ಪ್ರಬಲವಾದ ಪಶ್ಚಿಮ ಮಾರುತಗಳು ಮುಖ್ಯ ಕಾರಣವಾಗಿವೆ.
ಸಾಮಾನ್ಯವಾಗಿ ದಕ್ಷಿಣ ಯೂರೋಪಿನ ತಂಪಾದ ಅಲ್ಪಾವಧಿ ಬೇಸಿಗೆಗಿಂತ ಉತ್ತರದಲ್ಲಿ ಚಳಿಗಾಲವು ದೀರ್ಘ ಮತ್ತು ಶೀತವಾಗಿರುತ್ತದೆ. ಅಲ್ಲದೆ ಪಶ್ಚಿಮ ಯೂರೋಪ್ಗಿಂತ ಪೂರ್ವಭಾಗದಲ್ಲಿ ಚಳಿಗಾಲವು ದೀರ್ಘ ಮತ್ತು ಶೀತವಾಗಿದ್ದು, ಬೇಸಿಗೆಯು ಅಲ್ಪಾವಧಿ ಮತ್ತು ಶಾಖವುಳ್ಳದ್ದಾಗಿರುತ್ತದೆ.
ವಾಯುಗುಣ ಪ್ರದೇಶಗಳು
ಯೂರೋಪನ್ನು ನಾಲ್ಕು ಪ್ರಮುಖ ವಾಯುಗುಣದ ವಲಯಗಳನ್ನಾಗಿ ವಿಂಗಡಿಸಬಹುದು.
1. ವಾಯುವ್ಯ ಯೂರೋಪಿನ ಸಾಗರೀಯ ವಾಯುಗುಣ ಪ್ರದೇಶ: ಈ ಪ್ರದೇಶವು ನಾರ್ವೆಯ ಸಮುದ್ರ ತೀರದಿಂದ ಸ್ಪೇನಿನ ಉತ್ತರ ಮತ್ತು ಮಧ್ಯ ಯೂರೋಪಿನ ಒಳನಾಡಿನವರೆಗೆ ಹಂಚಿಕೆಯಾಗಿದೆ. ಹಿತಕರವಾದ ಚಳಿಗಾಲ, ತಂಪಾದ ಬೇಸಿಗೆ ಮತ್ತು ಸಾಕಷ್ಟು ಮಳೆ, ಮೋಡ ಕವಿದ ಮತ್ತು ಕಾವಳಗಳನ್ನುಳ್ಳ ಹಗಲುಗಳು ಈ ವಾಯುಗುಣದ ಪ್ರಮುಖ ಗುಣಲಕ್ಷಣಗಳು. ಚಳಿಗಾಲ ಮತ್ತು ಬೇಸಿಗೆ ಎರಡೂ ಕಾಲಗಳಲ್ಲಿ ಉಷ್ಣಾಂಶ ಸಾಧಾರಣ (10 ಡಿಗ್ರಿ ಸೆ ಮತ್ತು 18 ಡಿಗ್ರಿ ಸೆ) ಮತ್ತು ಮಳೆಯ ಹಂಚಿಕೆ ಉತ್ತಮ (75 ಸೆಂ.ಮೀ).


2. ಖಂಡಾಂತರ ವಾಯುಗುಣ ಪ್ರದೇಶ: ಇದು ಹೆಚ್ಚಾಗಿ ಪೋಲೆಂಡ್, ಸ್ಲೋವೇಕಿಯ, ಜೆಕ್ ಗಣರಾಜ್ಯ, ಹಂಗೇರಿ, ರುಮೇನಿಯ ಮತ್ತು ಬಲ್ಗೇರಿಯಗಳಲ್ಲಿ ಕಂಡುಬರುತ್ತದೆ. ಈ ವಾಯುಗುಣದ ಗುಣಲಕ್ಷಣಗಳೆಂದರೆ ಶೀತವುಳ್ಳ ಚಳಿಗಾಲ, ಬೆಚ್ಚನೆಯ ಬೇಸಿಗೆ (-12ಡಿಗ್ರಿ ಸೆ. ಮತ್ತು 10ಡಿಗ್ರಿ ಸೆ.) ಮತ್ತು ಸರಾಸರಿ ವಾರ್ಷಿಕ ಮಳೆ 50 ಸೆಂ.ಮೀ. ಬೇಸಿಗೆಯ ಆರಂಭದಲ್ಲಿ ಅತಿ ಹೆಚ್ಚು ಪರಿಸರಣ ರೀತಿಯ ಮಳೆ ಬೀಳುವುದು.
3. ಮೆಡಿಟರೇನಿಯನ್ ವಾಯುಗುಣ ಪ್ರದೇಶ: ಹೆಚ್ಚು ಉಷ್ಣಾಂಶ, ಶುಷ್ಕ ಮತ್ತು ಬಿಸಿಲಿನಿಂದ ಕೂಡಿದ ಬೇಸಿಗೆ ಹಾಗೂ ಸ್ವಲ್ಪ ಮಳೆ ಬೀಳುವ ಹಿತಕರವಾದ ಚಳಿಗಾಲಗಳು ಈ ವಾಯುಗುಣದ ಪ್ರಮುಖ ಗುಣಲಕ್ಷಣಗಳು. ಮಳೆ ಹಂಚಿಕೆಯಲ್ಲಿ ಸಮಾನತೆ ಇಲ್ಲ. ಚಳಿಗಾಲದ ಸರಾಸರಿ ಉಷ್ಣಾಂಶ 8ಡಿಗ್ರಿ ಸೆಲ್ಸಿಯಸ್ ಮತ್ತು ಅದು ಬೇಸಿಗೆಯಲ್ಲಿ 22ಡಿಗ್ರಿ ಸೆಲ್ಸಿಯಸ್ಗಳಾಗಿರುತ್ತದೆ. ಸರಾಸರಿ ವಾರ್ಷಿಕ ಮಳೆ 75ರಿಂದ 100 ಸೆಂ.ಮೀ.ಗಳು. ಇಂತಹ ವಾಯುಗುಣವು ವಿಶೇಷವಾಗಿ ಮೆಡಿಟರೇನಿಯನ್ ಪ್ರದೇಶಗಳನ್ನೊಳಗೊಂಡ ದಕ್ಷಿಣ ಯೂರೋಪಿನಲ್ಲಿ ಕಂಡುಬರುವುದು.
4. ಪರ್ವತ ವಾಯುಗುಣ ಪ್ರದೇಶ: ಇಂತಹ ವಾಯುಗುಣವು ಆಲ್ಪ್ಸ್ ಮತ್ತು ಕಕಾಸಸ್ ಪರ್ವತ ಭಾಗಗಳಲ್ಲಿ ಕಂಡುಬರುತ್ತದೆ. ಇದು ಎತ್ತರ, ಸೂರ್ಯನಕಿರಣಗಳ ಕೋನ ಮತ್ತು ಮಾರುತಗಳಿಂದ ನಿಯಂತ್ರಿಸಲ್ಪಡುವುದು. ಚಳಿಗಾಲದ ಉಷ್ಣಾಂಶ-4ಡಿಗ್ರಿ ಸೆ. ಮತ್ತು ಬೇಸಿಗೆಯ ಉಷ್ಣಾಂಶ 16ಡಿಗ್ರಿ ಸೆ. ಸರಾಸರಿ ಮಳೆಯ ಹಂಚಿಕೆಯು ಪರ್ವತಗಳ ಗಾಳಿಗೆ ವಿಮುಖ ಭಾಗದಲ್ಲಿ 50 ಸೆಂ.ಮೀ. ಮತ್ತು ಗಾಳಿಗೆ ಅಭಿಮುಖ ಭಾಗಗಳಲ್ಲಿ 200 ಸೆಂ.ಮೀ. ಅತ್ಯಂತ ಎತ್ತರವುಳ್ಳ ಭಾಗಗಳಲ್ಲಿ ಉಷ್ಣಾಂಶವು ಹೆಪ್ಪುಗಟ್ಟುವ ಬಿಂದುಗಿಂತಲೂ ಕಡಿಮೆ ಇರುತ್ತದೆ.
ಸ್ವಾಭಾವಿಕ ಸಸ್ಯವರ್ಗ
ಯೂರೋಪಿನಲ್ಲಿ ಬಹಳ ದೀರ್ಘಕಾಲದಿಂದ ಮಾನವರು ನೆಲಸಿದ್ದಾರೆ ಮತ್ತು ಇದು ಅಧಿಕ ಜನಸಾಂದ್ರತೆಯುಳ್ಳದ್ದು. ಆದ್ದರಿಂದ ಸ್ವಾಭಾವಿಕ ಸಸ್ಯವರ್ಗವು ಸಂಪೂರ್ಣವಾಗಿ ವಿನಾಶಗೊಂಡಿದೆ. ಜನವಸತಿಗೆ ಪ್ರತಿಕೂಲವಾದ ಮತ್ತು ಎತ್ತರದ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಈ ಕೆಳಕಂಡಂತೆ ಯೂರೋಪಿನಲ್ಲಿ ಆರು ಪ್ರಕಾರದ ಸಸ್ಯವರ್ಗವಿದೆ.
1. ಟಂಡ್ರ ಸಸ್ಯವರ್ಗವು ಶಿಲಾವಲ್ಕ ಮತ್ತು ಪಾಚಿಗಳಿಂದ (Lichens and mosses) ಕೂಡಿದೆ. ಇದು ಐರ್ಲೆಂಡ್, ಉತ್ತರ ನಾರ್ವೆ, ಸ್ವೀಡನ್ ಮತ್ತು ಫಿನ್ಲೆಂಡ್ಗಳನ್ನೊಳಗೊಂಡ ಕಿರಿದಾದ ಪ್ರದೇಶದಲ್ಲಿ ಕಂಡುಬರುವುದು. ಇಂತಹದೇ ಸಸ್ಯವರ್ಗ ಆಲ್ಪ್ಸ್ ಮತ್ತು ಉತ್ತರ ಯೂರಲ್ಸ್ ಪರ್ವತಗಳ ಎತ್ತರದ ಭಾಗಗಳಲ್ಲಿಯೂ ಕಂಡುಬರುವುದು.
2. ಟೈಗ ಅರಣ್ಯಗಳು ನಾರ್ವೆ, ಸ್ವೀಡನ್ ಮತ್ತು ಫಿನ್ಲೆಂಡ್ಗಳನ್ನೊಳಗೊಂಡ ಧ್ರುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇವುಗಳನ್ನು ‘ಶಂಕುವಿನಾಕಾರದ ಮರಗಳ ಕಾಡು’ ಎಂತಲೂ ಕರೆಯಲಾಗಿದೆ. ಇಲ್ಲಿ ಕೆಲವೇ ಪ್ರಭೇದದ ಮರಗಳು ಬೆಳೆಯುತ್ತವೆ. ಉದಾ: ಸ್ಕಾಟ್ಸ್ಪೈನ್, ಸ್ಪ್ರೂಸ್ ಮತ್ತು ಲಾರ್ಚ್. ಅವು ಮೊನಚಾದ ಎಲೆಗಳನ್ನು ಹೊಂದಿದ್ದು ಶಂಕುವಿನಾಕಾರವನ್ನು ಹೊಂದಿವೆ.
3. ಮಿಶ್ರ ಕಾಡುಗಳು ದಕ್ಷಿಣದ ಕೇಂದ್ರ ಪ್ರದೇಶದಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಎಲೆ ಉದುರಿಸುವ ಮತ್ತು ಶಂಕುವಿನಾಕಾರದ ಮರಗಳು ಬೆಳೆಯುತ್ತವೆ. ಪ್ರಮುಖವಾದ ಮರಗಳೆಂದರೆ ಓಕ್, ಆಶ್, ಎಲ್ಮ್, ಪಾಪ್ಲರ್, ವಿಲ್ಲೊ, ಬೀಚ್ ಇತ್ಯಾದಿ.
4. ಮೆಡಿಟರೇನಿಯನ್ ಸಸ್ಯವರ್ಗವು ಸಾಮಾನ್ಯವಾಗಿ ಮೆಡಿಟರೇನಿಯನ್ ಸಮುದ್ರದ ತೀರದುದ್ದಕ್ಕೂ ಕಂಡುಬರುವುದು. ಇದು ಅಗಲ ಎಲೆಗಳನ್ನುಳ್ಳ ಸದಾ ಹಸಿರಾದ ಸಸ್ಯವರ್ಗ. ಏಕೆಂದರೆ ಶರತ್ಕಾಲದಲ್ಲಿ ಮರಗಳು ತಮ್ಮ ಎಲೆಗಳನ್ನು ಉದುರಿಸುವುದಿಲ್ಲ. ಕಾರ್ಕ್ಓಕ್, ಆಲಿವ್, ಲಾರೆಲ್ ಮುಂತಾದ ಮರಗಳು ಇಲ್ಲಿ ಬೆಳೆಯುತ್ತವೆ.
5. ಹುಲ್ಲುಗಾವಲು ದಕ್ಷಿಣ ಭಾಗದ ಎಲೆ ಉದುರಿಸುವ ಅರಣ್ಯಗಳಲ್ಲಿ ಕಂಡು ಬರುತ್ತದೆ. ಉದಾ: ಹಂಗೇರಿ, ಬಲ್ಗೇರಿಯ, ರುಮೇನಿಯ ಮತ್ತು ಯೂರೋಪಿಯನ್ ರಷ್ಯ. ಇದು ವಿರಳ ಮರಗಳು ಮತ್ತು ಹುಲ್ಲುಗಳನ್ನುಳ್ಳ ಸ್ಟೆಪ್ಪಿ ಸಸ್ಯವರ್ಗವಾಗಿದೆ.
6. ಆಲ್ಪೈನ್ ಸಸ್ಯವರ್ಗವು ಯೂರೋಪಿನ ದಕ್ಷಿಣ ಭಾಗದಲ್ಲಿ ಎತ್ತರವಾದ ಪರ್ವತ ಭಾಗಗಳಲ್ಲಿ ಹಂಚಿಕೆಯಾಗಿದೆ. ಉದಾ: ಆಲ್ಪ್ಸ್, ಪಿರನೀಸ್, ಬಾಲ್ಕನ್, ಕಾರ್ಪೇಥಿಯನ್ ಮತ್ತು ಡಿನಾರಿಕ್ ಪರ್ವತಗಳು.

4. ವ್ಯವಸಾಯ, ಹೈನುಗಾರಿಕೆ ಮತ್ತು ಮೀನುಗಾರಿಕೆ
ವ್ಯವಸಾಯ: ಯೂರೋಪಿನಲ್ಲಿ ಕೈಗಾರಿಕೀಕರಣದ ತರುವಾಯವೂ ವ್ಯವಸಾಯವು ಮುಖ್ಯ ವೃತ್ತಿಯಾಗಿ ಉಳಿದಿದೆ. ಈ ಖಂಡವು ವಿಶಾಲ, ಸಮತಟ್ಟಾದ, ಫಲವತ್ತಾದ ಭೂಮಿ ಹಾಗೂ ಉತ್ತಮ ನೀರಾವರಿ ಸೌಲಭ್ಯ ಹೊಂದಿರುವುದರಲ್ಲಿ ಅದೃಷ್ಟಶಾಲಿ. ಇಲ್ಲಿನ ವಾಯುಗುಣವೂ ವ್ಯವಸಾಯಕ್ಕೆ ಯೋಗ್ಯವಾಗಿದೆ.
ಸ್ಕಾಂಡಿನೇವಿಯನ್ ದೇಶಗಳನ್ನು ಹೊರತುಪಡಿಸಿ ಯೂರೋಪಿನ ಬಹಳಷ್ಟು ದೇಶಗಳು ಅವುಗಳ ವಿಸ್ತೀರ್ಣದಲ್ಲಿ ಶೇ. 50ಕ್ಕೂ ಹೆಚ್ಚು ಭಾಗ ಕೃಷಿಗೊಳಪಟ್ಟಿವೆ. ಯೂರೋಪಿನ ಸರಾಸರಿ ಭೂಹಿಡುವಳಿಯ ಗಾತ್ರ 10 ಹೆಕ್ಟೇರು.
ಪಶ್ಚಿಮ ಯೂರೋಪಿನ ದೇಶಗಳಲ್ಲಿ ಮಿಶ್ರಬೇಸಾಯವು ರೂಢಿಯಲ್ಲಿದೆ. ಇದು ಬೆಳೆಗಳ ಸಾಗುವಳಿ ಮತ್ತು ಜಾನುವಾರು ಸಾಕಣೆ ಎರಡನ್ನೂ ಒಳಗೊಂಡಿದೆ. ಇಲ್ಲಿ ಕೃಷಿ ಭೂಮಿಯನ್ನು ದನಗಳ ಮೇವಿಗಾಗಿ ಬೆಳೆಗಳನ್ನು ಬೆಳೆಯಲು, ಕೋಳಿಸಾಕಣೆ, ಹಂದಿ ಸಾಕಲು ಹಾಗೂ ವಿವಿಧ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುವುದಕ್ಕೆ ಉಪಯೋಗಿಸಲಾಗುತ್ತದೆ.
ಮೆಡಿಟರೇನಿಯನ್ ವಾಯುಗುಣವುಳ್ಳ ದಕ್ಷಿಣ ಯೂರೋಪಿನ ವ್ಯವಸಾಯವೇ ಬೇರೆಯಾಗಿರುತ್ತದೆ. ಅದು ಏಕದಳ ಧಾನ್ಯಬೆಳೆ, ಹಣ್ಣು, ತರಕಾರಿಗಳ ಸಾಗುವಳಿ ಮತ್ತು ಜಾನುವಾರು ಸಾಕಣೆಯ ಸಂಯೋಜನೆಯಿಂದ ಕೂಡಿದೆ.
ವಿಶಾಲವಾದ ಮಾರುಕಟ್ಟೆಯನ್ನು ಅವಲಂಬಿಸಿದ ವಿಶೇಷ ಮಾದರಿ ವ್ಯವಸಾಯ ಅಭಿವೃದ್ಧಿಗೊಂಡಿದೆ. ಅಧಿಕ ಜನಸಾಂದ್ರತೆವುಳ್ಳ ನಗರ ಪ್ರದೇಶಗಳಿಗೆ ಸಮೀಪದ ಭಾಗಗಳಲ್ಲಿ ವಾಣಿಜ್ಯ ಹಾಗೂ ಉತ್ತಮ ಸಂಘಟಿತ ವ್ಯವಸಾಯ ಕಂಡು ಬರುತ್ತದೆ. ಒಟ್ಟಾರೆ ಯೂರೋಪಿನ ಜನರಲ್ಲಿ ಶೇ.10ಕ್ಕೂ ಕಡಿಮೆ ಭಾಗ ವ್ಯವಸಾಯ ವೃತ್ತಿಯಲ್ಲಿ ತೊಡಗಿದ್ದಾರೆ.
ಮೇಲ್ಮೈ ಲಕ್ಷಣ, ಮಣ್ಣು, ವಾಯುಗುಣ, ಮಾರುಕಟ್ಟೆ ಮತ್ತು ಕೃಷಿ ಕಾರ್ಮಿಕರು ದೊರೆಯುವಿಕೆಯನ್ನು ಅವಲಂಬಿಸಿ ಯೂರೋಪಿನ ವಿವಿಧ ಭಾಗಗಳಲ್ಲಿ ವಿವಿಧ ಬಗೆಯ ಬೆಳೆಗಳನ್ನು ಬೆಳೆಯಲಾಗುತ್ತದೆ.
ಗೋಧಿಯು ಯೂರೋಪಿನ ಪ್ರಮುಖ ಆಹಾರ ಬೆಳೆ. ಪ್ಯಾರಿಸ್ ಮೈದಾನ, ಯೂರೋಪ್ ಮಹಾಮೈದಾನ, ಹಂಗೇರಿ ಮೈದಾನ, ತಗ್ಗು ಮೈದಾನದ ದೇಶಗಳು ಹಾಗೂ ಇಟಲಿಯ ಪೋ ನದಿ ಬಯಲುಗಳು ಯೂರೋಪಿನ ಪ್ರಮುಖ ಗೋಧಿ ಉತ್ಪಾದಿಸುವ ಪ್ರದೇಶಗಳು.
ಮೆಕ್ಕೆಜೋಳವು ಯೂರೋಪಿನ ಎರಡನೆಯ ಪ್ರಮುಖ ಏಕದಳಧಾನ್ಯ ಬೆಳೆ. ಫ್ರಾನ್ಸ್, ಇಟಲಿ, ಹಂಗೇರಿ, ಜರ್ಮನಿ ಮತ್ತು ಸ್ಪೇನ್ ಪ್ರಮುಖ ಮೆಕ್ಕೆಜೋಳ ಉತ್ಪಾದಿಸುವ ದೇಶಗಳು. ರೈ (ಸಾಸಿವೆ) ಮತ್ತೊಂದು ಆಹಾರದ ಬೆಳೆ. ಇದನ್ನು ಹೆಚ್ಚಾಗಿ ಬ್ರೆಡ್ ಮತ್ತು ಮದ್ಯಗಳ ತಯಾರಿಕೆಗೆ ಬಳಸಲಾಗುವುದು. ಪೋಲೆಂಡ್, ಜರ್ಮನಿ, ಜೆಕ್ ಮತ್ತು ಸ್ಲೋವೇಕಿಯ ಗಣರಾಜ್ಯಗಳು ಪ್ರಮುಖ ರೈ (ಸಾಸಿವೆ) ಉತ್ಪಾದಿಸುವ ದೇಶಗಳು. ಬಾರ್ಲಿ ಉತ್ಪಾದನೆಯಲ್ಲೂ ಯೂರೋಪ್ ಪ್ರಮುಖವಾದುದು. ಇದನ್ನು ಆಹಾರ ಧಾನ್ಯವನ್ನಾಗಿ, ದನಗಳಿಗೆ ಆಹಾರವಾಗಿ ಮತ್ತು ಮದ್ಯ ತಯಾರಿಕೆಯಲ್ಲಿ ಬಳಸಲಾಗುವುದು. ಕೆಲವೆಡೆ ಓಟ್ಸ್ನ್ನೂ ಬೆಳೆಯಲಾಗುತ್ತದೆ. ಭತ್ತವನ್ನು ಅಲ್ಪ ಪ್ರಮಾಣದಲ್ಲಿ ಬೆಳೆಯಲಾಗುವುದು. ಇದು ಬೇಸಿಗೆಯ ಬೆಳೆ.
ಸಕ್ಕರೆಗೆಡ್ಡೆ ಮತ್ತು ಬಟಾಟೆ (ಆಲೂಗೆಡ್ಡೆ)ಗಳು ಯೂರೋಪಿನ ಎರಡು ಪ್ರಮುಖ ಗೆಡ್ಡೆ ಬೆಳೆಗಳು. ಸಕ್ಕರೆ ಗೆಡ್ಡೆಯನ್ನು ಸಕ್ಕರೆ ತಯಾರಿಕೆಗೆ ಮತ್ತು ದನಗಳ ಆಹಾರವಾಗಿ ಉಪಯೋಗಿಸಲಾಗುತ್ತದೆ.
ಬಟಾಟೆಯನ್ನು ಹೆಚ್ಚಾಗಿ ಕೇಂದ್ರ ಮತ್ತು ಪೂರ್ವ ಯೂರೋಪ್ ಮೈದಾನಗಳಲ್ಲಿ ಬೆಳೆಯಲಾಗುವುದು. ಯೂರೋಪ್ ಪ್ರಪಂಚದಲ್ಲೇ ಹೆಚ್ಚು ಬಟಾಟೆಯನ್ನು ಉತ್ಪಾದಿಸುವುದು. ಅಗಸೆಯು (Flax) ಯೂರೋಪಿನ ಪ್ರಮುಖ ನಾರು ಬೆಳೆ.
ಯೂರೋಪಿನ ಬೆಟ್ಟಗಳ ಇಳಿಜಾರುಗಳಲ್ಲಿ ದ್ರಾಕ್ಷಿ, ಸೇಬು, ಅಂಜೂರ, ಕಿತ್ತಲೆ, ನಿಂಬೆ, ದ್ವೀಪದ್ರಾಕ್ಷಿ (ಪ್ಲಮ್), ದಾಳಿಂಬೆ, ಚೆಸ್ಟ್ನಟ್ ಮೊದಲಾದ ಹಣ್ಣುಗಳ ಬೇಸಾಯವು ಕಂಡುಬರುತ್ತದೆ. ಬಲ್ಗೇರಿಯಾವು ಗುಲಾಬಿ ಹೂವು, ತರಕಾರಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಪ್ರಸಿದ್ಧವಾಗಿದೆ.
ಹೈನುಗಾರಿಕೆ: ಇದು ಯೂರೋಪಿನ ಮಿಶ್ರ ಬೇಸಾಯ ಪದ್ಧತಿಯಲ್ಲಿ ಅತ್ಯುತ್ತಮ ವ್ಯವಸ್ಥಿತ ಉದ್ಯಮ. ತಂಪಾದ ತೇವಾಂಶಭರಿತ ವಾಯುಗುಣ, ಅಧಿಕ ಜನಸಾಂದ್ರತೆವುಳ್ಳ ನಗರಗಳು, ಸುವ್ಯವಸ್ಥಿತ ರಸ್ತೆ ಮತ್ತು ರೈಲುಸಾರಿಗೆ ಸೌಲಭ್ಯ, ಅತ್ಯುತ್ತಮ ಜೈವಿಕ-ತಂತ್ರಜ್ಞಾನದ ಅಭಿವೃದ್ಧಿ, ಶೈತ್ಯೀಕರಣ, ವಾಣಿಜ್ಯ ಮಾದರಿ ಹೈನುಗಾರಿಕೆಯಲ್ಲಿ ಯಾಂತ್ರೀಕರಣ ಮತ್ತು ಯಥೇಚ್ಚವಾದ ಮೇವು ಪೂರೈಕೆಗಳು ಯೂರೋಪಿನ ಹೈನುಗಾರಿಕೆಯ ಅಭಿವೃದ್ಧಿಗೆ ಉತ್ತೇಜನವಾಗಿವೆ.

ಡೆನ್ಮಾರ್ಕ್, ನೆದರ್ಲೆಂಡ್ಸ್, ಸ್ವಿಟ್ಜರ್ಲೆಂಡ್, ಜರ್ಮನಿ ಮತ್ತು ಬ್ರಿಟನ್ಗಳಲ್ಲಿ ಹೈನುಗಾರಿಕೆಯು ಹೆಚ್ಚು ಅಭಿವೃದ್ಧಿಗೊಂಡಿದೆ. ಆದರೆ ಡೆನ್ಮಾರ್ಕ್ ಅತ್ಯಂತ ಪ್ರಮುಖವಾದುದು. ಯೂರೋಪಿನ ದೇಶಗಳು ತಮ್ಮ ಹೈನದ ವಸ್ತುಗಳನ್ನು ರಫ್ತು ಮಾಡುತ್ತವೆ. ಉದಾ: ಬೆಣ್ಣೆ, ಗಿಣ್ಣು, ಸಾಂದ್ರೀಕರಿಸಿದ ಹಾಲು, ಚಾಕೊಲೆಟ್ ಮೊದಲಾದವು.
ಮೀನುಗಾರಿಕೆ: ಇತಿಹಾಸದ ಉದ್ದಕ್ಕೂ ಯೂರೋಪ್ ಖಂಡವು ಮೀನುಗಾರಿಕೆಯನ್ನು ತನ್ನ ಆಹಾರದ ಆರ್ಥಿಕತೆಯನ್ನಾಗಿ ರೂಢಿಸಿಕೊಂಡು ಬಂದಿದೆ. ಕಡಿಮೆ ಆಳದ ಸಮುದ್ರ ಭಾಗಗಳಲ್ಲಿ ಮೀನುಗಾರಿಕೆ ಸಾಗುತ್ತದೆ. ಪ್ರಮುಖ ಮೀನುಗಾರಿಕಾ ಪ್ರದೇಶಗಳು ವಾಯುವ್ಯ ಯೂರೋಪಿನಲ್ಲಿವೆ. ಅವು ಆಕ್ರ್ಟಿಕ್ ವೃತ್ತದ ಉತ್ತರ ಭಾಗದಿಂದ ಮೆಡಿಟರೇನಿಯನ್ ಸಮುದ್ರದವರೆಗೆ ವಿಸ್ತರಿಸಿವೆ. ಉತ್ತರ ಸಮುದ್ರವು ಅತಿ ತೀವ್ರವಾದ ಮೀನುಗಾರಿಕಾ ಪ್ರದೇಶವಾಗಿದೆ. ಅದರಲ್ಲಿ ನಾರ್ವೆ, ಬ್ರಿಟನ್, ಡೆನ್ಮಾರ್ಕ್, ಸ್ವೀಡನ್ ಮತ್ತು ಜರ್ಮನಿಗಳು ಸೇರಿವೆ. ಡಾಗರ್ ಬ್ಯಾಂಕ್ ಮತ್ತು ಗ್ರೇಟ್ ಫಿಶರ್ ಬ್ಯಾಂಕ್ ಪ್ರದೇಶಗಳು ಉತ್ತರ ಸಮುದ್ರದ ಎರಡು ಪ್ರಸಿದ್ಧ ಮೀನುಗಾರಿಕಾ ಕೇಂದ್ರಗಳಾಗಿವೆ. ನಾರ್ವೆಯ ಜನರು ಮೀನುಗಾರಿಕೆಯಲ್ಲಿ ಪರಿಣಿತರಾಗಿದ್ದಾರೆ.
ಸೀಲ್ ಮತ್ತು ತಿಮಿಂಗಿಲಗಳನ್ನು ಧ್ರುವ ಪ್ರದೇಶಗಳಲ್ಲಿ ಹಿಡಿಯಲಾಗುತ್ತದೆ. ನಾರ್ವೆಯು ಅತಿ ಹೆಚ್ಚು ಮೀನುಗಳನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ದೇಶವಾಗಿದೆ.
ಕೃಷಿ ಭೂಮಿ ಮತ್ತು ಆಹಾರ ಧಾನ್ಯಗಳ ಕೊರತೆಗಳಿಂದಾಗಿ ಯೂರೋಪಿನಲ್ಲಿ ಮೀನುಗಾರಿಕೆ ಪ್ರಗತಿಗೊಂಡಿದೆ.

5. ಖನಿಜಗಳು
ಖನಿಜಗಳು: ಯೂರೋಪ್ ಖಂಡದಲ್ಲಿ ವಿವಿಧ ಬಗೆಯ ಖನಿಜಗಳು ಮತ್ತು ಶಕ್ತಿಸಂಪನ್ಮೂಲಗಳು ದೊರೆಯುತ್ತವೆ.
ಈ ಖಂಡದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದ ಅದಿರು ಉತ್ಪಾದನೆಯಾಗುತ್ತದೆ. ಯೂರೋಪಿನ ಬಹಳಷ್ಟು ದೇಶಗಳಲ್ಲಿ ಕಬ್ಬಿಣದ ಅದಿರು ಹಂಚಿಕೆಯಾಗಿದೆ. ಪ್ರಪಂಚದ ಶೇ. 5 ಭಾಗದಷ್ಟು ಕಬ್ಬಿಣದ ಅದಿರಿನ ನಿಕ್ಷೇಪವು ಈ ಖಂಡದಲ್ಲಿ ಲಭ್ಯವಿದೆ. ಫ್ರಾನ್ಸ್, ಜರ್ಮನಿ ಬ್ರಿಟನ್ ಮತ್ತು ಸ್ವೀಡನ್ಗಳು ಪ್ರಮುಖ ಕಬ್ಬಿಣದ ಅದಿರು ಉತ್ಪಾದಿಸುವ ದೇಶಗಳು.
ಬಲ್ಗೇರಿಯ ಮತ್ತು ಪೋಲೆಂಡ್ಗಳು ಪ್ರಮುಖ ತಾಮ್ರ ಉತ್ಪಾದಿಸುವ ದೇಶಗಳು. ಯೂರೋಪಿನಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಸಂಪತ್ತು ಬಹಳ ಕಡಿಮೆ. ಪ್ರಮುಖ ಪೆಟ್ರೋಲಿಯಂ ಉತ್ಪಾದಿಸುವ ಭಾಗಗಳೆಂದರೆ ಉತ್ತರ ಸಮುದ್ರ, ಫ್ರಾನ್ಸ್, ಇಟಲಿ, ನೆದರ್ಲೆಂಡ್ಸ್ ಮತ್ತು ಜರ್ಮನಿ.

ಕಲ್ಲಿದ್ದಲು ಯೂರೋಪಿನ ಪ್ರಮುಖ ವಿದ್ಯುತ್ಶಕ್ತಿಯ ಸಂಪನ್ಮೂಲ. ಸ್ಕಾಂಡಿನೇವಿಯ ಮತ್ತು ಮೆಡಿಟರೇನಿಯನ್ ದೇಶಗಳನ್ನು ಹೊರತುಪಡಿಸಿ ಈ ಖಂಡದಾದ್ಯಂತ ಕಲ್ಲಿದ್ದಲು ನಿಕ್ಷೇಪವು ಹಂಚಿಕೆಯಾಗಿದೆ. ಉತ್ತಮ ದರ್ಜೆಯ ಬಿಟುಮಿನಸ್ ಕಲ್ಲಿದ್ದಲು ಯೂರೋಪಿಯನ್ ರಷ್ಯ, ಜರ್ಮನಿ ಮತ್ತು ಬ್ರಿಟನ್ಗಳಲ್ಲಿ ಹಂಚಿಕೆಯಾಗಿದೆ. ಕೆಲವೆಡೆ ಬಾಕ್ಸೈಟ್ ಮತ್ತು ಪೊಟ್ಯಾಸ್ಗಳೂ ದೊರೆಯುತ್ತವೆ.
ಪ್ರಮುಖ ಕೈಗಾರಿಕೆಗಳು
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ: ಆಧುನಿಕ ಯುಗವು ಕಬ್ಬಿಣ ಮತ್ತು ಉಕ್ಕಿನ ಯುಗ. ಇದು ದೊಡ್ಡ ಪ್ರಮಾಣದ ಕೈಗಾರಿಕೆಯಾಗಿದ್ದು, ಹಲವು ಉಪಕೈಗಾರಿಕೆಗಳಿಗೆ ಅಗತ್ಯವಾದ ಕಬ್ಬಿಣ ಮತ್ತು ಉಕ್ಕುಗಳನ್ನು ಉತ್ಪಾದಿಸುತ್ತದೆ. ಪ್ರಮುಖ ಕಬ್ಬಿಣ ಮತ್ತು ಉಕ್ಕು ಉತ್ಪಾದಿಸುವ ಪ್ರದೇಶಗಳೆಂದರೆ;
1. ಜರ್ಮನಿ ರ್ಹೂರ್, ಸಾರ್, ವೆಸರ್ ನದಿಬಯಲುಗಳು ಮತ್ತು ಬರ್ಲಿನ್ ಪ್ರದೇಶ.
2. ಬ್ರಿಟನ್ ಬ್ಲಾಕ್ಕಂಟ್ರಿ, ಶೆಫೀಲ್ಡ್, ಈಶಾನ್ಯ ಕರಾವಳಿ ಮತ್ತು ವೇಲ್ಸ್ ಪ್ರದೇಶ.
3. ಫ್ರಾನ್ಸ್ ಲೊರೈನ್, ವಾಯುವ್ಯ ಮತ್ತು ಪೂರ್ವ ಗಡಿಪ್ರದೇಶಗಳು, ಪೋಲೆಂಡಿನ ಸೈಲಿಸಿಯ ಇಟಲಿಯ ಪೋ ನದಿ ಕಣಿವೆ ಮತ್ತು ಲಂಬಾರ್ಡಿ ಮೈದಾನ.
ಹತ್ತಿ ಬಟ್ಟೆ ಕೈಗಾರಿಕೆ: ಯೂರೋಪಿನಲ್ಲಿಯೂ ಅನೇಕ ಕೃಷಿ ಆಧಾರಿತ ಕೈಗಾರಿಕೆಗಳು ಅಭಿವೃದ್ಧಿಗೊಂಡಿವೆ. ಅವುಗಳಲ್ಲಿ ಹತ್ತಿ ಬಟ್ಟೆ ಕೈಗಾರಿಕೆಯೂ ಒಂದಾಗಿದೆ. ಯೂರೋಪಿನಾದ್ಯಂತ ಹತ್ತಿಗಿರಣಿಗಳಿವೆ. ಕಚ್ಚಾಹತ್ತಿಯನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಬ್ರಿಟನ್ ಆಧುನಿಕ ಹತ್ತಿಬಟ್ಟೆ ಕೈಗಾರಿಕೆಯ ಉಗಮ ಸ್ಥಳ. ಇಲ್ಲಿನ ಲಂಕಾಷೈರ್, ಚೆಷೈರ್ ಮತ್ತು ಡರ್ಬಿಷೈರ್ಗಳು ಪ್ರಮುಖ ಹತ್ತಿಗಿರಣಿ ಕೇಂದ್ರಗಳು. ಜರ್ಮನಿ ಮತ್ತು ಫ್ರಾನ್ಸ್ಗಳು ಇತರ ಪ್ರಮುಖ ಹತ್ತಿ ಜವಳಿ ವಸ್ತುಗಳನ್ನು ಉತ್ಪಾದಿಸುವ ದೇಶಗಳು.
ಉತ್ತಮ ದರ್ಜೆಯ ರೇಷ್ಮೆ, ಉಣ್ಣೆಬಟ್ಟೆ ಮತ್ತು ಕೃತಕ ನಾರಿನ ಬಟ್ಟೆಗಳಿಗೆ ಬ್ರಿಟನ್, ಜರ್ಮನಿ, ಫ್ರಾನ್ಸ್, ಬೆಲ್ಜಿಯಂ ಮತ್ತು ಇಟಲಿಗಳು ಪ್ರಸಿದ್ಧವಾದವು.
ಹಡಗು ಕಟ್ಟುವ ಕೈಗಾರಿಕೆ: ಇದೊಂದು ದೊಡ್ಡ ಪ್ರಮಾಣದ ಎಂಜಿನಿಯರಿಂಗ್ ಹಾಗೂ ವಿಶೇಷವಾಗಿ ಜೋಡಣೆ ಕೈಗಾರಿಕೆ. ತಂತ್ರಜ್ಞಾನದ ಪ್ರಗತಿ, ಉತ್ತಮ ರೇವುಗಳ ಸೌಲಭ್ಯ, ಕೈಗಾರಿಕಾ ಪ್ರಗತಿ ಮೊದಲಾದವು ಈ ಉದ್ಯಮದ ಬೆಳವಣಿಗೆಗೆ ಪ್ರೋತ್ಸಾಹದಾಯಕವಾಗಿವೆ. ಯೂರೋಪಿನಲ್ಲಿ ಜರ್ಮನಿಯು ಪ್ರಮುಖ ಹಡಗು ಕಟ್ಟುವ ದೇಶ. ಸ್ವೀಡನ್, ಬ್ರಿಟನ್ ಮತ್ತು ಫ್ರಾನ್ಸ್ಗಳು ಯೂರೋಪಿನ ಇತರ ಹಡಗು ಕಟ್ಟುವ ದೇಶಗಳು.
ಸ್ವಯಂಚಾಲಿತ ವಾಹನ ಕೈಗಾರಿಕೆ: ಇದು ಕಾರು, ಟ್ರಕ್ಕು, ಬಸ್, ಸ್ಕೂಟರ್ ಮೊದಲಾದವು ಹಾಗೂ ಮೋಟಾರ್ ಎಂಜಿನ್ ನೆರವಿನಿಂದ ಚಲಿಸುವ ಯಾವುದೇ ಇತರೆ ವಾಹನಗಳನ್ನು ತಯಾರಿಸುವ ಉದ್ಯಮ. ಇದು ಒಂದು ಜೋಡಣೆಯ ಕೈಗಾರಿಕೆ. ಅತ್ಯುತ್ತಮ ತಾಂತ್ರಿಕ ಮತ್ತು ವೆಚ್ಚದಾಯಕವಾದ ಕೈಗಾರಿಕೆ. ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ಬ್ರಿಟನ್ ಯೂರೋಪಿನ ಪ್ರಮುಖ ಸ್ವಯಂಚಾಲಿತವಾಹನ ಕೈಗಾರಿಕಾ ದೇಶಗಳು.
6. ಯೂರೋಪಿನ ಪ್ರಮುಖ ಕೈಗಾರಿಕಾ ಪ್ರದೇಶಗಳು
ಯೂರೋಪಿನ ಪ್ರಮುಖ ಕೈಗಾರಿಕೆಗಳು ಮತ್ತು ಕೈಗಾರಿಕಾ ಕೇಂದ್ರಗಳು ಒಂದು ಬಗೆಯ ತ್ರಿಕೋನ ರೂಪದಲ್ಲಿ ಕೇಂದ್ರೀಕರಣಗೊಂಡಿವೆ. ಇದನ್ನು ಯೂರೋಪಿನ ಕೈಗಾರಿಕಾ ಹೃದಯ ಎನ್ನುವರು. ಈ ತ್ರಿಕೋನವು ಉತ್ತರ ಸಮುದ್ರದಿಂದ ಪೋಲೆಂಡಿನ ಮಧ್ಯಭಾಗದ ಮತ್ತು ದಕ್ಷಿಣದ ಇಟಲಿಯ ‘ಪೋ’ ನದಿ ಕಣಿವೆಯಿಂದ ಉತ್ತರದ ಸ್ಪೀಡನ್ವರೆಗೂ ವ್ಯಾಪಿಸಿಕೊಂಡಿದೆ.
ಈ ಕೆಳಕಂಡವು ಯೂರೋಪಿನ ಪ್ರಮುಖ ಕೈಗಾರಿಕಾ ವಲಯಗಳು:
1. ಬ್ರಿಟನ್ ಕೈಗಾರಿಕಾ ವಲಯ.
2. ಪಶ್ಚಿಮದ ತ್ರಿಕೋನ ಕೈಗಾರಿಕಾ ವಲಯ.
3. ಪ್ಯಾರಿಸ್ ಕೈಗಾರಿಕಾ ವಲಯ; ಇದನ್ನು ‘ಫ್ರಾನ್ಸಿನ ಕೈಗಾರಿಕಾ ಹೃದಯ’ ಎನ್ನುವರು.
4. ಲೊರೈನ್-ಸಾರ್ ಕೈಗಾರಿಕಾ ವಲಯ.
5. ರ್ಹೈನ್ ನದಿಯ ಮೇಲ್ಕಣಿವೆ ವಲಯ.
6. ಸೈಲೇಸಿಯದ ಮೇಲ್ಕಣಿವೆ ವಲಯ.
7. ದಕ್ಷಿಣದ ಸ್ಕ್ಯಾಂಡಿನೆವಿಯಾ ವಲಯವು ಸ್ಟಾಕ್ಹೋಮ್ನ್ನು ಒಳಗೊಂಡಿದೆ.
8. ಪೂರ್ವ ಜರ್ಮನಿಯಿಂದ ಈಶಾನ್ಯ ಜೆಕ್ ಮತ್ತು ಸ್ಲೋವೇಕಿಯ ವಲಯ.
9. ಉತ್ತರದ ಇಟಲಿಯ ಕೈಗಾರಿಕಾ ವಲಯದಲ್ಲಿ ಪೋ ನದಿ ಬಯಲು.
7. ಜನಸಂಖ್ಯೆ
ಯೂರೋಪಿನ ಭೌಗೋಳಿಕ ಕ್ಷೇತ್ರವನ್ನು ಹೋಲಿಸಿ ನೋಡಿದಾಗ ಅದರ ಜನಸಂಖ್ಯೆ ಹೆಚ್ಚಾಗಿಯೇ ಇದೆ. ಯೂರೋಪಿಯನ್ ರಷ್ಯವನ್ನು ಹೊರತುಪಡಿಸಿ ಪ್ರಪಂಚದ ಶೇ.11 ಭೂಭಾಗವನ್ನು ಹೊಂದಿದೆ. ಆದರೆ ಪ್ರಪಂಚದ ಐದನೆಯ ಒಂದು ಭಾಗದಷ್ಟು ಜನಸಂಖ್ಯೆಯನ್ನು ಹೊಂದಿದೆ. ಅದರ ಒಟ್ಟು ಜನಸಂಖ್ಯೆ ಸುಮಾರು 742 ಮಿಲಿಯನ್ಗಳು (2023). ಇದರಲ್ಲಿ ನಗರ ಜನಸಂಖ್ಯೆಯ ಪಾಲು ಹೆಚ್ಚು.
ಹಂಚಿಕೆ: ಯೂರೋಪಿನಲ್ಲಿ ಜನಸಂಖ್ಯೆಯು ಸಮನಾಗಿ ಹಂಚಿಕೆಯಾಗಿಲ್ಲ. ಜರ್ಮನಿ, ಬ್ರಿಟನ್, ಇಟಲಿ ಮತ್ತು ಫ್ರಾನ್ಸ್ಗಳು ಯೂರೋಪಿನ ಜನಭರಿತ ದೇಶಗಳು. ವಾಯುವ್ಯ ಯೂರೋಪಿನಲ್ಲಿ ಜನಸಾಂದ್ರತೆ ಕಡಿಮೆ. ಆಲ್ಪ್ಸ್, ಕಕಾಸಸ್, ಅರೆ ಶುಷ್ಕ ಪ್ರದೇಶವುಳ್ಳ ಆಗ್ನೇಯ ಯೂರೋಪಿನ ಭಾಗಗಳಲ್ಲಿಯೂ ಜನಸಾಂದ್ರತೆ ವಿರಳ.
ಯೂರೋಪಿನ ಅಧಿಕ ಜನಸಾಂದ್ರತೆಯುಳ್ಳ ದೇಶಗಳೆಂದರೆ; ಬೆಲ್ಜಿಯಂ, ಲಕ್ಷಂಬರ್ಗ್, ನೆದರ್ಲೆಂಡ್ಸ್ ಇತ್ಯಾದಿ. ಇದಕ್ಕೆ ಕೈಗಾರಿಕೀಕರಣ, ಸಾರಿಗೆ ಸೌಲಭ್ಯ, ನೈಸರ್ಗಿಕ ಸಂಪನ್ಮೂಲಗಳು ಮತ್ತು ತಂತ್ರಜ್ಞಾನದ ಪ್ರಗತಿ ಪ್ರಮುಖ ಕಾರಣಗಳಾಗಿವೆ.
ಬೆಳವಣಿಗೆ: ಯೂರೋಪಿನ ಬಹಳಷ್ಟು ದೇಶಗಳು ಕಡಿಮೆ ಮತ್ತು ಇಳಿಮುಖ ಜನಸಂಖ್ಯಾ ಬೆಳೆವಣಿಗೆಯ ಲಕ್ಷಣಗಳಿಂದ ಕೂಡಿವೆ. ಜನಸಂಖ್ಯಾ ಬೆಳವಣಿಗೆಯು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ.
ವಲಸೆ: ಕಳೆದ 200 ವರ್ಷಗಳಲ್ಲಿ ಯೂರೋಪಿಯನ್ನರು ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ ಮತ್ತು ಅನೇಕ ಕಾರಣಗಳಿಂದ ಬೇರೆ ದೇಶದ ಜನರು ಯೂರೋಪಿಗೆ ವಲಸೆ ಬಂದು ಅಲ್ಲೆ ನೆಲೆಸಿದ್ದಾರೆ.
ದ್ವಿತೀಯ ಜಾಗತಿಕ ಯುದ್ಧದ ನಂತರ ವಿವಿಧ ಖಂಡ ಮತ್ತು ದೇಶಗಳಿಂದ ಜನರು ಬ್ರಿಟನ್ಗೆ ಒಳವಲಸೆ ಬಂದಿದ್ದಾರೆ. ಅವರಲ್ಲಿ ಹೆಚ್ಚಾಗಿ ಇಟಾಲಿಯನ್ನರಾಗಿದ್ದಾರೆ.

ದ್ವಿತೀಯ ಜಾಗತಿಕ ಯುದ್ಧಕ್ಕೂ ಮುಂಚೆ ಜರ್ಮನ್ನರು ಬೇರೆ ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ. ಪೋಲೆಂಡ್, ರುಮೇನಿಯ, ಹಂಗೇರಿ, ಜೆಕ್, ಸ್ಲೊವೇಕಿಯಾ ಮತ್ತು ಯುಗೊಸ್ಲೊವಿಯಾಗಳಲ್ಲಿ ಜರ್ಮನ್ನರು ಅಲ್ಪಸಂಖ್ಯಾತರಾಗಿ ಕಾಣಿಸಿಕೊಳ್ಳುತ್ತಾರೆ.
ಜನಸಾಂದ್ರತೆ: ಯೂರೋಪದಲ್ಲಿ ಜನಸಾಂದ್ರತೆ ವೈವಿಧ್ಯಮಯವಾಗಿದೆ. ತೀವ್ರ ಅಭಿವೃದ್ಧಿ ಹೊಂದಿದ ನೆದರ್ಲೆಂಡ್ಸ್ನಲ್ಲಿ ಪ್ರತಿ ಚದರ ಕಿ.ಮೀ. 950 ಜನರು ಇದ್ದರೆ ಐಸ್ಲ್ಯಾಂಡ್ದಲ್ಲಿ ಅದು ಪ್ರತಿ ಚದರ ಕಿ.ಮೀ.ಗೆ 3 ಜನರು ಮಾತ್ರ. ಉತ್ತರ ಯೂರೋಪಿನ ತಗ್ಗು ಪ್ರದೇಶವು ಅತಿ ಹೆಚ್ಚು ಜನಸಾಂದ್ರತೆಯನ್ನು ಹೊಂದಿದೆ.
ಯೂರೋಪಿನ ಅತಿ ಹೆಚ್ಚು ಜನಸಾಂದ್ರತೆಯುಳ್ಳ ಪ್ರದೇಶಗಳೆಂದರೆ ಕೈಗಾರಿಕ ಜಿಲ್ಲೆಗಳು, ಬೆಲ್ಜಿಯಂ ಮತ್ತು ಜರ್ಮನ್ ಕಲ್ಲಿದ್ದಲು ಪ್ರದೇಶಗಳು, ಗ್ರೇಟರ್ಲಂಡನ್, ನೆದರ್ಲೆಂಡ್ಸ್, ರ್ಹೈನ್ ನದಿಬಯಲು, ಉತ್ತರ ಇಟಲಿ ಮತ್ತು ಸ್ಪೇನಿನ ಕರಾವಳಿ ಪ್ರದೇಶಗಳು.
ವಿರಳ ಜನಸಾಂದ್ರತೆಯುಳ್ಳ ಪ್ರದೇಶಗಳೆಂದರೆ ಮಧ್ಯ ಫ್ರಾನ್ಸ್, ಪರ್ವತಮಯ ಪ್ರದೇಶಗಳು, ಬಾಲ್ಖನ್ ವಲಯ ಮತ್ತು ಸ್ಕಾಟ್ಲೆಂಡ್ನ ಉನ್ನತ ಭಾಗಗಳು.
ಹೊಸ ಪದಗಳು:
ಆಲ್ಪೈನ್, ಆಲ್ಪ್ಸ್, ಸ್ವಯಂಚಾಲಿತ ವಾಹನ ಉತ್ಪಾದನೆ, ಅಗಸೆನಾರು, ಕಾವಳ, ಮಡಿಕೆ ಪರ್ವತಗಳು, ಸಾಗರೀಯ ವಾಯುಗುಣ, ಮಾಸಿಫ್, ಮೆಸೆಟ, ವಲಸೆ, ಪರ್ಯಾಯ ದ್ವೀಪ, ಟೈಗ, ಜವಳಿ ಉದ್ಯಮ, ರೈ (ಸಾಸಿವೆ).
ನಿಮಗೆ ತಿಳಿದಿರಲಿ
* ಸ್ಕಾಂಡಿನೇವಿಯ ಉತ್ತರ ಯೂರೋಪಿನ ಭಾಗವಾಗಿದ್ದು, ನಾರ್ವೆ, ಸ್ವೀಡನ್, ಮತ್ತು ಫಿನ್ಲ್ಯಾಂಡ್ಗಳನ್ನೊಳಗೊಂಡಿದೆ.
* ನದಿಯಬ್ರಿಟನ್ ಅಥವಾ ಗ್ರೇಟ್ ಬ್ರಿಟನ್ ಯೂರೋಪಿನ ಬಹುದೊಡ್ಡ ದ್ವೀಪವಾಗಿದ್ದು ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ವೇಲ್ಸ್ಗಳನ್ನೊಳಗೊಂಡಿದೆ. ಉತ್ತರ ಐರ್ಲೆಂಡ್ನ್ನೂ ಸೇರಿಸಿಕೊಂಡು ಇದು ಸಂಯುಕ್ತ ರಾಜ್ಯ(ಯು.ಕೆ.)ವಾಗಿದೆ.
* ಸುಮಾರು 500 ವರ್ಷಗಳಿಗೂ ಹೆಚ್ಚು ಕಾಲ ಯೂರೋಪನ್ನು ಪ್ರಪಂಚದ ಹೃದಯ ಭಾಗವೆಂದು ಕರೆಯಲಾಗಿತ್ತು.
* ಬ್ಲಾಕ್ ಫಾರೆಸ್ಟ್ ಎನ್ನುವುದು ಅರಣ್ಯವಲ್ಲ. ಅದೊಂದು ಪರ್ವತ ಪ್ರದೇಶ. ದಕ್ಷಿಣ ಜರ್ಮನಿಯಲ್ಲಿದೆ. ಇದರ ಒಳ ಭಾಗವು ದಟ್ಟಡವಿಯಿಂದಾಗಿ ಕತ್ತಲಾಗಿರುವುದರಿಂದ ಈ ಹೆಸರು ಬಂದಿದೆ.
ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು
* * * * * * * * *
