ಸ್ವಾತಂತ್ರ್ಯ ಚಳುವಳಿ (ಸಾ.ಶ. 1885-1919) – ಅಧ್ಯಾಯ 17
ಪಾಠದ ಪರಿಚಯ
ಬ್ರಿಟಿಷರ ಶೋಷಣಾತ್ಮಕ ನೀತಿಗಳಿಂದಾಗಿ 19ನೇ ಶತಮಾನದ ಉತ್ತರಾರ್ಧದಲ್ಲಿ ರಾಷ್ಟ್ರೀಯತೆ ಚಿಗುರೊಡೆಯಿತು. ಇಂಗ್ಲಿಷ್ ಶಿಕ್ಷಣ ಪಡೆದ ಹೊಸ ವಿದ್ಯಾವಂತ ವರ್ಗವು ಬ್ರಿಟಿಷ್ ಆಳ್ವಿಕೆಯ ನಿಜವಾದ ಉದ್ದೇಶವನ್ನು ಅರ್ಥಮಾಡಿಕೊಂಡಿತು. ರೈತಾಪಿಗಳು, ಆದಿವಾಸಿಗಳು ಮತ್ತಿತರ ವರ್ಗಗಳು ಸಹ ಬ್ರಿಟಿಷರಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದು, ಬ್ರಿಟಿಷರ ವಿರುದ್ದ ತೀವ್ರ ಪ್ರತಿಭಟನೆಗಾಗಿ ಮಿಡಿಯುತ್ತಿದ್ದವು. ಈ ಅಧ್ಯಾಯದಲ್ಲಿ ಭಾರತೀಯ ರಾಷ್ಟ್ರೀಯತೆಯ ಉದಯಕ್ಕೆ ಕಾರಣವಾದ ಪ್ರಮುಖ ಅಂಶಗಳು, ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಸ್ಥಾಪನೆ ಮತ್ತು ರಾಷ್ಟ್ರೀಯ ಚಳವಳಿಯಲ್ಲಿ ಮಂದಗಾಮಿಗಳ ಮತ್ತು ತೀವ್ರಗಾಮಿಗಳ ಪಾತ್ರ ಇವೇ ಮೊದಲಾದ ಸಂಗತಿಗಳನ್ನು ನಿರೂಪಿಸಲಾಗಿದೆ.
ಗಾಂಧಿಜೀಯವರ ರಾಜಕೀಯ, ಆರ್ಥಿಕ ಚಿಂತನೆಗಳು ಜಗತ್ತಿನಾದ್ಯಂತ ಮನ್ನಣೆ ಪಡೆದಿವೆ. ಅವರ ನೇತೃತ್ವದ ರಾಜಕೀಯ ಹೋರಾಟದ ಈ ಕಾಲಾವಧಿಯನ್ನು `ಗಾಂಧೀ ಯುಗ’ (ಸಾ.ಶ. 1919-1947) ಎಂದು ಕರೆಯಲಾಗಿದೆ. ಈ ಅಧ್ಯಾಯದಲ್ಲಿ ಸಾ.ಶ. 1919-1947ರ ಕಾಲಾವಧಿಯ ಸ್ವಾತಂತ್ರ್ಯ ಚಳವಳಿಯನ್ನು ಪರಿಚಯಿಸಲಾಗಿದೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಿಳೆಯರು ಅತ್ಯಂತ ಕ್ರಿಯಾಶೀಲರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಲ್ಲದೆ, ಸ್ವಾತಂತ್ರ್ಯದಲ್ಲಿ ತಮಗೂ ಪಾಲಿದೆ ಎಂಬುದನ್ನು ತೋರಿಸಿಕೊಟ್ಟರು. ಈ ಹಿನ್ನಲೆಯಲ್ಲಿ ಕರ್ನಾಟಕದ ಮಹಿಳೆಯರ ಪಾತ್ರವೂ ಅನನ್ಯವಾದದ್ದು.
ರಾಷ್ಟ್ರೀಯತೆಯ ಬೆಳವಣಿಗೆ
ನಮ್ಮ ಭಾರತ ಬಹುಮುಖಿ ಅಥವಾ ವೈವಿಧ್ಯಮಯ ಸಂಸ್ಕೃತಿಗಳನ್ನು ಹೊಂದಿರುವ ದೇಶ. ನಮಗೆ ಸುದೀರ್ಘ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಪರಂಪರೆ ಇದೆ. ಇವು 19ನೇ ಶತಮಾನದ ಉತ್ತರಾರ್ಧದಲ್ಲಿ ರಾಷ್ಟ್ರೀಯತೆಯ ಬೆಳವಣಿಗೆಗೆ ಒಂದು ತಾತ್ವಿಕ ಬುನಾದಿಯನ್ನು ಹಾಕಿಕೊಟ್ಟವು. ರಾಷ್ಟ್ರೀಯತೆ ಎಂದರೆ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದ ಜನರ ಮನದಲ್ಲಿ ಮೂಡುವ `ನಾವೆಲ್ಲರೂ ಒಂದೇ’ ಎಂಬ ಏಕತೆಯ ಭಾವನೆಯಾಗಿದೆ. ಜೊತೆಗೆ ತಮ್ಮದೆಂಬ ಆ ಪ್ರದೇಶದ ಬಗೆಗಿನ ಗೌರವ ಮತ್ತು ಅಭಿಮಾನವನ್ನೂ ಒಳಗೊಂಡಿರುತ್ತದೆ.
ಸಾ.ಶ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯರ ಹೋರಾಟ ಬಿಡಿಬಿಡಿಯಾಗಿತ್ತೇ ವಿನಃ ಇಡಿಯಾಗಿರಲಿಲ್ಲ. ಇದರಿಂದ ಸರಿಯಾದ ಹೊಂದಾಣಿಕೆ ಇಲ್ಲದೆ ಹೋರಾಟ ವಿಫಲಗೊಂಡಿತು. ಆದರೆ ಇದು ಪ್ರಜ್ಞಾವಂತ ಭಾರತೀಯರಲ್ಲಿ ಸಂಘಟನೆಯ ಮಹತ್ವದ ಅರಿವನ್ನು ಉಂಟುಮಾಡಿತು. ಇದು ಕ್ರಮೇಣ ರಾಷ್ಟ್ರೀಯ ಹೋರಾಟವಾಗಿ ರೂಪುಗೊಂಡಿತು. ರಾಷ್ಟ್ರೀಯತೆಯ ಬೆಳವಣಿಗೆಗೆ ಹಲವು ಅಂಶಗಳು ಪ್ರೇರಣೆ ನೀಡಿವೆ. ಅವು ಈ ರೀತಿ ಇವೆ.
1. ಪಾಶ್ಚಿಮಾತ್ಯ ಶಿಕ್ಷಣ ಮತ್ತು ಆಧುನಿಕ ಜ್ಞಾನ ವಿಜ್ಞಾನದ ಪರಿಚಯ: ಇಂಗ್ಲಿಷ್ ಶಿಕ್ಷಣ ಪಡೆದ ಭಾರತೀಯರು ಯುರೋಪಿನ ಚಿಂತನಶೀಲ ಕೃತಿಗಳನ್ನು ಓದುವುದರ ಮೂಲಕ ರಾಷ್ಟ್ರೀಯ ರಾಜಕೀಯ ಮನೋಭಾವವನ್ನು ಅರಗಿಸಿಕೊಂಡರು. ಯುರೋಪಿನಲ್ಲಿ ಹುಟ್ಟಿಕೊಂಡ ಪರಿಕಲ್ಪನೆಗಳಾದ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವ ಇವರನ್ನು ರಾಜಕೀಯವಾಗಿ ಪ್ರೇರೇಪಿಸಿತು. ಅದು ಅವರಲ್ಲಿ ಸ್ವಾತಂತ್ರ್ಯದ ಅಭಿಲಾಷೆಗೆ ಸ್ಫೂರ್ತಿ ನೀಡಿತು. ಇಂಗ್ಲಿಷ್ ಕಲಿತ ಭಾರತೀಯರು ತಮ್ಮ ಬೆಂಬಲಕ್ಕಿರುತ್ತಾರೆ ಎನ್ನುವ ಬ್ರಿಟಿಷರ ಲೆಕ್ಕಾಚಾರವನ್ನು ಹುಸಿಗೊಳಿಸಿದರು.
2. ಏಕರೂಪ ಆಡಳಿತಾತ್ಮಕ ವ್ಯವಸ್ಥೆ: ಬ್ರಿಟಿಷರು ಭಾರತವನ್ನು ಏಕರೂಪ ಆಡಳಿತ ವ್ಯವಸ್ಥೆಗೆ ಒಳಪಡಿಸಿದರು. ಇದರಿಂದ ಒಂದೇ ರೀತಿಯ ನಿಯಮಗಳಿಗೆ ಒಳಪಟ್ಟ ಭಾರತೀಯರಲ್ಲಿ ನಾವೆಲ್ಲರೂ ಸಮಾನರು ಎಂಬ ಭಾವನೆಯನ್ನು ಉಂಟುಮಾಡಿತು. ಅದೇ ರೀತಿ ಬ್ರಿಟಿಷರು ಜಾರಿಗೆ ತಂದ ಜನ ವಿರೋಧಿ ಕಾಯ್ದೆ ಕಾನೂನುಗಳನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಲಾರಂಭಿಸಿದರು. ಇದು ಭಾರತೀಯರಲ್ಲಿ ನಾವೆಲ್ಲ ಒಂದೇ ಎಂಬ ರಾಷ್ಟ್ರೀಯ ಪ್ರಜ್ಞೆ ಬೆಳಯಲು ಕಾರಣವಾಯಿತು.
3. ಆರ್ಥಿಕ ಶೋಷಣೆ: ಬ್ರಿಟಿಷರು ತಮ್ಮ ಆರ್ಥಿಕ ನೀತಿಗಳ ಮೂಲಕ ಭಾರತೀಯರ ವ್ಯಾಪಾರ, ಕೃಷಿ, ಕೈಗಾರಿಕೆಗಳ ಅವನತಿಗೆ ಕಾರಣರಾದರು. ಭೂಮಿಯನ್ನು ಮಾರಾಟದ ವಸ್ತುವನ್ನಾಗಿ ಪರಿವರ್ತಿಸಿದರು. ದಾದಾಭಾಯ್ ನವರೋಜಿಯವರು ಭಾರತದ ಸಂಪತ್ತನ್ನು ಬ್ರಿಟಿಷರು ದೋಚುತ್ತಿದ್ದ ಕ್ರಮವನ್ನು ತಮ್ಮ `ಸಂಪತ್ತಿನ ಸೋರಿಕೆ ಸಿದ್ಧಾಂತ’ದ ಮೂಲಕ ಪ್ರತಿಪಾದಿಸಿದರು.

4. ಪರಂಪರೆಯ ಪರಿಚಯ: ಸರ್ ವಿಲಿಯಂ ಜೋನ್ಸ್, ಎಚ್.ಟಿ. ಕೋಲ್‍ಬ್ರೂಕ್, ಮ್ಯಾಕ್ಸ್ ಮುಲ್ಲರ್, ಕನ್ನಿಂಗ್‍ಹ್ಯಾಮ್ ಮುಂತಾದ ವಿದೇಶಿ ವಿದ್ವಾಂಸರು ಭಾರತದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ತಮ್ಮ ಅಧ್ಯಯನದ ಮೂಲಕ ಭಾರತೀಯರಿಗೆ ಪರಿಚಯಿಸಿದರು. ಇದರಿಂದ ಭಾರತೀಯ ಪರಂಪರೆ ಗ್ರೀಕ್, ರೋಮ್‍ಗಳಿಗೇನೂ ಕಡಿಮೆ ಇಲ್ಲ ಎಂಬುದು ದೃಢಪಟ್ಟಿತು. ಆ ಮೂಲಕ ರಾಷ್ಟ್ರೀಯತೆಯ ಬೇರುಗಳು ಅರಿವಿನ ರೂಪದಲ್ಲಿ ಮತ್ತೆ ಆಳಕ್ಕೆ ಇಳಿಯತೊಡಗಿದವು.




5. ಸಾಮಾಜಿಕ ಧಾರ್ಮಿಕ ಚಳವಳಿಗಳು: 19ನೇ ಶತಮಾನದ ಭಾರತೀಯ ಸಮಾಜ ಸುಧಾರಕರಾದ ಈಶ್ವರಚಂದ್ರ ವಿದ್ಯಾಸಾಗರ, ಸ್ವಾಮಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ ಮೊದಲಾದವರು ಭಾರತೀಯ ವಂಚಿತ ಮತ್ತು ಶೋಷಿತ ಸಮುದಾಯಗಳಿಗೆ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ದಯಾನಂದರು ಸ್ವರಾಜ್ಯ ಮತ್ತು ಸ್ವದೇಶಿ ವಿಚಾರಧಾರೆಯನ್ನು ಬಿತ್ತಿದರೆ, ವಿವೇಕಾನಂದರು ಜಡಗೊಂಡಿದ್ದ ಸಮುದಾಯವನ್ನು ಎಚ್ಚರಗೊಳಿಸುವ ಕೆಲಸ ಮಾಡಿದರು. ಇದು ರಾಷ್ಟ್ರೀಯತೆಯ ಬೆಳವಣಿಗೆಗೆ ಹೊಸ ಆಯಾಮ ತಂದುಕೊಟ್ಟಿತು. ವಿದ್ಯಾವಂತ ಭಾರತೀಯರನ್ನು ಕ್ರಿಯಾಶೀಲರನ್ನಾಗಿಸಿತು.



6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸ್ಫೂರ್ತಿ: ಈ ಘಟನೆಯು ಭಾರತೀಯರು ರಾಜಕೀಯವಾಗಿ ಹೆಚ್ಚು ಸಂಘಟಿತರಾಗಬೇಕೆಂಬುದನ್ನು ಮನವರಿಕೆ ಮಾಡಿಕೊಟ್ಟಿತು. ಅಲ್ಲದೆ ಈ ಹೋರಾಟದಲ್ಲಿ ಹುತಾತ್ಮರಾದ ಮಂಗಲ್‍ಪಾಂಡೆ, ಲಕ್ಷ್ಮೀಬಾಯಿ, ಹಜ್ರತ್ ಮಹಲ್ ಮೊದಲಾದ ನಾಯಕರು ಮುಂದಿನ ತಲೆಮಾರಿನ ನಾಯಕರಿಗೆ ಸ್ಫೂರ್ತಿಯ ಸೆಲೆಯಾದರು.



7. ಜನಾಂಗೀಯ ತಾರತಮ್ಯತೆ: ಬ್ರಿಟಿಷರು ತಮ್ಮನ್ನು ಶ್ರೇಷ್ಠರೆಂದು ಭಾವಿಸಿದ್ದರು. ಭಾರತೀಯರನ್ನು ಅನಾಗರಿಕರೆಂದು ಕರೆದರು. ಆಡಳಿತದ ಉನ್ನತ ಹುದ್ದೆಗಳು ಬ್ರಿಟಿಷರಿಗಷ್ಟೇ ಮೀಸಲಾಗಿದ್ದವು. ಭಾರತದಲ್ಲಿದ್ದ ಇಂಗ್ಲಿಷ್ ಸಮುದಾಯವು ಇಲ್ಬರ್ಟ್ ಮಸೂದೆಯನ್ನು (ಸಾ.ಶ. 1884) ವಿರೋಧಿಸಿದ್ದು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಇದರಿಂದ ಒಂದೇ ನೀತಿ, ನಿಯಮಗಳಿಗೆ ಒಳಪಟ್ಟ ಭಾರತೀಯರಲ್ಲಿ ಸಹಜವಾಗಿ ನಾವೆಲ್ಲರೂ ಸಮಾನರು ಎಂಬ ಭಾವನೆಯನ್ನು ಉಂಟುಮಾಡಿತು. ಬ್ರಿಟಿಷರು ತಂದ ಜನವಿರೋಧಿ ಕಾಯ್ದೆ ಕಾನೂನುಗಳನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಲಾರಂಭಿಸಿದರು. ಮೇಲೆ ವಿವರಿಸಿದ ಕಾರಣಗಳು ಭಾರತೀಯರಲ್ಲಿ ನಾವೆಲ್ಲ ಒಂದೇ ಎಂಬ ರಾಷ್ಟ್ರೀಯ ಪ್ರಜ್ಞೆ ಬೆಳೆಯಲು ಕಾರಣವಾದವು.
ಭಾರತ ರಾಷ್ಟ್ರೀಯ ಕಾಂಗ್ರೆಸ್ (ಸಾ.ಶ. 1885)
ಭಾರತ ರಾಷ್ಟ್ರೀಯ ಕಾಂಗ್ರೆಸ್ ನಿವೃತ್ತ ಬ್ರಿಟಿಷ್ ನಾಗರಿಕ ಸೇವಾಧಿಕಾರಿ ಎಲನ್ ಆಕ್ಟೇವಿಯನ್ ಹ್ಯೂಮ್ ಅವರ ಕನಸಿನ ಕೂಸಾಗಿತ್ತು. ಇದು ಸಾ.ಶ. 1885ರಲ್ಲಿ ಮುಂಬೈಯಲ್ಲಿ ಸ್ಥಾಪಿತವಾಯಿತು. ಉಮೇಶಚಂದ್ರ ಬ್ಯಾನರ್ಜಿಯವರು ಕಾಂಗ್ರೆಸಿನ ಮೊದಲ ಅಧ್ಯಕ್ಷರಾಗಿದ್ದರು. ಮುಂಬೈಯಲ್ಲಿ ನಡೆದ ಕಾಂಗ್ರೆಸಿನ ಮೊದಲ ಅಧಿವೇಶನದಲ್ಲಿ 72 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು. ಅವರಲ್ಲಿ ಹೆಚ್ಚಿನವರು ವಕೀಲರು, ಪತ್ರಕರ್ತರು ಮತ್ತು ಸಮಾಜದ ಪ್ರತಿಷ್ಠಿತ ವರ್ಗದವರಾಗಿದ್ದರು. ವಾಸ್ತವವಾಗಿ ಕಾಂಗ್ರೆಸ್ ರಾಷ್ಟ್ರೀಯ ಚಳವಳಿಗೆ ಚಾಲನೆ ನೀಡಿದ ಮೊದಲ ರಾಜಕೀಯ ವೇದಿಕೆಯಾಗಿತ್ತು.

ಭಾರತ ರಾಷ್ಟ್ರೀಯ ಕಾಂಗ್ರೆಸಿನ ಉದ್ದೇಶಗಳು:
* ದೇಶದ ವಿವಿಧ ಭಾಗಗಳಲ್ಲಿರುವ ರಾಜಕೀಯ ಕಾರ್ಯಕರ್ತರ ನಡುವೆ ಸ್ನೇಹ ಸಂಬಂಧವನ್ನು ಬೆಸೆಯುವುದು;
* ರಾಷ್ಟ್ರೀಯ ಏಕತೆಯನ್ನುಂಟುಮಾಡುವುದು;
* ಜನತೆಯ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಿ, ಜನಾಭಿಪ್ರಾಯವನ್ನು ರೂಪಿಸುವುದು; ಮತ್ತು
* ಪ್ರಾಂತೀಯತೆಯನ್ನು ತೊರೆದು ರಾಷ್ಟ್ರೀಯತೆಯನ್ನು ಮೂಡಿಸುವುದು.
ಮಂದಗಾಮಿಗಳ ಯುಗ (ಸಾ.ಶ. 1885-1905)
ಭಾರತ ರಾಷ್ಟ್ರೀಯ ಕಾಂಗ್ರೆಸಿನ ಆರಂಭಿಕ ನಾಯಕರುಗಳನ್ನು ಮಂದಗಾಮಿಗಳು (ಸೌಮ್ಯವಾದಿಗಳು) ಎಂದು ಕರೆಯಲಾಗಿದೆ. ಸಾ.ಶ. 1885ರಿಂದ ಸಾ.ಶ. 1905ರ ನಡುವಿನ ಕಾಲಘಟ್ಟವನ್ನು ಮಂದಗಾಮಿಗಳ ಕಾಲ ಎಂದು ಪರಿಗಣಿಸಲಾಗಿದೆ. ಅವರು ಸಂವಿಧಾನಾತ್ಮಕ ನೀತಿಯಲ್ಲಿ ನಂಬಿಕೆಯಿರಿಸಿದ್ದರು. ಬ್ರಿಟಿಷ್ ಆಳ್ವಿಕೆಗೆ ನಿಷ್ಠಾವಂತರಾದ ಅವರು ಪ್ರಾರ್ಥನೆ, ಬಿನ್ನಹ ಮತ್ತು ಪ್ರತಿಭಟನೆಯ ನೀತಿಯನ್ನು ಅನುಸರಿಸಿದರು. ಜೊತೆಗೆ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತರುವಂತೆ ಬ್ರಿಟಿಷರನ್ನು ಮನವೊಲಿಸಲು ಪ್ರಯತ್ನಿಸಿದರು. ಪ್ರಮುಖ ಮಂದಗಾಮಿ ನಾಯಕರೆಂದರೆ ದಾದಾಭಾಯ್ ನವರೋಜಿ, ಸುರೇಂದ್ರನಾಥ ಬ್ಯಾನರ್ಜಿ, ಗೋಪಾಲಕೃಷ್ಣ ಗೋಖಲೆ, ಮಹಾದೇವ ಗೋವಿಂದ ರಾನಡೆ ಮತ್ತು ಇನ್ನಿತರರು.
ಮಂದಗಾಮಿಗಳ ಹೋರಾಟದ ಫಲವಾಗಿ ಭಾರತೀಯರು ಶಾಸನ ಸಭೆಗಳನ್ನು ಪ್ರವೇಶಿಸಲು ಸಾಧ್ಯವಾಯಿತು. ಅಲ್ಲದೆ ಮಂದಗಾಮಿಗಳ ಪ್ರಯತ್ನದಿಂದ ಭಾರತದ ಬಡತನಕ್ಕೆ ಬ್ರಿಟಿಷರು ಕಾರಣ ಎಂಬುದು ತಿಳಿಯಿತು. ಜೊತೆಗೆ ಈ ಕಾಲಘಟ್ಟದಲ್ಲಿ ಭಾರತೀಯರು ರಾಜಕೀಯ ಸಂಘರ್ಷಕ್ಕೆ ಬೇಕಾದ ತರಬೇತಿ ಪಡೆಯುವ ಮೂಲಕ ಬ್ರಿಟಿಷ್ ವಿರೋಧಿ ಹೋರಾಟಕ್ಕೆ ರಾಷ್ಟ್ರೀಯ ವ್ಯಾಪ್ತಿಯನ್ನು ಸೃಷ್ಟಿಸಿಕೊಂಡರು.


ಮಂದಗಾಮಿಗಳ ಬೇಡಿಕೆಗಳು
ಗೋಪಾಲಕೃಷ್ಣ ಗೋಖಲೆ ವಾಕ್ ಮತ್ತು ಮುದ್ರಣ ಸ್ವಾತಂತ್ರ್ಯ, ಕಾರ್ಯಾಂಗದಿಂದ ನ್ಯಾಯಾಂಗದ ಬೇರ್ಪಡೆ, ಸೈನಿಕ ವೆಚ್ಚದ ಕಡಿತ, ಪ್ರಾಥಮಿಕ, ಪ್ರೌಢ ಮತ್ತು ತಾಂತ್ರಿಕ ಶಿಕ್ಷಣದ ಅನುಷ್ಠಾನ, ಶಸ್ತ್ರಾಸ್ತ್ರ ನಿಷೇಧ ಕಾಯಿದೆಯ ರದ್ಧತಿ, ಬ್ಯಾಂಕಿಂಗ್, ನೀರಾವರಿ, ವೈದ್ಯಕೀಯ ಮತ್ತು ಆರೋಗ್ಯ ಸೌಲಭ್ಯಗಳು, ಉಪ್ಪಿನ ಸುಂಕದ ಸಂಪೂರ್ಣ ರದ್ದತಿ, ಇಂಗ್ಲೆಂಡ್ ಮತ್ತು ಇಂಡಿಯಾದಲ್ಲಿ ಏಕಕಾಲದಲ್ಲಿ ಐ.ಸಿ.ಎಸ್. ಪರೀಕ್ಷೆಯನ್ನು ನಡೆಸುವುದು, ಕೇಂದ್ರ ಹಾಗೂ ಪ್ರಾಂತೀಯ ಶಾಸನ ಸಭೆಗಳಲ್ಲಿ ಭಾರತೀಯರಿಗೆ ಪ್ರಾತಿನಿಧ್ಯ ನೀಡುವುದು, ಉನ್ನತ ಹುದ್ದೆಗಳಿಗೆ ಭಾರತೀಯರನ್ನು ನೇಮಿಸುವುದು ಮುಂತಾದುವು.
ತೀವ್ರಗಾಮಿಗಳ ಯುಗ (ಸಾ.ಶ. 1905-1919)
ಮಂದಗಾಮಿಗಳು ಸಾಮಾನ್ಯ ಜನತೆಯನ್ನು ತಲಪಲಿಲ್ಲ. ಅವರು ಅನುಸರಿಸಿದ ಪ್ರಾರ್ಥನೆ ಮತ್ತು ಮನವಿ ನೀತಿಗಳನ್ನು ‘ತಿರುಪೆಯ ನೀತಿ’ (ಪಾಲಿಸಿ ಆಫ್ ಮೆಂಡಿಕೆನ್ಸಿ) ಎಂದು ತೀವ್ರವಾದಿಗಳು ವ್ಯಂಗ್ಯವಾಡಿದರು. ಯುವ ವರ್ಗ ಅವರ ನೀತಿಗಳಿಂದ ಆಕರ್ಷಿತರಾಗಲಿಲ್ಲ. ಇವರ ಕಾಯುವ ವಿಧಾನವನ್ನು ಪ್ರಶ್ನಿಸುವ ಹೊಸ ನಾಯಕರ ಒಂದು ಗುಂಪು ಕಾಂಗ್ರೆಸಿನಲ್ಲಿ ಉದಯಿಸಿತು. ಅವರೇ ತೀವ್ರಗಾಮಿಗಳು. ಲಾಲಾ ಲಜಪತ್ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್‍ಚಂದ್ರ ಪಾಲ್ ಇವರು ತೀವ್ರಗಾಮಿ ಗುಂಪಿನ ನಾಯಕರಾಗಿದ್ದು `ಲಾಲ್-ಬಾಲ್-ಪಾಲ್’ ಎಂದೇ ಜನಪ್ರಿಯರಾದರು. ಸಾ.ಶ. 1905 – 1919ರ ಕಾಲಾವಧಿಯನ್ನು ತೀವ್ರಗಾಮಿ ರಾಜಕೀಯದ ಕಾಲವೆಂದು ಗುರುತಿಸಲಾಗಿದೆ.

ತೀವ್ರಗಾಮಿಗಳ ಬೆಳವಣಿಗೆಗೆ ಕಾರಣಗಳು
* ಭಾರತೀಯರನ್ನು ಉನ್ನತ ಹುದ್ದೆಗಳಿಗೆ ಪರಿಗಣಿಸದಿದ್ದುದು.
* ಸಾ.ಶ. 1905ರಲ್ಲಿ ಲಾರ್ಡ್ ಕರ್ಜನನು ಬಂಗಾಳವನ್ನು ವಿಭಜಿಸುವ ಮೂಲಕ ಮತೀಯ ರಾಜಕಾರಣಕ್ಕೆ ಪ್ರಯತ್ನಿಸಿದ್ದು.

* ಸಾ.ಶ. 1905ರಲ್ಲಿ ರಷ್ಯ ದೇಶವನ್ನು ಸಣ್ಣ ರಾಷ್ಟ್ರವಾದ ಜಪಾನ್ ಸೋಲಿಸಿದ ಘಟನೆಯು ಯುರೋಪಿಯನ್ನರನ್ನು ಏಷ್ಯನರು ಸೋಲಿಸಬಹುದು ಎಂಬ ಆತ್ಮವಿಶ್ವಾಸ ಮೂಡಿಸಿತು.


* ಐರ್ಲೆಂಡ್, ರಷ್ಯ, ಚೀನಾ, ಟರ್ಕಿ, ಈಜಿಪ್ಟ್ ಮುಂತಾದ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿ ಆಂದೋಲನಗಳು ಭಾರತೀಯರನ್ನು ಪ್ರೇರೇಪಿಸಿದವು.




ಬಾಲಗಂಗಾಧರ ತಿಲಕರು ಒಬ್ಬ ಅಪ್ರತಿಮ ದೇಶಭಕ್ತ. “ಸ್ವರಾಜ್ಯವು ನನ್ನ ಜನ್ಮ ಸಿದ್ಧ ಹಕ್ಕು; ನಾನು ಅದನ್ನು ಪಡೆದೇ ತೀರುತ್ತೇನೆ”, ಎಂಬ ಅವರ ಘೋಷಣೆಯಲ್ಲಿ ಸ್ವಾತಂತ್ರ್ಯದ ಉತ್ಕಟತೆಯಿತ್ತು. ಜನರನ್ನು ಒಗ್ಗೂಡಿಸುವ ದೃಷ್ಟಿಯಿಂದ ತಿಲಕರು ಗಣೇಶ ಮತ್ತು ಶಿವಾಜಿ ಉತ್ಸವಗಳನ್ನು ಪರಿಚಯಿಸಿದರು. ಮರಾಠ’ (ಇಂಗ್ಲಿಷ್) ಮತ್ತುಕೇಸರಿ’ (ಮರಾಠಿ) ಪತ್ರಿಕೆಗಳನ್ನು ಪ್ರಕಟಿಸುವ ಮೂಲಕ ಜನರನ್ನು ರಾಜಕೀಯವಾಗಿ ಪ್ರೇರೇಪಿಸಿದರು. ಬಿಪಿನ್‍ಚಂದ್ರ ಪಾಲರು ನ್ಯೂ ಇಂಡಿಯಾ’ ಹಾಗೂ ಅರವಿಂದರುವಂದೇ ಮಾತರಂ’ ಪತ್ರಿಕೆಗಳನ್ನು ಪ್ರಾರಂಭಿಸಿದರು. ಲಾಲಾ ಲಜಪತ್ ರಾಯ್ ಪಂಜಾಬಿನ ಸಿಂಹ’ ಎಂದೇ ಜನಪ್ರಿಯರಾಗಿದ್ದರು. ಅವರು, “ನಾವು ಸ್ವರಾಜ್ಯವನ್ನು ಹಕ್ಕಿನ ರೂಪದಲ್ಲಿ ಪಡೆಯುತ್ತೇವೆಯೇ ಹೊರತು ಭಿಕ್ಷಾರೂಪದಲ್ಲಿ ಅಲ್ಲ” ಎಂದು ಹೇಳಿದರು. ಬಿಪಿನ್‍ಚಂದ್ರ ಪಾಲರು ಬಂಗಾಲದಲ್ಲಿಸಾಮೂಹಿಕ ಪ್ರತಿಭಟನೆ’ಯನ್ನು ಸಂಘಟಿಸಿದರು. ತೀವ್ರವಾದವನ್ನು ಪ್ರತಿನಿಧಿಸಿದ ಮತ್ತೊಬ್ಬ ನಾಯಕ ಅರವಿಂದ ಘೋಷ್. ವಿದೇಶಿ ವಸ್ತುಗಳ ಬಹಿಷ್ಕಾರ, ಸ್ವದೇಶಿ ವಸ್ತುಗಳನ್ನು ಮಾತ್ರವೇ ಬಳಸುವುದು ಮತ್ತು ರಾಷ್ಟ್ರೀಯ ಶಾಲೆಗಳನ್ನು ತೆರೆಯುವುದು ಅವರ ಕಾರ್ಯವಿಧಾನವಾಗಿತ್ತು. ತೀವ್ರಗಾಮಿಗಳು ರಾಷ್ಟ್ರೀಯ ಹೋರಾಟಕ್ಕೆ ತೀವ್ರತೆಯನ್ನು ತಂದುಕೊಟ್ಟರು.

ಬಂಗಾಲದ ವಿಭಜನೆ (ಸಾ.ಶ. 1905)
ತೀವ್ರವಾದಿಗಳ ರಾಷ್ಟ್ರೀಯ ಹೋರಾಟವನ್ನು ಪ್ರೇರೇಪಿಸಿದ ಪ್ರಮುಖ ಘಟನೆಯೆಂದರೆ ಸಾ.ಶ. 1905ರ ಬಂಗಾಲದ ವಿಭಜನೆ.
ಬಂಗಾಲದಲ್ಲಿ ರಾಷ್ಟ್ರೀಯತೆಯ ಅಲೆಯು ತೀವ್ರಗೊಳ್ಳುತ್ತಿರುವುದನ್ನು ಕಂಡು ಬ್ರಿಟಿಷರು ಆತಂಕಗೊಂಡರು. ಆದ್ದರಿಂದ ಬಂಗಾಲವನ್ನು ಹಿಂದು ಮತ್ತು ಮುಸಲ್ಮಾನ ಎಂಬ ಮತೀಯ ಭಿನ್ನತೆಯ ಆಧಾರದ ಮೇಲೆ ವಿಭಜಿಸುವ ಮೂಲಕ ರಾಷ್ಟ್ರೀಯತೆಯ ತೀವ್ರತೆಯನ್ನು ಹತ್ತಿಕ್ಕಲು ವೈಸರಾಯ್ ಲಾರ್ಡ್ ಕರ್ಜನ್ ಪ್ರಯತ್ನಿಸಿದನು. ಈ ವಿಭಜನೆಯನ್ನು ವಿರೋಧಿಸಿ ಸಾ.ಶ. 1905 ಅಕ್ಟೋಬರ್ 16ರಂದು ಬಂಗಾಲದಾದ್ಯಂತ ರಾಷ್ಟ್ರೀಯ ಶೋಕದಿನ’ವನ್ನಾಗಿ ಆಚರಿಸಿದರು. ರವೀಂದ್ರನಾಥ ಟಾಗೋರ್ ‘ಅಮರ್ ಸೋನಾರ್ ಬಾಂಗ್ಲ’ ಗೀತೆಯನ್ನು ರಾಷ್ಟ್ರೀಯ ಗೀತೆಯಾಗಿ ಹಾಡಿದರು. ವಂದೇ ಮಾತರಂ’ ಎಲ್ಲರ ಘೋಷಣೆಯಾಗಿತ್ತು. ಬಂಗಾಲದ ಏಕತೆಯನ್ನು ಪ್ರತಿನಿಧಿಸಲು ಹಿಂದೂ ಮುಸಲ್ಮಾನರು ಪರಸ್ಪರ ರಕ್ಷಾ ಬಂಧನ್’ ಕಟ್ಟಿಕೊಂಡರು. ಜನತೆಯ ತೀವ್ರ ಪ್ರತಿಭಟನೆಗಳಿಗೆ ಮಣಿದು ಸಾ.ಶ. 1911ರಲ್ಲಿ ವಿಭಜನೆಯನ್ನು ಬ್ರಿಟಿಷರು ರದ್ದು ಮಾಡಬೇಕಾಯಿತು.

ಮುಸ್ಲಿಂ ಲೀಗ್ ಸ್ಥಾಪನೆ (ಸಾ.ಶ. 1906)
ಬ್ರಿಟಿಷರು ಒಡೆದು ಆಳುವ ನೀತಿಯನ್ನು ಅನುಸರಿಸುತ್ತ ರಾಷ್ಟ್ರೀಯ ಚಳವಳಿಯಿಂದ ಮುಸ್ಲಿಮರನ್ನು ದೂರವಿಡಲು ಪ್ರಯತ್ನ ನಡೆಸುತ್ತಲೇ ಇದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ಕಾಲದಿಂದಲೇ ಮುಸ್ಲಿಮರು ತಮ್ಮ ಸಮುದಾಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಪ್ರತ್ಯೇಕ ಸಂಘಟನೆಯನ್ನು ರಚಿಸಿಕೊಳ್ಳುವಂತೆ ಬ್ರಿಟಿಷರು ಅವರನ್ನು ಪ್ರೋತ್ಸಾಹಿಸಿದರು. ಸಾ.ಶ. 1906ರಲ್ಲಿ ಮುಸ್ಲಿಂ ನಿಯೋಗವೊಂದು ಭಾರತದ ವೈಸರಾಯ್ ಆಗಿದ್ದ ಮಿಂಟೋ ಅವರನ್ನು ಭೇಟಿ ಮಾಡಿತು. ಭೇಟಿಯ ಪ್ರೇರಣೆಯಿಂದಾಗಿ ಸರ್ ಆಗಾಖಾನ್, ಢಾಕಾದ ನವಾಬ ಸಲಿಮುಲ್ಲ ಮತ್ತು ಇನ್ನಿತರರು ಸೇರಿ ಸಾ.ಶ. 1906ರಲ್ಲಿ ಭಾರತ ಮುಸ್ಲಿಂ ಲೀಗನ್ನು ಢಾಕಾದಲ್ಲಿ (ಈಗಿನ ಬಾಂಗ್ಲಾದೇಶ) ಸ್ಥಾಪಿಸಿದರು.




ಸೂರತ್ ಒಡಕು (ಸಾ.ಶ. 1907)
ಬಂಗಾಲದ ವಿಭಜನೆಯ ವಿವಾದದ ಹಿನ್ನೆಲೆಯಲ್ಲಿ ತೀವ್ರಗಾಮಿಗಳು ದೇಶಾದ್ಯಂತ ಸ್ವದೇಶಿ ಮತ್ತು ಬಹಿಷ್ಕಾರ ಚಳವಳಿಯನ್ನು ವ್ಯಾಪಕವಾಗಿ ಹಮ್ಮಿಕೊಂಡರು. ಆದರೆ ಮಂದಗಾಮಿಗಳು ಅದನ್ನು ಬಂಗಾಲಕ್ಕೆ ಮಾತ್ರವೇ ಸೀಮಿತಗೊಳಿಸಲು ಬಯಸಿದ್ದರು. ಅಲ್ಲದೆ ಅವರು ಸರ್ಕಾರದೊಂದಿಗೆ ನೇರ ಸಂಘರ್ಷಕ್ಕಿಳಿಯಲು ಸಿದ್ಧರಿರಲಿಲ್ಲ. ತೀವ್ರಗಾಮಿಗಳು ಮತ್ತು ಮಂದಗಾಮಿಗಳ ನಡುವಿನ ಭಿನ್ನಾಭಿಪ್ರಾಯಗಳು ತೀವ್ರಗೊಂಡು ಕಾಂಗ್ರೆಸಿನಲ್ಲಿ ರಾಜಕೀಯ ಒಡಕುಂಟಾಯಿತು. ಸಾ.ಶ. 1907ರಲ್ಲಿ ಸೂರತ್‍ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳ ನಡುವೆ ಕಾಂಗ್ರೆಸ್ ಇಬ್ಭಾಗವಾಯಿತು. ಅನಂತರ ಭಾರತದ ರಾಷ್ಟ್ರೀಯ ಚಳವಳಿಯು ಪ್ರಧಾನವಾಗಿ ತೀವ್ರಗಾಮಿಗಳ ನೇತೃತ್ವದಲ್ಲಿಯೇ ಸಾ.ಶ. 1919ರ ವರೆಗೂ ಮುನ್ನಡೆಯಿತು.
ಸಾ.ಶ. 1907ರಲ್ಲಿ ಕಾಂಗ್ರೆಸಿನಲ್ಲಾದ ಒಡಕಿನ ನಂತರ ಸರ್ಕಾರವು ತೀವ್ರಗಾಮಿಗಳ ವಿರುದ್ಧ ದಮನಕಾರಿ ಕ್ರಮಗಳನ್ನು ಕೈಗೊಂಡಿತು. ಅವರಲ್ಲಿ ಅನೇಕರನ್ನು ಸೆರೆಮನೆಗೆ ಕಳುಹಿಸಲಾಯಿತು, ಕೆಲವರನ್ನು ಗಡಿಪಾರು ಮಾಡಲಾಯಿತು. ತಿಲಕರಿಗೆ ಕರಿನೀರು ಶಿಕ್ಷೆಯನ್ನು ವಿಧಿಸಿ ಮಾಂಡೆಲೆ (ಬರ್ಮಾ) ಸೆರೆಮನೆಗೆ ಗಡಿಪಾರು ಮಾಡಲಾಯಿತು. ಇದರಿಂದಾಗಿ ರಾಜಕೀಯ ಚಟುವಟಿಕೆಗಳು ತಾತ್ಕಾಲಿಕವಾಗಿ ನಿಧಾನಗೊಂಡವು. ಸೆರೆಮನೆಯ ವಾಸದಲ್ಲೇ ತಿಲಕರು `ಗೀತಾ ರಹಸ್ಯ’ವನ್ನು ಬರೆದರು.

ತೀವ್ರಗಾಮಿಗಳನ್ನು ರಾಜಕೀಯವಾಗಿ ನಿಷ್ಕ್ರಿಯಗೊಳಿಸುವ ಸಲುವಾಗಿ ಬ್ರಿಟಿಷರು ಮಂದಗಾಮಿಗಳು ಮತ್ತು ಮುಸ್ಲಿಮರಿಗೆ ಶಾಸಕಾಂಗದಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿ ಒಲೈಸಲೆತ್ನಿಸಿದರು. ಈ ನಿಟ್ಟಿನಲ್ಲಿ ಮಿಂಟೋಮಾರ್ಲೆ ಸುಧಾರಣೆಗಳನ್ನು ಸಾ.ಶ. 1909ರಲ್ಲಿ ಜಾರಿಗೆ ತಂದರು. ಈ ಕಾಯಿದೆಯಲ್ಲಿ ಮುಸ್ಲಿಮರಿಗೆ ‘ಪ್ರತ್ಯೇಕ ಮತಕ್ಷೇತ್ರ’ವನ್ನು ಕಲ್ಪಿಸಿದರು. ಈ ಮಧ್ಯೆ ಮೊದಲ ಮಹಾಯುದ್ಧವು ಹಠಾತ್ ಆರಂಭವಾಯಿತು (ಸಾ.ಶ. 1914). ಇದು ರಾಷ್ಟ್ರೀಯ ಚಳವಳಿಗೆ ಹೊಸ ಹುರುಪನ್ನು ನೀಡಿತು. ಸಾ.ಶ. 1916ರಲ್ಲಿ ಲೋಕಮಾನ್ಯ ತಿಲಕರು ಮತ್ತು ಅನಿಬೆಸೆಂಟರು ಹೋಂ ರೂಲ್ (ಗೃಹಾಡಳಿತ) ಚಳವಳಿಯನ್ನು ಹಮ್ಮಿಕೊಂಡರು.
ರೌಲಟ್ ಕಾಯಿದೆ (ಸಾ.ಶ. 1919)
ಸಾ.ಶ. 1917ರ ಡಿಸೆಂಬರ್‍ನಲ್ಲಿ ನ್ಯಾಯಮೂರ್ತಿ ರೌಲಟ್‍ನ ಮಾರ್ಗದರ್ಶನದಲ್ಲಿ ಒಂದು ಸಮಿತಿ ರಚನೆಯಾಯಿತು. ಇದರ ಉದ್ದೇಶ ಭಾರತದ ಕ್ರಾಂತಿಕಾರಿ ಚಟುವಟಿಕೆಗಳನ್ನು ಹತ್ತಿಕ್ಕುವುದಾಗಿತ್ತು. ಅಂತಿಮವಾಗಿ ರೌಲಟ್ ಕಾಯಿದೆ ಸಾ.ಶ. 1919ರ ಫೆಬ್ರವರಿಯಲ್ಲಿ ಜಾರಿಯಾಯಿತು. ಈ ಕಾಯಿದೆಯ ಪ್ರಕಾರ ಅನುಮಾನ ಬಂದ ಯಾವುದೇ ವ್ಯಕ್ತಿಯನ್ನು ಯಾವ ಕಾರಣವೂ ನೀಡದೆ ಸರ್ಕಾರ ಬಂಧಿಸಬಹುದಾಗಿತ್ತು. ಮುನ್ಸೂಚನೆ ನೀಡದೆ ಯಾವುದೇ ಪ್ರದೇಶವನ್ನು ಶೋಧ ಮಾಡಬಹುದಾಗಿತ್ತು. ಬಂಧಿತ ವ್ಯಕ್ತಿಗೆ ವಕೀಲರನ್ನು ನೇಮಿಸಿಕೊಳ್ಳುವ ಹಕ್ಕು ಕೂಡ ಇರಲಿಲ್ಲ. ಭಾರತೀಯರು ಇದನ್ನು ತೀವ್ರವಾಗಿ ವಿರೋಧಿಸಿದರು. ಕ್ರೋಧದ ಅಲೆಗಳು ದೇಶಾದ್ಯಂತ ಕಂಡುಬಂದವು. ಇದರ ವಿರುದ್ಧ ಗಾಂಧೀಜಿಯವರು ಸತ್ಯಾಗ್ರಹ ಹೂಡಿದರು.
ಜಲಿಯನ್ ವಾಲಾಬಾಗ್ ಹತ್ಯಾಕಾಂಡ (ಸಾ.ಶ. 1919)
ರೌಲಟ್ ಕಾಯಿದೆಯ ವಿರುದ್ಧ ಗಾಂಧೀಜಿ ಹಮ್ಮಿಕೊಂಡಿದ್ದ ಸತ್ಯಾಗ್ರಹದಿಂದಾಗಿ ಪಂಜಾಬಿನ ಬಹುತೇಕ ಭಾಗಗಳಲ್ಲಿ ಪ್ರತಿಭಟನೆಗಳು ಆರಂಭವಾದವು. ಸಾ.ಶ. 1919 ಏಪ್ರಿಲ್ 13ರಂದು ಅಮೃತಸರದ ಸುವರ್ಣ ಮಂದಿರದಿಂದ ಸ್ವಲ್ಪ ದೂರದಲ್ಲಿರುವ ಜಲಿಯನ್‍ವಾಲಾಬಾಗ್ ಎಂಬಲ್ಲಿಯ ಉದ್ಯಾನದಲ್ಲಿ ಸಭೆಯೊಂದನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ತಮ್ಮ ನಾಯಕರಾಗಿದ್ದ ಡಾ. ಸೈಫೂದ್ದಿನ್ ಕಿಚ್‍ಲೂ ಮತ್ತು ಡಾ. ಸತ್ಯಪಾಲರ ಬಂಧನದ ವಿರುದ್ಧ ಪ್ರತಿಭಟನೆ ಮಾಡುವುದಾಗಿತ್ತು.



ಅಮೃತಸರದ ರಕ್ಷಣಾ ಪಾಲಕನಾಗಿದ್ದ ಜನರಲ್ ಡೈಯರನು ಪ್ರತಿಭಟನೆ ಮಾಡುತ್ತಿದ್ದ ಜನರಿಗೆ ಬುದ್ಧಿ ಕಲಿಸಬೇಕೆಂದು ಉದ್ಯಾನದ ಏಕೈಕ ನಿರ್ಗಮನ ದ್ವಾರವನ್ನು ಮುಚ್ಚಿಸಿ ನಿರಾಯುಧರಾಗಿದ್ದ ಜನತೆಯ ಮೇಲೆ ಗುಂಡು ಹಾರಿಸಲು ಅಜ್ಞಾಪಿಸಿದನು. ಭಯಭೀತಿಯಿಂದ ಜನಸ್ತೋಮ ಒಮ್ಮೆಲೆ ಹೌಹಾರಿತು. ಸರ್ಕಾರಿ ವರದಿಯ ಪ್ರಕಾರ ಕೊಲ್ಲಲ್ಪಟ್ಟವರು ಕೇವಲ 379 ಮಂದಿ ಮಾತ್ರವಾಗಿತ್ತು. ಆದರೆ ವಾಸ್ತವವಾಗಿ ವರದಿಯ ಹೇಳಿಕೆಗಿಂತಲೂ ಹೆಚ್ಚು ಜನರು ಸತ್ತಿದ್ದರು. ಇಂದಿಗೂ ಸಹ ಉದ್ಯಾನದಲ್ಲಿ ಗುಂಡಿನ ಗುರುತುಗಳನ್ನು ಕಾಣಬಹುದು. ಈ ಕ್ರೂರ ಕೃತ್ಯವನ್ನು ತೀವ್ರವಾಗಿ ಖಂಡಿಸಲಾಯಿತು.


ಕ್ರಾಂತಿಕಾರಿ ರಾಷ್ಟ್ರೀಯತೆ
ತೀವ್ರವಾದಿಗಳಲ್ಲಿ ಕೆಲವು ಮಂದಿ ಸಶಸ್ತ್ರ ಕ್ರಾಂತಿಗೆ ಮುಂದಾದರು. ಇವರನ್ನು ಕ್ರಾಂತಿಕಾರಿ ರಾಷ್ಟ್ರೀಯವಾದಿಗಳು’ ಎನ್ನುವರು. ಬ್ರಿಟಿಷ್ ಅಧಿಕಾರಿಗಳು ಇವರನ್ನುಭಯೋತ್ಪಾದಕರು’ ಎಂದು ಕರೆದರು. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ತುರ್ತಾಗಿ ದೊರಕಿಸುವ ಧ್ಯೇಯ ಇವರದಾಗಿತ್ತು. ಗಾಢವಾದ ದೇಶಭಕ್ತಿ ಮತ್ತು ತ್ಯಾಗಮನೋಭಾವವು ಕ್ರಾಂತಿಕಾರಿ ರಾಷ್ಟ್ರೀಯವಾದದ ಮೂಲತತ್ವವಾಗಿತ್ತು.
ರಹಸ್ಯ ಸಂಘಟನೆಯನ್ನು ರೂಪಿಸಿಕೊಂಡ ಕ್ರಾಂತಿಕಾರಿಗಳಲ್ಲಿ ವಾಸುದೇವ ಬಲವಂತ ಫಡ್ಕೆ ಮೊದಲಿನವರು. ದಾಮೋದರ ಮತ್ತು ಬಾಲಕೃಷ್ಣ ಚಾಪೇಕರ್ ಸಹೋದರರು ಅವರ ರಹಸ್ಯ ಸಂಘಟನೆಯ ಜೀವನಾಡಿಗಳಾಗಿದ್ದರು. ಇವರಿಬ್ಬರನ್ನೂ ಬಂಧಿಸಿ ಗಲ್ಲಿಗೇರಿಸಲಾಯಿತು.
ನಮ್ಮ ದೇಶದ ಇತರ ಕ್ರಾಂತಿಕಾರಿಗಳೆಂದರೆ ವಿನಾಯಕ ದಾಮೋದರ ಸಾವರ್ಕರ್, ಖುದಿರಾಮ್ ಬೋಸ್, ಚಂದ್ರಶೇಖರ ಆಜಾದ್ ಮತ್ತು ಭಗತ್ ಸಿಂಗ್. ಖುದಿರಾಮ್ ಸ್ವಾತಂತ್ರ್ಯ ಹೋರಾಟದಲ್ಲಿ ನೇಣುಗಂಬ ಏರಿದ ಭಾರತದ ಮೊದಲ ಹುತಾತ್ಮ (ಸಾ.ಶ. 1908). ಆಗ ಅವನ ವಯಸ್ಸು ಕೇವಲ 19 ವರ್ಷ. ಇಷ್ಟು ಚಿಕ್ಕವನ ಬಲಿದಾನವನ್ನು ಕಂಡು ದೇಶದ ಜನತೆ ಕಂಬನಿ ಮಿಡಿಯಿತು.

ವಿನಾಯಕ ದಾಮೋದರ ಸಾವರ್ಕರ್ ಮತ್ತೋರ್ವ ಕ್ರಾಂತಿಕಾರಿ. ಸಾ.ಶ. 1899ರಲ್ಲಿ ಅವರು ಮಿತ್ರಮೇಳ’ ಎನ್ನುವ ಪ್ರಥಮ ಗುಪ್ತ ಸಂಘಟನೆಯನ್ನು ಕಟ್ಟಿದರು. ನಂತರ ಇದನ್ನೇ ಅಭಿನವ ಭಾರತ’ ಎಂದು ಕರೆಯಲಾಯಿತು. ಅವರಿಗೆ ಬ್ರಿಟಿಷ್ ಸರ್ಕಾರ ಜೀವಾವಧಿ ಕಾರಾಗೃಹವಾಸವನ್ನು ವಿಧಿಸಿ ಅಂಡಮಾನ್ ಜೈಲಿಗೆ ರವಾನಿಸಿತು. ಅವರು ಕ್ರೂರ ದೈಹಿಕ ಚಿತ್ರಹಿಂಸೆಯನ್ನು ಅನುಭವಿಸಿದ ಅಂಡಮಾನ್ ಜೈಲಿನಲ್ಲಿ ಭಾರತ ಸರ್ಕಾರ ಅವರ ಸ್ಮಾರಕವನ್ನು ನಿರ್ಮಿಸಿದೆ.
ಚಂದ್ರಶೇಖರ ಆಜಾದ್ `ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್’ಗೆ ಸೇರಿ ಕಾಕೋರಿ ಪಿತೂರಿ, ಶಾಸನ ಸಭೆಯ ಬಾಂಬ್ ಘಟನೆ ಹಾಗೂ ಲಾಹೋರಿನಲ್ಲಿ ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್‍ನ ಮೇಲೆ ಗುಂಡಿನ ದಾಳಿ ಮುಂತಾದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
ಬ್ರಿಟಿಷ್ ಸೈನಿಕರಿಂದ ತಪ್ಪಿಸಿಕೊಳ್ಳಲು ಆಜಾದ್ ಒಂದು ಸಣ್ಣ ಪಿಸ್ತೂಲಿನೊಂದಿಗೆ ಏಕಾಂಗಿ ಹೋರಾಟ ನಡೆಸಿದನು. ಕೇವಲ ಒಂದು ಗುಂಡು ಉಳಿದಿದ್ದಾಗ ತನ್ನ ಕಪೋಲಕ್ಕೆ ಗುರಿಯಿಟ್ಟು ಹಾರಿಸಿಕೊಂಡು, ತಾನು ಬಂಧನಕ್ಕೊಳಗಾಗುವುದಿಲ್ಲ ಎನ್ನುವ ತನ್ನ ಪ್ರತಿಜ್ಞೆಯನ್ನು ಉಳಿಸಿಕೊಂಡನು. ಭಗತ್ ಸಿಂಗ್, ರಾಜಗುರು, ಸುಖದೇವ್, ಭಗವತಿ ಚರಣ್ ವೂಹ್ರಾ ಹಾಗೂ ಗಯಾಪ್ರಸಾದರಂತಹ ಅನೇಕ ಹುತಾತ್ಮರು ಬ್ರಿಟಿಷರ ದಾಸ್ಯದಿಂದ ಭಾರತ ಬಿಡುಗಡೆ ಹೊಂದಲು ತಮ್ಮನ್ನೇ ಅರ್ಪಿಸಿಕೊಂಡರು.
ಭಗತ್ ಸಿಂಗ್ ಹಿಂದೂಸ್ಥಾನ್ ಸಮಾಜವಾದಿ ರಿಪಬ್ಲಿಕನ್ ಸಂಘಟನೆಯನ್ನು ಸೇರಿ ಅದರ ಪ್ರಧಾನ ಕಾರ್ಯದರ್ಶಿಯಾದನು. ಸಾ.ಶ. 1929ರಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ದಿಲ್ಲಿಯಲ್ಲಿ ಕೇಂದ್ರೀಯ ಶಾಸನಸಭೆಯ ಮೇಲೆ ಬಾಂಬೆಸೆದರು. ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಈ ಮೂವರನ್ನು ಗಲ್ಲಿಗೇರಿಸಲಾಯಿತು. ಭಗತ್‍ಸಿಂಗ್ “ಇಂಕ್ವಿಲಾಬ್ ಜಿಂದಾಬಾದ್” (ಕ್ರಾಂತಿ ಚಿರಾಯುವಾಗಲಿ) ಎಂಬ ಘೋಷಣೆಯನ್ನು ಮೊದಲ ಬಾರಿಗೆ ಹಾಕಿದ ಭಾರತೀಯನಾಗಿದ್ದಾನೆ. ಒಟ್ಟಿನಲ್ಲಿ ಕ್ರಾಂತಿಕಾರಿಗಳು ರಾಜಕೀಯ ಪ್ರಜ್ಞೆಯನ್ನು ಬಡಿದೆಬ್ಬಿಸಿದರು. ಅವರಿಂದ ಯುವಜನತೆ ಪ್ರೇರಣೆ ಪಡೆಯಿತು.
ವಿದೇಶದಲ್ಲಿ ನೆಲೆಸಿದ್ದ ಭಾರತೀಯರು ಕೂಡ ಕ್ರಾಂತಿಕಾರಿ ಚಟುವಟಿಕೆಯನ್ನು ಆರಂಭಿಸಿದರು. ಸೋಹನ್‍ಸಿಂಗ್ ಭಾಕ್ನ ಎಂಬವನು ಸಾ.ಶ. 1913ರಲ್ಲಿ ಅಮೇರಿಕದ ಸ್ಯಾನ್‍ಫ್ರಾನ್ಸಿಸ್‍ಕೋದಲ್ಲಿ ಘದರ್ ಚಳವಳಿಯನ್ನು ಪ್ರಾರಂಭಿಸಿದನು.

ಮಂದಗಾಮಿಗಳಿಂದ ಆರಂಭವಾದ ಕಾಂಗ್ರೆಸ್ ಪಕ್ಷ ಕ್ರಮೇಣ ಜನಪ್ರಿಯ ಸಂಘಟನೆಯಾಗಿ ರೂಪುಗೊಂಡಿತು. ಕಾಂಗ್ರೆಸ್ ಸಂಘಟನೆಯು ನಿಧಾನವಾಗಿ ಬೇರೆ ಬೇರೆ ರಾಜಕೀಯ ಬೆಳವಣಿಗೆಗಳಿಗೆ ಒಳಗಾಯಿತು. ತೀವ್ರಗಾಮಿಗಳು ಕಾಂಗ್ರೆಸಿಗೆ ಭಾವ ತೀವ್ರತೆಯನ್ನು ತಂದುಕೊಟ್ಟರು. ಬ್ರಿಟಿಷರು ಕಾಂಗ್ರೆಸನ್ನು ದ್ವೇಷಿಸುವ ಮೂಲಕ ಒಡೆಯುವ ಪ್ರಯತ್ನ ಮಾಡಿದರು. ಮತೀಯ ರಾಜಕೀಯ ತಂತ್ರಗಾರಿಕೆಯನ್ನು ಅನುಸರಿಸಿ ರಾಷ್ಟ್ರೀಯ ಹೋರಾಟದ ಕಾವನ್ನು ತಗ್ಗಿಸುವ ಪ್ರಯತ್ನ ಮಾಡಿದರು. ಇದರಿಂದ ರಾಷ್ಟ್ರೀಯ ಹೋರಾಟಕ್ಕೆ ತಾತ್ಕಾಲಿಕ ಹಿನ್ನಡೆಯಾಯಿತೇ ವಿನಃ ಅದು ನಿಷ್ಕ್ರಿಯಗೊಳ್ಳಲಿಲ್ಲ. ಸಾ.ಶ. 1919ರ ನಂತರ ಕಾಂಗ್ರೆಸ್ ಗಾಂಧೀಜಿಯವರ ನಾಯಕತ್ವದಲ್ಲಿ ಹೊಸ ರೂಪ ತಳೆಯಿತು.
ಗಾಂಧಿ ಯುಗ (ಸಾ.ಶ. 1919-1947)

ಮಹಾತ್ಮ ಗಾಂಧಿ
ಆಧುನಿಕ ವಿಶ್ವಕ್ಕೆ ಮೋಹನದಾಸ್ ಕರಮಚಂದ ಗಾಂಧಿಯವರ ಬಗ್ಗೆ ಗೊತ್ತಿರುವಷ್ಟು ಯಾವ ಭಾರತೀಯರ ಬಗ್ಗೆಯೂ ಗೊತ್ತಿರಲಿಕ್ಕಿಲ್ಲ. ಅಹಿಂಸೆ ಮತ್ತು ಸತ್ಯಾಗ್ರಹ ನೀತಿಯು ಗಾಂಧೀಜಿಯವರ ಹೋರಾಟದ ಅಸ್ತ್ರಗಳಾಗಿದ್ದವು. ಅವರು ಸ್ವಾತಂತ್ರ್ಯ ಚಳವಳಿಗೆ ಜನಾಂದೋಲನದ ಸ್ವರೂಪವನ್ನು ತಂದುಕೊಟ್ಟರು. ಸರಳತೆ, ಸಜ್ಜನಿಕೆ, ಸತ್ಯಸಂಧತೆ ಅವರ ಯಶಸ್ಸಿನ ಸೂತ್ರಗಳಾಗಿದ್ದವು. ಮಹಿಳೆಯರೂ ಸೇರಿದಂತೆ ಎಲ್ಲ ಸಾಮಾಜಿಕ ವರ್ಗಗಳು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲು ಈ ಅಸ್ತ್ರಗಳೇ ಪ್ರಮುಖ ಕಾರಣವಾಗಿದ್ದವು.
ಆರಂಭಿಕ ಜೀವನ: ಗಾಂಧೀಜಿಯವರು ಸಾ.ಶ. 1869ರ ಅಕ್ಟೋಬರ್ 2ರಂದು ಪೋರಬಂದರ್ ಎಂಬಲ್ಲಿ ಕರಮಚಂದ ಗಾಂಧಿ ಮತ್ತು ಪುತಲೀಬಾಯಿಯವರ ಮಗನಾಗಿ ಜನಿಸಿದರು. ಅವರ ತಂದೆ ಪೋರಬಂದರ್ ಮತ್ತು ರಾಜಕೋಟ್ ಸಂಸ್ಥಾನಗಳಲ್ಲಿ ದಿವಾನ್ (ಮುಖ್ಯಮಂತ್ರಿ) ಆಗಿದ್ದರು. ತಾಯಿ ಆಳವಾದ ಧಾರ್ಮಿಕ ನಂಬಿಕೆಯುಳ್ಳವರಾಗಿದ್ದರು. ಗಾಂಧೀಜಿಯವರ ನೈತಿಕ ಮೌಲ್ಯಗಳು ಮತ್ತು ಬದ್ಧತೆ ಅವರ ತಾಯಿಯಿಂದ ಬಳುವಳಿಯಾಗಿ ಬಂದಿದ್ದವು.

ಮಹಾತ್ಮ ಗಾಂಧೀಜಿಯವರನ್ನು ನಾವು ಪ್ರೀತಿಯಿಂದ ಬಾಪು’ ಎಂದು ಸ್ಮರಿಸಿಕೊಳ್ಳುತ್ತೇವೆ. ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಅವರು ಮಹಾನ್ ನಾಯಕರಾಗಿದ್ದರು. ಅಲ್ಲದೆ ಶೋಷಣೆ, ಅಸ್ಪೃಶ್ಯತೆಯ ನಿವಾರಣೆ ಮತ್ತು ಹಿಂದೂಮುಸ್ಲಿಂ ಸಾಮರಸ್ಯಕ್ಕಾಗಿ ತಮ್ಮನ್ನು ಪೂರ್ಣವಾಗಿ ಮುಡಿಪಾಗಿಟ್ಟಿದ್ದರು. ಅವರ ನೇತೃತ್ವದ ರಾಜಕೀಯ ಹೋರಾಟದ ಈ ಕಾಲಾವಧಿಯನ್ನುಗಾಂಧೀ ಯುಗ’ (ಸಾ.ಶ. 1919-1947) ಎಂದು ಕರೆಯಲಾಗಿದೆ.
ಗಾಂಧೀಜಿಯವರ ಜೀವನದ ಮೇಲೆ ಪ್ರಭಾವ ಬೀರಿದ ಪ್ರಮುಖ ಕೃತಿಗಳೆಂದರೆ: ಭಗವದ್ಗೀತೆ, ಜಾನ್ ರಸ್ಕಿನನ ಕೊನೆಯ ತನಕ’ (Unto this Last), ಲಿಯೋ ಟಾಲ್‍ಸ್ಟಾಯ್ ಅವರನಿನ್ನಂತರಂಗವೇ ದೇವರ ರಾಜ್ಯ’ (The Kingdom of God lies Within You ) ಮತ್ತು ಸತ್ಯ ಹರಿಶ್ಚಂದ್ರ ನಾಟಕ.
ದಕ್ಷಿಣ ಆಫ್ರಿಕದಲ್ಲಿ ಗಾಂಧೀಜಿ
ಗಾಂಧೀಜಿಯವರ ಆರಂಭಿಕ ಶಿಕ್ಷಣ ಪೋರಬಂದರಿನಲ್ಲಾಯಿತು. ಉನ್ನತ ಶಿಕ್ಷಣಕ್ಕಾಗಿ ಅವರು ಇಂಗ್ಲೆಂಡಿಗೆ ತೆರಳಿದರು. ಅವರು ಬ್ರಿಟನಿನಲ್ಲಿ ಕಾನೂನು ಪದವಿ ಪಡೆದರು. ಸಾ.ಶ. 1891ರಲ್ಲಿ ಭಾರತಕ್ಕೆ ಹಿಂದಿರುಗಿ ರಾಜ್‍ಕೋಟ್ ಮತ್ತು ಮುಂಬೈಯಲ್ಲಿ ವಕೀಲಿ ವೃತ್ತಿಯಲ್ಲಿ ತೊಡಗಿದರು. ಆರಂಭದಲ್ಲಿ ವಕೀಲ ವೃತ್ತಿಯಲ್ಲಿ ಅವರು ಯಶಸ್ವಿಯಾಗಲಿಲ್ಲ. ಕೆಲಕಾಲದ ನಂತರ ದಾದಾ ಅಬ್ದುಲ್ಲಾ ಕಂಪನಿಯ ಆಹ್ವಾನದ ಮೇರೆಗೆ ಕಾನೂನು ಸಲಹೆಗಾರರಾಗಿ ದಕ್ಷಿಣ ಆಫ್ರಿಕಕ್ಕೆ ತೆರಳಿದರು. ಅಲ್ಲಿ ಸತ್ಯಾಗ್ರಹ ಮತ್ತು ಅಹಿಂಸೆಗಳೆಂಬ ಅಸ್ತ್ರಗಳ ಮೂಲಕ ಭಾರತೀಯರಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಡಿದರು. ದಕ್ಷಿಣ ಆಫ್ರಿಕದಲ್ಲಿ ನಡೆಸಿದ ಈ ಪ್ರಯೋಗಗಳು ಮತ್ತು ಅವುಗಳಿಂದ ದೊರಕಿದ ಯಶಸ್ಸಿನಿಂದ ಗಾಂಧೀಜಿಯವರ ವ್ಯಕ್ತಿತ್ವಕ್ಕೆ ವಿಶೇಷ ಮೆರಗು ಬಂದಿತು. ಇಂದು ಗಾಂಧೀಜಿಯವರ ಹೋರಾಟದ ವಿಧಾನವು `ಗಾಂಧೀಗಿರಿ’ ಎಂಬ ಹೆಸರಿನಿಂದ ಜನಪ್ರಿಯವಾಗುತ್ತಿದೆ.


ಗಾಂಧೀಜಿಯವರು ದಕ್ಷಿಣ ಆಫ್ರಿಕದಲ್ಲಿದ್ದಾಗ, ಭಾರತೀಯರು ಅಲ್ಲಿ ಕೆಳದರ್ಜೆಯವರಾಗಿ ಬಾಳುವುದನ್ನು ಕಂಡು ಆಘಾತಕ್ಕೊಳಗಾದರು. `ಬಿಳಿಯರ’ ಸರ್ಕಾರದ ಜನಾಂಗೀಯ ನೀತಿಯನ್ನು ಅವರು ವಿರೋಧಿಸಿದರು. ಅವರು ಸತ್ಯಾಗ್ರಹ ಮತ್ತು ಅಹಿಂಸಾ ಮಾರ್ಗಗಳ ಮೂಲಕ ಸರ್ಕಾರದ ಜನಾಂಗೀಯ ಪೂರ್ವಾಗ್ರಹವನ್ನು ಬದಲಾಯಿಸುವಲ್ಲಿ ಸಾಕಷ್ಟು ಯಶಸ್ಸನ್ನು ಕಂಡರು.
ಸತ್ಯಾಗ್ರಹ ಸಿದ್ಧಾಂತವು ಸಂಸ್ಕೃತದ ಎರಡು ಪದಗಳಿಂದ ಕೂಡಿದೆ: ಸತ್ಯ’ ಎಂದರೆ ವಾಸ್ತವಿಕ ಸಂಗತಿ,ಆಗ್ರಹ’ ಎಂದರೆ ಒತ್ತಾಯ. ಇದರರ್ಥ “ಸತ್ಯದಪರ ದೃಢವಾಗಿ ನಿಲ್ಲು”.
ಸಾ.ಶ. 1915ರಲ್ಲಿ ಭಾರತಕ್ಕೆ ಹಿಂತಿರುಗಿದ ನಂತರ ಗಾಂಧೀಜಿಯವರು ಅಹಮದಾಬಾದಿನಲ್ಲಿ ಸಾಬರಮತಿ ಆಶ್ರಮವನ್ನು (ಸಾ.ಶ. 1916) ಸ್ಥಾಪಿಸಿದರು. ತಮ್ಮ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆಯವರ ಮಾರ್ಗದರ್ಶನದ ಮೇರೆಗೆ ಭಾರತಾದ್ಯಂತ ಪ್ರವಾಸ ಮಾಡಿ ಜನತೆಯ ಶೋಚನೀಯ ಸ್ಥಿತಿಯನ್ನು ಕಂಡರು. ಇದು ಅವರ ಮೊದಲ ಸಾಮಾಜಿಕ ಅನುಭವವಾಗಿತ್ತು. ಹೀಗೆ ಗಾಂಧೀಜಿಯವರು ಭಾರತೀಯ ಸಮಾಜದ ವಾಸ್ತವ ಸ್ವರೂಪವನ್ನು ಅರಿಯತೊಡಗಿದರು.


ಆರಂಭದ ರಾಜಕೀಯ ಜೀವನ: ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಸಾ.ಶ. 1919ರ ಸಂವತ್ಸರವು ಒಂದು ಮಹತ್ವದ ಮೈಲಿಗಲ್ಲಾಗಿದೆ. ಇದು ಗಾಂಧೀಜಿಯವರು ಭಾರತದ ರಾಜಕೀಯ ರಂಗವನ್ನು ಪ್ರವೇಶಿಸಿದ ವರ್ಷ. ಬ್ರಿಟಿಷರನ್ನು ದೈಹಿಕ ಬಲದ ಮೂಲಕ ಹೊರದೂಡಲು ಸಾಧ್ಯವಿಲ್ಲವೆಂಬ ಸತ್ಯವನ್ನು ಅವರು ಮನಗಂಡಿದ್ದರು. ತಾತ್ವಿಕವಾಗಿ ದೈಹಿಕ ಬಲದ ಪ್ರಯೋಗಕ್ಕೆ ವಿರುದ್ಧವಾಗಿದ್ದರು. ಸಾ.ಶ. 1919ರಲ್ಲಿ ಗಾಂಧೀಜಿಯವರು ರೌಲಟ್ ಕಾಯಿದೆಯ ಜಾರಿ ಮತ್ತು ಜಲಿಯನ್‍ವಾಲಾಬಾಗ್ ಘೋರ ಹಿಂಸಾಕೃತ್ಯದ ವಿರುದ್ಧ ಚಳವಳಿ ಹೂಡಿದರು. ಅಲ್ಲದೆ ಖಿಲಾಫತ್ ಚಳವಳಿಯ ನಾಯಕತ್ವ ವಹಿಸಿದರು. ಈ ಮೂಲಕ ಹಿಂದೂ ಮತ್ತು ಮುಸ್ಲಿಮರ ನಡುವೆ ಸಾಮರಸ್ಯ ಏರ್ಪಡಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು.
ಖಿಲಾಫತ್ ಚಳವಳಿ ಎಂದರೇನು?
ಟರ್ಕಿ ಸಾಮ್ರಾಜ್ಯವು ಖಲೀಫನ ಕೈಕೆಳಗಿತ್ತು. ಖಲೀಫನು ಸಕಲ ಮುಸ್ಲಿಮರ ಧರ್ಮಗುರು ಎಂದು ಅನೇಕ ಮುಸ್ಲಿಮರು ನಂಬಿದ್ದರು. ಒಂದನೆಯ ವಿಶ್ವಸಮರದಲ್ಲಿ ಟರ್ಕಿ ಬ್ರಿಟನ್ನಿನ ವಿರುದ್ಧವಾಗಿ ನಿಂತಿದ್ದು, ಯುದ್ಧದಲ್ಲಿ ಪರಾಭವಗೊಂಡಿತು. ಟರ್ಕಿಯ ಭಾಗವಾಗಿದ್ದ ಅರೇಬಿಯಾ, ಜೋರ್ಡಾನ್, ಇರಾಕ್ ಇತ್ಯಾದಿಗಳು ಸ್ವತಂತ್ರ ರಾಜ್ಯಗಳಾದವು. ಸಾ.ಶ. 1919ರಲ್ಲಿ ಕಮಾಲ್ ಪಾಷಾ ಎಂಬ ನಾಯಕನು ಟರ್ಕಿಯ ಖಲೀಫನ ಅರಸೊತ್ತಿಗೆಯನ್ನು ಮೂಲೆಗೊತ್ತಿ ಅಧಿಕಾರಕ್ಕೇರಿದನು. ಇದಕ್ಕೆ ಪ್ರತಿಕ್ರಿಯಿಸಿದ ಭಾರತೀಯ ಮುಸ್ಲಿಮರು ಖಲೀಫನ ಪರವಾಗಿಯೂ ಬ್ರಿಟನ್ನಿನ ವಿರುದ್ಧವಾಗಿಯೂ ಆಂದೋಲನ ನಡೆಸಿದರು. ಇದನ್ನು ಖಿಲಾಫತ್ ಚಳವಳಿ ಎನ್ನುವರು. ಗಾಂಧೀಜಿಯವರು ಚಳವಳಿಯ ಮುಂದಾಳತ್ವವನ್ನು ವಹಿಸಿದರು. ಮೊಹಮ್ಮದ್ ಆಲಿ ಮತ್ತು ಶೌಕತ್ ಆಲಿ (ಆಲಿ ಸಹೋದರರು) ಈ ಚಳವಳಿಯ ಪ್ರಮುಖ ನಾಯಕರಾಗಿದ್ದರು.


ಅಸಹಕಾರ ಚಳವಳಿ (ಸಾ.ಶ. 1920-22)
ಗಾಂಧೀಜಿಯವರ ನಾಯಕತ್ವದಲ್ಲಿ ಅಸಹಕಾರ ಚಳವಳಿಯು ಸಾ.ಶ. 1920ರಲ್ಲಿ ಆರಂಭವಾಯಿತು. ಅವರು ಸರ್ಕಾರದೊಂದಿಗೆ ಅಸಹಕಾರ ತೋರಬೇಕೆಂದು ಜನತೆಗೆ ಕರೆಕೊಟ್ಟರಲ್ಲದೆ ಸ್ವರಾಜ್ಯ’ಕ್ಕಾಗಿ ಒತ್ತಾಯಿಸಬೇಕೆಂದರು. ಈ ಕಾರ್ಯಕ್ರಮದ ಅಂಗವಾಗಿ ನ್ಯಾಯಾಲಯಗಳು, ಶೈಕ್ಷಣಿಕ ಸಂಸ್ಥೆಗಳು, ಶಾಸಕಾಂಗ ಸಭೆಗಳಿಗೆ ಚುನಾವಣೆ ಮತ್ತು ಬ್ರಿಟಿಷ್ ಸರಕುಗಳನ್ನು ಬಹಿಷ್ಕರಿಸಲಾಯಿತು. ಇದರೊಂದಿಗೆ ಸರ್ಕಾರಿ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಲ್ಲದೆ, ಸರ್ಕಾರ ನೀಡಿದ್ದ ಬಿರುದುಗಳನ್ನು ಹಿಂತಿರುಗಿಸಲಾಯಿತು. ಸ್ವಾತಂತ್ರ್ಯ ಚಳವಳಿಯನ್ನು ದೊಡ್ಡ ಮಟ್ಟದಲ್ಲಿ ಪರಿಣಾಮಕಾರಿಯಾಗಿ ನಡೆಸುವ ಸಲುವಾಗಿರಚನಾತ್ಮಕ ಕಾರ್ಯಕ್ರಮಗಳನ್ನು’ ಗಾಂಧೀಜಿ ರೂಪಿಸಿದರು. ಈ ಕಾರ್ಯಕ್ರಮವು ವಿಶೇಷವಾಗಿ ನೂಲುವುದು ಮತ್ತು ನೇಯುವುದು, ಅಸ್ಪೃಶ್ಯತಾ ನಿವಾರಣೆ ಮತ್ತು ಹಿಂದೂ ಮುಸ್ಲಿಮರ ನಡುವೆ ಸಾಮರಸ್ಯ ಮೂಡಿಸುವುದಕ್ಕೆ ಒತ್ತು ನೀಡಿತು.
ಈ ಕಾಲಘಟ್ಟದಲ್ಲಿ ಪ್ರಮುಖ ನಾಯಕರಾದ ಸಿ.ಆರ್. ದಾಸ್, ಮೋತಿಲಾಲ್ ನೆಹರು, ವಲ್ಲಭಭಾಯ್ ಪಟೇಲ್, ಸುಭಾಷ್‍ಚಂದ್ರ ಬೋಸ್ ಇವರುಗಳು ಚಳವಳಿಗೆ ಸೇರಿದರು. ಅವರ ಅಹಿಂಸಾತ್ಮಕ ಮತ್ತು ಸತ್ಯಾಗ್ರಹದಂತಹ ವಿಧಾನಗಳಿಂದ ಸಮಾಜದ ಎಲ್ಲಾ ಸ್ತರದ ವರ್ಗದವರು ಆಕರ್ಷಿತರಾಗಿ ಚಳವಳಿಯಲ್ಲಿ ಭಾಗಿಯಾದರು. ಈ ಚಳವಳಿಯಲ್ಲಿ ವಿದ್ಯಾರ್ಥಿಗಳು, ರೈತರು ಮತ್ತು ಮಹಿಳೆಯರಿದ್ದರು. ಇದು ಭಾರತೀಯರಿಗೆ ಹೊಸ ಅನುಭವವಾಗಿತ್ತು. ರವೀಂದ್ರನಾಥ್ ಟಾಗೋರ್ ತಮ್ಮ ನೈಟ್‍ಹುಡ್’ ಹಾಗೂ ಗಾಂಧೀಯವರು ತಮ್ಮ ಕೈಸರ್-ಎ-ಹಿಂದ್’ ಪದವಿಗಳನ್ನು ಬ್ರಿಟಿಷ್ ಸರ್ಕಾರಕ್ಕೆ ಹಿಂತಿರುಗಿಸಿದರು. ಇದೇ ವೇಳೆ ಸರ್ಕಾರವು ಚಳವಳಿಯನ್ನು ಹತ್ತಿಕ್ಕಲು ದಮನಕಾರಿ ಕ್ರಮಗಳನ್ನು ಅನುಸರಿಸಿತು. ಇದಕ್ಕೆ ಉತ್ತರವೆಂಬಂತೆ ಉತ್ತರ ಪ್ರದೇಶದ ಚೌರಿಚೌರಾದಲ್ಲಿ ಉದ್ರಿಕ್ತ ಜನಸ್ತೋಮ ಹಿಂಸಾಕೃತ್ಯದಲ್ಲಿ ತೊಡಗಿ ಅಲ್ಲಿನ ಠಾಣೆಯ 22 ಮಂದಿ ಪೋಲೀಸರನ್ನು ಜೀವಂತ ದಹಿಸಿತು (ಸಾ.ಶ. 1922). ಗಾಂಧೀಜಿಯವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದರು. ತಮ್ಮ ಅಹಿಂಸಾ ಸಿದ್ಧಾಂತಕ್ಕೆ ವಿರುದ್ಧವಾಗಿ ಜನತೆ ವರ್ತಿಸುತ್ತಿರುವುದನ್ನು ಕಂಡು ವಿಷಾದಿಸುತ್ತಾ ಅಸಹಕಾರ ಚಳವಳಿಯನ್ನು ನಿಲ್ಲಿಸಿದರು.

ಗಾಂಧೀಜಿಯವರ ಪ್ರಮುಖ ಕೃತಿಗಳು ಮತ್ತು ಪತ್ರಿಕೆಗಳು
‘ಸತ್ಯದೊಂದಿಗೆ ನನ್ನ ಪ್ರಯೋಗಗಳು’, ‘ಹಿಂದ್ ಸ್ವರಾಜ್’, ‘ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ’, ಇವು ಗಾಂಧೀಜಿ ಅವರ ಕೃತಿಗಳು. ‘ಹರಿಜನ’ ಮತ್ತು ‘ಯಂಗ್ ಇಂಡಿಯಾ’ ಇವು ಅವರು ಸಂಪಾದಕರಾಗಿದ್ದ ವೃತ್ತಪತ್ರಿಕೆಗಳು.
ಸ್ವರಾಜ್ಯವನ್ನು ಸ್ಥಾಪಿಸುವಲ್ಲಿ ಅಸಹಕಾರ ಚಳವಳಿಯು ವಿಫಲವಾದರೂ ಅದೊಂದು ವಿಶಿಷ್ಟವಾದ ಪ್ರಪ್ರಥಮ ಜನಾಂದೋಲನವಾಗಿತ್ತು. ಇದರ ಪರಿಣಾಮವಾಗಿ ರಾಷ್ಟ್ರೀಯ ಭಾವನೆಗಳು ಭಾರತದ ಮೂಲೆಮೂಲೆಗೂ ತಲುಪುವಂತಾಯಿತು. ಗಾಂಧೀಜಿಯವರು ಸಾ.ಶ. 1924ರಿಂದ ಸಾ.ಶ. 1929ರವರೆಗೆ ರಚನಾತ್ಮಾಕ ಕಾರ್ಯಕ್ರಮಗಳಾದ ಖಾದಿಯನ್ನು ಜನಪ್ರಿಯಗೊಳಿಸುವುದು ಮತ್ತು ಹರಿಜನ ಉದ್ಧಾರ ಕಾರ್ಯಗಳಲ್ಲಿ ತಮ್ಮನ್ನು ಸಮರ್ಪಿಸಿಕೊಂಡರು. ಸ್ವರಾಜ್ಯವಾದಿಗಳಾದ ಸಿ.ಆರ್. ದಾಸ್ ಮತ್ತು ಮೋತಿಲಾಲ್ ನೆಹರು ಅವರ ನೇತೃತ್ವದಲ್ಲಿ ರಾಷ್ಟ್ರೀಯ ಹೋರಾಟದ ಚಟುವಟಿಕೆಗಳು ಮುಂದುವರಿದವು.
ಮೋತಿಲಾಲ್ ನೆಹರು ವರದಿ (ಸಾ.ಶ. 1927)
ಮೋತಿಲಾಲ್ ನೆಹರುರವರು ಜವಾಹರಲಾಲ್ ನೆಹರುರವರ ತಂದೆಯಾಗಿದ್ದರು. ಬ್ರಿಟಿಷರು ಭಾರತೀಯ ರಾಜಕೀಯ ನಾಯಕರಿಗೆ ಎಲ್ಲಾ ಸಮುದಾಯದವರು ಒಪ್ಪುವಂತಹ ಸಂವಿಧಾನವನ್ನು ರಚಿಸಿಕೊಳ್ಳುವಂತೆ ಸವಾಲೆಸೆದರು. ಭಾರತೀಯ ಸರ್ವಪಕ್ಷಗಳ ಸಮ್ಮೇಳನದಲ್ಲಿ ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಯಿತು. ಸಮಿತಿಯು ಬ್ರಿಟಿಷರಿಗೆ ಬೆರಗು ಹುಟ್ಟಿಸುವಂತೆ ಸಂವಿಧಾನವೊಂದನ್ನು ರಚಿಸಿತು. ಅದು ಬ್ರಿಟಿಷ್ ಪ್ರಭುತ್ವದಡಿಯಲ್ಲಿ ಸ್ವಯಂ ಆಡಳಿತದ ಸ್ಥಾನಮಾನವನ್ನು ಒಪ್ಪಿದ್ದಲ್ಲದೆ ಅಂತಿಮವಾಗಿ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುವ ಗುರಿಯನ್ನೂ ವ್ಯಕ್ತಪಡಿಸಿತು.

ಸೈಮನ್ ನಿಯೋಗ (ಸಾ.ಶ. 1928)
ಅಸಹಕಾರ ಚಳವಳಿಯ ಸ್ಥಗಿತದಿಂದಾಗಿ ರಾಜಕೀಯ ಹೋರಾಟವು ತಾತ್ಕಾಲಿಕವಾಗಿ ತನ್ನ ಕಾಂತಿಯನ್ನು ಕಳೆದುಕೊಂಡಿತು. ಬ್ರಿಟಿಷ್ ಸರ್ಕಾರ ಸಾ.ಶ. 1919ರ ಸುಧಾರಣೆಗಳು ಭಾರತದ ಪ್ರಾಂತಗಳಲ್ಲಿ ಹೇಗೆ ಕಾರ್ಯಗತಗೊಂಡಿವೆ ಎಂದು ಅಧ್ಯಯನ ಮಾಡಿ ವರದಿ ಸಲ್ಲಿಸಲೆಂದು ಸೈಮನ್ ನಿಯೋಗವನ್ನು ಭಾರತಕ್ಕೆ ಕಳುಹಿಸಿತು (ಸಾ.ಶ. 1928). ನಿಯೋಗವು ಇಂಗ್ಲಿಷ್ ಸದಸ್ಯರನ್ನು ಮಾತ್ರವೇ ಒಳಗೊಂಡಿದ್ದು ಭಾರತೀಯರಿಗೆ ಅದರಲ್ಲಿ ಪ್ರಾತಿನಿಧ್ಯವಿರಲಿಲ್ಲ.

ಭಾರತೀಯರು “ಸೈಮನ್ನರೆ ಹಿಂತಿರುಗಿ” ಎಂಬ ಘೋಷಣೆಯನ್ನು ಮೊಳಗಿಸುವುದರೊಂದಿಗೆ ನಿಯೋಗವನ್ನು ಬಹಿಷ್ಕರಿಸಿದರು. ಲಾಹೋರಿನಲ್ಲಿ ನಡೆದ ಬಹಿರಂಗ ಪ್ರತಿಭಟನೆಯು ತೀವ್ರ ಸ್ವರೂಪವನ್ನು ತಾಳಿತು. ಈ ಸಂದರ್ಭದಲ್ಲಿ ನಡೆದ ಲಾಠಿ ಪ್ರಯೋಗದಲ್ಲಿ ಲಾಲಾ ಲಜಪತ್ ರಾಯ್ ಅವರು ಚೇತರಿಸಿಕೊಳ್ಳಲಾಗದೆ ಮರಣ ಹೊಂದಿದರು (ಸಾ.ಶ. 1928). ಅವರ ಬಲಿದಾನದಿಂದ ಜನರ ಸಹನೆಯ ಕಟ್ಟೆಯೊಡೆಯಿತು.
ಬ್ರಿಟಿಷರನ್ನು ಭಾರತದಿಂದ ಹೊರದೂಡುವ ಬಗ್ಗೆ ಲಾಲಾ ಲಜಪತ್ ರಾಯ್ ನುಡಿದಿದ್ದ ಭವಿಷ್ಯವಾಣಿ ಇದಾಗಿದೆ: “ನನ್ನ ಮೈಮೇಲಿನ ಲಾಠಿ ಹೊಡೆತಗಳು ಮುಂದೊಂದು ದಿನ ಬ್ರಿಟಿಷ್ ಶವಪೆಟ್ಟಿಗೆಯ ಮೇಲಿನ ಮೊಳೆಗಳಾಗಲಿವೆ”.
ಪೂರ್ಣ ಸ್ವರಾಜ್ಯ (ಸಾ.ಶ. 1929)
ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನೊಳಗಿನ ಯುವಪೀಳಿಗೆಯನ್ನು ಪ್ರತಿನಿಧಿಸುತ್ತಿದ್ದ ಜವಾಹರಲಾಲ್ ನೆಹರು ಮತ್ತು ಸುಭಾಷ್‍ಚಂದ್ರ ಬೋಸ್ ಅವರು ಮೋತಿಲಾಲ್ ನೆಹರು ವರದಿಯಲ್ಲಿ ಪ್ರಸ್ತಾಪಿಸಲಾಗಿದ್ದ ಬ್ರಿಟಿಷ್ ಚಕ್ರಾಧಿಪತ್ಯದ ಪರಿಧಿಯೊಳಗಿನ ಸ್ವಯಂ ಆಡಳಿತದ ಸ್ಥಾನಮಾನವನ್ನು ಒಪ್ಪಿಕೊಳ್ಳಲಿಲ್ಲ. ಇದರ ಪರಿಣಾಮವಾಗಿ ಸಾ.ಶ. 1929ರಲ್ಲಿ ಲಾಹೋರಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ “ಸಂಪೂರ್ಣ ಸ್ವಾತಂತ್ರ್ಯ”ದ ನಿರ್ಣಯವನ್ನು ಮಂಡಿಸಲಾಯಿತು. ಸಾ.ಶ. 1930ರ ಜನವರಿ 26ರಂದು “ಪೂರ್ಣ ಸ್ವರಾಜ್ಯದಿನ’’ ಎಂದು ಆಚರಿಸಲು ಅಧಿವೇಶನದಲ್ಲಿ ನಿರ್ಧರಿಸಲಾಯಿತು. ಈ ಐತಿಹಾಸಿಕ ಸಂಭ್ರಮಾಚರಣೆಯ ದಿನದ ನೆನಪನ್ನು ಹಸಿರಾಗಿಸಲು, ಸ್ವತಂತ್ರ ಭಾರತದ ಸಂವಿಧಾನವನ್ನು ಜನವರಿ 26, 1950ರಂದು ಅಂಗೀಕರಿಸಲಾಯಿತು. ಅಂದಿನಿಂದ ಪ್ರತಿವರ್ಷ ಆ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಿಸಲಾಗುತ್ತಿದೆ.
ನಾಗರಿಕ ಕಾನೂನುಭಂಗ ಚಳವಳಿ
ನಾಗರಿಕ ಕಾನೂನುಭಂಗ ಚಳವಳಿಯನ್ನು ಸಾ.ಶ. 1930ರ ಮಾರ್ಚ್ 12ರಂದು ಗಾಂಧೀಜಿ ಅವರು ಪ್ರಸಿದ್ಧ ದಂಡಿಯಾತ್ರೆಯೊಂದಿಗೆ ಆರಂಭಿಸಿದರು. ಆಯ್ದ 78 ಮಂದಿ ಅನುಯಾಯಿಗಳೊಡನೆ ಗಾಂಧೀಜಿ ಸಾಬರಮತಿ ಆಶ್ರಮದಿಂದ ಗುಜರಾತಿನ ಕಡಲತೀರದ ದಂಡಿಯವರೆಗೂ ಸುಮಾರು 375 ಕಿ.ಮೀ. ದೂರವನ್ನು ಕ್ರಮಿಸಿದರು. ಜನರಿಂದ ಉಪ್ಪನ್ನು ಉತ್ಪಾದಿಸುವುದರ ಮೂಲಕ ಉಪ್ಪಿನ ಕಾನೂನನ್ನು ಮುರಿಯುವುದು ಈ ಯಾತ್ರೆಯ ಮುಖ್ಯ ಉದ್ದೇಶವಾಗಿತ್ತು.

ಕಾನೂನುಭಂಗ ಚಳವಳಿಯು ಬಹುಬೇಗ ದೇಶದಾದ್ಯಂತ ಹರಡಿತು. ಎಲ್ಲೆಡೆ ಜನರು ಹರತಾಳ, ವಿದೇಶಿ ವಸ್ತುಗಳ ಬಹಿಷ್ಕಾರ, ಖಾದಿಪ್ರಚಾರ, ಮದ್ಯದ ಅಂಗಡಿಗಳ ಮುಂದೆ ಪ್ರತಿಭಟನೆ, ಅರಣ್ಯ ಸತ್ಯಾಗ್ರಹ, ಕರನಿರಾಕರಣೆ ಮೊದಲಾದವುಗಳಲ್ಲಿ ಭಾಗವಹಿಸಿದರು. ಅಂಕೋಲೆಯ ಉಪ್ಪಿನ ಸತ್ಯಾಗ್ರಹವು ದಾಖಲೆಯನ್ನು ನಿರ್ಮಿಸಿ ಭಾರತಾದ್ಯಂತ ಖ್ಯಾತಿ ಗಳಿಸಿತು.


ಇದೇ ವೇಳೆ ವಾಯುವ್ಯ ಭಾರತದಲ್ಲಿ ಗಡಿನಾಡ ಗಾಂಧಿ’ ಖಾನ್ ಅಬ್ದುಲ್ ಗಫಾರ್ ಖಾನರುಖುದಾಯಿ ಖಿದ್ಮತ್‍ಗಾರ’ (ದೇವರ ಸೇವಕರು) ಎಂಬ ಸಂಘವನ್ನು ಸ್ಥಾಪಿಸಿದರು. ನಾಗಾಲ್ಯಾಂಡಿನಲ್ಲಿ 13 ವರ್ಷದ ಬಾಲೆ ರಾಣಿ ಗಾಯ್ಡಿಲ್ಯೂ ಬ್ರಿಟಿಷರ ವಿರುದ್ಧ ಬಂಡಾಯ ನಡೆಸಿದಳು. ಹೀಗಾಗಿ ಅವರು ಭಾರತೀಯರಿಗೆ ಕೆಲವು ರಾಜಕೀಯ ರಿಯಾಯಿತಿಗಳನ್ನು ನೀಡಲು ಮುಂದಾದರು.

ದುಂಡುಮೇಜಿನ ಸಮ್ಮೇಳನಗಳು (ಸಾ.ಶ. 1930-32)
ದಂಡಿ ಯಾತ್ರೆಯ ಬಳಿಕ ಬ್ರಿಟಿಷ್ ಸರ್ಕಾರ ಮೂರು ದುಂಡುಮೇಜಿನ ಸಮ್ಮೇಳನಗಳನ್ನು ಲಂಡನ್ನಿನಲ್ಲಿ ಆಯೋಜಿಸಿತು. ಕಾಂಗ್ರೆಸ್ ಮತ್ತು ಗಾಂಧೀಜಿಯವರು ಎರಡನೇ ದುಂಡುಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದರು. ಆದರೆ ಈ ಸಮ್ಮೇಳನಗಳು ಭಾರತೀಯ ರಾಜಕೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲಗೊಂಡವು.
ಬ್ರಿಟಿಷ್ ಸರ್ಕಾರವು ಸಾ.ಶ. 1935ರಲ್ಲಿ ಭಾರತೀಯರಿಗೆ ಸರ್ಕಾರದಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ಸಹಭಾಗಿತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ಕಲ್ಪಿಸಿಕೊಡುವ ದೃಷ್ಟಿಯಿಂದ “ಭಾರತ ಸರ್ಕಾರ ಕಾಯಿದೆ”ಯನ್ನು ಜಾರಿಗೆ ತಂದಿತು.
ಭಾರತ ಬಿಟ್ಟು ತೊಲಗಿ ಚಳವಳಿ (ಸಾ.ಶ. 1942)
ಕ್ರಿಪ್ಸ್ ಆಯೋಗದ ವೈಫಲ್ಯವು ಭಾರತೀಯರನ್ನು ಕೆರಳಿಸಿತು. ಗಾಂಧೀಜಿ ಅವರು ಸಾ.ಶ. 1942ರ ಆಗಸ್ಟ್ 8ರಂದು ಮುಂಬೈನಲ್ಲಿ ಕಾಂಗ್ರೆಸಿನ ಸಭೆ ಕರೆದರು. ಅಲ್ಲಿ ಪ್ರಸಿದ್ಧ ಭಾರತ ಬಿಟ್ಟು ತೊಲಗಿ’ ಎಂಬ ನಿರ್ಣಯವನ್ನು ಅಂಗೀಕರಿಸಿದರು. ಭಾರತೀಯರಿಗೆ ಮಾಡು ಇಲ್ಲವೆ ಮಡಿ’ ಎಂಬ ಘೋಷಣೆ ನೀಡಿದರು. ಸರ್ಕಾರವು ಮರುದಿನವೆ ಗಾಂಧೀಜಿ ಮತ್ತು ಇತರ ನಾಯಕರನ್ನು ಬಂಧಿಸಿತು.

ಬಂಧನದ ಸುದ್ದಿ ಹರಡುತ್ತಿದ್ದಂತೆಯೆ ದೇಶದಾದ್ಯಂತ ಹರತಾಳಗಳು, ಶಾಲಾ ಕಾಲೇಜು ಮತ್ತು ಕಾರ್ಖಾನೆಗಳಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆದವು. ಪೋಲೀಸ್ ಠಾಣೆಗಳು, ಅಂಚೆ ಕಚೇರಿಗಳು, ರೈಲ್ವೆ ನಿಲ್ದಾಣಗಳ ಮೇಲೆ ವಿವಿಧೆಡೆ ಆಕ್ರಮಣಗಳು ಜರುಗಿದವು. ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ರೈತರು `ಬಂಡಾಯ’ವನ್ನು ಬೆಂಬಲಿಸಿದರು.
ಉತ್ತರ ಪ್ರದೇಶದ ಬಲಿಯಾ, ಬಂಗಾಳದ ತಾಮ್ಲಕ್ ಮತ್ತು ಮುಂಬಯಿ ಆಧಿಪತ್ಯದ ಸಾತಾರ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಕ್ರಾಂತಿಕಾರಿಗಳು `ಪರ್ಯಾಯ ಸರ್ಕಾರ’ಗಳನ್ನು ಸ್ಥಾಪಿಸಿದರು. ಇದೇ ವೇಳೆ ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮವು ಕರ್ನಾಟಕದಲ್ಲಿ ಮೊದಲಿಗೆ ಸ್ವಾತಂತ್ರ್ಯ ಘೋಷಿಸಿಕೊಂಡಿತು.
“ಭಾರತ ಬಿಟ್ಟು ತೊಲಗಿ” ಚಳವಳಿಯು ಕೂಡ ತತ್‍ಕ್ಷಣದ ರಾಜಕೀಯ ಉದ್ದೇಶವನ್ನು ಸಾಧಿಸುವಲ್ಲಿ ವಿಫಲವಾಯಿತು. ಆದರೆ ಭಾರತದ ಜನತೆ ಸ್ವತಂತ್ರರಾಗಲು ದೃಢ ನಿರ್ಧಾರ ತಳೆದಿದ್ದಾರೆ ಎಂಬ ಸಂದೇಶ ಸ್ಪಷ್ಟವಾಗಿತ್ತು. ಇದು ಗಾಂಧಿ ಯುಗದ ಬಹುದೊಡ್ಡ ಜನಾಂದೋಲನವಾಗಿತ್ತು.
ಗಾಂಧೀಜಿಯ ಬಗ್ಗೆ ಐನ್‍ಸ್ಟೈನ್‍ರ ಅನಿಸಿಕೆ:
“ಮುಂದಿನ ಪೀಳಿಗೆಗಳು ರಕ್ತಮಾಂಸಗಳಿಂದ ಕೂಡಿದ ಇಂತಹ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ನಡೆದಾಡಿದ್ದರು ಎಂಬುದನ್ನು ನಂಬಲು ಕಷ್ಟಪಡುತ್ತಾರೆ”.
ಸಮಾಜವಾದಿಗಳು

ಸಾ.ಶ. 1930ರ ದಶಕದಲ್ಲಿ ಕಾಂಗ್ರೆಸಿನ ಒಳಗೂ ಹೊರಗೂ ಸಮಾಜವಾದಿ ಚಿಂತನೆಗಳು ಪ್ರಚಾರವಾದವು. ಸಾ.ಶ. 1934ರ ಕಾಂಗ್ರೆಸ್ ಅಧಿವೇಶನದಲ್ಲಿ ಸಮಾಜವಾದಿ ಗುಂಪೊಂದು ಕಾಂಗ್ರೆಸ್ಸಿನಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಸಮಾಜವಾದಿಗಳು ಬಹುತೇಕ ಯುವಪೀಳಿಗೆಗೆ ಸೇರಿದವರಾಗಿದ್ದರು. ಅವರು ಅಲ್ಪಕಾಲದಲ್ಲೇ ‘ಕಾಂಗ್ರೆಸ್ ಸೋಷಲಿಷ್ಟ್ ಪಕ್ಷ’ವನ್ನು ಸ್ಥಾಪಿಸಿದರು. ಅದರ ಮಹಾಕಾರ್ಯದರ್ಶಿ ಜಯಪ್ರಕಾಶ್ ನಾರಾಯಣ್. ಆಚಾರ್ಯ ನರೇಂದ್ರ ದೇವ್ ಪಕ್ಷದ ಇನ್ನೊಬ್ಬ ಪ್ರಮುಖ ನಾಯಕರು. ಕಾಂಗ್ರೆಸಿನಲ್ಲಿದ್ದ ಸಮಾಜವಾದಿಗಳಲ್ಲಿ ಖ್ಯಾತ ನಾಯಕರೆಂದರೆ ಜವಾಹರಲಾಲ್ ನೆಹರು ಮತ್ತು ಸುಭಾಷ್‍ಚಂದ್ರ ಬೋಸ್. ನೆಹರು ತಾವೊಬ್ಬ `ಸಮಾಜವಾದಿ’ ಎಂದು ಗುರುತಿಸಿಕೊಂಡರೂ ತಾತ್ವಿಕವಾಗಿ ಗಾಂಧೀಜಿಯ ಜೊತೆಗಿದ್ದರು.
ಸಮಾಜವಾದಿಗಳು ಅನೇಕ ರೈತ ಮತ್ತು ಕಾರ್ಮಿಕ ಸಂಘಟನೆಗಳನ್ನು ಕಟ್ಟುವ ಮೂಲಕ ಭಾರತೀಯ ಸಮಾಜದ ದುರ್ಬಲ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಜಯಪ್ರಕಾಶ್ ನಾರಾಯಣ್, ರಾಮಮನೋಹರ ಲೋಹಿಯಾ, ಅರುಣಾ ಅಸಫ್ ಆಲಿ ಮುಂತಾದ ಸೋಷಲಿಸ್ಟ್ ನಾಯಕರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮಹತ್ವದ ಪಾತ್ರವಹಿಸಿ ಜನಪ್ರಿಯ ನಾಯಕರಾಗಿ ಮೂಡಿಬಂದರು.
ಜಯಪ್ರಕಾಶ್ ನಾರಾಯಣ್ (ಜೆ.ಪಿ.)
ಜಯಪ್ರಕಾಶ್ ನಾರಾಯಣ್ ಅವರು ಸಾ.ಶ. 1902ರಲ್ಲಿ ಬಿಹಾರದಲ್ಲಿ ಜನಿಸಿದರು. ಉನ್ನತ ವಿದ್ಯಾಭ್ಯಾಸವನ್ನು ಏಳು ವರ್ಷಗಳ ಕಾಲ ಅಮೇರಿಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಡೆಸಿದರು. ಅಲ್ಲಿ ಅಧ್ಯಯನ ಮಾಡುವ ಸಂದರ್ಭದಲ್ಲಿ ಅವರಿಗೆ ಸಮಾಜವಾದದ ಪರಿಚಯವಾಯಿತು. ಭಾರತಕ್ಕೆ ಹಿಂತಿರುಗಿದ ನಂತರ ಜವಾಹರಲಾಲ್ ನೆಹರು ಅವರ ಮಾರ್ಗದರ್ಶನದಂತೆ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಸಾ.ಶ. 1934ರಲ್ಲಿ ಕಾಂಗ್ರೆಸ್ ಸೋಷಲಿಷ್ಟ್ ಪಕ್ಷವನ್ನು ಸ್ಥಾಪಿಸಿದರು. ಸಾ.ಶ. 1941ರಲ್ಲಿ ಬಂಧನಕ್ಕೆ ಒಳಗಾದ ಜಯಪ್ರಕಾಶ್ ನಾರಾಯಣರು ಮರುವರ್ಷ ಹಜಾರಿಬಾಗ್ ಜೈಲಿನಿಂದ ತಪ್ಪಿಸಿಕೊಂಡು ಭೂಗತರಾದರು. ಅಡಗುತಾಣದಿಂದಲೇ ಭಾರತ ಬಿಟ್ಟು ತೊಲಗಿ ಚಳವಳಿಗೆ ಬೆಂಬಲ ನೀಡಿದರು. ನಂತರ ಮಾರುವೇಷದಲ್ಲಿ ಭಾರತದಾದ್ಯಂತ ಸಂಚರಿಸಿದರು. ಅವರನ್ನು ಸಾ.ಶ. 1944ರಲ್ಲಿ ಮತ್ತೆ ಬಂಧಿಸಿದ ಸರಕಾರ ಲಾಹೋರಿನ ಕೋಟೆಯಲ್ಲಿಟ್ಟಿತು. ನಂತರ ಅಲ್ಲಿಂದ ಬಿಡುಗಡೆಗೊಂಡರು.


ಸ್ವಾತಂತ್ರ್ಯಾ ನಂತರದಲ್ಲಿ ಅವರು ವಿನೋಬಾ ಭಾವೆಯವರ ಭೂದಾನ ಚಳವಳಿಯಲ್ಲಿ ಗುರುತಿಸಿಕೊಂಡರು. ಸಾ.ಶ. 1970ರ ದಶಕದಲ್ಲಿ ಭಾರತ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಬಹುದೊಡ್ಡ ಸಂಕ್ರಮಣಕ್ಕೆ ಒಳಗಾಯಿತು. ಸಾ.ಶ. 1975ರಲ್ಲಿ ಜಾರಿಯಾದ ತುರ್ತು ಪರಿಸ್ಥಿತಿಯು ಭಾರತದ ರಾಜಕೀಯ ನಕ್ಷೆಯನ್ನು ಬದಲಿಸಿತು. ಭ್ರಷ್ಟಾಚಾರವು ಆ ಕಾಲದ ಬಹುದೊಡ್ಡ ವಿಷಯವಾಗಿ ಚರ್ಚಿತವಾಯಿತು. ಸಾ.ಶ. 1974ರಲ್ಲಿ ಸಕ್ರಿಯ ರಾಜಕೀಯವನ್ನು ಪ್ರವೇಶಿಸಿದ್ದ ಜಯಪ್ರಕಾಶ್ ನಾರಾಯಣರು ಸಂಪೂರ್ಣ ಕ್ರಾಂತಿ’ ಎಂಬ ಆಂದೋಳನವನ್ನು ಹುಟ್ಟುಹಾಕಿದರು. ಇವರ ಚಳವಳಿಯ ಪರಿಣಾಮವಾಗಿ ಸಾ.ಶ. 1977ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಿತು. ಆಂತರಿಕ ಕಚ್ಚಾಟಗಳಿಂದ ಜನತಾ ಪಕ್ಷವು ಇಬ್ಭಾಗವಾದಾಗ ಭ್ರಮನಿರಸನಗೊಂಡರು. ಅಂತಿಮವಾಗಿ ಸಾ.ಶ. 1979ರಲ್ಲಿ ನಿಧನ ಹೊಂದಿದರು. ಜನರು ಇವರನ್ನು ಪ್ರೀತಿಯಿಂದಲೋಕನಾಯಕ’ ಎಂದೇ ಕರೆದರು.

ಆದಿವಾಸಿ ಮತ್ತು ರೈತ ಚಳವಳಿಗಳು
ಆದಿವಾಸಿಗಳು ಮೂಲತಃ ಕೃಷಿಕರಾಗಿದ್ದರು. ಅವರು ಬೇಸಾಯದ ನೆಲೆಯ ಸಮಸ್ಯೆಗಳನ್ನು ಎದುರಿಸುತ್ತಾ ತಮ್ಮ ಹೋರಾಟಗಳನ್ನು ಕಟ್ಟಿಕೊಂಡಿದ್ದರಿಂದ ಅವರ ಹೋರಾಟಗಳನ್ನು ರೈತ ಹೋರಾಟದ ಪ್ರಮುಖ ಭಾಗವಾಗಿ ನೋಡಲಾಗುತ್ತದೆ. ಬ್ರಿಟಿಷ್ ಆಳ್ವಿಕೆಯಡಿ ರೈತವರ್ಗ ತೀರ ಹೀನಾಯ ಸ್ಥಿತಿಯಿಂದ ಬಳಲಿತು. ಸರ್ಕಾರ, ಜಮೀನ್ದಾರರು, ಮಧ್ಯವರ್ತಿಗಳು, ಸ್ಥಳೀಯ ವ್ಯಾಪಾರಿಗಳು ಮತ್ತು ಅಧಿಕಾರಿಗಳಿಂದ ಅವರು ಶೋಷಣೆಗೆ ಒಳಗಾದರು. ಅವರ ದುಸ್ಥಿತಿಯೆ ಅವರನ್ನು ಸರ್ಕಾರ ಮತ್ತು ಜಮೀನ್ದಾರರ ವಿರುದ್ಧ ಸಿಡಿದೇಳುವಂತೆ ಪ್ರೇರೇಪಿಸಿತು.
ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸೆಟೆದು ನಿಂತು ಪೌರುಷದಿಂದ ಹೋರಾಡಿದ ಮೊದಲಿಗರೆಂದರೆ ಭಾರತದ ಆದಿವಾಸಿಗಳು. ಆದಿವಾಸಿಗಳ ಹೆಚ್ಚಿನ ಹೋರಾಟಗಳಲ್ಲಿ ಬ್ರಿಟಿಷ್ ಅಧಿಕಾರಿಗಳು ಮಾತ್ರವೇ ಅವರ ಶತ್ರುಗಳಾಗಿರಲಿಲ್ಲ. ಸ್ಥಳೀಯ ಜಮೀನ್ದಾರರು, ಸಾಹುಕಾರರು, ಕಂಟ್ರಾಕ್ಟರರು, ಕ್ರೈಸ್ತ ಮಿಶನರಿಗಳು ಹೀಗೆ ಹೊರಗಿನಿಂದ ಅವರ ಪ್ರದೇಶಗಳಿಗೆ ಹೋಗಿ ಶೋಷಣೆ ಮಾಡುತ್ತಿದ್ದ ಎಲ್ಲ ವರ್ಗಗಳು ಅವರ ಶತ್ರುಗಳೇ ಆಗಿದ್ದರು. ಭೀಕರ ರಕ್ತಪಾತವೇ ಆದಿವಾಸಿ ದಂಗೆಗಳ ಪ್ರಮುಖ ಲಕ್ಷಣವಾಗಿತ್ತು. ದಂಗೆಯೆದ್ದ ಆದಿವಾಸಿ ಪಂಗಡಗಳಲ್ಲಿ ಮುಖ್ಯವಾದವುಗಳೆಂದರೆ ಕೋಲ, ಸಂತಾಲ, ಮುಂಡÀ ಮತ್ತು ನಾಗಾ. ಆದಿವಾಸಿ ಸಮುದಾಯಗಳಿಂದಲೇ ಅವರ ಹೋರಾಟದ ನಾಯಕತ್ವ ರೂಪುಗೊಂಡಿದ್ದು ಆ ಚಳವಳಿಗಳ ವಿಶೇಷ ಲಕ್ಷಣವಾಗಿತ್ತು.
19ನೇ ಶತಮಾನದಲ್ಲಿ ರೈತರು ಪ್ರತಿಭಟನೆ ಮತ್ತು ದಂಗೆಯ ರೂಪದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. 20ನೇ ಶತಮಾನದಲ್ಲಿ ರಾಜಕೀಯ ಶಕ್ತಿಗಳ ಬೆಂಬಲ ಪಡೆದ ಅವರು ಅಂತಿಮವಾಗಿ ರಾಷ್ಟ್ರೀಯ ಚಳವಳಿಯಿಂದ ತಮ್ಮ ಶಕ್ತಿಯನ್ನು ವೃದ್ಧಿಸಿಕೊಂಡರು.
ಕೆಲವು ಪ್ರಮುಖ ರೈತ ದಂಗೆಗಳೆಂದರೆ ಚಂಪಾರಣ್, ಖೇಡ (ಕೈರ), ಬರ್ದೋಲಿ, ಬಂಗಾಲದ ನೀಲಿ ಬೆಳೆಗಾರ ಹೋರಾಟ ಮತ್ತು ಮಾಪಿಳ್ಳೆಗಳ ದಂಗೆಗಳು. ನಾವೀಗ ಆಯ್ದ ಮೂರು ದಂಗೆಗಳ ಬಗ್ಗೆ ತಿಳಿಯೋಣ.
ಚಂಪಾರಣ್, ಖೇಡಾ ಮತ್ತು ಮಾಪಿಳ್ಳೆ ದಂಗೆಗಳು
ಚಂಪಾರಣ್: ಚಂಪಾರಣ್ (ಬಿಹಾರ) ರೈತರು ಪ್ಲಾಂಟರುಗಳ ವಿರುದ್ಧ ಹೊಂದಿರುವ ಅಸಮಾಧಾನ ಮತ್ತು ಪ್ರತಿಭಟನೆಗೆ ಸುದೀರ್ಘ ಇತಿಹಾಸವಿದೆ. ಪ್ಲಾಂಟರ್‍ಗಳು ಬಲವಂತವಾಗಿ ನೀಲಿ ಬೆಳೆಯುವಂತೆ ರೈತರನ್ನು ಒತ್ತಾಯಿಸುತ್ತಿದ್ದರು. ಗಾಂಧೀಜಿ ಅವರ ವಿರುದ್ಧ ಸಾ.ಶ. 1917ರಲ್ಲಿ ಚಂಪಾರಣ್ ಸತ್ಯಾಗ್ರಹವನ್ನು ಆರಂಭಿಸಿದರು. ಕೊನೆಯಲ್ಲಿ ರೈತರ ಸಮಸ್ಯೆ ಪರಿಹಾರ ಕಂಡಿತು. ಈ ಚಳವಳಿಯ ಮೂಲಕ ಬಾಬು ರಾಜೇಂದ್ರ ಪ್ರಸಾದ್ ಪ್ರಮುಖ ನಾಯಕರಾಗಿ ರೂಪುಗೊಂಡರು.
ಖೇಡಾ ರೈತ ಹೋರಾಟ: ಖೇಡಾ ಗುಜರಾತ್ ರಾಜ್ಯದ ಪ್ರಮುಖ ಜಿಲ್ಲೆ. ಸಾ.ಶ. 1918ರ ಸಂದರ್ಭದಲ್ಲಿ ಬೆಳೆಗಳು ವಿಫಲವಾಗಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದರು. ಈ ಹಿನ್ನೆಲೆಯಲ್ಲಿ ಅವರು ಕಂದಾಯ ಕಟ್ಟುವುದರಿಂದ ವಿನಾಯಿತಿ ನೀಡಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಿದರು. ಸರಕಾರ ಇವರ ಮನವಿಯನ್ನು ತಿರಸ್ಕರಿಸಿದ್ದಲ್ಲದೆ, ಕಂದಾಯ ಸಂಗ್ರಹಣೆಗೆ ಒತ್ತಾಯಿಸಿತು. ಪರಿಣಾಮವಾಗಿ ಖೇಡಾದಲ್ಲಿ ರೈತ ಹೋರಾಟ ಪ್ರಾರಂಭವಾಯಿತು. ಗಾಂಧೀಜಿಯವರು ಈ ಹೋರಾಟಕ್ಕೆ ತಮ್ಮ ಪೂರ್ಣ ಬೆಂಬಲವನ್ನು ನೀಡಿದ್ದಲ್ಲದೆ, ರೈತರು ಕಂದಾಯವನ್ನು ಕಟ್ಟಬಾರದೆಂದು ತಿಳಿಸಿದರು. ಅಂತಿಮವಾಗಿ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡ ಸರಕಾರ, ಯಾರಿಗೆ ಸಾಧ್ಯವಾಗುವುದೋ ಅಂತಹ ರೈತರು ಕಂದಾಯವನ್ನು ಕಟ್ಟಬಹುದೆಂದು ತಿಳಿಸಿತು. ಇದನ್ನು ಒಪ್ಪಿದ ಗಾಂಧೀಜಿಯವರು ಚಳವಳಿಯನ್ನು ಕೈಬಿಡಲು ಒಪ್ಪಿದರು. ಈ ಹೋರಾಟದ ಮೂಲಕ ರಾಜಕೀಯವಾಗಿ ಬೆಳೆದ ನಾಯಕರೆಂದರೆ ಸರದಾರ ವಲ್ಲಭಭಾಯಿ ಪಟೇಲರು.
ಮಾಪಿಳ್ಳೆ ದಂಗೆ: ರೈತ ಚಳವಳಿಗಳಲ್ಲಿ ಮಲಬಾರಿನಲ್ಲಿ ನಡೆದ ಮಾಪಿಳ್ಳೆಗಳ ದಂಗೆಯು (ಸಾ.ಶ. 1921) ಪ್ರಸಿದ್ಧವಾಗಿದೆ. ಮಲಬಾರ್ ಪ್ರದೇಶದ ಮುಸ್ಲಿಮರನ್ನು ಮಾಪಿಳ್ಳೆಗಳು (ಮೊಪ್ಲಾಸ್) ಎಂದು ಕರೆಯುತ್ತಿದ್ದರು. ಅವರು ಪ್ರಮುಖವಾಗಿ ಕೃಷಿ ಅಲ್ಲದೇ ಚಹಾ ಮತ್ತು ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಕೃಷಿಯಲ್ಲಿ ತೊಡಗಿದ್ದ ಅನೇಕರು ಗೇಣಿದಾರರಾಗಿದ್ದರು. ಆಗಾಗ ಮಾಡುತ್ತಿದ್ದ ಗೇಣಿಯ ಹೆಚ್ಚಳವೇ ದಂಗೆಗೆ ಮುಖ್ಯ ಕಾರಣವಾಗಿತ್ತು. 19ನೇ ಶತಮಾನದಲ್ಲಿಯೇ ಅನೇಕ ಬಾರಿ ಪ್ರತಿರೋಧಗಳನ್ನು ಒಡ್ಡಿದ್ದರು. ಆದರೆ ಖಿಲಾಫತ್ ಚಳುವಳಿಯು ಮಾಪಿಳ್ಳೆಗಳಲ್ಲಿ ಹೊಸ ಉತ್ಸಾಹವನ್ನು ಮೂಡಿಸಿತು. ಸ್ಥಳೀಯ ಮಾಪಿಳ್ಳೆ ನಾಯಕರೇ ಆಂದೋಲನದ ಮುಂದಾಳುತನ ವಹಿಸಿದರು. ಅವರು ಜಮೀನ್ದಾರರ ವಿರುದ್ಧ ಹಿಂಸಾತ್ಮಕ ಹೋರಾಟಕ್ಕೆ ಇಳಿದು ಅವರ ಆಸ್ತಿಪಾಸ್ತಿಗಳನ್ನು ನಾಶ ಮಾಡಿದರು. ಹಿಂಸೆಯನ್ನು ತಡೆಯಲು ಬ್ರಿಟಷರು ದಕ್ಷಿಣ ಮಲಬಾರಿನಲ್ಲಿ ಸೇನಾಡಳಿತ ಜಾರಿ ಮಾಡಿದರು. ಚಳವಳಿಯು ಅಲ್ಪಕಾಲದಲ್ಲೇ ಮತೀಯ ರೂಪ ಪಡೆಯಿತು. ಹಾಗೂ ಕ್ರಮೇಣ ತನ್ನ ಕಾವನ್ನು ಕಳೆದುಕೊಂಡಿತು.
ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು
ರಾಣಿ ಅಬ್ಬಕ್ಕದೇವಿ:
ಗಾಂಧಿ ಪೂರ್ವ ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮರ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಮಹಿಳೆ “ರಾಣಿ ಅಬ್ಬಕ್ಕದೇವಿ”. ಇವರು ಚೌಟ ಮನೆತನಕ್ಕೆ ಸೇರಿದ್ದರು. ಇವರ ಚಿಕ್ಕಪ್ಪನಾದ ‘ತಿರುಮಲರಾಯರು’ ಅಬ್ಬಕ್ಕದೇವಿಗೆ ಯುದ್ಧ ತಂತ್ರಕಲೆಗಳಲ್ಲಿ ತರಬೇತಿಗೊಳಿಸಿದ ನಂತರ ಉಳ್ಳಾಲದ ರಾಣಿಯನ್ನಾಗಿ ಅಧಿಕಾರಕ್ಕೆ ತಂದರು. ಅಬ್ಬಕ್ಕನು ಮಂಗಳೂರಿನ “ಭಂಗ” ಪ್ರಾಂತ್ಯದ ಲಕ್ಷ್ಮಪ್ಪ ಅರಸರನ್ನು ವಿವಾಹವಾದರು. ಆದರೆ ಇವರ ವೈವಾಹಿಕ ಜೀವನ ಬಹಳ ಕಾಲ ಉಳಿಯಲಿಲ್ಲ. ಹೀಗಾಗಿ ಉಳ್ಳಾಲಕ್ಕೆ ಹಿಂತಿರುಗಿದರು. ಪೋರ್ಚುಗೀಸರು ಅಬ್ಬಕ್ಕಳಿಗೆ ಕಪ್ಪ ನೀಡಲು ಒತ್ತಾಯಿಸಿದಾಗ ಇವರು ತಿರಸ್ಕರಿಸಿದರು. ಪರಿಣಾಮವಾಗಿ ಸಾ.ಶ. 1555ರಲ್ಲಿ ಪೋರ್ಚುಗೀಸರು “ರಾಣಿ” ಮೇಲೆ ಯುದ್ಧ ಸಾರಿದರು. ಈ ಯುದ್ಧದಲ್ಲಿ ಅಬ್ಬಕ್ಕ ಜಯವನ್ನು ಸಾಧಿಸಿದಳು. ನಂತರ ಸಾ.ಶ. 1568ರಲ್ಲಿ ಪೋರ್ಚುಗೀಸರು ವೈಸರಾಯ್ ಆದ “ಆಂಟೋನಿಯೋಮೋರಹ” ರವರ ನೇತೃತ್ವದಲ್ಲಿ ಉಳ್ಳಾಲವನ್ನು ಪ್ರವೇಶಿಸಿದರು. ರಾಣಿ ಅಲ್ಲಿಂದ ತಪ್ಪಿಸಿಕೊಂಡು 200 ಮಂದಿ ಸೈನಿಕರೊಂದಿಗೆ ಪೋರ್ಚುಗೀಸ್ ಸೈನ್ಯದ ಮೇಲೆ ಎರಗಿದಳು. ಜನರಲ್ ‘ಪೆಕ್ಸೆಟೋ’ ಈ ಯುದ್ಧದಲ್ಲಿ ಅಸುನೀಗಿದನು. ಪೋರ್ಚುಗೀಸ್ ಸೈನಿಕರನ್ನು ಸೆರೆ ಹಿಡಿಯಲಾಯಿತು. ಮುಂದುವರೆದ ಮತ್ತೊಂದು ಯುದ್ಧದಲ್ಲಿ ಪೋರ್ಚುಗೀಸರ ಅಡ್ಮಿರಲ್ ‘ಮಾಸ್‍ಕಾರೆನ್ಸ್’ ನು ಉಳ್ಳಾಲದ ಸೈನಿಕರಿಂದ ಹತನಾದನು. ರಾಣಿ ಅಬ್ಬಕ್ಕ ಪೋರ್ಚುಗೀಸರಿಗೆ ಮಂಗಳೂರು ಕೋಟೆಯನ್ನು ಬಿಟ್ಟು ಹೊರಡಬೇಕೆಂದು ಒತ್ತಾಯಿಸಿದಳು. ಆದರೆ ಪೋರ್ಚುಗೀಸರು ಪದೇ-ಪದೇ ಉಳ್ಳಾಲದ ಸಂಪತ್ತಿನಿಂದ ಆಕರ್ಷಿತರಾಗಿ ಯುದ್ಧ ಸಾರುತ್ತಲೇ ಇದ್ದರು. ಸಾ.ಶ. 1570 ರಲ್ಲಿ ಬಿಜಾಪುರದ ಸುಲ್ತಾನ ಮತ್ತು ಕಲ್ಲಿಕೋಟೆಯ ಜಾಮೋರಿನ್‍ರವರೊಂದಿಗೆ ಮೈತ್ರಿ ಒಪ್ಪಂದವನ್ನು ಅಬ್ಬಕ್ಕ ಮಾಡಿಕೊಂಡಳು. ಜಾಮೋರಿನ್ ದೊರೆಯ ದಂಡನಾಯಕನಾದ “ಕುಲ್ಟಿಪೂಕರ್ ಮಾರ್ಕಕರ್”, ಅಬ್ಬಕ್ಕದೇವಿಯ ಪರವಾಗಿ ಯುದ್ಧ ಮಾಡಿ ಮಂಗಳೂರು ಕೋಟೆಯನ್ನು ವಶಪಡಿಸಿಕೊಂಡು ಹಿಂತಿರುಗಿ ಬರುವಾಗ ಪೋರ್ಚುಗೀಸರಿಂದ ಹತನಾದನು. ಅಬ್ಬಕ್ಕದೇವಿಯ ಪತಿಯಾದ ಲಕ್ಷ್ಮರಸನ ಸಹಕಾರದಿಂದ ಪೋರ್ಚುಗೀಸರು ಅಬ್ಬಕ್ಕದೇವಿಯನ್ನು ಯುದ್ಧದಲ್ಲಿ ಸೋಲಿಸಿ ಸೆರೆಮನೆಗೆ ತಳ್ಳಿದರು. ಅಬ್ಬಕ್ಕ ಸೆರೆಮನೆಯಲ್ಲಿಯೆ ತೀರಿಕೊಂಡಳು.

ರಾಣಿ ಅಬ್ಬಕ್ಕ ಸ್ಮರಣಾರ್ಥವಾಗಿ ಮಂಗಳೂರು ಬಳಿಯ ಉಳ್ಳಾಲದಲ್ಲಿ ‘ವೀರರಾಣಿ ಅಬ್ಬಕ್ಕನ ಉತ್ಸವ’ ಆಚರಿಸುತ್ತಾರೆ. ಸಾಹಸಿಗಳಾಗಿ ಸಾಧನೆ ಮಾಡಿದ ಮಹಿಳೆಯರಿಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿ ನೀಡುತ್ತಾರೆ. ಹಾಗೆಯೇ ದಿನಾಂಕ 15-1-2003 ರಲ್ಲಿ ರಾಣಿ ಅಬ್ಬಕ್ಕ ಅವರ ಭಾವಚಿತ್ರವಿರುವ ಅಂಚೆ ಕವರನ್ನು ಭಾರತ ಅಂಚೆ ಇಲಾಖೆ ಹೊರತಂದಿದೆ.
ಬಳ್ಳಾರಿ ಸಿದ್ದಮ್ಮ (ಸಾ.ಶ. 1903-1981)
ಇವರು ಇಂದಿನ ಹಾವೇರಿ ಜಿಲ್ಲೆಯ ದುಂಡಸೀ ಗ್ರಾಮದ ಸಂಪ್ರದಾಯಸ್ಥ ಕುಟುಂಬದಲ್ಲಿ ಸಾ.ಶ. 1903ರಲ್ಲಿ ಜನಿಸಿದರು. ತಂದೆ ‘ಕೊಟ್ಟ್ಟೆಗೆ ಬಸಟಪ್ಪ’. ಇವರು ವೃತ್ತಿಯಲ್ಲಿ ವ್ಯಾಪಾರಸ್ಥರಾದರೂ ಸ್ವಾತಂತ್ರ್ಯ ಚಳವಳಿಯ ಬಗೆಗೆ ಉತ್ಸಾಹವನ್ನು ಹೊಂದಿದ್ದರು. ತಂದೆ ಸಿದ್ದಮ್ಮನವರಿಗೆ ಅಂದಿನ ದಿನಪತ್ರಿಕೆಗಳನ್ನು ಮತ್ತು ನಿಯತಕಾಲಿಕೆಗಳನ್ನು ತರಿಸಿಕೊಡುತ್ತಿದ್ದರಿಂದ ರಾಷ್ಟ್ರೀಯವಾದಿ ವಿಚಾರಧಾರೆಗಳನ್ನು ಓದಿ ತಿಳಿಯುತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರರಾದ ಬಳ್ಳಾರಿ ಮುರುಗಪ್ಪರವರನ್ನು ವಿವಾಹವಾಗಿದ್ದೂ ಕೂಡ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಕಾರಣವಾಯಿತು. ಸಾ.ಶ. 1930 ರ ದಶಕದಲ್ಲಿ ಹಳೆ ಮೈಸೂರು ಸಂಸ್ಥಾನದಲ್ಲಿ ಸ್ವಾತಂತ್ರ್ಯ ಹೋರಾಟವು ತೀವ್ರಗತಿಯಲ್ಲಿ ನಡೆಯುತ್ತಿತ್ತು. ಆಗ ಎಸ್. ನಿಜಲಿಂಗಪ್ಪ, ಟಿ. ಸಿದ್ದಲಿಂಗಯ್ಯ, ಸರ್ದಾರ್ ವೀರಣ್ಣ ಗೌಡ ಮುಂತಾದ ಸ್ವಾತಂತ್ರ್ಯ ಹೋರಾಟಗಾರರು ಅಗ್ರಪಂಕ್ತಿಯಲ್ಲಿದ್ದರು. ಬಳ್ಳಾರಿ ಸಿದ್ದಮ್ಮನವರು ಸಾ.ಶ. 1938 ರಲ್ಲಿ ನಡೆದ ಶಿವಪುರ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು. ದಿನಾಂಕ 13-04-1938 ರಂದು ಧ್ವಜಾರೋಹಣ ಮಾಡಿ ದಸ್ತಗಿರಿಯಾದರು. ಒಂದು ತಿಂಗಳ ಕಾಲ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದರು. ಸಂಸ್ಥಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಂಸ್ಥಾನದ ಪತ್ರಿಕೆಗಳು ಸಿದ್ದಮ್ಮನವರ ಸ್ವಾತಂತ್ರ್ಯ ಹೋರಾಟದ ಬಗೆಗಿನ ಬದ್ಧತೆಯನ್ನು ಮೆಚ್ಚಿ ಪ್ರಶಂಸಿದವು. ಕಾರಾಗೃಹದಿಂದ ಬಿಡುಗಡೆಯಾದ ನಂತರ ಸಿದ್ದಮ್ಮನವರು ಪೂರ್ಣಪ್ರಮಾಣದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಂದುವರೆದರು. ನಂತರ ಸಾ.ಶ. 1939ರಲ್ಲಿ ಚಿತ್ರದುರ್ಗ ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ದಾವಣಗೆರೆ ತಾಲ್ಲೂಕಿನ ಆನಗೋಡು ಮತ್ತು ಮಾಯಕೊಂಡ ಅರಣ್ಯ ಪ್ರದೇಶಗಳಲ್ಲಿ ಈಚಲು ಮರಗಳನ್ನು ಕಡಿಯುವ ಚಳವಳಿಯಲ್ಲಿ ಭಾಗವಹಿಸಿ ದಿನಾಂಕ 29-9-1939 ರಿಂದ 8-9-1940 ರವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಿದರು. ನಂತರ ಸಾ.ಶ. 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಮೈಸೂರು ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರಿಸುವ ತೀರ್ಮಾನ ಪ್ರಕಟಿಸದೆ ಇದ್ದುದ್ದರಿಂದ ಸಾ.ಶ. 1947ರಲ್ಲಿ ಅರಮನೆ ಸತ್ಯಾಗ್ರಹ ಅಥವಾ ಮೈಸೂರು ಚಲೋ ಸತ್ಯಾಗ್ರಹ ಪ್ರಾರಂಭವಾಯಿತು. ಈ ಚಳವಳಿಯಲ್ಲಿ ಬಳ್ಳಾರಿ ಸಿದ್ದಮ್ಮ ಭಾಗವಹಿಸಿದ್ದರು. ಈ ಹೋರಾಟದ ನಂತರ ಮೈಸೂರು ರಾಜ್ಯವು ಭಾರತದ ಒಕ್ಕೂಟದಲ್ಲಿ ಸೇರ್ಪಡೆಯಾಯಿತು. ಇದರೊಂದಿಗೆ ಅಕ್ಟೋಬರ್ ಸಾ.ಶ. 1947 ರಲ್ಲಿ ಹೊಸಸರ್ಕಾರವು ಕೆ.ಸಿ.ರೆಡ್ಡಿ ಯವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿತು. ಸ್ವಾತಂತ್ರ್ಯ ನಂತರ ದಾವಣಗೆರೆ ತಾಲ್ಲೂಕಿನ ಶಾಸಕರಾಗಿ ಸೇವೆ ಸಲ್ಲಿಸಿದರು. ಗ್ರಾಮೀಣ ಬಡಮಹಿಳೆಯರ ಆರೋಗ್ಯವನ್ನು ಕಾಪಾಡಲು ಮಾತೃ ಮಂದಿರವನ್ನು ಸ್ಥಾಪಿಸಿ ಅವರಿಗೆ ಹೊಸ ಬೆಳಕಾದರು. ಇವರ ಈ ಸೇವಾ ಕಾರ್ಯಕ್ಕೆ ರಾಜ್ಯ ಸರ್ಕಾರ ತಾಮ್ರಪತ್ರವನ್ನು ನೀಡಿ ಗೌರವಿಸಿದೆ. ಹೀಗೆ ಬಳ್ಳಾರಿ ಸಿದ್ದಮ್ಮನವರು ಮೈಸೂರಿನ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಹಿಳೆಯರ ಗೌರವವನ್ನು ಹೆಚ್ಚಿಸಿದ್ದಾರೆ.
ಕಮಲಾದೇವಿ ಚಟ್ಟೋಪಾಧ್ಯಾಯ (ಸಾ.ಶ. 1903-1988)
ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಸಾ.ಶ. 1903 ಏಪ್ರಿಲ್ 3 ರಂದು ಮಂಗಳೂರಿನ ಶ್ರೀಮಂತ ಕುಟುಂಬ ಒಂದರಲ್ಲಿ ಜನಿಸಿದರು. ತಂದೆ ಧಾರೇಶ್ವರ ಅನಂತರಾಯರು, ತಾಯಿ ಗಿರಿಜಾಬಾಯಿ. ಬ್ರಿಟಿಷ್ ವಸಾಹತುಶಾಹಿ ವ್ಯವಸ್ಥೆಯಲ್ಲಿ ಉನ್ನತ ಅಧಿಕಾರಿಯಾಗಿದ್ದರು. ಕಮಲಾದೇವಿಯವರು ಕ್ಯಾಥೋಲಿಕ್ ಕಾನ್ವೆಂಟ್ ಮತ್ತು ಸೇಂಟ್ ಮೇರಿಸ್ ಶಾಲೆಯಲ್ಲಿ ಶಿಕ್ಷಣವನ್ನು ಪಡೆದರು. ಇವರಿಗೆ 14ನೇ ವಯಸ್ಸಿನಲ್ಲಿ ವಿವಾಹವಾಯಿತು ಮತ್ತು ಸ್ವಲ್ಪ ಕಾಲದಲ್ಲೇ ವಿಧವೆಯಾದರು. ನೌಕರಿಯಲ್ಲಿದ್ದ ತಂದೆಯವರಿಗೆ ಮದ್ರಾಸಿಗೆ ವರ್ಗವಾದಾಗ ಮದ್ರಾಸಿನಲ್ಲಿ ಶಿಕ್ಷಣವನ್ನು ಮುಂದುವರೆಸಿದರು. ಮುಂದೆ ಇಂಗ್ಲಿಷರ ಪ್ರಸಿದ್ಧ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪದವಿಯನ್ನು ಪಡೆದು ಭಾರತಕ್ಕೆ ಹಿಂದಿರುಗಿ ಸಮಾಜ ಸುಧಾರಣೆಯಲ್ಲಿ ತೊಡಗಿದರು. ಈ ಸಂದರ್ಭದಲ್ಲೆ ಕವಿ, ಸಾಹಿತಿ, ರಂಗಕರ್ಮಿಯಾದ ಹರೀಂದ್ರನಾಥ ಚಟ್ಟೋಪಾಧ್ಯಾಯರ ಪರಿಚಯವಾಯಿತು. ನಂತರ ಅವರೊಂದಿಗೆ ಮರುವಿವಾಹವಾಗಿ ಕಮಲಾದೇವಿ ಚಟ್ಟೋಪಾಧ್ಯಾಯರಾದರು.

ಕಮಲಾದೇವಿಯವರು ರಾಷ್ಟ್ರರಾಜಕಾರಣದಲ್ಲಿ ಗುರುತಿಸಿಕೊಂಡ ಕರ್ನಾಟಕದ ಬಹುಮುಖ ಪ್ರತಿಭೆಯ ಮಹಿಳೆ. ಇವರು ಗಾಂಧೀಜಿ ಮತ್ತು ಸರೋಜಿನಿ ನಾಯ್ಡುರವರಿಂದ ಪ್ರಭಾವಿತರಾಗಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದರು. ಕರ್ನಾಟಕದಾದ್ಯಂತ ಸಂಚರಿಸಿ ಯುವಜನತೆಯನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಪ್ರೇರೇಪಿಸಿದರು. ಸಾ.ಶ. 1929 ರಲ್ಲಿ ಅಲಹಾಬಾದ್ ನಗರದಲ್ಲಿ ರಾಷ್ಟ್ರ ಧ್ವಜವನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಹೊರಟು ಬ್ರಿಟಿಷ್ ದಬ್ಬಾಳಿಕೆಯನ್ನು ಖಂಡಿಸಿದರು. ಲಾಹೋರ್ ಕಾಂಗ್ರೆಸ್ ಅಧಿವೇಶನದ ನಿರ್ಣಯದಂತೆ ಗಾಂಧೀಜಿಯವರು 12 ಮಾರ್ಚ್ 1930 ರಂದು ತಮ್ಮ 78 ಅನುಯಾಯಿಗಳೊಂದಿಗೆ ಸಬರಮತಿ ಆಶ್ರಮದಿಂದ ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಮೇ 5 ರಂದು ದಂಡಿಯನ್ನು ತಲುಪಿ ಮೇ 6 ರಂದು ಉಪ್ಪನ್ನು ತಯಾರಿಸುವುದರ ಮೂಲಕ ಬ್ರಿಟಿಷರ ಉಪ್ಪಿನ ಕಾನೂನುಗಳನ್ನು ವಿರೋಧಿಸಿದರು. ಈ ಸಂದರ್ಭದಲ್ಲಿ ದೇಶದ ಜನತೆ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು. ಕಮಲಾದೇವಿಯವರು ಗಾಂಧೀಜಿಯವರನ್ನು ಭೇಟಿಮಾಡಿ ಮಹಿಳೆಯರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಲು ಅನುಮತಿಯನ್ನು ಪಡೆದರು. ಕಮಲಾದೇವಿ ಮತ್ತು ಅವಂತೀಬಾಯಿ ಗೋಖಲೆಯವರು ಮೊದಲ ತಂಡದ ಮಹಿಳೆಯರಾಗಿ ಉಪ್ಪಿನ ಕಾನೂನು ಭಂಗ ಚಳವಳಿಯಲ್ಲಿ ಭಾಗವಹಿಸಿದರು.
“ಗಾಂಧೀ ಉಪ್ಪನ್ನು ಕೊಳ್ಳಿ ಇದರ ಬೆಲೆ ಆರು ತಿಂಗಳ ಶಿಕ್ಷೆ” ಎಂದು ಹೇಳುತ್ತಾ ಉಪ್ಪನ್ನು ಮಾರಾಟಮಾಡಿ ದಸ್ತಗಿರಿಯಾಗಿ ಯರವಾಡ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸಿದರು. ಶಿಕ್ಷೆಯನ್ನು ಅನುಭವಿಸಿ ಜೈಲಿನಿಂದ ಬಿಡುಗಡೆ ಹೊಂದಿದ ನಂತರವು ಸಹ ಬಾಂಬೆಯ ಗಬಾಕಾಪುರದಲ್ಲಿ ಸ್ವದೇಶಿ ವಸ್ತುಗಳನ್ನು ಮಾರಾಟ ಮಾಡಿದರು. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸಿನ ಸೇವಾದಳದ ಮಹಿಳೆಯರ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡು ದೇಶಾದ್ಯಂತ ಸಂಚರಿಸಿ ಮಹಿಳಾ ಸ್ವಯಂಸೇವಕರನ್ನು ಸಂಘಟಿಸಿದರು. ಬಾಂಬೆ ಮತ್ತು ಬೋರೀವಿಗಳಲ್ಲಿ ಮಹಿಳಾ ಸ್ವಯಂಸೇವಕ ತರಬೇತಿಯ ಶಿಬಿರಗಳನ್ನು ತೆರೆಯಲಾಯಿತು. ಸೇವಾದಳದ ಈ ಸಂಘಟಿತ ಚಟುವಟಿಕೆಗಳಿಂದಾಗಿ ಬ್ರಿಟಿಷ್ ಸರ್ಕಾರ ಸೇವಾದಳವನ್ನು ರದ್ದುಮಾಡಿ ಕಮಲಾದೇವಿಯವರನ್ನು ದಸ್ತಗಿರಿಮಾಡಿ ಆರ್ಥರ್ ರಸ್ತೆ ಜೈಲಿನಲ್ಲಿರಿಸಿತು. ಇಲ್ಲಿ ಮೀರಾಬೆಹನ್ ರವರ ಪರಿಚಯವಾಯಿತು. ನಂತರ ವೇಲೂರು ಜೈಲಿಗೆ ವರ್ಗಾಯಿಸಲಾಯಿತು.
ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಒಳಬಣಗಳಿದ್ದವು. ಸೈದ್ಧಾಂತಿಕವಾಗಿ ಸಮಾಜವಾದದಿಂದ ಪ್ರಭಾವಗೊಂಡ ನೆಹರು, ರಾಮ ಮನೋಹರ್ ಲೋಹಿಯ, ಆಚಾರ್ಯ ನರೇಂದ್ರದೇವ ಮುಂತಾದವರು ಕಾಂಗ್ರೆಸ್ ಪಕ್ಷದಲ್ಲೆ ‘ಕಾಂಗ್ರೆಸ್ ಸೊಶಿಯಲಿಸ್ಟ್ ಪಕ್ಷ’ ಎಂಬ ಒಳಬಣವೊಂದನ್ನು ಸ್ಥಾಪಿಸಿದರು. ಕಮಲಾದೇವಿ ಚಟ್ಟೋಪಾಧ್ಯಾಯರು ಸಾ.ಶ. 1934ರಲ್ಲಿ ಈ ಪಕ್ಷದ ಸದಸ್ಯತ್ವವನ್ನು ಪಡೆದರು. ಸಮಾಜವಾದ ತತ್ವಗಳ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಬಂದು ಸಾರ್ವಜನಿಕ ಉಪನ್ಯಾಸಗಳನ್ನು ನೀಡಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು. ಇದರಿಂದ ಅನೇಕ ತೊಂದರೆಗಳಿಗೂ ಒಳಗಾದರು. ಕಮಲಾದೇವಿಯವರು ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲದೇ ಸಮಾಜ ಸುಧಾರಕರು, ಸ್ತ್ರೀವಾದಿ ಚಿಂತಕರು, ಸಾಹಿತಿ ಮತ್ತು ಚಲನಚಿತ್ರ ನಟರೂ ಆಗಿದ್ದರು. ಇವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಾಗಿ ಸಾ.ಶ. 1955ರಲ್ಲಿ ಪದ್ಮಭೂಷಣ, ಸಾ.ಶ. 1962ರಲ್ಲಿ ವತ್‍ಮುಲ್ ಪೌಂಡೇಶನ್ ಪ್ರಶಸ್ತಿ, ಸಾ.ಶ. 1966ರಲ್ಲಿ ರಾಮನ್ ಮ್ಯಾಗಸೇ ಇಂಟರ್ ನ್ಯಾಷನಲ್ ಪ್ರಶಸ್ತಿ, ಶಾಂತಿಭಾರತ ದೆಸೆಟೀಕೊತ್ತಂ ಪ್ರಶಸ್ತಿ, ಸೆಂಟ್ರಲ್ ಅಕಾಡೆಮಿ ಪ್ರಶಸ್ತಿ ಮತ್ತು ಸಾ.ಶ. 1987ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಗೌರವ ಲಭಿಸಿವೆ. ಇಂತಹ ಬಹುಮುಖ ಪ್ರತಿಭೆಯವರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯರವರು ಕರ್ನಾಟಕದ ಹೆಮ್ಮೆ. ಇವರು ಸಾ.ಶ. 1988 ರಲ್ಲಿ ತೀರಿಕೊಂಡರು.
ಯಶೋಧರಮ್ಮ ದಾಸಪ್ಪ (ಸಾ.ಶ. 1905-1980)
ಯಶೋಧರಮ್ಮನವರು ದಿನಾಂಕ 28-5-1905ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ರಾಮಯ್ಯ, ತಾಯಿ ರೇವಮ್ಮ. ತಂದೆಯವರು ಸುಧಾರಣಾ ಮನೋಭಾವ ವ್ಯಕ್ತಿತ್ವದವರಾಗಿದ್ದರು. ಬೆಂಗಳೂರಿನಲ್ಲಿ ಆರಂಭಿಕ ಶಿಕ್ಷಣವನ್ನು ಮುಗಿಸಿ ನಂತರ ಮದ್ರಾಸ್‍ನ ಕ್ವೀನ್ ಮೇರಿ ಕಾಲೇಜಿಗೆ ಪ್ರವೇಶ ಪಡೆದು ಇಂಟರ್ ಮೀಡಿಯೇಟ್ ಶಿಕ್ಷಣ ಮುಗಿಸಿದರು. ಬೆಂಗಳೂರಿಗೆ ವಾಪಸ್ಸಾದ ನಂತರ ರಾವ್ ಸಾಹೇಬ್ ಚೆನ್ನಯ್ಯನವರ ಮೂರನೇ ಪುತ್ರ ದಾಸಪ್ಪನವರೊಂದಿಗೆ ಸಾ.ಶ. 1926ರಲ್ಲಿ ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ದಾಸಪ್ಪ ಮತ್ತು ಯಶೋಧರಮ್ಮ ದಾಸಪ್ಪ ಅವರು ಸಮಾಜ ಸೇವಕರು. ಗಾಂಧೀಜಿಯವರ ಪ್ರಭಾವಕ್ಕೊಳಗಾಗಿ ರಾಷ್ಟ್ರೀಯ ಕಾಂಗ್ರೆಸ್‍ನ ಸಕ್ರಿಯ ಕಾರ್ಯಕರ್ತರಾದರು. ವಾರ್ದಸೇವಾಗ್ರಾಮದಲ್ಲಿ ಕೆಲಕಾಲ ಸೇವೆಸಲ್ಲಿಸಿ ದಂಪತಿಗಳಿಬ್ಬರು ವಾಪಸ್ಸಾದರು. ಮೈಸೂರು ಸಂಸ್ಥಾನದ ಸ್ವಾತಂತ್ರ್ಯ ಚಳವಳಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಸ್ವಾತಂತ್ರ್ಯ ನಂತರ ಮೈಸೂರು ಭಾರತ ಒಕ್ಕೂಟಕ್ಕೆ ಸೇರಿದ್ದಕ್ಕೆ ಸಾಕ್ಷಿಪ್ರಜ್ಞೆಯಾದರು.
ಮೈಸೂರು ನ್ಯಾಯವಿಧೇಯಕ ಸಭೆಗೆ ನಡೆದ ಚುನಾವಣೆಯಲ್ಲಿ ತಮ್ಮ ಪತಿ ಎಚ್.ಸಿ. ದಾಸಪ್ಪನವರು ಪ್ರಜಾ ಸಂಯುಕ್ತ ಪಕ್ಷದ ಅಭ್ಯರ್ಥಿಯಾದರೂ ಯಶೋಧರಮ್ಮರವರು ಕಾಂಗ್ರೆಸ್‍ನ ಸದಸ್ಯರಾಗಿ ಉಳಿದರು. ಸಮಾಜ ಸೇವಕಿಯಾಗಿ ತೊಡಗಿಸಿಕೊಂಡ ಯಶೋಧರಮ್ಮರವರು ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಸಾ.ಶ. 1938 ರ ಶಿವಪುರ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಸಾ.ಶ. 1942 ರ ಕ್ವಿಟ್ ಇಂಡಿಯಾ ಚಳವÀಳಿಯಲ್ಲಿ ಯಶೋಧರಮ್ಮ ದಾಸಪ್ಪರವರ ಮನೆ ಸ್ವಾತಂತ್ರ್ಯ ಹೋರಾಟಕ್ಕೆ ಪೂರಕವಾದ ಭೂಗತ ಚಟುವಟಿಕೆಗಳ ಕೇಂದ್ರವಾಗಿತ್ತು. ಚಳವಳಿ ಕುರಿತ ಲೇಖನಗಳನ್ನು ಗುಟ್ಟಾಗಿ ಮುದ್ರಿಸಿ ‘ಜ್ವಾಲೆ’ ಪತ್ರಿಕೆಯಲ್ಲಿ ಪ್ರಕಟಿಸಿದರು.
ಮೈಸೂರು ಸಂಸ್ಥಾನದಲ್ಲಿ ಪ್ರಜಾ ಸರ್ಕಾರ ಸ್ಥಾಪನೆಗಾಗಿ ಸಾ.ಶ. 1947ರಲ್ಲಿ ನಡೆದ ಮೈಸೂರು ಚಲೋ ಚಳವಳಿಯಲ್ಲಿ ಯಶೋಧರಮ್ಮ ದಾಸಪ್ಪನವರು ಜನರನ್ನು ಸಂಘಟಿಸುವಲ್ಲಿ ನೆರವಾದರು. ಮೈಸೂರು ಅರಮನೆಯ ಮುಂದೆ ಹರತಾಳ, ಮುಷ್ಕರಗಳು ನಡೆದವು. ಈ ಚಳವಳಿಯ ತೀವ್ರತೆಯನ್ನು ಮನಗಂಡ ಮಹಾರಾಜರು ಅಧಿಕಾರವನ್ನು ಜನತೆಗೆ ಹಸ್ತಾಂತರಿಸಿದರು. ಸ್ವಾತಂತ್ರ್ಯ ಸಂಸ್ಥಾನದಲ್ಲಿ ಶಾಸಕರಾಗಿ, ಲೋಕಸಭಾ ಸದಸ್ಯರಾಗಿ, ಎಸ್. ನಿಜಲಿಂಗಪ್ಪನವರ ಮಂತ್ರಿಮಂಡಲದಲ್ಲಿ ಸಮಾಜಕಲ್ಯಾಣ ಸಚಿವರಾಗಿ ಅನುಪಮ ಸೇವೆ ಸಲ್ಲಿಸಿದ ಈ ಬಹುಮುಖ ಪ್ರತಿಭೆ ವ್ಯಕ್ತಿತ್ವದ ಯಶೋಧರಮ್ಮ ದಾಸಪ್ಪನವರು ಕ್ಯಾನ್ಸರ್ ಕಾಯಿಲೆಯಿಂದ ಸಾ.ಶ. 1980 ರಲ್ಲಿ ತೀರಿಕೊಂಡರು.
ಉಮಾಬಾಯಿ ಕುಂದಾಪುರ (ಸಾ.ಶ. 1892-1992)
ಉಮಾಬಾಯಿ ಕುಂದಾಪುರರವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದಲ್ಲಿ ಸಾ.ಶ. 1892 ರಲ್ಲಿ ಜನಿಸಿದರು. ತಂದೆ ಗೊಲಿಕೆರೆ ಕೃಷ್ಣರಾಯ, ತಾಯಿ ತುಂಗಾಬಾಯಿ. ತಮ್ಮ 13ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಂಜೀವ್ ರಾವ್ ರವರನ್ನು ವಿವಾಹವಾದರು. ಪತಿಯ ಪ್ರೋತ್ಸಾಹದಿಂದ ಸಾ.ಶ. 1921ರ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಖಾದಿ ದಾರಿಗಳಾಗಿ ಕಾಂಗ್ರೆಸ್ ಚಟುವಟಿಕೆಗಳ ಪ್ರಭಾರ ಕಾರ್ಯವನ್ನು ಕೈಗೊಂಡರು. ದುರದೃಷ್ಟವಶಾತ್ ಸಾ.ಶ.1923ರಲ್ಲಿ ಪತಿಯನ್ನು ಕಳೆದುಕೊಂಡ ನಂತರ ಹುಬ್ಬಳ್ಳಿಯಲ್ಲಿ ನೆಲೆಸಿದರು.

ಇವರು ತಿಲಕ್ ಗಾಂಧೀ ಮತ್ತು ಹರ್ಡೇಕರ್ ರವರ ರಾಷ್ಟ್ರೀಯತೆಯ ಆಲೋಚನೆಗಳಿಂದ ಪ್ರಭಾವಿತರಾಗಿ ಮರಾಠಿ ಭಾಷೆಯಲ್ಲಿ ‘ಸ್ವದೇಶಿ ವ್ರತ’ ಎಂಬ ನಾಟಕವನ್ನು ರಚಿಸಿ ಸ್ವದೇಶಿ ತತ್ವದ ಮಹತ್ವವನ್ನು ಸಾರಿದರು. ಮುಂಬೈಯಲ್ಲಿ ಸಾರಸ್ವತ ಸಾಹಿತ್ಯಿಕ ಸಮಾಜ ಮತ್ತು ಭಗಿನೀ ಮಂಡಳಿ ಹಾಗೂ ತಿಲಕ್ ಶಾಲೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಇವು ಸ್ತ್ರೀಯರಲ್ಲಿ ಸ್ವದೇಶಿ, ಖಾದಿ ಪ್ರಚಾರ, ರಾಷ್ಟ್ರೀಯ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿದವು. ತಿಲಕರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಗಾಂಧೀಜಿಯವರ ನೇತೃತ್ವದ ಹೋರಾಟದಲ್ಲೂ ಭಾಗವಹಿಸಿದ್ದರು. ಸಾ.ಶ. 1923ರಲ್ಲಿ ಎನ್. ಎಸ್. ಹರ್ಡೇಕರ್ ರವರು ಸ್ಥಾಪಿಸಿದ ಸೇವಾದಳದ ಮಹಿಳಾ ಗುಂಪಿನ ನಾಯಕತ್ವವನ್ನು ವಹಿಸಿಕೊಂಡು ಸಾ.ಶ. 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಮುಖ ಪಾತ್ರವಹಿಸಿದರು. ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಇದರಿಂದ ನಾಲ್ಕು ತಿಂಗಳ ಕಾಲ ಹಿಂಡಲಗ ಮತ್ತು ಯರವಾಡ ಜೈಲುಗಳಲ್ಲಿ ಬಂಧನದಲ್ಲಿದ್ದರು. ಜೈಲಿನಿಂದ ಬಿಡುಗಡೆ ಹೊಂದಿದ ನಂತರ ಅಂಕೋಲ, ಶಿರಸಿ, ಸಿದ್ದಾಪುರ ಮುಂತಾದ ಕಡೆ ನಡೆದ ಸತ್ಯಾಗ್ರಹಗಳಲ್ಲಿ ಭಾಗವಹಿಸಿ ಶಿಕ್ಷೆ ಅನುಭವಿಸಿದರು. ಉಮಾಬಾಯಿ ಕುಂದಾಪುರರವರು ಅನೇಕ ನಿರಾಶ್ರಿತ ಮಹಿಳೆಯವರಿಗೆ ಆಶ್ರಯದಾತರಾದರು. ಅನಾರೋಗ್ಯದ ಕಾರಣದಿಂದ ಸಾ.ಶ. 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸದಿದ್ದರೂ ಈ ಚಳವಳಿಯಲ್ಲಿ ಭಾಗವಹಿಸಿದ ಭೂಗತ ಕಾರ್ಯಕರ್ತರಿಗೆ ಆಶ್ರಯ ನೀಡುವ ಮೂಲಕ ಚಳವಳಿಯನ್ನು ಬೆಂಬಲಿಸಿದರು. ಗಾಂಧೀಜಿಯವರ ಸಲಹೆಯಂತೆ ಕಸ್ತೂರಿ ಬಾ ನಿಧಿಯ ಜವಾಬ್ದಾರಿಯನ್ನು ವಹಿಸಿಕೊಂಡು ಸಮಾಜ ಸುಧಾರಣೆ ಕೆಲಸವನ್ನು ಮುಂದುವರಿಸಿದರು. ಇಂತಹ ನಿಸ್ವಾರ್ಥ ವ್ಯಕ್ತಿತ್ವವುಳ್ಳ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ಇಡಿಯಾಗಿ ಸಮರ್ಪಿಸಿಕೊಂಡ ಉಮಾಬಾಯಿ ಕುಂದಾಪುರರವರು ಸಾ.ಶ. 1992 ರಲ್ಲಿ ಮರಣ ಹೊಂದಿದರು.
ಸ್ವಾತಂತ್ರ್ಯದೆಡೆಗೆ
ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿನ ಜನಾಂದೋಲನಗಳು ಸೃಷ್ಟಿಸಿದ ಒತ್ತಡ ಮತ್ತು ಎರಡನೇ ಮಹಾಯುದ್ಧದಿಂದ ಉಂಟಾದ ಸನ್ನಿವೇಶದಿಂದಾಗಿ ಬ್ರಿಟಿಷರು ಭಾರತದ ಸಮಸ್ಯೆಗೆ ಆದಷ್ಟು ಬೇಗ ಪರಿಹಾರವನ್ನು ಕಂಡು ಹಿಡಿಯಲು ಅನುವಾದರು. ಇದೇ ವೇಳೆ ಮಹಾಯದ್ಧದ ಪರಿಣಾಮವಾಗಿ ಬ್ರಿಟಿಷರ ಆರ್ಥಿಕ ಮತ್ತು ಸೈನಿಕ ಶಕ್ತಿ ಕುಂದಿತ್ತು.
ಎರಡನೇ ಮಹಾಯುದ್ಧದ ಅಂತ್ಯದಲ್ಲಿ (ಸಾ.ಶ. 1945) ಅಧಿಕಾರಕ್ಕೆ ಬಂದ ಲೇಬರ್ ಪಕ್ಷವು ಭಾರತದ ಜತೆ ರಾಜಕೀಯ ಒಪ್ಪಂದವೊಂದನ್ನು ಮಾಡಿಕೊಳ್ಳಬಯಸಿತು. ಈ ಅಂತಿಮ ಹಂತದಲ್ಲಿ ಭಾರತದ ಭವಿಷ್ಯಕ್ಕೆ ಸಂಬಂಧಿಸಿದ ನಿರ್ಣಾಯಕ ನಿರ್ಧಾರಗಳನ್ನು ಮೌಲಾನಾ ಅಬುಲ್ ಕಲಂ ಆಜಾದ್, ಜವಾಹರಲಾಲ್ ನೆಹರು ಮತ್ತು ವಲ್ಲಭಭಾಯ್ ಪಟೇಲ್ ತೆಗೆದುಕೊಂಡರು.
ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಿಸಲು ಅನುಸರಿಸಬೇಕಾದ ಮಾರ್ಗಗಳನ್ನು ಕಂಡು ಕೊಳ್ಳಲು ಬ್ರಿಟಿಷ್ ಸರ್ಕಾರ ಸಾ.ಶ. 1946ರಲ್ಲಿ ಕ್ಯಾಬಿನೇಟ್ ಆಯೋಗವನ್ನು ಭಾರತಕ್ಕೆ ಕಳುಹಿಸಿತು. ಆದರೆ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಪಾಕಿಸ್ತಾನವೆಂದು ಕರೆಯಲ್ಪಡುವ ಪ್ರತ್ಯೇಕ ಮುಸ್ಲಿಂ ದೇಶಕ್ಕಾಗಿ ಪಟ್ಟು ಹಿಡಿಯಿತು. ಹೀಗಾಗಿ ಭಾರತವನ್ನು ವಿಭಜಿಸುವುದು ಅನಿವಾರ್ಯವಾಯಿತು. ಸಾ.ಶ. 1947ರ ಜೂನ್ 3ರಂದು ಭಾರತದ ಕೊನೆಯ ಮತ್ತು 34ನೇ ವೈಸ್‍ರಾಯ್ ಆದ ಲಾರ್ಡ್ ಮೌಂಟ್‍ಬ್ಯಾಟನ್ ಭಾರತವನ್ನು ವಿಭಜಿಸಿ ಅಧಿಕಾರವನ್ನು ಭಾರತೀಯರಿಗೆ ಹಸ್ತಾಂತರಿಸಲಾಗುವುದೆಂಬ ಐತಿಹಾಸಿಕ ನಿರ್ಣಯವನ್ನು ಘೋಷಿಸಿದರು.

ಸಾ.ಶ. 1947ರ ಆಗಸ್ಟ್ 14ರಂದು ಪಾಕಿಸ್ತಾನ ಭಾರತದಿಂದ ಪ್ರತ್ಯೇಕಗೊಂಡಿತು. ಭಾರತ ಸಾ.ಶ. 1947ರ ಆಗಸ್ಟ್ 15ರಂದು ಸ್ವತಂತ್ರಗೊಂಡಿತು. ಜವಾಹರಲಾಲ್ ನೆಹರು ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿಯಾದರು. ಆರಂಭದಲ್ಲಿ ವ್ಯಾಪಾರಿ ಉದ್ದೇಶವನ್ನು ಇಟ್ಟುಕೊಂಡು ಬಂದಿದ್ದ ಬ್ರಿಟಿಷರು ಸುಮಾರು ಎರಡು ಶತಮಾನಗಳ ಕಾಲ ಭಾರತವನ್ನು ಆರ್ಥಿಕ ಮತ್ತು ರಾಜಕೀಯವಾಗಿ ದುರ್ಬಲಗೊಳಿಸಿದರು. ಭಾರತೀಯರು ಸಂಘಟಿತರಾಗಿ ನಡೆಸಿದ ಹೋರಾಟಗಳಿಂದ ಕೊನೆಗೂ ಸಾಮ್ರಾಜ್ಯವಾದಿಗಳು ಇಲ್ಲಿಂದ ನಿರ್ಗಮಿಸಲೇಬೇಕಾಯಿತು. ದೀರ್ಘಕಾಲ ಸಾಗಿದ ರಾಷ್ಟ್ರೀಯ ಹೋರಾಟವು ಅಂತ್ಯಗೊಂಡ ದಿನವಾದ 15 ಆಗಸ್ಟ್ ಸಾ.ಶ. 1947 ಭಾರತದ ಇತಿಹಾಸದಲ್ಲಿ ಒಂದು ಅವಿಸ್ಮರಣೀಯ ದಿನವಾಗಿದೆ. ಭಾರತದ ಕೋಟ್ಯಂತರ ಜನರ ಹೃದಯಗಳಲ್ಲಿ ಆ ದಿನವು ಅಚ್ಚಳಿಯದೆ ಶಾಶ್ವತವಾಗಿ ನೆಲೆಸಿದೆ. ಪ್ರತಿ ವರ್ಷವೂ ಸ್ವಾತಂತ್ರ್ಯ ಹೋರಾಟದ ಆಶಯಗಳನ್ನು ನೆನೆಪಿಸುವ ದಿನವಾಗಿದೆ.

ಮಹಮ್ಮದ್ ಆಲಿ ಜಿನ್ನಾ (ಸಾ.ಶ. 1876-1948) ಮತ್ತು ಮುಸ್ಲಿಂ ಲೀಗ್
ಸ್ವತಂತ್ರಪೂರ್ವ ಭಾರತದ ರಾಜಕೀಯ ಬೆಳವಣಿಗೆಗಳಲ್ಲಿ ಜಿನ್ನಾ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ವೃತ್ತಿಯಲ್ಲಿ ಅವರು ವಕೀಲರಾಗಿದ್ದು, ಉದಾರ ರಾಷ್ಟ್ರೀಯ ವಾದಿಗಳಾಗಿದ್ದರು. ಆರಂಭದಲ್ಲಿ ಅವರು ಮುಸ್ಲಿಂ ಲೀಗಿನ ಜೊತೆಗೆ ಗುರುತಿಸಿಕೊಂಡಿರಲಿಲ್ಲ ಹಾಗೂ ತಾತ್ವಿಕವಾಗಿ ಅದರ ವಿರೋಧಿಯಾಗಿದ್ದರು. ಅಂದಿನ ದಿನಗಳಲ್ಲಿ ಅವರನ್ನು ಹಿಂದೂ ಮುಸ್ಲಿಂ ಏಕತೆಯ ರಾಯಭಾರಿ ಎಂದು ಪರಿಗಣಿಸಿದ್ದರು. ಸಾ.ಶ. 1913ರಲ್ಲಿ ಮುಸ್ಲಿಂಲೀಗಿನ ಸದಸ್ಯರಾಗುವ ಮೂಲಕ ಭಾರತ ಮುಸ್ಲಿಂ ಸಮುದಾಯದ ನಾಯಕರಾಗಿ ರೂಪುಗೊಳ್ಳತೊಡಗಿದರು.

ಸಾ.ಶ. 1927ರಲ್ಲಿ ಜಿನ್ನಾ ಅವರು 14 ಅಂಶಗಳ ಬೇಡಿಕೆಗಳನ್ನು ಮುಂದಿಟ್ಟರು. ಇವನ್ನು ದಿಲ್ಲಿ ಘೋಷಣೆ ಎನ್ನುವರು. ಈ ಅಂಶಗಳು ಮತೀಯ ರಾಜಕಾರಣಕ್ಕೆ ನೀರೆರೆದವು. ಈ ನಾಲ್ಕು ಅಂಶಗಳು ಸಾ.ಶ. 1928ರಲ್ಲಿ ಜಿನ್ನಾರವರು ಸಿದ್ಧಪಡಿಸಿದ 14 ಅಂಶಗಳ ದಾಖಲೆ’ಯ ಭಾಗವಾಗಿ ಅಂತರ್ಗತಗೊಂಡವು. ಈ 14 ಅಂಶಗಳ ದಾಖಲೆ ಮುಸ್ಲಿಂಲೀಗಿನ ಮತೀಯ ರಾಜಕಾರಣದ ಸೈದ್ಧಾಂತಿಕ ಮಾರ್ಗದರ್ಶಿಯಾಗಿತ್ತು. ಜಿನ್ನಾ ಅವರು ಸಾ.ಶ. 1936ರ ನಂತರಎರಡು ರಾಷ್ಟ್ರಗಳ ಸಿದ್ಧಾಂತ’ದ ಪ್ರತಿಪಾದಕರಾದರು. ಈ ಪ್ರತಿಪಾದನೆಯು ಸಾ.ಶ. 1940ರ ಮುಸ್ಲಿಂ ಲೀಗ್‍ನ ಲಾಹೋರ್ ಅಧಿವೇಶನದಲ್ಲಿ ಅಂಗೀಕಾರವಾಯಿತು. ಈ ಹಿನ್ನೆಲೆಯಲ್ಲಿ ನಡೆದ ಮುಂದಿನ ರಾಜಕೀಯ ಬೆಳವಣಿಗೆಗಳು ಭಾರತವನ್ನು ವಿಭಜಿಸುವ ಮೂಲಕ ಪಾಕಿಸ್ತಾನದ ಉದಯಕ್ಕೆ ಕಾರಣವಾದವು.
ಚೌಧರಿ ರಹಮತ್ ಆಲಿ ಮತ್ತು ಅವರ ಮೂರು ಮಂದಿ ಸ್ನೇಹಿತರು ಸಾ.ಶ. 1933ರಲ್ಲಿ ಬರೆದ ಪತ್ರವೊಂದರಲ್ಲಿ ಪ್ರತ್ಯೇಕ ಮುಸ್ಲಿಂ ರಾಜ್ಯದ ರಚನೆಯನ್ನು ಪ್ರಸ್ತಾಪಿಸಿದ್ದರು. ಪಂಜಾಬ್, ಅಫ್‍ಘನ್, ಕಾಶ್ಮೀರ, ಸಿಂಧ್ ಮತ್ತು ಬಲೂಚಿಸ್ತಾನ್ ಎಂಬ ಪ್ರಾಂತ್ಯಗಳ ಹೆಸರಿನ ಮೊದಲ ಇಂಗ್ಲಿಷ್ ಅಕ್ಷರಗಳನ್ನು ಬಳಸಿಕೊಂಡು “ಪಾಕಿಸ್ತಾನ” ಎಂದು ಕರೆಯಲಾಗಿದೆ. PAKISTAN ಹೆಸರಿನ ಕೊನೆಯ ಮೂರು ವರ್ಣಗಳು ಬಲೂಚಿಸ್ತಾನ ಪ್ರಾಂತ್ಯವನ್ನು ಸಂಕೇತಿಸುತ್ತದೆ.
ಸುಭಾಷ್‍ಚಂದ್ರ ಬೋಸ್ ಮತ್ತು ಭಾರತೀಯ ರಾಷ್ಟ್ರೀಯ ಸೇನೆ
ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್‍ಚಂದ್ರ ಬೋಸರ ಪಾತ್ರ ಅನನ್ಯವಾದುದು. ಅವರು ಕಲ್ಕತ್ತ ವಿಶ್ವವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಲಂಡನಿನಲ್ಲಿ ಐ.ಸಿ.ಎಸ್. ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದರು. ಅವರು `ದೇಶಬಂಧು’ ಚಿತ್ತರಂಜನ್ ದಾಸರ ಪ್ರಭಾವದಿಂದ ಚಳವಳಿಗೆ ಆಕರ್ಷಿತರಾಗಿ ರಾಜಕೀಯಕ್ಕೆ ಧುಮುಕಿದರು. ವಿಶೇಷವಾಗಿ ಸ್ವಾಮಿ ವಿವೇಕಾನಂದರ ಬದುಕು ಮತ್ತು ಬರವಣಿಗೆಗಳಿಂದ ಅವರು ಸ್ಫೂರ್ತಿ ಪಡೆದಿದ್ದರು.

ಸುಭಾಷರು ಗಾಂಧೀಜಿಯವರ ಬಗೆಗೆ ಅಪಾರ ಗೌರವ ಹೊಂದಿದ್ದರು. ಆದರೆ ಅವರ ರಾಜನೀತಿಯನ್ನು ವಿರ್ಮಶಿಸಿದರು. ಕೊನೆಗೆ ಗಾಂಧೀಜಿ ಅವರೊಂದಿಗೆ ತಾತ್ವಿಕ ಭಿನ್ನಾಭಿಪ್ರಾಯ ತಳೆದು ಸಾ.ಶ. 1939ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದರು. ನಂತರ `ಫಾರ್ವರ್ಡ್ ಬ್ಲಾಕ್’ ಎಂಬ ಹೊಸ ಪಕ್ಷವನ್ನು ಸಂಘಟಿಸಿದರು.
ಈ ವೇಳೆ ಎರಡನೆಯ ಮಹಾಯುದ್ಧ ಭರದಿಂದ ಸಾಗುತ್ತಿತ್ತು (ಸಾ.ಶ. 1939 1945). ಬ್ರಿಟಿಷರು ಬೋಸರ ಕ್ರಾಂತಿಕಾರಿ ನಿಲುವನ್ನು ಗಮನಿಸಿ, ಅವರು ಅಪಾಯಕಾರಿ ಎಂದು ಪರಿಗಣಿಸಿ ಗೃಹಬಂಧನದಲ್ಲಿ ಇರಿಸಿದರು. ಆದರೆ ಬೋಸರು ಬಂಧನದಿಂದ ರಹಸ್ಯವಾಗಿ ತಪ್ಪಿಸಿಕೊಂಡು ಪೇಷಾವರ ಮತ್ತು ಕಾಬೂಲ್ (ಅಫ್‍ಘಾನಿಸ್ತಾನ) ಮೂಲಕ ಮಾಸ್ಕೊಗೆ ಹೋಗುವ ಪ್ರಯಾಸಕಾರಿ ಪ್ರಯಾಣವನ್ನು ಕೈಗೊಂಡರು. ಅಲ್ಲಿಂದ ವಿಮಾನದ ಮೂಲಕ ಜರ್ಮನಿಯ ಬರ್ಲಿನ್ ನಗರಕ್ಕೆ ತೆರಳಿದರು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‍ನೊಂದಿಗೆ ಒಪ್ಪಂದ ಮಾಡಿಕೊಂಡರು. ಬ್ರಿಟಿಷರನ್ನು ಭಾರತದಿಂದ ಹೊರದಬ್ಬುವುದು ಅವರ ಮಹಾನ್ ಯೋಜನೆಯಾಗಿತ್ತು. (ಆಗ ಜರ್ಮನಿಯ ವಿರುದ್ಧ ಬ್ರಿಟಿಷರು ಎರಡನೇ ಜಾಗತಿಕ ಯುದ್ಧದಲ್ಲಿ ತೊಡಗಿದ್ದರು).
ಈ ನಡುವೆ ಜಪಾನ್ ಬ್ರಿಟಿಷರ ವಿರುದ್ಧ ಎರಡನೇ ಮಹಾಯುದ್ಧವನ್ನು ಪ್ರವೇಶಿಸಿತು. ಯುದ್ಧದಲ್ಲಿ ಬ್ರಿಟನ್ನಿನ ಸೇವೆಯಲ್ಲಿದ್ದ ಸುಮಾರು 40,000 ಭಾರತೀಯ ಸೈನಿಕರು ಜಪಾನಿನ ಯುದ್ಧ ಖೈದಿಗಳಾಗಿದ್ದರು. ಅವರು ಮೋಹನ್ ಸಿಂಗ್ ನೇತೃತ್ವದಲ್ಲಿ ಭಾರತೀಯ ರಾಷ್ಟ್ರೀಯ ಸೇನೆ (ಇಂಡಿಯನ್ ನೇಷನಲ್ ಆರ್ಮಿಐ.ಎನ್.ಎ.) ಅಥವಾ ಆಜಾದ್ ಹಿಂದ್ ಫೌಜ್ ಎಂಬ ಹೆಸರಿನಿಂದ ಸಂಘಟಿತರಾಗಿದ್ದರು. ಕಾಂಗ್ರೇಸ್, ಮಹಾತ್ಮಗಾಂಧಿ ಮತ್ತು ಜವಾಹರ್‍ಲಾಲ್ ನೆಹರು ಅವರೊಂದಿಗೆ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದಾಗಿಯೂ ತಮ್ಮ ಸೇನೆಯ ತುಕಡಿಗಳಿಗೆ ಮಹಾತ್ಮಗಾಂಧಿ, ಜವಾಹರ್‍ಲಾಲ್ ನೆಹರು ಮತ್ತು ಮೌಲಾನಾ ಆಜಾದ್ ಅವರುಗಳ ಹೆಸರುಗಳನ್ನು ಇಟ್ಟಿದ್ದರು. ಈ ಅಂಶ ಸುಭಾಷ್ ಚಂದ್ರಬೋಸ್‍ರವರ ವ್ಯಕ್ತಿತ್ವ ಮತ್ತು ಭಾರತೀಯ ಸ್ವತಂತ್ರ ಹೋರಾಟದ ಘನತೆಗೆ ಹಿಡಿದ ಕನ್ನಡಿ ಆಗಿದೆ. ಸಾ.ಶ. 1943ರಲ್ಲಿ ಸುಭಾಷ್‍ಚಂದ್ರರು ಸಿಂಗಾಪುರಕ್ಕೆ ಬಂದು ಐಎನ್‍ಎಯ ನಾಯಕತ್ವ ವಹಿಸಿಕೊಂಡರು. ಸುಭಾಷರನ್ನು ನೇತಾಜಿ’ ಎಂದು ಕರೆಯಲಾಯಿತು. ಶೀಘ್ರವೇ ನೇತಾಜಿಯವರು ಸಿಂಗಾಪುರದಲ್ಲಿಸ್ವತಂತ್ರ ಭಾರತದ ಹಂಗಾಮಿ ಸರ್ಕಾರ’ವನ್ನು ಸ್ಥಾಪಿಸಿದರು. ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳು ಅದಕ್ಕೆ ಮಾನ್ಯತೆ ನೀಡಿದವು. `ಚಲೋ ದಿಲ್ಲಿ’ ಎಂಬ ಘೋಷಣೆಯೊಂದಿಗೆ ನೇತಾಜಿಯವರ ನಾಯಕತ್ವದಲ್ಲಿ ಐಎನ್‍ಎ ಬರ್ಮದ ಕಡೆಯಿಂದ ಭಾರತದ ಪ್ರದೇಶದಲ್ಲಿ (ಈಗಿನ ಮಣಿಪುರ) ಸುಮಾರು 150 ಮೈಲಿಗಳಷ್ಟು ಮುನ್ನುಗ್ಗಿತು. ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಭಾರತೀಯ ನೆಲದ ಮೇಲೆ ಹಾರಿಸಿತು. ಆದರೆ ಅಲ್ಪಕಾಲದಲ್ಲೇ ಬ್ರಿಟಿಷ್ ಸೇನೆ ಬರ್ಮದ ರಾಜಧಾನಿ ರಂಗೂನನ್ನು ವಶಪಡಿಸಿಕೊಂಡಿದ್ದರಿಂದ ಐಎನ್‍ಎಗೆ ಹಿನ್ನಡೆ ಉಂಟಾಯಿತು. ಐಎನ್‍ಎ ಸೈನಿಕರನ್ನು ನಿಶ್ಶಸ್ತ್ರಗೊಳಿಸಿ ಖೈದಿಗಳನ್ನಾಗಿ ಮಾಡಲಾಯಿತು. ಶತ್ರುಪಡೆಗೆ ಜಪಾನ್ ಶರಣಾದ ಬಳಿಕ (ಸಾ.ಶ. 1945) ನೇತಾಜಿ ಟೋಕಿಯೊಗೆ ತೆರಳುವಾಗ ಅಲ್ಲಿ ನಡೆದ ವಿಮಾನ ದುರಂತದಲ್ಲಿ ಅವರು ಮೃತಪಟ್ಟರೆಂದು ಹೇಳಲಾಗುತ್ತದೆ.
ಐಎನ್‍ಎ ತನ್ನ ತತ್‍ಕ್ಷಣದ ಗುರಿಸಾಧಿಸುವಲ್ಲಿ ವಿಫಲವಾದದ್ದೇನೊ ನಿಜ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಅದಕ್ಕೊಂದು ಮಹತ್ವದ ಸ್ಥಾನವಿದೆ. “ನೀವು ರಕ್ತವನ್ನು ನೀಡಿದರೆ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ” ಎಂದು ನೇತಾಜಿ ದಿಟ್ಟತನದ ಕರೆ ನೀಡಿದರು. ನೇತಾಜಿಯವರ ಅಪತ್ರಿಮ ಸಾಮಥ್ರ್ಯಗಳಿಗೆ ಐಎನ್‍ಎ ಸಾಕ್ಷಿಯಾಗಿ ನಿಂತಿದೆ. ಕೊಲ್ಕತಾದಿಂದ ಮಾಸ್ಕೊಗೆ ಮತ್ತು ಜರ್ಮನಿಯಿಂದ ಜಪಾನಿಗೆ ಆ ಬಿಕ್ಕಟ್ಟಿನ ದಿನಗಳಲ್ಲಿ ಅವರು ಮಾಡಿರುವ ಪ್ರಯಾಣಗಳು ಭಾರತೀಯ ಇತಿಹಾಸದಲ್ಲಿ ಹಿಂದೆಂದೂ ಕಾಣದ ಸಾಹಸದ ಕ್ಷಣಗಳಾಗಿವೆ. ಬ್ರಿಟನ್ನಿನ ಶತ್ರುಗಳ ನೆರವಿನಿಂದ ಭಾರತವನ್ನು ಸ್ವತಂತ್ರಗೊಳಿಸುವುದು ಸುಭಾಷರ ಏಕೈಕ ಗುರಿಯಾಗಿತ್ತು. ಅವರು ಭಾರತದ ಜನತೆಗೆ ಧೈರ್ಯ, ಸಾಹಸ ಮತ್ತು ಉದಾತ್ತವಾದ ದೇಶಪ್ರೇಮದ ಉಜ್ವಲ ಪರಂಪರೆಯನ್ನೇ ಬಿಟ್ಟು ಹೋಗಿದ್ದಾರೆ.
ಐಎನ್‍ಎ ತನ್ನ ಗುರಿಯನ್ನು ಸಾಧಿಸುವಲ್ಲಿ ವಿಫಲವಾದರೂ, ಅದಕ್ಕೆ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ. ಅವರ ಹೋರಾಟಗಳು ಅವರಿಗೆ ಭಾರತದ ಚರಿತ್ರೆಯಲ್ಲಿ ಅಚ್ಚಳಿಯದ ಸ್ಥಾನವನ್ನು ತಂದುಕೊಟ್ಟಿವೆ.
ಅಂಬೇಡ್ಕರ್ ಮತ್ತು ಅವರ ಸುಧಾರಣೆಗಳು
ಡಾ. ಬಿ.ಆರ್. ಅಂಬೇಡ್ಕರ್ (ಸಾ.ಶ. 1891-1956) ಅವರು ದಲಿತ ಮತ್ತು ಇತರೆ ಶೋಷಿತ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ದೊಡ್ಡ ಹೋರಾಟಗಾರರು. ಇವರು ಮಧ್ಯಪ್ರದೇಶದ ಇಂದೂರ್ ಜಿಲ್ಲೆಯ ಮಾಹೊ ಎಂಬ ಗ್ರಾಮದಲ್ಲಿ ಏಪ್ರಿಲ್ 14, 1891ರಲ್ಲಿ ರಾಮಜೀ ಮಾಲೋಜಿ ಸಕ್ಪಾಲ್ ಹಾಗೂ ಭೀಮಾ ಬಾಯಿ ಸಕ್ಪಾಲ್‍ರವರ ಮಗನಾಗಿ ಜನಿಸಿದರು. ಇವರು ಅತ್ಯಂತ ಪ್ರತಿಭಾವಂತರಾಗಿದ್ದು, ಸತತ ಅಧ್ಯಯನದಿಂದ ವಿಶೇಷ ವ್ಯಕ್ತಿತ್ವವನ್ನು ಸ್ವಯಂ ರೂಪಿಸಿಕೊಂಡವರು. ಇಂದಿಗೂ ಪ್ರತಿಷ್ಠಿತವೆನಿಸಿಕೊಂಡಿರುವ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಕೊಲಂಬಿಯ ವಿಶ್ವವಿದ್ಯಾಲಯದಿಂದ (ಅಮೇರಿಕ) ಪಿ.ಎಚ್.ಡಿ., ಎಲ್.ಎಲ್.ಡಿ. ಪದವಿಗಳನ್ನು ಪಡೆದುಕೊಂಡರು. ಬಾರ್-ಅಟ್-ಲಾ ಕೂಡ ಪಡೆದರು. ಅವರು ಪಡೆದ ಶೈಕ್ಷಣಿಕ ಪದವಿಗಳೇ ಅವರ ಬೌದ್ಧಿಕ ಮೇರು ವ್ಯಕ್ತಿತ್ವವನ್ನು ಹೇಳುತ್ತವೆ. ಸಾಮಾಜಿಕ ಬದಲಾವಣೆಯನ್ನು ಸಂವಿಧಾನಾತ್ಮಕ ಮಾರ್ಗದಲ್ಲೇ ಪಡೆಯಬೇಕೆಂಬ ಅವರ ಸಂಕಲ್ಪ ಮತ್ತು ಕಾರ್ಯಶೀಲತೆ ಅವರ ವಿಶೇಷ ಗುಣಗಳು.

ಸಾಮಾಜಿಕ ಅಸಮಾನತೆಯನ್ನು ತೊಲಗಿಸಲು ಸಂವಿಧಾನಾತ್ಮಕ ಮಾರ್ಗವೊಂದೇ ಸಾಧನವೆಂದು ನಂಬಿದ್ದರು. ಅಲ್ಲದೆ, ದಲಿತರು ಮತ್ತು ಶೋಷಿತರು ರಾಜಕೀಯ ಪ್ರಾತಿನಿಧ್ಯವನ್ನು ಪಡೆದಾಗ ಮಾತ್ರ ಅವರ ವಿಮೋಚನೆ ಸಾಧ್ಯ ಎಂಬುದು ಅವರ ನಿಲುವಾಗಿತ್ತು. ಅದಕ್ಕಾಗಿ ಅಸ್ಪೃಶ್ಯತೆಯ ವಿರುದ್ಧ ಹಲವು ಹೋರಾಟಗಳನ್ನು ರೂಪಿಸಿದರು. ಅವುಗಳಲ್ಲಿ ಮಹಡ್ ಸತ್ಯಾಗ್ರಹ, ನಾಸಿಕ್‍ನ ಕಲಾರಾಮ ದೇವಾಲಯ ಪ್ರವೇಶದಂತಹ ಯಶಸ್ವಿ ಹೋರಾಟಗಳನ್ನು ಹಮ್ಮಿಕೊಂಡರು. ಹೀಗೆ ದಲಿತರಲ್ಲಿ ಜಾಗೃತಿ ಮತ್ತು ಸ್ವಾಭಿಮಾನವನ್ನುಂಟು ಮಾಡಿದರು. ಮೂಕನಾಯಕ’ ಮತ್ತುಬಹಿಷ್ಕೃತ ಭಾರತ’ ಎಂಬ ಪತ್ರಿಕೆಗಳ ಸಂಪಾದಕರಾಗಿ ದಲಿತ, ಶೋಷಿತ ಮತ್ತು ಅಸ್ಪೃಶ್ಯರ ಧ್ವನಿಯಾದರು. ಬಹಿಷ್ಕೃತ ಹಿತಕಾರಿಣಿ ಸಭಾ ಎಂಬ ಸಂಘಟನೆಯನ್ನೂ ಸ್ಥಾಪಿಸಿದರು.
ಮುಂದೆ ಸ್ವತಂತ್ರ ಭಾರತದ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಸಂವಿಧಾನ ರೂಪುಗೊಳಿಸುವ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಿದರು. ಸಂವಿಧಾನ ಶಿಲ್ಪಿ ಎಂದೇ ಖ್ಯಾತರಾದರು.
ಅಂಬೇಡ್ಕರ್ ಭಾರತೀಯ ರಾಷ್ಟ್ರೀಯತೆಯ ತುಸು ವಿಭಿನ್ನ ಪರಿಕಲ್ಪನೆಯ ಪ್ರತಿನಿಧಿಯಾಗಿದ್ದರು. ಗಾಂಧೀಜಿಯವರಿಗೆ ರಾಜಕೀಯ ಸ್ವಾತಂತ್ರ್ಯ ಮೊದಲ ಆದ್ಯತೆಯಾಗಿದ್ದರೆ, ಅಂಬೇಡ್ಕರ್‍ರವರಿಗೆ ಸಾಮಾಜಿಕ ಸ್ವಾತಂತ್ರ್ಯ ಮೊದಲ ಆದ್ಯತೆಯಾಗಿತ್ತು. ಸಾಮಾಜಿಕವಾಗಿ ತುಳಿತಕ್ಕೊಳಗಾದವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯವಾಗಿ ಮೇಲೆ ಬರಬೇಕು ಎಂಬುದು ಅವರಿಗೆ ಮುಖ್ಯವಾಗಿತ್ತು. ಹೀಗಾಗಿ ಅವರು ದನಿಯಿಲ್ಲದ ಲಕ್ಷಾಂತರ ಭಾರತೀಯರ ಪ್ರತಿನಿಧಿಯಾಗಿದ್ದರು. ಅವರು ಅಸ್ಪøಶ್ಯ ಜಾತಿಗೆ ಸೇರಿದವರಾದ್ದರಿಂದ, ಎಲ್ಲಾ ತರದ ಅವಮಾನಗಳನ್ನು ಮತ್ತು ಸಾಮಾಜಿಕ ಬಹಿಷ್ಕಾರಗಳನ್ನು ಅನುಭವಿಸಿದರು. ದಲಿತರು ಮತ್ತು ಶೋಷಿತರು ರಾಜಕೀಯ ಪ್ರಾತಿನಿಧ್ಯವನ್ನು ಪಡೆದಾಗ ಮಾತ್ರ ಅವರ ವಿಮೋಚನೆ ಎಂಬುದು ಅವರ ನಿಲುವಾಗಿತ್ತು.
ಡಾ. ಬಿ.ಆರ್. ಅಂಬೇಡ್ಕರ್ ದಲಿತ ವರ್ಗಗಳ ಪ್ರತಿನಿಧಿಯಾಗಿ ಲಂಡನಿನಲ್ಲಿ ನಡೆದ ಮೂರೂ ದುಂಡುಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ್ದರು. ಬ್ರಿಟಿಷರಿಂದ ಘೋಷಿಸಲ್ಪಟ್ಟ `ಮತೀಯ ತೀರ್ಪು’ (ಕಮ್ಯೂನಲ್ ಅವಾರ್ಡ್) (ಸಾ.ಶ. 1932) ದಲಿತ ವರ್ಗಕ್ಕೆ ಪ್ರತ್ಯೇಕ ಚುನಾವಣಾ ಕ್ಷೇತ್ರವನ್ನು ಕಲ್ಪಿಸಿತು. ಈ ತೀರ್ಪನ್ನು ಒಪ್ಪದ ಗಾಂಧೀಜಿಯವರು ಯರವಾಡಾ (ಪುಣೆ) ಸೆರೆಮನೆಯಲ್ಲಿ ಆಮರಣ ಉಪವಾಸವನ್ನು ಕೈಗೊಂಡರು. ಅಂತಿಮವಾಗಿ ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಪುಣೆ ಒಪ್ಪಂದದ (ಸಾ.ಶ. 1932) ಮೂಲಕ ಸಮಸ್ಯೆ ಅಂತ್ಯಗೊಂಡಿತು. ಅವರು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾಗಿದ್ದರು. ಸಾ.ಶ. 1956 ಡಿಸೆಂಬರ್ 6ರಂದು ತೀರಿಕೊಂಡರು. ಇದಕ್ಕೆ ಕೆಲವೇ ತಿಂಗಳುಗಳ ಮೊದಲು ಬೌದ್ಧಮತಕ್ಕೆ ಮತಾಂತರಗೊಂಡಿದ್ದರು. ಸಾ.ಶ. 1990ರಲ್ಲಿ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಮುಖ್ಯ ಇಸವಿಗಳು (ಸಾ.ಶ)
ಭಾರತ ರಾಷ್ಟ್ರೀಯ ಕಾಂಗ್ರೆಸಿನ ಸ್ಥಾಪನೆ 1885
ಮಂದಗಾಮಿಗಳ ಕಾಲ 1885-1905
ತೀವ್ರಗಾಮಿಗಳ ಕಾಲ 1905-1919
ಬಂಗಾಲದ ವಿಭಜನೆ 1905
ಮುಸ್ಲಿಂ ಲೀಗಿನ ಸ್ಥಾಪನೆ 1906
ಸೂರತ್ ಒಡಕು 1907
ಜಲಿಯನ್‍ವಾಲಾಬಾಗ್ ಹತ್ಯಾಕಾಂಡ 1919
ಗಾಂಧೀಜಿಯವರ ಜನನ 1869, ಅಕ್ಟೋಬರ್ 2
ಅಸಹಕಾರ ಚಳವಳಿ 1920-1922
ಚೌರಿಚೌರ ದುರಂತ 1922
ಪೂರ್ಣ ಸ್ವರಾಜ್ಯದ ಘೋಷಣೆ 1929
ಪೂರ್ಣ ಸ್ವರಾಜ್ಯ ದಿನಾಚರಣೆ 1930, ಜನವರಿ 26
ಉಪ್ಪಿನ ಸತ್ಯಾಗ್ರಹ 1930, ಮಾರ್ಚ್ 12
ಎರಡನೇ ವಿಶ್ವಸಮರ 1939-1945
ಭಾರತ ಬಿಟ್ಟು ತೊಲಗಿ ಚಳವಳಿ 1942
ಭಾರತಕ್ಕೆ ಅಧಿಕಾರ ಹಸ್ತಾಂತರಿಸುವ ಘೋಷಣೆ 1947, ಜೂನ್ 3
ಸ್ವತಂತ್ರ ಪಾಕಿಸ್ತಾನದ ರಚನೆ 1947, ಆಗಸ್ಟ್ 14
ಸ್ವತಂತ್ರ ಭಾರತದ ರಚನೆ 1947, ಆಗಸ್ಟ್ 15
ಪ್ರಶ್ನೋತ್ತರಗಳು
* * * * * * * * *
ಉತ್ತಮ ಕ್ರಿಯಾಯೋಜನೆ. ಸಮಗ್ರ ಕಲಿಕಾ ಮಾಹಿತಿ ಒಳಗೊಂಡಿದೆ. ಅಭಿನಂದನೆಗಳು ದರ್ಶನ್ ಸರ್