ಹಚ್ಚೇವು ಕನ್ನಡದ ದೀಪ – ಪದ್ಯ – 5

ಡಿ.ಎಸ್. ಕರ್ಕಿ-

ಪ್ರವೇಶ : ಅಮ್ಮ ಮನೆಯಲ್ಲಿ ಬೇಗ ಎದ್ದು ಪ್ರತಿ ದಿನದಂತೆ ರೇಡಿಯೋ ಆನ್ ಮಾಡಿದ್ದಳು. ಕಾರ್ತಿಕ್‍ನನ್ನು ಹಾಸಿಗೆಯಿಂದ ಏಳಿಸಿದಳು. ರೇಡಿಯೋದಲ್ಲಿ ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’….. ಹಾಡು ಕೇಳಿ ಬರುತ್ತಿತ್ತು. ಕಿರಣ್ ಈ ಹಾಡನ್ನು ಅತ್ಯಂತ ಆಸಕ್ತಿಯಿಂದ ಕೇಳುತ್ತಿದ್ದ. ಕೊನೆಯಲ್ಲಿ ‘ಅಮ್ಮ ಈ ಹಾಡನ್ನು ಬರೆದವರು ಯಾರು?’ ಎಂದು ತಾಯಿಯನ್ನು ಪ್ರಶ್ನಿಸಿದ. ತಾಯಿ “ನಮ್ಮ ರಾಷ್ಟ್ರಕವಿ ಕುವೆಂಪುರವರು ಈ ಹಾಡನ್ನು ಬರೆದಿದ್ದಾರೆ. ಇಂತಹ ಅನೇಕ ಹಾಡುಗಳನ್ನು ಅವರು ಬರೆದಿದ್ದಾರೆ. ಆ ಮೂಲಕ ಕನ್ನಡಿಗರ ನಡೆ ನುಡಿಯನ್ನು ಹಾಡಿ ಹೊಗಳಿದ್ದಾರೆ” ಎಂದರು .

ಕಾರ್ತಿಕ್ “ಅಮ್ಮಾ ಇಂತಹ ಹಾಡುಗಳನ್ನು ಇನ್ನು ಯಾರ್ಯಾರು ಬರೆದಿದ್ದಾರೆ” ಎಂದು ಕೇಳಿದ. “ಇಂತಹದ್ದೇ ಹಾಡುಗಳನ್ನು ಅನೇಕ ಕವಿವರೇಣ್ಯರು ಬರೆದಿದ್ದಾರೆ. ಅಂತಹವರಲ್ಲಿ ಡಿ.ಎಸ್. ಕರ್ಕಿಯವರೂ ಒಬ್ಬರು. ಅವರು ‘ಹಚ್ಚೇವು ಕನ್ನಡದ ದೀಪ’ ಎಂದು ಬರೆದ್ದಾರೆ. ಅವರ ‘ನಕ್ಷತ್ರಗಾನ’ ಎಂಬ ಕವನ ಸಂಕಲನ ಅಪ್ಪನ ಬೀರುವಿನಲ್ಲಿದೆ. ತೆಗೆದುಕೊಂಡು ಓದು” ಎಂದರು. ಕಿರಣ ಅಪ್ಪನ ಹತ್ತಿರ ಆ ಪುಸ್ತಕವನ್ನು ಪಡೆದು ಓದತೊಡಗಿದ. ಆ ಹಾಡು ಹೇಗಿದೆ ಎಂದು ನಾವೂ ನೋಡೋಣ ಬನ್ನಿ.

ಸ್ವಾತಂತ್ರ್ಯಪೂರ್ವದಲ್ಲಿ ಕನ್ನಡ ನಾಡು ಅನೇಕ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು. ಆದರೂ ಕನ್ನಡಿಗರೆಲ್ಲ ಒಂದು ಎಂಬ ಭಾವನೆ ಪ್ರತಿ ಕನ್ನಡಿಗನ ಮನದಲ್ಲೂ ಮನೆ ಮಾಡಿತ್ತು. ಇಂತಹ ಸಂದರ್ಭದಲ್ಲಿ ಸಾಮೂಹಿಕ ಜಾಗೃತಿಯನ್ನು ಉತ್ತೇಜಿಸುವ ವೀರದಾಟಿಯ ಅನೇಕ ಕವನಗಳು ನಮ್ಮ ಕವಿಗಳ ಲೇಖನಿಯಿಂದ ಹೊರಹೊಮ್ಮಿದವು.

ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು |

1
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸ-
ಲಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ, ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರೆವ, ತೆರೆದೇವು ಮನವ, ಎರೆದೇವು ಒಲವ- ಹಿಡಿ ನೆನಪ
ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ

2
ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯ ರೂಪ
ಅಚ್ಚಳಿಯದಂತೆ ತೋರೇವು
ಒಡಲೊಡಲ ಕಿಚ್ಚಿನಾ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ?
ನಾಡೊಲವೆ ನೀತಿ ಹಿಡಿ ನೆನಪ
ಮನೆ ಮನೆಗಳಲ್ಲಿ ಮನಮನಗಳಲ್ಲಿ
ಹಚ್ಚೇವು ಕನ್ನಡದ ದೀಪ

3
ನಮ್ಮವರು ಗಳಿಸಿದಾ ಹೆಸರ ಉಳಿಸ-
ಲೆಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆ ಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ, ಕಡೆದೇವು ಇರುಳ, ಪಡೆದೇವು ತಿರುಳ- ಹಿಡಿ ನೆನಪ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ

ಪದ್ಯದ ಮಾದರಿ ಗಾಯನ

Hacchevu Kannadada Deepa Lyrical Video Song | C Ashwath, D S Karki | Kannada Bhavageethegalu

https://youtu.be/BydSziTJXac

ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

ಆಶಯ : ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವ ದೇಶ -ನಾಡು ನಮ್ಮದು. ಜನರು ತೊಡುವ ಉಡುಗೆ-ತೊಡುಗೆಗಳಲ್ಲಿ, ಆಹಾರ-ವಿಹಾರಗಳಲ್ಲಿ, ನಡೆ-ನುಡಿಗಳಲ್ಲಿ ವಿವಿಧತೆಯೊಂದಿಗೆ ನಾವೆಲ್ಲ ಒಂದು ಎಂಬ ಒಗ್ಗಟ್ಟನ್ನು ಪ್ರದರ್ಶಿಸುತ್ತಾ ಬಂದವರು ನಾವು.

ಕನ್ನಡ ನಾಡಿನ ಭಾಷೆ ಕನ್ನಡ. ನಾಡಭಾಷೆಯಾದ ಕನ್ನಡ ಇಂದು ವಿವಿಧ ಕಾರಣಗಳಿಂದ ನಾಡಿನವರಿಂದ ದೂರವಾಗುತ್ತಿದೆ. ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮೇಲಿದೆ. ಪ್ರಪಂಚದಲ್ಲಿಯೇ ಅತ್ಯಂತ ವೈಜ್ಞಾನಿಕವಾಗಿ ಜೋಡಿಸಲ್ಪಟ್ಟ ವರ್ಣಮಾಲೆಯನ್ನು ಹೊಂದಿರುವ ಹೆಗ್ಗಳಿಕೆ ನಮ್ಮದು. ಸುಮಾರು ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸ ನಮ್ಮ ಈ ಭಾಷೆಗಿದೆ. ಇಂತಹ ಸುಂದರ ಭಾಷೆಯನ್ನು ನಮ್ಮ ನಾಡಿನಲ್ಲಿ ಜೊತೆಗೆ ನಾಡಿನ ಹೊರಗೂ ಪಸರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಇದರರ್ಥ ಬೇರೆ ಭಾಷೆಗಳನ್ನು ದ್ವೇಷಿಸಬೇಕೆಂದಲ್ಲ. ನಮ್ಮ ನಾಡಭಾಷೆಯ ನೆರಳಿನಲ್ಲಿ ಅನ್ಯಭಾಷೆಗಳೂ ಇರಲು ಅವಕಾಶ ಕೊಡಬೇಕು. ನಮ್ಮ ಭಾಷೆಯನ್ನು ಪ್ರೀತಿಸಬೇಕು, ಉಳಿಸಬೇಕು, ಬೆಳೆಸಬೇಕು. ಕನ್ನಡದ ದೀಪವನ್ನು ಮನೆ-ಮನಗಳಲ್ಲಿ ಹಚ್ಚಿ ಬೆಳಗಿಸುವ ಶಪಥವನ್ನು ನಾವೆಲ್ಲ ಇಂದು ಮಾಡಬೇಕಾಗಿದೆ.

ಕೃತಿಕಾರರ ಪರಿಚಯ

1907ರ ನವೆಂಬರ್ 15 ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಕೊಪ್ಪದಲ್ಲಿ ಡಿ.ಎಸ್.ಕರ್ಕಿ ಜನಿಸಿದರು. ಕರ್ನಾಟಕದ ಪ್ರಸಿದ್ಧ ಕವಿಗಳಾದ ಇವರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿ ಕೊನೆಯಲ್ಲಿ ಹುಬ್ಬಳ್ಳಿಯ ಕಲಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ 1966ರಲ್ಲಿ ನಿವೃತ್ತರಾದರು. ಇವರು ನಕ್ಷತ್ರಗಾನ, ಭಾವತೀರ್ಥ, ತನನತೋಂ, ಗೀತ ಗೌರವ, ಕರಿಕೆ ಕಣಗಿಲು, ನಮನ, ಬಣ್ಣದ ಚೆಂಡು ಎಂಬ ಕವನ ಸಂಕಲನಗಳನ್ನು ಬರೆದಿದ್ದಾರೆ. ಇದಲ್ಲದೆ ಕನ್ನಡ ಛಂದೋವಿಕಾಸ ಎಂಬ ಸಂಶೋಧನಾ ಪ್ರಬಂಧವನ್ನು ಸಹ ಬರೆದು ಕನ್ನಡಿಗರ ಮನಗೆದ್ದಿದ್ದಾರೆ. ಗಡಿನಾಡಿನಲ್ಲಿದ್ದ ಇವರು ಅವರೆಲ್ಲರ ಪ್ರತಿನಿಧಿಯಾಗಿ ಏಕೀಕರಣದ ಕನಸ ಕಂಡವರು. ಅದಕ್ಕಾಗಿಯೇ ಅನೇಕ ಕವನಗಳನ್ನು ಕಟ್ಟಿ ಜನರ ಮನದಲ್ಲಿ ಕೆಚ್ಚನ್ನು ಮೂಡಿಸಿದವರು.

ಕನ್ನಡಿಗರ ಮನಗಳಲ್ಲಿ ಕನ್ನಡದ ದೀಪ ಹಚ್ಚಿದ ಕವಿ ಡಿ.ಎಸ್‌.ಕರ್ಕಿ | Poet D.S.Karki

ಪದಗಳ ಅರ್ಥ

ಹಚ್ಚೇವು – ಹಚ್ಚುವೆವು;
ಕರುನಾಡು – ಕನ್ನಡನಾಡು;
ಕೊಚ್ಚೇವು – ಕತ್ತರಿಸುತ್ತೇವೆ;
ಸೂಸು – ಹರಡು, ಚಿಮುಕಿಸು;
ಕರಣ – ಒಡಲು, ಶರೀರ;
ಕಳೆ – ಕಾಂತಿ, ತೇಜಸ್ಸು, ಪ್ರಕಾಶ;
ಎರೆ – ಹೊಯ್ಯು;
ಹುರಿಗೊಳಿಸು – ಬಲಪಡಿಸು;
ಕೆಚ್ಚು – ಕೂಡುವಿಕೆ, ಬೆಸುಗೆ, ಸೇರಿಸು;
ಅಚ್ಚಳಿಯದೆ – ಅಂದಗೆಡದಂತೆ, ರೂಪುಗೆಡದಂತೆ;
ಒಂದುಗೂಡೇವು – ಒಂದಾಗಿ ಸೇರುತ್ತೇವೆ;
ತೀಡು – ಬೀಸು, ಹೊರಹೊಮ್ಮು;
ಮಾಂಗಲ್ಯಗೀತೆ – ಮಂಗಳಕರವಾದ ಹಾಡು;
ಮರುಳು – ಹುಚ್ಚು;
ಕಡೆ – ನಿವಾರಿಸು;
ಮೈಮರೆವು – ದೇಹದ ಅರಿವು ಇಲ್ಲವಾಗು, ಮೂರ್ಛೆ;
ಮಾತೆ – ತಾಯಿ, ಜನನಿ;
ಕೊಳೆ – ಹೊಲಸು;
ಕಂಪು – ಸುಗಂಧ, ಪರಿಮಳ;
ನಾಡು – ಜನವಸತಿಯುಳ್ಳ ಪ್ರದೇಶ, ರಾಜ್ಯ;
ಹಿಡಿ – ಗ್ರಹಿಸು, ಹಿಡಿದಿಟ್ಟುಕೊ;
ಹೊಸೆ – ಹುರಿ ಮಾಡು, ಹೆಣೆ:
ಹರಿವು – ಪ್ರವಹಿಸು, ಹರಿಯುವಿಕೆ;
ಬೀರು – ಹರಡು;
ಅಚ್ಚಳಿ – ಅಂದಕೆಡು;
ತೋರು – ಕಾಣುವಂತೆ ಮಾಡು;
ಒಡಲು – ಹೊಟ್ಟೆ; ತೂರು-ಎಸೆ.

ಸಂವೇದ ವಿಡಿಯೋ ಪಾಠಗಳು

Samveda – 7th – Kannada – Hacchevu Kannadada Deepa (Part 1 of 2)

Samveda – 7th – Kannada – Hacchevu Kannadada Deepa (Part 2 of 2)

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಪೂರಕ ಮಾಹಿತಿ

ನಡುನಾಡು : ಕನ್ನಡ ನಾಡಿನ ಮಧ್ಯದ ಜಿಲ್ಲೆಗಳು. ಉದಾಹರಣೆಗೆ – ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ ಇತ್ಯಾದಿ, ನಾಡಿನ ನಡುವೆ ಇರುವ ಪ್ರದೇಶಗಳು.

ಗಡಿನಾಡು : ಕನ್ನಡನಾಡಿನ ಗಡಿಯಲ್ಲಿರುವ ಜಿಲ್ಲೆಗಳು. ಉದಾಹರಣೆಗೆ – ಬೆಳಗಾವಿ, ಬೀದರ್, ಕೋಲಾರ, ಬಳ್ಳಾರಿ, ದಕ್ಷಿಣ ಕನ್ನಡ ಇತ್ಯಾದಿ.

ಕರುನಾಡು : ಕಪ್ಪು ಮಣ್ಣಿನ ನಾಡು, ವಿಶಾಲವಾದ ನಾಡು, ಕನ್ನಡ ನಾಡು.

ಸಿರಿನುಡಿ : ಸಂಪತ್ತಿನಿಂದ, ಶ್ರೀಮಂತಿಕೆಯಿಂದ ಕೂಡಿದ ಭಾಷೆ.

ನಾಡೊಲವು : ನಾಡಿನ ಬಗ್ಗೆ ಪ್ರೀತಿ.

ಕೆಳಗೆ ನೀಡಿರುವ ಪದಗಳು ಪದ್ಯದ ಸಂದರ್ಭದಲ್ಲಿ ಪಡೆದುಕೊಳ್ಳುವ ಅರ್ಥವನ್ನು ಗಮನಿಸಿರಿ.

ಕೊಳೆಯ ಕೊಚ್ಚೇವು – ನಾಡು ನುಡಿಯ ಬಗೆಗಿನ ಮರೆವಿನಿಂದಾಗಿ ಮೂಡಿರುವ ತಿರಸ್ಕಾರದ ಭಾವನೆಯನ್ನು ದೂರಮಾಡುತ್ತೇವೆ.
ಕರಣ ಚಾಚೇವು – ಕನ್ನಡ ಭಾಷೆಯ ಪರಿಮಳ ಬೀರುವಲ್ಲಿಗೆ ಹೋಗುತ್ತೇವೆ.
ಕಳೆಯಾ ಕೆಚ್ಚೇವು – ಕನ್ನಡದ ಕಾಂತಿಯನ್ನು ಬೆಳಗುತ್ತೇವೆ.
ಬೆಳಕ ಬೀರು – ಬೆಳಕನ್ನು ತೋರು.
ಅಚ್ಚಳಿಯದಂತೆ ತೋರು – ಕೆಡದಂತೆ ತೋರಿಸುತ್ತೇವೆ.
ಹಿಡಿನೆನಪ – ಜ್ಞಾಪಕ ಇಟ್ಟುಕೊ, ನೆನಪಿಟ್ಟು ಕೊ
ಕಡೆದೇವು ಇರುಳಾ – ಕತ್ತಲನ್ನು (ಕೆಟ್ಟದ್ದನ್ನು) ನಾಶ ಮಾಡುತ್ತೇವೆ.

ಕೆಳಗಿನ ಸಾಲುಗಳು ನೀಡುವ ಶಬ್ದಚಿತ್ರವನ್ನು ಗಮನಿಸಿ.

* ನರನರಗಳೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ. (ನರಗಳನ್ನು ದಾರದಂತೆ ಮಾಡಿ ಅದನ್ನು ದೀಪದಲ್ಲಿಟ್ಟು ಕನ್ನಡದ ದೀಪವನ್ನು ಬೆಳಗುತ್ತೇವೆ)
* ಕಲ್ಪನೆಯ ಬೆಳಕು ಹರಿವನಕ, ಸಾಲುದೀಪಗಳ ಬೆಳಕು ಬೀರೇವು. (ನಿಜವಾಗಿ ಕಣ್ಣಿಗೆ ಕಾಣುವುದಕ್ಕಿಂತ ಕಲ್ಪನೆಯಲ್ಲಿ ಇನ್ನೂ ಹೆಚ್ಚುದೂರ ಕಾಣುತ್ತದೆ. ನಮ್ಮ ಕಣ್ಣಿನಿಂದ ಆ ದಾರಿ ಸಾಗುವವರೆಗೆ ಸಾಲು ದೀಪಗಳನ್ನು ಹಚ್ಚುತ್ತೇವೆ.)
* ತೊಡೆದೇವು ಮರುಳಾ, ಕಡೆದೇವು ಇರುಳಾ, ಪಡೆದೇವು ತಿರುಳಾ. (ನಮ್ಮ ಹುಚ್ಚನ್ನು ಬಿಡುತ್ತೇವೆ, ಕೆಟ್ಟದ್ದನ್ನು ನಾಶ ಮಾಡುತ್ತೇವೆ, ಕನ್ನಡದ ಉತ್ತಮ ಬದುಕಿಗೆ ಬೇಕಾದ ಉತ್ತಮಾಂಶಗಳನ್ನು ಪಡೆಯುತ್ತೇವೆ.)
* ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ: (ಹೊಟ್ಟೆಯೊಳಗೆ ಕರುಳಿರುತ್ತದೆ. ಆದರೆ ಇಲ್ಲಿ ಮಮತೆ ಎಂಬರ್ಥ. ಅದಕ್ಕೆ ಮಿಂಚನ್ನು ಮುಡಿಸಿ ಎಂಬುದು ಒಂದು ಅರ್ಥ. ದೀಪದ ಕುಡಿ ಎಂದರೆ ತುದಿ ಅದಕ್ಕೆ ಮಿಂಚುವ ಬೆಳಕನ್ನು ಹಚ್ಚಿ ಎಂಬುದು ಇನ್ನೊಂದು ಅರ್ಥ)

ಪೂರಕ ಮಾಹಿತಿ

ನಮ್ಮ ಕನ್ನಡ ನಾಡು

ನಮ್ಮ ಕರ್ನಾಟಕದ ಹೆಸರು ಮಹಾಭಾರತದ ಕಾಲದಿಂದ ಇಂದಿನವರೆಗೆ ತನ್ನದೇ ಆದ ವಿಶೇಷತೆಗಳಿಂದ ಇತಿಹಾಸದ ಪುಟಗಳಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ. ಕರಿಯ ಮಣ್ಣಿನ ನಾಡು ಕರ್ನಾಟಕ, ಕರುನಾಡು ಅಥವಾ ಎತ್ತರದ ನಾಡು ಕರ್ನಾಟಕ, ಕಮ್ಮಿತು ನಾಡು ಅಂದರೆ ಶ್ರೀಗಂಧದ ಕಂಪನ್ನುಳ್ಳ ನಾಡು ಕರ್ನಾಟಕವಾಗಿದೆ ಎಂದೆಲ್ಲ ವಾದಿಸುವವರು ನಮ್ಮಲ್ಲಿದ್ದಾರೆ. ಆದರೆ ಜನಸಾಮಾನ್ಯ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ತನ್ನ ನಾಡು ಕರ್ನಾಟಕ ಎಂಬಷ್ಟಕ್ಕೇ ಪ್ರಾಧಾನ್ಯ ನೀಡಿದ್ದಾನೆ.

ಕ್ರಿ.ಪೂ. 3 ನೆಯ ಶತಮಾನದಲ್ಲಿ ಕರ್ನಾಟಕದ ಹೆಚ್ಚಿನ ಭಾಗ ಮೌರ್ಯಚಕ್ರವರ್ತಿ ಅಶೋಕನ ಆಳ್ವಿಕೆಗೆ ಒಳಪಟ್ಟಿತ್ತು ಎಂದು ಇತಿಹಾಸಕಾರರು ಕಂಡುಕೊಂಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಕರ್ನಾಟಕವನ್ನು ಕಂಚಿಯ ಪಲ್ಲವರಿಂದ ಹಿಡಿದು ಕನ್ನಡಿಗರನ್ನು ಆಳಿದ ಮೊದಲ ಕನ್ನಡಿಗ ದೊರೆಗಳಾದ ಕದಂಬರು, ಅನಂತರ ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಹೊಯ್ಸಳರು, ದೇವಗಿರಿ ಯಾದವರು, ವಿಜಯನಗರದರಸರು, ಬಹುಮನಿ ಸುಲ್ತಾನರು, ಬಿಜಾಪುರದ ಆದಿಲ್ ಷಾಹಿಗಳು, ಕೆಳದಿ- ಮೈಸೂರು ಅರಸರು, ಹೈದರ್, ಟಿಪ್ಪುವರೆಗೆ ಅನೇಕ ರಾಜಮನೆತನಗಳು, ರಾಜ ಮಹಾರಾಜರು ಆಳಿದ್ದಾರೆ. ಆ ಮೂಲಕ ರಾಜ್ಯದ ಏಳಿಗೆಗೆ ತಮ್ಮದೇ ಆದ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ.

ಭಾರತ ಜನನಿಯ ತನುಜಾತೆಯಾದ ಕರ್ನಾಟಕ ಮಾತೆ ಇಂದು ಭಾರತದ ಭೂಪಟದಲ್ಲಿ ತನ್ನದೇ ಆದ ವೈಶಿಷ್ಟ್ಯಗಳಿಂದ ರಾರಾಜಿಸುತ್ತಿದ್ದಾಳೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕೀರ್ತಿ ಕನ್ನಡ ಭಾಷೆಯದ್ದು. ಬ್ರಿಟಿಷರ ಕಾಲದಲ್ಲಿ ಕನ್ನಡ ಭಾಷಾ ಪ್ರದೇಶಗಳು ಸುಮಾರು 20 ಆಡಳಿತದಲ್ಲಿ ಹರಿದು ಹಂಚಿ ಹೋಗಿದ್ದವು. ಅನಂತರ 1947ರಲ್ಲಿ ಮದ್ರಾಸ್, ಮುಂಬೈ, ಮೈಸೂರು, ಕೊಡಗು ಹಾಗೂ ಹೈದರಾಬಾದ್ ಪ್ರಾಂತಗಳೆಂಬ ಬೇರೆ ಬೇರೆ ಆಡಳಿತಗಳಿಗೆ ಒಳಪಟ್ಟಿತ್ತು. 1956ರಲ್ಲಿ ಈ ಎಲ್ಲಾ ಪ್ರಾಂತಗಳನ್ನು ಒಟ್ಟು ಸೇರಿಸಿ ಮೈಸೂರು ರಾಜ್ಯ ಎಂಬ ಹೆಸರಿನಲ್ಲಿ ಇಂದಿನ ನಮ್ಮ ಕನ್ನಡ ನಾಡು ಉದಯಿಸಲ್ಪಟ್ಟಿತು. ಮೈಸೂರು ರಾಜ್ಯಕ್ಕೆ ಪುನರ್‍ನಾಮಕರಣವನ್ನು ಮಾಡಿ 1973ರ ನವೆಂಬರ್ 1 ರಂದು “ಕರ್ನಾಟಕ” ಎಂದು ಬದಲಿಸಲಾಯಿತು.

ಚೆನ್ನುಡಿ

ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ
ಕನ್ನಡ ಕಸ್ತೂರಿಯನ್ನ
ಹೊಸತುಸಿರಿಂ ತೀಡದನ್ನ
ಸುರಭಿ ಎಲ್ಲಿ? ನೀನದನ್ನ
ನವಶಕ್ತಿಯನೆಬ್ಬಿಸು
ಹೊಸಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು||
-ಎಂ. ಗೋವಿಂದ ಪೈ (ರಾಷ್ಟ್ರಕವಿ, ವಿದ್ವಾಂಸ, ಸಂಶೋಧಕರು)

ಕಸ್ತೂರಿ ಮೃಗವು ತನ್ನಲ್ಲೇ ಪರಿಮಳ ಅಡಗಿದ್ದರೂ ಅದನ್ನು ಅರಿಯದೆ ಬೇರೆ ಕಡೆ ಕಸ್ತೂರಿಯ ಪರಿಮಳ ಹುಡುಕುವಂತೆ, ನಾವಿಂದು ಕಸ್ತೂರಿಯಂತೆ ಪರಿಮಳಯುಕ್ತವಾದ ಕನ್ನಡವನ್ನು ತಿಳಿಯದೆ, ಬೇರೆ ಭಾಷೆಯ ಕಡೆ ನೋಡುತ್ತಿದ್ದೇವೆ. ಕನ್ನಡದ ಕಸ್ತೂರಿಯನ್ನು ಹೊಸ ಉಸಿರಿಂದ ತೀಡಿ, ಹೊಸ ಶಕ್ತಿಯನ್ನಾಗಿ ಅದನ್ನು ಎಬ್ಬಿಸಿ, ಅದರ ಸುಗಂಧವನ್ನು ಎಲ್ಲ ದಿಕ್ಕಿಗೆ ಹರಡಬೇಕಾಗಿದೆ.