ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಸರ್ಗ ಇಕೋ ಕ್ಲಬ್ ವತಿಯಿಂದ ಬಾನು ಬೆರಗು ಕಾರ್ಯಕ್ರಮ ನಡೆಯಿತು.

ಶನಿವಾರ ಸಂಜೆ ನಡೆದ ಈ ಕಾರ್ಯಕ್ರಮದಲ್ಲಿ ಯಲ್ಲಾಪುರ ತಾಲೂಕಿನ ಆನಗೋಡ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರು ಹಾಗೂ ಹವ್ಯಾಸಿ ಖಗೋಳ ಶಾಸ್ತ್ರಜ್ಞರು ಆದ ಮಾರುತಿ ಆಚಾರಿ ಅವರು ಆಕಾಶಕಾಯಗಳ ಕುರಿತು ಮಾರ್ಗದರ್ಶನ ನೀಡಿದರು.

ಮಾರ್ಗದರ್ಶಕರಾದ ಮಾರುತಿ ಆಚಾರಿ ಅವರು ಮೊದಲಿಗೆ ಪ್ರಾಯೋಗಿಕವಾಗಿ ಸುಧಾರಿತ ಟೆಲಿಸ್ಕೋಪ್ ಮೂಲಕ ಸೌರಕಲೆಗಳ ಮಾಹಿತಿ ನೀಡಿದರು. ನಂತರ ನಡೆದ ಸೆಮಿನಾರ್ ನಲ್ಲಿ ಗ್ರಹಗಳು ಹಾಗೂ ಚಂದ್ರ, ನಕ್ಷತ್ರಗಳು, ನಕ್ಷತ್ರಪುಂಜಗಳು, ನಕ್ಷತ್ರ ಗುಚ್ಛಗಳು, ಧೂಮಕೇತುಗಳು, ಉಲ್ಕೆಗಳು, ಕ್ಷುದ್ರಗ್ರಹಗಳ ಕುರಿತು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಶಾಲೆಯ ಆವಾರದಲ್ಲಿ ಚಂದ್ರ ದರ್ಶನ, ಚಂದ್ರನ ಕುಳಿಗಳು, ಗುರು ಗ್ರಹ ಹಾಗೂ ಅದರ ಉಪಗ್ರಹಗಳು, ಶನಿ ಗ್ರಹಗಳ ವೀಕ್ಷಣೆ, ನಕ್ಷತ್ರಪುಂಜಗಳು, ಅವಳಿ ನಕ್ಷತ್ರಗಳು ಹಾಗೂ ನಿಹಾರಿಕೆಗಳನ್ನು ವೀಕ್ಷಿಸಿ ಸಂಭ್ರಮಿಸಿದರು.

ವಿದ್ಯಾರ್ಥಿಗಳು 5ನೇ ತರಗತಿಯ ಪರಿಸರ ಅಧ್ಯಯನದ ‘ಬಾನಂಗಳ’ ಹಾಗೂ 6ನೇ ತರಗತಿಯ ವಿಜ್ಞಾನ ಪಾಠವಾದ ‘ಭೂಮಿಯಿಂದ ಆಚೆಗೆ’ ಈ ಪಾಠದ ಪ್ರಾಯೋಗಿಕ ಅನುಭವವನ್ನು ಸುಧಾರಿತ ಟೆಲಿಸ್ಕೋಪ್ ಮೂಲಕ ವೀಕ್ಷಿಸಿ ಕಲಿಕೆ ದೃಢಪಡಿಸಿಕೊಂಡರು.

ಈ ಕಾರ್ಯಕ್ರಮದಲ್ಲಿ ಹುಲ್ಕುತ್ರಿ ಶಾಲೆಯ 4 ರಿಂದ 7ನೇ ತರಗತಿಯ 34 ವಿದ್ಯಾರ್ಥಿಗಳು, ಹಾದ್ರಿಮನೆ ಕಿರಿಯ ಪ್ರಾಥಮಿಕ ಶಾಲೆಯ 3 ವಿದ್ಯಾರ್ಥಿಗಳು ಸೇರಿದಂತೆ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಹಾಗೂ ಅಕ್ಕ ಪಕ್ಕದ ಶಾಲಾ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು. ಒಟ್ಟಾರೆ ಪಾಲಕರೆಲ್ಲ ಸೇರಿದಂತೆ ಅಂದಾಜು 110 ಜನ ವಿವಿಧ ಆಕಾಶ ಕಾಯಗಳನ್ನು ವೀಕ್ಷಿಸಿ ಸಂಭ್ರಮಿಸಿದರು. ನಂತರ ಫೈರ್ ಕ್ಯಾಂಪ್ ನೊಂದಿಗೆ ಬೆಳದಿಂಗಳೂಟ ನಡೆಯಿತು.

2022 ರಲ್ಲಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ನಕ್ಷತ್ರಪುಂಜ ವೀಕ್ಷಣೆ ಕಾರ್ಯಕ್ರಮ ಆಯೋಜಿಸಿದ ಹುಲ್ಕುತ್ರಿ ಶಾಲೆ ಈ ಬಾರಿ ಸುಧಾರಿತ ಉಪಕರಣದ ಮೂಲಕ ಕಾರ್ಯಕ್ರಮ ಆಯೋಜಿಸಿ, ಮಕ್ಕಳಿಗೆ ಕಲಿಕೆಯ ನೇರ ಅನುಭವ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮ ಪಂಚಾಯಿತಿ ಸದಸ್ಯರಾದ ರಾಧಾ ವೆಂಕಟ್ರಮಣ ಗೌಡ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಾರ್ಗದರ್ಶಕರಾದ ಮಾರುತಿ ಆಚಾರಿ, ಸಹಾಯಕರಾದ ನವೀನ್ ಆಚಾರಿ, ಎಸ್.ಡಿ.ಎಮ್.ಸಿ. ಅಧ್ಯಕ್ಷ ಸುರೇಶ ಬಂಗಾರ್ಯ ಗೌಡ, ಊರ ಹಿರಿಯರಾದ ವೆಂಕಟ್ರಮಣ ಗಣಪತಿ ಹೆಗಡೆ ಹುಟ್ಲೆ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು. ಶಾಲೆಯ ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಸ್ವಾಗತಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಮೈತ್ರಿ ಹೆಗಡೆ ಹಾಗೂ ನಾಗರತ್ನ ಭಂಡಾರಿಯವರು ನಿರ್ವಹಿಸಿದರು. ರಂಜನಾ ಭಂಡಾರಿಯವರು ವಂದಿಸಿದರು.