ದೆಹಲಿಯ ಸುಲ್ತಾನರು – ಅಧ್ಯಾಯ 13
ಪಾಠದ ಪರಿಚಯ
11-12ನೇ ಶತಮಾನಗಳಲ್ಲಿ ಭಾರತದ ಮೇಲೆ ಟರ್ಕರು ಪದೇ ಪದೇ ಎಸಗುತ್ತಿದ್ದ ಸೈನಿಕ ಕಾರ್ಯಾಚರಣೆಗಳು ಅಂತಿಮವಾಗಿ ದೆಹಲಿಯ ಸುಲ್ತಾನರ ಆಳ್ವಿಕೆಗೆ (ಸಾ.ಶ. 1206-1526) ನಿಮಿತ್ತವಾದುವು. ಈ ಅಧ್ಯಾಯದಲ್ಲಿ ದೆಹಲಿಯ ಸುಲ್ತಾನರ ಧೋರಣೆ, ಆಡಳಿತ, ಅವರ ಕಾಲದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳು ಮತ್ತು ವಾಸ್ತುಶಿಲ್ಪ, ಸಾಹಿತ್ಯಗಳಿಗೆ ಅವರು ನೀಡಿದ ಕೊಡುಗೆಯನ್ನು ನಿರೂಪಿಸಲಾಗಿದೆ.


ನಮ್ಮ ದೇಶದ ಮೇಲೆ ಎಂಟನೆಯ ಶತಮಾನದಿಂದ ಮೊದಲುಗೊಂಡು ಮೇಲಿಂದ ಮೇಲೆ ವಿದೇಶಿ ಆಕ್ರಮಣಗಳು ನಡೆದವು. ಆಕ್ರಮಣಕಾರರು ವಾಯುವ್ಯ ಸರಹದ್ದಿನಿಂದ ಬಂದವರಾಗಿದ್ದರು. ಸಂಪತ್ತಿನ ಲೂಟಿ, ರಾಜ್ಯ ವಿಸ್ತರಣೆ ಮತ್ತು ಇಸ್ಲಾಂ ಮತ ಪ್ರಸಾರ ಇವು ದಾಳಿಗಳ ಉದ್ದೇಶವಾಗಿದ್ದವು.
ಅರಬ್ಬರ ದಾಳಿ: ಭಾರತದ ಮೇಲೆ ದಾಳಿ ಮಾಡಿದ ಮೊದಲಿಗರೆಂದರೆ ಅರಬ್ಬರು. ಅರಬ್ಬರ ದಂಡು ಸಾ.ಶ. 712ರಲ್ಲಿ ಸಿಂಧ್ ಮತ್ತು ಮುಲ್ತಾನ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿತು. ಇದರೊಂದಿಗೆ ಈ ಪ್ರದೇಶದಲ್ಲಿ ಇಸ್ಲಾಂ ನೆಲೆಯೂರಿತು. ಆದರೆ ಅಲ್ಪಕಾಲದಲ್ಲೇ ಅರಬ್ಬರ ಅತಿಕ್ರಮಣ ಕ್ಷೀಣಿಸಿತು.


ಟರ್ಕರ ದಾಳಿ: ಇದಾದ ಸುಮಾರು ಮೂರು ಶತಮಾನಗಳ ಅನಂತರ ಟರ್ಕಿ ಮೂಲದ ಮಹಮ್ಮದ್ ಘಜನಿ ಭಾರತದ ಮೇಲೆ ದಾಳಿ ನಡೆಸಿದನು. ಅಫ್ಘಾನಿಸ್ತಾನದ ಘಜನಿ ಎಂಬ ಚಿಕ್ಕ ರಾಜ್ಯದ ಸುಲ್ತಾನನಾಗಿದ್ದ ಇವನು ಹದಿನೇಳು ಬಾರಿ ಭಾರತದ ಮೇಲೆ ದಾಳಿ ನಡೆಸಿದನು. ಇದರ ಪರಿಣಾಮವಾಗಿ ಭಾರತದ ಹಲವಾರು ಸಂಪದ್ಭರಿತ ನಗರಗಳು ಸೂರೆಗೊಂಡವು. ಧಾರ್ಮಿಕ ಕೇಂದ್ರಗಳು ನಾಶವಾದವು. ಇವುಗಳಲ್ಲಿ ಮಥುರೆಯ ಶ್ರೀಕೃಷ್ಣ ಮಂದಿರ ಗುಜರಾತಿನ ಸೋಮನಾಥ ಮಂದಿರಗಳು ಸೇರಿದ್ದವು.




ದೇಶ ಸ್ವತಂತ್ರಗೊಂಡ ಅನಂತರ ಭಗ್ನಗೊಂಡ ಸೋಮನಾಥ ದೇವಾಲಯವನ್ನು ಭವ್ಯವಾಗಿ ಪುನರ್ ನಿರ್ಮಾಣ ಮಾಡಲಾಯಿತು (ಸಾ.ಶ. 1951). ಇದನ್ನು ಭಾರತದ ಪ್ರಥಮ ರಾಷ್ಟ್ರಧ್ಯಾಕ್ಷರು ಡಾ. ಬಾಬು ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು.


ಮಹಮ್ಮದ್ ಘೋರಿ: 12ನೆಯ ಶತಮಾನದ ಕೊನೆಯ ಭಾಗದಲ್ಲಿ ಅಫ್ಘಾನಿಸ್ತಾನದ ಮಹಮ್ಮದ್ ಘೋರಿ ಭಾರತದ ಮೇಲೆ ದಾಳಿ ನಡೆಸಿ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡನು. ದಾಳಿ ಮುಂದುವರಿಯುತ್ತಿದ್ದಂತೆ ದಿಲ್ಲಿಯ ರಾಜ ಪೃಥ್ವೀರಾಜ್ ಚೌಹಾಣನು ಘೋರಿಯನ್ನು ಮೊದಲ ತರೈನ್ ಯುದ್ಧದಲ್ಲಿ ಸೋಲಿಸಿದನು. ಆದರೆ, ಮರುವರ್ಷ ಮತ್ತೆ ದಂಡೆತ್ತಿ ಬಂದ ಘೋರಿಯು ಎರಡನೆಯ ತರೈನ್ ಯುದ್ಧದಲ್ಲಿ ಪೃಥ್ವಿರಾಜನನ್ನು ಸೋಲಿಸಿ ಕೊಂದನು. ದಿಲ್ಲಿಯು ಘೋರಿಯ ವಶವಾಯಿತು. ಮಹಮ್ಮದ್ ಘೋರಿ ಗೆದ್ದುಕೊಂಡ ಪ್ರದೇಶಗಳನ್ನು ತನ್ನ ಸೇನಾನಿ ಕುತ್ಬುದ್ದೀನ್ ಐಬಕ್ ಎಂಬುವನಿಗೆ ಹಸ್ತಾಂತರಿಸಿದನು. ಇಲ್ಲಿಂದ ಕುತ್ಬುದ್ದೀನ್ ದೆಹಲಿಯ ಸುಲ್ತಾನನಾಗಿ ಆಳ್ವಿಕೆ ಪ್ರಾರಂಭಿಸಿದ.


ಗುಲಾಮಿ ಸಂತತಿ
ಘೋರಿಯು ಗೆದ್ದುಕೊಂಡ ಪ್ರದೇಶಗಳನ್ನು ತನ್ನ ಸೇನಾನಿ ಕುತ್ಬುದ್ದೀನ್ ಐಬಕ್ ಎಂಬುವನಿಗೆ ಹಸ್ತಾಂತರಿಸಿದನು. ಘೋರಿಯ ಮರಣದ ನಂತರ ಕುತ್ಬುದ್ದೀನ್ ಐಬಕ್ ದಿಲ್ಲಿಯ ಸುಲ್ತಾನನಾಗಿ ಸ್ವತಂತ್ರ ಆಳ್ವಿಕೆ ಪ್ರಾರಂಭಿಸಿದನು.
ದೆಹಲಿಯನ್ನು 5 ಸಂತತಿಗಳು ಆಳಿದವು. ಅವುಗಳೆಂದರೆ:
1. ಗುಲಾಮಿ ಸಂತತಿ
2. ಖಿಲ್ಜಿ ಸಂತತಿ
3. ತುಘಲಕ್ ಸಂತತಿ
4. ಸಯ್ಯದ್ ಸಂತತಿ
5. ಲೂದಿ ಸಂತತಿ
ಕುತ್ಬುದ್ದೀನ್ ಐಬಕ್: ಕುತ್ಬುದ್ದೀನ್ ಪ್ರಾರಂಭದಲ್ಲಿ ಮಹಮ್ಮದ್ ಘೋರಿಯ ಗುಲಾಮನಾಗಿದ್ದ. ಈ ಕಾರಣದಿಂದಾಗಿ ಇವನದು `ಗುಲಾಮಿ’ ಸಂತತಿ ಎಂದಾಯಿತು. ಇವನು ಶತ್ರುಗಳನ್ನು ಗೆದ್ದು, ಟರ್ಕರ ಆಳ್ವಿಕೆಯನ್ನು ಭದ್ರಗೊಳಿಸಿದನು. ತನ್ನ ವಿಜಯದ ದ್ಯೋತಕವಾಗಿ ದಿಲ್ಲಿಯ ಸಮೀಪದ ಮೆಹರೌಲಿ ಎಂಬಲ್ಲಿ ಕುತುಬ್ ಮಿನಾರಿನ ನಿರ್ಮಾಣಕಾರ್ಯ ಆರಂಭಿಸಿದನು. ಇದು ಇಲ್ತಮಶ್ನ ಕಾಲದಲ್ಲಿ ಪೂರ್ಣಗೊಂಡಿತು.


ದಿಲ್ಲಿಯ ಸುಲ್ತಾನರ ಕಾಲದಲ್ಲಿ ಅಧಿಕಾರ ಸೂತ್ರವನ್ನು ಹಿಡಿದ ಏಕೈಕ ಮಹಿಳೆಯೆಂದರೆ ರಜಿಯಾ ಸುಲ್ತಾನಾ. ಈ ಧೀರೆಯು ಆಸ್ಥಾನದಲ್ಲಿ ನ್ಯಾಯ ನೀಡುತ್ತಿದ್ದಳು. ಗಂಡುಡುಗೆ ತೊಟ್ಟು ರಣರಂಗಕ್ಕೆ ಧುಮುಕುತ್ತಿದ್ದಳು. ಆಸ್ಥಾನದ ಸರದಾರರು ಮಹಿಳೆಯೋರ್ವಳ ಆಳ್ವಿಕೆಯನ್ನು ಸಹಿಸದೆ ಅವಳನ್ನು ಕೊಂದರು.


ಖಿಲ್ಜಿ ವಂಶ
ಗುಲಾಮಿ ಸಂತತಿಯ ಅನಂತರ ಖಿಲ್ಜಿ ವಂಶ ಅಧಿಕಾರಕ್ಕೇರಿತು. ಖಿಲ್ಜಿಗಳಲ್ಲಿ ಅಲ್ಲಾವುದ್ದೀನ್ ದೆಹಲಿಯ ಸುಲ್ತಾನರಲ್ಲೇ ಬಲಶಾಲಿಯಾಗಿದ್ದನು. ಈತನದು ಸೈನಿಕ ಆಡಳಿತವಾಗಿತ್ತು.

ಧೋರಣೆಗಳು : ಅಲ್ಲಾವುದ್ದೀನನು ಆಡಳಿತ, ಸೈನ್ಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತಂದನು. ಅಗತ್ಯವಸ್ತುಗಳ ಮಾರಾಟದ ಮೇಲೆ ಹತೋಟಿಯನ್ನಿಟ್ಟುಕೊಂಡನು. ಮಾದಕ ಪದಾರ್ಥ ಸೇವನೆ, ಜೂಜಾಟ ನಿಷೇಧ ಮಾಡಿದ. ತಪ್ಪಿತಸ್ಥರೆಂದು ಕಂಡವರನ್ನು ಕ್ರೂರವಾಗಿ ದಂಡಿಸಿದ.
ದಂಡ ಯಾತ್ರೆಗಳು: ಭಾರತ ದೇಶವನ್ನು ಪೂರ್ಣವಾಗಿ ಗೆದ್ದುಕೊಳ್ಳಬೇಕೆಂಬುದು ಅಲ್ಲಾವುದ್ದೀನನ ಆಕಾಂಕ್ಷೆಯಾಗಿತ್ತು. ಪ್ರಾರಂಭದಲ್ಲಿ ತನ್ನ ಸೈನಿಕ ಶಕ್ತಿಯಿಂದ ಉತ್ತರ ಭಾರತವನ್ನು ಗೆದ್ದುಕೊಂಡನು. ದಕ್ಷಿಣ ಭಾರತವನ್ನು ವಶಪಡಿಸಿಕೊಳ್ಳಲು ತನ್ನ ಆಪ್ತ ಗುಲಾಮನಾದ ಮಲ್ಲಿಕಾಫರ್ ಎಂಬ ಸೇನಾನಿಯನ್ನು ಭಾರಿ ಸೇನಾಪಡೆಯೊಂದಿಗೆ ಕಳುಹಿಸಿದನು. ಮಲ್ಲಿಕಾಫರ್ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ರಾಜಧಾನಿಗಳನ್ನು ಕೊಳ್ಳೆಹೊಡೆದನು.
ಮಲ್ಲಿಕಾಫರ್ ಆಕ್ರಮಣ ಮಾಡಿದ ರಾಜ್ಯಗಳೆಂದರೆ: ಮಹಾರಾಷ್ಟ್ರದ ಯಾದವರು (ರಾಜಧಾನಿ ದೇವಗಿರಿ), ತೆಲಂಗಾಣದ ಕಾಕತೀಯರು (ವಾರಂಗಲ್), ಹೊಯ್ಸಳರು (ದ್ವಾರಸಮುದ್ರ) ಮತ್ತು ತಮಿಳುನಾಡಿನ ಪಾಂಡ್ಯರು (ಮಧುರೈ).




ತದನಂತರ ಮಲ್ಲಿಕಾಫರನು ದಂಡಯಾತ್ರೆಯನ್ನು ರಾಮೇಶ್ವರದವರೆಗೆ ಮುಂದುವರಿಸಿದನು. ಅಲ್ಲಿ ಅನೇಕ ದೇವಾಲಯಗಳನ್ನು ಲೂಟಿಮಾಡಿದನು. ಧನಕನಕಾದಿಗಳು ಭಾರಿ ಪ್ರಮಾಣದಲ್ಲಿ ಸೂರೆಗೊಂಡವು. ದಕ್ಷಿಣ ಭಾರತದಿಂದ ದಿಲ್ಲಿಗೆ ಇಷ್ಟೊಂದು ಪ್ರಮಾಣದಲ್ಲಿ ಸಂಪತ್ತಿನ ಹೊಳೆ ಹಿಂದೆಂದೂ ಹರಿದುಹೋಗಿರಲಿಲ್ಲ.

ಅಲ್ಲಾವುದ್ದೀನನು ಅಮೀರ್ ಖುಸ್ರು, ಅಮೀರ್ ಹಸನ್ ಮುಂತಾದ ಪರ್ಷಿಯನ್ ಕವಿಗಳನ್ನು ಪ್ರೋತ್ಸಾಹಿಸಿದ. ದೆಹಲಿಯಲ್ಲಿ ಸಿರಿ ಎಂಬ ಕೋಟೆಯನ್ನು ಕಟ್ಟಿಸಿದನು. ಅಲೈ ದರ್ವಾಜಾ ಇವನ ಭವ್ಯ ರಚನೆ.



ಅಲ್ಲಾವುದ್ದೀನನ ಅಂತ್ಯಕಾಲ ದುಃಖಮಯವಾಗಿತ್ತು. ಅರಮನೆಯಲ್ಲಿ ದಂಗೆಗಳಾದವು. ಕೊನೆಗೆ ಮಲ್ಲಿಕಾಫರ್ ಅಧಿಕಾರದಾಹದಿಂದ ಅಲ್ಲಾವುದ್ದೀನನನ್ನು ಕೊಲೆಮಾಡಿ ಪಟ್ಟವೇರಿದ. ಆದರೆ ಆತನನ್ನೂ ಕೊಲ್ಲಲಾಯಿತು. ಅಲ್ಪಕಾಲದಲ್ಲೇ ಖಿಲ್ಜಿ ಸುಲ್ತಾನರ ಆಳ್ವಿಕೆ ಕೊನೆಗೊಂಡು ತುಘಲಕರು ಅಧಿಕಾರಕ್ಕೆ ಬಂದರು.
ತುಘಲಕರು
ತುಘಲಕ್ ಸುಲ್ತಾನರಲ್ಲಿ ಮಹಮ್ಮದ್ ಬಿನ್ ತುಘಲಕ್ ಪ್ರಮುಖನು. ಇವನು ವಿದ್ವಾಂಸನಾಗಿದ್ದನು. ಆದರೆ ಆತುರ, ಮುಂಗೋಪಿಯಾಗಿದ್ದನು, ವ್ಯವಹಾರ ಕೌಶಲ ಕಡಿಮೆ ಮತ್ತು ವಿಚಿತ್ರ ಗುಣಸ್ವಭಾವದವನು.

ಆಡಳಿತ ಪ್ರಯೋಗಗಳು: ಆಡಳಿತ ಸುಧಾರಣೆಗಾಗಿ ಮಹಮ್ಮದ ಬಿನ್ ತುಘಲಕ್ನು ಹಲವು ಪ್ರಯೋಗಗಳನ್ನು ನಡೆಸಿದನು. ಅವುಗಳಲ್ಲಿ ಮುಖ್ಯವಾದುದು ರಾಜಧಾನಿಯ ವರ್ಗಾವಣೆ. ದೆಹಲಿಯ ಬದಲು ಭಾರತದ ಮಧ್ಯಭಾಗದಲ್ಲಿರುವ ದೇವಗಿರಿಯನ್ನು ರಾಜಧಾನಿಯನ್ನಾಗಿ ಮಾಡಿದರೆ ಅದು ಸಾಮ್ರಾಜ್ಯದ ಕೇಂದ್ರದಲ್ಲಿ ಇದ್ದಂತಾಗುತ್ತದೆ ಎಂಬುದು ಮಹಮ್ಮದನ ನಂಬಿಕೆಯಾಗಿತ್ತು. ಅಲ್ಲದೆ ರಾಜಧಾನಿಯನ್ನು ದಕ್ಷಿಣಕ್ಕೆ ಸ್ಥಳಾಂತರಿಸಿದರೆ ಮುಂದೆ ದಕ್ಷಿಣದ ರಾಜ್ಯಗಳಿಗೆ ದಾಳಿ ನಡೆಸುವುದು ಸುಲಭವಾಗುತ್ತದೆಂಬ ಲೆಕ್ಕಾಚಾರವೂ ಅವನದಾಗಿತ್ತು. ದಿಲ್ಲಿಯಿಂದ 700 ಮೈಲು ದೂರದಲ್ಲಿದ್ದ ದೇವಗಿರಿಗೆ ದೌಲತಾಬಾದ್ ಎಂದು ಹೆಸರಿಟ್ಟು, ದೆಹಲಿಯ ಜನ ಅಲ್ಲಿಗೆ ಹೋಗಬೇಕೆಂದು ಕಟ್ಟಾಜ್ಞೆ ಹೊರಡಿಸಿದನು. ಆದರೆ ವಲಸೆ ಹೊರಟ ಜನ ಅನುಭವಿಸಿದ ಕಷ್ಟ ಹೇಳತೀರದು. ಎಷ್ಟೋ ಜನ ದಾರಿಯಲ್ಲೇ ಮಡಿದರು. ತಾನು ಮಾಡಿದ್ದು ಪ್ರಮಾದವಾಯಿತೆಂದು ಮನಗಂಡ ಅವನು ಜನರು ಮತ್ತೆ ದಿಲ್ಲಿಗೆ ಹಿಂದಿರುಗುವಂತೆ ಅಪ್ಪಣೆ ಮಾಡಿದ. ಇವನ ತಪ್ಪು ನಿರ್ಧಾರದಿಂದ ಬದುಕಿ ಉಳಿದು ದಿಲ್ಲಿಗೆ ಮರಳಿದವರು ಕೆಲವೇ ಜನ.

ಮಹಮ್ಮದನ ಇನ್ನೊಂದು ಆಡಳಿತ ಪ್ರಯೋಗವೆಂದರೆ ಬೆಳ್ಳಿಯ ನಾಣ್ಯಗಳ ಬದಲು ಅಷ್ಟೇ ಮುಖಮೌಲ್ಯವುಳ್ಳ ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದುದು. ಆದರೆ ತಾಮ್ರದ ನಾಣ್ಯಗಳನ್ನು ಟಂಕಿಸುವ ಅಧಿಕಾರ ಸರ್ಕಾರಕ್ಕೆ ಮಾತ್ರವೇ ಸೇರಿದ್ದು ಎಂಬ ರಾಜಾಜ್ಞೆಯನ್ನು ಅವನು ಹೊರಡಿಸಲಿಲ್ಲ. ಪರಿಣಾಮವಾಗಿ ಸಿಕ್ಕಸಿಕ್ಕವರೆಲ್ಲ ತಾಮ್ರದ ನಾಣ್ಯಗಳನ್ನು ತಯಾರಿಸಿದರು. ಅವಕ್ಕೆ ವಿನಿಮಯ ರೂಪದಲ್ಲಿ ಬೆಳ್ಳಿ ಲೋಹಗಳನ್ನು ಕೊಡುವುದು ಸರಕಾರಕ್ಕೆ ಸಾಧ್ಯವಾಗಲಿಲ್ಲ. ಮಹಮ್ಮದನು ತಪ್ಪನ್ನರಿತು ಮತ್ತೆ ಹಿಂದಿನ ನಾಣ್ಯಗಳನ್ನೇ ಚಲಾಯಿಸಬೇಕೆಂದು ಆಜ್ಞಾಪಿಸಿದ. ಒಟ್ಟಿನಲ್ಲಿ ಈ ಪ್ರಯೋಗದಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿತು.
ಮಹಮ್ಮದನ ಆಡಳಿತದಿಂದ ಅತೃಪ್ತರಾದ ಪ್ರಜೆಗಳು ದಂಗೆ ಎದ್ದರು. ಸಿಂಧ್ ಪ್ರದೇಶದಲ್ಲಿ ದಂಗೆಕೋರರನ್ನು ದಮನ ಮಾಡುತ್ತಿದ್ದಾಗ, ಜ್ವರ ಬಂದು, ಮಹಮ್ಮದ್ ತೀರಿಕೊಂಡ.
ಗುಲಾಮಿ ಸಂತತಿ, ಖಿಲ್ಜಿ ಮತ್ತು ತುಘಲಕರ ಅನಂತರ ಸಯ್ಯದ್ ಮತ್ತು ಲೋದಿಗಳು ಅಲ್ಪಕಾಲ ದಿಲ್ಲಿಯಿಂದ ಆಳ್ವಿಕೆ ನಡೆಸಿದರು. ಲೋದಿ ಸುಲ್ತಾನ್ ಇಬ್ರಾಹಿಮನನ್ನು ಮೊಗಲ ದೊರೆ ಬಾಬರ್ ಪಾಣಿಪತ್ ಕದನದಲ್ಲಿ ಸೋಲಿಸಿ, ಮೊಗಲ ಸಾಮ್ರಾಜ್ಯಕ್ಕೆ ಬುನಾದಿ ಹಾಕಿದನು.


ದಿಲ್ಲಿ ಸುಲ್ತಾನರ ಕೊಡಗೆಗಳು
ಆಡಳಿತ: ದಿಲ್ಲಿ ಸುಲ್ತಾನರ ರಾಜ್ಯದಲ್ಲಿ ಹಿಂದುಗಳು ಬಹುಸಂಖ್ಯಾತರಾಗಿದ್ದರೂ ಆಡಳಿತವು ಟರ್ಕ್ ನೆಲೆಯಲ್ಲಿ ನಡೆಯುತ್ತಿತ್ತು. ಮಿಲಿಟರಿ ಶಕ್ತಿಯು ರಾಜ್ಯದ ಬೆನ್ನೆಲುಬಾಗಿತ್ತು. ಸುಲ್ತಾನರು ನಿರಂಕುಶ ಪ್ರಭುಗಳಾಗಿದ್ದರು. ಬಲ್ಬನ್ ಎಂಬ ಸುಲ್ತಾನನು ತಾನು ದೇವರ ಪ್ರತಿನಿಧಿ, ದೇವರುಗಳಿಗಲ್ಲದೆ ಇನ್ನಾರಿಗೂ ಹೊಣೆಗಾರನಲ್ಲ ಎಂಬುದಾಗಿ ಸಾರಿದ್ದನು. ದೆಹಲಿಯ ಸುಲ್ತಾನರು ಸ್ಥಳೀಯ ರಾಜರ ಪ್ರಬಲ ಪ್ರತಿರೋಧವನ್ನು ಸತತ ಎದುರಿಸಬೇಕಾಗಿತ್ತು. ಅಧಿಕಾರವನ್ನು ಕಳೆದುಕೊಳ್ಳುವ ಭೀತಿ ಸುಲ್ತಾನರನ್ನು ಕಾಡುತ್ತಿತ್ತು.
ಆರ್ಥಿಕತೆ: ರೈತರ ಮೇಲಿನ ಭೂಕಂದಾಯದ ಹೊರೆ ವಿಪರೀತವಾಗಿತ್ತು. ಮಹಮ್ಮದ್ ಬಿನ್ ತುಘಲಕನು ಕಂದಾಯವನ್ನು ಇನ್ನಷ್ಟು ಹೆಚ್ಚಿಸಿದನಲ್ಲದೆ, ಅದನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿದನು. ಪರಿಣಾಮವಾಗಿ ರೈತರು ಎಲ್ಲೆಡೆ ದಂಗೆಯೆದ್ದರು.
ನೇಯ್ಗೆಯು ಆ ಕಾಲದ ಬೃಹತ್ ಉದ್ಯಮವಾಗಿತ್ತು. ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಬಿರುಸಾಗಿ ನಡೆಯುತ್ತಿತ್ತು. ಇದು ಭಾರಿ ಪ್ರಮಾಣದಲ್ಲಿ ಉದ್ಯೋಗ ಒದಗಿಸಿತು.
ಸುಲ್ತಾನರು ಪ್ರಮುಖವಾಗಿ ಯುದ್ಧಾಶ್ವಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು.
ಅಲ್ಲಾವುದ್ದೀನ್ ಖಿಲ್ಜಿಯು ಗುಲಾಮರ ಬೆಲೆಯನ್ನು ಕೂಡ ನಿಗದಿ ಮಾಡಿದ್ದನು. ಗುಲಾಮರನ್ನು ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿತ್ತು. ಸುಲ್ತಾನರ ಕೈಕೆಳಗಿದ್ದ ಗುಲಾಮರ ಸಂಖ್ಯೆಯಾದರೋ ದಂಗುಬಡಿಸುವಂತಿತ್ತು. ಅಲ್ಲಾವುದ್ದೀನನ ಕೆಳಗೆ 50,000 ಗುಲಾಮರಿದ್ದರೆ ಫಿರೂಜ್ಷಾ ತುಘಲಕನ ಅಧೀನದಲ್ಲಿ 1,80,000 ಗುಲಾಮರಿದ್ದರು.
ವಾಸ್ತು ಶಿಲ್ಪ ಮತ್ತು ಸಾಹಿತ್ಯ: ದಿಲ್ಲಿ ಸುಲ್ತಾನರ ಕಾಲದಪ್ರಮುಖ ವಾಸ್ತುಶಿಲ್ಪಗಳೆಂದರೆ – ಪ್ರಸಿದ್ಧವಾದ ಕುತುಬ್ ಮಿನಾರ್ (71 ಮಿ. ಎತ್ತರ), ಅಲೈ ದರ್ವಾಜಾ ಎಂಬ ಸುಂದರ ದ್ವಾರ, ಕವ್ವತ್ವುಲ್ ಇಸ್ಲಾಮ್ ಮಸೀದಿ ಮತ್ತು ಸಿರಿ ಕೋಟೆ.

ಇದೇ ಕಾಲದಲ್ಲಿ ಉರ್ದು ಭಾಷೆ ರೂಪುಗೊಂಡಿತು. ಅಮೀರ್ ಖುಸ್ರು ಮತ್ತು ಅಮೀರ್ ಹಸನ್ ಪರ್ಷಿಯನ್ ಭಾಷೆಯ ಹೆಸರಾಂತ ಕವಿಗಳು. ಖುಸ್ರು ಸಂಗೀತಗಾರನಾಗಿದ್ದು ತಬಲಾ, ಸಿತಾರ್ ಮುಂತಾದ ವಾದ್ಯಗಳನ್ನು ರೂಪಿಸಿದನು. ಜೈಸಿ ಎಂಬ ಕವಿ ಉರ್ದುವಿನಲ್ಲಿ `ಪದ್ಮಾವತ್’ ಎಂಬ ಸೂಫಿ ಕಾವ್ಯ ಬರೆದನು. ರಾಮಾನಂದ, ಕಬೀರ, ರಾಯಿದಾಸ, ಮೀರಾ ಈ ಕಾಲದಲ್ಲಿದ್ದ ಭಕ್ತ ಸಂತರು.


ಕಾಲಗಣನೆ (ಸಾ.ಶ.)
ಸಿಂಧ್ ಪ್ರಾಂತದ ಮೇಲೆ ಅರಬ್ಬರ ದಾಳಿ – ಸಾ.ಶ. 712
ಮಹಮ್ಮದ್ ಘಜನಿಯ ಆಕ್ರಮಣಗಳು – ಸಾ.ಶ. 1000-1026
ತರೈನ್ ಕದನಗಳು (ಮಹಮ್ಮದ್ ಘೋರಿ ಮತ್ತು ಪೃಥ್ವೀರಾಜ್ ಚೌಹಾಣರ ನಡುವೆ) – ಸಾ.ಶ. 1191-1192
ದೆಹಲಿಯ ಸುಲ್ತಾನರ ಆಳ್ವಿಕೆ – ಸಾ.ಶ. 1206-1526
ಕುತ್ಬುದ್ದೀನ್ ಐಬಕ್ – ಸಾ.ಶ. 1206-1210
ರಜಿಯಾ ಸುಲ್ತಾನಾ – ಸಾ.ಶ. 1236-1240
ಅಲ್ಲಾವುದ್ದೀನ್ ಖಿಲ್ಜಿ – ಸಾ.ಶ. 1296-1316
ಮಹಮ್ಮದ್ ಬಿನ್ ತುಘಲಕ್ – ಸಾ.ಶ. 1325-1351
ಪಾಣಿಪತ್ ಕದನ ಹಾಗೂ ಮೊಗಲ್ ಆಳ್ವಿಕೆಯ ಆರಂಭ – ಸಾ.ಶ. 1526
ಹೊಸ ಪದ:-
ಮಿನಾರ್ – ಎತ್ತರವಾದ ಸ್ತಂಭಗೋಪುರ.
ಸಂವೇದ ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು
* * * * * * * *