ಪಾಠದ ಪರಿಚಯ
ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ದಿನಾಚರಣೆ ಈ ಅಧ್ಯಾಯದಲ್ಲಿ ರಾಷ್ಟ್ರೀಯ ಚಿಹ್ನೆಗಳು, ನಮ್ಮ ರಾಷ್ಟ್ರಧ್ವಜ, ರಾಷ್ಟ್ರಧ್ವಜದ ವಿಶೇಷತೆ, ರಾಷ್ಟ್ರಧ್ವಜ ಸಂಹಿತೆ, ನಮ್ಮ ರಾಷ್ಟ್ರಗೀತೆ, ನಮ್ಮ ರಾಷ್ಟ್ರಸ್ತವ, ನಮ್ಮ ರಾಷ್ಟ್ರಲಾಂಛನ, ರಾಷ್ಟ್ರೀಯ ಪ್ರಾಣಿ, ಪಕ್ಷಿ ಮತ್ತು ಹೂ, ರಾಷ್ಟ್ರೀಯ ಹಬ್ಬಗಳು ಮತ್ತು ದಿನಾಚರಣೆಗಳ ಬಗ್ಗೆ ಪರಿಚಯಿಸಲಾಗಿದೆ.

ರಾಷ್ಟ್ರೀಯ ಚಿಹ್ನೆಗಳು:

ಸಾಮಾನ್ಯವಾಗಿ ಒಂದು ದೇಶವು ತನ್ನ ಸಂಸ್ಕೃತಿ ಮತ್ತು ಪರಂಪರೆಗಳ ವಿಶೇಷತೆಗಳನ್ನು ಪ್ರತಿಬಿಂಬಿಸುವ ಕೆಲವು ಚಿಹ್ನೆಗಳನ್ನು ಬಳಕೆ ಮಾಡುತ್ತದೆ. ಅವುಗಳನ್ನು ರಾಷ್ಟ್ರೀಯ ಚಿಹ್ನೆಗಳು ಎನ್ನುವರು.

ಮುಖ್ಯವಾಗಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಲಾಂಛನವು ಒಂದು ದೇಶದ ರಾಷ್ಟ್ರೀಯ ಚಿಹ್ನೆಗಳು. ಪ್ರತಿ ದೇಶಕ್ಕೂ ತನ್ನದೇ ಆದ ರಾಷ್ಟ್ರಗೀತೆಯಿದೆ. ಹಾಗೆಯೇ ಭಾರತ ದೇಶಕ್ಕೂ ತನ್ನದೇ ಆದ ರಾಷ್ಟಗೀತೆ ಇದೆ. ಭಾರತ ದೇಶಕ್ಕೆ ರಾಷ್ಟ್ರೀಯ ಪ್ರಾಣಿ, ರಾಷ್ಟ್ರೀಯ ಪಕ್ಷಿ ಇವೆ. ಇವು ಪ್ರಜೆಗಳಲ್ಲಿ ದೇಶಾಭಿಮಾನ ಮತ್ತು ಭಾವೈಕ್ಯತೆ ಬೇರೂರಲು ಪೂರಕ.

ನಮ್ಮ ರಾಷ್ಟ್ರಧ್ವಜ:

ಧ್ವಜವು ರಾಷ್ಟ್ರದ ಒಂದು ಲಾಂಛನ. ರಾಷ್ಟ್ರಧ್ವಜವು ಸ್ವಾತಂತ್ರ್ಯ, ದೇಶಪ್ರೇಮ, ಒಗ್ಗಟ್ಟು ಹಾಗೂ ನಿಷ್ಠೆಯ ಪ್ರತೀಕವಾಗಿದೆ. ರಾಷ್ಟ್ರಧ್ವಜವು ಸ್ತಂಭದ ಮೇಲೇರಿದಾಗ ಪ್ರತಿಯೊಬ್ಬ ಪ್ರಜೆಯ ಹೃದಯ ತುಂಬಿಬರುತ್ತದೆ.

ಸ್ವತಂತ್ರ ಭಾರತದ ತ್ರಿವರ್ಣ ಧ್ವಜ ವರ್ಣನೆ:

ನಮ್ಮದು ಮೂರು ಬಣ್ಣಗಳಿಂದ ಕೂಡಿದ ಧ್ವಜವಾಗಿದೆ. ಮೇಲೆ ಕೇಸರಿ, ಮಧ್ಯ ಬಿಳಿ ಮತ್ತು ಕೆಳಗೆ ಹಸಿರು ಬಣ್ಣಗಳಿವೆ. ಬಿಳಿ ಬಣ್ಣದ ಮಧ್ಯದಲ್ಲಿ ನೀಲಿ ಬಣ್ಣದ ಚಕ್ರವಿದೆ. ಚಕ್ರದಲ್ಲಿ ಇಪ್ಪತ್ತನಾಲ್ಕು ಅರಗಳಿವೆ. ಚಕ್ರದ ವ್ಯಾಸ ಬಿಳಿ ಪಟ್ಟಿಯ ಅಗಲದಷ್ಟೇ ಇದೆ.

ಧ್ವಜವು ಆಯತಾಕಾರವಾಗಿದೆ. ಅದರ ಉದ್ದಗಲಗಳ ಅನುಪಾತ 3:2 ಇರುತ್ತದೆ. ಮೂರು ಬಣ್ಣದ ಪಟ್ಟಿಗಳು ಸಮ ಪ್ರಮಾಣದಲ್ಲಿರುತ್ತವೆ. ಧ್ವಜದ ಬಟ್ಟೆಯು ಹತ್ತಿ ಅಥವಾ ರೇಷ್ಮೆಯದ್ದಾಗಿರಬೇಕು. ಜೊತೆಗೆ ಅದು ಕೈನೇಯ್ಗೆಯದ್ದಾಗಿರಬೇಕು. ಅದರ ದಾರ ಕೈಯಿಂದಲೇ ಮಾಡಿದ್ದಾಗಿರಬೇಕು.

ರಾಷ್ಟ್ರಧ್ವಜದ ವಿಶೇಷತೆ:

ನಮ್ಮ ರಾಷ್ಟ್ರಧ್ವಜದ ಬಣ್ಣಗಳು ಏನನ್ನು ಹೇಳುತ್ತವೆ? ಕೇಸರಿ ಬಣ್ಣವು ನಿಸ್ವಾರ್ಥ ಹಾಗೂ ತ್ಯಾಗವನ್ನು ಸಂಕೇತಿಸಿದರೆ, ಬಿಳಿ ಬಣ್ಣವು ಸತ್ಯ, ಶಾಂತಿ, ಪರಿಶುದ್ಧತೆಯ ಪ್ರತೀಕವಾಗಿದೆ. ಹಸಿರು ಸಸ್ಯಶ್ಯಾಮಲೆಯಾದ ಭೂಮಿಯ ಸಂಕೇತ; ಕೃಷಿ, ಕೈಗಾರಿಕೆಗಳ ಸಮೃದ್ಧಿಯ ಗುರುತು. ಚಕ್ರವು ಸಾರನಾಥದ ಅಶೋಕ ಸ್ತಂಭದಲ್ಲಿರುವ ಚಕ್ರದ ಪ್ರತಿರೂಪವಾಗಿದೆ. ಅಶೋಕಚಕ್ರವು `ಧರ್ಮಚಕ್ರ’ವಾಗಿದೆ. ಅಶೋಕಚಕ್ರವು ನಿರಂತರ ಚಲನೆಯ ಹಾಗೂ ಪ್ರಗತಿಯ ಪ್ರತೀಕವೂ ಹೌದು.

ರಾಷ್ಟ್ರಧ್ವಜ ಸಂಹಿತೆ:

* ರಾಷ್ಟ್ರಧ್ವಜ ಕೊಳೆಯಾಗಿರಬಾರದು, ಹರಿದಿರಬಾರದು.
* ಹಾರಿಸುವಾಗ ಯಾವಾಗಲೂ ಕೇಸರಿ ಬಣ್ಣ ಮೇಲೆ ಬರುವಂತೆ ಹಾರಿಸಬೇಕು.
* ರಾಷ್ಟ್ರಧ್ವಜದ ಎತ್ತರಕ್ಕೆ ಬೇರಾವ ಧ್ವಜವನ್ನು ಹಾರಿಸಬಾರದು.
* ಕಂಬದ ತುದಿಯವರೆಗೂ ಮೇಲೇರಿಸಿ ಹಾರಿಸಬೇಕು.
* ಯಾವಾಗಲೂ ಸೂರ್ಯೋದಯದ ನಂತರ ರಾಷ್ಟ್ರಧ್ವಜವನ್ನು ಹಾರಿಸಬೇಕು; ಸೂರ್ಯಾಸ್ತಕ್ಕೆ ಮೊದಲು ಇಳಿಸಿ ಮಡಚಿಡಬೇಕು.
* ರಾಷ್ಟ್ರೀಯ ಶೋಕವನ್ನು ಆಚರಿಸುವ ಸಮಯದಲ್ಲಿ ಧ್ವಜವನ್ನು ಅರ್ಧ ಎತ್ತರಕ್ಕೆ ಹಾರಿಸುವುದು.
* ಧ್ವಜವನ್ನು ಬಲಗೈಲಿ ಹಿಡಿದು ನಡೆಯಬೇಕು.
* ಧ್ವಜವನ್ನು ನೆಲಕ್ಕೆ ತಾಗಿಸಬಾರದು.
* ಪ್ಲಾಸ್ಟಿಕ್ ಧ್ವಜಗಳನ್ನು ಬಳಸಬಾರದು.

ನಮ್ಮ ರಾಷ್ಟ್ರಗೀತೆ:

‘ಜನಗಣಮನ’ ಭಾರತದ ರಾಷ್ಟ್ರಗೀತೆ. ಇದನ್ನು ರವೀಂದ್ರನಾಥ ಠಾಕೂರ್ ಅವರು ಸಾ.ಶ. 1911ರಲ್ಲಿ ಬಂಗಾಲಿ ಭಾಷೆಯಲ್ಲಿ ರಚಿಸಿದರು. ಈ ದೀರ್ಘಗೀತೆಯ ಐದು ವೃತ್ತಗಳಲ್ಲಿ ಮೊದಲ ವೃತ್ತವನ್ನು ಮಾತ್ರ ರಾಷ್ಟ್ರಗೀತೆಯೆಂದು ಸಂವಿಧಾನ ಸಭೆಯು 24 ಜನವರಿ ಸಾ.ಶ. 1950ರಂದು ಅಂಗೀಕರಿಸಿತು. ಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ 52 ಸೆಕೆಂಡುಗಳು. ಕೆಲವು ಸಂದರ್ಭಗಳಲ್ಲಿ ಸಂಕ್ಷಿಪ್ತವಾಗಿ ಗೀತೆಯ ಮೊದಲ ಮತ್ತು ಕೊನೆಯ ಸಾಲುಗಳನ್ನು ಮಾತ್ರವೇ ಹಾಡಲಾಗುವುದು. ಇದಕ್ಕೆ ಸುಮಾರು 20 ಸೆಕೆಂಡುಗಳು ತಗಲುತ್ತವೆ.

ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಅಗೌರವ ಸೂಚಿಸುವುದು, ಅದರ ಹಾಡುವಿಕೆಗೆ ಅಡ್ಡಿಪಡಿಸುವುದು ಶಾಸನದ ಪ್ರಕಾರ ಶಿಕ್ಷಾರ್ಹ ಅಪರಾಧ.

ರಾಷ್ಟ್ರಗೀತೆಯನ್ನು ಹಾಡುವಾಗ ಶಿಸ್ತಿನಿಂದ ನೇರವಾಗಿ ನಿಲ್ಲಬೇಕು.

ಉಚ್ಚಾರದಲ್ಲಿ ತಪ್ಪಿಲ್ಲದಂತೆ ಹಾಡಬೇಕು.

ನಮ್ಮ ರಾಷ್ಟ್ರಸ್ತವ (Our National Song)

ಸಂವಿಧಾನದಲ್ಲಿ ರಾಷ್ಟ್ರಗೀತೆಗೆ ಸಮಾನ ಸ್ಥಾನಮಾನ ಪಡೆದಿರುವ ವಂದೇ ಮಾತರಂ’ ರಾಷ್ಟ್ರಸ್ತವ ಎನಿಸಿದೆ.ವಂದೇ ಮಾತರಂ’ ಗೀತೆಯನ್ನು ರಚಿಸಿದವರು ಖ್ಯಾತ ಸಾಹಿತಿ ಬಂಕಿಮಚಂದ್ರ ಚಟರ್ಜಿ. ಅವರ ‘ಆನಂದಮಠ’ ಕಾದಂಬರಿಯಲ್ಲಿನ ಈ ಗೀತೆ ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರಗೀತೆಯ ಸ್ಥಾನಮಾನ ಪಡೆದುಕೊಂಡಿತು. ರಾಷ್ಟ್ರಪ್ರೇಮಕ್ಕಾಗಿ, ದೇಶದ ರಕ್ಷಣೆಗಾಗಿ ಜನರು ತಮ್ಮ ಪ್ರಾಣವನ್ನು ಪಣವಾಗಿಟ್ಟು ತಮ್ಮ ಕೊನೆಯ ಉಸಿರು ಇರುವ ತನಕ ‘ವಂದೇ ಮಾತರಂ’ ಹಾಡಿದ್ದುಂಟು.

ನಮ್ಮ ರಾಷ್ಟ್ರಲಾಂಛನ

ನಮ್ಮ ರಾಷ್ಟ್ರಲಾಂಛನವನ್ನೊಮ್ಮೆ ಗಮನಿಸಿ.ಇದು ಸಾರನಾಥದ ಅಶೋಕನ ಶಿಲಾಸ್ತಂಭದ ಬೋದಿಗೆಯ (ಮೇಲುಭಾಗದ) ರೂಪಾಂತರವಾಗಿದೆ. ಬೋದಿಗೆಯಲ್ಲಿ ಸಿಂಹಗಳಿರುವುದರಿಂದ ಇದನ್ನು ಸಿಂಹ ಬೋದಿಗೆ’ ಎನ್ನುವರು. ಸಾರನಾಥದ ಸಿಂಹ ಬೋದಿಗೆಯು ನಮ್ಮ ರಾಷ್ಟ್ರಲಾಂಛನ ಅಥವಾ ಮುದ್ರೆಯಾಗಿದೆ ಮೂಲ ಶಿಲ್ಪಾಕೃತಿಯಲ್ಲಿ ನಾಲ್ಕು ಸಿಂಹಗಳು ನಾಲ್ಕು ದಿಕ್ಕುಗಳಿಗೆ ಮುಖಮಾಡಿ, ಒಂದಕ್ಕೊಂದು ಬೆನ್ನು ಮಾಡಿ, ಪೀಠವೊಂದರ ಮೇಲೆ ನಿಂತಿವೆ. ಪೀಠವು ಗುಂಡಾಗಿದೆ. ಅದರ ನಾಲ್ಕು ದಿಕ್ಕುಗಳಲ್ಲೂ ಒಂದೊಂದು ಚಕ್ರವಿದೆ. ಆ ಚಕ್ರಗಳ ನಡುವೆ ಆನೆ, ಗೂಳಿ, ಕುದುರೆ, ಸಿಂಹಗಳ ಚಿತ್ರಣವಿದೆ. ಪೀಠದಲ್ಲಿರುವ ಚಕ್ರವನ್ನುಧರ್ಮಚಕ್ರ’ವೆಂದೂ ಕರೆಯುತ್ತಾರೆ. ನಮ್ಮ ರಾಷ್ಟ್ರಧ್ವಜದ ಬಿಳಿಯ ಪಟ್ಟಿಯ ನಡುವೆ ಈ ಚಕ್ರದ ಚಿಹ್ನೆಯಿದೆ.

ಭಾರತ ಸರ್ಕಾರವು ನಮ್ಮ ರಾಷ್ಟ್ರಲಾಂಛನವನ್ನು 26 ಜನವರಿ 1950ರಂದು ಅಂಗೀಕರಿಸಿತು. ಚಿತ್ರದಲ್ಲಿ ಮೂರೇ ಸಿಂಹಗಳು ಮಾತ್ರ ಕಾಣಿಸುತ್ತವೆ. ಪೀಠದ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆದ “ಸತ್ಯಮೇವ ಜಯತೇ’’ (ಸತ್ಯವೊಂದೇ ಗೆಲ್ಲುತ್ತದೆ) ಎಂಬ ಮುಂಡಕ ಉಪನಿಷತ್ತಿನ ವಾಕ್ಯವಿದೆ.

ರಾಷ್ಟ್ರೀಯ ಪ್ರಾಣಿ, ಪಕ್ಷಿ ಮತ್ತು ಹೂ

ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ. ನವಿಲು ಭಾರತದ ರಾಷ್ಟ್ರೀಯ ಪಕ್ಷಿ. ತಾವರೆ ನಮ್ಮ ರಾಷ್ಟ್ರೀಯ ಹೂ.

ರಾಷ್ಟ್ರೀಯ ಪಂಚಾಂಗ: ಭಾರತದಾದ್ಯಂತ ಅನೇಕ ರೀತಿಯ ಪಂಚಾಂಗಗಳು ಬಳಕೆಯಲ್ಲಿವೆ. ದಿನನಿತ್ಯದ ಬಳಕೆಗೆ ಇಡಿ ರಾಷ್ಟ್ರಕ್ಕೆ ಅನ್ವಯಿಸುವ ಏಕರೂಪದ ಪಂಚಾಂಗ ಇರಬೇಕೆಂದು ಭಾರತ ಸರ್ಕಾರವು 1957 ಮಾರ್ಚ್ 22ರಲ್ಲಿ `ರಾಷ್ಟ್ರೀಯ ಪಂಚಾಂಗ’ವನ್ನು ಆಚರಣೆಗೆ ತಂದಿತು. ಈ ಪಂಚಾಂಗವನ್ನು ಸಿದ್ಧಗೊಳಿಸುವುದರಲ್ಲಿ ಖ್ಯಾತ ವಿಜ್ಞಾನಿ ದಿವಂಗತ ಮೇಘನಾದ ಸಹಾ ಅವರು ಪ್ರಮುಖ ಪಾತ್ರವಹಿಸಿದ್ದರು. ರಾಷ್ಟ್ರೀಯ ಪಂಚಾಂಗವು ಶಕವರ್ಷವನ್ನು ಅಳವಡಿಸಿಕೊಂಡಿದೆ. ಶಕವರ್ಷವು ಕ್ರೈಸ್ತವರ್ಷಕ್ಕಿಂತ 78 ವರ್ಷಗಳ ಅನಂತರ ಪ್ರಾರಂಭವಾಗುತ್ತದೆ. ರಾಷ್ಟ್ರೀಯ ಪಂಚಾಂಗದಲ್ಲಿ ವರ್ಷದ ಮೊದಲ ತಿಂಗಳು ಚೈತ್ರ ಮಾಸ. ವರ್ಷಾರಂಭ ಸಾಮಾನ್ಯವಾಗಿ ಮಾರ್ಚ್ 22ರಂದು. ಅಧಿಕ ವರ್ಷದಲ್ಲಿ ಅದು ಮಾರ್ಚ್ 21ರಂದು. ಭಾರತ ಸರ್ಕಾರವು ರಾಷ್ಟ್ರೀಯ ಪಂಚಾಂಗದ ದಿನಾಂಕ ಹಾಗೂ ಕ್ರಿಸ್ತಶಕ ದಿನಾಂಕಗಳೆರಡನ್ನೂ ತನ್ನ ಪತ್ರವ್ಯವಹಾರ ಮತ್ತು ದಾಖಲೆಗಳಲ್ಲಿ ಬಳಕೆ ಮಾಡುತ್ತದೆ.

ರಾಷ್ಟ್ರೀಯ ಹಬ್ಬಗಳು

ದೇಶದ ಎಲ್ಲಾ ಕಡೆಯಲ್ಲೂ ಸಾರ್ವತ್ರಿಕವಾಗಿ ಆಚರಿಸುವ ಹಬ್ಬಗಳೇ ರಾಷ್ಟ್ರೀಯ ಹಬ್ಬಗಳು.

* ಗಣರಾಜ್ಯ ದಿನಾಚರಣೆ: 1950 ಜನವರಿ 26ರಂದು ಗಣರಾಜ್ಯದ ಸಂವಿಧಾನ ಜಾರಿಗೆ ಬಂದಿತು. ಅದರ ನೆನಪಿಗೆ ಪ್ರತಿವರ್ಷ ಜನವರಿ 26ರಂದು ಭಾರತ ರಾಷ್ಟ್ರದಾದ್ಯಂತ ಗಣರಾಜ್ಯ ದಿನವನ್ನು ಆಚರಿಸುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಆ ದಿನ ಪಾರಿತೋಷಕಗಳನ್ನು ನೀಡಲಾಗುತ್ತದೆ. ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ರಾಷ್ಟ್ರಧ್ಯಕ್ಷರು ಧ್ವಜಾರೋಹಣ ಮಾಡಿದ ಮೇಲೆ ಮೆರವಣಿಗೆ ಪ್ರಾರಂಭ ಆಗುತ್ತದೆ. ರಾಷ್ಟ್ರದ ರಾಜಧಾನಿಯಾದ ಹೊಸದೆಹಲಿಯಲ್ಲಿ ನಡೆಯುವ ಮೆರವಣಿಗೆ ಭವ್ಯವಾಗಿರುತ್ತದೆ. ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲೂ ಪ್ರಮುಖ ಕಾರ್ಯಕ್ರಮಗಳು ನಡೆಯುತ್ತವೆ.

* ಸ್ವಾತಂತ್ರ್ಯ ದಿನಾಚರಣೆ: ಪ್ರತಿವರ್ಷ ಆಗಸ್ಟ್ 15ರಂದು ನಮ್ಮ ರಾಷ್ಟ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತದೆ. ದೆಹಲಿಯ ಕೆಂಪುಕೋಟೆಯಲ್ಲಿ ವಿಶೇಷ ಸಮಾರಂಭ ಏರ್ಪಾಟಾಗಿರುತ್ತದೆ. ಸ್ವಾತಂತ್ರ್ಯ ಘೋಷಣೆ ಮಾಡಿದಾಗ ಭಾರತದ ತ್ರಿವರ್ಣ ಧ್ವಜ ಹಾರಿದ್ದೂ ಇಲ್ಲಿಯೇ. ಪ್ರತಿ ವರ್ಷ ಆಗಸ್ಟ್ 15ರಂದು ಬೆಳಗ್ಗೆ ದೇಶದ ಪ್ರಧಾನಮಂತ್ರಿ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡುತ್ತಾರೆ. ಅಲ್ಲಿಗೆ ಬಂದವರನ್ನು ಹಾಗೂ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯು ದೇಶದಾದ್ಯಂತ ನಡೆಯುವ ಉತ್ಸವ, ಎಲ್ಲೆಲ್ಲೂ ರಾಷ್ಟ್ರಧ್ವಜ ಆರೋಹಣ, ಧ್ವಜವಂದನೆ ನಡೆಯುತ್ತದೆ.

ಕೆಂಪುಕೋಟೆ

* ಗಾಂಧೀ ಜಯಂತಿ: ಮೋಹನದಾಸ್ ಕರಮಚಂದ ಗಾಂಧೀಜಿ `ಮಹಾತ್ಮ’ ಎಂದು ಜಗತ್ತಿನಲ್ಲಿ ವಂದ್ಯರು. ಅವರ ನಾಯಕತ್ವದಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿ ಹೊಸಶಕ್ತಿ ಪಡೆಯಿತು.

ಇವರ ನೆನಪಿಗೆ ಗಾಂಧಿ ಹುಟ್ಟಿದ ಅಕ್ಟೋಬರ್ 2ರಂದು ದೇಶದಾದ್ಯಂತ ಗಾಂಧೀಜಯಂತಿ ಆಚರಿಸಲಾಗುತ್ತಿದೆ. ವಿಶ್ವ ಸಂಸ್ಥೆಯು ಸಹ ಮಹಾತ್ಮಾ ಗಾಂಧಿಜೀಯವರ ಜನ್ಮದಿನವಾದ ಅಕ್ಟೋಬರ್ 2ನ್ನು ಅಂತರಾಷ್ಟ್ರಿಯ ಅಹಿಂಸಾ ದಿನವೆಂದು ಘೋಷಿಸಿದೆ. ಇವರೊಂದಿಗೆ ಅದೇ ದಿನ ಜನಿಸಿದ ಲಾಲ್‍ಬಹದ್ದೂರ್ ಶಾಸ್ತ್ರೀಯವರ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ.

* ಅಂಬೇಡ್ಕರ್ ಜಯಂತಿ: ಸ್ವತಂತ್ರ ಭಾರತದ ಸಂವಿಧಾನವನ್ನು ಅತ್ಯಂತ ಸಮರ್ಪಕವಾಗಿ ರಚಿಸಿದ ಕರಡು ರಚನಾ ಸಮಿತಿಯ ಅಧ್ಯಕ್ಷ್ಯರಾಗಿದ್ದ ಡಾ. ಬಾಬಾ ಸಾಹೇಬ್ ಭೀಮರಾವ್ ರಾಮ್‍ಜೀ ಅಂಬೇಡ್ಕರ್ ಅವರ ಜನ್ಮದಿನವಾದ ಎಪ್ರಿಲ್ 14ನ್ನು ಪ್ರತಿವರ್ಷ ಅಂಬೇಡ್ಕರ್ ಜಯಂತಿಯೆಂದು ಆಚರಿಸಲಾಗುತ್ತದೆ. ಸಾಮಾಜಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರ್ಯವು ಅರ್ಥಹೀನ ಎಂದು ಡಾ. ಬಿ.ಆರ್. ಅಂಬೇಡ್ಕರ್‍ರವರು ಬಲವಾಗಿ ನಂಬಿದ್ದರು. ಇವರು ಜಾತಿ ತಾರತಮ್ಯದ ಬಗ್ಗೆ ಅಧ್ಯಯನ ನಡೆಸಿ ಅವುಗಳ ವಿನಾಶಕ್ಕೆ ಹೋರಾಟಗಳನ್ನು ರೂಪಿಸಿದರು. ಮಹದ್’ ಮತ್ತುಕಾಲಾರಾಂ’ ಚಳುವಳಿಗಳನ್ನು ರೂಪಿಸಿದರು. ಇವರು ಮೂರೂ ದುಂಡುಮೇಜಿನ ಪರಿಷತ್ತಿನ ಸಮಾವೇಶಗಳಲ್ಲಿ ಭಾಗವಹಿಸಿ, ಅಮೂಲ್ಯವಾದಂತಹ ಸಲಹೆ ಸೂಚನೆಗಳನ್ನು ನೀಡಿದ್ದರು.

* ಶಿಕ್ಷಕರ ದಿನಾಚರಣೆ: ಭಾರತದ ಎರಡನೇ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್ ಅವರ ಪಾಂಡಿತ್ಯ ಅಗಾಧವಾದುದು. ಶ್ರೇಷ್ಠ ಶಿಕ್ಷಕರೂ, ತತ್ವಜ್ಞಾನಿಯೂ ಆದ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5ನ್ನು `ಶಿಕ್ಷಕರ ದಿನ’ ಎಂದು ಆಚರಿಸುತ್ತಾರೆ. ಇವರು ಕರ್ನಾಟಕದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸಿದ್ದರು.

* ಮಕ್ಕಳ ದಿನಾಚರಣೆ: ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನ ನವೆಂಬರ್ 14ನ್ನು ಮಕ್ಕಳದಿನವೆಂದು ಆಚರಣೆ ಮಾಡಲಾಗುತ್ತದೆ. ನೆಹರೂ ನಿಸರ್ಗಪ್ರಿಯ. ಕೆಂಪು ಗುಲಾಬಿ ಅವರ ಪ್ರೀತಿಯ ಹೂ. ಪಂಡಿತ್ ಜವಾಹರಲಾಲ್ ನೆಹರು ಅವರು ಹೋಂ ರೂಲ್ ಚಳುವಳಿಯೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರವೇಶಿಸಿದರು. ಸಾ.ಶ. 1929ರಲ್ಲಿ ಲಾಹೋರ್ ಅಧಿವೇಶನದ ಅಧ್ಯಕ್ಷರಾಗಿದ್ದರು. ಕೈಗಾರಿಕೀಕರಣ ಮತ್ತು ನವಭಾರತದ ಶಿಲ್ಪಿಯಾಗಿ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದ ನೆಹರೂರವರನ್ನು ನಾವು ಕಾಣುತ್ತೇವೆ. ಸ್ವಾತಂತ್ರ್ಯ ನಂತರ ಪಂಚವಾರ್ಷಿಕ ಯೋಜನೆಗಳು ಮತ್ತು ವಿದೇಶಾಂಗ ನೀತಿಯಾದ ಅಲಿಪ್ತ ನೀತಿಯ ರೂವಾರಿಗಳು ಆಗಿದ್ದಾರೆ ಹಾಗೂ ಪಂಚಶೀಲ ತತ್ವಗಳ ಪ್ರತಿಪಾದಕರಾಗಿದ್ದಾರೆ.

* ಸ್ವಾಮಿ ವಿವೇಕಾನಂದರು: ರಾಷ್ಟ್ರೀಯ ಯುವ ದಿನಾಚರಣೆ: ಸ್ವಾಮಿ ವಿವೇಕಾನಂದರು (ಸಾ.ಶ. 1863-1902) ಯುವ ಪೀಳಿಗೆಗೆ ಅದಮ್ಯ ಚೇತನ ನೀಡಿ ಇಡೀ ರಾಷ್ಟ್ರವನ್ನು ಹೊಸ ದಿಶೆಯತ್ತ ಕೊಂಡೊಯ್ದರು. ಮತಧರ್ಮದ ಹೆಸರಿನಲ್ಲಿ ಅಂಧಶ್ರದ್ಧೆ ಹೋಗಲಾಡಿಸಿ, ಕ್ರಾಂತಿಕಾರಕ ವಿಚಾರಗಳನ್ನು ಪ್ರಚುರಪಡಿಸಿದ್ದರು ಹಾಗೂ ರಾಮಕೃಷ್ಣ ಮಿಷನ್ ಸಂಸ್ಥಾಪಿಸಿದರು. ಸನ್ಯಾಸ ಜೀವನಕ್ಕೆ ಸಮಾಜ ಸೇವೆಯ ಹೊಸ ಆಯಾಮವನ್ನು ನೀಡಿದವರು ಸ್ವಾಮಿ ವಿವೇಕಾನಂದರು. ‘‘ದರಿದ್ರರು, ಅಜ್ಞಾನಿಗಳು, ಅನಕ್ಷರಸ್ಥರು, ರೋಗಿಗಳು – ಇವರೇ ನಿಮ್ಮ ದೇವರಾಗಲಿ. ಇವರ ಸೇವೆಮಾಡುವುದೇ ಸರ್ವಶ್ರೇಷ್ಠ ಧರ್ಮವೆಂದು ತಿಳಿಯಿರಿ’’, ಎಂದು ಸ್ವಾಮೀಜಿ ಕರೆ ನೀಡಿದರು. ಅವರ ಜನ್ಮದಿನವನ್ನು ಯುವಜನದಿನವೆಂದು (ಜನವರಿ 12) ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಕರ್ನಾಟಕ ಸರ್ಕಾರ ಈ ಸಂದರ್ಭದಲ್ಲಿ ಯುವಜನರಿಗೆ ಪ್ರೋತ್ಸಾಹ ನೀಡಲು ಹೊಸ ಧೋರಣೆಯನ್ನು ಪ್ರಕಟಿಸಿದೆ.

* ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ನವಂಬರ್ 1: ಬಾಂಬೆ, ಮದ್ರಾಸು ಮತ್ತು ಹೈದರಾಬಾದ್ ಪ್ರಾಂತಗಳಲ್ಲಿದ್ದ ಕನ್ನಡ ಪ್ರದೇಶಗಳನ್ನು ಮತ್ತು ಕೊಡಗು ಪ್ರಾಂತವನ್ನು ಮೈಸೂರು ಪ್ರಾಂತದ ಜೊತೆಗೆ ಒಂದುಗೂಡಿಸಿ, 1956 ನವೆಂಬರ್ 1ರಂದು ಕನ್ನಡ ರಾಜ್ಯವನ್ನು ನಿರ್ಮಾಣ ಮಾಡಲಾಯಿತು. ಇದನ್ನು ಮೈಸೂರು ರಾಜ್ಯ ಎಂದು ಕರೆಯಲಾಯಿತು. ಇದರ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 1 ನ್ನು ಕರ್ನಾಟಕ ರಾಜ್ಯೋತ್ಸವವೆಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. 1973 ನವೆಂಬರ್ 1 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಿದರು.

ರಾಷ್ಟ್ರೀಯ ಚಿಹ್ನೆಗಳು | RASHTRIYA CHINNEGALU | CHAPTER 20 | CLASS 6TH | SOCIAL STUDIES
ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ದಿನಾಚರಣೆ |6ನೇ ತರಗತಿ | rashtriya chinhegalu 6th class |