ರಾಷ್ಟ್ರೀಯ ಭಾವೈಕ್ಯತೆ – ಅಧ್ಯಾಯ 20
ಪಾಠದ ಪರಿಚಯ
ಈ ಅಧ್ಯಾಯದಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಭಾರತೀಯ ವೈವಿಧ್ಯತೆ, ಬಹುತ್ವದಲ್ಲಿ ಏಕತೆ ಹಾಗೂ ರಾಷ್ಟ್ರೀಯ ಏಕತೆಯ ಕುರಿತು ಪರಿಚಯಿಸಲಾಗಿದೆ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ವೃದ್ಧಿಸುವ ಅಂಶಗಳು, ತೊಡಕಾಗುವ ಅಂಶಗಳ ಕುರಿತು ಚರ್ಚಿಸಲಾಗಿದೆ.
ರಾಷ್ಟ್ರೀಯ ಭಾವೈಕ್ಯತೆಯ ಅರ್ಥ: ರಾಷ್ಟ್ರೀಯ ಭಾವೈಕ್ಯವೆಂದರೆ ಒಬ್ಬರು ಇನ್ನೊಬ್ಬರ ಬಗ್ಗೆ ಅಥವಾ ಒಂದು ಜನಾಂಗ ಇನ್ನೊಂದು ಜನಾಂಗದ ಬಗ್ಗೆ ದ್ವೇಷ, ಅಸೂಯೆ ಮತ್ತು ಪೂರ್ವಾಗ್ರಹ ಪೀಡಿತರಾಗದೆ ದೇಶದ ಜನರು ತಾವೆಲ್ಲಾ ಒಂದೆಂಬ ಭಾವನೆಯನ್ನು ಹೊಂದಿರುವುದೇ ರಾಷ್ಟ್ರೀಯ ಭಾವೈಕ್ಯತೆಯಾಗಿದೆ.
ಇನ್ನೊಬ್ಬರನ್ನು ಗೌರವಿಸುವುದು ಹಾಗೂ ಪರಸ್ಪರ ಸೌಹಾರ್ದತೆಯಿಂದ ಇರುವುದು. ನಾವೆಲ್ಲರೂ ರಾಷ್ಟ್ರವೆಂಬ ಒಂದೇ ಕುಟುಂಬದ ಸಮಸದಸ್ಯರು ಎನ್ನುವ ಭಾವನೆಯನ್ನು ಹೊಂದುವುದು. ಜಾತಿ, ಮತ, ಪಂಥ, ಪಂಗಡ, ಧರ್ಮ, ಲಿಂಗ ತಾರತಮ್ಯವಿಲ್ಲದೆ ಒಂದು ದೇಶದ ಜನರೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಮೂಡಿಸುವುದು ರಾಷ್ಟ್ರೀಯ ಭಾವಕ್ಯತೆ.
ಒಂದು ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಇಂತಹ ಭಾವನೆ ಎಲ್ಲರಲ್ಲೂ ಮೂಡುವುದು ಅಗತ್ಯ. ಭಾರತೀಯರೆಲ್ಲಾ ಒಂದೇ ಎನ್ನುವ ಭಾವನೆಯನ್ನು ಗಟ್ಟಿಗೊಳಿಸುವುದೇ ರಾಷ್ಟ್ರೀಯ ಭಾವೈಕ್ಯತೆ.
ಪ್ರಾಮುಖ್ಯತೆ: ಒಂದು ರಾಷ್ಟ್ರದ ಜನತೆಯಲ್ಲಿ ಒಗ್ಗಟ್ಟು ಉಂಟುಮಾಡಲು ಭಾವೈಕ್ಯತೆ ಅಗತ್ಯವಾಗಿದೆ. ರಾಷ್ಟ್ರದ ಹಿತಾಸಕ್ತಿಯನ್ನು ಸಾಧಿಸಲು, ಅಭಿವೃದ್ಧಿ ಹೊಂದಲು ರಾಷ್ಟ್ರದ ಜನರು ತಾವೆಲ್ಲರೂ ಒಂದೆಂಬ ಭಾವನೆ ಬೆಳೆಸಲು ಭಾವೈಕ್ಯತೆ ಅಗತ್ಯವಾಗಿದೆ. ಭಾವೈಕ್ಯತೆಯು ದೇಶದ ಸಮಗ್ರತೆ, ಸೋದರತೆ ಮತ್ತು ಸಮಾನತೆಗೆ ಪ್ರಮುಖ ಪ್ರೇರಣೆಯಾಗುತ್ತದೆ.
ಭಾರತೀಯ ವೈವಿಧ್ಯತೆ: ಭಾರತ ವೈವಿಧ್ಯತೆಗಳಿಂದ ಕೂಡಿದ ದೇಶವಾಗಿದೆ. ಭಾರತದ ವಿವಿಧತೆಯು ಪ್ರಾಕೃತಿಕ ವೈವಿಧ್ಯ, ಜೀವ ವೈವಿಧ್ಯ ಹಾಗೂ ಜನಜೀವನ ವೈವಿಧ್ಯದಲ್ಲಿ ಪ್ರಕಟಗೊಂಡಿದೆ.
ಪ್ರಾಕೃತಿಕ ವೈವಿಧ್ಯ: ಭಾರತದಲ್ಲಿ ಅತಿ ಎತ್ತರದ ಪರ್ವತ ಶ್ರೇಣಿಗಳು, ಅತಿ ಉದ್ದದ ನದಿಗಳು ಮತ್ತು ವಿಶಾಲವಾದ ಮೈದಾನಗಳಿವೆ. ಅಂತೆಯೇ ಅತ್ಯಂತ ಚಳಿಯ ಹಾಗೂ ಉಷ್ಣದ ಪ್ರದೇಶಗಳಿವೆ. ಸುಡುವ ಮರುಭೂಮಿಯೂ ಇಲ್ಲಿದೆ. ದಟ್ಟಕಾಡು, ತಂಪಿನ ಸರೋವರ, ಧುಮುಕುವ ಜಲಪಾತ, ಮನಸೆಳೆಯುವ ಕರಾವಳಿ, ನೂರಾರು ಚಿಕ್ಕಪುಟ್ಟ ದ್ವೀಪಗಳು-ಇವು ನಮಗೆ ಪ್ರಕೃತಿಯು ನೀಡಿದ ಕೊಡುಗೆಗಳು.
ಜೀವ ವೈವಿಧ್ಯ: ಭಾರತದ ಜೀವ ವೈವಿಧ್ಯ ಅಪಾರವಾದದ್ದು. ಜಗತ್ತಿನಲ್ಲಿ ಇಷ್ಟೊಂದು ಜೀವವೈವಿಧ್ಯದ ದೇಶಗಳು ಇರುವುದು ಕೆಲವು ಮಾತ್ರ.
ಈವರೆಗೆ 47,000 ಹೆಚ್ಚು ಸಸ್ಯವರ್ಗಗಳನ್ನು ಗುರುತಿಸಿ ವರ್ಣಿಸಲಾಗಿದೆ. ದೇಶದಲ್ಲಿ ಸುಮಾರು 90,000 ಬಗೆಯ ವೈವಿಧ್ಯಮಯ ಪ್ರಾಣಿಗಳಿವೆ. ಅವುಗಳಲ್ಲಿ 1,232 ಬಗೆಯ ಪಕ್ಷಿವರ್ಗಗಳು ಮತ್ತು 2,546 ಬಗೆಯ ಮೀನಿನವರ್ಗಗಳು ಇವೆ. ವೈವಿಧ್ಯಮಯ ಜೀವಸಂಕುಲ ಭಾರತದ ಅಮೂಲ್ಯ ಆಸ್ತಿ.
ಜನ ವೈವಿಧ್ಯ: ವಿಶಾಲ ಭಾರತದಲ್ಲಿ ವಿವಿಧ ಬಗೆಯ ಸಮುದಾಯಕ್ಕೆ ಸೇರಿದ ಜನರಿದ್ದಾರೆ. ಅವರ ರೂಪ, ಮೈಕಟ್ಟು, ಭಾಷೆ, ವೇಷಭೂಷಣ, ಆಹಾರ, ರೀತಿನೀತಿ, ಆಚಾರ, ವಿಚಾರ, ಮತಧರ್ಮಗಳು ವಿಭಿನ್ನವಾಗಿವೆ, ಬಗೆಬಗೆಯದಾಗಿವೆ. ನಮ್ಮ ಜನಜೀವನದ ಸೊಗಸನ್ನು ಕಣ್ಣಾರೆ ಕಂಡು ಸವಿಯಲು ಭಾರತವನ್ನು ಸುತ್ತಾಡಿ ಬರಬೇಕು.
ಬಹುತ್ವದಲ್ಲಿ ಏಕತೆ: ವಿವಿಧ ಭಾಷೆ, ಸಂಸ್ಕೃತಿ, ಧರ್ಮಗಳಲ್ಲಿ ನಂಬಿಕೆ ಇಟ್ಟಿರುವ ಜನ ಸಮುದಾಯದ ಜೀವನ ವಿಧಾನವನ್ನು ಬಹುಸಂಸ್ಕೃತಿ ಅಥವಾ ಬಹುತ್ವ ಎನ್ನಲಾಗುತ್ತದೆ. ಭಾರತವು ವೈವಿಧ್ಯಮಯ ರಾಷ್ಟ್ರವಾಗಿದ್ದು, ಸಾ.ಶ. 2023ರ ಏಪ್ರಿಲ್ 21 ರಂದು ಪ್ರಕಟಗೊಂಡ United Nations Population Fund (ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ) ವರದಿಯ ಪ್ರಕಾರ ಸಾ.ಶ. 2023ರ ಮಧ್ಯಭಾಗದ ವೇಳೆಗೆ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಭೌಗೋಳಿಕವಾಗಿಯೂ ಭಿನ್ನತೆಯನ್ನು ಹೊಂದಿರುವ ದೇಶ ನಮ್ಮದು. ಪ್ರತಿಯೊಬ್ಬ ಪ್ರಜೆಯೂ ತನಗಿಷ್ಟ ಬಂದ ಧರ್ಮವನ್ನು ಅನುಸರಿಸಬಹುದಾಗಿದೆ. ಪ್ರಾದೇಶಿಕ ಭಾಷೆಗಳಲ್ಲೇ ಮಾತನಾಡಿ ಸಾಮಾಜಿಕ ಜೀವನದಲ್ಲಿ ಬೆರೆಯಬಹುದಾಗಿದೆ. ಹಾಗಾಗಿ, ಭಾರತದಲ್ಲಿ ಈ ಹಲವು ಭಿನ್ನತೆಗಳಿಂದ ವಾಸಿಸುವ ಜನರು ಐಕ್ಯತೆಯಿಂದಿರುವುದರಿಂದ ಬಹುತ್ವದಲ್ಲೂ ಏಕತೆಯನ್ನು ಕಾಣಬಹುದಾಗಿದೆ. ವಿವಿಧ ಭಾಷೆ, ಸಂಸ್ಕೃತಿ, ಧರ್ಮಗಳಲ್ಲಿ ನಂಬಿಕೆ ಇಟ್ಟಿರುವ ಬಹುಸಂಸ್ಕೃತಿಯ ಜನರು ಇಲ್ಲಿ ವಾಸವಾಗಿದ್ದಾರೆ. ವಿಭಿನ್ನ ಧರ್ಮಗಳುಳ್ಳ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ತನಗಿಷ್ಟ ಬಂದ ಧರ್ಮವನ್ನು ಅನುಸರಿಸಬಹುದಾಗಿದೆ. ಈ ಹಲವು ಭಿನ್ನತೆಗಳಿಂದ ಒಂದು ರಾಷ್ಟ್ರದಲ್ಲಿ ವಾಸಿಸುವ ಜನರು ಐಕ್ಯತೆಯಿಂದರುವುದರಿಂದ ಬಹುತ್ವದಲ್ಲೂ ಏಕತೆಯನ್ನು ಕಾಣಬಹುದಾಗಿದೆ. ಬಹುತ್ವವನ್ನು ನಮ್ಮ ಸಂವಿಧಾನವು ಮನ್ನಿಸಿದೆ. ಬಹುತ್ವವು ಯಾವತ್ತೂ ಏಕತೆಗೆ ಮಾರಕವಲ್ಲ, ಪೂರಕವಾಗಿದೆ.
ಭಾರತದಲ್ಲಿ ಏಕತೆಯನ್ನು ಪ್ರೋತ್ಸಾಹಿಸುವ ಅಂಶಗಳು:
ಜಾತ್ಯಾತೀತತೆ: ಭಾರತ ಒಂದು ಜಾತ್ಯಾತೀತ ರಾಷ್ಟ್ರವಾಗಿದ್ದು, ಸರ್ವಧರ್ಮ ಸಮನ್ವಯತೆಯನ್ನು ಹೊಂದಿದೆ. ಇಲ್ಲಿ ಎಲ್ಲಾ ಧರ್ಮಗಳಿಗೂ ಸಮಾನ ಅವಕಾಶ ಇರುವುದರಿಂದ ಇದು ರಾಷ್ಟ್ರದ ಐಕ್ಯತೆಯನ್ನು ಪ್ರೋತ್ಸಾಹಿಸುತ್ತದೆ.
ಪ್ರಜಾಪ್ರಭುತ್ವ: ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿ ಜಾತಿ, ಧರ್ಮ, ಪಂಥಗಳ ಆಧಾರದಲ್ಲಿ ಭೇದ-ಭಾವ ಮಾಡಬಾರದು ಮತ್ತು ಹೆಣ್ಣು ಗಂಡೆಂಬ ಭೇದವಿಲ್ಲದೆ ಎಲ್ಲರಿಗೂ ಮತದಾನದ ಹಕ್ಕಿರಬೇಕು ಎಂಬ ತತ್ವವನ್ನು ಸಂವಿಧಾನ ಅಂಗೀಕರಿಸಿದೆ. ಈ ಅಂಶ ದೇಶದ ಐಕ್ಯತೆಗೆ ಪೂರಕವಾಗಿದೆ.
ರಾಷ್ಟ್ರೀಯ ಹಬ್ಬಗಳು: ನಮ್ಮ ರಾಷ್ಟ್ರೀಯ ಹಬ್ಬಗಳನ್ನು ಭಾರತೀಯರಾದ ನಾವೆಲ್ಲ ಒಟ್ಟಾಗಿ ಆಚರಿಸುವುದರಿಂದ ಇದು ರಾಷ್ಟ್ರೀಯ ಏಕತೆಯ ವೃದ್ಧಿಗೆ ಸಹಕಾರಿಯಾಗಿದೆ.
ನಮ್ಮ ರಾಷ್ಟ್ರೀಯ ಲಾಂಛನಗಳು: ನಮ್ಮ ರಾಷ್ಟ್ರೀಯ ಚಿಹ್ನೆಗಳಾದ ರಾಷ್ಟ್ರ ಲಾಂಛನ, ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರೀಯ ಹೂ, ರಾಷ್ಟ್ರ ಪಕ್ಷಿ ಮತ್ತು ರಾಷ್ಟ್ರೀಯ ಪ್ರಾಣಿ ಮುಂತಾದವು ಸಹ ನಾವೆಲ್ಲಾ ಒಂದು ಎಂದು ಗುರುತಿಸಿಕೊಳ್ಳಲು ಸಹಾಯಕವಾಗಿದೆ.
ಪರಸ್ಪರ ಅನ್ಯೋನ್ಯತೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾನ್ಯ ಧ್ಯೇಯೋದ್ಧೇಶಗಳ ಮೂಲಕ ಕಾರ್ಯ ಸಾಧನೆ ಮಾಡುತ್ತವೆ. ರಾಷ್ಟ್ರದ ಪ್ರತಿಯೊಂದು ಭಾಗವು ಇನ್ನೊಂದು ಭಾಗದ ಮೇಲೆ ಅವಲಂಬಿತವಾಗಿದೆ. ಈ ಅಂಶವೂ ಕೂಡ ನಾವೆಲ್ಲಾ ಒಂದೇ ರಾಷ್ಟ್ರದವರು ಎಂಬುದನ್ನು ಸೂಚಿಸುತ್ತದೆ.
ಇವಲ್ಲದೆ ಇತರೆ ಅಂಶಗಳಾದ ನೈಸರ್ಗಿಕ ಅಂಶಗಳು, ಸಂಪರ್ಕ ಜಾಲ, ಸಮೂಹ ಮಾಧ್ಯಮಗಳು, ವಿವಿಧ ಸಂಸ್ಕøತಿ, ಪ್ರಾಂತೀಯತೆ, ಮತ, ಭಾಷೆ ಮುಂತಾದವುಗಳಿದ್ದರೂ ಇಡೀ ರಾಷ್ಟ್ರದ ಜನತೆ ಒಂದೇ ಎಂಬ ಐಕ್ಯತೆ ಕಾಣಬಹುದಾಗಿದೆ.
ರಾಷ್ಟ್ರೀಯ ಭಾವೈಕ್ಯತೆ ಮತ್ತು ಏಕತೆಗೆ ತೊಡಕುಂಟು ಮಾಡುವ ಅಂಶಗಳು:
ಜಾತೀಯತೆ: ಜಾತೀಯತೆಯೆಂದರೆ ಬೇರೆ ಜಾತಿಯ ವಿರುದ್ಧವಾಗಿ ತಮ್ಮ ಜಾತಿಯನ್ನು ಎತ್ತಿ ಕಟ್ಟುವುದು. ತಮ್ಮ ಜಾತಿಯೇ ಶ್ರೇಷ್ಠ ಉಳಿದವು ಕನಿಷ್ಠವೆಂಬ ಮೇಲಿರಿಮೆಯೇ ಜಾತೀಯತೆ. ಜಾತೀಯತೆಯು ಏಕತೆಗೆ ಮಾರಕವಾಗಿದೆ. ಇಂದು ಜಾತೀಯತೆ ಎಲ್ಲಾ ಕ್ಷೇತ್ರಗಳನ್ನು ಆವರಿಸಿದೆ. ಇದರಿಂದಾಗಿ ಸಂಕುಚಿತ ಭಾವನೆ ಬೆಳೆಯುತ್ತಿದೆ. ಹಾಗಾಗಿ ಜಾತೀಯತೆ ದೇಶದ ಐಕ್ಯತೆಗೆ ಮಾರಕವಾಗಿದೆ.
ಮತೀಯವಾದ: ಧರ್ಮದ ಶ್ರೇಷ್ಠತೆಯ ಕಾರಣಕ್ಕೆ ಸಂಘರ್ಷಕ್ಕೆ ಇಳಿಯುವುದು, ಅಥವಾ ಹಿಂಸಾಚಾರದಲ್ಲಿ ತೊಡಗುವುದನ್ನು ಮತೀಯವಾದ ಅಥವಾ ಕೋಮುವಾದ ಎನ್ನುತ್ತೇವೆ. ಕೋಮುವಾದವು ಶಾಂತಿಯನ್ನು ಕದಡುತ್ತದೆ. ಇದರಿಂದ ಜೀವ ಮತ್ತು ಆಸ್ತಿಪಾಸ್ತಿಗಳ ನಾಶ ಸಂಭವಿಸುತ್ತದೆ. ಅಷ್ಟೇ ಅಲ್ಲ ಇದು ಜನರ ನಡುವಿನ ಸ್ನೇಹ ಸೌಹಾರ್ದತೆಯನ್ನು ಹಾಳುಮಾಡುತ್ತದೆ. ಕೋಮುವಾದವು ನಾನಾ ಮತಧರ್ಮದ ಜನರಲ್ಲಿ ಹೊಂದಾಣಿಕೆ ಇಲ್ಲದಂತೆ ಮಾಡಿ, ದೇಶದ ಪ್ರಗತಿಗೆ ತೊಡಕಾಗಿದೆ. ಅಭಿವೃದ್ಧಿಗೆ ಕಂಟಕವಾಗಿದೆ.
ಪ್ರಾದೇಶಿಕವಾದ: ರಾಷ್ಟ್ರೀಯ ಭಾವೈಕ್ಯತೆಗೆ ಮಾರಕವಾಗಬಹುದಾದ ಮತ್ತೊಂದು ಅಂಶ ಪ್ರಾದೇಶಿಕವಾದ. ತನ್ನ ಪ್ರದೇಶದ ಕುರಿತು ವ್ಯಕ್ತಿಗಿರುವ ಏಕಪಕ್ಷೀಯ ನಿಷ್ಠೆಯ ಭಾವನೆಯೇ ಸಂಕುಚಿತ ಪ್ರಾದೇಶಿಕವಾದ. ಸಂವಿಧಾನದ ಪ್ರಕಾರ ನಮ್ಮದು ವಿವಿಧ ರಾಜ್ಯಗಳುಳ್ಳ ಒಕ್ಕೂಟ ವ್ಯವಸ್ಥೆಯಾದ್ದರಿಂದ ಪ್ರಾದೇಶಿಕ ಭಾಷೆ, ಸಂಸ್ಕೃತಿ, ಆಡಳಿತಗಳ ಅಸ್ತಿತ್ವವೂ ಮುಖ್ಯ. ಆದ್ದರಿಂದ ರಾಷ್ಟ್ರದ ಸಮಗ್ರತೆಗೆ ಧಕ್ಕೆ ತರುವ ಸಂಕುಚಿತ ಪ್ರಾದೇಶಿಕವಾದ ಆರೋಗ್ಯಕರವಲ್ಲ. ನಾವು ‘ಮೊದಲು ಭಾರತೀಯರು ಆನಂತರ ಒಂದು ರಾಜ್ಯ ಅಥವಾ ಪ್ರದೇಶಕ್ಕೆ ಸೇರಿದವರು’ ಎಂಬುದನ್ನು ಅರಿಯಬೇಕು. ಪ್ರಾದೇಶಿಕವಾದವು ಪ್ರತ್ಯೇಕತಾವಾದವಾಗಬಾರದು. ಆಗ ಅದು ರಾಷ್ಟ್ರೀಯ ಏಕತೆಗೆ ತೀವ್ರ ಧಕ್ಕೆ ಉಂಟು ಮಾಡುತ್ತದೆ. ಪ್ರಾದೇಶಿಕ ಅಸಮಾನತೆಯನ್ನು ನೀಗಿಸುವ ಅವಕಾಶಗಳನ್ನು ಸಂವಿಧಾನದಲ್ಲಿಯೇ ನೀಡಲಾಗಿದೆ. ಈ ಹಿನ್ನಲೆಯಲ್ಲಿಯೇ ನಾವು ಪ್ರಾದೇಶಿಕ ಅಸಮಾನತೆಯ ನಿವಾರಣೆಗಾಗಿ ಕಲ್ಯಾಣ ಕರ್ನಾಟಕಕ್ಕೆ 371(ಜೆ) ಮಾನ್ಯತೆಯನ್ನು ನೀಡಿದ್ದನ್ನು ಮತ್ತು ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಘೋಷಿಸಲ್ಪಟ್ಟಿದನ್ನು ಗುರುತಿಸಬಹುದಾಗಿದೆ.
ರಾಷ್ಟ್ರೀಯ ಭಾವೈಕ್ಯತೆಗೆ ತೊಡಕಾಗಿಸುವ ಜಾತೀಯತೆ, ಮತೀಯವಾದ ಮತ್ತು ಸಂಕುಚಿತ ಪ್ರಾದೇಶಿಕವಾದಗಳನ್ನು ಮೆಟ್ಟಿ ನಿಂತರೆ ರಾಷ್ಟ್ರೀಯ ಭಾವೈಕ್ಯತೆಯನ್ನು ವೃದ್ಧಿಸಬಹುದು.
ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು
* * * * * * *
