ರಾಜ್ಯ ನೀತಿ ನಿರ್ದೇಶಕ ತತ್ವಗಳು – ಅಧ್ಯಾಯ 18
ಪಾಠದ ಪರಿಚಯ
ರಾಜ್ಯ ನೀತಿ ನಿರ್ದೇಶಕ ತತ್ವಗಳು ನಮ್ಮ ಸಂವಿಧಾನದ ನಾಲ್ಕನೇ ಭಾಗದ 36 ರಿಂದ 51ನೇ ವಿಧಿಗಳವರೆಗೆ ರಾಜ್ಯ ನೀತಿ ನಿರ್ದೇಶಕ ತತ್ವಗಳ ಪ್ರಸ್ತಾಪವಿದೆ. ಸಂವಿಧಾನದ ಆಶಯಗಳನ್ನು ಜಾರಿಗೊಳಿಸಲು ಚುನಾಯಿತ ಸರ್ಕಾರಕ್ಕೆ ಇವು ಮಾರ್ಗದರ್ಶಿ ಸೂತ್ರಗಳಂತಿವೆ. ಈ ಪಾಠವು ಅವುಗಳ ವಿವರಣೆ ಮತ್ತು ಮಹತ್ವದ ಚರ್ಚೆಯನ್ನು ಒಳಗೊಂಡಿದೆ.
ಸುಖೀರಾಜ್ಯ ಸ್ಥಾಪನೆಗಾಗಿ ಸಂವಿಧಾನದ ನಾಲ್ಕನೇ ಭಾಗದಲ್ಲಿ ಗಾಂಧಿವಾದಿ, ಸಮಾಜವಾದಿ ಮತ್ತು ಉದಾರವಾದಿ ಭೌದ್ಧಿಕ ತತ್ವಗಳ ಅನುಷ್ಠಾನಕ್ಕಾಗಿ ಸಂವಿಧಾನವು ರಾಜ್ಯಕ್ಕೆ ನೀಡಿದ ಮಾರ್ಗದರ್ಶಿ ಸೂತ್ರಗಳೇ ರಾಜ್ಯ ನೀತಿ ನಿರ್ದೇಶಕ ತತ್ವಗಳಾಗಿವೆ. ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಈ ಸೂತ್ರಗಳನ್ನು ಅನುಸರಿಸಬೇಕೆಂಬುದು ಸಂವಿಧಾನದ ನೈತಿಕ ನಿರ್ದೇಶನವಾಗಿದೆ. ಭಾರತದ ಸಮಗ್ರ ಅಭಿವೃದ್ಧಿಗೆ ಇವು ದಿಕ್ಸೂಚಿಯಾಗಿವೆ.
ರಾಜ್ಯನೀತಿ ನಿರ್ದೇಶಕ ತತ್ವಗಳ ಪ್ರಾಮುಖ್ಯತೆ
ರಾಜ್ಯನೀತಿ ನಿರ್ದೇಶಕ ತತ್ವಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂವಿಧಾನ ನೀಡುವ ನಿರ್ದೇಶನಗಳಾಗಿವೆ. ಕಾನೂನು ರಚಿಸುವಾಗ, ನೀತಿಗಳನ್ನು ರಚಿಸಿ ಜಾರಿಗೆ ತರುವಾಗ ಈ ತತ್ವಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಾಧಿಸಲು ಮತ್ತು ಸುಖಿಃ ರಾಜ್ಯವನ್ನು ಸ್ಥಾಪಿಸಲು ರಾಜ್ಯ ನಿರ್ದೇಶಕ ತತ್ವಗಳು ಮುಖ್ಯವೆನಿಸುತ್ತವೆ.
ಭಾರತ ಗಣರಾಜ್ಯವು ಅನುಸರಿಸಬೇಕಾದ ಈ ಕೆಳಗಿನ ಸೂತ್ರಗಳು ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿ ಅಡಗಿವೆ.
1. ಸಾಮಾಜಿಕ ನ್ಯಾಯ: ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಒದಗಿಸಿ ಜನಕಲ್ಯಾಣವನ್ನು ಸಾಧಿಸುವುದು.

2. ದುರ್ಬಲರಿಗೆ ಸಾಮಾಜಿಕ ನ್ಯಾಯ: ದುರ್ಬಲರಿಗೆ ಜೀವನಾಧಾರ ನೀಡುವುದು; ಅವರ ಆರ್ಥಿಕ ಶೋಷಣೆಯ ನಿವಾರಣೆ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕಾಭಿವೃದ್ಧಿ; ಮತ್ತು ಅವರಿಗೆ ಕಾನೂನಿನ ಉಚಿತ ನೆರವು.
3. ಮಹಿಳೆ ಮತ್ತು ಶಿಶುಕಲ್ಯಾಣ: ಒಂದೇ ರೀತಿಯ ಕೆಲಸಕ್ಕೆ ಪುರುಷರಷ್ಟೇ ಮಹಿಳೆಯರಿಗೂ ಸಮಾನ ವೇತನ; ಮಹಿಳೆಯರಿಗೆ ಹೆರಿಗೆ ಸೌಲಭ್ಯ; ಮಕ್ಕಳ ಶೋಷಣೆಯ ತಡೆ; ಮಕ್ಕಳು ಆರೋಗ್ಯವಂತರಾಗಿ ಬೆಳೆಯಲು ಅವಕಾಶ ಮತ್ತು ಅವರಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ.

4. ಕಾರ್ಮಿಕ ಕಲ್ಯಾಣ: ಕಾರ್ಮಿಕರ ಯೋಗಕ್ಷೇಮ ನೋಡಿಕೊಳ್ಳುವುದು; ದುಡಿಯುವ ಹಕ್ಕು; ದುಡಿಯಲು ಅನುಕೂಲಕರ ವಾತಾವರಣ; ಕಾರ್ಮಿಕರಿಗೆ ಕನಿಷ್ಠ ವೇತನ ನಿಗಧಿ; ಮತ್ತು ಅವರಿಗೆ ಆಡಳಿತದಲ್ಲಿ ಭಾಗಿಗಳಾಗಲು ಅವಕಾಶ.

5. ಅಸಹಾಯಕರಿಗೆ ನೆರವು: ವೃದ್ಧರು, ದಿವ್ಯಾಂಗರು, ರೋಗಿಗಳು ಮತ್ತು ನಿರುದ್ಯೋಗಿಗಳು ಬದುಕಲು ಸರ್ಕಾರದಿಂದ ನೆರವು.
6. ಏಕರೂಪ ನಾಗರೀಕ ಸಂಹಿತೆ: ಭಾರತದ ಎಲ್ಲ ಪ್ರಜೆಗಳಿಗೂ ಸಮಾನ ನಾಗರಿಕ ಕಾನೂನು ಜಾರಿಮಾಡುವುದು.
7. ಮದ್ಯಪಾನ ನಿಷೇಧ: ಮದ್ಯಪಾನದಿಂದ ಆರೋಗ್ಯ ಕೆಡುತ್ತದೆ; ಕುಟುಂಬದ ಆರ್ಥಿಕ ಸ್ಥಿತಿ ಹದಗೆಡುತ್ತದೆ; ಹಾಗೂ ಮಹಿಳೆಯರ ಶೋಷಣೆ ಹೆಚ್ಚುತ್ತದೆ. ಇದಕ್ಕಾಗಿ ನಮ್ಮ ಸಂವಿಧಾನವು ಮದ್ಯಪಾನ ನಿಷೇಧವನ್ನು ಜಾರಿಗೆ ತರುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.

8. ಕೃಷಿ ಮತ್ತು ಪಶು ಸಂಗೋಪನೆಯ ಸಂಘಟನೆ: “ರಾಜ್ಯವು ಕೃಷಿಯನ್ನು ಮತ್ತು ಪಶು ಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ರೀತಿಯಲ್ಲಿ ಸಂಘಟನೆ ಗೊಳಿಸುವುದಕ್ಕೆ ಪ್ರಯತ್ನಿಸತಕ್ಕದು ಮತ್ತು ವಿಶೇಷವಾಗಿ ಪಶು ತಳಿಗಳನ್ನು ಸಂರಕ್ಷಿಸಿ ಉತ್ತಮಗೊಳಿಸುವುದಕ್ಕಾಗಿ ಹಸುಗಳ ಮತ್ತು ಕರುಗಳ ಹಾಗೂ ಇತರ ಹಾಲು ಕೊಡುವ ಮತ್ತು ಭಾರ ಎಳೆಯುವ ದನಕರುಗಳ ವಧೆಯನ್ನು ನಿಷೇಧಿಸುವುದಕ್ಕಾಗಿ ಕ್ರಮ ಕೈಗೊಳ್ಳತಕ್ಕದ್ದು” ಎಂದು ಸಂವಿಧಾನದಲ್ಲಿ ನಿರ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಕರ್ನಾಟಕ ಪಶುಹತ್ಯೆ ಪ್ರತಿಬಂಧಕ ಮತ್ತು ಪಶುಸಂರಕ್ಷಣಾ ಕಾಯಿದೆ – 2020 (Karnataka Prevention of slaughter and preservation of cattle Act -2020) ಜಾರಿಯಲ್ಲಿದೆ.

9. ಪರಿಸರ: ಪರಿಸರ ರಕ್ಷಣೆ ಮತ್ತು ಅಭಿವೃದ್ಧಿ. ಉದಾ: ಗಣಿಗಾರಿಕೆ, ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯಗಳಿಂದ ಪರಿಸರವನ್ನು ಸಂರಕ್ಷಿಸುವುದು.

10. ಐತಿಹಾಸಿಕ ಸ್ಮಾರಕಗಳ ರಕ್ಷಣೆ: ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಉದಾ: ಬಾದಾಮಿ, ಬೀದರ್, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಸನ್ನತಿ, ಮೈಸೂರು, ಪಟ್ಟದಕಲ್ಲು, ವಿಜಯಪುರ ಮುಂತಾದವು.
11. ಅಂತಾರಾಷ್ಟ್ರೀಯ ಶಾಂತಿ: ಭದ್ರತೆಗಳನ್ನು ಕಾಪಾಡುವುದರಲ್ಲಿ ದೇಶವು ಸಹ ಭಾಗಿಯಾಗುವುದು.
ಸಾಮಾಜಿಕ ನ್ಯಾಯ ಎಂದರೇನು? ಜಾತಿ, ಧರ್ಮ, ಲಿಂಗ, ಭಾಷೆ, ವರ್ಣ, ಪ್ರದೇಶ ಮತ್ತು ಅಂತಸ್ತುಗಳ ಭೇದಭಾವ ಇಲ್ಲದೆ ಎಲ್ಲಾ ನಾಗರಿಕರಿಗೆ ರಕ್ಷಣೆ ನೀಡುವುದು ಹಾಗೂ ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡುವುದೇ ಸಾಮಾಜಿಕ ನ್ಯಾಯ. ಹಿಂದುಳಿದ ವರ್ಗಗಳ ಹಿತಾಸಕ್ತಿ, ವೇತನ ನಿಗಧಿ, ಜೀತಪದ್ಧತಿಯ ನಿರ್ಮೂಲನೆ, ಮಕ್ಕಳ ಶೋಷಣೆಯ ನಿರ್ಮೂಲನೆ, ಸ್ತ್ರೀಯರಿಗೆ ಸಮಾನ ಹಕ್ಕು ಹಾಗೂ ಗೌರವ ಮುಂತಾದವುಗಳು ಸಾಮಾಜಿಕ ನ್ಯಾಯಕ್ಕೆ ಒಳಪಟ್ಟಿವೆ.

ಸಂವಿಧಾನವು ಹಲವಾರು ಸಲಹೆ ಮತ್ತು ನಿರ್ದೇಶನಗಳನ್ನು ರಾಜ್ಯಕ್ಕೆ ನೀಡಿದೆ. ಆದರೂ ಅವುಗಳ ಉಲ್ಲಂಘನೆಯಾದರೆ, ನಾಗರಿಕರು ನ್ಯಾಯಾಲಯದಲ್ಲಿ ದೂರು ಸಲ್ಲಿಸುವಂತಿಲ್ಲ. (ಉದಾಹರಣೆ – ಏಳು ದಶಕಗಳು ಕಳೆದರೂ ಸರ್ಕಾರವು ಮದ್ಯಪಾನ ನಿಷೇಧ ಕಾನೂನು ತಂದಿಲ್ಲ. ಈ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ದೂರು ಸಲ್ಲಿಸುವಂತಿಲ್ಲ.)
ವಿಡಿಯೋ ಪಾಠ
ಅಭ್ಯಾಸಗಳು
* * * * * * *
