ಪಾಠದ ಪರಿಚಯ
ಈ ಅಧ್ಯಾಯದಲ್ಲಿ ಮಾನವ ಹಕ್ಕುಗಳ ಅರ್ಥ ಮತ್ತು ಮಹತ್ವವನ್ನು ಪರಿಚಯಿಸಲಾಗಿದೆ ಹಾಗೂ ನಮ್ಮ ಸಂವಿಧಾನವು ಭಾರತದ ಪೌರರಿಗೆ ನೀಡಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪರಿಚಯಿಸಲಾಗಿದೆ.

ಹಕ್ಕುಗಳು ಎಂದರೇನು?

ಹಕ್ಕು’ ಎಂದರೆ ನಾಗರಿಕರಿಗೆ ಇರಬೇಕಾದ ಅಧಿಕಾರ, ಅದುಸ್ವಾಭಾವಿಕ ಹಕ್ಕು’ ಆಗಿರಬಹುದು. (ಉದಾಹರಣೆ-ಬದುಕುವ ಹಕ್ಕು, ಜೀವರಕ್ಷಣೆಯ ಹಕ್ಕು). ಇಲ್ಲವೆ `ನ್ಯಾಯಸಮ್ಮತ ಹಕ್ಕು’ ಆಗಿರಬಹುದು. (ಉದಾಹರಣೆ-ಸಮಾನತೆಯ ಹಕ್ಕು, ವಿದ್ಯಾಭ್ಯಾಸದ ಹಕ್ಕು).

ಮಾನವ ಹಕ್ಕುಗಳು

ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟಿನಿಂದಲೇ ಸಹಜವಾಗಿ ಕೆಲವು ಹಕ್ಕುಗಳು ಅಂತರ್ಗತವಾಗಿ ಪ್ರಾಪ್ತವಾಗಿರುತ್ತದೆ. ಜನಾಂಗ, ಜಾತಿ, ಭಾಷೆ, ಧರ್ಮ, ಲಿಂಗ ಅಥವಾ ಇನ್ನಿತರೆ ಯಾವುದೇ ಗುಣ, ಸ್ವಭಾವಗಳಲ್ಲಿ ಎಷ್ಟೇ ಭಿನ್ನತೆಗಳಿದ್ದರೂ, ಈ ಹಕ್ಕುಗಳಿಂದ ಯಾರನ್ನು ಹೊರಗಿಡಲಾಗುವುದಿಲ್ಲ. ಮನುಷ್ಯನ ಅಸ್ತಿತ್ವದ ಭಾಗವಾಗಿಯೇ ಈ ಹಕ್ಕುಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರುತ್ತವೆ. ಇಂತಹ ಹಕ್ಕು ಮತ್ತು ಅವಕಾಶಗಳನ್ನು ಮಾನವ ಹಕ್ಕುಗಳು ಎಂದು ಕರೆಯುವ ಮೂಲಕ ಮಾನವ ಹಕ್ಕುಗಳಿಗೆ ವಿಶ್ವಮಾನ್ಯತೆಯನ್ನು ನೀಡಲಾಗಿದೆ.

ಮಾನವ ಹಕ್ಕುಗಳ ಪರಿಕಲ್ಪನೆಯ ಮೂಲ:

ಜಗತ್ತಿನ ಎಲ್ಲಾ ತಾತ್ವಿಕ ದರ್ಶನಗಳೂ ಮನುಷ್ಯನ ಶ್ರೇಷ್ಠತೆಯನ್ನು ಸಾರಿವೆ. ಮನುಷ್ಯ ಪ್ರಕೃತಿಯ ಶಿಶು. ಜಗತ್ತಿನ ಎಲ್ಲಾ ಚರಾಚರಗಳೊಂದಿಗೆ ಬದುಕುತ್ತಾ ತನ್ನದೇ ಆದ ವಿಶಿಷ್ಠ ಜೀವನ ಕ್ರಮವನ್ನು ರೂಪಿಸಿಕೊಂಡಿದ್ದಾನೆ. `ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು’ ಸರ್ವಜ್ಞ ಎನ್ನುವ ನುಡಿಯ ಹಿಂದೆ ಮಾನವ ಹಕ್ಕುಗಳ ಪ್ರತಿಪಾದನೆ ಇರುವುದನ್ನು ಕಾಣಬಹುದು. ಆದರೆ ಮಾನವರು ವಿಕಾಸವಾದಂತೆಲ್ಲ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿಕೊಂಡಂತೆ ಸ್ವಾರ್ಥಪರತೆಯು ಬೆಳೆಯತೊಡಗಿತ್ತು. ಈ ಹಿನ್ನೆಲೆಯಲಿ ಪ್ರತಿಯೊಬ್ಬ ಮನುಷ್ಯರಿಗೂ ಸ್ವಾತಂತ್ರ್ಯ, ಸಮಾನತೆ, ತಾರತಮ್ಯ ರಹಿತ ಮುಕ್ತರೀತಿಯಲ್ಲಿ ಬಾಳುವ ವ್ಯವಸ್ಥೆ ಕಲ್ಪಿಸುವ ಆಶಯವನ್ನು ಈಡೇರಿಸುವ ಮಾನವ ಹಕ್ಕುಗಳ ಘೋಷಣೆ ಹುಟ್ಟಿಕೊಂಡಿದೆ. ಹೆರಾಲ್ಡ್ ಜೆ ಲಾಸ್ಕಿ ಅವರ ಪ್ರಕಾರ “ನ್ಯಾಯಯುತ ಮಾನವೀಯ ಸಾಮಾಜಿಕ ಸ್ಥಿತಿಗತಿಗಳೇ ಮಾನವ ಹಕ್ಕುಗಳಾಗಿವೆ”.

ಅಂತರರಾಷ್ಟ್ರೀಯ ಮಾನವಹಕ್ಕುಗಳ ಸಾರ್ವತ್ರಿಕ ಉದ್ಘೋಷಣೆ:

ಮಾನವ ಇತಿಹಾಸದಲ್ಲಿ ಹಿಂದೆ ವಿವಿಧ ಜನಾಂಗ ಮತ್ತು ಧರ್ಮಗಳ ನಡುವೆ ನಡೆದಿದ್ದ ಸಂಘರ್ಷಗಳಿಂದಾಗಿ ಬಹುದೊಡ್ಡ ಸಂಖ್ಯೆಯ ಮನುಷ್ಯರು ಹತರಾಗಿದ್ದಾರೆ. 20ನೇ ಶತಮಾನದಲ್ಲಿ ನಡೆದ ಎರಡು ಮಹಾಯುದ್ದಗಳಲ್ಲಿ ಲಕ್ಷಾಂತರ ಜನ ಸುಟ್ಟು ಬೂದಿಯಾಗಿದ್ದಾರೆ. ಅದಕ್ಕೂ ಹೆಚ್ಚಿನ ಸಂಖ್ಯೆಯ ಜನ, ಜೀವನವನ್ನು ಕಳೆದುಕೊಂಡಿದ್ದು, ಇತಿಹಾಸದ ವಿಪರ್ಯಾಸ. ಇಂತಹ ಸಂಘರ್ಷಗಳು ಹಿಂಸೆ, ತಾರತಮ್ಯಗಳನ್ನು ತೊಡೆದುಹಾಕುವ ಗುರಿಯೊಂದಿಗೆ ಸ್ಥಾಪಿತವಾದ ವಿಶ್ವಸಂಸ್ಥೆಯ ಜಗತ್ತಿನೆಲ್ಲ ಜನರಿಗೆ ಬದುಕುವ ಅವಕಾಶಗಳನ್ನು ಮಾನವೀಯ ನೆಲೆಯಲ್ಲಿ ಕಲ್ಪಿಸಿಕೊಡುವ ಅವಕಾಶಗಳನ್ನು ಸೃಷ್ಟಿಸುವ ಸಲುವಾಗಿ 1948ರ ಡಿಸೆಂಬರ್ 10 ರಂದು ಮಾನವಹಕ್ಕುಗಳ ಸಾರ್ವತ್ರಿಕ ಘೋಷಣೆ ಮಾಡಿದೆ.

ಮಾನವ ಹಕ್ಕುಗಳ ಮಹತ್ವ:

  1. ವ್ಯಕ್ತಿಯ ಸರ್ವತೋಮುಖ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿವೆ.
  2. ಗೌರವಯುತ ಜೀವನಕ್ಕೆ ಬುನಾದಿಯಾಗಿವೆ.
  3. ಮಾನವೀಯ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕೆ ಪ್ರೇರಣೆ ಆಗಿವೆ.
  4. ವ್ಯಕ್ತಿ ಮತ್ತು ರಾಜ್ಯದ ನಡುವಿನ ಸುಮಧುರ ಬಾಂಧವ್ಯಕ್ಕೆ ಸೇತುವೆ ಆಗಿವೆ.
  5. ಜಾಗತಿಕ ಜೀವನದ ಜೀವಾಳ ಆಗಿವೆ.

ಮಕ್ಕಳ ಹಕ್ಕು

ಮಾನವ ಹಕ್ಕುಗಳಲ್ಲಿ ಮಕ್ಕಳ ಹಕ್ಕುಗಳಿಗೂ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ಮಗುವೂ ನೈಸರ್ಗಿಕವಾಗಿ ಕೆಲವು ಸೌಕರ್ಯಗಳನ್ನು ಪಡೆದಿರುತ್ತದೆ. ಪ್ರತಿಯೊಬ್ಬ ಮಗುವೂ ತನ್ನ ಬಾಲ್ಯ ಜೀವನವನ್ನು ತಂದೆ ತಾಯಿಯೊಂದಿಗೆ ನಡೆಸುವ, ದೈಹಿಕ ರಕ್ಷಣೆ, ಆಹಾರ, ಶಿಕ್ಷಣ, ಆರೋಗ್ಯ ಸೌಲಭ್ಯಗಳನ್ನು ಪಡೆಯುವ ಹಕ್ಕನ್ನು ಪಡೆದಿರುತ್ತದೆ. ಅಲ್ಲದೆ, ಜನಾಂಗ, ಲಿಂಗ, ಬಣ್ಣ, ಧರ್ಮ ಹಾಗೂ ವಿಕಲಚೇತನದ ಆಧಾರದ ಮೇಲೆ ತಾರತಮ್ಯವಿಲ್ಲದ ನಾಗರಿಕ ಹಕ್ಕುಗಳನ್ನು ಮಕ್ಕಳು ಹೊಂದಿರುತ್ತಾರೆ. ಭಾರತ ಸಂವಿಧಾನದಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದೆ. ಮಕ್ಕಳು ಶಿಕ್ಷಣ ಕಲಿಕೆಯಿಂದ ಹೊರಗುಳಿದು, ದುಡಿಮೆಯಲ್ಲಿ ತೊಡಗುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತದೆ. ಬಾಲಕಾರ್ಮಿಕ ಪದ್ಧತಿಯು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ದುಡಿಮೆಯು ಕೂಲಿಯ ಅಥವಾ ಕೂಲಿಯೇತರ ಉದ್ಯೋಗವಾಗಲಿ ಅದು ಬಾಲಕಾರ್ಮಿಕ ಪದ್ಧತಿಯೆನಿಸಿಕೊಳ್ಳುತ್ತದೆ. ಬಾಲ ಕಾರ್ಮಿಕ ಪದ್ಧತಿ ಮಕ್ಕಳ ಹಕ್ಕುಗಳಿಗೆ ವ್ಯತಿರಿಕ್ತವಾಗಿದೆ. ಆದ್ದರಿಂದಲೇ 1986ರಲ್ಲಿಯೇ ಬಾಲಕಾರ್ಮಿಕ ನಿಷೇಧ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಈ ಕಾಯಿದೆಯನ್ನು ಉಲ್ಲಂಘಿಸಿದ ವ್ಯಕ್ತಿಗಳಿಗೆ 3 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ದಂಡ ಅಥವಾ ಎರಡನ್ನು ವಿಧಿಸಬಹುದು.

ಮಾನವ ಹಕ್ಕುಗಳ ರಕ್ಷಣೆ

ಹೀಗೆ ಮಾನವ ಹಕ್ಕುಗಳು ಮತ್ತು ಮಕ್ಕಳ ಹಕ್ಕುಗಳು ಈ ಉದ್ದೇಶಕ್ಕಾಗಿ ಸ್ಥಳೀಯ ಹಂತದಿಂದ ಹಿಡಿದು ವಿಶ್ವಮಟ್ಟದವರೆಗೂ ಮಾನವ ಹಕ್ಕುಗಳ ಅಯೋಗಗಳು ಸ್ಥಾಪಿತಗೊಂಡು ಕಾರ್ಯ ನಿರ್ವಹಿಸುತ್ತಿವೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 1098 ಸಹಾಯವಾಣಿ ತೆರೆಯಲಾಗಿದೆ.

ಇದಕ್ಕೆ ಪೂರಕವಾಗಿ ಎಲ್ಲಾ ಜೀವಿಗಳು ಉತ್ತಮವಾದ ಜೀವನವನ್ನು ನಡೆಸಲು ಉತ್ತಮ ಹಾಗೂ ಸುಸ್ಥಿರವಾದ ಪರಿಸರದ ಅಗತ್ಯತೆ ಇದ್ದು ಉತ್ತಮವಾದ ಆರೋಗ್ಯ, ವಸತಿ, ಆಹಾರ, ನೀರು ಹಾಗೂ ನೈರ್ಮಲ್ಯಗಳ ಭದ್ರತೆಯ ಜೊತೆಗೆ ಸಮಗ್ರವಾದ ಉತ್ತಮ ಪರಿಸರವನ್ನು ಸಂರಕ್ಷಿಸುವುದು ಕೂಡ ಮಾನವ ಹಕ್ಕುಗಳ ಸಂರಕ್ಷಣೆಯಾಗಿರುತ್ತದೆ ಎಂದು ವಿಶ್ವಸಂಸ್ಥೆ 2012ರ ನಂತರದಲ್ಲಿ ಘೋಷಿಸಿದ್ದು ಅದನ್ನು ಜಾರಿಗೊಳಿಸುವುದು ಕೂಡ ಜಗತ್ತಿನ ರಾಷ್ಟ್ರಗಳ ಪ್ರಮುಖ ಜವಾಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ.

ಮೂಲಭೂತ ಹಕ್ಕುಗಳು

ಮೂಲಭೂತ ಹಕ್ಕುಗಳೆಂದರೆ ಸಂವಿಧಾನದಲ್ಲಿ ಹೇಳಲಾದ ಹಾಗೂ ರಕ್ಷಿಸಲಾಗಿರುವ ಹಕ್ಕುಗಳು. ಇವು ನಾಗರಿಕರಿಗೆ ನೀಡಿದ ಸಾಂವಿಧಾನಿಕ ಹಕ್ಕುಗಳಾಗಿವೆ. ಇವುಗಳನ್ನು ಯಾರೂ ಉಲ್ಲಂಘಿಸುವಂತಿಲ್ಲ.

ವ್ಯಕ್ತಿಯ ವಿಕಾಸಕ್ಕೆ ಮತ್ತು ರಾಷ್ಟ್ರದ ಅಭ್ಯುದಯಕ್ಕೆ ಕೆಲವು ಸ್ವಾತಂತ್ರ್ಯಗಳು ಮತ್ತು ಮೂಲಭೂತ ಹಕ್ಕುಗಳು ಅನಿವಾರ್ಯ. ಆದ್ದರಿಂದಲೇ ಸಂವಿಧಾನವು ಪ್ರಜೆಗಳಿಗೆ ಆರು ಮೂಲಭೂತ ಹಕ್ಕುಗಳನ್ನು ನೀಡಿದೆ.

ಸಂವಿಧಾನವು ದೇಶದ ಎಲ್ಲಾ ನಾಗರಿಕರಿಗೆ ಆರು ಮೂಲಭೂತ ಹಕ್ಕುಗಳನ್ನು ನೀಡಿದೆ. ಅವು,

  1. ಸಮಾನತೆಯ ಹಕ್ಕು
  2. ಸ್ವಾತಂತ್ರ್ಯದ ಹಕ್ಕು
  3. ಶೋಷಣೆಯ ವಿರುದ್ಧದ ಹಕ್ಕು
  4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
  5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು
  6. ಸಂವಿಧಾನಾತ್ಮಕ ಪರಿಹಾರದ ಹಕ್ಕು

1. ಸಮಾನತೆಯ ಹಕ್ಕು:

ಕಾನೂನಿನ ಮುಂದೆ ಎಲ್ಲರೂ ಸಮಾನರು; ಯಾರೇ ಆಗಲಿ ಕಾನೂನಿಗಿಂತ ದೊಡ್ಡವರಲ್ಲ; ಮತ್ತು ಎಲ್ಲರಿಗೂ ಕಾನೂನಿನ ಸಮಾನ ರಕ್ಷಣೆ ದೊರಕಬೇಕು ಎಂಬ ಅಂಶಗಳು ಸಮಾನತೆಯ ಹಕ್ಕಿನಲ್ಲಿ ಒಳಗೊಂಡಿವೆ.

ಧರ್ಮ, ಕುಲ, ಜಾತಿ, ಲಿಂಗ, ಜನ್ಮಸ್ಥಳ ಇವುಗಳ ಆಧಾರದ ಮೇಲೆ ರಾಜ್ಯವು ಪಕ್ಷಪಾತ ಮಾಡುವಂತಿಲ್ಲ. ಅಂಗಡಿ, ಹೋಟೆಲ್ ಮತ್ತು ಮನೋರಂಜನಾ ಸ್ಥಳಗಳ ಪ್ರವೇಶಕ್ಕೆ ಯಾವುದೇ ಪ್ರಜೆಯ ಮೇಲೆ ನಿರ್ಬಂಧ ಹೇರುವಂತಿಲ್ಲ. ಸಾರ್ವಜನಿಕ ಬಾವಿ, ಕೆರೆ, ರಸ್ತೆ ಮತ್ತು ವಿರಾಮ ಸ್ಥಳಗಳನ್ನು ಉಪಯೋಗಿಸಲು ಕೂಡಾ ನಿರ್ಬಂಧವಿರುವುದಿಲ್ಲ. ಸರ್ಕಾರಿ ಸೇವೆಗೆ ಸೇರಲು ಎಲ್ಲಾ ನಾಗರಿಕರಿಗೂ ಸಮಾನ ಅವಕಾಶವಿದೆ. ಸಾರ್ವಜನಿಕ ಪೂಜಾಸ್ಥಳಗಳಲ್ಲಿ ಆಯಾ ಮತಧರ್ಮದ ವ್ಯಕ್ತಿಯು ಪ್ರವೇಶಿಸಿ ಪ್ರಾರ್ಥನೆ ಮಾಡುವುದನ್ನು ತಡೆಯುವಂತಿಲ್ಲ. ಸಮಾನತೆಯ ಹಕ್ಕಿನ ಹಿನ್ನಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸುವ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಉದಾಹರಣೆಗೆ, ಭಾರತ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಸಂರಕ್ಷಣಾ ಕಾಯಿದೆ ಸಾ.ಶ. 2019 ಮತ್ತು ಕರ್ನಾಟಕ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯನೀತಿ ಸಾ.ಶ. 2017ನ್ನು ಜಾರಿಗೆ ತಂದಿದೆ.

2. ಸ್ವಾತಂತ್ರ್ಯದ ಹಕ್ಕು:

ಸಂವಿಧಾನದಲ್ಲಿ ನೀಡಿರುವ ಸ್ವಾತಂತ್ರ್ಯದ ಹಕ್ಕು ಹೀಗಿದೆ

  1. ವಾಕ್‍ಸ್ವಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ.
  2. ಶಾಂತವಾಗಿ ಸಭೆ ಸೇರುವ ಸ್ವಾತಂತ್ರ್ಯ.
  3. ಸಂಘಸಂಸ್ಥೆಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ.
  4. ದೇಶದ ಎಲ್ಲೆಡೆ ನಿರ್ಬಂಧವಿಲ್ಲದೆ ಸಂಚರಿಸುವ ಸ್ವಾತಂತ್ರ್ಯ.
  5. ಭಾರತದ ಯಾವುದೇ ಭಾಗದಲ್ಲಾದರೂ ವಾಸಿಸುವ ಸ್ವಾತಂತ್ರ್ಯ.
  6. ಯಾವುದೇ ಉದ್ಯೋಗ, ವೃತ್ತಿ, ವ್ಯಾಪಾರ, ವ್ಯವಹಾರ ಮಾಡುವ ಸ್ವಾತಂತ್ರ್ಯ.

ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದ್ದರೂ ಅದನ್ನು ಮನಸ್ಸಿಗೆ ಬಂದಂತೆ ಚಲಾಯಿಸಲು ಸಾಧ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ ರಾಜ್ಯವು ವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳನ್ನು ಹೇರಬಹುದೆಂದು ಸಂವಿಧಾನವೇ ತಿಳಿಸುತ್ತದೆ. ಉದಾ: ವಾಕ್ ಸ್ವಾತಂತ್ರ ಇದೆಯೆಂದು ಮತ್ತೊಬ್ಬರ ಘನತೆಗೆ ಚ್ಯುತಿ ಬರುವಂತೆ ಇಲ್ಲಸಲ್ಲದ ಮಾತುಗಳನ್ನು ಆಡುವಂತಿಲ್ಲ.

3. ಶೋಷಣೆಯ ವಿರುದ್ಧದ ಹಕ್ಕು:

ಬಡವರು, ಮಹಿಳೆಯರು, ಮಕ್ಕಳು ಮತ್ತು ದುರ್ಬಲರನ್ನು ಶೋಷಣೆ ಮಾಡಬಾರದು ಎಂಬುದು ಈ ಹಕ್ಕಿನ ಉದ್ದೇಶ. ಶೋಷಣೆಯನ್ನು ನಿಷೇಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಕಾಯಿದೆಗಳನ್ನು ಜಾರಿಗೆ ತಂದಿವೆ. ಉದಾಹರಣೆಗೆ – ಜೀತಪದ್ಧತಿಯನ್ನು ನಿಷೇಧಿಸಲಾಗಿದೆ; ಗಣಿಗಾರಿಕೆ, ಬೀಡಿ, ಪಟಾಕಿ ತಯಾರಿಕೆಗಳಂತಹ ಅಪಾಯಕಾರಿ ಕೆಲಸಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಮಕ್ಕಳ ದುಡಿಮೆಯನ್ನು ಸರ್ಕಾರ ನಿಷೇಧಿಸಿದೆ. ಅವರು ಹದಿನಾಲ್ಕು ವರ್ಷ ಪ್ರಾಯದವರೆಗೆ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.

4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು:

ಭಾರತದ ಪ್ರಜೆಗಳು ತಮಗೆ ಸರಿಯೆನಿಸುವ, ಇಷ್ಟವಾಗುವ ಧರ್ಮವನ್ನು ಸ್ವೀಕರಿಸುವ ಹಾಗೂ ಅನುಸರಿಸುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಸಾರ್ವಜನಿಕ ಶಾಂತಿ, ಶಿಸ್ತು, ಆರೋಗ್ಯ ಮತ್ತು ನೈರ್ಮಲ್ಯಕ್ಕೆ ದಕ್ಕೆಯಾಗದಂತೆ ಇತರ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ಮತಧರ್ಮವನ್ನು ಆಚರಿಸುವ ಹಕ್ಕು ಎಲ್ಲರಿಗೂ ಇದೆ. ಬಲತ್ಕಾರ, ಮೋಸ ಮತ್ತು ಆಮಿಷಗಳ ಮೂಲಕ ಮತಾಂತರ ಮಾಡಬಾರದು ಎಂದು ಸಂವಿಧಾನದಲ್ಲಿ ಹೇಳಲಾಗಿದೆ.

5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು:

ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ರಕ್ಷಿಸುವುದು ಈ ಮೂಲಭೂತ ಹಕ್ಕಿನ ಉದ್ದೇಶವಾಗಿದೆ. ಯಾವುದೇ ಜನರು ತಮ್ಮ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ರಕ್ಷಿಸುವ ಹಕ್ಕನ್ನು ಪಡೆದಿದ್ದಾರೆ. ಅಲ್ಪಸಂಖ್ಯಾತರಿಗೆ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ, ಆಡಳಿತವನ್ನು ನಡೆಸುವ ಹಕ್ಕು ಇದೆ. ಆದರೆ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾಸಂಸ್ಥೆಗಳು ರಾಜ್ಯದ ನಿಯಮಗಳಿಗೆ ಬದ್ಧವಾಗಿರಬೇಕು.

6 ಸಂವಿಧಾನಬದ್ಧ ಪರಿಹಾರದ ಹಕ್ಕು:

ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಾಗ ನಾಗರಿಕನು ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು. ಈ ಹಕ್ಕನ್ನು `ಸಂವಿಧಾನಬದ್ಧ ಪರಿಹಾರದ ಹಕ್ಕು’ ಎನ್ನುವರು.

ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಾಗ ಅನ್ಯಾಯಕ್ಕೆ ಒಳಪಟ್ಟ ವ್ಯಕ್ತಿ ನೇರವಾಗಿ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಲಯದ ಮೊರೆ ಹೋಗಿ ಪರಿಹಾರ ದೊರಕಿಸಿಕೊಳ್ಳಬಹುದು. ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಇಲ್ಲವೆ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗುವ ಅರ್ಜಿಗಳನ್ನು `ರಿಟ್ ಅರ್ಜಿ’ ಎನ್ನುವರು.

ಮೂಲಭೂತ ಕರ್ತವ್ಯಗಳು

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. `ಕರ್ತವ್ಯ’ ಎಂದರೆ ವ್ಯಕ್ತಿಯು ತನ್ನ ದೇಶಕ್ಕಾಗಿ ಮಾಡಬೇಕಾದ ಹೊಣೆಗಾರಿಕೆಯಾಗಿದೆ. ಪ್ರಜೆಗಳು ತಮ್ಮ ಮೂಲಭೂತ ಕರ್ತವ್ಯಗಳನ್ನು ಸ್ವಯಂಸ್ಫೂರ್ತಿಯಿಂದ ಮಾಡಿದರೆ ದೇಶವು ಅಭ್ಯುದಯ ಸಾಧಿಸುವುದು ಸುಲಭ.

ಸಂವಿಧಾನದಲ್ಲಿ ಹನ್ನೊಂದು ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಗಿದೆ. ಅವುಗಳು ಇಂತಿವೆ.

  1. ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು.
  2. ಸ್ವಾತಂತ್ರ್ಯ ಚಳವಳಿಯ ಉನ್ನತ ಆದರ್ಶಗಳನ್ನು ಪಾಲಿಸುವುದು.
  3. ಭಾರತದ ವಿವಿಧತೆ ಮತ್ತು ಏಕತೆಯನ್ನು ರಕ್ಷಿಸುವುದು.
  4. ದೇಶದ ರಕ್ಷಣೆಗೆ ಮುಂದಾಗುವುದು.
  5. ಭಾರತೀಯರಾದ ನಾವೆಲ್ಲ ಸಹೋದರರು ಎಂಬ ಭಾವನೆಯನ್ನು ಬೆಳೆಸುವುದು.
  6. ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು.
  7. ಪ್ರಾಕೃತಿಕ ಪರಿಸರವನ್ನು ಸಂರಕ್ಷಿಸಿ, ಅಭಿವೃದ್ಧಿ ಪಡಿಸುವುದು.
  8. ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಬೆಳೆಸುವುದು.
  9. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಹಾಗೂ ಹಿಂಸೆಯನ್ನು ತ್ಯಜಿಸುವುದು.
  10. ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ಪ್ರಾವೀಣ್ಯತೆ ಪಡೆದು ದೇಶದ ಪ್ರಗತಿಗೆ ಶ್ರಮಿಸುವುದು.
  11. 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಹೆತ್ತವರು ಅಥವಾ ಪೆÇೀಷಕರು ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡುವುದು.

ಪ್ರಜೆಯು ತನ್ನ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸದಿದ್ದರೆ ಸರ್ಕಾರವು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಆದರೂ ದೇಶದ ಎಲ್ಲ ಪ್ರಜೆಗಳು ಸ್ವಯಂಸ್ಫೂರ್ತಿಯಿಂದ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಬೇಕು.

Samveda 6 KM SS 35 Social 6th Maanava hakugalu
Social Science| ಮೂಲ ಭೂತ ಹಕ್ಕುಗಳು ಮತ್ತು ಕರ್ತವ್ಯಗಳು| |ಆರನೆ ತರಗತಿ|Chapter18
6th class social science ch-19 notes kannada medium ಮಾನವ ಹಕ್ಕುಗಳು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು