ಕೃಷಿ ಅಧ್ಯಯನ 2025-26
ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯಿತ ವ್ಯಾಪ್ತಿಯ ಹುಲ್ಕುತ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇಕೋ ಕ್ಲಬ್ ನ ಅಡಿಯಲ್ಲಿ ಗದ್ದೆ ಕೊಯ್ಲು ಮಾಡಿದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ತಾವೇ ನಾಟಿ ಮಾಡಿದ ಸಸಿಯನ್ನು ಕೊಯ್ಲು ಮಾಡುವ ಮೂಲಕ ಸಂಪೂರ್ಣ ಕೃಷಿ ಅಧ್ಯಯನ ನಡೆಸಿದರು.

ಪ್ರತಿ ವರ್ಷ ಕೃಷಿ ಅಧ್ಯಯನ ನಡೆಸುವ ಈ ಶಾಲೆಯ ವಿದ್ಯಾರ್ಥಿಗಳು ಈ ವರ್ಷ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೊಡಗಿನ ಕೆ ಎಚ್ ಬಿ 11 ಭತ್ತದ ತಳಿಯನ್ನು ನಾಟಿ ಮಾಡಿದ್ದರು. ವಂದಾನೆಯ ಪ್ರಗತಿಪರ ಕೃಷಿಕ ನಾಗರಾಜ ಶ್ರೀನಿವಾಸ ಶಾನಭಾಗ ಭತ್ತದ ಬೀಜ ನೀಡಿ ಮಕ್ಕಳ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದರು. ಬಿಳಗಿಯ ಪ್ರಗತಿಪರ ಕೃಷಿಕ ರವಿಲೋಚನ ಮಡಗಾಂವಕರ ಮಾರ್ಗದರ್ಶನ ನೀಡಿದ್ದರು.

ಇದು ಸಣ್ಣಕ್ಕಿ ಆಗಿದ್ದು, ಪೈರು ಸರಾಸರಿ 98 ಸೆಂ.ಮೀ. ನಿಂದ 113 ಸೆಂ.ಮೀ. ವರೆಗೆ ಎತ್ತರವಾಗಿ ಬೆಳೆದು ಅಧಿಕ ಇಳುವರಿಯನ್ನು ನೀಡುತ್ತದೆ. ಮಲೆನಾಡಿನ ಇಲ್ಲಿನ ಮಣ್ಣಿಗೆ ಸರಿಯಾಗಿ ಹೊಂದಾಣಿಕೆ ಆಗುತ್ತದೆ. ಅಲ್ಲದೆ ಉತ್ತಮ ಗುಣಮಟ್ಟದ ಅನ್ನವನ್ನು ಪಡೆಯಬಹುದಾಗಿದೆ. ಮಕ್ಕಳು ನಾಟಿ ಮಾಡಿದ ಈ ಸಸಿಯ ಪೈರಿನಲ್ಲಿ ಸರಾಸರಿ 182 ಭತ್ತದ ಕಾಳುಗಳು ಇದ್ದವು.

ಒಟ್ಟಿನಲ್ಲಿ ಈ ಭಾಗದ ರೈತರಿಗೆ ಕೊಡಗಿನ ಹೈಬ್ರೀಡ್ ತಳಿಯನ್ನು ಪರಿಚಯಿಸುತ್ತ ಕೃಷಿಯನ್ನು ಪ್ರಾಯೋಗಿಕವಾಗಿ ಅಧ್ಯಯನ ಮಾಡಿದ್ದಾರೆ. ಅಂದಾಜು 4 ಗುಂಟೆ ಕ್ಷೇತ್ರದಲ್ಲಿ ತುಂಬಾ ಸಲೀಸಾಗಿ ಶಾಲೆಯ 5 ರಿಂದ 7ನೇ ತರಗತಿಯ 17 ವಿದ್ಯಾರ್ಥಿಗಳು ಒಂದುವರೆ ತಾಸಿನಲ್ಲಿ ಕೊಯ್ಲು ಕಾರ್ಯ ಮಾಡಿ ತಮ್ಮ ಕೃಷಿ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

ಸ್ಥಳದಲ್ಲಿ ಹೆಮಜೆನಿಯ ಹಿರಿಯರಾದ ಲಕ್ಷ್ಮಣ ಭೈರ್ಯ ಗೌಡ ಕತ್ತಿ ಹಾಗೂ ಪೈರಿಗೆ ಪೂಜೆ ಸಲ್ಲಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು. ಲೋಕೇಶ ಪದ್ಮನಾಭ ಗೌಡ, ಜಗದೀಶ ಪದ್ಮನಾಭ ಗೌಡ ಹಾಗೂ ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಉಪಸ್ಥಿತರಿದ್ದರು.
* * * * * * *
