ವಿಜಯನಗರ ಸಾಮ್ರಾಜ್ಯ ಹಾಗೂ ಬಹಮನಿ ರಾಜ್ಯ – ಅಧ್ಯಾಯ 14
ಪಾಠದ ಪರಿಚಯ
ದಿಲ್ಲಿ ಸುಲ್ತಾನರ ಸೈನಿಕ ಕಾರ್ಯಾಚರಣೆಗಳಿಂದಾಗಿ ದಕ್ಷಿಣ ಭಾರತದ ಸೇವುಣ (ಮಹಾರಾಷ್ಟ್ರ), ಹೊಯ್ಸಳ (ಕರ್ನಾಟಕ), ಕಾಕತೀಯ (ತೆಲಂಗಾಣ) ಮತ್ತು ಪಾಂಡ್ಯ (ತಮಿಳುನಾಡು) ರಾಜ್ಯಗಳು ಅಳಿದವು. ಬಲಿಷ್ಠವಾದ ರಾಜಸತ್ತೆಯಿಲ್ಲದೆ ಜನಜೀವನ, ಸಂಸ್ಕೃತಿ ಏರುಪೇರಾಯಿತು. ಇಂಥ ತವಕತಲ್ಲಣದ ಕಾಲಘಟ್ಟದಲ್ಲಿ ದಕ್ಷಿಣ ಭಾರತದ ಹಿತರಕ್ಷಣೆಗಾಗಿ ವಿಜಯನಗರ ಸಾಮ್ರಾಜ್ಯವು ಉದಯಗೊಂಡು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಣೆ ಹಾಗೂ ಪೋಷಣೆ ಮಾಡಿತು. ಸಾಮ್ರಾಜ್ಯವು ಮೂರು ಶತಮಾನಗಳ ಕಾಲ (ಸಾ.ಶ. 1336-1646) ವೈಭವದಿಂದ ಮೆರೆಯಿತು.
ಈ ಅಧ್ಯಾಯದಲ್ಲಿ ವಿಜಯನಗರದ ಪ್ರಮುಖ ರಾಜರ ಸಾಧನೆಗಳು ಮತ್ತು ಸಾಮ್ರಾಜ್ಯದ ಅವನತಿಗೆ ಕಾರಣವಾದ ರಕ್ಕಸತಂಗಡಿ ಕದನ (ಸಾ.ಶ. 1565) ಹಾಗೂ ಅದರ ಪರಿಣಾಮಗಳನ್ನು ನಿರೂಪಿಸಲಾಗಿದೆ. ಜೊತೆಗೆ ಸಾಮ್ರಾಜ್ಯವು ಸಾಹಿತ್ಯ, ಕಲೆಗಳಿಗೆ ನೀಡಿರುವ ಕೊಡುಗೆಯನ್ನು ವಿವರಿಸಲಾಗಿದೆ.
ವಿಜಯನಗರ ಸಾಮ್ರಾಜ್ಯವು ಸ್ಥಾಪನೆಯಾದ (ಸಾ.ಶ. 1336) ಅಲ್ಪಕಾಲದಲ್ಲೇ ಬಹಮನಿ ರಾಜ್ಯವು ಉದಯಿಸಿತು (ಸಾ.ಶ. 1347). ಕೃಷ್ಣಾನದಿ ಈ ಎರಡೂ ರಾಜ್ಯಗಳ ಸಮಾನ ಎಲ್ಲೆ – ಕೃಷ್ಣೆಯ ಉತ್ತರದಲ್ಲಿ ಬಹಮನಿ ರಾಜ್ಯವಿದ್ದರೆ ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯವಿದ್ದಿತು. ಉತ್ತರದಲ್ಲಿ ಕೃಷ್ಣ ಮತ್ತು ದಕ್ಷಿಣದಲ್ಲಿ ತುಂಗಭದ್ರಾ ನದಿಗಳ ನಡುವಿನ ಪ್ರದೇಶವೇ ಫಲವತ್ತಾದ ರಾಯಚೂರು ದೋಅಬ್. ಈ ದೋಅಬ್ಗಾಗಿ ಎರಡೂ ಸಾಮ್ರಾಜ್ಯಗಳು ನಿರಂತರವಾಗಿ ಯುದ್ಧಗಳನ್ನು ನಡೆಸಿದ್ದವು. ಕಾಲಗತಿಯಲ್ಲಿ ಅಧಿಕಾರಕ್ಕಾಗಿ ಬಹಮನಿ ರಾಜ್ಯದಲ್ಲಿ ಅಂತಃಕಲಹಗಳು ನಡೆದು ಅದು ವಿಭಜನೆಗೊಂಡಿತು (ಸಾ.ಶ. 1489). ಅದೇ ಪ್ರದೇಶದಲ್ಲಿ ಐದು ಷಾಹಿ ಮನೆತನಗಳು ತಲೆಯೆತ್ತಿದವು. ಅವುಗಳಲ್ಲಿ ವಿಜಯಪುರದ ಆದಿಲ್ ಷಾಹಿಗಳು ಪ್ರಮುಖರು.
ಈ ಅಧ್ಯಾಯದಲ್ಲಿ ಬಹಮನಿ ರಾಜ್ಯದ ಸುಲ್ತಾನ್ ಫಿರೋಜ್ಷಾ ಹಾಗೂ ಆತನ ಪ್ರಸಿದ್ಧ ಮಂತ್ರಿ ಮೊಹಮ್ಮದ್ ಗವಾನನ ಸಾಧನೆಗಳನ್ನು ವಿವರಿಸಲಾಗಿದೆ. ಇದರೊಂದಿಗೆ ಬಹಮನಿ ರಾಜ್ಯದ ಮತ್ತು ಆದಿಲ್ಷಾಹಿಗಳ ಅವಿಸ್ಮರಣೀಯ ಕೊಡುಗೆಗಳನ್ನು ವರ್ಣಿಸಲಾಗಿದೆ.

ವಿಜಯನಗರ ಸಾಮ್ರಾಜ್ಯದ ಭೂಪಟವನ್ನು ನೋಡಿ. ಸಾಮ್ರಾಜ್ಯವು ಎಷ್ಟೊಂದು ವಿಶಾಲವಾಗಿದೆಯಲ್ಲವೇ? ಆ ಕಾಲದ ಜಗತ್ತಿನ ಬೃಹತ್ ಸಾಮ್ರಾಜ್ಯಗಳ ಪೈಕಿ ಅದು ಒಂದಾಗಿತ್ತು.
ದಿಲ್ಲಿ ಸುಲ್ತಾನರ ಸೈನಿಕ ಆಕ್ರಮಣಗಳ ಪರಿಣಾಮವಾಗಿ ದಕ್ಷಿಣ ಭಾರತದ ಗಣ್ಯರಾಜ್ಯಗಳು ಅಳಿದವು. ಇಲ್ಲಿನ ಧಾರ್ಮಿಕ, ಆರ್ಥಿಕ ಮತ್ತು ಸಾಮಾಜಿಕ ಜೀವನ ಅವನತಿ ಕಂಡಿತು. ಇಂತಹ ಸಂಕಟ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವು ಸ್ಥಾಪನೆಗೊಂಡು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸಿತು. ಸರ್ವಧರ್ಮಸಮಭಾವದಿಂದ ಸುಮಾರು ಮೂರು ಶತಮಾನಗಳ ಕಾಲ ಆಳ್ವಿಕೆ ನಡೆಸಿತು. ವಿಜಯನಗರ ಜಿಲ್ಲೆಯ ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇದು 1336ರಲ್ಲಿ ತುಂಗಾಭದ್ರ ನದಿಯ ದಕ್ಷಿಣ ದಡದ ಮೇಲೆ ಸ್ಥಾಪನೆಯಾಯಿತು.

ಹರಿಹರ ಮತ್ತು ಬುಕ್ಕ
ಸಂಗಮ ಎಂಬಾತನ ಪುತ್ರರು ತುಂಗಾಭದ್ರಾ ನದಿಯ ದಕ್ಷಿಣ ದಂಡೆಯ ಮೇಲೆ ಸಾಮ್ರಾಜ್ಯದ ಅಡಿಪಾಯ ಹಾಕಿದರು.
ಹರಿಹರ, ಬುಕ್ಕ, ಕಂಪಣ, ಮಾರಪ್ಪ ಮತ್ತು ಮುದ್ದಪ್ಪ ಇವರೇ ಸಂಗಮ ಸಹೋದರರು. ಸಾಮ್ರಾಜ್ಯವನ್ನು ಸಂಗಮ, ಸಾಳುವ, ತುಳುವ ಮತ್ತು ಅರವೀಡು ರಾಜವಂಶದ ರಾಜರು ಆಳಿದರು. ವರಾಹ ವಿಜಯನಗರದ ರಾಜಲಾಂಛನ. ಕುಲದೇವರು ಶ್ರೀವಿರೂಪಾಕ್ಷ. `ಹಿಂದೂರಾಯ ಸುರತ್ರಾಣ’ ಎಂಬುದು ಅರಸರ ಬಿರುದು.
ಹರಿಹರ ಮತ್ತು ಬುಕ್ಕ ವಿಜಯನಗರದ ಮೊದಲ ಇಬ್ಬರು ಅರಸರು. ಹರಿಹರನು ಹಂಪಿಯಲ್ಲಿ ಹೊಸ ರಾಜಧಾನಿಯನ್ನು ಕಟ್ಟಲು ಪ್ರಾರಂಭಿಸಿದನು.
ಹರಿಹರನ ಆಳ್ವಿಕೆಯ ಕಾಲದಲ್ಲೇ ಬಹಮನಿ ರಾಜ್ಯವು ಸ್ಥಾಪನೆಗೊಂಡಿತು. ಅಂದಿನಿಂದ ವಿಜಯನಗರದ ಅರಸರು ಮತ್ತು ಬಹಮನಿ ಸುಲ್ತಾನರ ನಡುವೆ ಆಗಾಗ ಯುದ್ಧಗಳು ನಡೆದವು.
ಪ್ರೌಢದೇವರಾಯ (ಎರಡನೆಯ ದೇವರಾಯ ಸಾ.ಶ. 1424 – 1446)
ಸಂಗಮ ವಂಶದ ಪ್ರಸಿದ್ಧ ದೊರೆಯಾಗಿದ್ದ ಪ್ರೌಢದೇವರಾಯನ ಆಳ್ವಿಕೆಯು ವಿಜಯನಗರದ ಮಹತ್ವಪೂರ್ಣ ಕಾಲವಾಗಿದೆ. ಸಾಮ್ರಾಜ್ಯದ ಕೀರ್ತಿ ಎಲ್ಲೆಡೆ ಹರಡಿತು. ಆಂತರಿಕ ನೆಮ್ಮದಿ, ಸಮೃದ್ಧಿ ನೆಲೆಸಿತು. ವಾಣಿಜ್ಯವು ವೃದ್ಧಿಯಾಯಿತು.
ಪ್ರೌಢದೇವರಾಯನು ಗಡಿಪ್ರದೇಶದ ನಾಯಕರುಗಳ ದಂಗೆಯನ್ನು ಹತ್ತಿಕ್ಕಿದನು. ಸುಲ್ತಾನರ ವಿರುದ್ಧ ಹೋರಾಡಿ ಸಾಮ್ರಾಜ್ಯವನ್ನು ವಿಸ್ತರಿಸಿದನು. ಅಶ್ವಾರೋಹಿ ಮಹಮ್ಮದೀಯರನ್ನು ಸೈನ್ಯಕ್ಕೆ ಸೇರಿಸಿಕೊಂಡನು. ಪರ್ಷಿಯ ದೇಶದ ರಾಯಭಾರಿ ಅಬ್ದುಲ್ ರಜಾಕ್, “ಇಡೀ ಭಾರತದಲ್ಲಿ ದೇವರಾಯನಂಥ ಅರಸನಿಲ್ಲ”, ಎಂದು ಹೇಳಿರುವನಲ್ಲದೆ, “ರಾಯನ ಸೇನೆ ಲಕ್ಷಾವಧಿ ಸಂಖ್ಯೆಯಲ್ಲಿದೆ”, ಎಂದಿದ್ದಾನೆ.
2ನೇ ದೇವರಾಯನು ಸಮರ್ಥ ಆಡಳಿತಗಾರ, ಧೀರ ಯೋಧ ಹಾಗೂ ವಿದ್ವಾಂಸನಾಗಿದ್ದನು. ಹಂಪಿಯ ಮನಮೋಹಕ ಹಜಾರ ರಾಮಸ್ವಾಮಿ ದೇವಾಲಯವನ್ನು ಕಟ್ಟಿಸಿದವನು ಈತನೇ. ಪರಧರ್ಮಸಹಿಷ್ಣುತೆ ದೇವರಾಯನ ಧರ್ಮನೀತಿಯಾಗಿತ್ತು. ಇವನು ರಾಜಧಾನಿಯಲ್ಲಿ ಮಸೀದಿಯನ್ನು ನಿರ್ಮಿಸಿದನು. ಈತನ ಕಾಲದಲ್ಲಿ ಜೈನ ಮತ್ತು ವೈಷ್ಣವ ದೇವಾಲಯಗಳು ನಿರ್ಮಾಣಗೊಂಡವು. ವೀರಶೈವ ಪಂಥ ಏಳಿಗೆ ಕಂಡಿತು. ಕನ್ನಡ ಮತ್ತು ಸಂಸ್ಕøತ ಭಾಷೆಗಳಲ್ಲಿ ವಿಪುಲವಾದ ಸಾಹಿತ್ಯ ರಚನೆಯಾಯಿತು.
ಸಾಳ್ವ ವಂಶ (ಸಾ.ಶ. 1485 – 1505)
ಸಾ.ಶ. 1485ರಲ್ಲಿ ಅಧಿಕಾರಕ್ಕೆ ಬಂದ ಸಾಳ್ವ ನರಸಿಂಹನು ದುರ್ಬಲವಾಗಿದ್ದ ಸಂಗಮ ವಂಶದ 3ನೇ ವಿರೂಪಕ್ಷನಿಂದ ರಾಜಧಾನಿ ವಶಪಡಿಸಿಕೊಂಡು 6 ವರ್ಷಗಳ ಕಾಲ ಆಡಳಿತ ನಡೆಸಿದನು.
ತುಳುವ ವಂಶ (ಸಾ.ಶ. 1505 – 1567)
ಸಾಳ್ವ ನರಸಿಂಹನ ಮಕ್ಕಳು ಅಪ್ತಾಪ್ತನಾಗಿದ್ದ ಕಾರಣ ಸೇನಾನಿಯಾಗಿದ್ದ ತುಳುವ ನರಸನಾಯಕನ ವಶವಾಯಿತು. ಇವನು ಸಾ.ಶ. 1509ರಲ್ಲಿ ಮರಣ ಹೊಂದಿದ ನಂತರ ಆತನ ಸೋದರ ಕೃಷ್ಣದೇವರಾಯ ಅಧಿಕಾರಕ್ಕೆ ಬಂದನು.
ಕೃಷ್ಣದೇವರಾಯ (ಸಾ.ಶ. 1509 – 1529)
ತುಳುವ ವಂಶದ ಕೃಷ್ಣದೇವರಾಯ – ಘನವಂತ ಚಕ್ರವರ್ತಿ ಹಾಗೂ ಮಹಾಶೂರ. ಈತನ ಕಾಲದಲ್ಲಿ ಸಾಮ್ರಾಜ್ಯದ ಎಲ್ಲೆಗಳು ಉತ್ತರದಲ್ಲಿ ಕೃಷ್ಣಾ ನದಿಯವರೆಗೂ ಉಳಿದೆಡೆ ಸಮುದ್ರ ತೀರಗಳವರೆಗೂ ವ್ಯಾಪಿಸಿದ್ದುವು.

ಸಾಧನೆಗಳು: ಕೃಷ್ಣದೇವರಾಯನು ಉತ್ತಮ ಆಡಳಿತಗಾರನಾಗಿದ್ದನು. ಸರ್ಕಾರದ ಆದಾಯದ ಕಾಲು ಭಾಗವನ್ನು ದಾನಧರ್ಮ ಮತ್ತು ಜನಕಲ್ಯಾಣ ಕಾರ್ಯಕ್ಕಾಗಿ ಬಳಸುತ್ತಿದ್ದನು. ಇವನ ಕಾಲದಲ್ಲಿ ಕೃಷಿ ಮತ್ತು ವ್ಯಾಪಾರ ಅಭಿವೃದ್ಧಿ ಹೊಂದಿದವು ಮತ್ತು ವಸ್ತುಗಳು ಅಗ್ಗವಾಗಿದ್ದುವು.
ಕೃಷ್ಣದೇವರಾಯನು ಸಂಸ್ಕೃತ ಮತ್ತು ತೆಲುಗು ಭಾಷೆಗಳಲ್ಲಿ ವಿದ್ವಾಂಸನಾಗಿದ್ದನು. ಈತನು ತೆಲುಗಿನಲ್ಲಿ ಅಮುಕ್ತ ಮೌಲ್ಯದ” ಮತ್ತು ಸಂಸ್ಕೃತದಲ್ಲಿ ಜಾಂಬವತಿ ಕಲ್ಯಾಣ” ಎಂಬ ನಾಟಕಗಳನ್ನು ರಚಿಸಿದನು. “ಕನ್ನಡ ರಾಜ್ಯರಮಾರಮಣ” ಎಂಬುದು ಈತನ ಬಿರುದು.
ರಾಮರಾಯ
ಬಹುಕಾಲ ವೈಭವದಿಂದ ಮೆರೆದ ವಿಜಯನಗರ ಸಾಮ್ರಾಜ್ಯವು ಕೃಷ್ಣದೇವರಾಯನ ಆಳ್ವಿಕೆಯ ಅನಂತರ ದುರ್ಬಲಗೊಂಡಿತು. ಸಾಮ್ರಾಜ್ಯವನ್ನು ಮತ್ತೊಮ್ಮೆ ವೈಭವಕ್ಕೇರಿಸಿದ ಕೀರ್ತಿ ಕೃಷ್ಣದೇವರಾಯನ ಅಳಿಯನಾದ ರಾಮರಾಯನಿಗೆ ಸಲ್ಲುತ್ತದೆ. ಈತನು ಸಮರ್ಥ ಸೇನಾನಿ ಹಾಗೂ ಉತ್ತಮ ಆಡಳಿತಗಾರನಾಗಿದ್ದನು.
ರಕ್ಕಸತಂಗಡಿ ಯುದ್ಧ
ಕಾರಣ: ಈ ಮಧ್ಯೆ ಬಹಮನಿ ರಾಜ್ಯವು ದುರ್ಬಲಗೊಳ್ಳುತ್ತ ಐದು ರಾಜ್ಯಗಳಾಗಿ ವಿಂಗಡಣೆ ಗೊಂಡವು. ಈ ರಾಜ್ಯಗಳ ಸುಲ್ತಾನರು ತಮ್ಮ ಒಳಜಗಳಗಳಲ್ಲಿ ಪಾಲ್ಗೊಳ್ಳಲು ರಾಮರಾಯನನ್ನು ಆಮಂತ್ರಿಸಿದರು. ಇದರ ಲಾಭವನ್ನು ಪಡೆದು ರಾಮರಾಯನು ಸಾಮ್ರಾಜ್ಯವನ್ನು ಕೃಷ್ಣೆಯ ಉತ್ತರಕ್ಕೂ ವಿಸ್ತರಿಸಿದನು. ಇದು ಕದನಕ್ಕೆ ಪ್ರಚೋದನೆ ನೀಡಿತು. ಜೊತೆಗೆ ಷಾಹಿ ಸುಲ್ತಾನರು ವಿಜಯನಗರದ ಸಮೃದ್ಧಿಯ ಬಗ್ಗೆ ಮತ್ಸರ ಪಟ್ಟರು. ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಅವರು ಒಂದಾದರು. ಸುಲ್ತಾನರ ಒಕ್ಕೂಟ ವಿಜಯನಗರದ ವಿರುದ್ಧ ಯುದ್ಧ ಸಾರಿತು. ಈ ಯುದ್ಧವನ್ನು ರಕ್ಕಸತಂಗಡಿ ಕದನ ಎನ್ನುವರು. ದಕ್ಷಿಣ ಭಾರತದ ಇತಿಹಾಸದಲ್ಲೇ ಅತಿ ಭೀಕರವಾದ ಕದನ ಇದಾಗಿತ್ತು. ಈ ಕದನದ ರಣರಂಗವು ಕೃಷ್ಣಾತೀರದ ರಕ್ಕಸಗಿ ಮತ್ತು ತಂಗಡಗಿ ಎಂಬ ಗ್ರಾಮಗಳ ನಡುವೆ ಇತ್ತು.
ವಯಸ್ಸು ಎಂಬತ್ತಾದರೂ ರಾಮರಾಯನು ಆತ್ಮವಿಶ್ವಾಸದಿಂದ ವೈರಿಗಳನ್ನು ಎದುರಿಸಿದನು. ಯುದ್ಧದ ಮೊದಲ ಹಂತದಲ್ಲಿ ವಿಜಯನಗರವೇ ಗೆದ್ದಿತು. ಆದರೆ ವೈರಿಗಳಿಂದ ಒಮ್ಮೆಗೇ ಆದ ತೋಪಿನ ಹೊಡೆತದಿಂದ ವಿಜಯನಗರದ ಸೇನೆ ದಿಕ್ಕಾಪಾಲಾಯಿತು. ಈ ನಡುವೆ ರಾಮರಾಯನ ದಳಪತಿಗಳಿಬ್ಬರು ತಮ್ಮ ಕೈಕೆಳಗಿದ್ದ ಸೈನಿಕ ಪಡೆಯೊಂದಿಗೆ ಶತ್ರುಗಳ ಜೊತೆಗೂಡಿ ದ್ರೋಹಗೈದರು. ರಾಮರಾಯನ ಕೊಲೆ ನಡೆಯಿತು. ವಿಜಯನಗರದ ಸೈನಿಕರು ರಣರಂಗದಿಂದ ಕಾಲ್ಕಿತ್ತರು.
ರಾಮರಾಯನ ತಮ್ಮ ತಿರುಮಲನು ರಾಜಧಾನಿಗೆ ಧಾವಿಸಿ, ಅಪಾರ ಸಂಪತ್ತನ್ನು ಆನೆಗಳ ಮೇಲೆ ಹೇರಿಕೊಂಡು ಆಂಧ್ರಪ್ರದೇಶದ ಪೆನುಗೊಂಡದತ್ತ ಧಾವಿಸಿದನು. ರಕ್ಷಕರಿಲ್ಲದ ರಾಜಧಾನಿ ಶತ್ರುಗಳ ವಶವಾಯಿತು. ಸುಲ್ತಾನರ ಸೈನ್ಯವು ವಿಜಯನಗರದ ಸಂಪತ್ತನ್ನು ಕೊಳ್ಳೆ ಹೊಡೆಯಿತು. ಮುಂದೆ ಪೆನುಗೊಂಡ, ಚಂದ್ರಗಿರಿ, ಕೊನೆಗೆ ವೆಲ್ಲೂರು ಇವನ್ನು ರಾಜಧಾನಿ ಮಾಡಿಕೊಂಡು ಅರವೀಡು ವಂಶದ ಆಡಳಿತ ಸಾ.ಶ. 1646ರವರೆಗೆ ನಡೆಯಿತು.
ಪರಿಣಾಮಗಳು: ವಿಜಯನಗರ ಸಾಮ್ರಾಜ್ಯದ ಅವನತಿಯಿಂದಾಗಿ ದಕ್ಷಿಣ ಭಾರತದಲ್ಲಿ ಅನೇಕ ಮಹತ್ವದ ರಾಜಕೀಯ ಬದಲಾವಣೆಗಳಾದವು. ಸಾಮ್ರಾಜ್ಯದ ಉತ್ತರ ಭಾಗವು ವಿಜಯಪುರ ಮತ್ತು ಗೋಲ್ಕೊಂಡ ರಾಜ್ಯಗಳ ವಶವಾದವು. ಕರ್ನಾಟಕದಲ್ಲಿ ಕೆಳದಿ, ಮೈಸೂರು, ಚಿತ್ರದುರ್ಗ ಮುಂತಾದ ಸಾಮಂತರಾಜರು ಸ್ವತಂತ್ರರಾದರು.
ಪ್ರವಾಸಿಗರು ಕಂಡ ರಾಜಧಾನಿಯ ವೈಭವ:
ವಿಜಯನಗರ ರಾಜಧಾನಿ ಹಂಪೆಗೆ ಬಂದಿದ್ದ ಅನೇಕ ಮಂದಿ ವಿದೇಶಿ ಯಾತ್ರಿಕರು ಅಲ್ಲಿನ ವೈಭವ ಹಾಗೂ ಆರ್ಥಿಕ ಸಮೃದ್ಧಿಯನ್ನು ಮನಸಾರೆ ಕೊಂಡಾಡಿದ್ದಾರೆ.
* ರಾಜಧಾನಿಯನ್ನು ಕುರಿತು ಪೋರ್ಚುಗೀಸ್ ಯಾತ್ರಿಕ ಡೊಮಿಂಗೋ ಪಾಯಿಸ್, “ಎಲ್ಲ ಬಗೆಯ ಸರಕುಗಳಿಂದ ಸಮೃದ್ಧವಾದ ಇಂಥ ನಗರಿಯು ಭೂಮಂಡಲದ ಮೇಲೆ ಬೇರೊಂದೆಡೆ ಇಲ್ಲ” ಎಂದಿದ್ದಾನೆ. ಎಲ್ಲಾ ನಮೂನೆಯ ಮುತ್ತು, ಮಾಣಿಕ್ಯ ರತ್ನ, ಪಚ್ಚೆ, ಇಂದ್ರನೀಲ, ಬೆಲೆಯುಳ್ಳ ಬಟ್ಟೆ ಮುಂತಾದವು ಇಲ್ಲಿ ದೊರೆಯುತ್ತಿದ್ದವು ಎಂಬುದಾಗಿ ಬರೆದಿದ್ದಾನೆ.
* ರಾಜಧಾನಿಯನ್ನು ಸಂದರ್ಶಿಸಿದ್ದ ಪರ್ಷಿಯ (ಇರಾನ್) ದೇಶದ ರಾಯಭಾರಿ ಅಬ್ದುಲ್ ರಜಾಕ್ ದೇವರಾಯನ ಘನತೆಯನ್ನು ಮನಸಾರೆ ಕೊಂಡಾಡಿದ್ದಾನೆ. “ಭೂಮಂಡಲದ ಮೇಲೆ ವಿಜಯನಗರದಂತಹ ಇನ್ನೊಂದು ನಗರವನ್ನು ಕಣ್ಣುಗಳು ನೋಡಿಲ್ಲ, ಕಿವಿಗಳು ಕೇಳಿಲ್ಲ”, ಎಂದು ಉದ್ಗರಿಸಿದ್ದಾನೆ.
ಸಮಾಜ, ಆರ್ಥಿಕತೆ ಮತ್ತು ಸಂಸ್ಕೃತಿ:
ಸಮಾಜ: ಗ್ರಾಮಸಭೆಯಲ್ಲಿ ಎಲ್ಲ ಜಾತಿಯ ಸದಸ್ಯರಿಗೆ ಪ್ರಾತಿನಿಧ್ಯವಿತ್ತು. ಪಟ್ಟಣಗಳಲ್ಲಿ ಹಂಜಮಾನ (ಹಂಜಮಾನ ಎನ್ನುವುದು ಮಧ್ಯಕಾಲಿನ ಕರ್ನಾಟಕದ ವ್ಯಾಪಾರಿ ಗುಂಪು) ಎಂಬ ಮುಸಲ್ಮಾನರ ಸಂಸ್ಥೆಯಿದ್ದು ಅವರ ಪ್ರತಿನಿಧಿಗಳಿಗೆ ನಗರದ ಗಣ್ಯರ ಸಭೆಯಲ್ಲಿ ಸ್ಥಾನಮಾನವಿತ್ತು.
ಸ್ತ್ರೀಯರು ರಾಣಿವಾಸದೊಳಗಿನ ಲೆಕ್ಕಪತ್ರ ಬರೆಯುವುದು, ಕಾವಲು ಕೆಲಸ, ರಾಜರಾಣಿಯರ ಸೇವೆ ಮುಂತಾದವುಗಳನ್ನು ಮಾಡುತ್ತಿದ್ದರು. ಸಾರ್ವಜನಿಕ ಪ್ರದರ್ಶನಗಳನ್ನು ನೀಡುತ್ತಿದ್ದ ಜಟ್ಟಿಗಿತ್ತಿಯರೂ ವಿಜಯನಗರದಲ್ಲಿದ್ದರು. ಜನಪ್ರಿಯವಾಗಿದ್ದ ನವರಾತ್ರಿ ಉತ್ಸವವನ್ನು ರಾಜಧಾನಿಯ ಮಹಾನವಮಿ ದಿಬ್ಬದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು.
ಆರ್ಥಿಕತೆ: ಕೃಷಿಯೇ ಬಹುತೇಕ ಜನರ ಉದ್ಯೋಗವಾಗಿತ್ತು. ವಿಜಯನಗರವು ಅಂತಾರಾಷ್ಟ್ರೀಯ ವ್ಯಾಪಾರದ ಕೇಂದ್ರವಾಗಿತ್ತು. ಜಗತ್ತಿನ ನಾನಾ ಕಡೆಯ ವ್ಯಾಪಾರಿಗಳೂ ಇಲ್ಲಿಗೆ ಬರುತ್ತಿದ್ದರು. ಅಂಗಡಿಗಳಲ್ಲಿ ಮುತ್ತು ರತ್ನಗಳನ್ನು ರಾಶಿರಾಶಿಯಾಗಿ ಮಾರುತ್ತಿದ್ದರೆಂದು ವಿದೇಶಿ ಪ್ರವಾಸಿಗಳು ವರ್ಣಿಸಿದ್ದಾರೆ. ಸಾಮ್ರಾಜ್ಯದ ಪಶ್ಚಿಮ ಹಾಗೂ ಪೂರ್ವ ಕರಾವಳಿಗಳಲ್ಲಿದ್ದ ಹಲವಾರು ಬಂದರುಗಳ ಮೂಲಕ ಸರಕುಗಳನ್ನು ರಫ್ತು ಮತ್ತು ಆಮದು ಮಾಡಲಾಗುತ್ತಿತ್ತು.
ಧರ್ಮ: ಎಲ್ಲಾ ಮತಧರ್ಮಗಳು ಸಾಮ್ರಾಜ್ಯದಿಂದ ದಾನದತ್ತಿ ಪಡೆಯುತ್ತಿದ್ದವು. ಯಾರಿಗೇ ಆಗಲಿ ತಮ್ಮ ಮತವನ್ನು ಅಡಚಣೆ ಇಲ್ಲದೇ ಆಚರಿಸುವ ಸ್ವಾತಂತ್ರ್ಯವನ್ನು ಅರಸರು ನೀಡಿದ್ದರು. ವಿಜಯನಗರದಲ್ಲಿ ಮುಸ್ಲಿಮರಿಗಾಗಿ ಮಸೀದಿಗಳನ್ನು ಕಟ್ಟಿಸಲಾಯಿತು. ಅವರನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲಾಗಿತ್ತು. ಪೋರ್ಚುಗೀಸರ ಸಂಗಡ ವ್ಯಾಪಾರ ವೃದ್ಧಿಸಿಕೊಂಡ ವಿಜಯನಗರದ ಅರಸರು ಕ್ರೈಸ್ತ ಧರ್ಮಕ್ಕೂ ಪ್ರೋತ್ಸಾಹಕೊಟ್ಟರು.
ಸಾಹಿತ್ಯ: ವಿಜಯನಗರ ಕಾಲದಲ್ಲಿ ಸಂಸ್ಕøತ, ಕನ್ನಡ ಮತ್ತು ತೆಲಗು ಸಾಹಿತ್ಯ ಸಮೃದ್ಧವಾಗಿ ಬೆಳೆಯಿತು. ಕನ್ನಡದ ಶ್ರೇಷ್ಠ ಕವಿಗಳಾದ ಕುಮಾರವ್ಯಾಸ, ಚಾಮರಸ ಮತ್ತು ರತ್ನಾಕರವರ್ಣಿ ಇದೇ ಕಾಲದವರು. ವಿಜಯನಗರ ಕಾಲವು ತೆಲುಗು ಸಾಹಿತ್ಯದ “ಸುವರ್ಣಯುಗ”ವಾಗಿತ್ತು.
ಕುಮಾರವ್ಯಾಸ (ನಾರಣಪ್ಪ) ರಸಾವೇಶದಿಂದ ಕೂಡಿದ ಕವಿ. ಕರ್ಣಾಟಭಾರತ ಕಥಾಮಂಜರಿ’ ಈತನ ಕೃತಿ. ಚಾಮರಸನಪ್ರಭುಲಿಂಗಲೀಲೆ’ ಅಲ್ಲಮಪ್ರಭುವಿನ ಚರಿತ್ರೆಯಾಗಿದೆ. ಇದೊಂದು ಮಹತ್ವದ ಗ್ರಂಥ. ರತ್ನಾಕರವರ್ಣಿಯ `ಭರತೇಶ ವೈಭವ’ ಮನಮೋಹಕ ಶೈಲಿಯ ಕೃತಿ.
ಸಂಗೀತ: ವಿಜಯನಗರದ ಅರಸರು ನೃತ್ಯಕಲೆ, ಚಿತ್ರಕಲೆ ಹಾಗೂ ಸಂಗೀತವನ್ನು ವಿಶೇಷವಾಗಿ ಪ್ರೋತ್ಸಾಹಿಸಿದರು. ಆ ಕಾಲದಿಂದ ಕರ್ನಾಟಕ ಸಂಗೀತ ಎಂಬ ಹೆಸರು ಪ್ರಚಲಿತವಾಯಿತು. ಸಂತರು ಸಂಗೀತವನ್ನು ಬಳಸಿ ಭಕ್ತಿಮಾರ್ಗವನ್ನು ಬೋಧಿಸಿದರು. ಈ ಮಾರ್ಗವನ್ನು `ದಾಸಪಂಥ’ವೆನ್ನುವರು. ದಾಸರಲ್ಲಿ ಪುರಂದರದಾಸರು ಮತ್ತು ಕನಕದಾಸರು ಪ್ರಮುಖರು.
ಲಕ್ಷಾಂತರ ಕೀರ್ತನೆಗಳನ್ನು ರಚಿಸಿದ ಪುರಂದರದಾಸರು ಕರ್ನಾಟಕ ಸಂಗೀತ ಪಿತಾಮಹ’ ಕೃತಿಗಳು. ಎನಿಸಿಕೊಂಡರು. ಕನಕದಾಸರು ಜನಸಾಮಾನ್ಯರಿಂದ ಮೂಡಿಬಂದ ಕವಿ. ಮೋಹನ ತರಂಗಿಣಿ’, ರಾಮಧಾನ್ಯ ಚರಿತ್ರೆ’, ‘ನಳಚರಿತ್ರೆ’ ಮತ್ತು `ಹರಿಭಕ್ತಿಸಾರ’ ಇವರ ಪ್ರಮುಖ ಕೃತಿ.
ಶಿಲ್ಪಕಲೆ: ವಿಜಯನಗರದ ಕಾಲದಲ್ಲಿ ಕಟ್ಟಡ ರಚನೆಯನ್ನು ಕಣಶಿಲೆಯಿಂದ (ಗ್ರ್ಯಾನೈಟ್) ಮಾಡಲಾಯಿತು. ದಕ್ಷಿಣ ಭಾರತದ ಹಿಂದಿನ ಎಲ್ಲ ದೇವಾಲಯಗಳಿಗೆ ಎತ್ತರದ ರಾಯಗೋಪುರ, ಸುಂದರ ಕಲ್ಯಾಣ ಮಂಟಪಗಳನ್ನು ಒದಗಿಸಲಾಯಿತು. ಹೀಗೆ ನೂರಾರು ಕಡೆ ಇಂಥ ರಚನೆಗಳು ಸಾವಿರಾರು ಕೈಗಳಿಗೆ ದುಡಿಮೆ ನೀಡಿದವು.
ಹಂಪಿ: ಹಜಾರ ರಾಮಸ್ವಾಮಿ, ವಿಜಯ ವಿಠಲಸ್ವಾಮಿ, ಕೃಷ್ಣಸ್ವಾಮಿ, ಅಚ್ಚುತರಾಯ ಮುಂತಾದ ಸುಂದರ ದೇವಾಲಯಗಳು ಹಂಪಿಯಲ್ಲಿವೆ. ವಿಠಲಸ್ವಾಮಿ ದೇವಾಲಯದ ಕಿರುಸ್ತಂಭಗಳನ್ನು ತಟ್ಟಿದರೆ ಸಪ್ತಸ್ವರಗಳು ಹೊರಡುತ್ತವೆ.

* ಶೃಂಗೇರಿಯ ವಿದ್ಯಾಶಂಕರ ದೇವಾಲಯ, ರಾಮಸ್ವಾಮಿ ದೇವಾಲಯದ ಸಾವಿರ ಕಂಬಗಳ ಮಂಟಪ ಮತ್ತು ಮೂಡಬಿದಿರೆಯ ಸಾವಿರ ಕಂಬದ ಬಸದಿ (ತ್ರಿಭುವನ ತಿಲಕ ಚೂಡಾಮಣಿ) ವಿಜಯನಗರ ಕಾಲದ್ದು.

ಏಕಶಿಲಾ ವಿಗ್ರಹಗಳು: ಇದೇ ಕಾಲದಲ್ಲಿ ಭಾರಿ ಗಾತ್ರದ ಏಕಶಿಲಾ ವಿಗ್ರಹಗಳನ್ನು ಕೆತ್ತುವ ಶೈಲಿ ರೂಢಿಗೆ ಬಂದಿತು. ಹಂಪಿಯಲ್ಲಿರುವ ಅಂಥ ಶಿಲ್ಪಗಳೆಂದರೆ – ಸಾಸಿವೆಕಾಳು ಗಣೇಶ, ಕಡಲೇಕಾಳು ಗಣೇಶ ಹಾಗೂ ಲಕ್ಷ್ಮೀನರಸಿಂಹ. ವಿಠಲಸ್ವಾಮಿ ದೇವಾಲಯದ ಮುಂಭಾಗದಲ್ಲಿರುವ ಏಕಶಿಲಾರಥ ಅತ್ಯಂತ ಸುಂದರವಾಗಿದೆ. ಇದು ಗರುಡನ ಗುಡಿಯಾಗಿದೆ. ಕಾರ್ಕಳ ಮತ್ತು ವೇಣೂರಿನಲ್ಲಿ ಬಾಹುಬಲಿಯ ಏಕಶಿಲಾ ವಿಗ್ರಹಗಳು ಶಿಲ್ಪಕೌಶಲ್ಯಕ್ಕೆ ಸಾಕ್ಷಿಯಾಗಿವೆ.

ಬಹಮನಿ ರಾಜ್ಯ
ವಿಜಯನಗರ ಸಾಮ್ರಾಜ್ಯದ ಸಮಕಾಲೀನರಾದ ಬಹಮನಿ ಸಾಮ್ರಾಜ್ಯವು ಸಾ.ಶ. 1347ರಲ್ಲಿ ಸ್ಥಾಪನೆಯಾಯಿತು. ಕೃಷ್ಣಾನದಿ ರಾಜ್ಯದ ದಕ್ಷಿಣದ ಗಡಿ ಭಾಗದ ಪ್ರಾರಂಭದಲ್ಲಿ ಕಲಬುರಗಿ, ಅನಂತರ ಬೀದರ್ ಅದರ ರಾಜಧಾನಿಯಾಗಿತ್ತು. ಇದರ ಸ್ಥಾಪಕ ಅಲ್ಲಾವುದ್ದೀನ್ ಹಸನ್ ಗಂಗು ಬಹುಮನ್ಷಾ.

ಬೀದರ್ ನಗರವು ಕರ್ನಾಟಕ ಉತ್ತರದ ತುತ್ತ ತುದಿಯಲ್ಲಿರುವ ಒಂದು ಐತಿಹಾಸಿಕ ಸ್ಥಳ. ಅದು ಒಂದು ಶತಮಾನ ಕಾಲ ಬಹಮನಿ ಸುಲ್ತಾನರ ರಾಜಧಾನಿಯಾಗಿ ಮೆರೆಯಿತು. ಪುಟದಲ್ಲಿರುವ ಭವ್ಯ ರಚನೆಯೊಂದನ್ನು ನೋಡಿ.


ಬಹಮನಿ ರಾಜ್ಯದ ಭೂಪಟವನ್ನು ನೋಡಿ. ರಾಜ್ಯವು ಈಗಿನ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಭಾಗಗಳನ್ನು ಒಳಗೊಂಡಿತ್ತು.
ಬಹಮನಿ ಮತ್ತು ವಿಜಯನಗರ ನೆರೆಹೊರೆಯ ರಾಜ್ಯಗಳಾಗಿದ್ದು ಅವುಗಳೊಳಗೆ ಆಗಾಗ ಸಂಘರ್ಷಗಳು ನಡೆಯುತ್ತಲೇ ಇದ್ದುವು.
ಫಿರೂಜ್ಷಾ
ಫಿರೂಜ್ಷಾ ಬಹಮನಿ ವಂಶದಲ್ಲೇ ಶ್ರೇಷ್ಠನಾದ ಅರಸ. ಇವನು ನ್ಯಾಯಪರ, ಉದಾರಿ ಹಾಗೂ ದೈವಭಕ್ತ.
ಲೇಖಕನೂ ಬಹುಭಾಷಾವಿಶಾರದನೂ ಆಗಿದ್ದ ಫಿರೂಜನಿಗೆ ರೇಖಾಗಣಿತ ಮತ್ತು ಧರ್ಮಶಾಸ್ತ್ರಗಳಲ್ಲಿ ಪರಿಣತಿ ಇತ್ತು. ಇವನು ದೌಲತಾಬಾದ್ನಲ್ಲಿ (ಮಹಾರಾಷ್ಟ್ರ) ಆಕಾಶ ವೀಕ್ಷಣಾಲಯವನ್ನು ಸ್ಥಾಪಿಸಿದ್ದ. ಈತನು ರಾಜಧಾನಿ ಕಲಬುರಗಿಯ ಸೌಂದರ್ಯವನ್ನು ಹೆಚ್ಚಿಸಿದನಲ್ಲದೆ ಭೀಮಾ ನದಿಯ ತಟದಲ್ಲಿ ಫಿರೋಜಾಬಾದ್ ಎಂಬ ಹೊಸ ನಗರವನ್ನು ಕಟ್ಟಿಸಿದ. ಇವನ ಕಾಲದಲ್ಲಿ ರಾಜ್ಯಕ್ಕೆ ಬಂದಿದ್ದ ಸೂಫಿ ಸಂತ ಬಂದೇನವಾಜರಿಗೆ ಹಲವು ಗ್ರಾಮಗಳನ್ನು ಉಂಬಳಿಯಾಗಿ ನೀಡಿದನು. ಬಂದರುಗಳ ವಿಕಾಸಕ್ಕೆ ವಿಶೇಷ ಗಮನವಿತ್ತ. ಇದರಿಂದ ವಿದೇಶಿ ವ್ಯಾಪಾರಕ್ಕೆ ಪ್ರೋತ್ಸಾಹ ಸಿಕ್ಕಿತು.

ಮಹಮ್ಮದ್ ಗವಾನ್
ಬಹಮನಿ ರಾಜ್ಯದ ಇತಿಹಾಸದಲ್ಲಿ ರಾಜ್ಯವನ್ನಾಳಿದ ಸುಲ್ತಾನರಿಗಿಂತಲೂ ಹೆಚ್ಚು ಖ್ಯಾತಿಗಳಿಸಿದವನು ಮಹಮ್ಮದ್ ಗವಾನ್. ಪರ್ಷಿಯನ್ ಮೂಲದ ಇವನು ಮೂರನೇ ಮಹಮ್ಮದ್ ಸುಲ್ತಾನನ ಮುಖ್ಯಮಂತ್ರಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದನು.

ಸಾಧನೆಗಳು:
* ಗವಾನ್ ಯುದ್ಧವಿದ್ಯೆಯಲ್ಲಿ ನಿಪುಣನಾಗಿದ್ದು ರಾಜ್ಯವನ್ನು ವಿಸ್ತರಣೆ ಮಾಡಿದನು.
* ಆಡಳಿತವು ಇಸ್ಲಾಮೀ ಕಾನೂನುಗಳನ್ನು ಆಧರಿಸಿತ್ತು.
* ಕಂದಾಯ ಮತ್ತು ಅಂಚೆ ವ್ಯವಸ್ಥೆಯನ್ನು ಚುರುಕುಗೊಳಿಸಿದನು.
* ಭೂಮಿಯ ಫಲವತ್ತತೆ, ನೀರಾವರಿ ಸೌಲಭ್ಯಗಳನ್ನು ಗಮನಿಸಿ ಭೂಕಂದಾಯವನ್ನು ನಿಗದಿ ಮಾಡಿದನು.
* ಜನರಿಗೆ ಕಿರುಕುಳ ಕೊಡುವ ತೆರಿಗೆಗಳನ್ನು ರದ್ದುಪಡಿಸಿದನು.
* ಸ್ವತಃ ವಿದ್ವಾಂಸನಾಗಿದ್ದ ಮಹಮ್ಮದ್ ಗವಾನ್ ಬೀದರ್ನಲ್ಲಿ ಮದರಸಾ (ಮಹಾವಿದ್ಯಾಲಯ) ಸ್ಥಾಪಿಸಿದನು. ಇದು ಇಸ್ಲಾಂ ಮತ್ತು ಕಾನೂನು ಶಿಕ್ಷಣವನ್ನು ಪ್ರೋತ್ಸಾಹಿಸಿತು.
* ಇಲ್ಲಿ ಖಗೋಳಶಾಸ್ತ್ರ, ಗಣಿತ, ಇತಿಹಾಸ ಇತ್ಯಾದಿಗಳ ಅಧ್ಯಯನ ಕೂಡ ನಡೆಯುತ್ತಿತ್ತು.
* ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿನಿಲಯದ ಸೌಕರ್ಯಗಳಿದ್ದವು.
* ಮದರಸಾದ ಗ್ರಂಥಾಲಯದಲ್ಲಿ ಸುಮಾರು 3000 ಹಸ್ತಪ್ರತಿಗಳಿದ್ದವು.
ಒಟ್ಟಿನಲ್ಲಿ ಬಹಮನಿ ರಾಜ್ಯದ ಮುನ್ನಡೆಗೆ ಮಹಮ್ಮದ್ ಗವಾನ್ ಶ್ರೇಷ್ಠ ಕೊಡುಗೆ ನೀಡಿದನು. ಹೀಗಿದ್ದರೂ ರಾಜ್ಯದ ಸರದಾರರು ಗವಾನನ ಸಾಧನೆಗಳನ್ನು ಕಂಡು ಮತ್ಸರಪಟ್ಟರು. ಒಳಸಂಚು ನಡೆಸಿ ಈತನನ್ನು ಕೊಲ್ಲಿಸಿದರು. ಗವಾನನ ಸಮಾಧಿಯ ಮೇಲೆ, “ಮುಗ್ಧ ಗವಾನನನ್ನು ಕೊಲೆ ಮಾಡಲಾಯಿತು” ಎಂಬ ಉಲ್ಲೇಖವಿದೆ.
ಗವಾನನ ನಂತರ ಅಧಿಕಾರಕ್ಕಾಗಿ ಅಂತಃ ಕಲಹಗಳು ನಡೆದು ರಾಜ್ಯವು ವಿಭಜನೆಗೊಂಡು ಐದು ಹೊಸ ರಾಜ್ಯಗಳು ಹುಟ್ಟಿದವು.
ಈ ಐದು ರಾಜ್ಯಗಳೆಂದರೆ:
* ಬಿಜಾಪುರದ ಆದಿಲ್ಷಾಹಿ
* ಬೀದರಿನ ಬರೀದ್ಷಾಹಿ
* ಗೋಲ್ಕೊಂಡದ ಕುತುಬ್ಷಾಹಿ
* ಅಹ್ಮದ್ನಗರದ ನಿಜಾಂಷಾಹಿ ಹಾಗೂ
* ಬಿರಾರಿನ ಇಮದ್ಷಾಹಿ.
ಈ ಪೈಕಿ ಮೊದಲ ಎರಡೂ ರಾಜ್ಯಗಳು ಕರ್ನಾಟಕದಲ್ಲಿ ರಾಜಧಾನಿಗಳನ್ನು ಹೊಂದಿದ್ದವು.
ಸಮಾಜ: ಬಹಮನಿ ರಾಜ್ಯದ ಆಡಳಿತವು ಇಸ್ಲಾಮೀ ಕಾನೂನುಗಳ ಪ್ರಕಾರ ನಡೆಯುತ್ತಿತ್ತು. ಸುಲ್ತಾನನು ಆಡಳಿತದ ಪ್ರಮುಖನಷ್ಟೇ ಅಲ್ಲ, ಶ್ರೇಷ್ಠ ನ್ಯಾಯಾಧೀಶ, ಉಚ್ಚ ಸೇನಾಧಿಕಾರಿ ಹಾಗೂ ಧಾರ್ಮಿಕ ಪ್ರಮುಖನಾಗಿದ್ದನು. ಅವನನ್ನು ಭೂಮಿಯ ಮೇಲಿನ ಅಲ್ಲಾನ ಪ್ರತಿನಿಧಿ ಎಂದು ನಂಬಲಾಗಿತ್ತು.
ಆಡಳಿತದ ಉನ್ನತ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರನ್ನು ನೇಮಿಸಲಾಗುತ್ತಿತ್ತು. ಅಧಿಕಾರಿಗಳಿಗೆ ಜಹಗೀರು (ಭೂದತ್ತಿ)ಗಳನ್ನು ನೀಡುತ್ತಿದ್ದರು. ಹಿಂದೂ ಜಹಗೀರುದಾರರ ಸಂಖ್ಯೆ ಕಡಿಮೆಯಿತ್ತು.
ಪಾರಂಪರಿಕ ಹಿಂದೂ ಪದ್ಧತಿಯಂತೆ ಭೂಮಿಯ ಉತ್ಪನ್ನದ ಆರನೆಯ ಒಂದು ಭಾಗವನ್ನು ಕಂದಾಯವಾಗಿ ಸುಲ್ತಾನರು ಸಂಗ್ರಹಿಸುತ್ತಿದ್ದರು. ಅಕ್ಕಿ, ಗೋಧಿ, ಜೋಳ ಹಾಗೂ ಬೇಳೆಕಾಳುಗಳು ದಿನನಿತ್ಯದ ಆಹಾರ ವಸ್ತುಗಳಾಗಿದ್ದವು.
ರಾಜಮನೆತನದವರು ಮತ್ತು ಸರ್ದಾರರು ವಿಲಾಸಿ ಜೀವನ ನಡೆಸುತ್ತಿದ್ದರು. ಜನಸಾಮಾನ್ಯರ ಸ್ಥಿತಿಗತಿ ಉತ್ತಮವಾಗಿರಲಿಲ್ಲ. ಜೈನ ಮತ್ತು ಕ್ರೈಸ್ತ ಸಮುದಾಯಗಳು ರಾಜ್ಯದಲ್ಲಿದ್ದುವು. ಸೂಫಿ ಪಂಥವು ಪ್ರಬಲವಾಗಿತ್ತು.
ಬಹಮನಿ ಸುಲ್ತಾನರ ಸಾಂಸ್ಕೃತಿಕ ಕೊಡುಗೆ
ಸಾಹಿತ್ಯ: ಬಹಮನಿ ಸುಲ್ತಾನರು ಪರದೇಶದ ವಿದ್ವಾಂಸರಿಗೆ ಆಶ್ರಯ ನೀಡಿದರು. ಅರಬ್ಬಿ ಮತ್ತು ಪಾರ್ಸಿ ಸಾಹಿತ್ಯವು ಇವರಿಂದ ಪ್ರೋತ್ಸಾಹ ಪಡೆಯಿತು. ಬಂದೇನವಾಜ್ ಎಂಬ ಖ್ಯಾತ ಸೂಫಿ ಸಂತ ಹಾಗೂ ಗ್ರಂಥಕಾರ ಇದೇ ಕಾಲದವರು. ಇವರು ಮತ್ತು ಇನ್ನಿತರ ವಿದೇಶಿ ವಿದ್ವಾಂಸರು ಬಳಸಿದ ಭಾಷೆ `ದಖನಿ’ ಎಂದು ಪ್ರಸಿದ್ಧವಾಯಿತು. ಮುಂದೆ ಇದೇ ಉರ್ದು ಭಾಷೆಯ ಬೆಳವಣಿಗೆಗೆ ಕಾರಣವಾಯಿತು.
ವಾಸ್ತುಶಿಲ್ಪ: ಬಹಮನಿಗಳ ಇತಿಹಾಸವು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಅವರು ಕಲಬುರಗಿ, ಬೀದರ್ ಮತ್ತು ಇತರ ಸ್ಥಳಗಳಲ್ಲಿ ಬಿಟ್ಟುಹೋಗಿರುವ ಕಟ್ಟಡಗಳು ಹಿಂದೂ ಮುಸ್ಲಿಂ ಶೈಲಿಯಲ್ಲಿವೆ. ಇದು ದಖನಿ ಶೈಲಿಯೆಂದು ಪರಿಚಿತವಾಗಿದೆ. ಬಹಮನಿಗಳ ಮೊದಲ ರಚನೆಯೆಂದರೆ ಕಲಬುರಗಿಯ ಜಾಮೀ ಮಸೀದಿ. ಇದು ಮಹಮ್ಮದ್ಷಾನ ರಚನೆ. ಚಿಕ್ಕಚಿಕ್ಕ ಗುಮ್ಮಟಗಳಿಂದ ಕೂಡಿರುವ ಇಲ್ಲಿನ ಸಭಾಂಗಣ ಆಕರ್ಷಕವಾಗಿದೆ. ಕಲಬುರಗಿಯ ಬಳಿ ಸುಲ್ತಾನರ ಸಮಾಧಿಗಳಿವೆ. ಅವು ಬೃಹತ್ ಗಾತ್ರದ ಗುಮ್ಮಟಗಳುಳ್ಳ ರಚನೆಗಳು. ಬಂದೇನವಾಜರ ಸಮಾಧಿ ಕಲಬುರಗಿಯ ಇನ್ನೊಂದು ಪ್ರಮುಖ ರಚನೆ. ಬೀದರ್ ನ ಸೋಲಾಖಾಂಬ್ ಮಸೀದಿ ಮತ್ತು ಕೋಟೆಯೊಳಗಿನ ಸುಂದರ ಅರಮನೆಗಳು ಪ್ರಸಿದ್ಧವಾಗಿವೆ. ಈ ಕಟ್ಟಡಗಳು ಅಲಂಕಾರ, ಕೆತ್ತನೆ, ಮರದ ಕುಸುರಿ ಕೆಲಸಗಳನ್ನು ಹೊಂದಿವೆ. ಬೀದರ್ ಬಳಿಯ ಅಷ್ಟೂರಿನ ಹನ್ನೆರಡು ಸಮಾಧಿಗಳು ಸೊಗಸಾಗಿವೆ. ಬಹಮನಿ ಕಾಲದ ಕಟ್ಟಡಗಳಲ್ಲಿ ಅತ್ಯಂತ ಪ್ರಮುಖ ರಚನೆಯೆಂದರೆ ಗವಾನನು ಕಟ್ಟಿಸಿದ ಮದರಸಾ. ಇದು 76 ಮೀ. (250 ಅಡಿ) ಉದ್ದ ಹಾಗೂ ಮೂರು ಮಜಲಿನ (ಮಾಳಿಗೆಯ) ರಚನೆ. ಮದರಸಾದೊಳಗಿರುವ ಮಸೀದಿಯು ಇನ್ನೂ ಭದ್ರ ಸ್ಥಿತಿಯಲ್ಲಿದೆ. ಐದು ಶತಮಾನಕ್ಕೂ ಹಿಂದಿನ ಮದರಸಾ ಕಟ್ಟಡ ತನ್ನ ಹಿಂದಿನ ಘನತೆಯನ್ನು ಸಾರಿ ಹೇಳುವಂತಿದೆ.




ವಿಜಯಪುರದ ಆದಿಲ್ ಷಾಹಿಗಳು
ಷಾಹಿಗಳ ಪೈಕಿ ವಿಜಯಪುರದ ಆದಿಲ್ಷಾಹಿ ಪ್ರಮುಖವಾಗಿತ್ತು. ಆದಿಲ್ಷಾಹಿಗಳು ಕರ್ನಾಟಕದಲ್ಲಿ ಎರಡು ಶತಮಾನಗಳ ಕಾಲ ಆಳ್ವಿಕೆ ನಡೆಸಿದರು.
ಎರಡನೆಯ ಇಬ್ರಾಹಿಂ: ಎರಡನೆಯ ಇಬ್ರಾಹಿಂ ವಿಜಯಪುರದ ಸುಲ್ತಾನರಲ್ಲಿ ಶ್ರೇಷ್ಠನಾದವನು. ಈತನ ಕಾಲದಲ್ಲಿ ರಾಜ್ಯವನ್ನು ವಿಸ್ತಾರ ಗೊಳಿಸಲಾಯಿತ್ತಲ್ಲದೆ ಅದು ಸಮೃದ್ಧಿಯನ್ನು ಕಂಡಿತು. ವ್ಯಾಪಾರ, ವಾಣಿಜ್ಯ ಹೆಚ್ಚಿತು. ಇಬ್ರಾಹಿಂ ಧರ್ಮಸಹಿಷ್ಣು ಅರಸನಾಗಿದ್ದು ಅನೇಕ ಹಿಂದು ವಿದ್ವಾಂಸರು, ಕವಿಗಳು ಮತ್ತು ಸಂಗೀತಗಾರರಿಗೆ ಆಶ್ರಯ ನೀಡಿದನು. ತನ್ನ ಅರಮನೆಯ ಕೋಟೆಯಲ್ಲಿನ ದತ್ತ ದೇವಾಲಯವನ್ನು ದುರಸ್ತಿ ಮಾಡಿಸಿ ಪೂಜೆಗೆ ವ್ಯವಸ್ಥೆ ಮಾಡಿದ್ದನು. ಹಿಂದು-ಮುಸ್ಲಿಂ ಸಾಂಸ್ಕೃತಿಕ ಏಕತೆಗಾಗಿ ಇಬ್ರಾಹಿಂ ಶ್ರಮಿಸಿದನು. ಉರ್ದುಭಾಷೆಯಲ್ಲಿ `ಕಿತಾಬ್-ಎ-ನವರಸ್’ ಎಂಬ ಪುಸ್ತಕವನ್ನು ಬರೆದು ಹಿಂದೂ ಸಂಗೀತವನ್ನು ಮುಸಲ್ಮಾನರಲ್ಲಿ ಜನಪ್ರಿಯಗೊಳಿಸಲು ಇವನು ಯತ್ನಿಸಿದ. ಈ ಕೃತಿ ಹಿಂದು ದೇವತೆಗಳಾದ ಸರಸ್ವತಿ, ಗಣಪತಿ, ಭೈರವ ಮುಂತಾದವರ ಸ್ತುತಿಯಿಂದ ಆರಂಭವಾಗುತ್ತದೆ. ಅವನು ಸ್ವತಃ ಒಳ್ಳೆಯ ಸಂಗೀತಗಾರನಾಗಿದ್ದನು. ಭವ್ಯ ಕಟ್ಟಡ ಇಬ್ರಾಹಿಂ ರೋಜಾ ಇವನದೇ ರಚನೆಯಾಗಿದೆ.

ಇಬ್ರಾಹಿಂನ ಉತ್ತರಾಧಿಕಾರಿ ಮೊಹಮ್ಮದ್ ಆದಿಲ್ ಷಾಹ ವಿಜಯಪುರದ ಅದ್ಭುತ ಕಟ್ಟಡ ಗೋಲಗುಂಬಜ (ಗೋಳಗುಮ್ಮಟ)ವನ್ನು ಕಟ್ಟಿಸಿದವನು. ಅಸಾರ್ ಮಹಲ್ ಅವನ ಇನ್ನೊಂದು ಸುಂದರ ರಚನೆ.
ಮೊಹಮ್ಮದ್ ಆದಿಲ್ ಷಾಹ ಅನಂತರ ವಿಜಯಪುರ ರಾಜ್ಯವು ದುರ್ಬಲವಾಯಿತು. ದಕ್ಷಿಣ ಭಾರತದಲ್ಲಿ ಮೊಗಲರ ಆಕ್ರಮಣಗಳು ಹಾಗೂ ವಿಜಯಪುರ ರಾಜ್ಯಕ್ಕೆ ಮರಾಠರು ನೀಡುತ್ತಿದ್ದ ಕಿರುಕುಳಗಳು ಇದಕ್ಕೆ ಕಾರಣ. ಔರಂಗಜೇಬನು ವಿಜಯಪುರವನ್ನು ಕೈವಶ ಮಾಡಿಕೊಳ್ಳುವುದರೊಂದಿಗೆ ಆದಿಲ್ಷಾಹಿ ಆಡಳಿತ ಕೊನೆಗೊಂಡಿತು.

ವಾಸ್ತುಶಿಲ್ಪ:
ಕರ್ನಾಟಕದ ವಾಸ್ತುಶಿಲ್ಪದ ಇತಿಹಾಸದಲ್ಲಿ ಆದಿಲ್ಷಾಹಿಗಳ ರಚನೆಗಳಿಗೆ ಮುಖ್ಯವಾದ ಸ್ಥಾನವಿದೆ. ಅವರ ರಚನೆಗಳೆಂದರೆ-ಅರಮನೆ, ಕೋಟೆ, ಮಸೀದಿ ಮತ್ತು ಸಮಾಧಿಗಳು.
* ವಿಜಯಪುರದ ಕೋಟೆ ಭಾರೀ ರಚನೆಯಾಗಿದ್ದು 96 ಕೊತ್ತಲಗಳು ಹಾಗೂ ಆರು ಮಹಾದ್ವಾರಗಳನ್ನು ಹೊಂದಿದೆ. ಅರಮನೆಗಳಲ್ಲಿ ಗಗನಮಹಲ್ ಭವ್ಯವಾಗಿದೆ. ಅಸಾರ್ ಮಹಲ್ನಲ್ಲಿ ವರ್ಣರಂಜಿತ ಚಿತ್ರಗಳಿರುವ ಕೊಠಡಿಗಳಿವೆ.
* ವಿಜಯಪುರದ ಜುಮಾ ಮಸೀದಿಯು ಸುಂದರವಾಗಿದೆ.


ಆದಿಲ್ಷಾಹಿಗಳ ರಚನೆಗಳಲ್ಲಿ ಸಮಾಧಿ ಕಟ್ಟಡಗಳೇ ತೀರ ಭವ್ಯವಾದವುಗಳು. ಅವಳಿ ರಚನೆಯಾದ ಇಬ್ರಾಹಿಂ ರೋಜಾದಲ್ಲಿ ಒಂದು ಕಟ್ಟಡವು ಮಸೀದಿಯೂ ಮತ್ತೊಂದು ಸಮಾಧಿಯೂ ಆಗಿದೆ. ಇಬ್ರಾಹಿಂ ರೋಜಾವನ್ನು ದಖನ್ನಿನ ತಾಜ್ಮಹಲ್ ಎಂದು ವರ್ಣಿಸಲಾಗಿದೆ. ರೋಜಾಕ್ಕೂ ಮೀರಿದ ಕಟ್ಟಡವನ್ನು ರಚಿಸಬೇಕೆಂದು ಮೊಹಮ್ಮದ ಆದಿಲ್ ಷಾಹನು ಗೋಲಗುಂಬಜ್ ಎಂಬ ಸಮಾಧಿ ಮಂದಿರವನ್ನು ರಚಿಸಿದನು. ಇದರ ಕೇಂದ್ರದಲ್ಲಿ ವಿಶಾಲವಾದ ಗುಂಬಜ್ವಿದೆ. ಗುಂಬಜದ ಒಳಭಾಗದಲ್ಲಿ ಪಿಸುಗುಟ್ಟುವ’ ಗ್ಯಾಲರಿಯಿದೆ. ಇಲ್ಲಿನ ಪಿಸುಗುಟ್ಟುವ’ ವೈಶಿಷ್ಟ್ಯ ಶಿಲ್ಪತಜ್ಞರನ್ನು ಬೆರಗುಗೊಳಿಸಿದೆ. ಗೋಲಗುಂಬಜವು ಜಗತ್ತಿನಲ್ಲೇ ಹಿರಿಗಾತ್ರದಲ್ಲಿ ನಾಲ್ಕನೆಯದೂ ಭಾರತದಲ್ಲಿ ಅತಿ ದೊಡ್ಡದೂ ಆಗಿದೆ. ಇದು ಜಗತ್ತಿನ ಅದ್ಭುತ ವಾಸ್ತುಗಳಲ್ಲೊಂದು.
ಕಾಲಗಣನೆ (ಸಾ.ಶ.)


ಕಾಲಗಣನೆ (ಸಾ.ಶ.)
ವಿಜಯನಗರ
ವಿಜಯನಗರ ಸಾಮ್ರಾಜ್ಯದ ಸ್ಥಾಪನೆ – ಸಾ.ಶ. 1336
ಸಾಮ್ರಾಜ್ಯದ ಆಳ್ವಿಕೆಯ ಕಾಲ – ಸಾ.ಶ. 1336 – ಸಾ.ಶ. 1646
ಕೃಷ್ಣದೇವರಾಯನ ಆಳ್ವಿಕೆಯ ಕಾಲ – ಸಾ.ಶ. 1509 – ಸಾ.ಶ. 1529
ರಕ್ಕಸತಂಗಡಿ ಕದನ – ಜನವರಿ 23, ಸಾ.ಶ. 1565
ಬಹಮನಿ
ಬಹಮನಿ ರಾಜ್ಯದ ಆಳ್ವಿಕೆಯ ಕಾಲ – ಸಾ.ಶ. 1347 – ಸಾ.ಶ. 1489
ಬೀದರ್ ನಲ್ಲಿ ಮದರಸ ಸ್ಥಾಪನೆ – ಸಾ.ಶ. 1461
ಆದಿಲ್ಷಾಹಿಗಳ ಆಳ್ವಿಕೆಯ ಕಾಲ – ಸಾ.ಶ. 1489 – ಸಾ.ಶ. 1686
ಇಬ್ರಾಹಿಂ ರೋಜಾ ರಚನೆ – ಸಾ.ಶ. 1626
ಗೋಲ ಗುಮ್ಮಟ ರಚನೆ – ಸುಮಾರು ಸಾ.ಶ. 1650
ಹೊಸ ಪದಗಳು:
ಫಕೀರ – ಮಹಮ್ಮದೀಯ ಸಾಧು.
ಕೊತ್ತಲ – ಕೋಟೆಯ ಪ್ರಾಕಾರದ ಮೇಲೆ ಕಟ್ಟುವ ಗುಮ್ಮಟ
ಫಾರಸಿ – ಪರ್ಷಿಯ ದೇಶದ ಭಾಷೆ.
ದಖನ್ – ದಕ್ಷಿಣ ಭಾರತದ ಪ್ರದೇಶ.
ಸಂವೇದ ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು
* * * * * *